ಕಲಿಕೆ v/s ಕುಡಿತ: ಶೈಲಜ ಮಂಚೇನಹಳ್ಳಿ


ಈ ಹಿಂದೆ ನನ್ನ ಪುಟ್ಟ ಕಂಪ್ಯೂಟರ್ ಸೆಂಟರ್‌ಗೆ ಕಂಪ್ಯೂಟರ್ ಕಲಿಯಲೆಂದು ಸುಮಾರು ೨೫ ವರ್ಷದ ಒಬ್ಬ ವ್ಯಕ್ತಿ ಬಂದ, ಈಗ ಆತನ ಹೆಸರು ನೆನಪಿಗೆ ಬರುತ್ತಿಲ್ಲ, ತನ್ನನ್ನು ಪರಿಚಯಿಸಿಕೊಳ್ಳುವಾಗ ಆತ ನನಗೆ ಒತ್ತಿ ಒತ್ತಿ ಹೇಳಿದುದು ನನಗೆ ಕಂಪ್ಯೂಟರ್ ಕಲಿಯಬೇಕೆಂದು ತುಂಬಾ ಆಸೆ ಇದೆ ಎಂದು. ತಾವು ನನಗೆ ಹೇಳಿಕೊಡುವಿರ ಮೇಡಮ್? ಎಂದು ಕೇಳಿದ. ವಯಸ್ಸಿನ ವಯೋಮಿತಿ ಇಲ್ಲದೆ ಎಲ್ಲಾ ವಯಸ್ಸಿನವರಿಗೂ ನಾನು ಕಂಪ್ಯೂಟರ್ ಕಲಿಸುತ್ತಿದ್ದರಿಂದ ಆತನ ಈ ಕೇಳಿಕೆಯಿಂದ ನನಗೆ ಯಾವುದೇ ವಿಶೇಷವೆನಿಸಲಿಲ್ಲ. ನಾನು ಪ್ರತಿಕ್ರಿಯಿಸುವ ಮುನ್ನ ಆತನೇ ನಾನು ಬರಿ ೩ ಕ್ಲಾಸ್‌ವರೆಗೆ ಮಾತ್ರ ಓದಿದ್ದೇನೆ ಮೇಡಮ್, ಕೆಲವು ಕಡೆ ವಿಚಾರಿಸಿದೆ ಯಾರು ನನಗೆ ಕಲಿಸಲು ಒಪ್ಪಲಿಲ್ಲ ನೀವು ನನಗೆ ಹೇಳಿಕೊಡುವಿರ? ನನಗೆ ಕಲಿಯಲು ತುಂಬಾ ಆಸಕ್ತಿಯಿದೆ ಎಂದ. ಆಗ ಆ ಕ್ಷಣಕ್ಕೆ ನಾನು ಸಹ ಬರೀ ೩ ಕ್ಲಾಸ್ ಓದಿರುವುದರಿಂದ ಹೇಳಿಕೊಡಲು ಕಷ್ಟ ಆಗುತ್ತದೆ, ಆಗುವುದಿಲ್ಲ ಎಂದೆ, ಆದರೆ ನನ್ನ ಮನಸ್ಸಿನಲ್ಲಿ ಏನನಿಸಿತೋ, ಆಗುವುದಿಲ್ಲ ಎಂದು ಖಂಡಿತವಾಗಿ ಹೇಳದೇ ಮನಸ್ಸಿನ ಮೂಲೆಯಲ್ಲಿ ಆಸಕ್ತಿಯಿದ್ದರೆ ಕಲಿಸಬಹುದಲ್ಲವೆ ಅನಿಸಿದ್ದರಿಂದ, ಮರುಕ್ಷಣವೇ ಇನ್ನೆರಡು ದಿನ ಬಿಟ್ಟು ಬಾ ಏನೆಂದು ಹೇಳುತ್ತೇನೆ ಎಂದೇಳಿ ಕಳಿಸಿದೆ. ಈ ರೀತಿ ಹೇಳಿದ್ದರಿಂದಲೇ ಇರಬೇಕು ಈಗ ಈ ಲೇಖನ ಬರೆಯಲು ಸಾಧ್ಯವಾಗುತ್ತಿರುವುದು.

ಆತ ಮತ್ತೇ ಬರುವನೆಂಬ ನಂಬಿಕೆ ನನಗೆ ಅಷ್ಟಾಗಿ ಇರಲಿಲ್ಲ ಏಕೆಂದರೆ ಅವನಿಗೆ ಎಲ್ಲಾ ಕಡೆ ಹೇಳಿದಂತೆ ನಾನು ಸಹ ಬರೀ ೩ನೇ ಕ್ಲಾಸ್ ಓದಿರುವುದಾದರೆ ತೊಂದರೆಯಾಗುತ್ತದೆ ಎಂದಿದ್ದೆ. ಆದರೆ ಸರಿಯಾಗಿ ಎರಡು ದಿನ ಬಿಟ್ಟು ಆತ ನನ್ನನ್ನು ಬೇಟಿಯಾಗಲು ಬಂದ, ಮತ್ತೇ ಅದೇ ಮಾತನ್ನು ಕೇಳಿದ. ಆಗ ನಾನು ನಿನ್ನ ಭಾಷಾಜ್ಞಾನ ಹೇಗಿದೆ ಎಂದು ತಿಳಿಯಲು ನಾನು ನಿನಗೆ ಕೆಲವು ಪರೀಕ್ಷೆಗಳನ್ನು ಕೊಡುತ್ತೇನೆ ಅದರ ಮೇಲೆ ನಾನು ನಿನಗೆ ಕಂಪ್ಯೂಟರ್ ಕಲಿಸುವುದೋ ಬೇಡವೋ ಎಂದು ನಿರ್ಧಾರ ಮಾಡುತ್ತೇನೆ ಎಂದೆ ಅದಕ್ಕೆ ಅವ ಒಪ್ಪಿದ. ಆಗ ನನ್ನ ಬಳಿ ಇದ್ದ ಒಂದು ಕನ್ನಡ ಮತ್ತು ಒಂದು ಆಂಗ್ಲ ಪುಸ್ತಕದ ಒಂದೆರೆಡು ಪುಟಗಳನ್ನು ತೆರೆದು ಆತನಿಗೆ ಓದುವಂತೆ ಕೊಟ್ಟೆ ಆತ ಓದತೊಡಗಿದ, ಆತ ಓದುವ ರೀತಿ ಬರೀ ೩ ಕ್ಲಾಸ್ ಕಲಿತ ವ್ಯಕ್ತಿಯ ರೀತಿ ಇರಲಿಲ್ಲ ಏನೆಂದರೂ ಹತ್ತನೇ ತರಗತಿ / ಪಿ.ಯು.ಸಿ. ವರೆಗೆ ಕಲಿತಿರುವ ವ್ಯಕ್ತಿ ಇರಬಹುದು ಎಂದೆನಿಸಿತು. ಹಾಗೆ ಕೆಲವು ಸುಲಭವಾದ ಮತ್ತು ಕೆಲವು ಕಷ್ಟವಾದ ಆಂಗ್ಲ ಪದಗಳನ್ನು ಉಕ್ತಲೇಖನ ಮಾಡಿದೆ ಅದರಲ್ಲೂ ಆತ ಪಾಸಾದ. ೧೦೦% ಸರಿಯಾಗಿ ಬರೆಯದಿದ್ದರೂ ದ್ವಿತೀಯ ದರ್ಜೆ / ಪ್ರಥಮ ದರ್ಜೆ ವಿದ್ಯಾರ್ಥಿಗಳು ಉತ್ತರಿಸುವ ರೀತಿ ಇತ್ತು ಆತನ ಸಾಮರ್ಥ್ಯ. ನನ್ನ ಈ ಕೆಲವು ಪರೀಕ್ಷೆಗಳಲ್ಲಿ ಆತನಿಂದ ಸಮಾಧಾನವಾದ ಸಾಮರ್ಥ್ಯ ಕಂಡು ಬಂದಿದ್ದರಿಂದ ಈ ವ್ಯಕ್ತಿಗೆ ಕಂಪ್ಯೂಟರ್ ಕಲಿಸಿಕೊಡುವೆ ಎಂದೇಳಿ, ನೀನು ಕಂಪ್ಯೂಟರ್ ಕಲಿಯಲು ಏಕೆ ಮನಸ್ಸು ಮಾಡಿರುವೆ? ಎಂದು ಕೇಳಿದೆ. ಆ ಕ್ಷಣಕ್ಕೆ ಕಂಪ್ಯೂಟರ್ ಕಲಿತರೆ ನಾನು ಕೆಲಸ ಮಾಡುವ ಕಡೆ ಬಡ್ತಿ ಸಿಗುತ್ತದೆ, ಅದಕ್ಕಿಂತ ಹೆಚ್ಚಾಗಿ ನನಗೆ ಆಸಕ್ತಿ ಇದೆ ಎಂದು ಹೇಳಿದ. ಆತ ಕೆಲಸ ಮಾಡಲು ಉಪಯೋಗವಾಗುವ ಕೋರ್ಸ್‌‍ಗಳ ಬಗ್ಗೆ ವಿವರಿಸಿ ಅದರಲ್ಲಿ ಆತನೇ ಒಂದನ್ನು ಆಯ್ಕೆ ಮಾಡುವಂತೆ ಮಾಡಿದೆ. ತಕ್ಷಣಕ್ಕೆ ೩ ತಿಂಗಳ ಕೋರ್ಸ್ ತೆಗೆದುಕೊಂಡರೂ ಮುಂದೆ ಬೇರೆ ಬೇರೆ ಕೋರ್ಸ್‌ಗಳನ್ನು ಕಲಿಯಲು ಸಹ ಆಸಕ್ತಿ ಇದೆ ಎಂದು ಖುಷಿಯಾಗಿ ಹೇಳಿದ.

