ಇಂತಹದ್ದೊಂದು ತಿರುವು ನನ್ನ ಜೀವನದಲ್ಲಿ ಬರಬಹುದೆಂದು ನಾನು ಕನಸು ಮನಸಿನಲ್ಲೂ ಊಹಿಸಿರಲಿಲ್ಲ. ತೃಪ್ತಿದಾಯಕ ಅಖಂಡ ಮೂವತ್ತೈದು ವರ್ಷಗಳ ವೈವಾಹಿಕ ಜೀವನದಲ್ಲಿ ಆಕಸ್ಮಿಕವಾಗಿ ಅಲೆಯೊಂದು ಹುಟ್ಟಿ ಬಂದು ಸುಂದರವಾದ ನನ್ನ ಸಂಸಾರದಲ್ಲಿ ಹೀಗೆ ಹುಳಿ ಹಿಂಡಬಹುದು ಎಂದು ಭಾವಿಸಿರಲಿಲ್ಲ. ಬದುಕಿನ ಈ ಮುಸ್ಸಂಜೆಯಲ್ಲಿ ಹೀಗೆ ಅಪರಾಧಿಯಾಗಿ ಅವಳ ಮುಂದೆ ನಿಲ್ಲಬೇಕಾಗುತ್ತೆ ಎಂದು ನನಗೆ ಯಾವತ್ತಿಗೂ ಅನಿಸಿರಲಿಲ್ಲ. ನನಗಿಂತ ವಯಸ್ಸಿನಲ್ಲಿ ಕೇವಲ ಐದು ವರ್ಷ ಚಿಕ್ಕವಳು ಅವಳು. ಅವಳಿಗೆ ಐವತ್ತೈದು ನನಗೆ ಕೇವಲ ಅರವತ್ತು. ಈ ಅರವತ್ತನೇಯ ವಯಸ್ಸಿನ ಇಳಿ ಸಂಜೆಯಲ್ಲಿ ಅವಳ ಮುಂದೆ ತಲೆ ತಗ್ಗಿಸಬೇಕಾಗಿ ಬರಬಹುದು ಎಂದು ನಾನಂತೂ ಅಂದು ಕೊಂಡಿರಲಿಲ್ಲ.
ನಮ್ಮದು ಒಂದು ತರಹದಲ್ಲಿ ಆದರ್ಶ ದಾಂಪತ್ಯ ಒಂದು ಗಂಡು ಒಂದು ಹೆಣ್ಣು ಇರುವ ತುಂಬಿದ ಚೆಂದದ ಸಂಸಾರ. ಮಗಳು ಋತು ಚೆನ್ನಾಗಿ ಓದಿ, ಮದುವೆನೂ ಆಗಿ, ಖಾಸಗಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತ ತನ್ನ ಪತಿಯೊಂದಿಗೆ ಕುಟುಂಬ ನಿರ್ವಹಣೆಗೆ ಹೆಗಲು ಕೊಡುತ್ತ, ತೃಪ್ತಿಕರ ಜೀವನ ಸಾಗಿಸುತ್ತ ವಿದೇಶದಲ್ಲಿ ಸೆಟ್ಟಲ್ ಆಗಿದ್ದಾಳೆ. ಮಗ ವರುಣ ಕೂಡ ವಿದೇಶಿ ಕಂಪನಿಯಲ್ಲಿ ಇಂಜಿನಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ನಾವಿಬ್ಬರೂ ಅವರೊಂದಿಗೆ ಬಂದು ಇರಬೇಕೆಂದು ಬಯಸಿದರೂ ನಮಗೆ ನಮ್ಮ ನೆಲ ನಮ್ಮ ಜನ ನಮ್ಮ ಭಾಷೆಯೇ ಬೇಕೆನಿಸಿ ಅವರೊಟ್ಟಿಗೆ ಬದುಕುವ ನಿರ್ಧಾರದಿಂದ ದೂರ ಸರಿದಿದ್ದೆವು. ಮತ್ತು ಇಲ್ಲೇ ಬದುಕುವ ನಿರ್ಧಾರ ತೆಗೆದುಕೊಂಡಿದ್ದೆವು. ಇದು ಕೇವಲ ನನ್ನ ನಿರ್ಧಾರ ಮಾತ್ರವಾಗಿರದೆ ನಮ್ಮಿಬ್ಬರ ನಿರ್ಧಾರವೂ ಆಗಿತ್ತು.
ನಾನು ಸರ್ಕಾರಿ ಅಧಿಕಾರಿಯಾಗಿದ್ದವನು. ಕಳೆದ ವರ್ಷವಷ್ಟೆ ಸೇವಾ ನಿವೃತ್ತಿ ಹೊಂದಿದ್ದೇನೆ. ಇವಳು ಗೃಹಣಿಯಾಗಿ ನನ್ನ ಮನೆ ಮನ ತುಂಬಿ ನಮ್ಮ ಕುಟುಂಬದ ಅಭಿವೃದ್ಧಿಗೆ ಕಾರಣವಾದವಳು, ಸಾಥ್ ನೀಡಿದವಳು. ಸರ್ಕಾರಿ ನೌಕರಿ ಎಂದರೆ ನಿಮಗೆಲ್ಲ ಗೊತ್ತೇ ಇದೆ. ಜೀವನವೆಲ್ಲ ಚಾಕರಿಯಲ್ಲೇ ಕಳೆದು ಹೋಗುತ್ತದೆ. ಒಮ್ಮೊಮ್ಮೆ ಕೈಯಲ್ಲಿ ಹಣವೂ ಇರುವುದಿಲ್ಲ. ಹಣವಿದ್ದಾಗ ರಜೆ ಸಿಗುವುದಿಲ್ಲ. ಎಲ್ಲೂ ಹೋಗುವ ಹಾಗಿಲ್ಲ ಬರುವ ಹಾಗಿಲ್ಲ. ಇಡೀ ಜೀವನ ಕುಟುಂಬದ ಜಂಜಾಟಗಳಲ್ಲೆ ಕಳೆದು ಹೋಗಿರುತ್ತದೆ. ಕೊನೆಗೆ ಎಲ್ಲ ಮಕ್ಕಳನ್ನು ಓದಿಸಿ ನೌಕರಿ ಹಿಡಿಸಿ ಮದುವೆ ಮಾಡಿಸಿ ಕೊಡುವಷ್ಟರಲ್ಲಿ ಮಜಾ ಮಾಡಬೇಕಾದ ವಯಸ್ಸೇ ಮುಗಿದು ಹೋಗಿ ನಿವೃತ್ತಿ ನಂತರ ಬಂದ ಸ್ವಲ್ಪ ಹಣದಲ್ಲಿ ಯಾವುದಾದರೂ ತೀರ್ಥಯಾತ್ರೆಗೋ ಮತ್ತೆಲ್ಲಿಗೋ ಹೋಗಿ ಬಂದು ಭಗವಂತನ ಸ್ಮರಣೆ ಮಾಡುತ್ತ ಉಳಿದ ಆಯಸ್ಸನ್ನು ಕಳೆದುಬಿಡುವುದು.. ಆದರೆ ಆ ಭಾಗ್ಯ ಕೂಡ ನನ್ನ ಜೀವನದಲ್ಲಿ ಇಲ್ಲವಾಯಿತೇ?. ಈ ಮುದಿ ವಯಸ್ಸಿನಲ್ಲಿ ವಿವಾಹ ವಿಚ್ಛೇದನೆಯೇ?. ಇದೆಂಥ ವಿಪರ್ಯಾಸ್? ಹೌದು ಇದು ನಿಜ. ನನ್ನ ಪತ್ನಿ ಪ್ರಿಯಾ ತನಗೆ ನನ್ನಿಂದ ಬಿಡುಗಡೆ ಬೇಕು ಮತ್ತು ಜೀವನ ನಿರ್ವಹಣೆಗೆ ಅರ್ಧ ಆಸ್ತಿ, ದುಡ್ಡು ಬೇಕೆಂದು ವಕೀಲ ನೋಟಿಸ್ ಕೊಡಿಸಿದ್ದಾಳೆ. ಅವಳ ನಿರ್ಧಾರದಿಂದ ನನಗೆ ನಗಬೇಕೋ ಅಳಬೇಕೋ ಒಂದೂ ಅರ್ಥವಾಗುತ್ತಿಲ್ಲ. ರಾಮ ರಾಮ ಎಂದು ಕಾಲ ಕಳೆಯಬೇಕಾದ ಈ ವಿರಾಮದ ದಿನಗಳಲ್ಲಿ ಇಂಥ ಒಂದು ಸಮಸ್ಯೆ ನನ್ನ ಜೀವನದಲ್ಲಿ ಬರಬಹುದೆಂದು ಯಾರಾದರೂ ಊಹಿಸಿರಲು ಸಾಧ್ಯವೇ?.
