ಸೀಮಾತೀತ ಸಿಮೊನ್‌ ದ ಬೋವಾ: ಸಂಗನಗೌಡ ಹಿರೇಗೌಡ

ಭಾರತೀಯ ಮತ್ತು ಭಾರತೇತರ ಪ್ರಮುಖ ಸಾಂಸ್ಕೃತಿಕ ನಾಯಕರು, ಕವಿಗಳು, ಲೇಖಕರು ಅವರ ಒಟ್ಟು ಬದುಕಿನಲ್ಲಿ ಘಟಿಸಿದ ಮುಖ್ಯ ಘಟನೆಗಳನ್ನಿಟ್ಟುಕೊಂಡು ಕನ್ನಡಕ್ಕೆ ತರ್ಜುಮೆಗೊಂಡ ನಾಲ್ಕು ಕೃತಿಗಳನ್ನು ನನ್ನ ಮಿತಿಯೊಳಗೆ ಓದಿಕೊಂಡಿದ್ದೇನೆ. ನಟರಾಜ ಹುಳಿಯಾರವರು ಸಂಪಾದಿಸಿರುವ “ಲೋಹಿಯಾ ಕಂಡ ಗಾಂಧಿ” ಇದರಲ್ಲಿ ಬಿ.ಎ ಸನದಿ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹಸನ್‌ ನಯೀಂ ಸುರಕೋಡ. ಸತ್ಯವ್ರತ, ರವೀಂದ್ರ ರೇಶ್ಮೆ, ಸಿ, ನಾಗಣ್ಣ, ನಟರಾಜ ಹುಳಿಯಾರ, ಈ ಏಳು ಜನ ಲೇಖಕರು ಲೋಹಿಯಾ ಅವರ ಬದುಕಿನ ಪ್ರಮುಖವಾದ ಭಾಷಣ, ಚಳುವಳಿ, ಹೋರಾಟಗಳಿನ್ನಿಟ್ಟುಕೊಂಡು, ಗಾಂಧಿಯ ಕುರಿತು ಲೋಹಿಯಾ ಅವರ ವೈಯಕ್ತಿಕ ಸಂಬಂಧ ಮತ್ತು ಸಾರ್ವಜನಿಕ ಸಂಬಂಧ ಹೇಗಿತ್ತೆನ್ನುವುದನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ಇನ್ನೊಂದು ಡಿ.ಎಸ್‌ ನಾಗಭೂಷಣ ಅವರ “ಗಾಂಧಿ ಕಥನ” ಇಲ್ಲಿಯೂ ಕೂಡಾ ಗಾಂಧಿ ಅವರ “ನನ್ನ ಅನ್ವೇಷಣೆ” ಆತ್ಮಕತೆಯನ್ನೂ ಒಳಗೊಂಡು ‌“ಹಿಂದ್‌ ಸ್ವರಾಜ್” ಮತ್ತು ಅವರ ಸಮಾಕಾಲೀನರ ಬರೆವಣಿಗೆಗಳನ್ನಿಟ್ಟುಕೊಂಡು ಗಾಂಧಿ ಬದುಕಿನ ಕೆಲವು ಪ್ರಮುಖ ಸಂಗತಿಗಳನ್ನು ಕಥನ ರೂಪದಲ್ಲಿ ಕನ್ನಡಕ್ಕೆ ತರ್ಜುಮೆಗೊಳಿಸಿದ್ದಾರೆ. ಮಗದೊಂದು ಕೇಶವ ಮಳಗಿಯವರ “ಒಂದೇ ಗುರಿ! ಬೇರೆ ದಾರಿ” ಎನ್ನವು ಕೃತಿಯಲ್ಲಿ ರವೀಂದ್ರನಾಥ ಠಾಕೂರ, ಗಾಂಧಿ, ಜವಹರಲಾಲ್‌, ಸುಭಾಶ್ಚಂದ್ರ ಬೋಸ್‌, ಅಂಬೇಡ್ಕರ್‌ ಈ ಐದು ಮನುಸುಗಳನ್ನು ಮುಖಾಮುಖಿಗೊಳಿಸಿ ಕನ್ನಡದ ನೆಲಕ್ಕೆ ಉಡಿತುಂಬಿದ್ದಾರೆ. ಈ ಮೂರು ಕೃತಿಗಳಷ್ಟೇ ಪ್ರಮುಖವಾದ ಮತ್ತು ಸಿಮೊನ್‌ ದ ಬೋವಾ ಅವರನ್ನು ಕನ್ನಡಕ್ಕೆ ವಿಶಿಷ್ಟವಾಗಿ ಬರಮಾಡಿಕೊಂಡಿರುವ ಕೃತಿ ವಿಕ್ರಮ್‌ ವಿಸಾಜಿಯವರ “ಸಿಮೊನ್‌ ದ ಬೋವಾ” ʼಮಾತು ಕಥನʼವಾಗಿದೆ.

