ನಲ್ಮೆಯ ದೀಪ್ˌ
ನಮ್ಮಿಬ್ಬರ ಪ್ರೀತಿಯ ಅನುಸಂಧಾನಕ್ಕೆ ಮತ್ತೆ ಮತ್ತೆ ನೆಪವೊಡ್ಡುತ್ತ ನಿನ್ನ ಪ್ರೀತಿಯ ಬೀಜ ನನ್ನ ಮನಸ್ಸಿನ ಕನ್ನೆಲದ್ದಲ್ಲಿ ಬಿದ್ದು ಗಿಡವಾದ ಕ್ಷಣವನ್ನು ಸರಳವಾಗಿ ವಿವರಿಸಲಾಗುತ್ತಿಲ್ಲ, ಮದುವೆಯಾಗಿ ಪ್ರೀತಿಸಿದವರು ನಾವು. ನಮ್ಮ ಒಂದು ದಶಕದ ಹಾದಿಯ ದಿನಗಳು ಬರಿ ದಿನಗಳಲ್ಲˌ ಮಳೆಯ ಹನಿಗಳು. ಅದನ್ನು ನಾನ್ನಲ್ಲದೆ ಇನ್ಯಾರು ಸಂಭ್ರಮಿಸುತ್ತಾರೆ. ನನ್ನ ಬದುಕಿನ ಪ್ರತಿ ನಿಮಿಷದ ಉಲ್ಲಾಸ ನೀನುˌ ಪ್ರತಿ ದಿನ ಎದ್ದ ಕೂಡಲೆ ನನ್ನ ಮನದಲ್ಲಿ ಮೂಡುವ ಪ್ರೀತಿಯ ಗೀತೆ ನೀನುˌ ನೀನು ಜೊತೆಯಲ್ಲಿದ್ದರೆ ಪೂರ್ಣ ಎಂಬ ಭಾವ ನನ್ನದು. ಜಗತ್ತಿನ ಎಲ್ಲ ಅಚ್ಚರಿಗಳನ್ನು, ಪುಟ್ಟ ಪುಟ್ಟ ಖುಷಿಗಳನ್ನು ಬದುಕಿಗೆ ನೀಡಿದವನು ನೀನು. ನಾವಿಬ್ಬರು ಸಾಗಿದ ಬದುಕಿನ ಹಾದಿಯಲ್ಲಿ ನನ್ನನ್ನು ನಿನ್ನ ಸಂವೇದನೆಯ ಉಲಿಯ ಉಯ್ಯಾಲೆಯಲ್ಲಿ ಕೂರಿಸಿ ಜೀಕುತ್ತಾ ಬೆಳಕಿನ ಬೆರಗು ಮೂಡಿಸುವ ಕಲೆಗಾರ. ತಾಯಿಯಂತೆ ನನ್ನನ್ನು ಪುಟ್ಟ ಮಗುವಾಗಿ ಸಲಹುವ ನೀನು ಎಷ್ಟೊಂದು ಸಹನಾಮಯಿ. ಜೀವನದ ಹಾದಿ ಎಷ್ಟೇ ಕಠಿಣವಾಗಿದ್ದರು ಕನಸುಗಳನ್ನು ಹೊತ್ತು ನಿನ್ನೊಂದಿಗೆ ನಡೆಯುವಾಗ ಅದು ಎಷ್ಟೊಂದು ಹಿತ. ನಿನ್ನ ಜೊತೆಗಿನ ಪಯಣ ನನಗೆ ವಸಂತದ ಖುಷಿಯನ್ನು ನೆನಪಿಸುತ್ತದೆ. ನಮ್ಮಿಬ್ಬರ ಪ್ರೇಮದ ಕಾವ್ಯವಾಗಿ “ಆಲಿಪ್ತ” ಬದುಕಿಗೆ ಅಡಿಯಿಟ್ಟಿದ್ದಾಳೆ.
ಬಾಣಂತನದ ನೆಪದಲ್ಲಿ ನಿನ್ನನ್ನು ಬಿಟ್ಟಿದ್ದ ಆ ಆರು ತಿಂಗಳು ಅನಿವಾರ್ಯದ ಮಿಡುಕಾಟವಾಗಿತ್ತು , ಆಗೆಲ್ಲ ನಿನ್ನ ಆರದ ಪ್ರೀತಿಯ ಸಾಂಗತ್ಯವ ನೆನೆಯುತ್ತ ನಮಿಬ್ಬರ ಪೋಟೋಗಳನ್ನು ಕೆದಕಿ ಕೂರುತ್ತಿದ್ದೆˌನೆನಪು ಎಷ್ಟು ಸುಖದಾಯಕ. ಸಮುದ್ರದಂತೆ ಉಕ್ಕುವ ನಿನ್ನ ಪ್ರೀತಿ ಎಂದು ಬತ್ತದ ಅಂತರ್ಜಲ. ನನ್ನೆಲ್ಲಾ ಅತ್ಯುತ್ತಮಗಳಲ್ಲಿ ನಿನ್ನ ಪ್ರಭಾವ ದಟ್ಟವಾಗಿದೆ. ನನ್ನೆಲ್ಲಾ ಬಯಕೆಗಳ ಸಾಂಗತ್ಯ ನೀನು. ನನ್ನ ಅಸ್ತಿತ್ವದ ಇರುವಿಕೆಗೊಂದು ಐಹಿಕ ಕಾರಣ ನೀನು. ನದಿಯ ಹರಿವಿನ ಗುಂಟ ತೇಲುವ ದೋಣಿಯಂತೆ ನಮ್ಮ ಬದುಕಿನ ಪಯಣˌ ಕೆಲವೊಮ್ಮೆ ಅದು ಗಂಭೀರˌ ಆಳ ಸುಳಿಗಳಿಂದ ಕೂಡಿದ್ದರು ನಿನ್ನ ಸಂಯಮದಿಂದ ಅದು ಹಗುರಾಗಿದೆ. ನಾನು ಹೊಸ ಮಾಲೆಯನ್ನು ಕಟ್ಟುತ್ತೇನೆˌ ಮುಡಿಯಲು ನೀನಿಲ್ಲದಿದ್ದರೆ ಅದು ಬಾಡಿ ಹೋಗುವುದಿಲ್ಲವೇ ಎಂದು ಕಾವ್ಯ ದನಿಯ ಮಾಧುರ್ಯದಲ್ಲೇ ನನ್ನನ್ನು ಗೆದ್ದಿರುವ ನೀನು ನನ್ನ ಬದುಕಿನ ಅಪೂರ್ವ ಗೆಳೆಯ. ನೀನೊಬ್ಬ ಸಂಯಮಶೀಲ ಸಂತ. ಬದುಕಲ್ಲಿ ಪ್ರೀತಿಯ ಆಯಾಮಗಳನ್ನು ಅರ್ಥೈಸಿದ ಗಣಿತಜ್ಞ. ಶೂನ್ಯದೊಳಗೆ ರೂಪಕಗಳ ನವಿಲುಗರಿಯನ್ನಿಟ್ಟವನು ನೀ. ಪ್ರತಿ ಜಗಳಗಳ ಕೊನೆಯಲ್ಲು ನಮ್ಮ ಪ್ರೀತಿ ಮಂಡಿಯೂರಿ ಕನಸ ಸ್ವಾತಿಮುತ್ತಾಗುತ್ತ ಗಟ್ಟಿಗೊಳ್ಳುವ ಪರಿ ನನಗೆ ಇಂದಿಗೂ ಸೋಜಿಗವೆ.
ಅನಂತದೊಳಗೆ ಬಣ್ಣಗಳು ಮೂಡುವಂತೆˌ ನನ್ನ ಕೈಯ ಹಿಡಿದು ನಡೆದು ಹೊಸತನದ ಹಾಡು ಮೂಡಿಸುವ ಕನಸುಗಾರ ನೀನು. ಆಲಿಪ್ತ ಹುಟ್ಟಿ ಮಳೆಯ ಖುಷಿಯನ್ನು ನೆನಪಿಸಿದ್ದಾಳೆಂದು ಅವಳನ್ನು “ಹನಿ” ಎಂದು ಕರೆವ ನೀನುˌ ಅವಳು ಹುಟ್ಟಿದ ದಿನ ಭಾವುಕನಾಗಿ ನನ್ನನ್ನು ತಬ್ಬಿ ಹಣೆಗೆ ಹೂ ಮುತ್ತಿಟ್ಟು thanks for the best gift ಎಂದು ಮುಗ್ಧವಾಗಿ ಹೇಳಿದ್ದು ಇಂದಿಗೂ ನೆನಪಾಗಿ ಮಧುರವಾಗಿ ನೇವರಿಸುವುದಲ್ಲದೆˌ ನಿನ್ನ ಪ್ರೀತಿಯನ್ನು ಮತ್ತೊಮ್ಮೆ ಪರಿಚಯಿಸುತ್ತದೆ. ನಮ್ಮ ಪ್ರೀತಿ ನಿತ್ಯಮದುವಣಗಿತ್ತಿ ಅದು ಸಿರಿಗಿರಿಗಳೆತ್ತರದ ಕಣಿವೆ ಕಣಿಗಾತಿ ಚಲುವು. ದೀಪ್, ನಿನ್ನ ಪ್ರೀತಿ ಮೂಲಭೂತವಾಗಿ ಬಣ್ಣ, ರಸ, ರೂಪ, ಗಂಧಗಳನ್ನು ಮೋಹಿಸುವ ಸಂವೇದೀಸುವ ಚಕಿತಚೇತನ. ನಿನ್ನ ಎದೆಯಬೆಳುದಿಂಗಳನು ನನ್ನ ಮುಡಿಗೆ ಮುಡಿಸಿ ಚಿಗುರ ಹೊನ್ನಿನ ಕಾಂತಿ ಹೊಳೆದಂತೆ ಮಾಡುವೆ. ನಿನ್ನ ಪರಿಚಿತ ಪ್ರೀತಿ ಅನುಭವಿಸಿ ಅನುಭಾವಿಸಿದ ಮರುಕ್ಷಣ ನನ್ನ ಅಯಸ್ಕಾಂತದಂತೆ ಆಕರ್ಷಿಸುವುದು ನಿನ್ನ humorous nature, ಸುಮ್ಮನಿದ್ದರು ಜೀವಚೈತನ್ಯ ಹೊಮ್ಮಿಸುವ ನಿನ್ನ subtle humor ನನ್ನನ್ನು ಮತ್ತಷ್ಟು ಜೀವಂತಗೊಳಿಸುತ್ತದೆ. ನಮ್ಮಿಬ್ಬರ ಪ್ರೀತಿಯ ಓದು ಕಡಲನ್ನು, ಆಕಾಶವನ್ನು ನೋಡಿದಂತೆ. ಪೂರ್ತಿಯಾಗಿ ತುಂಬಿಕೊಳ್ಳಲಾಗದ ಅವುಗಳ ಅಗಾಧತೆ ನಮ್ಮನ್ನು ಆವರಿಸುವುದಲ್ಲದೆ, ನಮ್ಮಲ್ಲಿ ದೊಡ್ಡ ಜಗತ್ತೊಂದನ್ನು ಸೃಷ್ಟಿಸುತ್ತದೆ.
ಕಣ್ತುಂಬಿಕೊಂಡಾಗಲೆಲ್ಲ ಹೊಸ ಅರ್ಥಗಳನ್ನು ಧ್ವನಿಸುತ್ತವ ಅದರ ಸೌಂದರ್ಯ, ನಿಗೂಢತೆ ನಮ್ಮನ್ನು ಪ್ರತಿಕ್ಷಣ ಕಾಡದೇ ಇರದು. ಬದುಕಿನ ಪಯಣದಲ್ಲಿ ನಮ್ಮ ಪ್ರೀತಿ ಕತೆಯಲ್ಲ, ಮಾಹಿತಿಯಲ್ಲ, ಅನುಭವಗಳ ಜೋಡಣೆಯಲ್ಲ, ಕಾದಂಬರಿಯಲ್ಲ, ಭಾವಗೀತೆಯಲ್ಲ, ತತ್ತ್ವವಲ್ಲ, ನೆನಪುಗಳ ಮೊತ್ತ ಕೂಡ ಅಲ್ಲ, ಆದರೆ ಇವೆಲ್ಲವೂ ಹೌದು. ಈ ಎಲ್ಲದರಿಂದ ಒಂದೊಂದು ಅಂಶವನ್ನು ತೆಗೆದುಕೊಂಡು ತನ್ನದೇ ಕೌದಿಯನ್ನು ಅದು ಹೊಲಿದುಕೊಂಡು ನಮ್ಮನ್ನು ಬೆಚ್ಚಗಿರಿಸುತ್ತದೆ, ಮುದಗೊಳಿಸುತ್ತದೆ. ಗೀಜಗನ ಹಕ್ಕಿಯೊಂದು ಎಲ್ಲಿಂದಲೋ ನಾರಿನ ಎಳೆಗಳನ್ನು ತಂದು ನೇಯ್ದ ಚಿತ್ತಾಪಹಾರಿ ಗೂಡಿನ ತರಹದ ಪ್ರೀತಿ ನಮ್ಮದು. ತಂದು ಹೊಲಿದ ನಾರುಬೇರು ಎಲ್ಲಿಯದಾದರೂ ಗೂಡು ಮಾತ್ರ ಗೀಜಗನದೇ. ನಮ್ಮಿಬ್ಬರ ಮೂಲಆಕರ್ಷಣೆಯೇ ನಮ್ಮಿಬ್ಬರ ಲವಲವಿಕೆ, ನಾಳೆಗಳ ಬಗ್ಗೆ ನಂಬಿಕೆ ಹುಟ್ಟಿಸುತ್ತ, ಕನಸುಕಾಣುತ್ತ ಬದುಕನ್ನು ಜೀವದಾಯಿಯಾಗಿಸುತ್ತ ಪ್ರತಿಕ್ಷಣಗಳಿಗೂ ಹುರುಪುತುಂಬಿ, ಕೊಂಚ ಉತ್ಸಾಹ, ಜೀವಂತಿಕೆಯನ್ನು ಪೊರೆಯುತ್ತಿರುತ್ತೇವೆ.
ರಾಗ ಭಾವ ವಿಶೇಷಸ್ವರಗಳೋಲಾಟವೋ ಸುಖದುಃಖದಾಲಿಂಗನವೊ ಸವಿಯೂಟಸವಿಕೂಟ ಕುಣಿತ ಗೆಲವು ಅಚ್ಚೊತ್ತಿಮನ ಸಂತೋಷ ಉದಾತ್ತ ತುಂಬಿತೋ ಬಯಲು ತುಂಬಿ ಬಂದಿತು ಹೃದಯ ತುಂಬಿತುಳುಕಿತ್ತು ಜೀವ ಎನ್ನುವಂತೆ. ಸರಸ ವಿರಸ ಎಲ್ಲವೂ ಮಿಳಿತಗೊಂಡು ಹದವಾಗಿರುವ ದಾಂಪತ್ಯ ನಮ್ಮದು. ಬಾಳ ಪಯಣದಲ್ಲಿ ನಾವು ಹೊಂದಿಕೊಂಡು ಬೆಳೆದ್ದಿದ್ದೇವೆ. ನಾವಿಬ್ಬರು ಯೋಚಿಸುವ ದಾಟಿಯಲ್ಲು ಒಂದೇ ತೆರೆನಾದ ಕಾವ್ಯ ದನಿಯಿದೆˌ ಚಲನಶೀಲತೆಯಿದೆ. ಆಡದೇ ಅರ್ಥೈಸುತ್ತ ಪ್ರೀತಿಯ ಅನುಭವಕ್ಕೆ ತೆರೆದುಕೊಂಡಿದ್ದೇವೆ. ನಿನ್ನ ಜೊತೆಗಿನ ಬದುಕು ಪ್ರೀತಿಯ ಸಾಮರಸ್ಯದ ರೂಪಕದಂತೆ. ಬಾಳಪಥವನೊಮ್ಮೆ ಧ್ಯಾನಿಸುತ್ತ ಹಿಂದೆ ನೋಡಿದರೆ ಈ ಜಗತ್ತಿನಲ್ಲಿ ಭೇಟಿಯಾದ ಶ್ರೇಷ್ಠ ವ್ಯಕ್ತಿಯ ಜೊತೆ ಜೀವನವನ್ನು ಪ್ರೀತಿಯನ್ನು ಹಂಚಿಕೊಂಡಿದ್ದೇನೆ ಎಂದು ಅರಿವಾಗದೆ ಇರುವುದಿಲ್ಲ.
ಆಡದೆ ಉಳಿದಿಹ ಮಾತುಗಳು ಇನ್ನು ನೂರಿವೆ ದೀಪ್.
ನಿನ್ನವಳು
ಚುಮ್ಮಿ