ನನ್ನ ಸುಂದರವಾದ ಸಂಸಾರದಲ್ಲಿ ಸುನಾಮಿಯೇ ಎದ್ದಿದೆ. ಅದನ್ನು ತಡೆಯುವ ಎಲ್ಲ ಪ್ರಯತ್ನಗಳು ವಿಫಲವಾಗಿವೆ. ವಿದೇಶದಲ್ಲಿರುವ ಮಕ್ಕಳು ಮೊಮ್ಮಕ್ಕಳು ಕೂಡ ಮೊಬೈಲ್ ಮುಖಾಂತರ ಅವಳಿಗೆ ಬುದ್ದಿ ಹೇಳಿಯಾಗಿದೆ. ಆದರೆ ಅವಳು ಮಾತ್ರ ತನ್ನ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹಠ ಮಾಡಿ ಕುಳಿತು ಬಿಟ್ಟಿದ್ದಾಳೆ. ಹಲವು ದಿನಗಳಿಂದ ಸರಿಯಾಗಿ ಊಟ ನಿದ್ರೆನೂ ಮಾಡದೆ ದಿನೇದಿನೇ ಅನಾರೋಗ್ಯದತ್ತ ವಾಲುತ್ತಿದ್ದಾಳೆ. ಅವಳ ಹಠದ ಮುಂದೆ ನಾನು ಕ್ಷಣ ಕ್ಷಣಕ್ಕೂ ಸೋಲುತ್ತಿದ್ದೇನೆ. ಕ್ಷೀಣಿಸುತ್ತಿದ್ದೇನೆ. ಎಂದೋ ಗತಿಸಿ ಹೋದ ಒಂದು ಘಟನೆ ಜೀವನದಲ್ಲಿ ಇಂಥ ದೊಡ್ಡ ಬಿರುಗಾಳಿ ಬೀಸಲು ಕಾರಣವಾಗುತ್ತೆ ಅಂತ ಕಲ್ಪನೆಯೇ ಮಾಡಿರಲಿಲ್ಲ. ಈ ಒಂದೇ ಒಂದು ಘಟನೆ ಬದುಕಿನ ಸಿಹಿ ಕಹಿ ಸುಖ ದುಃಖಗಳನ್ನು ಹಂಚಿಕೊಂಡು ಅನ್ಯೋನ್ಯವಾಗಿ ನಡೆಸಿದ ಆದರ್ಶ ಬಾಳಿನ ಗಟ್ಟಿಯಾದ ಸಂಬಂಧದಲ್ಲಿ ಧೃಢವಾದ ದಾಂಪತ್ಯದಲ್ಲಿ ಇಷ್ಟು ಸುಲಭವಾಗಿ ಸತಿಪತಿಗಳಿಬ್ಬರ ಜೀವನದಲ್ಲಿ ದಿಢೀರನೆ ಗೋಡೆಯಾಗಿ ಎದ್ದು ನಿಂತು ಆತ್ಮಕ್ಷೋಭೆಗೆ ಕಾರಣವಾಗಬಹುದೆಂದು ಯಾರು ತಾನೇ ಭಾವಿಸಲು ಸಾಧ್ಯ.? ಇದೆಂಥ ವಿಚಿತ್ರ!.
ಅಖಂಡ ಮೂವ್ವತ್ತೈದು ವರ್ಷಗಳ ಪ್ರೇಮದ ಪ್ರಾಮಾಣಿಕತೆಯ ಈ ಸುದೀರ್ಘ ಪಯಣದಲಿ ಇಂತಹದೊಂದು ಅನಿರೀಕ್ಷಿತ ತಿರುವು.! ಸಲಹೆ ಕೇಳಲೆಂದು ಸ್ನೇಹಿತರ ಬಳಿ ಹೋದರೆ ನನ್ನ ಕತೆ ಕೇಳಿ ದಿಗ್ಭ್ರಾಂತರಾದರು. ಮಕ್ಕಳು ಮುದುಕ/ ಮುದುಕಿಗೆ ಬುದ್ದಿ ಇಲ್ಲ ಸುಮ್ನೆ ಆಟ ಆಡುತ್ತಿದ್ದಾರೆ ಎಂದರು. ನಾನು ಮಾತ್ರ ಅವಳಿಗೆ ಸಮಜಾಯಿಷಿ ನೀಡುತ್ತ ನೀಡುತ್ತ ಸೋತು ಹೋದೆ. ತತ್ತರಿಸಿ ಹೋದೆ. ಅವಳ ಸ್ಥಿತಿ ನನ್ನಿಂದ ನೋಡಲು ಆಗುತ್ತಿಲ್ಲ.ಅವಳು ಅನ್ನ ನೀರು ಬಿಟ್ಟು ತನ್ನ ತಾ ಶಿಕ್ಷಿಸುವ ಮೂಲಕ ನನಗೆ ನರಕ ಯಾತನೆ ಕೊಡುತ್ತಿದ್ದಾಳೆ. ಅವಳಿಗೆ ಸರಿದಾರಿಗೆ ತರುವ ಯಾವುದೇ ದಾರಿ ನನಗೆ ಕಾಣುತ್ತಿಲ್ಲ. ಏನು ಮಾಡಬೇಕು ತಿಳಿಯುತ್ತಿಲ್ಲ. ಇದೊಂದು ಬಗೆ ಹರಿಯದ ಪ್ರಶ್ನೆ. ಅಷ್ಟಕ್ಕೂ ಅವಳ ಈ ನಿರ್ಧಾರಕ್ಕೆ ಕಾರಣವಾದರೂ ಏನು?.. ಎಂದು ಹೇಳಬೇಕಾದರೆ ನನ್ನ ಜೀವನದಲ್ಲಿ ಗತಿಸಿದ ಕತೆಯನ್ನು ತಮ್ಮ ಮುಂದೆ ಇಡಲೇಬೇಕು.
ನನಗೆ ಕೆಲಸ ಸಿಕ್ಕು ವರ್ಷವೇ ನನ್ನ ಮದುವೆ ಮಾಡುವ ಸಲುವಾಗಿ ಹೆಣ್ಣು ನೋಡಲು ಆರಂಭಿಸಿದರು. ಹಿರಿಯರು ಗೊತ್ತು ಪಡಿಸಿದ ಹೆಣ್ಣೇ ವರಿಸಬೇಕಾಗಿತ್ತು. ಬೇರೆ ಆಯ್ಕೆಗಳಲಿರಲ್ಲಿ. ಆದರೂ ಶಾಸ್ತ್ರಕ್ಕೆ ಎಂದು ಹೆಣ್ಣು ನೋಡಲು ಹೋಗಲೇಬೇಕಾಗಿತ್ತು. ಕೊನೆಗೊಮ್ಮೆ ಬೆಂಗಳೂರಿನಲ್ಲಿ ವಾಸವಾಗಿರುವ ನಮ್ಮ ದೂರದ ಸಂಬಂಧಿಯೊಬ್ಬರ ಮಗಳು ಪ್ರಿಯಾಳನ್ನು ತೋರಿಸಿ ಇವಳೇ ನಮ್ಮ ಮನೆ ಸೊಸೆ ಎಂದು ಸಾರಿ ಬಿಟ್ಟರು. ಮತ್ತು ನಿಶ್ಚಿತಾರ್ಥದ ದಿನಾಂಕವೊಂದನ್ನು ನಿಗದಿ ಮಾಡಿಯೇ ಬಿಟ್ಟರು. ಹುಡುಗಿ ತುಂಬಾ ಸೌಂದರ್ಯವತಿ ಆಗಿರುವದರಿಂದ ನಾನೂ ಕೂಡ ಅಲ್ಲಗಳೆಯುವಂತೆ ಇರಲಿಲ್ಲ. ಕೊನೆಗೂ ನಿಶ್ಚಿತಾರ್ಥದ ದಿನ ಬಂದೇ ಬಿಟ್ಟಿತ್ತು. ನಿಶ್ಚಿತಾರ್ಥದ ಕಾರ್ಯಕ್ರಮದಲ್ಲಿ ಹಿರಿಕಿರಿಯರು, ಸ್ನೇಹಿತರು, ಸಂಬಂಧಿಗಳು ಎಲ್ಲ ಭಾಗವಹಿಸಿದ್ದರು.