ನಮ್ಮ ನೆಲದಾಚೆಗಿನ ಸಂವೇದನೆಯನ್ನು ನೆಲದ್ದಾಗಿಸಬೇಕಾದರೆ ಒಂದಷ್ಟು ಭಿನ್ನ ಓದು-ಬರೆಹದ ಹಸಿವಿನ ಜೊತೆಗೆ ಬೌದ್ಧಿಕವಾಗಿ ನಮ್ಮ ಸೀಮಿತ ಗಡಿಗಳನ್ನು ದಾಟುವ ಹುಚ್ಚುತನ ರೂಢಿಸಿಕೊಳ್ಳಬೇಕಾಗುತ್ತದೆ. ಬಹುಶಃ ವಿಕ್ರಮ್‌ ವಿಸಾಜಿಯವರು ಇದನ್ನು “ರಸ ಗಂಗಾಧರ” ನಾಟಕದ ಮುಖಾಂತರ ದಾಟಿ, “ಗ್ರಿಕ್‌ ಕಾವ್ಯಗಳು”, ಪ್ರಾನ್ಸಿನ ಸಾರ್ತ್ರ ಮತ್ತು ಸಿಮೊನ್‌ ದ ಬೋವಾವರೆಗೂ ಬಂದು ನಿಂತಿದ್ದಾರೆ. ಇದನ್ನು ಸ್ವತಃ ಬೋವಾಳೆ ಮೀರಿದ್ದಳೆನ್ನುವುದಕ್ಕೆ ಈ ಕೃತಿ ಸಂಪೂರ್ಣವಾಗಿ ಓದಿದಾಗ ನನಗೆ ಅನಿಸಿದ್ದು. ಸಿಮೊನ್‌ ದ ಬೋವಾ ಅವರ ನಿರ್ಧಿಷ್ಟ ವೈಚಾರಿಕತೆ ಕನ್ನಡಕ್ಕೆ ಬಂದಿರುವುದನ್ನು ಬಿಟ್ರೆ, ಅವಳ ವಿಭಿನ್ನ ಆಲೋಚನಾ ಕ್ರಮಗಳಲ್ಲಿ, ಸಾಹಿತ್ಯದ ಪ್ರಕಾರಗಳಲ್ಲಿ, ವೈಯಕ್ತಿಕ ಮತ್ತು ಸಾರ್ವಜನಿಕ ಬದುಕಿನ ನಡೆಗಳಲ್ಲಿ ಮತ್ತು ದೇಶದ ಗಡಿಗಳ ಮೀರಿ ಆವಾರಳಂತೆ ಅಲೆದಾಡುವ ಸಂದರ್ಭದಲ್ಲಿಯ ಸೀಮಾತೀತ ಗುಣಸ್ವಭಾವಗಳ ಪ್ರಮುಖವಾದ ಸಂಗತಿಗಳನ್ನು ಕನ್ನಡಕ್ಕೆ ಕೊಟ್ಟದ್ದು ವಿಸಾಜಿಯವರ ಈ ಕೃತಿಯ ವಿಶೇಷವಾಗಿದೆ. ಕೃತಿಯಲ್ಲಿರುವ ಪ್ರತಿ ಶೀರ್ಷಿಕೆಗೆ ಅನುಗುಣವಾಗಿ ಬರೆಹ ಮತ್ತು ಭಾವಚಿತ್ರಗಳನ್ನು ಓದುತ್ತಾ, ಬೆರಳಿಗೆ ಉಗಳಚ್ಚಿ ಪುಟ ತಿರುವಿ ನೊಡುತ್ತಾ ಹೋದಂತೆ, ತುಸು ಉಸಿರು ಬಿಟ್ಟಾಗ ಏಕಕಾಲಕ್ಕೆ ಎರಡೆರಡು ಸುಖಗಳು ಸಿಗುವಂತೆ ಮಾಡುವುದು ಈ ಕೃತಿಯ ದೊಡ್ಡ ಸ್ಟ್ರೆಂಥಾಗಿದೆ. ಮತ್ತು ಸಿಮೊನ್‌ ದಿ ಬೋವಾಳು ತನ್ನ ಬಾಲ್ಯದ ನೆನಪುಗಳು, ಯುದ್ಧದ ನಂತರದ ತನ್ನ ಖಾಸಗಿ ಸ್ನೇಹಿತೆ ʼಬೌದಿನ್‌ʼ ಕ್ಯಾನ್ಸರ್‌ ರೋಗದಲ್ಲಿ ಅನುಭವಸಿದ ನರಕಯಾತನೆ, “ಧರ್ಮ ಸಾಮನ್ಯವಾಗಿ ಪಲಾಯನವನ್ನೇ ಕಲಿಸುವುದು” ಎಂದು ಹೇಳುತ್ತಾ ನಾನೇಕೆ ನಾಸ್ತಿಕಳೆಂದು ಸಮರ್ತಿಸಿಕೊಳ್ಳುವುದು. “ಸ್ತ್ರೀವಾದಿ ಚಳುವಳಿಯಿಂದ ಪುರುಷರನ್ನು ಪ್ರತ್ಯೇಕಿಸಿ ಇಡುವ ಬಗ್ಗೆ ನನಗೆ ನಂಬಿಕೆಯಿಲ್ಲವೆಂದು” ಹೇಳಿ ನಾನೊಬ್ಬ ಸ್ತ್ರೀವಾದಿಯೆಂದು ಹೇಳುವ ವಿಶ್ವಾತ್ಮಕ ಮಾತುಗಳು. ʼಅಲಿಸ್‌ʼ ನಡೆಸಿದ್ದ ಸಂದರ್ಶನದಲ್ಲಿ “ನಮಗೆ ಹಣಕಾಸಿನ ಉತ್ತರಾಧಿಕಾರಿ ಹೊಂದುವ ಅಗತ್ಯವಿರಲಿಲ್ಲ. ಆದರೆ ನಮ್ಮ ಕೃತಿಗಳ ಬೌದ್ಧಿಕ ಉತ್ತರಾಧಿಕಾರಿ ಬೇಕಾಗಿದ್ದರೆಂದು” ತಮ್ಮ ಕಾಲಕ್ಕೆ ಲೋಕ ವಿರೋಧಿಯಾಗಿ ಕಂಡರೂ ʼಅರ್ಲೆಟ್‌ ಎಲ್‌ಕಮ್‌ʼಳನ್ನು ದತ್ತು ಮಗಳಾಗಿ ಸ್ವಿಕರಿದ್ದು. ಇಂಥ ಅನೇಕ ಘಟನೆಗಳನ್ನು ಓದುತ್ತಾ ಹೋದಂತೆ, ಇಲ್ಲಿಯ ಭಾಷೆ ತೊಡಕಾಗುವುದಿಲ್ಲ. ಮತ್ತು ಮುಖ್ಯವಾಗಿ ಪತ್ರಿಕೆಗಳಲ್ಲಿ ಬರುವ ವರದಿಭಾಷೆಯೂ ಆಗದೆ, ಸಾಹಿತ್ಯದ ಶೈಲಿಗಳನ್ನು ಉಳಿಸಿಕೊಂಡು ಸೃಜನಾತ್ಮಕತೆ ಮೆರೆದಿದೆ.

ʼಅಲಿಸ್‌ʼ ಸಂದರ್ಶನದಲ್ಲಿ ಸಿಮೊನ್ ದ ಬೋವಾ ಮತ್ತು ಸಾರ್ತ್ರರ ನಡುವಿನ ಸಂಬಂಧವು ʼಇದೊಂದು ಬೌದ್ಧಿಕ ಸಂಬಂಧವೆಂದುʼ ಪರಸ್ಪರ ತಾವೇ ಕರೆದುಕೊಳ್ಳುತ್ತಾರೆ. ಇಲ್ಲಿಯ ಪ್ಯಾರವನ್ನು ಓದಿದಾಗ ನನಗೆ ಡಿ.ಎಸ್‌ ನಾಗಭೂಷಣವರ “ಗಾಂಧಿ ಕಥನ” ಕೃತಿಯಲ್ಲಿ ಗಾಂಧಿ ಮತ್ತು ಸರಳಾದೇವಿಯ ಪತ್ರ ಸಂಬಂಧವನ್ನು ಕೆಲವರು ಆಡಿಕೊಳ್ಳುತ್ತಿರುತ್ತಾರೆ. ಸಬರಮತಿ ಆಶ್ರಮದಲ್ಲಿದ್ದ ಗಾಂಧಿಯ ಶಿಷ್ಯನಾದ ಮಹಾದೇವನವರೆಗೂ ಈ ಕುಹಕಗಳು ಹೋದಾಗ “ಅದೊಂದು ಬೌದ್ಧಿಕ ದಾಂಪತ್ಯ” ಎಂದು ಸಮರ್ತಿಸಿಕೊಳ್ಳುತ್ತಾರೆ. ಮುಂದೊಂದು ದಿನ ತಮ್ಮ ಕಿರಿಮಗ ರಾಮದಾಸನೇ ಬುದ್ಧಿ ಹೇಳುವಷ್ಟರಮಟ್ಟಿಗೆ ವಿಷಯ ಹೋದಾಗ ಗಾಂಧಿ ಸರಳಾದೇವಿಯ ಜೊತೆಗೆ ಸಂಬಂಧ ಕಡೆದುಕೊಂಡು ಬಿಡುತ್ತಾರೆ. ಅದು ಬೇರೆ ವಿಚಾರ. ಆದರೆ ಇಲ್ಲಿಯ ಸಿಮೊನ್‌ ದ ಬೋವಾ ಮತ್ತು ಸಾರ್ತ್ರರ ನಡುವಿನ ಸಂಬಂಧ ಭೌತಿಕವೋ ಬೌದ್ಧಿಕವೋ ಆದರೆ ಜಗತ್ತಿನಲ್ಲಿ ಪ್ರೇಮವು ಯಾರನ್ನೂ ಬಿಟ್ಟಿಲ್ಲ. ಮತ್ತು ಅದರಿಂದ ಬಿಡಿಸಿಕೊಂಡ ವಿರಹವೂ ಕೂಡಾ ಎನ್ನುವುದಕ್ಕೆ, ಸಿಮೊನ್‌ ದ ಬೋವಾಳು ಜೀನ್‌ ಪಾಲ್ ಸಾರ್ತ್ರರಿಗೆ ಮತ್ತು ಪ್ರಿಯ ನೆಲ್ಸನ್‌ ಎಲ್‌ಗ್ರಿನ್‌ ಇಬ್ಬರಿಗೂ ಬರೆದ ಸಂವೇದನಾತ್ಮಕ ಪತ್ರಗಳೇ ಸಾಕ್ಷಿಯಾಗಿವೆನ್ನುವುದಕ್ಕೆ, ಅವಳ ಮುಕ್ತಾಯದ ಒಂದು ಮಾತು “ಯಾರೇ ಅಗಿರಲಿ ಹಳೆಯ ಭಾವನೆಗಳು ಮರೆಯಲಾಗುವುದಿಲ್ಲ. ಆದರೆ ಪರಸ್ಪರರನ್ನು ನಿಯಂತ್ರಿಸುವುದಕ್ಕೆ ಅವಕಾಶವಿರುವುದಿಲ್ಲ. ಯಾರು ನಿಮ್ಮವರಾಗುವುದಿಲ್ಲವೋ ಅವರನ್ನು ಪ್ರೀತಿಸುವುದು. ಯಾರು ಇನ್ನೊಬ್ಬರ ಪ್ರೇಮದಲ್ಲಿದ್ದಾರೆ, ಅವರನ್ನು ಬಯಸುವುದು. ಯಾರ ಜೀವನದಲ್ಲಿ ನನಗೆ ಮುಖ್ಯ ಸ್ಥಾನವಿಲ್ಲವೋ ಅವರಿಗಾಗಿ ಹಂಬಲಿಸುವುದು ವ್ಯರ್ಥವೆನಿಸಿದೆ” ಸಿಮೊನ್‌ ದ ಬೋವಾ ತನ್ನ ಪ್ರಿಯಕರ ʼನೆಲ್ಸನ್‌ ಎಲ್‌ಗ್ರೀನ್‌ʼನು ʼನತಾಲಿ ಸೊರೊಕಿನ್‌ʼ ಎನ್ನುವವಳ ಜೊತೆಗಿರುವ ಸಂಬಂಧ ಬಹುಶಃ ಬೋವಾಳಿಗೆ ಘಾಸಿಗೊಳಿಸಿರಲೂ ಬಹುದು!

