“ಕತ್ತಲ ಗೋಡೆಯ ಮೇಲೆ ತಮ್ಮದೇ ರಕ್ತದಲ್ಲಿ ಗೀಚಿ ಗೀಚಿ ಬರೆದ ದಲಿತ ತಲೆಮಾರುಗಳ ತವಕ ತಲ್ಲಣ!”: ಎಂ. ಜವರಾಜ್

“ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ” ಬಿದಲೋಟಿ ರಂಗನಾಥ್ ಅವರ ನಲವತ್ತು ಕವಿತೆಗಳನ್ನೊಳಗೊಂಡ ಒಂದು ಪರಿಪೂರ್ಣ ಸಂಕಲನ. ಇಲ್ಲಿ ‘ಪರಿಪೂರ್ಣ’ ಪದ ಬಳಕೆಯು ಕವಿತೆಗಳು ಓದುಗನಿಗೆ ಗಾಢವಾಗಿ ಆವರಿಸಿಕೊಳಬಹುದಾದ ಲಯದ ಒಂದು ದಟ್ಟ ದನಿ. ಈ ಆವರಿಕೆ, ಕವಿಯು ಕಾವ್ಯ ಕಟ್ಟುವಿಕೆಯಲ್ಲಿ ಅನುಸರಿಸಿರುವ ಒಂದು ಕುಶಲ ತಂತ್ರವೇ ಆಗಿದೆ.

ಈ ಪರಿಪೂರ್ಣತೆಯನ್ನೆ ಹಿಗ್ಗಿಸಿ ಬಿದಲೋಟಿ ರಂಗನಾಥರ ಕವಿತೆಗಳ ಓದು ಮತ್ತು ಮುನ್ನೋಟವನ್ನು ಪರಿಣಾಮಕಾರಿಯಾಗಿ ಒಳಗಣ್ಣಿನಿಂದ ನೋಡುತ್ತಾ ಪರಾಮರ್ಶನೆಗೆ ಒಳಪಡಿಸುವುದಾದರೆ “ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ” ಎಂಬುದು ದಲಿತ ನೆಲೆಯ ವಸ್ತುಸ್ಥಿತಿಗೆ ಪೂರಕವಾಗಿ, ಆ ಪೂರಕ ಪರಿಪೂರ್ಣತೆಗೆ ಗಾಢಾರ್ಥ ಹೊರಡಿಸ ಬಲ್ಲ ‘ಶಕ್ತ ಸಂಚಲನ ಕ್ರಿಯೆ’ ಪ್ರತಿರೂಪಾಧ್ವನಿಯಲ್ಲಿ ಅಡಗಿ ಕುಳಿತಿರದೆ ಕಾವ್ಯದ ರೂಪಾತ್ಮಕತೆಯಲ್ಲಿ ಟಿಸಿಲೊಡೆದು ಅನ್ಯದಿಂದ(ಇತರ ದಲಿತ ಸಾಹಿತ್ಯದ influence) ಬೇರ್ಪಟ್ಟ ವಿಶಿಷ್ಟ ನುಡಿಗಟ್ಟಿನ ದಟ್ಟ ಅನುಭವದ ಗುಚ್ಛ.

‘ಮಣ್ಣಿಗೆ ಬಿದ್ದ ಹೂಗಳು’, ‘ಬದುಕು ಸೂಜಿ ಮತ್ತು ನೂಲು’, ‘ಉರಿವ ಕರುಳ ದೀಪ’ – ಬಿದಲೋಟಿ ಅವರ “——ರುಜು ಹಾಕಿ” ಗೂ ಪೂರ್ವದ ಮೂರು ಕವಿತೆಗಳ ಸಂಕನಲಗಳ ಕವಿತೆಗಳ ದನಿಯೂ ಭಾಗಶಃ ಈ ‘ಪರಿಪೂರ್ಣತೆ’ಯೊಳಗೇ ರಚಿತಗೊಂಡು ಅಡಿಪಾಯ ಹಾಕಿರುವ ಬಗ್ಗೆ ಅಲ್ಲಲ್ಲಿ ಸಾಕ್ಷ್ಯ (ಕ್ಲೂ ಅನ್ನಿ) ಒದಗಿಸುತ್ತವೆ. ಆದರೆ ಬಿದಲೋಟಿ ಅವರ ಈ ಸಂಕಲನಗಳ ಕವಿತೆಗಳನ್ನು ಸಾಹಿತ್ಯದ ಪರಿಭಾಷೆಯ ಪರಾಮರ್ಶನ ಕ್ರಿಯೆಯಲ್ಲಿ ಪರಿಪೂರ್ಣವಾಗಿ ಅರಗಿಸಿಕೊಳ್ಳುವಲ್ಲಿ ಕನ್ನಡ ಸಾಹಿತ್ಯ ವಲಯ ದಿಕ್ಕೆಟ್ಟು ನಿಧಾನವಾಗಿ ಸ್ವೀಕರಿಸಿದಂತಿದೆ. ಇದಕ್ಕೆ ಕಾರಣಗಳು – ‘ಕ್ಲಿಷ್ಟ’!

ಈಗಾಗಲೇ ಬಿದಲೋಟಿ ಅವರ ಕವಿತೆಗಳು ಬಹುತೇಕ ಪ್ರಿಂಟ್ ಮೀಡಿಯಾ, ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟಗೊಂಡು ಸಾಹಿತ್ಯಾಸಕ್ತರ ಗಮನ ಸೆಳೆದಿವೆ. ಹಾಗೆ ಸಾಮಾಜಿಕ ಜಾಲತಾಣಗಳಲ್ಲಿ ಇವರ ಕವಿತೆಗಳ ಬಗ್ಗೆ ಸಾಕಷ್ಟು ಚರ್ಚೆಗಳೆ ನಡೆದಿವೆ. ನಡೆಯುತ್ತಿವೆ! ಪ್ರಸ್ತುತ ಕಥೆ, ಕಾದಂಬರಿ, ಗದ್ಯ ಸಾಹಿತ್ಯ ಆವರಿಸಿರುವ ಈ ದುರಿತ ಕಾಲಘಟ್ಟದಲ್ಲಿ ಕವಿತೆ ಬರೆದು ಸಾಹಿತ್ಯಾಸಕ್ತರನ್ನು ಆವರಿಸಿ ನಿಂತಿರುವ ಕವಿಯೊಬ್ಬನ ಕವಿತೆಗಳ ಗಟ್ಟಿತನಕ್ಕೆ ಸಿಕ್ಕಿರುವ ಪರಿಪೂರ್ಣ ಸಾಕ್ಷ್ಯದಂತಿದೆ.

“ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ” ಇದು ಕೃತಿಯ ಶೀರ್ಷಿಕೆ ಕವಿತೆ ಹಾಗು ಈ ಸಂಕಲನದ ಎಂಟನೇ ಕವಿತೆ. ಇದು ಭೂತದ ಎಳೆಯೊಂದಿಗೆ ಕೂಡಿಕೊಂಡು ವರ್ತಮಾನ ಮತ್ತು ಭವಿತವ್ಯದ ದಿಕ್ಕುದೆಸೆಗಳ ಬಗ್ಗೆ ಈ ಸಮಾಜದೊಳಗೆ ಮನೆಮಾಡಿರುವ ಕಟ್ಟಕಡೆಯ ಮನುಷ್ಯನು ತನಗಾದ ಅಪಮಾನವನ್ನೆ ಮೆಟ್ಟಿಲು ಮಾಡಿಕೊಂಡು ಹೇಗೆ ಗಟ್ಟಿಯಾಗಬಲ್ಲೆ ಎಂಬುದನ್ನು ಕೆಚ್ಚಿನಲ್ಲೆ ಪ್ರತಿಪಾದಿಸುವ ಗುಣ ವಿಶೇಷಣ ಹೊಂದಿರುವ ಒಂದು ಪರಿಪೂರ್ಣ ಕವಿತೆ.

ಈ ಕವಿತೆಯಲ್ಲಿ ಧಿಕ್ಕರಿಸಿದ್ದಕ್ಕೆ ಧಿಕ್ಕಾರವಿಡದೆ ಭವಿತವ್ಯದಲ್ಲಿ ಮನುಷ್ಯತ್ವದ ಬೆಳಕಾಗಿ ರೂಪ ಪಡೆವ, ಪಡೆದ ಹರಿದ ಅಂಗಿ ಬಿಸಾಡದೆ ಅದನ್ನು ಕೊಟ್ಟವರ ಮುಂದೆಯೇ ಹೊಸ ಅಂಗಿ ತೊಡುವ, ಮುಟ್ಟಿಸಿಕೊಳ್ಳಲಿಲ್ಲವೆಂಬ ಬೇಸರಿಕೆಗೆ ಇಂಬು ಕೊಡದೆ ಮುಟ್ಟಿಕೊಳದವರೆ ಬಂದು ತಬ್ಬಿಕೊಳುವ ಅರಿವು, ಹಾಗೆ ಹೋಟಲ್ಲು, ಕೆರೆ ನೀರು, ದೇವರ ಗುಡಿಯಂಥ ವಿಷಯದಲ್ಲಿ ತಾರತಮ್ಯದ ಮನುಸ್ಸುಗಳೇ ರತ್ನಗಂಬಳಿ ಹಾಸಿ ಒಳಗೆ ಬಿಟ್ಟುಕೊಳುವ ದಿನಗಳು ಬರುವ ಬಗ್ಗೆ ಅಚಲ ನಂಬಿಕೆಯಿಂದ ಕುಡಿಯೊಡೆವ ಸಾತ್ವಿಕವಾದ ಸಿಟ್ಟು, ಕೆಚ್ಚು, ಛಲದ ಒಂದು ಅಯಸ್ಕಾಂತೀಯವಾದ ಗುಣ ವಿಶೇಷಣೆಯೊಂದಿಗೆ ರುಜುವಾತು ಪಡಿಸುವ ಕವಿಗೆ ಒಂದು ಸ್ಪಷ್ಟತೆ ಇದೆ. ಈ ಸ್ಪಷ್ಟತೆ, ಬೆವರು ಬದುಕಿನ ಸಮಾಜದೊಳಗಿರುವ ತಾರತಮ್ಯಪೂರಕವನ್ನು ಹೋಗಲಾಡಿಸದ ಹಾಗು ಈ ನೆಲದಲ್ಲಿ ಜೀವಿಸುವ ಕಟ್ಟಕಡೆಯ ಮನುಷ್ಯನಿಗೆ ತಾರತಮ್ಯರಹಿತ ಬದುಕನ್ನು ಕಟ್ಟಿಕೊಳುವ ಸ್ವಾತಂತ್ರ್ಯವಿಲ್ಲದ ಮೇಲೆ ಜನನಂಬಿಕೆಯ ದೇವರ ಅಸ್ತಿತ್ವದ ಪ್ರಶ್ನೆ ಏಳುತ್ತದೆ. ಕವಿತೆಯೊಳಗೆ ಪ್ರಜ್ಞಾಪೂರ್ವಕವಾಗಿ ಏಳುವ ಈ ಪ್ರಶ್ಞೆ “ಮುಂದೆ ದೇವರಿಲ್ಲದ ಸಾಕ್ಷಿಗೆ ರುಜು ಹಾಕುತ್ತೇನೆಂಬ ಸಣ್ಣ ಅರಿವಿತ್ತು ನನಗೆ” ಎಂಬ ಕಟು ವಾಸ್ತವತೆಯಲ್ಲಿ ತಾರತಮ್ಯದ ಆಸ್ತಿಕತೆಯ ಬೇರಿಗೆ ಹರಿತವಾದ ಹಾರೆ ಪಿಕಾಸಿ ರೂಪದ ಭಾಷೆಯಲ್ಲಿ ದೇವರ ಅಸ್ತಿತ್ವವನ್ನೆ ಕಟಕಟೆಯಲ್ಲಿ ನಿಲ್ಲಿಸುತ್ತದೆ.

