ಶಿವಧ್ಯಾನ: ಡಾ. ರಶ್ಮಿ ಕಬ್ಬಗಾರ


ಅಲ್ಲಿಗೆ ಹೋದ ಮೇಲೆ ಗೊತ್ತಾದದ್ದು
ನಮ್ಮೂರ ಶಿವ ಎಷ್ಟು ಸಿಂಪಲ್ಲು ಅಂತ !
ಶಿವರಾತ್ರಿಯೋ- ಮಡಿಹುಡಿ ನೈವೇದ್ಯದ
ತಲೆಬಿಸಿ ಎಳ್ಳಷ್ಟೂ ಇರದ
ಶುದ್ಧ ಪ್ರೀತಿಯ ಸಮಾವೇಶವೇ ಸರಿಯೆನ್ನಿ

ಆ ದಿನ ಯಾವ ಹೊಳೆಯೂ ಆದೀತು ಪಕ್ಕದಲ್ಲೊಂದು ಶಿಲೆಯಿದ್ದರಲ್ಲಿ ಶಿವರಾತ್ರಿ ನೀರೆಲ್ಲವೂ ಗಂಗೆ’ ಕಲ್ಲ ತಲೆಮೇಲೊಂದಿಷ್ಟು ಅಭಿಷೇಕಗೈದು
ನಿರುಮ್ಮಳವಾಗಿ ಬನ್ನಿ ಮನೆಗೆ’- ಹಿರಿಯರ ನುಡಿ

ನಮ್ಮಜನ ಊರು-ಕೇರಿಯ ಗೆಳೆಯರನ್ನ
ಸಹಜೀವಗಳನ್ನ ಕೂಡಿಸಿ,
ಗೂಡ್ಸು, ಲಾರಿ ತುಂಬಿಕೊಂಡು
ಗಲ್ಲದ ಗೌಜುಗಳೊಂದಿಗೆ
ಶಿವರಾತ್ರಿ ಪಿಕ್ ನಿಕ್ ಹೋಗಿದ್ದುಂಟು.

ಪ್ರತಿವರ್ಷವೂ- ಮುಂದಿನ್ವರ್ಷ ನಿನ್ನ ಮುದ್ದಾಂ ಕರಕೊಂಡ್ಹೋಗ್ತೆವೇ ಅಂತ್ಹೇಳಿ ಕೈಕೊಟ್ಟು ಓಡಿದ ಅಕ್ಕ, ಅಣ್ಣ, ಚಿಕ್ಕಮ್ಮನ ನೆನೆದು,
ಚಳ್ಳೇಪಿಳ್ಳೆಗಳಾದ ನಾನು ಮತ್ತು ಮಿತ್ರರು ಹೊಟ್ಟೆ ಉರಕೊಂಡಿದ್ದು, ಈಗಷ್ಟು ಮನಸಲಿ
ಸಿಡಿವುದು ಅರಳು ಸಿಡಿದಂತೆ ಅಸೂಯೆ !

ಐದಾರರಲ್ಲಿ ಒಡ್ದ ಆಸೆಗಳ ಈಗೀಗ ನಲವತ್ತರ ಆಸುಪಾಸಿನಲ್ಲಿ ಜೋಡಿಸಿ
ಹೊಲೆಯುವುದು ಬೆಚ್ಚನೆಯ ಕೌದಿಯಂತಹ
ಇಲ್ಲೊಂದು ಶಿವ- ಪುಣೆಯ ಸಮೀಪದಲಿ
ಬುಲೇಶ್ವರನೆಂಬ ಹೆಸರಲ್ಲಿ ದಿನವೂ ಖುದ್ದು ಬಂದು ಸ್ವೀಕರಿಸುವನಂತೆ ಭಕ್ತರ ಕೈಯಿಂದ ನೈವೇದ್ಯ !

ಅದಾವ ರೂಪದಲ್ಲೊ ನಾ ಕಾಣೆ
ಇಂದಿಟ್ಟ ಮೊಸರನ್ನ, ಪೇಡ
ನಾಳೆ ಪೂಜೆ ಹೊತ್ತಿಗಿರಲ್ಲ
ಈಗ, ನೋಡಿ ಬೇಕಾದರೆ
ಅನಾಮತ್ತು ಶಿವಲಿಂಗ ಎತ್ತಿ
ತೋರಿದ ಪೂಜಾರಿ-ಮಹಾನುಭಾವ !
ತೊಟ್ಟ ಜೀನ್ಸುಗಳು ನಾಚುವಂತೆ
ನಮ್ಮನ್ನೆಲ್ಲ ಒಳಗೊಂಡ ಶಿವ… ಆ ಕ್ಷಣ !

ಸುತ್ತೆಲ್ಲ ಒಡೆದ ಶಿಲಾಬಾಲಿಕೆಯರು
ಕಡಿದ ಕಮಾನುಗಳು ಗರ್ಭಗುಡಿ-ಚಂದ್ರಶಾಲೆ
ಇಷ್ಟು ಚಂದ ಉಳಿದದ್ದು ಹೇಗೆ ? ಒಳಮನೆ ..?!
ಧೈರ್ಯ ಮಾಡಿ ಕೇಳಿದೆ ;

ಅದಕೊಂದು ಕಥೆಯಿದೆ
ಕೋಟೆ ಕೊತ್ತಲ ಹೊಲ-ಗದ್ದೆ,
ಹಾವು-ಮೊಸಳೆ ಸುತ್ತೆಲ್ಲ ಭಂಜಿಸಿ
ಒಳನುಗ್ಗಿದ ಮುಘಲರನ್ನ ಶಿವ
ಗರ್ಭಗುಡೀಲಿ ಪ್ರಕಟವಾಗಿ ಹಿಮ್ಮೆಟ್ಟಿಸಿದನಂತೆ
ಅಲ್ಲಿಂದ ಮುಂದೆ ಕಾಲಿಟ್ಟಿಲ್ಲ ಎಂದೂ – ಯಾರೂ
ಖರೆ, ದಾಳಿಕೋರರಿನ್ನೆಷ್ಟು ಪುಣ್ಯ ಮಾಡಿದ್ದರೋ
ನಮ ಶಿವನ ಕಣ್ಣಿಂದ ಕಾಣಲು !

ಶಿವರೂಪಿ ಸೈನಿಕ-ಬಹುಶಃ ಶಿವಾಜಿ, ಅಥವಾ ತಾನ್ಹಾಜಿ ಕುಣಿದು ಕಣ್ಣೆದುರು….. !
ಗತದ ಮಿಂಚಿನಲಿ ಮಿಂದೆದ್ದೆನೊಂದು ಚಣ ! ನನ್ನ ಕಲ್ಪನೆ ಯಲ್ಲಿ..
ನಮ್ಮೂರಲ್ಲಿ ತಾಯಿ-ನಿಮ್ಮೂರಲ್ಲಿ ತಂದೆ
ಶಿವಾ, ನಿನಗೆಷ್ಟು ರೂಪವೋ ಎಂದೆ !

-ಡಾ. ರಶ್ಮಿ ಕಬ್ಬಗಾರ, ತಲಘಟ್ಟಪುರ

(ಸ್ಫೂರ್ತಿ : ಪುಣೆಯ ಸಮೀಪದ ಬುಲೇಶ್ವರ ಮಂದಿರದ ಕುರಿತ ದಂತ ಕಥೆಗಳನ್ನಾಧರಿಸಿ)


ಕವಿ ಪರಿಚಯ

ಡಾ. ರಶ್ಮಿ ಕಬ್ಬಗಾರ ( ಮಾನವ ಶಾಸ್ತ್ರಜ್ಞರು, ಅನುವಾದಕರು, ಆಪ್ತ ಸಮಾಲೋಚಕರು, ಸಂಶೋಧಕರು)

ಮಾನವ ಶಾಸ್ತ್ರದಲ್ಲಿ ಪಿ, ಹೆಚ್, ಡಿ. – ಬುಡಕಟ್ಟು ಜನಾಂಗದ ಮನೋವೈಜ್ಞಾನಿಕ ಪರಂಪರೆಯ ಕುರಿತು. ಹುಟ್ಟೂರು : ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಬ್ಬಗಾರ.

ಪ್ರಸ್ತುತ, ಬೆಂಗಳೂರಿನ ತಲಘಟ್ಟ ಪುರದಲ್ಲಿ ವಾಸ. ಪ್ರಕಟಿತ ಕವನ ಸಂಕಲನ : ಲೆಕ್ಕಕ್ಕೆ ಸಿಗದವರು (೨೦೦೯, ಅಭಿನವ ಪ್ರಕಾಶನ, ಬೆಂಗಳೂರು.)


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
RPS
1 year ago

ತುಂಬಾ ಚನ್ನಾಗಿದೆ

Ashwin
1 year ago

ತುಂಬ ಚೆನ್ನಾಗಿ ಬರದ್ದೆ….👏

2
0
Would love your thoughts, please comment.x
()
x