ನಿಲುವಂಗಿಯ ಕನಸು (ಅಧ್ಯಾಯ ೧೮-೧೯): ಹಾಡ್ಲಹಳ್ಳಿ ನಾಗರಾಜ್

ಅಧ್ಯಾಯ ೧೮: ಕೆಂಗಣ್ಣಪ್ಪನ ಔಷಧೋಪಚಾರ

ನೀರು ಕುಡಿದು ವಿಶ್ರಮಿಸಿದ ದನಗಳನ್ನು ಬೆಟ್ಟದ ಕಡೆ ತಿರುಗಿಸಿದ ಚಿನ್ನಪ್ಪ ಬೆಟ್ಟದ ನೆತ್ತಿಯ ಹಕ್ಕೆಯ ಗೌಲು ಮರದ ನೆರಳಲ್ಲಿ ಕುಳಿತು ವಿಶ್ರಮಿಸತೊಡಗಿದ.
ಸುಬ್ಬಪ್ಪ ದೊಡ್ಡ ಕೆಲಸಗಳನ್ನೆಲ್ಲಾ ಮುಗಿಸಿ ಕೊಟ್ಟು ಹಿಂದಿನ ದಿನ ಸಂಜೆಯಷ್ಟೇ ಊರಿಗೆ ಹೋಗಿದ್ದ, ಇತ್ತೀಚಿನ ಕೆಲವೇ ದಿನಗಳಲ್ಲಿ ಒದಗಿ ಬಂದ ಅನುಭವಗಳು ಹಾಗೂ ಭಾವ ಮೈದುನನೊಂದಿಗಿನ ಮಾತುಕತೆಗಳು ಗಂಡ ಹೆಂಡಿರಿಬ್ಬರಿಗೆ ಬದುಕಿನ ಕೆಲವು ಹೊಸ ಪಾಠಗಳನ್ನು ಕಲಿಸಿದ್ದವು.
ಆ ಸಾರಗಳೊಳಗಿನ ಗೂಡಾರ್ಥಗಳು ತಿಳಿಯದಿದ್ದರೂ ಒಟ್ಟು ಸಾರಾಂಶ ಅವರ ಅರಿವಿಗೆ ಬಂದಿತ್ತು.
ಇಂದಿನ ಸಾಮಾಜಿಕ ಬದುಕು ಯಥೇಚ್ಛ ಹಣವನ್ನು ಬೇಡುತ್ತದೆ !
ಸೀತೆ ಸಹ ಸಂಜೆ ಅದೇ ಅರ್ಥದ ಮಾತುಗಳನ್ನು ಚಿನ್ನಪ್ಪನೊಂದಿಗೆ ಹೇಳಿದಳು
‘ಹಣಕಾಸಿನ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿಕೊಂಡು ಆಗಿದೆ ….. ಈಗ ಶ್ರಮ ಪಟ್ಟು ದುಡಿಯುವುದು ಮತ್ತೆ ಹೆಚ್ಚು ವರಮಾನ ಬರುವ ದಾರಿ ಕಂಡುಕೊಳ್ಳುವುದು ಅಷ್ಟೆ ನಮ್ಮ ಮುಂದಿರುವ ದಾರಿ !’
ಹಿಂದಿನ ದಿನಗಳ ಮಾತುಗಳನ್ನು ಮೆಲಕು ಹಾಕುತ್ತಾ, ಮುಂದೊದಗಿ ಬರಬಹುದಾದ ಸಂತಸದ ದಿನಗಳ ಬಗ್ಗೆ ಕನಸು ಕಾಣುತ್ತಾ ಮೈಮರೆತಿದ್ದ ಚಿನ್ನಪ್ಪನಿಗೆ ದನಗಳು ಹಕ್ಕೆಗೆ ತಲುಪಿದಾಗಲೇ ಹೊತ್ತಿನ ಅರಿವಾಗಿದ್ದು, ಕೆಲವು ದನಗಳಾಗಲೇ ಕಲಗಚ್ಚಿನ ಆಸೆಗೆ ಊರದಾರಿ ಹಿಡಿದಿದ್ದವು.
ಅವನು ಮನೆಯ ಹಟ್ಟಿ ಬಾಗಿಲು ತಲುಪಿದ್ದ. ಒಳಗಿಂದ ಮೊಬೈಲ್ ಅರಚುವುದು ಕೇಳಿತು.

ಹಿಂದೆಯೇ ಸೀತೆ ಮೊಬೈಲ್ ಕಿವಿಗೆ ಹಿಡಿದು ಕೊಂಡು ಬಂದವಳು ಚಿನ್ನಪ್ಪನ ಕೈಗೆ ಕೊಡುತ್ತಾ ‘ನಾಗರಾಜಣ್ಣ ಅವರ ಪೋನು, ಆಗ್ಲೆ ಒಂದ್ ಸರಿ ಮಾಡಿದ್ರು’ ಎಂದಳು.
‘ಎಲ್ಲಿ ಹಾಳಾಗಿ ಹೋಗಿದ್ದೆ ಮಾರಾಯ ನಾನು ಆಗಿಂದ್ಲೇ ಮಾತಾಡಕ್ಕೆ ಟ್ರೆöÊಮಾಡ್ತಾ ಇದ್ದೀನಿ…. ಅರ್ಜೆಂಟಾಗಿ ಬಾ’ ನಾಗರಾಜ ಗದರುದನಿಯಲ್ಲಿ ಹೇಳಿದ. ಅವನ ದನಿಯಲ್ಲಿ ಕಳವಳ ತುಂಬಿದಂತಿತ್ತು.
‘ದನಿನ ಬಾರಿಕಾಯಕೆ ಹೋಗಿದ್ದವನು ಇನ್ನೂ ಮನೆ ಒಳಗೇ ಹೋಗಿಲ್ಲ ಮಾರಾಯ …. ಹೆಂಗೂ ನಾಳೆ ಸಂತೆ ಅಲ್ವಾ ಸ್ವಲ್ಪ ಬೇಗನೇ ಬರ್ತಿನಿ ಆಗದಾ’ ಚಿನ್ನಪ್ಪನ ಮಾತು ನಾಗರಾಜನನ್ನು ಕೆರಳಿಸಿತು.
‘ನೀನ್ ಹೇಳಿದಷ್ಟು ಮಾಡದು ಕಲಿಯಪ್ಪ, ಈಗಿಂದೀಗ್ಲೆ ಹೊರಟು ಬಾ ಅಷ್ಟೆ’ ಜೋರು ದನಿಯಲ್ಲಿ ಹೇಳಿದ.
‘ಏನಾ ಅರ್ಜೆಂಟ್ ರ‍್ಬೌಹ್ದು ಹೋಗಿ ಬನ್ನಿ. ಸೀತೆಯೂ ದನಿಗೂಡಿಸಿದಳು.


‘ನೀವೊಂದ್ಸಲ ಹೂಂ ಅನ್ನಿ ಸರಿಯಾಗಿ ಬೆಂಡೆತ್ತಿ ಊರು ಬಿಡಿಸಿ ಬತ್ತೀವಿ’ ಅಲ್ಲಿನ ಪ್ರಗತಿಪರ ಯುವಕರ ಗುಂಪು ನಾಗರಾಜನನ್ನು ಸುತ್ತುವರಿದು ಕೂಗಾಡುತ್ತಿದ್ದುದನ್ನು ಕಂಡ ಚಿನ್ನಪ್ಪನಿಗೆ ಅಚ್ಚರಿಯಾಯಿತು.
ನಾಗರಾಜನ ಪಕ್ಕದಲ್ಲಿ ಹೊನ್ನೇಗೌಡ ಸಪ್ಪೆಮುಖ ಹೊತ್ತು ನಿಂತದ್ದು ಏಕೆಂದು ಅವನಿಗೆ ತಿಳಿಯಲಿಲ್ಲ.
‘ಬೇಡ ಬೇಡ ಹಾಗೆಲ್ಲಾ ಮಾಡ್ಬೇಡ’ ನಾಗರಾಜ ಯುವಕರನ್ನು ಸಮಾಧಾನ ಪಡಿಸಲು ಯತ್ನಿಸುತ್ತಿದ್ದ, ನೀವೇ ನೋಡಿದ್ದೀರಲ್ಲಾ ಹಳೆಯ ಕಾಲದ ರೈತರೆಲ್ಲಾ ಈವತ್ತಿನ ಸರ್ಕಾರದ ಕೃಷಿ ನೀತಿಯಂದಾಗಿ ದಿಕ್ಕು ತಪ್ಪಿದವರಂತಾಗಿದ್ದಾರೆ, ಯುವಕರೆಲ್ಲಾ ಊರು ಬಿಡ್ತಿದ್ದಾರೆ. ಹಳ್ಳಿಗಳೆಲ್ಲಾ ಕೇವಲ ವೃದ್ಧಾಶ್ರಮದಂತೆ ಆಗಿ ಹೋಗಿದ್ದಾವೆ, ಹೇಗೋ ಕಷ್ಟಪಟ್ಟು ಡಿಗ್ರಿಮಾಡಿಕೊಂಡು ಹಳ್ಳಿಗೆ ವಾಪಾಸ್ ಬಂದಿರುವ ನಮಗೆ ಬದುಕಿನ ದಾರಿ ಕಾಣದಾಗಿ ಹೋಗಿದೆ. ಪಟ್ಟಣಕ್ಕೆ ಹೋಗಿ ಬೇಕರಿ ಬಾರು ಹೋಟೆಲ್ ಗಳಲ್ಲಿ ಲೋಟ ತೊಳೆಯದಿಕ್ಕೆ ಮನಸ್ಸು ಒಪ್ಪದಿಲ್ಲ, ಇರುವ ಜಮೀನಿನಲ್ಲಿ ಆದಷ್ಟೂ ಲಾಭದಾಯಕ ಕೃಷಿ ಮಾಡಬೇಕೆಂದು ನಾವೆಲ್ಲಾ ನಿಮ್ಮಂತವರ ಕಡೆ ನೋಡ್ತಾ ಇದ್ದೇವೆ. ಆದಷ್ಟು ಶ್ರಮ ವಹಿಸಿ ಕೃಷಿಯನ್ನು ಲಾಭದಾಯಕವಾಗಿ ಮಾಡಬೇಕೆಂದು ಪಣತೊಟ್ಟ ಹೊನ್ನೇಗೌಡರಂತವರನ್ನೇ ನಾವು ಮಾದರಿ ಅಂದುಕೊಂಡಿದ್ದೇವೆ….. ಅಂತವರನ್ನು ಮಗುಚಿ ಬೀಳುವಂತೆ ಮಾಡಿದರೆ ಸಹಿಸೋದು ಹೇಗೆ?

