ಅಮೃತಮತಿ
ಪತಿಯ ಕಣ್ತಪ್ಪಿಸಿ ಅಷ್ಠಾವ೦ಕನ ಜೊತೆ
ಗಜಶಾಲೆಯಲ್ಲಿ ದೈಹಿಕ ಸ೦ಬ೦ಧವನ್ನು
ಬೆಳೆಸಿದ ರಾಣಿ ಅಮೃತಮತಿಗೆ
ತಾನೊಬ್ಬಳು ಉಜ್ಜಯನಿಯ ರಾಣಿ
ರಾಜಾ ಯಶೋಧರನ ಮಡದಿ ಅನ್ನುವುದು
ಮರೆತು ಹೋಗಿತ್ತೋ ಏನೋ……
ಮನಪ್ರಿಯೆ ಮಡದಿ ಅಮೃತಮತಿ
ಒಬ್ಬ ಸದ್ಗುಣಗಳಿರುವ ವ್ಯಕ್ತಿ ಸಾತ್ವಿಕ
ಗುಣಗಳನ್ನು ತು೦ಬಿಕೊ೦ಡ ಪತಿಯಿಂದ
ದೈಹಿಕ ಸುಖ ಸಿಗದಾದಾಗ ಆಕೆ
ಮಾನಸಿಕವಾಗಿ ಬೇಸರಗೊ೦ಡಿದ್ದು,
ಬೇಸರದಲ್ಲಿ ಆಕೆ ತೆಗೆದುಕೊಂಡ ನಿರ್ಧಾರ
ಸರಿ ಅಥವಾ ತಪ್ಪಾಗಿರಬಹುದೋ ಏನೋ…
ಹೀಗೆಯೇ ನಿರ೦ತರವಾಗಿ…….
ಕತ್ತಲೆಯ ರಾತ್ರಿಯಲ್ಲಿ ಅದೊ೦ದು ದಿನ
ಹಿ೦ಬಾಲಿಸಿಹೋದ ಪತಿ
ಅಷ್ಠಾವ೦ಕನ ಬೆತ್ತಲೆಯ ದೇಹದ ಜೊತೆ
ಬೆತ್ತಲೆಯಾಗಿ ಮಡದಿ ಅಮೃತಮತಿ
ಕಾಮಿಸುವದನ್ನು ಗುಟ್ಟಾಗಿ ನೋಡಿ
ಅಸ೦ಹ್ಯಪಟ್ಟು ರೊಚ್ಚಿಗೆದ್ದ ರಾಜಾ
ಯಶೋಧರ ಮಾಡಿದ್ದಾದರೂ ಏನು…..?
ಕೋಪದಿಂದ ಹೊರತೆಗೆದ ಖಡ್ಗ
ಮರಳಿ ಹಿಂದೆ ಸರಿದು ಮೌನ ಕಟ್ಟಿದ್ದು
ಯಾಕೋ ಏನೋ…….
ಹಿ೦ಸೆ ಜೈನಧರ್ಮದ ವಿರುದ್ಧ……
ಇರಬಹುದು…….
ಮಗನ ಮಾನಸಿಕ ಮೌನ
ಹೆತ್ತ ತಾಯಿಯ ಮನಸ್ಸು ಗಾಬರಿ,
ಯಾಕೆ ಮಗನೆ… ಏನಾಯಿತು…ಹೇಳು..?
“ಸುಂದರವಾದ ರಾಜಹ೦ಸವೊ೦ದು
ಕೊಚ್ಚೆಯಲ್ಲಿ ಬಿದ್ದು ನರಳಾಡುತ್ತಿರುವುದನ್ನು
ಕ೦ಡೆ” ತಾಯಿ….
ಅದನ೦ತರ…..
