ಸಿದ್ಧಲಿಂಗಯ್ಯ ಎಂಬ ಬೇಲಿ ಮೇಗಳ ಹೂವು !: ಅಶ್ಫಾಕ್ ಪೀರಜಾದೆ

ಕವಿಯೆಂದರೆ ಹೇಗಿರಬೇಕು ಎನ್ನುವ ಪ್ರಶ್ನೆಗೆ ಇನ್ನೂವರೆಗೂ ಉತ್ತರ ಸಿಕ್ಕಂತಿಲ್ಲ. ತಥಾಗತಿತ ಸಮಾಜದ ಪ್ರತಿನಿಧಿಯಂದು ನಾವು ಭಾವಿಸುವ ಕವಿ ವಾಸ್ತವದಲ್ಲಿ ದೈವೀ ಗುಣಗಳಿಂದ ಕೂಡಿರಬೇಕು. ಗಾಂಧಿಯಂತೆ ಕ್ಷಮಾಗುಣ ಹೊಂದಿದ ಮಹಾತ್ಮನಾಗಿರಬೇಕು. ಪವಾಡ ಪುರಷನೋ.. ಪ್ರವಾದಿಯೋ ಅಥವಾ ಇದಕ್ಕಿಂತ ಮಿಗಿಲಾಗಿ ಸ್ವತಃ ದೇವರೇ ಆಗಿರಬೇಕೆಂದು ಬಯಸುವವರಿದ್ದಾರೆ. ಇನ್ನೂ ಅವನಿಗೆ ಸಂಸ್ಕೃತಿಕ ಲೋಕದ ಪ್ರತಿನಿಧಿ ಎನ್ನುವ ಹಣೆಪಟ್ಟಿ ಅಂಟಿದ ನಂತರವಂತೂ ಮುಗಿಯಿತು. ಅವನಾಡುವ ಒಂದೊಂದು ಮಾತೂ ತುಂಬ ಎಚ್ಚರಿಕೆಯಿಂದಿರಬೇಕಾಗುತ್ತದೆ. ಅವನಿಡುವ ಒಂದೊಂದು ಹೆಜ್ಜೆಗೂ ಸಾವಿರ ಸಲ ವಿಚಾರ ಮಾಡಬೇಕಾಗುತ್ತದೆ. ಅವನು ಸಾವಿರ ಸಲ ವಿಚಾರ ಮಾಡಿದರೇನು..? ಕೋಟಿ ಕೋಟಿ ಬಾರಿ ಯೋಚನೆ ಮಾಡಿದರೇನು..? ಅವನ ಬಾಯಿಂದ ಅವನ ಲೇಖನಿಯಿಂದ ಹೊರಗೆ ಬರಬೇಕಾದ ಕಹಿಸತ್ಯ ಬಂದೇ ಬಿಡುತ್ತದೆ. ನಂತರ ಅವನು ಇಂಥ ತಪ್ಪು ಹೆಜ್ಜೆಗಾಗಿಯೇ ಕಾಯುತ್ತ ಕುಳಿತ ಪಟ್ಟಭದ್ರ ಹಿತಾಸಕ್ತಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಕವಿಯಾದವನು ನಡೆ ನುಡಿಯಲ್ಲಿ ನಯ ವಿನಯ ಹೊಂದಿದವನಾಗಿರಬೇಕು. ವಿನೀತ ಭಾವನೆ ಹೊಂದಿರಬೇಕು. ಅವನ ಬಾಯಿಂದ ಅಪ್ಪಿತಪ್ಪಿಯೂ ಆಕ್ರೋಶದ ನುಡಿಗಳು ಕಿಡಿಗಳು ಹೊರಹೊಮ್ಮಬಾರದು. ಅವನಿಂದ ಕೆಟ್ಟ ಪದಗಳು ಬಳಕೆಯಾಗಬಾರದು. ಬೈಗಳು ಬರಬಾರದು. ಯಾರ ಮನಸ್ಸಿಗೂ ನೋವಾಗಬಾರದು. ಆತ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ ಅತ್ಯಾಚಾರ, ಭ್ರಷ್ಟಾಚಾರಗಳ ಬಗ್ಗೆ ತೀಕ್ಷ್ಣವಾಗಿ ಖಾರವಾಗಿ ಪ್ರತಿಕ್ರಿಯಿಸಬಾರದು ಎನ್ನುವುದು ಈ ಸಮಾಜದ ಪೂರ್ವಾಗ್ರಹ ಆಲೋಚನೆ. ಆದರೆ ಇದಾವುದಕ್ಕೂ ಹೆದರದೆ ಈ ಪೂರ್ವಾಗ್ರಹ ಯೋಚನೆಗಳ ಬುಡಕ್ಕೆ ಬಹಳಷ್ಟು ಕವಿಗಳು ಬುದ್ದಿಜೀವಿಗಳು ಆಯಾಕಾಲಕ್ಕೆ ತಕ್ಕಂತೆ ಬಾಂಬ್ ಇಡುತ್ತಲೇ ಬಂದಿದ್ದಾರೆ. ಅಂತಹ ಎಂಟೆದೆಯ ಭಂಟರಲ್ಲಿ ಒಬ್ಬರು ದಲಿತ ಕವಿ ಸಿದ್ಧಲಿಂಗಯ್ಯನವರು,

“ಇಕ್ರಲಾ ವದೀರ್ಲಾ
ಈ ನನ್ ಮಕ್ಕಳ ಚರ್ಮಾ ಎಬ್ರಲಾ”
ಎಂದು ಗುಡುಗಿದಾಗ ಇಡೀ ಸಭ್ಯ ಸಮಾಜವೇ ಬೆಚ್ಚಿ ಬಿದ್ದಿತ್ತು. ಏನಪ್ಪ ಇದು ಒಬ್ಬ ಕವಿಯಿಂದ ಇಂತಹ ಮಾತೇ ಎನ್ನುವ ಅಭಿಪ್ರಾಯ ವ್ಯಕ್ತವಾದವು. ಆದರೆ ಸಮಾಜದ ಅಸಮತೆ ಅವ್ಯವಸ್ಥೆಯ ಕಾರಣ ನಿಜವಾದ ನೋವುಂಡಿದ್ದ ತಳ ಸಮದಾಯಗಳು ದಲಿತರು ಅವರ ಕವಿತೆಗಳನ್ನು ಓದಿ ಅವರ ಬೆಂಬಲಕ್ಕೆ ನಿಂತಿದ್ದರು. ಆಗ ಕವಿ ಹಾಡಿದ್ದು,

“ನೆನ್ನೆ ದಿನ
ನನ್ನ ಜನ
ಬೆಟ್ಟದಂತೆ ಬಂದರು
*
ತರಗೆಲೆ ಕಸಕಡ್ಡಿಯಾಗಿ
ತೇಲಿ ತೇಲಿ ಹರಿದವು
ಹೋರಾಟದ ಸಾಗರಕ್ಕೆ
ಸಾವಿರಾರು ನದಿಗಳು”
(ಸಾವಿರಾರು ನದಿಗಳು)
ಮುಂದವರಿದು ಇನ್ನೊಂದು ಕವಿತೆಯಲ್ಲಿ ಅವರು

“ದಲಿತರು ಬರುವರು ದಾರಿ ಬಿಡಿ
ದಲಿತರ ಕೈಗೆ ರಾಜ್ಯಕೊಡಿ”
(ದಲಿತರು ಬರುವರು)
ಎಂದು ಆರ್ಭಟಿಸಿದ್ದರು.

ಕವಿ ಎಂದಿಗೂ ತುಳಿತಕ್ಕೆ ಒಳಗಾದವರ, ಬಡವರ, ದೀನ ದಲಿತರ ಪರ ಅನ್ನುವ ಸತ್ಯ ಯಾವತ್ತಿಗೂ ಮರೆಯಬಾರದು. ಒಂದು ಅಧಿಕಾರಶಾಹಿ, ಶಕ್ತಿಶಾಲಿ ವರ್ಗದವರು ಜನ ಸಾಮಾನ್ಯರಿಗೆ, ಸಮಾಜದ ಕಟ್ಟ ಕಡೆಯ ಸಮುದಾಯಗಳಿಗೆ, ಕಟ್ಟ ಕಡೆ ನೌಕರರಿಗೆ, ಕಾರ್ಮಿಕರಿಗೆ, ಶ್ರಮಿಕ ವರ್ಗಕ್ಕೆ ಶೋಷಣೆ ಮಾಡಲು ಮುಂದಾದಾಗ ಕವಿ ತನ್ನ ಸಿಟ್ಟು ರೊಚ್ಚು ವ್ಯಕ್ತಪಡಿಸುವ ಮೂಲಕ ಸಮಾಜದ ಸಮಾನತೆಗೆ ಧ್ವನಿ ಎತ್ತುವುದು ಸಾಮಾನ್ಯವಾದದ್ದು, ಮತ್ತವನ ಸಾಮಾಜಿಕ ಹೊಣೆಗಾರಿಕೆ ಕೂಡ ಹೌದು. ಆದರೆ ಶಿಷ್ಟ ಸಮಾಜದ ಹರಿಕಾರರು ಎಂದು ಬಿಂಬಿಸಿಕೊಳ್ಳುವ ಈ ಅಧಿಕಾರಸ್ಥ ವರ್ಗಕ್ಕೆ ಯಾರಾದರೂ ಪ್ರಶ್ನಿಸುವ ಎದೆಗಾರಿಕೆ ತೋರಿದಾಗ ಅವನ ಕವಿತೆಯೆಂದರೆ ಹೀಗಿರುವುದಾ.,?. ಆತ ನಿಜವಾಗಿಯೂ ಕವಿಯೇ ಹೌದೋ ಅಲ್ಲವೋ ಎನ್ನುವ ಅನುಮಾನ ಎಂದು ಅತನ ಕವಿತ್ವದ ಮೇಲೆಯೇ ಕಪ್ಪು ಕಳಂಕ ಹೊರಿಸಿ ಆತೊಬ್ಬ ಒರಟ ಕ್ರೂರಿ..ಉಗ್ರನ ಪಟ್ಟ ಕಟ್ಟಲು ಹೋಗುವುದು ದುರಂತವೇ ಸರಿ. ದಾರಿ ತಪ್ಪಿದ ಮಕ್ಕಳನ್ನು ಗದರಿಸಿ ಹೇಳುವ ಅಪ್ಪನಂತೆ, ಬಡಿದು ಹೇಳುವ ಅಮ್ಮನಂತೆ ಕಠೋರ ಹೃದಯಿಯಂತೆ ಕವಿ ಗೋಚರಿಸಿದರೂ ಈ ಕವಿಯ ಆಂತರ್ಯದಲ್ಲಿ ತನ್ನ ಮಕ್ಕಳಿಗಾಗಿ ಮಮತೆಯ ಅಕ್ಕರೆಯ ಸಾಗರವನ್ನೆ ಹುದುಗಿಸಿಕೊಂಡಿರುವ ಕರುಣಾಮಯಿಯಾಗಿರುತ್ತಾನೆ ಎಂಬುದು ಅಷ್ಟೇ ಸತ್ಯದ ಮಾತು. ಮಕ್ಕಳಲ್ಲಿನ ಅಸಮಾನತೆ.. ಭೇದಭಾವ.. ಅಳಿಸಿ ಹಾಕುವುದೇ ಕವಿಯ ಕಾವ್ಯೋದ್ದೇಶವಾಗಿರುತ್ತದೆ. ಹೀಗಾಗಿ ಸಾಮಾಜಿಕ ಅಸಮಾನತೆಯನ್ನು ತುಂಬಾ ಉಗ್ರವಾದ ಪದಗಳಲ್ಲಿ ಸಿದ್ಲಿಂಗಯ್ಯನವರು ತಮ್ಮ ಕಾವ್ಯದಲ್ಲಿ ಕಟ್ಟಿ ಕೊಡುತ್ತಾರೆ.

“ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಪೊಲೀಸರ ಬೂಟಿಗೆ ಬಂತು
ಮಾಲಿಕರ ಚಾಟಿಗೆ ಬಂತು
ಬಂದೂಕದ ಗುಂಡಿಗಡ ಬಂತು”
( ನಲವತ್ತೇಳರ ಸ್ವಾತಂತ್ರ್ಯ)

ಎಂದು ಹಾಡುವ ಕವಿಗೆ ಅಕ್ಷರಗಳ ಮೂಲಕವಷ್ಟೆ ಸಮಾಜ ತಿದ್ದುವ ಜವಾಬ್ಧಾರಿ ಇರದೆ ತಮ್ಮ ಬೆವರಿಗೆ ತಮ್ಮ ಭಾವನೆಗಳಿಗೆ ಬೆಲೆ ಬಾರದಿದ್ದಾಗ ಹೋರಾಟಕ್ಕೂ ಇಳಿಯಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆದರೆ ಸಮೋಪಾಯ.. ಭೇದೋಪಾಯ.. ದಂಡೋಪಾಯ.. ಯಾವುದಾದರೂ ಸರಿ ಉಪಯೋಗಿಸುವ ಹುಚ್ಚು ಮನಸ್ಥಿತಿ ಅವನದಾಗಿರುತ್ತದೆ ಎನ್ನುವುದು ಅರಗಿಸಿಕೊಳ್ಳಲಾಗದ ಸತ್ಯವೇ ಸರಿ. ಇದೆಲ್ಲ ಇಲ್ಲಿ ಪ್ರಸ್ತಾಪಿಸಲು ಬಂದಿರುವ ಅಗತ್ಯ ಸಿದ್ದಲಿಂಗಯ್ಯ ಎಂಬ ದಲಿತ ಸಂವೇದನೆಯ ಕವಿ.

“ಕ್ರಾಂತಿ ಕನ್ಯೆ ಮೋಹಕ ಜನ್ಯೆ
ನಿನ್ನ ಮದುವೆಯಾಗುವೆ
ಕ್ರಾಂತಿ ಕಿಡಿ ಸಿಡಿಸುವಾಗ
ನಾ ನಿನ್ನ ತಬ್ಬುವೆ
*
ಮರೆಯುವರ ಚರ್ಮ ಸುಲಿದು
ಸೀರೆಕುಬಸ ಹೊಲಿಸುವೆ
ಮೊಸಗಾರ್ರ ಕೊರಳ ಕಡಿದು
ತಲೆಯ ಹಾರ ಹಾಕುವೆ..”
(ನನ್ನವಳಿಗೆ)

ಎಂದು ರುಂಡ ಕತ್ತರಿಸುವ ರಕ್ತ ಹರಿಸುವ ಮಾತ್ನಾಡುವ ಮೂಲಕ ಸಾಮಾಜಿಕ ಸಮತೆಗಾಗಿ ಕೆಂಡದುಂಡೆಗಳಾಗಿ ಕಾವ್ಯವನ್ನು ಉಗುಳುವ ಕವಿ ಮೂಲತಃ ಒಬ್ಬ ಮಾತೃ ಹೃದಯದ, ಮೃದು ಸ್ವಭಾವದ, ಪ್ರೇಮವೇ ಸರ್ವಸ್ವ ಎಂದು ನಂಬುವ ಒಬ್ಬ ಸಾಮಾನ್ಯ ವ್ಯಕ್ತಿಯಾಗಿರುತ್ತಾನೆ ಎಂಬುವುದು ನಾವು ಮರೆಯುತ್ತವೆ. ಮತ್ತು ಕವಿ ಕೂಡ ಪರಿಸರದ ಕೂಸು ಎನ್ನುವುದು ಕೂಡ ಅಲ್ಲಗೆಳೆಯುವಂತಿಲ್ಲ.

“ಬೆಳದಿಂದಗಳ ರಾತ್ರಿಯಲ್ಲಿ
ದೇವರ ನಾಡಿನಲ್ಲಿ
ಉರಿಬೆಂಕಿ ಬಿದ್ದು ಹೊಗೆಯಾಡಿತ್ತು
ತಾಜ ಮಹಲಿನ ಮೇಲೆ
ಗೋರಿ ಗುಡಿಸಲ ಮೇಲೆ
ಸಾಗರದ ತೀರಗಳ ಮೇಲೆ ಬಿದ್ದು
ಬೆಳದಿಂಗಳು ಕವಿತೆಯಾಗುವುದು”
(ಬೆಳದಿಂಗಳು)

ಎಂದು ದೇಶವನ್ನು ಭಾದಿಸಿವ ಉರಿಬೆಂಕಿ ಬೆಳದಿಂಗಳ ಕವಿತೆಯಾಗಿಸುವ ಕವಿ ಇನ್ನೊಂದು ಕಡೆ ಅದೇ ಬೆಳದಿಂಗಳಿಟ್ಟಕೊಂಡು

“ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ
ಸುಳಿದಾಡಬೇಡ ಗೆಳತಿ
ಚೆಲುವಾದ ನಿನ್ನ ಮಲ್ಲಿಗೆಯ ಮಯ್ಯ
ಸುಟ್ಟಾವು ಬೆಳ್ಳಿ ಕಿರಣ..”
(ಸುಟ್ಟಾವು ಬೆಳ್ಳಿಕಿರಣ)

ಎಂದು ಸುಂದರವಾದ ಪ್ರೇಮ ಪದ್ಯವನ್ನು ರಚಿಸುವುದು ಕವಿಯ ಮಗ್ಧತೆ ಹಾಗೂ ಮುತ್ಸದ್ದಿತನದ ವೈರುಧ್ಯಗುಣಗಳ ಸಂಗಮ ದರ್ಶಿಸುವಂಥದ್ದು. ಹೀಗೆ ಕವಿ ಸಿದ್ಧಲಿಂಗಯ್ಯ ಕಿಚ್ಚಿನ ಆಕ್ರೋಶಭರಿತ ಕವನಗಳನ್ನು ಕೊಟ್ಟಂತೆ ಅಷ್ಟೇ ಮಧುರವಾದ ಪ್ರೇಮ ಕಾವ್ಯಗಳನ್ನು ಕೊಟ್ಟಿರುವುದು ಸಾಹಿತ್ಯ ಪ್ರೇಮಿಗಳು ಮರೆಯಬಾರದು.

“ಹಾಡುವ ಹಕ್ಕಿ ಓಡುವ ಬಸ್ಸು
ಧುಮುಕುವ ಜೋಗದ ಜಲವನು ಕಂಡರೆ
ನಿನ್ನ ನೆನಪು ಗೆಳತಿ
*
ಕರೆಯುವ ಹಸುಗಳು ಕುಣಿಯುವ ನವಿಲು
ಚಂಗನೆಯ ನೆಗೆಯುವ ಜಿಂಕೆ ಕಂಡರೆ
ನಿನ್ನ ನೆನಪು ಗೆಳತಿ”
(ನೆನಪು)

ಗಳಂಥ ಕವಿತೆಗಳನ್ನು ಓದಿದಾಗ ಕವಿಯ ಪರಿಸರ ಸಂದರ್ಭ ಕಾವ್ಯಕಾರಣವಾಗುತ್ತದೆ. ಕವಿಯ ಮೂಡ್ ಆಯಾ ಕಾಲ ಸಂದರ್ಭಕ್ಕನುಗುಣವಾಗಿ ಕಾವ್ಯ ಹಿಂದಣ ಪರಿಸರ ಆಗುತ್ತದೆ. ಕವಿಯ ಮನಸತ್ವದ ಹಿನ್ನೆಲೆಯಾಗಿ ಕಾರ್ಯ ಮಾಡುತ್ತದೆ. ಕವಿಗೆ ಹೀಗೇ ಬರೆಯಬೇಕು ಇಂತಹದ್ದೇ ಬರೆಯಬೇಕೆಂದು ನಿರ್ಬಂಧಿಸಲು ನಿರ್ದೇಶಿಸಲು ಆಗದು. ಕಾವ್ಯ ಬರೆಯುವಾಗ ಕವಿಯ ಸ್ವತ್ತು, ಬರೆದಾದ ಮೇಲೆ ಓದುಗರ ಸ್ವತ್ತು. ಅವನಿಗೆ ಕಾಡಿದ್ದನ್ನು ತೋಚಿದ್ದನ್ನು ಗೀಚುವ ಹಕ್ಕು ಕವಿಗಿದೆ. ಹಾಗಂತ ಆತ ಗೀಚಿದ್ದೆಲ್ಲ ಶ್ರೇಷ್ಠ ಸಾಹಿತ್ಯ ಆಗಬೇಕೆನ್ನುವ ನಿಯಮವೂ ಇಲ್ಲ. ಆದರೆ ಸಾಮಾಜಿಕ ಆಗು ಹೋಗುಗಳಿಗೆ ಅನಾಹುತಗಳಿಗೆ ತಲ್ಲಣಗಳಿಗೆ ಕವಿಯ ಕಾವ್ಯ ಸ್ಪಂದಿಸಬೇಕಾದ ಸಾಕ್ಷಿಯಾಗಬೇಕಾದ ಅನಿವಾರ್ಯತೆ ಎಲ್ಲ ಕಾಲಕ್ಕೂ ಕಂಡು ಬರುವಂಥದ್ದು.

“ಭೂಮಿ ಆಕಾಶಗಳ ಅಂತರ ಅಳಿದು
ನಕ್ಷತ್ರ ಗೊಂಚಲಳಿಯಲೆಂದು
ಅಡವಿಯ ನಿದ್ದೆಯಲ್ಲಿ ನದಿ ಬಳಕುವುದನ್ನು
ಸದಾ ನೋಡಲೆಂದು
ಅಪರಿಚಿತ ಕಣಿವೆಗಳಲ್ಲಿ ಪ್ರೀತಿಯ ಪ್ರವಾಹ ಉಕ್ಕಿ
ಭೀತಿಯ ಬಂಡೆಗಳು ಕರಗಲೆಂದು
ನನ್ನ ಕವಿತೆ ಕನವರಿಸುತ್ತದೆ”
(ಕನವರಿಕೆ)

ಶೋಷಣೆ ಕಂಡಾಗ ಬೆಂಕಿಯುಗುಳುವ ಸದಾ ಸಮಾಜಿಕ ನ್ಯಾಯಕ್ಕಾಗಿ ಹಂಬಲಿಸುವ ಸಿದ್ಧಲಿಂಗಯ್ಯನವರ ಕಾವ್ಯ, ಪ್ರೀತಿಯ ಮೋಡಿಗೂ ಒಳಗಾಗುವುದು ಕಂಡಾಗ ಕವಿ ಒಬ್ಬ ಪವಾಡ ಪುರಷನೂ ಪ್ರವಾದಿಯೂ ಅಲ್ಲ ನಮ್ಮಂತೆ ರಾಗ ದ್ವೇಷಗಳನ್ನು, ಪ್ರೀತಿ ಪ್ರೇಮ ಹೊಂದಿರುವಂಥ ಸಾಮಾನ್ಯ ವ್ಯಕ್ತಿ ಎಂಬುದು ಅರಿವಿಗೆ ಬರುವ ಸಂಗತಿ. ಆದರೆ ತಾನು ಕಂಡಿದ್ದು ಅನುಭವಿಸಿದ್ದು ಓದುಗರ ಹೃದಯಕ್ಕೆ ತಟ್ಟುವಂತೆ ಪದಗಳಲ್ಲಿ ಕಟ್ಟಿಕೊಟ್ಟು ಮುಂದಿನ ಪೀಳಿಗೆಗೆ ದಾಟಿಸುವ ಅನನ್ಯವಾದ ಕಲೆ ಅವನಲ್ಲಿ ರಕ್ತಗತವಾಗಿರುತ್ತದೆ ಎಂದು ಭಾವಿಸಬೇಕಾಗಿದೆ.

“ಹುಳಿಮಾವು” ಎಂಬ ಪದ್ಯ ಅವರು ಪಿ. ಲಂಕೇಶರ ಕುರಿತು ಬರೆದಂತಹದ್ದು. ಅದು ಸ್ವತಃ ಸಿದ್ದಲಿಂಗಯ್ಯನವರಿಗೂ ಬಹಳಷ್ಟು ಅನ್ವಯಿಸುವದರಿಂದ ಅದನ್ನು ಹೇಳಿ ಈ ಪುಟ್ಟ ಬರೆಹ ಮುಗಿಸುವೆ,

“ಕವಿಯೊಂದು ಬೇಲಿ ಮೇಗಳ
ಹೂವು, ಅವನೆಂದು
ತನ್ನಂತರಂಗಕ್ಕೆ ತಾನು ಬದ್ಧ”
(ಹುಳಿಮಾವು)

-ಅಶ್ಫಾಕ್ ಪೀರಜಾದೆ.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x