ಧನಕ್ಕಿಂತ ದೊಡ್ಡದು ಇಂ’ಧನ’ ಸಂಪತ್ತು: ಹೊ.ರಾ.ಪರಮೇಶ್ ಹೊಡೇನೂರು

“ಲೋ ರಾಕೇಶ… ಮಾರ್ಕೆಟ್ ಗೆ ಹೋಗಿ ಒಂದು ಕಟ್ಟು ಕೊತ್ತಂಬರಿ ಸೊಪ್ಪು ತಗೊಂಡು ಬೇಗ ಬಾರೋ….” ಹೀಗಂತ ಅಮ್ಮಾ ಹೇಳಿದ್ದೇ ತಡ, ಮಗ ರಾಕೇಶ್ ಪಕ್ಕದ ರಸ್ತೆಯ ಕೂಗಳತೆ ದೂರದಲ್ಲಿದ್ದ ಮಾರ್ಕೆಟ್ ಗೆ ತನ್ನ ರಾಯಲ್ ಎನ್ ಫೀಲ್ಡ್ ಬೈಕಿನಲ್ಲಿ ಫುಲ್ ಜೋಶ್ ಆಗಿ ಹೋಗಿ ಕೊತ್ತಂಬರಿ ಸೊಪ್ಪು ತಂದ. ಖುಷಿಪಟ್ಟ ಅಮ್ಮ “ತಿಂಡಿ ಮಾಡೋದು ಸ್ವಲ್ಪ ತಡ ಆಗುತ್ತೆ, ಸರ್ಕಲ್ ನಲ್ಲಿ ಇರೋ ಬೇಕರಿಯಲ್ಲಿ ಒಂದು ಪೌಂಡ್ ಬನ್ ತಗೊಂಡು ಬಾರೋ ರಾಕೇಶ” ಎಂದ ತಕ್ಷಣ ಪುನಃ ಬೈಕಿನಲ್ಲಿ ಹೋಗಿ ಬನ್ ತಗೊಂಡು ಬಂದ ರಾಕೇಶ “ಅಮ್ಮಾ, ಇನ್ನೇನಾದರೂ ಬೇಕಿದ್ದರೆ ಈಗಲೇ ಹೇಳಿಬಿಡು. ನಾನು ನನ್ನ ಗೆಳೆಯರ ಜೊತೆಗೆ ಪಕ್ಕದ ಕಾಲೇಜು ಮೈದಾನದಲ್ಲಿ ಕ್ರಿಕೆಟ್ ಆಡೋಕೆ ಹೋಗಬೇಕು. ಆಮೇಲೆ ಅದೂ ಇದೂ ಅಂತ ತಲೆ ತಿನ್ನಬೇಡ” ಎಂದು ಕೇಳಿದ. ಆಗ ಅಮ್ಮ ” ಓ…ಮರೆತಿದ್ದೆ , ನಿಮ್ಮ ಅಪ್ಪ ಬೆಳಿಗ್ಗೆ ವಾಕಿಂಗ್ ಗೆ ಅಂತ ಹೋಗಿ ಇನ್ನೂ ಬಂದಿಲ್ಲ. ಹೋಗಿ ಕರೆದುಕೊಂಡು ಬಂದು ಬಿಡು. ಇವತ್ತು ಭಾನುವಾರ ಅಂತ ಸ್ನೇಹಿತರ ಜೊತೆಗೆ ಹರಟೆ ಹೊಡೀತಾ ನಿಂತುಬಿಡ್ತಾರೆ” ಅಂತ ಹೇಳಿದ ತಕ್ಷಣ ಅಪ್ಪನನ್ನು ಕರೆತರಲು ರಾಕೇಶ ಬೈಕಿನಲ್ಲಿ ಹೋಗಿ ಹುಡುಕಿ ಕರೆದುಕೊಂಡು ಬರೋವಷ್ಟರಲ್ಲಿ ಅವರಪ್ಪ ಬೇರೊಂದು ರಸ್ತೆ ಮೂಲಕ ಮನೆಗೆ ಬಂದಿದ್ದರು.

