ಆಡಿದ ಮಾತುಗಳೆಲ್ಲ ಮರೆತು ಹೋದವು
ಉಳಿದ ಮಾತುಗಳನು
ನೀನೆ ಆಡಬೇಕು
ಈ ಬರೆ ಮೇಲೆ ಕೈ ಆಡಿಸು
ನಿನಗೆ ಏನಾದರೂ ದಕ್ಕಬಹುದು
ಪದ ನಾದ ನೋವು
ರಕ್ತ ಕೀವು
ಬಿರಿತ ಚರ್ಮ ಒಡೆದ ಮಾಂಸ ಖಂಡ
ತೆರೆದ ಎದೆ ಗೂಡು
ಈ ಎಲ್ಲವನು ಪದ ಮಾಡಿ ಹಾಡಿಕೋ ಹಂಚು
ಬೇಕಿದ್ದರೆ ಮಾರಿಕೋ
ತಾಕಬಹುದು ಎಲುಬಿನ ಹಂದರ
ನೆತ್ತರ ವಾಸನೆ
ಸಿಗದೇ ಹೋಗಬಹುದು ಹೆಣಗಳ ಲೆಕ್ಕ
ಗುಳಿಬಿದ್ದ ಕಣ್ಣುಗಳಲಿ ಒಮ್ಮೆ ಇಳಿದು ಹೋಗು
ನೀನು ಗತಕೆ ಸರಿದು ಹೋಗು
ಚರಿತೆಯ ಚರ್ಮ ಸುಲಿದ ಕಥನಗಳಲ್ಲಿ ನಾನು
ಸಿಕ್ಕೆ ಸಿಗುತ್ತೇನೆ
ಒಂದು ವಿನಂತಿ ಇಷ್ಟೇ
ಇಷ್ಟು ಕಾಲವಾದ ನಂತರವಾದರೂ ಸರಿ
ನೀನು ಯಾರು? ಎಂದು ಮಾತ್ರ ಕೇಳಬೇಡ
ಒಂದು ಬರೆಯ ಮೇಲೆ
ಕೈ ಆಡಿಸಿ
ಇಷ್ಟೆಲ್ಲ ದಕ್ಕಿಸಿಕೊಳ್ಳುವ ಅವಕಾಶ ನಿನಗೆ
ಸುಲಿದ ಚರ್ಮದ ಪದರುಗಳಲಿ ದೊರೆತ ಮನುಷ್ಯರು
ಕುರಿತು ಪುಸ್ತಕ ಬರೆ
ಸತ್ತವರ ಕುರಿತು ಈ ಲೋಕಕ್ಕೆ ಹೇಸಿ ಕೂತುಹಲ ಇದ್ದೆ ಇರುತ್ತೆ
ಲಕ್ಷ ಲಕ್ಷ ಪ್ರತಿಯಾಗಿ ಮಾರಾಟವಾಗುತ್ತೇನೆ ನಾನು
ನೀನು ಯುಗ ಪ್ರವರ್ತಕ ಧರ್ಮ ದುರಂಧರ ಮಾನವತಾವಾದಿ
ನೀನು ಏನಾದರೂ ಆಗು
ಇಷ್ಟು ಬರೆಗಳು
ಬರೆ ಮೇಲೆ ಬರೆ
ಕೊಟ್ಟಿದ್ದರ ಕುರಿತು ಯಾರ ಎದೆಯಲ್ಲಾದರೂ ವಷ್ಟು ಮರುಕವುಂಟಾಯಿತೇ..
ಹೇಳು ಕವಿಯೇ
ನಾನು ಎಲ್ಲ ಬರೆಗಳನ್ನು ಅಳಿಸಿಕೊಳ್ಳಲಿದ್ದೇನೆ
–ಲಿಂಗರಾಜ ಸೊಟ್ಟಪ್ಪನವರ
ಕವಿತೆ ತುಂಬ ಚನ್ನಾಗಿದೆ.