ಒಂದು ಪಲ್ಲವಿ ಎರಡು ಹಾಡು ಹಲವು ಚರಣ ಹಂಸಲೇಖರ ಪದ ಬೀಡು: ಜಯರಾಮ ಚಾರಿ


ಕಳೆದ ವಾರ ನಮ್ಮ ಅಡಕಸಬಿ ಅಡ್ಡದಲ್ಲಿ ಹಂಸಲೇಖರ ಬಗ್ಗೆ ಬರೋಬ್ಬರಿ ಆರು ದಿನಗಳ ಕಾಲ ಕೇವಲ ಅವರ ಸಾಹಿತ್ಯ ಕುರಿತು ಅದನ್ನು ಒಡೆದು ನೋಡುವ ಒಂದು ಸಣ್ಣ ಪ್ರಯತ್ನ ಮಾಡಿದ್ವಿ. ಆದರೆ ಹಂಸಲೇಖ ಬರೆದ ಹಾಡುಗಳ ಸಂಖ್ಯೆ ಕಮ್ಮಿಯಿಲ್ಲ 3500 ಕ್ಕೂ ಹೆಚ್ಚು ಹಾಡು ಬರೆದಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಹಂಸಲೇಖ ತಟ್ಟದ ಪದಗಳಿಲ್ಲ, ಅವರು ನಾದಬ್ರಹ್ಮನು ಹೌದು, ಪದಪರಮಾತ್ಮನು ಹೌದು .ಆರು ದಿವಸ ನಡೆಸಿದರು ಎಷ್ಟೋ ಹಾಡುಗಳು ಎಷ್ಟೋ ಸಾಲುಗಳು ಹಾಗೆ ಉಳಿದುಬಿಟ್ಟವು.

ಹಂಸಲೇಖರು ಒಂದೇ ಪಲ್ಲವಿ ಇಟ್ಟುಕೊಂಡು ಎರಡು ಹಾಡನ್ನು ಬರೆದಿದ್ದಾರೆ, ಹಂಸಲೇಖರು ಪದಗಳ ಆಟದಲ್ಲಿ ಎಷ್ಟೋ ಪ್ರಯೋಗಗಳನ್ನು ಮಾಡಿದ್ದಾರೆ ಅದರಲ್ಲಿ ಇದು ಒಂದು. ಆ ಪಲ್ಲವಿ ಯಾವುದೆಂದರೆ
“ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲ್ ಗಂಟ ಎತ್ಕೊಂಡು
ಏರಿ ಮೇಲೆ ಎರಿ ಬಂದ್ಲು ನಾರಿ…
ಬುತ್ತಿ ತುಂಬ ಪ್ರೀತಿ ತಂದ್ಲು ಗೌರಿ…”
ಕೌರವ ಹಾಗೂ ಹಳ್ಳಿಮೇಷ್ಟ್ರು ಎರಡು ಸಿನಿಮಾದಲ್ಲೂ ಈ ಪಲ್ಲವಿ ಬರುತ್ತದೆ, ಕೌರವದಲ್ಲಿ ಪ್ರೀತಿಯ ಪ್ರೀತಿಸಿದವಳ ಬಗ್ಗೆ ಬರೆದರೆ , ಹಳ್ಳಿಮೇಷ್ಟ್ರುವಿನಲ್ಲಿ ದಾಂಪತ್ಯದ ಮತ್ತು ಮಡದಿಯ ಬಗ್ಗೆ ಬರೆದಿದ್ದಾರೆ ಎರಡು ಹಾಡು ಒಂದೇ ಧಾಟಿಯಲ್ಲಿದ್ದರು ಒಂದಷ್ಟು ಪ್ರಯೋಗ ಕೂಡ ನಡೆದಿದೆ, ಒಂದು ಹಾಡನ್ನು ಎಲ್ ಎನ್ ಶಾಸ್ತ್ರಿ ಹಾಡಿದರೆ ಇನ್ನೊಂದನ್ನು ಯೇಸುದಾಸ್ ಹಾಡಿದ್ದಾರೆ.