ಅದರಂತೆ ಪ್ರಿಯಾಳ ಗೆಳತಿಯರು ಕೂಡ ಬಂದಿದ್ದರು. ನಾನು ನನ್ನ ಕಡೆಯವರ ಪರಿಚಯ ಮಾಡಿ ಕೊಡುತ್ತಿರುವಂತೆ ಪ್ರಿಯಾ ಕೂಡ ತನ್ನ ಬಂಧು ಬಳಗವನ್ನು ಪರಿಚಯಿಸುತ್ತಿದ್ದಳು. ಹಾಗೇ ಗೆಳತಿಯರನ್ನೂ ಕೂಡ. ಎಷ್ಟೋ ಹುಡುಗಿಯರನ್ನು ಅವಳು ಪರಿಚಯಿಸಿದರೂ ಅವರಲ್ಲಿ ಯಾರೊಬ್ಬರೂ ನೆನಪಿನಲ್ಲಿ ಉಳಿಯಲಿಲ್ಲ ಕೊನೆಗೆ ಒಂದು ಹುಡುಗಿಯನ್ನು ತೋರಿಸಿ ಇವಳು
“ನನ್ನ ಪ್ರಾಣ ಸ್ನೇಹಿತೆ ಕ್ಲಾಸ್ ಮೇಟ್ ನಂದಿನಿ” ಎಂದು ಪರಿಚಯಿಸಿದಳು. ನೋಡಲು ಸ್ವಲ್ಪ ಕಪ್ಪಿದ್ದರೂ ತುಂಬಾ ಆಕರ್ಷಕವಾಗಿದ್ದಳು. ಅವಳ ರೂಪ ಯೌವ್ವನ ಎಲ್ಲ ನನ್ನ ಮನಸ್ಸನ್ನು ಸೂಜಿಗಲ್ಲಿನಂತೆ ಸೆಳೆಯಿತು. ಅವಳು ಒಂದು ಕಪ್ಪು ಶಿಲೆಯಲ್ಲಿ ಶಿಲ್ಪಿಯೊಬ್ಬ ಕಡೆದ ಶಿಲಾಬಾಲಿಕೆಯಾಗಿ ನನ್ನ ನೆನಪಿನಲ್ಲಿ, ನನ್ನ ಮನಸಿನಲ್ಲಿ ನೆಲೆ ನಿಂತಳು. ಈ ನಡುವೆ ನಿಶ್ಚಿತಾರ್ಥವೂ ಮುಗಿದು ಹೋಗಿತ್ತು. ಆದರೆ ನಂದಿನಿ ಮಾತ್ರ ನನ್ನ ಮನಸ್ಸಿನಿಂದ ಮರೆಯಾಗಲೇ ಇಲ್ಲ. ಅವಳ ಚೆಲವಿನ ಆಕರ್ಷಣೆ ನನ್ನ ಕಾಡುತ್ತಲೇ ಇತ್ತು. ಅದರ ನಂತರ ನಾನು ಮತ್ತು ಪ್ರಿಯಾ ಭೇಟಿಯಾಗುವುದು, ಮಾತಾಡುವುದು ಮಾಡುತ್ತಿದ್ದೆವು.
ಆದರೆ ಪ್ರತಿ ಭೇಟಿಯ ಮಾತುಕತೆಯ ನಡುವೆ ನಂದಿನಿಯ ಪ್ರಸ್ತಾಪ ಬಂದು ಹೋಗುತಿತ್ತು. ಮಾತು ಮಾತಿನಲ್ಲಿ ಅವಳ ಮನೆಯ ವಿಳಾಸ ಸ್ವಲ್ಪ ಮಟ್ಟಿಗೆ ಕೇಳಿಕೊಂಡಿದ್ದೆ. ಕೊನೆಗೂ ನನಗೆ ನಂದಿನಿಯನ್ನು ಮರೆಯಲು ಆಗಲೇ ಇಲ್ಲ. ಅವಳನ್ನು ಮತ್ತೆ ಮತ್ತೆ ನೋಡಬೇಕು ಮಾತಾಡಿಸಬೇಕು ಎನ್ನುವ ಹಂಬಲ ಸಮುದ್ರದ ಅಲೆಗಳಂತೆ ನನ್ನ ಹೃದಯದಲ್ಲಿ ಪುಟಿದೇಳುತ್ತಲೇ ಇತ್ತು. ಅವಳನ್ನು ಕಾಣುವ ಮಾತಾಡಿಸುವ ಬಯಕೆ ದಿನದಿನಕ್ಕೂ ಹೆಚ್ಚುತ್ತಲೇ ಸಾಗಿತ್ತು. ಇನ್ನೂ ನನಗೆ ಅವಳನ್ನು ಕಾಣದೆ ಇರುವುದಕ್ಕೆ ಸಾಧ್ಯವೇ ಇಲ್ಲ ಅನ್ನಿಸಲು ಶುರುವಾಯ್ತು. ಬಹುಶಃ ನನಗೆ ಅವಳ ಮೇಲೆ ಅನುರಾಗ ಮೂಡಿತೇ? ಕಾಣಬೇಕು ಮಾತಾಡಬೇಕು ಎನ್ನುವ ಹಂಬಲದ ರೂಪ ಪ್ರೇಮವೇ? ಇದಕ್ಕೆ ಉತ್ತರ ಹೌದಾದರೆ ಖಂಡಿತ ನಾನು ನಂದಿನಿಯನ್ನು ಪ್ರೀತಿಸುತ್ತಿದ್ದೇನೆ ಎಂದು ಅರ್ಥ. ಹೀಗಾಗಿ ಕೊನೆಗೊಂದು ದಿನ ನಾನು ಅವಳಿಗೆ ಪತ್ರ ಬರೆದು ಭೇಟಿಯಾಗು ಇಚ್ಛೆ ವ್ಯಕ್ತ ಪಡಿಸುವ ತೀರ್ಮಾನಕ್ಕೆ ಬಂದಿದ್ದೆ. ಭಂಡ ಧೈರ್ಯ ಮಾಡಿ ಅವಳ ವಿಳಾಸಕ್ಕೆ ಪತ್ರ ಬರೆದೇ ಬಿಟ್ಟೆ. ಪತ್ರ ನನ್ನ ಊರಿಂದಲೇ ಪೋಸ್ಟ್ ಮಾಡಿದೆ. ಆದರೆ ಅದು ತಲುಪಿತೋ ಇಲ್ಲವೋ ಗೊತ್ತಿಲ್ಲ. ಇತ್ತ ನಮ್ಮ ಮದುವೆ ದಿನ ಸಮೀಪಿಸುತ್ತಿತ್ತು. ಅತ್ತಲಿಂದ ಯಾವುದೇ ಉತ್ತರ ಬರಲೇ ಇಲ್ಲ. ನಾನು ಕಾಯುತ್ತಲೇ ಮದುವೆ ಕ್ಷಣಗಣನೆಗೆ ಹತ್ತಿದೆ. ಕೊನೆಗೆ ಮದುವೆಯಲ್ಲಾದರೂ ಅವಳನ್ನು ನೋಡಬಹುದು. ಮಾತಾಡಬಹು. ನನ್ನ ಮನದಾಸೆ ಅವಳ ಮುಂದೆ ನಿವೇದಿಸಬಹುದು. ಅವಳ ಮನದಿಚ್ಛೆಯನ್ನು ಅರಿತುಕೊಳ್ಳಬಹುದು ಎಂಬಿತ್ಯಾದಿಯಾಗಿ ಯೋಚಿಸತೊಡಗಿದೆ. ಕೊನೆಗೂ ನಮ್ಮ ಮದುವೆ ದಿನ ಬಂದೇ ಬಿಟ್ಟಿತ್ತು.
ಮದುವೆ ದಿನ ಮದುವೆ ಹಾಲಿನಲ್ಲಿ ನನ್ನ ಕಂಗಳು ನಂದಿನಿಯನ್ನು ನೋಡಲು ಕಾತರಿಸಿದ್ದವು.ಈ ಮದುವೆ ಕಾರ್ಯಕ್ರಮ ಕೇವಲ ಒಂದು ನೆಪವಾಗಿತ್ತೇನೋ. ಮದುವೆಯೆಂಬುದು ಅವಳ ಭೇಟಿಗೆ ಒದಗಿ ಬಂದ ಒಂದು ಸದಾವಕಾಶದ ವೇದಿಕೆ ಎಂದು ಭಾವಿಸಿದ್ದೆ. ನನ್ನ ಕಣ್ಣುಗಳು ಅವಳನ್ನು ಹುಡುಕುತ್ತಲೇ ಇದ್ದವು. ಅವಳು ಮಾತ್ರ ಕಾಣಿಸಲೇ ಇಲ್ಲ. ಮದುವೆ ಮುಹೂರ್ತ ತುಂಬಾ ಹತ್ತಿರವಾಗುತ್ತ ಹೋಯಿತು. ನನ್ನಲ್ಲಿ ಚಡಪಡಿಕೆ ಇನ್ನೂ ಜಾಸ್ತಿಯಾಗಲು ಆರಂಭಿಸಿತು. ಇಷ್ಟೋತ್ತಾದರೂ ಯಾಕವಳು ಬರಲಿಲ್ಲ? ಎನ್ನುವ ಪ್ರಶ್ನೆ ಕಾಡಲು ಆರಂಭವಾಯ್ತು. ಮುಹೂರ್ತದ ಒಳಗೆ ಬರಲಿಲ್ಲವೆಂದರೆ ನನ್ನ ಮದುವೆ ಆಗಿ ಬಿಡುವ ಆತಂಕ ಕಾಡಲಾರಂಭಿಸಿತು.
