ಬಾಲ್ಯದೊಳಗಿನ ಸುಂದರ ನೆನೆಪುಗಳನ್ನು ಹೆಕ್ಕಿ, ನಕ್ಕು ನಲಿಯದ ಜನರೇ ಇಲ್ಲ ಅಥವಾ ಅಂತಹ ಬಾಲ್ಯದ ಅನುಭವದ ಶ್ರೀಮಂತಿಕೆ ಇಲ್ಲದ ವ್ಯಕ್ತಿ ಬದುಕು ಪೂರ್ಣವಾಗಿರುವುದಿಲ್ಲ ಎಂದೇ ಹೇಳಬೇಕು. ಬಾಲ್ಯದಲ್ಲಿನ ಯಾವುದೋ ಒಂದು ಚಿಕ್ಕ ಚಿತ್ರವೂ ನಮಗೆ ರವಿವರ್ಮನ ಚಿತ್ರಕ್ಕಿಂತಲೂ ಹೆಚ್ಚು ಬೆಲೆಯುಳ್ಳದ್ದಾಗಿರುತ್ತಿತ್ತು. ಯಾರೋ ಹಾಡಿದ ಒಂದು ಹಾಡನ್ನು ಮೂರು ನಾಲ್ಕು ಬಾರಿ ಹಾಡಿ, ಕಲಿತು ಬಿಡುತ್ತಿದ್ದ ದಿನಗಳು. ಯಾವುದೊಂದು ನಾಟಕ, ಹಾಡು, ಡ್ಯಾನ್ಸು ಏನೇ ನೋಡಿದರೂ, ಅದನ್ನು ಕಲಿತು ಬಿಡುತ್ತಿದ್ದೆವು. ಅದರ ಅನುಕರಣೆಯಲ್ಲಿಯೂ ನಮ್ಮದೊಂದು ಅನುಭವದ ಸ್ವಂತಿಕೆಯನ್ನು ಸೇರಿಸುತ್ತಿದ್ದ ಆ ದಿನಗಳೇ ರಮ್ಯ. ಅವುಗಳನು ಈಗ ನೆನಪಿಸಿಕೊಳ್ಳುವುದು ಇನ್ನೂ ರಮ್ಯ.
ನಮ್ಮೂರಲ್ಲಿ ನವರಾತ್ರಿ ಮುಗದು, ಸೀಗೀ ಹುಣ್ಣಿವೆ ಬಂತೂ ಅಂದರ, ನಾವು ಹುಡುಗಿಯರ ಒಂದು ಮೀಟಿಂಗ್ ಆಗತಿತ್ತು. ಅದು ಸಾಲಿ ಕಟ್ಟಿ ಮ್ಯಾಲೋ ಅಥವಾ ಯಾರದರೆ ಮನೀ ಅಂಗಳ ಅಥವಾ ಹಿತ್ತಲದಾಗೋ ಇಲ್ಲಾ ಭಾವಿ ಕಟ್ಟಿ ಮ್ಯಾಲೋ ಇಲ್ಲಾಂದ್ರ ನದೀಗೆ ಹೋಗೋವಾಗನೋ. ಒಟ್ಟಿನ ಮ್ಯಾಲ ನಮಗ ಮೀಟಿಂಗ್ ಹಾಲ್ ಮುಖ್ಯ ಅಲ್ಲ. ನಮ್ಮ ತಯಾರಿ ಮುಖ್ಯ. ಮೀಟಿಂಗ್ ನ ಮುಖ್ಯ ಉದ್ದೇಶ, ಗೌರಿ ಹುಣ್ಣಿವೀದು ಮತ್ತ ಅದರ ತಯಾರೀದು. ನಮ್ಮ ಮೊದಲಿನ ಕೆಲಸ ಅಂದರ, ಸೀಗಿ ಫೆಳಿಯಿಂದ ಕೋಲು ತರುವ ಕೆಲಸ. ಊರೊಳಗೆ ಒಬ್ಬಿಬ್ಬರಾದರೂ ಒಳ್ಳೆವರು ಎಲ್ಲಾ ಕಾಲದಾಗೂ ಇರತಾರ, ಪಾಪ, ಸಣ್ಣ ಹುಡುಗೇರು, ಏನೋ ಕೇಳತಾವ ಅಂತ, ಒಂದು