ಜ್ಯೋತಿಷ್ಯರೊಬ್ಬರನ್ನು ಕರೆಯಿಸಿ
ಮಗನ ಕನಸಿಗೆ ಉದಾಸೀನತೆಗೆ
ಪರಿಹಾರ ಹುಡುಕಿದ್ದು
ಒ೦ದು ಹು೦ಜವನ್ನು ಬಲಿ ಕೊಡಬೇಕು
ಎ೦ದಿದ್ದು
ಅಹಿ೦ಸಾವಾದಿಯಾದ ಆತ ಒಪ್ಪದೇ
ಇದ್ದಾಗ ಹಿಟ್ಟಿನ ಹುಂಜವನ್ನು ಮಾಡಿ
ಹು೦ಜದ ಅ೦ದಕ್ಕೆ ಆಕರ್ಷಿತವಾಗಿ ಒ೦ದು
ಆತ್ಮ ಅದರಲ್ಲಿ ಬ೦ದು ಸೇರಿಕೊ೦ಡಿದ್ದು
ಅದನ್ನರಿಯದ ರಾಜಾ ಖಡ್ಗದಿ೦ದ
ಕತ್ತರಿಸಿದ ಆತ್ಮ ಕಾರಿಕೊ೦ಡ ರಕ್ತ ನೋಡಿ
ತನ್ನಿ೦ದ ಪ್ರಾಣಿಹಿ೦ಸೆಯಾಯಿತೆ೦ದು
ಪ್ರಾಯಶ್ಚಿತಕ್ಕಾಗಿ ನಾಡು ಮರೆತು ಕಾಡಿಗೆ
ಹೋಗಲು ನಿರ್ಧರಿಸಿದ್ದು…..
ಎಲ್ಲವೂ ಪ್ರಣಯ ಪ್ರಸಂಗದ ಕತೆಯ
ನಡುವೆ……
ಇವೆಲ್ಲಕ್ಕೂ ತನ್ನ ಗುಟ್ಟು ಬಯಲಾಯಿತೆ೦ದು
ಅರಿತ ಮುದ್ದಿನ ಮಡದಿ ಅಮೃತಮತಿ
ಊಟ ಬಡಿಸುವ ನೆಪದಲ್ಲಿ ವಿಷ ಉಣಿಸಿ
ಪತಿ ಯಶೋಧರ ಮತ್ತು ಆತನ ತಾಯಿ
ಇಬ್ಬರನ್ನೂ ಕೊ೦ದುಹಾಕಿದ್ದು,
ಕ್ರೂರಿ ಕುರುಪಿ ಕುಡುಕ ಮಾವುತನ ಜೊತೆ
ಬೆತ್ತಲೆಯ ಸುಖದ ದಿನಗಳನ್ನು
ಕಳೆಯುತ್ತಾ…….
ಮು೦ದೊ೦ದು ದಿನ ಅಮೃತಮತಿ
ಸಾವಿನ ನ೦ತರ
ಧೂಮಪ್ರಭೆ ಎ೦ಬ ನರಕಕ್ಕೆ ಹೋಗಿ
ನರಳಿದ್ದು ಪಾಪವೋ…..ಅಥವಾ
ಶಾಪವೋ….. ಇರಬಹುದು…..
ಕಾಲಘಟ್ಟದಲ್ಲಿ ಘಟಿಸಿಹೋದ
ಪ್ರಣಯ ಪ್ರಸ೦ಗದ ಕತೆ…..
ಜನ್ನನ ಯಶೋಧರ ಚರಿತೆ……
-ನರೇಶ ನಾಯ್ಕ ದಾಂಡೇಲಿ
ಬದುಕು ಹೂವಲ್ಲ.
ಪ್ರೀತಿಯಿಂದ ತಂದ ಹೂವೊಂದು
ಬಾಡಿಹೋಗುತಿದೆ,
ಬಾನೆತ್ತರಕೆ ಅರಳಿ ನಿಲ್ಲಬೇಕಾದುದು
ಇನ್ನಿಲ್ಲದಂತೆೇ ಮುದುಡುತಿದೆ..
ಸುರಿಸುರಿದೆ ನೀರ,
ಹಾಕಿದೆ ತರತರದ ಸಾರ,
ಉಂ ಹೂಂ,
ಏನೇನೂ ಪ್ರಯೋಜನವಿಲ್ಲ,
ಪ್ರಯತ್ನಕ್ಕಿಲ್ಲಿ ಫಲವೇ ಇಲ್ಲ…
ನೆನಪಿಡು,
ಬದುಕು ಹೂವಲ್ಲ..
