“ಆದಿತ್ಯವಾರ ಸಂತೀ ಮಾಡಿ, ಸೋಮವಾರ ಕಡುಬು ಕಟ್ಟಿ, ಮಂಗಳವಾರ ಹೊಲಾ ಹೋಗೋದೋ” ಅಂತ ಊರಾಗ ವಾಲೀಕಾರ ಡಂಗರಾ ಸಾರಲಿಕ್ಕೇಂತ ಬಂದರ, ನಮ್ಮಂತಹಾ ಸಣ್ಣ ಹುಡುಗರ ಗುಂಪು ಅವನ ಹಿಂದ ಗುಂಪು ಕಟ್ಟಿಕೊಂಡು ಓಡುತಿತ್ತು. ಊರೇನೂ ಅಂತಾ ಪರೀ ದೊಡ್ಡದಲ್ಲ. ಅಲ್ಲದ, ಇಂತಾ ವಿಷಯಗಳು ಎಲ್ಲಾರಿಗೂ ಗೊತ್ತಾಗೇ ಇರತಿದ್ದವು. ಆದರೂ ವಾಲೀಕಾರ ಡಂಗುರ ಸಾರತಿದ್ದಾ, ನಾವೂ ಅವನ ಹಿಂದಿಂದ ಓಡತಿದ್ದವಿ ಅಷ್ಟ. ಆಮ್ಯಾಲೆ, ಮನೀಗೆ ಬಂದು ಅವನ ಹಂಗನ ಒಂದ ಹತ್ತ ಸಲಾ ಒದರತಿದ್ದವಿ.
ಈ ಡಂಗುರಾ ಸಾರೋ ಕೆಲಸ ಅವಗ ಬಿಡೋಣಂತ. ಆದರ ಈಗ ವಿಷಯ ಅದಲ್ಲ. ಅದು ಅಗದೀ ಮುಖ್ಯ ವಿಷಯನ ಅದ. ಅಂದರ ಇದು ಊರಾಗಿನ ಸೀಗೀ ಹುಣ್ಣಿವಿ ವಿಷಯ ಮತ್ತ ಇನ್ನೊಂದು ಮುಖ್ಯ ವಿಷಯ ಅಂದರ, ನಮ್ಮೂರಾಗ ಈ ಸೀಗೀ ಹುಣ್ಣಿವಿ ಮತ್ತ ಹೋಳೀ ಹುಣ್ಣವಿ ಇವನ್ನೆಲ್ಲಾ ಆ ಹಬ್ಬದ ದಿನಾನ ಆಚರಿಸೋದಿಲ್ಲ. ಈ ಹಬ್ಬಗಳು ನಮಗ ನೆನಪಾಗೋದ ಹುಣ್ಣಿಮಿ ದಿನಾ. ಆಮ್ಯಾಲೆ ಒಂದು ದಿನಾ ಊರಾಗ ಅದರ ಆಚರಣೆ ಇರತದ.
ಸೀಗಿ ಹುಣ್ಣಿವಿ ಅಂದರ ಭೂಮಿ ತಾಯಿಗೆ ನಮಸ್ಕಾರ ಹೇಳೋ ಹಬ್ಬ. ಭೂಮಿತಾಯಿ ಒಡಲು ತುಂಬಿಕೊಂಡು ನಗತಿರತಾಳ. ಆಷಾಢಕ್ಕೂ ಮದಲನ ಭೂಮಿಗೆ ಭತ್ತಾ ಬಿತ್ತಿ, ಶ್ರಾವಣದಾಗ ಭೂಮಿ ಒಳಗ ಬೆಳದಂತಾ ಕಳೆ ತಗದು, ಬೆಳಿ ಬೆಳೀಲಿಕ್ಕೆ ಅನುಕೂಲ ಮಾಡೋ ಕೆಲಸಗಳಿರತಾವ. ಈ ಸೀಗೀ ಹುಣ್ಣಿವಿ ಅಂದರ, ಕಷ್ಟಪಟ್ಟಿದ್ದ ಜೀವಕ್ಕ ಫಲ ನಿರೀಕ್ಷಣಾ ಮಾಡೋ ಕೆಲಸಾ. ಬೆಳೀ ತೆನಿ ಒಡದಿರತಾವ, ಹಸರು ತುಂಬಿದ ಹೊಲ, ಮಳೀ ಸಾವಕಾಶ ತನ್ನ ಪ್ರಭಾವ ಕಡಿಮಿ ಮಾಡಿರತದ, ಚಳಿ ಜಾಸ್ತಿ ಇರೂದಿಲ್ಲ. ಪ್ರಕೃತಿ ಸೌಂದರ್ಯದ ಕಾಲ. ನಮ್ಮ ಹಿರಿಯರು, ಈ ಹಬ್ಬದ ಆಚರಣೆಗೆ ಭಾಳ ಚಂದದ ದಿನಾ ಹುಡುಕ್ಯಾರ.