ಜವಾಬ್ಧಾರಿಯುತ ಬಡ ವ್ಯಕ್ತಿಯಾದ್ದರಿಂದ ಕೋರ್ಸ್ ಫೀನಲ್ಲಿ ನಾನೇ ಕಡಿಮೆ ಮಾಡಿಕೊಳ್ಳಲು ನಿರ್ಧರಿಸಿದೆ, ಹಾಗೇಂದು ಹೇಳಿದಾಗ ಅದಕ್ಕೆ ಆತ ಒಪ್ಪಲಿಲ್ಲ, ಪೂರ್ತ ಹಣವನ್ನು ನೀಡಿ ೨ ದಿನಗಳಾದ ಮೇಲೆ ಕ್ಲಾಸಿಗೆ ಬರುವೆನೆಂದು ಹೇಳಿ ೨-೩ ಕಡೆ ಕೆಲಸ ಮಾಡುತ್ತಿರುವುದರಿಂದ ಎಲ್ಲಾ ದಿನಗಳಲ್ಲೂ ನಾನು ಕ್ಲಾಸಿಗೆ ಬರುವುದು ಕಷ್ಟವಾಗಬಹುದು ದಯವಿಟ್ಟು ಸರಿದೂಗಿಸಿಕೊಳ್ಳಿ ಎಂದು ಮನವಿ ಮಾಡಿದ, ಏನೊಂದು ಮಾತಾಡದೆ ಸುಮ್ಮನಿದ್ದ ನಾನು ಒಪ್ಪಿಗೆ ಕೊಟ್ಟಿರುವೆನೆಂದು ಭಾವಿಸಿ ಮುಂದಿನ ಸೋಮವಾರದಿಂದ ಕ್ಲಾಸಿಗೆ ಸೇರುವೆನೆಂದು ಹೊರಟ. ಎರಡು ದಿನಗಳಾದ ಮೇಲೆ ಸಂಜೆ ೭:೩೦ ಸಮಯದಲ್ಲಿ ಆತನ ಕಂಪ್ಯೂಟರ್ ಕಲಿಕೆ ಪ್ರಾರಂಭವಾಯಿತು.

