“ಅಣುವಿನಲ್ಲಿ ಸಮಷ್ಠಿಯನ್ನು ಕಟ್ಟಿಕೊಡುವ ಪ್ಯಾರಿ ಪದ್ಯಗಳು”: ಅನುಸೂಯ ಯತೀಶ್

ಕನ್ನಡ ಸಾಹಿತ್ಯ ಕ್ಷೇತ್ರ ಚಲನಶೀಲ ಗುಣವನ್ನು ಹೊಂದಿದ್ದು ಸೃಜನಶೀಲತೆಗೆ ನಿರಂತರವಾಗಿ ತನ್ನನ್ನು ತೆರೆದುಕೊಳ್ಳುತ್ತದೆ. ಇದರಿಂದ ಸಾಹಿತ್ಯ ರಚಿಸುವವರ ಸಂಖ್ಯೆ ಹೇರಳವಾಗುತ್ತಿದೆ. ನವ ನವೀನ ಪ್ರಯೋಗಗಳು ಸಾಹಿತ್ಯಕ್ಷೇತ್ರದಲ್ಲಿ ನಡೆಯುತ್ತಿರುತ್ತವೆ. ಇದು ನಮ್ಮ ಕನ್ನಡ ಭಾಷೆಗೆ ಇರುವ ಗಮ್ಮತ್ತು.

ಅಂತಹುದೇ ಒಂದು ಹೊಸ ಪ್ರಯೋಗಕ್ಕೆ ನಾಂದಿ ಹಾಡಿದವರು ಎ.ಎಸ್. ಮಕಾನದಾರರವರು. ಇವರು ಪ್ಯಾರಿ ಪದ್ಯಗಳು ಎಂಬ ಹನಿಗವನ ಸಂಕಲನವನ್ನು ಸಖಿ‌ ಚೆಲ್ಲಿದ ಕಾವ್ಯಗಂಧ ಎಂಬ ಟ್ಯಾಗ್ ಲೈನ್ ನೊಂದಿಗೆ ಸಾಹಿತ್ಯಕ್ಷೇತ್ರಕ್ಕೆ ಪರಿಚಯಿಸಿದ್ದಾರೆ. ನಮ್ಮ ನಾಡಿನ ಹಿರಿಯ ಹಾಗೂ ಖ್ಯಾತ ಕವಿಗಳಾದ ಬಿ.ಆರ್.ಲಕ್ಷ್ಮಣರಾವ್ ಅವರು ಈ ಪ್ಯಾರಿ ಪದ್ಯ ರಚನೆಗಳು ವಿಶಿಷ್ಟ ರೀತಿಯಲ್ಲಿ ಹೊಸಬಗೆಯಲ್ಲಿ ಎದ್ದು ತೋರುತ್ತವೆ. ಪ್ರಮುಖವಾಗಿ ಉರ್ದು ಶಾಯಿರಿ, ಫರ್ದ್,ದ್ವಿಪದಿ ಮತ್ತು ಗಜಲ್ ಗಳ ಪ್ರಭಾವದಿಂದ ಮೂಡಿಬಂದಿವೆ ಎಂದು ತಮ್ಮ ಮುನ್ನುಡಿಯಲ್ಲಿ ದಾಖಲಿಸುತ್ತಾರೆ.

ವಿಭಿನ್ನ ಶೈಲಿ ಬ್ಯಾರಿ ಪದ್ಯಗಳ ಪ್ರಮುಖ ಆಕರ್ಷಣೆಯಾಗಿದ್ದು, ಓದುಗರಿಗೆ ಹೊಸತನವನ್ನು ಉಣಬಡಿಸುತ್ತವೆ. ಈ ಹನಿಗವನ ಹನಿಯಷ್ಟು ಶಬ್ದಗಳನ್ನು ಹೊಂದಿದ್ದರೂ ಅದು ಹೊತ್ತು ತರುವ ಭಾವ ಮತ್ತು ಸಾರ ಸಾಗರದಷ್ಟಿದೆ. ಈ ಪ್ಯಾರಿ ಪದ್ಯಗಳ ವಿಶೇಷತೆ ಎಂದರೆ ಅಣುವಿನಲ್ಲಿ ಸಮಷ್ಠಿಯನ್ನು ಕಟ್ಟಿಕೊಡುವ ಸ್ವರೂಪವನ್ನು ಹೊಂದಿರುವುದು‌. ಇಂತಹ ರಚನೆ ಕವಿಗೊಂದು ದೊಡ್ಡ ಸವಾಲೇ ಸರಿ. ಅಂತಹ ಸವಾಲಿಗೆ ತನ್ನನ್ನು ಒಡ್ಡಿಕೊಂಡು ದೃಢ ಸಂಕಲ್ಪ ಮತ್ತು ಅನುಭವದೊಂದಿಗೆ ವಿಶೇಷವಾದ ಸೊಗಡನ್ನು ಬೆರೆಸಿ ಓದುಗರ ಮುಂದಿಟ್ಟು ತನ್ನನ್ನು ಪರೀಕ್ಷೆಗೆ ಒಡ್ಡಿಕೊಂಡಿದ್ದಾರೆ.

ಸಾಹಿತ್ಯ ಓದುವ ಅಭಿವೃದ್ಧಿ ಕಡಿಮೆಯಾಗುತ್ತಿರುವ ದಿನಮಾನಗಳಲ್ಲಿ ಇಂತಹ ಚುಟುಕಾದ, ಅರ್ಥವತ್ತಾದ ಭಾವಾಮೃತವು ಸುಂದರ ರೂಪಕ ಮತ್ತು ಪ್ರತಿಮೆಗಳನ್ನು ಬಳಸಿ ಮಿಂಚಿನಂತಹ ಪಂಚಿನೊಂದಿಗೆ ಎಲ್ಲರಿಗೂ ಅರ್ಥವಾಗುವಂತೆ ಬರೆದಿರುವ ಕವಿಯ ನಡೆ ಅಭಿನಂದನಾರ್ಹ.

ಕಡಿಮೆ ಶಬ್ದಗಳಲ್ಲಿ ಕಲ್ಪನೆಯನ್ನು ಕಟ್ಟಿಕೊಡುವುದು, ಅನುಭವವನ್ನು ಅನುಸಂಧಾನಿಸುವುದು, ಭಾವಾಭಿವ್ಯಕ್ತಿಯನ್ನು ತುಂಬುವುದು ಒಬ್ಬ ಸೃಜನಶೀಲ ಮತ್ತು ಸಂವೇದನೆಗಳಿಗೆ ತೆರೆದುಕೊಂಡ ವ್ಯಕ್ತಿಗಳಿಂದ ಮಾತ್ರ ಸಾಧ್ಯ ಅಂತಹ ಪ್ರಯತ್ನ ಇವರದಾಗಿದೆ.

ಸಂಕಲನದ ಹೆಸರೇ ಸೂಚಿಸುವಂತೆ ಪ್ಯಾರಿ ಪದ್ಯಗಳಾಗಿದ್ದು ಪ್ರೀತಿಯೇ ಹನಿಗವನಗಳ ಮೂಲವಾಗಿದೆ.
ಪ್ರೀತಿ ಇಲ್ಲದ ಮೇಲೆ
ಹೂ ಅರಳಿತು ಹೇಗೆ
ಮೋಡ ಕಟ್ಟೀತು ಹೇಗೆ ?
ಎಂಬ ಜಿ.ಎಸ್. ಎಸ್ ಅವರ ಕವಿತೆಯ ಸಾಲುಗಳು ಪ್ರೀತಿಯೇ ಬದುಕಿನ ಜೀವಾಳ ಎಂದು ಸಾರಿ ಹೇಳುತ್ತವೆ. ಸಖಿ ಚೆಲ್ಲಿದಾ ಗಾಂಧಿ ಹನಿಗವನಗಳಾಗಿ ಸಂಕಲನದ ತುಂಬಾ ವಿರಾಜಮಾನವಾಗಿವೆ. ಅಂತರಂಗದಲ್ಲಿರುವ ಸಖಿಯ ದನಿಗಳು ಪದ್ಯಗಳಾಗಿ ರೂಪ ತಾಳಿವೆ. ಕವಿ ಮತ್ತು ಪ್ಯಾರಿಯ ನಡುವಿನ ಪಿಸುಮಾತುಗಳು ವಿವಿಧ ಭಾವಗಳಲ್ಲಿ ಹರಳುಗಟ್ಟಿವೆ. ಈ ಪದ್ಯಗಳಲ್ಲಿ ಕವಿತೆಯ ಭಾವತೀವ್ರತೆಯನ್ನು, ಗಜಲ್ ನಂತಹ ಮೃದುಮಧುರ ಮೋಹಕತೆಯನ್ನು ಕಾಣಬಹುದು.

