ನಿಲುವಂಗಿಯ ಕನಸು (ಅಧ್ಯಾಯ ೧೨-೧೩): ಹಾಡ್ಲಹಳ್ಳಿ ನಾಗರಾಜ್

ಅಧ್ಯಾಯ ೧೨: ಒಬ್ಬ ರೈತನ ಆತ್ಮಹತ್ಯೆ

ಸೀಗೆಕಾಯಿ ಗೋದಾಮಿನ ಮುಂದುಗಡೆ ರಸ್ತೆಗೆ ತೆರೆದುಕೊಂಡಂತೆ ಉಳಿದ ಸೈಟ್ ಕ್ಲೀನ್ ಮಾಡಿಸಿ ಪಿಲ್ಲರ್ ಏಳಿಸಿ ಬಿಟ್ಟಿದ್ದ ಜಾಗದಲ್ಲಿ ಮೂರು ಮಳಿಗೆಗಳು ತಲೆಯೆತ್ತಿದವು. ಒಂದರಲ್ಲಿ ಶ್ರೀ ನಂದೀಶ್ವರ ಟ್ರೇಡರ್ಸ್ (ಗೊಬ್ಬರ ಮತ್ತು ಔಷಧಿ ವ್ಯಾಪಾರಿಗಳು) ಎಂಬ ಅಂಗಡಿ ಉದ್ಘಾಟನೆಯಾಯಿತು.
ಕತ್ತೆರಾಮನ ಯೋಜನೆ ಅಷ್ಟಕ್ಕೆ ನಿಂತಿರಲಿಲ್ಲ. ಆ ಇಡೀ ಜಾಗವನ್ನೆಲ್ಲಾ ಬಳಸಿಕೊಂಡು ಒಂದು ಕಾಂಪ್ಲೆಕ್ಸ್ ಕಟ್ಟಲು ನೀಲನಕ್ಷೆ ತಯಾರು ಮಾಡಿ ಇಟ್ಟುಕೊಂಡಿದ್ದ.
ಅದರಲ್ಲಿ ಮುಖ್ಯರಸ್ತೆಗೆ ತೆರೆದುಕೊಂಡAತೆ ಆರು ಮಳಿಗೆಗಳು, ಹಿಂದುಗಡೆ ಶೆಡ್ ಇರುವ ಕಡೆಗೆ ಒಂದು ವಾಸದ ಮನೆ, ಮೊದಲನೇ ಮಹಡಿಯಲ್ಲಿ ಎರಡು ವಿಶಾಲವಾದ ಹಜಾರಗಳು. ಅಷ್ಟಲ್ಲದೆ ಎರಡನೇ ಮಹಡಿ ಕಟ್ಟಲೂ ಅವಕಾಶ!
‘ಏನ್ ಮಾಡದು. ಹೆಂಗೂ ಇಲ್ಲಿಯವರೆಗೂ ತಂದು ನಿಲ್ಲಿಸಿ ಆಯ್ತು. ಈ ಕಾಂಪ್ಲೆಕ್ಸ್ ಮಾಡಿ ಮುಗಿಸಬೇಕೂಂದ್ರೆ ಒಂದ್ ಕೋಟಿನಾದ್ರೂ ಬೇಕು, ಎಲ್ಲಿಂದ ತರಲಿ’ ಕತ್ತೆರಾಮ ಅಪ್ತರೊಂದಿಗೆ ಹೇಳಿಕೊಳ್ಳುತ್ತಿದ್ದ.
ಒಂದು ದಿನ, ಆ ಏರಿಯಾಕ್ಕೇ ಪ್ರಸಿದ್ದನಾದ ಮ್ಯಾರೇಜ್ ಬ್ರೋಕರ್ ಬೆಟ್ಟೇಗೌಡ ಬಂದ. ರಾಮನ ಹಣದ ಅವಶ್ಯಕತೆ ಬಗ್ಗೆ ತಿಳಿದುಕೊಂಡಿದ್ದ ಅವನು ರಾಮನ ಆಪ್ತ ಭೇಟಿಗೆಂದೇ ಅಂಗಡಿಯ ಒಳಗೆ ಇದ್ದ ಕೋಣೆಗೆ ಕರೆದುಕೊಂಡು ಹೋದ.
‘ನೋಡಿ ರಾಮಣ್ಣ ಹಾಸನದ ಬಿಟ್ಟಿಗೇನಹಳ್ಳಿಲಿ ಕೇಶವೇಗೌಡ್ರು ಅಂತಾ ಇದಾರೆ. ಅವರದು ಎರಡೆಕೆರೆ ಹೊಲ ಬಿಲ್ಡರ್‌ಗಳಿಗೆ ಸೈಟಿಗೆ ಮಾರಾಟ ಆಗಿದೆ. ಬರಾಬರಿ ಎರಡು ಕೋಟಿ ಅವರ ಕೈಲಿದೆ. ಅವರಿಗೆ ಇರೋದು ಒಬ್ಳೇ ಮಗಳು. ನೋಡಕೆ ಸುಮಾರಾಗಿದಾಳೆ. ವ್ಯವಹಾರ ಕುದುರಿಸ್ಲಾ’ ಎಂದು ಒಂದೇ ಉಸುರಿಗೆ ಹೇಳಿ ಮುಗಿಸಿದ.
ಸ್ವಲ್ಪಕಾಲ ಮೌನವಾಗಿ ಯೋಚಿಸಿದ ಕತ್ತೆರಾಮ ‘ಜೈ ಅನ್ನಿಸಿಬಿಡಿ, ನಿಮಗೆ ಒಳ್ಳೆ ಕಮೀಷನ್ನು’ ಎಂದ.
ಹೀಗೆ ಬಿಟ್ಟಿಗೇನಹಳ್ಳಿಯ ಸುಂದರಮ್ಮ ದೊಡ್ಡೂರಿನ ಕತ್ತೆರಾಮನ ಮನೆಗೆ ನಡೆದು ಬಂದಳು. ಅವಳೊಂದಿಗೇ ಒಂದು ಕೋಟಿ ರೂಪಾಯಿ ಹೇಮಾವತಿ ಹೊಳೆಯಂತೆ ಹರಿದುಬಂದಿತ್ತು.
ಗೊಬ್ಬರದಂಗಡಿ ಶುರುವಾದ ನಂತರವೂ ಹಾಗೂ ಹೀಗೂ ನಡೆಯುತ್ತಿದ್ದ ಟೀ ಅಂಗಡಿಯನ್ನು ಒಡೆದು ಎಲ್ಲಕಡೆ ಪಿಲ್ಲರ್‌ಗಳು ಎದ್ದವು. ಕಾಂಪ್ಲೆಕ್ಸ್ ಕೆಲಸ ಭರದಿಂದ ನಡೆಯತೊಡಗಿತು.


ಟೀ ಅಂಗಡಿ ಒಡೆದು ಗಿರಾಕಿಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಹೋದರೂ ಚಂಗಪ್ಪಗೌಡರು ಬರುವುದನ್ನು ತಪ್ಪಿಸಲಿಲ್ಲ. ಮೊದಲು ಟೀ ಅಂಗಡಿಯಲ್ಲಿ ಕೂರುತ್ತಿದ್ದವನು ಈಗ ನಂದೀಶ್ವರ ಟ್ರೇಡರ್ಸ್ನ ಮುಂದಿನ ಬೆಂಚಿನಲ್ಲಿ ಖಾಯಂ ಆಗಿ ಕುಳಿತು ಬೀಡಿ ಸೇದುತ್ತಿದ್ದರು.
ಅದಕ್ಕೆ ಬಲವಾದ ಕಾರಣವೂ ಇತ್ತು.
ಆತನಿಗೆ ಎರಡು ಜನ ಗಂಡುಮಕ್ಕಳು. ಇಬ್ಬರೂ ಸ್ವಲ್ಪ ಸಪ್ಪೆ ಸ್ವಭಾವದವರು. ಆದರೆ ಇಬ್ಬರು ಸೊಸೆಯರೂ ಘಟವಾಣಿಯರು. ಇಬ್ಬರ ಮಧ್ಯೆ ದಿನವೂ ಲಡಾಯಿ. ಆ ವೇಳೆ ಗಂಡಂದಿರು ತಲೆತಪ್ಪಿಸಿಕೊಳ್ಳುತ್ತಿದ್ದರು. ಮನೆಯಲ್ಲಿರುತ್ತಿದ್ದ ಚಂಗಪ್ಪಗೌಡ ಬಿಡಿಸಲು ಹೋಗಿ ನಜ್ಜುಗುಜ್ಜಾಗುತ್ತಿದ್ದ.
ಮನೆ ಪಾಲು ಮಾಡದೇ ಬೇರೆ ದಾರಿಯೇ ಇರಲಿಲ್ಲ.
ಹೆಂಡತಿ ಸತ್ತಿದ್ದ ಚಂಗಪ್ಪಗೌಡರು ಯಾರೊಂದಿಗೆ ಇರುವುದು?