“ಘಟಶೋಧನೆಯಲ್ಲಿನ ಬಂಧವನ್ನು/ಹುಡುಕುತ್ತಲೇ ಹೋದೆ” ಎಂಬ ಶೋಧನಾತ್ಮಕ ಕ್ರಿಯಾನ್ವೇಷಣೆ ಆಚೀಚೆ ಆಡಾಡುತ ಸ್ಥಿರತೆಗಾಗಿ ಕೊಸರಾಡುವ ಮನಸ್ಸಿನ ಭಿನ್ನ ರೂಪವು ಸುಪ್ತತೆಯಲಿ ತೆರೆದುಕೊಳ್ಳುವ “ತಂತಿಯೊಳಗಿನ ಶಬ್ಧ” ಆತ್ಮದ ಅನುಸಂಧಾನದಲಿ ಪರಿಪೂರ್ಣ ಧ್ಯಾನಸ್ಥ ರೂಪವಿದೆ. ಇಲ್ಲಿ ನಿರಂತರವಾಗಿ ಕೇಳುವ “ತಂತಿ ಮೀಟಿದ ಶಬ್ಧ/ನಿಜದ ನೆಲೆಯ ಬದುಕಿಗೆ ದಾರಿ ತೋರಿ” ಬೆಳಕಿನ ಮಾರ್ಗಾನ್ವೇಷಣೆಯ ಸಖ್ಯದಲಿ ಗೆದ್ದ ಆತ್ಮದ ಪಿಸುಮಾತುಗಳು ವಿಪರೀತದಲಿ ಗೋಡೆಗಳಿಲ್ಲದ ಬಯಲಲ್ಲಿ ನಡೆಯುತ್ತಲೇ ಹೋಗುವ ಪ್ರಕ್ರಿಯಾತ್ಮಕ ಸೂಚಕವು ದೀರ್ಘವಾಗಿ “ಓಂಕಾರದೊಳಗಿನ ಗುಂಡಿಯ ಶೋಧಿಸುತ” ತದೇಕಚಿತ್ತದಿಂದ ಇನ್ನೂ ಆಳಕ್ಕಿಳಿದು ಶೂನ್ಯದಲ್ಲಿ ಕೇಳುವ ತಂತಿಯ ಶಬ್ದ ಹೊರಡಿಸುವ ಸತ್ಯದ ಆಕರದ ಗೂಡು ಬಯಲಾಗುವಲ್ಲಿ ಕಾರುಣ್ಯಪೂರಕ ಬೆಳಕಿನ ಮೂಲದಲ್ಲಿದೆ‌.

ಬಿದಿಲೋಟಿ ರಂಗನಾಥ್

“ಹಕ್ಕಿ ಮರಿಯ ಚಿತ್ರ” ಒಂದು ಅಸಾಧಾರಣವಾದ ಕವಿತೆ. ಈ ಕವಿತೆ, ಕಾವ್ಯದ ಓದುಗನ ಎದೆಯಲ್ಲಿ ಅದು ಬಿಡಿಸುವ ಚಿತ್ರ ರೇಖೆಗಳು ವಿಭಿನ್ನವಾದ ಭಾವನೆ ಮೂಡಿಸುತ್ತದೆ. ಅದು ಹೊರಡಿಸುವ ನಿಶ್ಯಬ್ಧದೊಳಗಿನ ಶಬ್ಧ ‘ಗೆರೆಗಳಿಲ್ಲದ ರಂಗೋಲಿಗೆ/ರೆಕ್ಕೆ ಮೂಡುವ ಕನಸು’ ಬಿದಲೋಟಿ ಅವರ ಶಸಕ್ತ ಸಾಲು. ಇಂಥ ಸಾಲುಗಳು ಕವಿಯ ಕಾವ್ಯದ ಜೀವದ್ರವ್ಯವೇ ಸರಿ. ಆ ಜೀವದ್ರವ್ಯದ ಉಸಿರಿನಲ್ಲಿ ‘ನನ್ನೊಳಗೆ ಇಳಿದು ಬರುತ್ತಲೇ ಇದೆ/ನಿತ್ರಾಣಗೊಂಡಿದ್ದ ಹಕ್ಕಿ ಮರಿಯ ಚಿತ್ರ’ ವು ಮಣ್ಣಿಗೆ ಬಿದ್ದ ಬೀಜದಂತೆ ಮೊಳಕೆಯೊಡೆದು ಚಿಗುರೊಡೆದು ‘ಎದೆಯ ಜೋಳಿಗೆಯಲಿ/ಆ ಹಕ್ಕಿ ಮರಿಯೇ ರೆಕ್ಕೆ ಬಡಿಯುತ್ತಾ ಚಿತ್ರ ಬಿಡಿಸುತ್ತಿದೆ’ ಎಂಬುದು ಕವಿಯೊಬ್ಬ ತನ್ನದೇ ರಕ್ತದಲ್ಲಿ ಸಾವಕಾಶವಾಗಿ ರಚಿಸಿದ ಪರಿಪೂರ್ಣ ಚಿತ್ರಕಾವ್ಯವಾಗಿದೆ.

ಯು.ಆರ್.ಅನಂತಮೂರ್ತಿ ‘ಭವ’ದ ಭಿತ್ತಿಯಲ್ಲಿ ಜೀವ ವೈರುಧ್ಯ ಮತ್ತು ಸತ್ಯದ ಅಸ್ತಿತ್ವವನ್ನು ಕಾದ ಕೆಂಡದ ಸಲಾಕೆಗಿಟ್ಟು ಪರೀಕ್ಷಿಸುತ್ತಾರೆ. ಪಿ.ಲಂಕೇಶರ ‘ಭವ’ ದ ಬುದ್ಧನ ಜೀವಮಾರ್ಗ, ಇದೇ ಜೀವ ವೈರುಧ್ಯ ಮತ್ತು ಸತ್ಯದ ಅಸ್ತಿತ್ವವನ್ನು ಮೋಕ್ಷದ ಹುಡುಕಾಟದ ಜೊತೆಗಿಟ್ಟು ಪ್ರೀತಿಯ ಬಂಧನದಲ್ಲೆ ಕರುಣಿಸಿ (ಜನರಲ್ಲಿಗೆ ಬರುವ)ದೆ.ಇದಿಲ್ಲಿ ಕಾರುಣ್ಯದ ರೂಪದಲ್ಲಿ ಸ್ಪಷ್ಟವಾದ ಸತ್ಯದ ಬೆಳಕಿನ ಪರಿಧಿಯೊಳಗೆ ಗೋಚರಿಸಿದೆ. ಆದರೆ ಬಿದಲೋಟಿಯವರ “ಭವದ ಬೀಜ ಸಿಡಿದು” ಕತ್ತಲಾಗುವ ವ್ಯಾಖ್ಯಾನವಿಲ್ಲಿ ದೀರ್ಘಗೊಂಡಿದೆ. ಹೀಗೆ ದೀರ್ಘಗೊಂಡ ಜಾಡಿನಲ್ಲೆಲ್ಲ ಬುದ್ಧನ ಹೆಜ್ಜೆ ಗುರುತಿದೆ. ಆ ಹೆಜ್ಜೆ ಗುರುತುಗಳ ಜಾಡು ಹಿಡಿದು ಕವಿಯು ಹಿಡಿಯುವ ಮಾರ್ಗ, ಜೀವ ಚೈತನ್ಯದ್ದು. ಇಲ್ಲಿ ಸತ್ಯದ ಬೆಳಕಿನ ಶೋಧಕ್ಕೆ ಸಾವಿನ ಲೇಪವಿದೆ. ಮುಪ್ಪಿನ ಕಾರಣಕ್ಕೆ ರೋಗಗೊಂಡ ಜೀವಯಾತನೆಯಿದೆ. ಆದರೆ ಕವಿಯ ಮನಸು ಬೆಳಕ ಅರಸಿ “ನದಿ ಪರ್ವತ ಎಲ್ಲವೂ ದಾಟಿದೆ/ಅಲ್ಲೆಲ್ಲೋ ಬೆಳಕು ಮಿಣುಗುಟ್ಟಿತು” ಎನುವ ಭಾವದಲ್ಲಿ ಆ ಜೀವ ಯಾತನೆ ತನ್ನ ಅಸ್ತಿತ್ವ ಕಳೆದುಕೊಂಡಿತೇನೊ.. ಅಥವಾ ಆ ಜೀವ ದಿಗಂತದಲ್ಲಿ ಮನುಕುಲ ಅಂಕೆಗೆ ನಿಲುಕದೆ ಅದೃಶ್ಯವಾಯಿತೇನೋ… ಆಗ ಈ ಜೀವಭಾವ ಹೊತ್ತ ಮನಸು “ಅತ್ತಲೇ ಮುಖಮಾಡಬೇಕೆನ್ನುವಷ್ಟರಲ್ಲಿ/ಭವದ ಬೀಜ ಸಿಡಿದು/ಕತ್ತಲು ನಾಟಿ” ಕವಿಗೆ ಅದು “ದಕ್ಕದ ಬುದ್ದನ ಹೆಜ್ಜೆ ಗುರುತು” ಎನ್ನುವುದು ಮನುಕುಲದ ದೀರ್ಘ ಜೀವಯಾನದಲ್ಲಿ ಬುದ್ಧನ ಬೆಳಕಿನ ಕಿರಣಗಳನ್ನೆ ಆರಿಸಿ ಬ್ರಾಹ್ಮಣ್ಯದ ಬೀಜಾಂಕುರಗಳು ದಲಿತ ಬೀದಿಗಳ ಹಸಿಮಣ್ಣ ನೆಲದಲ್ಲಿ ಮೊಳಯೊಡೆಯತ್ತಿರುವ ಪ್ರತಿಮಾಲಂಕಾರದ ನಿಕೃಷ್ಟತೆಯ ಭಾಷ್ಯ ಬರೆದಿದೆ.