ಇಲ್ಲಿ ಕವಿಯು ಉತ್ಕಟ ಭಾವದಲ್ಲಿ ಸಖಿ, ಸಾಕಿ, ಮೆಹಬೂಬ, ಆತ್ಮಸಖಿ, ಲೇ ಇವಳೇ, ದಿಲ್ ರುಬಾ, ಹೂವಿ, ಸಜನಿಯನ್ನು ಧ್ಯಾನಿಸಿದರ ಫಲಶ್ರುತಿಯೇ ಪ್ಯಾರಿ ಪದ್ಯಗಳು. ಸಮಯಪ್ರಜ್ಞೆ, ಹಾಸ್ಯಪ್ರಜ್ಞೆ, ಅಭಿವ್ಯಕ್ತಿ ಪ್ರಜ್ಞೆಗಳು ಇದ್ದಾಗ ಮಾತ್ರ ಬರಹ ಓದುಗರನ್ನು ತಟ್ಟಿ ತೃಪ್ತಭಾವ ನೀಡುತ್ತದೆ. ಅಂತಹ ಜಾಗೃತ ಪ್ರಜ್ಞೆ ಇರುವುದು ಈ ಕವಿಯ ಬರಹಗಳಿಂದ ಸಾಬೀತಾಗುತ್ತದೆ. ಪದ್ಯಗಳಲ್ಲಿ ಶಬ್ದ ಲಾಲಿತ್ಯವಿದೆ, ಹಾಗೆಯೆ ಶಬ್ದ ಚಮತ್ಕಾರಿಕೆಯು ಇದೆ. ವಿಭಿನ್ನ ಹೊಳಹುಗಳನ್ನು ಸೃಷ್ಟಿಸುತ್ತಾ, ಕಾವ್ಯದ ಒಳನೋಟವನ್ನು, ಅಂತಃಸತ್ವವನ್ನು ಸೊಗಸಾಗಿ ಚಿತ್ರಿಸಿದ್ದಾರೆ. ಭಾವಗಂಗೆ ಸುಲಲಿತವಾಗಿ ಹರಿದು ಪದ್ಯಗಳ ಸೊಗಸನ್ನು ಹೆಚ್ಚಿಸಿದೆ. ಉತ್ಸಾಹ, ಉಲ್ಲಾಸ, ತಾಜಾತನದಿಂದ ಮೂಡಿ ಬಂದಿದ್ದು ಶಬ್ದ ದಾರಿದ್ಯ ಎಲ್ಲೂ ಗೋಚರಿಸದು.

ಕಾವ್ಯ ಕನ್ನಿಕೆಯನ್ನು ಅಧಮ್ಯವಾಗಿ ಪ್ರೀತಿಸುವ ಕವಿ ಆಕೆಯ ಸೆಳೆತಕ್ಕೊಳಗಾಗಿ, ಮೋಹ ಪರವಶನಾಗಿ, ಕಾವ್ಯಲೋಕದಲ್ಲಿ ಸರಾಗವಾಗಿ ಈಜುತ್ತಾ, ಸಂವೇದನೆಯನ್ನು ಸೃಚಿಸಿ ಕಾವ್ಯ ಕಟ್ಟುತ್ತಾ ಸಾಗುವ ಪರಿ ಅನನ್ಯವಾಗಿದೆ. ಭಾವ ಚಿಂತನೆಗಳನ್ನು ಸಮ್ಮಿಲನಗೊಳಿಸಿ, ಸೃಷ್ಟಿ ಲಯ ಮಾಧುರ್ಯದೊಂದಿಗೆ ಅನುಭಾವಿಕ ನೆಲೆಯಲ್ಲಿ ಬೌದ್ಧಿಕತೆಯ ಜೊತೆ ಜೊತೆಗೆ ಭಾವನಾತ್ಮಕತೆಯನ್ನು ಬೆರೆಸಿ ಬರೆದಿದ್ದಾರೆ‌. ಮಕಾನದಾರ ಅವರು ತಮ್ಮ ಬರಹಗಳಲ್ಲಿ ವರ್ತಮಾನದ ವ್ಯವಸ್ಥೆಯನ್ನು ವ್ಯಂಗ್ಯ ಭಾವದಲ್ಲಿ ಪ್ರತಿಭಟಿಸುತ್ತಾ ತಮ್ಮ ಅಂತರಂಗದೊಳಗಿನ ಕಿಚ್ಚಿಗೆ ಚಿಂತನೆಯ ಮುಲಾಮು ಹಚ್ಚಿ ಮನದೊಳಗಣ ಮೌನವನ್ನು ಮಾತಾಗಿಸಿ ಹನಿಹನಿಯಾದ ಸಾಹಿತ್ಯ ಕೃಷಿ ಮಾಡಿದ್ದಾರೆ. ಇಲ್ಲಿ ಎದೆಯೊಳಗಿನ ಅಗ್ನಿಕುಂಡಕ್ಕೆ ಸಾಂತ್ವನದ ತಂಪೆರೆದಿದ್ದಾರೆ.

ಕವಿತೆಯೊಂದರಲ್ಲಿ ತುಂಬಬಹುದಾದ ಶಬ್ದಾರ್ಥ, ಭಾವಾರ್ಥವನ್ನು ಪರಿಚಿತ ಪದಗಳಲ್ಲಿ ಕಟ್ಟಿಕೊಡುವ ಮೂಲಕ ಓದುಗರನ್ನು ತಲುಪಲು ನೆರವಾಗುತ್ತದೆ‌ ಕಾವ್ಯ ಓದುಗರ ಹೃದಯವನ್ನು ತೊಟ್ಟಿಲು ಹಸಿರಾಗಿರಬೇಕು, ಉಸಿರಾಡುತ್ತಿರಬೇಕು.ಆಗ ಮಾತ್ರ ಕಾವ್ಯ ಜೀವಂತಿಕೆಯನ್ನು ಪ್ರತಿನಿಧಿಸುತ್ತದೆ. ವಾಸ್ತವಿಕತೆಗೆ ಹತ್ತಿರವಾಗಿ ಸಮಾಜಮುಖಿಯಾಗಿ ಇದ್ದಾಗ ಅದು ಮತ್ತಷ್ಟು ಆಪ್ತವಾಗಿ ಸಾರ್ವಕಾಲಿಕ ಪ್ರಸ್ತುತತೆಯನ್ನು ಪ್ರತಿನಿಧಿಸುತ್ತದೆ. ಅಂತಹ ಕಾಲಾತೀತ ಕಾವ್ಯಾಭಿವ್ಯಕ್ತಿಯನ್ನು ಇಲ್ಲಿ ಕಾಣಬಹುದು. ಇಲ್ಲಿ ಪ್ರೀತಿಯ ಹೊನಲು ಹರಿದು, ಓದುಗನ ಮನಸು ಪ್ರೇಮ ಸಾಗರದಲ್ಲಿ ಈಜುತ್ತದೆ. ಎದೆಯೊಳಗಿನ ಹತ್ತಾರು ನೋವುಗಳಿಗೆ ಒಲವಿನ ಮಧು ಸುರಿದು ಮುಲಾಮು ಹಚ್ಚುವ ಆತ್ಮಸಖಿ ಕವಿಯ ಕಾವ್ಯ ಪ್ರೀತಿಯ ಪ್ರತೀಕವಾಗಿದ್ದಾಳೆ.