ಕಲಿಕೆಯಲ್ಲಿ ಆತನಿಗೆ ತುಂಬಾ ಆಸಕ್ತಿಯಿದ್ದ ಕಾರಣ, ಆತ ಅರ್ಥಮಾಡಿಕೊಳ್ಳಲು ನಾನು ಹೇಳಿಕೊಡಲು ಕಷ್ಟವಾಗಲಿಲ್ಲ. ಕೆಲವು ದಿನಗಳಲ್ಲಿ ಆತ ಬರೀ ೩ನೇ ಕ್ಲಾಸಿನವರೆಗೆ ಮಾತ್ರ ಓದಿರುವುದು ಎನ್ನುವುದು ಸಹ ನನ್ನಿಂದ ಮರೆತುಹೋಯಿತು. ಕಂಪ್ಯೂಟರ್ ಕಲಿಕೆ ಪ್ರಾರಂಭವಾದ ಮೇಲೆ ಆತನ ಪರಿಚಯವಾಗತೊಡಗಿತು. ತಂದೆ ಈಗಿಲ್ಲ, ನಾನು ಚಿಕ್ಕ ವಯಸ್ಸಿನ್ನಲ್ಲಿದ್ದಾಗಲೇ ತೀರಿಕೊಂಡರು, ಆದ್ದರಿಂದ ಮನೆ ಸಂಸಾರದ ಭಾರ ದೊಡ್ಡ ಮಗನಾದ ನನ್ನ ಮೇಲೆ ಬಿತ್ತು. ಆದ್ದರಿಂದ ೩ ಕ್ಲಾಸಿಗಿಂತ ಮುಂದೆ ಓದಲು ಆಗಲಿಲ್ಲ, ಆದರೆ ಓದಿನಲ್ಲಿ ತುಂಬಾ ಆಸಕ್ತಿ ಇದ್ದ ಕಾರಣ ಬೇರೆ ಬೇರೆ ಪ್ರಕಾರದ ಸಾಹಿತ್ಯದ ಪುಸ್ತಕಗಳನ್ನು, ಕನ್ನಡ-ಇಂಗ್ಲೀಷ್ ದಿನಪತ್ರಿಕೆಗಳನ್ನು ಓದುತ್ತಿದ್ದೆ, ಹಲವಾರು ಸಣ್ಣ-ಪುಟ್ಟ ಕೆಲಸಗಳನ್ನು ಮಾಡಿ ಸಂಪಾದಿಸಿ ಸಂಸಾರವನ್ನು ಸರಿತೂಗಿಸುತ್ತಿದ್ದೆ. ಈಗ ಒಂದು ಚೆನ್ನಾಗಿರುವ ಕಂಪನಿಯಲ್ಲಿ ಕೆಲಸಮಾಡುತ್ತಿರುವೆ ಮೊದಲು ನನ್ನ ಓದಿಗೆ ತಕ್ಕನಾದ ಕೆಲಸವನ್ನು ಮಾಡುತ್ತಿದ್ದ ನಾನು ನಿಷ್ಟೆಯಿಂದ ನನ್ನ ಓದಿಗೆ ಮೀರಿದಂತಹ ಮೇಲ್ದರ್ಜೆಯ ಕೆಲಸ ಮಾಡುತ್ತಿದ್ದೇನೆ. ಈ ಕೆಲಸಗಳನ್ನು ಮಾಡಿ ಪಳಗಿ ಪಡೆದ ಅನುಭವದಿಂದ ನಾನು ಕಂಪನಿಯ ಆಫೀಸಿನ ಕೆಲಸಗಳನ್ನು ಮಾಡಲು ತೊಡಗಿದೆ ಎಂದು ಸಂಕ್ಷಿಪ್ತವಾಗಿ ತಿಳಿಸಿದ. ನಾನು ಓದಲಿಕ್ಕೆ ಆಗದೇ ಇರುವ ಕಾರಣ ನನ್ನ ತಮ್ಮನನ್ನು ಚೆನ್ನಾಗಿ ಓದಿಸುತ್ತಿದ್ದೇನೆ. ಅವನು ನನ್ನಂತೆ ಆಗುವುದು ಬೇಡ ಎಂದು ನನ್ನಿಚ್ಛೆ ಎಂದ. ಆಗಾಗ ಅನೇಕ ರೀತಿಯ ಪುಸ್ತಕಗಳನ್ನು ಓದುತ್ತಿದ್ದ ಕಾರಣ ಸಾಹಿತ್ಯದಲ್ಲಿ ನನಗೆ ಆಸಕ್ತಿ ಬಂದಿತು, ಕಥೆ-ಕವನಗಳನ್ನು ಆಗಾಗ ಬರೆಯುತ್ತೇನೆ, ಅವುಗಳನ್ನು ಕನ್ನಡ ಪತ್ರಿಕೆಗಳಿಗೂ ಕಳಿಸಿಕೊಡುತ್ತಿರುತ್ತೇನೆ ಎಂದು ಪರಿಚಯಿಸಿಕೊಂಡು ನಾನು ಬರೆಯುವ ಲೇಖನಗಳನ್ನು ಬೇರೆ ಕಡೆ ಟೈಪ್ ಮಾಡಿಸಿ ಕಳಿಸುತ್ತೇನೆ ಆದ್ದರಿಂದ ನಾನೇ ಕಂಪ್ಯೂಟರ್‌ನಲ್ಲಿ ಟೈಪ್ ಮಾಡುವಂತೆ ಆದರೆ ನನಗೆ ಅನುಕೂಲ ಹಾಗು ಆಫೀಸಿನಲ್ಲೂ ಕಂಪ್ಯೂಟರ್ ಕಲೆತರೆ ಆ ಕೆಲಸವನ್ನು ನಾನೇ ಮಾಡಬಹುದು ಆದ್ದರಿಂದಲೇ ನಾನು ಕಂಪ್ಯೂಟರ್ ಕಲಿಯಲು ಮನಸ್ಸು ಮಾಡಿದ್ದು ಎಂದು ಆತ ಕಂಪ್ಯೂಟರ್ ಕಲಿಯುವ ಇನ್ನೊಂದು ನಿಜವಾದ ಕಾರಣವನ್ನು ಹೇಳಿದ. ನಾನು ಬಿಡುವಾಗಿದ್ದ ಸಮಯದಲ್ಲಿ, ಸಾಮಾನ್ಯವಾಗಿ ವಿದ್ಯುತ್ ಏಟುಕೊಟ್ಟಾಗ ನನಗೆ ಬಿಡುವಾಗುತ್ತಿದ್ದುದು, ಆತನ ಕವನ, ಕಥೆ ಮುಂತಾದ ಲೇಖನಗಳನ್ನು ನನಗೆ ತೋರಿಸುತ್ತಿದ್ದ ಅವುಗಳ ಬಗ್ಗೆ ಚರ್ಚಿಸುತ್ತಾ ಸಹ ಇದ್ದ.

ಸುಮಾರು ಒಂದುವರೆ ಅಥವಾ ಎರಡು ತಿಂಗಳು ಆತನ ಕಲಿಕೆ ಚೆನ್ನಾಗೇ ನಡೆಯುತ್ತಿತ್ತು. ಅದಾದ ಮೇಲೆ ಸಮಸ್ಯೆ ತಲೆದೂರಿದ್ದು. ಒಂದು ದಿನ ಆತ ಏನೂ ಮಾತನಾಡದೇ ಮೇಡಮ್ ನಿನ್ನೆ ಹೇಳಿಕೊಟ್ಟಿರುವುದು ಸರಿಯಾಗಿ ಅರ್ಥವಾಗಿಲ್ಲ ಈ ದಿನವೂ ಅದನ್ನೆ ಅಭ್ಯಾಸ ಮಾಡುತ್ತೇನೆ ಎಂದ ಹಾಗೇ ಆಗಲಿ ಏನಾದರೂ ಅರ್ಥವಾಗದೇ ಇದ್ದರೆ ಕೇಳು ಎಂದೇಳಿದೆ, ಆದರೆ ಆತ ಯಾವುದೇ ಪ್ರಶ್ನೆಯನ್ನು ಕೇಳದೆ ಮೌನವಾಗಿ ತನ್ನಷ್ಟಕ್ಕೆ ತಾನೇ ಅಭ್ಯಾಸ ಮಾಡುತ್ತಿದ್ದ, ನಾನು ಎಷ್ಟು ಬಾರಿ ಕೇಳಿದರೂ ಯಾವುದೇ ಸಮಸ್ಯೆ ಇಲ್ಲ ನಾನೇ ಅಭ್ಯಾಸ ಮಾಡುತ್ತೇನೆ ಎಂದ. ಮಾರನೇ ದಿನವೂ ಇದೇ ರೀತಿ ಆಯಿತು. ಮೂರನೆ ದಿನವೂ ಇದೇ ರೀತಿ ಅಭ್ಯಾಸ ಮಾಡುವೆನೆಂದ ಆದರೆ ನಾನು ಅದಕ್ಕೆ ಅವಕಾಶ ಕೊಡದೆ ಹೊಸ ಪಠ್ಯವನ್ನು ಹೇಳಿಕೊಡಲು ಹೋದೆ. ಕಂಪ್ಯೂಟರ್ ಮುಂದೆ ಆತನಿಗೆ ಹೇಳಿಕೊಡುವಾಗ ಆತನ ಬಾಯಿಂದ ಕೆಟ್ಟ ವಾಸನೆ ಬಂತು ಆ ವಾಸನೆ ಕುಡಿತದ ವಾಸನೆಯಂತಿತ್ತು, ಆದರೂ ಆ ಬಗ್ಗೆ ಚಕಾರ ಎತ್ತದೇ ಸುಮ್ಮನೆ ಹೇಳಿಕೊಟ್ಟು ಬಂದೆ. ಒಂದೆರಡು ದಿನ ಆತ ಕ್ಲಾಸಿಗೆ ಬರಲಿಲ್ಲ, ಆ ಬ್ಯಾಚ್‌ನಲ್ಲಿದ್ದ ಇತರೆ ಹುಡುಗಿಯರನ್ನು ಈ ಬಗ್ಗೆ ಕೇಳಿದಾಗ ಕುಡಿತ ವಾಸನೆ ನಮಗೂ ಬರುತ್ತಿತ್ತು, ಆತ ಕುಡಿದಿದ್ದ ಎಂದರು. ಕುಡಿದಿದ್ದರೂ ಆತ ಸಭ್ಯತೆಯನ್ನು ದಾಟಿ ಕೆಟ್ಟದ್ದಾಗಿ ವರ್ತಿಸಿರಲಿಲ್ಲ. ಸನಿಹದಲ್ಲಿ ಇದ್ದಾಗ ಮಾತ್ರ ಅದರ ವಾಸನೆ ಬರುತ್ತಿತ್ತು ಎನ್ನುವುದನ್ನು ಬಿಟ್ಟರೆ ಆತನ ಕುಡಿತದಿಂದ ಬೇರಾವುದೇ ಅನಾಹುತ ಆಗಿರಲಿಲ್ಲ. ಮತ್ತೇ ಆತ ಕ್ಲಾಸಿಗೆ ಬಂದಾಗ ಇದೇ ರೀತಿಯ ವಾಸನೆ ಬಂದಿತು ದಿನನಿತ್ಯವೂ ಇದು ಮುಂದುವರೆಯಬಾರದೆಂದು ನೀನು ಕುಡಿದಿರುವೆಯಾ? ಎಂದು ಕೇಳಿದೆ, ನಾ ಕೇಳಿದ ಪ್ರಶ್ನೆಯಿಂದ ಆತ ತಬ್ಬಿಬ್ಬಾಗಿ ಇಲ್ಲ ಎಂದ. ಮೊದಲೇ ಕುಡಿಯುವವರನ್ನು ಕಂಡರಾಗದ ನಾನು ಈ ದಿನ ನೀನು ಕುಡಿದಿರುವುದು ನಿಜ, ನಾಳೆಯಿಂದ ಕುಡಿದು ಬರಬೇಡ ಎಂದೆ. ಮುಂದೆರೆಡು ದಿನ ಆತ ಕುಡಿದು ಬರಲಿಲ್ಲ ಪಾಠವೂ ಸರಾಗವಾಗಿ ನಡೆಯಿತು. ಆದರೆ ಮೂರನೇ ದಿನ ಯಥಾಪ್ರಕಾರ ಆತ ಕುಡಿದು ಬಂದಿದ್ದ, ಇಷ್ಟೇಳಿದರೂ ಮತ್ತೇ ಕುಡಿದು ಬಂದು ಕಂಪ್ಯೂಟರ್ ಮುಂದೆ ಆತ ಕೂತಾಗ ನನ್ನ ಕೋಪ ನೆತ್ತಿಗೇರಿತು, ಆದರೂ ಸಾವದಾನದಿಂದಲೇ ನನ್ನ ಕಂಪ್ಯೂಟರ್ ಸೆಂಟರ್‌ನಲ್ಲಿ ಕುಡುಕರಿಗೆ ಸ್ಥಳವಿಲ್ಲ, ನೀನು ಕುಡಿದುಕೊಂಡು ಕಲಿಯಲು ಬರುವುದಿದ್ದರೇ ನಾನು ಹೇಳಿಕೊಡಲು ಆಗುವುದಿಲ್ಲ, ಇಲ್ಲಿ ಅದರದ್ದೇ ಆದ ರೀತಿ ನೀತಿಗಳಿವೆ, ಅವುಗಳನ್ನು ಮುರಿಯಬೇಡ ಅಲೋಚನೆ ಮಾಡು ಎಂದು ಹೇಳಿ, ಈ ದಿನ ನಾನು ಹೇಳಿಕೊಡಲು ಆಗುವುದಿಲ್ಲ ಹಾಗೆ ನೀನು ಅಭ್ಯಾಸ ಮಾಡುವುದು ಬೇಡ ಎಂದು ಸ್ವಲ್ಪ ಕಟುವಾಗಿಯೇ ಹೇಳಿದೆ. ಆತ ಮರುಮಾತಿಲ್ಲದೇ ಹೊರಟು ಹೋದ.

