ಇಂಗಿಷಿನಲ್ಲಿ : ಒ’ಹೆನ್ರಿ
ಅನುವಾದ: ಜೆ.ವಿ.ಕಾರ್ಲೊ
ರಾತ್ರಿ ಹತ್ತು ಗಂಟೆಯಾಗುತ್ತಲಿತ್ತು ಎಂದಿನಂತೆ ಅವನು ಲಾಠಿ ಬೀಸುತ್ತಾ ಆ ಬೀದಿಗೆ ಇಳಿದ. ಮಾಮೂಲಿ ಪೋಲಿಸ್ ಗತ್ತಿನಿಂದ ರಸ್ತೆಯುದ್ದಕ್ಕೂ ತನ್ನ ಬೀಟ್ ಶುರು ಮಾಡಲಾರಂಭಿಸಿದ. ಮೈ ಕೊರೆಯುವ ತಣ್ಣನೆಯ ಗಾಳಿಯೊಳಗೆ ಮಳೆ ಬರುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದ್ದವು. ರಸ್ತೆಯಲ್ಲಿ ಜನಸಂಚಾರ ವಿರಳವಾಗಿತ್ತು. ತನ್ನ ಲಾಠಿಯನ್ನು ಕಲಾತ್ಮಕವಾಗಿ ಬೀಸುತ್ತಾ ರಸ್ತೆಯ ಮೂಲೆ ಮೂಲೆಗಳ ಮೇಲೆ ತೀಕ್ಷ್ಣ ದೃಷ್ಠಿ ಹರಿಸುತ್ತಾ, ರಸ್ತೆ ಬದಿಯಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿರುವವರ ರಕ್ಷಕನಂತೆ ನಡೆಯುತ್ತಿದ್ದ.
ಅವನು ಬೀಟ್ ಮಾಡುತ್ತಿದ್ದ ರಸ್ತೆಯ ನಿವಾಸಿಗಳು ಬೇಗ ಮಲಗಿ ಬೇಗ ಏಳುವ ಸಿದ್ಧಾಂತದವರಾಗಿದ್ದರು ಎಂಬಂತೆ ಕಾಣಿಸುತ್ತಿತ್ತು. ಅಪವಾದವೆಂಬಂತೆ ಅಲ್ಲಲ್ಲಿ ತಿರುಗುತ್ತಿದ್ದ ಕೆಲವು ನಿಶಾಪಕ್ಷಿಗಳೂ ಕಾಣಿಸುತ್ತಿದ್ದವು. ಅವುಗಳ ಸೇವೆಗಾಗಿ ಕೆಲವು ಅಡ್ಡೆಗಳೂ ಇಲ್ಲದಿರಲಿಲ್ಲ.
ಮುಂದೆ ಸಾಗುತ್ತಿದ್ದಂತೆ ಅವನ ನಡುಗೆ ನಿಧಾನವಾಗತೊಡಗಿತು. ಒಂದು ಮುಚ್ಚಿದ್ದ ಅಂಗಡಿಯ ಕತ್ತಲ ಮೂಲೆಯಲ್ಲಿ ಯಾರೋ ಇನ್ನೂ ಉರಿಸದ ಸಿಗಾರನ್ನು ಬಾಯಲ್ಲಿಟ್ಟುಕೊಂಡು ನಿಶ್ಚಲನಾಗಿ ನಿಂತುಕೊಂಡಿದ್ದ. ಪೋಲಿಸ್ ಅವನ ಎದುರಿಗೆ ಹೋಗಿ ನಿಂತುಕೊಂಡಂತೆ,
“ಆಫಿಸರ್, ನಾನು ಇಲ್ಲಿ ನನ್ನ ಸ್ನೇಹಿತನಿಗಾಗಿ ಕಾಯುತ್ತಿದ್ದೇನೆ… ಬೇರೇನೂ ಉದ್ದೇಶದಿಂದಲ್ಲ.” ಎಂದ. ಮುಂದುವರೆಸುತ್ತಾ,
“ನಿಮಗೆ ಆಶ್ಚರ್ಯವೆನಿಸಬಹುದು ಆಫೀಸರ್! ಇದು ನಾವು ಇಪ್ಪತ್ತು ವರ್ಷಗಳ ಹಿಂದೆ ಕೈಗೊಂಡ ಒಂದು ತೀರ್ಮಾನ!… ನಿಮಗೇನೂ ತಕರಾರು ಇಲ್ಲದಿದ್ದರೆ ನಾನು ವಿವರಣೆಯನ್ನು ಕೊಡುತ್ತೇನೆ…”
ಪೋಲಿಸ್ ಮಾತನಾಡಲಿಲ್ಲ. ಸಿಗಾರಿನ ಮನುಷ್ಯ ಮುಂದುವರೆಸಿದ,
“…ನಾನು ನಿಂತಿರುವ ಈ ಅಂಗಡಿ ಇಪ್ಪತ್ತು ವರ್ಷಗಳ ಹಿಂದೆ ಒಂದು ಹೋಟೆಲಾಗಿತ್ತು…” ಎನ್ನುತ್ತಾ ಅವನು ತನ್ನ ಬಾಯಲ್ಲಿದ್ದ ಸಿಗಾರಿಗೆ ಕಡ್ಡಿ ಗೀರಿ ಬೆಂಕಿ ಹೊತ್ತಿಸಿದ. ಕಡ್ಡಿ ಗೀರಿದ ಬೆಳಕಿಗೆ ಅದರ ಹಿಂದಿನ ಅವನ ನಿಸ್ತೇಜಗೊಂಡಿದ್ದರೂ ಹೊಳೆಯುತ್ತಿದ್ದ ಕಣ್ಣುಗಳ ಮುಖ ಅನಾವರಣಗೊಂಡಿತು.
“ಇಂದಿಗೆ ಇಪ್ಪತ್ತು ವರ್ಷಗಳ ಹಿಂದೆ..” ಅವನು ಹೇಳತೊಡಗಿದ, “ಇಲ್ಲಿಯೇ ನಾನು ಮತ್ತು ನನ್ನ ಜೀವದ ಗೆಳೆಯ ಜಿಮ್ಮಿ ವೇಲ್ಸ್ ಕೊನೆಯ ಭಾರಿ ಊಟ ಮಾಡಿದ್ದೆವು. ಇದೇ ರಸ್ತೆಯಲ್ಲಿ ನಾನೂ, ಅವನೂ ಆಟ ಆಡುತ್ತಾ ಬೆಳೆದಿದ್ದೆವು. ನಮ್ಮನ್ನು ನೋಡಿದವರೆಲ್ಲಾ ನಾನೂ, ಜಿಮ್ಮಿ ಅಣ್ಣ-ತಮ್ಮಂದಿರೆಂದೇ ತಿಳಿದಿದ್ದರು. ಅಷ್ಟೊಂದು ಅನ್ಯೋನ್ಯರಾಗಿದ್ದೆವು. ಜಿಮ್ಮಿಯಂತ ಸ್ನೇಹಿತನನ್ನು ಪಡೆದಿದ್ದು ನನ್ನ ಅದೃಷ್ಠವೆಂದೇ ಹೇಳಬೇಕು. ವಯಸ್ಸಿನಲ್ಲಿ ನಮ್ಮಿಬ್ಬರ ಮಧ್ಯೆ ಅಂತ ವ್ಯತ್ಯಾಸವಿರಲಿಲ್ಲ. ಆ ಹೊತ್ತಿಗೆ ಅವನಿಗೆ ಇಪ್ಪತ್ತಾದರೆ ನನಗೆ ಹದಿನೆಂಟು. ಮರುದಿನ ನಾನು ನನ್ನ ಭವಿಷ್ಯವನ್ನು ಹುಡುಕುತ್ತಾ ಪಡುವಣದ ಕಡೆಗೆ ಹೊರಟಿದ್ದೆ. ಜಿಮ್ಮಿ ಮಾತ್ರ ನ್ಯೂಯೋರ್ಕ್ ಬಿಟ್ಟು ಬೇರೆಲ್ಲಿಗೂ ಹೋಗಲಿಕ್ಕೆ ತಯಾರಿರಲಿಲ್ಲ. ‘ಬದುಕಿದರೂ ಇಲ್ಲೇ, ಸತ್ತರೂ ಇಲ್ಲೇ.’ ಇದು ಅವನ ಹಠ. ನಾವು ಒಬ್ಬರಿಗೊಬ್ಬರು ವಿದಾಯ ಕೋರುವ ಮುನ್ನ ಒಂದು ನಿರ್ಧಾರ ಮಾಡಿದ್ದೆವು. ಜಗತ್ತಿನ ಯಾವ ಮೂಲೆಯಲ್ಲಿದ್ದರೂ, ಇಪ್ಪತ್ತು ವರ್ಷಗಳ ನಂತರ ಇದೇ ಸಮಯ ಮತ್ತು ಇದೇ ಇದೇ ಸ್ಥಳದಲ್ಲಿ ಭೇಟಿಯಾಗುವುದು! ಒಬ್ಬ ಮನುಷ್ಯನಿಗೆ ತನ್ನ ಜೀವನ ಕಂಡುಕೊಳ್ಳಲು ಖಂಡಿತಾ ಇಪ್ಪತ್ತು ವರ್ಷಗಳು ಸಾಕೆಂದು ನಾವು ಅಂದಾಜು ಮಾಡಿ ಈ ನಿರ್ಧಾರಕ್ಕೆ ಬಂದಿದ್ದೆವು…
“ಕೆಲವು ಸಮಯ ನನ್ನ ಮತ್ತು ಜಿಮ್ಮಿಯ ಮಧ್ಯೆ ಪತ್ರವ್ಯವಹಾರ ನಡೆಯಿತು. ಬದುಕಿನ ಜಂಜಾಟದಲ್ಲಿ ಕ್ರಮೇಣ ನಮ್ಮ ಮಧ್ಯದ ಸಂಪರ್ಕ ಮುರಿದು ಬಿದ್ದಿತು. ಅವನೆಲ್ಲೋ, ನಾನೆಲ್ಲೋ! ಆದರೂ, ನನಗೆ ಒಂದು ವಿಷಯದಲ್ಲಿ ಮಾತ್ರ ನಂಬುಗೆ ಇತ್ತು. ಒಂದು ವೇಳೆ ಜಿಮ್ಮಿ ಜೀವಂತವಾಗಿದ್ದರೆ ಖಂಡಿತ ನಮ್ಮ ಇಂದಿನ ಭೇಟಿ ಯಾವ ಕಾರಣಕ್ಕೂ ತಪ್ಪಿಸಿಕೊಳ್ಳುವುದಿಲ್ಲ. ಇಂತ ವಿಚಾರಗಳಲ್ಲಿ ನನಗಿಂತಲೂ ಅವನಿಗೆ ಹೆಚ್ಚಿನ ಬದ್ಧತೆ ಇತ್ತು!…
“ನಾನಿಂದು ಮರೆಯದೇ ಸಾವಿರ ಮೈಲುಗಳನ್ನು ಕ್ರಮಿಸಿ ನನ್ನ ಗೆಳೆಯ ಜಿಮ್ಮಿಯನ್ನು ಭೇಟಿಯಾಗಲು ಬಂದಿದ್ದೇನೆ ಮತ್ತು ಈ ಅಂಗಡಿಯ ಬಾಗಿಲು ಕಾಯುತ್ತಾ ನಿಂತಿದ್ದೇನೆ. ನನ್ನ ಜೀವದ ಗೆಳೆಯ ಜಿಮ್ಮಿ ಸಿಕ್ಕಿದರೆ, ಈ ಸಾವಿರ ಮೈಲುಗಳ ಪ್ರಯಾಣ ಏನೂ ಅಲ್ಲ!”
ಇಷ್ಟನ್ನು ಹೇಳುತ್ತಾ ಅವನು ಜೇಬಿನಿಂದ ತನ್ನ ಪುಟ್ಟ ವಜ್ರ ಖಚಿತ ಪಾಕೆಟ್ ವಾಚನ್ನು ಹೊರಗೆಳದ.