ಅವಳು ಬಂದಿದ್ದರೆ ಅವಳ ಅಭಿಪ್ರಾಯ ತಿಳಿದುಕೊಂಡು ಈ ಮದುವೆ ನಿಲ್ಲಿಸಬಹುದಾಗಿತ್ತು. ಅಥವಾ ನನ್ನ ಪತ್ರ ಓದಿ ಅವಳೇ ಕೆಂಡಾ ಮಂಡಲವಾಗಿ ಪ್ರೀಯಾಗಿ ನಿನ್ನ ಗಂಡ ಅತಹವನು ಇಂತಹವನು ಎಂದು ಚೀರಾಡಿ ಕೂಗಾಡಿದ ನಂತರ ರಂಪಾಗಿ ಈ ಮದುವೆ ನಿಂತು ಬಿಡಬಹುದಾಗಿತ್ತು. ಮುಂದೆ ಹೇಗಾದರೂ ಮಾಡಿ ನಂದಿನಿಗೆ ತನ್ನಲ್ಲಿ ಮೂಡಿದ ನಿಜವಾದ ಪ್ರೀತಿಯನ್ನು ಅರ್ಥ ಮಾಡಿಸಿ ಅವಳಲ್ಲಿ ಪ್ರೇಮ ನಿವೇದಿಸಿ, ಅವಳ ಪ್ರೇಮದ ಭಿಕ್ಷೆ ಬೇಡಿ.. ಅವಳ ಹೃದಯ ಗೆದ್ದು ಅವಳಿಗೆ ಮದುವೆಗೆ ಒಪ್ಪಿಸಬಹುದಾಗಿತ್ತು ಎಂದು ಏನೇನೋ ಯೋಚಿಸುತ್ತಿರುವಾಗಲೇ ಪ್ರಿಯಾ ಹಸೆಮಣೆಗೆ ಬಂದಿದ್ದಳು. ನಾನು ಮೊದಲೇ ಅಲ್ಲಿದ್ದರೂ ಮನಸ್ಸು ಮಾತ್ರ ಅಲ್ಲಿರಲಿಲ್ಲ. ಅಂತಹ ಗದ್ದಲದ ವಾತಾವರಣದಲ್ಲೂ ನಾನು ನಂದಿನಿಯನ್ನೆ ಹುಡುಕುತ್ತಿದ್ದೆ. ಮುಹೂರ್ತದ ಸಮಯ ಬಂದೇ ಬಿಟ್ಟಿತ್ತು. ಕೊನೆಗೂ ನಂದಿನಿ ಕಾಣಲೇ ಇಲ್ಲ. ಮದುವೆ ಮಂಟಪದಲ್ಲಿ ಪಕ್ಕದಲ್ಲೆ ಕುಳಿತಿದ್ದ ಪ್ರಿಯಾಳನ್ನು ಕೊನೆಯದಾಗಿ ಕೇಳೇ ಬಿಡೋಣ ಎಂದುಕೊಂಡು –
” ಯಾಕೋ ನಂದಿನಿ ಕಾಣ್ತಾಯಿಲ್ಲ. ಬೆಸ್ಟ್ ಫ್ರೆಂಡ್ ಅಂತಿಯಾ ಇಂಥ ಸಮಯದಲ್ಲಿ ಬರದಿದ್ದರೆ ಹೇಗೆ?” ಎಂದು ಪ್ರಶ್ನಿಸಿದೆ.
“ಇಲ್ಲ ಮೊನ್ನೆ ಮೊನ್ನೆ ಅವಳ ಮದುವೆ ಆಗಿ ಅವಳು ಗಂಡನ ಜೊತೆ ಅಮೇರಿಕಾಕ್ಕೆ ಹಾರಿದಳು” ಎಂದು ಪ್ರಿಯಾ ಹೇಳಿದಾಗ ನನಗೆ ತಲೆ ಸುತ್ತು ಬಂದಂತಾಗಿ ಇಡೀ ಮದುವೆ ಮಂಟಪ ಗಿರ್ ಗಿರ್ ನೇ ಸುತ್ತು ಹೊಡೆಯುತ್ತಿರುವ ಅನುಭವ. ಪ್ರಿಯಾ ಮುಂದೆ ಹೇಳುತ್ತಿರುವುದು ಅಸ್ಪಷ್ಟವಾಗಿ ಪ್ರತಿಧ್ವನಿಸುತ್ತಿತ್ತು.
ಅವರ ಮನೆಯವರಿಗೆ ಹುಡುಗ ಇಷ್ಟವಾಗಿ ಅವನು ರಜೆಯಿಲ್ಲದೆ ಮತ್ತೆ ಅಮೇರಿಕಾ ಮರಳ ಬೇಕಾಗಿದ್ದರಿಂದ ಅವಸರದಲ್ಲಿ ಮದುವೆ ಮಾಡಿ ಮುಗಿಸಿ ಗಂಡ ಹೆಂಡ್ತಿನ ಜೊತೆ ಮಾಡಿ ಕಳಿಸಿ ಬಿಟ್ರು. ನಮ್ಮ ನಂದಿನಿ ಎಂಥಾ ಲಕ್ಕಿಯಲ್ವಾ? ಹನಿಮೂನ್ ಜೀವನ ಎಲ್ಲ ಅಮೇರಿಕಾದಲ್ಲಿ ಎಂದು ಹೇಳುತ್ತಿರುವಾಗಲೇ ಮುಹೂರ್ತ ಬಂದಿದ್ದರಿಂದ ವಧುವಿನ ಕೊರಳಿಗೆ ತಾಳಿ ಕಟ್ಟಿ ಎನ್ನುವ ಆದೇಶವಾಣಿ ಕೇಳಿ ನನ್ನ ಕೈಗಳು ಯಾಂತ್ರಿಕವಾಗಿ ತಾಳಿ ತೆಗೆದುಕೊಂಡು ಅನಿವಾರ್ಯವಾಗಿ ಅವಳ ಕೊರಳಿಗೆ ಹಾಕಿ ಮೂರು ಗಂಟು ಬಿಗಿದು ಬಿಟ್ಟಿದ್ದವು.
ಮದುವೆ ನಂತರ ಕೆಲಸದ ಕಾರಣ ನಗರದಲ್ಲಿ ಸಂಸಾರ ಹೂಡಬೇಕಾಯಿತು. ಮನೆಗೆ ನಾನೊಬ್ಬನೇ ಮಗನಾಗಿದ್ದರಿಂದ ಊರಲ್ಲಿ ತಂದೆ ತಾಯಿ ಇಬ್ಬರೇ ಇದ್ದು ಇದ್ದ ಅಲ್ಪ ಸ್ವಲ್ಪ ತೋಟ ನೋಡಿಕೊಂಡು ಆಳು ಕಾಳು ಹಚ್ಚಿ ಅಲ್ಪ ಸ್ವಲ್ಪ ಫಸಲು ತಗೆಯುತ್ತ ಜೀವನ ನಿರ್ವಹಣೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ನಾನು ನನ್ನ ನೌಕರಿ ನಿಮಿತ್ತವಾಗಿ ನಗರದಲ್ಲೇ ಉಳಿಯಬೇಕಾಯಿತು. ನಾನು ಮತ್ತು ಪ್ರಿಯಾ ಅನ್ಯೋನ್ಯತೆಯಿಂದ ಬದಕುತ್ತ ಪರಸ್ಪರ ಸುಖ ದುಃಖಗಳನ್ನು ಹಂಚಿಕೊಳ್ಳುತ್ತ ನಾಲ್ಕು ಜನ ಹೌದೆನ್ನುವಂತೆ ಬದುಕುತ್ತಿದ್ದೆವು. ಈ ನಡುವೆ ಮಕ್ಕಳು ಹುಟ್ಟಿದರು. ಅವರ ಪಾಲನೆ ಪೋಷಣೆ. ಶಿಕ್ಷಣ, ಕೆಲಸ, ಮದುವೆ, ಮಕ್ಕಳು ಅಂತಾ ಜವಾಬ್ಧಾರಿಗಳು ಹೆಚ್ಚುತ್ತಾ ನಡೆದವು. ಹಾಗೆ ನಗರ ಜೀವನಕ್ಕೆ ಒಗ್ಗಿಕೊಂಡು ಬಿಟ್ಟೆವು. ಈ ನಡುವೆ ಅಮ್ಮ ಹೃದಯಾಘಾತದಿಂದ ತೀರಿ ಹೋದಳು. ಮುಂದೆ ತಂದೆಯವರನ್ನು ಇಲ್ಲೆ ಬಂದು ಇರುವಂತೆ ಆಹ್ವಾನಿಸಿದರೂ ನಾನು ಸತ್ತರೂ ನನ್ನ ಊರಿನಲ್ಲೇ ಎಂದು ಖಡಾಖಂಡಿತವಾಗಿ ಹೇಳಿದರು. ಕೊನೆಗೆ ತನ್ನ ಜೀವದುಸಿರಿನಂತಿದ್ದ ಅಮ್ಮನ ವಿಯೋಗದಿಂದ ಅವಳ ನೆನಪಿನಲ್ಲೇ ದಿನ ಕಳೆಯಲಾರಂಭಿಸಿದೆ.ಆದರೂ ಅಮ್ಮ ಇಲ್ಲದೆ ರೆಕ್ಕೆ ಮುರಿದ ಹಕ್ಕಿಯಂತಾಗಿ ಚೇತರಿಸಿಕೊಳ್ಳಲಾಗದೇ ಕೊನೆಗೆ ಒಂದು ರಾತ್ರಿ ತಂದೆಯು ಮಲಗಿದ್ದಾಗಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಕೆಲಸದ ಒತ್ತಡದಲ್ಲೇ ಅವರ ಅಂತ್ಯಕ್ರಿಯೆ ಮುಗಿಸಿ ತೋಟದ ಆಳಗಳಿಗೆ ನೋಡಿಕೊಳ್ಳಲು ಹೇಳಿ ಮನೆಯ ಬಾಗಿಲಿಗೆ ಹಾಗೆ ಬೀಗ ಹಾಕಿ ಮರಳಿ ನಗರ ಸೇರಿಕೊಂಡಿದ್ದೆವು.ಮುಂದೆ ಜಮೀನು ನೋಡಿಕೊಳ್ಳುತ್ತಿದ್ದವರು ಬೆಳೆದ ಕಾಳು ಕಡಿಯಲ್ಲಿ ಅಷ್ಟೋ ಇಷ್ಟೋ ಭಾಗ ನಮಗೆ ಕೊಟ್ಟು ಕಳಿಸುತ್ತಿದ್ದರು. ಒಟ್ಟಿನಲ್ಲಿ ಹಿರಿಯರು ಬಿಟ್ಟು ಹೋದ ಜಮೀನು ಅವರು ಚೆನ್ನಾಗಿ ನೋಡಿಕೊಂಡರೆ ಸಾಕು ಎಂದುಕೊಂಡಿದ್ದೆ.
ಮುಂದೊಂದು ದಿನ ನಿವೃತ್ತಿಯ ನಂತರ ನಮ್ಮೂರಿಗೆ ಹೋಗಿ ಕೃಷಿಯನ್ನು ನೋಡುತ್ತ ಜೀವನ ಸಾಗಿಸಬೇಕೆಂದು ನಿರ್ಧಾರ ಮಾಡಿದ್ದೆವು. ಅದರಂತೆ ನಿವೃತ್ತಿಯ ನಂತರ ನಾನು ಮತ್ತು ಪ್ರಿಯಾ ಇಬ್ಬರೂ ಊರಿಗೆ ಹೋಗಿ ಎಲ್ಲ ಸ್ವಚ್ಚ ಮಾಡಿ ಬಂದು ನಂತರ ಎಲ್ಲ ಸರಂಜಾಮು ಸಾಗಿಸುವುದು ಅಂತಾ ನಿರ್ಧರಿಸಿ ಕಾರಿನಲ್ಲಿ ಊರು ಕಡೆ ಮುಖ ಮಾಡಿದೆವು.ಊರಿಗೆ ಹೋಗಿ ಊರು ಬಾಗಿಲು ತಗೆದಾಗ ಗಾಳಿಯಾಡದ ತೋಟದ ಮನೆ ಗಬ್ಬು ನಾರುತಿತ್ತು. ಮನೆ ತುಂಬ ಧೂಳು ಹುಳ ಹುಪ್ಪಡಿ ಎಲ್ಲ. ಪ್ರಿಯಾಳೇ ಮುಂದೆ ನಿಂತು ಆಳುಗಳೊಂದಿಗೆ ಮನೆ ಸ್ವಚ್ಛತೆ ಕಾರ್ಯದಲ್ಲಿ ತೊಡಗಿದಳು. ನಾನು ತೋಟವನ್ನೆಲ್ಲ ಪರಿಶೀಲಿಸಿ ಏನೇನು ಕೆಲಸ ಆಗಬೇಕು ಎಂದು ಪಟ್ಟಿ ಮಾಡಿಕೊಳ್ಳಲು ಹೋದೆ. ಹೋದ ಕೆಲವೇ ಸಮಯದಲ್ಲಿ ಸುಂಟರ ಗಾಳಿಯಂತೆ ನನ್ನ ಹಿಂದೆ ಓಡಿ ಬಂದ ಪ್ರೀಯಾ. “ಈಗ ಒಂದು ಕ್ಷಣವೂ ನಾನು ಇಲ್ಲಿ ಇರಲಾರೆ ಈಗಿಂದೀಗ ಹೋಗೋಣ ನಡೆಯರಿ” ಎಂದು ಒತ್ತಾಯಿಸಿದಳು. ನಿನಗೊಂದೂ ಅರ್ಥವಾಗಲಿಲ್ಲ. ಅವಳೇ ಮನೆ ಸ್ವಚ್ಚ ಮಾಡಿ ಬರೋಣ ನಡೆಯರಿ ಎಂದು ಒತ್ತಾಯ ಮಾಡಿ ಕರೆದುಕೊಂಡು, ಆಸಕ್ತಿಯಿಂದ ಮನೆ ಸ್ವಚ್ಛ ಮಾಡುವ ಕೆಲಸದಲ್ಲಿ ತೊಡಗಿದವಳು ಈಗ ಏಕಾಯೇಕಿ ಹೀಗೆ ಮರಳಿ ಹೋಗೋಣ ಎಂದು ಹಠ ಹಿಡಿದಿರುವ ಅವಳ ವರ್ತನೆ ನನಗೆ ವಿಚಿತ್ರವಾಗಿ ತೋರಿತು. ಬಂದ ಕೆಲಸ ಮುಗಿಸಿ ಹೋಗೋಣ ಎಂದರೆ ಅವಳು ಕೇಳದಾದಳು. “ನಿಮ್ಮ ಮನೆನೂ ಬೇಡ, ನಿಮ್ಮ ತೋಟವೂ ಬೇಡ. ನಿಮ್ಮ ಸಹವಾಸವೇ ಬೇಡ” ಎಂದು ಸಿಡುಕಿದಳು. ಮೂವತ್ತು ಮೂವತ್ತೈದು ವರ್ಷಗಳ ವೈವಾಹಿಕ ಜೀವನದಲ್ಲಿ ಅವಳು ಒಮ್ಮೆಯೂ ಹೀಗೆ ತಾಳ್ಮೆಗೆಟ್ಟು ವರ್ತಿಸಿದ್ದು ಗೊತ್ತೇ ಇರಲಿಲ್ಲ. ಊರಿಗೆ ಬಂದು ನೆಲೆಸುವ ನನ್ನ ನಿರ್ಧಾರ ತಪ್ಪಾಯಿತೇ? ಅಥವಾ ನಗರ ವಾತಾವರಣದಲ್ಲಿ ಬೆಳೆದು ದೊಡ್ಡವಳಾದ ಪ್ರಿಯಾಗೆ ಹಳ್ಳಿ ಈ ಹಳೆ ಕಾಲದ ಮನೆ ಎಲ್ಲ ನೋಡಿ ಉಳಿದೆಲ್ಲ ಜೀವನ ಇಲ್ಲೇ ಕಳೆಯಬೇಕಲ್ಲ! ಅಂತಾ ಏನಾದರೂ ಅನಿಸಿ ತನ್ನ ನಿರ್ಧಾರದಿಂದ ಹಿಂದೆ ಸರಿದಳೇ. ನನಗೆ ಒಂದೂ ಅರ್ಥವಾಗುತ್ತಿಲ್ಲ. ಅವಳ ಈ ವಿಚಿತ್ರವಾದ ನಿರ್ಧಾರ ಬಗೆ ಹರಿಯದ ಗೊಂದಲವಾಗಿಯೇ ಉಳಿಯಿತು.
“ಯಾಕೆ ಏನಾಯ್ತು, ಈಗ ಸದ್ಯ ಹೊರಡುವುದಕ್ಕೆ ಕಾರಣವೇನು ಪ್ರಿಯಾ” ಎಂದು ಕೇಳಿದರೆ.