ಸೀಗೀ ಹುಣ್ಣಿವಿಗೆ, ಊರಾಗ ನದೀ ತುಂಬಿರತದ, ನವರಾತ್ರಿಗೆ ದಿನಾ ನದೀ ದಂಡಿ ಮ್ಯಾಲಿರೋ ವೆಂಕಪ್ಪನ ಗುಡೀಗೆ ದಿನಾ ಹೋಗಿ ಅಲ್ಲೆ. ‘ಮಂಗಳಂ ಜಯ ಮಂಗಳಂ” ಅಂತ ಹಾಡಿ, ವೆಂಕಪ್ಪಗ ಮತ್ತ ದೀಪಕ್ಕ ನಮಸ್ಕಾರ ಮಾಡಿ, ತೊಗೊಂಡು ಹೋಗಿರೋ ಅವಲಕ್ಕೀ ಡಬ್ಬೀ ನದೀ ದಂಡೀ ಮ್ಯಾಲ ಕೂತು ತಿಂದು, ಬರೂವಾಗ ಹೇಳೋದು ಸೀಗೀ ಹುಣ್ಣಿವಿ ಬಂತೂಂದ್ರ ದೋಣಿ ಆಡಬಹುದೂಂತ. ನಮ್ಮೂರು ಹಾನಗಲ್ ತಾಲೂಕಿನ ಬಾಳಂಬೀಡ. ಮಲೆನಾಡಿನ ಸೆರಗಿನ ಊರು. ಊರಿನ ಪೂರ್ವ ದಿಕ್ಕಿಗೆ ವರದಾ ನದಿ ಹರೀತದ. ಮಳಿಗಾಲದ ಹುಚ್ಚು ಆರ್ಭಟಾ ಮುಗಿಸಿ, ಹೊಳಿ ಗಂಗವ್ವ ಮೈ ತುಂಬಿ ಹರೀತಿರತಾಳ. ಸಮೃದ್ಧ ಮಣ್ಣು, ಮ್ಯಾಲ ಧರ್ಮಾ ನದಿಯ ನೀರಾವರಿ ಯೋಜನಾದ ಪೂರ್ಣ ಫಲ ಈ ಊರಿಗೆ ಸಿಕ್ಕದ. ಬ್ಯಾಸಗೀಯೊಳಗ, ಊರಿನ ಕಲ್ಲಕಟ್ಟಿ ಅನ್ನೋ ಕೆರೀಗೆ ಧರ್ಮಾ ನದಿ ನೀರು ಬಿಟ್ಟರೂಂದರ ಎರಡನೇ ಬೆಳಿ ಭತ್ತಾನ ಗ್ಯಾರಂಟಿ. ಅಂತಾ ಕಲ್ಲಕಟ್ಟಿ ಕಲ್ಕಪ್ಪ ಅಂದರ ಭರಮಪ್ಪಗ ಅಂದರ ಬ್ರಹ್ಮ ದೇವರಿಗೆ ಒಂದು ಪೂಜಾ, ಒಂದು ನೈವೇದ್ಯ ಮಾಡೋ ಹಬ್ಬನ ಈ ಸೀಗೀ ಹುಣ್ಣಿವಿ.
