ಕಥಾಲೋಕ

ಭಾವನೆಗಳ ರೋಲರ್-ಕೋಸ್ಟರ್: ಅಮೂಲ್ಯ ಭಾರದ್ವಾಜ್‌

“ಅದ್ಯಾಕೋ ನಿದ್ದೆನೆ ಬರ್ತಿಲ್ಲ ಕಣೆ”, ಎಂದು ಶ್ರೀಧರ ಇತ್ತಲಿಂದ ಅತ್ತ ತನ್ನ ಮಗ್ಗಲನ್ನು ಬದಲಿಸಿ ಪಕ್ಕದಲ್ಲಿ ಮಲಗಿದ್ದ ಸೀತಾಳಿಗೆ ಹೇಳಿದ. “ನಂಗೂನು ಅಷ್ಟೆ ರೀ”, ಅವಳು ಅವನ ಕಡೆ ತಿರುಗಿ ಹೇಳಿದಳು. “ಗಂಟೆ ಎಷ್ಟಾಯ್ತು ನೋಡು ಸ್ವಲ್ಪ” ಎಂದು ಕೇಳಿದ. ಸೀತಾ ದೀಪ ಹಚ್ಚಿಕೊಂಡು ಮಂಚದ ಕೆಳಗಿಟ್ಟಿದ್ದ ತನ್ನ ಮೊಬೈಲ್‌ಫೋನನ್ನು ಕೈಗೆತ್ತಿಕೊಂಡು- “ಓಹ್‌ ಆಗ್ಲೇ ೩.೩೦ ಆಗ್ಬಿಟಿದೆ, ಯೋಚ್ನೇಲಿ ಟೈಮಾಗಿದ್ದೇ ಗೊತ್ತಾಗ್ಲಿಲ್ಲ” ಎಂದು ಹುಬ್ಬೇರಿಸಿದಳು. “ಅದೇನ್‌ಯೋಚ್ನೆನೆ ನಿಂಗೆ? ಯಾವಾಗ್ಲು ಏನೋ ತಲೆಗ್‌ ಹಾಕೊತ್ಯಾಪ” ಶ್ರೀಧರನಿಗೆ ವಾಸ್ತವ ಗೊತ್ತಿದ್ದರೂ, ಅದೇನೂ ಆಗೇ ಇಲ್ಲದಂತೆ ಒಮ್ಮೆ ನಕ್ಕು, ಮಗ್ಗಲು ಬದಲಿಸಿದ. ಸೀತಾಳಿಗೆ ಶ್ರೀಧರನ ಮನಸ್ಸು ಗೊತ್ತಿದ್ದರಿಂದ ಅವಳೂ “ಹೌದೌದು” ಎಂದು ಇತ್ತ ತಿರುಗಿದಳು.
ತಿರುಗಿ ಮಲಗಿದ ಶ್ರೀಧರನಿಗೆ ತನ್ನ ತಂದೆ ಗೋಪಾಲರಾಯರ ಜ್ಞಾಪಕ ಬರತೊಡಗಿತು.