“ಮೊದಲು ಇಲ್ಲಿಂದ ನಡೆಯಿರಿ ಇಲ್ಲಿ ಅದೆಲ್ಲ ಹೇಳುವುದು ನಿಮಗೂ ಒಳ್ಳೆಯದಲ್ಲ. ನನಗೂ ಒಳ್ಳೆಯದಲ್ಲ. ಅದೆಲ್ಲ ಏನು ತೀರ್ಮಾನ ಅಗುತ್ತದೆಯೋ ಅಲ್ಲೇ ಅಗಲಿ. ಮೊದಲು ಇಲ್ಲಿಂದ ಜಾಗ ಖಾಲಿ ಮಾಡಿ. ಇಲ್ಲಾಂದ್ರೆ ಇದರ ಪರಿಣಾಮ ನೆಟ್ಟಗಿರಲ್ಲ” ಎಂದು ಗುಡುಗಿದಾಗ ಅನ್ಯ ಮಾರ್ಗ ಕಾಣದೆ ಕಾರು ಹತ್ತಿದೆ. ಕಾರು ಚಲಾಯಿಸುತ್ತಲೇ ಪ್ರಿಯಾಳ ಈ ಅನಿರೀಕ್ಷಿತ ವರ್ತನೆಗೆ ಕಾರಣವೇನು ಎಂದು ಯೋಚಿಸುತ್ತಿದ್ದೆ. ಮನೆ ಸ್ವಚ್ಚ ಮಾಡುವಾಗ ಏನಾದರೂ ನೋಡಿ ಹೆದರಿದಳೇ ಹೇಗೆ? ದಾರಿಯುದ್ದಕ್ಕೂ ಅವಳು ತುಟಿ ಬಿಚ್ಚಲೇ ಇಲ್ಲ. ಮುಖ ಕೆಂಡವಾಗಿಸಿಕೊಂಡು ಕೋಪದಲ್ಲಿ ಕುಳಿತಿದ್ದಳು.ನನ್ನ ಮನಸ್ಸಿನಲ್ಲಿ ಆತಂಕ ದುಗುಡುಗಳ ಅರ್ಭಟ ಮುಂದವರೆದಿತ್ತು.ಮನೆ ತಲುಪಿದರೂ ಅವಳ ಕೋಪ ಇಳಿಯಲಿಲ್ಲ. ಏನಾಯ್ತು? ಏನಾಯ್ತು? ಎಂದು ಸಾವಿರಾರು ಬಾರಿ ಕೇಳಿದರೂ ಉತ್ತರಿಸಲಿಲ್ಲ. ನೇರವಾಗಿ ಬೆಡ್ ರೂಮಿಗೆ ಹೋದವಳೇ ಮಲಗಿ ಬಿಟ್ಟಳು. ಆರೋಗ್ಯ ಸರಿ ಇಲ್ವಾ? ಅಂತಾ ಕೇಳಿ ಚಹಾ ಮಾಡಿ ಕುಡಿಯಲು ಕೊಟ್ಟರೆ ಕುಡಿಯಲಿಲ್ಲ. ರಾತ್ರಿ ಅಡುಗೆ ಮಾಡಲಿಲ್ಲ. ಕೊನೆಗೆ ಇಬ್ಬರೂ ಉಪವಾಸ ಮಲಗಿದೆವು. ನಾನು ಒಂದು ರೂಮಿನಲ್ಲಿ ಅವಳು ಇನ್ನೊಂದು ರೂಮಿನಲ್ಲಿ. ರಾತ್ರಿಯೆಲ್ಲ ನಿದ್ರೆಯಿಲ್ಲದೆ ನಾನು ಹೊರಳಾಡಿದ್ದೆ. ಬಹುಶಃ ಅವಳು ಕೂಡ. ನಾವಿಬ್ಬರೂ ಸಣ್ಣ ಪುಟ್ಟ ಕಾರಣಗಳಿಗೆ ಸ್ವಲ್ಪ ಹೊತ್ತು ಕಿತ್ತಾಡಿಕೊಂಡಿದ್ದರೂ ಪರಿಸ್ಥಿತಿ ಇಷ್ಟು ವಿಕೋಪಕ್ಕೆ ಹೋಗಿರಲಿಲ್ಲ. ಇಂಥ ಅನುಭವ ನನ್ನ ಜೀವನದಲ್ಲಿ ಇದೇ ಮೊದಲು ಬಾರಿ ಯಾಗಿತ್ತು. ಅವಳ ಈ ಉಪವಾಸ ಸತ್ಯಾಗ್ರಹ ಎರಡ್ಮೂರ ದಿನಗಳವರೆಗೆ ಮುಂದವರೆಯಿತು. ಒಂದು ಮುಂಜಾನೆ ಅವಳು ಬೇಗ ಎದ್ದು ಬ್ಯಾಗನಲ್ಲಿ ಬಟ್ಟೆ ಬರೆಗಳನ್ನೆಲ್ಲ ತುಂಬಿಕೊಂಡು ಹೊರಟು ನಿಂತಿದ್ದಳು. ಅದನ್ನು ಕಂಡು ನಾನು ಲಗುಬಗೆಯಿಂದ ಎದ್ದು ಅವಳನ್ನು ತಡೆದು ನಿಲ್ಲಿಸಿ ಎಲ್ಲಿಗೆ ?ಅಂತಾ ಪ್ರಶ್ನಿಸಿದರೂ ಅವಳು ನನ್ನ ಮಾತಿಗೆ ಯಾವುದೇ ಪ್ರತಿಕ್ರಿಯೆ ತೋರದೆ ಮುಂದೆ ಹೆಜ್ಜೆ ಇಟ್ಟಾಗ ನನ್ನ ಸಹನೆ ಕಟ್ಟೆಯೊಡೆದಿತ್ತು. ನಾನು ಸಿಟ್ಟಿನಲ್ಲಿ ಅರಚಿದೆ-
“ಏನು ನಾಟಕ ಮಾಡ್ತಿದಿಯಾ? ಬೆಳಗೆದ್ದು ಹೀಗೆ ಬಟ್ಟೆ ಬರೆ ತುಂಬಿಕೊಂಡು ಎಲ್ಲಿಗೆ ಹೊರಟಿದ್ದಿಯಾ? ಕೇಳಿದಕ್ಕೆ ಉತ್ತರ ಕೊಟ್ಟರೆ ನಿನ್ನ ನಾಲಿಗೆಯೇನು ಸವೆದು ಹೋಗುವುದಿಲ್ಲ. ಏನಾಗಿದೆ ಅಂತಾ ಹೇಳಿದರೆ ತಾನೆ ಅರ್ಥ ಆಗೋದು…”
ಅದಕ್ಕೆ ಅವಳು ತೀಕ್ಷಣವಾಗಿ ಪ್ರತಿಕ್ರಿಯಿಸಿದಳು –
ನಾನು ಎಲ್ಲಾದರೂ ಹೋಗತೀನಿ, ಹೋಗಿ ಸಾಯತೀನಿ. ಅದನ್ನು ಕಟ್ಟಿಕೊಂಡು ನಿನಗೇನು ಆಗಬೇಕಿದೆ?. ಇನ್ಮುಂದೆ ನನಗೂ ನಿಮಗೂ ಯಾವ ಸಂಬಂಧವಿಲ್ಲ” ಎಂದು ಖಾರವಾಗಿ ನುಡಿದಾಗ ನನ್ನ ಕೋಪ ಇನ್ನಷ್ಟು ಹೆಚ್ಚಾಗಿತ್ತು.
” ಸುಮ್ನಿದ್ದಷ್ಟು ನಿನ್ನದು ಅತಿಯಾಯ್ತು, ಎಲ್ಲಿಗೆ ಹೋಗ್ತಿದೀಯಾ? ಅಂತಾ ಹೇಳಿ ಹೋಗು. ಅಲ್ಲಿವರೆಗೆ ಹರಿಬ್ರಹ್ಮ ಬಂದರೂ ನಿನ್ನ ಬಿಡುವುದಿಲ್ಲ” ಅಂತಾ ಜೋರು ಮಾಡಿದೆ.
“ಹೌದು, ನನ್ನ ತವರಿಗೆ ಹೋಗ್ತಾಯಿದ್ದಿನಿ ಏನೀಗ.? ಅದು ನನ್ನಿಷ್ಟ. ನಾನು ಏನಾದ್ರು ಮಾಡ್ತೀನಿ” ಎಂದಳು.
“ಆಯ್ತು ಹೋಗು. ನಾನು ಬೇಡ ಅನ್ನೋಲ್ಲ. ಆದರೆ ಹೀಗೆ ದಿಢೀರವಾಗಿ ನೀನು ಬದಲಾಗುವುದಕ್ಕೆ ಕಾರಣವೇನು.? ಊರಲ್ಲಿ ಏನಾಯ್ತು,? ನನ್ನ ಜೊತೆ ಕೊನೆಯುಸಿರು ಇರುವವರೆಗೆ ಅಲ್ಲೆ ಊರಲ್ಲೆ ಇರ್ತಿನಿ ಎಂದವಳು ಹೀಗೆ ಎದ್ದು ಬಂದ ಕಾರಣವೇನು.? ಅಲ್ಲಿಂದ ಇಲ್ಲಿಯವರೆಗೆ ನನ್ನೊಂದಿಗೆ ಮಾತಾಡಲಿಲ್ಲ. ಎರಡ್ಮೂರು ದಿನಗಳಿಂದ ಇಬ್ಬರೂ ಊಟಾನೂ ಮಾಡದೆ ಮಲಗಿದೆವು. ನಿನಗೆ ಶುಗರ್ ಇದೆ.ನನಗೆ ಬೀಪಿ .
ನಮ್ಮಿಬ್ಬರಲ್ಲಿ ಯಾರಿಗಾದರೂ ಏನಾದರೂ ಆಗಿದ್ದರೆ ಏನು ಗತಿ?. ಹೀಗೆ ಕಠೋರವಾಗಿ ನೀನೆಂದೂ ವರ್ತಿಸಿದವಳಲ್ಲ. ಈ ಬಾರಿ ಹೀಗೇಕೆ ಮಾಡಿದೆ. ನಿನಗೆ ನಮ್ಮ ಊರಲ್ಲಿ ಇರೋದು ಇಷ್ಟ ಇಲ್ಲಾಂದ್ರೆ ಬಿಡೋಣ. ಇಲ್ಲೆ ಇರೋಣ. ನೀನು ಹೇಳಿದಂತೆ ಮಾಡೋಣ… ಎಂದು ಏನೇನೋ ಸಮಜಾಯಿಷಿ ನೀಡಲು ಪ್ರಯತ್ನಿಸಿದಾಗ ಅವಳಿಂದ ಒಂದು ಚುಟುಕಾದ ಉತ್ತರ ಬಂತು.