ಅದರೆ ಮಾರನೇ ದಿನ ಆತ ಬರಲಿಲ್ಲ, ಆಗಾಗ್ಗೆ ಹೆಚ್ಚುವರಿ ಕೆಲಸವಿದ್ದಾಗ ಆತ ತಪ್ಪಿಸಿಕೊಳ್ಳುವುದು ಸಹಜವಾದ್ದರಿಂದ ಆ ಬಗ್ಗೆ ನಿರಾಸಕ್ತಿಯಿಂದಿದ್ದೆ. ಆದರೆ ಮತ್ತೇ ಒಂದು ವಾರವಾದರೂ ಆತ ಬರಲಿಲ್ಲ, ಆಗ ನನಗೆ ಪಿಚ್ಚೆನಿಸಿತು, ನಾನು ಕಟುವಾಗಿ ವರ್ತಿಸಬಾರದಿತ್ತು ಎಂದೆನಿಸಿತು ಆದರೂ ಹುಡುಗಿಯರೇ ಇದ್ದ ಉಳಿದ ಕಲಿಕೆದಾರರಿಗೆ ತೊಂದರೆಯಾಗಬಾರದೆಂದು ನಾ ಹೇಳಿದ್ದು ಸರಿ ಎಂದು ಸಮಾಧಾನ ಹೊಂದಿದೆ. ಆತನ ಬಗ್ಗೆ ತಿಳಿದಿದ್ದ ಬೇರೆ ಹುಡುಗಿಯರು ಆವನ ಬಗ್ಗೆ ಒಂದು ರೀತಿಯ ಗೌರವ ಹೊಂದಿದ್ದರು. ಆದರೆ ಆತನ ಈ ರೀತಿಯ ವರ್ತನೆಯಿಂದ ಅವರಿಗೆ ಸ್ವಲ್ಪ ಬೇಸರವಾಗಿತ್ತು ಎಂದೇಳಬಹುದಾದರೂ ಅವರು ಆತನ ಬಗ್ಗೆ ಯಾವುದೇ ಚಾಡಿಯನ್ನು ಹೇಳಿರಲಿಲ್ಲ, ಏಕೆಂದರೆ ಕುಡಿದರೂ ಆತನದು ಅಸಭ್ಯವರ್ತನೆಯಾಗಿರಲಿಲ್ಲ.

ಇನ್ನೂ ಎರಡು-ಮೂರು ದಿನ ಕಾದೆ ಆತ ಬರಲಿಲ್ಲ, ಬರೀ ೩ನೇ ಕ್ಲಾಸ್ ಓದಿದ್ದರೂ ಕಲಿಕೆಯಲ್ಲಿ ಆಸಕ್ತಿಯಿದ್ದ ಆತ ಈ ರೀತಿ ಕುಡಿದು ಬರಬಾರದಿತ್ತು ಎನಿಸಿದರೂ, ಈ ಬಗ್ಗೆ ನಾನು ಉದ್ದಟತನದಿಂದ ವರ್ತಿಸಿದೆನೋ ಎನಿಸಿತು. ಇಷ್ಟೇಳಿದರೂ ಆತ ಕುಡಿದುಕೊಂಡೆ ಬರುವುದಕ್ಕೆ ಬೇರೆ ಏನಾದರೂ ಕಾರಣವಿತ್ತೇನೋ ಎನಿಸಿತು. ಬಡತನದ ಬೇಗೆಯಲ್ಲಿ ಹೊಟ್ಟೆ ತುಂಬಲು ಮಿತಿ ಮೀರಿ ಮಾಡುತ್ತಿದ್ದ ಕೆಲಸಗಳಿಂದವುಂಟಾಗುವ ನೋವನ್ನು ಮರೆಯಲು ಆತ ಕುಡಿಯುತ್ತಿದ್ದ ಎನಿಸಿತು, ಇದು ನನ್ನ ಅನಿಸಿಕೆ ಮಾತ್ರ, ವಾಸ್ತವದ ಪರಿಚಯ ನನಗಾಗಲಿಲ್ಲ. ಆತನಿಗೇನಾದರೂ ತೊಂದರೆಯಿದ್ದು ಕುಡಿದು ಬರುತ್ತಿದ್ದರೇ ಕ್ಷಮೆ ಕೇಳಿ ಇರುವ ವಿಷಯವನ್ನು ಹೇಳಿಕೊಳ್ಳಬಹುದಿತ್ತು, ಅದನ್ನೂ ಆತ ಮಾಡಲಿಲ್ಲ, ಒಂದು ರೀತಿಯ ಉದಾಸೀನತೆಯನ್ನು ತೋರಿದ ಅವನ ವರ್ತನೆಯಿಂದ ನನಗೆ ಕಿರಿಕಿರಿಯಾಗತೊಡಗಿತು. ಬಡತನವಿದ್ದರೂ ಪೂರ್ತ ಕೋರ್ಸ್ ಫೀ ಕೊಟ್ಟಿದ್ದ, ಏಕೋ ಆತನ ಹೊಟ್ಟೆಗೆ ಹೊಡೆದೆನೇನೊ ಎನ್ನುವ ಅಪರಾಧಿ ಪ್ರಜ್ಞೆ ಕಾಡತೊಡಗಿತು. ಎಷ್ಟು ದಿನವಾದರೂ ಬಾರದೇ ಇದ್ದಾಗ ತಡೆಯದೇ ಒಂದೆರೆಡು ದಿನ ಬಿಟ್ಟು ನಾನೇ ಆತನಿಗೆ ಫೋನ್ ಮಾಡಿದೆ ಕೋರ್ಸ್ ಮುಗಿಸಲಿ ಅಥವಾ ಸ್ವಲ್ಪ ಹಣವನ್ನಾದರೂ ವಾಪಸ್ಸು ಮಾಡಬೇಕು ಎನ್ನುವ ದೃಷ್ಠಿಯಿಂದ ಆದರೆ, ಆತ ಮೊಬೈಲ್ ಕರೆಗೆ ಉತ್ತರಿಸಲಿಲ್ಲ, ಸುಮಾರು ದಿನ ಫೋನ್ ಮಾಡಿದೆ ಆದರೆ ಆ ಕಡೆಯಿಂದ ಯಾವುದೇ ಉತ್ತರ ಬರಲಿಲ್ಲ. ಮುಂದೆ ಕಲಿಯಲು ಬರಲಿಲ್ಲ. ಆದರೂ ಈ ಘಟನೆಯಿಂದ ನನಗೆ ಈಗಲೂ ಒಂದು ರೀತಿಯ ಅಪರಾಧಿ ಪ್ರಜ್ಞೆಯ ದ್ವಂದ ಇರುವುದು ನಿಜ. ಆತ ಮಾಡಿದ್ದು ತಪ್ಪಾದರೂ ಆತ ಇದ್ದ ಪರಿಸ್ಥಿತಿಯನ್ನು ನೆನದಾಗ ತಪ್ಪು ನನ್ನ ಕಡೆಯಿಂದಲೇ ಆಯಿತೇನೋ ಎನ್ನುವ ಸಂದಿಗ್ಧ. ಆತ ಬೇರೆಡೆಯಲ್ಲಿಯಾದರೂ ಕಂಪ್ಯೂಟರ್ ಕಲಿತನೇನೊ? ಎನ್ನುವುದನ್ನು ತಿಳಿಯಲಿಕ್ಕೂ ಸಹ ಆಗಲಿಲ್ಲ.

ಅಂತೂ ಕಲಿಸುವಿಕೆ ಮತ್ತು ಕಲಿಯುವಿಕೆ ಮಧ್ಯೆ ಪ್ರಾಕಾರವಾಗಿ ಕುಡಿತ ಬಂದು ಕಲಿಯುವಿಕೆ ಮತ್ತು ಕಲಿಸುವಿಕೆ ಎರಡು ಕ್ರಿಯೆಗಳು ತಟಸ್ಥವಾದವು. ಇದನ್ನು ನೆನೆದಾಗ ಈಗಲೂ ನನ್ನ ಮನಸ್ಸಿನ ಮೂಲೆಯಲ್ಲಿ ಒಂದು ರೀತಿಯ ನೀರವತೆ ಆವರಿಸುತ್ತದೆ.

-ಶೈಲಜ ಮಂಚೇನಹಳ್ಳಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x