ನಿಲುವಂಗಿಯ ಕನಸು (ಅಧ್ಯಾಯ ೧೬-೧೭): ಹಾಡ್ಲಹಳ್ಳಿ ನಾಗರಾಜ್

ಅಧ್ಯಾಯ ೧೬: ಹೊನ್ನೇಗೌಡನ ಟೊಮೆಟೋ ತೋಟ

ತೀವ್ರಗತಿಯಲ್ಲಿ ಜರುಗಿದ ಘಟನಾವಳಿಗಳ ಹೊಡೆತದಿಂದ ಚೆನ್ನಪ್ಪನ ಮನ್ನಸ್ಸು ವಿಚಲಿತವಾಗಿತ್ತು. ಮಂಕು ಬಡಿದವರಂತೆ ಕುಳಿತ ಗಂಡನನ್ನು ಕುರಿತು ‘ಅದೇನೇನು ಬರುತ್ತೋ ಬರಲಿ ಎದುರಿಸೋಕೆ ತಯಾರಾಗಿರಣ. ನೀವು ಹಿಂಗೆ ತಲೆ ಕೆಳಗೆ ಹಾಕಿ ಕೂತ್ರೆ ನಮ್ಮ ಕೈಕಾಲು ಆಡದಾದ್ರೂ ಹೆಂಗೆ? ಈಗ ಹೊರಡಿ, ದೊಡ್ಡೂರಿನಲ್ಲಿ ಏನೇನು ಕೆಲ್ಸ ಇದೆಯೋ ಮುಗಿಸಿಕಂಡು ಬನ್ನಿ. ನಾನೂ ಅಷ್ಟೊತ್ತಿಗೆ ಮನೆ ಕೆಲಸ ಎಲ್ಲಾ ಮುಗ್ಸಿ ಬುತ್ತಿ ತಗಂಡ್ ಹೋಗಿರ್ತೀನಿ’. ಸೀತೆ ಗಂಡನಿಗೆ ದೈರ್ಯ ತುಂಬುವ ಮಾತಾಡಿದಳು. ನಂತರ ಸುಬ್ಬಪ್ಪನ ಕಡೆ ತಿರುಗಿ ‘ಅಪ್ಪಣಿ ನೀನೂ ಭಾವನ ಜೊತೆ ದೊಡ್ಡೂರಿಗೆ ಹೋಗ್ಬುಟ್ ಬಾ’ ಎಂದಳು. ಚಿನ್ನಪ್ಪ ಬಾಯಿ ಹೊಲೆದುಕೊಂಡವನಂತೆ ಸುಮ್ಮನೆ ತಲೆ ತಗ್ಗಿಸಿ ನಡೆಯುತ್ತಿದ್ದ. ಸ್ವಭಾವತಃ ವಾಚಾಳಿಯಾದ ಸುಬ್ಬಪ್ಪನಿಗೆ ಆ ಮೌನ ಸಹಿಸಲು ಅಸಾಧ್ಯವಾಯಿತು. ಅದೂ ಇದೂ ವಿಷಯ ತೆಗೆದು ಭಾವನನ್ನು ಮಾತಿಗೆಳೆಯಲು ಯತ್ನಿಸಿದ ಚಿನ್ನಪ್ಪನ ಪ್ರತಿಕ್ರಿಯೆ ಹಾಂ, ಹೂಂ ಎನ್ನುವಷ್ಟಕ್ಕೆ ಸೀಮಿತವಾದಾಗ ಅವನಿಗೆ ನಿರಾಸೆಯಾಯಿತು. ಮಾತಿನ ಧಾಟಿಯನ್ನು ಬದಲಿಸಿದ.

‘ನಿನ್ನೆ ಮೊಬೈಲ್ ತಗಳ್ಳಕೆ ಹೋದಾಗ ಕಾಳಮ್ಮ ಏನ್ ಹೇಳಿದ್ಲು ಕೇಳಿದ್ರಾ?’ ಎಂದ ಏನಂದ್ಲು’ ಎಂದ. ಚಿನ್ನಪ್ಪ ಚುಟುಕಾಗಿ. ಗಾಡಿ ನಿಧಾನಕ್ಕೆ ಟ್ರ್ಯಾಕಿಗೆ ಬರ್ತಾಇದೆ ಎನಿಸಿತು ಸುಬ್ಬಪ್ಪನಿಗೆ. ರೇಟ್ ಚೌಕಾಶಿ ಮಾಡ್ದಾಗ ಆ ಹಳೇ ಮೊಬೈಲ್‍ನೇ ಹೊಗಳ್ತಾ, ‘ನಮ್ಮೆಜಮಾನ್ರುದು ಚಾರ್ಜ್ ನಿಲ್ತಾ ಇತ್ತಿಲ್ಲ ಅದ್ಕೇ ಇದನ್ನೇ ಅವ್ರ ಹತ್ರ ಇಟ್ಕಳಕ್ಕೆ ಕೊಟ್ಟಿದ್ದೆ ಅಂದ್ಲಲ್ಲ’ ಮಾಮೂಲಿ ಮಾತಿನ ಶೈಲಿಗೆ ಹೊರಳಿಕೊಂಡ ಸುಬ್ಬಪ್ಪ ಪ್ರತಿಕ್ರಿಯೆಗಾಗಿ ಭಾವನ ಮುಖ ನೋಡಿದ. ಮುಖ ತುಸು ಅರಳಿದ್ದು ಕಂಡ ಅವನು ‘ಅವಳ ಗಂಡನ ನೋಡಿದ್ರೆ ಹಂಗಿದಾನೆ, ಅವನ ಹತ್ರ ಏನು ಚಾರ್ಜ್ ನಿಲ್ಲುತ್ತೆ ಹೇಳಿ’ ಎನ್ನುತ್ತಾ ತನ್ನ ನಗೆ ಚಟಾಕಿಗೆ ತಾನೇ ನಗತೊಡಗಿದ.
‘ಓ ಸಾಕು ಬಿಡಾ ಮಾರಾಯ ನಿನ್ನ ತಮಾಷೆ’ ಚಿನ್ನಪ್ಪನಿಗೆ ತಮಾಷೆ ಹಿಡಿಸಿದರೂ ಮೈದುನನನ್ನು ದೂರಿದ.
‘ಹೋಗ್ಲಿ ಬಿಡಿ ಭಾವಾ ಈಗ ಆ ಮೊಬೈಲ್ ನಿಮ್ಮ ಕೈಗೆ ಬಂತಲ್ಲ. ಚಾರ್ಜ್ ಚನ್ನಾಗಿ ನಿಲ್ತಾ ಇರ್ಬಹುದಲ್ವ’ ಎಂದ ಛೇಡಿಸುವವನಂತೆ.

