ನಾಗರಾಜು ಶಿವ ಪುಟ್ಟಸ್ವಾಮಿ – ಸಿನಿಮಾಗಾಗಿ ಶಿವರಾಜ್ ಕುಮಾರ್ ಆದದ್ದು ಹಳೆಯದು. ಶಿವರಾಜ್ ಕುಮಾರ್ ಸಿನಿಮಾದ ಮೂಲಕ , ತಮ್ಮ ಬಿಂದಾಜ್ ನಡೆಯಿಂದ, ಬಾ ಮಾ , ಏನಮ್ಮ ಅಂತ ಮಾತಾಡಿಸುತ್ತಲೇ ಸುಮಾರು 36 ವರುಷಗಳಿಂದ ಸಿನಿಮಾ ಮಾಡುತ್ತ ಅರವತ್ತು ವರುಷವಾದರೂ ಯುವಕರಂತೆ ಹೆಜ್ಜೆ ಹಾಕುತ್ತ, ಮಗುವಿನಂತೆ ಸದಾ ಉತ್ಸಾಹ ತುಂಬಿರುವ ಶಿವರಾಜ್ ಕುಮಾರ್ ಈಗ ನಮ್ಮೆಲ್ಲರ ಶಿವಣ್ಣ . ಶಿವಣ್ಣ ಅಲ್ಲೊಂದು ನಗು ಅಲ್ಲೊಂದು ಎನರ್ಜಿ. ಆನಂದ್ ಸಿನಿಮಾದಿಂದ ಇತ್ತೀಚಿನ ಬೈರಾಗಿವರೆಗೂ. ಶಿವಣ್ಣ ನಮ್ಮ ಪ್ರೀತಿಯ ಆನಂದ ಬೈರಾಗಿ.
ಶಿವಣ್ಣ ಭಯಂಕರ ಕೀಟಲೆ ಹುಡುಗ ಚಿಕ್ಕ ವಯಸ್ಸಿನಲ್ಲಿ ಸೇರಿದ ಸ್ಕೂಲಲ್ಲಿ ತಮ್ಮದೇ ಒಂದು ಗ್ಯಾಂಗು ಕಟ್ಟಿಕೊಂಡು ಕೀಟಲೆ ಮಾಡುತ್ತ, ಸ್ನೇಹಿತರಿಗೇನಾದ್ರೂ ತೊಂದರೆ ಕೊಟ್ಟರೆ ಹೋಗಿ ಬಾರಿಸುತ್ತಿದ್ದ ಸ್ನೇಹಜೀವಿ. ಇದೇ ಕಾರಣಕ್ಕೆ ಮೂರು ಸ್ಕೂಲಿಂದ ಹೊರಬಿದ್ದದ್ದನ್ನು ಅವರೇ ಹೇಳಿದ್ದಾರೆ
ವಿನಯ ಮೂರ್ತಿ ಅಣ್ಣಾವ್ರು ಹುಡುಗಾಟದ ತಲೆ ಹರಟೆ ಯುವಕ ಶಿವಣ್ಣರ ಕಾಂಬಿನೇಷನ್ ಒಂತರ ಕುವೆಂಪು-ತೇಜಸ್ವಿ ತರದ್ದು ಅಂದ್ರೂ ತಪ್ಪಿಲ್ಲ.