ಆಗ ಶ್ರೀಧರನಿಗೆ ವಯಸ್ಸು ಸುಮಾರು ಹತ್ತು ಇರಬೇಕು. ಒಮ್ಮೆ ಅವನು ಆಟವಾಡುತ್ತಾ ಬಿದ್ದು ಗಾಯ ಮಾಡಿಕೊಂಡು ಮನೆಗೆ ಅತ್ತುಕೊಂಡು ಹೋದಾಗ, ಅತೀ ಕಾಳಜಿಯಿಂದ ಶುಶ್ರೂಷೆ ಮಾಡಿದ್ದರು ಗೋಪಾಲರಾಯರು. ಆವತ್ತೆ ಅವನ ತಾತ ಅಂದರೆ ಗೋಪಾಲರಾಯರ ತಂದೆ ಮಾಧವರು ಹಾಸಿಗೆಯಿಂದ ಏಳಲು ಹೋಗಿ ಮಂಚ ಹೊಡಿಸಿಕೊಂಡಿದ್ದರೆ “ಅಯ್ಯೋ” ಎಂದುಕೊಂಡು ಬ್ಯಾಂಡೇಜ್‌ ಹಾಕಿದ್ದರು. ಅದೇ ಶುಶ್ರೂಷೆ ಮಾಡಿದರೂ ಮುಖದಲ್ಲಿ ಶ್ರೀಧರನಿಗಾದಾಗ ತೋರಿಸಿದ ಆ ಕಾಳಜಿಯೇ ಕಂಡಿರಲಿಲ್ಲ. ಇದನ್ನು ನೋಡಿದ ಯಾರಿಗೆ ಬೇಕಾದರೂ ಅನ್ನಿಸುತ್ತಿತ್ತೇನೊ, ಇದೇನಿದು? ಮಗನೂ ಆಗಾಗ ಬೀಳುತ್ತಾನೆ, ತಾತನೂ ಕಾಲಿನ ಬಾಧೆಯಿರುವುದರಿಂದ ಆಗಾಗ ಬೀಳುವರು. ಮಗನಿಗಾದಾಗ ಪ್ರೀತಿಯಿಂದ ಬ್ಯಾಂಡೇಜ್‌ ಹಾಕುವ ಗೋಪಾಲರಾಯರು ಅಪ್ಪನಿಗಾದಾಗ ಬೇಸರದಿಂದ ಹಾಕುವರು, ಎಂದು. ಆದರೆ ಜಗತ್ತಿಗೆ ಶುಶ್ರೂಷೆಯೊಂದೆ ಕಾಣಿಸುವುದು, ಮಗ ಅಷ್ಟು ಮಾಡಿದರೆ ಸಾಕು, ನೋಡಿಕೊಳ್ಳುವುದೆಂದೆ ಅರ್ಥ.

ಶ್ರೀಧರನಿಗೆ ತಂಗಿಯೊಬ್ಬಳು ಇದ್ದಳು. ಶ್ರೀಧರ ಹಾಗೂ ಅವಳು, ಇಬ್ಬರೂ ತಾತ ಮಾಧವ ಮತ್ತು ಅಜ್ಜಿ ಗೋಧಾರೊಂದಿಗೆ ಆಟವಾಡುತ್ತಿದ್ದಾಗ, ಗೋಧಾ ಮಾಧವರ ಕಾಲಿಗೆ ನೀವಲು ಎಣ್ಣೆ ತರಲು ಮಧ್ಯ ಎದ್ದುಹೋದಾಗ, ಇಬ್ಬರೂ ಆಡುವ ಮಕ್ಕಳು ಮಾಧವರ ನಶ್ಯದ ಡಬ್ಬಿಯನ್ನು ತೆಗೆದುಕೊಂಡು ಹೋಗಿ ಮೂಗಿಗೆ ಹಾಕಿಕೊಂಡು