ಹಿರಿಯ ಸೊಸೆಗೆ ಮಾವನ ಮುಖ ಕಂಡರೇ ಆಗುತ್ತಿರಲಿಲ್ಲ. ಜಗಳ ನಡೆಯುವಾಗ ಕಿರಿಯ ಸೊಸೆಯ ಪರ ವಹಿಸುತ್ತಾನೆಂಬ ಗುಮಾನಿ ಅವಳಿಗೆ!

ಇಬ್ಬರು ಸೊಸೆಯಂದಿರೂ ಅವನನ್ನು ತಮ್ಮೊಂದಿಗೆ ಇರಿಸಿಕೊಳ್ಳಲು ಒಪ್ಪಿರಲಿಲ್ಲ.
ಪಾಲಿಗೆ ಬಂದವರು, ಇಬ್ಬರು ಮಕ್ಕಳಿಗೂ ತೋಟ ಸಮ ಸಮ ಪಾಲು ಎಂತಲೂ, ಕಿರಿಯ ಮಗನಿಗೆ ಹತ್ತು ಗುಂಟೆ ಗದ್ದೆ ಹೆಚ್ಚಾಗಿ ಕೊಡುವುದೆಂತಲೂ, ಅವನು ಚಂಗಪ್ಪಗೌಡರಿಗೆ ಕೊನೆಯವರೆಗೂ ಅನ್ನ ಕೊಡುವುದೆಂತಲೂ, ಚಂಗಪ್ಪಗೌಡರು ಮನೆಯ ಹಿಂದೆ ಖಾಲಿ ಬಿದ್ದಿರುವ ಎತ್ತಿನ ಕೊಟ್ಟಿಗೆಯಲ್ಲಿ ವಾಸ ಮಾಡುವುದೆಂತಲೂ ತೀರ್ಮಾನ ಮಾಡಿದ್ದರು.
ಇನ್ನು ತೋಟದ ಮೇಲಿನ ಸಾಲ ಪಿಎಲ್‌ಡಿ ಬ್ಯಾಂಕಿನಲ್ಲಿ ಬಡ್ಡಿಯೆಲ್ಲಾ ಸೇರಿ ಎರಡು ಲಕ್ಷಕ್ಕೆ ಬಂದು ನಿಂತಿತ್ತು. ಹಾಲಿ ಪಾಳು ಬಿದ್ದಿರುವ ತೋಟದ ಮರವನ್ನು ಕತ್ತೆರಾಮನ ಮುಖಾಂತರ ಬಸವೇಶ್ವರ ಸಾಮಿಲ್‌ಗೆ ಎರಡೂವರೆ ಲಕ್ಷಕ್ಕೆ ಮಾರುವುದೆಂದು ಒಪ್ಪಂದವಾಗಿತ್ತು. ಪಾಲಿನ ವೇಳೆ ಮರದ ಬಾಬ್ತು ಎರಡೂವರೆ ಲಕ್ಷದ ಪೈಕಿ ಎರಡು ಲಕ್ಷ ಸಾಲಕ್ಕೆ ಕಟ್ಟುವುದೆಂತಲೂ, ಉಳಿದ ಐವತ್ತು ಸಾವಿರವನ್ನು ತನ್ನ ಜೀವನಾಂಶಕ್ಕೆಂದು ಚಂಗಪ್ಪಗೌಡರೇ ಇಟ್ಟುಕೊಳ್ಳುವುದೆಂದೂ ಹಿರಿಯರು ತೀರ್ಮಾನ ಮಾಡಿದ್ದರ
ಕಿರಿಯ ಸೊಸೆ ಮನಸ್ಸಿಲ್ಲದಿದ್ದರೂ ಆತನಿಗೆ ಊಟ ಹಾಕಲು ಒಪ್ಪಿಕೊಂಡದ್ದು ಈ ಐವತ್ತು ಸಾವಿರದ ಕಾರಣಕ್ಕಾಗಿಯೇ!
ಅನ್ನ ಹಾಕುವ ನೆಪದಲ್ಲಿ ಹ್ಯಾಗಾದರೂ ಮಾಡಿ ಪುಸಲಾಯಿಸಿ ಆ ಐವತ್ತು ಸಾವಿರವನ್ನು ಮುದುಕನಿಂದ ಹೊಡೆದುಕೊಂಡು ಒಂದು ನೆಕ್ಲೆಸ್ ಮಾಡಿಸಿಕೊಳ್ಳಬೇಕೆಂದು ಅವಳ ಮನಸ್ಸಿನ ಒಳ ಆಸೆಯಾಗಿತ್ತು.
ರೆಕಾರ್ಡು ಹಲವಾರು ಇಲಾಖೆಗಳ ಮೂಲಕ ಹಾದು ಅರಣ್ಯ ಇಲಾಖೆ ‘ಫೆಲ್ಲಿಂಗ್ ಪರ್ಮಿಟ್’ ಹೊರಡಿಸಲು ಸಾಕಷ್ಟು ಕಾಲಾವಕಾಶ ಬೇಕಿತ್ತು. ನಂತರವೇ ಮಿಲ್ಲಿಂದ ಹಣ. ಹಾಗಾಗಿ ಚಂಗಪ್ಪಗೌಡರು ದಿನವೂ ಟೀ ಕುಡಿದು ದುಡ್ಡಿನ ದಾರಿ ನೋಡುತ್ತಾ ಕೂರುತ್ತಿದ್ದರು.
ಒಂದು ದಿನ ಸಂಜೆ ಎಂದಿನಂತೆ ನಂದೀಶ್ವರ ಟ್ರೇಡರ್ಸ್ ಮುಂದಿನ ಬೆಂಚಿನ ಮೇಲೆ ಚಂಗಪ್ಪಗೌಡರು ಬೀಡಿ ಎಳೆಯುತ್ತಾ ಕೂತಿದ್ದರು. ಬಸವೇಶ್ವರ ಸಾಮಿಲ್‌ನ ಜೀಪು ಅಂಗಡಿಯ ಮುಂದೆ ನಿಂತಿತು. ಕಂಕುಳಲ್ಲಿ ಚರ್ಮದ ಚೀಲ ಇರುಕಿಕೊಂಡು ಅದರಿಂದಿಳಿದ ರೈಟರು ‘ಓ ಗೌಡರು ಇಲ್ಲೇ ಇದಾರೆ, ಒಳ್ಳೇದೆ ಆಯ್ತು’ ಎನ್ನುತ್ತಾ ಚೀಲದ ಜಿಪ್ ಎಳೆದು ಛಾಪಾ ಕಾಗದ ಹಾಗೂ ರಸೀದಿ ಮುಂತಾದವನ್ನು ತೆಗೆದು ‘ದುಡ್ಡು ಕೊಟ್ಟು ಹೋಗೋಣ ಅಂತ ಬಂದೆವು. ಇಲ್ಲಿ ಸೈನ್ ಹಾಕಿ ಗೌಡರೇ’ ಎಂದು ಸೈನ್ ಪಡೆದುಕೊಂಡರು.
ನಂತರ ಆ ಕಾಗದಗಳಿಗೆ ಕತ್ತೆರಾಮನ ಸಾಕ್ಷಿ ಹಾಕಿಸಿಕೊಂಡು ನೋಟಿನ ಕಟ್ಟುಗಳನ್ನು ಅವನ ಟೇಬಲಿನ ಮೇಲೆ ಇಟ್ಟು ‘ಎಣಿಸಿಕೊಳ್ಳಿ. ಸರಿಯಾಗಿ ಎರಡೂವರೆ ಲಕ್ಷ ಇದೆ’ ಎಂದು ರೈಟರು ಜೀಪಿನ ಕಡೆ ನಡೆದರು.
ಐನೂರರ ಐದು ಬಂಡಲುಗಳನ್ನು ಒಂದೊಂದಾಗಿ ತೆಗೆದು ಪಕ್ಕಕ್ಕಿರಿಸುತ್ತಾ ‘ಒಳ್ಳೆ ಸುದ್ಧಿ ಚಂಗಪ್ಪಣ್ಣ. ಈವತ್ತು ನಿಮ್ಮ ಕಡೆಯಿಂದ ಗಡದ್ದು ಪಾರ್ಟಿ’ ಎಂದ ರಾಮ.
ಚಂಗಪ್ಪಗೌಡರು ನೋಟಿನ ಕಂತೆಗಳನ್ನು ಆಸೆಯಿಂದ ನೋಡುತ್ತ ಹಾಗೆಯೇ ಕುಳಿತಿದ್ದರು. ಟೇಬಲ್ ಡ್ರಾ ಎಳೆದು ಸಾವಿರದ ನೋಟೊಂದನ್ನು ತೆಗೆದು ಚಂಗಪ್ಪಗೌಡರ ಕೈಗೆ ಕೊಡುತ್ತಾ, ‘ಪ್ರಭಾಕರನ ಬ್ರಾಂಡಿ ಶಾಪಿಗೆ ಹೋಗಿ ಒಂದು ಬಾಟ್ಲಿ ಸಿಗ್ನೇಚರ್ ವಿಸ್ಕಿ ತಗಬನ್ನಿ. ನಂಗೆ ಅಂತ ಹೇಳಿ. ಈ ದುಡ್ಡು ಇಲ್ಲೇ ಜೋಪಾನವಾಗಿರುತ್ತೆ’ ಎನ್ನುತ್ತಾ ರಾಮ ಟೇಬಲ್ ಮೇಲಿದ್ದ ನೋಟಿನ ಕಟ್ಟುಗಳನ್ನು ತನ್ನ ಅಲ್ಮೇರಾಕ್ಕೆ ಸೇರಿಸಿದ.
