ನಾಲ್ವರ ಗಝಲ್‌ಗಳು: ಶಿವರಾಜ್. ಡಿ., ಜಯಶ್ರೀ ಭ ಭಂಡಾರಿ., ಜೊನ್ನವ, ರೇಣುಕಾ ಕೋಡಗುಂಟಿ

ಗಝಲ್.

ನಾನು-ನೀನು ಅವನು-ಇವನು ಬೇರೆ-ಬೇರೆಯಿಲ್ಲ ನಾವು ಒಂದೇ
ರಾಮ-ರಹೀಮ ಕೃಷ್ಣ-ಕರೀಮ ಭೇದ-ಭಾವವಿಲ್ಲ ನಾವು ಒಂದೇ

ಸ್ವರ್ಗ ನರಕ ಪಾಪ ಪುಣ್ಯವೆಲ್ಲ ಮನುಜನ ಕರ್ಮದ ಫಲಗಳು
ಜಗತ್ತಿನ ಧರ್ಮ ಗ್ರಂಥಗಳ ಸಾರಗಳಲಿ ಭೇದವಿಲ್ಲ ನಾವು ಒಂದೇ

ಆಲಯ ಬಯಲಾಗಿ ಬಯಲಲಿ ಬೆಳಕಾಗಿ ಬಾಳಬೇಕು ಮನುಜ
ಮನುಷ್ಯ ಮನುಷ್ಯತ್ವದಲಿ ಮೇಲು-ಕೀಳುಗಳಿಲ್ಲ ನಾವು ಒಂದೇ

ಅಜ್ಞಾನದ ತಮವಳಿದು ವಿಜ್ಞಾನದಿ ಮೌಡ್ಯವಳಿಯಲಿ
ಜ್ಞಾನಜ್ಯೋತಿ ಬೆಳಗಲು ತರ-ತಮಗಳಿಲ್ಲ ನಾವು ಒಂದೇ

ಜಾತಿ,ಧರ್ಮಗಳ ಗೋಡೆ ಕಟ್ಟಿ ವಿಶ್ವಗುರು ಆಗಲು ಹೊರಟಿದ್ದಾರೆ ಶಿವು
ಪರಿಶುದ್ಧ ಪ್ರೀತಿಗೆ ಕಾರುಣ್ಯದ ಮನಸಿಗೆ ಜಾತಿ-ಧರ್ಮಗಳಿಲ್ಲ ನಾವು ಒಂದೇ

-ಶಿವರಾಜ್. ಡಿ., ಚಳ್ಳಕೆರೆ

ಗಝಲ್.
ಬಾನ ದಾರಿಯಲಿ ಚಾಚಿಕೊಂಡು ಮೂರು ಚೆಹರೆಗಳು ತೋರುತಿವೆ ಸಖ.
ಭಾನು ಚಂಗನೆ ಜಿಗಿದು ಹೊರಗೆ ಬೆಳಕ ಕಿರಣಗಳು ಬೀರುತಿವೆ ಸಖ.

ಪೃಕೃತಿಯ ನಿಗೂಢತೆಯಲ್ಲಿ ಏನೇನಡಗಿದೆಯೋ ಬಲ್ಲವರಾರು
ಸುಕೃತದ ಬದುಕಿಗೆ ಮುಖವಾಡಗಳ ಬೇಡದೆ ಜಾರುತಿವೆ ಸಖ.

ನೈಜತೆಯ ಹೊಂದಾಣಿಕೆಗೆ ಅದೆಷ್ಟು ನೋವುಗಳನು ಸಹಿಸುವುದು.
ಸಹಜತೆಯಲಿ ಯೌವನ ಮೂಡಿ ಬಯಕೆಗಳು ಸೋರುತಿವೆ ಸಖ.