ಇವರ ಪ್ಯಾರಿ ಪದ್ಯಗಳಲ್ಲಿ ಪ್ರೀತಿ ಪ್ರೇಮವಿದೆ, ಶೋಷಣೆಯವಿರುದ್ಧ ತಣ್ಣಗಿನ ಪ್ರತಿರೋಧನೆ , ಬುದ್ಧನ ಧ್ಯಾನವಿದೆ, ನಲ್ಲೆಯ ವರ್ಣನೆಯಿದೆ, ಜಾತಿ ಜಾಡ್ಯದ ವಿಡಂಬನೆಯಿದೆ, ಬೆವರಿನ ಹನಿಯಿದೆ, ಸಾಮರಸ್ಯದ ನಡೆಯಿದೆ, ಮುಂಗುರುಳ ಲಾಸ್ಯವಿದೆ, ವಿರಹದ ಬೇಗುದಿಯಿದೆ, ಭಾವಗಳ ಪರಾಕಾಷ್ಠೆಯಿದೆ, ವಿರಹಿಯ ಹಲುಬುವಿಕೆಯಿದೆ, ನೋವುಂಡ ಎದೆಗೆ ಸಾಂತ್ವನವಿದೆ, ಸೂಫಿ ಸಂತರ ನಡೆಯಿದೆ, ನಿಶೆಯಲ್ಲಿ ಮುಳುಗಿರುವ ವರೆಗೆ ಬೆಳಕಿನ ನಿಚ್ಚಣಿಕೆಯಿದೆ, ಪ್ರೇಮಿಯ ಕೊಳಲಗಾನವಿದೆ, ಸವಿ ಸಿಹಿ ನೆನಪುಗಳ ರಸಗವಳವಿದೆ, ಅಮಲೇರಿದ ಧರ್ಮದ ವ್ಯಂಗವಿದೆ, ವಾಸ್ತವಿಕ ವಿದ್ಯಮಾನಗಳ ಗಹನವಾದ ಚರ್ಚೆಯಿದೆ. ಒಟ್ಟಾರೆ ಓದುಗನಿಗೆ ಇದೊಂದು ವೈವಿಧ್ಯಮಯ ಭಾವ ಬಂಧುರವನ್ನು ಉಣಬಡಿಸುವ ರಸಪಾಕದಂತಿದೆ.

ಎಲ್ಲರಿಗೂ ಆಪ್ಯಾಯಮಾನವಾಗುವಂತೆ ಪ್ರತಿಮಗಳು ಪ್ಯಾರಿ ಪದ್ಯಗಳ ಪ್ರಮುಖ ಆಕರ್ಷಣೆಯಾಗಿವೆ. ಭಾನು, ಸೂರ್ಯ, ಬೆಳಕು, ಕತ್ತಲು, ಪ್ರೀತಿ, ಮಲ್ಲಿಗೆ ಜೊತೆಗೆ ರೂಪಕಗಳಾಗಿ ಮರುಭೂಮಿ ಯ ಎದೆ, ತುಪಾಕಿ ಖಡ್ಗಗಳು, ಬಿರುಸು ಬಾಣ,ಚೂಪಾದ ಹೃದಯ, ಕಡಗೋಲು, ಬೀಸುವ ಕಲ್ಲು, ಬುದ್ಧನ ತೊಟ್ಟಿಲು, ಮೆದು ಬೊಗಸೆ, ಕಡು ಮೌನ, ಸುಟ್ಟುಕೊಂಡ ಬದುಕು, ಮಾಗಿದ ಹಣ್ಣು, ಕೇದಿಗೆಯ ಬನ, ಮುಷ್ಟಿ ಬೆಳಕು, ಬೆವರ ಗಂಧ, ಗಂಧರ್ವ ಲೋಕ, ದಿಕ್ಕೇಡಿ ಸುಳ್ಳು, ನಿಸರ್ಗದ ಕಾರ್ಖಾನೆ, ರಂಧ್ರ ಬಿದ್ದ ಹೃದಯ, ಗುಮ್ಮಟದ ಪ್ರತಿಧ್ವನಿ, ಎದೆಯ ತಮಟೆ, ಬೆನ್ನ ನಗಾರಿ, ಹಣದ ಥೈಲಿ, ಶವದ ಪೆಟ್ಟಿಗೆ, ಬಿಕನಾಸಿ ತಕ್ಕಡಿ, ಅಂತರಂಗದ ತಂತುಗಳು, ಬಾಡಿದ ಹೃದಯ, ಕಡುಗೆಂಪು ಗುಲಾಬಿ ಮುಂತಾದ ವಿಶಿಷ್ಟ ರೂಪಕಗಳು ಪದ್ಯಗಳ ಸೌಂದರ್ಯವನ್ನು ಸಾಕಷ್ಟು ಸಾಣೆ ಹಿಡಿದಿವೆಯಾದರೂ ಇಲ್ಲೇ ಕವಿಯು ಭಾವಾಭಿವ್ಯಕ್ತಿಯನ್ನು ಪ್ರಧಾನವಾಗಿ ಪರಿಗಣಿಸಿ ಕಾವ್ಯ ಹೆಣೆದಿರುವುದು ಓದುಗನ ಮನದ ಬಿತ್ತಿಯಲ್ಲಿ ಅಚ್ಚಳಿಯದೆ ಉಳಿಯುವ ಅಚ್ಚೆಗಳಂತೆ ಭಾಸವಾಗುತ್ತವೆ.

ಡಾ. ಎಚ್. ಎಸ್. ಸತ್ಯನಾರಾಯಣ ತಮ್ಮ ಆಶಯ ನುಡಿಯಲ್ಲಿ
ಹೊಸತನವೂ ಪ್ಯಾರಿ ಪದ್ಯಗಳ ಬಹುಮುಖ್ಯ ಕಾವ್ಯ ಲಕ್ಷಣವಾಗಿದೆ.
ಪ್ಯಾರಿ ಪದ್ಯಗಳಿಗೆ ಅಯಸ್ಕಾಂತೀಯ ಗುಣವಿದ್ದು ಪ್ರತಿ ಪದ್ಯದಲ್ಲಿಯೂ ತಾಜಾತನ, ಲವಲವಿಕೆ, ಜೀವನೋತ್ಸಾಹ ಪುಟಿಯುತ್ತವೆ. ಇವು ಈ ಪದ್ಯಗಳನ್ನು ಪ್ರೀತಿಯಿಂದ ಓದಲು ಪ್ರೇರಕ ಶಕ್ತಿಯಾಗಿವೆ. ಎಂದು ಪದ್ಯಗಳ ಗುಣಲಕ್ಷಣಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎಂಬ ಉಕ್ತಿಯಂತೆ ಚಿತ್ರ ಕಲಾವಿದರಾದ ವಿಜಯ ಕಿರೇಸೂರ ಅವರ ಚಿತ್ರಗಳು ಮಕಾನದಾರ ಅವರ ಪ್ಯಾರಿ ಪದ್ಯಗಳಲ್ಲಿ ತುಂಬಾ ಅರ್ಥಪೂರ್ಣವಾದ ಮತ್ತು ಆಕರ್ಷಕವಾದ ರೂಪದಲ್ಲಿ ಜೀವತಳೆದಿದ್ದು ಪದ್ಯಗಳ ಭಾವವನ್ನು ಸುಲಭವಾಗಿ ಓದುಗನಿಗೆ ತಲುಪಿಸುತ್ತವೆ. ಈ ಪ್ಯಾರಿ ಪದ್ಯಗಳು ಎಲ್ಲರ ಪ್ಯಾರ್ ಗಳಿಸುವುದರಲ್ಲಿ ಸಂಶಯವಿಲ್ಲ.

ಕವಿಯು ಪ್ರೀತಿಯನ್ನು ಕಟ್ಟಿಕೊಡುವ ಭಾವದೊನಲು, ಭಾಷಾಬಳಕೆ, ಬಂಧಿಸಿದ ಅಂದ ಚೆಂದಗಳು ಓದುಗರ ಮನಸಿನಲ್ಲಿ ನಿನಾದ ಸೃಷ್ಟಿಸುತ್ತವೆ. ವ್ಯವಸ್ಥೆ ಆಚಾರ,ವಿಚಾರಗಳ ಬಗೆಗಿನ ಆಕ್ರೋಶದ ದನಿಯು ಕವಿತೆಗಳಲ್ಲಿ ಸಂವಾದ ನಡೆಸುತ್ತವೆ. ಕಾಠಿಣ್ಯಪೂರ್ಣವಾದ ಶಬ್ದಗಳು ಮೊನಚಾಗಿ ಮೂಡಿ ಬಂದಿದ್ದು, ಇವರಿಗೆ ಲೇಖನಿಯು ಪ್ರಬಲ ಆಯುಧವೆಂದು ಸಾಬೀತುಪಡಿಸುತ್ತದೆ.

ಸುಮಧುರವಾದ ಲಯ ಮಾಧುರ್ಯದೊಂದಿಗೆ ಮನಕ್ಕೆ ಮುದ ನೀಡುವ ನಿಟ್ಟಿನಲ್ಲಿ‌ ಈ ಪದ್ಯಗಳು ಜನರಿಗೆ ತುಂಬಾ ಆಪ್ತವಾಗುತ್ತವೆ. ಕ್ರಿಯಾಶೀಲ ದಾರಿಯಲ್ಲಿ ರೂಪಗೊಂಡ ಅನುಭವಜನ್ಯ ಪದ್ಯಗಳು ಓದುಗರಿಗೆ ಚೇತೋಹಾರಿಯಾಗಿವೆ.