ಆ ಕತ್ತೆ ರಾಮ ಏನೋ ರೈತರನ್ನು ಸುಲಿಯೋದಕ್ಕೆ ಅಂಗಡಿ ಬೀದಿಯಲ್ಲಿ ಕೂತಿರದು ಅಂತಾ ಗೊತ್ತು. ಆದರೆ ಸರ್ಕಾರ ಸಂಬಳ ಕೊಟ್ಟು ರೈತರಿಗೆ ನೆರವಾಗು ಅಂತಾ ಕಳಿಸಿದ್ದರೆ ಈ ಕೆಂಗಣ್ಣಪ್ಪ ನಂತವರು ಏನ್ಮಾಡ್ತಾ ಇದ್ದಾರೆ? ಕತ್ತೆಯಂತವರ ಎಂಜಲು ಕಾಸಿಗೆ ಆಸೆ ಪಟ್ಟು ಹೊನ್ನೇಗೌಡರಂತಹಾ ಶ್ರಮ ಜೀವಿ ರೈತರನ್ನು ಬಲಿ ತಗಳ್ತಾ ಇದ್ದಾರಲ್ಲ, ಇಂತಹವರನ್ನು ಬೆಂಡೆತ್ತಿ ಊರು ಬಿಡಿಸದೇ ಇನ್ನೇನು ಮಾಡಬೇಕು ಅಂತೀರಿ’ ಯುವಕರ ಗುಂಪು ತಮ್ಮ ಅಸಹನೆಯನ್ನು ಹೊರಗೆಡವುತ್ತಲೇ ಇತ್ತು.
‘ರ‍್ಲಿ ರ‍್ಲಿ, ಅವನು ಸರ್ಕಾರಿ ನೌಕರ, ಅವನನ್ನು ಬೆಂಡೆತ್ತಕ್ಕೆ ಹೋಗಿ ನೀವ್ಯಾಕೆ ತೊಂದರೆಗೆ ಸಿಗಾಕಿಕೊಳ್ತೀರ? ಅವನಾಗೇ ಅವನು ಊರು ಬಿಡ್ತಾನೆ ನೋಡಿ, ಆವಾಗಿನಿಂದ ಆ ಗೊಬ್ಬರದಂಗಡಿ ಬೆಂಚ್ ಮೇಲೆ ಕೂತಿದ್ದವನು ನಿಮ್ಮ ಸಿಟ್ಟು ನೋಡಿ ಹ್ಯಾಗೆ ಜಾರಿಕೊಂಡು ಹೋಗಿದ್ದಾನೆ…… ಮುಂದಿನ ಭಾನುವಾರ ನಾಗೇಶ್ ಡಾಕ್ಟರ ಜೊತೆ ಕೂತು ಚರ್ಚೆ ಮಾಡಣ. ಬದುಕಿಗೆ ದಾರಿ ಹುಡುಕೋಕೆ ಸಾಧ್ಯವಾ ನೋಡಾಣ….. ಈಗ ಹೋಗಿ ಎಂದ ನಾಗರಾಜ.
ಯುವಕರ ಗುಂಪಿನೊಂದಿಗೆ ಪ್ರೇಕ್ಷಕರಾಗಿ ನಿಂತಿದ್ದವರೂ ಚದುರಿದ ನಂತರ ಮೂವರೂ ಪ್ರಭಾಕರನ ಬ್ರಾಂಡಿ ಅಂಗಡಿಯ ಮಾಮೂಲಿ ಕೋಣೆ ಹೊಕ್ಕರು, ಪ್ರಭಾಕರ ತಾನೇ ಖುದ್ದಾಗಿ ಅರ್ಧ ಬಾಟಲಿ ಬ್ರಾಂಡಿ, ಕಾರ ತಂದಿಟ್ಟು ಹೋದ.
ಚಿನ್ನಪ್ಪನಿಗೆ ಆತಂಕಭರಿತ ಕುತೂಹಲ ಕಾಡತೊಡಗಿತು, ಅಂತಹಾ ಘಟನೆ ಏನು ನಡೆದಿರಬಹುದು ಆ ಕುರಿತು ಹೇಳಬಹುದೇ ಎಂದು ಗೆಳೆಯರ ಮುಖ ನೋಡ ತೊಡಗಿದ.


ಆವತ್ತು ಚಿನ್ನಪ್ಪ ಟೊಮೆಟೋ ತೋಟಕ್ಕೆ ಹೋಗಿ ಹಿಂತಿರುಗಿದ ಅರ್ಧಗಂಟೆಯಲ್ಲಿ ಹೊನ್ನೇಗೌಡ ತೋಟದಿಂದ ಹೊರಟು ಮನೆಗೆ ಹೋಗಿ ಸ್ನಾನಮಾಡಿ ದೊಡ್ಡೂರಿನ ಅಂಗಡಿ ಬೀದಿಗೆ ಬರುವಷ್ಟರಲ್ಲಿ ಕೆಂಗಣ್ಣಪ್ಪ ಗೊಬ್ಬರದ ಅಂಗಡಿಯ ಬೆಂಚಿನ ಮೇಲೆ ವಿರಾಜಮಾನನಾಗಿ ಬೀಡಿ ಎಳೆಯುತ್ತಿದ್ದ.
ಬೈಕ್ ನಿಲ್ಲಿಸಿದ ಹೊನ್ನೇಗೌಡ ಕೆಂಗಣ್ಣಪ್ಪನಿಗೆ ವಿಚಾರ ತಿಳಿಸಿ ತೋಟಕ್ಕೆ ಬರುವಂತೆ ಕೇಳಿಕೊಂಡ. ಕೆಂಗಣ್ಣಪ್ಪ ‘ಆಗದಿಲ್ಲ ಆಮೇಲೆ ನೋಡಾಣ’ ಅಂತ ಚೊರೆ ತೆಗೆದ.
ಗಲ್ಲಾಪೆಟ್ಟಿಗೆಯ ಹಿಂದೆ ಸಿಂಹಾಸನದಂತಹಾ ಕುರ್ಚಿಯಲ್ಲಿ ಹಿಂದಕ್ಕೊರಗಿ ಕುಳಿತಿದ್ದ ಕತ್ತೆರಾಮನಿಗೆ ಹೊನ್ನೇಗೌಡನನ್ನು ಕಂಡು ಸಂತೋಷವಾಗಿತ್ತು. ಹೊನ್ನೇಗೌಡನಿಂದ ಅವನಿಗೆ ಇಬ್ಬಗೆಯ ಕೆಲಸ ಆಗುವುದಿತ್ತು.
ಹೊನ್ನೇಗೌಡ ತನ್ನ ಹೀರೋ ಹೋಂಡ ಗಾಡಿಯ ಆರ್.ಸಿ ಬುಕ್ ಅಡ ಇಟ್ಟು ಫೈನಾನ್ಸ್ನಲ್ಲಿ ಸಾಲ ಪಡೆದುಕೊಂಡಿದ್ದನಲ್ಲ ಆಬಗ್ಗೆ ಕತ್ತೆ ರಾಮನಿಗೆ ಸಂಶಯ ಮೂಡಿತ್ತು. ಗಾಡಿ ಅವನ ಕೈಲಿದೆ ಅಂಗೈಯಗಲದ ಈ ಬುಕ್ಕು ಮಾತ್ರ ನನ್ನ ಕೈಲಿದೆ ಸಾಲ ತೀರಸಲು ಆಗದೆ ಮುಂದೆ ಏನಾದರೂ ತಕರಾರಾದರೆ?
ಸಮಸ್ಯೆಯನ್ನು ತನ್ನ ಆಪ್ತರ ಮುಂದೆ ತೆರೆದಿಟ್ಟಿದ್ದ.

ಸಾಲ ತೀರದಿದ್ದರೆ ನೀವು ಗಾಡಿ ಹಿಡಕಂಡು ರ‍್ತೀರಿ. ಅವನೇನಾದರೂ ತಗಾದೆ ತೆಗೆದು ಡಾಕ್ಯುಮೆಂಟ್ ಜೊತೆ ಗಾಡಿ ಕಳವಾಗಿದೆ ಅಂತಾ ಪೋಲಿಸ್ಗೆ ಕಂಪ್ಲೆಂಟ್ ಮಾಡಿದರೆ ನೀವು ಒಳಗೆ ಹೋಗ್ತಿರಿ, ಅದಕ್ಕೆ ಪಾರಂ ನಂಬರ್ ೨೯ ಅಂತ ಫಾರಂ ಇರುತ್ತೆ. ಗಾಡಿ ಮಾರಿದ್ದೇನೆ ಅಂತಾ ಕೊಡುವಂತದ್ದು. ಅದಕ್ಕೆ ಅವನಿಂದ ಉಪಾಯದಲ್ಲಿ ಸೈನ್ ಹಾಕಿಸಿಕೊಂಡ್ ಬಿಡಿ, ಎಂಬ ಸಲಹೆ ಬಂದಿತ್ತು.
ಹಾಸನದಿಂದ ಆ ಫಾರಂ ತರಿಸಿಟ್ಟು ಸಮಯ ನೋಡಿ ಸಹಿ ಹಾಕಿಸಿಕೊಳ್ಳಬೇಕು ಅಂದುಕೊಂಡಿದ್ದ. ಇನ್ನೊಂದು, ಅವನನ್ನು ಯಾವುದೇ ಕಾರಣಕ್ಕೂ ಎದುರು ಹಾಕಿಕೊಳ್ಳಬಾರದು. ಔಷದಿ ಏನಾದರೂ ಬೇಕಾದರೆ ಇರುವ ಎಂಟು ಸಾವಿರದ ಜತೆಗೆ ಇನ್ನೊಂದೆರಡು ಸಾವಿರ ಸಾಲಕೊಟ್ಟು ಪಳಗಿಸಿಟ್ಟು ಕೊಳ್ಳುವುದು ಎಂದುಕೊಂಡಿದ್ದ.

ಕೆಂಗಣ್ಣಪ್ಪ ಹೋಗಲು ಚೊರೆ ಮಾಡುತ್ತಿರುವುದನ್ನು ಕಂಡು ‘ಇರ್ಲಿ ಹೋಗಿಬನ್ನಿ. ರೈತರನ್ನು ಹೆಚ್ಚು ಸತಾಯಿಸಬಾರದು’ ಎಂದ. ‘ಇನ್ನೂ ತಿಂಡಿ ಆಗಿಲ್ಲ ರಾಮಣ್ಣ’ ಎಂದು ಕೆಂಗಣ್ಣಪ್ಪ ಗೊಣಗಾಡಿಕೊಂಡ. ‘ಅಲ್ಲೇ ಕುಂಟ ಬೇರಿ ಹೋಟ್ಲಲ್ಲಿ ಒಂದೆರಡು ಪುಟ್ಟು ಮತ್ತೆ ಟೀ ಕೊಡ್ಸಿ ಕರ್ಕಂಡ್ಹೋಗ್ರಿ ಅತ್ಲಾಗಿ’ ಕತ್ತೆರಾಮ ಹೇಳಿದ.