” ವಿಷಯ ಅದಲ್ಲ” ಎಂದಳು.
“ಅದಲ್ಲ ಅಂದರೆ ಇನ್ನಾವುದು?” ಎಂದು ಕೇಳಿದಾಗ-
“ಹೇಳಲೇ.. ಬೇಕಾ?” ಮರು ಪ್ರಶ್ನಿಸಿದಳು.
” ಹೌದು ಹೇಳಲೇಬೇಕು, ಹೇಳಿದರೆ ತಾನೇ ಏನೆಂದು ಗೊತ್ತಾಗುವುದು” ಎಂದೆ. ಆಗ ಅವಳು ತನ್ನ ಪರ್ಸ್ ಬಿಚ್ಚಿದಳು. ನಾನು ಪರ್ಸ್ ನಲ್ಲಿ ದುಡ್ಡೆನಾದ್ರು ನೋಡ್ಕೋತಿರಬೇಕು ಎಂದುಕೊಂಡರೆ ಅವಳು ಯಾವುದೋ ಬಹಳ ದಿನಗಳಿಂದ ಧೂಳು ಬಿದ್ದ ಅಂಚೆ ಕವರೊಂದು ತಗೆದು ನನ್ನ ಕೈಗಿಟ್ಟು.
” ನೋಡ್ಕೋಳ್ಳಿ.. ಇಷ್ಟಕ್ಕೆಲ್ಲ ಇದೇ ಕಾರಣ” ಎಂದು ಸಿಟ್ಟಿನಿಂದ ನನ್ನ ಕೈಗೆ ತುರುಕಿದಳು. ನಮ್ಮಿಬ್ಬರ ನಡುವೆ ಬಿರುಕು ಬಿಡಲು ಕವರ ಯಾರದಿರಬಹುದು.? ಅದರಲ್ಲಿ ಏನಿರಬಹುದು? ಅಂತಾ ಕುತೂಹಲದಿಂದ ನೋಡಿದರೆ, ಆಶ್ಚರ್ಯವೋ ಆಶ್ಚರ್ಯ. ಆ ಕವರ ಮೇಲೆ ಮೂಡಿರುವುದು ನನ್ನದೇ ಕೈಬರಹ. ಓದಿ ನೋಡಿದರೆ..
To,
Miss Nandini
D/O Narshiama Murthy
Near Anjanay Temple
Rajajinagar, Bengalore
ಅಂತಾ ಬರೆದ ವಿಳಾಸ ದಿನ ಕಳೆದಂತೆ ಮಸುಕು ಮಸಕಾಗಿರುವುದು ನನ್ನದೇ ಕೈಬರಹ ಅಂತಾ ಸ್ಪಷ್ಟವಾಗಿ ಹೋಗಿತ್ತು. ಆ ಕವರಿನ ಒಂದು ಮೂಲೆಯಲ್ಲಿ ಕೆಂಪು ಶಾಯಿಯಿಂದ ಬರೆದಿರುವ ಶರಾ ಕನ್ನಡಕದ ಒಳಗಿಂದ ಕಣ್ಣಗಲಿಸಿ ಓದಿದಾಗ ಒಂದು ಕ್ಷಣ ಸಿಡಿಲು ಅಪ್ಪಳಿಸಿದ ಅನುಭವಾಗಿತ್ತು. “Incomplet Adress Redirected to from Address” ಎಂದು ಬರೆದಿರುವುದು ಓದಿ ಕವರ್ ಹೊರಳಿಸಿ ನೋಡಿದೆ. ಹೌದು ಅದು ನನ್ನದೆ ವಿಳಾಸ. ನಾನು ನಂದಿನಿಗೆ ಬರೆದ ಪತ್ರ ಅವಳನ್ನು ಹುಡುಕುತ್ತ ಅಲ್ಲಿ ಇಲ್ಲಿ ಅಡ್ಡಾಡಿ ಬೆಂಗಳೂರೆಲ್ಲ ಸುತ್ತಾಡಿ ಮರಳಿ ನನ್ನ ವಿಳಾಸಕ್ಕೆ ಬಂದು ತಲುಪಬೇಕಾದರೆ ನಾನು ಊರು ಬಿಟ್ಟು ನಗರದಲ್ಲಿ ಸಂಸಾರ ಹೂಡಿದ್ದೆ. ನಂತರ ಅದು ನನ್ನ ಮನೆಗೆ ಬಂದಾಗ ತಂದೆ ತಗೆದುಕೊಂಡು ಮನೆಯ ಯಾವುದೋ ಮಾಡಿನಲ್ಲಿ ಇಟ್ಟಿದ್ದು ಬಹುಶಃ ನನಗೆ ತಿಳಿಸುವುದು ಮರೆತು ಬಿಟ್ಟಿದ್ದರು ಅನಿಸುತ್ತೆ. ಈಗ ಮನೆ ಸ್ವಚ್ಚ ಮಾಡುವಾಗ ಪ್ರಿಯಾಳ ಕೈಗೆ ಆ ಕಾಗದ ಸಿಕ್ಕಿದೆ. ಓದಿ ಡಿಸ್ಟ್ರರ್ಬ್ ಆಗಿದ್ದಾಳೆ. ಇಷ್ಟೆಲ್ಲ ರಾದ್ಧಾಂತವಾಗಿದೆ. ನಾನು ನಂದಿನಿಯಲ್ಲಿ ಆಸಕ್ತನಾಗಿದ್ದು, ಅನುರುಕ್ತನಾಗಿದ್ದು, ಭೇಟಿಯಾಗುವ ಇಚ್ಛೆ ವ್ಯಕ್ತ ಪಡಿಸಿದ್ದು ಎಲ್ಲ ಅವಳಿಗೆ ಆ ಮರಳಿ ಬಂದ ಪತ್ರ ಓದಿದ ಮೇಲೆ ಅರ್ಥವಾಗಿ ಹೋಗಿತ್ತು. ಆ ಕಾರಣಕ್ಕೆ ಅವಳು ನನ್ನೊಂದಿಗಿನ ಸಂಬಂಧ ಕಡಿದುಕೊಳ್ಳುವುದಕ್ಕೆ ಮುಂದಾಗಿದ್ದಾಳೆ. ಅದು ಈಗ ಈ ಮುದಿ ವಯಸ್ಸಿನಲ್ಲಿ, ಮದುವೆಯಾಗಿ ಇಷ್ಟು ವರ್ಷಗಳ ನಂತರ. ತುಂಬಾ ವಿಚಿತ್ರವಾಗಿದೆ. ಅದಕ್ಕೆ ನಾನು ನಕ್ಕು ಅವಳ ಕೋಪ ತಿಳಿಯಾಗಿಸಲು ಪ್ರಯತ್ನಿಸಿದೆ…
“ಹಾ.. ಹಾ.. ಇದಾ ಕಾರಣ.. ನಾನು ಬರೆದ ಪತ್ರ ನಂದಿನಿಗೆ ತಲುಪೇ ಇಲ್ಲ.. ನನ್ನ ಅವಳ ಭೇಟಿನೂ ಆಗಿಲ್ಲ… ಮದ್ವೆನೂ ಆಗಿಲ್ಲ.. ಅಂದ್ಮೇಲೆ.. ಇದರಲ್ಲಿ ಇಷ್ಟು ಬೇಜಾರು ಮಾಡಿಕೊಳ್ಳುವ ಅವಶ್ಯಕತೆ ಏನೀದೆ..? ” ಎಂದು ಇನ್ನೂ ಹೇಳುವುದರಲ್ಲೇ ಇದ್ದೆ. ಪ್ರಿಯಾ ಆರಂಭಿಸಿದಳು-
” ಹಾಗಂದ ಮಾತ್ರಕ್ಕೆ ನಿಮ್ಮ ಮನಸಿನಲ್ಲಿ ಮೊಳೆತ ಪ್ರೀತಿ ಸುಳ್ಳಾಗುತ್ತಾ..? ಅಕಸ್ಮಾತ ಅವಳಿಗೆ ಆ ಪತ್ರ ಸಿಕ್ಕು ಅವಳು ಒಪ್ಪುವುದು ಬಿಡುವುದು ಬೇರೆ ಮಾತು. ಅಥವಾ ಅವಳಿಂದ ಮಂಗಳಾರತಿ ಹಾಕಿಸಿಕೊಂಡು ಮುಖ ಮುಚ್ಚಿಕೊಂಡು.. ಓಡಿ ಹೋಗುತ್ತಿದ್ದರೇನು..? ನೀವು ಪತ್ರ ಬರೆದ ವಿಷಯ ಅವಳು ನನಗೆ ಹೇಳದೆ ಇರುತ್ತಿರಲಿಲ್ಲ. ಆಗ ಅವಳಷ್ಟೆಯಲ್ಲ ನಾನು ಕೂಡ ನಿಮ್ಮನ್ನು ಒದ್ದೋಡಿಸುತ್ತಿದ್ದೆ. ಈ ಸತ್ಯ ಆಗಲೇ ಬಹಿರಂಗವಾದರೆ ಒಳ್ಳೆಯದಿತ್ತು.. ಅಥವಾ ನಾನು ನಿಮಗೆ ಇಷ್ಟ ಇಲ್ಲ ಅಂತ ಆಗಲೇ ಹೇಳಿ ಬಿಡಬೇಕಾಗಿತ್ತು. ನಾನಾದರೂ ಈ ಸುಳ್ಳು ಸಂಸಾರ.. ಸುಳ್ಳು ಪ್ರೇಮದಿಂದ ಉಳಿಯುತ್ತಿದ್ದೆ.ನಾನು ಇಷ್ಡು ದಿನ ಬದುಕಿದ್ದು ಸುಳ್ಳು ಜೀವನ. ನಾನು ನನ್ನ ಗಂಡ ಶ್ರೀ ರಾಮಚಂದ್ರ ಅಂದುಕೊಂಡಿದ್ದೆ. ಆದರೆ ಇಷ್ಟು ದಿನ ಇನ್ನೊಂದು ಹೆಣ್ಣಿನ , ಪ್ರೇಮದ ಪುತ್ಥಳಿಯನ್ನು ಮನದಲ್ಲಿ ಪ್ರತಿಷ್ಠಾಪಿಸಿಕೊಂಡು ನನ್ನ ಮೋಸ ಮಾಡಿದ ನಯವಂಚಕ. ನಾನಿಷ್ಟು ದಿನ ಒಬ್ಬ ವಂಚಕನ ಜೊತೆ, ಸುಳ್ಳುಗಾರನ ಜೊತೆ ಜೀವನ ಮಾಡಿದ್ದೇನೆಂದರೆ ನನಗೇ ನಾಚಿಕೆ ಆಗುತ್ತೆ….” ಎಂದೆಲ್ಲ ಹುಚ್ಚಿಯ ಹಾಗೆ ಬಡ ಬಡಿಸುತ್ತಿದ್ದಳು.