‘ನಿಂದ್ ಅತಿಯಾಯ್ತು ಕಣ, ನಿಂಗೆ ಬೇರೆ ತರ ಮಾತಾಡಕ್ಕೆ ಬರದಿಲ್ವ’ ಎಂದು ಸಿಡುಕಿದ ಚಿನ್ನಪ್ಪ.
ಭಾವನನ್ನು ಮಾತಿಗೆ ಆಣಿಗೊಳಿಸಿದ್ದೇನೆ. ಈಗ ಏನಾದರೂ ಮಾತಾಡಿಕೊಂಡು ಹೋಗಬಹುದು ಎನಿಸಿತು ಸುಬ್ಬಪ್ಪನಿಗೆ. ಅವನಿಗೆ ಹೊನ್ನೇಗೌಡನ ಬಗ್ಗೆ ಕುತೂಹಲವಿತ್ತು.
‘ನಿಮ್ಮ ಫೆÉ್ರಂಡ್ ಹೊನ್ನೇಗೌಡನ ಬಗ್ಗೆನೇ ಎಲ್ಲಾ ಮಾತಾಡ್ತರಲ್ಲಾ ಭಾವ. ಏನ್ ಅಷ್ಟ್ ಒಳ್ಳೇ ವ್ಯವಸಾಯಗಾರನ ಅವರು? ಮೈತುಂಬಾ ಸಾಲ ಮಾಡ್ಕಂಡಿದ್ದಾರೆ ಅಂತಾರಲ್ಲಾ?’
‘ಅವನ ವ್ಯವಸಾಯದ ಬಗ್ಗೆ ಯಾರೂ ಬೆರಳು ಮಡಚೋ ಹಂಗಿಲ್ಲ! ಆದರೆ ಶುರೂನಲ್ಲೇ ಎಡವಟ್ಟು ಮಾಡಿಕೊಂಡು ಬಿಟ್ಟ, ಸಬ್ಸಿಡಿ ಆಸೆ ತೋರಿಸಿದರೂ ಅಂತ ಯಾಲಕ್ಕಿ ಬೋರ್ಡ್‍ನವರ ಮಾತು ಕೇಳಿಕೊಂಡು ಸೀಮೆಗೊಬ್ಬರ ಹಾಕಿ ಯಾಲಕ್ಕಿ ಬೆಳೆಯಕ್ಕೆ ಹೋಗಿ ತೊಂದರೆಗೆ ಸಿಗಹಾಕಿಕೊಂಡ. ಇಡೀ ಎಂಟು ಎಕ್ಕರೆ ಕಾಡಲ್ಲಿ ಯಾಲಕ್ಕಿ ಬೆಳೆಯಕ್ಕೆ ಹೋಗಿ ಪಿ.ಎಲ್.ಡಿ ಬ್ಯಾಂಕ್ನಲ್ಲಿ ಎರಡು ಲಕ್ಷ ಸಾಲ ಮೈಮೇಲೆ ಎಳ್ಕಂಡ್ ಬಿಟ್ಟ. ಇಡೀ ಮೂರು ವರ್ಷ ತೋಟ ಮಾಡಕ್ಕೆ ಹೋರಾಡಿದ. ಆದರೆ ಒಂದೇ ಪಸಲಿಗೆ ತೋಟ ಮಗುಚಿಕೊಳ್ತು.ಅವನ ಸಹಾಯಕ್ಕೆ ಬೋರ್ಡ್‍ನವರು ಬರಲಿಲ್ಲ. ಅಧಿಕಾರಿ ತಾನು ಕಲ್ಸ ಮಾಡಿದ್ದೇನೆ ಅಂತಾ ಕೇರಳದ ಆಪೀಸಿಗೆ ಪ್ರೋಗ್ರೆಸ್ ರಿಪೋರ್ಟ್ ಕಳಿಸಿ ನಿರಾಳವಾದ. ಅವನು ಮುಂದಿನ ದೊಡ್ಡ ಹುದ್ದೆ ಪಡಕೊಂಡು ವರ್ಗವಾಗಿ ಹೋದರೆ ಇಲ್ಲಿ ಇವನು ಸಾಲದ ಬಲೆಯಲ್ಲಿ ಸಿಲುಕಿಕೊಂಡ’. ಚಿನ್ನಪ್ಪ ಸ್ನೇಹಿತನ ಕುರಿತು ಹೇಳುತ್ತಲೇ ಇದ್ದ. ಆದರೆ ಸುಬ್ಬಪ್ಪನಿಗೆ ಹೆಚ್ಚು ಹೊತ್ತು ಬಾಯಿ ಮುಚ್ಚಿಕೊಂಡು ಸುಮ್ಮನಿರಲಾಗಲಿಲ್ಲ

“ಓ ಹಂಗಾ ಪಾಪ ಹೊನ್ನೇಗೌq, ಅಷ್ಟ್ ಸಾಲ ಹೊತ್ಕಂಡು ಆ ಮೇಲೆ ಏನ್ಮಾಡಿದ್ರು” ಎಂದ
‘ಅವನೇನೂ ಧೆÉೈರ್ಯಗುಂದಲಿಲ್ಲ, ಕಾಡಿನ ದಾರಿ ಬಿಟ್ಟ. ಗದ್ದೆಗೆ ಇಳಿದು ವ್ಯವಸಾಯದ ಜೂಜಾಟದಲ್ಲಿ ನಿರತನಾದ. ಅನವಶ್ಯಕವಾಗಿ ಮೈಮೇಲೆ ಎಳೆದುಕೊಂಡ ಸಾಲ ನಿಭಾಯಿಸಲು ಹೋರಾಡಲೇಬೇಕಲ್ಲ. ಈ ಎರಡೆಕರೆ ಗದ್ದೆ ಅವನ ಕಾರ್ಯಕ್ಷೇತ್ರ. ಒಂದು ವರ್ಷ ಮೆಣಸಿನ ಗಿಡ ಬೆಳೆದ. ಬೆಳೆ ಕೈಹಿಡಿತು. ಖರ್ಚು ಕಳೆದು ಉಳಿದ ದುಡ್ಡಲ್ಲಿ ಬ್ಯಾಂಕ್ ಬಡ್ಡಿ ಕಟ್ಟಿಕೊಂಡ. ಕಳೆದ ವರ್ಷ ಚೊಟ್ಟು ಬೆಳೆ ಬಹಳ ಚನ್ನಾಗಿ ಬೆಳೆದ. ಓಡಾಟಕ್ಕೆ ಒಂದು ಹೀರೋ ಹೊಂಡ ಬೈಕ್ ಕೊಂಡ್‍ಕಂಡ, ಈ ಮಧ್ಯ ಹುಡುಗನ್ನ ಕಾನ್ವೆಂಟಿಗೆ ಸೇರಿಸ ಬೇಕಾಯ್ತಲ್ಲ, ಹಾಸನದಲ್ಲಿ ಸ್ನೇಹಿತರ ಮುಖಾಂತರ ಐವತ್ತು ಸಾವಿರ ಕೈಸಾಲ ಮಾಡಿಕೊಂಡ.
ಈ ಸಲ ಮುತ್ತೂಟ್ ಪೈನಾನ್ಸ್ ನಲ್ಲಿ ಹೆಂಡ್ತಿ ಒಡವೆ ಅಡ ಇಟ್ಟು ಅರವತ್ತು ಸಾವಿರ ಸಾಲ ತೆಗೆದು ಎರಡೆಕರೆಗೆ ಟೊಮಾಟೊ ಕೂರ್ಸಿದ್ದಾನೆ

