ನಿಲುವಂಗಿಯ ಕನಸು (ಅಧ್ಯಾಯ ೧೦-೧೧): ಹಾಡ್ಲಹಳ್ಳಿ ನಾಗರಾಜ್

ಅಧ್ಯಾಯ ೧೦: ಕತ್ತೆಯ ಅಂಗಡಿ

ಇನ್ನೇನು ನಾಳೆ ನಾಡಿದ್ದರಲ್ಲಿ ಅಪ್ಪಣಿ ಬಂದ್‍ಬಿಡ್ತಾನೆ. ಈ ಸರ್ತಿ ಒಂದ್ ನಾಲ್ಕು ದಿನ ಇಟ್ಟುಕೊಂಡು ಬೇಲಿ, ಮೆಣಸಿನ ಪಾತಿ, ನೀರಿನ ಗುಂಡಿ ಎಲ್ಲಾ ಮಾಡಿಸಿಕೊಂಡೇ ಕಳಿಸ್ಬೇಕು… ಹತಾರ ಎಲ್ಲಾ ಹೊಂದಿಸಿ ಇಟ್ಗಳಿ. ನಿಮಗೇನು, ಕೋಲ್ ತಗಂಡು ದನಿನ ಹಿಂದುಗಡೆ ಹೊರಟು ಬಿಡ್ತೀರಿ. ಗುದ್ದಲಿ ಕೆಲಸ ಎಲ್ಲಾನೂ ನಾನೇ ಮಾಡಕ್ಕಾಗುತ್ತಾ…ಸೀತೆಯ ಗೊಣಗಾಟ ನಡೆದಿತ್ತು.
ರಾತ್ರಿಯ ಊಟ ಮುಗಿಸಿ ದಿಂಬಿಗೆ ತಲೆಕೊಟ್ಟ ಚಿನ್ನಪ್ಪನಿಗೆ ಮಾಮೂಲಿನಂತೆ ಕೂಡಲೇ ನಿದ್ದೆ ಹತ್ತಲಿಲ್ಲ.
‘ಸೀತೆ ಹೇಳುವುದು ಸರಿ. ಎಲ್ಲಾ ಹತಾರ ಹೊಂದಿಸಿಕೊಳ್ಳಬೇಕು. ಮಂಕರಿ, ಕೊಡ, ಗುದ್ದಲಿ, ಹಾರೆ ಪ್ರತಿಯೊಂದೂ ಹೊಸದಾಗಿ ಆಗಬೇಕು. ಜೊತೆಗೆ ಒಂದೆರಡು ಮೂಟೆಯಾದರೂ ಗೊಬ್ಬರ ಹೊಂದಿಸಿ ಇಟ್ಟುಕೊಂಡಿರಬೇಕು. ಮತ್ತೆ ಮತ್ತೆ ಯಾರ ಹತ್ತಿರ ಸಾಲಕ್ಕೆ ಹೋಗುವುದು.
ದೊಡ್ಡೂರಿನಲ್ಲಿ ಈ ವಿಚಾರಕ್ಕೆ ಇರುವುದು ಒಂದೇ. ಕತ್ತೆಯ ಅಂಗಡಿ! ಅವನ ಬಳಿ ಹೋಗದೆ ವಿಧಿಯೇ ಇಲ್ಲ. ಇಷ್ಟವಿಲ್ಲದಿದ್ದರೂ ಅವನ ಭೂತಗಾಜಿನ ಕನ್ನಡಕದೊಳಗಿನ ದೃಷ್ಟಿಯನ್ನು ಎದುರಿಸಲೇಬೇಕು. ಕತ್ತೆಯಂತಹ ಹೇಷಾರವದ ನಗೆಯನ್ನು ಕೇಳಲೇಬೇಕು.
ನಾವು ಇಷ್ಟು ವರ್ಷ ಪ್ರಾಮಾಣಿಕತೆಯಿಂದ ಕೃಷಿ ಕಾಯಕ ಮಾಡುತ್ತಾ ನೆಲ ಕೆರೆಯುವುದೇ ಆಯ್ತು. ಅದರೆ ಮೈ ತುಂಬಾ ಕತ್ತೆಯಂತ ಒರಟು ಕೂದಲು ಹೊಂದಿದ, ಕತ್ತೆಯ ಹೇಷಾರವದಂತೆ ನಗುವ ಆತ ಹಣಕಾಸಿನ ವಿಚಾರದಲ್ಲಿ ಎಷ್ಟು ಶೀಘ್ರವಾಗಿ ಮೇಲೆ ಬಂದ! ದೊಡ್ಡೂರು ಹಾಗೂ ಸುತ್ತಮುತ್ತಲ ಹಳ್ಳಿಗಳ ರೈತರೆಲ್ಲಾ ಅವನ ಅಂಗಡಿಯ ಮುಂದೆ ಕಡ್ಡಾಯವಾಗಿ ಬಂದು ನಿಲ್ಲುವಂತಹ ಪರಿಸ್ಥಿತಿ ಹೇಗೆ ನಿರ್ಮಾಣವಾಯಿತು? ಅವನ ಇತಿಹಾಸವಾದರೂ ಎಂತಹದು?
ನಿದ್ದೆ ಬಾರದ ಚಿನ್ನಪ್ಪ ಹಾಸಿಗೆಯ ಮೇಲೆ ಹಾಗೆಯೇ ಹೊರಳಾಡುತ್ತ ಯೋಚಿಸತೊಡಗಿದ.


ಶಾಲೆಯಲ್ಲಿ ಅವನ ಹೆಸರು ರಾಮೇಗೌಡ. ಚಿನ್ನಪ್ಪ ಏಳನೇ ತರಗತಿಯಲ್ಲಿದ್ದಾಗ ಅವನು ಆರರಲ್ಲಿದ್ದ. ವಿದ್ಯೆಗೂ ಅವನಿಗೂ ಬದ್ದ ದ್ವೇಷ. ಜಾನ್ ಮೇಷ್ಟ್ರ ಎರಡು ಬೆತ್ತ ಇವನಿಂದಾಗಿಯೇ ಮುರಿದುಹೋಗಿದ್ದವು.
ನಂಜೇಗೌಡ್ರು ಎಂಬ ಮೇಸ್ಟ್ರು ಜಾನ್ ಮೇಷ್ಟ್ರುಗಿಂತ ಶಿಸ್ತು. ಸರಿಯಾಗಿ ಪಾಠ ಒಪ್ಪಿಸದಿದ್ದ ಮಕ್ಕಳಿಗೆ ವಿಧಿಸುತ್ತಿದ್ದ ಶಿಕ್ಷೆಯ ವಿಧಾನವೂ ವಿಶೇಷ!
ಹೆಣ್ಣು ಮಕ್ಕಳಾದರೆ ಎದುರು ಬದುರಾ ನಿಲ್ಲಿಸಿ ಪರಸ್ಪರ ಕೆನ್ನೆಗೆ ಹೊಡೆಸಿದರೆ, ಗಂಡು ಮಕ್ಕಳನ್ನು ಒಂದೆಡೆ ನಿಲ್ಲಿಸಿ ಅವರ ಖಾಕಿ ನಿಕ್ಕರೊಳಗೆ ಎಡ ಕೈ ಹಾಕಿ ತನ್ನ ಹೆಬ್ಬರಳು ಹಾಗೂ ತೋರುಬೆರಳಿನ ಉಗುರಿನಿಂದ ತಿಕವನ್ನು ಮಧ್ಯ ಬಲವಾಗಿ ಚಿವುಟುತ್ತಿದ್ದರು. ಅದೆಷ್ಟು ಭಯಾನಕವಾಗಿರುತ್ತಿತ್ತೆಂದರೆ ಅವೆರಡು ಉಗುರುಗಳನ್ನು ಏಡಿಯ ಕೊಂಬಿನಂತೆ ಹಿಡಿದು ಚಡ್ಡಿಯೊಳಗೆ ಕೈ ತೂರಿಸುವಷ್ಟರಲ್ಲೇ ಕೆಲ ಹುಡುಗರು ಚಡ್ಡಿ ಒದ್ದೆ ಮಾಡಿಕೊಂಡುಬಿಡುತ್ತಿದ್ದರು.


ಆದರೆ ರಾಮೇಗೌಡ ಶತ ಒರಟ! ಅವನ ಅಂಡನ್ನು ಚಿವುಟಲು ಹೋಗಿ ನಂಜೇಗೌಡರ ಒರಟು ಉಗುರುಗಳೂ ಮುರಿದುಹೋದವೆಂದು ದೊಡ್ಡ ಹುಡುಗರು ತಮಾಷೆ ಮಾಡುತ್ತಿದ್ದರು. ಅಂತೂ ಅವನು ಆರನೇ ಕ್ಲಾಸ್ ಪರೀಕ್ಷೆಯವರೆಗೂ ಶಾಲೆಯಲ್ಲಿ ಇರಲಿಲ್ಲ. ಮನೆಯವರು ಅವನನ್ನು ದನ ಕಾಯಲು ಹಾಕಿಕೊಂಡರು. ಹೀಗಿರಬೇಕಾದರೆ ಒಂದು ಸಲ ದೊಡ್ಡೂರಿಗೆ ದೊಂಬರು ಬಂದಿದ್ದರು. ಆಟ ಮುಗಿಸಿ ಅಲ್ಲಿಂದ ಮುಂದಿನೂರಿಗೆ ಹೋಗುವಾಗ ಅವರು ಹಿಂದಿನ ಎಡಗಾಲು ಮುರಿದಿದ್ದ ಹೆಣ್ಣು ಕತ್ತೆ ಮರಿಯೊಂದನ್ನು ಬಿಟ್ಟು ಹೋಗಿದ್ದರು.
ರಾಮೇಗೌಡನ ಮನೆಯ ಕೊಟ್ಟಿಗೆಯ ಬಳಿ ಬಂದ ಆ ಮರಿ ಅವನ ದನಗಳೊಂದಿಗೇ ಹೊಂದಿಕೊಂಡು ಬಿಟ್ಟಿತ್ತು. ದಿನವೂ ದನಗಳೊಂದಿಗೆ ಮೇಯುತ್ತಿದ್ದ ಅದು ಮಧ್ಯಾಹ್ನ ರಾಮೇಗೌಡನ ಬುತ್ತಿಯಲ್ಲಿ ಪಾಲು ಪಡೆಯುತ್ತಾ ಗೆಳೆತನ ಮಾಡಿಕೊಂಡಿತ್ತು. ವರ್ಷಗಳುರುಳಿದಂತೆ ರಾಮೇಗೌಡನಿಗೆ ಚಿಗುರುಮೀಸೆ ಮೂಡಿದವು. ಕತ್ತೆಯೂ ವಯಸ್ಸಿಗೆ ಬಂದಿತ್ತು.

ಆ ದಿನ ಶನಿವಾರ. ರಾಮೇಗೌಡ ಗದ್ದೆ ಬಯಲಿನ ಮೇಲಿನ, ಅವರಪ್ಪನಿಗೆ ಸೇರಿದ ಕುರೋವದ ಬಯಲಿನಲ್ಲಿ ದನ ಬಿಟ್ಟುಕೊಂಡಿದ್ದ. ಕತ್ತೆ ಇದ್ದಕ್ಕಿದ್ದಂತೆ ಅರಚುತ್ತಾ ಬಯಲಿನಲ್ಲೆಲ್ಲಾ ಮೂರು ಕಾಲಿನಲ್ಲೇ ಓಡತೊಡಗಿತು.
‘ಈ ಕತ್ತೆಗೇನಾಗಿದೆ ಈವತ್ತು? ಬಿಸಿಲು ಜಾಸ್ತಿಯಾದ್ದಕ್ಕೆ ಹಿಂಗೆ ಆಡುತ್ತೇನೋ? ಅದೆಲ್ಲಿಗೆ ಹೋಗುತ್ತೆ, ಎಲ್ಲಿಗೆ ಹೋದರೂ ನನ್ನನ್ನು ಹುಡುಕಿಕೊಂಡು ಬರಲೇಬೇಕು ಅಂದುಕೊಳ್ಳುತ್ತಾ ಬಯಲಿನ ಅಂಚಿನಲ್ಲಿದ್ದ ಬಿಳವನ ಹಲಸಿನ ಮರದ ನೆರಳಿಗೆ ಬಂದು ಕುಳಿತುಕೊಂಡ.
ಶನಿವಾರ ಬೆಳಗಿನ ಶಾಲೆ ಮುಗಿಸಿಬಂದ ಇಬ್ಬರು ಸಣ್ಣ ಹುಡುಗರು ಆ ಮರ ಏರಿ ಚೆನ್ನಾಗಿ ಮಿಲಿದು ಹಣ್ಣಾಗಿದ್ದ ಬಿಳುವನ ಹಲಸಿನ ಹಣ್ಣನ್ನು ಕಿತ್ತು ಕೈಯಲ್ಲಿ ಹಿಡಿದಿದ್ದರು. ರಾಮೇಗೌಡನ ಒರಟುತನಕ್ಕೆ ಭಯಪಡುತ್ತಿದ್ದ ಆ ಹುಡುಗರು ಹೆದರಿ ಉಸಿರು ಬಿಗಿಹಿಡಿದು ಮರದ ಸೊಪ್ಪಿನೊಳಗೆ ಅಡಗಿ ಕುಳಿತುಕೊಂಡರು.
ಮೈದಾನ ಒಂದು ಸುತ್ತು ಹೊಡೆದು ಬಂದ ಕತ್ತೆ ನೆರಳಿನಲ್ಲಿ ಕೂತಿದ್ದ ರಾಮೇಗೌಡನ ಬಳಿ ನಿಂತುಕೊಂಡಿತು.

ರಾಮೇಗೌಡ ಕುತೂಹಲದಿಂದ ಅದನ್ನು ಸೂಕ್ಷ್ಮವಾಗಿ ನಿರೀಕ್ಷಿಸಿದ. ವಯಸ್ಸಿಗೆ ಬಂದಿದ್ದ ಆ ಪ್ರಾಣಿ ಪ್ರಕೃತಿ ಸಹಜವಾಗಿ ಬೆದೆಗೆ ಬಂದುಬಿಟ್ಟಿತ್ತು. ರಾಮೇಗೌಡ ಪ್ರೀತಿಯಿಂದ ಅದರ ಮೈದಡವಿದ. ಇನ್ನೂ ಸನಿಹ ಬಂದು ಕತ್ತೆ ಅವನ ಮುಖ ಮೂಸಿತು. ರಾಮೇಗೌಡನ ಮೈ ಬಿಸಿಯೇರಿದಂತಾಯಿತು. ಅದರ ಬಾಲದಡಿ ಕೈ ಇರಿಸಿ ನೋಡಿದ. ಮಡೆಯಾಡುತ್ತಿದ್ದ ಆ ಭಾಗ ನುಣುಪು ದ್ರವದಿಂದ ಒದ್ದೆಯಾಗಿತ್ತು. ಅದಕ್ಕೆ ಹಿತವೆನಿಸಿತೇನೋ ಹಾಗೆಯೇ ಬಾಲ ಎತ್ತಿ ನಿಂತಿತು.
ರಾಮೇಗೌಡ ಬಯಲಿನ ತುಂಬಾ ದೃಷ್ಟಿ ಹಾಯಿಸಿ ನೋಡಿದ. ಒಂದೂ ನರಪ್ರಾಣಿ ಕಾಣಲಿಲ್ಲ. ಚಡ್ಡಿ ಕಳಚಿ ಕೆಳಗೆ ಬಿತ್ತು. ಕತ್ತೆಯ ಹಿಂದಿನಿಂದ ಬಂದು ಕೊಸೆಯತೊಡಗಿದ!
ಈ ವಿಕಾರವನ್ನು ಕಣ್ಣಾರೆ ಕಂಡ, ಮರದ ಮೇಲಿದ್ದ ಹುಡುಗರು ಗಾಬರಿಯಿಂದ ಕಿರುಚುತ್ತಾ ಹಣ್ಣನ್ನು ಕೈಬಿಟ್ಟು ಬಿಟ್ಟರು.
ಕತ್ತೆಯ ಬೆನ್ನಿನ ಮೇಲೆ ಬಿದ್ದ ಆ ಕಳಿತ ಹಣ್ಣು ಪಚಕ್ಕನೆ ಎಲ್ಲಾ ದಿಕ್ಕುಗಳಿಗೂ ಸಿಡಿಯಿತು. ದಿಗ್ಭ್ರಮೆಗೊಳಗಾದ ಕತ್ತೆ ಮುಂದಕ್ಕೆ ನೆಗೆದು ಕುಂಟುತ್ತಲೇ ಓಡತೊಡಗಿತು. ಆ ರಭಸಕ್ಕೆ ಹಿಂದೆ ಬಿದ್ದ ರಾಮೇಗೌಡ ಎದ್ದು ಚಡ್ಡಿ ಎಳೆದುಕೊಳ್ಳುತ್ತಾ ದೂರದಲ್ಲಿ ಕಾಣುತ್ತಿದ್ದ ಬಸ್ ರಸ್ತೆಯ ಕಡೆ ಓಡಿ ಸಿಕ್ಕ ಬಸ್ಸಿಗೆ ಕೈಯೊಡ್ಡಿದ.
ಊರಲ್ಲಿ ಕೆಲದಿನ ಗುಸುಗುಸು ಹಬ್ಬಿತು.
ರಾಮೇಗೌಡ ನಾಪತ್ತೆಯಾಗಿದ್ದ.


ಎರಡು ವರ್ಷ ಕಳೆಯಿತು. ಒಂದು ದಿನ ರಾಮೇಗೌಡ ದೊಡ್ಡೂರಿನಲ್ಲಿ ಪ್ರತ್ಯಕ್ಷನಾದ.
‘ಕತ್ತೆ ರಾಮ ಬಂದಿದಾನಂತೆ’ ಊರ ಜನರೆಲ್ಲಾ ಮಾತಾಡಿಕೊಂಡರು. ರಾಮೇಗೌಡನಿಗೆ ಹೊಸ ಅಭಿದಾನ ಪ್ರಾಪ್ತವಾಗಿತ್ತು!
ಬಂದವನೇ ಟೀ ಅಂಗಡಿ ಇಡುವುದಾಗಿ ಹೇಳಿಕೊಂಡು ದೊಡ್ಡೂರಿನ ಅಂಗಡಿ ಬೀದಿಯಲ್ಲಿ ಓಡಾಡತೊಡಗಿದ. ಅದೇ ಬೀದಿಯಲ್ಲಿದ್ದ ಶಿಥಿಲವಾಗಿ ಒಂದು ಪಾಶ್ರ್ವ ಕುಸಿದಿದ್ದ ಹೆಂಚಿನ ಮನೆಯೊಂದು ಅವನ ಕಣ್ಣಿಗೆ ಬಿದ್ದಿತ್ತು. ಅದರಲ್ಲಿ ಹತ್ತಿರದಲ್ಲಿ ಯಾರೂ ದಿಕ್ಕಿಲ್ಲದ ಆಚಾರಿ ಮುದುಕಿಯೊಂದು ವಾಸವಾಗಿತ್ತು. ಅವಳ ಒಬ್ಬ ಮಗಳನ್ನು ದೂರದ ಘಟ್ಟದ ಸೀಮೆಗೆ ಮದುವೆ ಮಾಡಿಕೊಟ್ಟಿದ್ದರೆಂದು ಜನ ಮಾತಾಡಿಕೊಳ್ಳುತ್ತಿದ್ದರು. ಅಂಗಡಿ ಬೀದಿಯಲ್ಲಿದ್ದ ಆ ಮನೆಯನ್ನು ಹೊಡೆದುಕೊಳ್ಳಲು ಈಗಾಗಲೇ ಪ್ರಯತ್ನಿಸಿ ಕೆಲಜನ ಆ ಮುದುಕಿಯ ಕೈಯಲ್ಲಿ ಮಂಗಳಾರತಿ ಮಾಡಿಸಿಕೊಂಡಿದ್ದರು. ಮಾರುವುದಿರಲಿ, ಬಾಡಿಗೆಗೆ ಕೊಡಲೂ ಆ ಮುದುಕಿ ಒಪ್ಪಿರಲಿಲ್ಲ.

ಕತ್ತೆರಾಮ ಎಂಬ ಹೊಸ ಹೆಸರಿನ ಇವನು ಅದೇನು ಮಂತ್ರ ಮಾಡಿದನೋ ಇಲ್ಲ ಸಂಪೂರ್ಣ ಹಣ್ಣಾಗಿಹೋಗಿದ್ದ ಮುದುಕಿಗೇ ಆಸರೆ ಬೇಕು ಎನಿಸಿತ್ತೋ ಅಂತೂ ಹಿಂದೆ ಹಜಾಮರ ಶಾಪ್ ಇದ್ದ, ರಸ್ತೆ ಕಡೆಯ ಒಂದು ರೂಮಿನಲ್ಲಿ ಕತ್ತೆರಾಮನ ಟೀ ಅಂಗಡಿ ಶುರುವಾಗಿಯೇಬಿಟ್ಟಿತು.
ತನಗೆ ಬರುತ್ತಿದ್ದ ಮಧ್ಯಾಹ್ನದ ಊಟದಲ್ಲಿ ಆ ಮುದುಕಿಗೂ ಪಾಲು ಕೊಡತೊಡಗಿದ. ರಾತ್ರಿ ಒಂದು ಪೆಗ್ ಬ್ರಾಂದಿ ಕೊಟ್ಟು ಮಧ್ಯಾಹ್ನ ಉಳಿದಿದ್ದನ್ನು ಊಟ ಮಾಡುವಂತೆ ಒತ್ತಾಯ ಮಾಡುತ್ತಿದ್ದ. ಕಡೆಯ ಕಾಲದಲ್ಲಿ ಸಂತೈಸುವ ಒಬ್ಬ ವ್ಯಕ್ತಿ ಸಿಕ್ಕಿದನಲ್ಲಾ ಎಂದುಕೊಳ್ಳುತ್ತಾ ‘ನಿನ್ನ ಸಂತಾನ ಸಾವ್ರ ಆಗ್ಲಿ’ ಎಂದು ಹಾರೈಸಿ ನೆಮ್ಮದಿಯ ನಿದ್ದೆಗೆ ಜಾರತೊಡಗುತ್ತಿತ್ತು ಮುದುಕಿ.
‘ಹೆಂಗಾದ್ರೂ ಆಗ್ಲಿ ಸಾಯ ಮುದುಕಿಗೆ ಒಂದು ಆಸರೆ ಆಯ್ತಲ್ಲ’ ಎಂದು ಜನ ಮಾತಾಡಿಕೊಳ್ಳುವಂತಾಯಿತು.

ಹೀಗಿರುವಾಗ ಒಂದು ದಿನ ರಾಮ ಬಾಡಿಗೆ ಜೀಪು ಮಾಡಿಕೊಂಡು ಮುದುಕಿಯನ್ನು ಸಕಲೇಶಪುರಕ್ಕೆ ಕರೆದುಕೊಂಡು ಹೊರಟ. ಜನ ವಿಚಾರಿಸಿದರು, ‘ರಾತ್ರಿಯೆಲ್ಲಾ ಸಿಕ್ಕಾಪಟ್ಟೆ ಕೆಮ್ಮುತ್ತೆ. ದೊಡ್ಡ ಡಾಕ್ಟರಿಗೆ ತೋರಿಸಿಕೊಂಡು ಬರ್ತೀನಿ’ ಎಂದ. ಪರ್ವಾಗಿಲ್ಲ ಕತ್ತೆರಾಮನಿಗೆ ಧರ್ಮದ ಬುದ್ದಿ ಬಂದಿದೆ ಎಂದುಕೊಂಡರು.
ಬಂದನಂತರ ಬಿದ್ದುಹೋಗಿದ್ದ ಗೋಡೆಯನ್ನೆಲ್ಲಾ ತೆಗೆಸಿಹಾಕಿ ಕಂಬ ನಿಲ್ಲಿಸಿ ಶೀಟು ಎಳೆಸಿದ. ಜಾಗ ನಂದೇ ಎಂದು ಟೀ ಅಂಗಡಿಗೆ ಬಂದವರ ಬಳಿ ಹೇಳಿಕೊಳ್ಳತೊಡಗಿದ.
ಮುದುಕಿಗೆ ರಾತ್ರಿಯ ಬ್ರಾಂದಿ ಸರಬರಾಜು ನಿಂತುಹೋಯಿತು. ಖಾಲಿ ಹೊಟ್ಟೆಗೆ ಮಧ್ಯಾಹ್ನದ ತಂಗಳು ಸೇರದಾಯಿತು.
‘ಇವ್ನ ಹೆಂಡ್ತಿ ಮುಂಡೆಯಾಗಿ ಹೋಗ…ನನ್ನ ಸಾಯಿಸ್ತಾನಲ್ಲೋ’ ಎಂದು ಮುದುಕಿ ಒಮ್ಮೊಮ್ಮೆ ರಾತ್ರಿ ಕೂಗಿಕೊಳ್ಳುವುದನ್ನು ಜನ ಕೇಳಿಸಿಕೊಂಡರು.
ಕೆಲವೇ ದಿನಗಳಲ್ಲಿ ಮುದುಕಿ ಕಣ್ಮುಚ್ಚಿಕೊಂಡಿತು.
ಕತ್ತೆರಾಮನಿಗೆ ನಿರಾಳವಾಯಿತು.


ಅಧ್ಯಾಯ ೧: ಇದ್ದಿ ಕುಂಞಯ ಸೀಗೆಕಾಯಿ ವ್ಯಾಪಾರ

ಕತ್ತೆರಾಮನ ಟೀ ಅಂಗಡಿಗೆ ಗಿರಾಕಿಗಳದೇನೂ ಕೊರತೆಯಿರಲಿಲ್ಲ. ರೋಡ್ ಕೆಲಸದವರು, ಕಾಸರಗೋಡು ಕಡೆಯಿಂದ ತೋಟದ ಕೆಲಸಕ್ಕೆಂದು ಬಂದ ಮಾಪಿಳ್ಳೆಗಳು, ಶಾಲೆಗಳ ಮಾಸ್ತರರು, ಪಕ್ಕದ ಹಳ್ಳಿಗಳಿಂದ ಬಸ್ಸಿಗೆ, ಇತರೆ ವಹಿವಾಟಿಗೆ ಭೇಟಿಕೊಡುವ ಜನ, ಇವರೆಲ್ಲಾ ರಾಮನ ಟೀ ಅಂಗಡಿಯ ಗಿರಾಕಿಗಳೇ. ಇವರಲ್ಲಿ ಮಹತ್ವಾಕಾಂಕ್ಷೆಯ ಇದ್ದಿ ಕುಂಞ ಕತ್ತೆಯ ಗಮನ ಸೆಳೆದಿದ್ದ.
ಪಳ ಪಳ ಹೊಳೆಯುವ ಬಿಳಿಯ ಪಂಚೆ, ಅಂಗಿ ಹಾಗೂ ಮುಂಡಾಸು ಧರಿಸಿ ಗಡ್ಡವನ್ನು ಸರಿಯಾಗಿಯೇ ಟ್ರಿಮ್ ಮಾಡಿಕೊಂಡು ಕಾಸರಗೋಡು ಕಡೆಯಿಂದ ಬಂದಿಳಿದಾಗ ಆಕರ್ಷಕವಾಗಿ ಕಾಣುತ್ತಿದ್ದ. ತೋಟದ ಕೂಲಿ ಕೆಲಸದಲ್ಲಿ ಕೆಲ ತಿಂಗಳು ತೊಡಗಿಸಿಕೊಂಡ ನಂತರ ಅವನ ಬಟ್ಟೆಯ ಬಣ್ಣ ಮಾಸಿ ತಲೆಗೆ ಬಿಡದೆ ಕಟ್ಟುತ್ತಿದ್ದ ಬಿಳಿಯ ಮುಂಡಾಸು ನವೆದು ತೂತುಬಿದ್ದು ಮಾಸಲು ಬಣ್ಣ ಪಡೆದುಕೊಂಡಿತ್ತು.
‘ಇದೇನಾ ಕಾಕ, ಹರಿದು ಚಿಂದಿಯಾಗಿ ಹೋಗಿತಲ್ಲೋ ನಿನ್ನ ಮುಂಡಾಸು. ಬಿಚ್ಚಿ ಬಿಸಾಕದಲ್ವೇನೋ ಅತ್ಲಾಗಿ!’ ಕತ್ತೆರಾಮ ಇದ್ದಿ ಕುಂಞಯೊಂದಿಗೆ ಮಾಮೂಲಿ ಧಾಟಿಯಲ್ಲಿ ತಮಾಷೆ ಮಾಡಿದ್ದ.
‘ಎಲ್ಲಿಯಾದರೂ ಉಂಟೆ ರಾಮಣ್ಣ. ಹಾಗೆಲ್ಲಾ ಹೇಳಬಾರದು. ಅದು ನಮ್ಮ ಘನತೆಯ ಸಂಕೇತ ಅಲ್ಲವೋ!’ ಎಂದು ಇದ್ದಿ ಕುಂಞ ಉತ್ತರ ಕೊಟ್ಟಿದ್ದ.
ಕೂಲಿಗಳ ಮಧ್ಯೆ ಜನಾನುರಾಗಿಯಾಗಿದ್ದ ಇದ್ದಿಕುಂಞ ಮೇಸ್ತ್ರಿಯ ಹಂತ ತಲುಪಿದ.