“ನೀನು ಭಾವಿಸಿದಂತೆ ನಾನು ಅಂತಹ ತಪ್ಪೇನು ಮಾಡಿಲ್ಲ.. ಸುಮ್ನೆ ನಿನ್ನ ಗೆಳತಿ ಎಂಥವಳು ಅಂತಾ ಪರೀಕ್ಷಿಸಲು ನಾಟಕವಾಡಿದ್ದು.. ಅದು ಮದುವೆಕ್ಕಿಂತ ಪೂರ್ವದಲ್ಲಿ.. ನಮ್ಮ ಮದ್ವೆಯ ನಂತರ ನಾನು ಯಾವುದೇ ಹೆಣ್ಣನ್ನು ಕಣ್ಣೆತ್ತಿಯೂ ನೋಡಿಲ್ಲ… ಕೇವಲ ಪತ್ರ ಬರೆದಿದ್ದು ಮಾತ್ರ.. ಅದೇನೂ ದೊಡ್ಡ ತಪ್ಪಲ್ಲ.. ನಾನು ಅವಳೊಂದಿಗೆ ಅನೈತಿಕ ಸಂಬಂಧವೇನಾದ್ರು ಇಟ್ಟುಕೊಂಡಿದೀನಾ?.. ನನ್ನ ಬಿಟ್ಟು ಹೋಗುವಂಥ ತಪ್ಪು ನಾನೇನು ಮಾಡಿಲ್ಲ.. ಅದು ಈ ವಯಸ್ಸಿನಲ್ಲಿ ನಾಲ್ಕು ಜನಕ್ಕೆ ಗೊತ್ತಾದರೆ ನಮ್ಮದೇ ಮರ್ಯಾದೆ ಹೋಗೋದು..”
“ಹೋಗಲಿ ನನ್ನದೇನು.. ನೀವು ಎಂಥವರು ಅಂತ ನಾಲ್ಕು ಜನಕ್ಕೆ ಗೊತ್ತಾಗಲಿ. ಸಣ್ಣದೋ ದೊಡ್ಡದೋ ತಪ್ಪು ತಪ್ಪೇ.. ನಾನು ನಿಮ್ಮ ಮೇಲೆ ಇಟ್ಟಿರುವ ವಿಶ್ವಾಸ ನಂಬಿಕೆ ಮುರಿದಿದ್ದೀರಿ.. ನನ್ನ ಮನಸ್ಸಿಗೆ ಆಘಾತವಾಗಿದೆ.. ನನಗೆ ಇನ್ನು ಮೇಲೆ ನಿಮ್ಮೊಂದಿಗೆ ಇರಲು ಇಷ್ಟವಿಲ್ಲ, ನಾನು ಈ ಮನೆ ಬಿಟ್ಟು ಹೋಗುತ್ತಿದ್ದೇನೆ” ಎಂದು ಅವಳು ತನ್ನ ನಿರ್ಧಾರಕ್ಕೆ ಬದ್ಧಳಾದಳು. ನನಗೆ ಬೇರೆ ದಾರಿ ತೋರಲಿಲ್ಲ. ಕಾನಫರೆನ್ಸ್ ಕಾಲಿನಲ್ಲಿ ಮಕ್ಕಳೊಂದಿಗೆ ಮಾತಾಡಿದೆ.. ನಿಮ್ಮಮ್ಮ ಸಿಟ್ಟು ಮಾಡಿಕೊಂಡು ತವರಿಗೆ ಹೋಗುತ್ತಿದ್ದಾಳೆ ಎಂದು ಹೇಳಿದೆ.ಆದರೆ ಕಾರಣ ಹೇಳಲಿಲ್ಲ. ಅವರೆಲ್ಲ ನಮ್ಮ ಜಗಳ ಕೇಳಿ ನಕ್ಕರು.. ಅವಳಿಗೂ ಬೇಜಾರ ಆಗಿರಬೇಕು ಬಿಡಿ. ಒಂದು ನಾಲ್ಕು ದಿನ ಇದ್ದು ಬರ್ತಾಳೆ. ಅಥವಾ ಇಬ್ಬರೂ ಇಲ್ಲಿಗೆ ಬನ್ನಿ ಜಾಗ ಬದಲಾದರೆ ಎಲ್ಲ ಸರಿ ಹೋಗುತ್ತೆ. ಬರದೆ ಇದ್ದರೆ ನಾವೇ ರಜೆಗೆ ಬಂದಾಗ ಹೇಳಿ ಕರೆದುಕೊಂಡು ಬರುತ್ತೇವೆ” ಎಂದು ಕಾಲ್ ಕಟ್ ಮಾಡಿದರು. ನಾನು ಮಕ್ಕಳ ಹತ್ರ ಹೋಗಿ ಒಂದಿಷ್ಟು ದಿನ ಇದ್ದು ಬರೋಣ ಎಂದು ಹೇಳಿದೆ.
“ನೀವೂ ಬೇಡ ನಿಮ್ಮ ಮಕ್ಕಳೂ ಬೇಡ” ಎಂದಳು. ಅವಳ ನಿರ್ಧಾರ ಅಚಲವಾಗಿತ್ತು ಅಟೋ ಹತ್ತಿ ಹೊರಟೇ ಬಿಟ್ಟಳು. ನಾನು ನೋಡುತ್ತಾ ನಿಂತು ಬಿಟ್ಟೆ. ನಾಲ್ಕು ದಿನ ಕಳೆಯಿತು.. ಐದು ದಿನ ಕಳೆಯಿತು.. ಒಂದು ವಾರ ಕಳೆಯಿತು.. ಒಂದು, ಎರಡು, ಮೂರು ಹೀಗೆ ತಿಂಗಳಗಳೇ ಕಳೆದರೂ ಅವಳು ಹಿಂದಿರಗುವ ಲಕ್ಷಣ ಕಾಣಲಿಲ್ಲ. ಕಾಲ್ ಮಾಡಿದರೆ ಉತ್ತರವಿಲ್ಲ.. ನಾನು ಅವಳ ಹಿಂದಿರುಗುವಿಕೆಗೆ ಚಾತಕ ಪಕ್ಷಿಯ ಹಾಗೆ ಕಾಯುತ್ತಲೇ ಇದ್ದೆ.. ಅವಳಂತೂ ಬರಲಿಲ್ಲ.. ಬಂದಿದ್ದು ವಿಚ್ಛೇದನೆ ಬಯಸಿ ಬರೆಸಿದ ಲಾಯರ್ ನೋಟಿಸ್ ಮಾತ್ರ. ನಾನು ದಿಕ್ಕು ತೋಚದವನಾಗಿ ಕುಳಿತಿದ್ದೆ.!
-ಅಶ್ಫಾಕ್ ಪೀರಜಾದೆ.