“ಹತ್ತು ಗಂಟೆಗೆ ಇನ್ನೂ ಮೂರು ನಿಮಿಷಗಳಿವೆ. ಇಪ್ಪತ್ತು ವರ್ಷಗಳ ಹಿಂದೆ ಬರೋಬರಿ ಹತ್ತು ಗಂಟೆಗೆ ನಾವು ಇದೇ ಸ್ಥಳದಲ್ಲಿ ಒಬ್ಬರಿಗೊಬ್ಬರು ವಿದಾಯ ಕೋರಿದ್ದೆವು.”
“ಪಡುವಣದ ಕಡೆಗೆ ಹೋಗಿದ್ದ ನೀನು ಸಾಕಷ್ಟು ದುಡ್ಡು ಮಾಡಿರಬೇಕು ಅಲ್ಲವೇ?” ಪೋಲಿಸ್ ಕೇಳಿದ.
“ಖಂಡಿತವಾಗಿಯೂ. ಇದರಲ್ಲೇನೂ ಮುಚ್ಚುಮರೆಯಿಲ್ಲ ಆಫೀಸರ್! ನನ್ನ ಪ್ರಾಣ ಸ್ನೇಹಿತ ಕೂಡ ನನ್ನಷ್ಟೇ ಯಶಸ್ಸು ಕಂಡಿರಬೇಕೆಂದು ನನ್ನ ಭಾವನೆ. ಆದರೂ ಅವನು ನನ್ನಷ್ಟು ವ್ಯವಹಾರ ಚತುರನಾಗಿರಲಿಲ್ಲ! ಶಿಸ್ತಿನ ಮನುಷ್ಯ. ಹಾಗಂತ ನನಗೂ ಯಾವುದೂ ಸಲೀಸಾಗಿ ಬಟ್ಟಲಿನಲ್ಲಿ ಬಡಿಸಿ ಕೊಟ್ಟಂತೆ ಗಿಟ್ಟಲಿಲ್ಲ! ನನಗಿಂತ ಚತುರರೂ, ವ್ಯವಹಾರಸ್ಥರೂ ಮತ್ತು ದಗಲುಬಾಜಿಗಳ ಮಧ್ಯದಲ್ಲಿ ಏಗಿ ಜಯಿಸುವುದು ಅಷ್ಟು ಸುಲಭವಾಗಿರಲಿಲ್ಲ! ಅವರನ್ನೆಲ್ಲಾ ಮೀರಿಸಿಯೂ ನಾನು ಹೇಗೆ ಯಶಸ್ಸನ್ನು ಕಂಡುಕೊಂಡೆ ಎನ್ನುವುದೊಂದೇ ಒಂದು ದೊಡ್ಡ ಕತೆ!..
“ನಿನ್ನ ಸ್ನೇಹಿತ ನಿನ್ನನ್ನು ಭೇಟಿಯಾಗಲು ಖಂಡಿತ ಬರುತ್ತಾನೆ.” ಎಂದು ಹಾರೈಸುತ್ತಾ ಪೋಲಿಸ್ ತನ್ನ ಲಾಟಿ ಬೀಸುತ್ತಾ ಮುಂದೆ ನಡೆಯಲು ಸಿದ್ಧನಾದ. “ಏನಾದರೂ ಆಗಲಿ, ಅವನಿಗೆ ಮತ್ತಷ್ಟು ಸಮಯ ಕೊಡಪ್ಪಾ! ಕೊಡುತ್ತೀಯಾ ತಾನೇ?” ಎಂದ.
“ಏನೇ ಆಗಲಿ. ನನ್ನ ಜಿಮ್ಮಿಗಾಗಿ ಮತ್ತೂ ಅರ್ಧ ಗಂಟೆ ಕಾಯುತ್ತೇನೆ ಆಫೀಸರ್! ಜೀವಂತವಾಗಿದ್ದರೆ ಅವನು ಬರದೇ ಇರುವ ಪೈಕಿಯಲ್ಲ! ಗುಡ್ ಬೈ ಆಫೀಸರ್.”