ನಾಲ್ಕು ಜೊತಿ ಕೋಲು ಮುರುದು ಕೊಡತಿದ್ದರು. ಒಮ್ಮೊಮ್ಮೆ ನಮ್ಮ ಅದೃಷ್ಟ ಛೊಲೋ ಇದ್ದರ, ಅವರೇ ಆ ಕೋಲಿನ ಅಂಚು ಕತ್ತಿಯಿಂದ ಹೆರದು, ಸಪಾಟಾಗಿ ಕೈಗೆ ಚುಚ್ಚದಂಗ ಮಾಡಿ, ಒಂದ ಅಳತೀಯೊಳಗ ಕಡದೂ ಕೊಡುತಿದ್ದರು. ಇಲ್ಲಾಂದರ, ಇಷ್ಟಾದರ ಅಷ್ಟ ಆತು ಅಂತ ಸೀಗೀ ಫೆಳಿಯಿಂದ ಕೋಲು ಬಂದವಲ್ಲಾ ಅಷ್ಟಕ್ಕ ತೃಪ್ತರಾಗತಿದ್ದವಿ. ಅಲ್ಪ ತೃಪ್ತರು ನಾವು. ಅಷ್ಟು ಕಂಡ್ಯೋ ಕೃಷ್ಟ ಭಟ್ಟಾಂದರ, ಅದೂ ಇಲ್ಲೋ ರಾಮ ಭಟ್ಟಾ ಅಂದಂಗ. ಹೆಚ್ಚು ಕೇಳಿದರ, ಕೋಲೂ ಸಿಗದೇ ಇರೋ ಸಂದರ್ಭ ಇರತಿದ್ದವು. ಅದಕ್ಕ, ಸುಮ್ಮನಾಗತಿದ್ದವಿ.
ಮನೀಗೆ ಬಂದು, ಆ ಉದ್ದದ ಕೋಲುಗಳಿಂದನ, ನಾಲ್ಕೋ ಎಂಟೋ ಜೊತಿ ಕೋಲು ಇನ್ನೊಬ್ರರು ಯಾರಾದರೂ ಒಳ್ಳೆಯವರನ್ನು ಅಂದರ ನಾವು ಹೇಳುವ ಕೆಲಸವನ್ನು ಬೈಯದೇನೆ ಸುಮ್ಮನ ಮಾಡಿಕೊಡೋವರನ್ನ ಹುಡುಕಿ, ತಯಾರಿಸಿ ಕೋತಿದ್ದಿವಿ. ನಮಗೇನು, ಯಾರಾದರೇನು, ಒಟ್ಟಿನೊಳಗ ನಮ್ಮ ಕೆಲಸಾ ಆದರ ಆತು. ನಾವು ಕೆಲಸದಲ್ಲಿ ಏಕದೃಷ್ಟಿಯುಳ್ಳವರು. ಕೆಲಸದೊಳಗೆ ಬೇಧ ಭಾವ ಮಾಡೋವರೇ ಅಲ್ಲ. ಇಷ್ಟೆಲ್ಲಾ ಕಷ್ಟ ಪಡೋದರ ಬದಲಿಗೆ, ಹಿಂದನ ವರ್ಷದ ಕೋಲೇ ಇಟ್ಟುಕೋಬಹುದಲ್ಲ, ಅನಬಹುದು ನೀವು. ನಮಗೂ ಪ್ರತೀ ವರ್ಷ ಅದೇ ಆಶಾ ಇರತಿತ್ತು. ಆದರ, ಆ ಕೋಲು ಎಲ್ಲಾರ ಆಕರ್ಷಣೆಯ ವಸ್ತು ಆಗಿರತಿತ್ತು. ಅಪ್ಪಗ ಹೊಡಿಯಲಿಕ್ಕೆ ಕೈಗೆ ಸಿಗೋದು ಈ ಕೋಲೇ. ಅದಕ್ಕ ಅವರ ಕೈಗೆ ಸಿಗದಂಗ ಇಡಬೇಕು. ಮತ್ತ ತಮ್ಮನ ಆಟಕ್ಕೂ ಬೇಕು. ಅಣ್ಣ ನಾನ ಮಾಡಿಕೊಟ್ಟದ್ದು, ಕೊಡೇ ಅಂತ, ಆಕಳಾ ಹೊಡೀಲಿಕ್ಕೆ ತೊಗೋತಿದ್ದ. ಎಲ್ಲಾರಿಗಿಂತ ಹೆಚ್ಚು ಕಾಪಾಡಬೇಕಾಗಿದ್ದು, ಅಜ್ಜಿ ಕೈಯಿಂದ. ಅಕಿಗೆ ಅನುಭವ ನಮಗಿಂತ ಜಾಸ್ತಿ. ಯಾವುದರೇ ಮಾಯದಿಂದ ಅದು ಒಲೀಗೆ ಆಹುತಿ ಆಗಿರತಿತ್ತು. ನಮ್ಮ ಪರವಾಗಿ ಇರೋವಾ ಅಂದರ ಅಜ್ಜ ಒಬ್ಬನೇ. ಆ ಕೂಸಿನ ಕೋಲು ಮುಟ್ಟಿದರ ಅದರಿಂದನ ಬಾರಸತೇನಿ ಅಂತಿದ್ದ. ಆದರ, ಅಜ್ಜೀಗೇ ಅವನೂ ಹೆದರತಿದ್ದ. ಆದರೆ ಅದು ನಮಗ ತಿಳೀದಂಗ ನೋಡಿಕೋತಿದ್ದ ಅಷ್ಟ. ಒಮ್ಮೊಮ್ಮೆ ಕೋಲನ್ನ ನಾವೇ ಅಟ್ಟದ ಮ್ಯಾಲೆ ಇಟ್ಟು ಮರತು ಬಿಟ್ಟಿರುತ್ತಿದ್ದವಿ. ಹುಡುಕೋದಕ್ಕಿಂತ, ಹೊಸಾದು ತರೋದೇ ಹಗುರ ಆಗಿರತಿತ್ತು. ಬಿಡರಿ, ಈಗ ಮುಖ್ಯ ವಿಷಯಕ್ಕ ಬರತೇನಿ.
ಕೋಲು ಸಿಕ್ಕ ಮ್ಯಾಲೆ ಕೋಲಾಟದ ಪ್ರ್ಯಾಕ್ಟೀಸ್ ಮಾಡತೇವಿ ಅಂದರ ನೀವು ತಪ್ಪು ಮಾಡತೀರಿ ಅಂತನೇ ಅರ್ಥ. ಮುಂದಿನ ಹಂತ ಅಂದರ, ಸೀರಿ ಹುಡುಕೋದು. ಯಾರ ಮನಿಯೊಗಳ ಒಂದ ತರದ್ದು ಎರಡು ಸೀರಿ ಅವ, ಹುಡುಕೋದು. ಈ ಸೀರೀ ಹುಡುಕೋದು ಭಾಳಂದ್ರ ಭಾಳ ಕಷ್ಟದ ಕೆಲಸಾ. ಈಗ ಕೂಡಾ ಯಾರರೆ ಎರಡು ಒಂದೇ ಬಣ್ಣದ ಸೀರೀ ಉಟ್ಟರೆ, ನಮ್ಮ ಮನಿಯೊಳಗ, ನನ್ನ ತಮ್ಮಂದಿರು, ‘ನಮ್ಮಕ್ಕಗ ಕೋಲಾಟಕ್ಕ ಬೇಕನೋ ಕೇಳರಿ’ ಅಂತಾರ. ಅವರೂ, ಕೇಳಿದ ಕೂಡಲೇ ಕೊಟ್ಟು ಬಿಡತಾರೇನು, ಇಲ್ಲ. ಯಾಕಂದರ, ಅವರ ಹತ್ತರ ಇರೋದೂ ಒಂದೋ ಎರಡೋ ಸೀರಿ, ನಾವಂತೂ ಅಂಚು ಕಿತ್ತಿ, ಮಣ್ಣು, ಹೊಲಸು ಮಾಡದೇ ಯಾವತ್ತೂ ಸೀರೀ ವಾಪಸ್ಸು ಕೊಡೋ ಪದ್ಧತಿ ಇಟ್ಟುಕೊಂಡಿರಲಿಲ್ಲ ಬಿಡರೀ. ಅದಕ್ಕ, ಈ ಸೀಗೀ ಹುಣ್ಣಿವಿ ಆದ ಮ್ಯಾಲ ನಮ್ಮ ಗುಂಪು ಯಾರದರೆ ಮನೀಗೆ ಹೋಗೇದ ಅಂದರ, ಅವರು ತಮ್ಮ ಹೊಸಾ ಸೀರಿ ಮುಚ್ಚಿ ಇಟ್ಟುಬಿಟ್ಟಿರತಿದ್ದರು. ನಾವೂ ಭಂಡರೇ, ಅವರ ಮನೀಯೊಳಗ ಯಾರನ್ನ ಕೇಳಿದರ ಸೀರೀ ಕೊಡತಾರೋ ಅವರನ್ನೇ ಹೋಗಿ ಕೇಳತಿದ್ದಿವಿ. ಹೆಂಗರೆ ಮಾಡಿ ಒಂದ ಬಣ್ಣದ ಎರಡು ಸೀರೀ, ಹಿಂಗ ಎರಡು ಅಥವಾ ಮೂರು ಜೋಡಿ ಸೀರೀ ಹುಡುಕಿ ಬಿಡತಿದ್ದವಿ. ಇದಕ್ಕ ಹೊಸಾ ಸೀರೀ ಅಥವಾ ಹಳೇ ಸೀರೀ ಅನ್ನೋ ಬೇಧ ಭಾವ ಇರತಿರಲಿಲ್ಲ. ಯಾವದೂ ಅಂತಹಾ ಸೀರಿ ಸಿಗಲಿಲ್ಲಂದರ, ಆಪದ್ಬಾಂಧವ ಅಂತ ಒಂದು ಸೀರಿ, ಅಂದರ, ಎಲ್ಲಾರ ಮನೀಯೊಳಗೂ ಇರೋ ಹಸಿರು ಬಣ್ಣದ, ಕೆಂಪು ದಡಿಯ, ಟೋಪ ಸೆರಗಿನ ಸೀರಿ. ಇದಕ್ಕೇನೂ ಕೊರತೆ ಇರಲಿಲ್ಲ. ಎಲ್ಲಾರ ಮನೀಯೊಳಗೂ ಒಂದೋ ಎರಡೋ ಇದ್ದೇ ಇರತಿದ್ದವು. ಆ ಸೀರಿಗೆ ಒಂದು ಹಾಡೂ ಆಪದ್ಬಾಂಧವ ಅಂತ ಇತ್ತು.
‘ನೆಲಗಣಿ ಮ್ಯಾಲ ಕೆಂಪು ದಡೀ ಸೀರಿ,
ಕೆಣಕಿ ಕೇಳತೈತೆ, ಯಾಕವ್ವಾ, ನನ್ನನಿಲ್ಲಿ ಮರೆತೆ,
ಯಾರಿಗಾಗಿ ಹೊಸ ಸೀರಿಯ ಉಡಲೇ,
ನೀನೇ ಹೇಳ ಗಣತಿ, ಈಗ ಸೀರಿಗೇನು ಹೇಳ್ತಿ” ಅಂತ.
ಈಗ, ಸೀರಿ ಸಿಕ್ಕಿತು, ಕೋಲು ಸಿಕ್ಕವು, ಮುಂದ, ಮುಸ್ಲಿಂರ ಓಣಿಗೆ ಹೋಗಿ, ಬಂಗಾರ ಬಣ್ಣದ ಚಿನ್ನಾರಿ ತರಬೇಕು, ಅವರು ಇಲ್ಲಂದರೂ, ಬಿಡದೇ, ಯಾರನ್ನಾದರೂ ಕೇಳಿ, ತರುವ ಛಲಗಾತಿಯರು ನಮ್ಮ ಗುಂಪಿನ್ಯಾಗ ಇದ್ದರು, ಮತ್ತ, ನಮಗೆ ಹೊಸಾ ಬಳೀ ಸರದ ಅವಶ್ಕಕತಾ ಇರಲಿಲ್ಲ. ಇದಕ್ಕ, ಬಿಳೇ ಹಾಳಿಯಿಂದ ಕೈಗೆ ಬಳೀ, ಕೊರಳಿಗೆ ಹಾರ, ಮುಡೀಗೆ ಹೂವು ಎಲ್ಲಾ ಮಾಡತಿದ್ದಿವಿ. ಒಟ್ಟಿನ್ಯಾಗ, ಪುಕ್ಕಟೆ ಶಕುಂತಲಾ ಆಗಿರತಿದ್ದಿವಿ.