ನಮ್ಮೂರಾಗ ಆದಿತ್ಯವಾರ ಸಂತಿ. ಸೀಗೀ ಹುಣ್ಣಿವಿ ಸಂತಿ ಅಂದರ ಸ್ವಲ್ಪ ವಿಶೇಷ. ಆದರೂ ಸೀಗೀ ಹುಣ್ಣಿವಿ ಮುಖ್ಯ ಅಡುಗೀ ಅಂದರ ಕುಂಬಳ ಕಾಯಿ ಕಡುಬು. ಹಂಗಂತ ಹೇಳಿ, ಕುಂಬಳಕಾಯಿನ ಯಾರೂ ಸಂತ್ಯಾಗ ಮಾರೂದಿಲ್ಲ ಮತ್ತ ಕೊಳ್ಳೂದಿಲ್ಲ. ಯಾಕಂದರ, ಪ್ರತಿಯೊಬ್ಬರ ಮನೀ ಹಿತ್ತಲದಾಗೂ ಒಂದಲ್ಲದಿದ್ದರ ಹತ್ತು ಕುಂಬಳ ಬಳ್ಳಿ ಹುಟ್ಟಿರತಾವ. ಅದರಾಗ ಒಂದೆರಡು ಬಳ್ಳಿ ಕಾಯಿ ಬಿಟ್ಟರೂ ಸಾಕು ವರ್ಷ ಪೂರ್ತಿ ಕುಂಬಳಕಾಯಿ ತರಕಾರಿ ಆಗಿರತದ. ಯಾರಿಗೋ ಒಬ್ಬರ ಮನ್ಯಾಗ ಕುಂಬಳಕಾಯಿ ಬೆಳದಿಲ್ಲಾಂದರ, ಅವರ ಮನೀಗೆ ಎಲ್ಲಾರೂ ಒಂದೊಂದು ಕುಂಬಳಕಾಯಿ ಕಳಸತಾರ. ಹಿಂಗಾಗಿ, ಅವರ ಮನ್ಯಾಗ, ಬೆಳದಿದ್ದಕ್ಕಿಂತಾ ಜಾಸ್ತಿ ಕುಂಬಳಕಾಯಿ ಇರತಾವ.
ಸೀಗೀ ಹುಣ್ಣವೀ ಹಬ್ಬಾಂದರ, ಹಿತ್ತಲದಾಗ ದೊಡ್ಡದೊಂದು ಒಲೀ ಹೂಡಿ ಈ ಕುಂಬಳಕಾಯಿಗಳನ್ನ ಹೆಚಿ, ಅವನ್ನ ಹೆರದು, ಬೆಲ್ಲಾ ಕೂಡಿಸಿ, ಕಡಬ ಕಟ್ಟೋ ಕೆಲಸಾಂದರ ಅಷ್ಟ ಹಗುರೇನಲ್ಲ. ಮತ್ತ ಮನಿಯೊಳಗ ಮಂದೀನು ಭಾಳು ಅವರು ತಿನ್ನೋದೂ ಭಾಳೇ. ಅದಕ್ಕ ಒಂದು ಇಡೀ ದಿವಸ ಕಡಬ ಕಟ್ಟಲಿಕ್ಕೇ ಬೇಕೇ ಬೇಕು. ಅದು ರಾತ್ರಿ ಪೂರಾ ನಡೀತದ. ಅದಕ್ಕಂತನ ಆದಿತ್ಯವಾರ ಸಂತೀ ಮಾಡಿದರ, ಸೋಮವಾರ ಪೂರ್ತಿ, ಒಂದು ಇಡೀ ದಿನಾ, ಅಲ್ಲಲ್ಲ, ಇಡೀ ರಾತ್ರಿ ಕಡಬು ಕಟ್ಟೋ ಕೆಲಸ.
