ಬಟವಾಡೆ…: ಚಂದ್ರಪ್ರಭ ಕಠಾರಿ


ಮಧ್ಯರಾತ್ರಿಯವರೆಗೂ ಪೈಲ್ ಕಾಂಕ್ರೀಟಿಂಗ್ ಸಾಗಿ, ಬೆಳಗ್ಗೆ ತಡವಾಗಿ ಎದ್ದವನು ದಡಗುಡುತ್ತ ಹೊರಟು, ಪಂಚತಾರಾ ಅಶೋಕ ಹೊಟೇಲ್ ಎದುರುಗಿರುವ ಗಾಲ್ಫ್ ಕೋರ್ಟಿನ ಮೇನ್ ಗೇಟನ್ನು ಇನ್ನು ತಲುಪಿರಲಿಲ್ಲ, ಆಗಲೇ ದಳವಾಯಿ ಕನ್ಸ್ ಟ್ರಕ್ಷನ್ ಮಾಲೀಕ ಕಮ್ ಕಂಟ್ರಾಕ್ಟರ್ ಗಂಗಾಧರ ರೆಡ್ಡಿಯಿಂದ ಫೋನು. ಲೇಬರ್ ಕಾಲೊನಿಗೆ ಹೋಗಿ ಬರಬೇಕೆಂದು. ಹೆಸರಿಗೆ ಮಾತ್ರ ತಾನು ಆಸಿಸ್ಟೆಂಟ್ ಜನರಲ್ ಮ್ಯಾನೇಜರ್! ತನ್ನ ಸಿವಿಲ್ ಎಂಜಿನಿಯರಿಂಗ್ ಕೆಲಸಗಳೇ ಸೈಟಿನಲ್ಲಿ ಮಾಡಿದಷ್ಟು ಮುಗಿಯದಿರುವಾಗ, ಕಟ್ಟಡಕಾರ್ಮಿಕರ ತರಲೆ ತಾಪತ್ರಯಗಳ ಉಸಾಬರಿ ತನ್ನ ಹಣೆಗೇಕೆ ಅಂಟಿಸುತ್ತಾರೆಂದು ಚಂದನ ಗೊಣಗಿಕೊಂಡನಷ್ಟೆ ಹೊರತು ಪಾಳೇಗಾರಿಕೆ ಸ್ವಭಾವದ ಗಂಗಾಧರರೆಡ್ಡಿಯ ಮಾತಿಗೆ ಎದುರಾಡುವುದು ಆಗದ ವಿಷಯ ಎಂದವನಿಗೆ ಗೊತ್ತು.

ನೋಡು ನೋಡುತ್ತಿದ್ದಂತೆ ಪ್ರತಿಕ್ಷಣ…ಪ್ರತಿದಿನ ತಣ್ಣಗೆ ಜಾರಿ ಹೋಗುತ್ತಿದ್ದು, ಗಾಲ್ಫ್ ಕ್ಲಬ್ಬಿನ ಕಟ್ಟಡವನ್ನು ಪೂರ್ಣಗೊಳಿಸಲು ಕರಾರಿನಂತೆ ನಿಗದಿ ಆಗಿದ್ದ ಮೂನ್ನೂರ ಎಪ್ಪತ್ತು ದಿನಗಳಲ್ಲಿ ಈಗಾಗಲೇ ನೂರತ್ತು ದಿನಗಳು ಕಳೆದಿದ್ದವು. ಆದರೂ, ಪಾಯದ ಕೆಲಸವೇ ಇನ್ನು ಮುಗಿದಿರಲಿಲ್ಲ. ಆರ್ಕಿಟೆಕ್ಟ್ ರಿಂದ ಡ್ರಾಯಿಂಗುಗಳು ಎಂದಿನಂತೆ ಸಕಾಲಕ್ಕೆ ಬರುವುದಿಲ್ಲ. ಬಂದರೂ ಬಿಡಿ ಬಿಡಿ ಭಾಗಗಳಾಗಿ ಬರುವ ನಕ್ಷೆಗಳನ್ನು ಜಾಗರೂಕತೆಯಿಂದ ಹಿಂದೆ ಬಂದ ನಕ್ಷೆಗೆ ಹೋಲಿಸಿ ಕೆಲಸ ಮುಂದುವರೆಸಬೇಕು. ಅದಕ್ಕಿಂತ ಮೊದಲು ಬೃಹತ್ ವ್ಯಾಪ್ತಿಯ ಕಟ್ಟಡದ ಯಾವ ಭಾಗದ್ದೆಂಬ ಮತ್ತು ಅಳತೆಯಲ್ಲಿ ಯಾವ ಮಟ್ಟದ್ದೆಂಬ ಪರಿಕಲ್ಪನೆ ಇರಬೇಕು.

ಈಗಲಾದರೂ ಸ್ವಲ್ಪ ಪರವಾಗಿಲ್ಲ. ಯಾರಿಗೂ ಅರ್ಥವಾಗದ ಚಿದಂಬರ ರಹಸ್ಯದಂತಿರುವ ಗಾಲ್ಫ್ ಕ್ಲಬ್ಬಿನ ನಕ್ಷೆಗಳನ್ನು ಅರ್ಥ ಮಾಡಿಕೊಳ್ಳುವುದು ಚಂದನನಿಗೆ ಕರಗತವಾಗಿದೆ. ಆ ಬಗ್ಗೆ ಅವನಿಗೆ ಹೆಮ್ಮೆ ಇದೆ. ಆದರೆ, ಪ್ರಾಜೆಕ್ಟ್ ಶುರುವಾದಾಗ ಇಡೀ ಕಟ್ಟಡವನ್ನು – ನಕ್ಷೆಗಳನ್ನು ಓದಿ ಕಲ್ಪಿಸಿಕೊಳ್ಳುವುದಕ್ಕೆ ಬಿದ್ದ ಪಡಿಪಾಟಲು ಅಷ್ಟಿಷ್ಟಲ್ಲ!

ಟೇಬಲ್ಲಿನ ಮೇಲೆ ಹರಡಿದ ಮಾರುದ್ದ ಅಗಲದ ಡ್ರಾಯಿಂಗ್ ಶೀಟಲ್ಲಿ ತಲೆ ಹುದುಗಿಸಿ ತಾಸುಗಳು ಕಳೆದರೂ ನೀಲನಕ್ಷೆಯ ಸಂಕೀರ್ಣ ವಿವರಗಳು ದಕ್ಕದೆ ವಿಸ್ಮೃತಿಗೊಳಗಾದಂತಾಗಿ, ತನ್ನ ಇಪ್ಪತ್ತು ವರುಷಗಳ ಸಿವಿನ್ ಎಂಜಿನಿಯರಿಂಗ್ ಅನುಭವಕ್ಕೆ ದಕ್ಕದೆ ಗಾಲ್ಫ್ ಕ್ಲಬ್ಬಿನ ಪ್ಲಾನು ಅಣಕಿಸುವಂತಿತ್ತು. ಸಾಮಾನ್ಯವಾಗಿ ಸಾಂಪ್ರದಾಯಿಕ ಕಟ್ಟಡದಲ್ಲಿಯಂತೆ ರಸ್ತೆಗೆ ಕಟ್ಟಡದ ಮುಂಭಾಗ ಮುಖ್ಯಮುಖವುಳ್ಳದ್ದಾಗಿರದೆ, ಈ ಹುಲ್ಲುಹಾಸಿನ ವಿಶಾಲ ಮೈದಾನದಲ್ಲಿ ೩೬೦ ಡಿಗ್ರಿ ಅವೃತ್ತಾಕಾರದ ಕಟ್ಟಡ, ಸುತ್ತಲೂ ಹಲವು ಮುಖವುಳ್ಳ ಹೊಸಶೈಲಿಯ ವಿಶಿಷ್ಟ ಕಟ್ಟಡದ ನಕ್ಷೆ ಅದಾಗಿತ್ತು. ಅದನ್ನು ಅರ್ಥ ಮಾಡಿಕೊಳ್ಳುವುದೇ ಗೊಂಡಾರಣ್ಯದಲ್ಲಿ ಹೊಕ್ಕಿ ಹಾದಿ ತಪ್ಪಿದಂತಾಗಿರುವಾಗ, ಅದನ್ನು ರಚಿಸಿದ ವಾಸ್ತುಶಿಲ್ಪಿ ಇನ್ನೆಷ್ಟು ತಲೆ ಕೆಡಿಸಿಕೊಂಡು ಅದನ್ನು ರಚಿಸಿರಬೇಕೆಂದು ಅವರ ಮೇಲೆ ಅಭಿಮಾನ ಉಂಟಾಗುತ್ತಿತ್ತು.

ಗಾಲ್ಫ್ ಕ್ರೀಡೆಯ ಕೋಲಿನಂತ ಉಪಕರಣಗಳನೊತ್ತು ಗಾಲ್ಫ್ ಆಡುವವರ ಹಿಂದೆ ಸಾಗುವ ಸಹಾಯಕರು – ಕ್ಯಾಡೀಸ್ ಗಳಿಗಾಗಿ ಕ್ಲಬ್ಬಿನ ನೆಲದಡಿಯ ಅಂತಸ್ತು, ಕಟ್ಟಡದ ಮೂಲೆಯ ಒಂದು ಎತ್ತರಿಸಿದ ಭಾಗದಲ್ಲಿ ಮೆಜನೈನ್ ನಡು ಅಂತಸ್ತಿನಲ್ಲಿ ‘ ಸ್ಪಾ ’ – ಆರೋಗ್ಯ ತಾಣ, ಮೊದಲ ಅಂತಸ್ತಿನಲ್ಲಿ – ಕೆಳಗೆ ಯಾವುದೇ ಕಾಲಮ್ಮಿನ ಆಧಾರವಿಲ್ಲದೆ ಹೊರ ಚಾಚಿದ ಕಾಂಕ್ರೀಟ್ ರೂಫಿನ ಮೇಲೆ ಬಾರ್ ಮತ್ತು ರೆಸ್ಟೊರೆಂಟ್, ಎರಡನೇ ಮಹಡಿಯಲ್ಲಿ ಕ್ಲಬ್ಬಿನ ಕಚೇರಿಗೆ ಜಾಗ, ಮೂರನೇ ಮಹಡಿಯಲ್ಲಿ ತಂಗಲು ಐಷಾರಾಮಿ ರೂಮುಗಳು. ಒಂದೊಂದೇ ಅಂತಸ್ತಿನ ನಕ್ಷೆಯನ್ನು ಪ್ರತ್ಯೇಕವಾಗಿ ಅಭ್ಯಾಸ ಮಾಡಿದಾಗ ಸ್ವಲ್ಪ ಅರ್ಥವಾದಂತೆ ಕಂಡರೂ, ಒಂದು ಅಂತಸ್ತಿಗೂ ಮತ್ತೊಂದಕ್ಕು ಹೊಂದಿಸುವುದು ಸರಳವಾಗಿರಲಿಲ್ಲ. ಅದನ್ನು ಅರ್ಥಮಾಡಿಕೊಂಡು ಪಾಯಕ್ಕಾಗಿ ನೂರಾರು ಪೈಲು ಕಾಲಮ್ಮುಗಳಿಗಾಗಿ ಸೈಟಿನಲ್ಲಿ ಗುರುತು ಮಾಡಿ ಕೊಳವೆ ಬಾವಿ ಕೊರೆಯುವಂತೆ, ದೈತ್ಯಾಕಾರದ ಸುತ್ತಿಯಿಂದ ಪೈಲ್ ಕೇಸಿಗೆ ಹೊಡೆದು ಭೂಮಿಯಲ್ಲಿ ರಂಧ್ರ ಕೊರೆಯಬೇಕಿತ್ತು. ಬಾರ್ ಬೆಂಡರ್, ಸೆಂಟ್ರಿಂಗ್ ಕೆಲಸಗಾರರಿಗೆ ಆ ಸೂಕ್ಷ್ಮ ಕೆಲಸದ ಬಗ್ಗೆ ತಿಳಿಹೇಳಿ ಕೆಲಸ ತೆಗೆಯಬೇಕಿತ್ತು. ಚಂದನ ಆ ಅಗಾಧ, ದೈಹಿಕವಾಗಿ ಮಾನಸಿಕವಾಗಿ ಸಹನೆ, ಶ್ರಮ ಬೇಡುವ ಕಾರ್ಯ ವೈಖರಿಯನ್ನು ನೆನೆದೇ ಉಸ್ಸಪ್ಪ ಎಂದು ನಿಟ್ಟುಸಿರಿಡುತ್ತಿದ್ದ.

ಲೇಬರ್ ಕಾಲೊನಿ ಎನ್ನುವುದು ಕೇಳುವುದಕ್ಕಷ್ಟೆ ಚೆನ್ನ! ನಿಜಕ್ಕೂ ಅದು ಹಂದಿಗೂಡೇ ಸರಿ! ಹೆಚ್ಚಾಗಿ ಸ್ಥಿತಿವಂತರೇ ಇರುವ ಕುಮಾರ ಪಾರ್ಕ್ ಬಡಾವಣೆಯಲ್ಲಿ ವಾರಸುದಾರರಾರು ಇಲ್ಲದ, ಅಕ್ಕಪಕ್ಕದ ಮನೆಯವರು ದಾರಿಹೋಕರು ಬಿಸಾಡಿದ ಕಸದಿಂದ ತಿಪ್ಪೆಗುಂಡಿಯಾಗಿದ್ದ ನಲವತ್ತು ಅರವತ್ತು ಖಾಲಿ ಸೈಟನ್ನು ಜೆಸಿಬಿ ತಂದು ಸ್ವಚ್ಚಮಾಡಿಸಿ, ತಗಡುಶೀಟುಗಳಿಂದ ಶೆಡ್ ಕಟ್ಟಿ ಚಿಕ್ಕಚಿಕ್ಕ ಗೂಡುಗಳನ್ನಾಗಿಸಿ, ಒಂದೊಂದರಲ್ಲೂ ಆರೆಂಟು ಕಾರ್ಮಿಕರನ್ನು ವಸತಿ ಹೆಸರಲ್ಲಿ ತುರುಕಿದ ಅವ್ಯವಸ್ಥೆ ಅದಾಗಿತ್ತು. ಹಗಲೆಲ್ಲ ದುಡಿದು ರಾತ್ರಿ ಒಂದಷ್ಟು ಮದ್ಯ ಏರಿಸಿ ಒಬ್ಬರ ಮೇಲೆ ಬಿದ್ದುಕೊಂಡ ಅರವತ್ತು ಜನರಷ್ಟು ಮಂದಿ ತಲೆಗೊಂದರಂತೆ ಮಾತಾಡಿದರೂ ಅದು ಅರವತ್ತು ಕೂಗಾಟದ ಮಾತಾಗಿ, ಸುತ್ತಲಿದ್ದ ನಾಜೂಕು ನಿವಾಸಿಗಳ ನಿದ್ದೆಗೆ ಭಂಗ ಬಂದು ದೂರುವುದು ಹೊಸ ವಿಷಯವಾಗಿರವಿಲ್ಲ. ಆಗೆಲ್ಲ ಕಾಲೊನಿಗೆ ಹೋಗಿ ಸುತ್ತಮುತ್ತಲ ಜನರಿಗೆ ಕೇಳುವಂತೆ “ ಸುಮ್ನೆ ಸೈಲೆಂಟಾಗಿ ಬಿದ್ಗೋಳ್ಳೊಕೆ ನಿಮ್ಗೇನ್ರೊ ರೋಗ! “ ಎಂದು ಬೈದಂತೆ ಮಾಡಿ, ದೂರಿದವರಿಗೆ ‘ ಸಾರಿ ‘ ಹೇಳಿ ಬರುವುದು ಮಾಮೂಲಾಗಿತ್ತು.

ಅವತ್ತು ರಾತ್ರಿ ನಶೆ ಏರಿಸಿದ ಐದಾರು ಕಾರ್ಮಿಕರು ಯಾವುದೋ ಕ್ಷುಲ್ಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆಸಿ, ಕೈಕೈ ಮಿಲಾಯಿಸಿ ಒಬ್ಬೊರಿಗೊಬ್ಬರು ಮಕಮೂತಿ ರಕ್ತ ಕಾರುವಂತೆ ಬಡಿದಾಡಿಕೊಂಡಿದ್ದರು. ಯಥಾ ಪ್ರಕಾರ ಸ್ಥಳೀಯ ನಿವಾಸಿಗಳು ಕೊಟ್ಟ ದೂರಿನ ಮೇರೆಗೆ ಪೊಲೀಸರು ಬಂದು ನಾಲ್ಕು ಬಿಗಿದು ಅವರನ್ನು ಠಾಣೆಗೆ ಒಯ್ದಿದ್ದರು. ಗಂಗಾಧರರೆಡ್ಡಿಗೆ ಚಂದನ ವಿಷಯ ತಿಳಿಸಿ, ಪೊಲೀಸರೊಂದಿಗೆ ಮೊಬೈಲಿನಲ್ಲಿ ಮಾತಾಡಿಸಿದ ಮೇಲೆ ಕೈಬೆಚ್ಚಗಾಗಿಸುವ ಭರವಸೆಯೊಂದಿಗೆ ಹುಡುಗರನ್ನು ಬಿಟ್ಟರು.

ಹೀಗೆ ಕಾರ್ಮಿಕರ ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸಲು ಗಂಗಾಧರರೆಡ್ಡಿ, ಎಜಿಮ್ ಆಗಿದ್ದ ಚಂದನನ ಮೇಲೆ ಅವಲಂಬಿತನಾಗುವುದಕ್ಕೆ ಕಾರಣಗಳಿದ್ದವು. ಕಟ್ಟಡ ಕಾರ್ಮಿಕರು ಹೆಚ್ಚಾಗಿ ಉತ್ತರಪ್ರದೇಶ, ಬಿಹಾರ, ಪಶ್ಚಿಮಬಂಗಾಳದಿಂದ ಬಂದವರಾಗಿ ಅವರೊಂದಿಗೆ ವ್ಯವಹರಿಸಲು ಗಂಗಾಧರರೆಡ್ಡಿಗೆ ಹಿಂದಿ ಬರುತ್ತಿರಲಿಲ್ಲ ಎನ್ನುವುದು ಒಂದಾದರೆ, ತನ್ನ ಸೌಮ್ಯ ನಡೆಯಿಂದ ಚಂದನ ಕಾರ್ಮಿಕರೊಂದಿಗೆ ವಿಶ್ವಾಸ, ಗೌರವವನ್ನು ಗಳಿಸಿದ್ದರಿಂದ ಅವನ ಮಾತನ್ನು ಯಾರೂ ನಿರಾಕರಿಸುತ್ತಿರಲಿಲ್ಲ ಎಂಬುದು ಮತ್ತೊಂದು ಕಾರಣ.
ಅದರಲ್ಲೂ – ಕಾರ್ಯವ್ಯಸನಿಯಾದ ಚಂದನನಿಗೆ ಕಟ್ಟಡ ನಿರ್ಮಾಣದ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡ ಮುಖ್ಯ ಕರ್ಮಚಾರಿಗಳ ಹೊಂದಿಕೊಂಡು ಹೋಗುವ ನಿಷ್ಠ ತಂಡವಿತ್ತು. ಉಕ್ಕಿನ ಬಾರ್ ಬೆಂಡಿಂಗ್ ಕೆಲಸದಲ್ಲಿ ಅಗಾಧ ಕಾರ್ಯಕ್ಷಮತೆ ಹೊಂದಿದ್ದ ತಾಲೂಕ್ದಾರ್, ಲಾರಿಗಳಲ್ಲಿ ಬರುವ ಕಲ್ಲುಜೆಲ್ಲಿ, ಮರಳು ಕಟ್ಟಡ ಸಾಮಗ್ರಿಗಳ ಗುಣಮಟ್ಟ ಪರಿಶೀಲಿಸಿ ಅವುಗಳನ್ನು ಘನ ಅಡಿ ಅಳತೆಯಲ್ಲಿ ದಾಖಲಿಸುವ ರೈಟರ್ ದಾಮು, ಭೀಮಗಾತ್ರದ ಬೀಮಿನ ತೊಲೆಗಳ ಸೆಂಟ್ರಿಂಗ್ ನಿರ್ಮಾಣದಲ್ಲಿ ಪರಿಣಿತ ಸಂದೀಪ್ ಯಾದವ್, ಇತ್ತೀಚಿಗಷ್ಟೆ ಬಿಇ ಪದವಿ ಮುಗಿಸಿ ಕಟ್ಟಡ ನಿರ್ಮಾಣದಲ್ಲಿ ಅಷ್ಟೇನು ಅನುಭವಿರದಿದ್ದರೂ ಕೆಲಸ ಕಲಿಯುವ ಹಂಬಲವಿದ್ದ ಶ್ರೀನಿವಾಸರೆಡ್ಡಿ ( ಬಹುಶಃ ಮಾಲೀಕ ಗಂಗಾಧರರೆಡ್ಡಿಯ ಸಂಬಂಧಿಕನಿರಬೇಕು ) ಚಂದನನು ಕಂಪ್ಯೂಟರಲ್ಲಿ ಆಟೊಕ್ಯಾಡ್ ಡ್ರಾಯಿಂಗನ್ನು ಅಭ್ಯಸಿಸಿ ಕೊಡುವ ವಿವರಗಳನ್ನು ಕರಾರುವಕ್ಕಾಗಿ ಸೈಟಿನ ಕೆಲಸದಲ್ಲಿ ಆಳವಡಿಸುತ್ತಿದ್ದು, ಚಂದನನಿಗೆ ಭುಜಬಲವಾಗಿ ತೊಡಕಿನ ಕಷ್ಟದ ಕೆಲಸ ನಿಸೂರಾಗಿ ಸಾಗಿತ್ತು.

ಆದರೆ, ವಾರದ ಕೊನೆ ದಿನ ಶನಿವಾರ ಬಂತೆಂದರೆ ಸಾಕು ಚಂದನನಿಗೆ ಕೈಕಾಲು ಆಡುತ್ತಿರಲಿಲ್ಲ. ಮಧ್ಯಾನ್ನ ಊಟದ ನಂತರ – ಹಣ, ಅಂತಸ್ತು, ಬುದ್ಧಿಮತ್ತೆಯಲ್ಲಿ ತಾವೇ ಶ್ರೇಷ್ಠರೆಂದು ಬೀಗುವ ಗಾಲ್ಫ್ ಕ್ಲಬ್ಬಿನ ಸದಸ್ಯರು, ಆರ್ಕಿಟೆಕ್ಟ್ ರೊಂದಿಗೆ ಕೆಲಸದ ಪ್ರಗತಿ ಪರಿಶೀಲನೆಯ ಮೀಟಿಂಗ್ ಎದುರಿಸಲು ತಯಾರಿ ಮಾಡಿಕೊಳ್ಳಬೇಕಿತ್ತು. ಮತ್ತೆ ಅದೇ ಸಂಜೆಗೆ ವಾರದ ಬಟವಾಡೆ ಇರುತ್ತಿದ್ದರಿಂದ ಗಂಗಾಧರರೆಡ್ಡಿ ಒದಗಿಸುತ್ತಿದ್ದ ಅರೆಬರೆ ಹಣವನ್ನು ಬೇರೆ ಬೇರೆ ಕೆಲಸಗಳ ಮೇಸ್ತ್ರಿಗಳಿಗೆ ಸಮಾನವಾಗಿ ಹಂಚಿ ಸಮಾಧಾನ ಮಾಡಿ, ಅವರು ನಿರೀಕ್ಷಿಸಿದ ಹಣ ಸಿಗಲಿಲ್ಲವೆಂಬ ರಚ್ಚಲ್ಲಿ ಸೋಮವಾರ ಕೆಲಸಕ್ಕೆ ಚಕ್ಕರ್ ಕೊಡದಂತೆ ನೋಡಿಕೊಳ್ಳುವುದು ತಂತಿನ ಮೇಲಿನ ನಡಿಗೆಯಾಗಿತ್ತು.

ಆ ಶನಿವಾರ ಮೀಟಿಂಗ್ ಎಂದಿಗಿಂತ ಬಿಸಿಬಿಸಿಯಾಗಿಯೇ ಇತ್ತು. ರೌಂಡ್ ಟೇಬಲಲ್ಲಿ, ಕ್ಲೀನ್ ಶೇವ್ ಮಾಡಿ ಅತಿಸಭ್ಯತೆಯಿಂದ ಕೂತ ಕ್ಲಬ್ಬಿನ ಕೋಟ್ಯಾಧಿಪತಿ ಸದಸ್ಯರನ್ನು ನೋಡುವಾಗಲೆಲ್ಲ ಚಂದನನಿಗೆ ಅವರನ್ನು ಯಾವುದೋ ಸಿನಿಮಾದಲ್ಲಿ ನೋಡಿದ ನಟರಂತೆ ಭಾಸವಾಗುತ್ತಿತ್ತು. ವೇಷಭೂಷಣಗಳು ಒಬ್ಬೊಬ್ಬರದು ಬೇರೆಯದೇ ಆದರೂ, ಮಧ್ಯೆ ಮಧ್ಯೆ ಜಟಿಲ ಇಂಗ್ಲೀಷ್ ಪದಗಳನ್ನು ಉಚ್ಚರಿಸುತ್ತ ಮಾಡುವ ತುಟಿಚಲನೆ, ಹಾವಭಾವಗಳು ಒಂದೇ ತೆರನಾಗಿ ಕಾಣುತ್ತಿದ್ದವು.

ಚಂದನನ ಮೇಲ್ವಿಚಾರಣೆಯಲ್ಲಿ ಕೆಲಸಗಳು ಗುಣಮಟ್ಟದ ವಿಷಯದಲ್ಲಿ ಅಚ್ಚುಕಟ್ಟಾಗಿ ನಡೆಯುತ್ತಿರುವುದರ ಬಗ್ಗೆ ಕ್ಲಬ್ಬಿನ ಸದಸ್ಯರು ಮತ್ತು ಮುಖ್ಯ ಆರ್ಕಿಕ್ಟೆಟ್ ಯಿಂದ ಮೆಚ್ಚುಗೆಗಳು ಬಂದವು. ಆದರೆ, ಕೆಲಸಗಳು ಆಮೆಗತಿಯಲ್ಲಿ ಸಾಗುತ್ತಿರುವುದರ ಬಗ್ಗೆ ಕ್ಲಬ್ಬಿನ ಸದಸ್ಯರು ಅಸಮಾಧಾನಗೊಂಡಿದ್ದರು. ಕ್ಲಬ್ಬಿನ ಅಧ್ಯಕ್ಷನಂತೂ “ ಇನ್ ಕಾಂಪಿಟಂಟ್ ಫೆಲೊಸ್…ಕಂಟ್ರಾಕ್ಟ್ ಆಗ್ರಿಮೆಂಟಂತೆ ಇವ್ರು ಒಂದು ವರ್ಷದಲ್ಲಿ ಪ್ರಾಜೆಕ್ಟ್ ಮುಗಿಸೋದೇ ಡೌಟು! ಇಂಥವರಿಗೆ ವರ್ಕ್ ಅಲಾಟ್ ಮಾಡ್ಬಾರದಿತ್ತು “ ಎಂದು ಬುಸ್ ಬುಸ್ಸೆಂದು ಸಿಗಾರ್ ಹೊಗೆ ಬಿಡುತ್ತ ಕೂಗಾಡಿದ. ಚಂದನನಿಗೆ ಅವರು ಹೇಳುವ ಮಾತು ತರ್ಕವಾಗಿ ಕಂಡರೂ ಅವನಿಗೆ ಅವನದೇ ಆದ ಸಮಸ್ಯೆಗಳಿದ್ದು ಹೇಳುವುದೋ ಬೇಡವೋ ಎನ್ನುವಾಗ ಬಾಯಿಯ ಪಸೆ ಆರುತ್ತಿತ್ತು.

“ ಸಾರ್… ಪೂರ್ತಿ ಪರಿಶೀಲಿಸದೆ ಡ್ರಾಯಿಂಗ್ ಗಳನ್ನು ಅರ್ಜೆಂಟಾಗಿ ಕಳುಹಿಸುತ್ತಾರೆ. ಅವುಗಳಲ್ಲಿ ತಪ್ಪುಗಳು ಬಹಳಷ್ಟು ಇರುತ್ತೆ. ತಿದ್ದುಪಡಿಗಾಗಿ ಕಳುಹಿಸಿದರೆ ಮತ್ತೆ ಡ್ರಾಯಿಂಗ್ ಗಳು ವಾಪಸ್ಸು ಬರುವುದು ತಡವಾಗುತ್ತಿದೆ ” ಎಂದಾಗ – ಖಾತ್ಯ, ಹಿರಿಯ ವಾಸ್ತುಶಿಲ್ಪಿ ತನ್ನ ಅರೆನೆರೆತ ಧಾಡಿಯನ್ನು ನೀವುತ್ತ ಚಂದನನತ್ತ ತಿರುಗಿದಾಗ ಚಂದನ ನಾಲಿಗೆ ಕಚ್ಚಿಕೊಂಡ. ಗಾಲ್ಫ್ ಕ್ಲಬ್ ಕೆಲಸಕ್ಕೆ ಚಂದನನೇ ಯೋಗ್ಯ ಎಂಜಿನಿಯರೆಂದು ಶಿಫಾರಸ್ಸು ಮಾಡಿದ್ದೇ ಚೀಫ್ ಆರ್ಕಿಕ್ಟೆಟ್! ಅಲ್ಲದೆ ಪ್ರಾಜೆಕ್ಟ್ ಕೆಲಸಗಳು ಸಾಂಗವಾಗಿ ನಡೆಯಬೇಕಿದ್ದರೆ ಅವರ ಸಹಕಾರ ಬಹಳ ಮುಖ್ಯವಾಗಿತ್ತು. ತಟ್ಟನೆ ಮಾತು ಬದಲಿಸಿ “ ಬಿಲ್ಡಿಂಗ್ ಮೆಟೀರಿಯಲ್ಸ್ ಸರಿಯಾಗಿ ಬರುತ್ತಿಲ್ಲ. ಹಣದ ಕೊರತೆಯಿದೆ “ ಎಂದು ಪ್ರಗತಿಗೆ ಅನುಗುಣವಾಗಿ ಕಳುಹಿಸಿದ ಬಿಲ್ಲುಗಳು ಪಾಸಾಗದೆ ತೊಂದರೆಯಾಗಿದೆಯೆಂದ.

ಕ್ಲಬ್ಬಿನ ಸದಸ್ಯರೆಲ್ಲರ ಮುಖ ಗಂಭೀರವಾಯಿತು. ದುಡ್ಡು ತಮಗೆ ಹುಣಸೇ ಬೀಜ ಸಮಾನವಾಗಿರುವಾಗ ಹಣದ ತೊಂದರೆಯೇ! ಒಬ್ಬ ಸದಸ್ಯ ತನ್ನ ಕೈಲಿದ್ದ ಫೈಲಿನಲ್ಲಿ ತಡಕಾಡಿ ದಸ್ತಾವೇಜಯೊಂದನ್ನು ಟೇಬಲ್ಲಿನ ಮೇಲಿಟ್ಟು “ ನೀವೇನು ಹೇಳುತ್ತಿದ್ದೀರ! ಸೈಟಿಗೆ ಬಿಲ್ಡಿಂಗ್ ಮೆಟೀರಿಯಲ್ಸ್ ಬಂದಾಗಲೆಲ್ಲ ಅದಕ್ಕೆ ತಕ್ಕಂತೆ ಅಡ್ವಾನ್ಸ್ ತಗೊಂಡಿದ್ದೀರಾ! ಅದು ನೀವು ಕೊಡುವ ರನ್ನಿಂಗ್ ಅಕೌಂಟ್ ಬಿಲ್ಲಿನಲ್ಲಿ ಕಟ್ ಆಗಿರುತ್ತೆ. ದುಡ್ಡು ಕೊಡುತ್ತಿಲ್ಲವೆಂದು ಹೇಗೆ ಹೇಳುತ್ತೀರಿ? “ ಎಂದ. ಚಂದನನಿಗೆ ಕಟ್ಟಡ ಸಾಮಗ್ರಿಗಳ ಮೇಲೆ ಗಂಗಾಧರರೆಡ್ಡಿ ಮುಂಗಡ ಹಣ ತೆಗೆದುಕೊಳ್ಳುತ್ತಿರುವುದು ತಿಳಿದಿರಲಿಲ್ಲ. ಅಪಮಾನವಾದಂತಾಗಿ ಅವನ ಮುಖ ಬಿಳಿಚಿಕೊಂಡಿತ್ತು.

ತಾಲೂಕ್ದಾರ್ ನನ್ನು ಬರಹೇಳಿ ಇಲ್ಲಿಯವರೆಗೂ ಕಟ್ಟಡದಲ್ಲಿ ಬಳಸಿರುವ ಮತ್ತು ಸೈಟಿನಲ್ಲಿ ಉಳಿದಿರುವ ಒಟ್ಟು ಉಕ್ಕಿನ ಸರಳುಗಳ ಬಗ್ಗೆ ಲೆಕ್ಕ ಹಾಕಲು ತಿಳಿಸಿದ. ಹಾಗೆ ದಾಮುಗೆ ಸೈಟಿಗೆ ಬಂದಿರುವ ಸಿಮೆಂಟು, ಮರಳು, ಕಲ್ಲುಜೆಲ್ಲಿ ಇತ್ಯಾದಿ ಕಟ್ಟಡ ಸಾಮಗ್ರಿಗಳ ಪರಿಮಾಣವನ್ನು ಪರಿಶೀಲಿಸಲು ಹೇಳಿದ.
ಮೀಟಿಂಗಿನಲ್ಲಿ ಕ್ಲಬ್ ಸದಸ್ಯ ಕೊಟ್ಟ ಕಟ್ಟಡ ಸಾಮಗ್ರಿಗಳ ಬಿಲ್ಲುಗಳಿಗೂ ಸೈಟಿನಲ್ಲಿ ಬಳಸಿ, ಉಳಿದ ಸಾಮಗ್ರಿಗಳಿಗೂ ಒಂದಕ್ಕೊಂದು ತಾಳೆಯಾಗದೆ ಪ್ರಮಾಣದಲ್ಲಿ ಬಹಳ ವ್ಯತ್ಯಾಸವಿತ್ತು. ಚಂದನನಿಗೆ ನಡೆದಿರಬಹುದಾದ ಮಸಲತ್ತು ತಿಳಿಯಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ಸರಬರಾಜು ಆಗದ ಕಟ್ಟಡ ಸಾಮಗ್ರಿಗಳ ಇಲ್ಲದ ಬಿಲ್ಲುಗಳನ್ನು ಸೃಷ್ಟಿಸಿ ಅದರಿಂದ ಮುಂಗಡ ಹಣವನ್ನು ಪಡೆದಿರುವುದು ಸ್ಪಷ್ಟವಾಗಿತ್ತು. ಗಾಲ್ಫ್ ಕ್ಲಬ್ಬಿನ ಕೆಲಸದ ಬಿಲ್ಲಿನಿಂದ ಬಂದ ಹಣವನ್ನು ಗಂಗಾಧರರೆಡ್ಡಿ, ಮನೆಗಳನ್ನು ಕಟ್ಟಿ ಮಾರುವ ತನ್ನ ಮತ್ತೊಂದು ದಂಧೆಯ ಕಾಮಗಾರಿ ಕೆಲಸಗಳಿಗಾಗಿ ಬಳಸುತ್ತಿರಬಹುದೆಂದು ಚಂದನ ಯೋಚಿಸಿದ. ಪ್ರತಿವಾರವೂ ಕೆಲಸಗಾರರಿಗೆ ಭಾಗಶಃ ವೇತನ ಮತ್ತು ಲೇಬರ್ ಕಾಂಟ್ರಾಕ್ಟುಗಳ ಬಿಲ್ಲುಗಳ ಅರ್ಧಂಬರ್ಧ ಹಣವನ್ನು ಪಾವತಿಸಿ ಕೆಲಸ ನಿಲ್ಲಿಸದಂತೆ ಗೋಗೆರೆದು ತಾನು ಒದ್ದಾಡುತ್ತಿದ್ದರೆ, ಈ ಮನುಷ್ಯ ಹಣವನ್ನು ಬೇರೆಡೆ ವಿನಿಯೋಗಿಸುತ್ತ, ಗಾಲ್ಫ್ ಕ್ಲಬ್ಬಿನ ಕೆಲಸವನ್ನು ಬಂಡವಾಳವನ್ನಾಗಿ ಮಾಡಿಕೊಂಡಿದ್ದಾನೆಂದು ಕೊಂಡ.

“ ಕಾಂಟ್ರಾಕ್ಟ್ ಮಾಡುವಾಗ ಮೆಟೀರಿಯಲ್ಸ್ ಅಡ್ವಾನ್ಸ್ ತಗೊಳ್ಳೋದು ಹೊಸ ವಿಚಾರ ಅಲ್ಲ. ಮುಖ್ಯವಾಗಿ ವರ್ಕ್ ಪ್ರೊಗ್ರೆಸ್ ಬಗ್ಗೆ ಹೆಚ್ಚು ನಿಗಾ ಇಡಿ. ಬಿಲ್ಲು ಮಾಡುವಾಗ ಆಗಿರುವ ಕೆಲಸಕ್ಕಿಂತ ಸ್ವಲ್ಪ ಜಾಸ್ತಿಯೇ ಮಾಡಿ. ಬಿಲ್ಲು ಪಾಸಾಗಿ ದುಡ್ಡು ಬರೋ ಹೊತ್ತಿಗೆ ಆ ಕೆಲಸಗಳು ಆಗಿರುತ್ತೆ. ವರ್ಕ್ ಪ್ರೊಗ್ರೆಸ್ ಮಾಡದೆ ಕೆಲಸಗಾರರಿಗೆ ದುಡ್ಡು ಎಲ್ಲಿಂದ ತರೋದು? ”

ಹೊಟ್ಟೆ ಸವರುತ್ತ ಗಂಗಾಧರರೆಡ್ಡಿ ಆಡಿದ ಮಾತಿನ ವರಸೆ ನೋಡಿದರೆ ತಪ್ಪೆಲ್ಲವೂ ಚಂದನನದೇ ಎಂಬಂತಿತ್ತು. ತಾನು ಮಾಲೀಕ, ಕೆಲಸದ ದುಡ್ಡಿನ ಬಳಕೆ ಬಗ್ಗೆ ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಕೆಲಸದ ಪ್ರಗತಿ ಮಾಡುವುದು ಸೈಟಿನ ಎಜಿಮ್ ಆದವನದೇ ಹೊಣೆ ಎನ್ನುವಂತಿತ್ತು. ‘ ಬಿಲ್ಲಿನ ದುಡ್ಡನ್ನೆಲ್ಲ ಬೇರೆಡೆ ವ್ಯಯಿಸಿ, ಕಟ್ಟಡ ಸಾಮಗ್ರಿ ಇರದೆ, ಕೆಲಸಗಾರರಿಗೆ ವೇತನ ಸರಿಯಾಗಿ ಪಾವತಿಸದೇ ಪ್ರಗತಿ ಹೇಗೆ ಸಾಧ್ಯ? ’ ಎಂದು ಕಡ್ಡಿಮುರಿದಂಗೆ ಹೇಳಬೇಕೆಂದು ಕೊಂಡ ಚಂದನ, ಗಂಗಾಧರರೆಡ್ಡಿಯ ದರ್ಪದ ದನಿಗೆ ಪ್ರತಿ ಆಡಲಾರದೆ ಮಿಸುಕಾಡಿದ.

ಕೆಲಸದ ಪ್ರಗತಿಯನ್ನಷ್ಟೇ ಪ್ರಶ್ನಿಸುವ ಗಾಲ್ಫ್ ಕ್ಲಬ್ಬಿನ ಸದಸ್ಯರಲ್ಲಾಗಲಿ, ಮುಖ್ಯ ಆರ್ಕಿಟೆಕ್ಟ್ ಬಳಿಯಾಗಲಿ ಗಂಗಾಧರರೆಡ್ಡಿಗಿರುವ ಕೆಲಸದ ಬಗ್ಗೆ ಇರುವ ಉದಾಸೀನತೆ ಅರಹುವ ಆಗಿಲ್ಲ. ಅದು ಕಂಪನಿಯ ಪ್ರತಿಷ್ಠೆಯ ಪ್ರಶ್ನೆ! ಹಾಗೆ ಹೇಳಿ ಸಾಧಿಸುವುದಾದರೂ ಏನಿರಲಿಲ್ಲ. ಇನ್ನೂ ಉಳಿದಿರುವ ಆಯ್ಕೆಯಾದರೂ ಯಾವುದು? ಗಂಗಾಧರರೆಡ್ಡಿಯ ವಂಚಕತನವನ್ನು ಸಹಿಸಿ ಏಕಾಂಗಿಯಾಗಿ ಕೆಲಸ ಮಾಡುವುದು ಅಥವಾ ಎಲ್ಲರ ಮಧ್ಯೆ ಏಗುವುದರ ಬದಲು ಕೆಲಸ ಬಿಡಬೇಕು. ಬೇರೊಂದು ಕೆಲಸ ಸಿಗುವುದು ಸ್ವಲ್ಪ ತಡವಾಗಬಹುದಾದರೂ ಸಿಕ್ಕೇ ಸಿಗುತ್ತೆ. ಆದರೆ, ಇಷ್ಟು ಆಸಕ್ತಿಕಾರಿ ಸವಾಲಿನ ಕೆಲಸ ಸಿಗುವುದು, ಸಿಕ್ಕರೂ ಈ ಪ್ರಾಜೆಕ್ಟಿನಂತೆ ತನ್ನೊಬ್ಬನ ಮೇಲೆಯೇ ಅವಲಂಬಿತವಾಗಿ ನಡೆಯುವ ಕೆಲಸ ಸಿಗುವುದು ಅಸಂಭವದ ಮಾತು.

ಚಂದನನಿಗೆ ತಾನಿಲ್ಲದಿದ್ದರೆ ಸೈಟಿನ ಕೆಲಸ ಯಾರಿಗೂ ಒಂದಿಂಚು ಅರ್ಥವಾಗದಿರುವುದು ಹೆಮ್ಮೆಯ ಜೊತೆಗೆ ತುಸು ಜಂಭದ ವಿಷಯವಾಗಿ, ಕಟ್ಟಡದ ಕೆಲಸ ಪೂರ್ತಿ ಮುಗಿಯುವವರೆಗೂ ಹಲ್ಲುಕಚ್ಚಿ ಇರಬೇಕೆಂದು ಕೊಂಡ. ಅಲ್ಲದೆ, ಗಾಲ್ಫ್ ಆಡಲು ಬರುತ್ತಿದ್ದ ಕ್ಲಬ್ಬಿನ ಸದಸ್ಯರು ಮತ್ತು ಆರ್ಕಿಟೆಕ್ಟ್ ಕಡೆಯಿಂದ ಬರುವ ಸಂದರ್ಶಕರು ಕಟ್ಟಡ ಹೊಸಶೈಲಿಗೆ ಮಾರು ಹೋಗಿ ಅದನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದ ಚಂದನನನ್ನು ತಾರೀಫ್ ಮಾಡುವುದು ಅವನು ಮತ್ತಷ್ಟು ಉಬ್ಬಿ ಹೋಗುವಂತೆ ಮಾಡುತ್ತಿತ್ತು.

ಎಲ್ಲಾ ಕಟ್ಟಡ ನಿರ್ಮಾಣದಲ್ಲಿ ಆಗುವಂತೆ ಪಾಯದ ಕೆಲಸಗಳು ತಡವಾದರೂ, ಭೂ ಮಟ್ಟದ ಮೇಲಿನ ಕಟ್ಟಡದ ಕೆಲಸಗಳು ತ್ವರಿತಗತಿಯಲ್ಲಿ ಆಗಿ, ಆದಿನ ಕಟ್ಟಡದ ಕೊನೆಯ ತಾರಸಿಯ ರೂಫ್ ಸ್ಲಾಬ್ ಕಾಂಕ್ರೀಟು ಭರದಿಂದ ಸಾಗಿತ್ತು. ಸೈಟು ಆಫೀಸಲ್ಲಿ ಚಂದನ ಬಿಲ್ ತಯಾರಿಯಲ್ಲಿ ಮಗ್ನನಾಗಿದ್ದ. ಹೊರಗಡೆ ಕೆಲಸಗಾರರ ಕೂಗಾಟಗಳು, ಕಟ್ಟಿಂಗ್ ಮೇಷಿನ್ ಡ್ರಿಲಿಂಗ್ ಮೇಷಿನ್ ಇತ್ಯಾದಿ ಯಂತ್ರಗಳ ಕಲಸುಮೆಲೋಗರ ಸದ್ದು ಕಿವಿ ತಮಟೆ ಹರಿಯುವಂತಿತ್ತು. ಕಾಂಕ್ರೀಟ್ ನಡೆಯುತ್ತಿದ್ದ ಜಾಗದಲ್ಲಿ ಜನರು ಕೂಗಾಡುತ್ತಿದ್ದು ಈ ಎಲ್ಲಾ ಸಪ್ಪಳಗಳ ಮಧ್ಯೆ ಸಿಕ್ಕು ಅಲ್ಲಿ ನಡೆದ ಅವಘಡ ಚಂದನನಿಗೆ ಬಹಳ ತಡವಾಗಿಯೇ ತಿಳಿಯಿತು.

ಆಫೀಸಿಗೆ ಓಡಿ ಬಂದ ತಾಲೂಕ್ದಾರ್ “ ಸಾಬ್..ಆಪ್ ಜಲ್ದಿ ಆಯಿಯೆ…ಕುಚ್ ಗಡ್ ಬಡ್ ಉಹಾ ಹೈ “ ಎಂದು ಬಡಬಡಿಸಿದ. ಹಿಂದೆಯೇ ದಾಮು “ ಬೇಗ ಬನ್ನಿ…ಸಾರ್..” ಅಂದದ್ದು, ಚಂದನನಿಗೆ ‘ ಮತ್ಯಾವ ಆಕ್ಸಿಡೆಂಡ್ ಆಯ್ತಪ್ಪ ’ ಎಂದು ದೌಡಾಯಿಸಿದ. ಕಳೆದ ವಾರವಷ್ಟೇ ಮರದ ಹಲಗೆಗಳನ್ನು ಕತ್ತರಿಸುತ್ತಿದ್ದ ಕಾರ್ಪೆಂಟರ್ ಗೆ ತಿರುಗುಟ್ಟುತ್ತಿದ್ದ ಬ್ಲೇಡಿನಿಂದ ಹಾರಿದ ಕಿಡಿ ಕಣ್ಣಿಗೆ ಬಿದ್ದು ಒಂದು ಕಣ್ಣೇ ಹೋಗಿದ್ದು, ಗಂಗಾಧರರೆಡ್ಡಿಯ ಅಲಕ್ಷ್ಯದಿಂದಾಗಿ ಆಸ್ಪತ್ರೆಯ ವೆಚ್ಚ ಭರಿಸುವುದೇ ಕಷ್ಟವಾಗಿದ್ದಾಗ ಕಾರ್ಮಿಕನಿಗೆ ಪರಿಹಾರ ಕೊಡಿಸುವುದು ಕನಸಿನ ಮಾತಾಗಿತ್ತು.

ಸುತ್ತುಗಟ್ಟಿದ ಜನರನ್ನು ಬಿಡಿಸಿಕೊಂಡು ನೋಡಿದರೆ, ಕಾಂಕ್ರೀಟ್ ಮಿಕ್ಸರ್ ಬಳಿ ಅದರ ಡ್ರೈವರ್ ಸಂಜು ನೆಲಕ್ಕೆ ಕುಸಿದು ರೋದಿಸುತ್ತಿದ್ದ. ಅವನ ಎರಡು ಕೈಗಳು ಜಜ್ಜಿಹೋಗಿ, ಜೋಲಾಡುತ್ತ ರಕ್ತ ಧಾರಾಕಾರವಾಗಿ ಸುರಿಯುತ್ತಿತ್ತು. ಜೆಲ್ಲಿ, ಮರಳನ್ನು ಮಿಕ್ಸರ್ ಗೆ ಹಾಕುವಾಗ ತಿರುಗುತ್ತಿದ್ದ ಡ್ರಮ್ಮಿನ ಒಳಗೆ ಕೈತಪ್ಪಿ ಬಾಂಡ್ಲಿ ಬಿದ್ದು, ಡ್ರಮ್ಮನ್ನು ನಿಲ್ಲಿಸದೆ ಬಾಂಡ್ಲಿಯನ್ನು ಎತ್ತಲು ಹೋಗಿ ಎರಡು ಕೈಗಳು ತಿರುಗುವ ಡ್ರಮ್ಮಿನೊಳಗೆ ಸಿಕ್ಕು, ತಿರುಚಿಕೊಂಡು ನಜ್ಜುಗುಜ್ಜಾಗಿದ್ದವು. ಅಂಬ್ಯುಲೆನ್ಸಿಗೆ ಫೋನು ಮಾಡದೆ ತನಗಾಗಿ ಕಾದಿದ್ದಕ್ಕೆ ಚಂದನ, ದಾಮುಗೆ ಬೈದು ಗಾಲ್ಫ್ ಆಡಲು ಬಂದ ಸದಸ್ಯರೊಬ್ಬರಲ್ಲಿ ಕೇಳಿಕೊಂಡು ಅವರ ಕಾರಲ್ಲಿ ಸಂಜುವನ್ನು ಆಸ್ಪತ್ರೆಗೆ ಸಾಗಿಸಿದ. ಮೊಣಕೈವರೆಗಿನ ಮೂಳೆಗಳೆಲ್ಲ ಪುಡಿಪುಡಿಯಾಗಿದ್ದರಿಂದ ಕೈಗಳನ್ನು ಅರ್ಧಕ್ಕೆ ತುಂಡರಿಸಲಾಯಿತು.

ಸಂಜು ಬಾಗಲಕೋಟೆಯ ಬಡ ಹುಡುಗ. ಇನ್ನೆರೆಡು ತಿಂಗಳಿಗೆ ಸಂಬಂಧಿಕರಲ್ಲಿ ಅವನ ಮದುವೆ ನಿಶ್ಚಯವಾಗಿತ್ತು. ಈ ಮುಂಚೆ ಒಪ್ಪಿರುವ ಹೆಣ್ಣು ಎರಡು ಕೈಗಳನ್ನು ಕಳೆದುಕೊಂಡವನನ್ನು ಈಗಲೂ ಮದುವೆಗೆ ಒಪ್ಪುವಳೇ ಎಂಬುದು ಒಂದು ಪ್ರಶ್ನೆಯಾದರೆ, ಮುಂದೆ ಅವನು ವಿಕಲಾಂಗನಾಗಿ ಹೊಟ್ಟೆ ಹೊರೆಯುವುದು ಹೇಗೆ? ಎಂಬುದು ಯಕ್ಷ ಪ್ರಶ್ನೆಯಾಗಿತ್ತು.

ಗಂಗಾಧರರೆಡ್ಡಿ ಕೋಪದಿಂದ ಬುಸುಗುಡುತ್ತಿದ್ದ. “ ಅಲ್ಲ ಚಂದನ್…ಹೊಟ್ಟೆಗೇನು ಮಾಡ್ತಾನೆ ಅಂದ್ರೆ ಏನರ್ಥ? ನಾನೇನು ಅವನಿಗೆ ಡ್ರಮ್ಮಿನೊಳಗೆ ಕೈ ಹಾಕುಂತ ಹೇಳಿದ್ನ? ದಿನಾಲೂ ಸೈಟಲ್ಲಿ ಇಂಥವು ಯಾವುದಾದ್ರೊಂದು ನಡಿತಾನೇ ಇರುತ್ತೆ! ಅದಕ್ಕೆಲ್ಲ ನಾನು ಹೊಣೆನಾ? ಆಸ್ಪತ್ರೆಯ ಬಿಲ್ಲನ್ನು ಸೆಟ್ಲು ಮಾಡ್ತೀನಿ. ನಮ್ ಮೈನ್ ಆಫೀಸಲ್ಲಿ ಗೇಟ್ ಕಾಯ್ಕೊಂಡು ಬೇಕಾದ್ರೆ ಇರ್ಲಿ. ಅದರ ಮೇಲೆ ಏನೂ ಮಾಡಕ್ಕಾಗಲ್ಲ ” ಎಂದು, ಆದಷ್ಟು ಪರಿಹಾರ ಕೊಡಿಸಬೇಕೆಂಬ ಚಂದನನ ಮಾತಿಗೆ ಸೊಪ್ಪು ಹಾಕಲಿಲ್ಲ.

ಗಂಗಾಧರರೆಡ್ಡಿಯ ಕನಿಕರವಿಲ್ಲದ ನಡೆ ಚಂದನನಿಗೆ ಅವನ ಬಗ್ಗೆ ಜುಗುಪ್ಸೆ ಉಂಟು ಮಾಡಿತು. ಚಿನ್ನದ ಚಮಚವನ್ನು ಬಾಯಲ್ಲಿಟ್ಟುಕೊಂಡೇ ಹುಟ್ಟಿದ ಶ್ರೀಮಂತ ಕ್ಲಬ್ ಸದಸ್ಯರಲ್ಲಿ ಮನವಿ ಮಾಡಿದಾಗ ಯಾರಾದರೊಬ್ಬರು ಸಹಾಯ ಮಾಡಬಹುದಿತ್ತಾದರೂ, ತನ್ನ ಕೆಲಸಗಾರನಿಗೆ ಯಜಮಾನನೇ ಪರಿಹಾರ ನಿರಾಕರಿಸಿರುವಾಗ ಅವರು ತಾರಮ್ಮಯ್ಯ ಎಂದಿದ್ದರಲ್ಲಿ ಆಶ್ಚರ್ಯವೇನಿರಲಿಲ್ಲ.

ಕೆಲಸಗಾರರ ಬಗ್ಗೆ ಅನುಕಂಪದ ಮಾತು ಒತ್ತಟ್ಟಿಗಿರಲಿ, ತನ್ನನ್ನು ಸೇರಿದಂತೆ ಸೈಟಿನ ಸಿಬ್ಬಂದಿಗೆ ತಿಂಗಳಿಗೆ ಸರಿಯಾಗಿ ಸಂಬಳ ಬಂದದ್ದೇ ನೆನಪಿಲ್ಲ! ಆದರೀಗ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ತಿಂಗಳುಗಳು ತಿಳಿಯದಂತೆ ಉರುಳಿ ಮೂರು ತಿಂಗಳ ಸಂಬಳ ಬಾಕಿಯನ್ನು ಕೊಡದೆ ಸತಾಯಿಸಿ, ತುರ್ತಿದ್ದವರಿಗೆ ಒಂದಷ್ಟು ಮುಂಗಡ ಹಣ ಕೊಟ್ಟು ಸಾಗ ಹಾಕುವ ಗಂಗಾಧರರೆಡ್ಡಿಯಲ್ಲಿ ಇನ್ನು ಉಳಿಯುವುದರಲ್ಲಿ ಚಂದನನಿಗೆ ಯಾವ ಅರ್ಥವೂ ಕಾಣಲಿಲ್ಲ.

ಗೋಡೆಯ ಕಾಲ್ಯೆಂಡರ್ ಪ್ರತಿ ತಿಂಗಳು ಮುಗುಚಿಕೊಳ್ಳುವಾಗ ಗಂಗಾಧರರೆಡ್ಡಿಯನ್ನು ಸಂಬಳ ಕೇಳುವ ಧೈರ್ಯವಿರದೆ ಸಿಬ್ಬಂದಿಗಳು ತಂತಮ್ಮ ತಾಪತ್ರಯಗಳನ್ನು ಹೇಳಿಕೊಂಡು ಚಂದನನಲ್ಲಿ ಮುಗಿಬೀಳುತ್ತಿದ್ದರು. ದಾಮುನ ಮಗ ರಸ್ತೆ ಅಪಘಾತಕ್ಕೊಳಗಾದಾಗ, ಬಂಗಾಳದಂತ ದೂರದೂರಿಂದ ತಾಲೂಕ್ದಾರ್ನ ಹೆಂಡತಿ ಫೋನು ಮಾಡಿ ಮಕ್ಕಳ ಶಾಲೆ ಫೀಸು ತುಂಬಲಾಗದೆ ಅಲವತ್ತುಗೊಂಡಾಗ, ಸಂದೀಪನಿಗೆ ಮನೆ ಬಾಡಿಗೆಗೆ…ಹೀಗೆ ಹಲವಾರು ಸಂದರ್ಭಗಳಲ್ಲಿ ಚಂದನನೇ ತನ್ನ ಉಳಿತಾಯದ ನಿಶ್ಚಿತ ಠೇವಣಿ ಮುರಿಸಿ ಹಣ ಸಹಾಯ ಮಾಡಿದ್ದ. ಸೈಟಿನಲ್ಲಿ ಹಗಲಿರುಳು ದುಡಿಯುವುದು, ಸಿಬ್ಬಂದಿಗಳ ಕಷ್ಟಸುಖಕ್ಕೆ ಸ್ಪಂದಿಸುವುದು ಇವೆಲ್ಲ ಯಾವ ಸಾರ್ಥಕತೆಗಾಗಿ? ಯಾವ ಮನುಷ್ಯ ಸಂವೇದನೆಯಿಲ್ಲದವನ ತುಂಬದ ಡೊಳ್ಳು ಹೊಟ್ಟೆಯನ್ನು ತುಂಬಿಸಲು ಏಕಿಷ್ಟು ಹೆಣಗಾಟ? ಅನಿಸಿತು ಚಂದನನಿಗೆ.

ತಗಡಿನ ಚಾವಣಿಯ ಸೈಟ್ ಆಫೀಸಿನೊಳಗೆ ಧಗೆಯೆಂದು, ಚೇರು ಟೇಬಲ್ಲನ್ನು ಹೊರಗಡೆ ಹುಲ್ಲುಹಾಸಿನಲ್ಲಿ ಹಾಕಿಸಿಕೊಂಡು ಊರಿಂದ ಬಂದ ಸಂಬಂಧಿಕರೊಂದಿಗೆ ಗಂಗಾಧರರೆಡ್ಡಿ ಹರಟೆ ಹೊಡೆಯುತ್ತಿದ್ದ. ಯೌವನದಲ್ಲಿ ತಾನು ಹಳ್ಳಿಯಲ್ಲಿ ಮೆರೆದ ಅಟ್ಟಹಾಸವನ್ನು, ಎದುರಾಡಿದವರನ್ನು ಕೊಚ್ಚಿ ಕೊಂದದ್ದನ್ನು, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಬೆಂಗಳೂರಿಗೆ ಓಡಿಬಂದು, ಕಾಂಟ್ರಾಕ್ಟರಾಗಿ ಬೆಳೆದದ್ದನ್ನು ಸಿನಿಮಾದಂತೆ ವರ್ಣರಂಜಿತವಾಗಿ ಬಣ್ಣಿಸುತ್ತಿದ್ದು ಅಲ್ಲೇ ನಿಂತಿದ್ದ ಚಂದನನಿಗೆ ಬೇಡವೆಂದರೂ ಕಿವಿಗೆ ಬೀಳುತ್ತಿತ್ತು.

ಬಂದವರು ಹೊರಟು ಚಂದನನನ್ನು ಗಂಗಾಧರರೆಡ್ಡಿ ಸನ್ನೆ ಮಾಡಿ ಕರೆದಾಗ, ಅವನ ಹಿಂದೆಯೇ ತಾಲೂಕ್ದಾರ, ದಾಮು, ಸಂದೀಪ್…..ಸೈಟಿನ ಸಿಬ್ಬಂದಿ ಒಬ್ಬೊಬ್ಬರಾಗಿ ಕಾಣಿಸಿ “ ಏನ್..ಚಂದನ್…ಇಡೀ ಸ್ಟಾಫ್ನೇ ಜೊತೆಗೆ ಕರ್ಕೊಂಡು ಬಂದಿದ್ದೀಯ…ಏನ್ ಸ್ಟ್ರೈಕಾ? “ ಎಂದ. “ ಹಾಗೇನು ಇಲ್ಲ…ಸಾರ್. ಮೂರು ತಿಂಗಳಿಂದ ಸಂಬಳವಿಲ್ಲ. ಎಲ್ರೂ ಅವರವದೇ ಪ್ರಾಬ್ಲಮ್ ಹೇಳ್ತಿದ್ರು. ಸರ್ ಹತ್ರಾನೇ ಒಮ್ಮೆ ಹೇಳ್ಕೊಳಿ ಅಂತ ನಾನೇ ಕರೆದೆ ”. ಚಂದನ ಹಿಂಜರಿಕೆಯಿಂದಲೇ ನುಡಿದ.

ತಟ್ಟನೆ ಗಂಗಾಧರರೆಡ್ಡಿ ಅವರ ಅಹವಾಲನ್ನು ಕೇಳುವ ಗೋಜಿಗೆ ಹೋಗದೆ ಅಸಹನೆಯಿಂದ “ ಕೆಲಸ ಮುಗೀತಾ ಬಂತಲ್ಲ. ಫೈನಲ್ ಬಿಲ್ಲು ಮಾಡಿಬಿಡು. ಬಿಲ್ ಪಾಸಾದ ಕೂಡ್ಲೇ ಎಲ್ರೂದು ಚುಕ್ತಾ ಮಾಡಿಬಿಡೋಣ “ ಎಂದು ಮುಖಗಂಟಿಕ್ಕಿ ಹೇಳಿದ. ಕೆಲಸಗಳಿನ್ನೂ ಬಾಕಿ ಇರುವಾಗ ಫೈನಲ್ ಬಿಲ್ಲನ್ನು ತಯಾರು ಮಾಡಲು ಹೇಳಿದ್ದು ಕೇಳಿ ಚಂದನ ಅವಾಕ್ಕಾದ. ಕೆಲಸ ಬಿಡುತ್ತಿರುವುದಾಗಿ ಹೇಳಬೇಕೆಂದಿದ್ದವನು ಗಂಗಾಧರರೆಡ್ಡಿಯ ನಕಾರಾತ್ಮಕ ಧೋರಣೆ ನೋಡಿ ಸ್ಪಂದಿಸುವನೋ ಇಲ್ಲವೋ ಎಂಬ ಸಂಶಯದಲ್ಲಿ ಮಾತನ್ನು ನುಂಗಿದ.

ಇಷ್ಟು ದಿನಗಳ ಕೆಲಸದಲ್ಲಿ ಎಂದು ಬೇಸರಿಸದೆ ಕೆಲಸ ಮಾಡಿದವನಿಗೆ, ಈಗ ಅಲ್ಲಿಯ ವಾತಾವರಣ ಉಸಿರುಗಟ್ಟಿದಂತಾಗಿ ಅಲ್ಲಿಂದ ಓಡಿ ಹೋಗಬೇಕು ಅನಿಸುತ್ತಿತ್ತು. ಪಟ್ಟಾಗಿ ಕೂತು ಆದ, ಆಗಿರದ ಕೆಲಸಗಳನ್ನೆಲ್ಲ ಸೇರಿಸಿ ಫೈನಲ್ ಬಿಲ್ಲನ್ನು ತಯಾರಿಸಿ ಗಂಗಾಧರರೆಡ್ಡಿಯ ಮುಂದಿಟ್ಟ. ಬಿಲ್ಲಿನ ಹಣದ ಅಗಾಧ ಮೊತ್ತವನ್ನು ನೋಡಿಯೇ ಗಂಗಾಧರರೆಡ್ಡಿಯ ಮುಖವರಳಿತು.

“ ಮುಂದಿನ ತಿಂಗಳಿಂದ ನಾನು ಕೆಲಸಕ್ಕೆ ಬರೋದಿಲ್ಲ…ಸಾರ್. ನಾನೇ ಸ್ವಂತ ಕಂಟ್ರಾಕ್ಟ್ ಶುರು ಮಾಡ್ಬೇಕು ಅಂತಿದೀನಿ ” ಅಂದ. ಎಲ್ಲಿ ನಿರಾಕರಿಸುವನೋ ಅನ್ನುವಾಗ್ಗೆ, ವ್ಯತಿರಿಕ್ತವಾಗಿ “ ಒಳ್ಳೇದು…ಹಾಗೆ ಮಾಡು. ನೀನು ಬುದ್ಧಿವಂತನಿದ್ದೀಯ!…ಸಕ್ಸೆಸ್ ಆಗ್ತೀಯ “ ಎಂದಾಗ ಬಿಡುಗಡೆ ಸಿಕ್ಕಂತಾಗಿ ನಿಟ್ಟುಸಿರು ಬಿಟ್ಟ. ನಾಲ್ಕು ತಿಂಗಳ ಸಂಬಳ ಬಾಕಿ ಇರುವುದರ ಬಗ್ಗೆ ಕೇಳಿದ್ದಕ್ಕೆ “ ಆರಾಮಾಗಿರು…..ಫೈನಲ್ ಬಿಲ್ ಬಂದು ಕೂಡ್ಲೇ ಒಟ್ಟಿಗೆ ಕೊಟ್ಬಿಡ್ತೀನಿ “ ಎಂಬ ಸಿದ್ದ ಉತ್ತರ ಬಂತು.

ಗಾಲ್ಫ್ ಕೋರ್ಟ್ ಬಿಡುವಾಗ ತಾಲೂಕ್ದಾರ, ದಾಮು, ಸಂದೀಪ್ ಸಪ್ಪೆಮೋರೆಯಿಂದ ನಿಂತಿದ್ದರು. ಚಂದನನಿಗೆ ಅವರ ಸಂಕಟ ಅರ್ಥವಾಗುತ್ತಿತ್ತು. ತನ್ನ ಅನುಪಸ್ಥಿತಿಯಲ್ಲಿ ಕೋಪಿಷ್ಠ ಗಂಗಾಧರರೆಡ್ಡಿಯನ್ನು ನಿಭಾಯಿಸುವುದು ಹೇಗೆಂಬ ಸಮಸ್ಯೆ ಒಂದೆಡೆಯಾದರೆ ಸಂಬಳವನ್ನು ಧೈರ್ಯವಾಗಿ ಕೇಳುವ ಬಾಯಿ ಅವರಿಗಿಲ್ಲವಾಗಿತ್ತು. ಕಷ್ಟದಲ್ಲಿ ಸಹಾಯ ಮಾಡಿದ್ದನ್ನು ನೆನೆಸಿಕೊಂಡು ಸಂಬಳ ಬಂದ ಕೂಡಲೇ ಹಣವನ್ನು ಹಿಂತಿರುಗಿಸುವುದಾಗಿ ಹೇಳಿದರು. ಬಿಲ್ ಪಾಸಾದ ಸಂಗತಿ ತಿಳಿದ ಕೂಡಲೇ ತನಗೆ ಫೋನು ಮಾಡಲು ಹೇಳಿ, ಇಲ್ಲದಿದ್ದರೆ ಈ ಮನುಷ್ಯ ಹಣವನ್ನು ಬೇರೆಡೆ ಸಾಗಿಸುತ್ತಾನೆಂದು ಎಚ್ಚರಿಸಿ ಚಂದನ ಅಲ್ಲಿಗೆ ತನ್ನ ಗಾಲ್ಫ್ ಕ್ಲಬ್ಬಿನ ಕೆಲಸದ ಋಣಾನುಬಂಧ ಮುಗಿಯಿತೆಂದು ಅಲ್ಲಿಂದ ಹೊರಟ.

ಕೆಲಸಕ್ಕಾಗಿ ತಲೆಕೆಡಿಸಿಕೊಂಡು ಓಡಾಡಿ, ಹೊಸ ಕೆಲಸ ಸಿಕ್ಕು ಅದಕ್ಕೆ ಹೊಂದಿಕೊಳ್ಳುವ ಭರದಲ್ಲಿ ಚಂದನನಿಗೆ ಗಾಲ್ಫ್ ಕ್ಲಬ್ ಮರೆತಂತೆ ಆಗಿ ಆದಾಗಲೇ ಎರಡು ತಿಂಗಳು ಸರಿದಿತ್ತು. ತನ್ನ ಮರೆವನ್ನು ಶಪಿಸುತ್ತ ಸಂಬಳಕ್ಕಾಗಿ ಗಂಗಾಧರರೆಡ್ಡಿಗೆ ಫೋನು ಮಾಡಿದ. ಹಲವಾರು ಬಾರಿ ಮಾಡಿದರೂ ಆತ ಕರೆ ಸ್ವೀಕರಿಸಲಿಲ್ಲ. ಚಂದನನಿಗೆ ಏನೋ ಎಡವಟ್ಟಾಗಿದೆ ಎನಿಸಿ ಎದೆಬಡಿದುಕೊಳ್ಳ ತೊಡಗಿತು.

ಗಾಲ್ಫ್ ಕೋರ್ಟಿನ ಸೈಟ್ ಆಫೀಸಿಗೆ ಬಂದಾಗ ಗಂಗಾಧರರೆಡ್ಡಿ ಇನ್ನು ಬಂದಿರಲಿಲ್ಲ. ಕಟ್ಟಡವನ್ನು ಒಂದು ಸುತ್ತು ಬಂದವನಿಗೆ ತನ್ನ ಅನುಪಸ್ಥಿತಿಯು ಕೆಲಸಗಳಿಗೆ ಅಡ್ಡಿಯಾಗದೆ ಎಂದಿನಂತೆ ಭರದಿಂದ ಸಾಗಿರುವುದು ಕಂಡು ಒಮ್ಮೆ ಪಿಚ್ಚೆನಿಸಿತು. ಕಷ್ಟದ ಕೆಲಸಗಳು ತನ್ನ ಇರುವಿಕೆಯಲ್ಲೇ ಮುಗಿದಿತ್ತಲ್ಲ ಎಂದು ಸಮಾಧಾನಗೊಂಡು, ಊರನ್ನು ಬೈಗಿನಲ್ಲಿ ಎದ್ದೇಳಿಸೊ ಅಜ್ಜಿ ಹುಂಜದ ಕತೆ ನೆನಪಿಗೆ ಬಂದು ತನ್ನಲ್ಲೇ ನಕ್ಕ.

ಬಹುಶಃ ಸೈಟಿನಲ್ಲಿ ತಾನು ಅಡ್ಡಾಡುತ್ತಿದ್ದನ್ನು ದೂರದಲ್ಲಿದ್ದು ಗಮನಿಸಿದ್ದಿರಬೇಕು. ಗಂಗಾಧರರೆಡ್ಡಿಯನ್ನು ಕಾಯುತ್ತ ಸೈಟ್ ಆಫೀಸಿನಲ್ಲಿ ಕೂತಾಗ “ ಹೇಗಿದ್ದೀರಿ…ಸಾರ್? “ ಎಂದು ತಾಲೂಕ್ದಾರ್, ದಾಮು, ಸಂದೀಪ್ ಬಂದರು.

“ ಸಂಬಳ ಸಿಕ್ಕು ಅರ್ಧ ವರ್ಷ ಆಗ್ತಾ ಬಂತು! ಹೇಗೆ ಜೀವ್ನ ಸಾಗುಸ್ತಿದ್ದೀರಪ್ಪ? ” ಎಂದು ಚಂದನ ತಮಾಷೆ ಮಾತಾಡಿದ. ತಟ್ಟನೆ ದಾಮು “ ಇಲ್ಲ ಸಾರ್..ಎರಡು ತಿಂಗಳ ಸಂಬಳ ಮಾತ್ರ ಬಾಕಿ ಇರೋದು “ ಅಂದವನು ಹೇಳಬಾರದಿತ್ತೆಂಬಂತೆ ನಾಲಿಗೆ ಕಚ್ಚಿಕೊಂಡಿದ್ದು ಚಂದನ ಗಮನಿಸಿದ. ಅಂದರೆ ತಾನಿದ್ದ ಕಾಲದವರೆಗೂ ಇವರಿಗೆಲ್ಲ ಸಂಬಳ ಬಂದಾಗಿದೆ. ತನಗೆ ಮಾತ್ರ ಸಂಬಳವಿರಲಿ, ಸಮಯ ಸಂದರ್ಭವೆಂದು ಸಹಾಯವಾಗಿ ಕೊಟ್ಟ ಸಾಲದ ಹಣದ ಸುಳಿವೂ ಇಲ್ಲ! ಇವರಿಗೇನಾಗಿದೆ… ಮನುಷ್ಯ ಇಷ್ಟು ಕೃತಘ್ನನಾಗಿರಲು ಸಾಧ್ಯವೇ? ಚಂದನನಿಗೆ ಅವರ ಬಗ್ಗೆ ಜುಗುಪ್ಸೆಯೊಂದಿಗೆ ವಿಪರೀತ ಸಿಟ್ಟು ಬಂತು.

“ ಅಲ್ರಯ್ಯ…ಬಿಲ್ಲು ಪಾಸಾದ ಕೂಡ್ಲೆ ನಂಗೆ ಫೋನ್ ಮಾಡ್ಬೇಕೂಂತ ಹೊಳೀಲಿಲ್ವ! ಅದು ಹೋಗ್ಲಿ…ಕಷ್ಟಕಾಲಕ್ಕೆ ಕೊಟ್ಟ ದುಡ್ಡನ್ನು ವಾಪಸ್ ಮಾಡ್ಬೇಕೂಂತ ಅನಿಸ್ಲಿಲ್ವ! ” ಅಂದರೆ, ತಾಲೂಕ್ದಾರ್ “ ವೈಸೆ ನಹಿ ಸಾಬ್… ಅಮ್ ತೊ ದೇನೆ ವಲಾತ..ಮಗರ್…” ಎಂದು ಸಾಲ ವಾಪಸ್ಸು ಮಾಡಲು ತನಗೆ ಫೋನು ಮಾಡಿದರೆ ಸಂಬಳ ಸಿಕ್ಕಿದ್ದು ಹೇಳಬೇಕಾಗುತ್ತೆ. ಪ್ರಾಜೆಕ್ಟ್ ಮ್ಯಾನೇಜರ್ ಶ್ರೀನಿವಾಸರೆಡ್ಡಿ “ ನಿಮಗೆ ಸಂಬಳ ಬೇಕಿದ್ರೆ ಎಜಿಎಮ್ ಗೆ ತಿಳಿಸ್ಬೇಡಿ. ಅವರ ಒಂದ್ ತಿಂಗಳ ಸಂಬಳ ನಮ್ಮೆಲ್ಲರ ತಿಂಗಳ ಸಂಬಳವಾಗುತ್ತೆ. ಬಾಸು ಹತ್ರ ನಾನು ಮಾತಾಡ್ತೇನೆ. ಎಲ್ರುಗೂ ಸಂಬಳ ಸಿಗುತ್ತೆ. ಎಜಿಎಮ್ ಗೆ ಹೇಳಿದ್ರೆ ಏನೂ ಸಿಗಲ್ಲ ” ಎಂದು ಹೆದರಿಸಿದ್ದನಂತೆ! ಆದ್ದರಿಂದ ಬಡಪಾಯಿಗಳು ಬಾಯಿ ಬಿಡದೆ ತಮ್ಮ ಸಂಬಳವಾದರೂ ಸಿಕ್ಕರೆ ಸಾಕೆಂದು ಸೈಲೆಂಟಾಗಿ ಜೇಬಿಗೆ ದುಡ್ಡು ಹಾಕಿ ಗಪ್ ಚುಪ್ ಆಗಿದ್ದರು.

ಚಂದನ ನಾಲಿಗೆ ತುದಿಗೆ ಬಂದಿದ್ದ ಬೈಯ್ಗುಳದ ಮಾತುಗಳನ್ನು ಹೊಟ್ಟೆಗಾಗಿ ಕೊಂಡ. ಇದೆಲ್ಲ ಗಂಗಾಧರರೆಡ್ಡಿಯ ಕುತಂತ್ರಗಳು! ಸಂಬಂಧಿಕ ಶ್ರೀನಿವಾಸರೆಡ್ಡಿಯನ್ನು ಬಳಸಿಕೊಂಡು ತನ್ನನ್ನು ಯಾಮಾರಿಸಿದ್ದಾನೆನಿಸಿತು. ಅಷ್ಟೊತ್ತಿಗೆ ಹೊರಗೆ ಗೇಟಿನ ಬಳಿ ಗಂಗಾಧರರೆಡ್ಡಿಯ ಕಾರಿನ ಹಾರನ್ ಶಬ್ಧ ಕೇಳಿ ಚಂದನನ ಬಿಟ್ಟು ಉಳಿದೆಲ್ಲರು ಅಲ್ಲಿಂದ ಜಾಗ ಖಾಲಿಮಾಡಿದರು.

“ ಏನಪ್ಪ…ಚಂದನ…ಹೇಗಿದ್ದೀಯ? ಕಂಟ್ರಾಕ್ಟ್ ಕೆಲ್ಸ ಹೇಗೆ ನಡೀತಿದೆ ” ಎಂದು ಬ್ರೀಫ್ ಕೇಸು ಹಿಡಿದು ಬಂದ ಗಂಗಾಧರರೆಡ್ಡಿಯ ಕುಹಕದಂಥ ಮಾತಿಗೆ “ ಹ…ನಡೀತಿದೆ…ಸಾರ್ “ ಎಂದಷ್ಟೇ ಚಂದನ ಉತ್ತರಿಸಿದ. “ ಕೆಲಸಕ್ಕೆ ದುಡ್ಡಿನ ಕೊರತೆ ಇದೆ. ಬಾಕಿ ಸಂಬಳ ಕೊಡಿ…ಸಾರ್ “ ಎಂದ. ಗಂಗಾಧರರೆಡ್ಡಿ ಕೇಳಿಸದವನಂತೆ ತನ್ನ ಕುರ್ಚಿಯಲ್ಲಿ ಕೂತವನು ಯಾವುದೋ ಫೈಲೊಂದನ್ನು ಬಿಚ್ಚಿ ತನ್ನತ್ತ ತಿರುಗಿಯೂ ನೋಡದಿದ್ದದ್ದು ಚಂದನನಿಗೆ ಅಪಮಾನವಾದಂತಾಯಿತು.

ಗಂಗಾಧರರೆಡ್ಡಿಯಿಂದ ದುಡ್ಡನ್ನು ವಸೂಲಿ ಮಾಡುವುದು ಬೇಲಿಯ ಮೇಲೆ ಬಿದ್ದ ಬಟ್ಟೆಯನ್ನು ಬಿಡಿಸಿದಂತೆ ಎಂದು ಚಂದನನಿಗೆ ಗೊತ್ತಿತ್ತು. ತುಸು ಸಮಯ ಕಳೆದರೂ ಗಂಗಾಧರರೆಡ್ಡಿ ಪ್ರತಿಕ್ರಯಿಸದಿದ್ದಾಗ ತನ್ನನ್ನು ಬೇಕಾಗಿಯೇ ಉಪೇಕ್ಷೆ ಮಾಡುತ್ತಿದ್ದಾನೆನಿಸಿತು. ಕಷ್ಟಪಟ್ಟು ದುಡಿದ ಹಣಕ್ಕಾಗಿ ಬೇಡುವ ಪ್ರಸಂಗ ಬಂದದ್ದಕ್ಕೆ ಚಂದನ ತನ್ನನ್ನೇ ತಾನು ಹಳಿದುಕೊಳ್ಳುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ.

ಹೊತ್ತು ಸರಿದಂತೆ ಗಂಗಾಧರರೆಡ್ಡಿ ತಿರುವು ಹಾಕುತ್ತಿದ್ದ ಹಾಳೆಯ, ಜಿಂಕ್ ಶೀಟಿನ ಚಾವಣಿಗೆ ತೂಗು ಬಿಟ್ಟು ಗಿರಗಿರ ಸುತ್ತುತ್ತಿದ್ದ ಫ್ಯಾನ್ ಶಬ್ಧ ಬಿಟ್ಟರೆ ಆಫೀಸಿನಲ್ಲಿ ತುಂಬಿದ್ದ ಮೌನ ಅಸಹನೀಯವಾಗಿತ್ತು. ಮುಳ್ಳಿನ ಮೇಲೆ ಕುಳಿತ ಚಂದನನಿಗೆ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂದು ತಿಳಿಯದೆ ಮೈ ನಡುಗಿ ಬೆವರುತ್ತಿದ್ದ. ಗಂಟಲೊಣಗುತ್ತಿತ್ತು. ಬರುತ್ತಿದ್ದ ಕೋಪವನ್ನು ಮುಷ್ಟಿಯಲ್ಲಿಟ್ಟು ಇರುವ ಶಕ್ತಿಯನ್ನೆಲ್ಲ ಕ್ರೋಢಿಕರಿಸಿ “ ಅಲ್ಲ ಸಾರ್…ಸಂಬಳ ಕೇಳಿದರೆ ನಿಮ್ ಪಾಡಿಗೆ ನೀವೇನೊ ಮಾಡ್ತಿದ್ದೀರಾ? “ ಅಂದ.

“ ನೋಡು ಚಂದನ್…ನಿನ್ ಸಂಬಳ ಎಲ್ಲೂ ಹೋಗಲ್ಲ. ನೀನು ಬುದ್ಧಿವಂತ ಅಂತ್ಲೇ ಆರ್ಕಿಟೆಕ್ಟ್ ಹೇಳಿದ್ರು ಅಂತ ಕೆಲಸ ಕೊಟ್ಟೆ. ನೀನೂ ಚೆನ್ನಾಗಿ ಒಳ್ಳೇ ಕೆಲ್ಸ ಮಾಡಿದ್ದೀಯ. ನಮ್ಗೂ ಒಳ್ಳೇ ಹೆಸ್ರು ಬಂತು. ಆದ್ರೆ, ಏನ್ ಪ್ರಯೋಜನ! ಪ್ರಾಜೆಕ್ಟ್ ಲಾಸಾಯ್ತು. ನೀನು ಬೇರೆ ಕೊನೇಲಿ ಕೈಕೊಟ್ ಹೋದೆ! ಫೈನಲ್ ಬಿಲ್ಲು ಸರಿಯಿಲ್ಲ…ಈಗಾಗಲೇ ಜಾಸ್ತಿ ದುಡ್ಡು ತಗೊಂಡಿದ್ದೀರಾ…ಅಂತಿದ್ದಾರೆ. ಅದೇನು ಸ್ವಲ್ಪ ನೋಡಿ…ಸರಿ ಮಾಡ್ಕೊಡು…ಆಮೇಲೆ ನೋಡೋಣ…”

ಸಹನೆಗೆಟ್ಟ ಚಂದನ ಮುಷ್ಟಿಯಿಂದ ಟೇಬಲ್ಲನ್ನು ಕುಟ್ಟಿ “ ಕೊಡಬೇಕಾಗಿರೊ ಸಂಬಳ ಕೇಳಿದ್ರೆ ಏನೇನೊ ಹೇಳ್ತಿರಲ್ಲ….ಕೈ ಕೊಟ್ ಹೋದೆ ಅಂತೀರಲ್ಲ…ನೀವ್ ಹೇಳ್ದಂಗೆ ಫೈನಲ್ ಬಿಲ್ ಮುಗ್ಸಿ ನಿಮ್ಗೆ ಹೇಳಿಯೇ ಕೆಲಸ ಬಿಟ್ಟಿದ್ದಲ್ವ? ನ್ಯಾಯವಾಗಿ ದುಡಿದ ಸಂಬಳಾನ ಕೊಡಿ. ಯಾಮಾರಿಸೊ ಮಾತ್ ಬೇಡ ” ಅಂದ. ಚಂದನ ಏರುದನಿಯಲ್ಲಿ ಮಾತಾಡುವುದನ್ನೇ ಕಾಯುತ್ತಿದ್ದಂತೆ, ಗಂಗಾಧರರೆಡ್ಡಿ ಕುಳಿತಿದ್ದ ಕುರ್ಚಿಯನ್ನು ತಳ್ಳಿ “ ಮಾರ್ಯಾದೆ ಬಿಟ್ ಮಾತಾಡ್ತೀಯ! ಸ್ಟಾಫ್ನೆಲ್ಲ ಸಂಬಳದ ಹೆಸರಲ್ಲಿ ನನ್ ಮೇಲೆ ಎತ್ತಿ ಕಟ್ಟಿದ್ದು ನಂಗೇನು ಗೊತ್ತಿಲ್ವ! ಏಳ್ ಕೆರೆ ನೀರು ಕುಡ್ದೋನು ನಾನು. ದುಡ್ ಕೊಡಲ್ಲ ಅಂದ್ರೆ ಏನ್ ಮಾಡ್ತೀಯ? ಒಂದ್ ರೂಪಾಯಿ ಕೊಡಲ್ಲ ಹೋಗ್….” ಎಂದು ತನ್ನ ದೈತ್ಯಾಕಾರ ಪ್ರದರ್ಶಿಸಿ ಕೂಗಾಡಿದ.

ಆ ಆರ್ಭಟಕ್ಕೆ ಅಕ್ಷರಶಃ ಚಂದನ ಬೆಚ್ಚಿದ. ತನ್ನಲ್ಲಿ ಕಂಪನಿಗೆ ಸೇರಿದ್ದಕ್ಕಾಗಲಿ, ಕೆಲಸ ಮಾಡಿದ್ದಕ್ಕಾಗಲಿ ಯಾವ ದಾಖಲೆಗಳು ಇರದಿದ್ದಕ್ಕೆ ಪರಿತಪಿಸಿ ಅಸಹಾಯಕನಾಗಿ, ಇನ್ನು ಸಂಬಳವನ್ನು ಮರೆತಂತೆಯೇ ಸರಿ ಅನಿಸಿತು ಅವನಿಗೆ.

“ ಚೆನ್ನಾಗಿ ದುಡಿಸ್ಕೊಂಡು ಸಂಬಳ ಕೊಡದೆ ಮೋಸ ಮಾಡ್ತೀರೊ ನೀನು ಉದ್ಧಾರ ಆಗೊಲ್ಲ! ಮೈತುಂಬ ರೋಗ ತುಂಬ್ಕೊಂಡ್ ಮೂರು ಹೊತ್ತು ನುಂಗೊ ಹಿಡಿ ಮಾತ್ರೆಗೆ ನನ್ನ ದುಡ್ಡನ್ನೇ ಬಳಸ್ಕೊ…..” ಎಂದು ಸಿಟ್ಟಿನಿಂದ ಹೇಳಿ, ಬಿರುಸಾಗಿ ಸೈಟ್ ಆಫೀಸಿನಾಚೆ ನಡೆದು…ಒಮ್ಮೆಗೆ ಹಿಂತಿರುಗಿ ನೋಡಿದರೆ, ಗಾಳಿಗೆ ಮುಚ್ಚಿಕೊಳ್ಳುವ ಸಡಿಲ ಬಾಗಿಲಿಗೆ ತಡೆಯಾಗಿ ಇಟ್ಟಿದ್ದ ಕಾಂಕ್ರೀಟ್ ಬ್ಲಾಕನ್ನು ಗಂಗಾಧರರೆಡ್ಡಿ ಎತ್ತಿ ಹಿಡಿದು ಬುಸುಗುಟ್ಟುತ್ತಿದ್ದ.

ಹಲ್ಲೆ ಮಾಡಲು ಬಂದ ಗಂಗಾಧರರೆಡ್ಡಿಯ ಅನಿರೀಕ್ಷಿತ ನಡೆಯಿಂದ ಭಯಭೀತನಾಗಿ ಚಂದನ ಅಲ್ಲಿಂದ ಓಡಲು ಶುರು ಮಾಡಿದ. ಸೈಟಿನ ತಗಡು ಗೇಟನ್ನು ತಳ್ಳಿ, ಹಸುರುಹುಲ್ಲಿನ ಗಾಲ್ಫ್ ಕೋರ್ಟಿನ ಆಚೆ ರಸ್ತೆಗೆ ಬಿದ್ದರೆ ಸಾಕೆಂದು ಓಡಿದ ಚಂದನನನ್ನು ಹಿಂಬಾಲಿಸಿ ಓಡಿದ ಗಂಗಾಧರರೆಡ್ಡಿ. ಆದರೆ, ದಢೂತಿ ದೇಹ ಹೊತ್ತು ಚಂದನನ ರಭಸದೋಟವನ್ನು ಮೀರಿಸಲಾಗದೆ ಏದುಸಿರು ಬಿಡುತ್ತಿದ್ದ ಗಂಗಾಧರರೆಡ್ಡಿ, ಕೈಲಿದ್ದ ಕಾಂಕ್ರೀಟ್ ಬ್ಲಾಕನ್ನು ಒಗೆದು ಅನಾಮತ್ತಾಗಿ ನೆಲಕ್ಕೆ ಕುಸಿದ.

-ಚಂದ್ರಪ್ರಭ ಕಠಾರಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x