ಇನ್ನು ಕೋಲಾಟದ ತಯಾರಿ ಮಾಡತಿದ್ದಿವಿ, ಅದೇನೂ ಕಷ್ಟ ಅಲ್ಲ. ಯಾವ ಹಾಡಾದರೂ ಸರಿ, ಡ್ಯಾನ್ಸ ಆಗಲೀ ಕೋಲಾಟ ಆಡುವ ಸಾಮರ್ಥ್ಯ ನಮ್ಮಲ್ಲಿತ್ತು. ಇಲ್ಲಾಂದರೆ ಆಗಲೇ ಸೃಷ್ಟಿ ಮಾಡತಿದ್ದಿವಿ ಬಿಡಿ. ಮತ್ತ ನಮ್ಮ ಡ್ಯಾನ್ಸ ನೋಡೋವರೂ ಸಹ ನಮ್ಮ ಡ್ಯಾನ್ಸ ನೋಡತಿದ್ದರೇ ವಿನಃ ನಮ್ಮ ತಪ್ಪು ನೋಡತಿರಲಿಲ್ಲ, ಎಣಿಸತಿರಲಿಲ್ಲ. ಅವರಿಗೆ ನಾವು ಏನು ಡ್ಯಾನ್ಸ ಮಾಡಿದರೂ ಚಂದನೇ ಆಗಿರತಿತ್ತು. ನಮ್ಮನ್ನು ಊರಿನವರೆಲ್ಲಾ ಎರಡೇ ರೀತಿಯಲ್ಲಿ ನೋಡತಿದ್ದರು. ಚಂದ ಡ್ಯಾನ್ಸ ಮಾಡೋವರು ಮತ್ತು ಭಾಳ ಚಂದ ಡ್ಯಾನ್ಸ ಮಾಡೋವರು ಅಂತ. ಅದಕ್ಕ, ನಮಗ ಹೆದರಿಕೆ ಅನ್ನೋದೇ ಇರಲಿಲ್ಲ.
ಅಲ್ಲದೇ, ತಮ್ಮ ಫರಮಾಯಿಷಿ ಹಾಡುಗಳ ಡ್ಯಾನ್ಸ ಮಾಡರೀ ಅಂತ ಹೇಳಿ, ನಾವು ಮಾಡ್ತಿರೋ ಡ್ಯಾನ್ಸಗೆ ಪ್ರೋತ್ಸಾಹ ಕೊಡತಿದ್ದರು. ಗೌರಿಯ ಕೋಲಾಟದ ಹಾಡು, ಒಂದೆರಡು ದೇವರ ಹಾಡು ಆದ ಮೇಲೆ ಜಾನಪದ ಕೋಲಾಟ, ಆಮೇಲೆ ಕೇಳಿದ ಹಾಡಿನ ಕೋಲಾಟ, ಅದಕ್ಕೇನೂ ಪೂರ್ವ ತಯಾರಿ ಬೇಕಾಗಿರಲಿಲ್ಲ. ಯಾವುದೇ ಹಾಡಿಗೂ ಅದೇ ಡ್ಯಾನ್ಸ ಮಾಡುತಿದ್ದಿವಿ. ಆದರೂ ಭಾಳ ಜನ ಕೇಳೋ ಹಾಡು ಅಂದರ,
“ನೋಡವಳಂದಾವ ಮುತ್ತಿನ ಮಾಲೆ ಚಂದಾವ”
