ಲಲಿತ ಪ್ರಬಂಧ

ಊರ ತೇರ ಹಬ್ಬ: ಡಾ. ವೃಂದಾ ಸಂಗಮ್

ಭಾರತ ಹುಣ್ಣಿಮೆಯಾದ ಒಂಬತ್ತು ದಿನಕ್ಕೆ ಊರಾಗ ಲಕ್ಷ್ಮವ್ವನ ತೇರು. ಅಂದರ ಗ್ರಾಮದೇವತೆ ಶ್ರೀ ಲಕ್ಷ್ಮೀದೇವಿ ಜಾತ್ರೆ. ತೇರಬ್ಬ (ತೇರು-ಹಬ್ಬ) ಅಂದ ಕೂಡಲೇ ಮಕ್ಕಳಾದ ನಮಗೆಲ್ಲಾ ಖುಷಿ ಆಗಬೇಕಾದ್ದು ಸಹಜನ. ಈಗ ಐವತ್ತು ವರ್ಷದ ಹಿಂದೆ, ನಮಗೆಲ್ಲಾ ಜಾತ್ರೆ ತೇರುಗಳೇ ಊರ ಜನರನ್ನು ಒಗ್ಗೂಡಿಸುವ ಹಬ್ಬಗಳು ವಿಶೇಷ ಮನರಂಜನೆಗಳು. ಮಕ್ಕಳಾದ ನಮಗೆ, ಹೋದ ವರ್ಷ ಜಾತ್ರೆಯಲ್ಲಿ ನಾನು ಪುಟ್ಟ ಮಣ್ಣಿನ ಕುಡಿಕೆ ಕೊಂಡಿದ್ದೆ. ಕಟ್ಟಿಗೆಯ ಆಟದ ಸಾಮಾನಿನ ಡಬ್ಬಿ ಕೊಂಡಿದ್ದೆ. ಅವತ್ತು ಕೊಂಡಿದ್ದ ಪುಗ್ಗ (ಬಲೂನು), ಗಿರಿಗಿಟ್ಲೆ ಮನೆಗೆ ಬರೋದ್ರಲ್ಲೇ ಮುರಿದು ಹೋಗಿತ್ತು. ನನಗ ಅಂಗಡಿಯವ ಮುರಿದ ಕ್ಲಿಪ್ಪೇ ಕೊಟ್ಟಿದ್ದ. ಈ ವರ್ಷ ನಾನು ಜಡೆಯ ರಿಬ್ಬನ್ನು ಮತ್ತು ಬಳೆಯ ಜೊತೆಗೆ ಬಣ್ಣದ ಟಿಕಳಿ ತೊಗೋಬೇಕು. ಗುಲಾಬಿ ಬಣ್ಣದ ರೆಮಿ ಪೌಡರ್ ತೊಗೋಬೇಕು. ಗಮಗಮಾ ಅಂತದ. ಹಂಗೇ ಒಂದು ವಿಷ್ಣು ಬಾಟಲೀನೂ. ಆದರೆ, ವಿಷ್ನೂ (ವಿಷ್ಣೂ ಅಂದರೆ ಸ್ನೋ, ನಿಮಗೆ ಹೆಂಗೆ ಹೇಳೋದು, ಹಿಮಾಲಯದಲ್ಲಿನ ಸ್ನೋ ಫಾಲ್ ಅಲ್ಲ. ಅಂದಿನ ಫೇಸ್ ಫೌಂಡೇಷನ್) ಲಗೂನ ಹಾಳಾಗತದ, ಅದಕ್ಕ ಸಣ್ಣ ವಿಷ್ಣು ತೊಗೋಬೇಕು ಬೊಂಬೈ ದೋಖೋ ನೋಡಬೇಕು. ಇಂತಹ ಚಿಂತೆಯಾದರೆ, ನನ್ನ ಕ್ಲಾಸ್ಮೇಟ್ ಮಡ್ಡೇರ ಸರೋಜಿಯ ಮನೀ ಮುಂದೇನೆ ದ್ಯಾಮವ್ವ ಪಾದಗಟ್ಟಿ, ಅದರ ಹತ್ತಿರದ ಬೈಲಿನಲ್ಲೇ ಅವರ ಮನೆ ಇರೋದರಿಂದ ಅವರ ಮನೆಯ ಹತ್ತಿರನೇ ತೇರು ನಿಲ್ಲೋದು. ಜಾತ್ರೆ ಅಂಗಡಿ ಬಿಡಾರಗಳು. ಅಂಗಡಿ ಅವರು ಊಟ ತಿಂಡಿ ತಿನ್ನೋದೂ ಇವರ ಮನೆ ಕಟ್ಟೆ ಮೇಲೇನೇ. ಇಕೀನೆ ಅವರಿಗೆ ಕುಡಿಯಲಿಕ್ಕೆ ನೀರು ಹನಿಸೋದು. ಅದಕ್ಕ ಅವರು ಹೋಗೂವಾಗ ಇಕಿಗೊಂದು ಅಥವಾ ಎರಡು ಆಟಿಕೆ ಕೊಟ್ಟೇ ಹೋಗತಾರೆ. ಆದರೆ ಇಕೀ ಚಿಂತಿ ಅದಲ್ಲ. ಅಂಗಡಿಯವರ ಕಣ್ಣು ತಪ್ಪಿಸಿ ದಿನಾ ಒಂದೋ ಎರಡೋ ಕ್ಲಿಪ್ಪು ಸರಾ ಅಂಗಿಯೊಳಗ ಮುಚ್ಚಿ ಸಾಗಿಸೋ ಕೆಲಸದ ಚಿಂತಿ.

