ಹರಿವು: ತಿರುಪತಿ ಭಂಗಿ

“ಕೇಳ್ರಪೋ..ಕೇಳ್ರೀ..

ಇಂದ ಹೊತ್ತ ಮುನಗೂದ್ರವಳಗಾಗಿ ಊರ ಖಾಲಿ ಮಾಡ್ಬೇಕಂತ ನಮ್ಮ ಡಿ.ಸಿ ಸಾಹೇಬ್ರ ಆದೇಶ ಆಗೇತಿ, ಲಗೂನ ನಿಮ್ಮ ಸ್ವಾಮಾನಾ ಸ್ವಟ್ಟಿ ತಗೊಂದ, ನಿಮ್ಮ ದನಾ ಕರಾ ಹೊಡ್ಕೊಂಡ, ತುಳಸಿಗೇರಿ ಗುಡ್ಡಕ ಹೋಗಿ ಟಿಕಾನಿ ಹೂಡ್ರೀ ಅಂತ ಹೇಳ್ಯಾರು, ನನ್ನ ಮಾತ ಚಿತ್ತಗೊಟ್ಟ ಕೇಳ್ರಪೋ..ಕೇಳ್ರೀ.. ಹೇಳಿಲ್ಲಂದಿರೀ.. ಕೇಳಿಲ್ಲಂದಿರೀ ಡಣ್..ಡಣ್” ಅಂತ ಡಬ್ಬಿ ಯಮನಪ್ಪ ಡಂಗರಾ ಹೊಡದದ್ದ ತಡಾ. ಊರ ಮಂದಿಯಲ್ಲಾ ಡಬ್ಬಿ ಯಮನಪ್ಪನ ಮಾತ ಕೇಳಿ ಗಾಬ್ರಿ ಆದ್ರು.

ಕೆಂಪರಾಡಿ ಹೊತಗೊಂದ, ಎರಡೂ ಕಡವಂಡಿ ದಾಟಿ, ದಡಬಡಿಸಿ ಹರಿದ ಬರತಿದ್ದ ನದಿ ನೋಡಾಕ ಊರ ಮಂದಿಯಲ್ಲ ಗುಬಗೂಡ್ಕೊಂಡ ಬೆಪ್ಪಸಬೆರಗಾಗಿ ನಿಂತ್ಕೊಂಡಿದ್ರು. “ಅಲೆಲೆಲೆ.. ಇದರೌವ್ನ ಹೊಳಿ ಏನ್ ಅಂವಸ್ರ ಐತ್ರರ್ಲೇ ಯಪ್ಪಾ..! ಹಿಂಗತಿ ಅಂವಸ್ರಾ ಮಾಡ್ಕೊಂತ ಬಂದ್ರ ಮುಗದ ಹೋತ, ಮೊದಲ ನಮ್ಮೂರ ತೆಗ್ಗನ್ಯಾಗಬ್ಯಾರೆ ಐತಿ, ಪಟಕ್ನ ರಾತ್ರಿ ಬಂದ ಊರ ಹೊಕ್ಕ್ರ ನಮ್ಮ ಕಥಿನ ಮುಗಿತಿ, ಊರೆಲ್ಲ ನೀರಪಾಲ..!” ಹೊಳಿ ಬರುವ ಅಂವಸ್ರಾ ನೋಡಿ ಹೆದರಿದ ಸಿಂಗಾಡಿ ಬಾಯಾಗಿಂದ ಮಾತಗಳು ಜಿಟಿಜಿಟಿ ಮಳಿಹಂಗ ಸುರಿಯಾಕತ್ತಿದ್ವು. “ಸುಮ್ನಿರೋ ಮಾರಾಯಾ ಯಾವಾಗ ನೋಡಿದ್ರೂ ನೀ ಒಬ್ಬ ಅಂಜಿ ಸಾಯಿತಿಯಲ್ಲಾ.. ನೀ ಅಷ್ಟ ಅಂಜೂದಲ್ದ ನಿನ್ನ ಸುತ್ಲ ಇದ್ರಾರ್ನೂ ಅಂಜಿಸಿ ಹಿಕ್ಕಿ ಹಾಕಸ್ತಿ, ನೀ ಹೆಂತಾ ಹಿರಿಮನಷ್ಯಾ ಅರಾ ಅದಿ, ಎಂದರಾ ಒಂಥಟಗ, ಧೈರ್ಯದ ಮಾತ ಹೇಳಿಯಾ? ನಿನ್ನ ಮಾತ ಕೇಳಿದವ್ರೆಲ್ಲ ಮಕ್ಕೊಂಡಲ್ಲೆ ಉಚ್ಚಿ ಹೊಕೊಂಡ ತಪತಪಾ ಹಾಸಗಿ ತೊಸ್ಗೋಬೇಕ, ಹಂಗತಿ ಅಂಜಸ್ತಿ.. ಥೂ..! ಮುದೋಡ್ಯಾ.. ಹೋಗ ಅತ್ತಾಗ” ಸಿಂಗಾಡಿ ಆಡಿದ ಮಾತ ಕೇಳಿ ಧೈರ್ಯಕಳಕೊಂಡ ‘ಗುರನ್ಯಾ’ನೂ ಒಂದ ನಮೂನಿ ಬೇದಿಗೆ ಬಂದ ಹೆಣ್ಣಾಯಿ ಕುಂಯ್ಯಾಡ್ಸಿದ್ಹಂಗ ಕುಂಯಗುಡಾಕತ್ತಿದ್ದ.