ಇನ್ನ ಮಂಗಳವಾರ ಹಬ್ಬದ ಸಡಗರನ ಬ್ಯಾರೇ. ಮುಂಜಾನೆ ಹಬ್ಬದ ದಿನಾ ಹೆಂಗಸರಿಗೆ ಮನೀ ಸ್ವಚ್ಛ ಮಾಡಿ, ಸುಣ್ಣಾ ಹಚ್ಚೀ, ಬಾಗಲಾ ಬಳದು, ಪೂಜಾ ಮಾಡೋ ಕೆಲಸಾ. ಅದರ ಜೊತೆಗೇನ, ಹಬ್ಬದ ಅಡುಗೀ ಅಂದರ, ಬಿಳೇ ಬುತ್ತಿ, ಚಿತ್ರಾನ್ನ, ಮಾಡಬೇಕು. ಅಷ್ಟ ಅಲ್ಲ ಬರೇ ಚಿತ್ರಾನ್ನ ಬುತ್ತಿ ಕಡಬು ತಿನ್ನಲಿಕ್ಕಾಗತದ, ದಿನದ ರೊಟ್ಟಿ, ಪಲ್ಯಾನೂ ಬೇಕು, ಹಿಂಡಿ, ಚಟ್ನಿ, ಮಸರೂ, ಬೆಣ್ಣಿ ಇರಬೇಕು. ಹೊಲಕ್ಕ ಊಟಕ್ಕ ಹೋದರ ನಾಕು ತರದ ಅಡಗೀನು ಇರಬೇಕು. ಮತ್ತ ಗಂಡಸರು ಅವತ್ತ ಎತ್ತುಗಳನ್ನ ಹೊಳೀಗೆ ಹೊಡಕೊಂಡು ಹೋಗಿ, ಮೈ ತೊಳಕೊಂಡು ಬಂದು, ಬಸವಣ್ಣನ ಪೂಜಾ ಮಾಡಿ ಅವುಕ್ಕ ಅಲಂಕಾರ ಮಾಡಿ ಚಕಡೀ ಕಟ್ಟತಾರ, ಆದಷ್ಟು ಲಗೂನ ಹೊಲಕ್ಕ ಹೋಗಬೇಕು. ಮತ್ತ ಅಕ್ಕಪಕ್ಕದೊಳಗ, ಯಾರಿಗೆರ ಹೊಲಾ ಇರಲಿಲ್ಲ ಅಂದರ, ಅವರ ಮನೀಗೆ ಹಿಂದಿನ ದಿನಾ ರಾತ್ರೀನ ಹೋಗಿ, ನಾಳೆ ನಮ್ಮ ಹೊಲಕ್ಕ ಹೋಗೋಣು ಬರ್ರಿ ಅಂತ ಹೇಳಿ ಬಂದಿರತಿದ್ದರು. ಎಲ್ಲಾರೂ ಕೂಡಿ ಹೊಲಕ್ಕ ಹೋಗಿ, ಅಲ್ಲೆ, ಭಾವಿ ಹತ್ತರ, ಚಕಡಿ ನಿಲ್ಲಿಸಿ, ಎತ್ತಿನ ಕೊಳ್ಳು ಹರದು, ಒಂದು ಕಡೆ ಎತ್ತು ಕಟ್ಟಿ ಹುಲ್ಲು ಹಾಕತಿದ್ದರು. ಮಾವಿನ ಗಿಡದ ಕೆಳಗ ಹುಲ್ಲು ಹಾಕಿ, ಮ್ಯಾಲ ಜಮಖಾನಿ ಹಾಸಿ, ಮನಿಯಿಂದ ತಂದಂಥಾ ಅಡುಗಿ ಇಳಸತಿದ್ದರು.
ಮನೀಯಿಂದ ಚರಗಾ ಮಾಡಿ ತಂದಿರತಿದ್ದರು, ಚರಗಾ ಅಂದರ ಕುಂಬಳ ಹೂವು, ಎಲಿ ಹಾಕಿ ತಯಾರಿ ಮಾಡಿದ ಹಳದಿ ಅನ್ನ. ಅಲ್ಲೆ ಸ್ವಲ್ಪ ಹಳದಿ ತೆನಿ ಕಾಣೋಂತಹಾ ನಾಲ್ಕು ಬತ್ತದ ಸಸಿ ಕೂಡಿಸಿ ಗಂಟು ಹಾಕಿ, ಅದರ ಕೆಳಗ ಈ ಚರಗದ ಅನ್ನದಿಂದ ಒಂದು ಚೌಕ ಮನೀ ಹಂಗ ಮಾಡಿ, ಅದರೊಳಗ ಐದು ಕೊಂತಿ ಮಾಡತಿದ್ದರು. ಆಮ್ಯಾಲೆ, ಕಲಕಟ್ಟಿ ಕೆರೀಗೆ ಹೋಗಿ, ಅದರ ದಂಡೀ ಮ್ಯಾಲೆ ಇರೋ ಸಣ್ಣ ಸಣ್ಣ ಕಲ್ಲುಗಳನ್ನೇ ಭರಮಪ್ಪ ಅಂತ ಪೂಜಿ ಮಾಡಿ, ಜೋಡು ಕಾಯಿ ಒಡೀ ಬೇಕಾಗಿತ್ತು. ಇಲ್ಲಾಂದರ ಭರಮ ದೇವರು, ಕೆಂಪು ಬಣ್ಣದ, ಮೈಮ್ಯಾಲೆ ಉದ್ದ ಕೂದಲಿರೋ ಎರಡು ಮಾರು ಉದ್ದದ ಸರ್ಪ ಆಗಿ, ಭತ್ತದ ರಾಶಿ ಮುಂದ ಬಂದು ಕೂಡತದ ಅಂತ ಹೇಳತಿದ್ದರು. ಅಲ್ಲಿಂದ ಎರೀ ಹೊಲಕ್ಕ ಬರಬೇಕು, ಅಲ್ಲೆ ಭರಮಪ್ಪನ ಪೂಜಾ ಮಾಡಿ, ಮತ್ತ ಭತ್ತದ ಗದ್ದೀಗೆ ಬರೋತನಕಾ ಅಂದರ, ಇಲ್ಲೆ ಎಲ್ಲಾರೂ ಪೂಜಾ ತಯಾರಿ ಮಾಡಿ, ನೈವೇದ್ಯಕ್ಕಾಗೆನೆ ಎಲ್ಲಾ ತಯಾರು ಮಾಡಿಕೊಂಡು ಕೂತಿರುತ್ತಿದ್ದರು.
ತಂದಿರೋ ಎಲ್ಲಾ ಅಡುಗೀನೂ ಒಂದು ಎಲಿಯೊಳಗ ಬಡಸಿ, ಭೂಮಿತಾಯಿಗೆ ನೈವೇದ್ಯ ಮಾಡಿದರ, ಆಮ್ಯಾಲೇನಿದ್ದರೂ ಹೊಟ್ಟೀ ಪೂಜಾ. ರುಚಿ ರುಚಿ ಊಟ, ಹೊಲದ ತಂಪುಗಾಳಿ, ಎಲ್ಲಾರು ಸುತ್ತಲೂ ದುಂಡಗ ಕೂತರ ಭಕ್ಕರೀ ಪಲ್ಯ, ಕಡಬು, ಚಿತ್ರಾನ್ನ, ಬುತ್ತೀ ಎಲ್ಲಾ ಊಟ, ಮನೀಕಿಂತಾ ಇಲ್ಲೆ ಭಾಳು ರುಚೀ ಅನಸತದ. ದಿನದಕಿಂತಾ ನಾಲ್ಕು ತುತ್ತು ಜಾಸ್ತೀ ಊಟಾ ಮಾಡಿರತೇವಿ. ನೀರು ನೆಲದ ಸಮೃದ್ಧಿ ದಿನಾ ಅವು. ಸಣ್ಣಕ ಮುಂದ ಚಳಿ ಬರತೇನಿ ಅಂತ ಹೇಳತದ, ಮಳೀ ಕಡಿಮಿ ಆಗಿರತದ, ಒಟ್ಟಿನ್ಯಾಗ, ಸುಖೋಷ್ಣದ ದಿನಗಳು. ಅವತ್ತಿನಿಂದ ಆಕಾಶದಾಗ ಮೋಡ ಕಡಿಮಿ ಆಗೋದರಿಂದ ಬೆಳದಿಂಗಳು ಜಾಸ್ತಿ ಆಗಿರತದ. ಪ್ರೇಮಿಗಳಿಗೆ, ದಂಪತಿಗಳಿಗೆ ಅಷ್ಟ ಅಲ್ಲ, ದುಡಿಮಿ ಮಾಡಿದ ರೈತರಿಗೂ ಸಹ ಆಹ್ಲಾದಕರ ದಿನಗಳು. ಅದಕ್ಕಂತನ ಬೇಂದ್ರೆಯವರು,
“ಸೀಗಿ ಹುಣ್ಣಿಮಿ ಮುಂದ ಸೋಗಿನ ಚಂದ್ರಾಮ
ಬಾಗಿ ಬರುವೊಲು ಬರುವ ಚಳಿಯಾಕೆ”
ಅಂತ ತಮ್ಮ, ಚಳಿಯಾಕೆ ಕವನದಾಗ ಹೇಳ್ಯಾರ.
ಮತ್ತ ಈ ಸೀಗೀ ಹುಣ್ಣಮಿ ಬೆಳದಿಂಗಳೂಟಕ್ಕೂ ಹೇಳಿ ಮಾಡಿಸಿದ ದಿನ. ಅದಕ್ಕಂತನ ನಮ್ಮ ಬೇಂದ್ರೆ ಅಜ್ಜ, “ಬೆಳುದಿಂಗಳು ನೋಡಾ” ಅಂತ ತಮ್ಮ ಕವನ ಬರದಾರ. ಸೀಗೀ ಫೆಳಿ ಒಣಗಿರತಾವ, ಉದ್ದದ ಕೋಲು ಮರುಸಿಕೊಂಡು, ಅದರಿಂದ, ಎರಡು ಕೋಲು ಮಾಡಿಸಿ, ಅದಕ್ಕ ಸಾಧ್ಯಾದರ, ಆ ಕೋಲುಗಳ ಮ್ಯಾಲ, ಒಂದು ಸಣ್ಣ ತೂತಿನಂಗ ಮಾಡಿ, ಒಂದೊಂದು ಗೆಜ್ಜಿ ಕಟ್ಟಿದರ, ಸೀಗಿ ಕೋಲಿನ ನಾದನೇ ಬ್ಯಾರೆ. ಹಿಂದೆಲ್ಲಾ ಒಂದೊಂದು ಹಳ್ಳೀಯೊಳಗೂ ನಾಲ್ಕೈದು ಕೋಲಾಟದ ಮ್ಯಾಳ ಇರತಿದ್ದವು, ಈಗ ಟೀವಿ ಬಂದು, ಹಳ್ಳಿ ಕಲಾವಿದರು ಮೂಲಿಗುಂಪಾಗಿ, ದಿನಕ್ಕ ನೂರು ಧಾರಾವಾಹಿಗಳ ಸಂಜೀಯನ್ನ ತಿಂದು ಬಿಟ್ಟಾವು, ಆದರೂ ನಾವೆಲ್ಲಾ ಹುಡುಗೇರು ಬಿಡತಿರಲಿಲ್ಲ, ಮನೀ ಮನೀಗೆ ಹೋಗಿ ಕೋಲಾಟ ಆಡತಿದ್ದವಿ. ಅದರ ಮಜಾನೇ ಬ್ಯಾರೇ ಇರತಿತ್ತು.
ಸೀಗಿ ಹುಣ್ಣವೀ ಗೌರವ್ವನ ಕೂಡುಸೋದು, ಮಂಡಕ್ಕಿ, ಪುಠಾಣಿ ಸರಾ ಮಾಡೋದು,ಚಂದಪ್ಪನ ಹಾಡು ಹೇಳಿ ಆರತೀ ಮಾಡೋದು, ಏನ ಚಂದಿರತಿತ್ತರೀ, ಬಿಡ್ರಿ ಬಿಡ್ರಿ “ಆ ಕಾಲವೊಂದಿತ್ತು, ದಿವ್ಯ ತಾನಾಗಿತ್ತು, ಬಾಲ್ಯವಾಗಿತ್ತು.” ಅಂತ ನೆನಸೋದಷ್ಟೇ. ಅಲ್ಲ, ಈಗಿನ ಮಕ್ಕಳು ಅವುಗಳ ಸವಿ ಉಣಲಿಲ್ಲ ಅಂತ ಬ್ಯಾಸರಾನೂ ಅದ.
–ಡಾ. ವೃಂದಾ ಸಂಗಮ್
ಡಾ.ವೃಂದಾ ಅವರ ಸೀಗೆ ಹುಣ್ಣಿಮೆಯ ಸಡಗರ ಸಂಭ್ರಮ ಸೊಗಸಾದ ಲೇಖನ….ಅಡುಗೆಯ ಬಣ್ಣನೆ ಓದಿ ಬಾಯಿ ನೀರೂರಿತು