ಊರ ತುಂಬಾ ನೀರಾವರಿ ಭೂಮಿ. ಇಂಚಿಂಚೂ ಜಾಗ ಬಿಡದೇ ಭತ್ತ ಕಬ್ಬು ಬೆಳೆಯುವ ಊರು. ವರ್ಷಕ್ಕೆ ಎಲ್ಲರೂ ಎರಡು ಬೆಳೆ ಬೆಳೆಯುವ ಊರು. ಎಲ್ಲರ ಮನೆಯ ಪಣತದ ತುಂಬಾ ಭತ್ತ ತುಂಬಿರತಾವ. ಆದರ ಯಾರ ಹತ್ತರಾನೂ ಕೈ ತುಂಬೋ ಅಷ್ಟು ರೊಕ್ಕ ಇರೋದಿಲ್ಲ. ಆದರೂ ಎಲ್ಲಾರೂ ಹೆಂಗರೇ ಮಾಡಿ ಜಾತ್ರಿಯೊಳಗೆ ಕೈತುಂಬಾ ಬಳಿ ಇಡಿಸಿಕೊಂಡು, ಸಾಧ್ಯ ಆದರೆ ಮಕ್ಕಳಿಗೆ ಹೊಸಾ ಅಂಗೀನೂ ಹೊಲಿಸಿ, ನಾಕು ದಿನಾ ತಿನ್ನೋ ಅಷ್ಟು ಮಾಲದಿ ಮಾಡಿ, ಮನೀಗೆ ಬರೋ ಹೆಣ್ಣು ಮಕ್ಕಳಿಗೆ ಒಂದು ಜಂಪರಿನ ಅರಬೀ ಕೊಡಿಸೋ ಅಷ್ಟು ರೊಕ್ಕವನ್ನ ವರ್ಷದಾಗ ಒಂದು ಸಲಿ ಬರೋ ತೇರಬ್ಬಕ್ಕೆ ಅಂತನೇ ದುಡದು ಇಟ್ಟಿರತಾರ. ತವರು ಮನೀಗೆ ಬಂದ ಹೆಣ್ಣ ಮಕ್ಕಳು ಒಮ್ಮೊಮ್ಮೆ ಅತಗೋತ ನನಗ ಈ ಜಂಪರ ಬ್ಯಾಡ ಅಂದರ, ಈ ವರಷ ಕಾಳ ಜೊಳ್ಳಾಗ್ಯಾವ, ಬೆಳೀ ಬಂದಿಲ್ಲ, ಮುಂದಲ ತೇರಬ್ಬಕ ಬಾಂಡ ಸೀರಿ ತರತೇನಿ ಅಂತ ಸಮಾಧಾನ ಮಾಡಿ ಜಂಪರನ ಜೊತೀಗೆ ಐದು ರೂಪಾಯಿ ಕೊಡತಾರ. ನಾಕ ದಿನ ಮಕ್ಕಳು ತಿನ್ನೋ ಅಷ್ಟು ಮಾಲದೀನೂ ಕಳಸತಾರ.

ತೇರಬ್ಬದಾಗ ತೇರಿನ ಗಾಲಿ ಹೊರಗ ಹಾಕೋ ಮುಹೂರ್ತದಿಂದ ಮಕ್ಕಳ ಕುಣಿತ ಸುರೂ. ಪಟ ಕಟ್ಟೋದು. ಹೂವಿನ ತೇರಿನ ದಿನಾ ಗಾಲಿ ಹಾಕೋದು ಎಲ್ಲಾ ವರ್ಣನಾ ಮುಗಿಯೂದಿಲ್ಲ ಅಲ್ಲದ ಬಲರಾಮಣ್ಣಾವರು ಪೂಜಾರಾದ್ದರಿಂದ ಅವರ ಮಗಾ ಸುರೇಶ ನನ್ನ ಕ್ಲಾಸಿನವನ, ತೇರಿನ ಹಿಂದನ ಚೌಕಿ ಮ್ಯಾಲ ಕೂತು ಊರೆಲ್ಲಾ ಸುತ್ತಿ ಬಂದು ನಮಗ ಹೊಟ್ಟಿ ಉರಸತಿದ್ದ. ತೇರು ರಾತ್ರಿ ಹತ್ತೂವರೀಗೆ ಹೊರಡತಿತ್ತು. ಲಕ್ಷ್ಮೀ ದೇವರ ಗುಡಿಯಿಂದ ದ್ಯಾಮವ್ವನ ಪಾದಗಟ್ಟಿಗೆ ಬರಲಿಕ್ಕೆ ನಡಕೊಂಡು ಬಂದರ ಹತ್ತು ಹದಿನೈದು ನಿಮಿಷದ ದಾರಿ ಆದರ ತೇರಿನ ಮೆರವಣಿಗಿ. ಎಲ್ಲಾರ ಮನೀ ಮುಂದ ಆರತೀಗೆ ನಿಲ್ಲ ಬೇಕು. ಆಮ್ಯಾಲೆ ಕಾಮನಕಟ್ಟಿ ಹತ್ತರ, ಗೌಡರ ಮನೀ ಮುಂದ ಡೊಳ್ಳಿನ ಪದಾ ಹೇಳ ಬೇಕು. ಹಂಗೂ ಹಿಂಗೂ ಪಾದಗಟ್ಟಿ ಮುಟ್ಟಲಿಕ್ಕೆ ಬೆಳ್ಳಿ ಮೂಡತಿತ್ತು. ಅಂದರ ಐದು ಐದೂವರಿ ಗಂಟೆ.

ನಾವೂ ನಮ್ಮ ಮನೀ ಮುಂದ ತೇರು ಬಂತಂದರ ಆರತಿ ಮಾಡಿ ಕಾಯಿ ಒಡಸತಿದ್ವಿ. ರಾತ್ರಿ 2 ಗಂಟೆ ಆವಾಗ. ಭರ್ತಿ ನಿದ್ದಿ. ಮಲಗೋ ಬೇಕಾರ, ನಾನೀಗ ನಿದ್ದೀ ಹಚ್ಚೂದೇ ಇಲ್ಲ. ನಿದ್ದೆರ ಹೆಂಗ ಬಂದೀತು ಈ ಡೊಳ್ಳು ಭಜಂತ್ರಿ ಶಬ್ದದಾಗ ಅನಕೋತ ಹಾಸಿಗೀ ಮ್ಯಾಲ ಕೂತದ್ದೊಂದ. ತಪ್ಪು ನಮ್ಮದಲ್ಲ. ನಿದ್ದೀದು. ಬ್ಯಾಡಾಂದರೂ ಬಂದಿದ್ದು. ಮತ್ತ ಹಿರಿಯರು ನೀ ಈಗ ಮಲಕೋ ತೇರು ಬಂದಾಗ ಎಬ್ಬಸತೇನಿ ಅಂತ ಹೇಳಿ ನಮ್ಮನ್ನ ಮಲಗಿಸಿ ಬಿಡತಿದ್ದರು.

ಅದರಿಂದ, ಮಕ್ಕಳಾದ ನಾವು ಎಷ್ಟೆಲ್ಲಾ ಅನುಭವ ಕಳಕೋತಿದ್ದಿವಿ. ದಿನಾ ಸಾಲಿಯೊಳಗ ನಾವ ರಾಜಾ ಅನ್ನೋಹಂಗ ಮೆರೀತಿದ್ದಿವಿ, ಆದರ, ತೇರಬ್ಬಾದ ಮರದಿನ ಬಲರಾಮಣ್ಣಾವರ ಮಗ ಸುರೇಶ ತೇರಿನ ಕಂಬದ ಮ್ಯಾಲ ಕೂತು ಹೋಗೋ ಸುಖಾ ವರ್ಣಸತಿದ್ದಾ. ಖರೇ ಹೇಳಬೇಕಂದರ ಒಂದು ರಾತ್ರಿ ತೇರಿನ ಸುದ್ದಿ ಕನಿಷ್ಟ ಆರ ತಿಂಗಳರೆ ಹೇಳತಿದ್ದ. ಆದರೂ ಅದು ಮುಗೀತಿದ್ದಿದ್ದಿಲ್ಲ. ಮತ್ತ ಕತ್ತಿ ರಾಮ್ಯಾ “ ಹೇ, ಕೋಳಿ ಕಾಲಿಗೆ ಗೆಜ್ಜಿ ಕಟ್ಟಿದರ ತಿಪ್ಪೀ ಕೆದರೋದು ಬಿಟ್ಟೀತೆ”, “ ಮಂಗ್ಯಾನ ಮುಕಳಿಗೆ ಮುರಾ ಚುಂಚಿದರೆ ಮರಾ ಹಾರೂದ ಬಿಟ್ಟೀತೆ” ಅಂತ ಡೊಳ್ಳಿನ ಪದಾ ಶುರೂ ಮಾಡಿದರ ನಾವು ಪಿಳೀ ಪಿಳೀ ಕಣ್ಣು ಬಿಡಬೇಕಷ್ಟ. ವರ್ಷ ಪೂರ್ತಿ ನಾವು ಅವರನ್ನ ಆಟಾ ಆಡಿಸಿದ್ದ ಸೇಡು ಈಗ ತೀರತಿತ್ತು.

ಮಾರನೇ ದಿನಾ ಜಾತ್ರಿ. ಏನ ಹೇಳಲಿ ಅದರ ವರ್ಣನಾ. ನಮ್ಮೂರನ್ನೂ ಊರು, ಇಂದ್ರನ ಅಮರಾವತಿ ಆಗಿರತಿತ್ತು. ನಮ್ಮಅಪ್ಪಗ ಅಕ್ಕ ತಂಗೀರಿಲ್ಲ. ಹಿಂಗಾಗಿ, ನಮ್ಮ ಮನೀಗೆ ಊರಿಂದ ಬರೋ ಮಂದಿ ಇಲ್ಲ. ಮತ್ತ ಜಾತ್ರಿ ದಿನಾ ನಮ್ಮ ಮನ್ಯಾಗ ಹೋಳೀಗಿ ನೈವೇದ್ಯ. ಮಾಲದಿ ಅಲ್ಲ. ಮಡೀಲೆ ಅವ್ವಾ ಅಪ್ಪ ದ್ಯಾಮವ್ವಗ ನೈವೇದ್ಯ ಮತ್ತ ಲಕ್ಷ್ಮೀದೇವಿ ನೈವೇದ್ಯ ತೊಗೊಂಡು ಹೊಂಟರ, ಹಿಂದಿನಿಂದ ಹಣ್ಣು ಕಾಯಿ ಬುಟ್ಟಿ ಹಿಡಕೊಂಡ ನಾನು ನನ್ನ ತಮ್ಮ ಅವರ ಜೊತೀಗೇನೆ, ಮಧ್ಯಾನ ಗುಡೀಗೆ ಹೋಗತಿದ್ವಿ. ಆಗ ಗುಡ್ಯಾಗ ಜನಾ ಕಡಿಮಿ. ಮಡೀ ಅಂತ ನಮಗ ಮುಂದನ ಕಳಸತ್ತಿದ್ದರು. ಹತ್ತ ನಿಮಿಷದಾಗ ಪೂಜಾ ಮುಗಿಸಿ ಕೊಂಡು, ಹೊರಗ ಕಟ್ಟೀ ಮ್ಯಾಲ ಕೂತವರ ಹತ್ತರ ಅರಷಣಾ ಕುಂಕುಮಾ ತೊಗೊಂಡು ಬಂದರ ನಮ್ಮ ಅರ್ಧಾ ಜಾತ್ರಿ ಮುಗೀತಿತ್ತು.

ಅವತ್ತ ಜಾತ್ರಿ ದಿನಾ ರಾತ್ರಿ, ಊರಾಗ ನಾಟಕಾ. ರಕ್ತ ಕಣ್ಣೀರು ಅಥವಾ ಬಂಜೆ ತೊಟ್ಟಿಲು, ಮೂರು ನಾಕು ತಿಂಗಳಿಂದ ಊರಿನ ಹುಡುಗುರು ಸೇರಿ ಪ್ರ್ಯಾಕ್ಟೀಸ ಮಾಡಿದ ನಾಟಕ, ನಾವೆಲ್ಲಾ “ಕೇವಲ ಒಂದೇ ಪ್ರಯೋಗ, ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ” ಅಂತ ವಾರೆಲ್ಲಾ ಸೈಕಲ್ ಹಿಂದ ಕೂಗಿಕೋತ ಊರ ತುಂಬ ತಿರಗತಿದ್ದಿವಿ. ಪೇಟಿ ಮಾಸ್ತರು ದಿನಾ ಪೇಟಿ ಜೊತೆ ಕಲಿಸಿದ ಹೊಸಾ ಹಾಡು. ಅವರಿಗಿಂತ ಮದಲ ನಮಗ ಬಾಯಿಪಾಠ ಆಗಿರತಿತ್ತು. ಅಲ್ಲದ ಅವತ್ತ ನಾಟಕದ ಹೀರೋಯಿನ್ ಭಾರತೀ ರಾಯಚೂರ್ ಬಂದಿರತಿದ್ದಳು. ನಮ್ಮ ಕಡೂರ ವಾಸಣ್ಣ ಅಕೀ ಕೈ ಹಿಡಕೊಂಡು “ಸೂರ್ಯನ ಕಾಂತಿಗೆ ಸೂರ್ಯನೇ ಸಾಟಿ, ಬೇರೆ ಯಾರಿಲ್ಲಾ” ಅಂತ ಹಾಡತಿದ್ದರ ನಾವೆಲ್ಲಾ ಥೇಟ ರಾಜಕುಮಾರನಂಗ ಕಾಣತಾನಲ್ಲ ಅಂತಿದ್ವಿ, ಭಾರತೀ ರಾಯಚೂರ ತಾನ ಮುಂದ ಬಂದು, ವಾಸಣ್ಣನ ಕೈ ಹಿಡಕೊಂಡು, “ಜೀವ ವೀಣೆ ನೀನು ಮಿಡಿತದ ಸಂಗೀತ ಆ ಆ” ಅನಕೋತ ಅವನ ಸುತ್ತಲೂ ತಿರಗೋವಾಗ ಪೇಟಿ ಮಾಸ್ತರನ ನೋಡಿ ನಗತಾಳ ಅವನ್ನ ಹೆಂಡತಿ ಅಕೀ ಅಂತ ಏನೇನೋ ಕಲ್ಪನಾದಾಗ ಸುಳ್ಳುಸುಳ್ಳೇ ಅಂತಿದ್ರು. “ ಬಾ ಬಾರೆ ಪ್ರೇಯಸಿ, ಬಳಿ ಬಾರೆ ಪ್ರೇಯಸಿ” ಅಂತ ಕಲತಿದ್ದ ಹಾಡನ್ನ ಅವರ ಜೊತೆ ನಾವೂ ಹಾಡತಿದ್ದಿವಿ.