ಎರಡು ಹಾಡಿನ ಪಲ್ಲವಿ ಒಂದೇ ಆದರೂ ಒಂದು ಹಾಡಿನಲ್ಲಿ “ಮಲ್ಲಿಗೆ ಈ ಮಲ್ಲಿಗೆ / ಆಹಾ ಮೈಸೂರ್ ಮಲ್ಲಿಗೆ ” (ಕೌರವ) ಎಂದು ಪಲ್ಲವಿ ಅಂತ್ಯವಾಗುತ್ತದೆ, ಮಲ್ಲಿಗೆ ಮೈಸೂರ್ ಮಲ್ಲಿಗೆ ಪ್ರೀತಿಯ ಘಮ ಮತ್ತು ಘಮಲು ಚೆಲ್ಲಿದರೆ, ಇನ್ನೊಂದು ಹಾಡಿನ ಪಲ್ಲವಿಯ ಅಂತ್ಯ “ಕಂಡೀರ ನೀವು ಕಂಡೀರ / ನನ್ನ ಹೆಂಡಿರ ನಗು ಕಂಡೀರ “(ಹಳ್ಳಿಮೇಷ್ಟ್ರು) ಆಗುತ್ತದೆ. ಮೊದಲ ಹಾಡಿನಲ್ಲಿ ನಾಯಕ ತನ್ನ ನಾಯಕಿಯನ್ನು ಹೊಗಳುತ್ತಾ ತನಗೆ ತಾನು ಹಾಡಿಕೊಂಡರೆ,ಇನ್ನೊದು ಹಾಡಿನಲ್ಲಿ ನಾಯಕ ತನ್ನ ಹೆಂಡತಿಯನ್ನ ಮುದ್ದು ಮಡದಿಯನ್ನ ಹೊಗಳುತ್ತಾ ಬೇರೆಯವರಿಗೆ ಪರಿಚಯಿಸುತ್ತಿದ್ದಾನೆ, ನೋಡಿ ನನ್ನ ಹೆಂಡತಿ ನಗು ಎಷ್ಟು ಚೆಂದ ಅಂತ.

ಕೌರವ ಸಿನಿಮಾದ ಹಾಡಿನ ಮೊದಲ ಚರಣ ಹೀಗೆ ಆರಂಭವಾಗುತ್ತದೆ, ಇಲ್ಲಿ ಇನ್ನೊಂದು ವಿಷಯ ಹೇಳಬೇಕು ಕೌರವ ಸಿನಿಮಾ ಹಾಡಿನಲ್ಲಿ ಚರಣದಲ್ಲಿ ಬೇರೆ ಸಿನಿಮಾದ ಪಲ್ಲವಿಯನ್ನ ಬಳಸಿಕೊಂಡಿರುವುದು ವಿಶೇಷ ಹಾಗೂ ವಿಶಿಷ್ಟ ಕೂಡ, ಹೀಗೆ ಪಲ್ಲವಿ ಹಾಗೂ ಚರಣ ಒಂದೇ ಕಡೆ ಕಾಣಿಸಿಕೊಂಡಿರುವುದು ಚಿತ್ರಸಾಹಿತ್ಯದ ಮಟ್ಟಿಗೆ ಹೊಸ ಪ್ರಯತ್ನ. ಚರಣದ ಮೊದಲ ಎರಡು ಸಾಲುಗಳು ಹೀಗಿವೆ.
“ನಾಟಿ ಹೊಲದ ಕಳೆಯ ತೆಗೆದ್ಲು ಓ….
ಬಾಳ ಬಂಗಾರ ನೀನು
ಹೊಲಕೆ ತಾನೆ ಬೇಲಿ ಆದ್ಲು ಓ….