ಒಲೆಯಲ್ಲಿ ಸುಟ್ಟು, ಬೆಂಕಿಯಲ್ಲಿ ಬೇಯಿಸಿ, ಬಿಸಿಲಲ್ಲಿ ಬೆಂದು, ಸುಟ್ಟು ಬೂದಿಯಾದರೂ ಪ್ರೇಯಸಿಯ ಕನವರಿಕೆ
ಬಿಡಲಾರೆ

ಎನ್ನುವ ಹುಚ್ಚು ಪ್ರೇಮಿಯ ಹಲುಬುವಿಕೆ ಪ್ರತಿ ಪುಟವನ್ನು ಪದ್ಯವಾಗಿ ಕಾಡುತ್ತದೆ ಎಂದು ಬೆನ್ನುಡಿಯಲ್ಲಿ ಕವಯತ್ರಿ ಎಚ್ ಎನ್ ಆರತಿರವರ ಮೌಲ್ಯಯುತವಾದ ನುಡಿಯು ಕವಿಗಳಾದ ಮಕಾನದಾರ ಅವರ ಕಾವ್ಯಪ್ರೀತಿ ಮತ್ತೊಂದಿನ ಪ್ರೇಮ ಸಂವಾದದ ಭಾವದೊಲುಮೆಯನ್ನು ಎತ್ತಿಹಿಡಿಯುತ್ತದೆ.

ಮಕಾನದಾರ ಅವರಿಗೆ ಉರ್ದು ಶಬ್ದ ಭಂಡಾರದ ಅರಿವಿದ್ದು ಹೇರಳವಾಗಿ ಸಂದರ್ಭೋಚಿತವಾಗಿ ತಮ್ಮ ಎದೆಯ ಭಾಷೆಯನ್ನು ತಮ್ಮ ಕಾವ್ಯಗಳಲ್ಲಿ ಸುಲಲಿತವಾಗಿ ಅರ್ಥ ಮತ್ತು ಭಾವಕ್ಕೆ ಎಲ್ಲೂ ಕುತ್ತಾಗದಂತೆ ಬಳಸಿರುವ ಜೊತೆಗೆ ಪಾರಿಭಾಷಿಕ ಶಬ್ದಗಳಿಗೆ ಕನ್ನಡ ಶಬ್ದವನ್ನು ಒದಗಿಸುವ ಮೂಲಕ ಓದುಗರಿಗೆ ಗೊಂದಲವಾಗಿ ನೀರಸ ಆಗದಂತೆ ಎಚ್ಚರಿಕೆ ವಹಿಸಿದ್ದಾರೆ. ಆ ಮೂಲಕ ಓದುಗರಿಗೆ ಒಂದಷ್ಟು ಉರ್ದು ಪದಗಳ ಪರಿಚಯವಾಗುತ್ತದೆ. ಪ್ರಮುಖವಾಗಿ ಮಾಷೂಕ – ಪ್ರಿಯೆ,ಮಾಷೂಕ್- ಪ್ರಿಯಕರ, ಮೆಹಬೂಬಾ- ನಲ್ಲೆ, ಮೊಹಬ್ಬತ್- ಪ್ರೇಮ, ಸಂದಲ್ -ಗಂಧ, ಸಜನಿ- ಪ್ರಿಯತಮೆ, ಥೈಲಿ- ಚೀಲ, ಜನಾಜ -ಶವಯಾತ್ರೆ, ಚಮ್ಲಾ- ಭಿಕ್ಷಾಪಾತ್ರೆ, ಕಬರಸ್ತಾನ -ಸ್ಮಶಾನ, ಕಬರ್- ಸಮಾಧಿ, ಇಬಾದತ್- ಆರಾಧನೆ, ಖುರ್ಬಾನಿ -ತ್ಯಾಗ, ಗಲೀಪ್- ಹೂವಿನ ಹೊದಿಕೆ, ಝಹರ್- ವಿಷ, ದಿವಾನಿ- ಅಭಿಮಾನಿ, ದಿಲ್ ದರ್ದ್- ಹೃದಯದ ನೋವು, ದುಕಾನ್- ಅಂಗಡಿ, ದುವಾ- ಪ್ರಾರ್ಥನೆ, ಶಮ- ದೀಪ, ಚದ್ದರ್- ಹೊದಿಕೆ ಮುಂತಾದ ಪದಗಳು ಹೆಚ್ಚು ಗಮನ ಸೆಳೆಯುತ್ತವೆ.

ಇವರ ಕಾವ್ಯದ ಕೆಲವು ಸಾಲುಗಳು ಹೀಗಿವೆ

“ಬುದ್ಧ
ನೀನಿದ್ದರೂ
ಯಾಕೆ ಯುದ್ಧ”

ಈ ಒಂದು ಹನಿಗೆ ಬಹುಶಃ ಜಗತ್ತಿನ ಯಾರೊಬ್ಬರಿಂದಲೂ ಉತ್ತರಿಸಲು ಆಗದು. ಬುದ್ಧ ಇಂದು ಎಲ್ಲರೊಳಗಿದ್ದಾನೆ. ಕಾವ್ಯವಾಗಿ, ಕಥೆಯಾಗಿ, ದೇವರಾಗಿ ಆದರೆ, ಅವನಲ್ಲಿರುವ ಶಾಂತತೆ ಯಾರಿಗೂ ದಕ್ಕಿಲ್ಲ‌. ಅದೆಲ್ಲ ಕೇವಲ ಪುಸ್ತಕಕ್ಕೆ ಸೀಮಿತವಾಗಿ, ಮಸ್ತಕದ ತುಂಬಾ ದ್ವೇಷ, ಅಸೂಯೆ, ಕ್ರೌರ್ಯ, ರಕ್ತಪಾತಗಳು ತಾಂಡವವಾಡುತ್ತಾ ಜನರು ಪ್ರೀತಿ, ಪ್ರೇಮ, ಸ್ನೇಹ, ಸೌಹಾರ್ದತೆಯನ್ನು ಮರೆತು ವ್ಯಾಗ್ರ ನಂತೆ ವರ್ತಿಸುತ್ತಿದ್ದಾರೆ ಎಂಬುದನ್ನು ನಾಲ್ಕು ಪದಗಳಲ್ಲಿ ಸಶಕ್ತವಾಗಿ ಕಟ್ಟಿರುವ ಕವಿಯ ಕೌಶಲ್ಯ ಮೆಚ್ಚುವಂತದ್ದು.

“ಕಿರುಬೆರಳು ತಾಕಿಸು
ಪ್ರೀತಿಯ ಗೋವರ್ಧನಗಿರಿ
ಎತ್ತ ಬಲ್ಲೆ”

ಇದು ಪ್ರೀತಿಗಿರುವ ಅದಮ್ಯ ಶಕ್ತಿಯನ್ನು ರುಜುವಾತು ಮಾಡುತ್ತದೆ. ಅಂದರೆ ಪ್ರೀತಿಗೆ ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಪರಿಯನ್ನು ಕವಿಯು ರಾಧಾಕೃಷ್ಣರ ಅನನ್ಯ ಪ್ರೀತಿಯ ಪ್ರತಿರೂಪವಾಗಿ ಪೌರಾಣಿಕ ಪ್ರತಿಮೆಯ ಮೂಲಕ ನಿರೂಪಿಸಿದ್ದಾರೆ.
ಪ್ರೇಮಿಗೆ ಪ್ರಿಯತಮೆಯ ಕಿರುಬೆರಳ ಸ್ಪರ್ಶವು ಗೋವರ್ಧನಗಿರಿಯನ್ನು ಎತ್ತಲು ಪ್ರೋತ್ಸಾಹ ನೀಡಿ ಶಕ್ತಿಯನ್ನು ತುಂಬುತ್ತದೆ. ಅಂತಹ ಪ್ರೇಮ ಸಾಕ್ಷಾತ್ಕಾರವನ್ನು ಇಲ್ಲಿ ಕಾಣಬಹುದು.

“ಇರಿಯಲು ಬಂದ ಚೂರಿಗೆ ಮುತ್ತಿಕ್ಕಿದೆ
ಮುತ್ತಿನ ಮತ್ತಿನಲ್ಲಿ ಚೂರಿ ಮೆತ್ತಗಾಯಿತು”

ಚೂರಿ ಕೆಡುಕಿನ ಮೂಲ ಮುತ್ತು ಪ್ರೀತಿಯ ಮೂಲ.

ಇಲ್ಲಿ ಮನುಜ ಮತ್ತೊಬ್ಬರಿಗೆ ಕೇಡು ಬಯಸಿದರೂ ಎದುರಾಳಿಯ ಪ್ರೀತಿಯ ಮುಂದೆ ಸೋತು ಶರಣಾಗಿ ಸೋಲು ಒಪ್ಪಿಕೊಳ್ಳುತ್ತಾನೆ. ಕ್ರೌರ್ಯವನ್ನು ಹಿಂಸೆಯನ್ನು ಮೆತ್ತಗಾಗಿಸುವ ತಾಕತ್ತು ಆ ಒಲವಿಗಿದೆ ಎಂದು ಕವಿ ರುಜುವಾತುಪಡಿಸಿದ್ದಾರೆ.

“ಧರ್ಮ, ಧರ್ಮ ಗುರುವಿನ
ಉಪದೇಶ ಸಾಕು
ರಟ್ಟೆಯ ಬಲ
ರೊಟ್ಟಿಯ ರುಚಿ ಕುರಿತು
ಉಪದೇಶ ಬೇಕು”

ಹಸಿದೊಡಲಿಗೆ ಯಾವ ಧರ್ಮ, ತತ್ವ, ಸಿದ್ಧಾಂತಗಳಿಂದಲೂ ತಣ್ಣಗಾಗಿಸಲು ಸಾಧ್ಯವಾಗುವುದಿಲ್ಲ. ಸಂಸಾರ ಹೊಟ್ಟೆಗೆ ಮೊದಲು ಬೇಕಿರುವುದು ತುತ್ತು. ಅದರ ಬಗ್ಗೆ ಉಪದೇಶ ನೀಡಿ, ಸಂಪಾದಿಸುವ ದಾರಿ ತೋರಿಸಿ, ರೊಟ್ಟಿಯ ರುಚಿಯನ್ನು ನಾಲಿಗೆಗೆ ತೋರಿಸಿ, ನಮ್ಮ ರಟ್ಟೆಯ ಬಲ ಅಂದರೆ ನಮ್ಮೊಳಗಿನ ದುಡಿಯುವ ಅದಮ್ಯ ಶಕ್ತಿಯನ್ನು ಪ್ರೇರೇಪಿಸಿ ಎನ್ನುತ್ತಾರೆ ಕವಿಗಳು. ಇಲ್ಲಿ ಬಸವಣ್ಣನವರ ಕಾಯಕ ತತ್ವ ಕಾಯಕವೇ ಕೈಲಾಸ ಎಂಬುದಕ್ಕೆ ಪುಷ್ಟಿ ನೀಡುವ ಸಾಲುಗಳಿವು.

“ಗೋರಿಯ ಮೇಲೆ ಹೂವಂದು ಅರಳಿದೆ
ಜಾತಿ ಧರ್ಮದ ಲೇಬಲ್ ನೋಡದೆಯೇ ದುಂಬಿ ಅಲ್ಲಿ ಬಂದಿದೆ”

ನಮ್ಮ ಸಮಾಜದ ಜಾತ್ಯಾಂಧಕಾರವನ್ನು ಕವಿಗಳು ತಮ್ಮ ಬರಹದ ಮೂಲಕ ಕಟುವಾಗಿ ಟೀಕಿಸಿದ್ದಾರೆ. ಸರ್ವ ರೀತಿಯಲ್ಲೂ ಜಾತಿಯ ಮೇಲಾಟಗಳು ಪ್ರಬಲವಾಗಿ, ಮಾನವೀಯತೆಗಿಂತ ಜಾತಿಗಳೆ ಮೇಲುಗೈ ಸಾಧಿಸುವ ಮೂಲಕ ಮನುಷ್ಯತ್ವ ಮಣ್ಣಾಗಿದೆ ಎನ್ನುವ ಭಾವದಲ್ಲಿ ಪದ್ಯದ ಸಾಲುಗಳು ಓದುಗರಿಗೆ ಎದುರಾಗುತ್ತವೆ. ಸತ್ತಮೇಲೆ ಅರಳಿರುವ ಹೂವಿನ ರಸ ಹೀರಲು ಬರುವ ದುಂಬಿಯು ಸತ್ತಿರುವವನು ಯಾವ ಜಾತಿಯವನು ಎಂದು ದೃಢಪಡಿಸಿಕೊಂಡು ಬರುತ್ತದೆ ಎನ್ನುವಲ್ಲಿ, ಸಾವಿನಲ್ಲೂ ಸಾವಿನ ನಂತರದಲ್ಲಿ ಅವರ ಜಾತಿಯ ಅಂಧತ್ವ ಅಳಿಸುವುದಿಲ್ಲ ಎಂಬ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

“ಪ್ರೇಮಿ ಸತ್ತರೆ
ಗೋರಿಯಲ್ಲಿ ಹೂಳುವಿರಿ
ಪ್ರೀತಿ ಸತ್ತರೆ ಹೂಳುವುದೆಲ್ಲಿ”

ಪ್ರೇಮ ಎಂಬುದು ಜೀವಕಾರುಣ್ಯದ ಸುಮಧುರ ಭಾವ. ಪ್ರೇಮಿಗಳನ್ನು ಅವರ ಪ್ರೇಮವನ್ನು ಒಪ್ಪಿಕೊಂಡು ಪ್ರೋತ್ಸಾಹಿಸುವ ಮಟ್ಟಿಗೆ ನಮ್ಮ ಸಮಾಜ ಇನ್ನೂ ಪ್ರಬುದ್ಧವಾಗಿ ತೆರೆದುಕೊಂಡಿಲ್ಲ. ಜಾತಿ, ಧರ್ಮ, ಆಸ್ತಿ, ಅಂತಸ್ತು, ಅಧಿಕಾರ, ಪ್ರತಿಷ್ಠೆಗಳ ಚಕ್ರವ್ಯೂಹದೊಳಗೆ ಸಿಲುಕಿ ನರಳುತ್ತಿವೆ. ಪ್ರೇಮಿಗಳನ್ನು ಅಗಲಿಸುವಿರಿ. ಅವರು ಸತ್ತರೆ ಗೋರಿಯಲ್ಲಿ ಹೂಳುವಿರಿ. ಅದು ದೈಹಿಕವಾದದ್ದು ಆದರೆ ಪ್ರೀತಿಯೆಂಬುದು ಮಾನಸಿಕವಾದದ್ದು, ಭಾವನಾತ್ಮಕವಾದುದು‌. ಪ್ರೀತಿ ವಿಫಲವಾದ ವ್ಯಕ್ತಿ ಹೆಣಕ್ಕೆ ಸಮಾನ. ಆದರೆ ಅವನನ್ನು ಹೂಳಲು ಸಾಧ್ಯವಿಲ್ಲ. ಹಾಗಾದರೆ ಅವನ ಪ್ರೀತಿ ಕೊಂದು ಅವನನ್ನು ಜೀವಂತ ಶವವಾಗಿಸಬೇಡಿ ಎಂಬ ಕಳಕಳಿ ಕವಿಯದಾಗಿದೆ‌.

“ಅವಳ ಪ್ರಸನ್ನತೆಗೆ ಬೇಡುವುದನ್ನು ಬಿಟ್ಟೆ
ನನ್ನದೆಲ್ಲವನ್ನೂ ಕೊಟ್ಟೆ
ಖಾಲಿಯಾಗುತ್ತಿಲ್ಲ ಪಕೀರನ ಜೋಳಿಗೆ”

ಈ ಕವಿತೆ ನಾವು ಖುಷಿಯನ್ನು ಹಂಚಿದಷ್ಟು ಅದು ದ್ವಿಗುಣವಾಗುತ್ತದೆ ಎಂಬುದನ್ನು ಸಾಕ್ಷೀಕರಿಸುತ್ತದೆ. ಚಾಂದಿನಿಯ ಖುಷಿಗೆ ಎಲ್ಲವನ್ನು ಪಕೀರ ನೀಡಿದ್ದಾನೆ. ಆದರೂ ಅವನ ಜೋಡಿಗೆ ಖಾಲಿಯಾಗುವುದಿಲ್ಲ ಎಂದಿದ್ದಾರೆ. ಇದರಿಂದ ನಾವು ತಿಳಿಯುವ ಪಾಠವೆಂದರೆ ಎಂದಿಗೂ ಖುಷಿ, ಪ್ರೀತಿ,ಪ್ರೇಮ, ವಾತ್ಸಲ್ಯ, ಸ್ನೇಹವು ನೀಡಿದಷ್ಟು ಅಕ್ಷಯವಾಗುತ್ತದೆ ಎಂದು.