ನಾಟಕದ ನಡುವ, ಆಹೇರು ಓದಲಿಕ್ಕೆ ಬರೋ ಕೊಪ್ಪದ ಮಾಸ್ತರು ಅಥವಾ ಶೆಟ್ಟರ ಮಾಸ್ತರ ಬಂದರ, ಒಂದು ಹಾಡು, ಒಂದು ಹಾಡು ಅಂತ ಕುಣೀತಿದ್ದರು ಜನಾ. ರಂಗೇನ ಹಳ್ಳಿಯಾಗೆ ಬಂಗಾರ ಕಪ್ಪ ತೊಟ್ಟ ರಂಗಾದ ರಂಗೇಗೌಡ ಅಂತ ಬರಕೊಂಡ ಬಂದ ಹಾಳಿ ಹಿಡಕೊಂಡು ಕೊಪ್ಪದ ಮಾಸ್ತರು ಓದಿದರೂ ಶೀಟಿ ಹೊಡಿತಿದ್ದರು ಜನಾ. ಅವಾ ಊರಿಗೇನೆ ಸೀರೀ ತರತೇನಿ ಅಂತ ಹೊಂಟ ಅಂದಾಗೂ ಜನರಿಗೆ ತಿಳೀತಿರಲಿಲ್ಲ.

ಊರಾಗಿನ ಹರೇದ ಹುಡುಗರು, ಭಾರತೀ ರಾಯಚೂರಿಗೆ “ಒಂದು ರೂಪಾಯಿ ಆಹೇರಾರ್ಥವಾಗಿ ನೀಡಿದೆ ಅವರೇ ಬಂದು ಸ್ವೀಕರಿಸಬೇಕು” ಅಂತ ಸ್ಟೇಜಮ್ಯಾಲ ತಾವ ಬಂದು ಮುಯ್ಯ ಮಾಡತಿದ್ದರು. ಆವಾಗ ಭಾರತೀ ರಾಯಚೂರು ಬಂದಕೀನ ‘ಇದು ಒಂದು ರೂಪಾಯಲ್ಲ, ಒಂದು ನೂರು ರೂಪಾಯಿ ಅಂತ ಸ್ವೀಕಾರ ಮಾಡತೇನಿ” ಅಂತ ಕೈ ಮುಗೀತಿದ್ದಳು. ಅವಾಗ ಕೂತ ಜನಾ ಎಲ್ಲಾ ಓಂದು ಡ್ಯಾನ್ಸ ಕುಣೀ ಬೇಕು ಅಂತ ಕೂಗುತಿದ್ದರು. ಆದರ ಅಕಿ ನಕ್ಕೋತ ಹಂಗೇ ಹೋಗತಿದ್ದಳು.

ನಾಟಕದ ನಡುನಡುವೆ, ನಾವು ಚಿಕ್ಕ ಹುಡಿಗೇರು ನಾಟಕದವರ ಹತ್ತರ ಬಣ್ಣಾ ಹಚ್ಚಿಸಿಕೊಂಡು ಯಾವುದರೇ ಡ್ಯಾನ್ಸ ಮಾಡತಿದ್ದವಿ. “ಹೇ ಮುತ್ತಿನಂತಾ ಮಾತೊಂದು ಗೊತ್ತೇನಮ್ಮಾ ನಿನಗೆ ಗೊತ್ತೇನಮ್ಮ” ಅಂತ ಬಾರಕೇರ ಹುಡುಗ ಟಾವೇಲು ಉಟಗೊಂಡು ಒಳಂಗಿ ಹಾಕ್ಕೋಂಡು ಸ್ಟೇಜ ಮ್ಯಾಲ ಬಂದು ಹಾಡಿದರ, ನಾವು ಅದಕ್ಕ ಕುಣೀತಿದ್ದವಿ. ನಮಗೇನು ಇದ ಹಾಡು ಇದ ಕೈಯಿ (ಸ್ಟೆಪ್) ಅಂತ ಇರಲಿಲ್ಲಾ. ಎಲ್ಲಾ ಹಾಡಿಗೂ ಅದೇ ಡ್ಯಾನ್ಸ ಮಾಡತಿದ್ದಿವಿ. ಇಲ್ಗಾಂದರ “ತಾಯಿನಾಡು ತಾಯಿನಾಡು” ಅಂತ ಕೋಲಾಟ ಮಾಡತಿದ್ದವಿ. ನಮಗೇನು ಹಾಡಿಗೆ ಅರ್ಥ ತಾಳ ಬೇಕಾಗಿರಲಿಲ್ಲ. ನೋಡೋವರಿಗೂ ಅದು ತಿಳೀತಿದ್ದಿಲ್ಲ. ಒಂದೊಂದು ಸರತೇ ನಮಗೂ ಒಂದು ರೂಪಾಯಿ ಆಹೇರು ಬರತಿತ್ತು. ಮತ್ತ ಮರ ದಿನ ಆ ಬಣ್ಣಾ ಕೆದರಿಕೊಳ್ಳೋದೆ ತ್ರಾಸು.

ಮೂರನೇ ದಿನಾ ಮುಂಜಾನೆ ಡೊಳ್ಳು ಭಜಂತ್ರಿ ಜೊತೆಗೇನ ತೇರು ವಾಪಸ್ಸು ಲಕ್ಷ್ಮೀದೇವಿ ಗುಡಿಗೆ ಹೋಗತಿತ್ತು. ಹೋಗೋವಾಗ ಲಕ್ಷ್ಮವ್ವ ಓಡಿಕೋತ ಅರ್ಧ ತಾಸಿನೊಳಗ ಗುಡೀ ಸೇರತಿದ್ದಳು. ಜಾತ್ರಿ ಸಂಪನ್ನ ಆಗತಿತ್ತು. ಆದರೇನು ಮುಂದ ಎರಡ ದಿನಾ, ಬೊಂಬೈ ದೇಖೋ ಆಟ, ಆಟಗಿ ಸಾಮಾನಿನ ಅಂಗಡಿ ಇರತಿದ್ದೆವು, ನಾಕು ದಿನಾ ಬೆಂಡು ಬತ್ತಾಸ, ಮಂಡಕ್ಕಿ ಖಾರ, ಜಿಲೇಬಿ ಅಂಗಡಿ ಇರತಿದ್ದವು.