ಹಣೆಯ ಸಿಂಗಾರ ನೀನು”

ಇಲ್ಲಿ ಹೊಲ ಎನ್ನೋದು ನಾಯಕನ ಎದೆ, ಅವನ ಎದೆಯಲ್ಲಿ ಪ್ರೀತಿಯ ನಾಟಿ ಮಾಡಿದ್ದು ನಾಯಕಿ, ನಾಯಕ ಕಳೆಯ ತೆಗೆದ್ಲು ಅಂತ ಹೇಳಲಿಕ್ಕೂ ಕಾರಣ ಇದೆ, ಕೌರವ ಸಿನಿಮಾದ ನಾಯಕನ ಹಿನ್ನೆಲೆ ಹಾಗಿರುತ್ತದೆ ಅವನ ಕೆಟ್ಟತನದ ಅಹಂಕಾರದ ದರ್ಪದ ಕಳೆ ತೆಗೆದುದ್ಡು ನಾಯಕಿ ಅದಕ್ಕೆ ಹಾಗೆ ಹಾಡಿ, ಹೊಲಕೆ ತಾನೇ ಬೇಲಿ ಆದ್ಲು ಅಂತಾನೆ ಕೆಟ್ಟದನ್ನು ತೆಗೆದು ಯಾವ ಕೆಟ್ಟದ್ದು ತನ್ನೆದೆಗೆ ಬಾರದೆ ಇರೋ ತರ ಅವಳೇ ಬೇಲಿ ಆದ್ಲು ಅರ್ಥಾತ್ ಪ್ರೇಯಸಿಯಾದಳು. ಈ ಚರಣದ ಮಧ್ಯೆ “ಬಾಳ ಬಂಗಾರ ನೀನು /ಹಣೆಯ ಸಿಂಗಾರ ನೀನು” ಎಂಬ ಸಾಲು ಕೂಡ . ಅದೇ ಚರಣ ಮುಂದುವರೆದು “ಖಂಡಗ ಖಂಡಗ ಕನಸು ಬೆಳೆದು/ ಎದೆ ಕಣಜ ತುಂಬ್ಸೇ ಬಿಟ್ಳೂ ” ಎದೆಯ ಹೊಲದ ಕಳೆ ತೆಗೆದು ನಾಟಿ ಮಾಡಿದ ನಾಯಕಿ ಖಂಡಗ (ಹೆಚ್ಚು ಹೆಚ್ಚಾಗಿ) ಕನಸು ಕೂಡ ಬೆಳೀತಾಳೆ , ಆ ಕನಸುಗಳ ಕಣಜವನ್ನ ಕೂಡ ತುಂಬಿಸಿದ್ದಾಳೆ. ನಾಯಕನ ಪ್ರೀತಿಯನ್ನ ಬೆಳೆವ ಬೆಳೆಗೆ ಉಪಮೆಯಾಗಿ ಬಳಸೋ ಈ ಸಾಲುಗಳು ಎಷ್ಟು ಅಧ್ಬುತವಲ್ವ? ಜೊತೆಗೆ ಚರಣದಲ್ಲಿ ಖ್ಯಾತ ಹಾಡಿನ ಪಲ್ಲವಿ ಕೂಡ ಮುಂದುವರೆಯುತ್ತದೆ “ನಿನ್ನ ಕೈಲಾಡೋ ಬೊಂಬೆ/ನಾನಯ್ಯ ಬೊಂಬೆ ನಾನಯ್ಯ” ಟಿಪಿಕಲ್ ಸಬ್ ಮಿಸ್ಸಿವ್ ಲೈನುಗಳು. ಅದೇ ಚರಣ ಮುಂದುವರೆದು “ಪುಂಗಿಯ ಬಳಿ ನಾಗ ಆದೆನು ನಾನೀಗ/ ಏನು ಗುಂಗೊ ಗೌರಿ ಧನಿಯಲೀ….” ಎಂತ ಹೋಲಿಕೆ ಗೌರಿಯ ಧ್ವನಿ ಗುಂಗೇರಿಸುವಂತಹುದು ಆ ದನಿ ಪುಂಗಿಯ ದನಿಯಂತದ್ದು ಅಂತ ದನಿಗೆ ನಾಯಕ ನಾಗನಾಗಿ ಕುಣಿಯುತ್ತಿದ್ದಾನೆ, ಅವನೀಗ ಸಂಪೂರ್ಣವಾಗಿ ನಾಯಕಿಯ ಆಸರೆಯಲ್ಲಿದ್ದಾನೆ , ಈ ಚರಣಡಾ ಕೊನೆಯ ಎರಡು ಸಾಲುಗಳನ್ನು ಗಮನಿಸಿ ಎಂತಹ ಚೆಂದದ ಉಪಮೆ , ಉಪಮೆಗಳ ಹೋಲಿಕೆಗಳ ವಿಷಯಕ್ಕೆ ಬಂದರೆ ಹಂಸಲೇಖರನ್ನು ಮೀರಿಸುವವ್ರೀಲ್ಲ, ಕನ್ನಡ ಚಿತ್ರ ಸಾಹಿತ್ಯದ ಕಾಳಿದಾಸ ಅವರು, ಕೊನೆಯ ಸಾಲುಗಳು ಹೀಗಿವೆ ” ಮನ್ಸಿಗೆ ಸ್ನಾನ ಮಾಡ್ಸಿದ್ಲು/ಪ್ರೀತಿಯ ಅಂಗಿ ತೊಡ್ಸಿದ್ಲು” ವಾವ್ !

ಕೌರವ ಸಿನಿಮಾದ ಈ ಹಾಡು ಜಾನಪದೀಯ ತೀರಾ ಆಡುಭಾಷೆಯ ಟಚ್ ಇದ್ದರೆ , ಹಳ್ಳಿಮೇಷ್ಟ್ರು ಸಿನಿಮಾದ ಅದೇ ಹಾಡು ಕನ್ನಡ ಸಿನಿಮಾದಲ್ಲಿ ಬಳಸುವ ಸಾಮಾನ್ಯ ಕನ್ನಡದ ಟಚ್ ಇದೆ, ಅಲ್ಲಿ ಪ್ರೀತಿಯನ್ನ ಪ್ರೀತಿಸಿದವಳನ್ನು ಹೊಗಳಿದರೆ ಇಲ್ಲಿ ಮಡದಿಯನ್ನು ಎಷ್ಟು ಸೆಂದ ಹೊಗಳುತ್ತಾರೆ ನೋಡಿ ಅದರ ಚರಣದ ಮೊದಲ ನಾಲ್ಕು ಸಾಲುಗಳು ಹೀಗಿವೆ
“ರಾಗಿ ತೆನೆಯ ಹಾಗೇ ಇದ್ದಳು ಓಓಓ
ಹಸೆಯ ಮಣೆಯ ಮೇಲೆ ಇವಳೋ ಓಓಓ
ಬಾಳೆದಿಂಡಿನಂತೆ ಇದ್ದಲೂ ಓಓಓ
ಹೋಸಗೆ ಮನೆಯ ಒಳಗೆ ಇವಳೋ ಓಓಓ”
ಮಡದಿ ಮದುವೆಯ ದಿನ ರಾಗಿಯ ತೆನೆಯ ತರ ಇದ್ಲು ಎನ್ನುವರು, ರಾಗಿ ತೆನೆಯ ನಯವಾದ ತೂಗಾಟ ಮಡದಿಯ ನಾಚಿಕೆಗೆ ಸೊಬಗಿಗೆ ಹೋಲಿಸಿದರೆ ಹೊಸಗೆ ಮನೆಯ ದಿನ ಬಾಳೆ ದಿಂಡಿನಂತೆ ಇದ್ಲು ಕಾಣಿಸುತಿದ್ದಳು ಅಂತಾರೆ, ಬಾಳೆದಿಂಡು ಪದ ಹಂಸಲೇಖರ ಮೆಚ್ಚಿನ ಪದ ಎಲ್ಲೆಲ್ಲಿ ಶೃಂಗಾರ ಹೆಣ್ಣು ಚೆಲುವು ಪ್ರೀತಿ ಬರುತ್ತದೋ ಅಲ್ಲೆಲ್ಲ ಬಾಳೆದಿಂಡಿನ ಪದವನ್ನು ಅವರು ಬಳಸಿಯೇ ಬಳಸುತ್ತಾರೆ.