ಇವರ ಬರಹಗಳಲ್ಲಿ ಪ್ರೀತಿಯ ತುಡಿತ, ವಿರಹದ ಬಡಿತ, ಸೌಹಾರ್ದತೆಯ ಮಿಡಿತವಿದೆ. ಕವಿಯ ಒಂದೊಂದು ಪ್ರೀತಿಯ ಹನಿಯು ಓದುಗರನ್ನು ಪ್ರೇಮ ಸಾಗರದಲ್ಲಿ ಮುಳುಗಿಸಿ ನನೆಸುತ್ತದೆ. ಮತ್ತಷ್ಟು ಪ್ರಬಲ ಸಾಲುಗಳನ್ನು ನೋಡುವುದಾದರೆ

“ಸುಟ್ಟು ಕರಕಲಾದ
ಹೃದಯದ ಬೂದಿ
ನಿನ್ನ ಕಣ್ಣ ಕಾಡಿಗೆ”

ಎಂಬ ಸೊಗಸಾದ ರೂಪಕವನ್ನು ಹೊತ್ತು ತಂದಿದ್ದರೆ.

“ನಾನು ಶಬ್ದ
ಅವಳು ನಿಶ್ಯಬ್ದ”

ಎಂಬ ಪದ್ಯ ಕಡಿಮೆ ಪದಗಳಲ್ಲಿ ಸಂಸಾರವೆಂಬ ಕಡಲನ್ನು ಪರಿಚಯಿಸುತ್ತದೆ.

“ನಾನು ಚಿಟ್ಟೆ
ಅವಳು ಮಲ್ಲಿಗೆ”

ಎಂಬ ಸಾಲು ಮಿದುವಾದ, ಹದವಾದ ಭಾಷೆಯಲ್ಲಿ ಓದುಗರಿಗೆ ಪದ್ಯದ ಸಾರವನ್ನು ತಿಳಿಸುತ್ತದೆ.

“ಶ್ ಶಬ್ದ ಮಾಡದಿರಿ
ಸಂಜೆಯಾಯ್ತು
ಆಕಾಶಕ್ಕೆ ಅವಳ ಇನಿಯ
ತಿಲಕ ಇಡುತಿದ್ದಾನೆ”

ವಾಹ್ ಎಂತಹ ಅದ್ಭುತ ಕವಿಕಲ್ಪನೆ.

“ದುಶ್ಮನ್ ಸೈತಾನ್ ರ ಸಂತತಿ
ಮಸಣ ಸೇರಲಿ ಬಿಡು
ಸಾಜನ್ ನ ಹೃದಯದ ಗುಲ್ಮೊಹರ್
ಮಾನವೀಯತೆಯ ಬೆಸೆಯುತಿರು ಸಾಕಿ”

ಎಂಬ ಹನಿಯು ಕವಿಯ ಸಾಮರಸ್ಯದ ಶಾಂತಿಯ ನಡೆಯನ್ನು ಪ್ರತಿನಿಧಿಸುತ್ತದೆ.

ಮನ ಹೇಳಿತು ಅತ್ತು ಹಗುರಾಗು
ಕಣ್ಣೀರು ಹೇಳಿತು ಜಾರದೆ ಗಟ್ಟಿಯಾಗು”

ಎಂಬ ಸಾಲುಗಳು ಮನಸ್ಸಿಗೂ ಕಣ್ಣೀರು ಇರುವ ಸಾಮ್ಯತೆ ಮತ್ತು ಒಡನಾಟಗಳನ್ನು ಅನಾವರಣ ಮಾಡುತ್ತವೆ.

ಈ ಪುಸ್ತಕದಲ್ಲಿ ನನಗೆ ಮತ್ತಷ್ಟು ಆಪ್ತವಾದ ಸಾಲುಗಳೆಂದರೆ

“ನೀನು ಸೂಜಿ
ನಾನು ದಾರ
ಹೊಲಿಯೋಣ ಗಡಿಗಳನ್ನು”

ನೋಡಿ ಇದೊಂದು ಪದ್ಯ ಹೊತ್ತು ತಂದಿರುವ ಸಂದೇಶದ ಅಗಾಧತೆ ಮಿತಿಗೆ ನಿಲುಕದ್ದು. ಕಾರಣ ಗಡಿ ಎಂಬ ಪದವನ್ನು ಇಲ್ಲಿ ಕವಿಯು ವಿಶಾಲ ಅರ್ಥದಲ್ಲಿ ಬಳಸಿದ್ದಾರೆ. ಗಡಿ ಎಂದರೆ ಕೇವಲ ಎಲೆಯಲ್ಲ, ಬದಲಾಗಿ ದ್ವೇಷ, ಮತ್ಸರ, ಇರ್ಶೆ,ಕೋಮುವಾದ, ಕ್ರೌರ್ಯ, ಅಸತ್ಯ ಮುಂತಾದ ಕತ್ತರಿಸಿದ ಗಡಿಗಳನ್ನು ಪ್ರೀತಿ,ಪ್ರೇಮ, ವಾತ್ಸಲ್ಯ, ಸ್ನೇಹ, ಸಹಬಾಳ್ವೆ, ಸತ್ಯ, ಶಾಂತಿ ಎಂಬ ದಾರದಿಂದ ಹೊಲೆಯುವ ಕವಿಯ ಜಾಣ್ಮೆ ಶ್ಲಾಘನೀಯವಾದುದು. ಸೂಜಿ ಅಪಾಯಕಾರಿ ಆದರೆ ಅದರೊಂದಿಗೆ ದಾರ ಸೇರಿದಾಗ ಅದು ಉಪಯುಕ್ತ ಕೆಲಸ ಮಾಡುತ್ತದೆ ಹಾಗೆ ನಮ್ಮ ಬದುಕು ಇರಬೇಕು ಎಂದು ಕವಿತೆ ಆಶಿಸುತ್ತದೆ.

“ತಿನ್ನುವ ಅನ್ನ ಏಕೆ ವಿಷವಾಗುತ್ತಿದೆ
ರೈತನ ಗದ್ದೆಯ ಭತ್ತ
ಕದ್ದ ಅಕ್ಕಿಯಿಂದ
ಅಡುಗೆ ಮಾಡಿರಬಹುದೆ”

ರೈತನ ಬೆವರುಂಡು ಬೆಳೆದ ಫಸಲಿನ ಫಲವನ್ನು, ಅವನು ಉಣ್ಣಲು ಬಿಡದೆ ದುರ್ಮಾರ್ಗಗಳಿಂದ ಅವನಿಗೆ ನಷ್ಟ ಉಂಟು ಮಾಡಿ, ಅವನನ್ನು ವಂಚಿಸುವ ಜನರ ಕುರಿತು ಆಕ್ರೋಶ, ಮತ್ತು ನೇಗಿಲಯೋಗಿಯ ಬಗೆಗಿನ ಕಾಳಜಿಯನ್ನು ತೋರಿಸುತ್ತದೆ. ರೈತನಿಗೆ ಮೋಸ ಮಾಡಿದರೆ ತಿನ್ನುವ ಅನ್ನ ವಿಷವಾಗುತ್ತದೆ ಎಂದು ಕವಿತೆ ಜಾಗೃತಿ ಮೂಡಿಸುತ್ತದೆ.

“ಮುಳ್ಳುಗಳು ನಗುತಿವೆ
ಹೂ ಬಾಡುವುದನ್ನು ಕಂಡು
ಹೂ ಅಳುತಿದೆ ಮುಳ್ಳು
ಮೆತ್ತಗಾಗುವುದನ್ನು ಕಂಡು”

ಈ ಕವಿತೆಯಲ್ಲಿ ಕವಿಯು ಮುಳ್ಳು ಮತ್ತು ಹೂವುಗಳ ರೂಪಕದ ಮೂಲಕ ಮನುಜರ ಗುಣಗಳನ್ನು ಮಾರ್ಮಿಕವಾಗಿ ಓದುಗರ ಮುಂದಿಟ್ಟಿದ್ದಾರೆ. ಹೂ ಬಾಡುವುದನ್ನು ಕಂಡು ಮುಳ್ಳುಗಳು ನಗುತ್ತವೆ ಅಂದರೆ ಒಳ್ಳೆಯವರು ಸದ್ಗುಣಿಗಳು ಕಷ್ಟ ಅನುಭವಿಸುವುದನ್ನು ಕಂಡು ಕೆಟ್ಟವರು ಸಂತೋಷಪಡುತ್ತಾರೆ. ಅಟ್ಟಹಾಸದಿಂದ ನಗುತ್ತಾರೆ ಎನ್ನುವ ಕವಿ, ದುರ್ಜನರು ಹಾಳಾಗುವುದನ್ನು ಕಂಡು ಸಹೃದಯಿಗಳ ಮನ ನೊಂದು ಬೆಂದು ರೋಧಿಸುತ್ತದೆ ಎಂದು ವಿಭಿನ್ನ ಗುಣಗಳಿರುವ ವ್ಯಕ್ತಿಗಳ ವ್ಯಕ್ತಿತ್ವವನ್ನು ಅನಾವರಣ ಮಾಡಿದ್ದಾರೆ.