ಊರಾಗೀನ ಹಿರ್ಯಾರು ಒತ್ತಟಿಗೆ ಸೇರಿ ಏನೇನೋ ಚರ್ಚೆಮಾಡ್ತಿದ್ರ, ಕೆಲ ಹೆಂಗಸ್ರು ಮನ್ಯಾಗ ಯಾರಾರ ಸತ್ತಾಗ ಅಳತಿರ್ತಾರಲ್ಲಾ ಹಂಗ ಬೋರಾಡಿ, ನೆಲ ಬಡ ಬಡದ ಅಳಾಕ ಹತ್ತಿದ್ರು, ಮುಪ್ಪಾನ ಮುದಕ್ರು ನಾಂವ ಸತ್ತರ ಇಲ್ಲೆ ಸಾಯಿತೀವಿ, ‘ಹರಿಬ್ರಹ್ಮ’ ಬಂದರೂ ಊರಬಿಡುದಿಲ್ಲಂತ ಗೊಸಾಗೊಸಾ ಕೆಮ್ಮಕೋತ ಕ್ಯಾಕರಸ್ಕೋತ ಮುದಿಗಣ್ಣೀರು ಸುರಸಾಕತ್ತಿದ್ರು. ತುಂಟ ಹುಡುಗ್ರು “ಹೊಳಿ ಎಷ್ಟಕೊಂದ ಅಂವಸ್ರಾ ಮಾಡಿ ಬರಾಕತ್ತೇತಿ” ಅಂತ ಕಟಗಿ ಚುಚ್ಚಿ ಅದರ ಸ್ಪೀಡ ಮಾಪ ಮಾಡ್ತಿದ್ರು.

ಹಳೆ ಎಮ್ಮಿ ಸೆಗಣಿ ತಿನ್ನಾಕ ಹತ್ತಿದ್ಹಂಗ ಟಿ.ವಿ ಚಾನಲ್ ದಾವ್ರು ಹಗಲು-ರಾತ್ರಿ ಇದೊಂದ ಸುದ್ದಿ ಹೇಳಿ ಜನರಿಗೆ ಎಚ್ಚರಕಿ ಕೊಡು ನೆಪದಾಗ ಭಾಳ ಬಬ್ಬಾಟ ಮಾಡಿ ಹೆದ್ರಿಸಿ ಹೆದ್ರಿಸಿ ಸಾಯಹೊಡಿತಿದ್ರು. ಊರಿಂದ ಊರಿಗೆ ಹಾದಿ ಬೀದಿ ಕಟ್ಟಾಗಿದ್ದ ಸುದ್ದಿ, ಅಡ್ಯಾಡಾಕ ಅಡಚನಿ ಆದದ್ದು, ಮುಂದ ಆಗೂದು, ರಾಜಕಾರ್ಣಿಗಳು ಬೋಗಸ್ ಭಾಷಣ ಮಾಡಿದ್ದು, ಮ್ಯಾಲಿಂದ ಮ್ಯಾಲ ತೋರ್ಸಿ ತೋರ್ಸಿ ತೆಲಿ ಚಿಟ್ಟ ಹಿಡಸಿದ್ರು.

ಒಂದ ಟಿ.ವ್ಹಿ ಚಾನಲ್ಲದಾಗ ನೆರಹಾವಳಿಹಿಂದ ಊರೆಲ್ಲ ಮುನಗಿ, ಸಂಪೂರ್ಣ ಜಲಸಮ ಆದದ್ದು ತೋರಿಸುತ್ತಿದ್ದರು, ಮುಖ್ಯಮಂತ್ರಿ ಬಾಲಸುಟ್ಟಬೆಕ್ಕಿನಂತೆ ಏನ್ಮಾಡ್ಬೇಕು ಅಂತ ಗೊತ್ತಾಗದೆ. ಬಾಯಿಗೆ ಬಂದದ್ದು ಮಾತಾಡಿ ನೊಂದ್ಕೊಂಡ ಜನರ ಮನಸಿಗೆ ಒಂತಟಗ ಸಮಾಧಾನ ಮಾಡಾಕ, ತಗಲಾ ಬಗಲಾ ಆಸ್ವಾಸನೆ ನೀಡ್ತಿದ್ದ. ಮುಖ್ಯಮಂತ್ರಿ ಮಾತಾಡಿದ ಮಾತಿಗೆ ವಿರೋಧ ಪಕ್ಷದವ್ರು ಹೆಂಗಬೇಕಂಗ ಟೀಕಾ ಮಾಡ್ಕೋತ, ನೊಂದ ಜನರನ್ನ ರೊಚ್ಚಿಗೆಬ್ಬಿಸಿ, ಆಡಳಿತದಲ್ಲಿದ್ದ ಸರಕಾರದ ಮೋತಿಗೆ ಮಸಿಬಡ್ಯಾಕ ಜನರ ದಿಕ್ಕ ತಪ್ಪಿಸಿ, ಮೋಜನೋಡ್ತಿದ್ರು.