ಸಾರ್ತ್ರರ ಕೊನೆಯದಿನಗಳಲ್ಲಿ ವಿಪರೀತ ಕುಡಿತಕ್ಕೊಳಗಾಗಿ ಅವರು ಲೋಕದಿಂದ ಭೌತಿಕವಾಗಿ ಇಲ್ಲವಾಗುವ ಸಂದರ್ಭ ಬಂದಾಗ ಬೋವಾಳ ಉಳಿಸಿಕೊಳ್ಳಲು ಹರಸಾಹಸ ಪಡುತ್ತಾಳೆ. ಅಂತಿಮವಾಗಿ ಇಲ್ಲವಾದಾಗ ಅವಳ ದುಃಖ ಮಡುಗಟ್ಟುತ್ತದೆ. ಜಗತ್ತಿನ ಎಲ್ಲಾ ಪ್ರೇಮ ಸಂಬಂಧಗಳು, ಗುರು ಶಿಷ್ಯರ ಸಂಬಂಧಗಳ ಸಂವೇಧನೆ ಒಂದೇ ಆಗಿರುತ್ತವೆ ಎನ್ನುವುದಕ್ಕೆ, ಇಂಥದ್ದೇ ಘಟನೆ ಕೀರಂ ಅವರ ಮತ್ತು ಸಿದ್ದಲಿಂಗಯ್ಯನವರ ಆಸ್ಪತ್ರೆಯಲ್ಲಿ ಕಳೆದ ಕೊನೆಯ ದಿನಗಳು ಥಟ್ಟನೆ ನೆನಪಾಗುತ್ತವೆ. ಇಲ್ಲಿ ವಿಕ್ರಮ್‌ ವಿಸಾಜಿಯವರು ಬೋವಾಳ ಸಂವೇಧನೆಯನ್ನು ನಮ್ಮ ನೆಲದ ಸಂವೇದನೆಯೇ ಎನ್ನುವಷ್ಟರಮಟ್ಟಿಗೆ ಹಿಡಿದಿಟ್ಟಿದ್ದಾರೆ.

ಈ ಕೃತಿ ಇಷ್ಟಕ್ಕೆ ನಿಲ್ಲುವುದಿಲ್ಲ. ಯುವ ತಲೆಮಾರಿನವರು ಹೋರಾಟಗಾರರು, ಚಳುವಳಿಗಾರರು, ಬರೆಹಗಾರರಾಗಬಯಸುವವರಿಗೆ ಬೋವಾಳ ಒಂದಷ್ಟು ಮುಖ್ಯವಾದ ಕಿವಿಮಾತುಗಳನ್ನು ಹೇಳಿದ್ದಾರೆ. ತಾತ್ವಿಕ ಇಸಂಗಳನ್ನು ಒಳಗೊಳ್ಳಬೇಕೆಂದವರಿಗೆ “ಸ್ತ್ರೀಯಾಗಿ ಯಾರೂ ಹುಟ್ಟುವುದಿಲ್ಲ ಅವರನ್ನು ಸ್ತ್ರೀಯಾಗಿ ರೂಪಿಸಲಾಗತ್ತದೆ” ಎನ್ನುವ ಗಂಬೀರ ವಿಚಾರವನ್ನು ನಮ್ಮ ಮುಂದೆ ಇಡುತ್ತಾರೆ. ಜೊತೆಗೆ “ಒಬ್ಬ ಒಳ್ಳೆಯ ಲೇಖಕ, ತನ್ನ ಕಾಲದ ಲೇಖಕರಿಗಿಂತ ವಿಭಿನ್ನವಾಗಿ ಬರೆಯುತ್ತಾನೆ” ಸಿಮೊನ್‌ ದ ಬೋವಾ, ಸಾರ್ತ್ರ, ವೂಲ್ಪ್‌, ವಿಭಿನ್ನವಾಗಿ ಬರೆದರು. ಸಾರ್ತ್ರರನು ಜೋಸೆಪ್‌ ಕಾನಾಡ್‌, ಆಂಡ್ರೆ ಜೀದ್‌, ಜೀನ್‌ ಗಿರೋಡ್‌ ವಿಭಿನ್ನ ಶೈಲಿಗಳನ್ನು ಓದಿಕೊಂಡಿದ್ದನ್ನು ಸ್ವತಃ ಆತನೇ ಹೇಳುತ್ತಾನೆ. ಮೇಲಿನ ಮಾತಿನಂತೆ ನಮ್ಮ ಕನ್ನಡದಲ್ಲಿ ಕುವೆಂಪು, ಬೇಂದ್ರೆ, ಅಡಿಗರು, ಕಂಬಾರರು, ದೇವನೂರರು, ಲಂಕೇಶರು, ವಾಲಿಕಾರರು, ಗೀತಾ ನಾಗಭೂಷಣ ಇತ್ಯಾದಿ ಬರೆಹಗಾರರು ಅವರದ್ದೇ ಆದ ಭಿನ್ನ ಶೈಲಿಯನ್ನು ರೂಢಿಸಿಕೊಂಡಿದ್ದು ಅವರನ್ನು ಓದಿರುವ ಮತ್ತು ಓದುತ್ತಿರವವರೆಲ್ಲರಿಗೂ ಗೊತ್ತಿರುವಂಥಾದ್ದೆ.