ಹೀಗೆ ಹಸೆಯ ಮಣೆಯ ಮೇಲೆ ಕೂತು ಹೊಸಗೆ ಮನೆಗೆ ಬಂದ ತನ್ನ ಮಡದಿ ಹೇಗೆ ಆವರಿಸುತ್ತಾ ಹೋದಳು ಎಂದು ಮುಂದಿನ ಐದು ಸಾಲುಗಳಲ್ಲಿ ಎಷ್ಟು ಚೆಂದವಾಗಿ ವರ್ಣಿಸುತ್ತಾರೆ
“ತಿಕ್ಕಲೂ ತೀರಾಯ್ತು
ಮಕ್ಕಳು ಮರಿಯಾಯ್ತು
ಬಾಡಲಿಲ್ಲ ನನ್ನ ಸಂಪಿಗೇ
ನಂಟಿಗೆ ಗಂಟು ಬಿದ್ದವಳೂ
ಗಂಡನ ನೋವ ಉಂಡವಳೂ”
ಮದುವೆಯ ಮುಂಚಿನ ತಿಕ್ಕಲು ಅಂದರೆ ಪೋಲಿತನ ಅತಿ ಶೃಂಗಾರ ಈ ತರದ ತಿಕ್ಕಲು ತೀರಾಗಿದೆ , ದಿನ ದಿನ ಕಳೆದು ಮಾಸ ಮಾಸ ಕಳೆದು ವರುಷಗಳಾದಂತೆ, ಅವರ ಈ ತಿಕ್ಕಲಿನ ಸಾಕ್ಷಿಗೆ ಮಕ್ಕಳಾಗಿವೆ , ಹೀಗೆ ಮದುವೆ ಆಗಿ ವರುಷಗಳೇ ಉರುಳಿದರೂ ಮಕ್ಕಳು ಹುಟ್ಟಿದರು ಅವಳಿನ್ನೂ ಬಾಡದ ಸಂಪಿಗೆ ಎಂದು ಹೇಳುತ್ತಾರೆ ಅದು ಪ್ರೀತಿಯ ಅದರಲ್ಲೂ ಡಾಂಪತೈ್ಡಾಲ್ಳೀನ ಪ್ರೀತಿಯ ಶಕ್ತಿ, ಹೀಗೆ ಸಂಪಿಗೆಯಂತ ಮಡದಿ ನಂಟಿಗೆ ನಂಟು ಬಿದ್ದವಳು ಅಂದರೆ ಯಾವ ಅನ್ಯ ನಂಟಿನ ಕಡೆಗೂ ಹೋಗದಂತ ವಿಧೇಯಾದವಳು , ಅಷ್ಟೇ ಅಲ್ಲ ಗಂಡನ ನೋವನ್ನು ಸಹ ಉಂಡವಳು ಹಂಚಿಕೊಂಡವಳು ಸೀತೆಯಂತೆ ರಾಧೆಯಂತೆ ದಮಯಂತಿಯಂತೆ ಕುಂತಿಯಂತೆ.

ಮತ್ತೆ ಕೌರವ ಸಿನಿಮಾದ ಮುಂದಿನ ಚರಣ ಗಳಿಗೆ ಬಂದರೆ ಹೀಗಿದೆ
“ಒಂದೇ ತಣಿಗೆಯಾಗೆ ಊಟ ಓ….
ನೋಟದಾಗೆ ನಗೆಯಾ ಮೀಟಿ
ಇಬ್ರ ಬಾಯಿಗೊಂದೇ ಲೋಟ ಓ….