‘ಇಷ್ಟಕ್ಕೇ ಗಾಬರಿಯಾಗ್ತಿರಲ್ರಿ ಕುಡಿ ಮಾತ್ರ ಬತ್ತಿದಂಗವೆ. ಅದೂ ಇವೆರಡೇ ಗಿಡದಲ್ಲಿ ಹುಳ ಹೊಡೆದಿರಬಹುದು ಅಂತಾ ಕಾಣುತ್ತೆ’ ಗಿಡದ ಕುಡಿಯನ್ನು ಅತ್ತಿತ್ತ ಹೊರಳಿಸಿ ನೋಡುತ್ತಾ ಹೇಳಿದ್ದ ಕೆಂಗಣ್ಣಪ್ಪ.
‘ಇವನ್ಯಾಕೋ ಗಂಭೀರವಾಗಿ ತೆಗೆದುಕೊಂಡಿಲ್ಲ, ಸುಮ್ನೆ ಏನೋ ಬಂದು ಹೇಳ್ತಿರಬಹುದೇ? ಇವನನ್ನು ನಚ್ಚಿ ಕೂರಬಹುದೇ?’ ಹೊನ್ನೇಗೌಡನ ಮನದಲ್ಲಿ ಸಣ್ಣ ಅನುಮಾನ ಮೂಡಿತು.
ಬತ್ತಿದ ಗಿಡವನ್ನೇ ಕಿತ್ತು ಕೊಂಡು ಹೋಗಿ ಹಾಸನದಲ್ಲಿ ಆಗ್ರೋ ಕೇಂದ್ರದಲ್ಲಿ ತೋರಿಸಿ ಔಷಧಿ ತಂದರೆ ಹೇಗೆ? ಎಂದು ಯೋಚಿಸಿದ. ಸಾಲಮಾಡಿ ಇದ್ದ ಬದ್ದ ದುಡ್ಡನ್ನೆಲ್ಲಾ ಗಿಡಗಳ ಮೇಲೇ ಸುರಿದಾಗಿದೆ ಈಗ ಬೈಕ್ ಪೆಟ್ರೋಲಿಗೂ ದುಡ್ಡಿಲ್ಲವಲ್ಲ, ಇನ್ನು ಹಾಸನಕ್ಕೆ ಹೋಗಿ ಬರುವ ದಾರಿ ಹೇಗೆ?
ಯೋಚಿಸುತ್ತಾ ನಿಂತಿದ್ದವನನ್ನು ಕೆಂಗಣ್ಣಪ್ಪ ಎಚ್ಚರಿಸಿದ ‘ನಡೀರಿ ಹೊನ್ನೇಗೌಡ್ರೆ ಹೋಗಣ….. ಇಷ್ಟೋಂದ್ ತಲೆ ಕೆಡಿಸಿಕೊಂಡ್ರೆ ಹೆಂಗೆ? ರಾಮಣ್ಣನ ಅಂಗಡೀಲಿ ಒಳ್ಳೆ ಔಷದಿ ಕೊಡುಸ್ತೀನಿ ಸ್ಟಾçಂಗ್ ಡೋಸ್ ಮಾಡಿ ಇವತ್ತೇ ಹೊಡೆಸಿಬಿಡಿ’ ಎಂದು ಸಲಹೆ ಮಾಡಿದ.
ಅಲ್ಲಿಂದ ಹೊರಟು, ಹೊನ್ನೇಗೌಡನನ್ನು ಕತ್ತೆರಾಮನ ಎದುರಿಗೆ ನಿಲ್ಲಿಸಿದ ಕೆಂಗಣ್ಣಪ್ಪ ‘ ಒಂದೆರಡು ಗಿಡ ಬತ್ತಿಗಂಡಿದ್ದಕ್ಕೇ ಸುಮ್ನೆ ಗಾಬರಿಯಾಗಿಬಿಟ್ಟಿದ್ದಾರೆ. ನಿಮ್ಮಂಗಡಿಲೇ ಒಳ್ಳೊಳ್ಳೆ ಔಷದಿ ಇದೆಯಲ್ಲ, ಒಂದ್ ಸಲ ಹೊಡಿಲಿ. ಎಲ್ಲಿ ಒಂದ್ ಚೀಟಿ ಕೊಡಿ ಎಂದು ಪಡೆದುಕೊಂಡು ಔಷದಿ ಗುರುತು ಹಾಕತೊಡಗಿದ.
ಕಾಂಡ ಕೊರಕದ ಔಷದಿ
ಮುದುರುಗುಡಿಯ ಔಷದಿ
ಎರಡು ಎಕರೆ ಜಾಗಕ್ಕೆ.
ಎಂದು ಬರೆದ ಚೀಟಿಯನ್ನು ಕತ್ತೆ ರಾಮನ ಕೈಗೆ ಕೊಟ್ಟು ‘ಸಂಜೆ ಸಿಕ್ತೀನಿ ರಾಮಣ್ಣ’ ಎನ್ನುತ್ತಾ ಹೊರಟು ಹೋದ. ಹುಡುಗ ಔಷಧಿಗಳನ್ನು ತಂದು ರಾಮನ ಮುಂದೆ ಜೋಡಿಸಿದ. ಪ್ರತಿ ಬಾಟಲಿಯನ್ನೂ ತಿರುಗಿಸಿ ತಿರುಗಿಸಿ ನೋಡಿದ ರಾಮ ಅದೇ ಚೀಟಿಯ ಮೇಲೆ ಬೆಲೆ ಬರೆದು ‘ಒಟ್ಟು ಎರಡು ಸಾವಿರದ ಇನ್ನೂರು’ ಎನ್ನುತ್ತಾ ಹೊನ್ನೇಗೌಡನ ಮುಖ ನೋಡಿದ
ಹೊನ್ನೇಗೌಡನಿಗೆ ಅರ್ಥವಾಯಿತು.

‘ಈಗಿಲ್ಲ ರಾಮಣ್ಣ ಔಷದಿ ಕೊಟ್ಟಿರಿ ನಾಳೆ ನಾಡಿದ್ದರಲ್ಲಿ ಹೊಂದಿಸಿ ತಂದು ಕೊಡ್ತೀನಿ’ ಎಂದ
‘ಒಳ್ಳೆಯ ಕತೆ ಆಯ್ತಲ್ಲ…. ಕೆಂಚಪ್ಪಣ್ಣ ಬನ್ನಿ ಇಲ್ಲಿ’ ಕತ್ತೆ ರಾಮ ಕರೆಯುವುದನ್ನೇ ಕಾಯುತ್ತಿದ್ದನೇನೋ ಎಂಬಂತೆ ಕೈಯಲ್ಲಿ ತೆರೆದ ರೆಜಿಸ್ಟರ್ ಹಿಡಿದು ಕೆಂಚಪ್ಪ ಹಾಜರಾದ,
‘ಮತ್ತೆ ಎರಡು ಸಾವಿರದ ಇನ್ನೂರು ಸಾಲ ಬೇಕು ಅಂತಾರಲ್ಲಾ!’ ಎನ್ನುತ್ತಾ ರಾಮ ತನ್ನ ಸಹಾಯಕನ ಮುಖವನ್ನು ಅರ್ಥ ಗಂರ್ಭಿತವಾಗಿ ನೋಡಿದ,
‘ಅದೆಂಗೆ ಆಗುತ್ತೆ ರಾಮಣ್ಣ, ಬೈಕ್ ಅವ್ರ ಕೈಲಿ ಐತೆ, ಇಷ್ಟಗಲ ಬುಕ್ಕು ನಮ್ಮ ಕೈಲಿ ಐತೆ, ಅದೇನ್ ಬಂಗಾರವಾ?…… ಈಗ್ ಕೊಟ್ಟಿದ್ದೇ ನಮ್ಮ ರೂಲ್ಸಿಗೆ ವಿರುದ್ಧ…… ಹಳೇ ಸಾಲದ ಬಡ್ಡಿ ಒಂದ್ ತಿಂಗಳದ್ದು ನಾನೂರು ಬಾಕಿ ನಿಲ್ಸಿದ್ದಾರೆ. ಇನ್ನೂ ಕೊಡು ಅಂದ್ರೆ ಹೆಂಗೆ?’ ಕೆಂಚಪ್ಪ ಚನ್ನಾಗಿಯೇ ಪಟ್ಟು ಕಲಿತಿದ್ದಾನೆ ಎಂದು ಕತ್ತೆರಾಮನಿಗೆ ಹೆಮ್ಮೆಯಾಯಿತು.
‘ಇಲ್ಲ ಬಿಡಾ ಮಾರಯ ಎಷ್ಟಾದರೂ ರೈತರು. ಬೆಳೆ ಬೆಳಕೊಳ್ಲಿ, ಅವ್ರು ಚನ್ನಾಗಿದ್ರೆ ನಾವು’ ರೈತ ಕುಲವನ್ನೇ ಕೊಂಡಾಡುವವನಂತೆ ಹೇಳಿದ ರಾಮ. ನಿನಗೇನು ಬಂದೋಬಸ್ತ್ ಮಾಡಿಕೋ. ನಾನೇನ್ ಬ್ಯಾಡಾ ಅಂದ್ನಾ’ ಎಂದ.
ಇನ್ನೇನಿಲ್ಲ ರಾಮಣ್ಣ ಹಾಸನದಲ್ಲಿ ಇಪ್ಪತ್ತೊಂಬತ್ನೇ ಫಾರಮ್ಮು ಅಂತಾ ಸಿಕ್ಕುತಂತೆ ಅದೊಂದನ್ನು ತರಿಸಿ ಸೈನ್ ಹಾಕ್ಸಿ ಕೊಡಿ ಅಷ್ಟೇ’ ಕೆಂಚಪ್ಪ ತನ್ನ ಧಣಿಗೆ ಅನುಕೂಲವಾಗುವಂತೆ ಮಾತಾಡಿದ.
‘ಗೊತ್ತಾಯ್ತಲ್ಲ ಹೊನ್ನೇಗೌಡ್ರೆ ಅವ್ನ ಫೈನಾನ್ಸ್ ರೂಲ್ಸ್ ಅವ್ನು ಹೇಳಿದ್ದಾನೆ. ಈ ವಾರದಲ್ಲಿ ಫಾರಂ ತರಿಸಿ ಇಟ್ಟಿರ‍್ತಿನಿ’ ಬಂದ್ ಸೈನ್ ಹಾಕಿ.’ ಕತ್ತೆರಾಮ ಮೊದಲೇ ಹಾಕಿಕೊಂಡಿದ್ದ ಕುಣಿಕೆಯನ್ನು ಬಿಗಿಮಾಡಿದ.

ಇಷ್ಟೆಲ್ಲಾ ಕೇಳಿ ತಿಳಿದ ಚಿನ್ನಪ್ಪ ಉಳಿದಿದ್ದ ಬ್ರಾಂದಿಯನ್ನು ನೇರವಾಗಿ ಗಂಟಲಿಗೇ ಸುರುವಿಕೊಂಡ. ಖಾಲಿಯಾದ ಗ್ಲಾಸುಗಳಿಗೆ ಬ್ರಾಂದಿ ಸುರುವಿಕೊಟ್ಟ ನಾಗರಾಜ ‘ಇಷ್ಟೆಲ್ಲಾ ಆದ ಮೇಲೂ ಏನಾಯ್ತು ಕೇಳು. ಅವರೆಲ್ಲಾ ಮಾಡಿರುವ ಅನಾಹುತ ನೋಡಿದ್ರೆ ಎಂತಹವರಿಗೂ ಕರುಳು ಕಿತ್ತುಬರುತ್ತೆ. ನಾನೂ ಇವನ ತೋಟಕ್ಕೆ ಹೋಗಿ ನೋಡಿದ್ನಲ್ಲ. ಇಡೀ ತೋಟದ ಮುಕ್ಕಾಲುವಾಸಿ ಗಿಡಗಳೆಲ್ಲಾ ಯುದ್ಧದಲ್ಲಿ ಸೋತು ಬಂದ ಸೈನಿಕರು ತಮ್ಮ ಮಹಾರಾಜರ ಮುಂದೆ ತಲೆ ತಗ್ಗಿಸಿ ನಿಲ್ಲುವಂತೆ ನಿಂತು ಬಿಟ್ಟಿವೆ’ ನಾಗರಾಜನ ಮಾತು ಕೇಳಿ ಚಿನ್ನಪ್ಪನಿಗೆ ಅಳುವೇ ಬಂದು ಬಿಟ್ಟಿತು, ‘ಹಂಗಾದ್ರೆ ಮುಂದೇನು ಮಾಡದು?’ ಎಂದ.
‘ಏನಿಲ್ಲ ಹೊನ್ನೇಗೌಡ, ನೀನೀಗ ಧೈರ್ಯ ತಗಳ್ಬೇಕು ನಾನು ಒಂದು ಮೂರು ಸಾವಿರ ಈಗ್ಲೆ ಪ್ರಭಾಕರನ ಹತ್ರ ಇಸ್ಕೊಡ್ತೀನಿ. ನೀನು ಬೆಳಗ್ಗೆ ಬೇಗ ಎದ್ದು ಫ್ರೆಷ್ ಆಗಿ ಎರಡು ಗಿಡ ಕಿತ್ಕಂಡು ಹಾಸನಕ್ಕೆ ಹೋಗು. ಕೃಷಿ ಇಲಾಖೆ ಪಕ್ಕ ಆಗ್ರೋ ಕೇಂದ್ರ ಇದೆಯಲ್ಲಾ ಅದರ ಓನರ್‌ನ ಭೇಟಿಮಾಡು, ಗಿಡ ತರ‍್ಸು…. ಅವ್ರೂ ಕೃಷಿ ವಿಜ್ಞಾನ ಓದಿ ಪಾಸಾಗಿದ್ದಾರೆ….. ಏನಾದ್ರೂ ತೋಟ ಉಳಿಸಿಕೊಳ್ಳುವ ದಾರಿ ಹೇಳಬಹುದು’ ಎನ್ನುತ್ತಾ ನಾಗರಾಜ ಹೊನ್ನೇಗೌಡನ ಬೆನ್ನು ತಟ್ಟಿದ.