ಸಾಹಿತ್ಯ ಏನನ್ನು ಮಾಡಬಾರದು ಎನ್ನುವುದಕ್ಕೆ ಬೋವಾಳು ಒಂದು ಭಾಷಣದಲ್ಲಿ “ಲೇಖಕರು ಏನೆಲ್ಲಾ ಹೇಳಲು ಹೊರಡಬಾರದು. ನಮ್ಮಲ್ಲೊಂದು ಶಬ್ದಗಳ ಚೀಲವಿದೆ ಎಂದಿಟ್ಟುಕೊಳ್ಳಿ, ಆ ಚೀಲದಲ್ಲಿ ಕೈ ಹಾಕಿ ಸಿಕ್ಕ ಸಿಕ್ಕ ಶಬ್ದಗಳನ್ನು ಮೇಜಿನ ಮೇಲೆ ಹರಡುವಂತಿಲ್ಲ, ಅಥವಾ ನಮ್ಮ ಶಬ್ದ ಭಂಡಾರದ ಪ್ರದರ್ಶನಕ್ಕಿಳಿಯುವಂತಿಲ್ಲ, ಲೇಖಕರಾದವರು ತಮ್ಮ ವಿವೇಚನೆಗೆ ತಕ್ಕುದಾದ ಶಬ್ದಗಳು ಹುಡುಕಬೇಕು” ಕವಿಯಾದವನು ಕಾವ್ಯ ಬರೆಯುವಾಗ ಅಥವಾ ಲೇಖಕನಾದವನು ಕಥೆ, ಕಾದಂಬರಿ ಬರೆಯುವಾಗ, ಅನಾವಶ್ಯಕವಾದ ಪದಗಳು ಹಾಕಿ ಕೃತಿಗೆ ಮತ್ತಷ್ಟು ಬೊಜ್ಜು ಬೆಳಿಸಬಾರದು. ಇದು ನಮ್ಮ ಹಳೆಗನ್ನಡ ಕಾವ್ಯಗಳಲ್ಲಿ ಒಂದು ಪದ ಬಳಸುವಾಗ ತುಂಬಾ ಎಚ್ಚರಿಕೆಯನ್ನು ವಹಿಸಿರುವುದು ಪಂಪ, ರನ್ನ, ಕುಮಾರವ್ಯಾಸರನ್ನೂ ಒಳಗೊಂಡು ಬೇಂದ್ರೆ, ಕುವೆಂಪು, ಕೆ.ಎಸ್‌ ನರಸಿಂಹ ಸ್ವಾಮಿಯಂಥವರಲ್ಲಿ ಕಾಣುತ್ತೇವೆ.

ಹೆಣ್ಣು ಮತ್ತು ಸೃಜನಶೀಲತೆಯ ಕುರಿತು ಮಾತನಾಡುತ್ತಾ, “ಪ್ರತಿಭಾವಂತರು ಹೆಣ್ಣಾಗಿ ಹುಟ್ಟಿದಾಗಲೇ ಅವರು ಮಾನವ ಜಗತ್ತಿನಲ್ಲಿ ಕಳೆದು ಹೋಗುತ್ತಾರೆ” ಎಂದು ಹೇಳಿ, ವರ್ಜಿನಿಯಾದ ವುಲ್ಪ್, ಮಾತನ್ನು ಪ್ರಸ್ತಾಪಿಸಿ.ಷೇಕ್ಸ್‌ಪಿಯರ್‌ ಉತ್ತಮ ನಾಟಕಕಾರನಾಗಲು ಪುರುಷನಾಗಿದ್ದಕ್ಕಾಗಿ ಆತನಿಗೆ ಸಿಕ್ಕ ಸ್ಪೇಸ್‌, ಮತ್ತು ಮುರಾಸಾಕಿ-ಶಿಕಿಬು ಎನ್ನುವವಳು, ವಿನ್ಸೆಂಟ್‌ ವ್ಯಾನ್‌ಗೊ ಅವನಿಗೆ ಸಿಕ್ಕ ಸ್ಪೇಸ್‌, ಇನ್ನೊಬ್ಬ ಲೇಖಕಿ ಮೇದಾಂ ದೆ ಲಾ ಫಯತ್‌ ಅವಳನ್ನು ಇಲ್ಲಿ ಸ್ಮರಿಸಿಕೊಳ್ಳುತ್ತಾಳೆ. ಹೆಣ್ಣುಮಕ್ಕಳು ಸೃಜನಶೀಲತೆಯಿಂದ ಮುಖ್ಯವಾಗಿ ಹಿಂದುಳಿಯಲು ಮೂಲಭೂತ ಕಾರಣವನ್ನು ಹೀಗೆ ಕೊಡುತ್ತಾಳೆ, “ಈಡಿಪಸ್‌ ಕಾಂಪ್ಲೆಕ್ಸ್‌ ಪ್ರಕಾರ ಬಾಲಕರು ತಾಯಿಯ ಕಡೆ ಆಕರ್ಷಿತರಾಗುವರು. ಮತ್ತು ತಂದೆಯನ್ನು ಪ್ರತಿ ಸ್ಪರ್ಧೆಯೆಂದು ಭಾವಿಸುವರು. ತಂದೆಯ ಸಾಧನೆಗಳನ್ನು ಸರಿಗಟ್ಟಲು ಅವರಿಗಿಂತ ಮುಂದೆ ಹೋಗಲು ಸದಾ ತುಡಿಯುವರು” ಇದು ಸಿಗ್ಮಂಡ್‌ ಪ್ರಾಯ್ಡ್‌ನ ಅಪ್ರಜ್ಞಾವಸ್ತೆಯ ಥಿಯರಿಯನ್ನು ಇಲ್ಲಿ ಅನ್ವಯಿಸಿ ಹೆಣ್ಣು ಸಾಹಿತ್ಯದಿಂದ ಹೊರಗುಳಿಯಲು ಮುಖ್ಯ ಕಾರಣವನ್ನು ಹುಡುಕುವ ಪ್ರಯತ್ನವನ್ನು ಮಾಡುತ್ತಾಳೆ.

ಕಾದಂಬರಿ ಮತ್ತು ರಂಗಭೂಮಿಗಿರುವ ಮೂಲಭೂತವಾದ ವ್ಯತ್ಯಾಸವನ್ನು ಗುರುತಿಸುತ್ತಾ, “ಕಾದಂಬರಿ ಓದುಗನಿಗೆ ದೈರ್ಯ ಹೆಚ್ಚು. ಆದರೆ ನಿರೀಕ್ಷೆ ಕಡಿಮೆ. ನಾಟಕದ ಪ್ರೇಕ್ಷಕನಿಗೆ ದೈರ್ಯ ಕಡಿಮೆ ನಿರೀಕ್ಷೆ ಹೆಚ್ಚು” ಎನ್ನುವುದನ್ನು ಕ್ರೆಯಾನ್‌ ಮತ್ತು ಅಂತಿಗೊನೆ ಮುಖಾಂತರ ಹೇಳುತ್ತಾಳೆ. ಅದರೆ ಒಂದು ಕಾದಂಬರಿ ಓದುವಾಗ ಅಲ್ಲಿಯ ಪ್ರದೇಶ, ಪರಿಸರ, ಪಾತ್ರಗಳ ಆಕರಗಳನ್ನು ಓದುಗರು ತಾವು ತಮ್ಮದೇ ನೆಲೆಯೊಳಗೆ ಮನಸಿನಲ್ಲಿ ಕಟ್ಟಿಕೊಳ್ಳಲು ಇಂಬು ಸಿಗುತ್ತದೆ. ಅದರೆ ಅದೇ ಕಾದಂಬರಿ ನಾಟಕವಾಗಿ, ಅಥವಾ ಸಿನಿಮಾವಾಗಿ ಥೇಟರ್‌ಗೆ ಬಂದಾಗ ಅಲ್ಲಿ ನೋಡುಗ ತನ್ನೊಳಗೆ ಒಂದು ಲೋಕವನ್ನು ಇಮ್ಯಾಜಿನೇಶನ್ ಮಾಡಿಕೊಳ್ಳಲು ಇಲ್ಲವೆನ್ನುವಷ್ಟರಮಟ್ಟಿಗೆ ಕಡಿಮೆಯಿರುತ್ತದೆ. ಸಾಹಿತ್ಯ ಮತ್ತು ಆದಿಭೌತಿಕವಾದದಲ್ಲಿಯೂ ಬರೆಹಗಾರರಿಗೆ ಕೆಲವು ಸೂಕ್ಷ್ಮವಾದ ವಿಚಾರಗಳನ್ನು ಬೋವಾಳು ಹೇಳುತ್ತಾಳೆ. “ನಾವು ಪೂರ್ವ ನಿರ್ಧಾರಿತ ಸಿದ್ಧಾಂತ ಅಥವಾ ವೈಚಾರಿಕತೆಯನ್ನು ಕದ್ದು ಮುಚ್ಚಿ ಕಾದಂಬರಿಯಲ್ಲಿ ತರುವುದಕಷ್ಟೇ ನಮ್ಮನ್ನು ಸೀಮಿತಗೊಳಿಸಿಕೊಂಡರೆ, ಕಾದಂಬರಿಯ ಪ್ರಯೋಗಶೀಲತೆ, ಮನೋವೃತ್ತಿಗಳನ್ನು ನಿರಾಕಕರಿಸಿದಂತಾಗುವುದು” ಕುವೆಂಪುರವರು ಹೂವ್ವಯ್ಯನ ಮುಖಾಂತರ ವೈಚಾರಿಕತೆಯನ್ನು ಸೂಪ್ತವಾಗಿ ಹೇಳಲು ಹೊರಟರೂ ಇಡೀ ಕಾದಂಬರಿಯಲ್ಲಿ ಅದಷ್ಟೇ ಹೇಳುವುದಾಗಿರಲಿಲ್ಲ ಎನ್ನುವುದನ್ನು ಕಾದಂಬರಿ ಓದಿದ ಪ್ರತಿಯೊಬ್ಬರೂ ಗುರುತಿಸಬಲ್ಲರು.

ನಮ್ಮ ಕನ್ನಡ ಸಾಹಿತ್ಯ ಓದುಗರಿಗೆ ಸಿಮೊನ್‌ ದ ಬೋವಾ ಇಲ್ಲಿವರೆಗೂ ಜಗತ್ತಿನ ಮಹಿಳಾ ಚಿಂತಕಿಯಾಗಿ ದಕ್ಕಿದ್ದಳು. ಸಾರ್ತ್ರೆ ಒಬ್ಬ ತತ್ವಜ್ಞಾನಿಯಾಗಿ ಓದಿಕೊಂಡಿದ್ದರು. ಇವರಿಬ್ಬರೂ ಇದಷ್ಟೇ ಆಗಿರಲಿಲ್ಲ ಎನ್ನುವುದಕ್ಕೆ, ಗಂಭಿರವಾದ ಮಾಹಿತಿಗಳನ್ನು ಬರೀ ಮಾಹಿತಿಯಾಗಿ ಅಷ್ಟೇ ಕಟ್ಟಿಕೊಡದೆ. ಸಾಹಿತ್ಯದ ನಿರೂಪಣೆಯ ಮೂಲಕ ಕಟ್ಟಿ ಅದಕ್ಕೆ ಪೂರಕವಾದ ಬಾವಚಿತ್ರಗಳನ್ನೂ ಕೊಟ್ಟು ನನ್ನ ಮಟ್ಟಿಗೆ ಮಹಿಳಾ ಸಂವೇದನೆಗೆ ಸೀಮಿತವಾಗಿದ್ದ ಸಿಮೊನ್‌ ದ ಬೋವಾಳನ್ನು ಸೀಮಾತೀತಗೊಳಿಸಲಾಗಿದೆ. ಈ ಮೂಲಕ ಬೋವಾಳನ್ನು ರಂಗಭೂಮಿ, ಆತ್ಮಕಥನ ಇತ್ಯಾದಿ ಜ್ಞಾನ ಶಿಸ್ತುಗಳ ನೆಲೆಗಳಲ್ಲಿ ನಿರ್ಧಿಷ್ಟ ಕ್ಷೇತ್ರದ ಮುಖಾಂತರ ಗಂಭಿರ ಅಧ್ಯಯನ ಕೈಗೊಳ್ಳುವುದಕ್ಕೆ ಈ ಕೃತಿ ಇಂಬುಮಾಡಿಕೊಳ್ಳಲು ಪ್ರಾಮಾಣಿಕವಾಗಿ ಧ್ಯಾನಿಸಿದೆನ್ನಲಡ್ಡಿಯಿಲ್ಲ. ಜೊತೆಗೆ ಸಿಮೊನ್‌ ದ ಬೋವಾ ಕುರಿತು ಕನ್ನಡದಲ್ಲಿ ಇದೊಂದು ವಿಶಿಷ್ಟ ಪ್ರಯೋಗವಾಗಿದೆ.

-ಸಂಗನಗೌಡ ಹಿರೇಗೌಡ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x