ಒದ್ದಾಡುತ್ತಿದ್ದರು. ಮಕ್ಕಳು ಒಂದಾದ ಮೇಲೊಂದು ಸೀನುವುದನ್ನು ಕೇಳಿಸಿಕೊಂಡ ಯಮುನಾ ಅಡುಗೆ ಮನೆಯಿಂದ ಓಡಿಬಂದಳು. ಗೋಧಾಳು ಸಹ ಈಕಡೆಯಿಂದ ಓಡಿಬಂದಳು. ಎಲ್ಲರೂ ಮಕ್ಕಳ ಕೈಯಲ್ಲಿ ನಶ್ಯದ ಡಬ್ಬಿಯನ್ನು ನೋಡಿ ಅವಾಕ್ಕಾದರು. ಯಮುನಾ ಮಾಧವ-ಗೋಧರನ್ನು ನೋಡಿ-“ಅಯ್ಯೋ ನೋಡಿ ಏನ್‌ ಮಾಡದು ಈ ತಲೆಹರಟೆ ಮಕ್ಕಳನ್ನ?” ಎಂದು ತಲೆ ಚಚ್ಚಿಕೊಂಡು ಇಬ್ಬರನ್ನು ಎಳೆದುಕೊಂಡು ಹೋಗಿದ್ದಳು. ಅಂದೇ ರಾತ್ರಿ ರೂಮಲ್ಲಿ ಯಮುನಾ ಗೋಪಾಲರಾಯರಿಗೆ ಅಂದಾದ ಘಟನೆಯನ್ನು ಹೀಗೆಂದಿದ್ದಳು-“ಅಲ್ಲ ನಿಮ್ಮಪ್ಪ ಅಮ್ಮನಿಗೆ ಅಷ್ಟು ಗೊತ್ತಾಗುವುದು ಬೇಡವಾ? ಮಕ್ಕಳ ಕೈಯಲ್ಲಿ ನಶ್ಯದ ಡಬ್ಬ ಕೊಟ್ಟಿದ್ದಾರಲ್ಲ? ಅವರಿಗೇನಾದರೂ ಬುದ್ಧಿ ಇದೆಯಾ? ಏನಾದರೂ ಆಗಿದ್ದರೆ?” ಗೋಪಾಲರಾಯರು ವಾದಕ್ಕೆ ಇಳಿಯದೆ ಸುಮ್ಮನೆ ಕೂತಿದ್ದರು. “ಇವರೊಬ್ಬರು. ಅವ್ರ ಅಪ್ಪ ಅಮ್ಮನ ವಿಷ್ಯ ಬಂದ್ರೆ ಏನೂ ಮಾತೇ ಬರಲ್ಲ ಪಾಪ. ಛೇ!” ಎಂದು ಎದ್ದು ನಡೆದಿದ್ದಳು. ಶ್ರೀಧರ ಮತ್ತು ತಂಗಿ ಸರೋಜ ಸೀನುತ್ತಾ ಗೋಪಾಲರಾಯರ ಬಳಿ ಮೆತ್ತಗೆ ಬಂದು ಮೂಗಿಗೆ ಎಣ್ಣೆ ಸವರಿಸಿಕೊಂಡಿದ್ದರು. ಯಮುನಾಳ ಮನಸ್ಸೂ ಹಗುರಾಗಿ ಮಕ್ಕಳಿಗೆ ಸಮಾಧಾನ ಮಾಡಿದ್ದಳು.

ಶ್ರೀಧರನಿಗೆ ತಾಯಿ ಕಂಡರೆ ಹೆಚ್ಚು ಪ್ರೀತಿಯು ಇತ್ತು, ಆದರೆ ಆಗೊಮ್ಮೆ ಈಗೊಮ್ಮೆ ಆಗುವ ಈ ಮಾತುಗಳ ನಡುವೆ ಯಾರು? ಏನು? ಯಾಕೆ? ಅರ್ಥವಾಗುತ್ತಿರಲಿಲ್ಲ.
ಹೀಗೆ ಹಳೆಯದನ್ನು ನೆನೆದು ಮತ್ತೆ ಮಗ್ಗಲು ಬದಲಿಸಿದ ಶ್ರೀಧರನಿಗೆ ಸೀತಾ ಕಂಡಳು. “ಸೀತಾ ಸೀತಾ.” ಎರಡು ಬಾರಿ ಕೂಗಿದ. ಉತ್ತರ ಬಾರದೆ “ಓಹ್‌ ಮಾಲ್ಕಂಡ್ಳು ಅನ್ಸುತ್ತೆ” ಅಂದುಕೊಂಡು ತನ್ನ ಮೊಬೈಲ್‌ ತೆಗೆದು ಒಂದೆರಡು ವಾಟ್ಸ್ಯಾಪ್‌ ವಿಡಿಯೋ ನೋಡುತ್ತಿದ್ದನು. ಶಬ್ಧ ಕೇಳಿ ಸೀತಾ “ಅಯ್ಯೋ ಕಣ್ಣು ಹಾಳಾಗುತ್ತೆ ಅಷ್ಟೆ, ಸಾಕು ಮಲ್ಕೊಳಿ” ಎಂದಳು. ಶ್ರೀಧರ “ಅಯ್ಯೊ ಮಲ್ಗಿಲ್ವೆನೆ?” ಎಂದು ಮೊಬೈಲ್‌ ಆಫ್‌ ಮಾಡಿ, ಸೀತಾಳು ಮದುವೆಯಾಗಿ ತನ್ನ ಮನೆಗೆ ಬಂದ ಕ್ಷಣವನ್ನು ನೆನೆದು- “ಇವಳೇನೂ ಕಡಿಮೆ ಇರ್ಲಿಲ್ಲ” ಎಂದುಕೊಂಡ. ತನ್ನ ತಾಯಿ ಯಮುನಾ ಹಾಗು ಸೀತಾಳ ನಡುವಿನ ಸಂಬಂಧ ಚೆಂದ ಎನಿಸಿದರೂ ಒಳಗೊಳಗೆ ಇರುಸು ಮುರುಸು ಇದ್ದೇ ಇತ್ತು. ಶ್ರೀಧರ ಮತ್ತು ಸೀತಾಳಿಗೆ ಮಗ ಜೇಷ್ಠ ಹುಟ್ಟಿದ ಮೇಲಂತೂ ಅದು ಜಾಸ್ತಿಯೆ.

ಗೋಪಾಲರಾಯರೂ ಇನ್ನೇನು ದೇವರ ಪಾದ ಸೇರುವ ಸಮಯ ಬಂದಿದೆ ಎನ್ನುವ ಹೊತ್ತು. ಶ್ರೀಧರ ಅವರ ಬಳಿ ಕುಳಿತಿದ್ದಾಗ, ಆ ಕಡೆ ಸೀತೆ ಮನೆಗೆ ಬರುವವರನ್ನೆಲ್ಲಾ ಕಾಳಜಿಯಿಂದಲೇ ನಡೆಸಿಕೊಂಡು ಬೇಕಾದ ಹಾಗೆ ಎಲ್ಲಾ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಳು. ಅದೇ ಒಮ್ಮೆ ಗೋಪಾಲರಾಯರು ತಾವು ಹೇಳಿದಂತೆ ಮನೆಯೇ ನಡೆಯಬೇಕು ಎಂದು ಹೇಳುವಾಗ, ಸೀತಾ ಎದುರಿಸಿ ತನ್ನ ನಿಲುವನ್ನು ಸಾರಿದ್ದಳು. ಆಗಾಗ ಶ್ರೀಧರನ ಬಳಿ ಸೀತಾ ಹೀಗೆ ಹೇಳಿದ್ದೂ ಉಂಟು- “ನಿಮ್ಮಪ್ಪನಿಗೆ ನಿಮ್ಮಮ್ಮನ್ನ ಎದುರಿಸಕ್ಕೆ ಆಗಲ್ಲ, ನಾವ್ ಮಾತ್ರ ಅವ್ರಿಬ್ರು ಹೇಳದ್ ಕೇಳ್ಕೊಂಡು ಬಿದ್ದಿರಬೇಕಾ?” ಎಂದು.

ಆದರೆ ಸೀತಾಳ ಕಂಡರೆ ಶ್ರೀಧರನಿಗೆ ಅಪಾರ ಗೌರವ. ಒಮ್ಮೆ ಯಮುನಾ ಸೀತೆಯ ಬಾಣಂತನದ ವಿಚಾರದಲ್ಲಿ ಅವಳ ತವರುಮನೆಯ ಬಗ್ಗೆ ಅವಳ ಅಕ್ಕನ ಬಳಿ ಕೊಂಕಾಡಿದ್ದಳು. ಆ ಅಕ್ಕನ ಸೊಸೆ ಸೀತಾಳಿಗೆ ಈ ವಿಷಯವನ್ನು ಮಾತಿನ ಭರದಲ್ಲಿ ಮುಟ್ಟಿಸಿಬಿಟ್ಟಿದ್ದಳು. ಸೀತಾ ಆಗ ಯಮುನಾಳಿಗೆ ಏನೂ ಹೇಳದೆ, ಶ್ರೀಧರನ ಬಳಿ ತನ್ನ ತಾಯಿ ಅಷ್ಟು ಕಷ್ಟ ಪಟ್ಟಿದ್ದ ಬಗ್ಗೆ ಕೊಂಕಾಡಿದ್ದು ಬೇಸರ ತಂದಿದ್ದ ವಿಷಯ ಹೇಳಿ ಸುಮ್ಮನಾಗಿದ್ದಳು. ಹೀಗಾಗಿ ಈ ಅತ್ತೆ ಸೊಸೆಯ ಸಂಬಂಧ ಎಂತಹ ನಾಜೂಕಾದರೂ, ಸೀತಾ ನಿಭಾಯಿಸಿಕೊಂಡು ಹೋಗಿದ್ದರ ಬಗ್ಗೆ ಹೆಮ್ಮೆ ಎಂದುಕೊಂಡಿದ್ದ.

ತಕ್ಷಣ ಅವನ ತಲೆಗೆ ಅಂದು ಬೆಳಗಿನ ಘಟನೆ ನೆನಪಿಗೆ ಬಂದುಬಿಟ್ಟಿತು. ಜೇಷ್ಠನಿಗೆ ಮಗುವಾಗಿ ಎರಡು ವರ್ಷವಾಗಿದೆ, ಆ ಮಗುವಿಗೆ ಮೊಬೈಲ್‌ ಹುಚ್ಚು. ಎಲ್ಲರೂ ತಮಗೆ ಬೇಕಾದ ಹೊತ್ತಲ್ಲಿ ಆ ಮಗುವಿನ ಕೈಗೆ ಮೊಬೈಲನ್ನು ಕೊಟ್ಟು ಕೂಡಿಸಿಬಿಡುವರು. ಆದರೆ ಆವತ್ತು ಮಾತ್ರ, ಶ್ರೀಧರ ಐದಕ್ಕಿಂತ ಎರಡು ನಿಮಿಷ ಹೆಚ್ಚೇ ಆ ಮಗುವಿಗೆ ಮೊಬೈಲ್‌ ತೋರಿಸಿದ್ದು, ಜೇಷ್ಠ ಹಾಗು ಅವನ ಹೆಂಡತಿ ಸಹನಾಳಿಗೆ ಇರುಸು ಮುರುಸು ತಂದಿತ್ತು. ಸಹನಾ ಕೊಂಚ ಹೆಚ್ಚೇ ಖಾರವಾಗಿ-“ಈ ಮಾವನಿಂದಲೇ ನಮ್ಮ ಮಗ ಮೊಬೈಲ್‌ ಕಲಿತದ್ದು” ಎಂದುಬಿಟ್ಟಿದ್ದಳು. ಜೇಷ್ಠನೂ “ಹೌದೇ” ಎಂಬಂತೆ ಸುಮ್ಮನಾಗಿಬಿಟ್ಟಿದ್ದ. ಇದು ಶ್ರೀಧರನಿಗೆ ಅಪಾರ ದುಃಖ ತಂದುಬಿಟ್ಟಿತ್ತು. ಆದರೆ ಸೀತಾಳು ಅದನ್ನು ಮನಸ್ಸಿಗೆ ಹಚ್ಚಿಕೊಂಡಿದ್ದು ಅವನಿಗೆ ಕಂಡಿತ್ತು. ತನಗೆ ಏನಾದರೂ, ಆಗದಂತೆ ಸುಮ್ಮನಿದ್ದುದು ಅವಳಿಗೂ ಗೊತ್ತಿದ್ದರೂ ಸುಮ್ಮನಾಗಿದ್ದ.
ಅದು ಅಲ್ಲದೆ ಯಮುನಾಳ ಕಾರ್ಯ ಮೊನ್ನೆ ಮೊನ್ನೆ ತಾನೇ ಆದಾಗಲೂ ಸಹನಾ ಬಂದಿರಲಿಲ್ಲ, ಅದೇ ಅವಳ ಅಜ್ಜನ ಕಾರ್ಯಕ್ಕೆ ಅವಳಮ್ಮನ ಬಲವಂತದಿಂದ ಹೋಗಿಯಾದರೂ ಬಂದಿದ್ದಳು. ಅವಳಿಗೇನೂ ಬರಲು ಇಚ್ಛೆಯಿಲ್ಲ ಎಂದಲ್ಲ, ಆದರೆ ಅವರುಗಳು ಮಾಡುವ ಆ ದುಡ್ಡು ಸಿಗುವ ಸಾಫ್ಟ್‌ವೇರ್‌ಕೆಲಸವೇ ಅಂತದ್ದು ಎಂದು ಶ್ರೀಧರ ಸೀತಾಳಿಗೆ ತಿಳಿದಿತ್ತು. ಆದರೂ, ಯಾರಿಗೆ ಹೇಳವುದು? ಅವರ ಕಂಪೆನಿಗಾ? ಅವಳಿಗಾ? ಮಗನಿಗಾ?

ಅವರುಗಳ ಕೆಲಸವೇ ಸ್ಟ್ರೆಸ್‌ಫುಲ್. ನಾವೇ ಅರ್ಥ ಮಾಡಿಕೊಳ್ಳಬೇಕು ಎಂದು ಶ್ರೀಧರ ಮೂರು ತಲೆಮಾರಿನ ಯೋಚನಾ ಲಹರಿಯನ್ನು ಮಾಡಿ ಮುಗಿಸುವ ಹೊತ್ತಿಗೆ, ಆಚೆಯಿಂದ “ಮಾವ ಅತ್ತೆ” ಎಂದು ಸಹನಾ ಕರೆಯುವುದು ಕೇಳಿಸಿತು. ಈಬ್ಬರೂ ಪಟಪಟನೇ ಎದ್ದು ಕಣ್ಣೊರಿಸಿಕೊಂಡು ಆಚೆ ಬಂದು “ಏನಮ್ಮಾ?” ಎಂದು ಗಾಬರಿಯಿಂದ ಕೇಳಿದರು. “ಅಯ್ಯೊ! ಘಂಟೆ ಹತ್ತಾಗಿದೆ. ನೀವು ಎದ್ದಿರ್ಲಿಲ್ವಲ್ಲ. ಅದಕ್ಕೆ ಕರ್ದೆ. ನೀವು ಯುಶ್ಯುಯಲಿ ಆರಕ್ಕೆ ಎದ್ದುಬಿಡ್ತೀರಾ ಅಲ್ವ? ಅಂತ.”

“ಯಾಕೊ ನಿದ್ದೇ ಬರ್ಲಿಲ್ಲಮ್ಮ” ಎಂದು ಹೇಳಿ ಇಬ್ಬರೂ ಮುಖ ಮುಖ ನೋಡಿಕೊಂಡರು. “ಹೌದಾ ಸರಿ.” ಎಂದು ನಡೆಯುತ್ತಾ “ಅತ್ತೆ ಕಾಫಿ ಮಾಡ್ಕೊಡ್ತಿನಿ. ಉಪ್ಪಿಟ್ಟೆ ಮಾಡ್ಬಿಟ್ಟೆ” ಎಂದು ಹೇಳಿ ತನ್ನ ರೂಮೊಳಗೆ ಹೋಗುವ ಮುನ್ನ ಏನೂ ಆಗೇ ಇಲ್ಲದಂತೆ ಆರಾಮವಾಗಿ “ಮಾವ ಸಾರಿ. ನೆನ್ನೆ ತುಂಬಾ ಕೆಲಸ, ನಿಮ್ಮ ಮೇಲೆ ಹಾಕಿಬಿಟ್ಟೆ. ಆಸ್‌ ಯುಶ್ಯುಯಲ್”ಅಂದಳು. ಶ್ರೀಧರ “ಇಲ್ಲಮ್ಮ ಮೊಬೈಲ್‌ ನೋಡೋದು ಒಳ್ಳೇದು ಅಲ್ಲ” ಎಂದು ಬಚ್ಚಲು ಮನೆಗೆ ಹೋದ. “ನಾವು ಮಾಡದು ಅದೇ, ಹೆಂಗಪ್ಪ ಈ ಮೊಬೈಲ್‌ ಪ್ರಾಬ್ಲಂ ಇಂದ ತಪ್ಪುಸ್ಕೊಳದು?” ಎಂದು ಗೊಣಗುತ್ತಾ ಸಹನಾ ಅಡುಗೆ ಮನೆಗೆ ಹೋದಳು. ಶ್ರೀಧರ ಸೀತಾ ವಾಪಸ್ಸು ಬರುವಷ್ಟರಲ್ಲಿ ನಾಲ್ಕು ಕಪ್ಪು ಕಾಫಿ ಜೊತೆ, ಒಂದು ಪುಟ್ಟ ಲೋಟ ಹಾರ್ಲಿಕ್ಸ್‌ ರೆಡಿಯಾಗಿತ್ತು. “ಅಬ್ಬ ಸಾಟರ್ಡೇ, ಬನ್ನಿ ಎಲ್ಲ ಒಟ್ಟಿಗೆ ಕುಡ್ಯಣ” ಎಂದು ಸಹನಾ ಕರೆದ್ಲು. ಎಲ್ಲಾರೂ ಲೇಟ್‌ ಸ್ಯಾಟರ್ಡೇ ಮಾರ್ನಿಂಗ್‌ ಕಾಫಿಗೆ ಸೇರಿದಾಗ ಶ್ರೀಧರ-ಸೀತಾಳ ಮನಸು ಹಗುರಾಗಿ ನಕ್ಕದ್ದು ಕಂಡಿತು. ಶ್ರೀಧರ ಮನಸಿನೊಳಗೆ ಅಂದುಕೊಂಡ- “ನಮ್ಮ ಮಕ್ಕಳಿಗೂ ಒಂದು ಕುಟುಂಬ ಬಂದಾಗ ನಾವು ಎಷ್ಟೋ ಪರಿಸ್ಥಿತಿಗಳಲ್ಲಿ ಅಳು-ನಗುವಿನ ಹಾದಿಯಲ್ಲಿ ಮಿಂದು ಏಳಲೇ ಬೇಕು, ಅವರು ನಮಗೆ ಬೇಕೆಂದರೆ ಈ ಎಮೋಷನಲ್‌ ರೋಲರ್‌-ಕೋಸ್ಟರ್‌ನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ನೆನ್ನೆ ನಮ್ಮಪ್ಪ, ಇಂದು ನಾನು, ನಾಳೆ ಜೇಷ್ಠ. ಎಲ್ಲರಿಗೂ ಆಗುವುದೆ” ಎಂದು ಕಾಫಿ ಹೀರಿ ಎಲ್ಲರೊಂದಿಗೆ ಮಗುವಿನ ಆಟ ನೋಡಿ ನಕ್ಕ.

-ಅಮೂಲ್ಯ ಭಾರದ್ವಾಜ್‌


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *