ಅದೊಂದು ದಿನ 1994 ರ ಮೇ ತಿಂಗಳ ಅಂತ್ಯದಲ್ಲಿ ನಮ್ಮಜ್ಜಿ ಊರು ಚಲುವಯ್ಯನಪಾಳ್ಯದಲ್ಲಿ ಆಟವಾಡುತ್ತಾ ನಮ್ಮಜ್ಜಿ ಮನೆಯ ಮುಂದಿನ ರಸ್ತೆಗೆ ಇಳಿದೆ. ದೂರದಲ್ಲಿ ಅರಳಿ ಮರದ ಹತ್ತಿರ ನಮ್ಮಮ್ಮ ಬರುತ್ತಿರುವುದು ಕಂಡು ಕುಣಿಯುತ್ತಾ ಮನೆಗೆ ಹೋಗಿ ನಮ್ಮಜ್ಜಿಗೆ ವಿಷಯ ಮುಟ್ಟಿಸಿದೆ. ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಬೆಳಗುಂಬದಿಂದ ಸುಮಾರು ಎರಡು ಮೂರು ಕಿಲೋಮೀಟರ್ ನಡೆದು ಬಂದ ಅಮ್ಮ ತಣ್ಣನೆಯ ನೀರು ಕುಡಿದು ಸುಧಾರಿಸಿಕೊಂಡರು. ನಂತರ ಬಂದ ವಿಷಯವೇನು? ಎಂದು ಅಜ್ಜಿ ಕೇಳಿತು. ಅಮ್ಮನ ಉತ್ತರ ಕೇಳಿ ನನಗಂತೂ ಭಾರಿ ಆಘಾತವಾಯ್ತು. ಅಮ್ಮ ನನ್ನನ್ನು ಶಾಲೆಗೆ ಸೇರಿಸಲು ನಮ್ಮೂರಿಗೆ ಕರೆದೊಯ್ಯಲು ಬಂದಿದ್ದರು. ಅಲ್ಲಿಯವರೆಗೂ ನಮ್ಮಜ್ಜಿಯೊಂದಿಗೇ ನನಗೆ ಒಡನಾಟ ಹೆಚ್ಚು. ಅಜ್ಜಿಯೊಂದಿಗೆ ಅಲ್ಲೇ ಠಿಕಾಣಿ ಊರಿದ್ದೆ. ಆ ಊರಿನ ಗೆಳೆಯರೊಂದಿಗೆ ಆಟವಾಡುವುದು, ಕಾಡು- ಗುಡ್ಡ ಸುತ್ತುವುದು, ಬೇಸಿಗೆಯಲ್ಲೂ ನೀರು ಹರಿಯುತ್ತಿದ್ದ ತೊರೆಯಲ್ಲಿ ಮೀನು ಹಿಡಿಯುವ ಪ್ರಯತ್ನದಲ್ಲೇ ದಿನಕಳೆಯುತ್ತಿದ್ದದ್ದು, ಬೇಸಿಗೆಯ ರಾತ್ರಿಯಲ್ಲಿ ಮಾಳಿಗೆ ಮನೆಯ ಗಬೆ ತಡೆಯಲಾರದೆ ಊರಿಗೆ ಊರೇ ಬೀದಿಯಲ್ಲಿ ಮಲಗುತ್ತಿದ್ದ ಆನಂದ. ಗುಡ್ಡಗಾಡಿನ ಆ ಹಸಿರು ಇವೆಲ್ಲವುಗಳಿಂದ ನಾಳೆ ದೂರವಾಗಲಿದ್ದೇನೆ ಎಂಬ ದುಃಖ ರಾತ್ರಿ ಪೂರ ನಿದ್ರೆಯನ್ನು ಹತ್ತಿರ ಸುಳಿಯಲು ಬಿಡಲಿಲ್ಲ.
