ಅಷ್ಟಲ್ಲದೇ ಹೇಳ್ತಾರಾ, ಗಂಡಸಿಗ್ಯಾಕೆ ಗೌರಿ ದುಃಖ. ಇಂತಹದೊಂದು ಗಾದೆ ಮಾತು, ಹೆಣ್ಣು ಮಕ್ಕಳು ಬಸಿರು, ಬಾಣಂತನದಲ್ಲಿ ಮತ್ತೆ ಪ್ರತೀ ವರ್ಷ ಗೌರೀ ಹಬ್ಬದ ಪೂಜೆಯ ಸಮಯದಲ್ಲಿ ಹೇಳೇ ಹೇಳ್ತಾರೆ. ಯಾಕೆಂದರೆ, ಬಸಿರು – ಬಾಣಂತನ ಎನ್ನುವದು ಹೆಣ್ಣಿನ ಮರು ಜನ್ಮವೇ. ಆ ನೋವು ಗಂಡಸಿಗೇನೂ ತಿಳಿಯದು ಅಥವಾ ತಿಳೀಬಾರದು ಅಂತ ಹೇಳ್ತಾರೇನೋ. ಆದರೆ ಗೌರಿ ಹಬ್ಬ ಅಂದರೆ, ಸಡಗರ ಸಂಭ್ರಮ. ಅದ್ಯಾಕೆ ಗೌರೀ ದುಃಖ ಆಗಿ ಹೋಗಿದೆ ಅಂತ ನಮ್ಮ ಪದ್ದಕ್ಕಜ್ಜಿಗೇನೂ ತಿಳಿದಿರಲಿಲ್ಲ. ಬಹುಶಃ, ಹಿಂದಿನ ಕಾಲದಲ್ಲಿ ಬಡತನ ಜಾಸ್ತಿ, ಗೌರಿ ಪೂಜೆಗೆ, ನೈವೇದ್ಯಕ್ಕೆ, ಸೀರೆಗೆ, ಮನೆಗೆ ಬರುವ ಹೆಣ್ಣು ಮಕ್ಕಳಿಗೆ ಹಣ ಕಾಸು ಹೊಂಚಿಕೊಳ್ಳುವುದು ಕಷ್ಟವಾಗಿರಬಹುದು ಎನ್ನಲು, ಹಣ ಕಾಸಿನ ತೊಂದರೆ ಎಲ್ಲಾ ಗಂಡಸಿಗೇ ಅಲ್ಲವೇ. ವಾಹನ ಸೌಕರ್ಯವಿಲ್ಲದಿರುವ ಕಾಲದಲ್ಲಿ ಗೌರಿ ಹಬ್ಬಕ್ಕೆ ತೌರು ಮನೆಯವರೆಗೆ ಈ ಮಳೆಗಾಲದಲ್ಲಿ ಹೋಗುವುದು ಕಷ್ಟ ಎಂದರೆ, ಪ್ರವಾಸದ ಹೊರೆ(ಣೆ)ಯೂ ಗಂಡಸರದೇ ಆಗಿತ್ತು. ಹೀಗೀದ್ದೂ ಜನ ಗಂಡಸಿಗ್ಯಾಕೆ ಗೌರಿ ದುಃಖ ಅಂತಾರಲ್ಲಾ ಅದೇ ತಿಳಿದಿರಲಿಲ್ಲ ಮದುವೆಗೆ ಮೊದಲು.
ಆದರೆ, ಯಾವಾಗ ಮದುವೆ ಮಾಡಿಕೊಂಡು, ಗೌರಿ ಪೂಜೆ ಯಾವದು, ಗಣಪತಿ ಪೂಜೆ ಯಾವುದು ಎಂಬುದೇ ತಿಳಿಯದೇ, ಹೇಳಿದಲ್ಲಿ ಹೂವು, ಕುಂಕುಮ, ಮಂತ್ರಾಕ್ಷತೆಗಳನ್ನು ಹೇಳಿದ ಹಾಗೇ ಹಾಕುವಷ್ಟನ್ನು ಪಾಲಿಸುತ್ತಿದ್ದ ಗಂಡನನ್ನು ಪಡೆದ ಮೇಲೆ ತಿಳಿಯತೊಡಗಿತು ಗಂಡಸಿಗ್ಯಾಕೆ ಗೌರಿ ದುಃಖ ಎಂಬ ಮಾತಿನ ಅರ್ಥ. ತಮ್ಮ ಗಂಡನಂತಹ ಪತಿ ಇದ್ದರೆ, ಗೌರಿ ದುಃಖ ಯಾಕೆ ? ಅವರಿಗೆ ಯಾವುದೇ ದುಃಖವೂ ಇರುವುದಿಲ್ಲ ಅಂತ.
ಗೌರೀ ದುಃಖವೋ ಸಂಭ್ರವಮವೋ ಒಟ್ಟಿನಲ್ಲಿ, ಗೌರಮ್ಮ ಬರುವ ಒಂದು ತಿಂಗಳಿನಿಂದ ಮೊದಲೇ ತಯಾರಿ ಶುರು ಮಾಡಬೇಕು. ಮೊಟ್ಟ ಮೊದಲು ಗೌರಮ್ಮನಿಗೇಂತ ಒಂದು ಹೊಸ ವಡವೇ ಖರೀದಿ ಮಾಡಬೇಕು. ಹೆಸರು ಗೌರಮ್ಮನಿಗಾದರೂ, ಆ ದಿನ ಗೌರಿಯ ಮುಂದಿಟ್ಟು, ಸಂಜೆ ತಾವೇ ಧರಿಸುವುದು ತಾನೇ. ಮತ್ತೆ ಆ ದಿನ ಮನೆಗೆ ಬರುವ ಹೆಂಗಸರ ಮುಂದೆ ಹೊಸಾ ವಡವೆಯನ್ನು ತಾವು ಧರಿಸಿಕೊಂಡು ತೋರಿಸದೇ, ಗೌರಿಗೆ ಹಾಕಿದ್ದನ್ನು ತೋರಿಸಿ, ತಾವೇ ಮೆರೆದಾಡಲಿಕ್ಕಾಗುತ್ತದೆಯೇ. ಅಲ್ಲದೇ ಮನೆ ಹೆಂಗಸರೂ ಅಂದ್ರೆ, ಸಾಕ್ಷಾತ್ ಗೌರಿಯೇ ಅಲ್ಲವೇ. ಗೌರಿಗೇನು ಏನು ಆಭರಣ ಹಾಕಿದರೂ ನಡೆಯುತ್ತದೆ. ಅದಲ್ಲದಿದ್ದರೆ, ಗೆಜ್ಜೆ ವಸ್ತ್ರದ ಕಾನ್ಸೆಪ್ಟ ಅಥವಾ ತಾವರೆಯೋ, ಶೇವಂತಿಗೆಯೋ, ಗುಲಾಬಿಯೋ ಒಟ್ಟಿನಲ್ಲಿ ಯಾವುದೋ ಒಂದು ಹೂವಿನ ಕಾನ್ಸೆಪ್ಟ, ಅಥವಾ ಸೀರೆಯ, ಬಳೆಯ, ಗರಿಕೆಯ ಏನಾದರೂ ಒಂದು ಅಂಶವನ್ನು ಮುಂದಿಟ್ಟು ಕೊಂಡು ಅಲಂಕರಿಸಿದರೆ, ವಡವೆಗಳ ಅಲಂಕಾರದ ಅವಶ್ಯಕತೆ ಬರಲಾರದು ಎಂಬುದೆಲ್ಲ ಪದ್ದಕ್ಕಜ್ಜಿಗೆ ಚನ್ನಾಗಿ ಗೊತ್ತು. ಅದಕ್ಕೇ ಅವರು, ಹೊಸ ವಡವೆಯನ್ನು ತಪ್ಪದೇ ಗೌರಿ ಹಬ್ಬಕ್ಕೆ ತಂದು, ಪೂಜೆಯ ಸಮಯದಲ್ಲಿ ಗೌರಿಯ ಮುಂದಿಟ್ಟು, ಸಂಜೆ ತಾವೇ ಧರಿಸುತ್ತಾರೆ. ಈ ವಡವೆ ತರುವುದರ ಜೊತೆಗೆ, ತಂದಿರುವ ವಡವೆಯನ್ನು, ಎಲ್ಲ ವಡವೆಗಳ ಮಧ್ಯದಲ್ಲಿಯೂ ಎದ್ದ ಕಾಣುವಂತೆ ಧರಿಸಿ, “ಹೊಸಾದಾ, ಗೌರಿ ಹಬ್ಬಕ್ಕೆ ತೊಗೋಂಡ್ರಾ” ಅಂತ ಎಲ್ಲರೂ ಕೇಳುವಂತೆ ಧರಿಸಬೇಕಲ್ಲ, ಇದು ಗಂಡಸಿಗೆ ಯಾಕೆ ಅಂತಲೇ ಇರಬೇಕು, ಗಂಡಸಿಗ್ಯಾಕೆ ಗೌರಿ ದುಃಖ ಅಂತ.