***

ಅಧ್ಯಾಯ ೧೯: ಹೇಲು ತಿನ್ನುವ ಕೆಲಸ

ಹೊನ್ನೇಗೌಡ ಆಗ್ರೋ ಕೇಂದ್ರ ತಲುಪಿದಾಗ, ಅದರ ಮಾಲೀಕ ಯಾರೋ ಕೃಷಿ ಅಧಿಕಾರಿಯೊಂದಿಗೆ ಚರ್ಚಿಸುತ್ತಾ ಕುಳಿತಿದ್ದ, ಯಾವುದೋ ಗಂಭೀರ ಚರ್ಚೆಯಲ್ಲಿದ್ದುದರಿಂದ ಸಹಾಯಕನನ್ನು ಕರೆದು ಹೊನ್ನೇಗೌಡನ ಕಡೆ ಕೈತೋರಿ ‘ಇವರಿಗೇನು ಬೇಕು ಕೇಳಪ್ಪ’ ಎಂದ.
ಕದಲದೇ ನಿಂತುಕೊಂಡ ಹೊನ್ನೇಗೌಡ.
‘ನನ್ನ ಹೆಸರು ಹೊನ್ನೇಗೌಡ ಅಂತ ದೊಡ್ಡೂರಿಂದ ಬಂದಿದ್ದೀನಿ. ನಿಮ್ಮ ಹತ್ರಲೇ ಸ್ವಲ್ಪ ಮಾತಾಡ್ಬೇಕಾಗಿತ್ತು’ ಎಂದ, ‘ಹೌದಾ? ಬನ್ನಿ ಬನ್ನಿ, ಈ ಕಡೆ ಕೂತುಕೊಳ್ಳಿ’ ಎದುರಿಗಿದ್ದ ಕುರ್ಚಿ ತೋರಿದ ಅಂಗಡಿ ಮಾಲೀಕ.
‘ಎಕ್ಸ್ಕ್ಯುಸ್ ಮಿ, ಒಂದ್ನಿಮಿಷ ಇವರನ್ನು ಅಟೆಂಡ್ ಮಾಡಿ ಬಿಡ್ತೀನಿ’ ಎಂದು ಅಧಿಕಾರಿಗೆ ಹೇಳಿ ಎದುರಿಗೆ ಕುಳಿತ ಹೊನ್ನೇಗೌಡನಿಗೆ ‘ಹಾಂ ಈಗ ಹೇಳಿ’ ಎಂದ.
‘ಉದ್ದನೆಯ ಪ್ಲಾಸ್ಟಿಕ್ ಚೀಲದಿಂದ ಗಿಡ ಹೊರಗೆಳೆದು ಮಾಲೀಕನ ಕೈಗೆ ಕೊಟ್ಟ, ಗಿಡವನ್ನು ಪರಿಶೀಲಿಸಿದ ಆತ ಹುಬ್ಬುಗಳನ್ನ ಹತ್ತಿರ ತಂದು ‘ಛೇ ಛೆೆÃ!’ ಎನ್ನುತ್ತಾ ಆ ಗಿಡಗಳನ್ನು ಎದುರಿದ್ದ ಅಧಿಕಾರಿಗೆ ದಾಟಿಸಿದ.
ಆ ಗಿಡಗಳ ಸ್ಥಿತಿಯನ್ನು ನೋಡಿಯೇ ಅವರಿಬ್ಬರೂ ರೈತನ ಸ್ಥಿತಿಯನ್ನು ಊಹಿಸಿದರು.

‘ಎಷ್ಟ್ ದಿನ ಆಯ್ತು ರೋಗ ಬಂದು?’ ಮಾಲೀಕ ಮುದುರಿ ಕುಳಿತ. ಹೊನ್ನೇಗೌಡನಿಗೆ ಪ್ರಶ್ನೆ ಇಟ್ಟ, ಹೊನ್ನೇಗೌಡ ಹೇಳಲು ತಡವರಿಸುತ್ತಿರುವಷ್ಟರಲ್ಲೇ ‘ಒಂದೆರಡು ಗಿಡಕ್ಕೆ ರೋಗ ಬಿದ್ದ ಕೂಡಲೇ ಬರೋದಲ್ವೇನ್ರೀ?…… ಔಷಧಿ ಏನೂ ಹೊಡೆದಿಲ್ವ?’ ಎಂದ.
ಅಧಿಕಾರಿಯು ‘ವೈರಸ್ ಅಟ್ಯಾಕ್, ಲೇಟ್ ಸ್ಟೇಜ್’ ಎನ್ನುತ್ತಾ ಗಿಡಗಳನ್ನು ಅಂಗಡಿ ಮಾಲೀಕನ ಎದುರಿಗೆ ಇಟ್ಟ.
‘ಇಲ್ಲ ಸಾರ್ ರೋಗ ಬಿದ್ದ ಕೂಡಲೇ ಔಷಧಿ ಹೊಡೆದಿದೆ’್ದ ಎನ್ನುತ್ತಾ ಜೇಬಿನಲ್ಲಿದ್ದ ಕತ್ತೆರಾಮನ ಅಂಗಡಿಯ ಚೀಟಿ ತೆಗೆದು ತೋರಿಸಿದ.
ಚೀಟಿಯನ್ನು ಸಂಪೂರ್ಣ ಓದಿಕೊಂಡ ಆತನಿಗೆ ಆಘಾತವಾದಂತಾಯಿತು. ಅದನ್ನು ಅಧಿಕಾರಿಯೆದುರಿಗೆ ಇಟ್ಟು ‘ಎಂತಾ ಮನೆ ಹಾಳು ಜನಾರೀ ಇವ್ರು! ಕೃಷಿ ಲಾಭದಾಯಕವಲ್ಲದ ಇವತ್ತಿನ ದಿನಮಾನದಲ್ಲಿ ಮೊದಲೇ ಕಂಗಾಲಾಗಿರುವ ರೈತರನ್ನು ಮತ್ತೆ ಮೇಲೇಳಲಾರದ ಪ್ರಪಾತಕ್ಕೆ ತಳ್ಳುವ ಕೆಲ್ಸ ಅಲ್ವಾ ಇದು’ ಎಂದು ಅಸಮಾದಾನ ವ್ಯಕ್ತಪಡಿಸಿದ….

ಅಧಿಕಾರಿ ಚೀಟಿಯನ್ನು ಗಮನಿಸುತ್ತಾ ‘ನಿಮಗೆ ಯರ‍್ರೀ ಈ ಸಲಹೆ ಕೊಟ್ಟವ್ರು?’ ಅಂಗಡಿಯವ್ರು ಲಾಭದಾಸೆಗೆ ಮೋಸ ಮಾಡ್ತಾರೆ….. ಅಲ್ಲಿ ಕೃಷಿ ಸಹಾಯಕರು ಯಾರೂ ಇಲ್ವ ರೈತರಿಗೆ ಸಲಹೆ ಕೊಡೋಕೆ?’
‘ಇದ್ದಾರೆ ಸಾರ್, ಅವರು, ಔµಧಿ ಅಂಗಡಿಯವರೂ ಸೇರಿಯೇ ಈ ಔಷಧಿಯನ್ನು ಹೊಡೆಯಲು ಹೇಳಿದ್ದು’ ಪರಿಸ್ಥಿತಿಗೆ ಸಿಲುಕಿ ಅವರನ್ನು ನಂಬಿ ಮೋಸಹೋಗಿದ್ದು ಅರಿವಾಗಿ ಅವನಿಗೆ ನಾಚಿಕೆಯೆನಿಸಿತು.
‘ಅವರವರೇ ಷಾಮೀಲಾಗಿದ್ದಾರೆ ಕಂಣ್ರೀ…… ಎಂತಾ ದುರಂತರೀ ನಮ್ಮ ದೇಶದ ರೈತರದ್ದು’ ಅಂಗಡಿ ಮಾಲಿಕ ಅಧಿಕಾರಿಯ ಕಡೆ ತಿರುಗಿ ಹೇಳಿದ.
ಈ ಸಂಭಾಷಣೆಯಿಂದ ದೊಡ್ಡೂರಿನಿಂದ ಹೊತ್ತು ಬಂದ್ದಿದ್ದ ಸಣ್ಣ ಆಸೆಯೂ ಕಮರತೊಡಗಿತು.
‘ಹಾಗಾದ್ರೆ ಏನ್ ಮಾಡದು ಸಾರ್ ಈಗ?’ ಹೊನ್ನೇಗೌಡ ಅಸಹಾಯಕನಾಗಿ ಕೇಳಿದ.
ಗಿಡವನ್ನು ಕೈಲಿ ಹಿಡಿದ ಮಾಲೀಕ ಮೂವರ ಮುಖದ ಮುಂದೆಯೂ ಬರುವಂತೆ ಮಧ್ಯಕ್ಕೆ ತಂದು ‘ಏನ್ಮಾಡದು ಅಂತ ಹೇಳಕಾಗುತ್ತೆ ‘ ಎಂದ.