“ಜಾಗತಿಕ ಯುದ್ಧ ಗೆದ್ದ ತ್ರಿವಿಕ್ರಮ
ಕಾಂತೆಯ ದೃಷ್ಟಿ ಯುದ್ಧದಲಿ ಶರಣಾಗತಿಯಾದ”

ಈ ಪದ್ಯ ನಲ್ಲೆಯ ಕಣ್ಣೋಟದ ಪಿಸುಮಾತಿನ ಸೆಳೆತ ಕುರಿತು ಹೇಳಿರುವುದಾಗಿದೆ. ಹೆಣ್ಣಿನ ಪ್ರೀತಿಯನ್ನು ಜಯಿಸುವುದು ಸುಲಭವಲ್ಲ. ಹೆಣ್ಣಿಗೆ ಸೋಲದ ಸರದಾರನಿಲ್ಲ. ಪ್ರತಿಯೊಬ್ಬನೂ ಅವಳಿಂದ ಆಕರ್ಷಿತ ಆಗುವನು. ಪ್ರೀತಿಯಲ್ಲಿ ಶರಣಾಗುವನು. ಅವನು ಜಾಗತಿಕ ಯುದ್ಧ ಮಾಡಿ ದೇಶಗಳನ್ನು ಗೆದ್ದು ತ್ರಿವಿಕ್ರಮನಾಗಿರಬಹುದು. ಆದರೆ ತನ್ನ ನಲ್ಲೆಯ ಕಣ್ಣೊಳಗೆ ಬಂಧಿ ಆಗಿ ಅವಳ ಮೋಹಕತೆಯಲ್ಲಿ ಸಿಲುಕಿದಾಗ ಅದರಿಂದ ಹೊರ ಬಂದು ನಿಲ್ಲುವುದು ಸುಲಭ ಸಾಧ್ಯವಲ್ಲ.

“ಶವದ ಪೆಟ್ಟಿಗೆಗೆ ಅಂತಿಮ ಮಳೆ ಜಡಿದರೂ
ಜಿಟಿ ಮಳೆಯಂತೆ ನಿನ್ನ ನೆನಪುಗಳ ಸುರಿಮಳೆ”

ಇಲ್ಲಿ ಕವಿಯು, ಪ್ರೀತಿಯ ನೆನಪುಗಳು ನೀಡುವ ನೋವನ್ನು ಓದುಗರ ಮುಂದಿಡುತ್ತಾರೆ. ಪ್ರೀತಿಗೆ ಸಾವಿಲ್ಲ ಪ್ರೀತಿಯ ಭಾವಗಳು ಜೀವ ಇರುವವರೆಗೆ ಜೀವಂತವಾಗಿ ಕಾಡುತ್ತವೆ ಎಂಬುದನ್ನು ಶವದ ಪೆಟ್ಟಿಗೆಗೆ ಅಂತಿಮ ಮೊಳೆ ಹೊಡೆದರೂ, ಅಂದರೆ ಲೌಕಿಕ ಜಗತ್ತಿನ ಕೊನೆ ಕ್ಷಣದಲ್ಲಿಯೂ ನೆನಪುಗಳು ಮಾಸುವುದಿಲ್ಲ. ಜಟಿ ಮಳೆ ಹೇಗೆ ಬಿಟ್ಟುಬಿಡದೆ ಕಾಡುತ್ತದೆಯೋ ಹಾಗೆ ನೆನಪುಗಳು ನಿತ್ಯ ನೆನಕೆಗಳಾಗುತ್ತವೆ.

“ಮಂದಿರ ಮಸೀದಿ ಇಗರ್ಜಿಗಳಿಗೆ ಶತಮಾನದ ಬೀಗ ಜಡಿಯದಿರು
ತುಕ್ಕುಹಿಡಿದ ತುಟಿಗಳಿಗೆ
ಕೀಲೆಣ್ಣೆ ಹಾಕಲು ಮರೆಯದಿರು”

ಮಂದಿರ-ಮಸೀದಿ ಇಗರ್ಜಿಗಳು ನಾವು ನಿರ್ಮಿಸಿಕೊಂಡ ಪ್ರಾರ್ಥನಾ ಕೇಂದ್ರಗಳು. ಈಗವು ಧರ್ಮಾಂಧತೆಯ ಕೂಪವಾಗಿವೆ. ಅವು ಖಂಡಿತ ಬದಲಾಗಿಲ್ಲ. ಅವು ಇದ್ದಂತೆಯೆ ಇವೆ. ಬದಲಾಗಿರುವುದು ಏನಿದ್ದರೂ ಮನುಷ್ಯ. ನಾವು ಅವುಗಳನ್ನು ಮತೀಯ ಗಲಭೆಯ ತಾಣಗಳನ್ನಾಗಿ ಮಾಡಿಕೊಂಡಿದ್ದೇವೆ. ಎಲ್ಲ ಧರ್ಮಗಳ ಸಾರ ಮನುಷ್ಯ ಪ್ರೇಮವಾಗಿದೆ. ಅದನ್ನು ಅರಿಯದೆ ಶತಮಾನಗಳಿಂದಲೂ ಅನುಸರಿಸುತ್ತಿರುವ ಮೌಢ್ಯದಿಂದ ಹೊರಬಂದು “ಮಾನವ ಜಾತಿ ತಾನೊಂದೆ ವಲಂ” ಎಂಬ ಪಂಪ ನ ವಾಣಿಯನ್ನು, “ಆಗು ನೀ ಅನಿಕೇತನ” ಎಂಬ ಕುವೆಂಪು ಅವರ ಕವಿವಾಣಿಯನ್ನು ಮೈಗೂಡಿಸಿಕೊಂಡು ನಡೆಯಬೇಕೆಂದು ಕವಿ ಆಶಿಸುತ್ತಾರೆ.

“ಅಂಗಾಲಿಗೆ ಮುತ್ತಿಕ್ಕಿದ ಮಣ್ಣು
ಹಿಮ್ಮಡಿಯಲ್ಲಿ ಹಿಮ್ಮೇಳ ಹಾಕಿವೆ
ದಣಿದ ದೇಹಕ್ಕೆ ಕಬರಸ್ತಾನದ
ಹೂಗಳೆ ಸಾಂತ್ವನ ಹೇಳುತ್ತಿವೆ”

ಈ ಹನಿಗವಿತೆ ದುಡಿಯುವ ವರ್ಗದ ಪ್ರತೀಕವಾಗಿ ಮೂಡಿಬಂದಿದೆ. ಸದಾ ಮಣ್ಣಿನೊಂದಿಗೆ ಸಾಂಗತ್ಯ ಹೊಂದಿರುವ ಶ್ರಮಿಕನ ಕಾಲಿನಡಿಯಲ್ಲಿ ಮಣ್ಣು ಮೆತ್ತಿಕೊಂಡು ನೋವಿನ ರಾಗ ಹಾಡುತ್ತಿವೆ. ಆದರೆ ಅವನ ಕಷ್ಟ ಯಾರಿಗೂ ಕಾಣುತ್ತಿಲ್ಲ. ಎಲ್ಲರ ಕಣ್ಣು ಕುರುಡಾಗಿದೆ. ಪ್ರೇಮ ಮರೆತ ಜನರ ನಡುವೆ ದುಡಿದು ದಣಿದ ದೇಹಕ್ಕೆ ಸ್ಮಶಾನದಲ್ಲಿ ಅರಳುವ ಹೂವುಗಳು ಸುಗಂಧವನ್ನು ಸೂಸಿ ಸೌಂದರ್ಯದಿಂದ ಅವನ ಮನಸ್ಸನ್ನು ತಣಿಸುತ್ತಿವೆ. ಎನ್ನುವಲ್ಲಿ ಗೋರಿಯ ಮೇಲಿನ ಹೂವಿಗಿಂತ ಕೀಳಾಗಿ ಮನುಜ ಆಗಿದ್ದಾನೆ ಎನ್ನುತ್ತಾರೆ.