ಅಣ್ಣಾವ್ರ ಮಗನಾದಕ್ಕೆ ಏನೋ ಚೆನ್ನೈಲಿ ಇದ್ದಾಗಲೇ ತೀರ ಬೇಗ ಅವರಿಗೆ ಸಿನಿಮಾ ಮಾಡುವ ಆಫರ್ ಬಂತು ಒಂದು ಮಲಯಾಳಂ ಮತ್ತೊಂದು ತೆಲುಗು. ಅಲ್ಲಿವರೆಗೂ ಕಮಲ್ ಹಾಸನ್ ಮಮ್ಮೂಟಿ ಅಮಿತಾಭ್ ರ ಸಿನಿಮಾಗಳಿಗೆ ಗ್ಯಾಂಗ್ ಕಟ್ಕೊಂಡು ಸಿಳ್ಳೆ ಹೊಡೆದು ಸಿನಿಮಾ ನೋಡ್ತಿದ್ದ ಏಕಾ ಏಕಿ ತಾನು ಕೂಡ ಹೀರೋ ಆಗಬಹುದು ನನ್ನ ಸಿನಿಮಾ ನೋಡುತ್ತಾರೆ ಎಂದಾಗ ಅವರಿಗೊಂದು ಆಶ್ಚರ್ಯ ಮತ್ತೆ ಯಾಕೆ ಟ್ರೈ ಮಾಡಬಾರದು ಎನ್ನುವ ಎನರ್ಜಿ. ಅದಕ್ಕೆ ಅವರ ಸ್ನೇಹಿತರು ಕೂಡ ಮಾಡು ಗುರು ಅಂದಿದ್ದಕ್ಕೆ ಶಿವಣ್ಣ ಹೋಗಿ ನಿಂತದ್ದು ಅಣ್ಣಾವ್ರ ಮುಂದೆ ಅದು ಮಲಯಾಳಂ ಡೈರೆಕ್ಟರ್ ಜೊತೆ. ಅದಕ್ಕೆ ಅಣ್ಣಾವ್ರು ನಾವು ಲಾಂಚ್ ಮಾಡಿದರೆ ನಮ್ಮ ಬ್ಯಾನರಿನಲ್ಲೇ ನಮ್ಮ ಭಾಷೆಯಲ್ಲೇ ಎಂದು ಹೇಳಿದ್ರಂತೆ ಅದೇ ಸಮಯಕ್ಕೆ ಕೆ ಬಾಲಚಂದರ್ ಸಿನಿಮಾ ಮಾಡೋ ಮುಂಚೆ ಸಿನಿಮಾ ಕಲಿ ಅಭಿನಯ ಕಲಿ ಎಂದಾಗ ಶಿವಣ್ಣ ಸೇರಿದ್ದು ಫಿಲ್ಮ್ ಸ್ಕೂಲ್. ಇವತ್ತಿಗೂ ಯೂ ಟೂಬಲ್ಲಿ ಶಿವಣ್ಣ ಆ ಇನ್ಸ್ಟಿಟ್ಯೂಟಲ್ಲಿ ಅಣ್ಣಾವ್ರ ಹಾಲು ಜೇನು ಹಾಡಿಗೆ ಅಭಿನಯಿಸಿದ ತುಣುಕು ಸಿಗುತ್ತೆ.
ಯಾವುದೋ ಒಂದು ಕಾರ್ಯಕ್ರಮದಲ್ಲಿ ಡಾಲಿ ಧನಂಜಯ ಅವರು ಫಿಲ್ಮ್ ಸ್ಕೂಲ್ ಸೇರಿದರೆ ಆಗುವ ಲಾಭವೇನು ಎಂದು ಕೇಳಿದಾಗ ಶಿವಣ್ಣ ನಟನೆಯಲ್ಲಿನ ವಿವಿಧ ಭಾಗಗಳನ್ನು ಜೊತೆಗೆ ಅದರ ಬಗ್ಗೆ ಅದ್ಭುತ ಮಾತು ಹೇಳಿ. ಸ್ವಲ್ಪ ಚೆನ್ನಾಗಿದ್ರೆ ಸಾಕು ಹೇಗಾದರೂ ಸಿನಿಮಾದಲ್ಲಿ ನಿಲ್ಲಬಹುದೆಂದು ಬರುವ ಎಷ್ಟೊ ಜನರಿಗೆ ಸಿನಿಮಾಗೆ ಕಲಿಕೆ ಮೊದಲು ಮುಖ್ಯ ಎಂದು ಹೇಳುತ್ತಾರೆ.