ಪಾರ್ಟಿ ಮುಗಿದಾಗ ಚಂಗಪ್ಪಗೌಡರು ಸಾಕಷ್ಟು ಚಿತ್ತಾಗಿದ್ದರು. ಊಟವೂ ರಾಮನ ಅಂಗಡಿಯ ಆಪ್ತ ಕೋಣೆಗೇ ಸರಬರಾಜಾಯಿತು.
‘ಇಷ್ಟ್ ಹೊತ್ನಲ್ಲಿ ದುಡ್ಡು ಈಚೆಗೆ ತೆಗೆಯದು ಬ್ಯಾಡ. ಆ ವಿಚಾರ ಬೆಳಿಗ್ಗೆ ನೋಡ್ಕೊಳಾಣ. ಬನ್ನಿ ಮನೆಗೆ ಬಿಟ್ ಬರ್ತೀನಿ’ ಎನ್ನುತ್ತಾ ಅವರನ್ನು ಜೀಪ್ ಹತ್ತಿಸಿಕೊಂಡ.


ಬೆಳಗಾಗೆದ್ದ ಚಂಗಪ್ಪಗೌಡರು ಎಂದಿನಂತೆ ಬರೀ ಮುಖ ತೊಳೆಯದೆ ನೀಟಾಗಿ ಸ್ನಾನ ಮಾಡಿಕೊಂಡು ಸೊಸೆ ಇಟ್ಟುಹೋಗಿದ್ದ ಒಣರೊಟ್ಟಿ ತಿಂದರು.
‘ಆ ಎರಡು ಲಕ್ಷ ಒಂದು ಸಲ ತಗಂಡುಹೋಗಿ ಬ್ಯಾಂಕಿಗೆ ಕಟ್ಟಿಬಂದರೆ ನೆಮ್ಮದಿಯಾಗುತ್ತೆ. ಸೊಸೆಯಂದಿರ ಕೈಲಿ ದಿನಾ ಕುಟುಕಿಸಿಕೊಳ್ಳುವುದು ತಪ್ಪುತ್ತೆ’ ಎಂದುಕೊಳ್ಳುತ್ತಾ ಒಗೆದು ಮಡಿಚಿಟ್ಟಿದ್ದ ಶುಭ್ರವಾದ ಬಿಳಿಯ ಪಂಚೆ, ಶರಟು ತೊಟ್ಟು ಕತ್ತೆರಾಮನ ಅಂಗಡಿಯ ದಾರಿ ಹಿಡಿದರು.
ಭೂತಗಾಜಿನ ಕನ್ನಡಕದೊಳಗಿನಿಂದ ದೂರದಿಂದಲೇ ಗಮನಿಸಿದ ರಾಮ ತನ್ನ ಸಂಭಾಷಣೆಯನ್ನು ಮನಸ್ಸಿನಲ್ಲೇ ಸಿದ್ಧಪಡಿಸಿಕೊಳ್ಳತೊಡಗಿದ.
ಹೇ ಹೇ ಹೇ ಏನ್ ಚಂಗಪ್ಪಣ್ಣ ಇವತ್ತೊಳ್ಳೆ ಮದವಣ್ಣ ಆಗಿ ಬಂದಿದೀರಿ! ಮಾತಿಗೆ ಪೀಠಿಕೆ ಹಾಕಿದ.
‘ಏನಿಲ್ಲ ಈವತ್ತು ಪೇಟೆಗೆ ಹೋಗಿ ಬ್ಯಾಂಕಿಗೆ ದುಡ್ಡು ಕಟ್ಟಿ ಬರುವ ಅಂತ’ ಗೌಡರು ನಾಚುತ್ತಲೇ ತಮ್ಮ ಬಟ್ಟೆ ಸವರಿಕೊಳ್ಳುತ್ತಾ ಹೇಳಿದರು.
‘ಹಯ್ ನಿಮಗೆ ಇಷ್ಟು ವಯಸ್ಸಾದ್ರೂ ಬುದ್ದಿ ಬರಲಿಲ್ಲ ನೋಡಿ. ಕೈಲಿರೋ ದುಡ್ಡ ತಗಂಡೋಗಿ ಬ್ಯಾಂಕಿಗೆ ಕಟ್ಟಿ ಬಂದು ಬಿಟ್ರೆ ನಿಮ್ಮ ಸೊಸೇರೇನು ಹಾಲು ತುಪ್ಪ ಇಕ್ಕಿ ಬಿಡ್ತಾರೆ ಅಂತ ತಿಳಿದುಬಿಟ್ಟಿರಾ? ದುಡ್ಡು ಕೈಯಲ್ಲಿ ಇಲ್ಲಾಂದ್ರೆ ನೀವು ಯಾವ ಕೆಲಸಕ್ಕೂ ಬಾರದವುö್ರ ಅಂತಾ ಬೀದಿಗೆ ಅಟ್ಟಿ ಬಿಡ್ತಾರೆ… ಸ್ವಲ್ಪ ಯೋಚನೆ ಮಾಡಿ ನೋಡಿ…ಬ್ಯಾಂಕಿನ ಕೃಷಿ ಸಾಲಕ್ಕೆ ವರ್ಷಕ್ಕೆ ನಾಕು ಪರ್ಸೆಂಟ್ ಬಡ್ಡಿ ಕಟ್ತೀರಿ. ಅದೇ ದುಡ್ಡನ್ನ ಕೈಯಲ್ಲಿ ಇಟ್ಕಂಡು ದರ್ದು ಇರೋ ಜನಕ್ಕೆ ಬಡ್ಡಿಗೆ ಬಿಟ್ರೆ ತಿಂಗಳಿಗೆ ಐದು ಪರ್ಸೆಂಟ್ ದುಡಿಯುತ್ತೆ. ದುಡ್ಡಿನ ಆಟ ಆಡದು ಕಲಿಬೇಕು ಚಂಗಪ್ಪಣ್ಣ. ಆರು ತಿಂಗಳು ಈ ದುಡ್ಡನ್ನ ಬಡ್ಡಿಗೆ ಬಿಡಾಣ. ತಿಂಗಳಿಗೆ ಹನ್ನೆರಡು ಸಾವಿರದ ಐನೂರು ದುಡಿಯುತ್ತೆ. ಏನ್ ತಿಳ್ಕಂಡಿದೀರಿ. ಅಷ್ಟು ದುಡ್ಡು ಅಂದ್ರೆ ಒಬ್ಬ ಸರ್ಕಾರಿ ನೌಕರನ ಸಂಬಳ! ಆರು ತಿಂಗಳಿಗೆ ಎಷ್ಟಾಯ್ತು ಎಪ್ಪತ್ತೊಂದು ಸಾವಿರ. ಆರು ತಿಂಗಳ ನಂತರ ಅಸಲು ಬಡ್ಡಿ ಸೇರಿ ಮೂರು ಲಕ್ಷದ ಇಪ್ಪತ್ತೆöÊದು ಸಾವಿರ ನಿಮ್ಮ ಕೈಲಿರುತ್ತೆ. ಆಗ ಎರಡು ಲಕ್ಷ ಬ್ಯಾಂಕಿಗೆ ಕಟ್ಟಿ ಒಂದು ಲಕ್ಷ ನನ್ನ ಕೈಲಿ ಕೊಡಿ. ಪಕ್ಕದ ಖಾಲಿ ಮಳಿಗೆಲಿ ಪಾರ್ಟನರ್‌ಶಿಪ್ಪಲಿ ಪೈನಾನ್ಸ್ ಶುರುಮಾಡಣ. ಇನ್ನುಳಿದ ಇಪ್ಪತ್ತೊಂದು ಸಾವಿರ ನಿಮ್ಮ ಜೇಬಿನಲ್ಲಿರುತ್ತೆ…. ಅಷ್ಟಕ್ಕೂ ಸರ್ಕಾರದ ರೂಲ್ಸು ಹೆಂಗೆ ಬರುತ್ತೆ ಯಾರಿಗೆ ಗೊತ್ತು. ಸಾಲ ಗೀಲ ಏನಾದ್ರೂ ಮನ್ನ ಗಿನ್ನ ಆಯ್ತು ಅನ್ನಿ, ಇಡೀ ಗಂಟು ನಿಮ್ಮ ಕೈಲೇ ಉಳಿಯುತ್ತೆ.’ ಎಂದು ಬಿಡದೆ ಹೇಳಿ ಮಾತು ನಿಲ್ಲಿಸಿದ ಕತ್ತೆರಾಮ, ತನ್ನ ಮಾತು ಪರಿಣಾಮ ಬೀರಿದೆಯೋ ಎಂಬಂತೆ ಚಂಗಪ್ಪಗೌಡರ ಮುಖ ನೋಡಿದ.
‘ಅಯ್ಯೋ ಇಷ್ಟೆಲ್ಲಾ ವಿಚಾರ ಹೊಳೆಯಲೇ ಇಲ್ವಲ್ಲ ನನಗೆ’ ಮನಸ್ಸಿನಲ್ಲಿ ಅಂದುಕೊಳ್ಳುತ್ತಾ ಗೌಡರು ತಲೆ ಕೆರೆದುಕೊಂಡರು.
ತನ್ನ ಬಾಣ ಮಿಕದ ಮರ್ಮಕ್ಕೆ ತಾಗಿದೆ ಎಂಬುದು ರಾಮನಿಗೆ ಖಚಿತವಾಯಿತು. ಆದರೂ ಬಾಯಿ ಬಿಡಲು ಅನುಮಾನಿಸುತ್ತಾ ಕುಳಿತಿದ್ದ ಗೌಡರನ್ನು ಕಂಡು ‘ಇನ್ನೂ ಏನು ಅನುಮಾನವಾ ಚಂಗಪ್ಪಣ್ಣ…ಎನ್ನುತ್ತಾ ಎಲ್ಲಾ ಮಾತು ಕೇಳುತ್ತಾ ಕುಳಿತಿದ್ದ ತನ್ನ ಅಪ್ತ ಸಹಾಯಕನ ಮುಖ ನೋಡಿದ. ವ್ಯವಹಾರ ಚುತುರನಾದ ಆತ ‘ಗೌಡ್ರಿಗೆ ಸೊಸೆಯರ ಹೆದರಿಕೆ ಅಂತ ಕಾಣುತ್ತೆ…ದುಡ್ಡು ಬಂದಿರದು ನಮಗೆ ಬಿಟ್ರೆ ಯಾರಿಗೂ ಗೊತ್ತಿಲ್ಲ. ದುಡ್ಡು ಬರಕೆ ಇನ್ನೂ ಆರು ತಿಂಗಳು ಆಗುತ್ತೆ. ಮರ ಕಡಿದು ತೋಟದಿಂದ ಎತ್ತುವಾಗ ಕೊಡ್ತರೆ ಅಂತಾ ಹೇಳಿಬಿಡಿ ಕೇಳಿದ್ರೆ…’ಎಂದ
ರಾಮಣ್ಣ, ಗೌಡ್ರದ್ದು ದೊಡ್ಡ ಅಮೌಂಟು. ಅದಕ್ಕೆ ಗ್ಯಾರಂಟಿ ಬ್ಯಾಡ್ವಾ? ಅಸಲು ಬಡ್ಡಿ ಸೇರಿಸಿ ಒಂದು ಚೆಕ್ ಕೊಟ್ಟಿರಿ’ ಎಂದ.
ರಾಮ ಬರೆದ ಚೆಕ್ಕನ್ನು ಗೌಡರಿಗೆ ಹಸ್ತಾಂತರಿಸುತ್ತಾ ‘ಇದನ್ನು ಜೋಪಾನವಾಗಿಟ್ಕೊಳಿ ಗೌಡ್ರೆ…ನಿಮ್ಮ ದುಡ್ಡಿಗೆ ಗ್ಯಾರೆಂಟಿ. ದುಡ್ಡಿನ ವಿಚಾರದಲ್ಲಿ ಏನಾದ್ರೂ ತಕರಾರಾದ್ರೆ…ಹಾಗಾಗದು ಬ್ಯಾಡ… ಈ ಚೆಕ್ಕನ್ನು ಕೋರ್ಟಿಗೆ ಹಾಕಿ ದುಡ್ಡು ತಗಳ್ಳಬಹುದು’ ಎಂದು ಗೌಡರಿಗೆ ಮನವರಿಕೆ ಮಾಡಿದ.
ಚೆಕ್ಕನ್ನು ಜೋಪಾನವಾಗಿ ಜೇಬಿನಲ್ಲಿಟ್ಟುಕೊಂಡು ರಾಮ ತರಿಸಿದ ಟೀ ಕುಡಿದು ಮನೆಯ ದಾರಿ ಹಿಡಿದರು ಚಂಗಪ್ಪಗೌಡರು.
ದಿನವೂ ಬಂದು ಟೀ ಕುಡಿದು ನಂದೀಶ್ವರ ಟ್ರೇಡರ್ಸ್ ಎದುರಿನ ಬೆಂಚಿನ ಮೇಲೆ ಕುಳಿತು ಬೀಡಿ ಎಳೆಯುತ್ತಾ ತನ್ನ ದುಡ್ಡು ಹೇಗೆ ಲಾಭ ದುಡಿಯುತ್ತಿದೆ ಎಂದು ರಾಮನ ಲೇವಾದೇವಿ ವ್ಯವಹಾರ ಗಮನಿಸುತ್ತಾ ದಿನ ಕಳೆಯತೊಡಗಿದರು ಗೌಡರು.
ಆರು ತಿಂಗಳು ತುಂಬಿ ವಾರಗಳು ಕಳೆದರೂ ಕತ್ತೆರಾಮ ಮೂರು ಲಕ್ಷ ಇಪ್ಪತ್ತೆöÊದು ಸಾವಿರದ ಸುದ್ದಿಯನ್ನೇ ಎತ್ತದಾದ. ಮನೆಯಲ್ಲಿ ಗಡುವಿಗೆ ಕಾದಿದ್ದ ಸೊಸೆಯರ ತಗಾದೆಯೂ ಜಾಸ್ತಿಯಾಯಿತು. ರಾಮ ಏನೂ ಬಾಯಿ ಬಿಡದಿದ್ದುದು ಕಂಡು ವ್ಯವಹಾರದ ದಿನ ಮನವರಿಕೆ ಮಾಡಿದ್ದ ರಾಮನ ಅಪ್ತ ಸಹಾಯಕನನ್ನು ಕೇಳಿದ.
‘ಅದಕ್ಯಾಕೆ ಹೆದರ್ತೀರಿ ಗೌಡ್ರೆ, ರಾಮಣ್ಣ ಕೊಟ್ಟ ಚೆಕ್ಕಿಲ್ವಾ! ಜೋಪಾನವಾಗಿಟ್ಟಿದೀರಿ ತಾನೇ? ದುಡ್ಡು ಯಾವಾಗ ಸಿಕ್ಕುತ್ತೆ ಅಂತಾ ರಾಮಣ್ಣರ ಕೇಳಿ ಹೇಳ್ತೀನಿ’ ಎಂದ.
ಸಂಜೆ ಮನೆಗೆ ಹೋದ ಗೌಡರು ಟ್ರಂಕೊಳಗೆ ಜೋಪಾನವಾಗಿದ್ದ ಚಕ್ಕನ್ನು ಮುಟ್ಟಿನೋಡಿ ಸಮಾಧಾನಪಟ್ಟುಕೊಂಡರು.
ತೋಟದಲ್ಲಿ ಮರ ಕಡಿದು ಕಟಿಂಗ್ ಕೆಲಸ ಶುರುವಾಗಿತ್ತು. ದುಡ್ಡಿನ ಸುದ್ದಿಯೇ ಇಲ್ಲದ್ದು ಮನೆಯವರನ್ನೆಲ್ಲಾ ಕೆರಳಿಸಿತ್ತು.
ಅವತ್ತು ಸಂಜೆ ಮಾಮೂಲಿನಂತೆ ಅರ್ಧ ಕ್ವಾರ್ಟರ್ ರಂ ಹೊಡೆದು ಬಂದು ಗೌಡರು ಕುಳಿತಿದ್ದರು. ಕಿರಿಸೊಸೆ ಒಂದು ತಟ್ಟೆಯಲ್ಲಿ ಅನ್ನ ಸ್ವಲ್ಪ ಮಳ್ಳಿ ಮೀನಿನ ಸಾರು ತಂದು ಕುಕ್ಕಿದಳು. ಅವಳು ಹೊಳೆ ಸಾಲಿನ ಕಡೆ ಹೆಣ್ಣು. ಮೀನು ಸಾರು ಮಾಡುವುದರಲ್ಲಿ ನಿಪುಣೆ. ಅಪರೂಪಕ್ಕೆ ಸಿಕ್ಕ ಒಂದು ಹಿಡಿ ಮಳ್ಳಿ ಮೀನನ್ನು ಹೆರಳೆ ಕಾಯಿ ಹುಳಿ ಹಾಕಿ ಗಮಗುಡುವಂತೆ ಮಾಡಿದ್ದಳು. ವಾಸನೆಗೇ ಬಾಯಲ್ಲಿ ನೀರೂರಿಸಿಕೊಂಡ ಗೌಡರು ತಟ್ಟೆಯ ಕಡೆ ನೋಡುತ್ತಾ ‘ಇನ್ನೊಂದಿಷ್ಟು ಸಾರಿದ್ರೆ ಹಾಕು’ ಎಂದರು.