ಅನ್ನೋ ಚಾಮುಂಡಿ ದೇವಿಯ ಹಾಡು, ನಮಗೂ ಈ ಹಾಡು ಭಾಳ ಸೇರತಿತ್ತು. ಅಮ್ಯಾಲೆ, ಜನರು, ‘ಚಲುವ್ಯಾರು ಹಾಡು ಕುಣೀರೇ’ ಅಂದರ, ನಾವು ಚಲುವಿಯರು ಅಂದುಕೋಬ್ಯಾಡರೀ ಮತ್ತ, ಅದು ಎನ್ ಎಸ್ ಲಕ್ಷ್ಮಿನಾರಾಯಣ ಭಟ್ಟರ ‘ತಾಯಿಯ ಕವನ’, “ಚಲುವೆ ಯಾರೋ ನನ್ನ ತಾಯಿಯಂತೆ” ಈ ಹಾಡನ್ನು ನಾವು ಡ್ಯಾನ್ಸ ಮಾಡಬೇಕಾಗಿತ್ತು. ಆದರೆ ತುಂಬಾ ಜನರ ಇಷ್ಟದ ಹಾಡು ಮತ್ತು ನೃತ್ಯ ಅಂದರೆ, ನಲ್ವಾಡುಗಳು, ಕವನ ಸಂಕಲನದಲ್ಲಿ, ಆನಂದಕಂದ ಕಾವ್ಯನಾಮದ, ಬೆಟಗೇರಿ ಕೃಷ್ಣಶರ್ಮರು ಬರೆದಿರುವ
‘ನಮ್ಮ ಹಳ್ಳೀ ಊರು ನಮಗೆ ಪಾಡ,
ಯಾತಕವ್ವ ಹುಬ್ಬಳ್ಳಿ ಧಾರವಾಡ”
‘ಒಂದು ದಳದ ಕಮಲದಲ್ಲಿ’ ಹಾಡು ಕೂಡಾ ಇರತಿತ್ತು. ನಲವತ್ತು ಐವತ್ತು ದಳದ ವರೆಗೂ ಹೋಗುತಿತ್ತು, ಆದರ, ನೂರು ಅಥವಾ ನೂರಾ ಎಂಟು ದಳದ ನುಡಿವರೆಗೇನೂ ಹೋಗತಿರಲಿಲ್ಲ. ಆಮೇಲೆ, ಇನ್ನೊಂದು ವಿಷಯ ನಮ್ಮ ಈ ಕೋಲಾಟ, ಡ್ಯಾನ್ಸ ಎಲ್ಲಾ ಯಾವುದೇ ರಂಗದ ಮೇಲೆ ಪ್ರದರ್ಶನ ಆಗುತಿರಲಿಲ್ಲ. ನಿಜವಾದ ಅರ್ಥದೊಳಗೆ ನಾವು, ಜನರ ಬಳಿಗೆ ಹೋಗಿರುತಿದ್ದೆವು. ಅಂದರೆ, ಮನೆ ಮನೆಗೆ ಹೋಗಿ, ಅಥವಾ ಅಂಗಡಿಗಳು, ಯಾವುದೇ ರಸ್ತೆಯ ಚೌಕದಲ್ಲಿ ಬೀದಿ ದೀಪದ ಕೆಳಗೆ ಇರುತಿದ್ದವು, ಜನರು ನೋಡಿ ನಲಿಯುತಿದ್ದರು. ಒಟ್ಟಿನಲ್ಲಿ ನಾವೆಲ್ಲಾ ಜನರು ಮೆಚ್ಚಿದ ಕಲಾವಿದರು. ಈಗ ಆದರೆ ಯಾರೂ ಬರುತಿರಲಿಲ್ಲವೇನೋ, ಯಾಕೆಂದರೆ ಈಗಿನವರ ಸಂಜೆಗಳೆಲ್ಲಾ ಟೀವಿ ಮುಂದೇನೇ ಆಗಿರತದಲ್ಲಾ.