ಇನ್ನೊಂದು ಕಡೆ ಅವರಿಗೆ ಮೊದಲ ಮಗು ಹುಟ್ಟಿದಾಗ ಶಿವಣ್ಣ ಬೇರೆಲ್ಲೊ ಶೂಟಿಂಗ್ ಲೀ ಇದ್ದದ್ದು ಓಡೋಡಿ ಬಂದು ಮಗುವನ್ನು ಕೈಯಲ್ಲಿ ಹಿಡಿದದ್ದು ಮಗು ತನ್ನ ತನ್ನ ಜವಬ್ದಾರಿಯ ಬಗ್ಗೆ ಅರಿವಾದದ್ದನ್ನು ಕೇಳೋದು ಚೆಂದ
ಶಿವಣ್ಣನ ಡ್ಯಾನ್ಸಿಂಗ್ ಬಗ್ಗೆ ಇವತ್ತಿಗೂ ಅಷ್ಟೇ ಅಭಿಮಾನ. ಅವರ ಕುಣಿತಕ್ಕೆ ಅವರೇ ಸರಿಸಾಟಿ. ಯಶ್ ಪುನೀತ್ ಕೂಡ ತಮ್ಮ ಕುಣಿತಕ್ಕೆ ಶಿವಣ್ಣ ಸ್ಪೂರ್ತಿ ಎಂದು ಹೇಳಿದ್ದಾರೆ ಆದರೆ ಶಿವಣ್ಣ ಅಷ್ಟೇ ವಿನಯವಾಗಿ ತಳ್ಳಿ ಹಾಕುತ್ತ ಪುನೀತ್ ಡ್ಯಾನ್ಸ್ ನನಗೆ ಇಷ್ಟ ಎಂದು ಹೇಳ್ತಾರೆ.
ಶಿವಣ್ಣ ಒಂದು ಹಂತದಲ್ಲಿ ಅಣ್ಣಾವ್ರ ಮನೆ ಬಿಟ್ಟು ಬೇರೆ ಬಂದಾಗ ಅವರು ಎಡವಿದ್ದು ಸ್ಕ್ರಿಪ್ಟ್ ಆಯ್ಕೆಯಲ್ಲಿ ಆ ಅವಧಿಯಲ್ಲಿ ಎಷ್ಟೊ ಸಿನಿಮಾಗಳು ಮಕಾಡೆ ಮಲಗಿ, ಅವರ ಫಿಟ್ನೆಸ್ ಕೂಡ ಹೋಗಿ ಇನ್ನು ಶಿವಣ್ಣಗೆ ಉಳಿಗಾಲವಿಲ್ಲ. ಶಿವಣ್ಣ ಸಿನಿಮಾದಲ್ಲಿ ನಿಂತಿದ್ದು ತಂದೆ ಹೆಸರಿಂದ ಅದೃಷ್ಟಬಲದಿಂದ ಎಂಬ ಟಾಕ್ ಬಂದಾಗ ಅದನ್ನೆಲ್ಲ ಒದ್ದು ಎದ್ದು ಬಂದದ್ದು ಶಿವಣ್ಣ. ಇಂಡಸ್ಟ್ರಿಯೇ ಮಕಾಡೆ ಮಲಗುವ ಸಮಯಕ್ಕೆ ಇಡೀ ಇಂಡಸ್ಟ್ರಿಗೆ ಹಿಟ್ ಕೊಟ್ಟು ಮತ್ತೆ ಎದ್ದೇಳಿಸಿದ್ದು ಶಿವಣ್ಣ. ಓಂ, ಜನುಮದ ಜೋಡಿ, ಎಕೆ 47, ಟಗರು ಇದಕ್ಕೆ ಸಾಕ್ಷಿ.
ಶಿವಣ್ಣ ಭಯಂಕರ ನೇರ ಮನುಷ್ಯ. ಒಳ್ಳೆಯದೋ ಕೆಟ್ಟದೋ ಯಾವ ಮುಚ್ಚು ಮರೆಯಿಲ್ಲ. ಒಂದು ಕಾರ್ಯಕ್ರಮದಲ್ಲಿ ರಾಜ್ ಕುಟುಂಬದ ಬಗ್ಗೆ ಸದಾ ಮಾತಾಡುತ್ತಿದ್ದ ರವಿ ಬೆಳಗೆರೆ ಒಂದೇ ವೇದಿಕೆಲಿ ಸಿಕ್ಕಾಗ “ನಿಮ್ಮ ಏನೇ ಪ್ರಶ್ನೆ ಇದ್ರೂ ನನ್ ಕೇಳಿರಿ , ನಮ್ ಕುಟುಂಬದ ಬಗ್ಗೆ ಅನುಮಾನ ಇದ್ರೆ ನನ್ ಕೇಳ್ರಿ” ಅಂತ ಮುಖಕ್ಕೆ ಹೊಡೆದವರಂತೆ ಮಾತಾಡಿದ್ದು ಶಿವಣ್ಣ.