ಬೆಳೆಯಬಹುದು ಬಿದ್ದರೂ,
ಎದ್ದೆದ್ದು ನಿಲ್ಲುತಿರಬಹುದು ಸೋತರೂ..
ಎದೆಯ ಕನಸುಗಳೆಲ್ಲ
ಯಾರಪ್ಪನ ಆಸ್ತಿಯೂ ಅಲ್ಲ!
ಎರೆದೆರೆದು ಭರವಸೆಯ ನೀರ
ಮುನ್ನುಗ್ಗುತಿರುವವರ್ಯಾರೂ
ಮುದುಡಿದವರೇ ಇಲ್ಲ,
ಏಕೆಂದರೆ ಬದುಕು ಹೂವಲ್ಲ..
ಬರೀ ಗಮ್ಯ ಬರೀ ಗಮ್ಯ
ಜಪಿಸುತಿರೆ ಮನವು,
ಸೋಲೆಲ್ಲ ತೃಣವು..
ಪಟ್ಟು ಬಿಡದ
ಪ್ರಯತ್ನಶೀಲ ಮನಕೆ
ಬಿದ್ದ ಪೆಟ್ಟೆಲ್ಲ ಸುಟ್ಟ ಇಟ್ಟಿಗೆಯಂತೆ
ಗಟ್ಟಿಯಾಗುತಿರಲಿ,
ಕಂಡ ಕನಸುಗಳೆಲ್ಲ
ನೆಪಗಳಿಗೆ ಬಾಡದೇ
ಗರಿಮೂಡಿಸಿ ಗುರಿಯೆಡಿಗೆ ನಡೆಯುತಿರಲಿ…
-ಆಶಾ ಹೆಗಡೆ
ನನ್ನ ಸಾಲುಗಳು ಬದಲಿಸಬಲ್ಲದೇ?
ನನ್ನ ಸಾಲುಗಳು ಬದಲಿಸಬಲ್ಲದೇ?
ಈ ಸಮಾಜದ ಕೆಟ್ಟ ದುಷ್ಕೃತ್ಯಗಳ
ಒಳಿತು, ಕೆಡುಕು ಯೋಚಿಸದ
ಮನುಕುಲದ ಎಲ್ಲಾ ಮನಸುಗಳ
ನನ್ನ ಸಾಲುಗಳು ಬದಲಿಸಬಲ್ಲದೇ?
ಈ ಸಮಾಜದ ಬೀದಿ ಕಾಮಣ್ಣರ
ಹಡೆದವಳು, ಕೈ ಹಿಡಿದವಳು ಹೆಣ್ಣಾಗಿರುವಾಗ
ಅವಳನರಿಯದೆ ಶೋಷಿಸುವ ಅತ್ಯಾಚಾರಿಗಳ
ನನ್ನ ಸಾಲುಗಳು ಬದಲಿಸಬಲ್ಲದೇ?
ಈ ಸಮಾಜದ ಭ್ರಷ್ಟಾಚಾರಿಗಳ
ಕೈಹಿಡಿದು ನಡೆಸುವ ಬದಲು ಕೈಸುಟ್ಟು
ಕಿತ್ತುತಿನ್ನುವ ಸ್ವಾರ್ಥಿಅಧಿಕಾರಿಗಳ
ನನ್ನ ಸಾಲುಗಳು ಬದಲಿಸಬಲ್ಲದೇ?
ಈ ಸಮಾಜದ ಗೋಮುಖ ವ್ಯಾಘ್ರ ಗಳ
ತನ್ನ ಸಾವನ್ನು ಕೈಯಲ್ಲಿಡಿದು ಪರರ ಬಾಳಿನ
ಜೀವ ಕಂಟಕವಾಗಿರುವ ಭಯೋತ್ಪಾದಕರ
ನನ್ನ ಸಾಲುಗಳು ಬದಲಿಸಬಲ್ಲದೇ?
ಈ ಸಮಾಜದ ಮಾದಕ ವ್ಯಸನಿಗಳ
ತನ್ನ ಸಂಸಾರವನ್ನೇ ಬೀದಿ ಗಟ್ಟಿ ಮದದಿ
ಶೋಷಿಸುವ ಮಾದಕ ದ್ರವ್ಯಗಳ ರೋಗ ತರುವವರ
ನನ್ನ ಸಾಲುಗಳು ಬದಲಿಸಬಲ್ಲದೇ?
ಸಮಾಜದ ವಿಶ್ವಾಸಘಾತಕರ
ನಮ್ಮವರಂತೆ ನಮ್ಮೊಳಗಿದ್ದು ತನ್ನ ಸ್ವಾರ್ಥಕ್ಕಾಗಿ ನಂಬಿಸಿ
ಕತ್ತು ಕೊಯ್ಯುವ ಶಕುನಿ ಹಿತಶತ್ರುಗಳ
ನನ್ನ ಸಾಲುಗಳು ಬದಲಿಸಬಲ್ಲದೇ?
ಈ ಸಮಾಜದ ಆರೋಗ್ಯ ಕಂಟಕರ
ಉತ್ತಮ ಆಹಾರಕ್ಕೆ ಕಳಪೆ ಮಟ್ಟದ ಕಲಬೆರಕೆ
ಮಾಡಿ ರೋಗಕ್ಕೆ ಆಹ್ವಾನಿಸುವ ಲೋಕಕಂಟಕರ
ನನ್ನ ಸಾಲುಗಳು ಬದಲಿಸಬಲ್ಲದೇ?
ಈ ಸಮಾಜದ ಕೆಲವು ದುಷ್ಟ ನಾಯಕರ
ನೈತಿಕತೆ, ಒಗ್ಗಟ್ಟು ಮುರಿದು ಶಾಂತಿ ಸ್ಥಳವ
ಪರಿಸರವ ಗಲಭೆಯಾಗಿಸೋ ದುಷ್ಕರ್ಮಿಗಳ
ನನ್ನ ಸಾಲುಗಳು ಬದಲಿಸಬಲ್ಲದೇ?
ಈ ಸಮಾಜದ ನಿಯತ್ತಿಲ್ಲದ ವಂಚಕರ
ಹೆತ್ತವರೂ ಎನ್ನದೆ ತುತ್ತು ಕೂಳಿಗೂ
ಪರಿತಪಿಸುವಂತೆ ಅವಹೇಳನ ಮಾಡುವವರ
ನನ್ನ ಸಾಲುಗಳು ಬದಲಿಸಬಲ್ಲದೇ?
ಈ ಸಮಾಜದ ಪ್ರಸ್ತುತ ಮನುಕುಲವ
ಬದಲಾವಣೆ ಹೆಸರಲ್ಲಿ ಉಸಿರು ನೀಡುವ
ಹಸಿರ ಬಸಿರಿಗೆ ಮಾರಕವಾಗಿರುವವರ
ನನ್ನ ಸಾಲುಗಳು ಬದಲಿಸಬಲ್ಲದೇ?
ಈ ಸಮಾಜದ ಜಾಣ ಅನಾಗರಿಕರ
ಉತ್ತಮ ಪ್ರಜೆಗಳ ನಿರ್ಮಾಣದ ಹೆಸರಲ್ಲಿ
ಹಣಕ್ಕಾಗಿ ಒಂದು ಶೈಕ್ಷಣಿಕ ದಂಧೆ ನಡೆಸುವವರ
ನನ್ನ ಸಾಲುಗಳು ಬದಲಿಸಬಲ್ಲದೇ?
ಪ್ರಸ್ತುತ ಸಮಾಜದ ಎಲ್ಲಾ ಸಮಾಜ ಕಂಟಕರ
ಎಲ್ಲಾ ರಂಗದ ಸಮಾಜಘಾತಕರ
ಜಾಣ ಅನಾಗರಿಕರ ಬದಲಾಯಿಸುವ
ಪ್ರಯತ್ನ ಇಲ್ಲಿ ನಡೆಯಬಲ್ಲದೇ
ನನ್ನ ಸಾಲುಗಳು ಈ ಜಾಣ ಕುರುಡರ ಬದಲಿಸಬಲ್ಲದೇ
-ಚಂದ್ರು ಪಿ ಹಾಸನ್