ಇಂತಹ ಪ್ರಸಂಗಗಳನ್ನು ನಮ್ಮ ಅಥವಾ ನೆರೆಹೊರೆಯ ಮನೆಗಳಲ್ಲಿ ದಿನನಿತ್ಯವೂ ನೋಡ್ತಾನೆ ಇರ್ತೀವಲ್ವ! ಅದರಲ್ಲೇನು ವಿಶೇಷ, ತೀರಾ ಸಾಮಾನ್ಯ ತಾನೇ ಅಂತ ಮೂಗು ಮುರೀಬೇಡಿ. ಐದು ರೂಪಾಯಿ ಕೊತ್ತಂಬರಿ ಸೊಪ್ಪು ತರೋಕೆ ಹತ್ತು ರೂಪಾಯಿ ಪೆಟ್ರೋಲ್, ಇಪ್ಪತ್ತು ರೂಪಾಯಿ ಬನ್ನು ತರೋಕೆ ಮೂವತ್ತು ರೂಪಾಯಿ ಪೆಟ್ರೋಲ್ ಖರ್ಚು ಮಾಡಿದರೆ ಎಂಥ ಅಪವ್ಯಯ ಅಲ್ವಾ? ಪೆಟ್ರೋಲ್ ಏನು ನಮ್ಮ ಸುತ್ತ ಮುತ್ತಲಿನ ಬಾವೀಲಿ ಸಿಗೋ ನೀರಾ…! ಯಾವುದೋ ಅರಬ್ ದೇಶಗಳಲ್ಲಿ ಸಿಗೋ ಈ ಇಂಧನವನ್ನು ಖರೀದಿಸಿ, ಅಪರಿಚಿತ ಆಮದು ಶುಲ್ಕ ಕಟ್ಟಿ ತರಿಸಿಕೊಂಡು ನಮ್ಮ ಶೋಕಿ ಜೀವನ ಶೈಲಿಗಾಗಿ ವಿವೇಚನೆ ಇಲ್ಲದೆ ಅನಗತ್ಯವಾಗಿ ಹಾಳು ಮಾಡೋದು “ನ್ಯಾಷನಲ್ ವೇಸ್ಟ್” ಅಲ್ಲವೇ?

ಅದರ ಬದಲು ಹತ್ತಿರದ ಸ್ಥಳಗಳಿಗೆ ನಡೆದುಕೊಂಡೇ ಹೋಗಿ ಅಂಗಡಿ ಸಾಮಾನುಗಳು, ಮಾರುಕಟ್ಟೆಯಿಂದ ತರಕಾರಿಗಳನ್ನು ತರುವ ರೂಢಿ ಮಾಡಿಕೊಂಡರೆ ನಮ್ಮ ದೇಹಕ್ಕೆ ಬೇಕಾದ ವ್ಯಾಯಾಮವೂ ಆಗುತ್ತದೆ, ಇಂಧನವನ್ನು ಉಳಿಸುವ ದೇಶೋಪಯೋಗಿ ಸತ್ಕಾರ್ಯದಲ್ಲಿ ನಾವೂ ಕೈಜೋಡಿಸಿದಂತಾಗುತ್ತದೆಯಲ್ಲವೆ? “ಓ… ಬಿಡಿ, ನಾನೊಬ್ಬ ನೂರು ಮಿ.