ಡಬ್ಬಿಂಗ್ ಮೇಲೆ ಗುಡುಗಿ ಆನಂತರ ಜನರೇ ಡಬ್ಬಿಂಗ್ ಬೇಕು ಅನ್ನುವಾಗ ಅದರಿಂದ ಚಿತ್ರರಂಗಕ್ಕೆ ಒಳ್ಳೆಯದಾದರೆ ನಾನ್ಯವ ಲೆಕ್ಕ ಎಂದಿದ್ದು ಅದೇ ಶಿವಣ್ಣ.
ಇಷ್ಟು ಸುದೀರ್ಘ ಜೀವನದಲ್ಲಿ ಸಿನಿಯಾನದಲ್ಲಿ ಶಿವಣ್ಣನ ಬಗ್ಗೆ ಒಂದು ಕಾಂಟ್ರವರ್ಸಿಯಿಲ್ಲ. ಅದು ಶಿವಣ್ಣ.
ಶಿವಣ್ಣನ ಸಿನಿಮಾ ಸುರುವಾದದ್ದು ಆನಂದ್ ಸಿನಿಮಾದಿಂದ. ಅದಕ್ಕೆ ಹಿಡಿದಿದ್ದು ಆರು ತಿಂಗಳ ಸ್ಕ್ರಿಪ್ಟ್. ಆನಂದ್ ಬಂದಿದ್ದೇ ತಡ ಶಿವಣ್ಣರನ್ನು ಹಿಡಿಯಲಸಾಧ್ಯವಾಯ್ತು ಅವರು ಓಡುವ ಕುದುರೆ ಆದ್ರೂ ಮೊದಲ ಸಿನಿಮಾಗಳು ಸೂಪರ್ ಹಿಟ್ಟು ! ಅಲ್ಲಿಗೆ ಚಂದನವನದ ಮೊದಲ ಹ್ಯಾಟ್ರಿಕ್ ಹೀರೋ ! ಅವತ್ತಿಗೂ ಇವತ್ತಿಗೂ ಅದೇ ಓಟ.
ಶಿವಣ್ಣ ಪ್ರಯೋಗದ ಸಿನಿಮಾಕ್ಕಿಳಿದಾಗ ಕೆಲವು ಮಕಾಡೆ ಮಲಗಿವೆ ಹಾಗೇ ಮಲಗಿದ ಕೂಡಲೇ ಫೀನಿಕ್ಸ್ ತರದ ಹಿಟ್ ಸಿನಿಮಾಗಳು ಬಂದಿವೆ. ಶಿವಣ್ಣನ ಧ್ವನಿ ಫಾಸ್ಟು , ಅಭಿನಯ ಬರಲ್ಲ ಎಂದು ಮೂಗು ಮುರಿವವರಿದ್ದಾರೆ. ಶಿವಣ್ಣಗೆ ಅಭಿನಯ ಬಾರದಿದ್ರೂ ಅಭಿನಯಿಸಲು ಸದಾ ಪ್ರಯತ್ನ ಪಡುತ್ತಾರೆ ಎಂದು ಸಿನಿಮಾ ಮಂದಿಗೆ. ಶಿವಣ್ಣ ಒಂದು ಸಲ ಕಮಿಟ್ ಆದ್ರೆ ಮುಗೀತು , ಮೋರಿಯಲ್ಲಿ ಕೂಡ ಇಳಿದು ಅಭಿನಯ ಮಾಡಲು ಹಿಂದೆ ಮುಂದೆ ನೋಡೊಲ್ಲ ಅಂತ ಒಬ್ಬ ನಿರ್ದೇಶಕ ಹೇಳಿದ ಮಾತು ಇನ್ನು ಕಿವಿಯಲ್ಲಿದೆ