ಮೋಜಿನಾಗೆ ಎಲ್ಲೆಯ ದಾಟಿ
ಬೇಗ ಬಿದ್ರೆ ಮದ್ವೆ ಬೆಸ್ಗೆ ಓ….
ಮೋಡಿಯ ಮಾಡಿದೋಳ
ಇಬ್ರ ಇಷ್ಟಕ್ಕೊಂದೇ ಹಾಸ್ಗೆ ಓ…
ಪರಸಂಗ ಐತೇ..”
ಇಡೀ ಹಾಡು ಕನಸಿನ ಹಾಡಾದ್ದರಿಂದ ನಾಯಕಿ ಕನಸಿನ ನಡಿಗೆ ತೊಟ್ಟು ಕಾಣುವಳು, ಇಲ್ಲಿ ನಾಯಕಿ ಹೇಳುವಳು ಒಂದೇ ತಣಿಗೆ ಯಾಗೆ ಊಟ ಅಂದರೆ ಒಂದೇ ತಟ್ಟೆಯಲ್ಲಿನ ಊಟ, ಇಬ್ರೂ ಬಾಯಿಗೊಂದೇ ಲೋಟ ,ತಿನ್ನಲು ಕುಡಿಯಲು ಅವರಿಬ್ಬರೂ ಒಂದೇ ತಟ್ಟೆ ಒಂದೇ ಲೋಟ ಬಳಸುವ ಆಸೆ ಅಷ್ಟರ ಮಟ್ಟಿಗಿನ ಆದರ್ಶ ಪ್ರೇಮದ ಕಲ್ಪನೆ ,ಮೊದಲ ಚರಣದಲ್ಲಿ ನಾಯಕ ಹಾಡುತ್ತಿದ್ದಾರೆ ನಾಯಕಿಯ ಬಾಯಲ್ಲಿ ಬೇರೆ ಸಿನಿಮಾದ ಪಲ್ಲವಿ ಹಾಡಿಸುವ ಹಂಸಲೇಖ ಈ ಚರಣಗಳಲ್ಲಿ ನಾಯಕಿ ಹಾಡಿದರೆ ನಾಯಕ ಮಧ್ಯೆ ಮಧ್ಯೆ ಮತ್ತೊಂದು ಸಿನಿಮಾದ ಪಲ್ಲವಿ ಹಾಡುತ್ತಾನೆ ಆ ಪಲ್ಲವಿ ” ನೋಟದಾಗೆ ನಗೆಯ ಮೀಟಿ/ ಮೋಜಿನಾಗೆ ಎಲ್ಲೆ ದಾಟಿ/ ಮೋಡಿಯ ಮಾಡಿದವಳ/ ಪರಸಂಗ ಐತೆ ..”

“ನಾಯಕಿಕನಸಲ್ಲೆ ಬಾಳ್ತಿವ್ನಿ ನನಸಿಗೆ ಕಾಯ್ತಿವ್ನಿ
ತಾಳಿಗಿಷ್ಟು ಚಿನ್ನ ತಾರಯ್ಯ…
ಉಕ್ತೀನ್ ನಿನ್ ಮನೆಗೆ ಹಾಲಾಗಿ..
ಇರ್ತೀನ್ ನಿನ್ ಕುಡಿಗೆ ತಾಯಾಗಿ..”