ದುಡ್ಡಿನ ಮುಖವನ್ನೇ ತೋರಿಸದಿದ್ದ ಮುದುಕನ ಮುಖವನ್ನು ನೋಡುವುದನ್ನೇ ಬಿಟ್ಟಿದ್ದಳು ಸೊಸೆ. ಧ್ವನಿ ಕೇಳಿಯೇ ಅವಳ ಮನಸ್ಸಿನಲ್ಲಿ ಬೆಂಕಿ ಹೊತ್ತಿಕೊಂಡಿತು.
ಗಂಡ ಮಕ್ಕಳಿಗಿನ್ನೂ ಬಡಿಸಿರಲಿಲ್ಲ. ಮೀನಿನ ಸಾರಿಗೆಂದೆ ಮೀಸಲಿದ್ದ ಅಗಲ ಬಾಯಿನ ಮಣ್ಣಿನ ಪಾಸಲೆಯಲ್ಲಿ ಇನ್ನಷ್ಟು ಸಾರಿತ್ತು. ಅದನ್ನು ಎತ್ತಿಕೊಂಡು ಬಂದವಳೇ ‘ತಗಾ ತಿಂದು ಸಾಯಿ’ ಎನ್ನುತ್ತಾ ಮಾವನ ತಲೆಗೆ ಕುಕ್ಕಿದಳು. ಪಾಸಲೆಯ ತಳ ಒಡೆದು ಅದರ ಕಂಠ ಮುದುಕನ ಕುತ್ತಿಗೆಗೆ ಬಂದು ಸಿಕ್ಕಿಕೊಂಡಿತು.
ಕಣ್ಣೊಳಗೆ ಸೇರಿದ ಸಾರಿನ ಘಾಟು ತಡೆಯಲಾರದೇ ಕುಣಿದಾಡುತ್ತಾ ಹೊರಬಂದರು ಚಂಗಪ್ಪಗೌಡರು.
ಹಿರಿಯ ಮಗ ಒಂದು ಕೊಡ ನೀರು ತಂದು ತಲೆಗೆ ಸುರುವಿದ.
‘ಇದೇ ಅಲ್ಲ ನಿನಗೆ ಇನ್ನೂ ಐತೆ. ನಾಳೆ ದುಡ್ಡು ತಂದು ಬ್ಯಾಂಕಿಗೆ ಕಟ್ಟದೇ ಹೋದರೆ ನಾನೇ ತಲೆಗೆ ಕಲ್ಲೆತ್ತಿ ಹಾಕಿಬಿಡ್ತೀನಿ’ ಎನ್ನುತ್ತಾ ಮೆಚ್ಚುಗೆಗಾಗಿ ಬಳಿಯಿದ್ದ ಹೆಂಡತಿಯ ಮುಖ ನೋಡಿದ.
ಚಂಗಪ್ಪಗೌಡರಿಗೆ ರಾತ್ರಿಯೆಲ್ಲಾ ನರಕಯಾತನೆ.
ಬೆಳಗಾಗೆದ್ದು ಸ್ನಾನ ಮಾಡಿ ಮಡಿ ಬಟ್ಟೆ ತೊಟ್ಟುಕೊಂಡರು. ಟ್ರಂಕಿನಲ್ಲಿದ್ದ ಚಕ್ಕನ್ನು ತೆಗೆದು ಜೇಬಿಗೆ ಸೇರಿಸಿದರು. ಅವರು ನಿಶ್ಚಯ ಮಾಡಿಕೊಂಡುಬಿಟ್ಟಿದ್ದರು.
‘ಏನಾದರೂ ಸರಿ ಈವತ್ತು ರಾಮನನ್ನು ಬಿಡುವುದಿಲ್ಲ. ಚಕ್ಕು ವಾಪಸ್ಸು ಕೊಟ್ಟು ದುಡ್ಡು ಪಡೆದುಕೊಂಡು ಬ್ಯಾಂಕಿನ ಸಾಲ ತೀರಿಸಿಬಿಡುತ್ತೀನಿ…ಯಾರಿಗೆ ಬೇಕಾಗಿದೆ ಈ ನರಕಯಾತನೆ’ ಎಂದುಕೊಳ್ಳುತ್ತಾ ಕತ್ತೆರಾಮನ ಮುಂದೆ ಹೋಗಿ ನಿಂತರು. ಅವನು ಯಾವುದೋ ಲೆಕ್ಕದ ಪುಸ್ತಕ ನೋಡುತ್ತಾ ಕುಳಿತಿದ್ದ.
‘ಅವರಿಗೆ ಏನು ಬೇಕಂತೆ ಕೇಳೋ’ ಎಂದ ತನ್ನ ಆಪ್ತ ಸಹಾಯಕನ ಕಡೆ ತಿರುಗಿ…
‘ಅದೇ ದುಡ್ಡಿನ ವಿಚಾರ’ ಎಂದರು ಚಂಗಪ್ಪಗೌಡರು ತಗ್ಗಿದ ದನಿಯಲ್ಲಿ
‘ಎಂತಾ ದುಡ್ಡು!’ ಕತ್ತೆರಾಮ ತಲೆಯೆತ್ತದೆ ಕೇಳಿದ.
‘ಅದಕ್ಕೆ ಮನೆಯಲ್ಲಿ ರಂಪ ಆಗಿಹೋಯ್ತು’ ಎಂದರು ಗೌಡರು.
‘ಅದಕ್ಕೆ ನಾನೇನು ಮಾಡ್ಲಿ’ ಎಂದ ರಾಮ ಗಡುಸಾಗಿ.
‘ನಿಮ್ಮ ಚಕ್ ತಗೊಂಡು ನನ್ನ ದುಡ್ಡು ಕೊಟ್ಬಿಡಿ ಅಷ್ಟೇ ಸಾಕು’ ಎಂದರು ಗೌಡರು ಅಂಗಲಾಚುವ ದನಿಯಲ್ಲಿ.
‘ನೀವುö ದುಡ್ಡೇ ಕೊಟ್ಟಿಲ್ಲ ಅಂದ್ರೆ ಏನ್ಮಾಡ್ತಿರ‍್ರಿ?’ ರಾಮನ ಮಾತಿಗೆ ಗೌಡರು ಜೇಬಿನಿಂದ ಚಕ್ ತೆಗೆದು ತೋರಿದರು.
‘ಅದೇನ್ ಕಿತ್ಗತೀರೋ ಕಿತ್ಗ ಹೋಗ್ರಿ’ ಎಂದು ಕೊನೆಯ ಮಾತು ಎಸೆದೇ ಬಿಟ್ಟ.
ಚಂಗಪ್ಪಗೌಡರು ತನ್ನ ಶರಟಿನ ಎದೆಯ ಜೇಬಿನೊಳಗೆ ಚಕ್ ಇರಿಸಿ ಅದರ ಮೇಲೆ ಕೈ ಇಟ್ಟುಕೊಂಡು ಓಡುತ್ತಾ ಹೋಗಿ ನಿಂತಿದ್ದ ಪೇಟೆಯ ಬಸ್ ಹತ್ತಿಕೊಂಡರು.
* * *
ಚಕ್ಕನ್ನು ಹಿಂದೆ ಮುಂದೆ ತಿರುಗಿಸಿ ನೋಡಿದ ವಕೀಲರು ‘ಇದರ ಅವಧಿ ಮುಗಿದಿದೆ ಗೌಡ್ರೆ. ಏನೂ ಮಾಡದಿಕ್ಕೆ ಬರದಿಲ್ಲ’ ಎನ್ನುತ್ತಾ ಚಕ್ಕನ್ನು ಹಿಂತಿರುಗಿಸಿದರು.
ಕೊನೆಯ ಬಸ್ಸಿನಲ್ಲಿ ದೊಡ್ಡೂರು ತಲುಪಿದಾಗ ಕತ್ತಲಾಗಿತ್ತು. ಅಂಗಡಿ ಬೀದಿಯಲ್ಲಿ ನಿಲ್ಲಲಿಲ್ಲ. ಸೀದಾ ಮನೆಯ ಕಡೆ ಹೋಗುವುದನ್ನು ಜನ ಅಚ್ಚರಿಯಿಂದ ನೋಡಿದರು.
ಬೆಳಗಾಗುವಷ್ಟರಲ್ಲಿ ಚಂಗಪ್ಪಗೌಡರು ತಮ್ಮ ಹಿತ್ತಲಿನ ಹಲಸಿನ ಮರದಲ್ಲಿ ಹೆಣವಾಗಿ ನೇತಾಡುತ್ತಿದ್ದರು.
ಊರೆಲ್ಲಾ ಸುದ್ದಿ ಹರಡಿತು. ಪತ್ರಿಕಾ ವರದಿಗಾರರು ದೊಡ್ಡೂರಿನಲ್ಲಿ ಬಂದಿಳಿದರು. ಚಾನಲ್‌ನವರೂ ಅವರನ್ನು ಹಿಂಬಾಲಿಸಿದರು.
ವಿವರ ಸಂಗ್ರಹಿಸತೊಡಗಿದರು. ಅವರಿಗೆ ಎಲ್ಲೆಲ್ಲಿ ಸಾಲ ಇತ್ತು ಎಂದು ಕೇಳಿ ತಿಳಿದುಕೊಂಡರು.
‘ಸಾಲಬಾಧೆ ತಾಳಲಾರದೆ ಮತ್ತೊಬ್ಬ ರೈತ ಆತ್ಮಹತ್ಯೆ!’ ಪತ್ರಿಕೆಗಳಿಗೆ ಮುಖಪುಟದ ಸುದ್ದಿಯಾಯಿತು.
ಚಾನಲ್‌ಗಳವರು ತಿರುಗಾ ಮುರುಗಾ ಅದನ್ನೇ ತೋರಿಸಿ ಆ ವಾರದ ಮಟ್ಟಿಗೆ ಜೀವ ಉಳಿಸಿಕೊಂಡರು.
ಪೊಲೀಸ್ ಮಹಜರ್ ಎಲ್ಲಾ ಮುಗಿದು ಸ್ಮಶಾನದಲ್ಲಿ ಚಂಗಪ್ಪಗೌಡರ ಹೆಣ ಬೇಯುತ್ತಿದ್ದರೆ ಇತ್ತಕಡೆ ಕತ್ತೆರಾಮನ ನಂದೀಶ್ವರ ಫೈನಾನ್ಸ್ ಉದ್ಘಾಟನೆಗೆ ಪೂಜೆ ನಡೆಯುತ್ತಿತ್ತು.

ಅಧ್ಯಾಯ ೧೩: ಕತ್ತೆಗೆ ಚೈನು, ಸೀತೆಗೆ ಕರಿಮಣಿ!

ಕತ್ತೆರಾಮನ ಬಗೆಗೇ ಯೋಚಿಸುತ್ತಾ ಮಲಗಿದ್ದ ಚಿನ್ನಪ್ಪನಿಗೆ ತಡವಾಗಿ ನಿದ್ದೆ ಆವರಿಸಿತ್ತು.
‘ಓಹೋ ಸುಖನಿದ್ದೆ ಯಜಮಾನರಿಗೆ! ರಾತ್ರಿ ನಾ ಹೇಳಿದ್ದು ಮರೆತೇ ಹೋಯ್ತಾ ಏನು’ ಹೆಂಡತಿ ತಿವಿದಾಗ ಎಚ್ಚರವಾಯಿತು. ಮತ್ತೆ ಕತ್ತೆಯೊಂದಿಗೆ ಮುಖಾಮುಖಿಯಾಗಬೇಕಾದ ಅನಿವಾರ್ಯತೆಯನ್ನು ಮನಗಂಡ. ಒಲ್ಲದ ಮನಸ್ಸಿನಿಂದಲೇ ದೊಡ್ಡೂರಿಗೆ ಹೊರಡಲು ಸಿದ್ಧವಾಗತೊಡಗಿದ.
ಚಿನ್ನಪ್ಪನ ಊರಿಂದ ಒಂದು ಕಿಲೋಮೀಟರ್ ದೂರದ ಅಂಗಡಿ ಬೀದಿ ತಲುಪಲು ದೊಡ್ಡೂರಿನ ಊರೊಳಗೇ ಹಾದು ಬರಬೇಕು. ಊರೊಳಗಿನ ಸಣ್ಣ ರಸ್ತೆ ಬಂದು ಅಂಗಡಿ ಬೀದಿಯನ್ನು ಸೇರುವಲ್ಲಿ ಬಲಕ್ಕಿರುವುದೇ ಪ್ರಭಾಕರನ ಬ್ರಾಂಡಿ ಶಾಪು, ಅದರ ಪಕ್ಕಕ್ಕೆ ಶಾಂತ ಮಲ್ಲೇಶ್ವರ ಬೇಕರಿ. ಎದುರಿಗೆ ರಸ್ತೆ ಆಚೆ ಬದಿಯ ಸಾಲಿನಲ್ಲಿ ಭವ್ಯವಾಗಿ ನಿಂತಿರುವುದೇ ಕತ್ತೆರಾಮನ ನಂದೀಶ್ವರ ಕಾಂಪ್ಲೆಕ್ಸ್! ಎಡದಿಂದ ಮೊದಲಿರುವುದು ಸ್ಟೇರ್‌ಕೇಸ್. ನಂತರ ಹಿಂದಿರುವ ಮನೆಗೆ ಪ್ರವೇಶದ ಬಾಗಿಲು. ಅದರ ಪಕ್ಕದ್ದು ಬ್ಯಾಂಗಲ್ ಸ್ಟೋರ್. ನಂತರದ್ದು ಪಾತ್ರೆ ಅಂಗಡಿ. ನಡುವಿನ ಎರಡು ಮಳಿಗೆಗಳಲ್ಲಿ ನಂದೀಶ್ವರ ಟ್ರೇಡರ್ಸ್ ಮತ್ತು ಫೈನಾನ್ಸ್. ಪಕ್ಕದ್ದು ಬಟ್ಟೆ ಅಂಗಡಿ. ಕೊನೆಯಲ್ಲಿರುವುದೇ ಮೊಬೈಲ್ ರಿಪೇರಿ ಮತ್ತು ಕರೆನ್ಸಿ ರೀಚಾರ್ಚ್ ಅಂಗಡಿ. ಮೆಟ್ಟಿಲೇರಿ ಮೇಲೆ ಹೋದರೆ ನಾಡಕಛೇರಿ ಹಾಗೂ ಡಿಸಿಸಿ ಬ್ಯಾಂಕ್.
ನಂದೀಶ್ವರ ಟ್ರೇಡರ್ಸ್ನ ಗಲ್ಲಾದಲ್ಲಿ ಕುಳಿತ ಕತ್ತೆರಾಮ ತನ್ನ ಭೂತಗಾಜಿನ ಕನ್ನಡಕದೊಳಗಿನ ಹದ್ದಿನ ಕಣ್ಣಿನಿಂದ ಅಂಗಡಿ ಬೀದಿಯಲ್ಲಿ ತಿರುಗಾಡುವವರ ಮೇಲೆ ನಿಗಾ ಇರಿಸಿ ಕುಳಿತಿದ್ದ.
ಅಂಗಡಿ ಬೀದಿಯಲ್ಲಿ ಯಾವ್ಯಾವ ರೈತರು ತಿರುಗಾಡುತ್ತಿದ್ದಾರೆ. ಅವರಲ್ಲಿ ಯಾರಾರು ತನ್ನ ಬಲೆಗೆ ಬೀಳಬಹುದು ಎಂದು ಎಣಿಕೆ ಹಾಕುತ್ತಿದ್ದ.
ಎದುರು ಬೇಕರಿಯಲ್ಲಿ ಕುಳಿತು ಟೀ ಕುಡಿಯುತ್ತಿದ್ದ ಚಿನ್ನಪ್ಪನಿಗೆ ಕ್ಷಣಕಾಲ ರಾಮ ತನ್ನನ್ನೇ ದೃಷ್ಟಿಸಿ ನೋಡಿದಂತೆನಿಸಿತು. ಕಳೆದ ವರ್ಷ ರಾಮನ ಅಂಗಡಿಯಲ್ಲಿ ನೂರೈವತ್ತು ರೂಪಾಯಿ ಚಿಲ್ಲರೆ ಹಣ ಬಾಕಿ ನಿಲ್ಲಿಸಿದವನು ಮತ್ತೆ ಆ ಕಡೆ ತಲೆ ಹಾಕಿರಲಿಲ್ಲ. ಹಾಗಾಗಿ ಅಂಗಡಿ ಬೀದಿಗೆ ಬಂದವನಿಗೆ ನೇರವಾಗಿ ರಾಮನ ಅಂಗಡಿಗೆ ಹೋಗಲು ಧೈರ್ಯವಾಗಿರಲಿಲ್ಲ. ಟೀ ಕುಡಿದ ನಂತರ ಹಿಟ್ಟಿನ ಗಿರಣಿಗೆ, ಅಲ್ಲಿಂದ ಶಿವರುದ್ರಪ್ಪನ ದಿನಸಿ ಅಂಗಡಿಗೆ ಹೀಗೆ ಕೆಲಸವಿಲ್ಲದಿದ್ದರೂ ಅಂಗಡಿ ಬೀದಿಯಲ್ಲಿ ಠಳಾಯಿಸತೊಡಗಿದ.
‘ಈ ಕತ್ತೆರಾಮನ ಚಕ್ರವ್ಯೂಹದೊಳಗೆ ಬರಿಗೈಯಲ್ಲಿ ನುಸುಳಿ ಕೃಷಿಯೊಂದಿಗೆ ಹೋರಾಡಲು ತನಗೆ ಬೇಕಾಗುವ ಶಸ್ತಾçಸ್ತçಗಳನ್ನು ಗಳಿಸಿಕೊಂಡು ಹೊರಬರಲು ಸಾಧ್ಯವೆ?’ ಇದೊಂದೇ ವಿಚಾರ ಅವನ ತಲೆಯೊಳಗೆ ಓಡಾಡುತ್ತಿದ್ದುದು.