ಮರುದಿನ ಬೆಳಗ್ಗೆ ವಿಧಿ ಇಲ್ಲದೆ ಸ್ವರ್ಗ ಸಮಾನ ಸ್ವಾತಂತ್ರವನ್ನು ತೊರೆದು ಶಾಲೆ ಎಂಬ ಸೆರೆಮನೆ ಸೇರಲು ನಮ್ಮೂರಿಗೆ ಬಂದೆ. ಇದಾದ ನಾಲ್ಕೈದು ದಿನಗಳ ನಂತರ ಶಾಲೆಗೆ ಮಕ್ಕಳನ್ನು ದಾಖಲು ಮಾಡಿಕೊಳ್ಳಲು ಅರ್ಹ ಮಕ್ಕಳನ್ನು ಹುಡುಕಿಕೊಂಡು ನಾಗನಹಳ್ಳಿ ಮೇಸ್ಟ್ರು ಅಂತಲೇ ಚಿರಪರಿಚಿತರಾದ ನಮ್ಮೂರಿನ ಶಾಲಾ ಶಿಕ್ಷಕರಾದ ನಂದೀಶಯ್ಯನವರು ಮನೆಯ ಬಳಿ ಬಂದರು. “ನನ್ಮಗುನ್ನೂ ಸೇರಿಸ್ಕೊಳ್ಳಿ ಸಾ” ಅಂದರು ನಮ್ಮಪ್ಪ. ಮೇಸ್ಟ್ರು ನನ್ನ ಅರ್ಹತಾ ಪರೀಕ್ಷೆ ಆರಂಭಿಸಿದರು. ಬಲಗೈಯನ್ನು ನೆತ್ತಿಯ ಮೇಲಿಂದ ಬಗ್ಗಿಸಿ ಎಡಗಿವಿಯನ್ನು ಹಿಡಿಯಲು ಹೇಳಿದರು. ನಾನು ಅವರು ಹೇಳಿದಂತೆ ಮಾಡಿದೆ, ಆದರೆ ಕಿವಿ ಎಟುಕಲಿಲ್ಲ. ಎಷ್ಟು ಕಷ್ಟ ಪಟ್ಟು ಕೈ ಚಾಚಿದರೂ ಅರ್ಧ ಇಂಚಿನಷ್ಟು ದೂರ ಕಡಿಮೆ ಬರುತ್ತಿತ್ತು. ಅರ್ಹತಾ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದೆ. ಮೇಸ್ಟ್ರು ಶಾಲೆಗೆ ಸೇರಿಸಿಕೊಳ್ಳುವುದು ಸಾಧ್ಯವಿಲ್ಲ ಎಂದರು. “ನನ್ಮಗನಿಗಿಂತ ಒಂದು ತಿಂಗಳು ಎರಡು ತಿಂಗಳು ಹಿಂದೆ ಹುಟ್ಟಿದೊರನೆಲ್ಲ ಇಸ್ಕೂಲಿಗೆ ಸೇರಿಸಿಕೊಂಡಿದ್ದೀರಿ, ನನ್ಮಗ ವಸಿ ಕುಳ್ಳ ಅದ್ಕೆ ಕೈ ಎಟುಗ್ಸಲ್ಲ, ಸೇರಿಸ್ಕೊಳ್ಳಿ ಸಾ” ಅಂದರು ನಮ್ಮಪ್ಪ. ಆ ವರ್ಷ ಶಾಲೆಗೆ ಸೇರಿದ ನಮ್ಮೂರಿನ ಕೆಲ ಹುಡುಗರ ಹೆಸರು ಹೇಳುತ್ತಾ.
ಮೇಸ್ಟ್ರು ನನ್ನ ಹುಟ್ಟಿದ ದಿನಾಂಕ ಕೇಳಿ ತಿಳಿದುಕೊಂಡು, ಹುಡುಗನಿಗೆ ಇನ್ನೂ ಐದೇ ವರ್ಷ. ಶಾಲೆಗೆ ಸೇರಿಸಿಕೊಳ್ಳ ಬೇಕು ಅಂದ್ರೆ ಐದು ವರ್ಷ ಹತ್ತು ತಿಂಗಳಾಗಬೇಕು ಅಂತಾ ಹೇಳಿ ನನ್ನನ್ನು ದಾಖಲು ಮಾಡಿಕೊಳ್ಳಲು ನಿರಾಕರಿಸಿದರು. ನಮ್ಮಪ್ಪ ಬಿಡಲೇ ಇಲ್ಲ ” ಇವ್ನಿಗಿಂತಾ ಚಿಕ್ಕೋರನ್ನೆಲ್ಲಾ ಸೇರಿಸ್ಕೊಂಡಿದ್ದೀರಿ ಇವನನ್ನು ಸೇರಿಸ್ಕೊಳ್ಳಿ” ಎಂದು ಹಠ ಹಿಡಿದರು. ಆ ಕಾಲದಲ್ಲಿ ‘ಜನ್ಮ ಕೊಡುತ್ತಿದ್ದದ್ದು ತಾಯಿಯಾದರೂ; ಜನ್ಮ ದಿನಾಂಕ ಕೊಡುತ್ತಿದ್ದದ್ದು ಪ್ರಾಥಮಿಕ ಶಾಲಾ ಶಿಕ್ಷಕರು’.ಆದುದ್ದರಿಂದ ನಮ್ಮಪ್ಪನ ಕಾಟ ತಡೆಯಲಾರದೆ ನನ್ನನ್ನು ಒಂದು ವರ್ಷ ಬೇಗ ಹುಟ್ಟಿಸಿ ಶಾಲೆಗೆ ದಾಖಲು ಮಾಡಿಕೊಳ್ಳಲು ಸಿದ್ಧರಾದರು ನಮ್ಮ ಮೇಸ್ಟ್ರು. ಆದರೆ ಅಷ್ಟರಲ್ಲಿ ಅಲ್ಲಿಗೆ ಬಂದ ನಮ್ಮಣ್ಣ, ಇವನಿಗಿನ್ನು ಐದೇ ವರ್ಷ; ಈ ವರ್ಷ ಬಿಡಿ ಮುಂದಿನ ವರ್ಷ ಶಾಲೆಗೆ ಸೇರಿಸೋಣ ಎಂದು ನಮ್ಮಪ್ಪನನ್ನು ಮತ್ತು ಮೇಷ್ಟ್ರನ್ನು ಒಪ್ಪಿಸಿದ. ನನಗೋ ಮತ್ತೆ ಸಿಕ್ಕ ಒಂದು ವರ್ಷ ಸ್ವಾತಂತ್ರದಿಂದ ಖುಷಿಯಾಯಿತು. ಆದರೆ ಆ ಸಂತಸ ಬಹಳ ದಿನ ಉಳಿಯಲಿಲ್ಲ. ಜೂನ್ ತಿಂಗಳಲ್ಲಿ ಶಾಲೆ ಆರಂಭವಾದ ಕೂಡಲೇ ನಮ್ಮಪ್ಪ ನನ್ನನ್ನು ಚಿಟ್ಟೆ ಕ್ಲಾಸಿಗೆ ಹೋಗೆಂದು ತಾಕೀತು ಮಾಡಿದರು. ಒಲ್ಲದ ಮನಸ್ಸಿನಿಂದ ನಮ್ಮಪ್ಪನ ಒದೆಗಳಿಗೆ ಹೆದರಿ ಚಿಟ್ಟೆ ಕ್ಲಾಸ್ ಸೇರಿಯೇ ಬಿಟ್ಟೆ. ಇದಾವುದಪ್ಪ ಚಿಟ್ಟೆ ಕ್ಲಾಸ್ ಅನಿಸುತ್ತಿದೆ ಅಲ್ಲವೇ? ಅದೊಂದು ಮಾಯಾ ಲೋಕ. ಯಾವ ಒತ್ತಡವೂ ಇರದ ಚಿಣ್ಣರ ಲೋಕ.
