“ಅಂತರಂಗದೊಳಗಣ ಉರಿ ತಾಕಿದಾಗ”: ಪ್ರಶಾಂತ್ ಬೆಳತೂರು

-೧-
ಎಳೆತನದಲ್ಲಿ ಆಡಿ ನಲಿವಾಗ
ಎತ್ತರದ ನಿಲುವಿನ ಅಜ್ಞಾತ ಮನುಷ್ಯನೊಬ್ಬ
ನನ್ನ ಕಂಡು ದೂರ ನಿಲ್ಲು ಪೀಡೆ ಎಂದ..
ಯಾಕೆಂದು ತಿಳಿಯದೆ ಕಸಿವಿಸಿಯಾಗಿ
ದೂರ ಸರಿದು ನಿಂತೆ..!

ಅಂಗನವಾಡಿಯ ಅಂಗಳಕೆ ಕಾಲಿಟ್ಟಾಗ
ಅಲ್ಲಿಯ ನನ್ನೂರಿನ ಹೆಂಗಸೊಬ್ಬಳು
ನನ್ನನ್ನು ನನ್ನ ಕೇರಿಯ ಓರಿಗೆಯವರನ್ನು
ಒಂದೇ ಸಾಲಿನಲ್ಲಿ ಯಾಕೆ ಕೂರಿಸುತ್ತಿದ್ದಾಳೆಂದು
ಮೊದಮೊದಲಿಗೆ ಅರ್ಥವಾಗುತ್ತಿರಲಿಲ್ಲ..!

ಬರುಬರುತ್ತಾ..
ನಮ್ ಮೇಷ್ಟ್ರು ಅರ್ಥ ಮಾಡಿಸಿದರು
ತರಗತಿಯಲ್ಲಿ ಕಲಿಯುವಾಗ ಪದೇ ಪದೇ
ಅಣಕಿಸುವ ಮೇಷ್ಟ್ರು
ದನ ತಿಂದು ತಿಂದು ದನದ ಹಾಗೆ ಬೆಳಿದಿದ್ದೀರಿ
ಮೆದುಳಿನಲ್ಲಿ ಬರೀ ಗೊಬ್ಬರ ತುಂಬಿದೆಯೆಂದು
ಜರಿದು ಮಾತಾಡುವಾಗಲೆಲ್ಲಾ
ಎದೆಗೆ ನಾಟುತ್ತಿತ್ತು..!

ಆಮೇಲಾಮೇಲೆ ಮೇಡಂ
ಒಬ್ಬರು..
ಮನೆಯ ಪಡಸಾಲೆಯಲ್ಲಿ ಸಂಜೆ ಸ್ಪೆಷಲ್ ಕ್ಲಾಸ್
ಮಾಡುತ್ತೇನೆಂದು ಕರೆದಾಗ
ನಾನು ಹಾಜರಾಗುತ್ತಿದ್ದೆ
ಒಮ್ಮೆ ಅವರ ಗಂಡ ಇದ್ದಕ್ಕಿಂದ್ದಂತೆ ನನ್ನ ಕರೆದ
ಯಾವ್ ಕೇರಿಯವನೋ ನೀನು? ಯಾರ್ ಮಗನೋ ನೀನು ಲೋ ಬೋಸುಡಿಕೆ?
ನನಗೆ ಆ ದನಿಯೇ ಭಯ ಹುಟ್ಟಿಸಿ
ಮೌನವಾಗಿ ಹೋದ ನೆನಪು..!

ಮರುದಿನ ಬೆಳಿಗ್ಗೆ
ಅವ್ವನನ್ನು ಕೇಳಿದೆ
ನಮ್ಮದು ಯಾವ್ ಕೇರಿ?
ನಾವು ಯಾವ್ ಜನ?
ನಾವ್ ಬೇರೆ ಅವ್ರ್ ಬೇರೆ ನಾ?
ಅವ್ವ ಹೂಂ ಎಲ್ಲರೂ ಒಂಥರಾ ಬೇರೆ ಬೇರೆನೇ
ಈ ಲೋಕದಲ್ಲಿ ಎಂದು ನಿಟ್ಟುಸಿರುಬಿಟ್ಟಳು..!

ಮೊದಲ ಬಾರಿ ನನ್ನ ತಲೆಯೊಳಗೆ ನಾವು ಬೇರೆಯೇ ಜನ ಎಂಬುದು ಮನದಟ್ಟಾಯಿತು…!

-೨-
ಬೆಳೆದಂತೆಲ್ಲ ನನಗೆ
ಗಡಿಗಳೆದ್ದು ನಿಂತಿದ್ದವು..!
ಬೋರ್ ವೆಲ್ಗೆ ಹೋಗಿ ನಾನೊಂದು
ಬಿಂದಿಗೆಯ ನೀರು ತಂದರೆ
ಸಗಣಿಯ ನೀರಿನಲ್ಲಿ ಬೊರ್ ವೆಲ್
ಶುದ್ದಿ ಮಾಡಿಕೊಳ್ಳುವ ಗರತಿಯರು
ಹೊಳೆಯಿಂದ ನೀರು ತರೋಕೆ ನಿಮಗೇನ್ ದಾಡಿ?
ಎಂದು ಹೌಹಾರುವಾಗಲೂ
ದನಿಯೆತ್ತದೆ ತೆಪ್ಪಗೆ ಬರುತ್ತಿದ್ದೆ..!

ಇನ್ನು ಊರಿನ ಹಬ್ಬಹರಿದಿನಗಳಲ್ಲಿ
ಕೇರಿಯ ಜನರೇ
ದೇವಾಲಯದಿಂದ ನಾವು ಎಷ್ಟು ದೂರದಲ್ಲಿ
ನಿಲ್ಲಬೇಕು
ದೇವರ ಮೆರವಣಿಗೆ ಹೋದಾಗ
ಎಷ್ಟು ಅಡಿ ದೂರದಲ್ಲಿ ಕೈ ಮುಗಿಯಬೇಕು
ಹೀಗೆ ನಿಚ್ಚಳವಾಗಿ ಬಂದ ವ್ಯತ್ಯಾಸಗಳ
ಅರಿತುಕೊಂಡ ಮೇಲೆ

ನಾವು ಬೇರೆಯದೆ ರೀತಿಯ ಜನ ಎಂಬುದು ಮತ್ತಷ್ಟು
ಸ್ಪಷ್ಟವಾಯಿತು…!

-೩-
ಕಾಲೇಜಿಗೆ ಬಂದೆ
ಉಸಿರುಗಟ್ಟಿಸುವ ಊರಿಗಿಂತ
ಈ ಅಜ್ಞಾತ ಊರಿನಲ್ಲಿ ಯಾರ್ಯಾರೋ ಪರಿಚಯವಾದರು ಮಾತಾಡಿಸಿದ ಮೂರನೇಯ ದಿನಕ್ಕೆ ಪಕ್ಕದಲ್ಲಿ ಕೂತ
ಗೆಳೆಯನೊಬ್ಬ ಮೃದುವಾಗಿ ಕೇಳಿದ..!
ಮಗಾ ನಾವು ಗೌಡ್ರು.. ನಿಂದು ಯಾವ್ ಜಾತಿ?
ನಾನು… ನಾನು…
ಎಸ್.ಸಿ.
ಎಸ್.ಸಿ…. ನಾ?
ಎಸ್..ಸಿ… ಅಲ್ಲಿ ಯಾವ್ದು…?
ಯಾವ್ದು.. ಅಂದ್ರೆ?
ಲೋ.. ಗುಬಾಲ್…
ಎಡಗೈ..ನಾ? ಬಲಗೈ.. ನಾ?
ಅದು.. ಅದು….
ಹೂಂ ಗೊತ್ತಾಯ್ತು ಬಿಡು
ನೀನು ತಡವರಿಸೋದು ನೋಡಿ
ಐದನೇ ಬೆಂಚಿನಲ್ಲಿ ಕೂತ್ಕೋ
ನಿಮ್ಮವರು ಇಬ್ಬರು ಅಲ್ಲಿದ್ದಾರೆ..!
ನಾನು ಕುರಿಯಂತೆ ತಲೆಯಾಡಿಸಿ ಎದ್ದು ಬಂದೆ..!

ಕಾಲೇಜಿನಾಚೆಗೆ
ಕ್ಯಾಂಟೀನು ಬೇಕರಿ ಹೋಟೆಲ್ ಗಳು
ನನ್ನನ್ನು ಊರ ಹೋಟ್ಲುಗಳಂತೆ
ತಡೆಯಲಿಲ್ಲ ಪ್ರತ್ಯೇಕವಾಗಿ ಕೂರುವಂತೆ ಹೇಳುತ್ತಿರಲಿಲ್ಲ
ಇದೊಂದೇ ನನಗೆ ಸಮಾಧಾನ ಕೊಟ್ಟು
ನನ್ನೊಳಗಿನ ಕೀಳರಿಮೆಯನ್ನು ಕೊಂಚ ತಗ್ಗಿಸಿದವು..!