“ನಕ್ಷತ್ರದ ಬೆಳಕಾದರೂ ಕಾಣಲಿ” ಕವಿತೆಯಲ್ಲಿ ಕವಿಯು ತನ್ನ ಎದೆಯಾಳದ ಬಟ್ಟಲಲ್ಲಿ ಅದುಮಿಟ್ಟುಕೊಂಡು ನೋವುಂಡ ಮನಸ್ಸಿನ ಗದ್ಗದಿತ ನಿವೇದನೆ ಇದೆ. ಅದು ವರ್ತಮಾನವನ್ನು ಅವಲೋಕಿಸುತ್ತಿರುವ ಒಂದು ತಲೆಮಾರು, ಮುಂದೆ ಮೂಳೆ ಚಕ್ಕಳ ರಕ್ತ ಮಾಂಸ ತುಂಬಿ ಬರುವ ತಲೆಮಾರು, ಅದರ ಮುಂದುವರಿದ ತಲೆಮಾರಿನ ಹಸಿವು ಬಾಯಾರಿಕೆಯ ತಾವಿನ ತಾಪದ ದನಿಗಳಿಗೆ “ಮುರುಕು ಜೋಪಡಿಯಲಿ/ ಬಿದ್ದ ಕನಸುಗಳಿಗೆ ಜೀವ ಕೊಡು” “ಬೆಳಗಾಗುವ ನಾಳೆಗಳು/ ಸುಡುವ ಬಂಡೆಯ ಮೇಲೆ ನಿಂತರೂ/ ಅವುಗಳ ಪಾದಮುಟ್ಟಿ/ ನಡೆಯವ ಹಾದಿಯ ಸುಗಮಗೊಳಿಸು” ಸಾಲುಗಳಲ್ಲಿ ಭವಿತವ್ಯದಲ್ಲಿ ಹುಟ್ಟುವ ಜೀವ ಜಂತುಗಳಿಗೆ ಜೀವ ಚೈತನ್ಯ ಸ್ಪರಿಸುವ ಕೋರಿಕೆ ರೂಪದ ಹಂಬಲಿಕೆ ಇದೆ. ಹಾಗಾಗಿಯೇ ಇಲ್ಲಿ ಹಸಿವಿನ ಸಂಕಟ ಸುಡಲು ‘ಬೇಡುವ’ ‘ಧೂಪದಾರತಿ ಎತ್ತಿ ಬೆಳಗುವ’ ಕವಿಯ ತ್ಯಾಗದ ರೂಪವು – ಕಡಿದಾದ ಕವಲು ದಾರಿ ಮೇಲಾದರು ಸರಿ ನಕ್ಷತ್ರದ ಬೆಳಕಿನ ಹಂಬಲಿಕೆಯಲ್ಲಿ ಜಗಕೆ ಆವರಿಸಿರುವ ಮಂಕನ್ನು ಓಡಿಸು ಎಂಬ ಉದಾತ್ತ ಸಂದೇಶ ರವಾನಿಸಿದೆ. ಇದು ಕುವೆಂಪು ಅವರ ‘ಬಾ ಫಾಲ್ಗುಣ ರವಿ ದರ್ಶನಕೆ’ ಕವಿತೆಯ ಕತ್ತಲಾವರಿಸಿರುವ ಜಗಕೆ ಬೆಳಕು ನೀಡಿ ಜೀವ ಚೈತನ್ಯ ನೀಡುವ ಸೂರ್ಯ ಉದಯದ ವರ್ಣನೆಯ ಇನ್ನೊಂದು ರೂಪದಲ್ಲಡಗಿದೆ. ಅದು “ಕುಂಕುಮಧೂಳಿಯ ದೀಕ್ತಟವೇದಿಯಳೋಕುಳಿಯಲಿ ಮಿಂದೇಳುವನು/ ಕೋಟಿವಿಹಂಗಮ ಮಂಗಲರವ ರಸನೈವೇದ್ಯಕೆ ಮುದ ತಾಳುವನು” ಎನ್ನುತ್ತ ಸೂರ್ಯನ ಆಗಮನದ ರಸಧಾರೆಯ ಸೊಬಗಿನಲಿ ಕಾಣುವ ಪ್ರಕೃತಿ ವೈಪರೀತ್ಯದ ರೂಪವು ಅಂಧಕಾರ ಅಹಂಕಾರ ಹಸಿವು ಸಂಕಟಗಳನು ಅದುಮಿ ಜೀವಜ್ಜೀವಗಳ ಪುನರುಜ್ಜೀವಗಳ ವಿಕಾಶದ ಬೆನ್ನು ತಡವುವ ವ್ಯವಧಾನವಿಲ್ಲಿ ತನ್ನ ಅರ್ಥವ್ಯಾಪ್ತಿಯನ್ನು ಹಿಗ್ಗಿಸಿದೆ. ಅಂತೆಯೇ ಬಿದಲೋಟಿ ಅವರ ನಿವೇದನಾ ಸಂಕಟವು “ಕರುಳ ಮಮಕಾರ/ಜೋಳಿಗೆಯನೇ ತೊಟ್ಟಿಲ ಮಾಡಿ ತೂಗಿದೆ/ಬೆವರಿದ ನೆಲಕೆ/ತೂಪರಿಸುವ ಮಳೆಯಾದರೂ ಬರಲಿ/ ಹಸಿವಿಲ್ಲದ ಹೊಟ್ಟೆಗೆ ಕರುಣೆ ತೊಡಿಸಿ/ ಹಸಿದವರ ಹೊಟ್ಟೆ ತಣಿಸಲಿ” ಎಂಬುದರಲ್ಲಿದೆ.

ಅಕಾಲಿಕ ಸಾವಿನ ಸೂತಕವೊಂದು ಕವಿಯ ಎದೆಯಲ್ಲಿ ಈಗಲೂ ಬೆಚ್ಚಗೆ ಕೂತು ಮಾತಾಡುತ್ತಿದೆ. ಸದ್ಯ ಅದೀಗ “ಬಾಡಿದ ಹೂವು”. ಸಾವು ಸಾವೇ! ಈ ಸಾವು ಎಂಬುದು ಅಂತಿಮ. ಜೀವಲೋಕದೊಂದಿಗೆ ಪರಿಪೂರ್ಣ ಬಿಡುಗಡೆ. ಆದಾಗ್ಯೂ “ಬಾಡದ ಸಮಾಧಿ ಮೇಲಿನ ಹೂವಿನ ಕಣ್ಣುಗಳು/ಕಣ್ಣೀರ ಕಡೆಯುತ್ತಿವೆ/ತುಪ್ಪದ ಮಾತಿನ ಮಂದಿ ಹೋಗುತ್ತಲೇ ಇದ್ದಾರೆ/ಸಮಾಧಿ ಮುಟ್ಟಿ” ಈ ಅಕಾಲಿಕ ಸಾವಿನ ಸೂತಕವನ್ನು ದಿಕ್ಕರಿಸಿದಂತೆ ಧ್ವನಿಸುವ “ಅವನದು ಸಾವೆಂದು ಹೇಗೆ ಹೇಳಲಿ” ಎಂಬ ಕವಿಯ ಒಗಟಿನ ದನಿ ಈ ಸಾವಿನ ಭಿನ್ನಾರ್ಥ ಸೂಚಕವಾಗಿದೆ. ಈ ನೋವಿನ ತಾಕಲಾಟವು ಕವಿಯಲ್ಲಿ ಗದ್ಗದಿತವಾಗಿ “ಪಾದಗಳನ್ನು ಕಣ್ಣಿಗೊತ್ತಿಕೊಂಡು” ಕವಿತೆಯೊಳಗು ಕಣ್ಣ ಹನಿಯೊಂದು ಕೆನ್ನೆ ಸವರಿ ಇಳಿದು ಜಾರಿ ನೇವರಿಸಿ ‘ಕತ್ತಲೆಯಲ್ಲಿ ಬಿಕ್ಕಳಿಸುತ ಕೂಗುವ ಹಕ್ಕಿ/ ಸಣ್ಣ ಕೀರಲು ಧ್ವನಿ ಕಿವಿಯನು ತುಂಬಿತು’ ಎನ್ನುವ ಸಂಕಟವು ಕೇರಿ ಬೀದಿಯನು ದಾಟಿ ಒಂದು ಅಸ್ಪಷ್ಟ ದಿಕ್ಕಿನಲಿ ನಿಂತು ಏನೂ ಕಾಣದ ಕತ್ತಲ ಗೋಡೆಯ ಮೇಲೆ ಗೀಚಿ ಗೀಚಿ ಬರೆದ ಅದೃಶ್ಯ ಆತ್ಮ ಕಥನದಂತಿದೆ ಈ ಕವಿತೆಗಳ ಒಳಧ್ಯಾನ.

ಅವ್ವನ ಬಗ್ಗೆ ಅಪ್ಪನ ಬಗ್ಗೆ ಬರೆದ ಕವಿತೆಗಳು ಯಾವತ್ತಿಗೂ ಸಾರ್ವಕಾಲಿಕ. ಕನ್ನಡ ಸಾಹಿತ್ಯ ಲೋಕ ಇದುವರೆಗೂ ಆ ತರಹದ ಸಾಹಿತ್ಯವನ್ನು ತಬ್ಬಿಡಿದುಕೊಂಡು ಪೋಷಿಸಿದೆ. ಕೆಲವು ಕವಿಗಳಿಗೆ ಅಪ್ಪನೇ ಬದುಕು. ಇನ್ನು ಕೆಲವರಿಗೆ ಅವ್ವ ಅಂದರೆ ಬದುಕು. ಇನ್ನೂ ಹಲವರಿಗೆ ಅಪ್ಪ ಅವ್ವನ ಲಾಲನೆ ಪಾಲನೆ ಪೋಷಣೆಯ ನೆನಪಿನ ಬುತ್ತಿ ಒತ್ತರಿಸಿ ಒತ್ತರಿಸಿ ಬರುತ್ತದೆ. ಅದು ಕಾವ್ಯವಾಗಿ ರೂಪು ಪಡೆದಿವೆ. ಆದರೆ ಮೊಗಳ್ಳಿ ಗಣೇಶ್ ತರಹದವರಿಗೆ ಅಪ್ಪನೆಂದರೆ ಅವನೊಬ್ಬ ಕ್ರೌರ್ಯದ ಸಂಕೇತ. ಅದಕ್ಕೆ ಬಾಲ್ಯದ ದಿನಗಳ ನೆನಪು. ಹಡೆದ ಅವ್ವನ ಮೇಲಿನ ಮಮಕಾರ. ಈ ಮಮಕಾರದ ಆಪ್ತತೆ ಪಿ. ಲಂಕೇಶ್ ಕಟ್ಟಿದ ಅವ್ವನ ಮೇಲಿನ ‘ಅವ್ವ’ ಕವಿತೆ. ಆ ‘ಅವ್ವ’ನ ಭಾವುಕತೆಯು ಅದ್ಭುತ ಮನೋಲೋಕದ ದನಿಯಂತೆ ಬಿದಲೋಟಿ ಅವರ “ಅಪ್ಪನೆದೆಯ ಬೆಳಕಿನ ಹಾಡು” ಅಪ್ಪನ ಮೇಲಿನ ಪ್ರೀತಿ, ಮಮಕಾರ, ಕಾರುಣ್ಯದ ಸಂಕೇತವಾಗಿ ಹೊಮ್ಮಿರುವ ಒಂದು ಭಾವುಕ ಕವಿತೆ. ಬಿದಲೋಟಿ ಅವರ ಈ ಕವಿತೆಯ ‘ನನ್ನೆದೆಯ ಮಣ್ಣಿನ ಘಮಲು’ ಕೊಡುವ ಭಾವ ಪಿ.ಲಂಕೇಶರ ‘ಅವ್ವ’ ಕವಿತೆಯ ‘ನನ್ನವ್ವ ಫಲವತ್ತಾದ..’ ಎಂಬಂಥ ಸಾಲಿನ ಭಾವದ ಭೂಮಿ ತೂಕದ ಸಾಲನ್ನು ಹಂಚಿಕೊಂಡು ಹುಟ್ಟಿಬಂದಂತಿದೆ. ಈ ಕವಿತೆಯಲ್ಲಿ ‘ತತ್ವ ಪದಗಳ ಮೇಲೆ ಬದುಕಿನ ಕಾವ್ಯ ಬರೆದವನು ನನ್ನಪ್ಪ’ ಮತ್ತು ‘ಏಕತಾರಿ ತಂತಿಯ ಮೇಲೆ/ಅಪ್ಪನಿಟ್ಟ ಬೆರಳಿಗೆ / ನನ್ನ ಸ್ಪರ್ಶದ ಮೊದಲ ಪುಳಕ’ ವು ಓದುಗರೆದೆಗೆ ತಾಕಿ ತಾಕಿ ಏಕತಾರಿ ನುಡಿಸುತ್ತವೆ.

ಹಾಗೆ “ಹಚ್ಚುವ ದೀಪವು/ಕುಡಿ ಸಾಗಲೆಂದು/ಕರುಳನೇ ಕಿತ್ತು/ಬತ್ತಿ ಮಾಡಿ ಉರಿಸಲೇ?/ಕತ್ತಲು ತೊಳೆದು ಬೆಳಕು ಮೂಡುವುದಾದರೆ/ ಹಾಗೆ ಮಾಡಲೂ ಸಿದ್ದ!” ಎಂದಿರುವ ಕವಿಯ ಆಂತರ್ಯದ ಧನ್ಯತೆ “ಬೆಳಕಿನ ಸಂತಾನ” ದ ಬೆಳಗು ಕ್ರಿಯೆಯು ಶರಣ ಹರಳಯ್ಯ ದಂಪತಿಗಳು ತೊಡೆಯ ಚರ್ಮವನೆ ಅಳಿದು ಮೆಟ್ಟು ಮಾಡಿ ಅಣ್ಣನಿಗೆ ಸಮರ್ಪಿಸಿ “ಕರುಳನೇ ಕಿತ್ತು/ ಬತ್ತಿ ಮಾಡಿ ಉರಿಸಲೇ” ಎಂಬ ಉದಾತ್ತ ಸಮರ್ಪಣಾಭಾವವನು ದರ್ಶಿಸುವ ತಾತ್ವಿಕವಾದ ಉತ್ಕೃಷ್ಟತೆಯ ಮಹತ್ವಪೂರ್ಣ ಕವಿತೆ.

