ಪಂಜು ಕಾವ್ಯಧಾರೆ

ಅವಳ ನೋವ ನೆನೆಯುತ.
ಅವಳ ಮೋಹದ ಬಳ್ಳಿ ಎಲ್ಲೆಲ್ಲೋ ಚಿಗುರಿ
ಅರಳಿ… ಒಣಗಿ.
ಒಡಲ ದಾವಾನಲ ಕಮ್ಮನೆ ಕುಡಿದು.. ಹರಿದು.
ಎಂತಾ ಮರವೇ ಅದು!
ಎದೆಯಿಂದ ಎದೆಗೆ ಗುಂಯ್ ಗುಡುತ
ಥೇಟು ಭ್ರಮರ ಬೃಂಗ.
ಸುಳಿ ಗಾಳಿಗೆ ಹಾರಿ.. ತೂರಿ ಹಬ್ಬಿದ
ಪರಿಮಳದಲ್ಲಿ…
ಕಾಲಿಟ್ಟಲ್ಲಿ ಕೊಲೆ.. ನಕ್ಕರಂತೂ ಸುಲಿಗೆ
ಕತ್ತಿ ಕಟಾರಿಗಳ ಮೇಳ!
ವಾರನ್ನ .. ಬಿಕ್ಷಾನ್ನ ಹಗಲೆನ್ನದೆ ಇರುಳೆನ್ನದೆ
ಗಿರ ಗಿರ ತಿರುಗಿ ಅಲೆದು!
ನೀಲಿ ಕಡಲಿಗೆ ಮುಖ ಮಾಡಿ ದಾಹ
ದಣಿವ ನೀಗಿದವಳು.
ನೆನೆಯುತ್ತೇನೆ ಆ ಮುಖವನ್ನು
ಸ್ಪಷ್ಟ ವಾಗಿ ಮೂಡುವುದಿಲ್ಲ!
ಭೂರ್ಗರೆವ ಮಳೆಯ ಸಿಡಿಲಬ್ಬರದಲ್ಲಿ
ಫಳರನೆ ಮಿಂಚು.. ಹೃದಯ ಚೆಲ್ಲಾಡಿ
ಕರುಳ ಕರೆಗೆ ಮರುಗಿ ತಿರುಗಿ ಬಂದಂತ
ಮಮತೆ.
ಎಂತ ಚೆಂದದ ಬೊಂಬೆ ಯಾರು ಹೆತ್ತ ಮಗಳೋ!
-ಅಣ್ಣಯ್ಯ ಸ್ವಾಮಿ

ನಾನು ಅಫ್ಘನ್

(ಅಫ್ಘಾನಿಸ್ತಾನದ ಸ್ವಗತ ಕವಿತೆ)

“ನಾನು ಅಫ್ಘನ್” ತಾಲಿಬಾನರ ದುರಾಡಳಿತಕ್ಕೆ ತತ್ತರಿಸಿ
ಹೂವಿನ ಪಕಳೆಯಂತಾಗಿರುವ ಅಫ್ಘನ್;
ಮುಸಲ್ಮಾನ ನಾಮವ ಪೂಸಿಕೊಂಡು ಬಹುಕಾಲ ಮೆರೆದು
ಇದೀಗ ಮಾನವೀಯತೆಯೆಡೆಗೆ ಕೈ ಚಾಚಿರುವ ಅಫ್ಘನ್

ಭಾರತದಲ್ಲಿದ್ದ ಅರೆ ಬೆತ್ತಲೆ ಫಕೀರನಂತ ಗಾಂಧಿಯ ಜನನ
ಇಲ್ಲಿಯೂ ಆಗಲಿ ಎಂದು ತಹತಹಿಸುತ್ತಿರುವ ಅಫ್ಘನ್;
ಗುಂಡುಗಳ ಸುರಿಮಳೆ ಸದ್ದಿಗೆ
ನಲುಗಿ ಹೋಗಿ ಇಂದು ಶಾಂತಿಗಾಗಿ ಕಣ್ಣೀರಿಡುತ್ತಿರುವ ಅಫ್ಘನ್

ಕಾಮೋನ್ಮಾದದ ಪರಕಾಷ್ಠೆಯಲ್ಲಿ ಮಿಂದು
ಬಂದಂತಿರುವ ಲೋಲುಪನಿಂದ
ನನ್ನ ನೆಲದ ಹೆಂಗಳೆಯರ ರಕ್ಷಿಸಲಾಗದೆ ತಲೆ ತಗ್ಗಿಸಿರುವ ಅಫ್ಘನ್;
ಧರಿಸಿದ ದಿರಿಸಿನ ಮೇಲೆಲ್ಲಾ ಕೆಂಪು ರಂಗು ಚೆಲ್ಲಿ
ಅಟ್ಟಹಾಸ ಮೆರೆಯುತ್ತಿರುವ ಮೃಗಗಳ
ನೋಡಲಾಗದೆ ಧಗಧಗಿಸುತ್ತಿರುವ ಅಫ್ಘನ್

ಇನ್ನಾದರೂ ನೀವೆಲ್ಲರೂ ಒಕ್ಕೊರಲಿನಿಂದ ಬನ್ನಿ ನನ್ನ ರಕ್ಷಣೆಗೆ;
ಅಂದು ಇರಾನ್ ಇಂದು ನಮ್ಮೀ ಅಫ್ಘನ್ ನಾಳೆ ಪಾಕಿಸ್ತಾನ್ ನಾಡಿದ್ದು?
ನೀವಾಗಬಹುದು ಇಂದು ನಮಗಾದ ಗತಿ ನಿಮಗಾಗುವುದಿಲ್ಲ
ಎಂಬುದಕ್ಕೆ ಏನು ಕರಾರು? ವಸುದೈವ ಕುಟುಂಬಕಂ ಭಾವನೆಯಲ್ಲಿ
ಬದುಕಿ ಬಿಡೋಣ ಎತ್ತದೆ ತಕರಾರು

ಬವಳಿ ಬಿದ್ದು ಹೋಗಿದ್ದೇನೆ
ನಸೀಬು ಖೊಟ್ಟಿಯಾಗಿ ಹೋಗಿದೆ;
ಇಡೀ ಈ ಅಫ್ಘನ್ನಿಸ್ತಾನವೇ ಸಾವಿನ ಪ್ರಲಾಪದ
ಬೆರಗಿನೊಂದಿಗೆ ಊಳಿಡುತ್ತಿದೆ; ಹೋ ಬನ್ನಿ ನಾನು ನಿಮ್ಮದೇ ಸಹೋದರ
ಅಫ್ಘನ್

-ದೀಕ್ಷಿತ್ ನಾಯರ್

ಕುರುಡುತನ

ಪ್ರಕ್ರತಿಯೇ ದೇವರು
ಅದರೊಳಗೊಂದು ಮರ ದೇವರು
ಓ ಮನಸೇ,
ನಿನಗೆ ಮೋಕ್ಷದ ಭಯವೇ?

ಕುಂಕುಮವಿಟ್ಟು,
ಬಳೆಯ ನೇತಾಡಿಸಿ,
ಹೂವನ್ನಿಟ್ಟು,ಆರತಿ ಎತ್ತಿ
ಪೂಜಿಸಿದ ಮರವೇ,
ನಾಸ್ತಿಕನಿಗೆ ನೀನು ಸೌದೆಯಲ್ಲವೇ?

ಆಧ್ಯಾತ್ಮಿಕತೆ ಇಲ್ಲದೆ,
ಧಾರ್ಮಿಕತೆಯ ಮುಖವಾಡದ
ಜನರಿಗೆ ಎಲ್ಲರೂ, ಎಲ್ಲವೂ,
ದೇವರಾಗುವುದೇ?

ತೆಂಗು, ಅಡಿಕೆ, ಮಾವು,
ಹಲಸು, ಬೇವು,
ಆ ಮರ, ಈ ಮರ
ಎಲ್ಲವೂ ದೇವರು ಯಾಕಾಗುವುದಿಲ್ಲ?

ಭಕ್ತಿಯ ಕುರುಡುತನವೇ,
ಕಣ್ತೆರೆದು ನೋಡು.
ಪ್ರೀತಿ, ಸ್ನೇಹ, ಸಂಬಂಧ,
ತಾಳ್ಮೆ, ಮೌಲ್ಯ, ಸದಾಚಾರ,
ಅಹಿಂಸೆ, ಬಂಧುತ್ವ.
ಮಾನವೀಯತೆಯೇ
ನಿನಗೆ ದೇವರಲ್ಲವೇ?

-ಉರ್ಬನ್ ಡಿಸೋಜ, ಮೂಡಬಿದರೆ.

ಗಜಲ್

ನಿತ್ಯ ಸುರಿವ ಕಣ್ಣೀರ ಒರೆಸಲು ಕೈ ನಡುಗುತಿದೆ ಸಾಕಿ
ಸಾಕ್ಷಿ ಇಲ್ಲದ ಕಣ್ಣೀರಿಗೆ ಸಾಂತ್ವನದ ಮಾತು ಹೇಳಬೇಕಿದೆ ಸಾಕಿ

ಜವರಾಯನ ಮನೆಯಂಗಳದಿ ಧರಣಿ ಕಾಯುತಿಹಳು ನಿನ್ನನು
ಬರಿ ಭರವಸೆಯ ಮಾತು ಕೇಳಿ ಕಿವಿ ನೋಯುತಿದೆ ಸಾಕಿ

ಒಣ ಜಂಭದ ನಡೆ ನುಡಿಗೆ ನಾಲಿಗೆಯ ಪಸೆ ಆರಿದೆ
ಹುಸಿ ಮಾತಿನ ಹೊಸಕುವಿಕೆಗೆ ಜೀವ ಕೀವಾಗಿದೆ ಸಾಕಿ

ವಸುಧೆಯ ತುಂಬಾ ನಿನ್ನ ನೆನೆದು ನಾ ಮೌನವಾಗಿ ಕುಳಿತಿರುವೆ
ಎಂದೋ ಆಸೆಗಳು ಕಮರಿ ಬದುಕು ಬರಡಾಗಿ ಹೋಗಿದೆ ಸಾಕಿ

ನಾಳೆಯ ಕನಸಿಗೆ ನೀರುಣಿಸು ಬಾ ಮರುಳನೆದೆಯ ಬರಡು ಅಂಗಳಕೆ
ಹೂವು ಲತೆಗಳ ಹಾಸಿ ಹಾದಿಗುಂಟ
ಈ ಜೀವ ಕಾಯುತಿದೆ ಸಾಕಿ

ಮರುಳಸಿದ್ದಪ್ಪ ದೊಡ್ಡಮನಿ ಹುಲಕೋಟಿ


ಸುಂದರ ವಿಗ್ರಹವಾದಂತೆ ಜೀವನ

ನಗದೆ ಬಿದ್ದುಕೊಂಡ ಕಗ್ಗಲ್ಲ ಶಿಲೆಯಲ್ಲಿ
ಅಡಗಿದ ನಗುವ ಶಿಲ್ಪಗಳ ಕಂಡ ಶಿಲ್ಪಿಯು

ಬೇಕಾದ್ದನ್ನು ಶಿಲೆಯಲ್ಲಿಯೇ ಉಳಿಸಿ
ಸೀಳು ಸುಳಿಗಳ ಅನುಲಕ್ಷಿಸಿ ಬಡಿದು
ಬೇಡಾದ್ದನ್ನುಉಳಿ ಪೆಟ್ಟಿನಿಂದ ಕಳೆದು
ಉಳಿದು ಪಡೆದಾಕಾರ ಸಾಣೆ ಹಿಡಿದು
ತಿಕ್ಕಿ ತೀಡಲು ಸುಂದರ ವಿಗ್ರಹವಾದಂತೆ

ಅರಿ ಷಡ್ವರ್ಗಗಳ ಗುಣ ಲಬ್ದತೆಯ
ನಾನೆಂಬ ಋಣಾತ್ಮಕತೆ ಸೋಸಿ ಕಳೆದು
ಪ್ರೀತಿ ಪ್ರೇಮಗಳ ಧನಾತ್ಮಕತೆಗಳ
ಉಡಿಯ ಕಟ್ಟಿ ಉಳಿಯಲು ಬಿಟ್ಟು

ತಿಕ್ಕಿ ತೊಳೆದ ಸರಳ ಮಾನವೀಯತೆ
ತಿಳಿದು ತೀಡಿ ನಯ ವಿನಯರಾಗಿ
ಹೊಳೆದಾಗ ತಾನೇ ಸುಂದರ ಜೀವನ
ಭಾವಗೀತೆಯೊಂದನ್ನು ಗುಣುಗಿದಂತೆ

-ಮೋಹನ. ವೀ. ಹೊಸೂರ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x