ಶಿವಣ್ಣನಿಗೆ ಶಿವಣ್ಣದೇ ಮ್ಯಾನರಿಸಂ ಇನ್ಸ್ ಪೆಕ್ಟರ್ ವಿಕ್ರಂ ,ಗಲಾಟೆ ಅಳಿಯಂದ್ರು ಸಿನಿಮಾದ ಅಭಿನಯ ಆಗಲಿ ಓಂ ಜೋಗಿಯ ಅಭಿನಯ ಆಗಲಿ, ಕಿಲ್ಲಿಂಗ್ ವೀರಪ್ಪನ್ ತಮಸ್ಸು ಆಗಲಿ, ಭೂಮಿ ತಾಯಿ ಚೊಚ್ಚಲ ಮಗ ಹೃದಯ ಹೃದಯ ಚಿಗುರಿದ ಸಿನಿಮಾ ಆಗಲಿ ಹೀಗೆ ಜೋನರಿಗೆ ತಕ್ಕಂತೆ ತಮ್ಮ ಅಭಿನಯ ಫೈನ್ ಟ್ಯೂನ್ ಮಾಡಿಕೊಳ್ತಾ ಯಾರ influence ಕಾಣಿಸಿಕೊಳ್ಳದೇ ತಮ್ಮದೇ ಛಾಪು ಒತ್ತಿದ್ದು ಶಿವಣ್ಣ. ಅದೃಷ್ಟದಿಂದ ಅಪ್ಪನ ಹೆಸರಿಂದ ಅವರು ಸಿನಿಮಾಗೆ ಬಂದಿರಬಹುದು ಆದರೆ ಮೂವತ್ತಾರು ವರುಷಗಳ ನಂತರವೂ ಗೆಲ್ಲುವ ಕುದುರೆ ಆಗಲೂ ಅವರೇ ಕಾರಣ .
ಶಿವಣ್ಣನಿಗೆ ಅರವತ್ತು ಆಯ್ತು ಅಂದ್ರೆ ನಂಬಲಸಾಧ್ಯ. ಅವರು ಪಡೆದುಕೊಂಡಷ್ಟೇ ಕಳೆದು ಕೊಂಡಿದ್ದಾರೆ . ಅಪ್ಪು ಮರಣ ಅವರ ವಯಸ್ಸಿಗೆ ಮುಪ್ಪು ಕೊಟ್ಟಿದೆ. ಇವತ್ತಿಗೂ ಚಿತ್ರರಂಗದ ಕನಸು ಹೊತ್ತು ಬರೋರ ಕೈಲೀ ಶಿವಣ್ಣನಿಗಾಗಿಯೇ ಬರೆದಿಟ್ಟುಕೊಂಡ ಸ್ಕ್ರಿಪ್ಟ್ ಇದೆ. ಹೊಸಬ ಹಳಬ ಯಾರ ಮುಖ ನೋಡದೆ ಸಿನಿಮಾ ಮಾಡುತ್ತ ಹೋದವರು ಶಿವಣ್ಣ . ಫ್ಲಾಫ್ ಹಿಟ್ ಸೈಡಿಗಿಟ್ಟು ಸಿನಿಮಾ ನಂಬಿ ಕೂತ ಎಷ್ಟೊ ಕುಟುಂಬಕ್ಕಾಗಿ ಸಿನಿಮಾ ಮಾಡು ಅಂದ ಅಣ್ಣಾವ್ರ ಮಾತಿನಂತೆ ಸಿನಿಮಾ ಮಾಡುತ್ತಿದ್ದಾರೆ
ಇನ್ನೂ ಏನೋ ಹೇಳಬೇಕನಿಸುವಷ್ಟು ನಮ್ಮ ಶಿವಣ್ಣ.
ಅವರ ಜೀವನ ಪ್ರೀತಿ ಹಾಗೇ ಸದಾ ಕಾಲ ಇರಲಿ. ಶಿವಣ್ಣನಿಗೆ ವಯಸ್ಸೇ ಆಗದಿರಲಿ. ಈಗಷ್ಟೇ ತಮ್ಮ ಮಗಳ ಮೂಲಕ ನಿರ್ಮಾಣಕ್ಕಿಳಿದ ಅವರ ಬ್ಯಾನರ್ ಲೀ ಒಳ್ಳೆ ಸೀರಿಸ್ ಮತ್ತು ಸಿನಿಮಾಗಳು ಮೂಡಿಬರಲಿ.
ಲವ್ ಯೂ ಶಿವಣ್ಣ.
–ಜಯರಾಮಾಚಾರಿ
.