ಲೀಟರ್ ಪೆಟ್ರೋಲ್ ಉಳಿಸಿ ಬಿಟ್ಟರೆ ಅದೇನು ಇಡೀ ದೇಶಕ್ಕೇ ಆಗಿಬಿಡುತ್ತಾ!” ಅಂತ ಉಡಾಫೆ ಮಾತಾಡುವವರೂ ನಮ್ಮ ಜೊತೆಯಲ್ಲಿಯೇ ಇರುತ್ತಾರೆ. ನಿಜಕ್ಕೂ ಅಂತವರು ಪ್ರಜ್ಞಾಹೀನರು ಎನ್ನದೆ ವಿಧಿಯಿಲ್ಲ. ಉಳಿಸುವ ಒಂದೊಂದು ಕಾಳು ಒಟ್ಟುಗೂಡಿದರೆ ತಾನೇ ರಾಶಿಯಾಗುವುದು. ಅಮ್ಮ ಸಾಸಿವೆ ಡಬ್ಬಿಯಲ್ಲಿ ಕೂಡಿಡುವ ಪೈಸೆಗಳೇ ತಾನೆ, ಆಪತ್ಕಾಲದಲ್ಲಿ ನೆರವಿಗೆ ಬರೋ ಇಡುಗಂಟಾಗೋದು. ಪ್ರತಿ ದೇವರ ವಾರದಲ್ಲಿ ಪೂಜೆ ಮಾಡುವಾಗ ಮನೆದೇವರ ಮುಡುಪಿಗೆ ಹಾಕುವ ಕಾಸೇ ಅಲ್ಲವೆ ಮುಂದೆ ಯಾತ್ರೆಗೆ ಹೋಗಲು ಸಹಾಯಕವಾಗುವ ಆರ್ಥಿಕ ಬಲವಾಗುವುದು. ಅಕ್ಷರ ಅಕ್ಷರಗಳನ್ನು ಅಭ್ಯಾಸ ಮಾಡಿ ವಾಕ್ಯಗಳನ್ನು ಓದುವಂತೆ, ಹೆಜ್ಜೆಗೆ ಹೆಜ್ಜೆ ಸೇರಿಸಿಕೊಂಡು ದಾರಿಯಲ್ಲಿ ಸಾಗುವಂತೆ, ಕ್ಷಣ ಕ್ಷಣಗಳು ಕೂಡಿಕೊಂಡು ನಿಮಿಷ, ಗಂಟೆ, ದಿನ, ವಾರಗಳಾಗುವಂತೆ, ಜೀವಕಣಗಳೆಲ್ಲವೂ ಸೇರಿಕೊಂಡು ಶರೀರವಾಗುವಂತೆ ಉಳಿಸುವ ಹನಿ ಹನಿ ಇಂಧನವೂ ಒಟ್ಟಾಗಿ ಸೇರಿಕೊಂಡು ನಮ್ಮ ಆಮದು ಅಗತ್ಯತೆಯನ್ನು ಕಡಿಮೆ ಮಾಡಿ ದೇಶದ ಆರ್ಥಿಕ ಪುನಶ್ಚೇತನಕ್ಕೆ ದಾರಿಯಾಗುತ್ತದೆ. ಪೆಟ್ರೋಲ್ ಉತ್ಪನ್ನಗಳು “ಮುಗಿಯುವ ಸಂಪನ್ಮೂಲಗಳೇ ಹೊರತು ಮುಗಿಯದ ಅಥವಾ ನವೀಕರಿಸಬಹುದಾದ ಸಂಪನ್ಮೂಲ ಅಲ್ಲವೇ ಅಲ್ಲ” ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.

ಜನಸಂಖ್ಯೆ ಹೆಚ್ಚಳದೊಂದಿಗೆ ಸರಿಸಮನಾಗಿ ವಾಹನಗಳ ಅವಲಂಬನೆಯೂ ನೇರಾನುಪಾತದಲ್ಲಿ ಏರುತ್ತಿರುವ ಈಗಿನ ಕಾಲಘಟ್ಟದಲ್ಲಿ ಆ ವಾಹನಗಳಿಗೆ ಬೇಕಾದ ಇಂಧನದ ಅಗತ್ಯತೆಯೂ ಅಧಿಕವಾಗುತ್ತಿದ್ದು, ಅದರ ಬೇಡಿಕೆಯನ್ನು ಪೂರೈಸುವ ಅನಿವಾರ್ಯತೆಯಲ್ಲಿ ಇಂಧನದ ಬೆಲೆಯಲ್ಲಿ ಭಾರೀ ಹೆಚ್ಚಳವಾಗುತ್ತಿದೆ. ಎಷ್ಟರಮಟ್ಟಿಗೆ ಎಂದರೆ ‘ಬಿಟ್ಟರೂ ಬಿಡದೀ ಮಾಯೆ’ ಎನ್ನುವಂತೆ ವಾಹನಗಳ ಖರೀದಿಯ ಖಯಾಲಿಯು ಜನಸಾಮಾನ್ಯರಿಗೆ ಒಂದು ರೀತಿಯ ಚಟವಾಗಿ ಮಾರ್ಪಾಡಾಗುತ್ತಿದೆ. ಕೇವಲ ಸಂಚಾರಿ ವಾಹನಗಳು ಮಾತ್ರವಲ್ಲದೆ, ನಮ್ಮ ನಿತ್ಯ ಬದುಕಿನ ಅವಿಭಾಜ್ಯ ಯಂತ್ರಗಳಂತೆ ಜೆಸಿಬಿ, ಹೊಲ ಗದ್ದೆಗಳ ಉಳುಮೆ, ಬೆಳೆಗಳ ನಾಟಿ, ಧಾನ್ಯಗಳ ಒಕ್ಕಣೆ, ರಸ್ತೆ ನಿರ್ಮಾಣ, ಡಾಂಬರೀಕರಣ, ಮನೆ ಕಟ್ಟುವಾಗಿನ ಕಾಮಗಾರಿಗಳ ಉಪಕರಣಗಳು, ಕೀಟನಾಶಕ ಯಂತ್ರಗಳು, ಇವೆಲ್ಲವನ್ನು ಸೃಜಿಸುವ ಕೈಗಾರಿಕೆಗಳು…. ಒಂದೇ ಎರಡೇ, ಸರ್ವವೂ ಇಂಧನಚಾಲಿತ ಸಾಧನೋಪಕರಣಗಳ ಅವಲಂಬನೆಯ ಜೀವನ ಶೈಲಿಯು ಇಡೀ ಜಗತ್ತನ್ನೇ ಆವರಿಸಿಕೊಂಡುಬಿಟ್ಟಿದೆ.

ಹೀಗೇ ಮುಂದುವರೆದದ್ದೇ ಆದಲ್ಲಿ ಇಂಧನಗಳ ಬೆಲೆ ಏರಿಕೆಯಲ್ಲಿ ಭಾರೀ ಪ್ರಮಾಣದ ಪ್ರಮಾದಗಳು ಘಟಿಸುವ ಲಕ್ಷಗಳು ಗೋಚರಿಸುತ್ತಿವೆ. ಜೊತೆಗೆ ಇಂಧನಗಳು ಹೊರ ಸೂಸುವ ಇಂಗಾಲದ ಡೈ ಆಕ್ಸೈಡ್, ಮಾನಾಕ್ಸೈಡ್, ನೈಟ್ರೋಜನ್ ಆಕ್ಸೈಡ್ ನಂತಹ ಹಾನಿಕಾರಕ ರಾಸಾಯನಿಕಗಳು ನಮ್ಮ ವಾತಾವರಣದಲ್ಲಿ ಸೇರಿಕೊಂಡು ನಿಧಾನ ವಿಷದಂತೆ ಜೀವಿಗಳ ದೇಹದಲ್ಲಿ ಸೇರಿಕೊಂಡು, ಬಗಬಗೆಯ ರೋಗ ರುಜಿನಗಳನ್ನು ಉಂಟು ಮಾಡುವ ಮೂಲಕ ಆರೋಗ್ಯ ಮತ್ತು ಆಯುಷ್ಯವನ್ನು ಕಡಿಮೆ ಮಾಡುತ್ತಿವೆ. ಹಸಿರು ಮನೆ ಪರಿಣಾಮ, ಆಮ್ಲ ಮಳೆ ಉಂಟಾಗಿ ವರ್ಷದಿಂದ ವರ್ಷಕ್ಕೆ ಭೂಮಿಯ ತಾಪಮಾನ ಏರುತ್ತಿದ್ದು ಇಡೀ ಜಗತ್ತಿಗೆ ‘ಉಸಿರುಗಟ್ಟುವ ವಾತಾವರಣ’ ಏರ್ಪಡುತ್ತಿದೆ. ಹೀಗೇ ಮುಂದುವರೆದಲ್ಲಿ ಜೀವಂತ ಗ್ರಹವೆಂಬ ಗರಿಮೆ ಹೊಂದಿರುವ ನಮ್ಮ ಭೂಮಿಯು ನಿರ್ಜೀವ ಸ್ಥಿತಿಯನ್ನು ತಲುಪಿ ಸಜೀವ ಸಂಕುಲವು ವಿನಾಶ ಹೊಂದುವಂತಹ ಆತಂಕ ಎದುರಾಗಿದೆ.

ಇಂತಹ ಆಘಾತಕಾರಿ ಬೆಳವಣಿಗೆಯ ಮೇಲೆ ಬೆಳಕು ಚೆಲ್ಲುವ, ಜನಜಾಗೃತಿ ಮೂಡಿಸುವ ಮಹತ್ವದ ಉದ್ದೇಶದೊಂದಿಗೆ ಅರಕಲಗೂಡು ತಾಲ್ಲೂಕಿನ ಬಾನುಗೊಂದಿಯ ಬಿ.ಕೆ.ಹರೀಶ್ ಕುಮಾರ್ ಅವರ ಸಾರಥ್ಯದಲ್ಲಿ ‘ಸೀಕೋ’ ಸಂಸ್ಥೆಯು ಪರಿಶ್ರಮ ವಹಿಸಿ ಕಾರ್ಯೋನ್ಮುಖವಾಗಿದೆ. ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳ ಸಂರಕ್ಷಣಾ ಸಚಿವಾಲಯದ ವಾರ್ಷಿಕ ಜಾಗೃತಿ ಅಭಿಯಾನದ ಅಡಿಯಲ್ಲಿ ಕರ್ನಾಟಕದಲ್ಲಿಯೂ ಕೂಡ ಇಂಡಿಯನ್ ಆಯಿಲ್ ಕಾರ್ಪೊರೇಷನ್ ನೇತೃತ್ವದಲ್ಲಿ ಜನ ಸಾಮಾನ್ಯರೊಂದಿಗೆ ಅರ್ಥಪೂರ್ಣ ಸಂವಾದ, ಸೈಕಲ್ ಬಳಕೆಯ ಅಗತ್ಯತೆ ಮತ್ತು ಮಹತ್ವ, ಪರಿಸರ ಪ್ರಿಯ ತಜ್ಞರ ಜೊತೆಗೆ ಹಿತವಚನ, ಇಂಧನ ಉಳಿತಾಯದ ಜಾಗೃತಿ ಮೂಡಿಸುವ ಪೋಸ್ಟರ್ ಗಳ ಪ್ರದರ್ಶನ…. ಮೊದಲಾದ ಅನೇಕ ಕಾರ್ಯ ಚಟುವಟಿಕೆಗಳ ಮೂಲಕ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಪರಿಸರ ಕಾಳಜಿಯಿಂದ ಸೇವೆ ಗೈಯ್ಯುತ್ತಿದೆ. ಉತ್ತಮ ಮತ್ತು ಸಹಜವಾದ ಪರಿಸರದೊಂದಿಗೆ, ಇಂಧನ ಮೂಲಗಳನ್ನು ಮುಂದಿನ ತಲೆಮಾರಿಗೆ ಉಳಿಸಲೇಬೇಕಾದ ಕೈಂಕರ್ಯದಲ್ಲಿ ತೊಡಗಿರುವ ‘ಸೀಕೋ’ ಸಂಸ್ಥೆಯ ಪ್ರತಿ ಹೆಜ್ಜೆಯೂ ಯಶಸ್ಸು ಕಾಣಲೆಂಬ ಆಶಯದೊಂದಿಗೆ ನಾವೂ ಕೂಡ ಸಹಕಾರ ನೀಡೋಣವಲ್ಲವೇ!

-ಹೊ.ರಾ.ಪರಮೇಶ್ ಹೊಡೇನೂರು


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x