ಬಡವನಾದರೇನು ಒಲವು ಅರಳದೇ ಇರಲಾರದು ನೋಡು
ಕಡು ಕಠಿಣ ಮನುಜನ ಮದ್ಯದ ಬಾಳು ಕಷ್ಟಗಳು ಹೀರುತಿವೆ ಸಖ

ವಯಸ್ಸಾದಂತೆ ಶರೀರ ಸುಕ್ಕುಗಟ್ಟುವುದನು ಜಯಾ ತಡೆಯಳು
ಆಯುಸ್ಸು ಹೆಚ್ಚಿ ಮುಸ್ಸಂಜೆಯ ಹೊತ್ತು ಮಸುಕುಗಳು ಮೀರುತಿವೆ ಸಖ.

ಜಯಶ್ರೀ ಭ ಭಂಡಾರಿ., ಬಾದಾಮಿ.

ಗಝಲ್.

ಚಂಡು ಹೂ ಬಾಳೆದಿಂಡು ಮರುಗಿ ತಲೆಬಾಗಿವೆ
ನೀ ಹೋದ ಮರುದಿನ

ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಊರ ಬೀದಿಗಳು
ಬಿಕೋ ಎನ್ನುತ್ತಿವೆ ನೀ ಹೋದ ಮರುದಿನ

ಶುಭ ಕೋರಲು ಕಟ್ಟಿದ ಫ್ಲೆಕ್ಸ್ ಗಳ ನಿಂತು ನೋಡಲು ಮನಸ್ಸಿಲ್ಲ, ಕಣ್ಣುಗಳಿಲ್ಲ; ನೀ ಹೋದ ಮರುದಿನ

ವಾದ್ಯಗಳೆಲ್ಲ ಗೋಡೆಯ ಗೂಟಕ್ಕೆ ಉರುಲು
ಹಾಕಿಕೊಂಡಿವೆ ನೀ ಹೋದ ಮರುದಿನ

ಉತ್ಸವ ಮುಗಿಯಿತು ನಾಳೆಯ ಚಿಂತೆ ಗೆರೆಯೊಂದು ಮೊಗದಲ್ಲಿ ಮೂಡಿದೆ: ನೀ ಹೋದ ಮರುದಿನ

ಎಷ್ಟೊಂದು ಉಲ್ಲಾಸ ಲವಲವಿಕೆ ಇತ್ತು ನೀ ಬರುವ ದಿನ
“ಜೊನ್ನವ”ನ ಎದೆ ಭಾವಗಳು ಕಳೆಗುಂದಿವೆ ನೀ ಹೋದ ಮರುದಿನ

ಜೊನ್ನವ (ಪರಶುರಾಮ್ ಎಸ್ ನಾಗುರ್)

ಗಜಲ್

ಯಾವ ಜನುಮದ ಬಂಧವಿದು ಮಧುರವಾಯಿತು ನೋಡು
ಋತುಗಳು ಉರುಳಲು ನವ ವಸಂತ ಶುರುವಾಯಿತು ನೋಡು

ಗುಂಡಾದ ಭೂಮಿಯ ಸುತ್ತಿ ನೀನೆನ್ನ ಹರಸಿ ಬಂದೆ ನೋಡು
ಗಂಟಿನ ನಂಟು ಬೆಸೆಯಲು ಒಲವು ಚಿಗುರೊಡೆಯಿತು ನೋಡು

ಪ್ರೀತಿಯೆಂಬ ಸಿಹಿಬುತ್ತಿಯನು ಹಂಚಿಕೊಂಡೆವು ನೋಡು
ಜೀವಗಳೆರಡು ಬೆರೆತು ಹೂ ಗೊಂಚಲಾಯಿತು ನೋಡು

ಜೊತೆಯಾಗಿ ಹೆಜ್ಜೆಗಳ ಹಾಕಲು ಬಲು ಸೊಗಸು ನೋಡು
ಒಂದಾಗಿ ಬದುಕ ನಡೆಸಲು ಬಾಳು ಸುಂದರವಾಯಿತು ನೋಡು

ನಿನ್ನಿಂದ ಮನದಂಗಳದ ತುಂಬ ಬೆಳದಿಂಗಳು ನೋಡು
‘ರೇಣು’ ಸವಿಗಾನದ ಸಂಸಾರವು ಧನ್ಯವಾಯಿತು ನೋಡು.

-ರೇಣುಕಾ ಕೋಡಗುಂಟಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x