ವಡವೆ ಒಂದೇ ಕೊಂಡರಾಯ್ತೇ, ಸೀರೆ ಬೇಕಲ್ಲವೇ, ಮೈತುಂಬಾ ಜರಿ ಇರುವ ಕಾಂಜೀವರಂ ಸೀರೆ ಅಥವಾ ಮೈಸೂರು ಸಿಲ್ಕ ಸೀರೆಯನ್ನು ಕೊಳ್ಳಬೇಕಲ್ಲ. ವರ್ಷಾವಧಿ ಹಬ್ಬ ಅಲ್ಲವೇ. ಇನ್ನು ಈ ಸೀರೆ ಕೊಳ್ಳುವ ಸಡಗರವಂತೂ ಕೇಳೋದೇ ಬೇಡಾ, ಒಂದೇ ಮಾತಿನಲ್ಲಿ ಹೇಳೋದಾದರೆ, ಗಂಡಸಿಗ್ಯಾಕೆ ಸೀರೆ ದುಃಖ ಅಂತ ಹೇಳಬಹುದು. ಮೊದಲು ಪದ್ದಕ್ಕಜ್ಜಿಯ ಬಳಿ ಇಲ್ಲದೇ ಇರುವ ಸೀರೆಯ ಬಣ್ಣ ಹುಡುಕಿಕೊಳ್ಳ ಬೇಕು. ನಂತರ, ಆ ಸೀರೆ ಮೈಸೂರು ಸಿಲ್ಕೊ ಅಥವಾ ಕಾಂಜೀವರಂ ಸೀರೆಯೋ ನಿರ್ದಾರವಾಗ ಬೇಕು. ಇದಂತೂ ತುಂಬಾ ಗಹನವಾದ ವಿಚಾರ. ಕಳೆದ ವರ್ಷ ತಮ್ಮ ಭಜನಾ ಮಂಡಳಿಯವರು ಯಾವ ಯಾವ ಸೀರೆ ಕೊಂಡಿದ್ದರು ಎಂಬುದನ್ನು ನೆನಪಿಸಿಕೊಳ್ಳಬೇಕು (ಮರೆತಿದ್ದರಲ್ಲವೇ), ಅದರ ಡಿಸೈನ್, ಜರಿ, ಸೆರಗು ಎಲ್ಲಾ ನೆನಪಿಸಿಕೊಂಡೇ ನಿರ್ಧರಿಸಬೇಕು. ಇಷ್ಟಾದರೆ, ಸೀರೆ ಖರೀದಿಯ ಅರ್ಧ ನಿರ್ಧಾರವಾದಂತೆ. ಮುಂದೆ ಎರಡು ದಿನ ತಿರುಗಿ, ತಂದ ಸೀರೆ, ಮನೆಗೆ ಬಂದಾಗ. ಯಾಕೋ ಬಣ್ಣ ಡಲ್, ಗಾಡಿ ಎಲ್ಲಾ ಶುರುವಾಗತ್ತೆ. ಇದೆಲ್ಲಾ ಆದರೆ, ಮುಗೀತಾ, ಇಲ್ಲವೇ ಇಲ್ಲ.