“ಹರೆಯವೆಂದರೆ ಶಾಶ್ವತವೆಂದು ಭಾವಿಸದಿರು
ಇಳಿಸಂಜೆಗೆ ಭಾಸ್ಕರ ನಿದ್ದೆಗೆ ಜಾರುವದನು ಮರೆಯದಿರು

ನಮ್ಮ ಜೀವನವು ಬಾಲ್ಯ ಯೌವನ ವೃದ್ದಾಪ್ಯಗಳ ಸಂಗಮ‌. ಹಗಲು ರಾತ್ರಿಗಳಂತೆ ಪರಿವರ್ತನೆಗೊಳ್ಳುತ್ತವೆ. ಯಾವುದು ಶಾಶ್ವತವಲ್ಲ ಎನ್ನುವುದನ್ನು ಕವಿ ಮಕಾನದಾರ ಅವರ ಈ ತಾತ್ವಿಕ ಸಾಲುಗಳು ಸಾರುತ್ತವೆ. ಕಾಲವೆಂಬುದು ಗತಿಸುವ ಗುಣವನ್ನು ಹೊಂದಿರುವುದರಿಂದ ಯಾವುದೇ ಕೆಲಸಗಳನ್ನು, ಸಾಧನೆಗಳನ್ನು , ಕನಸುಗಳನ್ನು ಮುಂದೂಡದೆ ಆಯಾಕಾಲದಲ್ಲಿ ಸಾಕಾರಗೊಳಿಸಿಕೊಳ್ಳಬೇಕು. ಸಮಯ ಭೂಗತವಾದಾಗ ಹಿಂದಿನ ಬದುಕಿನ ವಿಫಲತೆಗೆ ಕೊರಗಬಾರದು .ಎಲ್ಲವೂ ನಮ್ಮ ಕೈಯಲ್ಲಿರುವಾಗ ಅನುಭವಿಸಬೇಕೆಂದು ಕವಿ ಹರೆಯ ಜಾರುವುದನ್ನು ಇಳಿಸಂಜೆಗೆ ಮುಳುಗುವ ಭಾಸ್ಕರನ ರೂಪಕದ ಮೂಲಕ ತುಂಬಾ ಘನವಾದ ಚಿಂತನೆಗೆ ಹಚ್ಚುತ್ತಾರೆ.

“ನನ್ನ ನರಳುವ ನರನಾಡಿಗಳಿಗೂ
ನಿನ್ನ ಮೌನ ಮಾತು ಕಲಿಸಿತು ಸಾಕಿ”

ನಲ್ಲೆಯ ಮೌನದ ಹಿಂದಿನ ಅಗಾಧ ನೋವಿನ ಅನಾವರಣ, ಅದರ ಭಾವತೀವ್ರತೆಯನ್ನು ಈ ಸಾಲುಗಳಲ್ಲಿ ಕಾಣಬಹುದು. ಅಂದರೆ ಮನದ ತುಂಬಾ ನೋವು ಮಡುಗಟ್ಟಿದೆ. ಆದರೂ ನೀನು ಮೌನವಾಗಿರುವೆ. ನಿನ್ನ ಭಾಷೆಯನ್ನು ಅರಿಯುವ ಶಕ್ತಿ ನನಗಿದೆ. ನನ್ನ ಮೌನವನ್ನು ಮುರಿದು ಮಾತನಾಡಿಸುವ ಶಕ್ತಿ ನಿನಗಿದೆ ಎಂದು ಮಾತು ಮೌನಗಳ ನಡುವಿನ ಹೋಲಿಕೆ ವ್ಯತ್ಯಾಸಗಳನ್ನು ಇಲ್ಲಿ ಕಾಣಬಹುದು.

“ಜೀವ ಪ್ರೇಮದ ಮುಂದೆ ಸಾಜನ್ ನ ಎದೆ ಎದೆಯಲಿ
ಜಾತಿಯ ಜಿಡ್ಡು ಕರಗಿ ಹೋಗುತಿದೆ ಸಾಕಿ”

ಪ್ರೀತಿಗೆ ಎಲ್ಲ ತಡೆಗೋಡೆಗಳನ್ನು ಕೆಡವುವ ಸಾಮರ್ಥ್ಯವಿದೆ‌. ಜೀವಂತ ಪ್ರೀತಿಯ ಮುಂದೆ ಜಾತಿ ವಿಜಾತಿಗಳ ಸಂಕೋಲೆಗಳು ಕರಗಿಹೋಗುತ್ತವೆ. ಪ್ರೀತಿಗೆ ಅಂತಹ ಶಕ್ತಿ ಇದೆ. ಆ ಮೂಲಕ ಸಮಾಜದಲ್ಲಿ ಬದಲಾವಣೆ ಮೂಡಲಿ. ಸಹಬಾಳ್ವೆ, ಸಾಮರಸ್ಯಗಳು ರೂಪುಗೊಳ್ಳಲಿ ಎಂಬ ಸದಾಶಯ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಇದು ಹೊತ್ತು ತಂದಿದೆ.

“ತೀರ್ಥ ಕುಡಿದರು ಹೋಗಲೊಲ್ಲದು ಸ್ವಾರ್ಥ ದೇಶ ಸುತ್ತಿದರೂ ಅಳಿಯಲಿಲ್ಲ ಅವನಲ್ಲಿ ದ್ವೇಷ

ದೇವಾಲಯಗಳು ಮಾನವಕುಲದ ಒಳಿತು ಬಯಸುವ ಆಲಯಗಳು. ಅಲ್ಲಿ ಮನಃಶಾಂತಿಯನ್ನು ನೆಮ್ಮದಿಯನ್ನು ಅರಸಿ ಹೋಗುತ್ತೇವೆ. ಅಲ್ಲಿ ಕೊಡುವ ತೀರ್ಥ ಪರಮಪವಿತ್ರ ಎನ್ನುತ್ತೇವೆ. ಪಾವನಗಂಗಾ ಎನ್ನುತ್ತೇವೆ. ಆದರೆ ಆ‌ ತೀರ್ಥ ಕುಡಿದರೂ ಮನುಜನ ಸ್ವಾರ್ಥ ಲಾಲಸೆಗಳು ಕಡಿಮೆಯಾಗಿ ಮಾನವಪ್ರೇಮ ಬರಲಿಲ್ಲ ಎನ್ನುವ ಕವಿಯು ದೇಶದ ನಾನಾ ಭಾಗಗಳಲ್ಲಿನ ವಿಭಿನ್ನ ಜನತೆಯನ್ನು, ವೈವಿಧ್ಯತೆಗಳನ್ನು ನೋಡಿ ಬಂದರೂ, ಅವನಲ್ಲಿ ಸಹಜ ಪ್ರೀತಿ ಮೂಡಲಿಲ್ಲ ದ್ವೇಷ ಕರಗಲಿಲ್ಲ ಎಂದು ಕವಿಮನ ರೋಧಿಸುತ್ತದೆ.

ಒಟ್ಟಾರೆ ಎ. ಎಸ್ ಮಕಾನದಾರ ಅವರು ಪ್ಯಾರಿ ಪದ್ಯಗಳ ರಚನೆಯ ಮೂಲಕ ಗಾಢವಾದ ಅರ್ಥ ವಿಸ್ತಾರವನ್ನು, ಒಳನೋಟಗಳನ್ನು, ಸೃಷ್ಟಿಸುತ್ತಾ, ನಿಗೂಢ ಅರ್ಥಗಳನ್ನು, ಪ್ರೇಮದ ಪರಾಕಾಷ್ಠೆಯನ್ನು ಪ್ರತಿಬಿಂಬಿಸುತ್ತಾ, ಸಾಮಾಜಿಕ ಜವಾಬ್ದಾರಿಯನ್ನು ನೆನೆಸುತ್ತಾ, ಮಾನವೀಯ ಜೀವಸೆಲೆ ಹುಡುಕುತ್ತಾ ಸಾಗಿದ್ದಾರೆ. ಇಂತಹ ವಿಶಿಷ್ಟ ಬರವಣಿಗೆಗಳು ಇವರಿಂದ ಮತ್ತಷ್ಟು ಮಗದಷ್ಟು ದುಡಿಸಿಕೊಂಡು ಕನ್ನಡ ಸಾರಸ್ವತ ಲೋಕವನ್ನು ಮತ್ತಷ್ಟು ಬೆಳಗಲಿ ಎಂದು ಆಶಿಸುವೆ.

ಅನುಸೂಯ ಯತೀಶ್


ಕೃತಿ-ಪ್ಯಾರಿ ಪದ್ಯ

ಕವಿ-ಎ.ಎಸ್. ಮಕಾನದಾರ

ಪ್ರಕಾಶಕರು- ನಿರಂತರ ಪ್ರಕಾಶನ, ಗದಗ

ಬೆಲೆ-150/ರೂ

ಪುಟಗಳು-144

ಪ್ರತಿಗಳಿಗೆ ಸಂಪರ್ಕ ಸಂಖ್ಯೆ-9916480291

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x