ಲೇಖನ

‘ಐ ಡೊಂಟ್ ಕೇರ್ ಅನ್ನೋದಕ್ಕೂ ಮೊದಲು’: ಮಧುಕರ್ ಬಳ್ಕೂರ್

“ಐ ಡೊಂಟ್ ಕೇರ್, ನನ್ನ ಲೈಪು ನನ್ನ ಇಷ್ಟ, ನಾನು ಯಾರನ್ನು ಕೇರ್ ಮಾಡೋಲ್ಲ” ಹಾಗಂತ ಬೆಳಿಗ್ಗೆ ಜೋಶ್ ನಲ್ಲಿ ಎದೆ ಉಬ್ಬಿಸಿ ಹೊರಟು ಸಂಜೆ ಆಗೋ ಹೊತ್ತಿಗೆ “ನನ್ನನ್ನ ಯಾರೂ ಅರ್ಥಾನೆ ಮಾಡ್ಕೊತಾ ಇಲ್ಲವಲ್ಲ” ಅಂತಾ ಅನಿಸೋಕೆ ಶುರುವಾದ್ರೆ ಅವರದು ಮೊಸ್ಟ್ ಕನ್ಪ್ಯೂಶಿಯಸ್ ಸ್ಟೇಜ್. ಮೀಸೆ ಮೂಡುವಾಗ ದೇಶ ಕಾಣೊದಿಲ್ಲ. ಬೇಕೆಂದಾಗ ಕಡ್ಲೆಕಾಯಿ ಸಿಗೋದಿಲ್ಲ ಅನ್ನೋ ಹಾಗೆ ಮೀಸೆ ಮೂಡೊ ಪ್ರಾಯದಲ್ಲಿ ಈ ತರಹದ ತಲ್ಲಣಗಳು ಎದುರಾದರೆ ಅದು ಸಹಜವೆನ್ನಬಹುದು. ಅದರಂತೆ ರೆಕ್ಕೆ ಬಲಿತ ಹಕ್ಕಿ ಮೊದಲ ಬಾರಿ ಹೊಸ್ತಿಲು ದಾಟಿ ಜಗತ್ತಿನ ಅಂಗಳಕ್ಕೆ ಬಿದ್ದಾಗಲೂ, ಜಗತ್ತು ಕೂಡಾ ಜಸ್ಟ್ ನೋಡಿದಂತೆ ಮಾಡಿ ಹೊರಟುಬಿಟ್ಟಿರುತ್ತದೆ. ಅದನ್ನು ಕೂಡಾ ಅಷ್ಟೇ ಸಹಜ ಅಂತಲೇ ತಿಳಿಯಬೇಕು. ಏಕೆಂದರೆ ಹಾಗೆ ತಿಳಿದ ಕ್ಷಣದಿಂದ ತಲೆಭಾರ ಇಳಿದು ತಣ್ಣಗಾಗಿ ಈ ಜಗತ್ತು ಏನು ಅನ್ನೋದು ಕಾಣುತ್ತದೆ. ನಿಧಾನವಾಗಿ ಅರ್ಥವೂ ಆಗುತ್ತದೆ. ಆದರೆ ಅದನ್ನ ತಿಳಿದುಕೊಳ್ಳದೆ ಯಾರೂ ನನ್ನನ್ನು ಅರ್ಥಾನೆ ಮಾಡ್ಕಕೊಂತ ಇಲ್ಲವಲ್ಲ ಅಂತ ಮತ್ತದೆ ತಿರುಗಾ ಐ ಡೊಂಟ್ ಕೇರ್ ಆಡಿದರೆ ಅದು ಪ್ರಾಯದ ಸಮಸ್ಯೆ ಅನ್ನಿಸಿಕೊಳ್ಳುವುದಿಲ್ಲ. ಬದಲಾಗಿ ವಾಸಿಯಾಗದ ಖಾಯಿಲೆ ಎಂದೆನಿಸಿಕೊಳ್ಳುತ್ತದೆ. ಆಗ ಅವರು ಐ ಡೊಂಟ್ ಕೇರ್ ಹೇಳುವುದು ಬಿಡಿ, ಜಗತ್ತೆ ಅವರನ್ನು ಕ್ಯಾರೆ ಅನ್ನದೆ ಸೈಲಂಟಾಗಿ ಸೈಡಿಗಿಟ್ಟುಬಿಡುತ್ತದೆ.

ಹೌದು, ಈ ಜಗತ್ತು ಯಾರನ್ನು ಕೇರ್ ಮಾಡುವುದಿಲ್ಲ. ನಿಮಗೆ ನೀವೇ ಏನಂದು ಅರ್ಥವಾಗುವವರೆಗೂ ಈ ಜಗತ್ತು ನಿಮ್ಮನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಹಾಗಂದು ವೇಳೆ ಜಗತ್ತು ನಿಮ್ಮನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೂ ನಿಮಗದು ಅರ್ಥ ಆಗುವುದಿಲ್ಲ. ಏಕೆಂದರೆ ನೀವೆನನ್ನುವುದು ನಿಮಗೆನೆ ಅರ್ಥವಾಗಲಿಲ್ಲವಲ್ಲ. ಅಂದ್ಮಲೆ ನಿಮಗೆ ನೀವು ಅರ್ಥ ಆಗುವವರೆಗೂ ಯಾರು ಏನೇ ಹೇಳಿದರೂ ಅದಕ್ಕೆ ಅರ್ಥವಿಲ್ಲ. ಇನ್ನು ನನ್ನನ್ಯಾರೂ ಅರ್ಥ ಮಾಡ್ಕೊಂತಾ ಇಲ್ಲ ಅನ್ನೊ ಮಾತಿಗೆ ಏನಾದರೂ ಅರ್ಥ ಇದೀಯಾ…? ಖಂಡಿತಾ ಇಲ್ಲ.

ಹಾಗಂತ ಜಗತ್ತು ನಿಮ್ಮನ್ನು ಕೇರ್ ಮಾಡುವುದಿಲ್ಲ ಅಂತ ಅಷ್ಟು ಸುಲಭವಾಗಿ ಅಂದುಕೊಳ್ಳಬೇಡಿ. ಈ ಜಗತ್ತು ಖಂಡಿತಾ ಕೇರ್ ಮಾಡುತ್ತದೆ. ಯಾವಾಗ ನಿಮ್ಮನ್ನು ನೀವು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಿರೊ ಆವಾಗ ಜಗತ್ತು ಕೇರ್ ಮಾಡುತ್ತದೆ. ಹೇಗೆಂದರೆ ಈ ಜಗತ್ತು ನಿಮ್ಮನ್ನು ನೋಡಿ ಅರ್ಥ ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳದೆ ಇರಬಹುದು, ಆದರೆ ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಲು ಸಮಯವಂತೂ ಕೊಟ್ಟಿರುತ್ತದೆ. ಅದು ನಿಮ್ಮ ಪಾಲಿನ ಸಮಯ. ನೀವೇನು, ನಿಮ್ಮ ಸಾಮರ್ಥ್ಯವೆನು, ನಿಮ್ಮ ದೌರ್ಬಲ್ಯಗಳೇನು, ನಿಮ್ಮ ಇತಿಮಿತಿಗಳೇನು, ನಿಮ್ಮ ಚೌಕಟ್ಟುಗಳೇನು, ಎಲ್ಲಿ ಯಾವಾಗ ಏನನ್ನ ಮಾಡಬೇಕು, ಏನನ್ನು ಮಾಡಬಾರದು ಇಂತದ್ದನ್ನೆಲ್ಲ ತಿಳಿಯುವ ಸಮಯ. ಒಮ್ಮೊಮ್ಮೆ ಏನಾಗುತ್ತೆ ಅಂದರೆ ಇಂತಹ ಸಮಯದಲ್ಲೆ ಯಾವುದೊ ಒಂದು ತಿರಸ್ಕಾರ, ನಿರ್ಲಕ್ಷ, ಅವಮಾನ, ನಿಂದನೆಗಳು ಅನಿರೀಕ್ಷಿತವಾಗಿ ಎದುರಾಗಿ ನಿಮಗಿರುವ ಈ ಕಲಿಕೆಯ ವ್ಯವಧಾನಕ್ಕೆ ಅಡ್ಡಿಪಡಿಸಿಬಿಡುತ್ತವೆ. ಆವಾಗ ತಾಳ್ಮೆಗೆಟ್ಟು ತಪ್ಪಾಗಿ ತಿಳಿದು ಐ ಡೊಂಟ್ ಕೇರ್ ಅಂದಿರೋ, ನಿಮ್ಮನ್ನು ನೀವು ತಿಳಿದುಕೊಳ್ಳಲು ಸೋತಿರಿ ಎಂದೇ ಅರ್ಥ. ಆದರೆ ಅದೇ ತಾಳ್ಮೆಗೆಡದೆ ಇದೆಲ್ಲಾ ಮಾಮೂಲಿ ಅಂತಂದುಕೊಂಡು ಮನಸ್ಸಲ್ಲೆ ಅದನ್ನ ಅವೈಡ್ ಮಾಡಿ ಮುಂದೆಹೋದಿರೊ ಗೆದ್ದಿರಿ. ಇನ್ನು ಒಂದು ವಿಷಯ. ಯಾವಾಗ ನಿಮಗೆ ನೀವೇ ಸರಿಯಾಗಿ ಅರ್ಥ ಆಗುತ್ತಿರೋ ಆವಾಗ ಮಾತ್ರ ನೀವು ಐ ಡೊಂಟ್ ಕೇರ್ ಅಂತ ಹೇಳೊ ರೈಟ್ಸ್ ಪಡೆಯುತ್ತೀರಿ. ಆಗ ನಾನ್ಯಾರಿಗೂ ಕೇರ್ ಮಾಡೊಲ್ಲ ಅಂತಾ ರಾಜರೋಷವಾಗಿ ಹೇಳಿಕೊಂಡರೂ, ಹೇಳಿಕೊಳ್ಳದೆ ಇದ್ದರೂ ಜಗತ್ತು ನಿಮ್ಮನ್ನು ಕೇರ್ ಮಾಡುತ್ತಿರುತ್ತದೆ. ಏಕೆಂದರೆ ಆಗ ನೀವಾಡೋ ಮಾತಿಗೆ ಮಾಡೋ ಕೆಲಸಕ್ಕೆ ಒಂದು ತೂಕ ಇರುತ್ತದೆ. ಜಗತ್ತು ಆ ವೇಳೆಯಿಂದ ನಿಮ್ಮನ್ನು ಗಂಭೀರವಾಗಿ ಪರಿಗಣಿಸಲು ಶುರುಮಾಡಿರುತ್ತದೆ. ಇನ್ನು ನಿಮಗೆ ನೀವೇ ಅರ್ಥವಾದ ಮೇಲೆ ಯಾರೂ ನನ್ನನ್ನು ಸರಿಯಾಗಿ ಆರ್ಥ ಮಾಡ್ಕೊಂತಾ ಇಲ್ಲವಲ್ಲ ಅನ್ನೊ ವಿಷಯವೇ ಬರುವುದಿಲ್ಲ.