ಇನ್ನೊಂದು ಅಂಕ ಪ್ರಾರಂಭ ಅಷ್ಟೇ, ತಂದಿರೋ ಹೊಸಾ ಸೀರೆಗೆ ಫಾಲ್, ಪೀಕೋ ಇದೆಲ್ಲದರ ಜೊತೆಗೆ ಸೆರಗಿಗೆ ಕುಚ್ಚು ಕಟ್ಟಿಸಬೇಕು, ಸೀರೆಯ ಡಿಸೈನ್ ಗೆ ಮ್ಯಾಚಿಂಗ್ ಆಗುವ ಡಿಸೈನ್, ಕಲರ್ ಹುಡುಕಿ. ನಂತರ ಅದರ ಬ್ಲೌಸ್ ಹೊಲಿಸಬೇಕು. ಈಗ ಹಬ್ಬದ ಗಡಿಬಿಡಿ. ಯಾವ ಟೇಲರ್ ಕೂಡಾ ಹೇಳಿದ ದಿನಕ್ಕೆ ಹೊಲಿದು ಕೊಡೋದಿಲ್ಲ. ಮತ್ತೆ ಚನ್ನಾಗಿ ಹೊಲಿಯಬೇಕು, ಹೇಳಿದ ಸಮಯಕ್ಕೆ ಕೊಡಬೇಕು. ಎರಡನ್ನೂ ನಿರ್ಧರಿಸಿದ ನಂತರ ಬ್ಲೌಸ್ ಗೆ ಡಿಸೈನ್ ಹುಡುಕಬೇಕು. ಮೈಸೂರು ಸಿಲ್ಕ ಸೀರೆಯಾದರೆ, ಜರಿ ಜಾಸ್ತಿ ಇರಲ್ಲ, ಅದಕ್ಕೇ ತುಂಬಾ ವರ್ಕ ಇರುವಂತೆ ಬ್ಲೌಸ್ ಇರಬೇಕು. ಕಾಂಜೀವರಂ ಸೀರೆಗೆ ಜರಿ ಜಾಸ್ತಿ, ಅದಕ್ಕೇ ಇನ್ನೂ ಜಾಸ್ತಿ ವರ್ಕ ಮಾಡಿಸಿದರೇ ಚನ್ನಾಗಿರುತ್ತದೆ ಎಂಬೆಲ್ಲಾ ಅಂಶಗಳೂ ತಲೆಯಲ್ಲಿರಬೇಕು. ಇವೆಲ್ಲಾದರಲ್ಲಿ ನಮ್ಮ ಪದ್ದಕ್ಕಜ್ಜಿಯವರು ತುಂಬಾ ಜಾಣರು ಬಿಡಿ. ಇದೆಲ್ಲಾ ಕಷ್ಟ ಗಂಡಸಿಗೆ ಯಾಕೆ ಅಂತಲೇ ಇರಬೇಕು, ಗಂಡಸಿಗ್ಯಾಕೆ ಗೌರಿ ದುಃಖ ಅಂತ.
ಬರೀ ಬ್ಲೌಸ್ ಡಿಸೈನ್ ಹೇಳಿದರೆ ಆಯ್ತಾ, ಬ್ಲೌಸಿಗೆ ತೋಳುಗಳ ಮಾದರಿ, ಕತ್ತಿನ ವಿನ್ಯಾಸ, ಅವುಗಳಿಗೆ ಯಾವ ರೀತಿ ಚಿನ್ನಾರಿ ಮೆತ್ತಿಸ ಬೇಕು. ಕಳೆದ ಬಾರಿ, ಯಾಕೋ ಆ ಟೇಲರ್ ಸುಮಾನ ಬ್ಲೌಸ್ ಸರಿಯಾಗೇ ಹೊಲಿದಿರಲಿಲ್ಲ. ಸೀರೆ ಚನ್ನಾಗಿದೆ ಬ್ಲೌಸೇ ಚನ್ನಾಗಿಲ್ಲ ಅಂತ ಬಂದವರೆಲ್ಲಾ ಮುಖಕ್ಕೆ ಹೊಡೆದಂತೆ ಹೇಳಿದ್ದರು. ಕತ್ತಿನ ಬಳಿ ಕೆಳಗಿಳಿಯದೇ, ತೋಳಿನಿಂದ ಮೇಲೇರದೇ, ಮೈ ಚರ್ಮಕ್ಕೆ ಸರಿಯಾಗಿ ಹೊಂದಿಕೊಂಡಂತಿರುವ ಬ್ಲೌಸ್ ಧರಿಸದಿದ್ದರೆ ಏನು ಚಂದ. ಇದೆಲ್ಲಾ ನೋಡಿ ತಾನೇ ಹೇಳೋದು, ಗಂಡಸಿಗ್ಯಾಕೆ ಗೌರಿ ದುಃಖ.
ಮತ್ತೆ ಈ ಸೀರೆಗೆ ಮ್ಯಾಚಿಂಗ್ ಬಳೆಗಳು ತರಬೇಕು. ಇಲ್ಲಾಂದರೆ, ಪಾರ್ಲರ್ ನವರಿಗೆ ಹೇಳಿದರೂ ಸಾಕು. ವಾಟ್ಸಾಪ್ ನಲ್ಲಿ ಸೀರೆಯ ಫೋಟೋ ಕಳಿಸಿದರೆ ಅವರೇ, ಬಳೆ-ಬಿಂದಿ ಹೊಂದಿಸಿರುತ್ತಾರೆ. ಅರೆ, ಮರೆತೇ ಹೋಯಿತು, ಬೇಗ ಬೇಗ ಗೌರಮ್ಮ ಪೂಜೆಯನ್ನು ಮಾಡಿ, ಊಟ ಮಾಡಿ, ಪಾರ್ಲರಿಗೆ ಹೋಗಬೇಕು. ಮುತ್ತೈದೆಯರು ಮನೆಗೆ ಬರುವ ಹೊತ್ತಿಗೆ ಸರಿಯಾಗಿ, ಪದ್ದಕ್ಕಜ್ಜಿ ಅಲಂಕರಿಸಿಕೊಂಡು ನಿಂತಿರದಿದ್ದರೆ ಏನನ್ನುತ್ತಾರೆ ಬಂದವರೆಲ್ಲಾ. ಅದಕ್ಕೇ ಹೇಳಿರಬೇಕು ಗಂಡಸಿಗ್ಯಾಕೆ ಗೌರಿ ದುಃಖ ಅಂತ.