ಒಂದೇ ಲೋಟ ಒಂದೇ ತಟ್ಟೆ ಎರಡು ದೇಹ ಒಂದೇ ಆತ್ಮದ ಐಡಿಯಲ್ ಪ್ರೇಮದ ಕಲ್ಪನೆಯಲ್ಲಿನ ನಾಯಕಿ ಮತ್ತೆ ಹೇಳುವಳು ಕನಸಲ್ಲೇ ಕಾಯ್ತಿವ್ನಿ/ ತಾಳಿಗಿಷ್ಟು ಚಿನ್ನ ತಾರಯ್ಯ ಅನ್ನುವಳು, ಸರಳ ವಿವಾಹ ಸಾಕು ಬೇರೇನೂ ಬೇಡ ನಾನು ನಿನ್ನ ಹೆಂಡಿರಾಗಲು ನನಗಿಷ್ಟು ಚಿನ್ನ ಸಾಕು ಅಷ್ಟು ತಗೊಂಡು ಬಾ ಅನ್ನುವಳು , ಹೀಗೆ ಚಿನ್ನ ತಂದು ನನ್ನ ಕೊರಳಿಗೆ ಹಾಕಿದರೆ ನಿನ್ನ ಮನೆಗೆ ಹಾಲಿನ ತರ ಉಕ್ಕುವುದಲ್ಲದೇ ನಿನ್ನ ಮಗುವಿಗೆ ತಾಯಿ ಕೂಡ ಆಗುವೆ ಎನ್ನುವಳು.
ಹೀಗೆ ಇಂತಹ ಸಾಲುಗಳೊಂದಿಗೆ ಕೌರವ ಸಿನಿಮಾದ ಹಾಡು ಮುಗಿಯುತ್ತದೆ.

ಇತ್ತ ಹಳ್ಳಿಮೇಷ್ಟ್ರುವಿನ ಹಾಡಿನ ಮುಂದಿನ ಚರಣಗಳು ಹೀಗಿವೆ
“ಮಳೆಯೂ ಬಂತು ಸುರಿದು ಹೋಯ್ತು ಓಓಓ
ಬಿಸಿಲು ಬಂತು ಉರಿದು ಹೋಯ್ತು ಓಓಓ
ದವಸ ಬಂತು ಕರಗಿ ಹೋಯ್ತು ಓಓಓ
ದಿವಸ ಬಂತು ಉರುಳಿ ಹೋಯ್ತು ಓಓಓ”
ಮದುವೆಯೂ ಆಯ್ತು ಮಕ್ಕಳು ಕೂಡ ಆಯ್ತು ಹೀಗೆ ದಾಂಪತ್ಯ ಗೀತೆ ಶುರುವಾಗಿ ಮಳೆಯು ಬಂತು ಸುರಿದು ಹೋಯ್ತು ಅಂದರೆ ಎಷ್ಟೋ ಮಳೆಗಾಲ ಉರುಳಿ ಹೋಗಿವೆ, ಬಿಸಿಲು ಬಂತು ಉರಿದು ಹೋಯ್ತು ಎಷ್ಟೋ ಬೇಸಗೆಗಳು ಕೂಡ ಉರುಳಿ ಹೋಗಿವೆ , ಋತು ಋತುಗಳೇ ಕಳೆದು ಹೋಗಿವೆ ಹೀಗೆ ಉರುಳಿ ಹೋದ ಋತುಗಳ ಮಧ್ಯೆ ದವಸ ಬಂತು ಅದು ಕೂಡ ಕರಗಿ ಹೋಗಿದೆ ,ಜೊತೆಗೆ ದಿವಸ ಬಂದು ಅದು ಕೂಡ ಉರುಳಿ ಹೋಗಿದೆ

“ಕರಗದ ಧನ ಧಾನ್ಯ
ಪ್ರೀತಿಯ ಪರಮಾನ
ಮುಪ್ಪೇ ಇಲ್ಲ ಇವಳ ಪ್ರೀತಿಗೇ
ತಪ್ಪಿಗೇ ಸೊಕ್ಕು ಹಾಕದವಳೂ
ಕ್ವಾಪಕೇ ದೀಪ ಹಚ್ಚದವಳೂ”