ದಲಿತ ಚಳುವಳಿಯು ರೂಪುಗೊಂಡ ಕಾಲಘಟ್ಟದಲ್ಲಿ ‘ಇಕ್ಕ‌ರ‌್ಲ ಒದಿರ‌್ಲ’ ಸಾಹಿತ್ಯದ ಪರಿಭಾಷೆ ಅವತ್ತಿಗದು ನಾಜೂಕಾಗೇ ಕೆಲಸ ಮಾಡಿದೆ. ಅದೇ ತರಹದ ಎಮೊಷನಲ್ ಕವಿತೆಗಳ ಆ ಭಾಷಾಪ್ರಯೋಗವನ್ನೆ ಬಳಸಿ ಬಳಸಿ ‘ಪದವಿಯ ಏರುಗತಿ’ಯಲ್ಲಿ ಬ್ರಾಹ್ಮಣ್ಯದ ಆಳಕ್ಕಿಳಿದು ಆ ಬ್ಯಾಲೆನ್ಸ್ ನಲ್ಲಿ ಆಚೀಚಿನ ಟೀಕಾಕಾರನ್ನು ತಮ್ಮ ವರಸೆಯಲ್ಲಿ ಸಂಭಾಳಿಸಿರುವ ಉದಾಹರಣೆ ಇದೆ. ಹಾಗೆ ಸಾಹಿತ್ಯದ ಅಸ್ತಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳುವ ಭ್ರಾಮಕ ಜಗತ್ತು ಸೃಷ್ಟಿಸಿ ದಲಿತ ಸಾಹಿತ್ಯದ ಪರಿಭಾಷೆಯನ್ನೆ ಕ್ಲೀಷೆಯ ಮಟ್ಟಕ್ಕೆ ಇಳಿಸಿ ಇವತ್ತಿಗೂ ಅದೇ ದಲಿತ ಸಾಹಿತ್ಯದ ಶ್ರೇಷ್ಟ ಭಾಷೆ; ಅದೇ ದಲಿತ ಧ್ವನಿಗಳ ಜೀವಂತ ಬೇರುಭಾಷೆ; ಆ ಭಾಷೆಯ ಸಾಹಿತ್ಯ ವರ್ತಮಾನ ಮತ್ತು ಮುಂದಿನ ತಲೆಮಾರಿಗೂ ಆವರಿಸಬೇಕಾದ ಬಲವಂತಿಕೆಯ ಅನಿವಾರ್ಯತೆಯನ್ನು ಸೃಷ್ಟಿಸಲು ಹೊರಟಿರುವ ಗುಮಾನಿ ಇದೆ. ಅದಕ್ಕೆ ಅವರ ಶಿಷ್ಯ ಪರಂಪರೆ ಅವರ ಸಾಹಿತ್ಯವನ್ನು ಹೊಗಳುವ ಕಾವಲು ಭಟರಂತೆ ನಿಂತಿರುವ ಹೊತ್ತಲ್ಲಿ ಬಿದಲೋಟಿ ತರಹದವರು ದಲಿತ ಕಾವ್ಯದ ಪರಿಭಾಷೆಗೆ ಹೊಸ ಭಾಷ್ಯವನ್ನೆ ಬರೆಯಲೊರಟು ಭಿನ್ನ ಕವಿತೆಗಳಿಗೆ ತಳಹದಿ ಹಾಕಿಕೊಟ್ಟಿರುವಂತಿದೆ ಇಲ್ಲಿನ “ಕರುಳು ನುಡಿದ ಮೌನ ಮಾತು” “ಇರುಳ ಬೆನ್ನಿಗೆ ಬೆಳಕಿನ ಕನಸು” “ನೆಲದ ಮೇಲಾಡಿದ ಭಾವ” “ಹೆಸರಿಲ್ಲದ ಗುರುತಿನ ಚೀಟಿ” “ವಜನ್ನಿಲ್ಲದ ಜಗುಲಿ ದಿಂಡು” ಆನುಷಂಗಿಕವಾಗಿ ಸಾಕ್ಷ್ಯ ಒದಗಿಸುತ್ತವೆ. ಈ ಕವಿತೆಗಳು ಕನ್ನಡ ಸಾಹಿತ್ಯವನ್ನು ಆಳುವ ಮತ್ತು ಚರ್ಚಿಸಲ್ಪಡುವ ಬಹುಮುಖ್ಯ ಕವಿತೆಗಳು.

ಈ ಕವಿತೆಗಳಲ್ಲೆಲ್ಲ ಯಾವುದೇ ರೋಷಾವೇಷವಿಲ್ಲದೆ, ಪೂರ್ವಾಗ್ರಹವಿಲ್ಲದೆ, ಜಡತ್ವವಿಲ್ಲದೆ, ‘ಇಕ್ಕುರ‌್ಲ ಒದಿರ‌್ಲ’ ತರಹದ ಕ್ಲೀಷಾರೂಪದ ಎಮೋಷನಲ್ ಪದಪ್ರಯೋಗವಿಲ್ಲದೆ ತಣ್ಣಗೆ ದಲಿತ ಲೋಕದ ತವಕ ತಲ್ಲಣಗಳನ್ನು ಪ್ರಸ್ತುತಪಡಿಸುತ್ತವೆ. ಇಲ್ಲಿನ “ವಜನ್ನಿಲ್ಲದ ಜಗುಲಿ ದಿಂಡು” ಗಾಂಧಿಯ ರೂಪದಲ್ಲಿರುವ ಅಜ್ಜನ ಚಿತ್ರವಿದೆ. ಗಾಂಧಿ ಕನಸಿನ ಭಾರತವೀಗ ಈ ಅಜ್ಜನ ಕಣ್ಣುಗಳಲ್ಲಿ ಒಡಮೂಡಿ ನಿಂತತ್ತಿದೆ. ಹಾಗೆ ಅಜ್ಜನ ಜೀವಯಾನದಲ್ಲಿ ಕವಿಯ ಸಾಮಾಜಿಕ ಪರಿಕಲ್ಪನಾ ಗ್ರಹಿಕೆಯ ಪ್ರಾಮಾಣಿಕತೆಯಲ್ಲಿ ಗಾಂಧಿಯನ್ನು ಜಗುಲಿಯ ಅಂಚಿಗಿಟ್ಟು (ಅಸ್ಪೃಶ್ಯ ರೂಪ) ನೋಡಿರುವ ಸ್ಪಷ್ಟತೆಯ ರೂಹಿದೆ. ಆದರೆ ಗಾಂಧಿ ಹೀಗೆ ಟೀಕಾಕಾರರ ಟೀಕೆಗೆ ಒಡ್ಡಿಕೊಂಡೂ ಕಠಿಣತೆಯಿಂದ ಇನ್ನಷ್ಟು ಅರ್ಥವಾಗಬಲ್ಲ ಪರಿಪೂರ್ಣ ವ್ಯಕ್ತಿತ್ವ ಎಂಬುದನ್ನು ಇತರ ಗಾಂಧಿಯೇತರ ಸಿದ್ದಾಂತಿಗಳು ತಮ್ಮ ಭಾವುಕತೆಯಿಂದ ಬಿಡಿಸಿಕೊಂಡು ವೈಚಾರಿಕ ಸಾಣೆಗೆ ಹಿಡಿದು ನೋಡುವ ಒಳಗಣ್ಣು ಬೇಕಿದೆ.

ಇಲ್ಲಿ “ಕದವಿಲ್ಲದ ಕವಿ ಮನೆ” ಎಂಬುದು ಎಲ್ಲ ಇಸಂ, ಅಹಂ, ಸುಖ ದುಃಖ, ಆಸೆ, ಆಕಾಂಕ್ಷೆ, ಭೋಗ, ವೈಭೋಗ, ಅನುಭೋಗಗಳ ವರ್ಜ್ಯ. ವೃರ್ಜ್ಯ ಎಂಬುದು ತ್ಯಜಿಸುವುದು: ಅದು ನಿರಾಕರಣೆ; ನಿರಾಕರಣೆ ಸಕಲವನ್ನು ತಕ್ಕಡಿಯಲ್ಲಿಟ್ಟು ತೂಗುವುದು. ಅಲ್ಲೊಂದು ನಿರ್ಲಿಪ್ತತೆ ಇದೆ. ಈ ನಿರ್ಲಿಪ್ತವಾದ ಭಾವಕೋಶದಲ್ಲಿ ಶೂನ್ಯವಿದೆ. ಈ ಶೂನ್ಯವೇ ಸತ್ಯ. ಈ ಸತ್ಯದ ಶೋಧವೇ ಕವಿ ಮನೆ. ಈ ಕವಿಯೊಳಗೆ ಎಲ್ಲವನ್ನು ತೆರೆದ ಮನಸ್ಸಿನಿಂದ ನೋಡುವ ಗುಣವಿದೆ. ಇದು ಅನಿಕೇತನದ ಅನಂತತೆ. ಈ ಅನಂತಭಾವದ “ಮನೆಯ ಒಳಗೆ/ಕವಿಯ ಮನಸಿದೆ/ಬುಡ್ಡಿಬೆಳಕಲ್ಲಿ ಕವಿತೆ ಬರೆಯುತ್ತಿದೆ/ಕವಿಮಾತ್ರ ಕಾಣಲಿಲ್ಲ” ಎಂಬ ಅಮೋಘ ದರ್ಶನವಿದೆ. ಈ ಅಮೋಘ ದರ್ಶನದಲ್ಲಿ “ಕವಿಯ ಮನೆಗೆ/ಕದವಿಲ್ಲ/ಹೊಸ್ತಿಲಿಲ್ಲ” ಎಂಬುದೇ ಕವಿತೆಯ ಧೀಶಕ್ತಿ. ಈ ಧೀಶಕ್ತಿ “ಗೂಡಿಲ್ಲದ ಗುಬ್ಬಚ್ಚಿ ಸದ್ದುಗಳ ನಡುವೆ/ಗೋಡೆಗಂಟಿದ/ನನ್ನದೇ ಕವಿತೆ” ಯಲ್ಲಿ ಎಲ್ಲವನ್ನು ಸಮತೂಕದಲ್ಲಿ ತೂಗುವ ಸೃಷ್ಟಿ ಲಯಗಳ ಗ್ರಹಿಕೆಯ ಚಿತ್ರವಿದೆ.

ಇದೆಲ್ಲದರ ಜೊತೆಗೆ‌ ಹೆಣ್ಣಿನ ಬಗ್ಗೆ ಬರೆಯದ ಕವಿಯಿಲ್ಲ. ಅವಳ ಕುರಿತು ಏನೆಲ್ಲ ಬರೆದ ಎನ್ನುವುದಕ್ಕಿಂತ ಅವಳನ್ನು ಹೇಗೆಲ್ಲ ಕಲ್ಪಿಸಿಕೊಂಡ, ವರ್ಣಿಸಿದ, ಆಪ್ತವಾಗಿಸಿಕೊಂಡ ಎನ್ನುವುದೇ ಮುಖ್ಯ. ಜಿ.ಎಸ್.ಶಿವರುದ್ರಪ್ಪ, ಕೆ.ಎಸ್.ನರಸಿಂಹಸ್ವಾಮಿ ತರಹದವರ ಕವಿತೆಗಳ ಅಂತರಂಗವು ಈ ನೆಲೆಯದ್ದು. ಹಾಗಾಗಿಯೇ ತಮ್ಮ ಬಾಳ ಸಂಗಾತಿಯ ಜೊತೆಗಿನ ಬಾಳ ಬದುಕಿನ ರಸವಿಷಯ ಮತ್ತು ಸಂಸಾರದ ಪಡಿಪಾಟಲಿನಲ್ಲಿ ಏಗುವ ಹೆಣ್ಣಿನ ಬಾಳುವಿಕೆ, ಅವಳ ಔದಾರ್ಯ, ಪ್ರೇಮ, ತಾಯ್ತ‌ನವನ್ನು ವಿಭಿನ್ನವಾಗಿ ಕಟ್ಟಿಕೊಟ್ಟಿರುವ ಹಾಗೆ ಇಲ್ಲಿ ಬಿದಲೋಟಿ ರಂಗನಾಥ್ “ಮಮತೆಯ ಬೆಳಕು ಬಿತ್ತಿ” ಯಲ್ಲಿ ‘ಅದೊಂದು ಜೀವ ಧ್ವನಿ/ಹುಣ್ಣಿಮೆಯ ಬೆಳಕು/ಎದೆಯೊಳಗಿನ ಸಮತೆಯ ಉಸಿರು/ ಅವಳ ಹೆಜ್ಜೆಯ ಸಪ್ಪಳವೇ/ಮಮತೆಯ ಕರೆಯೋಲೆ/ಉಸಿರೊಂದಿಗೆ ಬೆರೆತ ಜೀವ/ಅದೊಂದು ನಿತ್ಯ ಬೆಳಗು’ ಎಂಬಂತಹ ಸಾಲುಗಳು ಹೆಣ್ಣಿನ ತ್ಯಾಗ, ಸಹನೆ, ಕ್ಷಮತೆಯ ಸಂಕೇತದಂತ ಬಹುತ್ವದ ನೆಲೆಯಲ್ಲಿ ಅವಳನ್ನು ಔನ್ನತ್ಯಕ್ಕೇರಿಸಿ ನೋಡಿರುವಲ್ಲಿ ಪ್ರಸ್ತುತ ತಲೆಮಾರಿನ ಸಾಹಿತ್ಯದ ಕವಿಭಾಷೆಯಲ್ಲಿ ಹೆಣ್ಣಿನ ಹೆಜ್ಜೆ ಗುರುತಿನ ಮಹತ್ವವನ್ನು ‘ಮಮತೆಯ ಬೆಳಕು ಬಿತ್ತಿ’ ಒತ್ತಿ ಒತ್ತಿ ಹೇಳಿದೆ.

ಇವತ್ತಿನ ವಿಪತ್ತು ಬ್ರಾಹ್ಮಣ್ಯ! ಅದು ಹೇಗೆಲ್ಲ ಆವರಿಸಿದೆ ಆವರಿಸುತ್ತಿದೆ ಎಂದರೆ ಜಾತ್ಯಾತೀತ ಸೋಗಲಾಡಿ ಮನಸ್ಸುಗಳ ರೂಪದಲ್ಲಿ! ಅದು ಈಚೀಚೆಗೆ ಸಾಹಿತ್ಯ ಮತ್ತು ಪತ್ರಿಕೋದ್ಯಮ ವಲಯಕ್ಕು ಚಾಚಿದೆ. ಇದಕ್ಕೆ ಕಾರಣ ಸ್ಪಷ್ಟತೆ ಇಲ್ಲದಿರುವುದು. ವಿಚಾರ ಚಿಂತನದ ‘ಬರ’ ಆವರಿಸಿರುವುದು! ಒಂದು ಕಾಲಕ್ಕೆ ಪಿ.ಲಂಕೇಶ್ ಕೊಡುತ್ತಿದ್ದ ಚಾಟಿಗೆ ಇಂಥವು ತರಗೆಲೆಗಳಂತೆ ಉದುರಿ ಹೋಗುತ್ತಿದ್ದವು. ಪ್ರಸ್ತುತ ಅವರ ಕರುಳ ಕುಡಿಯೊಂದು ಬ್ರಾಹ್ಮಣ್ಯವನ್ನೇ ಹೊದ್ದು ಮಲಗಿ ಬಿಟ್ಟಿದೆ. ತಮಿಳಿನ ಪೆರುಮಾಳ್ ಮುರುಗನ್ ತರಹದವರು ಈ ಬ್ರಾಹ್ಮಣ್ಯದ ಹೊಡೆತಕ್ಕೆ ನಲುಗಿದ ಚಿತ್ರಣವಿದೆ. ತೆಲುಗಿನ ವರವರ ರಾವ್ ಜೈಲುಗಳ ಕಂಬಿಗಳನ್ನೆ ಎಣಿಸುತ್ತಿದ್ದಾರೆ. ಗದ್ದರ್ ಮೇಲೆ ಕಣ್ಣಿದೆ. ಮರಾಠಿಯ ನರೇಂದ್ರ ದಾಬೋಲ್ಕರ್ ಚಿತ್ರವಿದೆ. ಎಂ.ಎಂ. ಕಲ್ಬುರ್ಗಿ ಅವರ ಮೇಲೆ ಸಿಡಿಸಿದ ರಿವಾಲ್ವಾರ್ ಗುಂಡುಗಳ ಸದ್ದು ಈಗಲೂ ಕೇಳುತ್ತಿದೆ. ಇಷ್ಟು ಕಠೋರತೆಯಲ್ಲು ಬ್ರಾಹ್ಮಣ್ಯವನ್ನು ಮೆಟ್ಟುವ ಅದನ್ನು ವಿರೋಧಿಸಿ ಧಿಕ್ಕರಿಸುವ ಮನಸುಗಳ ಕಾವು ನಿಂತಿಲ್ಲ. ಈ ವಿವರದ ಹಿಂದೆ “ವೈಚಾರಿಕತೆಯ ಕಗ್ಗೊಲೆ” ಇದೆ. ಈ ಕವಿತೆಯಲ್ಲಿ ಬ್ರಾಹ್ಮಣ್ಯದ ರಿವಾಲ್ವಾರ್ ಗುಂಡಿನ ಹೊಡೆತಕ್ಕೆ ಬಲಿಯಾದ ಗೌರಿ ಲಂಕೇಶ್ ಎಂಬ ಮನುಷ್ಯತ್ವದ ಪ್ರತಿಬಿಂಬದಂತಿದ್ದ ದಿಟ್ಟ ಹೋರಾಟಗಾರ್ತಿಯು ವೈಚಾರಿಕ ಲೋಕದಲ್ಲಿ ಮೂಡಿಸಿದ ಸಂಚಲನದ ದನಿ ಇದೆ. ಆ ದನಿ ‘ನೀನು ಬಿತ್ತಿದ/ಅರಿವಿನ ಬೀಜಗಳು/ಮರಗಳಾಗಿ ಚಾಚಿವೆ ರೆಂಬೆ ಕೊಂಬೆಗಳು/ ಬಾನೆತ್ತರಕೆ’ ಎಂಬುದರಲ್ಲಿದೆ. ಹಾಗಾಗಿಯೆ ಕವಿ ಇಲ್ಲಿ ಗೌರಿಯ ಸಾವನ್ನು ಅರಗಿಸಿಕೊಳಲಾರದೆ ‘ನಿನ್ನದು ಸಾವಲ್ಲ/ನಮ್ಮಂತವರ ಮರು ಹುಟ್ಟು’ ಎಂಬ ಇರುವಿಕೆಯ ಸಂಕೇತವನ್ನು ಪ್ರತಿಭಟನಾತ್ಮಕವಾಗಿ ಬಳಸುತ್ತಾರೆ.

ಈ “ವೈಚಾರಿಕತೆಯ ಕಗ್ಗೊಲೆ” ಒಂದು ತಲೆಮಾರಿನ ಬಳುವಳಿಯಲ್ಲ ಅದು ಬಹು ತಲೆಮಾರಿನ ಬಳುವಳಿ. ಗಾಂಧಿ ಎದೆಗೆ ಹೊಕ್ಕ ಬಂದೂಕಿನ ಗುಂಡಿನ ಸದ್ದಿನದು ಬಹು ದೊಡ್ಡ ‘ವೈಚಾರಿಕ ಕಗ್ಗೊಲೆ’. ನಾವು ಕಂಡಂತೆ ಗಾಂಧಿ ಅಂಬೇಡ್ಕರ್ ಈ ನೆಲದ ಬಹು ದೊಡ್ಡ ವೈಚಾರಿಕ ಚಿಂತಕ ಮಹಾಶಯರು. ಕವಿ ಬಿದಲೋಟಿ ರಂಗನಾಥ್, ಭಾರತ ಕಟ್ಟುವಿಕೆಯ ನಡೆಯಲ್ಲಿ ಜಾತ್ಯಾತೀತ ಮತ್ತು ಮನುಕುಲದ ಜೀವಪರವಾಗಿ ಆಲೋಚಿಸಿದ ಗಾಂಧಿ ಅಂಬೇಡ್ಕರ್ ಅವರ ಮಹತ್ವವನ್ನು ಬಹುತ್ವದ ನೆಲೆಯಲ್ಲಿ ಗ್ರಹಿಸುವ ಕ್ರಮವೇ ಬೇರೆ! ಅದು “ನಿನ್ನ ಹೆಗಲ ಮೇಲೆ ಕೂತ ಹಕ್ಕಿ” ಯದ್ದಿರಬಹುದು ಅಥವಾ “ಎಡವಿ ಬಿದ್ದ ಚರಕ” ದ್ದಿರಬಹುದು. ಇಲ್ಲೆಲ್ಲ ಅವುಗಳ ಪ್ರತಿಧ್ವನಿಗಳು ಧ್ವನಿಸುತ್ತ ವಿಸ್ತೃತವಾಗಿ ಚಿಂತಿಸುತ್ತವೆ. ಈ ವಿಸ್ತೃತ ಕ್ರಿಯೆ ಗಾಂಧಿ ಅಂಬೇಡ್ಕರ್ ವಿಚಾರಗಳನ್ನು ಸಮಾನ ಚಿಂತನೆಯಿಂದ ಹೊರಗಿಟ್ಟು ವ್ಯತ್ಯಾಸಾತ್ಮಕವಾಗಿ ನೋಡಲಾಗಿದೆ. ಈ ಎರಡೂ ಕವಿತೆಗಳಲ್ಲಿ ಧ್ವನಿಸುವ ಈ ಕ್ರಿಯೆ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಗಾಂಧಿ ಅಂಬೇಡ್ಕರ್ ಭಾಗವಹಿಸುವಿಕೆ ಅದೆಷ್ಟು ಪರಿಣಾಮಕಾರಿ ಎಂಬುದರತ್ತಲೂ ಮುಖ ಮಾಡುವಲ್ಲಿ ಕವಿತೆಗಳ ಸಾಲುಗಳು ಎದೆಗೆ ನಾಟುತ್ತವೆ. ಅಂಬೇಡ್ಕರ್ ಗಾಂಧಿಗೂ ಹಾಗು ಗಾಂಧಿ ಅಂಬೇಡ್ಕರ್ ಗೂ – ಒಬ್ಬರಿಗೊಬ್ಬರು ಪೂರಕವಾಗಿ ವೈಚಾರಿಕ ಸಮತೆ ಬಗೆಗಿನ ವಿಚಾರದಲ್ಲಿ ಪ್ರಶ್ನೆಗಳಿವೆ. ಅರ್ಥಾತ್ ಈ ಈರ್ವರೂ ವಿಮುಖರಾಗದೆ ಮುಖಾಮುಖಿಯಾಗಿ ಹೆಜ್ಜೆ ಮೇಲೆ ಹೆಜ್ಹೆ ಇಟ್ಟು ನಡೆದಿದ್ದರೆ ಭಾರತದ ಚಿತ್ರಣವೇ ಬದಲಾಗುತ್ತಿತ್ತು ಎನ್ನುವ ಕವಿಯ ಬಹುದೊಡ್ಡ ಅನುಮಾನವೂ ಚಿತ್ರಿತವಾಗಿದೆ. ಆದರೆ ಇಲ್ಲಿ ಕವಿಯು ವೈಚಾರಿಕವಾದ ವ್ಯಕ್ತತೆಯನ್ನು ಸೂಕ್ಷ್ಮತೆಯ ಸಾಣೆಗೆ ಕೊಟ್ಟಿದ್ದರೆ ಸತ್ಯದ ಬೆಳಕು ಕಾಣುವ ಸೂಚನೆ ಇತ್ತು. ಆ ಸತ್ಯದ ಬೆಳಕು ಚರಕವಿಲ್ಲಿ ತಾನಾಗಿ ಎಡವದೆ ಎಡವಿಸಲಾಗಿದೆ. ಹಾಗೆ ಅದು ಎಡವುವಂತೆ ಕೋಮುವಾದಿ ಮನಸ್ಥಿತಿಗಳು ಷಡ್ಯಂತ್ರ ಹೂಡಿವೆ ಹೂಡುತ್ತಿವೆ ಮತ್ತು ಬಹುತ್ವ ನೆಲೆಯಲ್ಲಿ ಬ್ರಾಹ್ಮಣೀಕರಣಗೊಂಡ ಮನಸ್ಸುಗಳು ಗಾಂಧಿ ಅಂಬೇಡ್ಕರ್ ನಡುವೆ ಕಂದಕ ಸೃಷ್ಟಿಸಿ ದಲಿತ ಶೂದ್ರಾತಿಶೂದ್ರ ಚಿಂತಕರನ್ನು ದಿಕ್ಕು ತಪ್ಪಿಸಿ ಬಹುಜನರನ್ನೆ ವಿಭಾಗಿಸಿದೆ ಎಂಬುದೂ ಇಲ್ಲಿ ಅತಿ ಮುಖ್ಯ ಅನಿಸಿದ್ದರೆ ಈ ಕಾವ್ಯಗಳ ‘ಮಟ್ಟು’ ಮತ್ತಷ್ಟು ತೀಕ್ಷ್ಣ ಮಟ್ಟದಲ್ಲಿ ಧ್ವನಿಸುತ್ತಿತ್ತು.

ಗಾಂಧಿ ಭಾರತೀಯರನ್ನು ಬ್ರಿಟಿಷ್ ಶೃಂಖಲೆಯಿಂದ ಕಳಚಿ ವಿಮೋಚನೆಗೊಳಿಸಿ ಸ್ವತಂತ್ರ ಅಸ್ತಿತ್ವ ದಕ್ಕಿಸಿಕೊಡುವ ಹಂಬಲಿಕೆಯದಾದರೆ, ಭಾರತೀಯರೊಳಗಿನ ಬ್ರಾಹ್ಮಣ್ಯದ ಬೇರುಗಳ ಶೃಂಖಲೆಗಳಿಂದ ದಲಿತ ಶೂದ್ರಾತಿ ಶೂದ್ರ ಶೋಷಿತ ಮನಸ್ಸುಗಳನ್ನು ಕಳಚಿ ವಿಮೋಚನೆಗೊಳಿಸುವ ಹಂಬಲಿಕೆಯಾದಾಗಿತ್ತು. ಆದರೆ ಇವೆರಡರ ದರ್ಶಿಸುವಿಕೆಯನ್ನು ಬಿದಲೋಟಿ ತಮ್ಮ ದಲಿತ ಕಾವ್ಯ ಕೃಷಿಯ ನೆಲಮೂಲದ ಗ್ರಹಿಕೆಯಲ್ಲಿ ಗಾಂಧಿ ಚಿಂತನೆಯನ್ನು ಒಂದು ತಕ್ಕಡಿಯಲ್ಲು ಅಂಬೇಡ್ಕರ್ ಚಿಂತನೆಗಳನ್ನು ಇನ್ನೊಂದು ತಕ್ಕಡಿಯಲ್ಲಿಟ್ಟು ತೂಗಿ ನೋಡಿರುವಂತಿದೆ. ಇಲ್ಲಿನ ಕಾವ್ಯದ ಸಾಲುಗಳಲ್ಲಿ ಅಂಬೇಡ್ಕರ್ ಚಿಂತನೆಗಳು ಗಾಂಧಿ ಚಿಂತನೆಗಳಿಗಿಂತ ಶ್ರೇಷ್ಟವೆಂಬ ‘ಶ್ರೇಷ್ಟತೆಯ ವ್ಯಸನ’ದ ಹೆಚ್ಚುಗಾರಿಕೆಯಲ್ಲಿ ತೂಗಿರುವುದು ನ್ಯಾಯೋಚಿವೇ? ಎಂಬುದು ಕಾವ್ಯದ ಓದಿನ ಗ್ರಹಿಕೆಯ ಮಟ್ಟದಲ್ಲಿ ಇನ್ನಷ್ಟು ವಿಶ್ಲೇಷಿಸಿಸಬೇಕಾಗಿತ್ತೇನೋ ಅನಿಸುತ್ತದೆ.

ಇದು ಹಾಗೇ ಮುಂದುವರಿದು “ಭೀಮನೆಂಬ ಅಂತರಂಗದ ಬೆಳಕು” ಪರಿಪೂರ್ಣವಾಗಿ ತೆರೆದಿಡುತ್ತದೆ. ಇಲ್ಲಿ ಅಂಬೇಡ್ಕರ್ ‘ಹೆಜ್ಜೆ ಹಾಕಿದೆ ಕಣ್ಣಗೂಡಲ್ಲಿ/ಭರವಸೆಯ ಹಕ್ಕಿಗಳ ಸಾಕಿಕೊಂಡು/ಗುಟುಕು ನೀರಿಗೂ ಹಂಬಲಿಸಿ/ಗುರಿಮುಟ್ಟಿದ ಛಲಗಾರ ನೀನು’ ಹಾಗೆ ‘ಸೋತ ರಟ್ಟೆಗಳು/ ಸೋಲುತ್ತಲೇ ಇವೆ/ಮತ್ತೆ ಬೇಕೇನೋ/ ನಿನ್ನಂತರಂಗದ ಬೆಳಕು/ನಡೆಯುವ ಕತ್ತಲೆಯ ದಾರಿಗೆ’ ಎಂದು ಕವಿಯನ್ನು ಭಾವುಕವಾಗಿ ಅಪ್ಪಿಕೊಳ್ಳುವಷ್ಟು “ಎಡವಿ ಬಿದ್ದ ಚರಕ” ದಲ್ಲಿ ‘ಬೊಚ್ಚು ಬಾಯಿ ಹೊತ್ತು/ ಬಳಸದ ನ್ಯಾಯದ ಚರ್ಮವ/ಹೊದ್ದು/ಶಾಂತಿ ಮಂತ್ರದ ದಾರಿಯ ಮೇಲೆ/ ಮಚ್ಚು ಕೊಡಲಿಗಳು ಮಾತಾಡಿ/ ಮಡುಗಟ್ಟಿದ ದುಃಖದ ಸಂತೆಯಲಿ/ ತೊಟ್ಟ ಬಟ್ಟೆಯ ನೇಯ್ದ ಚರಕವೇ ಎಡವಿ ಬಿದ್ದಿದೆ’ ಎಂದು ಗಾಂಧಿಯ ಹೋರಾಟದ ಶಾಂತಿ ಅಸ್ತ್ರವನ್ನೆ ಲೇವಡಿ ಮಾಡಿ ಅವರ ಚಿಂತನೆಗಳನ್ನೆ ದಲಿತ ವಿರೋಧಿಯ ನೆಲೆಯಲ್ಲಿ ‘ಅಸ್ಪೃಶ್ಯತೆ’ ಲೇಪ ಹಚ್ಚಿರುವುದನ್ನು ಕವಿಯ ಕಾವ್ಯದ ಓದಿನ ತರ್ಕದಲ್ಲಿ ನ್ಯಾಯದ ತಕರಾರಿನ ವಿಮರ್ಶೆಯ ನಿಕಶಕ್ಕೆ ಒಳಪಡಿಸಬೇಕಿದೆ.

“ತೋರು ಬೆರಳ ಮೇಲೆ ಕೂತ ಗುಬ್ಬಚ್ಚಿ” ಇದೊಂದು ಬಿದಲೋಟಿ ಅವರ ಗುರು, ಎನ್.ಎಲ್. ಮುಕುಂದರಾಜ್ ಕುರಿತಾದ ಅಭಿನಂದನಾ ಕವಿತೆ. ಸಾಹಿತ್ಯದ ಮೂಲ ಸೆಲೆಯಲ್ಲಿ ನಿರತರಾದ ಶಿಷ್ಯ ಪರಂಪರೆ ನಾಲ್ಕು ಗೋಡೆಯೊಳಗಿನ ಪಠ್ಯಾಧ್ಯಯನದಾಚೆ ಸಂಬಂಧ ಬೆಸೆದ ಸಾಹಿತ್ಯ ಗುರುವನ್ನು ಕಾವ್ಯದ ನೆನಕೆಯಲ್ಲಿ ಸ್ಮರಿಸುವುದೆ ಗೌರವ ಸೂಚಕ. ಆ ತರಹದ ಪರಂಪರೆ ಎಲ್ಲ ಕಾಲಕ್ಕು ಇರುವ ಜೀವಂತಿಕೆ.

ಕವಿ ಜಿ.ಎಸ್.ಶಿವರುದ್ರಪ್ಪ ತಮ್ಮ “ತೃಪ್ತಿ” ಕವಿತೆಯಲ್ಲಿ ಗುರುವನ್ನು ನೆನೆವುದೇ ಎದೆ ತುಂಬಿ ಹಾಡಿನ ಲಯಭರಿತ ಭಾವಲಹರಿಯಲ್ಲಿ. ಅದು ಇವತ್ತಿಗೂ ಮನ ಮುಟ್ಟುವ ಭಾವದ ರಾಗಬದ್ಧ ಕವಿತೆ. ಬಿದಲೋಟಿ ಅವರ “ತೋರು ಬೆರಳ ಮೇಲೆ……” ‘ತೃಪ್ತಿ’ ಯ ಸ್ಪೂರ್ತಿಪೂರ್ಣ ರಾಗಬದ್ಧ ಲಹರಿಯ ಸಮ್ಮೋಹಕ ಗೀತ ಸಂಯೋಜನೆ ಇಲ್ಲದೆಯೂ ‘ಬದಲಾದ ಬೆಳಕಲಿ/ ಕತ್ತಲು ನುಸಳದಿರಲಿ/ ನಡೆಯುತ್ತಿರಿ ಸುಮ್ಮನೆ ಬಿಮ್ಮನೆ/ ನೂರರ ಬಾಗಿಲು ಕಾಯುತ್ತಿದೆ/ ನಿಮ್ಮ ಸ್ಪರ್ಶಕ್ಕಾಗಿ’ ಎನ್ನುವಲ್ಲಿ ಭೂತದ ನೆನನಕೆಯಲ್ಲಿ ವರ್ತಮಾನದಲ್ಲಿ ಹೊಸ ತಲೆಮಾರಿನ ಜೀವನ್ಮುಖಿಯಾದ ಸತ್ಯ ಮತ್ತು ನ್ಯಾಯದ ಸಾಕ್ಷಿ ಹೇಳಲಾದರು ಗುರುವಿನಲ್ಲಿ ಮೊರೆ ಇಡುವ ಭಾವುಕತೆ ಈ ಪ್ರಸ್ತುತಿಯಲ್ಲಿದೆ. ಹಾಗೆ ‘ನಿಮ್ಮ ಚಿತ್ತವೆಂಬ ಹಕ್ಕಿ/ ಕೊಕ್ಕುತ್ತಿರಲಿ ನೆಲದ ಮೇಲಿನ ಕಾಳೆಂಬ ಕಾವ್ಯ’ ವು ದೇವನೂರರ ‘ಮಣ್ಣಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ’ ದ ಸಾಕ್ಷೀಕರಣದಂತಿದೆ.

ಇವತ್ತು ಭಾಷೆಯ ವಿಚಾರ ತನ್ನ ತಾರ್ಕಿಕತೆಗೆ ನಿಲುಕದಷ್ಟು ಅಭಿಮಾನ ದುರಭಿಮಾನವನ್ನು ಪ್ರದರ್ಶಿಸುತ್ತಿದೆ. ಇದಕ್ಕೆ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಇಚ್ಚಾಸಕ್ತಿಯ ನಿಕೃಷ್ಟ ನಿಲುವುಗಳು. ಮಗುವಿಗೆ ತಾಯಿಭಾಷೆ ನೀಡುವಷ್ಟು ಬೇರೆ ಯಾವ ಭಾಷೆಯೂ ನೀಡಲಾರದು. ಅದರಲ್ಲು ಕೇಂದ್ರದ ಹಿಂದಿ ಹೇರುವಿಕೆಯ ನಡೆ ಆಕ್ಷೇಪಾರ್ಹ. ಇದು ಇವತ್ತಿನದಲ್ಲ. ಕುವೆಂಪು, ಬಿ.ಎಂ.ಶ್ರೀ, ಪುತಿನ, ಬೇಂದ್ರೆ, ಕೆ.ಎಸ್.ನ ತರಹದ ಕನ್ನಡದ ಮಹತ್ವ ಕವಿಗಳ ಕಾಲದಿಂದಲು ನಡೆಯುತ್ತಿರುವ ಸಂಗತಿ. ಇದನ್ನು ಆಗಾಗ್ಗೆ ತಮ್ಮ ಮಹತ್ವಪೂರ್ಣ ಕವಿತೆಗಳ ಮೂಲಕ ಕನ್ನಡಿಗರಿಗೆ ಭಾಷಾಜೀವ ತುಂಬಿ ಚಲನಶೀಲವಾಗಿಸಿದ್ದಾರೆ. ‘ಕನ್ನಡನುಡಿ, ನಮ್ಮ ಹೆಣ್ಣು,/ನಮ್ಮ ತೋಟದಿನಿಯ ಹಣ್ಣು,;/ಬಳಿಕ, ಬೇರೆ ಬೆಳೆದ ಹೆಣ್ಣು’ ಎಂದು ಬಿ.ಎಂ.ಶ್ರೀ ಅವರು “ಕಾಣಿಕೆ” ಯ ಆರಂಭದಲ್ಲಿ ವ್ಯಕ್ತವಾಗುವುದೇ ‘ಮೊದಲು ತಾಯಿ ಹಾಲ ಕುಡಿದು/ ಲಲ್ಲೆಯಿಂದ ತೊದಲ ನುಡಿದು’ ಕನ್ನಡಕ್ಕೆ ಮೊದಲ ಪ್ರಾಶಸ್ತ್ಯವನ್ನು ನಂತರ ಇತರ ಭಾಷೆಯನ್ನು ಪ್ರೀತಿಸುವ ಆಶಯದ ಭಾಷಾಭಿಮಾನದ ಸೂಕ್ಷ್ಮತೆಯಿದೆ. ಇದರ ವ್ಯಕ್ತ ಭಾವವು ಈ ತಲೆಮಾರಿನ ಸೂಕ್ಷ್ಮ ಸಂವೇದಶೀಲ ಕವಿ ಬಿದಲೋಟಿ ಅವರ “ಅಂತಃಕರಣದ ಮೊದಲ ಪಾಠ” ದಲ್ಲು ಜೀವ ಪಡೆದಿದೆ. ಇದು ಕೋಳಿಯೊಂದು ತಾನಿಟ್ಟ ಮೊಟ್ಟೆಗೆ ಕಾವುಕೊಟ್ಟು ಮೊಟ್ಟೆಯೊಳಗಿನ ಜೀವಗಳಿಗೆ ನೆಲದ ಪರಿಚಯ ಮಾಡಿಸಿ ಅದು ತಲೆತಲೆಮಾರಿಗೂ ತನ್ನ ಸಂತತಿ ಉಳಿಸಿಕೊಳ್ಳುವ ತವಕದಂತೆ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಅಂತಃಕರಣವನ್ನಿಲ್ಲಿ ಕಾವ್ಯದ ಮೂಲಕ ಸೃಜಿಸಿದ್ದಾರೆ.

ಇದರೊಂದಿಗೆ ಇಲ್ಲಿನ “ಮುಕ್ಕಳಿಸಿ ಉಗಿದ ಸುಳ್ಳನು ಸುಟ್ಟು”, “ನರಳುವ ಪದಗಳನ್ನು ಬೆನ್ನಟ್ಟಿ”, “ಖಾಲಿ ಉಳಿದ ಪುಟಗಳು”, “ಬಯಲನ್ನೇ ಕನ್ನಡಿಯಾಗಿಸು”, “ಅಂಗಳದ ಮೇಲೆ ಕೂತು”, ಕತ್ತಲೆಯ ಕಣ್ಣಿಗೂ ಮಣ್ಣಿನ ಧೂಳು”, ” ಮಾಸದ ನೆನಪು”, “ಜೋಪಡಿಯ ನಿಟ್ಟುಸಿರ ನಾದ” ಕವಿತೆಗಳು ದಲಿತ ಕೇರಿ, ಊರು, ಬೀದಿಯ ಪ್ರತಿ ಮನೆ, ಜೋಪಡಿಯ ಸೂರು, ಗೋಡೆ, ಜಗುಲಿ, ಹಜಾರ, ಮೋರಿ, ಅಂಗಳದೊಳಗೆ ಬದುಕು ಮಾಡಿ ಸವೆಸಿ ಮಡುಗಟ್ಟಿದ ಮಣ್ಣಿಗಂಟಿದ ರಕ್ತವು ಒಣಗಿ ಗೆರೆಗೆರೆಯಾದ ಕಪ್ಪು ಕಲೆಗಳ ವೈವಿಧ್ಯಮಯ ಜೀವನ ವಿಧಾನ ಮತ್ತು ಶಬ್ಧಕೋಶಗಳಾಚೆ ವಿವರಿಸಲಾಗದ ಬಿರಿದ ಹೂಗಳ ಕಮಟು ವಾಸನೆ ಇದೆ. ಈ ವಾಸನೆ ಬೆನ್ನಿಡಿದು ಕವಿತೆಗಳೊಳಗಿನ ಸಾಲುಗಳ ಊರು ಕೇರಿ ಬೀದಿಗುಂಟ ಸಾಗಿದರೆ – ಸುಳ್ಳಿನ ಮುಳ್ಳುಗಳಲಿ ನೋವು ಒಸರಿದೆ; ಗಬ್ಬು ನಾರುವ ಪಾಪದ ಗವುಲಿದೆ; ಕುಲದ ಕರುಳು ನರಳುವ ಪದಗಳನ್ನು ಬೆನ್ನಟ್ಟಿ ನೆಲದ ರಕ್ತದ ಮೇಲೆ ಕವಿತೆ ಬರೆದಿದೆ; ದಕ್ಲದೇವಿಯ ಪುನರವಲೋಕನದ ಆದಿ ಅಂತ್ಯಗಳ ಸಮುದಾಯದ ದಹನದ ಕಥೆಯಿದೆ; ಕತ್ತಲೆಯ ಕಣ್ಣಿಗೂ ಮಣ್ಣಿನ ಧೂಳು ಅಡರಿ ಮೆತ್ತಿದೆ; ತಮಟೆಯ ಹೊಟ್ಟೆಯ ಮೇಲೆ ಅಪ್ಪ ಬರೆದ ಹಾಡಿಗೆ ಸ್ವರ ತಪ್ಪಿದೆ; ಹಾಗೆ, ಏಕತಾರಿ ಮೀಟುವ ಅಪ್ಪನ ಬೆರಳು ಏಕಾಂತಕ್ಕೆ ಜಾರುವ ಧ್ಯಾನದ ಒಂದು ಪರಿ ಇದೆ; ಜೋಪಡಿಯಲಿ ಮಲಗಿದ ನೆನಪಿನಲೆ ಉರಿದ ಬುಡ್ಡಿಯ ಕಿಟ್ಟದ ಮಸಿಯ ಕಪ್ಪು ಕಪ್ಪಾದ ಗುರುತಿದೆ;

“ಬಣ್ಣ ಬೆವರ ಜೊತೆ ಕಲೆತು” ಕವಿತೆಯಲ್ಲಿ ದೇವರ ಅಸ್ತಿತ್ವದ ಶೋಧವಿದೆ. ಇಲ್ಲಿ ಬಣ್ಣವಿದೆ. ಕುಂಚ ಹಿಡಿದ ಕೈ ಬೆರಳಿದೆ. ಇದು ‘ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ’ ಗೆ ಪರ‌್ಯಾಯವಾದ ಆತ್ಮಶೋಧದ ಕುಂಚದ ಚಿತ್ತಾರವಿದೆ. ದೇವರ ಬಗ್ಗೆ ಒಂದು ಭ್ರಮೆ ಇದೆ. ಆ ಭ್ರಮೆಯನ್ನು ಒಡೆದು ನೋಡುವ ಭಿನ್ನ ರೂಹಿದೆ. ‘ದೇವರನ್ನು ನಂಬುವುದಿಲ್ಲ’ ಮತ್ತು ‘ದೇವರೇ ಇಲ್ಲ’ ಎಂಬುದರಲ್ಲಿ ವ್ಯತ್ಯಾಸವಿದೆ. ದೇವರನ್ನು ನಂಬುವುದಿಲ್ಲದರ ಒಳಗೆ ದೇವರ ಅಸ್ತಿತ್ವವಿದೆ! ದೇವರೇ ಇಲ್ಲ ಎಂಬುದರೊಳಗೆ ಇಲ್ಲದ ಬಗ್ಗೆ ಸ್ಪಷ್ಟತೆ ಇದೆ. ಈ ತಾಕಲಾಟದ ಆಳದಲ್ಲಿ ‘ಮನಸು ಮಕಾಡವಿಲ್ಲದ ಕುದುರೆ/ ಕನಸುಗಳೇ ಇಲ್ಲದ ಊರಲ್ಲಿ/ದೇವರಿದ್ದಾನೆಂದು ಯಾರೋ ಹೇಳಿದ್ದ ನೆನಪಾಗಿ/ ಮತ್ತೆ ತಿರುಗಿ ನಡೆದೆ..’ ಎಂದು ಸತ್ಯದ ಬೆಳಕಿನ ಕುಂಚ ಹಿಡಿದು ಶೋಧಿಸುವ ಕವಿ ‘ಬಿಡಿಸುತ್ತಲೇ ಹೋದೆ/ ನೂರಾರು ಗೆರೆಗಳು ಮೂಡುತ್ತಲೇ ಇದ್ದವು/ದೇವರ ಚಿತ್ರ ಮಾತ್ರ ಮೂಡಲೇ ಇಲ್ಲ’ ದ ತಾರ್ಕಿಕವಾದ ನಿಲುವಿನಲ್ಲಿ ಮತ್ತೆ ಕುಂಚದಲ್ಲಿ ಅದ್ದಿದ ಬಣ್ಣದ ಗೆರೆಗಳು ದೇವರ ಬದಲಿಗೆ ‘ಬಣ್ಣ ಬೆವರ ಜೊತೆ ಕಲೆತು/ ಬದುಕಿನ ಚಿತ್ರವಾಯಿತು’ ಎಂಬುದರಲ್ಲಿ ಸ್ಪಷ್ಟತೆಯ ವಾಸ್ತವಿಕತೆ ಇದೆ. ನಾಸ್ತಿಕವಾದ ಕಟು ಗೆರೆಯಿದೆ.

‘ನಾನೇ ಸ್ಖಲಿಸಿದ ಜ್ವಲ್ಲಿನ ನೂಲ ಬಟ್ಟೆಗಳ ಇಡಲು/
ದುಬಾರಿ ಪೆಟಾರಿ ಬೀರುಗಳ ಖರೀದಿಸಿದರು’ ಎನ್ನುವಲ್ಲಿ ಬೆತ್ತಲಾಗಿರುವ ಜಗತ್ತಿನ ಮಾನ ಮುಚ್ಚಿ ಮರ‌್ಯಾದಾ ಜೀವನಕ್ಕೆ ಅಡಿಪಾಯ ಹಾಕಿದ ರೇಷಿಮೆ ಹುಳುವಿನ ಕೊಡುಗೆಯ ಮಹತ್ವ ಸಾರುವ “ಶೂದ್ರ ರೇಷಿಮೆ ಹುಳು”ವಿನ ಕವಿತೆ ಬ್ರಾಹ್ಮಣ್ಯದ ಹಲವು ಮುಖಗಳನ್ನು ಪರಿಚಯಿಸುತ್ತದೆ. ಜಗತ್ತಿನ ಒಳಿತನದೆಲ್ಲ ದಲಿತ ಶೂದ್ರ ಪರಂಪರೆಯವೇ, ಆದರೆ ಅವನ್ನೆ ಮೆಟ್ಟಿ ಬದುಕು ಮಾಡುತ್ತಿರುವ ದಲಿತ ಶೂದ್ರೇತರ ಸಂತತಿಗಳ ಹಿಕಮತ್ತುಗಳ ಅನಾವರಣದ ಚಿತ್ರಣವನ್ನು ಸ್ಖಲಿಸಿದ ರೇಷ್ಮೆ ಹುಳುವಿನ ದಾರದಲ್ಲಿ ನೇಯ್ದ ಇತಿಹಾಸದ ಪುಟಗಳ ಅನಾವರಣವನ್ನಿಲ್ಲಿ ಬಹಳ ಅಚ್ಚುಕಟ್ಟಾಗಿ ಕಟ್ಟಿರುವ ಕವಿ ಬಿದಲೋಟಿ ಅವರ ಸೂಕ್ಷ್ಮಾತಿಸೂಕ್ಷ್ಮ ವಸ್ತುವಿಷಯಗಳಲ್ಲಿ ದಟ್ಟ ಜೀವಾನಾನುಭವಿದೆ.

“ಜಗದ ನೆತ್ತರು ಹೆಪ್ಪುಗಟ್ಟುತಿದೆ”, “ಮುಗಿಲ ಚುಕ್ಕಿಗಳಿಗೆ ತಾಳ ಹಾಕುತ”, “ಕೂತೆದ್ದ ಜೀವಗಳ ನಂಟು” ಗಳಲ್ಲಿ ತನ್ನ ಚೌಕಟ್ಟಿನಾಚೆ ಅಗ್ಗಿಷ್ಟಿಕೆಯನ್ನು ಮೀರಿದ ಸಮುದಾಯಗಳ ಪಿಸುಮಾತುಗಳಿವೆ. ಕಾಠಿಣ್ಯಭರಿತ ಸವಾಲುಗಳಿವೆ. ಈ ಕಾಠಿಣ್ಯದ ಸವಾಲುಗಳು ಈ ಕವಿತೆಗಳೊಳಗೆ ವಿವಿಧ ಸ್ವರೂಪದಲ್ಲಿ ಅಂತಃಶಕ್ತಿಯೊಂದು ಆವರಿಸಿದೆ. ಈ ಅಂತಃಶಕ್ತಿ ತನ್ನ ಅಸ್ಮಿತೆಯನ್ನು ಹಾಗೆ ಉಳಿಸಿಕೊಂಡು ಜೀವಪರವಾಗಿ ಧೇನಿಸುವ ಸೃಜನಶೀಲ ಗುಣಗಳಿಂದ ಕೂಡಿ ಬೇರೆಯದೇ ಆದ ಮನೋಭೂಮಿಕೆಯನ್ನು ಕಟ್ಟಿಕೊಡುತ್ತದೆ. ಇದು ಒಂದು ಒಂದರೊಳಗೊಂದು ಅದುಮಿಟ್ಟು ಅಪರಿತ್ಯಕ್ತವಾದ ಘನೀಕರಣದ ಭಾವಕೋಶದಲ್ಲಿ ತನ್ನದೇ ಆದ ಸಾಹಿತ್ಯ ವಿಪ್ಲವದ ರೀತಿ ರಿವಾಜುಗಳ ರೂಪದಲ್ಲಿ ಅಭಿವ್ಯಕ್ತಿಗೊಂಡಿದೆ.

“ಜೋಡಿ ಹಕ್ಕಿಯ ಹಾಡು” ವರ್ಣಾನಾತೀತವಾಗಿದೆ. ಈ ಕವಿತೆಯ ವರ್ಣನಾರೂಪದ ಒಂದು ಝಲಕ್ ‘ಭಾವ ಹೊತ್ತ ಎದೆಗೂಡ ಹಕ್ಕಿ ಹಿಡಿದು/ರೆಕ್ಕೆಗೆ ಜೋತು ಬಿದ್ದು/ಇರುಳ ಮೋಡ ಮುಟ್ಟಿ/ ನಕ್ಷತ್ರಗಳ ಪೋಣಿಸಿ/ನೆಲಮುಟ್ಟೋ ಹಾರ ಕಟ್ಟಿದೆ’ ಯಲ್ಲಿ ಆಪ್ತವಾದ ಅಪರಿಮಿತ ಪ್ರೇಮದ ಉನ್ಮಾದವಿದೆ. ಅದನ್ನು ಸವಿಯಲು ‘ನಿದ್ದೆಯ ಕದ್ದು/ಮುಳ್ಳಿನ ಮೇಲಿರಿಸಿ’ ಎನ್ನುವ ಕವಿಯ ಕಲ್ಪನೆ ಅದ್ಭುತ! ಹಾಗೆ ‘ಕಾಡ ದಾರಿಯಲಿ/ನಿನ್ನದೇ ಚಿತ್ರಕೆ ಜೀವ ತುಂಬಿ/ತನ್ಮಯತೆಯಲಿ ಕೂತು/ ನಿನ್ನ ಕರವಿಡಿದು ನಡೆದೆ’ ಎಂಬ ಚಲನಶೀಲವಾದ ಪ್ರಕೀರ್ಣ ಪ್ರೇಮದೆದೆಯ ಭಾಷಾನುಸಂಧಾನವಿದೆ.

ಕೇಶವರೆಡ್ಡಿ ಹಂದ್ರಾಳರು “ಎನ್ಕೆ ನಂತರ ಅದ್ಭುತ ಕ್ರಿಯಾಶೀಲ ಕವಿತೆಗಳನ್ನು ರಚಿಸುತ್ತಿರುವ ಬಿದಲೋಟಿ ರಂಗನಾಥ್ ದಲಿತ ಬದುಕಿನ ನೋವು, ಹತಾಶೆ, ಉತ್ಸಾಹ, ಜೀವನಪ್ರೀತಿ, ಬಂಡಾಯ ಎಲ್ಲವನ್ನೂ ನವಿರಾದ ಭಾಷೆಯಲ್ಲಿ ಕಾವ್ಯದ ಸೂಕ್ಷ್ಮತೆಗಳೊಂದಿಗೆ ಒಂದು ಅನನ್ಯ ಸ್ಥಾಯಿಗೆ ಒಡ್ಡುವ ಅವರ ಕಾವ್ಯ ಕುಶಲತೆಯನ್ನು ನಾನು ಕೆಲವೇ ಕವಿಗಳಲ್ಲಿ ಕಂಡಿದ್ದೇನೆ. ಅಲ್ಲದೇ ಅವರಲ್ಲಿ ಸಾಹಿತ್ಯದ ಬೇರುಗಳನ್ನು ತನ್ನೆಲ್ಲಾ ಸತ್ವ ನಿಸತ್ವಗೊಂದಿಗೆ ಬಯಲುಗೊಳಿಸುವ ಪರಿ ವಿಶಿಷ್ಠವಾಗಿದೆ. ಅನೇಕ ಅಕಾಡೆಮಿಕ್ ಕವಿಗಳ ಕವಿತೆಗಳಿಗಿಂತಲೂ ಬಿದಲೋಟಿಯವರ ಕವಿತೆಗಳು ಉತ್ತಮ ಮಟ್ಟದಲ್ಲಿ ನಿಲ್ಲುತ್ತವೆ ಎಂಬುದನ್ನು ಯಾವ ಬಿಗುಮಾನವೂ ಇಲ್ಲದೆ ಇಲ್ಲಿ ಉಲ್ಲೇಖಿಸಲು ನನಗೆ ನಿಜಕ್ಕೂ ಖುಷಿಯೆನಿಸುತ್ತದೆ” ಎಂದು ಗುರುತಿಸಿರುವುದರಲ್ಲಿ ಬಿದಲೋಟಿಯವರ ಕಾವ್ಯದಲ್ಲಿ ಅಪರಿಮಿತ ಜೀವನ ಪ್ರೀತಿಯ ಕುರುಹಿದೆ.

ಹೀಗೆ ‘ದೇವರಿಲ್ಲದ ಸಾಕ್ಷಿಗೆ ರುಜು’ ಹಾಕಿದ ಬಿದಲೋಟಿ, ಬಹುತ್ವದ ನೆಲೆಯಲ್ಲಿ ವಿಸ್ತೃತವಾದ ಸಮಗ್ರತೆಗೆ ಅಡಿಪಾಯ ಹಾಕಿದ ಗಾಂಧಿ ಅಂಬೇಡ್ಕರ್ ಚಿಂತನೆಗಳ ಮೇಲಿನ ಒಪ್ಪಿತವಲ್ಲದ ಅಸ್ಪಷ್ಟ ತರ್ಕದ ಕಾವ್ಯದ ಸೆರಗಿನಲ್ಲಿ ಕೆಲವು ತಕರಾರುಗಳಿವೆ. ಈ ತಕರಾರುಗಳ ನಡುವೆಯೂ ದಲಿತ ಬದುಕಿನ ವಿವಿಧ ಮಗ್ಗುಲುಗಳ ಪಡಿಪಾಟಲುಗಳಿವೆ. ಈ ಪಡಿಪಾಟಲುಗಳ ಭಾವುಕಲೋಕದಾಚೆಯೂ ತನ್ನನ್ನು ತಾನು ವಿಸ್ತರಿಸಿ ಆವರಿಸಿ ಅಭಿವ್ಯಕ್ತಿಸಿರುವ ‘ದಲಿತ ಕಾವ್ಯದ -‘ಮಟ್ಟಿಗೆ’ ಒಂದು ಸ್ಪಷ್ಟ ಆರೋಹಣವಿದೆ.

ಈ ಕೃತಿಯ ಅಗ್ರತೆ ಬಗ್ಗೆ, ಅಷ್ಟೇ ಸಂಕ್ಷೇಪವಾಗಿ ವಿಶದಪಡಿಸಿದ ಸ್ಪಷ್ವ ಖಚಿತ ಉಪಸಂಹಾರವು, ಈ ಮೇಲೆ ಅಲ್ಲಲ್ಲಿ ವಿಶ್ಲೇಷಣೆಯ ನಿಕಶಕ್ಕೆ ಒಳಪಡಿಸಿರುವಂತೆ – ಕತ್ತಲ ಗೋಡೆಯ ಮೇಲೆ ತಮ್ಮದೇ ರಕ್ತದಲ್ಲಿ ಗೀಚಿ ಗೀಚಿ ಬರೆದ ದಲಿತ ತಲೆಮಾರುಗಳ ಒಡಲೊಳಗಿನ ತವಕ ತಲ್ಲಣಗಳನು ಧೇನಿಸುವ ಜೀವಪರವಾದ ಜೀವಧ್ವನಿಯಾಗಿದೆ.

-ಎಂ.ಜವರಾಜ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x