ವರುಷ ಕಳೆಯುವಷ್ಟರಲ್ಲಿ ತೋಟಗಳ ಕಚ್ಚಡ ಕೆಲಸದ ಗುತ್ತಿಗೆ ಹಿಡಿಯತೊಡಗಿದ.
ವ್ಯವಹಾರವನ್ನು ನೀಟಾಗಿ ಮಾಡುತ್ತಿದ್ದ ಆತ ತೋಟಗಳ ಮಾಲೀಕರ ನಂಬಿಕಸ್ಥ ಜನವಾದ. ಕಾಫಿ ತೋಟ ಮಾಡಲಾಗದ ಕಾಡು ತೋಟಗಳ ಜನ ಕೆಲವರು ಮತ್ತೆ ಮತ್ತೆ ಹೊಸಗಿಡ ಹಾಕಿ ಯಾಲಕ್ಕಿಯಲ್ಲೇ ಅದೃಷ್ಟ ಪರೀಕ್ಷೆಯಲ್ಲಿ ತೊಡಗಿದ್ದರಲ್ಲ!
ಮರುವರ್ಷ ಒಂದೆರಡು ಕಾಡು ತೋಟಗಳ ಯಾಲಕ್ಕಿ ಫಸಲು ಗುತ್ತಿಗೆ ಹಿಡಿದೇಬಿಟ್ಟ.
ಅವನ ಅದೃಷ್ಟ ಖುಲಾಯಿಸಿತ್ತು. ಆ ವರ್ಷ ಒಳ್ಳೆಯ ಮಳೆಯೂ ಆಯಿತು. ಸೀಜನ್ನಿನಲ್ಲಿ ಯಾಲಕ್ಕಿ ರೇಟೂ ಏರಿತ್ತು. ಮಾತಿನ ಪ್ರಕಾರ ತೋಟದ ಮಾಲೀಕರಿಗೆ ಚುಕ್ತಾಮಾಡಿ ಇವನಿಗೂ ಕೈ ತುಂಬಾ ದುಡ್ಡು ಉಳಿದಿತ್ತು.
ಇನ್ನೂ ಹೆಚ್ಚಿನ ವ್ಯವಹಾರ ಮಾಡಿ ದುಡ್ಡು ಗಳಿಸಬೇಕೆನಿಸಿತು ಅವನಿಗೆ.
ಹೀಗೆ ಕಾಲ್ನಡಿಗೆಯಲ್ಲಿ ಹಳ್ಳಿ ಹಳ್ಳಿ ತಿರುಗಾಡಿದರೆ ಹೇಗೆ? ಈವತ್ತಿನ ವೇಗದ ಜಗತ್ತಿಗೆ ಒಂದು ಮೊಪೆಡ್ ಆದರೂ ಬೇಡವೇ?
ಹಾಸನಕ್ಕೆ ಹೋಗಿ ಹಳೆಯ ಜಂಕ್ ಹಿಡಿದ ಒಂದು ಟಿ.ವಿ.ಎಸ್ ಮೊಪೆಡ್ ಕೊಂಡು ರಿಪೇರಿ ಮಾಡಿಸಿ ತಂದ. ಹೊಚ್ಚ ಹೊಸ ಬಿಳಿಯ ಪಂಚೆ, ಮುಂಡಾಸು ಧರಿಸಿದ ಇದ್ದಿಕುಂಞÂ ಕುಟು ಕುಟು ಸದ್ದು ಮಾಡುತ್ತ ಬಂದು ಟೀ ಅಂಗಡಿಯ ಮುಂದೆ ತನ್ನ ವಾಹನ ನಿಲ್ಲಿಸಿದ.


ದೂರದಿಂದಲೇ ಕಂಡ ಕತ್ತೆರಾಮ, ಇದ್ದಿಕುಂಞಗೆ ಒಳ್ಳೆಯ ದುಡ್ಡಾಗಿರುವಂತಿದೆ ಎಂದುಕೊಳ್ಳುತ್ತಾ ‘ಏನೋ ಇದ್ದಿಕುಂಞ ಈವತ್ತೊಳ್ಳೆ ಫಿಲಂ ಸ್ಟಾರ್ ಮಮ್ಮುಟ್ಟಿಯಂಗೆ ಕಾಣ್ತಿಯಲ್ಲೋ’ ಎಂದು ಚುಡಾಯಿಸಿದ.
ಉಬ್ಬಿಹೋದ ಮಾಪಿಳ್ಳೆ ಏನು ಹೇಳಬೇಕೆಂದು ತಿಳಿಯದೆ ಮೊಪೆಡ್ ಬಳಿ ಹಾಗೆಯೇ ನಿಂತ. ಕತ್ತೆರಾಮ ವಿಐಪಿಯನ್ನು ಸ್ವಾಗತಿಸುವವನಂತೆ ಅಂಗಡಿಯಿಂದ ಹೊರಬಂದು ಮೊಪೆಡ್ ಮೇಲೆ ಕೈಯೂರಿ ‘ಫಸಲು ಗುತ್ತಿಗೆಲಿ ಒಳ್ಳೆ ದುಡ್ಡಾಗಿರಬಹ್ದು ಕಾಕನಿಗೆ…ಹೊಸಾ ಮೊಪೆಡ್ ಬ್ಯಾರೆ ಬಂದಿತೆ. ಏನಾದ್ರೂ ಹೊಸಾ ವ್ಯಾಪಾರ ಮಾಡ ಪ್ಲಾನಾ ಹೆಂಗೆ’ ಎಂದ.