ಜಾತ್ರಿ ಸುದ್ದೀ ಮಾತಾಡೋದಕ್ಕ ಎಲ್ಲಾರೂ ಸಿಗೋದ ಇನ್ನ ಮ್ಯಾಲ. ಆವಾಗ ಯಾವ ಮಾತು ಸುರುವಾದರೂ ಅದಕ್ಕ ಜಾತ್ರಿ ಹೋಲಿಕೆ ಇರತಿತ್ತು. ಮಾಸ್ತರು ಸಾಲಿವಳಗ, ಕೃಷ್ಣದೇವರಾಯನ ಆಸ್ಥಾನ ಹೊಗಳಿದರೂ ಅದು ನಮಗ ಜಾತ್ರಿ, ನಾಟಕದ ಲೈಟಿನ ಭರ್ಜರಿ ರೋಡಿನ ಸೀನು ಅಂತ ಕಾಣತಿತ್ತು. ಇಂತಾ ಮಾತು ಮತ್ತ ಹೋಲಿಕಿ ಮತ್ತ ನೆನಪು ಮುಗಿಯೋದು ಮುಂದಿನ ಜಾತ್ರಿ ಹೊತ್ತಿಗೆ. ಇದೆಲ್ಲಾ ಯಾಕ ನೆನಪಾತು ಅಂದರ, ನಾವು ಊರು ಬಿಟ್ಟೇ ಮೂವತ್ತು ವರ್ಷಾತು. ನಿನ್ನೆ ಊರಿಗೆ ಫೋನ್ ಮಾಡಿದಾಗ, ಸಂಕ್ರಮಣ ಕಳದು ಎರಡ ದಿನಕ್ಕ ತೇರಿನಗಾಲಿ ಹೊರಗ ಹಾಕುತಾರ, ಭಾರತ ಹುಣ್ಣಿಮೆಯಾದ ಒಂಬತ್ತು ದಿನಕ್ಕೆ ಊರಾಗ ಲ್ಕಕ್ಷ್ಮವ್ವನ ತೇರು. ಊರ ಹೆಣಮಕ್ಕಳ ನೀವು, ಊರ ಮರೀಬ್ಯಾಡರೆಬೇ, ಜಾತ್ರಿಗೆ ಬರ್ರಿ ಅಂತ ಕಟ್ಟಿ ಸುಬ್ಬಣ್ಣ, ಗುಡೀ ಗೋಪಣ್ಣ ಹೇಳಿದರು. ಹಿಂದಿನ ಕತಿ ಕಣ್ಣಾಗ ಬಂತು. ಈಗೇನು ನಾಟಕ ಇಲ್ಲಾ ದೊಡ್ಡಾಟ ಇಲ್ಲಾ. ಬರೇ ತೇರಬ್ಬ. ಯಾರೂ ಬರಲಿಲ್ಲಂದ್ರ ಭಣಾ ಭಣಾ ಆಗತದ ಅಂದಾಗ ಮನಸು ಊರ ಕಡೆ ಎಳೀತು. ಬಾಲ್ಯ ನೆನಪಿಸಿತು. ಇಂದಿಗಿಂತ ಅಂದೇನೆ ಚಂದವೋ, ಎಂಥ ಸೊಗಸು ಆ ನಮ್ಮ ಕಾಲವೂ……. ಖರೇನ ಅದ, ನಾವು ಸಣ್ಣವರಿದ್ದಾಗ “ನಾಳೆ ನಾನು ದೊಡ್ಡವನಾದಮ್ಯಾಲ……………”ಅಂತ ಎಲ್ಲಾ ಮಾತು, ವಿಚಾರ ಶುರುವಾಗತಿತ್ತು. ಈಗ ನಮ್ಮ ನೆನಪು ನಾವು ಸಣ್ಣವರಿದ್ದಾಗ……………………ಅಂತ. ಖರೇ ಅಂದರ ವರ್ತಮಾನದಾಗ ಬದುಕೋ ಮನುಷ್ಯಾ ಎಲ್ಲಿದ್ದಾನೋ…

-ಡಾ. ವೃಂದಾ ಸಂಗಮ್


ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಊರ ತೇರ ಹಬ್ಬ: ಡಾ. ವೃಂದಾ ಸಂಗಮ್

  1. ಊರ ತೇರ ಹಬ್ಬ…..ಕಣ್ಣಿಗೆ ಕಟ್ಟುವ ಹಾಗೆ ವರ್ಣನೆ ಮಾಡಿದ್ದಾರೆ ಡಾ. ವೃಂದಾ ಅವರು…ನಮ್ಮೂರ ನೆನಪು ತೇಲಿ ಬಂದಿತು…

Leave a Reply

Your email address will not be published. Required fields are marked *