ತುಳಸೀ ಮದುವೆಗಿಂತ ಹಿಂದಿನಿಂದಲೇ, ಅಂದರೆ ದಶಮಿಯಿಂದಲೇ ಈ ಗೌರಿ ಹುಣ್ಣಿವಿ ಕೋಲಾಟ ಶುರು ಮಾಡತಿದ್ದಿವಿ, ಒಂದು ವಾರ ದಿನಾ ತಪ್ಪದೇ ಸಂಜೆ ಮುಂದೆ, ಮನಿ ಮನೀಗೆ ಹೋಗಿ ಡ್ಯಾನ್ಸ ಮಾಡಿ ಬರತಿದ್ದಿವಿ. ಹುಣ್ಣಿವಿ ದಿನಾ ಎಲ್ಲಾರೂ ನಮಗೆ ಹತ್ತು ಪೈಸೆ, ಇಪ್ಪತ್ತು ಪೈಸೆ, ನಾಲ್ಕಾಣೆ ಕೊಡತಿದ್ದರು. ಹೆಚ್ಚೆಂದರೆ ಎಂಟಾಣೆ. ಅಷ್ಟೇ. ಅದು ನಮಗೆ ಮುಖ್ಯ ಆಗಿರತಿದ್ದಿದ್ದಿಲ್ಲ. ಯಾಕೆಂದರೆ, ನಮಗೆ ಗೊತ್ತಿತ್ತು ಇದು ನಮ್ಮ ಕಲೆಗಿರುವ ಬೆಲೆ ಅಲ್ಲ ಅಂತ, ಮತ್ತು ನಾವು ಬೆಲೆ ಕಟ್ಟಲಾಗದ ಕಲಾವಿದರು ಅಂತ. ಅದು ಕೊಟ್ಟವರ ಪ್ರೀತಿ ಆಗಿರತಿತ್ತು ಅಷ್ಟ.
ಮೊನ್ನೆ ದೀಪಾವಳಿ ಹಬ್ಬದ ದಿನ ಚಿಕ್ಕಪ್ಪನ ಮಗ ಊರಿಗೆ ಹೋದಾಗ, ಯಾರೊ ಕೇಳಿದರಂತೆ, “ನಾನು ಯಾರೂಂತ ನೆನಪಿದೆಯೇನೋ” ಅಂದರಂತೆ, “ಅದಕ್ಕೆ ಇವನು, ನಿನ್ನ ಹೆಸರು ನೆನಪಿಲ್ಲ, ಆದರೆ, ನೀನು ನಮ್ಮ ಅಕ್ಕನ ಜೊತೆ ಡ್ಯಾನ್ಸ ಮಾಡತಿದ್ದೆ, ನೆನಪಿದೆ’ ಎಂದನಂತೆ.
‘ಹೂನಪ್ಪ, ಅವಾಗ, ಗೌರಿ ಹುಣ್ಣಿವಿಗೆ ನಮ್ಮ ಕೋಲಾಟ ಅಂದರ ಜನಾ ಕಾದು ನಿಂತಿರತಿದ್ದರು, ಈಗ ಯಾರೂ ಇಂತಾ ಹಬ್ಬ, ಕೋಲಾಟ ನೆನಪಿಸಿಕೊಳ್ಳೋದೂ ಇಲ್ಲ, ನೋಡೋದೂ ಇಲ್ಲ, ಏನಿದ್ದರೂ ಟೀವಿ, ಮೊಬೈಲು, ಅಷ್ಟ. ಜನ ಕುರಿಗಳ ಹಂಗ ಯಾರೋ ಕುಣಿದಿದ್ದಕ್ಕ, ಯಾರೋ ಪಾತ್ರ ಮಾಡಿದ್ದಕ್ಕೆ ಚಪ್ಪಾಳೆ ಹೊಡೀತಾರೆ. ಸ್ವಂತ ಇವರೇನು ಮಾಡಿಯಾರೋ’ ಅಂದರಂತೆ. ಅದಕ್ಕೇ ಹಿಂದಿನದೆಲ್ಲಾ ನೆನಪಾಯ್ತು, ಹಂಚಿಕೊಂಡೆ. ನಿಮಗೂ ಬಾಲ್ಯದ ಹಳೇ ನೆನಪುಗಳ ಸರಮಾಲೆ ನೆನಪಾಗಬಹುದು.
–ಡಾ. ವೃಂದಾ ಸಂಗಮ್