ಆ ಗಿಡವನ್ನು ತೆಗೆದು ಕಸದ ಬುಟ್ಟಿಗೆ ಎಸೆಯುತ್ತಾ ‘ಸತ್ಹೋದವರನ್ನ ಎಲ್ಲಿಯಾದರೂ ಬದುಕಿಸುವುದಕ್ಕೆ ಆಗುತ್ತಾ’ ಎಂದ.
ಆಗ್ರೋ ಕೇಂದ್ರದಿಂದ ಹೊರಬಂದ ಹೊನ್ನೇಗೌಡನಿಗೆ ತಲೆ ಸುತ್ತಿ ಬಂದಂತೆನಿಸಿತು, ಇನ್ನೇನು ಬಿದ್ದೇ ಹೋಗುತ್ತೇನೆ ಎಂದು ಕೊಂಡು ಅಂಗಡಿಯ ಹೊರಗೋಡೆಗೆ ಒರಗಿನಿಂತ.
ಸಾಲಪಡೆದ ಪಿ.ಎಲ್.ಡಿ ಬ್ಯಾಂಕ್, ಮುತ್ತೂಟ್ ಫೈನಾನ್ಸ್, ಬೈಕ್ ಅಡವಿಟ್ಟ ಕತ್ತೆ ಫೈನಾನ್ಸ್ , ಜತೆಗೆ ಸಾಲದವರ ತಿಜೋರಿ ಸೇರಿದ್ದ ಹೆಂಡತಿಯ ಬಂಗಾರ, ಇದನ್ನೆಲ್ಲಾ ಸಂಬಾಳಿಸಲು ನೆರವಾಗಿ ಕೈ ಹಿಡಿಯಬಹುದಾಗಿದ್ದ, ಆದರೆ ಈಗ ಸೊರಗಿ ನಿಂತ ಟೊಮೆಟೋ ತೋಟ ಎಲ್ಲಾ ಮನಸ್ಸಿನಲ್ಲಿ ಸುಳಿದು ಹೋಗಿ ನಿರಾಸೆ ಕವಿಯ ತೊಡಗಿತು.
ಸುಧಾರಿಸಿಕೊಂಡು ಎದುರು ಅಂಗಡಿಗೆ ನುಗ್ಗಿದ ಅವನು ‘ಕೋಸಿಗೆ ಹೊಡೆಯಲು ಕ್ರಿಮಿನಾಶಕ ಕೊಡಿ’ ಎಂದ.


ಮೊದಲೇ ಬಂದು ಹೊನ್ನೇಗೌಡನಿಗಾಗಿ ದೊಡ್ಡೂರಿನ ಮಾಮೂಲಿ ಕೋಣೆಯಲ್ಲಿ ಕಾಯುತ್ತಿದ್ದ ಗೆಳೆಯರಿಗೆ ಹೊನ್ನೇಗೌಡ ಬೆಳಗ್ಗೆ ಹೊರಟಾಗಿನಿಂದ ಆಗ್ರೋಕೇಂದ್ರದ ಹೊರಬರುವವರೆಗೂ ನಡೆದದ್ದನ್ನು ಚುಟುಕಾಗಿ ಹೇಳಿ ಮುಗಿಸಿದ. ಅವನ ಮಾತುಗಳು ನಿರಾಸೆಯಲ್ಲಿ ಮುಳುಗೆದ್ದು ಬಂದಂತಿದ್ದವು.
ಪ್ರಭಾಕರ ಮಾಮೂಲಿನಂತೆ ಅವರ ಬ್ರಾಂಡ್ ತಂದಿಟ್ಟು ಹೋದ. ಅದುವರೆಗೂ ಎದೆಗವಚಿ ಹಿಡಿದುಕೊಂಡಿದ್ದ ಪ್ಯಾಕೆಟ್ಟನ್ನು ಹೊನ್ನೇಗೌಡ ಜೋಪಾನವಾಗಿ ತನ್ನ ಕಾಲ ಬಳಿ ಇರಿಸಿಕೊಂಡ. ನಾಗರಾಜ ಅದನ್ನು ಗಮನಿಸಿದ. ಆದರೆ ಅದರೊಳಗಿರುವುದೇನು ಎಂಬ ಕುತೂಹಲ ತಣಿಯಲಿಲ್ಲ.
ಹೊನ್ನೇಗೌಡ ಎಂದಿನಂತಿಲ್ಲ ಎಂಬುದು ಚಿನ್ನಪ್ಪನಿಗೂ ಅರಿವಿಗೆ ಬಂದಿತ್ತು. ಮದ್ಯಪಾನ ಮಾಡುವಾಗಿನ ನಿಧಾನಗತಿಯ ಬದಲು ಆವೇಶಭರಿತ ವೇಗ ಅವನಲ್ಲಿ ಎದ್ದು ಕಾಣುತ್ತಿತ್ತು.
‘ಈವತ್ತು ನನ್ನದು ಪಾರ್ಟಿ! ವಾರಕ್ಕೊಮ್ಮೆ ಸೇರಿ ಗುಟುಕರಿಸುವುದೇ ಆಯಿತು. ನೀವಿಬ್ಬರೂ ಈ ದಿನ ಸಾಕು ಅನ್ನುವವರೆಗೂ ಕುಡಿಯಬೇಕು, ತಿನ್ನದಿಕ್ಕೆ ಪೋರ್ಕ್ ತರಿಸೋಣ ಇಲ್ಲಿಗೇ’ ಎನ್ನುತ್ತಾ ಪ್ರಭಾಕರನಿಗೆ ಒಂದು ಪುಲ್ ಬಾಟ್ಲಿ ತಂದಿಡಲು ಹೇಳಿದ. ಆ ಸ್ನೇಹಿತರ ಶಿಸ್ತನ್ನು ಗಮನಿಸುತ್ತಾ ಬಂದಿದ್ದ ಪ್ರಭಾಕರನಿಗೂ ಅಚ್ಚರಿಯಾಯಿತು. ಆದರೂ ಸುಮ್ಮನೆ ತಂದಿಟ್ಟು ಹೋದ.

ಮಾಮೂಲಿನ ಮೊದಲ ಅರ್ಧಬಾಟ್ಲಿ ಮುಗಿಯುತ್ತಲೇ ಹೊನ್ನೇಗೌಡ ಮೂತ್ರ ಮಾಡುವ ಸಲುವಾಗಿ ಹೊರಹೋಗಲು ಎದ್ದ. ನಾಗರಾಜ, ಅವನನ್ನು ಹಿಂಬಾಲಿಸಿ ಹೋಗಿ ಬರುವಂತೆ ಚಿನ್ನಪ್ಪನಿಗೆ ಸಂಜ್ಞೆ ಮಾಡಿದ.
ಅವರು ಹೊರ ಹೋಗುತ್ತಲೇ ಹೊನ್ನೇಗೌಡನ ಕುರ್ಚಿಯ ಬುಡದಲ್ಲಿ ಇಟ್ಟಿದ್ದ ಕಪ್ಪು ಪ್ಲಾಸ್ಟಿಕ್ ಕವರ್ ತೆಗೆದು ನೋಡಿದ. ಅವನ ಊಹೆ ನಿಜವಾಗಿತ್ತು. ಇದ್ದದ್ದು ಗೇಣುದ್ದದ ಕ್ರಿಮಿನಾಶಕದ ಒಂದು ಬಾಟಲಿ.
ಎಲ್ಲರಿಗಿಂತ ಸ್ವಲ್ಪ ಹೆಚ್ಚೇ ಕುಡಿದಿದ್ದ ಹೊನ್ನೇಗೌಡ ಇನ್ನೊಂದು ಪೆಗ್ ಕುಡಿಯುವಷ್ಟರಲ್ಲಿ ಮಾತು ತೊದಲುವಂತಾದ. ಅವರಿಬ್ಬರೂ ಎಂದಿನ ಹದದಲ್ಲೇ ಇದ್ದರು.
ತೂರಾಡುತ್ತಲೇ ಎದ್ದ ಹೊನ್ನೇಗೌಡ ಕಾಲು ಬುಡದ ಕಪ್ಪು ಪ್ಲಾಸ್ಟಿಕ್ ಕವರನ್ನು ಎದೆಗವಚಿಕೊಂಡು ಟೇಬಲ್ ಕಡೆ ಕೈತೋರುತ್ತಾ ‘ಬೆಸ್ಟ್ ಆಪ್ ಲಕ್ ಪ್ರೆಂಡ್ಸ್! ನೀವು ಮುಂದುವರಿಸಿ ನನಗೆ ಸ್ವಲ್ಪ ಅರ್ಜೆಂಟ್ ಕೆಲಸ ಇದೆ’ ಎನ್ನುತ್ತಾ ಆಟೋ ಹತ್ತಿ ತನ್ನ ಮನೆಯಿರುವ ದೇವರಬನದ ಕಡೆ ಹೊರಟು ಹೋದ.
ಅವನು ಮಾಡಲು ನಿರ್ಧರಿಸಿರುವ ‘ಅರ್ಜೆಂಟ್ ಕೆಲಸ’ ನಾಗರಾಜನಿಗೆ ತಿಳಿದು ಹೋಗಿತ್ತು, ನಸುನಗೆಯೊಂದು ಅವನ ಮುಖದ ಮೇಲೆ ಸುಳಿದು ಹೋಯಿತು.

ಅವನನ್ನು ಬೀಳ್ಕೊಟ್ಟು ಮತ್ತೆ ಬಂದು ಕುಳಿತ ಚಿನ್ನಪ್ಪನಿಗೆ ಬಾಟಲಿಯಲ್ಲಿ ಕಾಲು ಭಾಗ ಮಾತ್ರ ಬ್ರಾಂದಿ ಉಳಿದಿರುವುದು ಕಂಡು ಅಚ್ಚರಿಯಾಯಿತು.
‘ಇಷ್ಟೊಂದು ಖಾಲಿಯಾಯ್ತಾ?’ ಎಂದ
‘ಖಾಲಿಯಾಗದೇ ಏನಾಗುತ್ತೆ, ನಿನ್ನ ಸ್ನೇಹಿತ ಯಾವ ಸ್ಥಿತಿಲಿ ಹೋದ ನೋಡಿದೆಯಾ’ ನಾಗರಾಜ ನಸುನಗುತ್ತಲೇ ಉತ್ತರಿಸಿದ.
‘ಅವ್ನೇನೋ ಒಂದ್ ಥರಾ ಇದ್ದ. ಯಾವತ್ತೂ ಇಷ್ಟು ಕುಡ್ದವ್ನಲ್ಲ. ಅವನನ್ನ ಒಬ್ಬನನ್ನೇ ಕಳಿಸಬಾರದಾಗಿತ್ತು. ಇಷ್ಟೆಲ್ಲಾ ಪೆಟ್ಟು ತಿಂದಿರ ಅವ್ನು ಏನಾದ್ರೂ ಮಾಡಿಕೊಂಡು ಬಿಟ್ರೆ ಅಂತ ಹೆದ್ರಿಕೆ ಆಗುತ್ತೆ. ನಾವೇ ಜತೆ ಹೋಗಿ ಮನೆಗೆ ಬಿಟ್ಟು ಬರಬೇಕಾಗಿತ್ತು’ ಚಿನ್ನಪ್ಪ ಆತಂಕದಿಂದ ಹೇಳಿದ.
‘ರ‍್ಲಿ ಬಿಡ ಏನೂ ಹೆದರಬೇಡ ಇನ್ನೊಂದ್ ಸ್ವಲ್ಪ ಹೊತ್ತಿಗೆ ಅವನೇ ಇಲ್ಲಿಗೆ ರ‍್ತಾನೆ. ಮನೆಯವ್ರೂ ಅವನ ಜೊತೆ ರ‍್ತಾರೆ…. ಹಂಗೇ ಏನ್ ನಡೆಯುತ್ತೆ ಅಂತ ನೋಡ್ತಾ ಅಂಗಡಿ ಬೀದಿಲಿ ತಿರುಗಾಡ್ತಾ ಇರಾನ! ಉಳಿದಿದ್ದನ್ನ ಪ್ಯಾಕ್ ಮಾಡಿ ತೆಗೆದು ಇಡಕೆ ಹೇಳು ಪ್ರಭಾಕರನಿಗೆ’ ಲಹರಿಯಲ್ಲಿದ್ದ ನಾಗರಾಜ ಎದುರಿಗೆ ಸಿಕ್ಕವರಿಗೆ ‘ಹಾಯ್’ ಹೇಳುತ್ತಾ ಬೀದಿಗೆ ಇಳಿದ. ಕಕ್ಕಾಬಿಕ್ಕಿಯಾದ ಚಿನ್ನಪ್ಪ ಅವನನ್ನು ಹಿಂಬಾಲಿಸಿದ.

ಅವರು ಅಂಗಡಿ ಬೀದಿಗೆ ಇಳಿದು ಅರ್ಧಗಂಟೆಯಾಗುವಷ್ಟರಲ್ಲಿ ನಾಗರಾಜನ ಮೊಬೈಲ್ ಅರಚ ತೊಡಗಿತು. ಜೇಬಿನಿಂದ ಹೊರತೆಗೆದು ನೋಡಿ ಚಿನ್ನಪ್ಪನ ಕೈಗೆ ಕೊಟ್ಟ.
ದೇವರಬನದ ಹೊನ್ನೇಗೌಡ ವಿಷ ಕುಡಿದಿದ್ದಾನಂತೆ!
ಸುದ್ದಿ ಹರಡತೊಡಗಿದಂತೆ ಮಂಕಾಗಿದ್ದ ದೊಡ್ಡೂರಿನ ಅಂಗಡಿ ಬೀದಿಯಲ್ಲಿ ಸಂಚಲನ ಶುರುವಾಯಿತು ಕೆಲವರಿಗೆ ಕುತೂಹಲ, ಕೆಲವರಿಗೆ ಆತಂಕ, ಇನ್ನು ಕೆಲವರಿಗೆ ಕನಿಕರ, ಬೈಕುಗಳು ಗುಡುಗುತ್ತಾ ದೇವರಬನದ ದಾರಿ ಹಿಡಿದವು. ಬೈಕಿಲ್ಲದವರು ಕಾಲ್ನಡಿಗೆಯಲ್ಲಿ ಹೊರಟರು, ಪ್ರಗತಿಪರ ಯುವಕರ ಗುಂಪು ಆಟೋ ಮಾಡಿಕೊಂಡು ಹೊರಟಿತು. ಜನರ ದೃಷ್ಟಿಯಲ್ಲಿ ಧೂರ್ತನೆಂದು ಹೆಸರಾಗಿದ್ದ ಕತ್ತೆರಾಮನ ಜೀಪು ಸಹ ದೇವರಬನದ ದಾರಿ ಹಿಡಿದಾಗ ಜನ ಅಚ್ಛರಿಗೊಂಡರು.
ಇಷ್ಟೆಲ್ಲಾ ಗಡಿಬಿಡಿಯ ನಡುವೆ ನಾಗರಾಜ ಏನೂ ನಡೆದೇ ಇಲ್ಲ ಎಂಬಂತೆ ನಿರುಮ್ಮಳನಾಗಿ ನಿಂತಿದ್ದು ಚಿನ್ನಪ್ಪನಿಗೆ ಹಿಡಿಸಲಿಲ್ಲ, ‘ಪಾಪದ ಹೊನ್ನೇಗೌಡ, ನಾವು ಅವನ ಜೊತೆಯಲ್ಲೇ ಹೋಗಿ ಬಿಟ್ಟುಬರಬೇಕಾಗಿತ್ತು ಈಗಲಾದರೂ ಹೋಗಾನ ನಡಿ’ ಎಂದ
‘ನಡೆಯದು ನಡೆದು ಹೋಗಿದೆ, ನೀನ್ಯಾಕೆ ತಲೆ ಚಚ್ಚಿಕೊಳ್ತೀಯ. ಇನ್ನೇನು ಅವನನ್ನು ಇಲ್ಲಿಗೇ ಕರೆತರುತ್ತಾರೆ ತಡಿ’ ನಾಗರಾಜ ನಸುನಗುತ್ತಾ ಚಿನ್ನಪ್ಪನ ಹೆಗಲ ಮೇಲೆ ಕೈಹಾಕಿದ.


ಮನೆಯ ಬಳಿ ಹೊನ್ನೇಗೌಡ ಒಂದಿಷ್ಟೂ ತಡ ಮಾಡಲಿಲ್ಲ, ಮೊದಲೇ ನಿರ್ಧರಿಸಿ ಆಗಿತ್ತಲ್ಲ! ಮನೆಯ ಹಿಂಬದಿಯ ಒಪ್ಪಾರಿಗೆ ಹೋಗಿ ಪ್ಲಾಸ್ಟಿಕ್ ಕವರಿನಿಂದ ಬಾಟಲಿ ಹೊರತೆಗೆದ. ಕಣ್ಮುಚ್ಚಿ ಒಂದೇ ಬಾರಿಗೆ ಅದರಲ್ಲಿದ್ದ ದ್ರವವನ್ನು ಒಂದಿಷ್ಟೂ ಬಿಡದೆ ನೇರ ಗಂಟಲಿಗೆ ಸುರಿದುಕೊಂಡ. ಗಂಡ ಹೊಟ್ಟೆಉರಿ ಎಂದು ಹೊರಳಾರುತ್ತಿದ್ದದ್ದನ್ನು ಕಂಡ ಅವನ ಹೆಂಡತಿ ಒಪ್ಪಾರಿಗೆ ಧಾವಿಸಿ ಬಂದಳು. ಹೊನ್ನೇಗೌಡ ಹೊಟ್ಟೆ ಹಿಡಿದು ಹೊರಳಾಡುತ್ತಿದ್ದ, ಅವನ ಕಾಲ ಬಳಿ ಕ್ರಿಮಿ ನಾಶಕದ ಖಾಲಿ ಬಾಟಲಿ ಬಿದ್ದಿತ್ತು.
ಕ್ಷಣಮಾತ್ರದಲ್ಲಿ ಊರೆಲ್ಲಾ ಸುದ್ಧಿಯಾಯಿತು ಜನ ಗಾಬರಿಯಿಂದ ಓಡಿಬಂದರು! ಇಂತಹ ಪರಿಸ್ಥಿತಿಯನ್ನೆಲ್ಲಾ ನಿಭಾಯಿಸಿ ಅನುಭವವಿದ್ದ ಊರ ಹಿರಿಯ ಸಿದ್ಧೇಗೌಡ ತಡಮಾಡದೇ ಓಡೋಡಿ ಬಂದ.
ಅನಿರೀಕ್ಷಿತ ಘಟನೆಯಿಂದಾಗಿ ಹೊನ್ನೇಗೌಡನ ಹೆಂಡತಿ ತತ್ತರಿಸಿ ಹೋಗಿದ್ದಳು, ಭಯದಿಂದ ಹೊಟ್ಟೆಯಲ್ಲಿ ತಳಮಳ. ನಿಂತಲ್ಲಿಯೇ ಬೇದಿ ಕಡೆದುಹೋಗುತ್ತೇನೋ ಎಂದು ಗಾಬರಿಗೊಂಡಿದ್ದಳು.
ಜನರ ಮಧ್ಯೆನುಸುಳಿ ಬಂದ ಸಿದ್ದೇಗೌಡ ಬಾಟಲಿಯನ್ನು ಅತ್ತಿತ್ತ ತಿರುಗಿಸಿ ನೋಡಿ ‘ಇಷ್ಟೆಲ್ಲಾ ಒಮ್ಮಕೇ ಕುಡಿದಿದ್ದಾನಲ್ಲಾ’ ಎನ್ನುತ್ತಾ ಬಾಟಲಿಯನ್ನು ದೂರ ತಳ್ಳಿದ. ‘ಬೇಗ ಆಸ್ಪತ್ರೆಗೆ ಕರಕೊಂಡು ಹೋಗಬೇಕು ಯಾರೋ ಸಲಹೆ ಕೊಟ್ಟರು, ‘ಆಸ್ಪತ್ರೆಗೆ ಆಮೇಲೆ! ವಿಷವ ಅಪಾರ ಹೊತ್ತು ಬಿಡದು ಒಳ್ಳೇದಲ್ಲ! ಹೆಂಗಾದ್ರೂ ಮಾಡಿ ಕಕ್ಕಿಸಬೇಕು, ಯಾರಾದರೂ ಅರ್ಜೆಂಟಾಗಿ ಸ್ವಲ್ಪ ಹೇಲ್ ತಗಂಡು ಬನ್ನಿ’ ಎಂದ ಸಿದ್ದೇಗೌಡ.

ಇಷ್ಟ್ ಹೊತ್ತಲ್ಲಿ ಎಲ್ಲಿಂದ ತರದು. ಮೊದಲಾಗಿದ್ದರೆ ಎಲ್ಲರ ಮನೆ ಹಿತ್ಲಲ್ಲಿ ಕೈ ಹಾಕಿದ ಕಡೆ ಸಿಕ್ತಿತ್ತು. ಈಗ ಎಲ್ಲರ ಮನೇಲೂ ಟಾಯ್ಲೆಟ್ ಆಗಿ ಅದಕ್ಕೂ ಕಷ್ಟ, ಜನ ಪರಸ್ಪರ ಮುಖನೋಡಿಕೊಂಡರು.
ಸಿದ್ದೇಗೌಡನಿಗೆ ಸಿಟ್ಟೇ ಬಂದು ಬಿಟ್ಟಿತು, ಹೊನ್ನೇಗೌಡನ ಹೆಂಡತಿಯ ಕಡೆ ನೋಡಿz. ಅವಳು ಸೆರಗನ್ನು ಬಾಯಿಗೆ ಅಡ್ಡ ಹಿಡಿದು ಬಿಕ್ಕುತ್ತಿದ್ದಳು, ‘ಏನ್ ಜನಾಪ್ಪ ಇವ್ರೆಲ್ಲಾ, ನೀನೂ ಹಿಂಗೆ ಅಳ್ತಾ ಮೂಲೆ ಸೇರಿದ್ರೆ ಹೆಂಗೆ? ಸ್ವಲ್ಪ ಧೈರ್ಯ ತಂದ್ಕೊಳ್ಳಬೇಕು. ಹೇಲು ಕದರಿ ಹುಯ್ದು ವಿಷ ಕಕ್ಕಿಸ್ದೇ ಇದ್ರೆ ನಿನ್ನ ಗಂಡನ ಜೀವಕ್ಕೆ ಅಪಾಯ’ ಎಂದು ಹೇಳಿದ.
ಧೈರ್ಯ ತಂದುಕೊಂಡ ಆಕೆ ಅಗಲ ಬಾಯಿನ ಒಂದ್ ಪ್ಲಾಸ್ಟಿಕ್ ಪಾತ್ರೆ ಹಿಡಿದು ಟಾಯ್ಲೆಟ್ ಕಡೆ ಓಡಿದಳು.
ಸಿದ್ದೇಗೌಡನ ಮಾತು ಹೊನ್ನೇಗೌಡನ ಕಿವಿಯಲ್ಲಿ ಕಾದ ಎಣ್ಣೆ ಹುಯ್ದಂತೆ ಅಪ್ಪಳಿಸಿತು.
ಹಿಂದೆ ಕೆಲವೊಮ್ಮೆ ತಪ್ಪು ನಿರ್ಧಾರ ಕೈಗೊಂಡಾಗ ‘ಎಂತಾ ಹೇಲ್ತಿನ್ನೊ ಕೆಲಸ ಮಾಡಿಕೊಂಡು ಬಿಟ್ಟೆ’ ಎಂದು ತನಗೆ ತಾನೇ ಹೇಳಿಕೊಂಡಿದ್ದ, ಆಗೆಲ್ಲಾ ಹಾಗೆ ಮಾತಿಗೆ ಹೇಳಿಕೊಂಡು ಮನಸ್ಸಿಗೆ ಸಮಾಧಾನ ತಂದುಕೊಳ್ಳುತ್ತಿದ್ದದು ಈಗ ಘನಘೋರ ರೂಪದ ಕ್ರಿಯೆಯಾಗಿ ತನ್ನ ಬದುಕಿನಲ್ಲಿ ನಿಜಕ್ಕೂ ಜರುಗಲಿರುವುದನ್ನು ನೆನೆದು ನಡುಗಿ ಹೋದ ‘ಇಷ್ಟರಲ್ಲಾಗಲೇ ಉಸಿರಾದರೂ ನಿಂತು ಹೋಗಬಾರದಾಗಿತ್ತೆ’ ಎಂದು ಹಲುಬಿದ.

ಹೇಲು ತಿನ್ನುವ ಕ್ರಿಯೆಯಂತಹಾ ಘೋರವನ್ನು ನನಗೆ ನಾನೇ ಆಹ್ವಾನಿಸಿಕೊಂಡೆನೇ? ಇದಕ್ಕೆ ಮೂಲ ಕಾರಣವಾದರೂ ಏನು? ವ್ಯವಸಾಯವೆಂಬ ಜೂಜಾಟಕ್ಕೆ ಇಳಿದದ್ದೆ ನಾನು ಮಾಡಿದ ಹೇಲು ತಿನ್ನುವ ಕೆಲಸವೇ.
ಹೊಟ್ಟೆ ನೋವು ಮರೆತಂತಾಗಿ, ಮುಂದೆ ಜರುಗಲಿರುವ ಕ್ರಿಯೆಯೇ ಅಸಹನೀಯ ನೋವು ಕೊಡುವುದಲ್ಲ ಎಂದು ಹೊರಳಾಡತೊಡಗಿದ.
ಅವನು ಎದುರಿಸಲೇಬೇಕಾದ ಕ್ಷಣ ಬಂದೇ ಬಿಟ್ಟಿತು, ಹೊನ್ನೇಗೌಡನ ಹೆಂಡತಿಯ ಕೈನಿಂದ ಪಾತ್ರೆ ಪಡೆದುಕೊಂಡ ಸಿದ್ದೇಗೌಡ ‘ಓ, ನೀರ್ ನೀರಾಗಿದೆ ಬೇದಿ! ಕೈ ಹಾಕಿ ಕದರುವುದು ತಪ್ತು? ಎಲ್ಲಿ, ಒಂದ್ ಫನಲ್ ತಗಳ್ಳಿ’ ಎಂದ.
‘ಅಯ್ಯೋ ದೇವರೇ ಈ ವಿಷವಾದರೂ ಇಷ್ಟರಲ್ಲಿ ನನ್ನನ್ನು ಕೊಲ್ಲಬಾರದಿತ್ತೇ? ಅದೂ ನನಗೆ ಮೋಸಮಾಡಿ ಬಿಟ್ಟಿತೆ, ಈಗಲೂ ಎಲ್ಲಾದರೂ ಓಡಿ ಹೋಗಿ ಬಾವಿಗೆ ನೆಗೆದಾದರೂ ಸಾಯೋಣ ಎಂದರೆ ಬಾವಿಗಳೂ ಇಲ್ಲವಲ್ಲ!, ಏನು ಮಾಡಲಿ’ ಎನ್ನುತ್ತಾ ಪೇಚಾಡತೊಡಗಿದ.
‘ಒಂದ್ ನಾಕಾಳು ಗಂಡಸ್ರು ಈ ಕಡೆ ಬಂದು ಕೈಕಾಲೆಲ್ಲಾ ಗಟ್ಟಿಯಾಗಿ ಅಮುಕಿ ಹಿಡುಕೊಳ್ಳಿ’ ಸಿದ್ದೇಗೌಡ ಮಾತು ಮುಗಿಸುವಷ್ಟರಲ್ಲಿ ಹೊನ್ನೇಗೌಡ ಎದ್ದು ಓಡಲು ಹವಣಿಸಿದ. ಆದರೆ ಸಾಧ್ಯವಾಗಲಿಲ್ಲ! ಅಷ್ಟರಲ್ಲೇ ಧಾವಿಸಿ ಬಂದ ನಾಲ್ವರು ದಾಂಡಿಗರು ಎದ್ದು ಕುಳಿತಿದ್ದ ಅವನನ್ನು ನೆಲಕ್ಕೆ ಮಲಗಿಸಿ ಮಿಸುಕಾಡದಂತೆ ಅಮುಕಿಕೊಂಡರು.

ಇನ್ನೊಬ್ಬ ಸೀಮೆಎಣ್ಣೆ ಬಸಿಯುವ ಹಳೆಯ ತಗಡಿನ ಫನಲ್ ಒಂದನ್ನು ಹಿಡಿದು ಹೊನ್ನೇಗೌಡನ ತಲೆಯ ಬಳಿ ಕುಳಿತುಕೊಂಡ. ಆದರೆ ಫನಲನ್ನು ಬಾಯೊಳಗೆ ಇಡಲಾಗಲಿಲ್ಲ. ಹೊನ್ನೇಗೌಡ ಬಿಗಿಯಾಗಿ ಹಲ್ಲುಮುಡಿ ಕಚ್ಚಿ ಹಿಡಿದಿದ್ದ. ಎರಡು ಮೂರು ಜನ ಸೇರಿ ಬಾಯಿ ಬಿಡಿಸಲು ಯತ್ನಿಸುತ್ತಿದ್ದರು.
‘ಏಯ್ ಹಿಂಗಾದ್ರೆ ನೀವು ಇಡೀ ದಿನ ಆದ್ರೂ ಬಾಯಿಬಿಡ್ಸಕೆ ಆಗುತ್ತೇನ್ರೀ? ಎಲ್ಲಿ ಅತ್ಲಾಗಿ ಹೋಗಿ…. ಯಾರಾದ್ರೂ ಒಬ್ರು ಬಂದು ಬಿಗಿಯಾಗಿ ಮೂಗ್ ಮುಚ್ಚಿ ಹಿಡೀರಿ….. ಬಾಯಿ ಬಿಡ್ದೆ ಎಲ್ಲಿ ಹೋಗ್ತಾನೆ ನೋಡನ’ ಸಿದ್ದೇಗೌಡ ಉಪಾಯ ಹೇಳಿದ.
ಎಷ್ಟು ಹೊತ್ತು ಉಸಿರು ಕಟ್ಟಲು ಸಾಧÀ್ಯ? ಬಾಯಿ ತೆರೆದು ಕೊಂಡಿತು. ಸಿದ್ಧವಾಗಿ ಕುಳಿತಿದ್ದ ವ್ಯಕ್ತಿ ಫನಲ್ ನ ಸಣ್ಣ ಪೈಪ್ ನಂತಹ ಭಾಗವನ್ನು ಸ್ವಲ್ಪವೇ ತೆರೆದಿದ್ದ ಬಾಯೊಳಕ್ಕೆ ತುರುಕಿದ. ಸಾಯಲು ಹೊರಟಿದ್ದ ಹೊನ್ನೇಗೌಡ ಸಿದ್ದೇಗೌಡನ ವೈದ್ಯವನ್ನು ನಿರಾಕರಿಸುತ್ತಲೇ ಇದ್ದ. ಬಾಯಿನ ಮುಖಾಂತರ ಸಾಕಷ್ಟು ಉಸಿರೆಳೆದು ಕೊಂಡಿದ್ದ ಅವನು ಮತ್ತೆ ಬಿಯಾಗಿ ಹಲ್ಲುಮಟ್ಟೆ ಕಚ್ಚಿದ, ಹಲ್ಲುಗಳ ಮಧ್ಯೆ ಸಿಕ್ಕ ಫನಲ್ ಕಟ್ ಎಂದು ಶಬ್ಧ ಮಾಡುತ್ತಾ ತುಂಡಾಯಿತು. ಮುರಿದ ಫನಲ್ ನೆಲಕ್ಕೆ ಬಿತ್ತು
ಎಲ್ಲಾ ಪ್ರಯತ್ನಗಳೂ ವಿಫಲವಾಗುತ್ತಿದ್ದುದರಿಂದ ಸಿದ್ದೇಗೌಡ ತಾಳ್ಮೆ ಕಳೆದು ಕೊಳ್ಳತೊಡಗಿದ, ‘ಬೇಗ ಒಂದ್ ಸಣ್ಣ ಗೂಟ ತನ್ನಿ’ ಎಂದು ಗುಡುಗಿದ. ‘ಇವರು ನನ್ನನ್ನು ಬಿಡಲಾರರು’ ಎನಿಸಿತು ಹೊನ್ನೇಗೌಡನಿಗೆ! ಕಣ್ಣುಗುಡ್ಡೆಗಳನ್ನು ಹೊರಳಿಸುತ್ತಾ ತನ್ನ ಸನಿಹ ಇದ್ದವರನ್ನು ನೋಡಿದ. ಅವರೆಲ್ಲಾ ಯಾವುದೋ ಲೋಕದಿಂದ ಬಂದ ನರಭಕ್ಷಕರಂತೆ, ಸಿದ್ದೇಗೌಡ ಅವರ ನಾಯಕನಂತೆ ತೋರತೊಡಗಿದರು.
ಅಷ್ಟರಲ್ಲಿ ಮತ್ತೊಮ್ಮೆ ಮೂಗು ಹಿಡಿದರು. ತೆರೆದ ಬಾಯಿಗೆ ಗೂಟ ತುರುಕಿದರು. ಈ ಬಾರಿ ಅವನಿಗೆ ತಪ್ಪಿಸಿಕೊಳ್ಳಲು ಆಗಲಿಲ್ಲ!. ಸಿದ್ದೇಗೌಡ ಕೈಯಲ್ಲಿದ್ದ ಪಾತ್ರೆಯಿಂದ ತೆಳುವಾದ ಬೇದಿಯನ್ನು ಹೊನ್ನೇಗೌಡನ ಬಾಯಿಗೆ ಸುರಿಯತೊಡಗಿದ.
ಕೆಲವೇ ತೊಟ್ಟುಗಳು ಬಿದ್ದಿದ್ದವು ಅಷ್ಟೆ, ಹೊಟ್ಟೆಯೊಳಗಿದ್ದುದೆಲ್ಲಾ ಒತ್ತಿಕೊಂಡು ಬರತೊಡಗಿತು, ರಭಸವಾಗಿ ನುಗ್ಗಿ ಬರುತ್ತಿದ್ದ ವಾಂತಿಯೊಂದಿಗೆ ಗೂಟವೂ ನೆಗೆದು ಹೋಗಿ ಕಾಲು ಅಮುಕಿ ಕೂತಿದ್ದವರ ಮೇಲೆ ಬಿತ್ತು.
‘ಎಲ್ಲಿ ಬಿಡಿ, ಬಿಡಿ ಎದ್ದು ಕೂತ್ಕಳ್ಲಿ’ ಎನ್ನುತ್ತಾ ಸಿದ್ದೇಗೌಡ ಹಿಂದೆ ಸರಿದು ನಿಂತ. ಎದ್ದು ಕುಳಿತ ಹೊನ್ನೇಗೌಡನ ಬಾಯಿಂದ ಬಕ್ ಬಕ್ ಎಂದು ಸದ್ದು ಮಾಡುತ್ತಾ ವೇಗದಿಂದ ನುಗ್ಗಿ ಬಂದ ವಾಂತಿ ಎಲ್ಲೆಡೆ ಚಲ್ಲಾಡಿತು.
‘ಹುಂ ಈಗ ಆಸ್ಪತ್ರೆಗೆ ಕರ್ಕಂಡ್ ಹೋಗಿ’ ಎನ್ನುತ್ತಾ ಸಿದ್ದೇಗೌಡ ತನ್ನ ಮನೆಯ ದಾರಿ ಹಿಡಿದ.

ಕತ್ತೆರಾಮ ತಮಾಷೆ ನೋಡುತ್ತಾ ಜೀಪಿನಲ್ಲೇ ಕುಳಿತಿದ್ದ ‘ರಾಮಣ್ಣ ಒಳ್ಳೆ ಟೈಮಿಗೇ ಬಂದಿದ್ದಾರೆ. ನಿಮ್ಮ ಜೀಪಲ್ಲೇ ಇವ್ರನ್ನ ದೊಡ್ಡೂರಿಗೆ ಕರ್ಕಂಡ್ ಹೋಗಾಣ ಉಪಕಾರ ಆಗುತ್ತೆ’ ಎಂದು ಯಾರೋ ಹಿರಿಯರು ಹೇಳಿದರು.
ಕತ್ತೆರಾಮ ಅದೇ ಸಂದರ್ಭಕ್ಕೆ ಕಾಯುತ್ತಿದ್ದ. ವಿಷ ಕುಡಿದವರು ಬದುಕುವುದು ಕಷ್ಟ, ಆಸ್ಪತ್ರೆಯಲ್ಲಿ ಇವನೇನಾದರೂ ಗೊಟಕ್ ಎಂದರೆ ಏನು ಮಾಡುವುದು ಎಂದು ಯೋಚಿಸುತ್ತಿದ್ದ.
‘ಅವ್ನ ಮುಂದಲ ಸೀಟಿಗೆ ಕರ‍್ಸಿ’ ಎಂದ. ಹೊನ್ನೇಗೌಡನ ಪಕ್ಕಕ್ಕೆ ಅವನ ಹೆಂಡತಿ ಕುಳಿತಳು, ಜೀಪಿಗೆ ಕೂರಿಸಿ ಆದ ನಂತರ ದೊಡ್ಡೂರಿನ ಪ್ರಗÀತಿಪರ ಯುವಕರು ಹಿಂದೆ ಕುಳಿತುಕೊಂಡರು.
ವಾಂತಿ ಆದ ನಂತರ ಹೊನ್ನೇಗೌಡನಿಗೆ ಸ್ವಲ್ಪ ಆರಾಮೆನಿಸಿತು, ಅರ್ಧದಾರಿ ಕ್ರಮಿಸಿದ ಕತ್ತೆರಾಮ ಜೇಬಿನಿಂದ ಪಾರಂ ತೆಗೆದು ಪೆನ್ನಿನೊಂದಿಗೆ ಹೊನ್ನೇಗೌಡನ ಹೆಂಡತಿಗೆ ಕೊಟ್ಟು ‘ಇದಕ್ಕೊಂದು ಸೈನ್ ಹಾಕ್ಸಿ ಅಕ್ಕ’ ಎಂದ.


ಸುದ್ದಿ ತಿಳಿದಿದ್ದರಿಂದ ನಾಗೇಶ್ ಡಾಕ್ಟರ್ ಸಿದ್ಧವಾಗಿ ಕಾಯುತ್ತಿದ್ದರು, ನಾಗರಾಜ ಹಾಗೂ ಚಿನ್ನಪ್ಪ ಅವರೊಂದಿಗೆ ಸೇರಿಕೊಂಡಿದ್ದರು.
‘ಒಳ್ಳೆ ಕೆಲ್ಸ ಮಾಡಿದ್ರಿ ರಾಮಣ್ಣ. ಟೈಮಲಿ ರ‍್ಕಂಡ್ ಬಂದ್ರಲ್ಲ ಉಪಕಾರ ಆಯ್ತು’ ಡಾಕ್ಟರು ಖುಷಿಯಿಂದ ರಾಮನ ಬೆನ್ನು ತಟ್ಟಿದರು.
‘ಜೀಪಿನ ಹಿಂದಿನ ಸೀಟಿನಿಂದ ಇಳಿಯುತ್ತಿದ್ದ ಯುವಕನೊಬ್ಬ ‘ಉಪಕಾರ ಎಲ್ಲಿ ಬಂತು ಸಾರ್, ಹೊನ್ನೇಗೌಡ್ರಿಗೆ ಯಡವಟ್ಟಾಗಕೆ ಮುಂಚೆ ಅವರು ಯಾವುದೋ ಕಾಗದಕ್ಕೆ ಸೈನ್ ತಗಬೇಕಾಗಿತ್ತು ಅಷ್ಟೆ’ ಎಂದ
ಡಾಕ್ಟರಿಗೆ ಸಿಟ್ಟೇರಿತು ‘ಇಂತಾ ಕಷ್ಟದಲ್ಲೂ ನಿಮ್ಮ ಬುದ್ದಿ ಬಿಡದಿಲ್ವಲ್ರಿ! ಸತ್ತ ಹೆಣನೂ ಬಿಡದೆ ಸುಲಿಗೆ ಮಾಡ ಜಾತಿ ನೀವು. ಎಲ್ಲಿ ಅದೇನ್ ಪತ್ರ ಸೈನ್ ಹಾಕ್ಸಿದ್ದು’ ಎಂದರು, ಅಷ್ಟ್ ಜನರ ಮಧ್ಯೆ ಡಾಕ್ಟರ್ ಸಿಟ್ಟು ಮಾಡಿದ್ದು ನೋಡಿ ರಾಮನಿಗೆ ಭಯವಾಯಿತು, ಫಾರಂ ತೆಗೆದು ಡಾಕ್ಟರ್ ಕೈಗೆ ಕೊಟ್ಟ, ‘ಫಾರಂ ನಂಬರ್ ೨೯’ ಓದಿಕೊಂಡ ಡಾಕ್ಟರ್ ಅದನ್ನು ಹರಿದೆಸೆದು ‘ಎಲ್ಲಿ ಈ ಕಡೆ ತಂದ್ ಕರ‍್ಸಿ’ ಎನ್ನುತ್ತಾ ಹೊನ್ನೇಗೌಡನ ಕೈಹಿಡಿದರು’ ಎಂತಾ ಕೆಲ್ಸ ಮಾಡಿಕೊಂಡ್ ಬಿಟ್ರಿ ನಿಮ್ಮನ್ನ ಮಾದರಿ ಅಂತಾ ಎಷ್ಟ್ ಜನ ನಿಮ್ಮ ಕಡೆ ನೋಡ್ತಾ ಇದ್ರು’ ಮಾತಾಡುತ್ತಲೇ ನಾಡಿ ಬಡಿತ ನೋಡಿದರು, ಕಣ್ಣುಗಳನ್ನು ಅಗಲಿಸಿ ನೋಡಿದರು, ಸ್ವೆತಾಸ್ಕೋಪ್ ಇಟ್ಟು ಹೃದಯ ತಪಾಸಣೆ ಮಾಡಿದರು.

‘ಎಲ್ಲಾ ಸರಿಯಾಗಿರಂಗೆ ಇದೆಯಲ್ರೀ, ವಿಷ ಏರಿದ ಲಕ್ಷಣ ಏನೂ ಕಾಣ್ತಾ ಇಲ್ಲಪ್ಪ ನನಗೆ…… ಯಾವ ವಿಷ ಕುಡಿದ್ರು’ ಎನ್ನುತ್ತಾ ಅವನ ಹೆಂಡತಿಯ ಮುಖ ನೋಡಿದರು. ಖಾಲಿಯಾಗಿದ್ದ ಕ್ರಿಮಿನಾಶಕದ ಬಾಟಲಿಯನ್ನು ಪಡೆದುಕೊಂಡು ನೋಡಿದರು.
‘ರ‍್ಲಿ ನನಗೆ ಗೊತ್ತಿರೋ ಪ್ರಥಮ ಚಿಕಿತ್ಸೆ ಮಾಡರ‍್ತೀನಿ. ಯಾವುದಕ್ಕೂ ಈಗ್ಲೇ ಕರ್ಕಂಡ್ ಹೋಗಿ ಹಾಸನ ಆಸ್ಪತ್ರೆಲಿ ತರ‍್ಸಿ’ ಎಂದು ಕಿಟ್ ಬಿಚ್ಚ ತೊಡಗಿದರು.
‘ಹಾಸನದ ಆಸ್ಪತ್ರೆನೂ ಬೇಡ ಏನೂ ಬೇಡ, ಮನೆಗೆ ರ‍್ಕೊಂಡ್ ಹೋಗಿ ಚನ್ನಾಗಿ ಅಂಬಲಿ ಮಜ್ಜಿಗೆ ಕುಡಿಸಿ’ ಅಷ್ಟು ಹೊತ್ತೂ ಸುಮ್ಮನಿದ್ದ ನಾಗರಾಜ ಬಾಯಿತೆರೆದಿದ್ದ.
ಚಿನ್ನಪ್ಪ ಹಾಗೂ ನಾಗೇಶ್ ಸೇರಿದಂತೆ ಎಲ್ಲರೂ ಅಚ್ಚರಿಯಿಂದ ನೋಡತೊಡಗಿದರು.
‘ಸಂಜೆಯಿಂದಲೇ ಇವನ ನಡವಳಿಕೆ ಬಗ್ಗೆ ಸಂಶಯ ಬಂದಿತ್ತು, ಅವನು ಕೂತ ಜಾಗದಿಂದ ಮೂತ್ರ ಮಾಡಲು ಹೊರ ಹೋದಾಗ ಕವರೊಳಗೆ ಜೋಪಾನ ಮಾಡಿ ಇಟ್ಟುಕೊಂಡಿದ್ದ ಬಾಟಲಿ ತೆರೆದು ನೋಡಿದೆ, ಅದರಲಿದ್ದ÷ಕ್ರಿಮಿನಾಶಕವನ್ನು ಕೂಡಲೇ ಚರಂಡಿಗೆ ಚಲ್ಲಿ ಅದಕ್ಕೆ ಬ್ರಾಂಡಿ ತುಂಬಿಸಿ ಇಟ್ಟಿದ್ದೇ’ ಎಂದ!
‘ಸ್ನೇಹಿತರಾಗಿದ್ದಕ್ಕೂ ಸಾರ್ಥಕವಾಯ್ತು ನನ್ನ ಮನೆ ಉಳಿಸಿಕೊಟ್ರಿ’ ಎನ್ನುತ್ತಾ ಹೊನ್ನೇಗೌಡನ ಹೆಂಡತಿ ನಾಗರಾಜನಿಗೆ ಕೈಯತ್ತಿ ಮುಗಿದಳು.

–ಹಾಡ್ಲಹಳ್ಳಿ ನಾಗರಾಜ್


ಮುಂದುವರೆಯುವುದು…

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x