“ಈ ರಾಜಕೀ ನಾಲಾಯಕ್ರು ಮನಿ ಹಾಳಾಗಿ ಹತ್ತಿಬಿತಗೊಂದ ಹೋಗ್ಲಿ. ಪ್ರವಾಹ ಬಂದ ಜನರೆಲ್ಲ ಕಂಗಾಲಾದ್ರೂ ಇಂತಾದ್ರಾಗೂ ಈ ಹಲಕಟ್ಟಗೋಳ ಹುಚನಾಯಿಗತೆ ಕಚ್ಚಾಡೂದ ಬಿಡುದಿಲ್ಲನೋಡಂತ” ನಮ್ಮವ್ವ ಒಲಿಮುಂದ ಒಟಗುಡತಿದ್ಳು. ನಮ್ಮ ಅಪ್ಪ ಪಟಕ್ನ ಟಿ.ವ್ಹಿ ಬಂದ ಮಾಡಿದ.

ಮನಿ ಪಡಸಾಲ್ಯಾಗ ಅವ್ವ ಅಪ್ಪಾ ಎದರ ಬದರ ಕುಂತ ಭಾಳ ಗಾಢವಾಗಿ ಮಾತ್ಯಾಡಾಕತ್ತಿದ್ರು, ಇನ್ನ ನಮ್ಮ ಕತಿ ಮೂಗಿತು, ಅಂತಿದ್ದ ಅಪ್ಪ. “ಏನೂ ಆಗಂಗಿಲ್ಲ ಸುಮ್ಮನ ಇರ್ರೀ, ಧೈರ್ಯಾ ಯಾಕ ಕಳ್ಕೊತೀರಿ” ಅಂತ ಅವ್ವ ಅಪ್ಪಗ ಸಮಾಧಾನ ಮಾಡ್ತಿದ್ಳು. “ನಾವ ಸಾಲದಾಗ ಕೊಳಿಯುದಾತು. ಸಾಲಾ ಸೋಲಾ ಮಾಡಿ, ಬಾಳಿ, ದಾಳಿಂಬೆ ಹಚ್ಚಿದ್ದೆ. ಇನ್ನ ಎರಡ ಮೂರ ತಾಸದಾಗ ತ್ವಾಟ ನೀರಪಾಲ ಅಕ್ಕೈತಿ” ಮುತ್ಯಾ ಸತ್ತಾಗ ಹಣಿಗೆ ಕೈ ಹಚಗೊಂದ ಕುಂತಂಗ ಅಪ್ಪ ಪಡಸಾಲಿ ಕಂಬಕ್ಕ ಕುಂತಿದ್ದ. ಅಪ್ಪಗ ಊರಬಿಟ್ಟ ಹೋಗು ಚಿಂತಿಕಿಂತ ತನ್ನ ಸಾಲಾ, ತ್ವಾಟ ಮುಳಗಿ ಬೆಳಿ ನಾಶ ಆಗೂದರ ಕಡೆ ಹೆಚ್ಚ ಗಮನಿತ್ತು. ಅಪ್ಪನ ಮೋತಿ ನೋಡಿ ಅವ್ವ “ಆ ಹಾಟ್ಯಾನ ದೇವ್ರಿಗೆ ನಾಂವ ನೆಮ್ಮದಿ ಇಂದ ಬದಕುದ ಚಂದ ಕಾಣವಲ್ಲದೇನೋ” ಅಂತ ಸೊರಕ್ ಸೊರಕ್ ಎರಡ ಸರತಿ ಸುಂಬಳಾ ಸೀತ ಗಳಾಗಳಾ ಅಳಾಕ ಹತ್ತಿದ್ಳು. ಇವರ ಮಾಡೂ ಆಟಾ ನೋಡಕೋತ ಅಲ್ಲೇ ಹಸಗ್ಯಾಗ ಮಲಗಿದ್ದ ನಮ್ಮಜ್ಜಿ ಅಡ್ಡ ಬಾಯಿ ಹಾಕಿ “ಯಾಕ ಅಳತಿ ಬಿಡವ್ವಾ. ಇದೇನ ನಮಗಷ್ಟ ಆಗು ನಷ್ಟ ಅಲ್ಲಾ. ನೂರಾರ ಹಳ್ಳಿ ಜನರಿಗೆ ಆಗು ನಷ್ಟೈತಿ. ಬದುಕನ್ಯಾಗ ಇಂತಾವ ಬರೂವ ಸುಮ್ಮಕಿರಿ ಹಳಹಳಿ ಮಾಡ್ಕೋಬ್ಯಾಡ್ರಿ” ಅಜ್ಜಿ ಆಡಿದ ಮಾತು ಯಾರೂ ಕಿವ್ಯಾಗ ಹಕ್ಕೊಳಿಲ್ಲ.

                      ******* 

ಓಣಿ ಒಳಗ ಡಬ್ಬಿ ಯಮನಪ್ಪ ಡಂಗರಾ ಹೊಡದ ಹ್ವಾದ ಮ್ಯಾಲಿಂದ ಗುಬುಗುಬು ಗದ್ದಲಾ, ದನಿ, ಊರಬಿಟ್ಟ ಹ್ಯಾಂಗ ಹೋಗೂದಂತ ಚಿಂತಿ, ಅದು ಬ್ಯಾರೆ ಸಂಜಿ ಅನ್ನುಕ ಊರ ಬಿಡಲಿಲ್ಲಂದ್ರ ಎಲ್ಲರೂ ನೀರ ಪಾಲ ಅಕ್ಕಾರ ಅನ್ನು ಭಯ ಮತ್ತೊಂದ ಕಡೆ. ನನಗ ಮನಿಯಾಗ ಕಾಲ ನಿಲ್ಲದಂಗ ಆಗಾಕತ್ತಿದ್ವು. ಮೆಲ್ಲಕ ಮೆಟ್ಟಲಾ ಇಳದ, ತಂಬಲಗೈ ಚಡ್ಡಿಗೆ ವರಸ್ಕೋತ
ಹೊರ್ಯಾಕ ನಡೆದ್ಯಾ. “ಏ ಹುಚಪ್ಯಾಲಿ ಹೋಳಿಕಡೆ ಹ್ವಾದಗೀದಿ, ಲಗೂನ ಬಾ, ಬಂಡಿ ಹೊಡ್ಕೊಂಡ ಮದ್ಯಾನ ಅನ್ನೂಕ ದೊಡ್ಡವ್ವನ ಮನಿಗೆ ಹೋಗುನು” ಅಂತ ಅವ್ವ ಹೊರಗ ಜಿಗತಾ ಕೊಡ್ತಿದ್ದ ನನ್ನ ಕಿವ್ಯಾಗೊಂದು ಸಣ್ಣ ಮಾತಿನ ಬಾನಾ ಬಿಟ್ಟಿದ್ಳು. ಅವ್ವನ ಮಾತಿಗೆ ನಾ ಹಾಂ.. ಹೂಂ ಹೂಂ ಅನಕೋತ ಟನ್ ಟನ್ ಪುಟಚಂಡ ಜಿಗದ್ಹಂಗ ಜಕ್ಕೋತ ಮನಿಮುಂದಿನ ಅಂಗಳದಾಗ ಬಂದ ನಿಂತಿದ್ದೆ. ಆಗ ನಮ್ಮ ಮನಿ ಎದುರಿಗಿದ್ದ ಗಂಡೆಲ್ಲವ್ವಾ..

“ಅಯ್ಯೋ..! ದೌಳಾಕಿನ, ನಮ್ಮ ಬದುಕೆಲ್ಲಾ ನೀರಪಾಲ ಮಾಡಾಕ ನಿಂತಿಯಲ್ಲವ್ವೋ.. ಜೇನಿನ ಗೂಡಿನಂಗ ಇದ್ದ ನಮ್ಮೂರ ಬದುಕು ಚದುರಿ ಚಿಲ್ಲಾಪಿಲ್ಲಿಮಾಡಿ, ನೀ ಏನ್ ಖುಷಿಪಡ್ತಿಯೋ..ಪಡು, ನಾಂವ ಹಾಳಾದ್ರ, ನಾಂವ ಗೋಳಾಡಿದ್ರ, ನಿನಗ ಇದರಿಂದ ಭಾಳ ಸಂತೋಷ ಅಕ್ಕಿದ್ರ, ಊರಕೇರಿ ನುಂಗಿ ನೀರ ಕುಡದ ಹೋಗವ್ವೋ” ಎಂದು ಗಂಡೆಲ್ಲವ್ವಾ ಅಬ್ಬರಿಸಿ ಹರಿದುಬರುತ್ತಿದ್ದ ಘಟಪ್ಪಭಾ ನದಿಕಡೆ ಮಕಾಮಾಡಿ ಚೀರಾಡ್ತಿದ್ಳು. “ಏ ಹುಚ್ಚವ್ವಾ ಹಳೆ ಹುಚ್ಚವ್ವಾ.. ಆ ನದಿಗೇನ ಸೊನ್ನಿ ಸುರತಿ ಇರ್ತೈತೇನ..? ಹಂಗ್ಯಾಕ ಒದರ್ತಿ, ಲಗು ಲಗು ಸ್ವಾಮಾನ ಕಟಗೋ ಹೋಗೂನು” ಅಂತ ಅಕಿ ಮಗಳು ಮಂಜಿ ಗಡಬಡಿಸಿ, ಮನ್ಯಾಗಿದ್ದ, ಹಾಸಗಿ, ಬಾಂಡೇ ಸ್ವಾಮಾನಾ, ಕಾಳಕಡಿ ಕಟ್ಟಿ ಒತ್ತಟ್ಟಿಗೆ ಇಡಾಕತ್ತಿದ್ಳು.

ನಾ ಹಂಗ ಮುಂದಕತ ಹೋಗುವಷ್ಟೋತ್ತಿಗೆ ಪಿಂಜಾರ್ ಲಾಲಸಾಬ್ ಮುಂಜಮುಂಜಾನೆ ಎಳ್ ಏಳುತ್ಲೆ ಸೆರೆ ಕುಡದ ನದಿಕಡೆ ನಿಂತ “ಲೇ ಬೊಸಡೀ ನಾಂವ್ ಇಲ್ಲಿ ಚಂದ್ಹಂಗ ಇದ್ದದ್ದ ನಿನಗ ಸರಿ ಬರವಲ್ದಾ” ಎಂದು ಜೋಲಿ ಹೊಡ್ಕೋತ ಹೋಗಿ ನದಿ ಬೈಯ್ ಬೈಯುತಿದ್ದಂಗ ಮುಂದಿದ್ದ ರಾಡ್ಯಾಗ ದಪ್ ಅಂತ ಬಿದ್ದ. ಆಗ ನಾನು ಕೊಕ್ಕಾಡ್ಸಿ ನಗತೊಡಗಿದೆ. “ಯಾಂವ ಲೇ ನೀನು ನನ್ನ ನೋಡಿ ನಗತಿಯಾ ಮಗನ” ಅಂತ ತಿನಕ್ಯಾಡಿ ಅಂವ ಮ್ಯಾಲ ಏಳ್ಗೋಡ್ದ ನಾನು ಹರಿಗಲ್ಲ ಬಿದ್ದ ಓಡೋಡಿ ಕನಕವ್ವಮ್ಮನ ಮನಿ ಮುಂದ ನಿಂತಿದ್ದೆ. ಅಲ್ಲಿ ಕನಕವ್ವಮ್ಮ…

“ನನ್ನ ಬಾಳಿ ತ್ವಾಟ ನೀರಪಾಲಾತಲ್ಲೋ ಗಂಗಿ, ಹಡಬಿಟ್ಟಿ ಸಾಲಾ-ಸಮದಾ ಮಾಡಿ ಹೊಟ್ಟಿಗೆ ಕೂಳಿಲ್ಲದ ದುಡದ ಬೆಳಸಿದ್ದ ಬಾಳಿತ್ವಾಟೋ.. ಅದು.. ಹಹಹಹ.. ಬಿದ್ದಾಡಿ ಒಂದ ಅರಗಳಗ್ಯಾಗ ನುಂಗಿ ನೀರ್ಕುಡಿದಲ್ಲೇ.. ನಿನ್ನ ಗಲ್ಲಾ ಕಡಿಲಿ, ನಿನ್ನ ಒಡಲನ್ಯಾಗ ಬೆಂಕಿ ಬೀಳಲಿ” ಕನಕವ್ವಮ್ಮ ದಿನಾ ತನ್ನ ಸ್ವಸಿಗೆ ಬೈಯು ಬೈಗಳಾನ ಸೇಮಟೂ ಸೇಮ್ ತುಂಬಿ ಹರಿಯುವ ನದಿಗೆ ಸಿಟ್ಟಿಗೆದ್ದು ಬೇದು ತನ್ನ ಹೊಟ್ಯಾಗಿನ ಸಂಕಟಾ ಕಡಿಮಿಮಾಡ್ಕೊಳ್ಳಾಕತ್ತಿದ್ಳು.

“ಏ ಹಲಕಟ್ಟ ಮುದಕಿ, ಹೊಳಿ ಅಂದ್ರೇನಂತ ತಿಳದಿ, ಗಂಗಾಮಾತೆ..! ಅಕಿಗೆ ಹಿಂಗ ಬೈದೆಂದ್ರ ಸಾಯುವಾಗ ನೀರ ನೀರ ಅಂದ ಸಾಯತಿ.. ನಾಲಿಗೆ ಒಂದ ತಟಗ ಹಿಡತ ಇಟಗೊಂದ ಮಾತಾಡ, ಮುದುಕ್ಯಾಗಿ, ಮ್ಯಾಗಿನೂ ತಳಗಿನೂ ಎಲ್ಲಾ ಬೆಳ್ಳಗ ಆಗ್ಯಾವ, ಒಂದ ತಟಗೂ ಬುದ್ದಿಬ್ಯಾಡಾ ನಿನಗ” ನಾಕಾರ ಅಕ್ಷರದ ದ್ಯಾನ ಇದ್ದ ಮಂಜಿ ತನ್ನ ಶ್ಯಾನ್ಯಾತಾನ ಬಳಸಿ ಕನಕವ್ವಮ್ಮನ ಬಾಯಿ ಬಂದಮಾಡ್ಬೇಕಂತ ಮಾತಾಡಿದ್ದೇ ತಡಾ. ಕನಕವ್ವಮ್ಮಾ ಮೈಯ್ಯಾಗ ದೆವ್ವ ಹೊಕ್ಕವ್ರಗತೆ ತೇಕ್ಕೋತ್ತ, ಕೆಮ್ಮಕೋತ, ಕ್ಯಾಕರಸ್ಕೋತ, ಏನಂದಲೇ.. ನಿನ್ನ ಕುಂಡಿನ ಹಡಾ.. .. ನಾಕ ಅಕ್ಷರ ಓದ್ಕೊಂಡಿಯಂತ ನನಗ ಬುದ್ದಿ ಹೇಳ್ತಿಯೇನ್ಲೇ ಕಸಬಿ, ಬದುಕಂದ್ರ ಏನ್ ಸೆಂಟಾ ಗೊತ್ತಲೇ ನಿನಗ, ಮೋತಿಗೆ-ಮುಕಳಿಗೆ ಪೌಡರ ಹಚಗೊಂದ ಪ್ಯಾಟಿ ಸುತ್ತಿದಂಗಂತ ಮಾಡಿಯೇನ..? ಸಂಚ್ಯಾನಾ ಬೆಳತಾನಾ ಮೂಕಳಿ ರಾಡಿ ಮಾಡ್ಕೊಂಡ, ಬೆವರಾ ಸುರಿಸಿ ಬೆಳಸಿದ ಬಾಳಿತ್ವಾಟಾ, ಈ ಹಡಸುರಂಡಿ ಗಂಗವ್ವ ಗುಳಮ್ ಮಾಡಿದ್ದು, ನೀ ಏನ್ ಹಡಸಿ ಕೊಡ್ತಿಯೇನ್.. ತೇಕುತ್ತ, ಎದುಸಿರು ಬಿಡುತ್ತ ಬಂದಾಕಿನ ನೀಳಾದ ಮಂಜಿ ಕೂದಲಕ್ಕ ಕೈಹಾಕಿ ಜೆಗ್ಗತೊಡಗಿದ್ಳು, ಮಂಜಿ ಚಿಟಾರನೇ ಚೀರಿ, ಮುದಕಿನ ಕಸೂವಿಂದ ದೂರ ತಳ್ಳಿದ್ಳು, ಕನಕವಮ್ಮ ಹಳಾನ ಚಿತ್ತ ಬಿದ್ದ ಕಣ್ಣಕಣ್ಣ ಬಿಡಾಕತ್ತಿದ್ಳು. ಹೊಳಿ ನೋಡುವ ಕಾತರದಾಗ ಇದ್ದ ಮಂದಿ ಎಲ್ಲರೂ ಗುಬಗುಡ್ಕೊಂತ ಕನಕವ್ವಮ್ಮನ ಸೂತ್ತ ಕೂಡಿ, ಮೋತಿಗೆ, ನೀರ ಚಿಮಕಿಸೂದು, ಗಾಳಿ ಹೊಡೂದು, ಮಾಡಾಕತ್ತಿದ್ರು, ಅದರಾಗ ಒಂದೀಸ ಮಂದಿ, ಹೆಂಗಸ್ರು ಇದ ಸಿಕ್ಕ ಅವಕಾಶ ಅಂತ ಬಾಯಿಗೆ ಬಂದಂಗ ಮಂಜಿಗೆ ಮಂಗಳಾರತಿ ಮಾಡಾಕತ್ತಿದ್ರು. “ನಿನ್ನ ಬುದ್ದಿವಂತಿಕಿ ನಿನ್ನ ತಲ್ಯಾಗಷ್ಟ ಇರ್ಲಿ, ಹುಚ್ಚಲೌಡಿ. ಒಂದ ಬೆಳಿ ಬೆಳಿಬೇಕಂದ್ರ ಎಷ್ಟ ಕಷ್ಟ ಐತೆಂತ ನಿನಗೇನ ಮೂಕಳಿ ಗೊತ್ತೈತಿ. ಪುಸ್ತಾಕ ಓದಿ ಮತ್ತೊಂದ ಪುಸ್ತಾಕ ಬರದ್ಹಂಗ ಅಲ್ಲ ಈ ಭೂಮ್ಯಾಗ ಬೆಳಿ ತಗಿಯುದ, ಕಿಸಮಂಗ್ರಿ ಹಳೆ ಕಿಸಮಂಗ್ರಿ” ಎಂದು ಹಚ್ಚಿ ಜಾಡಿಸುತ್ತಿದ್ರು. ಕನಕವ್ವಮ್ಮಗ ಹ್ವಾದ ಉಸರ ಪಟಕನ್ ಮರಳಿ ಬಂದಾಗ, ಅಕಿ ಹೊಟ್ಯಾಗಿದ್ದ ಸಿಟ್ಟನೂ ತಣ್ಣಗಾಗಿತ್ತು.

ಹಿಂತಾದ್ರಾಗೂ ಆನದಿನ್ನಿ ಶಿವ್ಯಾ ಬದ್ನೂರ ಲಕ್ಕಿಗೆ ಕನ್ನ ಸನ್ನಿ ಮಾಡಿ ಕರಿಯುತ್ತ ಪೂಜಾರ ಕಣಕಿ ಬನಮಿಕಡೆ ನಡೆದ. ಲಕ್ಕಿ ಕಿಸಕ್ ಅಂತ ಹಲ್ಲ ಕಿಸ್ಗೋತ ಅಂವ್ನ ಹಿಂದಿಂದ ಟಕಾಮಕಾ ಅತ್ತಾಗಿತ್ತಾಗ ಗೋನ ಹೊಳಸ್ಯಾಡಿ ಮಂದಿಮಕ್ಕಳ್ನ ನೋಡ್ಕೋತ ಬಣಮಿ ಹಿಂದ ನೋಡ ನೋಡುತ್ತಿದಂಗ ಮಂಗಮಾಯ ಆದ್ರು. ನಾ ಪೂಜೇರ ಗೂಟಗಲ್ಲಮ್ಯಾಲ ನಿಂತ ಸಾಕಷ್ಟ ತಿನಕ್ಯಾಡಿ ನೋಡಿದ್ರೂ ಅವರ ಮಾಡುವ ಡಿಂಗಡಾಂಗ ಆಟ ನನಗ ಕಾಣಸಲೇ ಇಲ್ಲ. ಇಲ್ಯಾಕ ನಿಂತಿ ಲೇ ಕಿಸಮಂಗ್ರಿ, ಹೊಳಿ ಬರಾಕತ್ತೈತಿ ಮನಿಕಡೆ ಹೋಗ ಅಂತ ಪುಚ್ಚೆಲ್ಲಪ್ಪ ದೊಡ್ಡದನಿಮಾಡಿದಾಗ ಪೂಜೇರ ಗೂಟಗಲ್ಲಮ್ಯಾಲಿಂದ ಟನ್ ಅಂತ ಜಿಗದು ಬಂವ್ ಅಂತ ಓಡತೋಡಗಿದೆ. ಓಡಿ ಬಂದು ದುರಗ್ಗವನ ಗುಡಿಮುಂದ ಬಂದು ನಿಂತೆ.

ಅಲ್ಲಿ ಗುಬು ಗುಬು ಮಂದಿ ಕೂಡಿದ್ರು. ಸಂತಪ್ಪನ ಮಯ್ಯಾಗ ದುರಗವ್ವ ಆಯಿ ಬಂದಿದ್ಳು. ಲೇ.. ಮಕ್ಕಳಾ ಯಾಕ ಹೆದರ್ತಿರಿ, ನನ್ನ ತಂಗಿ ತನ್ನ ಕಷ್ಟಾ,ನೋವಾ ನನ್ನ ಮುಂದ ಹೇಳಾಕ ಬರಾಕತ್ಯಾಳ.. ನಮ್ಮ ಅಣ್ಣ ಹನಮಪ್ಪನ ಮೋತಿ ತೊಳ್ಯಾಕ ಬರಾಕತ್ಯಾಳ, ಅಕಿ ಬಂದೇನ ತಿಂಗಳಾನಗಟ್ಟಲೇ ಇಲ್ಲೇ ಟಿಕಾಣಿ ಹುಡಾಂಗಿಲ್ಲ, ಬಲೆಬಾರ ಅಂದ್ರ ಒಂದೆರಡ ದಿನಾ ಅಷ್ಟ ಇರ್ತಾಳ, ನೀವ ಬಾಳ ಗಾಬ್ರಿ ಆಗಬ್ಯಾಡ್ರಿ, ನೀವ ಹಾಕಿದ ಬೆಳಿ ನೀವ ಅಷ್ಟ ತಿಂದ್ರ ಹ್ಯಾಂಗ, ನನ್ನ ತಂಗಿಗೂ ಬ್ಯಾಡೇನ, ಈ ವರ್ಷ ಅಕಿಗೆ ನಿಮ್ಮ ಪಾಲ ಬಿಟ್ಟಕೊಡ್ರಿ.. ಮುಂದಿನ ಸಲಾ ನಿಮಗ ಡಬಲ್ ಟಿಬಲ್ ಅಕೈತಿ, ಅಂಜಬ್ಯಾಡ್ರಿ.. ಅಳಕಬ್ಯಾಡ್ರೀ.. ಲಗೂನ ಊರ ಬಿಟ್ಟ ಹೋಗ್ರೀ..” ಅಂತ ಸಂತಪ್ಪಾನ ಮೈಯಾಗ ಬಂದ ದುರಗವ್ವ ಆಯಿ ಕುಣಿ ಕುಣಿದು ಹೇಳತಿದ್ದಳು.

ಬಪ್ಪರೇ ಮಗನಾ, ಟಿವ್ಯಾಗ, ಪೇಪರದಾಗ, ಆಗಳೇ ಯಮನಪ್ಪ ಡಂಗರಾ ಹೊಡದ ಹ್ವಾದ ಎಲ್ಲಾ ಸುದ್ಧಿ ಕಲೆಕ್ಟ್ ಮಾಡ್ಕೊಂಡ, ಹೆಂಗ ಪುಂಗಿ ಊದಾಕತ್ಯಾನ ನೋಡ, ಬದ್ಮಾಸ್ ಅಂತ ವಿಜಯಪ್ಪಗೌಡರ ಮಗಾ ವಿವೇಕಗೌಡ ಕೊಕ್ಕಾಡ್ಸಿ ನಗತೊಡಗಿದ. ಗೌಡ್ರ ನೀವ ಭಾಳ ಸ್ಯಾಣ್ಯಾರದಿರನ್ನುದ ನಮಗ ಗೊತ್ತೈತಿ, ದೇವ್ರ ವಿಷ್ಯಾದಾಗ ಹಿಂಗೆಲ್ಲ ನಕಲಿಗಿಕಲಿ ಮಾಡಬ್ಯಾಡ್ರೀ..ಮದಲ ಬೆರಕೀ ದೇವ್ರ ಅಕಿ.. ದುರಗವ್ವ. ಅದು ಬ್ಯಾರೆ ಈಗ ಬರಗುಡ್ಕೋತ ಬರಕಾತಾಳಲ್ಲ ಗಂಗವ್ವ..ಗಂಗಾಮಾತೆ ಅವಳ ತಂಗಿ ಅಂತ. ನೀವ ಉಪರಾಟಿ ತಿಪರಾಟಿ ಮಾತಾಡಿ ದೇವ್ರರ್ನ ಎದರ ಹಕ್ಕೋಬ್ಯಾಡ್ರೀ ಅಂತ ಸಿದ್ದಪ್ಪ ಮುತ್ಯಾ ವಿವೇಕಗೌಡರಗೆ ತಿಳಿಹೇಳಾಕ ಹ್ವಾದ.

ಏ ಮುತ್ತ್ಯಾ ದೇವ್ರ ಇರೂದ ಸುಳ್ಳು, ಅಂತಾದ್ರಾಗ ಈ ಕಚ್ಚಿ ಹರಕ ಸಂತಪ್ಪನ ಮೈಯಾಗ ದುರಗವ್ವ ಬರ್ತಾಳಂದ್ರ ನನಗ ಭಾಳ ವಂಡರಾತು. ಇರ್ಲಿ ಬಿಡ್ರೀ ಗೌಡ್ರ ವಂಡರರಾ ಇರ್ಲೀ ಪಂಡಾವರಾದರೂ ಇರಲಿ, ಈಗ ದೇವ್ರ ಅದಾನೋ ಇಲ್ಲೋ ಅನ್ನುದ ಮುಖ್ಯ ಅಲ್ಲ. ಮೊದಲ ಊರ ಮುನಿಗೆ ಹೊಂಟೈತಿ, ನಾವೆಲ್ಲ ಜ್ವಾಡ್ನಿ ಕಿತ್ತಗೊಂದ ಹೊಕ್ಕಿವಿ, ಊರಾಗ ಉಳಿಯವ್ರ ಅಂದ್ರ ಈ ನಮ್ಮ ತಾಯಿ ದುರಗವ್ವ. ಮತ್ತ ನಮ್ಮನ್ನ ಕಾಯೋ ಹನಮಪ್ಪ. ಗಂಗವ್ವ ಬಂದ್ರೂ ಊರಿಗೆ ಏನೂ ದೋಖಾ ಆಗದಂಗ ಸುಮ್ನ ಬಂದ ಸುಮ್ನ ಹೋಗಂತ ಕೈಮುಗದ ಕೇಳಕೊಳ್ರೀ. ಸಿದ್ದಪ್ಪ ಮುತ್ಯಾನ ಮಾತ ಕೇಳಿದ ಮಂದಿ, ಅಡ್ಡ ಬಿದ್ದ ಎಲ್ಲರೂ ದುರಗವ್ವನ ಗುಡಿ ಮುಂದ, ಉದೋಕ ದೀನ್ ಹಾಕಿದ್ರು.

ವಿವೇಕಗೌಡ ನಕ್ಕೋತ.. “ಏನ್ ಮೂರ್ಕರ ಅದಿರೋ.. ಇನ್ನ ನೀವ ಯಾವಾಗ ಸುಧಾರಣೆ ಅಕ್ಕಿರೋ” ಅನಕೋತ ಬೋಬೈಲ್ ಬಟನ್ ಪಟಪಟ ಒತ್ತಾಡುತ್ತ ಮನಿಕಡೆ ಹೊಂಟ.

ದಾಸರ ರಂಗಪ್ಪ ತೆಲಿಮ್ಯಾಲ ಒಂದ ದೊಡ್ಡ ಗಂಟ ಹೊತಗೊಂದ, ಕೈಯಾಗ ಒಂದ ಕೋಡಮುರಕ ಆಡಾ ಹಿಡ್ಕೊಂದಿದ್ದ. ಆ ಆಡಿನ ಹಿಂದ ಎರಡ ಮರಿಗಳು ಜಿಕ್ಕೋತ ಜಿಕ್ಕೋತ ದಾರಿ ಹಿಡದಿದ್ದವು. ರಂಗಪ್ಪನ ಹೆಂತಿ, ದಮ್ಮದೆನೆ ಒಂದ ಗಂಟು ಹೊತಗೊಂದು ಕಣ್ಣೀರು ಹಾಕುತ್ತ ಗಂಡನ ಹಿಂದಿದ್ದೆ ನಡೆದಿದ್ದಳು. ಒಬ್ಬಾರದ ಮೇಲೆ ಒಬ್ಬರು ಒಬ್ಬರು ತಮ್ಮ ತಮ್ಮ ಜ್ವಾಡ್ನಿ ಹೊತ್ಗೊಂದು, ದನಾ-ಕರಾ ಹೊಡ್ಕೊಂಡು, ಕೂಸು-ಕುನ್ನಿ ಕರ್ಕೊಂಡು ಹರಿಯುವ ನದಿಗೆ ಬೆನ್ನುತೋರಿಸುತ್ತ, ಊರ ಸೀಮೆ ದಾಟಿದರು.

-ತಿರುಪತಿ ಭಂಗಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಎಂ.ಜವರಾಜ್
ಎಂ.ಜವರಾಜ್
2 years ago

‘ಹರಿವು’ ತನ್ನ ವಿಶಿಷ್ಟ ಭಾಷಾ ಸೊಗಡಿಂದ ಕೂಡಿರುವ ಒಂದು ತೂಕದ ಕಥೆ. ನದೀಪಾತ್ರದ ಗ್ರಾಮವಾಸಿಗಳ ಜನರ ಬದುಕಿನ ನಡುವೆ ದುತ್ತನೆ ಎರಗುವ ಪ್ರವಾಹದ ಸಂದರ್ಭದ ತವಕ ತಲ್ಲಣಗಳನ್ನು ಇಡಿಯಾಗಿ ಕಟ್ಟಿಕೊಟ್ಟಿರುವ ಮಹತ್ವದ ಕಥೆ!

1
0
Would love your thoughts, please comment.x
()
x