ಇನ್ನು ಐ ಡೊಂಟ್ ಕೇರ್ ಅನ್ನೊದನ್ನ ಎಲ್ಲರಿಗೂ ಎಲ್ಲಾ ಸಮಯದಲ್ಲೂ ಹೇಳಲಿಕ್ಕೆ ಬರುವುದಿಲ್ಲ. ಏಕೆಂದರೆ ಜೀವನದಲ್ಲಿ ನೀವು ಕೆಲವರೆದುರಿಗಾದರೂ ಉತ್ತರ ಕೊಡುವ ಸ್ಪಷ್ಟನೆ ನೀಡುವ ಜಾಗದಲ್ಲಿರುತ್ತೀರಿ. ಅದು ನಿಮಗೆ ಜನ್ಮ ನೀಡಿದ ತಂದೆತಾಯಿಯ ಎದುರಿಗಿರಬಹುದು, ನಿಮ್ಮನ್ನೆ ನಂಬಿ ಬದುಕಿಗೆ ಜೊತೆಯಾದ ಹೆಂಡತಿ/ಗಂಡನ ಜೊತೆಗೆ ಇರಬಹುದು. ನಿಮ್ಮ ರಕ್ತವನ್ನೆ ಹಂಚಿಕೊಂಡ ನಿಮ್ಮ ಮಕ್ಕಳೊಂದಿಗೆ ಇರಬಹುದು. ಬದುಕು ಬದಲಾಗೋದಕ್ಕೆ ಹೆಗಲು ನೀಡಿದ ಆತ್ಮೀಯ ಗೆಳೆಯರಿರಬಹುದು. ಇವರೆದುರಿಗೆಲ್ಲ ಐ ಡೊಂಟ್ ಕೇರ್ ಅನ್ನುತ್ತಾ ಹೋದರೆ ಅದು ಬಾಲಿಶ ಇಲ್ಲಾ ಬೇಜವಾಬ್ದಾರಿ ಎಂದೆನಿಸಬಹುದು. ಏಕೆಂದರೆ ಇವರೆಲ್ಲ ನಿಮ್ಮ ಖಾಸಗಿ ಬದುಕಿನ ವ್ಯಕ್ತಿಗಳು. ಇವರೆಲ್ಲರ ಇರುವಿಕೆಯಿಂದಲೆ ನೀವಿದ್ದೀರಿ ಮತ್ತು ನೀವು ನೀವಾಗೆ ಉಳಿದಿದ್ದೀರಿ ಅನ್ನೊದನ್ನ ಮರೆಯಬಾರದು. ಎಲ್ಲರಿಗಿಂತ ಹೆಚ್ಚಾಗಿ ನಿಮ್ಮ ಈ ಫ್ಯಾಮಿಲಿ ಸದಸ್ಯರಿಗೆ ಮೊದಲು ನೀವು ಏನು ಅನ್ನೋದು ಅರ್ಥವಾಗಬೇಕು. ಏಕೆಂದರೆ ಅವರು ಜನ್ಮಕ್ಕೆ ಕಾರಣರಾದ ತಂದೆ ತಾಯಿಯೋ, ನಿಮ್ಮೊಂದಿಗೆ ಕೊನೆಯವರೆಗೂ ಬಾಳುವ ಹೆಂಡತಿಯೊ/ಗಂಡನೊ, ನಿಮ್ಮನ್ನೆ ಅನುಕರಿಸುವ ಮಕ್ಕಳೊ ಆಗಿರುತ್ತಾರೆ. ಹಾಗಾಗಿ ಇಲ್ಲೆಲ್ಲ ಅವರಾಗೆ ಅವರೇ ನಿಮ್ಮನ್ನ ಅರ್ಥ ಮಾಡಿಕೊಳ್ಳಲಿ ಅನ್ನೊ ಧೋರಣೆಗಳು ಬರಬಾರದು. ಏಕೆಂದರೆ ನಿಮಗೂ ನಿಮ್ಮ ತಂದೆ ತಾಯಿಯರಿಗೂ ಹಾಗೂ ನಿಮಗೂ ನಿಮ್ಮ ಮಕ್ಕಳಿಗೂ ಜನರೇಷನ್ ಗ್ಯಾಪ್ ಅನ್ನೊದು ಇರುತ್ತದೆ. ಇನ್ನು ನಿಮ್ಮ ಹೆಂಡತಿ/ಗಂಡ ಬೇರೆ ಯಾವುದೊ ಪರಿಸರದಿಂದ ಬಂದು ನಿಮಗೆ ಜೊತೆಯಾಗಿರುತ್ತಾರೆ. ಹಾಗಾಗಿ ಇಲ್ಲೆಲ್ಲ ನಾನ್ಯಾರಿಗೂ ಕೇರ್ ಮಾಡೋಲ್ಲ ಅನ್ನೋದರ ಬದಲಾಗಿ ನಾನು ಎಲ್ಲರನ್ನು ಕೇರ್ ಮಾಡುತ್ತೇನೆ ಅನ್ನೊ ಭಾವನೆಯನ್ನೆ ತಗೋಬೇಕು. ಅದು ಸ್ವಾಭಾವಿಕವಾಗಿ ಬಂದಿರುತ್ತದೆ ಕೂಡಾ.