ಇದು ನನ್ನ ಗಿರಾಕಿಯೇ ಎಂದು ಖಾತ್ರಿಯಾದ ಕತ್ತೆರಾಮ ‘ಓಯ್ ಚಿನ್ನಪ್ಪಣ್ಣ, ಇದೇನು, ಯಾಪಾರಿಲ್ಲದ ಸೆಟ್ಟಿ ಯಾರಾ ಇಳಿ ತಿರುಗಿದ ಅನ್ನಹಾಗೆ ಅಂಗಡಿ ಬೀದಿಲಿ ಮ್ಯಾಕೂ ಕೇಳಿಕೂ ತಿರುಗ್ತಾ ಇದೀರಲ್ಲ’ ಹೇ ಹೇ ಹೇ ಎಂಬ ತನ್ನ ಮಾಮೂಲಿ ಹೇಷಾರವದ ನಗೆಯೊಂದಿಗೆ ಕರೆದು ಮಾತಾಡಿಸಿದ.
ಅಂಗಡಿ ಮುಂದಿನ ಬೆಂಚಿನ ಮೇಲೆ ಚಿನ್ನಪ್ಪ ಸಂಕೋಚದಿಂದ ಮುದುಡಿ ಕುಳಿತ.
ಗಿರಾಕಿ ತಿಣುಕಾಡುತ್ತಿರುವುದನ್ನು ಗಮನಿಸಿದ ರಾಮ ‘ಇನ್ನೇನ್ ಸಮಾಚಾರ’ ಎನ್ನುತ್ತಾ ಮಾತು ಮುಂದುವರಿಸಲು ಸುಲಭ ಮಾಡಿಕೊಟ್ಟ.

‘ಏನಿಲ್ಲ ರಾಮಣ್ಣ, ಮೆಣಸಿನ ಗಿಡದ ಕೆಲ್ಸಕ್ಕೆ ಕೆಲವು ಹತಾರಗಳು ಬೇಕಾಗಿತ್ತು’ ಮೈಯನ್ನು ಹಿಡಿಮಾಡಿಕೊಂಡು ಕೇಳಿದ.
‘ಓ ಅದಕ್ಕೇನಂತೆ ಇದೆಲ್ಲಾ ರೈತರ ಅನುಕೂಲಕ್ಕೆ ಅಂತಲೇ ಇಟ್ಟಿರದು. ಏನ್ ಬೇಕಾದ್ರೂ ತಗಂಡು ಹೋಗಬಹುದು’ ಎನ್ನುತ್ತಾ ಕತ್ತೆರಾಮ ಅಂಗಡಿಯ ಸಾಮಾನಿನ ಮೇಲೆಲ್ಲಾ ಒಮ್ಮೆ ದೃಷ್ಟಿ ಹರಿಸಿದ.
‘ಹಾಗಲ್ಲ ರಾಮಣ್ಣ, ಕಡ ಕೇಳೋಣ ಅಂತ ಬಂದಿದ್ದೆ’ ಚಿನ್ನಪ್ಪ ಉಗುಳು ನುಂಗಿಕೊಳ್ಳುತ್ತಾ ಹೇಳಿದ.
‘ಈಗ ಸಾಲದ ಯಾಪಾರ ಎಲ್ಲಾ ನಿಲ್ಲಿಸಿಬಿಟ್ಟಿದ್ದೀವಿ. ಏನಿದ್ರೂ ಕ್ಯಾಷ್ ಅಂಡ್ ಕ್ಯಾರಿ…ಈ ರೈತರುಗಳನ್ನ ನಂಬಕಾಗದಿಲ್ಲ. ಸುಮ್ನೆ ಯಾಕೆ ಸಾಲ ಕೊಟ್ಟು ಕೈ ಸುಟ್ಗಳದು…ಈಗ ನೀವೇ ನೋಡಿ ಕಳೆದ ವರ್ಷ ದುಡ್ಡು ನಿಲ್ಲಿಸಿ ಹೋದವುö್ರ ಹೊಸ ಸಾಲ ಬೇಕಾಗಿದೆ ಅಂತ ನಮ್ಮ ಅಂಗಡಿ ಕಡೆ ಬಂದ್ರಿ. ಇಲ್ದೆ ಇದ್ರೆ ಎಲ್ಲಿ ಸಿಕ್ತಿದ್ರಿ ನನ್ನ ಕೈಗೆ’ ಎನ್ನುತ್ತಾ ಲೆಕ್ಕದ ಬುಕ್ಕು ತೆರೆದು ನೋಡಿ ‘ಐನೂರು ರೂಪಾಯಿ ಬ್ಯಾಲೆನ್ಸು’ ಎಂದ.
ಚಿನ್ನಪ್ಪನಿಗೆ ಆಶ್ಚರ್ಯವಾಯಿತು ‘ಅದೆಂಗೆ’ ಎಂದು ಕೇಳುವ ಧೈರ್ಯವಾಗಲಿಲ್ಲ ‘ನಾನು ನೂರೈವತ್ತು ಅಂದ್ಕೊಂಡಿದ್ನಲ್ಲ’ ಎಂದ ತಗ್ಗಿದ ದನಿಯಲ್ಲಿ.
‘ಬಡ್ಡಿ ಸೇರಿ ಅಷ್ಟಾಗಿದೆ…ನಾನೂ ಬಡ್ಡಿಗೆ ತಂದೇ ವ್ಯವಹಾರ ನಡ್ಸದು ಅಲ್ವಾ’ ಎಂದ.
‘ಆಗ್ಲೇ ಹೇಳಿದ್ನಲ್ಲ, ಇಲ್ಲಿ ದುಡ್ಡು ಕೊಟ್ರೆ ಪದಾರ್ಥ ಸಿಕ್ಕುತ್ತೆ. ಸಾಲದ ವ್ಯವಹಾರ ಏನಿದ್ರೂ ಪಕ್ಕದ ಫೈನಾನ್ಸ್ನಲ್ಲಿ…’ ಎಂದು ತುಸು ನಿಲ್ಲಿಸಿ ‘ಕೆಂಚಪ್ಪಣ್ಣಾ’ ಎಂದು ಕೂಗಿದ.
ಪಕ್ಕದ ಫೈನಾನ್ಸ್ ಅಂಗಡಿಯಿಂದ ಅವನ ಆಪ್ತ ಸಹಾಯಕ ಓಡಿ ಬಂದ.
‘ನೋಡು, ಚಿನ್ನಪ್ಪಣ್ಣ ಗೊತ್ತಲ್ಲ, ಬೇಕಾದ ಜನ. ದುಡ್ಡು ಬೇಕಂತೆ, ಏನ್ಮಾಡ್ತೀಯ… ಎಷ್ಟ್ ಬೇಕು ಕೇಳು. ನಮ್ಮ ಫೈನಾನ್ಸ್ ಕಂಡೀಷನ್ ಎಲ್ಲಾ ಮೊದ್ಲೆ ಹೇಳ್ಬಿಡು’ ಎಂದು ಏನೋ ಮೆಹರ್ಬಾನಿ ಮಾಡುವವನಂತೆ ಹೇಳಿ ‘ನಮ್ಮಲ್ಲಿ ಸುಲಭದ ಬಡ್ಡಿ. ತಿಂಗಳಿಗೆ ಕೇವಲ ಐದು ಪರ್ಸೆಂಟ್ ಎಂದ.
ಚಿನ್ನಪ್ಪನಿಗೆ ಹಿಂದಿನಿಂದ ಯಾರೋ ಕುತ್ತಿಗೆಯ ಮೇಲೆ ಇಡಿದಂತೆ ಆಯಿತು ‘ಹಾಂ!’ ಎಂದ.
‘ಇದೇನು ಚಿನ್ನಪ್ಪಣ್ಣ ಹಾಂ ಅಂತಾ ಬಾಯಿ ಬಿಡ್ತೀರಿ? ಹಾಸನದಲ್ಲಿ ನೋಡ್ಬೇಕು ಮೀಟರ್ ಬಡ್ಡಿ ವ್ಯವಹಾರ. ದಿನಬಡ್ಡಿ, ವಾರದ ಬಡ್ಡಿ ಅಂತ ತರೊಂದ್‌ತರ ಐತೆ. ಅದೂ ಸೈತ ಬಡ್ಡಿ ನೂರಕ್ಕೆ ಐದರಿಂದ ಹತ್ತರವರೆಗೂ. ನಾವು ಹಳ್ಳಿಯ ರೈತರಿಗೆ ಹೊಡೆತ ಹಾಕಬಾರದು ಅಂತಾ ಪಿಕ್ಸೆಡ್ ರೇಟ್ ಇಟ್ಟುಬಿಟ್ಟಿದ್ದೀವಿ. ಅದೂ ತಿಂಗಳ ಲೆಕ್ಕ! ಹೆದರಬೇಡ ಚಿನ್ನಪ್ಪಣ್ಣ. ಅದೆಷ್ಟು ಬೇಕು, ನೋಡಿ ತಗಂಡ್ ಹೋಗಿ’ ಎಂದ ಕತ್ತೆರಾಮ. ಮಿಕವನ್ನು ಅಮುಕಿಕೊಂಡು ಬಿಟ್ಟೆ ಎಂಬಂತೆ ಅವನ ಕನ್ನಡಕದೊಳಗಿನ ಕಣ್ಣುಗಳು ಮಿನುಗಿದವು.