ಆ ಕಾಲದಲ್ಲಿ ಹಳ್ಳಿಗಳಿಗೆ ಕಾನ್ವೆಂಟ್ ಶಾಲೆಗಳು ಇನ್ನೂ ಕಾಲಿಟ್ಟಿರಲಿಲ್ಲ. ನಮ್ಮ ಹಳ್ಳಿ ಜನ ಶಿಕ್ಷಣವನ್ನು ಒಂದು ಮಹತ್ತರ ವಿಷಯ ಎಂದು ಪರಿಗಣಿಸಿಯೇ ಇರಲಿಲ್ಲ. ಮಕ್ಕಳು ಇಷ್ಟ ಇದ್ದರೆ ಶಾಲೆಗಳಿಗೆ ಹೋಗಬಹುದಿತ್ತು. ಇಲ್ಲದಿದ್ದರೆ ಹೇಗಿದ್ದರೂ ನಮ್ಮ ಕುಲಕಸುಬು ಇತ್ತಲ್ಲ. ನೇಗಿಲ ಕುಳದೊಳಗಡಗಿದೆ ಕರ್ಮ, ನೇಗಿಲ ಮೇಲೆಯೇ ನಿಂತಿದೆ ಧರ್ಮ ಅಂತ ಅನ್ಕೊಂಡು ದನ, ಎಮ್ಮೆ ಕಾಯೋಕೆ ಹಾಕಂಬುಡೋರು. ಯಾರಾದರೂ ಇಷ್ಟ ಮತ್ತು ಕಷ್ಟ ಪಟ್ಟು ಓದಿ ಒಂದೇ ಪ್ರಯತ್ನದಲ್ಲಿ ಹತ್ತನೇ ತರಗತಿ ಪಾಸಾದನೆಂದರೆ ಅವನಿಗೆ ಈಗ ಐ. ಎ. ಎಸ್. ಪಾಸಾದವನಿಗೆ ಸಿಗುವಷ್ಟು ಗೌರವ ಸಿಗುತ್ತಿತ್ತು. ಎಲ್ಲರ ಬಾಯಲ್ಲೂ ಅವನದೇ ಹೆಸರು. ‘ಅವನ್ಮಗ ಎಸೋಲ್ಸಿನ ಒಂದೇ ಎಟ್ಗೆ ಪಾಸ್ ಆಗವ್ನoತೆ, ಗಂಡು ಅಂದ್ರೆ ಅವ್ನು, ಧೀರ ಮಗ’ ಎಂಬೆಲ್ಲಾ ಪ್ರಶಂಸೆಗಳು ಬರುತ್ತಿದ್ದವು. ನನ್ಮಗ/ ಮಗಳು ಎಸೋಲ್ಸಿನಾ ಒಂದೇ ಸಲಿಗೆ ಪಾಸ್ ಮಾಡುದ್ರೆ ಅಷ್ಟೇ ಸಾಕಪ್ಪ ದೇವ್ರೇ ಅಂತ ಹರಕೆ ಹೊರುತ್ತಿದ್ದ ಅಲ್ಪ ತೃಪ್ತರು ನಮ್ಮವರು. ಇಂತಹಾ ಊರಿನಲ್ಲಿ ಕಾನ್ವೆಂಟ್ ಇರಲಿ ಕನಿಷ್ಠ ಒಂದು ಅಂಗನವಾಡಿಯೂ ಗತಿ ಇರಲಿಲ್ಲ. ಆದುದರಿಂದಲೇ ನಾವು ಚಿಟ್ಟೆ ಕ್ಲಾಸ್ ಸೇರಬೇಕಾಗಿ ಬಂದದ್ದು. ನಮ್ಮೂರಿನ ಶಾಲೆಯಲ್ಲಿ ಒಂದನೇ ತರಗತಿಯ ಮಕ್ಕಳ ಕೊನೇ ಸಾಲಿನ ಹಿಂದೆ ಶಾಲೆಗೆ ದಾಖಲಾಗದ ನಾಲ್ಕೈದು ವರ್ಷದ ಮಕ್ಕಳನ್ನು ಕೂರಿಸಿಕೊಂಡು ಅಕ್ಷರ ಕಲಿಸುತ್ತಿದ್ದ ಕ್ಲಾಸೇ ಚಿಟ್ಟೆ ಕ್ಲಾಸ್. ಅದಕ್ಕೆ ಚಿಟ್ಟೆ ಕ್ಲಾಸ್ ಎಂದು ಏಕೆ ಹೆಸರು ಬಂತೋ ಗೊತ್ತಿಲ್ಲ. ನಮಗಿಂತ ಹಿರಿಯ ವಿದ್ಯಾರ್ಥಿಗಳು ಹಾಗೆ ಹೇಳಿಕೊಟ್ಟರು. ನಾವು ನಮ್ಮ ಕಿರಿಯರಿಗೆ ಹೇಳಿಕೊಟ್ಟೆವು ಅಷ್ಟೇ ನಮಗೆ ಗೊತ್ತಿರುವುದು.