ಆದರೆ ಒಮ್ಮೊಮ್ಮೆ ನನ್ನನ್ನು ಯಾರು ಯಾಕೆ ಅರ್ಥ ಮಾಡ್ಕೊತಾ ಇಲ್ಲ ಅನ್ನಿಸುತ್ತಿರುತ್ತೆ ಅಂದರೆ, ನೀವು ಪ್ರಾಮಾಣಿಕವಾಗಿ ಎಲ್ಲರ ಕೇರ್ ಮಾಡುತ್ತಿರುತ್ತೀರಿ. ಆದರೆ ಅವರು ಅದನ್ನ ಅರ್ಥ ಮಾಡಿಕೊಂಡಿರುವುದಿಲ್ಲ. ಆದರೆ ನೆನಪಿಟ್ಟುಕೊಳ್ಳಿ. ಒಂದು ಹಂತದವರೆಗಷ್ಟೇ ಅರ್ಥ ಮಾಡಿಸುವ ಪ್ರಯತ್ನ ಮಾಡಬಹುದು. ಆದರೆ ಅದನ್ನ ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಅವರದಲ್ಲ ಅಂತಾ ಅರ್ಥವಾದ ಮೇಲೆ ಅರ್ಥ ಮಾಡಿಸುವುದರಲ್ಲಿಯೂ ಅರ್ಥವಿರುವುದಿಲ್ಲ. ಹಾಗೆ ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತಲೇ ಹೋದಲ್ಲಿ ಅದು ನಿಮ್ಮ ವೀಕ್ ನೆಸ್ ಎನಿಸಿ ಅವರ ಕಣ್ಣಿಗೆ ನೀವು ಕೇವಲವಾಗಿ ಕಾಣಬಹುದು. ಬಿಡಿ, ಈ ಜಗತ್ತು
ನಿಮ್ಮನ್ನು ನೀವು ಅರಿತುಕೊಳ್ಳುದಕ್ಕೆ ಸಮಯ ನೀಡಿದಂತೆಯೆ ಅವರಿಗೂ ಆ ಸಮಯ ನೀಡಿ. ನಿಜ, ಕಣ್ಣೆದುರಿಗೆ ಇದ್ದು ಅವರು ದಾರಿ ತಪ್ಪುತ್ತಿರುವುದನ್ನು ಇಲ್ಲಾ ಒದ್ದಾಡುತ್ತಿರುವುದನ್ನ ನೋಡುತ್ತಾ ಸುಮ್ಮನಿರುವುದು ಕಷ್ಟವೇ. ಆದರೆ ಏನು ಮಾಡುವಂತಿಲ್ಲ. ಒಮ್ಮೊಮ್ಮೆ ಎಲ್ಲವೂ ಅವರ ಅರಿವು, ಅನುಭವಕ್ಕೆ ಬರುವವರೆಗೂ ಕಾಯಬೇಕು. ನಂತರ ತಡವಾಗಿಯಾದರೂ ನೀವೆನೆಂದು ಅವರಿಗೆ ಅರ್ಥವಾಗುತ್ತದೆ. ಆದರೊಂದು, ನಿಮ್ಮ ಬಗ್ಗೆ ನಿಮಗಿರುವ ಸ್ಪಷ್ಟತೆ ನಂಬಿಕೆ ಯಾವತ್ತಿಗೂ ತಪ್ಪಿ ಹೋಗಬಾರದು. ಆಗ ಐ ಡೊಂಟ್ ಕೇರ್ ಇಲ್ಲಾ, ನನ್ನನ್ನು ಯಾರೂ ಅರ್ಥ ಮಾಡ್ಕೊಂತ ಇಲ್ಲವಲ್ಲ ಅನ್ನುವಂತಹ ಗೊಂದಲಗಳು ಸೃಷ್ಟಿಯಾಗುವುದಿಲ್ಲ. ಆದರೆ ಅದೇ ತಾಳ್ಮೆ ಕಳಕೊಂಡು ಅಸಹನೆಯಿಂದ ಇಂತಹ ಪದ ಪ್ರಯೋಗಗಳನ್ನು ಮಾಡಿದಲ್ಲಿ ಅರ್ಥ ಮಾಡಿಕೊಳ್ಳುವವರು ಕೂಡಾ ಅರ್ಥವಾಗದೆ ಹೋಗುವ ಸಾಧ್ಯತೆಗಳಿವೆ.

ಈ ಐ ಡೊಂಟ್ ಕೇರ್ ಅನ್ನುವವರನ್ನು ಅರ್ಥ ಮಾಡಿಕೊಳ್ಳಬಹುದು. ನನ್ನನ್ನು ಯಾರೂ ಅರ್ಥ ಮಾಡ್ಕೊಂತಾ ಇಲ್ಲ ಅನ್ನುವವರನ್ನೂ ಅರ್ಥ ಮಾಡಿಸಬಹುದು. ಆದರೆ ದೊಡ್ಡದಾಗಿ ಐ ಡೊಂಟ್ ಕೇರ್ ಅಂದು ಸ್ವಲ್ಪ ಹೊತ್ತಿನಲ್ಲೆ ನನ್ನನ್ನ ಯಾರೂ ಅರ್ಥ ಮಾಡ್ಕೊಂತಾ ಇಲ್ಲವಲ್ಲ ಅನ್ನುವವರನ್ನ ಈ ಜನ್ಮದಲ್ಲಿ ಅರ್ಥ ಮಾಡಿಕೊಳ್ಳುದಕ್ಕಾಗುವುದಿಲ್ಲ. ಏಕೆಂದರೆ ಅವರನ್ನ ಅವರು ಅರ್ಥ ಮಾಡಿಕೊಂಡಿರುವುದಿಲ್ಲ ಹಾಗೂ ಅರ್ಥ ಮಾಡಿಕೊಳ್ಳುವ ಪ್ರಯತ್ನವೂ ಮಾಡಿರುವುದಿಲ್ಲ.

ಇಷ್ಟಕ್ಕೂ ನಾವ್ಯಾಕೆ ಐ ಡೊಂಟ್ ಕೇರ್ ಅನ್ನಬೇಕು? ನಮ್ಮನ್ಯಾಕೆ ಎಲ್ಲರೂ ಅರ್ಥ ಮಾಡ್ಕೊಳ್ಳಲಿ ಅಂತಾ ನಿರೀಕ್ಷಿಸಬೇಕು?
ಯಾಕೊ ಒಮ್ಮೊಮ್ಮೆ ಈ ಐ ಡೊಂಟ್ ಕೇರ್ ಅನ್ನುವುದರ ಹಿಂದೆ ನನ್ನನ್ಯಾರು ಅರ್ಥ ಮಾಡ್ಕೊಂತಾ ಇಲ್ಲವಲ್ಲ ಅನ್ನೊ ಅಸಹನೆಯ ನೆರಳಿದೆಯಾ ಅಂತಲೇ ಅನುಮಾನ ಮೂಡುತ್ತದೆ. ಅಲ್ಲವಾ..?

-ಮಧುಕರ್ ಬಳ್ಕೂರ್


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *