ಆರನಕಟ್ಟೆ ರಂಗನಾಥರ ‘ಕಾರುಣ್ಯದ ಮೋಹಕ ನವಿಲುಗಳೇ’ ಕವಿತೆಗಳ ಆಳವು “ಬೋಧಿಸತ್ವ ಮಾತಂಗನು ತನಗೆ ಸಿಕ್ಕ ಭಿಕ್ಷಾನ್ನವನ್ನು ತೆಗೆದುಕೊಂಡು ಒಂದು ಗೋಡೆಯನ್ನಾಶ್ರಯಿಸಿ ಜಗಲಿ ಮೇಲೆ ಕೂತು ತಿನ್ನ ಹತ್ತಿದ್ದನು.. ಆತನ ಗಮನ ಬ್ರಹ್ಮಲೋಕದಲ್ಲಿತ್ತು. ಉಣ್ಣುತ್ತಿದ್ದ ಬೋಧಿಸತ್ವ ಮಾತಂಗನನ್ನು ರಾಜಭಟರು ಖಡ್ಗದಿಂದ ಕತ್ತರಿಸಿ ಹಾಕಿದರು. ಆ ಚಂಡಾಲನು ಸತ್ತ ಕೂಡಲೆ ಬ್ರಹ್ಮಲೋಕದಲ್ಲಿ ಉದಯಿಸಿದನು. ದೇವತೆಗಳು ಕೋಪಗೊಂಡು ಮೇಧರಾಷ್ಟ್ರದ ಮೇಲೆ ಕೆಂಡದ ಮಳೆಗರೆದರು. ಇಡೀ ರಾಷ್ಟ್ರ ಮತ್ತು ಪರಿಷತ್ತು ಸುಟ್ಟು ನಷ್ಟವಾಯಿತು. ಮೆಜ್ಜಾರಣ್ಯ ಮಾತಂಗಾರಣ್ಯ ಎಂದಾಯಿತು. ಬುದ್ದನು ಹೇಳಿದನು ‘ನಾಯಿಯ ಮಾಂಸವನ್ನು ತಿನ್ನುತ್ತಿದ್ದ ಚಾಂಡಾಲನ ಒಬ್ಬ ಮಗನಾದ ಮಾತಂಗನು ಪ್ರಸಿದ್ದನಿದ್ದನು. ಆ ಮಾತಂಗನಿಗೆ ಅತ್ಯಂತ ಶ್ರೇಷ್ಟ ಮತ್ತು ದುರ್ಲಭವಾದ ಯಶಸ್ಸು ದೊರೆಯಿತು. ಅನೇಕ ಕ್ಷತ್ರಿಯರೂ ಬ್ರಾಹ್ಮಣರೂ ಆತನ ಸೇವೆಗೆ ನಿಲ್ಲುತ್ತಿದ್ದರು. ವಾಸನೆಗಳನ್ನು ಹೊಡೆದೋಡಿಸುವ ದೊಡ್ಡ ಮಾರ್ಗದಿಂದ ಮತ್ತು ಜಾತಿಯ ದಿವ್ಯಜ್ಞಾನದಿಂದ ಅವನು ಬ್ರಹ್ಮಲೋಕವನ್ನೇರಿದನು. ಬ್ರಹ್ಮಲೋಕದಲ್ಲಿ ಹುಟ್ಟಿ ಬರಲು ಅವನ ಜಾತಿಯು ಅಡ್ಡಿಯಾಗಲಿಲ್ಲ’ ಎಂದು ಬುದ್ದನು ಈ ಧರ್ಮ ಕಥನವನ್ನು ಕೂಡಿಸುತ್ತ ‘ಆಗ ಮಾಂಡವ್ಯನಾಗಿದ್ದವನು ಈಗ ಉದಯನನು. ಮಾತಂಗ ಪಂಡಿತನಾಗಿದ್ದವನು ನಾನೇ’ ಎಂದು ತಿಳಿಸಿದನು” ಎಂಬ ಪ್ರಾಚೀನ ಅಸ್ಪೃಶ್ಯ ಕಥನವು ಆದಿ ದಲಿತ ಸಂಸ್ಕೃತಿಯ ಆಸ್ಮಿತೆಯಾಗಿದೆ.
ಈ ಆದಿ ದಲಿತ ಸಂಸ್ಕೃತಿಯ ಆಸ್ಮಿತೆ, ಮನುಕುಲದ
ಬದುಕಿನ ಬಹುದೊಡ್ಡ ಮೌಲಿಕ ಜೀವ ಕಾರುಣ್ಯವೇ ಆಗಿದೆ. ಇದು ಆರನಕಟ್ಟೆ ರಂಗನಾಥರ ಕವಿತೆಗಳ ಆತ್ಮ. ಹೀಗಾಗಿಯೇ ಅವರ ಇಲ್ಲಿನ ಕವಿತೆಗಳು ಗಟ್ಟಿಯಾಗಿ ಸ್ಪಷ್ಟವಾಗಿ ದಟ್ಟವಾದ ಜೀವನಾನುಭವ ನೀಡುತ್ತವೆ.
ಒಂದು ಗಟ್ಟಿ ಕವಿತೆ – ಶಿಷ್ಟಭಾಷಾ ಪ್ರಯೋಗ ಮತ್ತು ಓದುತ್ತಾ, ಅದು ಕ್ಲಿಷ್ಟ ಅನಿಸಿದಾಗ! ಇನ್ನೂ ಸರಳೀಕರಿಸಿದರೆ ‘ಅರ್ಥವಾಗದೆ ಇರುವುದು’ ಎಂಬ ಸಾಂಪ್ರಾದಾಯಿಕ ಗ್ರಹಿಕೆ ಈಗಲೂ ಇದೆ!
ಈ myth ನ್ನು ಒಡೆದು ಕಟ್ಟುವ ಕಾಲ ಬಂದ ಮೇಲೆ ಈ ‘ಶಿಷ್ಟ ಮತ್ತು ಕ್ಲಿಷ್ಟ’ ಪ್ರಯೋಗಗಳೇ ಭಾಗಶಃ ಕಾಣೆಯಾದವು. ಆದರೆ ಅದರೊಳಗು ಇವತ್ತಿನ ತಲೆಮಾರಿನ ಕವಿತೆಗಳ ರಚನೆಯಲ್ಲಿ ‘ಶಿಷ್ಟ’ ಪ್ರಯೋಗ ಇಲ್ಲದಿದ್ದರು ಅಲ್ಲಲ್ಲಿ ಆಗಾಗ ‘ಕ್ಲಿಷ್ಟ’ ಅನ್ನಬಹುದಾದ ಪ್ರಯೋಗವನ್ನು ಕಾಣಬಹುದು!
ನೋವಿನ ವಿವರಗಳು ಒಟ್ಟುಗೂಡಿದಾಗ, ಅವು ಅಕ್ಷರ ರೂಪ ಪಡೆದು ನೆಲದ ಕರುಣೆಯ ದನಿಯಾಗಿ ಜೀವಂತ ಕಾವ್ಯವಾಗುತ್ತವೆ. ಅದು ಆರನಕಟ್ಟೆ ರಂಗನಾಥ್ ಅವರ ‘ಕಾರುಣ್ಯದ ಮೋಹಕ ನವಿಲುಗಳೇ’ ಕವಿತೆಗಳನ್ನು ಓದುತ್ತ ಅನ್ನಿಸಿದ್ದು ಹೀಗೆ.
ನನ್ನ ಗ್ರಹಿಕೆಗೆ ಪೂರಕವಾಗಿ, ಕವಿ ಆರನಕಟ್ಟೆ “ಕಾವ್ಯವು ಸ್ವಯಂವಲ್ಲ. ನನ್ನ ಕಾವ್ಯ ಈ ನೆಲದ ಕ್ಷೀಣ ದನಿಗಳಿಂದ, ನಿರಂತರ ಓದಿನ ಒಡನಾಟ, ತಿಕ್ಕಾಟ, ತಿರುಗಾಟಗಳಿಂದ ದಕ್ಕಿರುವ ಗ್ರಹಿಕೆಗಳು ರೂಪಿಸಿವೆ” ಹಾಗೆ “ಪ್ರತಿರೋಧವನ್ನು ದಾಖಲಿಸುವುದು ಕಾವ್ಯದ ಆದ್ಯತೆಯೆಂದು ನಂಬಿದ್ದೇನೆ. ಇಂತಹ ಹಲವು ನೆಲೆಗಟ್ಟುಗಳನ್ನು ಎಡತಾಕಿಕೊಂಡೆ ಕಾವ್ಯ ಕಟ್ಟುತ್ತಿದ್ದೇನೆ” ಎಂಬುದರಲ್ಲಿದೆ.
“ಕಾರುಣ್ಯದ ಮೋಹಕ ನವಿಲುಗಳೆ’ ಎಂಬುದು ಸಮಗ್ರ ಜೀವನ ಪ್ರೀತಿಯ ರೂಪಕವಾಗಿದೆ. ವೈವಿಧ್ಯಮಯ ಬಣ್ಣಗಳ, ಬಣ್ಣಗಳ ನೃತ್ಯದ ಜೀವನಗಾಥೆಯಲ್ಲಿ ಹಸಿವು ,ನೋವು,ಸಾವುಗಳು ಸುಂದರ ಕಾವ್ಯದ ಹೆಸರುಗಳೇ ಆಗಿ ಇಲ್ಲಿ ಕಂಗೊಳಿಸಿರೋದು ಆರನಕಟ್ಟೆ ರಂಗನಾಥರ ಕಾವ್ಯ ವೈಶಿಷ್ಟ್ಯವಾಗಿದೆ” ಎಂದು ಈ ಕೃತಿ ಕುರಿತಾದ ಕವಿ ಎಚ್.ಗೋವಿಂದಯ್ಯ ಆಡಿರುವ ಮಾತು ನನ್ನ ಅಂತರಂಗದ ಮಾತೂ ಆಗಿದೆ.
ಇಲ್ಲಿನ ಎಲ್ಲ ಕವಿತೆಗಳು ಒಂದಲ್ಲ ಒಂದು ಕಾರಣಕ್ಕೆ ಓದಿನ ಮೋಹಕತೆಗೆ ಸಿಲುಕಿಸಿ ಓದುಗನನ್ನು ಬಿಟ್ಟೂ ಬಿಡದೆ ಕಾಡುತ್ತವೆ. ಬೆವರಿನ ಗಂಜಿಯ,
“ಅಂಗೈಯ ರೇಖೆಯಲ್ಲಿ ಸವೆದ ಆರ್ಬಿಐ ಮುದ್ರೆ /ಈಗ ಬೆವರಿನ ಗಂಜಿಗೂ/ಜನನಾಂಗವೆ ಅನ್ನಾಂಗವಾದ ಪರಿ ಬಯಲೊಳಗೆ” ತುಂಬಾ ಆರ್ದ್ರವಾದ ನೋವಿನ ಗೆರೆಗಳ ಬದುಕನ್ನು ಕುರಿತ ತೀವ್ರತರ ಸಂವೇದನೆ ಇದೆ. ಇಲ್ಲಿ ‘ಜನನಾಂಗವೇ ಅನ್ನಾಂಗ’ ದ ಮಾತು ಕವಿಯ ಗಂಟಲು ಮಾತ್ರವಲ್ಲ ಓದುಗನ ಗಂಟಲೂ ಕಟ್ಟಿಕೊಂಡು ಏದುಸಿರಿನ ಅನುಭವ ಭಾಸವಾಗುತ್ತದೆ.
ಅರಿವು ಎಂದರೆ ಪ್ರಜ್ಞೆ. ಈ ಪ್ರಜ್ಞೆ ‘ಅವ್ವನೆದೆಯ ಅಜ್ಜನ ಅರಿವು’ ಕೂಡ. ಈ ಅರಿವು,
“ಶಾರದಾ ಪೂಜೆ ಸರಸ್ವತಿ ಪೂಜೆಯಲ್ಲಿ/ಮುಟ್ಟಿದರೆ ಮುನಿಯುವ ಮಂದಿಯೊಳಗೆ/ಅಜ್ಜನ ಹೆಸರೆತ್ತಿ ಕೈ ಮುಗಿಯಲು ಕಲಿಸಿದ/ಅವ್ವನ ಬೆವರು ಪದಗಳ ನಾಡಿ ಹಿಡಿದು/ಅನ್ನಕ್ಕಿಂತ ಅಕ್ಷರ ಲೇಸು ಅಂದಾಗ”
ವ್ಯಕ್ತವಾಗುವ ದನಿಯಲ್ಲಿ ಪ್ರಜ್ಞೆಯ ಅರ್ಥಾತ್ ಅರಿವಿನ ರೂಪ ಅಡಗಿದೆ. ಆ ರೂಪವೇ ಅಂಬೇಡ್ಕರ್! ಬಹುಶಃ ‘ಮನೆಯೇ ಮೊದಲ ಪಾಠಶಾಲೆ, ತಾಯಿಯೆ ಮೊದಲ ಗುರು’ ಎಂಬುದಕ್ಕೆ ಸಮಾನಾರ್ಥಕವಾಗಿ ಪ್ರಜ್ಞೆಗೆ ಅರ್ಥಾತ್ ಅರಿವಿಗೆ ಸಾರ್ಥಕತೆಯನ್ನು ‘ಅವ್ವನೆದೆಯ ಅಜ್ಜನ ಅರಿವು’ ಕಟ್ಟಿಕೊಡುತ್ತದೆ.
ಕೂಳಿಲ್ಲದವನ ಹೆಗಲ ಮೇಲೆ ಬಂದೂಕು ಇಟ್ಟು ಎದುರಾಳಿ ಸುಡುವಂತೆ ‘ಧರೆಧೂಪದ ಕುಂಡ’ ದೊಳಗೊಂದು ಸುಡುವ ಕೆಂಡವೊಂದು ಮಲಗಿದೆ.
“ಉತ್ತ ನೆಲವೆಲ್ಲ ಬುಡಮೇಲು/ಸುರಿದ ಬೆವರೆಲ್ಲವು ಆವಿ/ಉಸಿರಾದರು ಆಡಲು ಮಾತೆಲ್ಲಿ ಉಳಿದಿದೆ”
ಹೀಗೆ ಕಡು ಬೇಗೆಯಲಿ ಒದ್ದಾಡುವ ಕವಿ, ಕಡೆಗೆ-
‘ಅಳಬಹುದೆ ಅರೆಗಂಜಿಗೆ/ಕೂಡದು ಅಳಕೂಡದು/
ಆಳುವ ಮಂದಿಗೆ ಅಳುವೂ ಆನಂದ’
ಎಂಬ ನಿಖರನಿಷ್ಟವಾದ ಸ್ಪಷ್ಟ ಎಚ್ಚರದ ಸಂದೇಶವನ್ನೂ ರವಾನಿಸುತ್ತಾನೆ.
ಚಾರ್ಲ್ಸ್ ಬೋದಿಲೇರ್ ನ ‘ಶತ್ರು’
“ಎಲ್ಲ ದುಃಖಮಯ; ಕಾಲ ಜೀವವನ್ನು ತಿನ್ನುತ್ತಾನೆ.
ಕಣ್ಣಿಗೆ ಕಾಣಿಸದ ಆ ಶತ್ರು ನಮ್ಮ ಬದುಕಿನ ಮೇಣ
ವನ್ನೆಲ್ಲ ಕರಗಿಸಿ ರಕ್ತವನ್ನು ಹಿಂಗಿಸುತ್ತ ಬರುತ್ತಾನೆ”
ಕವಿತೆ ಬೆಚ್ಚಿ ಬೀಳಿಸುವಷ್ಟು, ಆರಕಟ್ಟೆ ರಂಗನಾಥರ ‘ಅಲೆದಷ್ಟು ಅನಾಥಗೊಂಡ ಪಾದಗಳು’ ಕವಿತೆ ನಿಗಿನಿಗಿ ಬಿಸಿಲಿಗೆ ಒಣಗಿದ ದಟ್ಟ ಕಾಡಿಗೆ ಬೆಂಕಿ ಬಿದ್ದು ಚಿಟಾರ್ ಪಟಾರೆಂದು ಧಗಧಗನೆ ಉರಿವಾಗ ಒಂದು ಅವ್ಯಕ್ತವಾದ ಯಾತನೆಯೊಂದು ಅಸ್ಸಹಾಯಕ ದನಿಯಿಂದ ಕೂಗುವಂತೆ,
“ನಡುರೋಡಿನ ಗೆರೆಗಳಲ್ಲಿ/ಮೈ ಮುರಿದು ಮಲಗಿರುವ/ಅಲೆಮಾರಿ ಪಾದಗಳಿಗೆ ನೆರಳಿಲ್ಲ” ಸಾಲು ಓದುಗನನ್ನು ಬೆಚ್ಚಿ ಬೀಳಿಸುತ್ತದೆ.
ಪಿ.ಲಂಕೇಶ್ “ತನ್ನ ನೋವನ್ನೆಲ್ಲ ಕಾವ್ಯದಲ್ಲಿ ಚೆಲ್ಲಿಕೊಳ್ಳುತ್ತಲೇ ಅದಕ್ಕೆ ಸ್ವಂತ ಜೀವ ಬರುವಷ್ಟು ಕಲಾತ್ಮಕತೆ ತೋರಿಸುವುದು ಬೋದಿಲೇರನ ಹಿರಿಮೆ”ಯಂತೆ ‘ಅಲೆದಷ್ಟು ಅನಾಥಗೊಂಡ ಪಾದಗಳು’ ರುದಿತಗೊಂಡು ಕೊನೆಗದು
“ಬರಡು ರೋಡಿಗೆ ರಕ್ತದ ಬೊಟ್ಟಿಟ್ಟು
ನೆರಳ ದೀವಿಗೆಯಲ್ಲೆ ಮಡುಗಟ್ಟಿ
ಅಲೆದಷ್ಟು ಅನಾಥಗೊಂಡಿವೆ ಪಾದಗಳು” ಕ್ಷೀಣಗೊಂಡು ಕಲಾತ್ಮಕತೆಯ ಪಾರಮ್ಯದೊಳಗೆ ತನ್ನ ಒಳಗಿನ ಮಡುಗಟ್ಟಿದ ನೋವನ್ನು ಚೆಲ್ಲಿದ ಚಿತ್ರವಿದೆ.
ಹಾಗೆ, ಜನವಿರೋಧಿ ನಿಲುವುಗಳ ವಿರುದ್ಧ ಪ್ರಭುತ್ವವನ್ನು ಪ್ರಶ್ನಿಸಿ ಪ್ರತಿರೋಧಿಸುವುದೇ ಅಪರಾಧವಾಗಿದೆ. ಇದು ವ್ಯವಸ್ಥೆಯ ಸಹಿಸಲಸಾಧ್ಯವಾದ ಸಾಮಾಜಿಕ ವಾತಾವರಣ ಕದಡುವಿಕೆ ಸೃಷ್ಟಿಗೆ ಕಾರಣವಾದಾಗ ಹೊಣೆಗಾರಿಕೆ ಇರುವ ಕವಿಯೊಬ್ಬ ಒಳಗಣ್ಣಿನಲ್ಲೆ ಎಲ್ಲವನ್ನು ಅವಲೋಕಿಸಿ ತನ್ನ ನಿಲುವು ಪ್ರಕಟಿಸುತ್ತಾನೆ. ಆ ನಿಲುವು ಯಾವ ಸ್ವರೂಪದ್ದೆಂದು ಅಂದಾಜು ಮಾಡಲಾಗದು. ಅದು ತಣ್ಣಗಿರಬಹುದು, ಬಿರುಸಿನದಾಗಿರಬಹುದು, ಕಡೆಗೆ ಅದು ಪ್ರತಿರೋಧದ ಕೆಚ್ಚಿನ ಜೀವಪರ ನಿಲುವೇ ಆಗಿರುತ್ತದೆ.
ಹೀಗೆ, ಚಳುವಳಿ ಹೋರಾಟದ ಬೀಜಗಳು ಆಳದ ಮಣ್ಣಿನಲಿ ಹೂತು ಜೀವಶಕ್ತಿ ಪಡೆಯುತ್ತ , ಅದುವರೆಗೂ ಇಂಥ ಜೀವಶಕ್ತ ಬೀಜಗಳು ತಣ್ಣಗೆ ಮಲಗಿ ವಾತಾವರಣದ ಅಪೇಕ್ಷೆಗೆ ಮೈಕೊಡವಿ ಬಿರಿದು ಮಣ್ಣನ್ನು ಸೀಳಿ ಮೊಳಕೆಯೊಡೆದು ಮೇಲೆದ್ದು ಟಿಸಿಲೊಡೆಯುತ್ತದೆ. ಎಪ್ಪತ್ತು ಎಂಭತ್ತರ ದಶಕದ ದಲಿತ ಚಳುವಳಿಯು ಇಂಥದ್ದೇ ದುರಿತ ಕಾಲದ ಸನ್ನಿವೇಶದಲ್ಲಿ ಹುಟ್ಟಿದಂತಹುದು. ಹೀಗೆ ಹುಟ್ಟು ಪಡೆದ ಪ್ರತಿರೋಧದ ದನಿಗಳನ್ನು ಹತ್ತಿಕ್ಕುವ ಚಾಣಾಕ್ಷ ನಡೆಗೆ ಪ್ರಭುತ್ವಗಳು ಆಗಾಗ ಬೇಸ್ಮೇಟ್ ಹಾಕುತ್ತಲೇ ಇರುತ್ತವೆ.
ಇದು ಎಲ್ಲ ಕಾಲಕ್ಕು ಇರುವಂಥದ್ದೇ!
ಸತತ ಏಳು ವರ್ಷಗಳಿಂದ ಮತ್ತು ಅದಕ್ಕು ಮುನ್ನಿನ ದಿನದಿಂದಲು ಎಪ್ಪತ್ತು ವರ್ಷದ ಇತಿಹಾಸ ಕೆಂಟುತ್ತಲೆ ಪ್ರತಿರೋಧದ ದನಿಗಳ ವಿರುದ್ದ ದೇಶದ್ರೋಹದ ಆಪಾದನೆ ಅಸ್ತ್ರ ಬೀಸುತ್ತ ವಿಶ್ವಗುರುವಿನ ಭ್ರಮೆಯಲ್ಲಿ ತೇಲುತ್ತಿರುವ ಪ್ರಸ್ತುತ ನಿರಂಕುಶ ಪ್ರಭುತ್ವವನ್ನು ತಣ್ಣಗೆ ಪ್ರತಿರೋಧಿಸುವ ‘ಅಕ್ಷರಕ್ಕೆ ಅಂಜಬೇಡಿ’ ಕವಿತೆ, ಅವರದೆ ‘ಮನದ ಮಾತ’ನ್ನು ಕೆದಕಿ ಪ್ರಶ್ನಿಸುತ್ತಲೇ ಪ್ರತಿಭಟನೆಗೊಂದು ಭೂಮಿ ತೂಕದ ಗಟ್ಟಿ ಅಡಿಪಾಯ ಹಾಕಿದೆ.
“ನಿಮ್ಮೆದೆಯ ಅಳತೆಯಲ್ಲೀಗ/ಇಂಚುಗಳ ಲೆಕ್ಕ ಕ್ಲೀಶೆಯೆನಿಸಿ/ತೇಪೆಯ ಟೇಪು ನೂಲಾಗಿದೆ ಗುರುವೆ” ಎಂದು ಕೆಣಕುತ್ತ ,
“ಅಕ್ಷರಕ್ಕೆ ಅಂಜಬೇಡಿ ಗುರುವೆ/ಬಾಬಾಸಾಹೇಬರ ಬಿತ್ತನೆಗಳು ಕುಲಾಂತರಿಗಳಲ್ಲ/ಬೆವರಿಗೆ ಬೆಳೆವ ಮೊಳಕೆಗಳು/ಅಕ್ಷರದವ್ವನ ಫಸಲು/ಉಣ್ಣಲು ಉರವಣಿಸಲು ಮಾತ್ರವಲ್ಲ/ಹೋರಾಟದ ಬದುಕು ಕಟ್ಟಲು/ ಈ ನಾಡ ಮಣ್ಣಿನಲಿ ಬಿತ್ತಲಾಗಿದೆ”
ಎಂಬ ನೈಜ ಅಕ್ಷರದ ಸಾಲುಗಳು ಅಂಬೇಡ್ಕರ್ ಕಲಿಸಿದ ಸ್ವಾಭಿಮಾನದ ಹೋರಾಟದ ಕೆಚ್ಚಿನ ಮಹತ್ವವನ್ನು , ಪ್ರಸ್ತುತ ಪ್ರಭುತ್ವದ ಎದೆಗೆ ಒದ್ದು ವಿಚಲಿತಗೊಳಿಸಿದ ಸಫಲತೆಯಲ್ಲಿ ಆರನಕಟ್ಟೆ ರಂಗನಾಥರ ಗಟ್ಸ್ ಇದೆ! ಈ ಗಟ್ಸ್ ನ ಹಿಂದೆ,
“ಮಗ್ಗುಲು ಬದಲಾದ ಶೂನ್ಯದಲ್ಲಿ/ಅಕ್ಷರದ ಅರವಳಿಕೆಯ/ಆನಾಳ ಎದೆಯ ಸಂಗತಿಗಳೇ/ಸಾದೋಹರಣವಾಗಿ ಬರೆದ/ನನ್ನೆದೆಯ ಬಯಲೊಳಗೆ ಆಡುತ್ತಿದೆ” ಎನುವಲ್ಲಿ ಆನಾಆಹ್ಮತೋವಾಳ inspire ಇದೆ.
ಈ ಅನಾಆಹ್ಮತೋವಾ ರಷ್ಯನ್ ಕ್ರಾಂತಿಕಾರಿ ಕವಯತ್ರಿ. ಈಕೆಯ ಬಗ್ಗೆ “ನಿನ್ನ ನಿಟ್ಟುಸಿರು ಬಿರುಗಾಳಿಯಾಗಿ ಮೊರೆಯುತ್ತಿದೆ. ನಿನ್ನ ಕಣ್ಣೀರು ಮಳೆಗಾಲದಲ್ಲಿ ಭೋರ್ಗರೆಯುವ ಮಹಾನದಿ” ಎಂದು ಜಿ.ಪಿ.ಬಸವರಾಜು ಆಕೆಯ ಪ್ರಭುತ್ವದ ಮೇಲಿನ ಪ್ರತಿರೋಧದ ನೆಲೆಯ ಆಳ ಅಗಲದ ಅರಿವು ಗಮನಿಸಿದರೆ ಆಕೆ ಒಂದು ಲೆಜೆಂಡ್! ‘ಸಾವಿರದ ಮಹಾಕಾವ್ಯ’ ಅನಿಸಿಬಿಡುತ್ತದೆ!
ಆಕೆಯ,
“ಸತ್ತವರಷ್ಟೇ ತಮಗೆ ಸಿಕ್ಕ ಚಿರಶಾಂತಿಗೆ ಖುಷಿಪಟ್ಟು
ನಸುನಗುತ್ತಿದ್ದ ಕಾಲವದು/ಲೆನಿನ್ ಗ್ರಾದ್ ಪಟ್ಟಣ ಸೆರೆಮನೆಗಳ ಅಂಚಿನಲ್ಲಿ/ ಕೆಲಸಕ್ಕೆ ಬಾರದ ಬಾಲದಂತೆ ಜೋತಾಡುತ್ತಿತ್ತು/ಚಿತ್ರ ಹಿಂಸೆಗಾಗಿ ಬಂಧಿಗಳು ಬುದ್ಧಿ/ ಕಳೆದುಕೊಂಡಿದ್ದರು/ತುಕಡಿ ತುಕಡಿಗಳಾಗಿ ಅವರನ್ನು ಸಾಗಹಾಕುತ್ತಿತ್ತು/ಇಂಜಿನ್ನಿನ ಸಿಳ್ಳೆಗಳು ಕ್ಷಣಕಾಲ ಕೂಗಿ/
ವಿದಾಯಗಾನ ಹಾಡಿದ್ದವು/ಸಾವು ತಲೆಯ ಮೇಲೆ ನಕ್ಷತ್ರದಂತೆ ತೂಗಾಡುತ್ತಿತ್ತು/ರಕ್ತ ಮೆತ್ತಿದ ಬೂಟುಗಳಡಿ/’ಬ್ಲ್ಯಾಕ್ ಮಾರಿಯಾ’ದ ಚಕ್ರಗಳಡಿ/
ನಿರಪರಾಧಿ ರಶ್ಯ ವಿಲವಿಲ ಒದ್ದಾಡುತ್ತಿತ್ತು”
ಕವಿತೆಯ ಒಡಲಾಳ ಕಟ್ಟಿಕೊಡುವ ಗಾಢತೆ –
ಇಲ್ಲಿನ,
‘ನನ್ನೆದೆಯ ಬಯಲ ಹಾಡು’ ಸೂಕ್ಷ್ಮವಾಗಿ,
“ಇರಿಯುತ್ತಿದೆ ಕತ್ತಲ ಕಿರಣಗಳು/ಸಂತೋಷವಿಲ್ಲದೆ
ಮನವ/ಅಗ್ಗಿಷ್ಟಿಕೆಯಲ್ಲಿರಿಸಿ/ಜೀವ ಪಡೆಯಲು ತಾಳಿದ/ಕುತೂಹಲದ ಪರಿಭಾಷೆಗಳೆ/ದಟ್ಟೈಸಿರುವ ಎದೆಯ/ ರೋಮದಂತೆ ನವಿರಾಗಿದೆ”
ಆದರೆ,
“ಪಿಸುಮಾತುಗಳು ಬೆವರುವ ಸಮಯ/ ಗಂಟಲೊಳಗಿಳಿಯದ ಎಂಜಲು/ವಿಶ್ರಾಂತ ವೇದನೆಗೆ ಜೀವವಾಗಿ/ಉಸಿರಿನ ಉಚ್ವಾಸದಲ್ಲಿ ಉರಿದು/ಉದುರುವ ಕೂದಲ ನಿರ್ವಾಣದಲ್ಲಿ ಅರಳುವ ಮೈ ತಡವಿ ಸ್ತೀಖ್ ಗಳೊಳಗೆ ದಹಿಸಿದೆ” ಸಾಲು ಅಷ್ಟೇ ಗಾಢವಾಗಿ ಕಟ್ಟಿಕೊಡುತ್ತದೆ. ಹಾಗಾಗಿ ಆನಾಆಹ್ಮಾತೋವಾಳ ಕೆಚ್ಚು ತಲ್ಲಣ ಜೀವನ ಪ್ರೀತಿಯ ಸೆಲೆ ಗಾಢವಾಗಿ, ಆ inspire ಆರನಕಟ್ಟೆ ರಂಗನಾಥರ ಎಲ್ಲ ಕವಿತೆಗಳಲ್ಲಿ ಹಾಸು ಹೊಕ್ಕಾಗಿದೆ.
ಕನ್ನಡ ನೆಲದ ಈ ತಲೆಮಾರಿನ ತಮಿಳು ಮೂಲಬೇರಿನ ರಕ್ತದ ಕುಡಿ ಆರನಕಟ್ಟೆ ರಂಗನಾಥ್ ತನ್ನ ಪೂರ್ವಜರ ಕುರಿತ ‘ಕಳ್ಳುಬಳ್ಳಿಗಳ ಹುಡುಕುತ..’ “ಈಳ್ ತಮಿಳರ ಬೆವರ ಹನಿ/ ಚೆಲ್ಲಿದ ನೆಲವೆಲ್ಲವು/ ಬಾಂಬುಗಳ ಹುದುಗಿಸಿಟ್ಟು” ಹೇಳುವ ರಕ್ತಸಿಕ್ತ ಹೋರಾಟದ ಕಥನ ವಿವರವುಳ್ಳ ಕವಿತೆ.
ಇಲ್ಲಿ,
“ಮಗು ಅಳುವಾಗ ತಾಯಿ/ ಸೈನಿಕ ಶಿಬಿರದೆಡೆಗೆ ಮುಖ ಮಾಡುತ್ತಾಳೆ/ಅಲ್ಲಿ ಹೆಂಗಸರ ವಾಸನೆಗೆ ಎರಗುವ/ಲಂಕಾ ಸೈನಿಕರ ವೀರ್ಯ ಈಜುವುದೆ ಇಲ್ಲ” ಎಂಬುದರ ಮಗ್ಗುಲಿಗೆ ಆಳುವ ಪ್ರಭುತ್ವಕ್ಕಿದು ತೃಣವಾಗಿ “ಈಳ್ ತಮಿಳರ ಆತ್ಮಗಳು/ ಆತ್ಮಹತ್ಯೆಗೆ ಯತ್ನಿಸುತ್ತವೆ!” ಕೂಡ. ಈ ಚಿತ್ರದ ಹಿಂದೆ ಮೇಜು ಕುಟ್ಟುವವರ ದಂಡಿನ ಇತಿಹಾಸವಿದೆ. ಹಾಗೆ ಈ ಸಾಲು ಮತ್ತೆ ಬೋದಿಲೇರ ಪಾಪದ ಹೂಗಳನ್ನೆ ನೆನಪಿಸುತ್ತದೆ.
‘ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಳಮ್’ ಎಂಬ ಪ್ರತ್ಯೇಕತಾವಾದಿ ಸಂಘಟನೆ ತಮಿಳುಭಾಷಾ ಜನ ವಾಸಿಸುವ ಶ್ರೀಲಂಕಾದ ಉತ್ತರ ಮತ್ತು ಪೂರ್ವದಲ್ಲಿ ತಮಿಳುಭಾಷಾ ಜನರು ಜನಸಂಖ್ಯಾಧಾರಿತವಾಗಿ ತಮ್ಮ ಹಕ್ಕುಗಳ ಬಗ್ಗೆ ಪ್ರಬಲವಾಗಿ ಪ್ರತಿಪಾದಿಸಿತು. ಶ್ರೀಲಂಕಾ ಸರ್ಕಾರ ತಮಿಳುಭಾಷಾ ಜನರ ಪರವಾದ ಈ ಹೋರಾಟವನ್ನು ಹತ್ತಿಕ್ಕಲು ಮಾಡಿದ ಕುಟಿಲೋಪಾಯದಿಂದ ಅಲ್ಲಿನ ನಿವಾಸಿ ತಮಿಳು ಜನರ ಬದುಕು ರಕ್ತಸಿಕ್ತವಾಯ್ತು. ತದ ನಂತರ ಆ ಸಂಘಟನೆಯ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಹತನಾದ. ಆ ಬಳಿಕವೂ ಶ್ರೀಲಂಕಾದ ಉತ್ತರ ಮತ್ತು ಪೂರ್ವ ಭಾಗದಲ್ಲಿ ತಮಿಳು ಭಾಷಿಕರ ರೋಧನೆ ಇವತ್ತಿಗೂ “ಆಡುವ ಮಾತಿಗೂ ಬಾಂಬಿನ ವಾಸನೆ/ಅನುದಿನವು ಅದಾದ ಮರುದಿನಕೆ/ವರ್ಣರಂಜಿತ ಪುಟಗಳಲಿ/ಈಳ್ ತಮಿಳರ ಉಸಿರು ಕಣ್ಣೀರಿಡುತ್ತವೆ/ಕಳ್ಳುಬಳ್ಳಿಗಳ ಹುಡುಕುತ್ತಲೇ” ಇರುವ ಈ ಕವಿತೆ ಆರನಕಟ್ಟೆ ರಂಗನಾಥರ ಆಳದ ನೋವಿನ ಮಹತ್ವದ ಕವಿತೆ.
ಬೆಳಕಿನೊಂದು ಕಿರಣ’ ದಲಿ ಹಸಿವು ಬಡತನದ ಗೆಳೆತನಕ್ಕೆ ಸಾಕ್ಷ್ಯವಿದೆ. “ನಿನ್ನಿಷ್ಟ ಕತ್ತಲೊ ಬೆಳಕೊ/ಹಸಿವು ಕಾಡದ ಕತ್ತಲಿರಲಿ” ಈ ಗೆಳೆತನದ ಸಂವಾದದಲಿ “ನಡುರಾತ್ರಿ ಕಿಟಕಿಯಲ್ಲಿ ಇಣುಕಿದ್ದೀಯ?/ ಇಲ್ಲ ಗೆಳೆಯ/ ಒಮ್ಮೆಯಾದರು ಕಣ್ಣಿಡು ಗೆಳೆಯ/ ಅಲ್ಲಿ ರಾತ್ರಿಯೆಲ್ಲವು/ಹಸಿವಿನ ಮೆರವಣಿಗೆ ಕಾಣುವೆ!” ಎಂಬಲ್ಲಿ ಗುಪ್ತವಾಗಿ ಮೀಟುವ ಭಾವದ ಬೆಸುಗೆ ಇದೆ. ಮೌನದ ರಾತ್ರಿಯಲಿ ಕತ್ತಲಿನ ಭರಪೂರ ಮೆರವಣಿಗೆ ಇದೆ. ಅದು ಕಟ್ಟಿಕೊಡುವ ಕನಸಿನ ಕಿರಣಗಳು ಬೆಳಗಾಗುವ ತನಕ ಕೊಡುವ ಖಷಿ ಇದೆ. ಕತ್ತಲೊಳಗೆ ಬೆಳಕು ಹುಡುಕುವ, ಬೆಳಕಿನಲಿ ಕತ್ತಲು ಕಂಡಿರುವ ಮನವೀಗ – ಬೆಳಕಿನ ಸಾಮ್ರಾಜ್ಯದಲ್ಲಿ ಕತ್ತಲ ಬದುಕು ಬದುಕುವುದಕ್ಕಿಂತ ಕತ್ತಲೊಳಗೆ ಕತ್ತಲಾಗಿ ಆ ಕತ್ತಲು ಸ್ಪರಿಸುವ ದಿವ್ಯಕಿರಣ ಸವಿಯುವ ಸಂವಾದದ ರಗಳೆಯು ತಾರ್ಕಿಕ ಅಂತ್ಯದಲಿ ಕತ್ತಲ ಬಾಗಿಲು ತೆರೆದು ಬೆಳಕನ್ನು ಕಾಣುವ ಮುಖ್ಯವಾಹಿನಿಗೆ ಬಂದು ನಿಲ್ಲುವಲ್ಲಿ ಸಂವಾದಕ್ಕೆ ತೆರೆ ಬೀಳುತ್ತದೆ. ಇಲ್ಲಿ ಅಂತಿಮವಾಗಿ ಕವಿ – ಹಸಿವು, ಬಡತನ, ದಾರಿದ್ರ್ಯದೊಳಗು ಸ್ವಾಭಿಮಾನ ತುಂಬಿದ ಬದುಕಿನ ಚಿತ್ರಣವನ್ನು , ಕಟ್ಟಕಡೆಗೆ ಇದೆಲ್ಲವನ್ನು ಮೀರುವ ಬುದ್ಧನ ಧ್ಯಾನಸ್ಥ ಸ್ಥಿತಿಯ ಎರಡು ಏಕಾಂತವಾಸಿ ಮನಸುಗಳ ತುಮುಲವನ್ನು ಆರ್ದ್ರವಾಗಿ ಅದಕ್ಕೊಂದು ಚೊಕ್ಕ ಚೌಕಟ್ಟಿನ ರೂಪ ಕೊಟ್ಟು ‘ಬೆಳಕಿನೊಂದು ಕಿರಣ’ ದಲ್ಲಿ ಹಿಡಿಟ್ಟಿದ್ದಾರೆ.
“ದಾಸ್ಯದ ಪದವರಿಯದ/ ಎಳೆಯ ಜೀವದ ಕಣ್ಣೀರ ಮಡುವಿಗೆ” ಸಾಲಿನ ಗೋಚರ ಮುಗ್ಧತೆಯೊಂದು ದಿಕ್ದಿಕ್ಕಿಗೂ ಹರಡಿ ಹೋಗಿರುವ ಕಥೆಯೊಂದ ಹೇಳುತ್ತದೆ. ದೇವದಾಸಿಯಂಥ ಮೌಢ್ಯದ ಹಸಿಹಸಿ ಲೋಲುಪದ ‘ಲೋಹದ ಅಂಗಗಳಿಲ್ಲ ಹರಿವ ದೇಹಗಳಿಗೆ’ ಒಂದು ಚೌಕಟ್ಟಿನ ಒಳಗೆ ಯಾವ ಮುಲಾಜೂ ಇಲ್ಲದೆ “ಮೈ ಮನಗಳೆಲ್ಲಾ ಜನನಾಂಗ ಮೊಳೆತು/ ದೇವಿ ದೇವಿಯರ ಹೆಸರಿಡಿದು ಕರೆದಿದೆ/ ಕಾಮದೋಕುಳಿಗೆ” ಇದು ಒಂದು ನಿರ್ದಿಷ್ಟ ಕಾನೂನುಬದ್ಧ ವ್ಯವಸ್ಥೆಯೊಳಗೆ ಕಾನೂನು ಬಾಹಿರವಾದ ಪರಂಪರಾಗತ ಸ್ವೇಚ್ಛಾಚಾರವನ್ನು ವ್ಯವಸ್ಥಿತವಾಗಿ ಕಾಪಿಟ್ಟುಕೊಂಡು ಬಂದಿರುವ, ಹಾಗು ಅದನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಧಾರುಣ ಚಿತ್ರವನ್ನು ಅನಾವರಣಗೊಳಿಸುತ್ತದೆ.
ಜಾನಪದೀಯವಾಗಿಯೂ ಪುರಾಣೇತಿಹಾಸವಾಗಿಯೂ ಅನಾದಿಕಾಲವೆಂಬ ಒಂದು ಅನುಮಾನಿತ ದಾಖಲುಗಳು ಹೇಳುವ ಸತ್ಯ, ಈ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯೊಳಗೆ ಕೂತುಣ್ಣುವವರೇ ಅರಸರಾಗಿ ಬೆವರು ಸುರಿಸಿ ದುಡಿದು ಕಟ್ಟಿದವರೇ ಕಾಲಾಳಾಗಿ ಮಣ್ಣಲ್ಲಿ ಮಣ್ಣಾಗಿ ಬೆರೆತು ಹೋಗಿರುವವರಿಗೆ ಸಿಗುವ “ಊರು ಕಟ್ಟಿದವರಿಗೆ ಕೇರಿಯವರೆಂದು” ಬಹಳ ಎಚ್ಚರದ ದನಿಯಲ್ಲಿ ಹೇಳುವ ‘ಸಂತಾನಗಳಿಗೆ ಶವಗಳ ಉಣಿಸದಿರಿ’ ಕವಿತೆಯಲ್ಲಿ ಕವಿಯ ಸುತ್ತಲಿನ ಕಂಡುಂಡ ಅನುಭವವೇ ಆಗಿದೆ. ಹಾಗೆ
“ಹೊಲವನುತ್ತ ಸವೆದ ಪಾದಗಳ/ ರೇಖೆಯಲ್ಲಿ ಕತ್ತು ಕೊಯ್ದವರ ಗುರುತು” ಹಚ್ಚುವ ದವಲತ್ತಿನ ಯಜಮಾನಿಕೆಯ ದರ್ಪವನ್ನು ಸಂಕೇತಿಸುತ್ತದೆ ಮಾತ್ರವಲ್ಲ, ಇದು ಶ್ರಮಿಕವರ್ಗದ ಬೆವರ ಜೀವಗಳು ಪಡುತ್ತಿರುವ ಯಾತನೆಯ ವಿವಿಧ ಮಗ್ಗುಲುಗಳತ್ತಲೂ ಒಂದು ಕೆಟ್ಟ ಪರಂಪರೆ ಕೇಂದ್ರೀಕೃತಗೊಂಡಿರುವುದರೊಂದಿಗೆ ರೂಢಿಗತವಾಗಿ ಬೇರುಬಿಟ್ಟಿರುವ ದಾಸ್ಯದ ಪರಾಕಾಷ್ಠೆಯನ್ನು ಬಿಡಿಸಿಡುತ್ತದೆ.
“ಊರು ಕಟ್ಟಿದವರಿಗೆ ಕೇರಿಯವರೆಂದು ಕಾಲೋನಿಗಳ ಪಟ್ಟವ ಕಟ್ಟಿದ ಪ್ರತಿಷ್ಠೆಗೆ” ಮತ್ತೂ ಮುಂದುವರಿದ ‘ಉತ್ತರಗಳಿಗೇಕೆ ಪ್ರಶ್ನೆಗಳು’ ಯಕ್ಕಶ್ಚಿತ್ ಕೇಳಿಕೊಳ್ಳುವುದರಲ್ಲೆ “ಊರು ಕೇರಿ ಎಂದರೇನೆಂದೆ/ಕೇರಿ ಊರಿನ ತಾಯಿ ಎಂದಿತು” ಎಂಬ ಉದಾತ್ತ ಉತ್ತರದ ಬೆನ್ನೇರಿದ ಗಳಿಗೆಯಲ್ಲಿ ಹೆತ್ತವಳ ಬೆತ್ತಲ ಪ್ರಶ್ನೆ ಮುಂದಿಟ್ಟು ಊರೆಂಬ ಊರಿಗೆ ತಲೆ ಕೆಡಿಸಿ ಕೇರಿ ಕಾಲೋನಿಗಳ ಉತ್ಕೃಷ್ಟತೆಯನ್ನು ಹೆಚ್ಚಿಸಿದರೆ, ಅಕ್ಷರ ಕಲಿತವರ ನಡುವೆಯೇ ಒಂದು ಮೇಲ್ ಸ್ತರದ ಮಡಿವಂತಿಕೆ ಬೆಳೆದು ಬೇರುಬಿಟ್ಟು ಅದೊಂದು ವ್ಯಾವಹಾರಿಕ ಆಗಿ ಹೋಗಿರುವಂತೆ “ದಲಿತತ್ವದ ಪದ ಸಂಪುಟ ವ್ಯಾಖ್ಯಾನಗಳ/ ಪದಶಃ ಅಕ್ಷರಶಃ ಹೀರಿಕೊಂಡು” ಆಸರೆ ಕೋಲಿನಂತೆ ‘ದಲಿತರಾಗುವುದೆಂದರೆ ಎಷ್ಟು ಸಡಗರ’ದಲ್ಲಿನ ದಲಿತ ಸಂವೇದನೆಯ ಗೊಡ್ಡುತನ ಒಂದೆಡೆಯಾದರೆ, ತಾವು ಊರಿನವರೆಂದು ಅವರು ಸ್ಲಮ್ಮು ಕಾಲೋನಿ ಪ್ರಣಾಳಿಕೆ ಹೊರಡಿಸುವ ಸೋಕಾಲ್ಡ್ ದಲಿತ ಸಂವೇದಕರನ್ನು ಬಿಡದೆ ಜಾಡಿಸಿರುವ ಆರನಕಟ್ಟೆ ‘ಸಾ ಸಾ ನೀವು ದೇವ್ರಾಗಿದ್ರೆನ್ರಿ ಸ’ ಕವಿತೆಯಲ್ಲಿ ಜಾತಿ ಎನ್ನುವುದು ಎಷ್ಟರ ಮಟ್ಟಿಗೆ ಬೇರು ಬಿಟ್ಟಿದೆ? ಅದು ತಂದ್ದೊಡ್ಡುವ ಸವಾಲುಗಳ ಕುರಿತು ಸ್ಥೂಲವಾಗಿ ವಿವರಿಸುತ್ತಾರೆ. ಹಾಗೆ ಜಡ್ಡುಗಟ್ಟಿದ ಸಮಾಜದ ಪರಿವರ್ತನೆಯಲ್ಲಿ ಓರ್ವ ಶಿಕ್ಷಕ ತನ್ನ ಜವಾಬ್ದಾರಿ ಮರೆತು ಜಾತಿಕೂಪದ ಮನಸ್ಥಿತಿಯೊಳಗಿನ ನಡೆಯ ಬಗ್ಗೆ “ಇಬ್ರುನು ಕರ್ದು/ರಂಗ ಸೌದಿನ ಮನಿ ಒರಾಕಾಕು/ ನೀನೆತ್ತಿ ಒಳಕಾಕೊ ವೀರ ಅಂತ ಜೋರಾಗೆ ಹೇಳಿದ್ರಿ” ಎಂಬ ಸಾಲುಗಳಲ್ಲಿ ಈ ಜಾತಿವಾದಿ ಮನಸ್ಸುಗಳ ಮುಖಕ್ಕೆ ಉಗಿದು ಕಟುವಾಗಿಯೇ ತಮ್ಮ ಎದೆಗಾರಿಕೆ ತೋರಿದ್ದಾರೆ. ಇದರೊಂದಿಗೆ ಈ ಜಡ್ಡುಗಟ್ಟಿದ ಲೋಕವ ನೋಡನೋಡುತ್ತಲೆ ಎಲ್ಲೊ ಒಂದು ಕಡೆ “ಇಲ್ಲಿ/ ಏಕಾಂತವೆ ಸುಧಾರಿಸಿಕೊಳ್ಳದೆ/ಗೋಗರೆಯುವಾಗ/ಜೀವಂತ ಶವ ನಾನು” ಎಂದೆನ್ನುತ್ತ “ಒಲವ ಹೆತ್ತವಳು ನೀನು/ಒಲವಿನ ಹೆಣ ಹೊತ್ತವನು ನಾನು/ ಹೌದು ನಾನೀಗ ಉಸಿರಾಡುವ ಹೆಣ” ಎಂಬಂತಹ ಭಾವಪೂರ್ಣ ಸಾಲುಗಳು ‘ಅಂತಃಕರಣದ ಗೆಳತಿಗೆ..’ ಕವಿಯ ಒಳ ನಿವೇದನೆಯ ಹುದುಗಿಸಿಟ್ಟ ಹಂಬಲದ ಮಾತೇ ಆಗಿದೆ.
‘ದೇವಳದ ಹುಂಡಿಯಲ್ಲಿ’ ಸುಳ್ವಾಡಿ ಪ್ರಸಾದದ ನೆಪದ ವಿಷ ಪ್ರಾಸಾನ ಪ್ರಸಂಗವು “ಹಸಿದ ನಾಯಿಗು/ಹಳಸಿದ ಅನ್ನವಿಡದ ನಿಮ್ಮ ಕೈಗಳು/ಮನುಷ್ಯರಿಗೆ ಮಾತ್ರ ವಿಷವಿಡಬಲ್ಲದು” ಅತ್ಯಂತ ಮಾರ್ಮಿಕವಾಗಿದೆ. “ಕೂಡಿಕೆಯಲ್ಲೆ ಉಂಡು ತೇಗುವ/ ನಿಮ್ಮ ದೇವಳದ ಹುಂಡಿಯಲ್ಲಿ/ ಮನುಷ್ಯರ ಹೆಣಗಳಿವೆ” ಎಂಬ ಸತ್ಯದ ರೋಧನೆಯ ಒಳ ಸುಳಿವಿಡಿದು ಬೆನ್ನತ್ತಿದರೆ ‘ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಿ’ ದಲಿತ ದಹನದ ಕಥೆಯ ರೋಚಕತೆಯನ್ನು ಬಯಲು ಮಾಡುವ ದಮನಕಾರಿ ಸಂಚನ್ನು ಬಯಲು ಮಾಡುತ್ತದೆ.
ದಲಿತ ಹೆಣ್ಣು ಮಗಳೊಬ್ಬಳು ಕೇಳ್ ವೆಣ್ಮಣಿ ಪಂಚಾಯ್ತಿ ಅಧ್ಯಕ್ಷೆಯಾಗಿ ತನ್ನ ಕರ್ತವ್ಯ ದಕ್ಷತೆ ಮೆರೆಯುವುದು; ಈ ಸುಳಿವಲ್ಲಿ ಆಕೆಯನ್ನು ಕೊಲ್ಲುವ ಸಂಚು; ಈ ಸಂಚಿನ ಹಿಂದೆ ಗ್ರಾಮದ ಹೆಂಗಸರ ಶೌಚಾಲಯಕ್ಕೆಂದಿದ್ದ ಜಾಗೆಯೊಂದನ್ನು ಕಬಳಿಸುವ ಸಿಮೆಂಟ್ ಕಂಪನಿಯ ಪಿತೂರಿ; ಹಾಗೆ ಕಂಬಾಲಪಲ್ಲಿಯಲ್ಲಿನ ರೆಡ್ಡಿಗಳ ಅಟ್ಟಹಾಸ; ತದನಂತರ ಅಕ್ಷರ ಕಲಿತ ದಲಿತ ಯುವ ತಲೆಮಾರು, ಶತಮಾನದ ದಾಸ್ಯಕ್ಕೆ ಸೆಡ್ಡು ಹೊಡೆವ ಚಿತ್ರಣ; ಈ ಬೆಳವಣಿಗೆಯಲ್ಲೆ ನಡೆದ ದಲಿತರ ನರಮೇಧ!
ಇಷ್ಟು ಕಠೋರವಾದ ಚಿತ್ರವತ್ತಾದ ಕಥಾ ಹೂರಣವು “ಜೀವ ತೇದರೂ ದುಡಿವ/ಕೈಯುಳಿ ಕತ್ತಿ ಅಡಿಗೂಂಟಕ್ಕಡ್ಡಿಯಯ್ಯಾ ಮಾದಾರ ಚೆನ್ನಯ್ಯ” ಎಂಬ ಮಾರ್ಮಿಕ ನುಡಿಯಲ್ಲಿರುವ ಧಾರುಣತೆ – ದಲಿತ ತಲೆಮಾರಿನ ತಳಮಳದ ಒಳಗುದಿಯನ್ನು , ಕಾದ ಕಬ್ಬಿಣದ ಸಲಾಕೆಯನ್ನು ಪರಿಶೋಧನೆಗೊಳಪಡಿಸುವಷ್ಟು ಈ ಕವಿತೆಯ ಕಾವ್ಯಭಾಷೆ ಎದೆಗೆ ತಾಕಿ ನೋಯಿಸುತ್ತದೆ.
ಮಾನವನ ದುರಾಸೆ, ಡೆವಲಪ್ಮೆಂಟ್ ಹೆಸರಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಗೆ ಮಣೆ, ಪ್ರಕೃತಿಯೊಂದಿಗೆ ಚೆಲ್ಲಾಟ, ಜೀವಸತ್ವದ ಮೇಲೆ ಆಗುತ್ತಿರುವ ವಿಷಕಾರಿ ಪರಿಣಾಮ “ಕುಟುಕು ಜೀವದ ಕನಸುಗಳಿಗೆ/ಮಣ್ಣಿನ ಕಣಗಳು ಮೆತ್ತಿ ಮೆತ್ತಿ/ಉಸಿರು ಮರಗಟ್ಟಿ/ಅಸು-ನೀಗಿಸುವ ಹಸಿವಿನೊಡನೆ..” ಮಿಷನ್ನುಗಳೇ ಮೇಲಾಗಿ ಶ್ರಮಿಕವರ್ಗವೆಲ್ಲ ಕೆಲಸವಿಲ್ಲದೆ ತುತ್ತು ಅನ್ನಕ್ಕು ಬಂಡವಾಳಶಾಹಿಗಳ ಮುಂದೆ ನಿಲ್ಲುವಂಥ ಅತಿಯಾದ ಟೆಕ್ನಾಲಜಿ ‘ಧೂಳಿನ ಕಣಗಳಾಗಿ’ ಒಡಲೊಳಗೆ ಉಬ್ಬಸವೇರಿಸಿದೆ. ಒಂದು ಕಡೆ ವಿಜ್ಞಾನ ಲೇಖಕ ನಾಗೇಶ ಹೆಗಡೆ “ವೈಜ್ಞಾನಿಕ ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡದ ಹೊರತು ಪ್ರಕೃತಿಯ ವೈಪರೀತ್ಯಗಳು ಮಾನವಿವನಿಗೆ ಅತ್ಯಂತ ಅಪಾಯಕಾರಿ ಸನ್ನಿವೇಶವನ್ನು ತಂದೊಡ್ಡದೆ ಇರಲಾರವು” ಎಂಬ ಎಚ್ಚರವು “ಒಡಲು ಬಗೆದು ಕರುಳ ಹಿಗ್ಗಲಿಸುವ/ಜನಸೇವಕರ ಕೈಗಳಲಿ ಪೆಪ್ಸಿಕೊ/ಬಹು ಕಂಪನಿಗಳ ಡಬ್ಬಿಯೊಳಗೆ/ಬೆವರು ಕಣ್ಣೀರು ಮಿನರಲ್ಲುಗಳಾಗಿ” ಸೂಚ್ಯವಾಗಿ ತಡುವುತ್ತಲೇ ಅದರ ಮುಂದುವರಿದ ಭಾಗದಂತೆ ಆಪೋಶನಗೈವ “ಸಂತೈಸಲೆಂದು ಜಿನುಗುವ ಉಸಿರು’ ಕವಿತೆ ಪ್ರಭುತ್ವಗಳ ಅನವಶ್ಯಕ ಅವೈಜ್ಞಾನಿಕ ಕ್ರಮಗಳ ಒಡಲ ಬೆಂಕಿ “ಕೆಚ್ಚಲಿನಲ್ಲಿ ಕಂಪನಿಗಳ ಹೆಸರು/ಅತ್ತು ಕರೆವ ಹಾಲುಗಲ್ಲದ ಕಂದನಿಗೆ/ಫ್ರಿಜ್ಜಿನಲ್ಲಿನ ಹಾಲು ಕುದಿಯುತ್ತದೆ/ಬೆವರೆಲ್ಲವು ಮಿನರಲ್ಲುಗಳಾಗಿ ಕೊಳ್ಳುವವರಿಗೆ ಮಾತ್ರ ದಕ್ಕುತ್ತಿದೆ” ಎಂಬುದು ದುಡಿವ ಜನರ ಒಡಲ ದಾಹ, ಸಂಕಟ, ತೊಳಲಾಟ- ಜ್ವಾಲಾಮುಖಿಯಂತೆ ಸ್ಪೋಟಿಸಿ ‘ಜೀವಾಳದ ಕರುಳ ಹಿಂಡಿದೆ’.
‘ನಲ್ಲಮುತ್ತು ಕೇರ್ ಆಫ್ ಚಟಾಕು ಸುಬ್ಬನ್’ ಇಡೀ ಸಂಕಲನದಲ್ಲೆ ಮಹತ್ವದ ವಿಭಿನ್ನ ನಿರೂಪಣೆಯ ದೃಶ್ಯಕಾವ್ಯದಂತಿರುವ ಒಂದು ಅಪರೂಪದ ಕವಿತೆ.
“ಮಕ್ಕಳು ಮೊಮ್ಮಕ್ಕಳು ತೋಳೆತ್ತರ ಬೆಳೆದು/ಅಕ್ಷರದ ಅಕ್ಕರೆಗೆ ಓಡೋಡಿ ಹೋಗಿರಲು/ಅಪ್ಪನ ತೋಳು ದುಡಿಯುವುದ ಮರೆತಿಲ್ಲ” ಎಂಬ ಸಾಲು ಅಪ್ಪನ ದಣಿವರಿಯದ ಸ್ವಾಭಿಮಾನವನ್ನು ಸಾರುತ್ತಲೆ “ಕಳ್ಳುಬಳ್ಳಿಯ ಎದೆಯಲ್ಲಿಟ್ಟು ಪೊರೆವ ಅಪ್ಪನ/ಆಳ ಅಗಲವ ಅಳೆಯಲು ಅಕ್ಷರಗಳು ಸಾಲದು” ಎಂಬ ಸಾಲು ನನ್ನನ್ನು ಬಹಳವಾಗಿ ತಟ್ಟಿತು. ಹಾಗೆ ‘ನಲ್ಲಮುತ್ತು ಕೇರ್ ಆಫ್ ಚಟಾಕು ಸುಬ್ಬನ್’ ಕವಿತೆಯ ಇಡೀ ಸಾಲುಗಳಲ್ಲೆಲ್ಲ ಕೊನೆಯ ಈ ಎರಡು ಸಾಲುಗಳು ಅತ್ಯಂತ ಮಹತ್ವದ ಸಾಲುಗಳಾಗಿ ಈ ಕವಿತೆಗೇ ಹೊಸಭಾಷ್ಯ ಬರೆದಂತಿದ್ದು ‘ಸಾವಿರದ ಕಾವ್ಯ’ವಾಗಿಸಿದೆ.
ಹಾಗೆ, ನಲ್ಲಮುತ್ತುವಿನ ಜೀವನ ಪ್ರೀತಿ ಮತ್ತು ಆಡುನುಡಿಯ ಗ್ರಾಮ್ಯ ಸೊಗಡಿನ ಕಾವ್ಯಭಾಷೆಯನ್ನೆ ಮೈಯೊದ್ದಿದಂತಿರುವ ‘ಕರಿಯಜ್ಜನ ಯಶೋಗಾಥೆ’ ಯಲ್ಲಿ ಅಜ್ಜ ಮೊಮ್ಮಗನ ನಡುವಿನ ಒಂದು ಆತ್ಮೀಯವಾದ ಸಂವಾದವಿದೆ. ಇಲ್ಲಿ ಮಾನವೀಯ ಮೌಲ್ಯಕ್ಕೆ ವಿರುದ್ದದ ಕೀಳು-ಮೇಲು, ಆಳು-ಯಜಮಾನ, ಎಂಬ ಪುರಾತನವಾದ ಜಾತಿಯ ಜೀತದ ಹಂಗಿದೆ.
“ಗಂಗಾಳದ ತುಂಬಾ ರಾತ್ರಿ ಅನ್ನ/ಹುಳಿ ಮಜ್ಜಿಗೇನ ಯಜಮಾನಿ/ಹಗಲೂಟದೊತ್ತಿಗಿಟ್ಟಾಗ” ಎನುವಲ್ಲಿ ಯಜಮಾನಿಕೆ ದೌಲತ್ತಿನ ಅಮಾನವೀಯ ನಡೆ ಇದೆ. “ಅಗಾ ನೋಡ್ತಿಯಲ್ಲಾ ಅವೆಲ್ಲಾ/ನಮ್ಮಟ್ಟಿ ಜನ ತಂಗಡೆ ಬಂಜರೆ ಜಾಲಿ/ಸವರಿದ್ ಮ್ಯಾಲೆನೆ/ಈಗಿನ್ ತೆಂಗಿನ್ ತ್ವಾಟ/ಆ ಗದ್ದೆ ಬಯಲಿಗೆಲ್ಲಾ/ಬೆವರು ಬಸಿದೀವೊ ತಮ್ಮಾ ಅಂತೇಳಿ” ದ ಅಜ್ಜನ ಕಣ್ಣು ತೇವಗೊಳ್ಳುತ್ತದೆ. ಇದು ಈ ದೇಶದ ಪ್ರತಿ ಹಳ್ಳಿಗಾಡಿನ ದಲಿತರ ಬದುಕಿನ ಗೋಳಿನ ಚಿತ್ರವನ್ನು ಕಣ್ಮುಂದೆ ನಿಲ್ಲಿಸುತ್ತದೆ. ಅಜ್ಜನ ಯಶೋಗಾಥೆ ಕೇಳಿದ ಇಲ್ಲಿನ ನಿರೂಪಕನ ಒಡಲಾಳ ತಳಮಳಿಸಿ “ನೀನ್ ತಿಂದ ಹಳಸಿದ ಅನ್ನಾನ/ಅವನ ಮನೆ ಮುಂದೆ ವಾಂತಿ ಮಾಡ್ತಿನಿ ಅಂತ” ವ್ಯವಸ್ಥಿತವಾಗಿ ಬೇರುಬಿಟ್ಟು ಕೆಳಸ್ತರದ ಹಸಿವು ದಾಹದ ಜೀವಗಳ ಯಕ್ಕಶ್ಚಿತ್ ಕಣ್ಣೀರಿಗೆ ಮೂಲವಾದ ಪ್ರಬಲ ಯಜಮಾನಿಕೆಗೆ ಸೆಡ್ಡು ಹೊಡೆದು ನಿಲ್ಲುವಲ್ಲಿ ಕವಿ ರಂಗನಾಥರಲ್ಲಿ ಒಂದು ವಿಶೇಷವಾದ ಕೆಚ್ಚಿನ ಗತ್ತಿದೆ.
‘ಜಲದ ಕಣ್ಣ ಪಾದುಕೆಯ ಹಾಡು’ ಸುಲಿದ ಚರ್ಮದಿಂದುದಿಸಿದ ಗಾಯದ ಗುರುತುಗಳ ಒಡಲಾಳದಲ್ಲಿ ನೋವಿನ ಗಾನವಿದೆ.ಅದು “ಪಾದ ತೊಟ್ಟ ಮೆಟ್ಟಿಗೆ ಕರುಳಿದೆ/ಜೀವದಾಣದ ಕುರುಹಿದೆ”ಯಲ್ಲಿ ಮೆಟ್ಟಿನ ಔನ್ನತ್ಯವಿದೆ. “ಜಲದ ಕಣ್ಣ ಜಾಂಬವಂತನ ಕುಡಿ/ತಡವಿದಾ ಪಾದುಕೆಗೆ ಹಾದಿಯ ಅರಿವಿದೆ” ಎಂಬುದು ನನ್ನದೇ “ಮೆಟ್ಟು ಹೇಳಿದ ಕಥಾ ಪ್ರಸಂಗ”ದ ಕಥಾ ಎಳೆಯ ಒಟ್ಟಾರ್ಥ ಧ್ವನಿಸುವ ‘ಪಾದುಕೆಗೆ ಹಾದಿಯ ಅರಿವಿದೆ’ ಸಾಲು ಓದುತ್ತಾ ಒಂದು ಕ್ಷಣ ನನ್ನನ್ನು ಬೆಚ್ಚಿ ಬೀಳಿಸಿದ, ಓದುಗನಲ್ಲಿ ಗಾಢ ಪರಿಣಾಮ ಬೀರುವ ಒಂದು ಗಂಭೀರವಾದ ಆಪ್ತ ಕವಿತೆ.
ಊರುಕೇರಿಗಳನ್ನು ತಿರುಗುತ್ತಾ ತಮ್ಮೊಳಗಿನ ಕಲೆಯನ್ನು ಹಂಚುತ್ತಾ ಅನುಭವದ ಜಗತ್ತನ್ನು ವಿಸ್ತರಿಸಿಕೊಂಡು ಚಿಕ್ಕ ವಯಸ್ಸಿನಲ್ಲಿ ತನ್ನ ಅಲೆಮಾರಿ ಮೋಡಿಗಾರ ತಂದೆ ಜೊತೆ ದಸರೆ ನೋಡಲು ಹೋದಾಗ ಜನದಟ್ಟಣೆಯಲ್ಲಿ ಅಕಸ್ಮಾತ್ ತಪ್ಪಿಸಿಕೊಂಡು ಹೆತ್ತವರಿಂದ ದೂರಾಗಿ ಯಾವುದೊ ಮಠದಲ್ಲಿ ಆಸರೆ ಪಡೆದು ಬದುಕು ಮಾಡಿಕೊಂಡ ಜನಪದ ಹಾಡುಗಾರ್ತಿ ತಂಬೂರಿ ರಾಜಮ್ಮನ ವ್ಯಕ್ತಿಚಿತ್ರ ಕುರಿತಾದ ‘ತಂಬೂರಿ ಪದ’ – “ಬಯಲೊಳಗೆ ಮಾರ್ದನಿಸುವ/ಸೊಲ್ಲು ಸೊಲ್ಲಿನಲ್ಲಿ ಮಾದಪ್ಪನ ಸಾರ/ಹಾಡುವ ಜೀವ ತಂತಿಯ ಸರಿಸಾಥಿಗೆ/ತಲ್ಲಣಿಸಿದೆ ತಾಳದೆ ಮನವು/ಜನಪದ ತಂಬೂರಿ” ಕವಿತೆ ಕವಿ ಆರನಕಟ್ಟೆ ರಂಗನಾಥರ ದೇಸೀಯ ಕಲಾ ಲೋಕದ ಒಂದು ಅಪರೂಪದ ಜಪ್ತಿ. ಹಾಗೆ ಈ ಸಂಕಲನದಲ್ಲಿ ಇದೊಂದು ವೈಶಿಷ್ಟ್ಯಪೂರ್ಣವಾದ ಕವಿತೆ. ಜನಪದ, ಸೋಬಾನೆ, ತತ್ವಪದ, ಮಾದೇಶ್ವರ,ಮಂಟೇಸ್ವಾಮಿ ತರಹದ ಮಹಾಕಾವ್ಯಗಳ ಹಾಡುಗಳು “ಆರೋಹಣ ಅವರೋಹಣದ/ಗುಡಿ ಗುಂಡಾರಗಳ ಕವಡೆ ಕಿಮ್ಮತ್ತಿನಾಚೆ/ಊರೂರು ತಿರುಗಿ ಜೀವ ಬೆಸೆವ ತಂಬೂರಿ ಪದವೇ ಧರೆಯ ಜೀವ” ಎಂಬ ಸಾಲುಗಳು ‘ತಂಬೂರಿ ಪದ’ದ ಕಿಮ್ಮತ್ತಿನ ಮಹತ್ವಕ್ಕೆ ಎರಕ ಹೊಯ್ದು ಹೊಸೆದಿರುವ ಆರನಕಟ್ಟೆ ರಂಗನಾಥ್, ತಂಬೂರಿಯನ್ನೆ ಜೀವನದ ಉಸಿರಾಗಿಸಿಕೊಂಡಿದ್ದ ರಾಜಮ್ಮ ಅಳಿದರು ಅವರ ಪದ “ಎದೆಯೊಳಗೆ ತಂಬೂರಿ ಸ್ವರ/ ಮಣ್ಣಿನೊಳಗೆ ಜನಪದ ತಂಬೂರಿ” ಪದದ ಅರ್ಥವ್ಯಾಪ್ತಿ ಈ ಕಾವ್ಯ ವಿಶ್ಲೇಷಣೆಯ ವಿಸ್ತೃತ ಪರಿಭಾಷೆಗೆ ನಿಲುಕದ್ದು. ಹಾಗೆ ಓದುಗನೊಳಗೆ ಕವಿ ಕಟ್ಟಿಕೊಡುವ ಆಂತರ್ಯದ ದನಿಯೊಂದು ಈ ಸೂರ್ಯ, ಈ ಚಂದ್ರ, ಈ ಭೂಮಿ ಸಕಲವೂ ಇರುವವರೆಗೂ ತಂಬೂರಿ ಪದ ಶಾಶ್ವತ ಎಂಬ ಉತ್ಕೃಷ್ಟ ದನಿಯನ್ನು ಕೂಡಿಸಿ ದೇಸೀ ಪದಗಳ ಉಸಿರಲ್ಲೆ ಬದುಕನ್ನು ಸವೆಸಿದ ತಂಬೂರಿ ಪದದ ಜೀವವೊಂದನ್ನು ತಳಸಮುದಾಯಗಳ ಸಾಂಸ್ಕೃತಿಕ ಅಸ್ಮಿತೆಯಾಗಿಸಿರುವುದು ಕವಿತೆಯೊಳಗಿನ ಅರ್ಥವ್ಯಾಪ್ತಿಯ ಜೀವಿಂತಿಕೆಯನ್ನು ಹೆಚ್ಚಿಸಿದೆ.
‘ಈ ಸುದ್ದಿ ಇಂದಿನ ವರದಿಯಾಗಿಯೇ ಉಳಿಯಬೇಕಿಲ್ಲ..?’ ಕವಿತೆಯ ಪ್ರಶ್ನಾರ್ಥಕ ಶೀರ್ಷಿಕೆ ದ್ವನ್ಯಾರ್ಥದಿಂದ ಕೂಡಿದೆ. ಜಾತಿಯ ಸಂಕೋಲೆಯ ಆಳದ ಕನವರಿಕೆ ಇಲ್ಲಿ ಹೆಪ್ಪುಗಟ್ಟಿ ಉಸಿರು ಬಿಗಿ ಹಿಡಿದು ಶಪಿಸಿ ಮಾತಾಡಲಾರದಷ್ಟು ವ್ಯಾಕುಲಗೊಂಡಿದೆ. ದೇಶ ಭಾಷೆ ಗಡಿ ಎಲ್ಲವನ್ನು ಮೀರಿದ ಜನಾಂಗೀಯವಾದದ ಸೆಲೆಯಲ್ಲಿ ಬತ್ತಿ ಹೋದ ಜೀವಗಳ ಅವಸಾನದ ಅನಾವರಣವಿದೆ. ದ್ವೀಪ ಪ್ರದೇಶಗಳ ಶೋಷಿತ ಜನವರ್ಗದ ಹಸಿವಿನ ಸಂಕಟಕ್ಕೆ ಈ ಪ್ರಶ್ನಾರ್ಥಕ ಕವಿತೆ, ಒಂದು ಪ್ರಚ್ಛನ್ನ ಅಪರಿಪೂರ್ಣ ಚೌಕಟ್ಟಿನಲ್ಲಿ ಅಪ್ಯಾಯಮಾನವಾಗಿ ನೋಯುತ್ತದೆ. ಇದರೊಳಗೆ ಕೊಳೆತ ಶಿಶ್ನಗಳು ವಿಸ್ತಿರಿಸಿಕೊಂಡು ಕಾರುಣ್ಯದ ಒಡಲನ್ನು ಸಿಗಿದು ‘ನಿರ್ಭಯ’ದಂತಹ ಘಟನಾವಳಿಗಳು ಜಾತಿ ಮತ ಪಂಥ ಧರ್ಮ ಮೀರಿದ ಕೃತ್ಯ ಢಾಳಾಗಿ ಹರಡಿಕೊಂಡು ಒಟ್ಟು ವ್ಯವಸ್ಥೆಯ ಪರಿಚ್ಛೇಧವನ್ನೇ ನ್ಯಾಯದ ತಕ್ಕಡಿಗೆ ಇಟ್ಟು ನೋಡುವ ಪರಿಧಿಯ ಬೆಳಗಲ್ಲಿಯೂ ಮೊಂಬತ್ತಿ ಬೆಳಗಿಸಿ ಅಣಕಿಸಿವೆ. ಇಷ್ಟಾಗಿಯೂ ಕಿಚ್ಚೆಬ್ಬಿಸಿದ ಹೋರಾಟದ ನದಿಗಳು ಬತ್ತಿಹೋಗಿರುವ ಬಗೆಯನ್ನು ಖಚಿತವಾದ ದನಿಯಲ್ಲಿ ಕವಿ ಆರನಕಟ್ಟೆ ರಂಗನಾಥ್ “ಬೆವರ ದನಿಗಳ ತಾಯಿಬೇರಾಗಿ ಕನವರಿಸುವ/ ಕಾರುಣ್ಯದ ಮೋಹಕ ನವಿಗಳೇ/ ನಟನೆಯಲಿ ಪಳಗಿ ನಾಟ್ಯವ ಮರೆತಿರೇನು”ಎಂದು ಮುಖವಾಡದ ಮೂಲ ಮನಸ್ಥಿತಿಯನ್ನು ಪ್ರಶ್ನಿಸಿ, ಈ ‘ಸುದ್ದಿ’ ಒಳಗಿನ ಕರಾಳ ಲೋಪವನ್ನು ಬಿಡಿಸಿಟ್ಟಿದ್ದಾರೆ.
ಇಂಥದ್ದೇ ವಸ್ತುವಿಷಯದ ‘ಕಳೇಬರದ ಹೆಸರಲ್ಲಿ ಮಗಳು’ ಕವಿತೆ “ಜಾತಿಯ ಧಿಮಾಕಿನಲ್ಲಿ/ಶಿಶ್ನಗಳು ಕುಣಿದಿರಲು/ ಮಗಳು ಮಗಳಲ್ಲ ಹೆಣವೀಗ”ಎಂಬ ಧಾರುಣ ಚಿತ್ರ ‘ನಿರ್ಭಯ’ ಪ್ರಕರಣರಣದಂತೆಯೇ ಹಾಥರಸ್ ಘಟನೆಯ ಈ ಚಿತ್ರ ಒಳಗೇ ದುಮುಗುಡುತ್ತದೆ. ಮೇಲು ಜಾತಿಯ ನಾಲ್ವರು ಯುವಕರು ಹದಿಹರೆಯದ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದರು. ಗಂಭೀರ ಸ್ಥಿತಿಯಲ್ಲಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿಯೂ ಕೊನೆಯುಸಿರೆಳೆದಳು. ಯುವತಿಯ ಕಳೇಬರವನ್ನು ಉತ್ತರ ಪ್ರದೇಶದ ಪೊಲೀಸರು ಸುಟ್ಟು ಹಾಕಿ ಕೃತ್ಯವನ್ನು ಮುಚ್ಚಿಹಾಕುವ ಹುನ್ನಾರ ನಡೆಸಿದ್ದರು. ಈ ಅಮಾನವೀಯ ಕ್ರೌರ್ಯಕ್ಕೆ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿತ್ತು. ಇದು ಕವಿ ಆರನಕಟ್ಟೆ ರಂಗನಾಥರ ಒಡಲಾಳ ತಳಮಳಿಸಿ
“ತುಡುಗು ಹುಡುಗರ/ ನಿಗುರುವ ಎಗರುವ ತೀಟೆಗೆ” ಬಲಿಯಾದ ಈ ಕೃತ್ಯ ಮಗ್ಗುಲ ಮುಳ್ಳಾಗಿ ನರಳಿ ಮರುಗುತ್ತದೆ. ಇಂಥ ಘೋರತೆಯ ವಿರುದ್ದ “ಇಕ್ಕಳವ ಸಾಣೆ ಹಿಡಿದು/ ಕಸಿ ಬಡಿಯಲು ಕೈ ಬಲಿಯಬೇಕಿದೆ” ಎಂಬ ಪ್ರತಿಭಟಿನಾತ್ಮಕ ಸಂದೇಶ ಕವಿತೆ ಮೊಳಗಿಸುತ್ತದೆ.
ಬೋದಿಲೇರ್ “ಒಂದಾನೊಂದು ರಾತ್ರಿ, ನನ್ನ ಕಾಮ ಕೆರಳಿದ ಘಳಿಗೆ, ಕಳ್ಳನ ಹಾಗೆ ಮೆಲ್ಲಗೆ ನಿನ್ನ ದೇಹದ ಸಿರಿವಂತಿಕೆಯತ್ತ ಸದ್ದಿಲ್ಲದೆ ತೆವಳಿ ನಿನ್ನ ದೇಹದ ಅನರ್ಘ್ಯ ಮಾಂಸಖಂಡವನ್ನು ದಂಡಿಸಬೇಕು, ನಿನ್ನ ಮೊಲೆಗಳನ್ನು ಹಿಂಡಿ ಹುಣ್ಣಾಗಿಸಬೇಕು, ಚಕಿತಗೊಂಡ ನಿನ್ನಲ್ಲಿ ಆಳವಾದ ಗಾಯ ಮಾಡಬೇಕು – ಆಹಾ, ಹರ್ಷೋತ್ಕಟತೆಯಿಂದ ನನ್ನನ್ನು ಕುರುಡನನ್ನಾಗಿಸುವ ನಿನ್ನ ಶುಭ್ರ ತುಟಿಗಳಲ್ಲಿ ನನ್ನ ವಿಷವನ್ನು ಹಾಕಬೇಕು” ಎಂದು ‘ಅತ್ಯಂತ ಉಲ್ಲಾದಿಂದ ಹಾಕಬೇಕು’ ಕವಿತೆ ಕಾಮವು ಕೆರಳಿದ ದೇಹದ ಅಂಗಕ್ಕೆ ನೀಡುವ ಒಂದು ಅನೂಹ್ಯ ಆನಂದಮಯ ಕ್ರಿಯಾ ಘಳಿಗೆಯಾಚೆಗು ಬದುಕಿನ ಔನ್ನತ್ಯ ವ್ಯಕ್ತವಾಗುವ ರೀತಿ ಇಲ್ಲಿನ
“ಕುಣಿ ಬಿಚ್ಚಿ ಕುಣಿದಿರುವ/ದಾಹವಿಂಗದ ಅಂಡಾಣುವೆ/ಉಸಿರಡಗದಂತೆ ಸ್ರವಿಸು/ಒಡಲ ಬೆಸೆದು ಬಿಸಾಡಲು/ಕರೆಯದಿರು ಒಲವಿನ ಕಣ್ಣೀರ” ಅಂತರಂಗದ ಪಿಸುಮಾತಿನ ನಿನಾದ ಸ್ಪರಿಸುವ ಪ್ರೇಮ ಕಾಮ ಮೋಹದ ಪರಿಕಲ್ಪನೆಯನ್ನೆ ಒಳಗು ಮಾಡುವ ‘ದೇಹವು ದೇಗುಲವಲ್ಲ’ ಕವಿತೆ, ಬೋದಿಲೇರನ ತುಡಿತದ ಹೆಣ್ಣು ಗಂಡಿನ ಕೆರಳಿದ ಗಳಿಗೆಯ ಒಂದು ಅನೂಹ್ಯ ಮಿಲನ ಕ್ರಿಯೆಯು ಬಿಸಿಯೇರಿ ಸ್ಖಲಿತವಾಗುವ ಸರಹದ್ದಿನ “ಮೈಥುನದ ಮಡುವಿನಲ್ಲಿ ಕೆಡವಿ/ಅಂಗಾಂಗಗಳ ಕಸಿ ಮಾಡುವ ನಿನಗೆ/ದೇಹವು ದೇಗುಲವಾಗದಿರಲಿ” ಎನುವ ಒಂದು ಉತ್ಕೃಷ್ಟ ಭೋಗದ ಸಂತೃಪ್ತತೆ, ಅಷ್ಟೆ ಅಲ್ಲ ಕಾಮದಾಚೆಗೂ ಇರುವ “ಪಸೆಯೊಳಗಿನ ಉಸಿರು/ನಿನ್ನೊಳಗೆ ಮುಳುಗದಿರಲಿ” ಎಂಬ ಬದುಕಿನ ಉದಾತ್ತ ತೀವ್ರತರ ತುಡಿತವನ್ನು ಒರೆಗೆ ಹಚ್ಚಿರುವ ಕವಿತೆ.
‘ಮೊದಲ ಸಲವಲ್ಲ’ ‘ಪಿಸುಮಾತುಗಳು ಉಳಿದಿವೆ’
ಕಾಲದ ಗುರುತುಗಳು ಬೆಸೆದುಕೊಂಡ ದಹನದ ಕಥೆಯೊಳಗೆ ಪ್ರೀತಿ ಮತ್ತು ಜೀವಂತ ಮೌಲ್ಯಗಳ ಲೌಕಿಕ ಆಸ್ಮಿತೆಯನ್ನು ತನ್ನೊಳಗೆ ಭಟ್ಟಿ ಇಳಿಸಿದ ಕವಿತೆಗಳು. ಇವು ಭ್ರಮೆ ಮತ್ತು ವಾಸ್ತವದ ನೆರಳಲ್ಲಿ “ನೆತ್ತರಲ್ಲೆ ನೆಂದು ಮಡಿದ ಪ್ರೀತಿ/ಉಸಿರಿನೊಟ್ಟಿಗೆ ಬೇರು ಬಿಡುವುದು /ಕೊನೆಯ ಸಲವಲ್ಲ”ಎಂಬುದು ಮೊದಲ ಸಲವಲ್ಲ! ಅದು ಏಕಾಂತವು ಕೊಡುವ ಆಪ್ತತೆ, ನರಳುವ ಪ್ರೀತಿ, ವಿರಹದ ಯಾತನಾಮಯ ಪಿಸುಮಾತುಗಳು “ತೀಡಿದಷ್ಟು ತೀರದ/ಉರಿದಷ್ಟು ದಹಿಸದ/ಮೈಮನದ ದಾಹ ಮಾತಾಗಬೇಕೆ?” ಎಂದು ಪ್ರಶ್ನಿಕೊಳ್ಳುತ್ತಲೇ ಮಾತು ಸೋತು ಮೌನಕ್ಕೆ ನೂರಾರು ಅರ್ಥ ಕಲ್ಪಿಸಿ ಆ ಪಿಸುಮಾತುಗಳು ಉಳಿದಿರುವುದು ಮೊದಲ ಸಲವಲ್ಲ! ಕೊನೆಯ ಸಲವೂ ಅಲ್ಲ! ಅದು “ಎಡೆಬಿಡದೆ ನಡೆದ/ಮಾತಿನ ನಡು ಬಿದ್ದಿರಲು/ ಕಂಗಳಿಗೆ ಒಂಚೂರು ಸೆಡವಿಲ್ಲ” ಎಂಬ ಒಂದು ಪರಿಧಿಯ ಚೌಕಟ್ಟಿನಲ್ಲಿ ತೀರ ಸಂಕೀರ್ಣ, ಅಷ್ಟೆ ಆಪ್ತವಾಗಿ ಗೂಡು ಕಟ್ಟಿಕೊಂಡ ಒಡಲಿನ ಪಿಸುಮಾತು, ಒಂದು ಪಥದಲ್ಲಿ ಸುತ್ತುತ್ತದೆ.
ಸಿಂಧೂ ಬಯಲಿನ ನಾಗರಿಕತೆಯ ಹರಪ್ಪ ಮತ್ತು ಮೆಹಂಜದಾರೊ ಸಂಸ್ಕೃತಿ ಎಂಬುದು ಈ ನೆಲದ ಮೂಲನಿವಾಸಿಗಳ ಮೂಲ. ದೇಸಿ ಪರಂಪರೆಯ ಪಳೆಯುಳಿಕೆಯ ಉತ್ಖನನದ ಜಾಡಿನಲ್ಲಿ “ಹಿಂಗಿ ಜೀರ್ಣವಾಗದೆ ಹರಿದಾಡುವ ಜೀವಕಣಗಳು” ತಲೆತಲೆಮಾರಿಗೂ ಹಂಚಿ ಹರಡುವ, ಬೆವರು ಸುರಿಸಿ ಬದುಕಿದ ಇತಿಹಾಸ ಸೆಲೆ ಇದೆ. ಇದರ ಹಿಂದೆ ಪರಂಪರಾಗತವಾದ ಒಂದು ಮೌಲಿಕ ಆಶಯವಿದೆ. ಇದರ ಮುಖೇನ ಈ ಮಣ್ಣಿನ ಆಳದ ಆದಿಜಂಬು ಸಂಸ್ಕೃತಿಯ ಮೂಲವನ್ನು ‘ಸತ್ತವರ ದಿಬ್ಬ’ ಯಾವ ಪ್ರತಿಮೆ ರೂಪಕಗಳ ಗೋಜಿಲ್ಲದೆ ಕಟ್ಟಿಕೊಡುತ್ತದೆ. ಕೋಟಿಗಾನಹಳ್ಳಿ ರಾಮಯ್ಯನವರ ‘ಸಿಂಧ್ ಮಾದಿಗರ ಸಂಸ್ಕೃತಿ’ ಜಂಬೂ ದ್ವೀಪ, ಹೆಪ್ಪುಮುನಿ, ಬೆಪ್ಪುಮುನಿ, ಆದಿಗುರು, ಮಹಾದಿಗ ಕುಲದ ಬಗ್ಗೆ ಪುರಾಣೇತಿಹಾಸದ ದಾಖಲುಗಳ ಮೂಲಕ ಬೆವರು ಸುರಿಸಿದ ಗಟ್ಟಿ ಬೇರುಗಳ ಕುರಿತು ಪರಿಣಾಮಕಾರಿಯಾಗಿ ಚಿತ್ರಿಸಿದಂತೆ ಆರನಕಟ್ಟೆ ರಂಗನಾಥ್ “ಉಸಿರ ಕಣಗಳಿಗೆ ಪಳಯುಳಿಕೆಗಳ ಹೆಸರು” ಇಟ್ಟು ‘ಸತ್ತವರ ದಿಬ್ಬ’ದಲ್ಲಿ ಬಸಿದ ಕಣ್ಣೀರ ಭಾಷೆಯೊಳಗಿನ ಮತಂಗ ಕುಲದ ಧ್ಯಾನಸ್ಥ ಪರಂಪರೆಯ ಜೀವ ಕಾರುಣ್ಯದ ಮೋಹಕ ನವಿಲುಗಳ ಹೆಜ್ಜೆ ಗುರುತುಗಳಿವೆ!
ಆರನಕಟ್ಟೆ ರಂಗನಾಥರ ಇಲ್ಲಿನ ‘ಈಗಲೂ ಉರಿಯುತ್ತಿದೆ ಬೀಡಿ’ ಕವಿತೆ, ಕವಿ ಎಚ್.ಗೋವಿಂದಯ್ಯನವರ ‘ಅ ಆ ಮತ್ತೂ..’ ಕವಿತೆಯ ಅಂಗಳದೊಳಗಿಂದ ಉರಿದೆದ್ದು ಬಂದ ಕವಿತೆಯಂತಿದೆ. ಆ ಕವಿತೆಯ ‘ಮೋಟು ಬೀಡಿ’ ಮತ್ತು ಈ ಕವಿತೆಯ ‘ಮೋಟು ಬೀಡಿ’ ಒಂದು ಸಮಾನ ಎಳೆಯದ್ದಾಗಿದ್ದು ಊರು ಕೇರಿಗಳನ್ನೂ ದಾಟಿ ಈ ನೆಲದ ಉರಿದು ಹೋದ ಎಲ್ಲ ದಲಿತ ಆತ್ಮಕಥೆಗಳ ಗುಚ್ಛವಾಗಿ “ನಿರಾತಂಕವಾಗಿ ದಹಿಸಿ/ಉರಿದು ಬೂದಿಯಾಗಿಸುವ ಒಡಲುರಿಗೆ ಶರಣಾದ” ಈಗಲೂ ಹಾಗೇ ಆರದೆ ಉದಿರಿರುವ ಮೋಟು ಬೀಡಿಗಳ ಕಥಾನಕವೇ ಆಗಿದೆ.
‘ಸಲ್ಲೇಖನ ವ್ರತ’ ತ್ಯಾಗದ ಸಂಕೇತ. ತ್ಯಾಗ ಇಲ್ಲಿ ರೂಪಾಂತರಗೊಂಡಿದೆ. “ನಿನ್ನೆಯಿಂದಲೆ/ಮೈ ತೊಳೆಯದೆ/ಮೂಲೆಗೆ ಒರಗಿ/ಗೊಜ್ಜಿಗೆ ಗುದ್ದಾಡುವ/ನೊಣಗಳಲ್ಲಿ/ ಕಣ್ಣು ನೆಟ್ಟ ಸಟ್ಟುಗ”ದ ರೂಪಕ- ಅದುವರೆವಿಗೂ ಬಾಳಿ ಬದುಕಿದ ಮನೆಯೊಳಗೆ ಪುರಾತನ ಜೀವವೊಂದು ತನ್ನ ಕಡೆಗಾಲದಲ್ಲಿ ಮೂಳೆ ಚಕ್ಕಳ ಹೊದ್ದಂತೆ ಒಡಲಾಳದ ಬೇಗುದಿಯೊಂದಿಗೆ ಮೂಲೆ ಸೇರಿ ಮಲಗಿರುವ ಒಂದು ಸಂಗತವಾಗಿದೆ. ಇಲ್ಲಿ ಸಾವಿಗೂ ಮುನ್ನ ಆತ್ಮದ ಜೊತೆ ಅನುಸಂಧಾನವಿದೆ. ಸಾವು, ನೋವು, ಸಂಕಟ, ಬಂಧ, ಹಸಿವು, ದಾಹ, ದಾರಿದ್ರ್ಯ ಹೀಗೆ ಎಲ್ಲವನ್ನು ಒಳಗಿಳಿಸಿಕೊಂಡು ಬದುಕು ಮಾಡುವ ಕ್ರಿಯೆ ಇಲ್ಲಡಗಿದೆ. ಈ ಕ್ರಿಯೆ ಇಲ್ಲಿ ಭಿನ್ನವಾಗಿದೆ. ‘ಮೇಲಿನ’ ಮನಸ್ಸುಗಳ ತುಳಿತಕ್ಕೆ “ಒಕ್ಕಲು ತಿಪ್ಪೆಗಳಲ್ಲಿ/ ಹಬೆಯಾಡುವ/ ಜಲಜಾಂಬವಂತರ ಆತ್ಮಗಳಿಗೆ/ಹಟ್ಟಿಯ ಗುಡಿಸಲುಗಳು ಸಾಥಿಯಾಗಿ..” ಸತ್ತು ಹೋದ ಕೀಳ್ ಸಮುದಾಯದ ಆತ್ಮಗಳ ಲೆಕ್ಕಕ್ಕೆ ಮತ್ತಷ್ಟು ಮಗದಷ್ಟು ಸೇರ್ಪಡೆಯಾಗುತ್ತ
“ಸಲ್ಲೇಖನ ವ್ರತ ಮುಂದುವರಿಸಿವೆ” ಎಂಬಲ್ಲಿ ‘ಕೊನೆ’ ಚಿತ್ರವು ಬಿಕ್ಕಳಿಸಿದೆ.
‘ಕರಿ ಮೈಯ ಕಸುವು’ ಮಾಲೀಕ ಮತ್ತು ದುಡಿವ ಕೂಲಿಕಾರನ ನಡುವಿನ ಹಸಿವು, ದಾಹ, ಸಂಕಟ, ಯಜಮಾನಿಕೆ ದರ್ಪದ, ಸಂಪತ್ತಿನ ಕ್ರೋಢಿಕರಣದ ಅಹಮ್ಮಿಕೆ ಹೊತ್ತು ನಿಂತು ಓದುಗನ ಮೈಯಲ್ಲಿ ಬೆವರು ಬರಿಸುವ ಕವಿತೆ. ಕವಿ ಆರನಕಟ್ಟೆ ರಂಗನಾಥ್ ತಮ್ಮ ಒಡಲೊಳಗಿನ ದುಮುಡುಗುವ ದನಿದಲ್ಲಿ “ಹೊಲದೊಡೆಯನ ಮನೆಯಲ್ಲಿ ಕೂಲಿಗೆ ನಿಂತವನು/ದನಗಳಿಗೆ ಹುಲ್ಲಾಕಿ ಕಾಯಿ ಸುಲಿದು ನಿಂತಾಗ/ಸಾಹುಕಾರರು ಮನೇಲಿ ಇಲ್ಲ/ ನಾಳೆ ಬಾ ಅಂದ/ ಯಜಮಾನಿಯ ನಾಜೂಕಿಗೆ ಹೂಗುಟ್ಟಿ/ ಮರು ಮತಾಡದೆ ಕೊಡವಿದ ತಿಕದ ಧೂಳಿಗೆ/ಮನೆಯೊಳಗಿನ ಮನೆಯೊಡೆಯ ಸೀನುತ್ತಲೇ ಇದ್ದಾನೆ” ಎಂಬ ಸಾಲು ಕೆಂಧೂಳೆದ್ದ ಗಳಿಗೆಯಲ್ಲಿ ಹಸಿವಿನ ದಾಹದ ಕೂಲಿಕಾರನಿಗೆ ಮಾಲೀಕನ ಅನ್ಯಾಯದ ಕ್ಷಣಗಳು ಮೈವೆತ್ತಿ, ಹರಿದು ಹಂಚಿ ಹೋಗಿರುವ ಮೇಲು ಕೀಳಿನ ಶ್ರೇಣಿಕೃತ ಅಸಮಾನತೆಯ ಸಂಕೇತವನ್ನು ಸೂಚಿಸುತ್ತದೆ. ಈ ಸಾಮಾಜಿಕ ವ್ಯವಸ್ಥೆಯಲ್ಲಿ ಕಟ್ಟಕಡೆಯ ವ್ಯಕ್ತಿಗೂ ಸಮಾನತೆ ಇರಬೇಕೆಂಬ ಹೋರಾಟಗಳು ಚಳುವಳಿಗಳು ನಡೆದಿವೆ. ನಡೆಯುತ್ತಲೇ ಇವೆ. ದುಡಿವ ವರ್ಗಕ್ಕೆ ಮಾಲೀಕನಿಂದ ಆಗುವ ಅನ್ಯಾಯ ಮತ್ತು ಅಪಮಾನಗಳ ವಿರುದ್ದ ಜನಸಂಘರ್ಷ ನಡೆದಿದೆ. ನಡೆಯುತ್ತಲೇ ಇದೆ. ಕಾರ್ಲ್ ಮಾರ್ಕ್ಸ್ ನ ತತ್ವ ಇಂಥ ಅಸಮಾನತೆಯ ವಿರುದ್ದವೇ ಮಾತಾಡುತ್ತದೆ. ಇದು ಕರಿ ಮೈಯ ಕಸುವಿನಲ್ಲಿ ಢಾಳಾಗಿ ಗೋಚರಿಸಿದೆ.
‘ತಲೆ ಕೂದ್ಲಿಗೆ ಸೂಜಿ ದಾರ ಏರ್ಪಿನ್ನಾ’ ಜಾಗತಿಕ ಲೋಕದ ಮಾಯಾ ಬಜಾರಿನಲ್ಲಿ “ಕೀಲಿಮಣೆಗಳು/ ರೂಪಾಯಿಗಳ ಕೊರಳ ಹಿಂಡಿ” ಮೌಲ್ಯ ಕಳೆದು ರಿಯಾಯಿತಿಗಳ ಲೆಕ್ಕಕ್ಕೆ ಮಣಿದು ಸಕಲವನ್ನು ಬಿಕರಿಗಿಟ್ಟಿವೆ. ಸಾವಿರಾರು ಶಾಪಿಂಗ್ ಮಾಲ್ ಗಳು, ಆನ್ ಲೈನ್ ವಹಿವಾಟುಗಳು ದೇಸಿ ಉತ್ಪಾದನಾ ಘಟಕಗಳನ್ನು ಕುಲಕಸುಬುಗಳನ್ನು ಮತ್ತು ದುಡಿವ ಕೈಗಳನ್ನೇ ತನ್ನ ವಶ ಮಾಡಿಕೊಂಡಿವೆ. ಈ ಬಂಡವಾಳಶಾಹಿಗಳ ತೆರೆಮರೆಯ ಕೊಳ್ಳುಬಾಕತನ ಅಸ್ಸಹಾಯಕರನ್ನು ಹಸಿವಿನ ತಾಪಕ್ಕೆ ನೂಕಿವೆ. ಲಾಭಕೋರ ಕಂಪನಿಗಳ ಸಮರದ ಆಟದಲ್ಲಿ “ಸುಂಟರಗಾಳಿಗೆ ತರಗುಟ್ಟುತ್ತಲೆ/ಬೀದಿಕಸವಾಗಿ ಮೈಸರೆಗೆಳೆದು” ಬದುಕು ಏಗುತ್ತ ಸಾಗುತ್ತ, ನಾಜೂಕುತನದೊಳಗೆ ಮನೆ ಮಂದಿಯೂ ಜಾಗತಿಕ ಸವಾಲುಗಳಿಗೆ ಸರಕುಗಳಾದ ಬಗೆ ಇದೆ. ಪ್ರಭುತ್ವವು ಒಂದು ಮೇಲ್ ಸ್ತರದ ವ್ಯವಸ್ಥೆಯಾಗಿದೆ. ಇದು ಕಾಲದಿಂದ ಕಾಲಕ್ಕೆ ತನ್ನನ್ನು ತಾನು ಉಜ್ಜೀವನಗೊಳಿಸಿಕೊಳುವತ್ತ ತುಡಿಯುತ್ತಲೇ ಇರುತ್ತದೆ. ಹೀಗೆ ಉಜ್ಜೀವನಗೊಂಡ ಈ ಮೇಲ್ ಸ್ತರದ ವ್ಯವಸ್ಥೆಯೊಳಗೆ ಮತ್ತೆ ಕೆಲವಕ್ಕೆ ‘ಷರತ್ತುಗಳು ಅನ್ವಯಿಸುವುದಿಲ್ಲ’ ! ಹಾಗಾಗಿ ಈ ಕವಿತೆಯ ನೋವೆತ್ತವರ ನೋವು, ಬಿರಿದ ಪಾದಗಳ ಟಾರಿನ ವಾಸನೆಗೆ/ ಆಕಾಶವೇ ಹೆಪ್ಪುಗಟ್ಟಿದೆ, ಸಾಲುಗಳ ರೂಪಕಾಂಶಗಳು ವ್ಯಕ್ತಪಡಿಸುವ ಭಾವಗಳು ದಿಗ್ಬ್ರಮೆ ಹುಟ್ಟಿಸಿ ಆಳವಾಗಿ ಕಾಡುವ ಕ್ರೌರ್ಯದ ವಿವಿಧ ಮಗ್ಗುಲುಗಳನ್ನು ತೆರೆದಿಡುತ್ತವೆ. ಇದು ಈ ನೆಲದಲ್ಲಿ ಉಳ್ಳವರ/ಮೇಲ್ವರ್ಗದ ಮನೋಭಿಲಾಸೆಗಳಿಗೆ ಸಿಗುವಂಥ ಅನುಕೂಲಕರ ಷರತ್ತಿನ ಚೌಕಟ್ಟು ಅಸ್ಸಹಾಯಕ ದನಿಗಳ ರೋಧನೆಯ ಅಹವಾಲುಗಳಿಗೆ ಸಿಗದೆ ನಲುಗುತ್ತವೆ. ಹಾಗೆ ದಯೆ, ದಾಕ್ಷಿಣ್ಯ ತುಂಬಿಕೊಂಡ ನವಿಲುಗಳು ಆಗಾಗ ತನ್ನ ಶೃಂಗಾರದ ರೆಕ್ಕೆ ಬಿಚ್ಚಿ ಆಡುತ್ತಲೆ ಆತಂಕದ ಗೆರೆಯೊಳಗೆ ಬದುಕಿನ ಹೆಜ್ಜೆ ಗುರುತುಗಳನು ಮೂಡಿಸಿ ಅಡಿಗಡಿಗೂ ಎರಗುವ ಕೇಡಿನ/ಬಯಲೊಳಗೆ ಉರಿವ ‘ಸಮಾಧಿಯೊಳಗಿನ ಎಲುಬಿನ ಕಾರುಣ್ಯ’ವಾಗಿ ನಿರಾಕಾರನ ಸಂಕಟದ ಕುಲುಮೆಯಾಗಿ ಅಳಿದುಳಿದ ಜೀವದೊಲುಮೆಗೆ ಸಾಕ್ಷಿಯಾಗಿದೆ!
‘ಸಂಬೋಳಿ ಪದ’ ಹೊರಗಿನ ಪದ. ಅರ್ಥಾತ್ ‘ಇರುವಿಕೆ’ ಸಾರುವ ಪದ. ‘ಹೊರಗೆ’ ಎಂಬ ಸತ್ಯದ ಪದ! ಒಂದಾನೊಂದು ಕಾಲದಲ್ಲಿ ಬ್ರಾಹ್ಮಣ್ಯದ ಬೇರು ಜಂಬೂ ದ್ವೀಪವನ್ನೆ ಆವರಿಸಿತ್ತು ತಣ್ಣಗೆ! ಸುಡು ಮದ್ಯಾಹ್ನದ ನೆತ್ತಿ ಮೇಲಿನ ಸೂರ್ಯನಿರುವ ಗಳಿಗೆಯಲ್ಲಿ ಮಾತ್ರ ಕೀಳು ಕುಲದವರು ಮೇಲು ಕುಲದವರ ಬೀದಿಯಲ್ಲಿ ಹೋಗಬಹುದಿತ್ತು ‘ಸಂಬೋಳಿ ಸಂಬೋಳಿ’ ಎಂದು! ಸೂರ್ಯ ನೆತ್ತಿ ಮೇಲೆ ಬಂದಾಗಲೇ ಏಕೆಂದರೆ – ಅಸ್ಪೃಶ್ಯ ಹೋಗುವ ಹಾದಿಯಲ್ಲಿ ಅವನ ನೆರಳೂ ಅವನೊಂದಿಗೇ ಅವನನ್ನು ಆವರಿಸಿಯೇ ಮೇಲ್ವರ್ಗದವರಿಗೆ ತಾಕದಂತಿರಲಿ ಎಂದು! ಇದೇ ಬಸವಣ್ಣನ ‘ಆನುದೇವ ಹೊರಗಣವನು’ ಸಂಬೋಳಿ ಸಂಬೋಳಿ! ಸತ್ಯದ ಮೇಲಿನ ನಡಿಗೆ!
ಇಲ್ಲಿನ ‘ಸಂಬೋಳಿ ಪದ’ಕ್ಕೆ ಕ್ರಿಸ್ತಪೂರ್ವದ ಮಾತಿದೆ. ಮೌರ್ಯಸಾಮ್ರಾಜ್ಯ ತುದಿ ಹಿಡಿದು ಹೇಳಿರುವ ಮಾತು. ಕವಿ ಆರನಕಟ್ಟೆ ರಂಗನಾಥರ ‘ಸಂಬೋಳಿ ಪದ’ದ ಓದು ಇತಿಹಾಸದ ಮರು ಓದಿಗೆ ನೂಕುತ್ತದೆ.
“ನಂದನರ ಕಾಲವ ಕಾಲ್ಗಳಲ್ಲಿ ಮೆಟ್ಟಿದ/ಚಾಣಕ್ಯನ ಪಾದಗಳ ನೆರಳು ಸೋಕಿ” ಎಂದು ಆರಂಭವಾಗುವ ‘ಸಂಬೋಳಿ ಪದ’ ಚಂದ್ರಗುಪ್ತನ ಹುಟ್ಟಿನ ಮೂಲವನ್ನು ಶೋಧಿಸಿದೆ. ಚಂದ್ರಗುಪ್ತನು ‘ಹಾದರದ ಕಳ್ಳು ಬಳ್ಳಿ’- ‘ಕೀಳು ರಕ್ತದ ಕುಲದವ’ ಎಂಬ ಕಾರಣವೇ ಕವಿತೆಯ ಮೂಲ ಧ್ವನಿ. ಇಲ್ಲಿ ಆ ಕೀಳು ರಕ್ತ ಮುರಾ. ಈ ‘ಮುರಾ’ ಚಂದ್ರಗುಪ್ತನ ತಂದೆ.
ಆದರೆ ‘ಮುರಾ’ ಬಗ್ಗೆ ಇತಿಹಾಸ ಮತ್ತು ಸಾಹಿತ್ಯದ ವಿಶ್ಲೇಷಣೆಯಲ್ಲಿ ಬೇರೆಯದೇ ಆದ ಹೊಸ ಶೋಧವಿದೆ. ಮುರಾ ಒಬ್ಬ ಸ್ಪುರದ್ರೂಪಿ ದಾಸಿ. ಈ ಸ್ಪುರದ್ರೂಪಿ ದಾಸಿ ಮಗಧ ನಂದರಾಜನ ಆಕರ್ಷಣೆ. ಅದರ ಫಲವೇ ಚಂದ್ರಗುಪ್ತ ಎಂದು ಹೇಳುತ್ತವೆ. ಈ ಮುರಾಳ ಮಗ ಚಂದ್ರಗುಪ್ತನಿಗೂ ನಂದರಾಜನ ಇತರ ರಾಣಿಯರ ಕುಡಿಗಳಿಗೂ ‘ಕೀಳು ಕುಲ’ದ ಸಂಘರ್ಷವಾಗುತ್ತದೆ. ಇದರ ಮೂಲ ಶಿವನಾಗವಂಶ. ಮಹಾನಂದಿನ್, ಮಹಾಪದ್ಮಾನಂದ, ಶೂದ್ರ ತಾಯಿ ಹೀಗೆ – ಸಾಹಿತ್ಯ ಮತ್ತು ಐತಿಹಾಸಿಕ ವ್ಯಾಖ್ಯಾನವಿದೆ. ಈ ವ್ಯಾಖ್ಯಾನವೆಲ್ಲ ಚಂದ್ರಗುಪ್ತನ ಹುಟ್ಟಿನ ಮೂಲ ‘ತಾಯಿಯ ಕಳ್ಳುಬಳ್ಳಿ’ಯ ಶೋಧವೇ. ಆದರೆ ಆರನಕಟ್ಟೆ ರಂಗನಾಥರ ‘ಸಂಬೋಳಿ ಪದ’ದಲ್ಲಿ ‘ಮುರಾ’ ಚಂದ್ರಗುಪ್ತನ ಹುಟ್ಟಿನ ಕರ್ತೃವಾಗಿ ವಿಶೇಷವಾಗಿ ‘ತಂದೆ’ಯ ಮೂಲವನ್ನು ಹೇಳುತ್ತದೆ! ಆರನಕಟ್ಟೆ ಅವರ ‘ಸಂಬೋಳಿ ಪದ’ದ ಮೂಲ ಹಿಡಿದು ಕೆದಕಿದರೆ ಮಹಾಪದ್ಮನಂದ ಮುರಾನ ಹುಟ್ಟಿನ ಕರ್ತೃ. ಮಹಾನಂದಿನ್ ಮಹಾಪದ್ಮನಂದನ ಹುಟ್ಟಿನ ಕರ್ತೃ. ಈತನ ತಾಯಿ ಅಂದರೆ ಮಹಾನಂದಿನ್ ಹೆಂಡತಿ ಕೀಳುಕುಲದ ಸ್ಪುರದ್ರೂಪಿ. ಈ ಮೂಲ ಶೋಧಿಸುತ್ತಾ ಮುರಾ ಚಂದ್ರಗುಪ್ತನ ಹುಟ್ಟಿನ ಕರ್ತೃ. ಹೀಗಾಗಿ ಕೀಳುಕುಲದ ವಿರುದ್ದದ ಪುರಾತನವಾದ ಬ್ರಾಹ್ಮಣ್ಯದ ಹುನ್ನಾರದ ದನಿಯಾಗಿ ‘ಸಂಬೋಳಿ ಪದ’ ಓದುಗನ ಒಡಲನ್ನು ಕದಡುತ್ತದೆ. ಇಡೀ ಕವಿತೆ “ಮುರಾನ ಕುಡಿಯ ಕೈಗಳೆ ಕತ್ತಿ ಮಸೆದವೆಂಬ/ಹೊಸೆದ ಕತೆಗೆ ಇಂಡಿಕಾದ ಸಾಕ್ಷಿಗೆ” ಕಥೆಯೊಂದನ್ನು ಬಿಚ್ಚಿಡುತ್ತ, ಹೇಗೆ ಭಾರತೀಯ ಇತಿಹಾಸ ಪರಂಪರೆಯಲ್ಲಿ “ಹೋಮ ಹವನ ಧೂಪಗಳ ಉಬ್ಬಸಕ್ಕೆ/ಚಾಣಕ್ಯನ ಮೂಲ ಅರ್ಥಶಾಸ್ತ್ರಕ್ಕೆ ಈಗಲು/ಊರ ಹೊರಗೆ ತಿರುಗುವ ಸೂರ್ಯ ಚಂದಿರರ/ಸಂಬೋಳಿ ಸಂಬೋಳಿ ಸಂಬೋಳಿಯ ಆರ್ತನಾದ” ದ ಬ್ರಾಹ್ಮಣ್ಯದ ಅಟ್ಟಹಾಸವೇ ಮೆರೆದಿದೆ ಎಂಬ ಸೂಕ್ಷ್ಮ ಒಳನೋಟವನ್ನು ಕವಿ ಆರನಕಟ್ಟೆ ರಂಗನಾಥ್, ಹೊರಗಿನಿಂದ ಬಂದ ಅಲೆಮಾರಿ ಆರ್ಯನ್ನರು ಬದುಕಿಗಾಗಿ ಮಾಡಿಕೊಂಡ ಫಲವತ್ತಾದ ಗಂಗಾನದೀ ಬಯಲು ಪ್ರದೇಶದ ವಸಾಹತುವಿನ ಸುತ್ತಲಿನ ಪ್ರಾದೇಶಿಕ ವಾತಾವರಣ ರೂಪಿತ ಚಿತ್ರಣವನ್ನು ಮುರಾ, ಚಂದ್ರಗುಪ್ತನ ಹುಟ್ಟಿನ ಕುಲಮೂಲ ಧ್ವನಿಸುವ ‘ಸಂಬೋಳಿ ಪದ’ವನ್ನು ಕಟ್ಟಿಕೊಡುತ್ತಾರೆ.
ಇಲ್ಲಿರುವ ಎಲ್ಲ ಮೂವತ್ತೆಂಟು ಕವಿತೆಗಳಲ್ಲಿ ಹಾಸು ಹೊಕ್ಕಾಗಿರುವ ಅವ್ವ, ಅಪ್ಪ, ಅಜ್ಜ,ಅಯ್ಯ, ಪಾದುಕೆ, ಪಾದಗಳು, ಉರಿಪಾದ, ಜಲಜಾಂಬವಂತ, ಜಂಬುದ್ವೀಪ, ಮಾದಾರ ಚನ್ನಯ್ಯ, ಹರಳಯ್ಯ, ಮಾತಂಗ, ಮುನಿ, ಆದಿಗುರು, ಹೆಪ್ಪುಮುನಿ, ಬೆಪ್ಪುಮುನಿ, ಮಾದಿಗ, ನೇರಳೆ, ತಂಬೂರಿ, ಕಂಡಾಯ, ಧರೆಗೆ ದೊಡ್ಡವರು, ಮಾದೇಶ್ವರ, ಮಂಟೇಸ್ವಾಮಿ, ದೇಹ ದೇಗುಲ, ಬುದ್ದ ಧ್ಯಾನ, ಬುದ್ದ ವಿಹಾರ, ರಜಸ್ಸು ಓಜಸ್ಸು, ಲಿಂಗ, ಶಿವ, ಸಲಿಕೆ, ಕುಲುಮೆ, ಕೆಂಡ, ಕಬ್ಬಿಣ, ಕೈಯುಳಿ ಕತ್ತಿ, ಧೂಪ, ತಮಟೆ ಗಾನ, ತೊಗಲು, ಈಟಿ, ಕವಡೆ, ಕಾರಣ್ಯ, ನವಿಲು, ಕೊಳೆತ ಶಿಶ್ನ, ಕುಣಿ, ಕಳ್ಳುಬಳ್ಳಿ, ಜನನಾಂಗ, ಚಪ್ಪಡಿಕಲ್ಲು, ಚರ್ಮ, ಕಳೇಬರ, ಕ್ವಾಣ, ಸತ್ತವರ ದಿಬ್ಬ, ಸಿಂಧೂ ಬಯಲು, ಮುರಾ, ಬೋಧಿ, ಗಂಗಾನದಿ, ಉತ್ಖನನ, ಅಡಿಗಲ್ಲು, ಪಾಲಿ ಶಬುದ, ಸಂಬೋಳಿ ಪದ, ಸಮಾಧಿ, ಎಲುಬು, ತಮಿಳ್ ಈಳ್, ಚೆನ್ನ – ಹೀಗೆ ವಿಭಿನ್ನ ರೂಪಕಗಳು ಶಬ್ಧಗಳು ಉಪಮೆಗಳು ನುಡಿಗಟ್ಟುಗಳು ಶರಣ ಶರಣೆಯರ ವಚನ ಪದಗಳ ಸಾಲುಗಳು ಪುರಾಣೇತಿಹಾಸ ವಸ್ತು ವಿಷಯಗಳು ಒಂದರೊಳಗೊಂದು ಮಿಳಿತಗೊಂಡಿವೆ. ಈ ಮಿಳಿತದ ಕೊಂಡಿ ಹಿಡಿದು ಹಿಗ್ಗಲಸಿದರೆ ಈ ಕೃತಿಯ ವಿಶ್ಲೇಷಣೆಯ ಆರಂಭಿಕ ಕಥಾ ದೃಷ್ಠಾಂತದ ‘ಮಾತಂಗ ಪಂಡಿತನಾಗಿದ್ದವನು ನಾನೇ’ ಎಂಬ ಬುದ್ದನ ಅಂತರಂಗದ ಮಾತು, ‘ಕಾರುಣ್ಯದ ಮೋಹಕ ನವಿಲುಗಳೇ’ ಕೃತಿಯ ಆತ್ಮದಂತೆ ಎಲ್ಲ ಕಾಲಕ್ಕು ಈ ನೆಲದ ದಮನಿತ ಮನಸ್ಸುಗಳ ಬೇರಾಗಿ ಉಳಿದಿರುವ ತಥಾಗತ, ದಲಿತ ಅರ್ಥಾತ್ ಮತಂಗ ಕುಲದ ಆಸ್ಮಿತೆ.
ಹಾಗೆ, ದಟ್ಟ ಜೀವನಾನುಭವದ ದಲಿತ ಕಾವ್ಯಕ್ಕೆ ರಕ್ತ ಮಾಂಸ ಮೂಳೆ ಚಕ್ಕಳದಂತ ಆಳದ ಜೀವಸೆಲೆ ಇರುವ ಗಟ್ಟಿ ಕವಿತೆಗಳಿಗೆ ಅಡಿಪಾಯ ಹಾಕಿದ, ಈಗಲೂ ಕನ್ನಡದ ಸಮಗ್ರ ದಲಿತ ಸಾಹಿತ್ಯದ ಬೇರಿಗಂಟಿ ಚಿತ್ರದ ಬೆನ್ನಾಗಿ ನಿಂತಿರುವ ಎನ್ಕೆ ಹನುಮಂತಯ್ಯ ಅವರ ನಂತರದ ಕಾವ್ಯದ ಕೊಂಡಿಯಾಗಿ ಕವಿ ಆರನಕಟ್ಟೆ ರಂಗನಾಥ್ ‘ಕಾರುಣ್ಯದ ಮೋಹಕ ನವಿಲುಗಳೇ’ ಮೂಲಕ ದಲಿತ ಕಾವ್ಯದ ವಾರಸುದಾರರಾ ಅನಿಸಿ ಬೆರಗು ಹುಟ್ಟಿಸಿದ್ದಾರೆ.
ಹೀಗೆ ಆರನಕಟ್ಟೆ ರಂಗನಾಥರ ‘ಕಾರುಣ್ಯದ ಮೋಹಕ ನವಿಲುಗಳೆ’ ಕವಿತೆಗಳು ಕ್ಲಿಷ್ಟವಾದ ಪ್ರಯೋಗಾತ್ಮಕ ಚೌಕಟ್ಟಿನ ಕಾವ್ಯ ಸೃಷ್ಟಿಯಾಗಿದೆ. ಹಾಗೆ ದಟ್ಟವಾದ ದಲಿತ ಲೋಕದ ಜೀವನ ಮತ್ತು ಜೀವಪರವಾದ ಸಾಂಸ್ಕೃತಿಕ ಹೆಜ್ಜೆ ಗುರುತುಗಳ ಗೆರೆಗಳ ಒಳಲಾಳದ ಬೇಗುದಿಯು ಸಂವಾದದ ರೂಪದಲ್ಲಿ ಭೂತ, ವರ್ತಮಾನ, ಭವಿತವ್ಯದ ನಡುವೆ ಹಿಂದಕ್ಕು ಮುಂದಕ್ಕು ಅಡ್ಡಾಡುತ್ತ ಕವಿಯ ಆಳದ ತಲ್ಲಣಗಳನ್ನು ಕಟ್ಟಿಕೊಡುವ ಗುಚ್ಛವಾಗಿದೆ.
-ಎಂ.ಜವರಾಜ್