ಚಿನ್ನಪ್ಪ ಗೆಳೆಯನ ಕಾರ್ಯ ವೈಖರಿಯನ್ನು ಹೊಗಳುತ್ತಲೇ ಹೋದ.
‘ಅಲ್ಲ ಭಾವ ಅವ್ರದ್ದು ಎಂತಾ ಧೈರ್ಯ ಅಂತೀನಿ. ಇಷ್ಟೊಂದು ಸಾಲ ಮೈಮೇಲೆ ಎಳಕೊಂಡು ರಾತ್ರಿ ನಿದ್ದೆ ಹೆಂಗೆ ಮಾಡದು’ ಸುಬ್ಬಪ್ಪ ಆತಂಕ ವ್ಯಕ್ತಪಡಿಸಿದ.
‘ಅಷ್ಟೇ ಅಲ್ಲ ಮಾರಾಯ! ದುಡ್ಡಿನ ಕೊರತೆ ಅಂತಾ ಅವನು ಬೆಳೆಗೆ ಅನ್ಯಾಯ ಮಾಡದಿಲ್ಲ. ಈಗ್ಲೂ ಗಿಡ ಎಳೆದು ಕಟ್ಟದಿಕ್ಕೆ ಗೂಟ, ತಂತಿಗೆ ದುಡ್ಡು ಕಡಿಮೆ ಬಿತ್ತು ಅಂತ ಕತ್ತೆ ಪೈನಾನ್ಸ್‍ನಲ್ಲಿ ಬೈಕ್ ಡಾಕ್ಯುಮೆಂಟ್ಸ್ ಅಡ ಇಟ್ಟು, ಎಂಟ್ ಸಾವಿರ ಸಾಲ ತಗಂಡಿದ್ದಾನೆ.ಟಿಅವನೊಂದ್ ಥರ ಛಲ ಬಿಡದ ತ್ರಿವಿಕ್ರಮ, ವ್ಯವಸಾಯದ ವಿಷಯದಲ್ಲಿ, ಬೆಳೆ ತೆಗೆಯೋದು ನಮ್ಮ ಕರ್ತವ್ಯ ರೇಟ್ ಬರದು ದೇವರ ಇಚ್ಛೆ ಅನ್ನದು ಅವನ ಸಿದ್ಧಾಂತ.
‘ರೇಟ್ ಬರ್ಲಿಲ್ಲ ಅಂದ್ರೆ ರೈತನ ಪಾಡು ದೇವರೇಗತಿ ಅಲ್ವಾ! ರೈತರು ಎಷ್ಟ್ ಕಾಲ ಅಂತಾ ಹಿಂಗೆ ಜೂಜಾಡ್ತಲೇ ಇರಬೇಕು ನಮ್ಮ ಸರ್ಕಾರದವರಾದ್ರೂ ರೈತರ ಫಸಲಿಗೆ ಒಂದು ಒಳ್ಳೆ ಬೆಲೆ ನಿಗಧಿ ಮಾಡಕೆ ಯಾಕೆ ಸಾಧ್ಯವಾಗದಿಲ್ಲ!’ ಎಂ ಎಲ್ ಎ ಗಳಿರಲಿ ರೈತರ ಓಟ್ ತಗಂಡು ರೆಗ್ಯುಲೇಟೆಡ್ ಮಾರ್ಕೆಟ್ ಅಧ್ಯಕ್ಷರಾಗಿ ಕೂತ್ಕೋತಾರಲ್ಲಾ ಅವ್ರಾದ್ರೂ ಏನ್ ಮಾಡ್ತಾರೆ’ ಸುಬ್ಬಪ್ಪ ಅಸಮಾಧಾನ ವ್ಯಕ್ತಪಡಿಸಿದ
‘ಅದು ಸರಿ ಮಾರಾಯ. ಅಂತಾ ಒಳ್ಳೆಯ ದಿನವೂ ಬರುತ್ತೆ ಅಂತ ಕಾಯಬೇಕು. ಸದ್ಯಕ್ಕೆ ನಾವೆಲ್ಲಾ ಜೂಜಾಟ ಮುಂದುವರೆಸಲೇಬೇಕು ಅಲ್ವ, ಒಟ್ಟಿನಲ್ಲಿ ಈ ಬಾರಿ ಟೊಮೆಟೋಗೆ ಒಳ್ಳೆ ರೇಟ್ ಬಂದ್ರೆ ಎಲ್ಲಾ ಸಾಲನೂ ಹೊಡ್ದ್ ಹಾಕಿ ಬಿಡ್ತೀನಿ ಅಂತ ನಮ್ಮ ಹೊನ್ನೇಗೌಡ ಧೈರ್ಯವಾಗಿದ್ದಾನೆ ಅಷ್ಟೆ.’
ಅವರು ಮುಖ್ಯ ರಸ್ತೆ ತಲುಪಿದಾಗ ದೊಡ್ಡೂರಿನ ಅಂಗಡಿ ಬೀದಿಗೆ ಅಂಗಡಿ ಬೀದಿಯೇ ಮೈಕೊಡವಿ ಏಳುತ್ತಿದ್ದಂತ್ತಿತ್ತು.

ಎಲ್ಲಾ ಅಂಗಡಿಗಳಿಂದಲೂ ಹೊಗೆಯೊಂದಿಗೆ ಹೊರಟ ಊದುಗಡ್ಡಿಯ ಘಮ ರಸ್ತೆಯಲ್ಲೆಲ್ಲಾ ಒಂದು ಬಗೆಯ ಪರಿಮಳ ಹರಡುತ್ತಿತ್ತು. ಕತ್ತೆರಾಮನ ನಂದೀಶ್ವರ ಟ್ರೇಡರ್ಸ್ ನ ಹುಡುಗ ಕೃಷಿ ಪರಿಕರಗಳನ್ನು ಜನರಿಗೆ ಕಾಣುವಂತೆ ಹೊರಗೆ ಜೋಡಿಸುತ್ತಿದ್ದ. ಕತ್ತೆ ಪೈನಾನ್ಸ್‍ನ ಕೆಂಚಪ್ಪಣ್ಣ ಗಲ್ಲಾ ಪೆಟ್ಟಿಗೆಯ ಮೇಲೆ ಗೋಡೆಗೆ ಜೋಡಿಸಿದ್ದ ಲಕ್ಷ್ಮಿ ಪೋಟೋಕ್ಕೆ ಗಂಟೆ ಹೊಡೆಯುತ್ತಿದ್ದ.
ಅದನ್ನೆಲ್ಲಾ ನೋಡಿ ಸುಬ್ಬಪ್ಪನಿಗೆ ಏನನ್ನಿಸಿತೋ, ಭಾವನ ಮುಖ ನೋಡುತ್ತಾ ‘ಇವ್ರೆಲ್ಲಾ ರೈತರನ್ನು ಸುಲಿಯೋದಕ್ಕೆ ಅಣಿಯಾಗ್ತಿರೋ ಹಂಗೆ ಕಾಣುತ್ತೆ’ ಎಂದ. ಚಿನ್ನಪ್ಪನಿಗೆ ಅವನ ಮಾತು ಸರಿಯಿರಬಹುದು ಎನಿಸಿತು.
ಭಾವ ಇವರೆಲ್ಲಾ ರೆಡಿಯಾಗ್ಲಿ, ಹೊನ್ನೇಗೌಡರ ಗದ್ದೆ ಇಲ್ಲೇ ಅರ್ಧ ಕಿಲೋ ಮೀಟರ್ ದೂರದಲ್ಲಿ ಇದೆ ಅಂದ್ರಲ್ಲಾ. ಅಷ್ಟರಲ್ಲಿ ಹೋಗಿ ನೋಡಿಕೊಂಡು ಬಂದು ಬಿಡೋಣ ಎಂದ ಸುಬ್ಬಪ್ಪ.
ಹೊನ್ನೇಗೌಡನ ಗದ್ದೆ ರಸ್ತೆಯ ಬದಿಯಲ್ಲಿಯೇ ಇತ್ತು. ಎರಡೆಕೆರೆ ಗದ್ದೆಯ ತುಂಬಾ ಸೊಂಟದೆತ್ತರ ಬೆಳೆದು ನಿಂತ ಹಚ್ಚ ಹಸಿರು ಗಿಡಗಳು. ಹೂಗುಡಿಗೆ ಬಂದಿದ್ದ ಆ ಗಿಡಗಳು ವಿಶೇಷವಾದ ಮೆರುಗನ್ನು ಹೊತ್ತು ದಾರಿ ಹೋಕರ ಗಮನ ಸೆಳೆಯುವಂತಿದ್ದವು, ಕಾಲ್ನಡಿಗೆಯಲ್ಲಿ ವಾಹನಗಳಲ್ಲಿ ಹೋಗುವವರು ತುಸು ತಡೆದು ಆ ದೃಶ್ಯವನ್ನು ಕಣ್ತುಂಬಿಕೊಂಡು ಹೋಗುತ್ತಿದ್ದರು.
ದೃಷ್ಟಿಯಾಗದಿರಲೆಂದು ಹೊನ್ನೇಗೌಡನ ಹೆಂಡತಿ ನಾಲ್ಕು ಮೂಲೆಗೆ ನಾಲ್ಕು ಕಣ್ಣು ಮಡಕೆ ಹಾಕಿದ್ದಳು, ಹೊನ್ನೇಗೌಡ ಆಚೆಯ ಬದಿಯಲ್ಲಿ ತೋಟದ ಒಳಗೆ ಬಾಗಿ ಹೊಸದಾಗಿ ಬಂದ ಕುಡಿಗಳನ್ನು ದಾರದಲ್ಲಿ ಎಳೆದು ತಂತಿಗೆ ಕಟ್ಟುತ್ತಿದ್ದ. ಅವನ ಬೆನ್ನು ಮಾತ್ರ ಮೇಲೆ ಕಾಣುತ್ತಿತ್ತು.

ಭಾವ ಮಕ್ಕಳಿಬ್ಬರೂ ರಸ್ತೆಯಿಂದ ತೋಟದೊಳಕ್ಕೆ ಇಳಿದರು. ಅಲ್ಲಿ ಮೂಲೆಯಲ್ಲಿ ಒಂದ್ ಸಣ್ಣ ಕೆರೆ. ತಿಳಿ ನೀರಿನಲ್ಲಿ ಸಣ್ಣ ಅಲೆಗಳೆದ್ದು ದಡಕ್ಕೆ ಮುತ್ತಿಕ್ಕುತ್ತಿದ್ದುದನ್ನು ಕೌತುಕದಿಂದ ನೋಡುತ್ತಾ ನಿಂತ ಸುಬ್ಬಪ್ಪ. ಕೃಷಿ ಅಧಿಕಾರಿಗಳು ಯಾವುದೋ ಯೋಜನೆಯಡಿ ಕೃಷಿ ಹೊಂಡ ಮಾಡಿಕೊಡುವುದಾಗಿ ನಂಬಿಸಿ ಜೇ ಸಿ ಬಿ ತಂದು ಹೊಂಡ ತೋಡಿಸಿ ಮಣ್ಣನ್ನು ಮೇಲಕ್ಕೆ ಹಾಕಿ ಕೆಲಸ ಮುಗಿಯಿತೆಂದು ಸರ್ಕಾರಕ್ಕೆ ವರದಿ ಕೊಟ್ಟು ದುಡ್ಡು ಎಣಿಸಿಕೊಂಡು ಹೋಗಿದ್ದರು.
ಕೃಷಿ ಹೊಂಡವೂ ಆಗದೆ ವ್ಯವಸಾಯಕ್ಕೆ ಜಮೀನೂ ಆಗದೆ ಆ ಐದಾರು ಗುಂಟೆ ಜಾಗ ವ್ಯರ್ಥವಾಗಿತ್ತು ನೀರು ತುಂಬಿಸಿ ನೋಡೋಣ ಎಂದು ಹೊನ್ನೇಗೌಡ ಪಕ್ಕದ ಕೊಳದಿಂದ ನೀರು ತಿರುಗಿಸಿದ. ನೀರು ತುಂಬಿದಂತೆ ಒಳಮೈಯ ಮಣ್ಣು ಒಳಕ್ಕೆ ಜರುಗ ತೊಡಗಿತು.
ಹೊನ್ನೇಗೌಡ ಕಾಡು ಕಲ್ಲು ತರಿಸಿ ಕಟ್ಟಿಸಿ ಅಚ್ಚುಕಟ್ಟಾದ ಪುಟ್ಟ ಕೆರೆ ಮಾಡಿಕೊಂಡ. ಆ ಹೊಂಡದ ಹಿನ್ನೆಲೆ ಕುರಿತು ಚಿನ್ನಪ್ಪ ತನ್ನ ಮೈದುನನಿಗೆ ಹೇಳಿದಾಗ ಅವನಿಗೆ ಸಿಟ್ಟೇ ಬಂದಿತು ‘ಥೂ ಅವರೆಂತಾ ಜನ! ರೈತರು ತಮ್ಮ ಪಾಡಿಗೆ ತಾವು ಬದುಕು ಮಾಡಿಕೊಂಡು ಇರಕ್ಕೂ ಬಿಡದಿಲ್ವಲ್ಲ ಇಂತ ಕಳ್ಳ ಅಧಿಕಾರಿಗಳನ್ನು ಹಿಡಿದು ಮೆಟ್ನಲ್ಲಿ ಹೊಡಿಬೇಕು’ ಎಂದ.

‘ಅದಿರ್ಲಿ ನೋಡು ಅಲ್ಲಿ ಸ್ಪ್ರಿಂಕ್ಲರ್ ನಲ್ಲಿ ನೀರು ಹಾರ್ತಾ ಇದೆಯಲ್ಲಾ. ಅದು ಇಲ್ಲಿದೇ ನೀರು! ಅಲ್ಲಿ ನೋಡು ಒಂದು ಸಣ್ಣ ಮೋಟರ್ ಇಟ್ಕಂಡಿದಾನೆ’ ಎಂದ ಚಿನ್ನಪ್ಪ.
ಸುಬ್ಬಪ್ಪನಿಗೆ ಹೊನ್ನೇಗೌಡನ ಕಾರ್ಯಕ್ಷಮತೆಯ ಬಗ್ಗೆ ಹೆಮ್ಮೆಯೆನಿಸಿತು. ‘ನಿಜವಾಗ್ಲೂ ಇವರೊಬ್ಬ ಮಾದರಿ ರೈತರೇ ಭಾವ, ಸರ್ಕಾರದವ್ರು ಇಂತವ್ರನ್ನ ಕಂಡು ಹಿಡಿದು ಅವಾರ್ಡ್ ಕೊಡಬೇಕು’ ಎಂದು ತಾರೀಫ್ ಮಾಡಿದ.
‘ಅಂತೂ ಭಾವ, ನಿಮಗೆ ಒಳ್ಳೆ ಸ್ನೇಹಿತರ ನೆರೆ ಸಿಕ್ಕಿದೆ ಬಿಡಿ. ಇವತ್ತಿಂದ ನಾನೂ ಅವರ ಅಭಿಮಾನಿ ಆಗ್ಬಿಟ್ಟೆ’ ಎಂದ. ಒಂದೇ ಎಡೆ ಕುಳಿತು ಗಿಡ ಹಿಡಿದು ಗಮನವಿಟ್ಟು ನೋಡುತ್ತಿದ್ದ ಹೊನ್ನೇಗೌಡನಿಗೆ ಅವರು ಬಂದು ಎದುರು ನಿಂತದ್ದೂ ತಿಳಿಯಲ್ಲಿಲ್ಲ ಚಿನ್ನಪ್ಪ ಸಣ್ಣಗೆ ಕೆಮ್ಮಿದ. ತಲೆಯೆತ್ತಿ ನೋಡಿದ ಹೊನ್ನೇಗೌಡ ‘ಓ ಬನ್ನಿ ಬನ್ನಿ’ ಎಂದ.
‘ಅದೇನು ಅಷ್ಟ್ ಹೊತ್ತಿಂದ ಅದೊಂದೇ ಗಿಡ ಹಿಡಕಂಡು ಕೂತಿದೀಯ ಮಾರಾಯ ಎಷ್ಟ್ ಹೂವು ಬಿಟ್ಟಿದಾವೆ ಮುಂದೆ ಎಷ್ಟು ಕಾಯಾಗಬಹುದು ಎಂದು ಎಣಿಸ್ತಾ ಇದೀಯ’ ಎಂದು ಚಿನ್ನಪ್ಪ ಸ್ನೇಹಿತನನ್ನು ಛೇಡಿಸಿದ. ಮಾಮೂಲಿನಂತೆ ಸ್ನೇಹಿತನ ತಮಾಷೆಗೆ ಸ್ಪಂದಿಸದೆ ಹೊನ್ನೇಗೌಡ ಗಂಭೀರ ಮುಖ ಭಾವ ಹೊತ್ತು ‘ಇಲ್ನೋಡು ಚಿನ್ನಪ್ಪ ಇವೊಂದು ಎರಡು ಗಿಡದಲ್ಲಿ ಕುಡಿ ಬತ್ತಿಗೊಂಡಿಲ್ವ?’ ಎನ್ನುತ್ತಾ ಹೊನ್ನೇಗೌಡ ಹಿಡಿದ ಗಿಡ ಕೈಬಿಟ್ಟು ಎದ್ದು ನಿಂತ.

ಕುಡಿ ನೆಲದ ಕಡೆ ಬಾಗಿಕೊಂಡಿತ್ತು. ಮಂಕಾಗಿದ್ದ ಆ ಗಿಡವನ್ನೇ ನೋಡುತ್ತಾ ಚಿನ್ನಪ್ಪ ‘ಹೌದು ಕಣ ಮಾರಾಯ ನೀರು ಸಾಲ್ದಲೆ ಬಿಸಿಲಿನ ಹೊಡ್ತಕ್ಕೆ ಏನಾದ್ರು ಹಂಗಾಯ್ತಾ’ ಎಂದ.
‘ಹಂಗಾಗಕ್ಕೆ ಸಾಧ್ಯವೇ ಇಲ್ಲ. ಈ ಕಡೆಗೆ ನಿನ್ನೆ ತಾನೇ ನೀರು ಹೊಡ್ಸಿದ್ದೇನಿ. ಯಾವುದಕ್ಕೂ ಯಾರನಾದ್ರೂ ಸರಿಯಾಗಿ ವಿಚಾರಿಸಿ ತೋಟಕ್ಕೆಲ್ಲಾ ಒಂದ್ಸಲ ಔಷದಿ ಹೊಡಿಸಿ ಬಿಡ್ತೀನಿ’ ಹೊನ್ನೇಗೌಡ ಆತಂಕದಿಂದ ಹೇಳಿದ.
‘ಇನ್ಯಾರನ್ನು ಕೇಳ್ತಿಯ ಮಾರಾಯ? ಇಲ್ಲಿ ಯಾರಿದ್ದಾರೆ? ಟೊಮೊಟೋ ತೋಟ ಮಾಡಿದ ಅನುಭವಸ್ಥರು? …… ಅವ್ನಿದಾನಲ್ಲ ಕೃಷಿ ಇಲಾಖೆಲಿ ಸರ್ಕಾರಿ ಸಂಬ್ಳ ತಿಂತಾ, ಯಾವಾಗಲೂ ಆ ಕತ್ತೆ ಅಂಗ್ಡಿಲಿ ಬೆಂಚ್ ಮೇಲೆ ಕೂತ್ಕಂಡು ಬೀಡಿ ಎಳೆಯುವ ಆ ಕೆಂಗಣ್ಣಪ್ಪ ! ಕೃಷಿ ಸಹಾಯಕನೋ, ಗ್ರಾಮ ಸೇವಕನೋ ಎಂತವ್ನೋ, ಅವ್ನನ್ನ ಕರ್ಕಂಡ್ ಬಂದು ತೋರ್ಸು, ಏನಾದ್ರೂ ದಾರಿ ಹೇಳ್ಬದು……. ‘ನಮ್ಮ ಭಾವಮೈದ ನಿನ್ನ ಟೊಮೊಟೋ ತೋಟ ನೋಡ್ಬೇಕು ಅಂದ, ಕರ್ಕಂಡ್ ಬಂದಿದ್ದೆ’ ಎಂದ ಚಿನ್ನಪ್ಪ.

‘ತೋಟ ಎಲ್ಲಾ ಸುತ್ತಾಡಿ ನೋಡಿದ್ವಿ ಬಹಳ ಚೆನ್ನಾಗಿ ಮಾಡಿದ್ದೀರಿ ಬಹಳ ಖುಷಿಯಾಯ್ತು’…. ಮೆಣಸಿನ ತೋಟದ ಕೆಲಸಕ್ಕೆ ಕೆಲವು ಹತಾರ ತಗಂಡ್ ಹೋಗಣಾಂತ ಬಂದಿದ್ವಿ. ನಾವಿನ್ನು ಬರ್ತೀವಿ ಹೊನ್ನೇಗೌಡ್ರೆ’ ಎನ್ನುತ್ತಾ ಸುಬ್ಬಪ್ಪ ಸಂತೋಷದಿಂದ ಅವನ ಕೈ ಹಿಡಿದು ಪ್ರೀತಿಯಿಂದ ಅದುಮಿದ.

ಅಧ್ಯಾಯ ೧೭:  ಕೆಂಪು ಹುಂಜದ ಔತಣ

ಕನ್ನಡಕವನ್ನು ತುಸು ಕೆಳಕ್ಕೆ ಜಾರಿಸಿ ಹದ್ದಿನ ಕಣ್ಣಿನಿಂದ ಗಮನಿಸುತ್ತಿದ್ದ ಕತ್ತೆರಾಮ ತನ್ನ ಮಾಮೂಲಿ ಸಶಬ್ದ ನಗೆಯೊಂದಿಗೆ “ಬನ್ನಿ ಬನ್ನಿ ಇವರು ನಿಮ್ಮ ಬಾವಮೈದುನ ಅಲ್ವಾ…. ಕೂತ್ಕಳ್ಳಿ….. ಸ್ವಲ್ಪ ಹೊತ್ತಿಗೆ ಮುಂಚೆ ಕೆಳ್ಳಮಕನಾಗಿ ಹೋದಂಗಿತ್ತು” ಎನ್ನುತ್ತಾ ಬೆಂಚು ತೋರಿಸಿದ.
ಚೈನಿದ್ದ ಜೇಬನ್ನು ಸವರುತ್ತಾ ಮೈಯನ್ನು ಹಿಂಡಿ ಮಾಡಿ ಕುಳಿತುಕೊಂಡು ಕುಳಿತ ಚಿನ್ನಪ್ಪ ‘ನಮ್ಮ ಸುಬ್ಬಪ್ಪ ಹೊನ್ನೇಗೌಡನ ಟೊಮೆಟೋ ತೋಟ ನೋಡ್ಬೇಕು ಅಂದ. ಹೋಗಿ ನೋಡ್ಕಂಡು ಅವ್ನ ಮಾತಾಡಿಸಿ ಕೊಂಡು ಬಂದ್ವಿ’ ಎಂದ.

‘ನೋಡಿದ್ರೇನ್ರಿ! ಹೆಂಗನ್ನಸ್ತು! ಬಹಳ ಚೆನ್ನಾಗಿ ಮಾಡಿದ್ದಾನೆ ಅಲ್ವಾ….. ಈ ಸಲ ದೇವ್ರು ಒಳ್ಳೇದ್ ಮಾಡ್ತಾನೆ’ ಕತ್ತೆರಾಮ ಸುಬ್ಬಪ್ಪನಕಡೆಗೆ ನೋಡುತ್ತಾ ಹೇಳಿದ.
‘ದೇವ್ರೇನೋ ಒಳ್ಳೇದ್ಮಾಡಕೇ ಇರದು ರಾಮಣ್ಣ ಆದರೆ ಮನುಷ್ಯರು ಕೊಡೋ ಕಷ್ಟನೆಲ್ಲಾ ಸಹಿಸ್ಕಂಡು ರೈತ ಉಳ್ಕಂಡು ಬರ್ಬೇಕು ಅಷ್ಟೆ’.
ಸುಬ್ಬಪ್ಪನ ಮಾತು ಕೇಳಿದ ರಾಮ ಚಿನ್ನಪ್ಪನ ಕಡೆ ತಿರುಗಿ ‘ಹೇ ಹೇ ಹೇ ನಿಮ್ಮ ನೆಂಟ ಬಹಳ ಚನ್ನಾಗಿ ಮಾತಾಡ್ತಾನೆ ಭೇಷ್ ಭೇಷ್’ ಎಂದ.
ನಂತರ ‘ಕೆಂಚಪ್ಪಣ್ಣಾ ಇವರ್ದೇನು ಸ್ವಲ್ಪ ಬೇಗ ನೋಡಿ ಕಳುಹಿಸಿಕೊಡಿ….. ಪಾಪ ಕೆಲ್ಸದ ಕಾಲ …… ರೈತರನ್ನು ಅಪಾರ ಹೊತ್ತು ಕಾಯಿಸ್ಬಾರ್ದು’ ಎಂದು ಏನೋ ಮೆಹರ್ಬಾನಿ ಮಾಡುವವನಂತೆ ಪಕ್ಕದ ಪೈನಾನ್ಸ್‍ಗೆ ಕೇಳುವಂತೆ ಕೂಗಿ ಹೇಳಿದ.

‘ಎಲ್ಲಿ ಸಾಮಾನು ಲಿಸ್ಟ್ ಕೊಡಿ ಬಿಲ್ಲು ಮಾಡಿ ಎಲ್ಲಾ ತೆಗೆಸಿ ಇಟ್ಟಿರ್ತೀನಿ ನೀವ್ ಹೋಗಿ ಆಕಡೆ’ ಎಂದ.
‘ಎಲ್ಲಿ ಏನ್ ತಂದಿದ್ದೀರಿ’ ಎಂಬಂತೆ ನೋಡಿದ ಕೆಂಚಪ್ಪ ಫೈನಾನ್ಸ್ ಒಳಹೋಗಿ ನಿಂತ ಚಿನ್ನಪ್ಪನಿಗೆ, ಅವನ ಜೇಬಿನಿಂದ ಹೊರಗೆಳೆದ ಚಿನ್ನದ ಸರವನ್ನು ಚಾಚಿದ ಅವನ ಅಂಗೈ ಮೇಲೆ ಭಾರವಾದ ಮನಸ್ಸಿಂದ ಇಳಿಬಿಟ್ಟ. ಅವನು ಅಂಗೈಯಲ್ಲೆ ಸರವನ್ನು ತೂಗಿ ಮೆಚ್ಚುಗೆ ಮುಖಭಾವದೊಂದಿಗೆ ಒಂದು ಚೀಟಿ ತೆಗೆದುಕೊಂಡು ಅಂಕುಡೊಂದು ಅಕ್ಷರಗಳಲ್ಲಿ ಚಿನ್ನಪ್ಪಣ್ಣಾ ‘ಚಿನ್ನದ ಸರ ಅಂದಾಜು ಹತ್ತು ಗ್ರಾಂ’ ಎಂದು ಬರೆದು ಆ ಚೀಟಿಯನ್ನು ಸರದೊಂದಿಗೆ ಒಂದು ಪ್ಲಾಸ್ಟಿಕ್ ಕವರ್‍ನಲ್ಲಿಟ್ಟು ಬೀರುಗೆ ಸೇರಿಸಿದ. ನಂತರ ಒಂದ್ ರಿಜಿಸ್ಟರ್ ಎಳೆದು ಹಾಳೆ ಮಗುಚತೊಡಗಿದ. ಚಿನ್ನಪ್ಪನ ಹೆಸರಿನಲ್ಲಿ ಆಗಲೇ ಒಂದು ಹಾಳೆ ನಿಗದಿಯಾಗಿತ್ತು.
ಅಷ್ಟರಲ್ಲಿ ಪಕ್ಕದಿಂದ ‘ಅವರದ್ದು ಬಿಲ್ ಹಾಕಿದೀನಿ ಗೊಬ್ಬರ ಹತಾರಗಳು ಎಲ್ಲಾ ಸೇರಿ ಐದೂವರೆ ಸಾವಿರ ಆಗಿದೆ’ ಎಂದು ಕೂಗಿ ಹೇಳಿದ ಕತ್ತೆ ರಾಮ.
‘ಹಳೆಬಾಕಿ ಐನೂರು ಉಳಿಸಿಕೊಂಡಿದ್ದೀರಿ’ ಎನ್ನುತ್ತಾ ಕೆಂಚಪ್ಪಣ್ಣ ನಿಮಿಷಕೊಂದು ಅಕ್ಷರ ಎಂಬಂತೆ ನಿಧಾನಕ್ಕೆ ಬರೆಯುತ್ತಲೇ ಹೇಳತೊಡಗಿದ್ದ.

ಹತ್ತು ಸಾವಿರ ಸಾಲ ಮಂಜೂರ್ಮಾಡಿದ್ದೀನಿ. ಹಳೇ ಬಾಕಿ ಐನೂರು. ಒಂದು ತಿಂಗಳ ಮುಂಗಡ ಬಡ್ಡಿ ಐನೂರು. ಈಗಿನ ಬಿಲ್ಲು ಐದು ಸಾವಿರದ ಐನೂರು. ಒಟ್ಟು ಆರು ಸಾವಿರದ ಐನೂರ್ ಕಳೆದು ಇನ್ನೂ ಮೂರು ಸಾವಿರದ ಐನೂರು ಉಳಿದಿದೆ. ಅದನ್ನ ಏನ್ಮಾಡ್ತೀರಿ? ಮನೆಗೆ ತಗಂಡ್ ಹೋದ್ರೆ ಅದೂ ಇದೂ ಅಂತ ಖರ್ಚಾಗಿ ಬಿಡುತ್ತೆ, ನಿಮಗೇ ತೊಂದ್ರೆ. ಮತ್ತೆ ಗೊಬ್ಬರ ಜೌಷಧಿಗೇ ಅಂತಾ ಬರ್ಲೇ ಬೇಕಲ್ಲ! ಇಲ್ಲೇ ಬಿಟ್ಟಿದ್ರೆ ಆಗ ಬಳಸ್ಕೋಳ್ಳಬಹುದು….. ನೋಡಿ ಯೋಚನೆ ಮಾಡಿ’ ಎಂದ ಕೆಂಚಪ್ಪ, ಎಷ್ಟಾದರೂ ಕತ್ತೆರಾಮನ ಕೈಕೆಳಗೆ ನುರಿತವನಲ್ಲವೇ.
ಚಿನ್ನಪ್ಪನಿಗೆ ಏನು ಹೇಳಬೇಕೆಂದು ತೋಚಲಿಲ್ಲ. ತಬ್ಬಿಬ್ಬಾಗಿ ನಿಂತದ್ದು ಕಂಡ ಆತ ‘ಹೋಗಿ ರಾಮಣ್ಣರ ಕೈಲಿ ಒಂದ್ಸಲ ಮಾತಾಡಿ’ ಎಂದು ಅಲ್ಲಿಂದ ಸಾಗಹಾಕಿದ.
‘ಕೆಂಚಪ್ಪಣ್ಣ ಹೇಳಿದ್ದೂ ಸರಿ, ನಿಮ್ ದುಡ್ಡು ನಮ್ಮಹತ್ರ ಭದ್ರವಾಗಿರುತ್ತೆ. ಮುಂದಿನ ಸಲ ಸಾಮಾನಿಗೆ ಬಂದಾಗ ಅಡ್ಜಸ್ಟ್ ಮಾಡಿಕೊಳ್ಳಬಹುದು’.
ಚಿನ್ನಪ್ಪನಿಗೆ ಯೋಚಿಸಿ, ಮಾತಾಡಲು ಅವಕಾಶವನ್ನೇ ಕೊಡದೆ ಕತ್ತೆ ರಾಮ ತನ್ನ ರೂಲಿಂಗ್ ಹೇಳಿಬಿಟ್ಟ.

‘ತಗಳಿ ಬಿಲ್ಲು, ನೋಡಿ ಐವತ್ತು ರೂಪಾಯಿ ಡಿಸ್ಕೌಟ್ ಹಾಕಿದ್ದೀನಿ ಅದನ್ನು ಆಟೋಕ್ಕೆ ಕೊಡ್ತೀನಿ ಆಟೋ ಕರೆದು ಸಾಮಾನು ಹಾಕ್ಕೊಂಡು ಹೋಗಿ’ ಎಂದ.
ವಾಚಾಳಿಯಾದ ಸುಬ್ಬಪ್ಪನಂತ ಸುಬ್ಬಪ್ಪನೇ ಕತ್ತೆರಾಮನ ವ್ಯವಹಾರ ಚತುರತೆಗೆ ಬೆರಗಾಗಿ ಮೂಕನಂತೆ ನಿಂತಿದ್ದ.
‘ಇದೆಂತಾ ವ್ಯವಹಾರರೀ ಭಾವ? ಅದ್ಯಾವ್ದೋ ಹಳೆ ಬಾಕಿ ಅಂದ. ಮುಂಗಡ ಬಡ್ಡಿ ಅಂತಾ ಬೇರೆ ಐನೂರು ಕಿತ್ಕಂಡ. ಉಳಿದ ಮೂರುಸಾವಿರದ ಐನೂರು ಸಾಲದ ಹಣನೂ ಅವ್ನಕೈಲೆ ಉಳಿಸ್ಕಂಡ. ತಗಳ್ದೆ ಇರ ದುಡ್ಡಿಗೂ ಮುಂಗಡವಾಗಿ ಬಡ್ಡಿ ಅಂತಾ ತಗಂಡ್ನಲ್ಲ. ರೈತರು ಉದ್ದಾರಾಗದಾದ್ರು ಹೆಂಗೆ?’ ಆಟೋದಲ್ಲಿ ಹೋಗುತ್ತಾ ಮನಸ್ಸು ತಡೆಯದೇ ಬಾಯಿಬಿಟ್ಟ ಸುಬ್ಬಪ್ಪ, ಚಿನ್ನಪ್ಪ ಮೌನವಾಗಿ ಕುಳಿತಿದ್ದ.
‘ಇವ್ರೆಲ್ಲಾ ರೈತರ ಉದ್ದಾರ ಮಾಡಕೆ ಅಂಗಡಿ ಬೀದಿಲಿ ಕೂತ್ತಿದ್ದಾರೆ ಅಂತಾ ತಿಳ್ದಿದ್ದೀರೇನು? ನಿಮಗೆಲ್ಲೊ ಭ್ರಮೆ’. ವೇಗ ಕಡಿಮೆ ಮಾಡಿದ ಆಟೋ ಚಾಲಕ ಹಿಂದಕ್ಕೆ ಕತ್ತು ಹೊರಳಿಸಿ ಹೇಳಿದ. ಮನೆಯ ಮುಂದೆ ಆಟೋ ನಿಂತು ಅದರಿಂದ ಇಳಿದಾಗ ಬಿಸಿಲು ಪ್ರಖರವಾಗಿರುವುದು ಚಿನ್ನಪ್ಪನ ಗಮನಕ್ಕೆ ಬಂತು.
‘ಓ ಎಂತಾ ಕೆಲ್ಸ ಆಗಿಹೋಯ್ತು ಇವತ್ತಿಂದ ದನ ಬಾರಿ ಕಾಯುವ ಕೆಲ್ಸ ನಮ್ಮದು. ಇಷ್ಟ್ ಹೊತ್ತಾದ್ರೂ ಕೊಟ್ಟಿಗೆಯಿಂದ ದನ ಹೊರಡಿಸಿಲ್ಲಾ ಅಂದ್ರೆ, ಎಲ್ಲರ ಕೈಲೂ ದೂರಿಸಿಕೊಳ್ಬೇಕಾಗುತ್ತೆ’ ಎನ್ನುತ್ತಾ ಕೊಟ್ಟಿಗೆಯ ಕಡೆ ಓಡಿದ.

ಕೊಟ್ಟಿಗೆಯಲ್ಲಿ ದನ ಇರಲಿಲ್ಲ.
ಗಂಡ ಹಾಗೂ ತಮ್ಮನನ್ನು ದೊಡ್ಡೂರಿಗೆ ಕಳಿಸಿದ ಸೀತೆಗೆ ನಂತರದಲ್ಲಿ ಈ ವಿಷಯ ಅರಿವಿಗೆ ಬಂದಿತ್ತು.
ಈಗ ಏನು ಮಾಡುವುದು? ಗಂಡ ಎಷ್ಟ್ ಹೊತ್ತಿಗೆ ಬರುತ್ತಾನೋ? ಬಂದರೂ ಅವನನ್ನ ದನ ಬಾರಿ ಕಾಯಲು ಹೇಗೆ ಕಳಿಸುವುದು? ಊರಿನಿಂದ ನಮ್ಮೊಂದಿಗೆ ಸೇರಿ ಕೆಲಸ ಮಾಡಿ ಕೊಟ್ಟು ಹೋಗಲು ತಮ್ಮ ಬೇರೆ ಬಂದಿದ್ದಾನೆ ಅವನಿದ್ದಾಗಲೇ ಕೊಡ್ಡ ಕೆಲಸ ಎಲ್ಲಾ ಮುಗಿಸಿಕೊಳ್ಳಬೇಕು ಎಂದು ಕೊಳ್ಳುತ್ತಾ ಗುಂಡಪ್ಪನ ಮನೆಗೆ ಓಡಿ ಸಮಸ್ಯೆಯನ್ನು ಮುಂದಿಟ್ಟು ಪರಿಹಾರಕ್ಕಾಗಿ ಕಾದಳು
‘ಎಲ್ಲಾಗುತ್ತಮ್ಮ, ನಾನು ಇವತ್ತು ನೆಂಟರ ಮನೆಗೆ ಹೋಗಕ್ಕೆ ಹೊರಟಿದ್ದೆ’ ಸೇದಿ ಮುಗಿದಿದ್ದ ಬೀಡಿ ಮೋಟನ್ನು ಬೆರಳಿಂದ ಚಿಮ್ಮಿ ದೂರ ಎಸೆಯುತ್ತಾ ಹೇಳಿದ.
ದುರಾಸೆಯ ಮನುಷ್ಯ. ಯಾವಾಗಲು ಲಾಭದಾಸೆಯನ್ನೇ ಯೋಚಿಸುತ್ತಾನೆ. ಏನಿಲ್ಲವೆಂದರೂ ಕೊನೆಯ ಪಕ್ಷ ಕಾಳಮ್ಮನ ಮನೆಯ ಒಂದು ಗ್ಲಾಸ್ ಭಟ್ಟಿ.
‘ಏನಿಲ್ಲ, ಇದೊಂದ್ ಸಲ ಸುಧಾರಿಸ್ಕಳ್ಳಿ. ಇವತ್ತಿಂದ ಮೂರು ದಿನ ನಮ್ಮ ಬಾರಿ ಕಾಯ್ದುಕೊಡಿ. ಮುಂದೆ ನಿಮ್ಮ ಬದ್ಲು ನಾವು ಕಾಯ್ದು ಕೊಡ್ತೀವಿ. ಸಾಯಂಕಾಲ ನಮ್ಮನೆಯವರನ್ನು ಸಿಕ್ಕಕೆ ಹೇಳ್ತೀನಿ’ ಎಂದಳು. ಸೀತೆಯ ಮಾತಿನ ಕೊನೆಯ ಸಾಲಿನ ಅರ್ಥ ಹೊಳೆದು ಗುಂಡಪ್ಪನ ಮುಖ ಅರಳಿತು.

‘ಹುಂ, ಹುಂ, ಹೆಂಗಾದ್ರೂ ಮಾಡನಂತೆ. ಒಬ್ಬರಿಗೊಬ್ಬರು ಆಗದೆ ಇದ್ರೆ ಆಗುತ್ತಾ….. ಹೋಗಿ ಸ್ವಲ್ಪ ಹೊತ್ತು ಬಿಟ್ಟು ನಿಮ್ಮ ದನ ಹೊಡಕೊಂಡು ಬಾರವ್ವ’ ಎಂದಿದ್ದ.
ಮನೆಯ ಕೆಲಸವನ್ನೆಲ್ಲಾ ಮುಗಿಸಿದ ಸೀತೆ ಭಾವ ಮಕ್ಕಳು ಬರುವಷ್ಟರಲ್ಲಿ ಹಿಂದಿನ ದಿನ ಮಾಡಿ ಉಳಿಸಿದ್ದ ಗೊಬ್ಬರ ಸಸಿಯುವ ಕೆಲಸವನ್ನು ಮುಂದುವರೆಸಿದಳು.
‘ಇನ್ನೊಂದು ಸ್ವಲ್ಪ ಐತೆ ಅತ್ಲಾಗಿ ಮುಗಿಸ್ಕಂಡೇ ಹೋಗಿ ಬಿಡಾಣ……… ದನ ಬಾರಿಗೆ ಗುಂಡಪ್ಪರ್ನ ಜೊತೆ ಮಾಡಿದ್ದೀನಿ. ಮೂರು ದಿನ ಅವ್ರೆ ಹೋಗ್ತಾರೆ…. ಅಷ್ಟರಲ್ಲಿ ನಮ್ಮ ಕೆಲ್ಸ ಮುಗಿಸ್ಕಂಡ್ ಬುಡನ’ ಎಂದಳು.
ಬೆಳಗ್ಗಿನಿಂದ ಇಲ್ಲಿಯವರೆಗೆ ಏನೇನು ಕೆಲಸ ಮಾಡಿರಬಹುದು. ಯೋಚಿಸಿದ ಸುಬ್ಬಪ್ಪನಿಗೆ ಅಕ್ಕನ ಕೆಲಸದ ವೇಗ ಕಂಡು ಅಚ್ಚರಿಯಾಯಿತು.
‘ಅಕ್ಕಾ, ನೀನೇನ್ ಮನುಷ್ಯಳಾ ಮಿಷೀನಾ’ ಎಂದು ಛೇಡಿಸಿದ.

‘ಇಷ್ಟೆಲ್ಲಾ ಕಷ್ಟ ಇಟ್ಕಂಡು ಮನೆಲಿ ಮೂಲೆಲಿ ಕೂರಕಾಗುತ್ತೇನಾ’ ನೀನ್ ಬೇರೆ ಸೋಮವಾರ ಸಾಯಂಕಾಲನೇ ಹೋಗ್ಬೇಕು ಅಂತಿದೀಯ. ಅಷ್ಟರಲ್ಲಿ ಎಲ್ಲಾ ಕೆಲ್ಸ ಮುಗಿಸಿಕೊಳ್ಳಬೇಡ್ವ? ನಾನ್ ಕೆಂಪ್ ಹುಂಜ ಕುಯ್ದು ಹಬ್ಬ ಮಾಡದ್ ಬ್ಯಾಡ್ವ?’ ಸೀತೆಯೂ ತಾನು ಮಾತಿನಲ್ಲಿ ಏನೂ ಕಡಿಮೆಯಿಲ್ಲ ಎಂಬಂತೆ ಹೇಳಿದಳು.
‘ಪರ್ವಾಗಿಲ್ಲ ಕಣಕ್ಕ ಒಳ್ಳೆ ಚನ್ನಾಗಿ ಹುರಿದುಂಬುಸ್ತಿಯಾ, ಇದೇ ತಂತ್ರ ಯಾವಾಗ್ಲೂ ನಿನ್ ಗಂಡನ್ ಮೇಲೆ ಪ್ರಯೋಗ್ಸು, ಡಬಲ್ ಕೆಲ್ಸ ತಗೀಬಹುದು’ ಸುಬ್ಬಪ್ಪ ಚುಡಾಯಿಸುವವನಂತೆ ಭಾವನ ಮುಖ ನೋಡಿದ.
‘ಸರಿ ಬಿಡು ಮಾರಾಯ. ನನಗೊಂದು ವಿಚಾರ ಹೊಳ್ದಿತೆ. ಈವತ್ತೇ ರಾತ್ರಿ ಕೋಳಿ ಕೂಯ್ದು ಹಬ್ಬ ಮಾಡಿದ್ರೆ ಹೆಂಗೆ ಅಂತಾ’ ಚಿನ್ನಪ್ಪ ಸೀತೆಯ ಮುಖ ನೋಡುತ್ತಾ ಹೇಳಿದ.
‘ನೋಡಕ್ಕಾ, ನಿನ್ನ ಗಂಡ ಈವತ್ತೇ ಕೋಳಿ ಕೂಯ್ದು ಹಬ್ಬ ಮಾಡಿ ನಾಳೆ ಬೆಳಗ್ಗೆನೇ ಕಳಿಸಿ ಕೊಡಹಾಗೆ ಕಾಣುತ್ತೆ’ ಕೋಳಿ ಕೂಯ್ದು ಹಬ್ಬ ಮಾಡಿ ಆದಮೇಲೆ ಕೂಡಾ ಯಾವ ಮರ್ಯಾದಸ್ಥ ಮತ್ತೆ ನೆಂಟರ ಮನೇಲಿ ಉಳ್ಕಳ್ತಾರೆ ಹೇಳು’ ಸುಬ್ಬಪ್ಪ ಅರೆಮುನಿಸು ತೋರಿದ.

‘ಹಂಗಲ್ಲಪ್ಪ, ಆ ಗುಂಡಪ್ಪ ಬ್ಯಾರೆ ಸಾಯಂಕಾಲ ಗಂಟ್ ಬೀಳ್ತಾನೆ. ತಿನ್ನಕೆ ಕುಡಿಯಕೆ ಅಂದ್ರೆ ಬಿದ್ ಸಾಯ್ತಾನೆ’. ಅದ್ಕೇ ಇವತ್ತೇ ಕೋಳಿ ಕುಯ್ದು ಸರಾಯಿ ತÀರಿಸಿ ಅವ್ನನ್ನೂ ಕರಿಯಾನಾ ಅಂತ ಅಷ್ಟೆ’ ಚಿನ್ನಪ್ಪ ಸಮಜಾಯಿಷಿ ಹೇಳಿದ.
‘ಅವರು ಹೇಳದೂ ಸರಿ ಕಣ ಅಪ್ಪಣಿ, ಇದೇ ಲಾಸ್ಟು ಅಂತಾ ಅಲ್ಲ ಮೂರ್ ದಿನ ಎಲ್ಲಾ ಕೆಲ್ಸ ಮುಗುದ್ ಮ್ಯಾಲೆ ನಿನಗೇಂತ ಮತ್ತೊಂದು ಕೋಳಿ ಕುಯ್ದು ಹಬ್ಬ ಮಾಡಿ ಕಳಿಸ್ಕೊಡ್ತೀನಿ ಆಯ್ತಾ’ ಸೀತೆ ತಮ್ಮನನ್ನು ಮಾತಲ್ಲೇ ಚುಚ್ಚಿದಳು.
ಉತ್ಸಾಹ ತುಂಬಿಕೊಂಡ ಅವರ ಕೆಲಸ ಭರದಿಂದ ಸಾಗತೊಡಗಿತು.

–ಹಾಡ್ಲಹಳ್ಳಿ ನಾಗರಾಜ್

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x