ಸ್ವಲ್ಪ ಎಂಬುದನ್ನು ಕೆಲವು ಸಲ ಚಿಟ್ಟೆ ಎಂದು ಕರೆಯುವ ರೂಢಿಯಿದೆ. ಒಂದನೇ ತರಗತಿಗಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೂರಿಸಿಕೊಳ್ಳುತ್ತಿದ್ದದ್ದರಿಂದ ಒಂದಕ್ಕಿಂತ ಕಡಿಮೆ ಕ್ಲಾಸ್ ಎನ್ನುವುದಕ್ಕೆ ಏನಾದರೂ ಚಿಟ್ಟೆ ಕ್ಲಾಸ್ ಎಂದು ಹೆಸರಿಟ್ಟರೋ? ಚಿಟ್ಟೆಯ ಹಾಗೆ ಸ್ವಚಂದವಾಗಿ ಆಡಿಕೊಂಡಿರುವ ಮಕ್ಕಳಿರುವ ತರಗತಿ ಅಂತ ಆ ಹೆಸರಿಟ್ಟರೋ ಗೊತ್ತಿಲ್ಲ. ಏಕೆ ಎಂದು ಯೋಚಿಸುವ ವಯಸ್ಸು, ಯೋಚಿಸುವಷ್ಟು ಬುದ್ಧಿಮತ್ತೆಯೂ ಆಗ ನಮಗಿರಲಿಲ್ಲ. ದಾರಿಯಲ್ಲಿ ಯಾರಾದರೂ ‘ಎಸ್ಟ್ನೆ ಕಳಾಸೋ’ ಅಂತ ಕೇಳಿದರೆ, ‘ಚಿಟ್ಟೆ ಕಳಾಸು’ ಎಂದು ಎದೆಯುಬ್ಬಿಸಿಕೊಂಡು ಹೇಳುತ್ತಿದ್ದೆವು. ಚಿಟ್ಟೆ ಕ್ಲಾಸ್ ಮಕ್ಕಳೆಂದರೆ ಎಲ್ಲರಿಗೂ ಪ್ರೀತಿ, ಬೇರೆ ಯಾರೀಗೂ ಇಲ್ಲದ ವಿನಾಯಿತಿ. ಹಾಗಿದ್ದುದ್ದರಿಂದಲೇ ಹಾಜರಾತಿ ಕಡ್ಡಾಯವಿಲ್ಲದಿದ್ದರೂ ಪ್ರತಿದಿನ ಶಾಲೆಗೆ ತಪ್ಪದೆ ಹೋಗುತ್ತಿದ್ದೆವು. ಬೇರೆ ತರಗತಿಯ ಮಕ್ಕಳಂತೆ ನಮಗೆ ಮನೆಗೆಲಸ ಕೊಡುತ್ತಿರಲಿಲ್ಲ, ತಪ್ಪು ತಪ್ಪು ಅಕ್ಷರ ಬರೆದರೂ ಏಟು ಬೀಳುತ್ತಿರಲಿಲ್ಲ. ಅಜ್ಜಿ ಮನೆಗೆ ಹೋಗಲು ಶಾಲೆಗೆ ಚಕ್ಕರ್ ಹೊಡೆದರೂ ನಮಗೆ ಬೆತ್ತದ ರುಚಿ ತೋರಿಸುತ್ತಿರಲಿಲ್ಲ. ಮೇಷ್ಟ್ರ ಈ ನಡವಳಿಕೆ ನಮಗೆ ಅಚ್ಚರಿ ಉಂಟುಮಾಡುತ್ತಿತ್ತು. ಆದರೆ ಸೌಲಭ್ಯಗಳ ವಿಚಾರ ಬಂದರೆ ಉಚಿತ ಸಮವಸ್ತ್ರ ಮತ್ತು ಪುಸ್ತಕ ಹೊರತುಪಡಿಸಿ, ಬೇರೆ ತರಗತಿಯ ಮಕ್ಕಳಂತೆ ಮದ್ಯಾಹ್ನದ ಹಾಲು, ಹುರಿಹಿಟ್ಟು ಎಲ್ಲವುಗಳಲ್ಲಿ ನಮ್ಮ ಪಾಲು ಮೀಸಲಿರುತ್ತಿತ್ತು. ಒಟ್ಟಾರೆ “ಕಲಿಕೆ ಕಡ್ಡಾಯವಿರಲಿಲ್ಲ, ಸಂತಸಕ್ಕೆ ಮಿತಿ ಇರಲಿಲ್ಲ”.
ಇಂದು ಪರಿಸ್ಥಿತಿ ಬದಲಾಗಿದೆ ಸರ್ಕಾರಿ ಶಾಲೆಗಳು ಬರಿದಾಗಿವೆ. ಎಲ್ಲೆಲ್ಲೂ ಹುಟ್ಟಿಕೊಂಡಿರುವ ಕಾನ್ವೆಂಟ್ ಶಾಲೆಗಳ ಕಾರಣ ಮೂರೇ ವರ್ಷಕ್ಕೆ ಮಕ್ಕಳಿಗೆ ಮಣ ಭಾರದ ಪುಸ್ತಕದ ಮೂಟೆ ಹೊರಿಸಿ ಶಾಲೆಗೆ ಅಟ್ಟುತ್ತಿದ್ದೇವೆ. ಮಾಯಾ ಲೋಕದಂತಿದ್ದ ಚಿಟ್ಟೆ ಕ್ಲಾಸ್ ಮಾಯವೇ ಆಗಿ ಹೋಗಿದೆ. ರಾಶಿ ರಾಶಿ ಮನೆಗೆಲಸ, ಮಕ್ಕಳು ಮಾಡಲು ಸಾಧ್ಯವಿಲ್ಲದ ಪ್ರಾಜೆಕ್ಟ್ ವರ್ಕುಗಳು ಮಕ್ಕಳ ಬಾಲ್ಯವನ್ನು ಕಸಿದುಕೊಂಡಿವೆ. ಎಂದೋ ಬರುವ ಭವಿಷ್ಯದ ಭ್ರಮೆಯಲ್ಲಿ, ವರ್ತಮಾನವನ್ನು ನಾಶಮಾಡಿದ್ದೇವೆ. ಮಕ್ಕಳನ್ನು ಓದು ಬರಹದ ಯಂತ್ರಗಳಾಗಿಸಿದ್ದೇವೆ.
-ಡಾ. ದೋ. ನಾ ಲೋಕೇಶ್
ಅತ್ಯುತ್ತಮವಾದ ನಿಮ್ಮ ಈ ಕತೆಗಳನ್ನು ಕೇಳುತಿದ್ದರೆ ನನ್ನ ಬಾಲ್ಯದ ಸವಿ ನೆನಪುಗಳು ಕಣ್ಣಮುಂದೆ ಬರುತ್ತದೆ ಮತೊಮ್ಮೆ ಬಾಲ್ಯ ಬೇಕಿನುಸುತ್ತದೆ