ಇಷ್ಟು ಕಳೆದು ಹೋದ ಋತುಗಳಲ್ಲಿ ಅವಳು ಅವನ ಮಡದಿ ಕರಗದ ಧನ ಧಾನ್ಯವಾಗಿದ್ದಾಳೆ , ಪ್ರೀತಿಯ ಪರಮಾನ್ನವಾಗಿದ್ದಾಳೇ ಎನ್ನುವರು ಇಂತಹ ಒಬ್ಬ ಆದರ್ಶ ಮಡದಿಯ ಪ್ರೀತಿಗೆ ಮುಪ್ಪೇ ಇಲ್ಲ ಎನ್ನುವರು ಹಾಗೆ ಎನ್ನಲಿಕ್ಕು ಕಾರಣವಿದೆ ಅದು ಕೊನೆಯ ಸಾಲಿನಲ್ಲಿ ಬರುತ್ತದೆ , ಇಂತ ಮಡದಿ ಗಂಡನ ಸಣ್ಣ ಪುಟ್ಟ ತಪ್ಪಿಗೆ ಸೊಕ್ಕು ಹಾಕಿಲ್ಲ , ಅಂದರೆ ಗಂಡ ಸಣ್ಣ ಪುಟ್ಟ ತಪ್ಪು ಮಾಡಿದ್ದಾನೆ, ಅವನ ಅವಳ ಇಬ್ಬರ ಕೋಪಕ್ಕೂ ದೀಪ ಹಚ್ಚದವಳು ಕೂಡ. ಕೋಪ ಉರಿ ಉರಿ ಬೆಂಕಿ ಅದರಲ್ಲಿ ಮುನಿಸಿನ ಜಗಳದ ದೀಪ ಹಚ್ಚಿಲ್ಲ ಎನ್ನುತ್ತಾರೆ. ಉಪಮೆಗಳ ವಿಷಯಕ್ಕೆ ಬಂದರೆ ಹಂಸಲೇಖರಿಗೆ ಹಂಸಲೇಖ ರೇ ಸರಿಸಾಟಿ.

ಕೊನೆಯ ಸಾಲುಗಳು ಹೀಗೆ ಕೊನೆಯಾಗುತ್ತದೆ ..
ಇಲಕಲ್ಲ ಸೀರೆ ಉಟ್ಟುಕೊಂಡು
ಮೊಣಕಾಲಗಂಟ ಎತ್ತುಕೊಂಡು
ಮುತ್ತು ರತ್ನ ಇಲ್ಲದೇ ಮಿಂಚೋ ನಾರೀ
ಬಾಯಲ್ ಹಲ್ಲೇ ಇಲ್ಲದೇ ನಗೋ ಪೋರೀ

ವಾವ್ !!
ಮುತ್ತು ರತ್ನವಿಲ್ಲದ ಮಿಂಚೋ ನಾರಿ, ಅಂದರೆ ಯಾವ ಅಲಂಕಾರದ ಬೇಲಿ ಇಲ್ಲದೆ ಮಿಂಚುತ್ತಿರುವ ನಾರಿ ಇವಳು, ಬಾಯಲ್ ಹಲ್ಲೆ ಇಲ್ಲದೆ ನಗೋ ಪೋರಿ
ಇದು ಫೈನಲ್ ಪಂಚು ಇಷ್ಟು ಹೊತ್ತು ಹಾಡುತ್ತಿರುವ ನಾಯಕ ಮುದುಕ, ಆಕೆ ಮುದುಕಿ, ಹಾಗಾಗಿ ಕೊನೆಯ ಚರಣದಲ್ಲಿ ಮುಪ್ಪು ಬಂದ ಮುದ್ದಿನ ಮಡದಿಯ ಪ್ರೀತಿ ಎಂದು ಮುಪ್ಪಾಗಿಲ್ಲ ಎಂದು ಹೊಗಳುವರು.
ಇಂತಹ ಪ್ರಯೋಗ ಮಾಡಿದ ಇಂತಹ ಎರಡು ವಿಶಿಷ್ಟ ಹಾಡು ಕೊಟ್ಟ ಹಂಸಲೇಖರಿಗೆ ನನ್ನ ದೀರ್ಘ ದಂಡ ಪ್ರಣಾಮಗಳು.

ಜಯರಾಮ ಚಾರಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x