ಪಂಜು ಕಾವ್ಯಧಾರೆ

ಮಾನದಂಡ !

ಮಿಥಿಲಾಪುರದೊಳಗೆ ಪಂದ್ಯ;
ಸೀತೆಗೆ ಸ್ವಯಂವರ….
ಹರಧನುವ ಮುರಿಯುವುದೇ
ಮಾನದಂಡ !
ರಾಮ ಮುರಿದ; ಸೀತೆ ಒಲಿದಳು
ನಂತರದ ವಿಚಾರವೀಗ ಬೇಡ !

ಪಾಂಚಾಲನಂದನೆ ದ್ರೌಪದಿ;
ಸ್ವಯಂವರದಿ ಗೆದ್ದವನ ಮಡದಿ !
ಮತ್ಸ್ಯಯಂತ್ರವ ಭೇದಿಸುವುದೇ
ಮಾನದಂಡ !
ಪಾರ್ಥ ಬಾಣ ಹೂಡಿದ; ದ್ರೌಪದಿ ಒಲಿದಳು
ನಂತರದ ವಿಚಾರವೀಗ ಬೇಡ !

ಅಷ್ಟೋ ಇಷ್ಟೋ ಓದಿದ ಹೆಣ್ಣು,
ಸ್ವಯಂವರ ಅನ್ನಬಹುದೆ ಇದನು ?
‘ಸರ್ಕಾರಿ ನೌಕರಿ’ಯೇ
ಮಾನದಂಡ !
ಸಂ(ಗಿಂ)ಬಳ ತಂದವನ ಹುಸಿನಗೆಗೆ ಒಲಿದಾಳು
ನಂತರದ ಬದುಕು ? ಈಗ ಬೇಡ !

ಜನಕರಾಜನ ಮಗಳಿಗೆ
ವನವಾಸ ವರವಾಯ್ತು;
ದ್ರುಪದ ರಾಜನ ಮಗಳು ಬದುಕು
ಐವರ ಪಾಲಾಯ್ತು !

ಅತಿ ಆಸೆ ಪಟ್ಟಷ್ಟೂ ದುಗುಡ
ಬದುಕ ಅರಿಯಲೆಂತೊ ?
ನಿಗೂಢ !

-ಮನು ಗುರುಸ್ವಾಮಿ

ತಾಳ್ಮೆ

ಹಗಲು ಮೂಡುವ ತನಕ
ಬೆಳಕು ಹರಿಯುವ ತನಕ
ತಾಳುವ ಮನವಿರಲಿ ನಿನ್ನೊಳಗೆ
ಬೆಳಕಿನೊಳಗೆ ಬದುಕ ಕಟ್ಟಿ
ಕೈಯೊಳಗೆ ಹಸಿವರಿತ ರೊಟ್ಟಿ
ಸಿಗುವ ತನಕ ತಾಳ್ಮೆ ಇರಲಿ ನಿನಗೆ ||

ಕರಗುತಿಹುದು ಈ ಸಮಯ
ಇಂದು ಎಂಬುದು ನಾಳೆ ಮಾಯ
ಬರುವುದೆಲ್ಲ ಬರಲಿ ಈ ಜಗದೊಳಗೆ
ಪ್ರತಿದಿನವೂ ಪ್ರತಿಕ್ಷಣವೂ ಹೊಸತು
ನೆನಪಲ್ಲಿ ಉಳಿದದ್ದು ಅಳತು
ಉಳಿದಿರಲಿ ತಾಳ್ಮೆ ಒಳಗೊಳಗೆ ||

ಬಡವನಾರು ಸಿರಿವಂತನಾರು
ಕೇಳುವವರಾರು ಈ ನಿನ್ನ ದೂರು
ಕೊಡುವನು ಅವನೇ ಅದುವೆ ನ್ಯಾಯ
ನಿನಗೂ ಉಂಟು ಜವಾಬ್ದಾರಿ
ಅದುವೆ ನಿನಗೆ ಬದುಕ ದಾರಿ
ಉಳಿತಾಯದೊಳಗೆ ತಾಳ್ಮೆ ನ್ಯಾಯ ||

ಶಕ್ತಿ ಇರುವ ತನಕ ಕಟ್ಟು
ನಿನ್ನ ಗುರಿಯನು ನೀ ಮುಟ್ಟು
ಹೇಳರು ಈ ಗುಟ್ಟು ಬದುಕೊಳಗೆ
ಕರಗುವಲಿ ಕರಗಿ ಬಿಡು
ಬೆಳಗುವಲಿ ಬೆಳಗಿಬಿಡು
ತಾಳ್ಮೆ ಇರಲಿ ಬದುಕ ಸುಳಿಯೊಳಗೆ ||

-ವೆಂಕಟೇಶ ಚಾಗಿ

ಕವಿತೆ..

ಚುಂಬಿಸಿ ಹೆಣ್ಣಾಗಿಸುವ ಕಲೆ ಕಲಿತುಕೊಂಡು ಬಾ.. ನಲ್ಲ.