‘ಹೌದು ರಾಮಣ್ಣ. ಏನಾದರೂ ಮಾಡದಿದ್ದರೆ ಉಂಟೆ. ಇಷ್ಟು ದೂರ ಬಂದು ವರ್ಷಗಟ್ಟಲೆ ಗೇದು ಪುಡಿಗಾಸು ಕೈಯಲ್ಲಿ ಇಟ್ಟುಕೊಂಡು ಊರಿಗೆ ಹೋದರೆ ಹೆಂಡತಿ ಮಕ್ಕಳು ಮನೆಗೆ ಸೇರಿಸುವುದು ಉಂಟೋ!’ ಇದ್ದಿಕುಂಞ ತನ್ನ ಮನದ ಇಂಗಿತ ವ್ಯಕ್ತಪಡಿಸಿದ.
ಬೆಳಗಿನ ಹತ್ತು ಗಂಟೆ ಕಳೆದಿದ್ದರಿಂದ ಟೀ ಅಂಗಡಿಯಲ್ಲಿ ಗಿರಾಕಿಗಳು ಇರಲಿಲ್ಲ. ಮಾಮೂಲಿ ಗಿರಾಕಿ ಚಂಗಪ್ಪ ಗೌಡರು ಮಾತ್ರ ಅಂಗಡಿ ಎದುರಿಗೆ ಬೆಂಚಿನ ಮೇಲೆ ಬೀಡಿ ಎಳೆಯುತ್ತಾ ಕುಳಿತಿದ್ದರು. ರಾಮ ಮಾಪಿಳ್ಳೆಯ ಹೆಗಲ ಮೇಲೆ ಕೈ ಹಾಕಿ ಅವನ ಕಾರ್ಯಚತುರತೆಯ ಬಗ್ಗೆ ಪ್ರಶಂಶೆ ಮಾಡುತ್ತಾ, ಮಧ್ಯೆ ಮಧ್ಯೆ ಹೇಹೇಹೇ ಎಂಬ ಹೇಷಾರವದ ನಗೆ ನಗುತ್ತಾ ವಿಶೇಷ ಗೌರವದೊಂದಿಗೆ ಅಂಗಡಿಯೊಳಗೆ ಕರೆತಂದು ಕುಳ್ಳಿರಿಸಿ, ಒಳ್ಳೆಯದೊಂದು ಟೀ ಮಾಡಿ ತಂದು ಮುಂದಿರಿಸಿಕೊಂಡು ಇದ್ದಿಕುಂಞಯೊಂದಿಗೆ ಮಾತಿಗೆ ಕುಳಿತ.
‘ಏನ್ ಯಾಪಾರ ಮಾಡ್ಬೇಕೂಂತ ಇದೀಯ ಕಾಕ’ ರಾಮ ಪೀಠಿಕೆ ಹಾಕಿದ.
‘ಹ್ಯಾಗೂ ಮೊಪೆಡ್ ಉಂಟಲ್ಲ ರಾಮಣ್ಣ. ಊರೂರ ಮೇಲೆ ಹೋಗಿ ಕಟ್ಲೆರಿ ವ್ಯಾಪಾರ ಮಾಡಿದರೆ ಹೇಗೆ ಅಂತಾ…ಅದಕ್ಕಿಂತ ಯಾವುದಾದರೂ ಒಳ್ಳೆಯ ವ್ಯಾಪಾರ ಉಂಟೋ ಎಂದು ನಿಮ್ಮನ್ನೇ ಕೇಳುವುದು ಅಂತಾ ಇದ್ದೆ’ ಎಂದ ಮಾಪಿಳ್ಳೆ.
‘ಎಣ್ಣೇಲಿ ಬಂದಿದ್ದು ಅದೆಂತದ್ರಲ್ಲೋ ಹೋಯ್ತು-ಅಂತಾರಲ್ಲೋ ಹಂಗಾಗುತ್ತೆ ನೀನು ಕಟ್ಲೆರಿ ವ್ಯಾಪಾರ ಮಾಡಿದ್ರೆ’ ಹೆಹೆಹೆ ಎನ್ನುತ್ತ ತನ್ನದೇ ಆದ ಕತ್ತೆ ಬ್ರಾಂಡ್ ನಗೆ ನಗುತ್ತಾ ಹೇಳಿದ.
ಇದ್ದಿಕುಂಞ ತಬ್ಬಿಬ್ಬಾಗಿ ಕುಳಿತ.

‘ನೋಡು, ನೀನು ಊರೂರು ತಿರುಗಿ ಕಟ್ಲೆರಿ ವ್ಯಾಪಾರ ಮಾಡಿದ್ರೆ ನೀನು ದುಡಿದದ್ದೆಲ್ಲಾ ಈ ನಿನ್ನ ಮೊಪೆಡ್‍ಗೆ ಪೆಟ್ರೋಲ್ ಕುಡಿಸದಿಕ್ಕೆ ಆಗುತ್ತೆ. ಆಮೇಲೆ ನೀನು ಮುಂಡಾಸು ಬಿಚ್ಚಾಕಿ ಬರೀ ಕೈಲಿ ಹೋಗಬೇಕಾಗುತ್ತೆ…ಬ್ಯಾರೆ ಏನಾದ್ರೂ ಒಳ್ಳೇದು ಯೋಚ್ನೆ ಮಾಡು’ ರಾಮನ ಮಾತು ಕೇಳಿದ ಇದ್ದಿಕುಂಞಗೆ ಸರಿಯೆನಿಸಿತು.
‘ನೀವು ವ್ಯಾಪಾರದಲ್ಲಿ ನಿಪುಣರಲ್ಲವೋ ರಾಮಣ್ಣ. ನೀವೇ ಒಂದು ದಾರಿ ಹೇಳಿಬಿಡಿ’.
‘ಅದು ಸರಿ, ಈಗ ಕೈಯಲ್ಲಿ ಎಷ್ಟು ದುಡ್ಡು ಇಟ್ಟಿದ್ದೀಯ ಹೇಳು’ ಕತ್ತೆರಾಮನ ಪ್ರಶ್ನೆ.
‘ಎಲ್ಲಾ ಕಳೆದು ಒಂದು ಎಂಟು ಸಾವಿರ ಉಂಟು ಮಾರಾಯರೆ’ ಎಂದ ಇದ್ದಿಕುಂಞ, ಮುಜುಗರದಿಂದ ರಾಮನ ಮುಖ ನೋಡಿದ.
‘ಹೈ, ಎಂಟು ಸಾವಿರದಲ್ಲೆಲ್ಲಾ ಏನ್ ಯಾಪಾರ ಮಾಡಕಾಗುತ್ತಾ ಈ ಕಾಲ್ದಲ್ಲಿ… ನನಗೊಂದು ಯಾಪಾರ ಹೊಳೆದಿತ್ತು. ಆದರೆ ಅದಕ್ಕೆಲ್ಲಾ ನಿನ್ನ ಈ ದುಡ್ಡು ಸಾಲದಲ್ಲೋ’ ರಾಮ ಕೈ ಕೈ ಹೊಸೆಯುತ್ತಾ ಹೇಳಿದ.
‘ಅದೆಂಥ ವ್ಯಾಪಾರ ಒಮ್ಮೆ ಹೇಳಿಬಿಡಿ’ ಇದ್ದಿಕುಂಞ ಕುತೂಹಲ ವ್ಯಕ್ತಪಡಿಸಿದ.
‘ಸೀಗೆಕಾಯಿ ವ್ಯಾಪಾರ!’
ಕತ್ತೆರಾಮನ ಮಾತುಕೇಳಿ ಮಾಪಿಳ್ಳೆಯ ಮುಖ ಅರಳಿತು. ಝಣ ಝಣ ಕಾಂಚಾಣ ತನ್ನ ಮುಂದೆ ಸುರಿದಂತೆ ಕ್ಷಣ ಭಾಸವಾಯಿತು.

ಆದರೆ ಈ ಹಣ ಎಲ್ಲಿ ಸಾಕಾಗುತ್ತೆ. ಮರುಕ್ಷಣ ಮಂಕಾಗಿ ಕುಳಿತದ್ದು ಕಂಡು ರಾಮ,
‘ನೀನೇನೂ ಯೋಚ್ನೆ ಮಾಡ್ಬೇಡ ಮಾರಾಯ. ನಾನ್ ಹತ್ತು ಸಾವ್ರ ಕೊಡ್ತೀನಿ ನಿನ್ ಕೈಗೆ. ಪಾರ್ಟನರ್‍ಷಿಪ್ ವ್ಯವಹಾರ! ನಿನಗೆ ಹೆಂಗೂ ಎಲ್ಲಾ ಕಾಡ್ ತೋಟ ಪರಿಚಯ ಇದಾವೆ. ಊರೂರು ತಿರುಗಿ ಅಡ್ವಾನ್ಸ್ ಕೊಟ್ಟು ಸೀಗೆಕಾಯಿ ತರದು ನಿನ್ನ ಕೆಲ್ಸ. ಹೆಂಗೂ ಹಿಂದುಗಡೆ ಶೆಡ್ ಇದ್ದೇ ಇದೆ. ಅದಕ್ಕೆ ಬಾಡಿಗೆ ಏನೂ ಕೊಡದು ಬ್ಯಾಡ. ತಂದ ಸೀಗೆಕಾಯಿ ಇಡಕೆ ಗೋಡನ್ ಮಾಡಿಕೊಳ್ಳಣ. ಎರಡು ಮೂರು ಲೋಡ್ ಶೇಖರಣೆ ಆದ ಮೇಲೆ ಒಳ್ಳೆ ರೇಟ್ ಬಂದಾಗ ಮಾರಿಬಿಡಾಣ. ಬಂದ ಲಾಭದಲ್ಲಿ ಸಮ ಸಮ’
ಕತ್ತೆರಾಮನ ಮಾತು ಇದ್ದಿಕುಂಞಯ ಬಾಯಲ್ಲಿ ನೀರೂರುವಂತೆ ಮಾಡಿತು.
‘ಇದೊಳ್ಳೆ ಐಡಿಯ’ ಎಂದು ಇದ್ದಿಕುಂಞ ‘ಈವತ್ತಿನಿಂದಲೇ ಕೆಲಸ ಶುರು ಮಾಡ್ತಿನಿ ಎನ್ನುತ್ತಾ ಮುಂಡಾಸನ್ನು ಬಿಚ್ಚಿ ಕೊಡವಿ ಸರಿಯಾಗಿ ಕಟ್ಟಿಕೊಳ್ಳುತ್ತಾ ಹೊಸ ವ್ಯಾಪಾರಕ್ಕೆ ಹೆಮ್ಮೆಯಿಂದ ಹೊರಟ.


ದೇವರ ಬೆಟ್ಟದಿಂದ ಹಿಡಿದು ಬಿಸ್ಲೆ ಘಾಟಿ ಹಾದು ಪುಷ್ಪಗಿರಿಯವರೆಗೆ ಇದ್ದಿಕುಂಞಯ ಕಾರ್ಯಕ್ಷೇತ್ರ ವ್ಯಾಪಿಸಿತು. ಹಾಸನ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗೆ ಸೇರಿದ ಘಟ್ಟದಂಚಿನ ರಸ್ತೆಗಳಲ್ಲಿ ಅವನ ಮೊಪೆಡ್ ಓಡತೊಡಗಿತು.
ಕತ್ತೆರಾಮನ ಸಲಹೆಯಂತೆ ನಗರದಲ್ಲಿ ನಡೆಯುವ ಬೆಲೆಗಿಂತ ಅರ್ಧಕ್ಕರ್ಧ ಕಡಿಮೆ ದರಕ್ಕೆ ಸೀಗೆಕಾಯಿ ಕೊಳ್ಳತೊಡಗಿದ. ಇದ್ದಿಕುಂಞಯನ್ನು ಮೊದಲೇ ಬಲ್ಲ ಜನ ಕೇವಲ ಹತ್ತು ಪರ್ಸೆಂಟ್ ಅಡ್ವಾನ್ಸ್ ಪಡೆದು ಮಾಲು ಕೊಡಲು ಒಪ್ಪಿದರು. ಅವನ ಪರಿಚಯವಿಲ್ಲದ ಪ್ರದೇಶದ ಜನ ನೆಂಟರಿಷ್ಟರ ಮುಖೇನ ಮಾಪಿಳ್ಳೆಯ ನಂಬಿಕೆಯ ಬಗ್ಗೆ ಖಾತ್ರಿ ಮಾಡಿಕೊಂಡು ಮಾಲು ಕೊಡತೊಡಗಿದರು. ದೊಡ್ಡೂರಿನಲ್ಲಿ ಗೋಡೌನ್ ಇದ್ದದ್ದು ಅವನ ವ್ಯವಹಾರಕ್ಕೊಂದು ಬಲ ತಂದಿತ್ತು. ಸಣ್ಣಪುಟ್ಟ ವ್ಯಾಪಾರದ ಮಾಲನ್ನು ಮೊಪೆಡ್‍ನಲ್ಲಿ ಒಂದೆಡೆ ಶೇಖರಿಸಿ ದೊಡ್ಡೂರಿನ ಗೋಡೌನಿಗೆ ಸಾಗಿಸಿದ.

ಈ ವ್ಯಾಪಾರದಲ್ಲಿ ಚೆನ್ನಾಗಿ ಲಾಭ ಮಾಡಿ ದೊಡ್ಡೂರಿನಲ್ಲಿ ಒಂದು ಮಳಿಗೆ ತೆಗೆದು ಕೂರಬೇಕೆಂದು ಯೋಚಿಸಿದ. ಹ್ಯಾಗೂ ರಾಮಣ್ಣ ಕಾಂಪ್ಲೆಕ್ಸ್ ಕಟ್ತಾರಂತಲ್ಲ, ಅದರಲ್ಲೊಂದು ಮಳಿಗೆ ನನಗೆ ಬಿಟ್ಟುಕೊಡಲಾರರೇ! ಎಂದು ಸಮಾಧಾನ ಹೇಳಿಕೊಂಡ.
ಸರ್ಕಾರಿ ಅರಣ್ಯದ ಆಳದಲ್ಲಿ ಆನೆಯ ಗಲಾಟೆಗೆ ಹೆದರಿ ಜನ ಸೀಗೆಕಾಯಿ ಆಯದೆ ಬಿಟ್ಟಿದ್ದು ತಿಳಿಯಿತು. ಲಾಭದ ಆಸೆಗೆ ಜೀವದ ಹಂಗುತೊರೆದು, ಹೆಚ್ಚು ಸಂಬಳದ ಆಸೆ ತೋರಿಸಿ ಒಂದಿಬ್ಬರು ಆಳು ಕರೆದುಕೊಂಡು ಅರಣ್ಯದ ಆಳಕ್ಕೆ ಇಳಿದ. ಮೂಟೆ ಮೂಟೆ ತುಂಬಿತಂದು ಗೋಡೌನಿಗೆ ಹಾಕಿದ.
ದೊಡ್ಡೂರಿನ ಗೋಡೌನು ತುಂಬಿ ತುಳುಕಿತು.
ಇದ್ದಿಕುಂಞ ಮಾಲಿನ ಲೆಕ್ಕ ಬರೆದ ನೋಟ್ ಬುಕ್ಕನ್ನು ರಾಮನ ಮುಂದಿಟ್ಟ. ಅದರಲ್ಲಿ ಗಿರಾಕಿಯ ಹೆಸರು, ಕೊಂಡ ಮಾಲು, ಕೊಟ್ಟ ಅಡ್ವಾನ್ಸು, ಸಾಗಾಟದ ಖರ್ಚು, ದಿನಾಂಕ ಎಲ್ಲ ವಿವರವಾಗಿ ನಮೂದಿಸಿದ್ದ.
‘ಹೇಹೇಹೇ, ಒಳ್ಳೇ ಚೆನ್ನಾಗಿ ಬರ್ದಿದ್ದೀಯ ಕಣೋ…ನಿನಗೆ ಈ ಕೆಲ್ಸ ಅಲ್ಲ ಬಿಡು. ಯಾವ್ದಾದ್ರೂ ಒಳ್ಳೆ ಕಂಪ್ನಿಲಿ ಅಕೌಂಟೆಂಟ್ ಆಗಬೇಕು’ ಎಂದು ಬುಕ್ಕನ್ನು ಅವನೆಡೆಗೆ ಹಿಂದೆ ದೂಡಿದ.

‘ಇನ್ನು ಮಾಲಿಲ್ಲ. ಈ ಬುಕ್ಕು ಇಲ್ಲೇ ಇರಲಿ’ ಎಂದ ಇದ್ದಿಕುಂಞ.
ಇದ ಇಟ್ಗಂಡು ನಾನೇನು ಮಾಡ್ಲೋ. ಜನರ ಹತ್ರ ಯಾಪಾರ ಮಾಡಿರಾನು ನೀನು. ನೀನೇ ಇಟ್ಗ’ ಎಂದು ತನ್ನ ವ್ಯವಹಾರದಲ್ಲಿ ಮಗ್ನನಾದ.
ಒಂದೆರಡು ದಿನಗಳಲ್ಲಿ ಮೂರು ಲಾರಿಗಳು ಬಂದು ಶೆಡ್ಡಿನ ಮುಂದೆ ನಿಂತವು. ಲೋಡಾದ ಸೀಗೆಕಾಯಿ ಲಾರಿಗಳು ನಗರದ ಕಡೆ ಹೊರಟುಹೋದವು.
ಮಾರನೇ ದಿನ ಬುಕ್ಕು ಹಿಡಿದು ಇದ್ದಿಕುಂಞ ಬಂದ.
‘ಏನೋ ಇದ್ದಿಕುಂಞ ನಿನ್ನ ತಲೇಲಿ ಸಾಮಾನುಂಟೇನೋ, ಲಾರಿ ಹೋದ ಕೂಡಲೇ ದುಡ್ಡು ಬಂದುಬಿಡುತ್ತಾ. ಅಲ್ಲಿ ಯಾಪಾರ ಆಗಬೇಕು. ಆದಮೇಲೆ ಡಿಡಿ ತಗಬೇಕು. ನಂತರ ಇಲ್ಲಿಗೆ ಕಳಿಸಬೇಕು. ಅದನ್ನು ಬ್ಯಾಂಕಿನಲ್ಲಿ ನನ್ನ ಅಕೌಂಟಿಗೆ ಹಾಕಬೇಕು. ನಂತರ ಅದು ಕ್ಯಾಷಾಗಬೇಕು ಎಂದು ಮುಖದ ಮೇಲೆ ಹೊಡೆದಂತೆ ಹೇಳಿ ಕಳಿಸಿದ.

ಇದ್ದಿಕುಂಞಗೆ ಗಾಬರಿ ಶುರುವಾಯಿತು. ಜನ ಅವನ ಬಿಡಾರಕ್ಕೆ ಎಡತಾಕತೊಡಗಿದರು.
ಎಷ್ಟು ದಿನ ಅಂತ ಜನಕ್ಕೆ ಸಮಜಾಯಿಸಿ ಹೇಳಲು ಸಾಧ್ಯ?
‘ಇದೊಂದು ವ್ಯವಹಾರ ಬೇಗ ಬಗೆಹರಿಸಿಬಿಡಿ ರಾಮಣ್ಣ. ಜನ ಎಲ್ಲಾ ನನ್ನ ಹಿಂದೆ ಬಿದ್ದಿದ್ದಾರೆ’ ಮಾಪಿಳ್ಳೆ ಗೋಗರೆದ.
‘ಅದಕ್ಕೆ ನಾನೇನು ಮಾಡಲೋ ಪೆಕರ’ ಎಂದ ರಾಮ.
‘ನಾಳೆ ಸಂತೆ ಅಲ್ಲವಾ ಮಾರಾಯ್ರೆ, ಜನ ಎಲ್ಲಾ ಒಟ್ಟಿಗೇ ಸೇರುತ್ತಾರೆ. ದುಡ್ಡು ಕೊಡದೇ ಹೋದರೆ ನನಗೆ ಅಂಗಡಿ ಬೀದಿಯಲ್ಲಿ ಮೆಟ್ಟಿನಲ್ಲಿ ಹೊಡೆಯಲಿಕ್ಕೆ ಉಂಟು’ ಇದ್ದಿಕುಂಞ ಬೇಡುವ ದನಿಯಲ್ಲಿ ಹೇಳಿದ.
‘ಹೊಡೆದರೆ ಹೊಡೆಸಿಕೋ ಹೋಗು’ ಎನ್ನುತ್ತಾ ಕತ್ತೆರಾಮ ಕಾಕನಿಗೆ ಬೆನ್ನು ತಿರುಗಿಸಿದ.
ಇದ್ದಿಕುಂಞಗೆ ಎಲ್ಲಾ ಅರ್ಥವಾಯಿತು. ‘ಥತ್’ ಎನ್ನುತ್ತಾ ತಲೆಯ ಮುಂಡಾಸು ತೆಗೆದು ಕೊಡವಿ ಹೆಗಲ ಮೇಲೆ ಹಾಕಿಕೊಂಡು ದಿಕ್ಕು ಕಾಣದೆ ಕತ್ತಲಲ್ಲಿ ಕರಗಿಹೋದ.

ಹಾಡ್ಲಹಳ್ಳಿ ನಾಗರಾಜ್

ಓದುಗರಿಗೆ ವಿಶೇಷ ಸೂಚನೆ:
ನಿಲುವಂಗಿಯ ಕನಸು… ಈಗ ಪಂಜು ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾಗುತ್ತಿದೆ. ಖ್ಯಾತ ಸಾಹಿತಿಗಳಾದ ಹಾಡ್ಲಹಳ್ಳಿ ನಾಗರಾಜ್ ಅವರ ಈ ಕಾದಂಬರಿ ಬಹಳಷ್ಟು ಕಾರಣಕ್ಕಾಗಿ ಮುಖ್ಯವಾದುದು. ಇದನ್ನು ವಾರವಾರ ಓದುತ್ತಾ ಹೋದಂತೆ ನಿಮಗೆ ತಿಳಿಯುತ್ತಾ ಹೋಗುತ್ತದೆ. ಇಲ್ಲಿ ಒಂದು ಸಂಗತಿಯಿದೆ. ಕಾದಂಬರಿ ಮುಗಿದ ಮೇಲೆ ಕಾದಂಬರಿಯ ಬಗ್ಗೆ ಅಭಿಪ್ರಾಯಗಳನ್ನು ಓದುಗರಿಂದ ಕೇಳಲಾಗುವುದು. ಓದುಗರಿಂದ ಬಂದ ಅತ್ಯುತ್ತಮ ಅಭಿಪ್ರಾಯಗಳಿಗೆ ಪುಸ್ತಕ ರೂಪದ ಬಹುಮಾನಗಳನ್ನು ನೀಡಲಾಗುವುದು. ಇನ್ ಯಾಕೆ ತಡ… ಒಂದೊಳ್ಳೆ ಕೃತಿ ಓದಿದ ಅನುಭವದ ಜತೆ ಒಂದೊಳ್ಳೆ ಅಭಿಪ್ರಾಯ, ಚರ್ಚೆ… ಜೊತೆಗೆ ಬಹಳಷ್ಟು ಪುಸ್ತಕಗಳ ಬಹುಮಾನ. ಅಭಿಪ್ರಾಯಗಳ ಜತೆ ನಡೆಯೋಣ ಬನ್ನಿ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x