ಹುಟ್ಟು, ಬಣ್ಣ, ಬಟ್ಟೆಗಳ ಗುರುತಿನಲ್ಲಿ
ತಿನ್ನುವ ಅನ್ನ, ಇರುವ ಜಾಗ, ಮಾಡುವ ಕೆಲಸ
ಅವರಿವರಲ್ಲಿ ಹಂಚಿ,
ಮುಟ್ಟದೆಯೇ ದೂರ ನಿಲ್ಲುವಲ್ಲಿ
ಪ್ರೀತಿ ಹುಟ್ಟೀತು ಹೇಗೆ?
ಮನೆಗೊಬ್ಬ ದೇವನ ಮಾಡಿ
ಇಲ್ಲಿಗಿಂತ ಅಲ್ಲಿಯೇ ಸರಿಯೆಂದು ಹಾಡಿ
ಇಂದಿನದಕ್ಕೆ ಅಂದಿನ ಕಾರಣ ಗಂಟು ಹಾಕಿ
ತೊತ್ತುಗಳಾಗಿಸಿದವರ ನಡುವೆ
ಪ್ರೀತಿ ಹುಟ್ಟೀತು ಹೇಗೆ?
ಮನಸ್ಸುಗಳ ಸುಟ್ಟು ಬೂದಿ ಮಾಡಿ
ಶಾಖದ ಸುತ್ತ ಕುಣಿವವರ
ಕರಕಲು ಎದೆಗಳಲ್ಲಿ
ಪ್ರೀತಿ ಹುಟ್ಟೀತು ಹೇಗೆ?
ಅವನು ನಾನೆಂದು, ನಾನು ಅವನೆಂದು
ಅವನೂ ಅವಳೂ ಒಂದೇ ಎಂದು
ನಮ್ಮನ್ನು ನಾವೇ ಅರಿಯದೆ
ಪ್ರೀತಿ ಹುಟ್ಟೀತು ಹೇಗೆ?
-ಎಂ ನಾಗರಾಜ ಶೆಟ್ಟಿ