ಗಂಡಸರದೇನಿದ್ದರೂ ಇಲ್ಲಿ, ಪಾರ್ಲರಿಗೆ ಬಿಟ್ಟು ಬರುವುದು ನಂತರ ಫೋನು ಮಾಡಿದಾಗ ಹೋಗಿ ಕರೆದುಕೊಂಡು ಬರುವುದು ಅಷ್ಟೇ. ಪಾರ್ಲರಿನಿಂದ ಹೊರ ಬಂದ ಹೆಂಗಸರಲ್ಲಿ ಪದ್ದಕ್ಕಜ್ಜಿಯನ್ನು ಹುಡುಕುವ ಕಷ್ಟವನ್ನು ಅವರು ಗಂಡಸರಿಗೆ ಬಿಡುವುದಿಲ್ಲ, ಪಾಪ, ತುಂಬಾ ಸಹಕರಿಸುತ್ತಾರೆ. ತಾವೇ ಗಂಡನ ಬಳಿಗೆ ಬಂದು ರೀ ಹೋಗೋಣ ಎನ್ನುತ್ತಾರೆ. ಇಲ್ಲದಿದ್ದಲ್ಲಿ, ಪಾಫ ಪದ್ದಕ್ಕಜ್ಜಿ ಎಲ್ಲಿ, ಯಾರು ಎಂದು ಗಂಡನಿಗೆ ಹೇಗೆ ತಿಳಿಯ ಬೇಕು. ಅದಕ್ಕೇ ಹೇಳಿರಬೇಕು ಗಂಡಸಿಗ್ಯಾಕೆ ಗೌರಿ ದುಃಖ ಅಂತ.
ಇದಿಷ್ಟೇ ಅಲ್ಲ, ಹಬ್ಬಕ್ಕೆ ಬ್ಲೌಸ್ ಪೀಸ್, ಬಳೆ-ಬಿಚ್ಚೋಲೆ, ಮೊರ, ಗೌರಮ್ಮ, ಹಣ್ಣು ಹೂವು, ಅಡುಗೆ, ಪೂಜೆ ಇಂತಾವೆಲ್ಲವನ್ನೂ ನಮ್ಮ ಪದ್ದಕ್ಕಜ್ಜಿ ಗಂಡನಿಗೆ ಹೇಳೋದೇ ಇಲ್ಲ. ಪಾಪ, ಅಷ್ಟರಮಟ್ಟಿಗೆ, ಗಂಡಸರು ಫ್ರೀ. ಮತ್ತೆ ಅಷ್ಟಲ್ಲದೇ ಹೇಳ್ತಾರ, ಹಿರಿಯರು, ಗಂಡಸಿಗ್ಯಾಕೆ ಗೌರಿ ದುಃಖ ಅಂತ,
ಗಂಡಸರಿಗೇನು ಕೇವಲ ಹೆಂಡತಿ ಹೇಳಿದಂತೆ ಕೇಳಿದರಾಯ್ತು. ಅದಕ್ಕೇ ಹೇಳೋದು ಗಂಡಸಿಗ್ಯಾಕೆ ಗೌರಿ ದುಃಖ ಅಂತ.
–ಡಾ. ವೃಂದಾ ಸಂಗಮ್
ಸಾಕಪ್ಪಾ ಸಾಕು. ಈ ಗೌರಿ ದುಃಖ ಇಷ್ಟೆಲ್ಲಾ ಇರತ್ತೆ ಅಂತ ಗೊತ್ತೇ ಇರ್ಲಿಲ್ಲ. ಗಂಡಸರಿಗೆ ಇದು ಬೇಡವೇ ಬೇಡ. ಹೆಂಡತಿ ಕೇಳಿದಷ್ಟು ದುಡ್ಡು ಕೊಟ್ಟು ಅವರ ಪಾಡಿಗೆ ಅವರು ಉಳೀತಾರೆ. ಅದೇ ಚಂದ.