“ಗುಡ್ ನೈಟ್ ಸರ್!” ಎನ್ನುತ್ತಾ ಪೋಲಿಸ್ ತನ್ನ ಡ್ಯೂಟಿ ಮುಂದುವರೆಸಿದ.
ಮೊದಲೇ ನಿರೀಕ್ಷಿಸಿದಂತೆ ತುಂತುರು ಮಳೆ ಹನಿಯಲಾರಂಭಿಸಿತು.. ಇನ್ನೂ ರಸ್ತೆಯಲ್ಲಿದ್ದವರು ತಮ್ಮ ಕೋಟಿನ ಕಾಲರುಗಳನ್ನು ಕಿವಿಗಳ ಮಟ್ಟಕ್ಕೆ ಏರಿಸುತ್ತಾ, ಜೇಬಿನೊಳಗೆ ಕೈಗಳನ್ನು ಇಳಿಸುತ್ತಾ ತಲೆ ಬಗ್ಗಿಸಿ ಬಿರಬಿರನೆ ತಮ್ಮ ನೆಲೆಯ ಕಡೆಗೆ ನಡೆಯತೊಡಗಿದರು. ಸಾವಿರ ಮೈಲುಗಳನ್ನು ದಾಟಿ ತನ್ನ ಬಾಲ್ಯ ಸ್ನೇಹಿತನನ್ನು ಕಾಣಲು ಮುಚ್ಚಿದ ಅಂಗಡಿಯ ಬದಿಗೆ ಕಾದು ನಿಂತಿದ್ದ ಅವನ ಸಿಗಾರು ಉರಿದುರಿದು ಬೂದಿಯಾಗಿ ಬುಡಮಟ್ಟಕ್ಕೆ ತಲುಪಿತ್ತು. ತನ್ನ ಬಾಲ್ಯ ಸ್ನೇಹಿತನನ್ನು ಮತ್ತೊಮ್ಮೆ ಕಾಣುವ ಭರವಸೆ ಕ್ಷೀಣಿಸುತ್ತಲೇ ಇತ್ತು.
ಹತ್ತು ಗಂಟೆಯ ಮೇಲೆ ಇಪ್ಪತ್ತು ನಿಮಿಷಗಳು ಸಂದು ಹೋಗಿದ್ದವು. ಇಷ್ಟರಲ್ಲಿ ಓವರ್ ಕೋಟ್ ಧರಿಸಿ, ಕಾಲರನ್ನು ಕಿವಿ ಮಟ್ಟಕ್ಕೆ ಏರಿಸಿದ್ದ ವ್ಯಕ್ತಿಯೊಬ್ಬ ಅವನ ಬಳಿಗೆ ಬಿರಬಿರನೆ ನಡೆದು ಬಂದ.
“ನೀನು ಬಾಬ್, ಹೌದು ತಾನೇ?” ಅವನು ಕೇಳಿದ.
“ನೀನು ಜಿಮ್ಮಿ ವೇಲ್ಸ್ ತಾನೇ?” ಅವನು ಕೇಳಿದ.
“ಬಾಬ್!! ಆಶ್ಚರ್ಯವೇ ಇಲ್ಲ. ಬಾಬ್ ಜೀವಂತ ಇದ್ದರೆ ಸಿಕ್ಕೇ ಸಿಗುತ್ತಾನೆ ಎಂದು ನನಗೆ ಖಂಡಿತಾ ಗೊತ್ತಿತ್ತು. ಇಪ್ಪತ್ತು ವರ್ಷಗಳೆಂದರೆ ಕಡಿಮೆ ಅವಧಿ ಏನಲ್ಲ! ನಾವು ವಿದಾಯ ಕೋರಿದ್ದಾಗ ಇದ್ದ ಹೋಟೆಲು ಈಗಿಲ್ಲ! ಇದ್ದಿದ್ದರೆ ಅಲ್ಲಿ ಮತ್ತೊಮ್ಮೆ ಊಟ ಮಾಡುವ ಅವಕಾಶ ಇರುತ್ತಿತ್ತು. ನಿನ್ನ ಪಡುವಣದ ಜೀವನ ಹೇಗಿತ್ತು ಬಾಬ್?”
“ತುಂಬಾ ಮಜವಾಗಿತ್ತು ಜಿಮ್ಮಿ! ನಾನು ತುಂಬಾ ಸಂತುಷ್ಠನಾಗಿದ್ದೇನೆ. ನೀನಂತೂ ತುಂಬಾ ಬದಲಾಗಿದ್ದೇಯಾ ಜಿಮ್ಮಿ! ನಿನ್ನ ಎತ್ತರ ನಾನೆಣಿಸಿದಕ್ಕಿಂತ ಹೆಚ್ಚಾಗಿದೆಯಲ್ಲಾ?!”
“ಒಹ್!, ಇಪ್ಪತ್ತು ವರ್ಷಗಳೆಂದರೆ ಕಡಿಮೆ ಅವಧಿಯೇ ಬಾಬ್?!”
“ನಿನ್ನ ನ್ಯೂಯೋರ್ಕ್ ಜೀವನ ಹೇಗಿದೆ ಜಿಮ್ಮಿ?”
“ಸರ್ಕಾರಿ ನೌಕರಿ. ಏನೂ ದೂರುಗಳಿಲ್ಲ ಬಿಡು.. ನಡಿ ಬಾಬ್! ನನಗೊಂದು ಅಡ್ಡೆ ಗೊತ್ತು. ಕೂತು ಸಾವಾಕಾಶವಾಗಿ ಮಾತನಾಡೋಣ. ಮಾತನಾಡಲಿಕ್ಕೆ ರಾಶಿ, ರಾಶಿ ವಿಷಯಗಳಿವೆ!”
ಇಬ್ಬರು ಸ್ನೇಹಿತರೂ ಕೈ ಕೈ ಹಿಡಿದು ರಸ್ತೆಗಿಳಿದರು. ಬಾಬ್ ತನ್ನ ಪಡುವಣದ ಜೀವನದ ಬಗ್ಗೆ, ತನ್ನ ಯಶಸ್ಸಿನ ಬಗ್ಗೆ ಪುಂಖಾನುಪುಂಖ ಮಾತಾನಾಡುತ್ತಲೇ ಹೋದ. ಜಿಮ್ಮಿ, ತನ್ನ ಓವರ್ ಕೋಟನ್ನು ಮೈಗೆ ಬಿಗಿಯಾಗಿ ಸುತ್ತಿಕೊಂಡು ತನ್ನ ಬಾಲ್ಯ ಸ್ನೇಹಿತ ಹೇಳುತ್ತಿರುವುದನ್ನು ಕುತೂಹಲದಿಂದ ಕೇಳುತ್ತಲೇ ಇದ್ದ.
ಕೊನೆಗೆ ಅವರು ವಿದ್ಯುತ್ ದೀಪಗಳಿಂದಾಲಂಕೃತವಾಗಿದ್ದ ಒಂದು ಮೆಡಿಕಲ್ ಸ್ಟೋರಿನ ಎದುರಿಗೆ ತಲುಪಿದರು. ಇಪ್ಪತ್ತು ವರ್ಷಗಳ ನಂತರ ಅವರು ಮೊದಲ ಭಾರಿ ಆ ಬೆಳಕಿನಲ್ಲಿ ಒಬ್ಬರನ್ನೊಬ್ಬರ ಮೇಲೆ ಕುತೂಹಲದಿಂದ ದೃಷ್ಟಿ ಹರಿಸಿದರು.
ಪಡುವಣದಿಂದ ಬಂದಿದ್ದ ಅವನು ಒಮ್ಮೆಲೇ ಹೌಹಾರಿ, ತನ್ನ ಸ್ನೇಹಿತನ ಕೈಯನ್ನು ಕೊಡವಿಕೊಂಡು, “ನೀನು ನನ್ನ ಸ್ನೇಹಿತ ಜಿಮ್ ವೇಲ್ಸ್ ಖಂಡಿತಾ ಅಲ್ಲವೇ ಅಲ್ಲ!” ಎಂದ.
“ನಿಜ, ಬಾಬ್! ನಾನು ಜಿಮ್ ವೇಲ್ಸ್‍ನಲ್ಲ! ಕಾಲವೆನ್ನುವುದು ಬಹಳ ಕ್ರೂರಿ, ಬಾಬ್! ಸಜ್ಜನನನ್ನೂ ಲಫಂಗನನ್ನಾಗಿಸುತ್ತದೆ! ಸಾರಿ, ಬಾಬ್. ನಿನ್ನನ್ನು ಅರೆಸ್ಟ್ ಮಾಡುತ್ತಿದ್ದೇನೆ. ನೀನು ನಮ್ಮ ಪ್ರಾಂತ್ಯಕ್ಕೆ ಬರುತ್ತಿದ್ದೀಯಾ ಎಂದು ನಮಗೆ ಈ ಮೊದಲೇ ಸಂದೇಶ ಬಂದಿತ್ತು. ನಿನ್ನ ಬಳಿ ಖಾಸಗಿಯಾಗಿ ಬಹಳಷ್ಟು ಮಾತನಾಡುವುದಿದೆ… ಯಾವುದೇ ತಕರಾರುಗಳಿಲ್ಲದೆ ನನ್ನ ಜತೆ ಬರುವೆ ಎಂದು ಭಾವಿಸುತ್ತೇನೆ…
“ನಾವು ಸ್ಟೇಶನಿಗೋಗುವ ಮುನ್ನ ನಿನಗೊಂದು ಖಾಸಗಿ ಪತ್ರವನ್ನು ತಲುಪಿಸಲು ಇಚ್ಛಿಸುತ್ತೇನೆ. ಅದನ್ನು ನಮ್ಮ ಠಾಣೆಯ ಪೋಲಿಸ್ ಕಾನ್ಸ್ಟೇಬಲ್ ಜಿಮ್ಮಿ ವೇಲ್ಸ್ ನಿನಗೆ ತಲುಪಿಸಲು ಕೋರಿಕೊಂಡಿದ್ದಾನೆ.”
ಪಡುವಣದಿಂದ ಬಂದಿದ್ದ ಅವನು ಆ ಪತ್ರವನ್ನು ಇಸಿದುಕೊಂಡು ಬೀದಿ ದೀಪದ ಬೆಳಕಿಗೆ ಓದತೊಡಗಿದ. ಅವನ ಕೈಗಳು ಅದುರುತ್ತಿದ್ದವು.
“ಬಾಬ್, ನಾನೂ, ಇಪ್ಪತ್ತು ವರ್ಷಗಳ ಹಿಂದೆ ನಿರ್ಧರಿಸಿದಂತೆ ಹತ್ತು ಗಂಟೆಗೇ ನಾವು ನಿರ್ಧರಿಸಿದ್ದ ಜಾಗಕ್ಕೆ ತಲುಪಿದ್ದೆ. ನೀನು ಸಿಗಾರ್ ಹೊತ್ತಿಸಿಕೊಂಡಿದ್ದಾಗ ಆ ಬೆಳಕಿನಲ್ಲೇ ನಿನ್ನ ಮುಖವನ್ನು ನೋಡಿದ್ದೆ. ಅದೇ ಮುಖ! ಚಿಕಾಗೋ ಪೋಲಿಸರು ಹುಡುಕಾಡುತ್ತಿದ್ದ ಚಿರಪರಿಚಿತ ಮುಖ! ನಿನ್ನನ್ನು ಅರೆಸ್ಟ್ ಮಾಡಲು ನನ್ನಿಂದ ಸಾಧ್ಯವಾಗಲಿಲ್ಲ ಗೆಳೆಯ. ಆದ್ದರಿಂದ, ಸಮವಸ್ತ್ರದಲ್ಲಿಲ್ಲದ ನನ್ನ ಸಹಪಾಠಿಯೊಬ್ಬರನ್ನು ಕಳಿಸಬೇಕಾಯಿತು. ಕ್ಷಮಿಸು ಗೆಳೆಯ.”
(ಒ’ ಹೆನ್ರಿಯ After Twenty Years ಕತೆಯ ಅನುವಾದ)
-ಜೆ.ವಿ.ಕಾರ್ಲೊ