ನಿನಗೆ ನಿಜವಾಗಿಯೂ ಚುಂಬಿಸಲು ಬರುವುದೇ ಇಲ್ಲ
ಎಂದು ಅನುಮಾನಿಸಿ ಲೇವಡಿ ಮಾಡಿದ್ದೆ ನೀನು
ಅಬ್ಬಾ ಆ ಕಷ್ಟಾ ಯಾರಿಗೂ ಬೇಡಾ!
ಎರಡು ಅಂಕಣದ ಮನೆಯಲ್ಲಿ ಯಾರೂ ಇಲ್ಲದ ಜಾಗದಲ್ಲಿ
ನಿನ್ನ ಸಂಧಿಸಿ ಚುಂಬಿಸುವ ಕೆಲಸವಿದೆಯಲ್ಲ
ಬಾರಿ ಕಷ್ಟದ ಕೆಲಸವದು ಹೇಗೋ ಚುಂಬಿಸಿದೆ…!

ಹೇ ಹೋಗೋ…
ತರಾತುರಿಯಲ್ಲಿ ಚುಂಬಿಸಿದೆ
ಆ ಕ್ಷಣವನ್ನು ಆಸ್ವಾದಿಸಲು ಆಗಲೆಲ್ಲ
ನಡುಗುವ ತುಟಿಗೆ ತುಟಿ ಒತ್ತಿದಷ್ಟೇ ಗೊತ್ತು
ಕಣ್ಣು ಬಿಡುವುದೊರಳಗೆ ಮಂಗಮಾಯ
ನಾ ಕಳೆದು ಹೋಗಬೇಕಿತ್ತು ನಿನ್ನಲ್ಲಿ ನಾ ನನ್ನಲ್ಲಿ ನೀ ಎನ್ನುವ ಹಾಗೆ
ಪ್ರಕೃತಿಯಂತೆ ಒಂದಾಗುವ ಪ್ರಕ್ರಿಯೆ ಸಮಯ ಇದ್ದಾಗಲೂ
ಅವರಸಕ್ಕೆ ನೀ ಒಳಗಾಗಿ ರಸಕ್ಷಣ ಮುನಿಸಿಕೊಂಡಿತು..!

ನಿನಗೆ ಪ್ರಣಯದ ಅ..ಆ..ಇ..ಈ ಕಲಿಸಬೇಕು
ಹೆಣ್ಣಿನ ದುಗುಡ, ದುಮ್ಮಾನ ಎದೆಭಾರ ಇಳಿಸುವುದದಲ್ಲಿ
ಚುಂಬನ ಎಷ್ಟು ಮುಖ್ಯವೆಂದು ಬೆಳದಿಂಗಳ
ರಾತ್ರಿ ಪೂರ್ತಿ ತಿಳಿಹೇಳಬೇಕು.
ದೇಹಹದಗೊಳಿಸಿ ಮನಸು ಭಾಗಿಸುವ
ಕಣ್ಣು ನೋಡಿನೋಡಿ ಸುಸ್ತಾಗುವ ತಾಲೀಮಿನ ಕೆಲಸವದು
ಸರಸದ ವಿಷಯದಲ್ಲಿ ನೀ ಅತಿ ದಡ್ಡ ಎನ್ನುವುದು
ನನ್ನ ಅಭಿಪ್ರಾಯ ನಿನ್ನ ಅವರಸ ಆತಂಕ ಕಾರಣ ಅಲ್ಲದೇ ಇನ್ನೇನು
ಹೇ.. ದನದ ರೀತಿಯವನೆ..
ನನ್ನ ಎದೆ ಬಡಿತ ನಿನ್ನ ಎದೆ ತಲುಪುವ ಮೊದಲೇ
ನೀ ನಿರ್ಗಮಿಸುದ್ದು ಸರಿಯಲ್ಲ
ನನ್ನ ಹೆಣ್ಣತನಕ್ಕೆ ನಿನ್ನ ಬಿಸಿ ಉಸಿರು ತಾಕಬೇಕಿತ್ತು
ಅರಳಬೇಕಿತ್ತು, ಕನಸು ನನಸಿನೆಡಗೆ ಉರುಳಬೇಕಿತ್ತು
ಇದಾವುದೂ ಆಗಲೇ ಇಲ್ಲ..!

ಏನು ಮಾಡಲಿ ನಿಜವಾಗಿಯೂ ನಿನಗೆ
ಚುಂಬಿಸುವುದು ಗೊತ್ತೇ ಇಲ್ಲವಲ್ಲ !? ಇನ್ನಾದರೂ
ಹೂ ದುಂಬಿಗಳನ್ನು ನೋಡಿ ಕಲಿಯಬೇಕು ನೀ
ಸಾಧ್ಯವಾದರೆ ಈ ಸಂಜೆ ಹಿತ್ತಲದ ಕಡೆ ಬಂದು ಮುತ್ತಿನ
ಮನೆಪಾಠ ಒಪ್ಪಿಸು..!
ನಿಜವಾಗಿಯೂ ನಿನಗೆ ಚುಂಬಿಸುವುದು ಗೊತ್ತೇ ಇಲ್ಲ..

-ವೃಶ್ಚಿಕಮುನಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x