ಬಡ್ಡಿ ದುಬಾರಿಯಾಯಿತು ಎಂದು ಗಾಬರಿಯಾದರೂ ಕತ್ತೆರಾಮ ಇಷ್ಟು ಸುಲಭದಲ್ಲಿ ಸಾಲ ಕೊಡಲು ಒಪ್ಪಿದನಲ್ಲ ಎಂದು ಚಿನ್ನಪ್ಪ ಒಳಗೇ ಖುಷಿಯಾದ.
ಕೆಂಚಪ್ಪಣ್ಣ ಹಾಗೆಯೇ ಕೈಕಟ್ಟಿ ನಿಂತಿದ್ದ. ತನ್ನ ದಣಿಯ ಚಾಕಚಕ್ಯತೆ ರೂಡಿಸಿಕೊಳ್ಳಲು ಇನ್ನೂ ಏಳು ಕೆರೆ ನೀರು ಕುಡಿಯಬೇಕು ಎಂದುಕೊಂಡ.
ಚಿನ್ನಪ್ಪನ ಮುಖದ ಪ್ರಸನ್ನಭಾವವನ್ನು ಕಂಡ ಕತ್ತೆರಾಮ ‘ಏನ್ ತಂದಿದೀರಿ’ ಎಂದ. ಚಿನ್ನಪ್ಪನಿಗೆ ತಕ್ಷಣ ಅರ್ಥವಾಗಲಿಲ್ಲ. ಮಿಕಿ ಮಿಕಿ ನೋಡಿದ.
‘ಗ್ಯಾರೆಂಟಿ ಬ್ಯಾಡ್ವೇನ್ರಿ! ಏನಾದ್ರೂ ಚಿನ್ನಗಿನ್ನ ತಂದು ಅಡ ಇಟ್ಟು ಸಾಲ ತಗಂಡ್ ಹೋಗಿ’ ಎಂದ.
‘ಏನ್ ತರಲಿ ಇವನಿಗೆ ಅಡ ಇಡಲು’ ರಕ್ತ ಪರಿಚಲನೆಯೇ ನಿಂತುಹೋದಂತೆ ಚಿನ್ನಪ್ಪನ ಮುಖ ಕಪ್ಪಿಟ್ಟಿತು.
‘ವ್ಯವಹಾರದಲ್ಲಿ ಇದೆಲ್ಲಾ ಇದ್ದದ್ದೇ ಕಣ್ರಿ. ಬೆಂಗಳೂರು ಬಾಂಬೆ ಇಂತಾ ಕಡೆ ಎಲ್ಲಾ ದೊಡ್ಡ ದೊಡ್ಡ ವ್ಯವಹಾರ ಮಾಡರೆಲ್ಲ ತಮ್ಮ ಆಸ್ತಿ ಎಲ್ಲಾ ಬ್ಯಾಂಕಿಗೆ ಬರೆದು ಸಾಲ ತಗಂಡಿರ್‌ತಾರೆ. ಚಿನ್ನ ಎಲ್ಲಾ ದುಡ್ಡಿನ ಕಂಪ್ನೀಲಿ ಅಡ ಬಿದ್ದಿರ್ತವೆ. ನಮ್ಮ ಹಳ್ಳಿ ಜನಕ್ಕೆ ಆ ಥರ ಧೈರ್ಯ ಎಲ್ಲಿ ಬರಬೇಕು!’
ಕತ್ತೆರಾಮನಿಗೆ ಭಾಷಣ ಮಾಡುವ ಹುರುಪೇ ಬಂದುಬಿಟ್ಟಿದ್ದು ಕಂಡ ಚಿನ್ನಪ್ಪ,
‘ಅಲ್ಲಾ ರಾಮಣ್ಣ, ನಮ್ಮನೇಲಿ ಅಡ ಇಡುವಂಥ ಚಿನ್ನ ಯಾವ್ದೂ ಇಲ್ವಲ್ಲ’ ಸುಂಕದವನ ಮುಂದೆ ಸುಖ ದುಃಖ ಹೇಳಿಕೊಳ್ತಿದೀನಿ ಎಂಬ ಅರಿವಿದ್ದರೂ ಹಲುಬುತ್ತಾ ಹೇಳಿದ.
‘ಯಾಕ್ರಿ ನಿಮ್ಮ ಹೆಂಗಸರ ತಾಳಿ ಚೈನ್ ಇಲ್ವ…ಅದು ಅವರ ಕುತ್ತಿಗೇಲಿದ್ರೇನು, ನಮ್ಮ ಬೀರುನಲ್ಲಿದ್ರೇನು. ಒಟ್ನಲ್ಲಿ ವ್ಯವಹಾರ ನಡೆಯೋದು ಮುಖ್ಯ ಕಣ್ರಿ…ಎಲ್ಲಿ ಒಂದು ಇಪ್ಪತ್ತು ರೂಪಾಯಿ ಕೊಡಿ…ಕೆಂಚಪ್ಪಣ್ಣಾ ಬ್ಯಾಂಗಲ್ ಸ್ಟೋರಲಿ ಒಂದು ಕರಿಮಣಿ ಸರ ತಂದ್ಕೊಡಿ ಇವ್ರಿಗೆ!’ ಎಂದ.
‘ಎಷ್ಟ್ ಯೋಚನೆ ಮಾಡಿದ್ರೂ ಅಷ್ಟೇ ಚಿನ್ನಪ್ಪಣ್ಣ. ಇದ ನಿಮ್ಮ ಹೆಂಗಸ್ರಿಗೆ ಕೊಟ್ಟು ಚೈನ್ ಬಿಚ್ಚಿಸ್ಗಂಡ್ ಬನ್ನಿ. ಸ್ವಲ್ಪ ದಿನದ ಮಟ್ಟಿಗೆ ತಾನೆ…ಅವರಿಗೆ ಸಮಾಧಾನ ಹೇಳಿ…
‘ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಕರಿಮಣಿ ಸರದಲ್ಲಿ ತಾಳಿ ಹಾಕಿಕೊಳ್ಳದೇ ಪವಿತ್ರ ಕಣ್ರಿ… ಹೇ ಹೇ ಹೇ’ ಎನ್ನುತ್ತಾ ಹೇಷಾರವ ನಗೆಯೊಂದಿಗೆ ಚಿನ್ನಪ್ಪನ ಕೈ ತನ್ನತ್ತ ಎಳೆದುಕೊಂಡು ಕರಿಮಣಿ ಸರವನ್ನು ಅವನ ಕೈಗಿತ್ತ.

ಹಾಡ್ಲಹಳ್ಳಿ ನಾಗರಾಜ್

ಓದುಗರಿಗೆ ವಿಶೇಷ ಸೂಚನೆ:
ನಿಲುವಂಗಿಯ ಕನಸು… ಈಗ ಪಂಜು ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾಗುತ್ತಿದೆ. ಖ್ಯಾತ ಸಾಹಿತಿಗಳಾದ ಹಾಡ್ಲಹಳ್ಳಿ ನಾಗರಾಜ್ ಅವರ ಈ ಕಾದಂಬರಿ ಬಹಳಷ್ಟು ಕಾರಣಕ್ಕಾಗಿ ಮುಖ್ಯವಾದುದು. ಇದನ್ನು ವಾರವಾರ ಓದುತ್ತಾ ಹೋದಂತೆ ನಿಮಗೆ ತಿಳಿಯುತ್ತಾ ಹೋಗುತ್ತದೆ. ಇಲ್ಲಿ ಒಂದು ಸಂಗತಿಯಿದೆ. ಕಾದಂಬರಿ ಮುಗಿದ ಮೇಲೆ ಕಾದಂಬರಿಯ ಬಗ್ಗೆ ಅಭಿಪ್ರಾಯಗಳನ್ನು ಓದುಗರಿಂದ ಕೇಳಲಾಗುವುದು. ಓದುಗರಿಂದ ಬಂದ ಅತ್ಯುತ್ತಮ ಅಭಿಪ್ರಾಯಗಳಿಗೆ ಪುಸ್ತಕ ರೂಪದ ಬಹುಮಾನಗಳನ್ನು ನೀಡಲಾಗುವುದು. ಇನ್ ಯಾಕೆ ತಡ… ಒಂದೊಳ್ಳೆ ಕೃತಿ ಓದಿದ ಅನುಭವದ ಜತೆ ಒಂದೊಳ್ಳೆ ಅಭಿಪ್ರಾಯ, ಚರ್ಚೆ… ಜೊತೆಗೆ ಬಹಳಷ್ಟು ಪುಸ್ತಕಗಳ ಬಹುಮಾನ. ಅಭಿಪ್ರಾಯಗಳ ಜತೆ ನಡೆಯೋಣ ಬನ್ನಿ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x