ಹೋಟೆಲ್ಲಿನ ಹೆಂಗಸು
ನನ್ನನ್ನು ಕಂಡು ಮುಗಳ್ನಗುವಳು
ಆಗಾಗ ಕಣ್ಣು ಮಿಟುಕಿಸುವಳು
ಪರಿಚಯ ಮಾಡಿಕೊಂಡೆ
ಮರುದಿನ ಆ ಹೆಂಗಸು ನಗುತಾ ಕೇಳಿದಳು
ಯಾವ್ ಊರು ನಿಂದು?
ಬೆಳತೂರು..
ಯಾವ್ ಬೆಳತೂರು?
ಅದೇ ಮಾದಾಪುರ ಪಕ್ಕಾ..
ಹೂಂ ಗೊತ್ತು.. ಗೊತ್ತು…
ನಾವು ಸೆಟ್ರು?
ನೀನು…?
ನಾನು…
ಅದೇ ಸವಕಲು ದನಿಯಲ್ಲಿ
ಎಸ್..ಸಿ..
ಆ ಹೆಂಗಸು ಗಂಭೀರವಾಗಿ ಮತ್ತೆ ನಗಲಿಲ್ಲ..!

ನಾನು ಬೇರೆಯ ಜನ ಎಂಬುದೊಂದು ಹಣೆಪಟ್ಟಿ
ನನಗೆ ಎಲ್ಲಾ ಕಡೆಯೂ ಅಂಟಿದೆ ಎಂಬುದನ್ನು ಖಾತ್ರಿ ಮಾಡಿಕೊಂಡೆ..!

-೪-
ಆಮೇಲೆ ಡಿಗ್ರಿಗೆ ಬಂದೆ..
ಇಲ್ಲಿಯೂ ಬಹುತೇಕರು ಹಾಗೆ ಇದ್ದರು
ಇವರ ನಡುವೆ ಒಂದಷ್ಟು ಒಳ್ಳೆಯ ಹೃದಯದವರು ಇದ್ದಂತೆ ಇತ್ತು
ಆ ಒಂದು ಒಳ್ಳೆಯ ಹೃದಯಗಳು
ಜಾತಿ ಭಾಷೆ ಗಡಿ ಎಲ್ಲವನ್ನೂ ಮೀರಿತ್ತೇ..?
ಗೊತ್ತಿಲ್ಲ..
ಹತ್ತು ಹಲವು ವಿಚಾರಗಳಿಗೆ
ಸಮಾಜಶಾಸ್ತ್ರದಂತಹ ಕಲಾ ವಿಷಯವನ್ನು
ಆಸಕ್ತಿಯಿಂದ ಅಭ್ಯಸಿಸುತ್ತಿದ್ದ ನನಗೆ
ಸಮಾಜ ಎಂದರೇನು? ಜಾತಿ ಎಂದರೇನು?
ವರ್ಗ ಎಂದರೇನು? ಕುಟುಂಬ, ವಿವಾಹ ಇತ್ಯಾದಿ
ವಿಚಾರಗಳ ಬಗೆಗೆ ಇದ್ದ ವ್ಯಾಖ್ಯಾನಗಳ ಮೇಲೆ
ಭಾರತೀಯ ಸಮಾಜಶಾಸ್ತ್ರ ನನ್ನ ಇಷ್ಟದ ವಿಷಯ..!

ನನ್ನದೇ ಸಬ್ಜೆಕ್ಟಿನ ಹುಡುಗಿ
ಜಾತಿಯ ಹುಳುಕಿನ ಬಗ್ಗೆ
ಧರ್ಮದ ಹುಳುಕಿನ ಬಗ್ಗೆ
ನನ್ನಷ್ಟೇ ಓದಿ ನಿಷ್ಣಾತಳಾಗಿದ್ದಾಳೆ
ಯೌವ್ವನದ ಉತ್ತುಂಗದಲ್ಲಿ ಎಡವಿ
ಪ್ರೀತಿಗೆ ಬಿದ್ದೆವು..
ಅವಳ ನನ್ನ ನಡುವೆ ಕಂದಕಗಳಿರಲಿಲ್ಲ
ಮೋಸವೂ ಇರಲಿಲ್ಲ
ಇರುವಷ್ಟು ದಿವಸ ನಿಷ್ಕಲ್ಮಶವಾಗಿ
ಪ್ರೇಮಿಸಿ
ಮದುವೆಯ ವಿಷಯದಲ್ಲಿ
ಸೋ ಕಾಲ್ಡ್ ಪ್ರಗತಿಪರಳಾದ ಅವಳು
ಒಂದು ದಿನ..

ಲೋ..
ನಾವು ಲಿಂಗಾಯಿತ್ರು
ನೀನು ನೋಡಿದ್ರೆ ಶುದ್ಧ ಮಾಂಸಾಹಾರಿ
ನಾನ್ ಮೊಟ್ಟೆ ಪಪ್ಸ್ ಬಿಟ್ಟು
ಅಂಥದ್ದೇನೂ ತಿಂದಿಲ್ಲ
ನಮ್ ಮನೇಲಿ ನಿನ್ನಂತೂ ಒಪ್ಪೋದು
ಕನಸು ಕಣೋ..
ನೀನು ಒಪ್ಪಿದಿಯಲ್ಲ ಕೋತಿ..!
ಸುಮ್ನಿರು ಗೂಬೆ ಈಗ
ಹುಟ್ಟೋದು ಹುಟ್ದೆ
ನಮ್ ಜಾತಿಯಲ್ಲಿ ಹುಟ್ಟೋಕೆ
ಏನಾಗಿತ್ತು ಲೋಫರ್..
ಹೋಗಿ.. ಹೋಗಿ…ಹೋಗಿ..
ಆ ಜಾತಿಯಲ್ಲಿ ಹುಟ್ಟಿದ್ದೀಯಲ್ಲ..!
ಮಿಸ್ ಯೂ ಕಣೋ..!

ಅಲ್ಲಿಗೆ ನಾನು ಬೇರೆಯೆಂಬ ಸರಪಳಿ ನನ್ನನಷ್ಟೇ ಅಲ್ಲದೆ ಇತರರ ಕೈಯನ್ನು ಕಟ್ಟಿ ಹಾಕಿದೆ ಎಂಬುದು
ಗಾಢವಾಗಿ ಮನದಟ್ಟಾಯಿತು..!

-೫-
ಆಮೇಲೆ ವಿಧಿಯಿಲ್ಲದೆ ನಾನು ಮೇಷ್ಟ್ರಾದ ದಿನ
ಮಕ್ಕಳಿಗೆ ನಾನು ಏನೇನು ಒಳಿತುಗಳನ್ನು ಕಲಿಸಬಹುದೆಂದು ದೊಡ್ಡ ಪಟ್ಟಿ ಮಾಡಿಕೊಂಡು
ನಾನು ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟೆ..!
ಸಹೋದ್ಯೋಗಿಯೊಬ್ಬ ನಾನು ನಿಮ್ಮ ಜಾತಿಯವನೇ?
ನಾವಿಬ್ಬರೇ ಇರೋದು..ಈ ಸ್ಕೂಲ್ ನಲ್ಲಿ
ಮಿಕ್ಕಿದ್ದವರೆಲ್ಲಾ ಬೇರೆಯವರು..
ಮೊದಲ ಮಾತಿಗೆ ನನ್ನೊಳಗಿನ ಉತ್ಸಾಹ ನುಂಗಿತು
ಇನ್ನೊಬ್ಬ ಸಹೋದ್ಯೋಗಿ ಮುಸಿ ಮುಸಿ ನಗುತ್ತಾ
ಯಾವ್ ಊರು ಸರ್?
ಸಾರ್ ಅದೇ..ಬೆಳತೂರು..
ಓ..ಎಚ್.ಎಂ. ಕಡೆಯವರಾ..?
ಅವರು ಮೊದ್ಲೇ ಹೇಳಿದ್ರು ನಿಮ್ ಬಗ್ಗೆ
ಅಲ್ಲೊಂದು ಬೇರೆ ರೀತಿಯಾದ ಹೊಸ ಜಾತಿ ವಾಸನೆ..!
ತರಗತಿಗೆ ಪಾಠ ಮಾಡಿ ಏನೋ ಹೊಸದು ಕಲಿಸಿ
ಹೊರಬರುತ್ತಿದ್ದೇನೆ ಎಂದು ತೃಪ್ತಿಪಟ್ಟುಕೊಳ್ಳುವ ಹೊತ್ತಿಗೆ
ವಿದ್ಯಾರ್ಥಿಯೊಬ್ಬ ನನ್ನನ್ನು ನಿಸ್ಸಂಕೋಚವಾಗಿ
ಏನ್ ಸಾರ್ ನೀವು
ಹಳೆಗನ್ನಡ ನಾ ಪುಸ್ತಕ ನೋಡ್ದೆ ಹಾಗೆ ಪಾಠ
ಮಾಡ್ತೀರಲ್ಲ ನೀವು ಬ್ರಾಮುಣ್ರಾ..?
ಏನು ಹೇಳುವುದು ತೋಚದೆ ಅರೆಕ್ಷಣ ಗೊಂದಲಗೊಂಡೆ
ಅರವಿಂದ ಮಾಲಗತ್ತಿ ನೆನಪಾಗಿ
ನಗುತ್ತಾ..
ಹೂಂ.. ಹೂಂ…
ಗೌರ್ಮೆಂಟ್ ಬ್ರಾಹ್ಮಣ ಅಂದೆ..!
ಹುಡುಗ ಮುಗುಳ್ನಕ್ಕ ನನ್ನಂತೆ…!

-ಪ್ರಶಾಂತ್ ಬೆಳತೂರು


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಎಂ.ಜವರಾಜ್
ಎಂ.ಜವರಾಜ್
2 years ago

ಚೆನ್ನಾಗಿದೆ. ಆಪ್ತವಾದ ಕವಿತೆ

1
0
Would love your thoughts, please comment.x
()
x