ನಾಸಿಕ ಪುರಾಣ: ಡಾ.ವೃಂದಾ ಸಂಗಮ್,


ನಾಸಿಕದಾಗ ಅಂತ ನಮ್ಮ ಶೀನೂ ಮಾಮಾ ಮಾತು ಶುರು ಮಾಡಿದರೂಂದರ, ನಾವೆಲ್ಲಾ, ಮೂಗಿನ ಮೇಲೊಂದು ಬೆರಳಿಟ್ಟುಕೊಂಡು ಕೂತಿರಬೇಕು. ಯಾಕಂದರ ನಮ್ಮ ಶೀನೂ ಮಾಮಾ ಅಂದರ ಅಸಾಧಾರಣ ವ್ಯಕ್ತಿ. ಹಂಗಂತ, ಭಾಳ, ಭಾಳ ಸಾಧನಾ ಮಾಡ್ಯಾರ ಅಂತಲ್ಲ. ಸೀದಾ ಹಾದಿಯವರಲ್ಲ. ಸೊಟ್ಟ ಮೂಗಿನವರು. ಅಂದರ, ಹೀಂಗ, ಮಾತು ಶುರು ಮಾಡಿದಾಗ, ನಾವು ಯಾವ ರೀತಿ ವಿಚಾರ ಮಾಡಿದರೂ, ಇವರು ಈ ವಿಷಯದ ಹರಟಿ ಪ್ರಾರಂಭಿಸಬಹುದು ಅಂತ ಒಂದು ಅಂದಾಜು ಇಟ್ಟಕೊಂಡಿದ್ದರ, ಅದನ್ನೆಲ್ಲಾ, ಮುರದು, ಹೊಸಾ ದಾರಿಯೊಳಗೇನೇ ಹರಟೀ ಪ್ರಾರಂಭ ಮಾಡುವ ಧೀಮಂತರು. ಈಗಲೂ ಹಂಗೇನೇ, ನಾಸಿಕದಾಗ ಅಂತ ಹೇಳಿದ ಕೂಡಲೇ ನಾನು, ನಶ್ಯದ ಪ್ರಭಾವವಿರುವ ಶೀನಾಗ್ರದ ಈ ಶೀನೂ ಮಾಮಾ ನಾಸಿಕಾಗ್ರಕ್ಕ ಏರಿದ ನಶ್ಯದ ಬಗ್ಗೆ ಹೇಳಬಹುದು ಅಥವಾ ಮೂಗಿನೊಳಗಿರುವ ಅಂಗ-ಪ್ರತ್ಯಾಂಗಗಳ ವಿಜ್ಞಾನ ಅಥವಾ ಉಸಿರಾಟದ ಬಗ್ಗೆ ಹೇಳಬಹುದು ಅಂತ ಊಹೆ ಮಾಡಿದೆ.

ಆದರ, ನಮ್ಮ ಶೀನೂ ಮಾಮಾ ಅದ್ಭುತ ವ್ಯಕ್ತಿ, ಅಸಾಧಾರಣ, ಅಂಚಿತ್ಯ ಅಂತಾರಲ್ಲಾ ಹಂಗ, ಅವರು, ಪ್ರತೀ ಸಲದಂಗನ, ನನ್ನ ವಿಚಾರಗಳಿಗೆ ಮೂಗುದಾರ ಹಾಕಿದರು. ಮಹಾರಾಷ್ಟ್ರದಲ್ಲಿರುವ ನಾಸಿಕ ಎನ್ನುವ ಸ್ಥಳ ತುಂಬಾ ಪ್ರಸಿದ್ಧವಾದ ಯಾತ್ರಾಸ್ಥಳ. ಇಲ್ಲಿ ಗೋದಾವರೀ ದಂಡೀ ಮ್ಯಾಲೆ ಶ್ರೀರಾಮ ಸೀತೆಯರಿಗೆ ಸಂಭಂಧಪಟ್ಟ ಕುರುಹುಗಳ ಸಾಕಷ್ಟು ಇತಿಹಾಸ ಪುರಾಣ ಪ್ರಸಿದ್ದ ದೇವಸ್ಥಾನಗಳವ. ನಾಸಿಕ ಎಂದರೆ ಮೂಗು. ರಾಮ ಸೀತಾ ಲಕ್ಷ್ಮಣ ರ ವನವಾಸದೊಳಗ, ಪೀಡಿಸಲಿಕ್ಕೇಂತ ಬಂದಂತಹ ರಾಕ್ಷಸಿ ಶೂರ್ಪನಖಿಯ ಮೂಗನ್ನು ಲಕ್ಷ್ಮಣ ಕೊಯ್ದು ಒಗೆದ ಸ್ಥಳವೇ ನಾಸಿಕ ಅಂತ ಸ್ಥಳ ಪುರಾಣ. ಸಪ್ತ ಪವಿತ್ರ ನದಿಗಳಲ್ಲಿ ಒಂದಾದ ದಕ್ಷಿಣ ಗಂಗೆ ಎನಿಸಿದ ಗೋದಾವರಿ ನದಿ ಇಲ್ಲಿಗೆ ಸಮೀಪದ ತೃಯಂಬಕೇಶ್ವರದೊಳಗ ಹುಟ್ಟುತಾಳಂತ. ನಾಸಿಕದೊಳಗ ಪ್ರಶಾಂತವಾಗಿ ನೆಲಮಟ್ಟದಲ್ಲಿ ಹರಿಯುವಂತೇ ದೊಡ್ಡ ಕಾಲುವೆ ತರಹ ಹರಿದು ಸ್ನಾನ ಜಪತಪಗಳಿಗೆ ಅನುಕೂಲ ಮಾಡತಾಳ. ವನವಾಸಕಾಲದಲ್ಲಿ ಶ್ರೀರಾಮಚಂದ್ರನು ಇಲ್ಲೆ ಭಾಳ ದಿವಸ ಅಂದರ, ರಾವಣನಿಂದ ಸೀತಾಪಹರಣದ ತನಕಾ ಇದ್ದಾಂತ ಅಂತಾರೆಪಾ . ಅದಕ್ಕ ಸಾಕ್ಷಿಹಂಗ ಇಲ್ಲಿ ಸೀತಾರಾಮರು ವಾಸಿಸುತ್ತಿದ್ದ ಪಂಚವಟಿ ಪರ್ಣಕುಟೀರ ಗವಿಯಾಕಾರದೊಳಗದ .ತಗ್ಗಿ ಬಗ್ಗಿ ಹೋಗಿ ನೋಡಬೇಕು. ಒಳಗೆ ರಾಮ ಲಕ್ಷ್ಮಣ ಸೀತೆಯರ ಮೂರ್ತಿಗಳಿವ. ಇಲ್ಲೇ ರಾವಣ ಸನ್ಯಾಸಿ ಹಂಗ ಬಂದು ಭಿಕ್ಷಾ ಬೇಡಿ ಸೀತೆಯನ್ನು ಅಪಹರಿಸಿಕೊಂಡು ಹೋಗಿದ್ದು. ಹೀಂಗ ಮಾತು ಶುರು ಮಾಡಿದರು ನೋಡರೀ, ನಾವು ಮೂಗಿನ ಮ್ಯಾಲೆ ಬೆರಳಿಟ್ಟುಕೊಂಡು ಕೂಡೋದು ಬಿಟ್ಟರ, ಇನ್ನೇನೂ ಮಾರ್ಗ ಇಲ್ಲ ಬಿಡರೀ. ನಾಸಿಕ ಅಂದರ ಹೀಂಗ ನಮ್ಮನ್ನ ಹಾದಿ ತಪ್ಪಸತದ ನೋಡರೀ ಅದಕ್ಕ ನಾವು ಸುಲಭವಾಗಲೀ ಅಂತ ಅಚ್ಚ ಕನ್ನಡದಾಗ ಮೂಗು ಅಂತ ಹೇಳಿದರ, ನಾನೇ ಎಲ್ಲಾ ಅಂಗಗಳೊಳಗ ಒಂದು ಕೈ ಮ್ಯಾಲೆ ಅಂತ, ಮೂಗು ಮಾರಿ ಮುಂದ ಬರತದ ನೋಡರೀ.

ಈಗೇನೋ, ಮೂಗು ಅದ. ಮೂಗಿನ ಮ್ಯಾಲೆ ಬೆರಳಿಡತೇವಿ. ಆದರ ಮೂಗ ಇಲ್ಲಾಂದರೇನು ಮಾಡಬೇಕು. ಬೀಚಿಯವರು ಹೇಳಿದಂಗ, ಮೂಗು ಇಲ್ಲಾಂದರ, ಕಣ್ಣು ಕಾಣುತಿದ್ದಿಲ್ಲ, ಯಾಕಂದರ, ಮೂಗಿದ್ದರ ತಾನೇ ಚಷಮಾ ಹಾಕ್ಕೋತೀರೀ. ಮೂಗು ಮ್ಯಾಲೆ ಮಾಡಿಕೊಂಡು ನೀವು ಕೂತರ, ನಿಮ್ಮ ಮೂಗಿನ ಮ್ಯಾಲೇರಿ, ಈ ಚಷಮಾ ಕೂತಿರತದ ನೋಡರೀ, ಹಂಗರ ಈ ಮೂಗಿರೋದು ಯಾಕ, ಅಂದರ ಈ ಸುಲಭದ ಮಾತು, ಚಷಮಾ ಹಕ್ಕೊಳಿಕ್ಕೆ ಅಂತ ಹೇಳಬ್ಯಾಡರೀ, ಮೂಗುತಿ ಹಕ್ಕೊಳ್ಳಿಕ್ಕೆ, ಹೌದು, ಮೂಗು ಬಟ್ಟು, ನತ್ತು ಹಿಂಗ ಏನೇನರ ಕರದರೂನು, ಮೂಗಿನ ಮ್ಯಾಲೆ ಏರಿ ಕೂಡೋದು ಅಂದರ ಮೂಗುತಿ. ಹೌದು ಮೂಗುತಿ ಅಂದರ, ಹರೆಯವನ್ನು ಸೂಚಿಸೋ ಆಭರಣ, ಪಾಪ ಹುಟ್ಟಿನಿಂದ ಬಂದಿರೋ ಮೂಗಿಗಿಂತ, ಅದಕ್ಕ ಹಾಕಿದ ಮೂಗುತಿಗೇ ಭಾಳ ಮರ್ಯಾದಿ. ಕನ್ಯಾಕುಮಾರಿಯೊಳಗ, ದೇವಿಯ ವಜ್ರದ ಮೂಗುಬಟ್ಟು ಮಿಣಿ ಮಿಣಿ ಮಿಂಚಿಕೋತ ನೂರಾರು ಮೈಲಿ ದೂರದ ತನಕಾ ಸಮುದ್ರದ ಯಾತ್ರಿಕರಿಗೆ ದಾರಿ ತೋರಸತದಂತ.

ಹೆಣ್ಣು ಮಕ್ಕಳ ಕೋಪ, ಹಠ, ಚಂಚಲತೆ ನಿಗ್ರಹಿಸುತ್ತದ ಈ ಸುಂದರ ಮೂಗುತಿ ಅಂತಾರೆಪಾ. ಹಿಂದೂ ಸಂಪ್ರದಾಯದಲ್ಲಿ ಮೂಗುತಿಗೆ ವಿಶೇಷ ಮಹತ್ವ ಅದ. ಹಿಂದೂ ಸಂಪ್ರದಾಯದ ಪ್ರಕಾರ ಸ್ತ್ರೀಯರಿಗೆ ಮಾತ್ರ ಮೂಗುತಿ ಹಾಕಲು ಹೇಳಿರುವುದರ ಹಿಂದೆಯೂ ಶಾಸ್ತ್ರ ಅದ ಅಂತ. ಸ್ತ್ರೀಯರ ಮನಸ್ಸು ಚಂಚಲಾಗಿರತದ. ಅದಕ್ಕ, ಮೂಗುತಿ ಧರಿಸಿದರ, ಸ್ತ್ರೀಯರ ಚಂದ್ರನಾಡಿ ಕಾರ್ಯನಿರತವಾಗಿ ಮನಸ್ಸು ಸ್ಥಿರ ಆಗತದ. ಅಷ್ಟ ಅಲ್ಲ, ಮೂಗಿನ ಬಿಂದುವಿನ ಮ್ಯಾಲೆ ಒತ್ತಡವು ನಿರ್ಮಾಣ ಆಗಿ, ಈ ಬಿಂದು ಒತ್ತಡದ ಉಪಚಾರವಾಗುವುದರಿಂದ ಅಲ್ಲಿನ ಕಪ್ಪು ಶಕ್ತಿಯು ಕಡಿಮೆಯಾಗುತದಂತ. ಕುದುರೀಗೆ ಮೂಗಿಗೆ ದಾರ ಹಾಕಿ ನಿಯಂತ್ರಿಸತಾರಲ್ಲ, ಹಂಗ ಇದು. ಮೂಗುತ್ತಿ ಹೆಣ್ಣಿನ ಕೋಪ, ಹಠ, ಚಂಚಲತೆಯನ್ನು ನಿಯಂತ್ರಿಸತದಂತ. ಮೂಗಿಗೆ ಹಾಕುವ ಈ ವಿಶೇಷ ಮೂಗುತಿ ಮಹಿಳೆಯರ ಶ್ವಾಸಮಾರ್ಗವನ್ನು ರಕ್ಷಿಸತದ. ಮೂಗುತಿಯಲ್ಲಿರುವ ಸಾತ್ತ್ವಿಕತೆ ಮತ್ತು ಚೈತನ್ಯದಿಂದ ಮೂಗಿನ ಚೈತನ್ಯದ ವಲಯವು ನಿರ್ಮಾಣ ಆಗತದ. ಮೂಗಿನ ಸುತ್ತಲಿನ ವಾಯುಮಂಡಲವೂ ಶುದ್ಧಾಗತದ. ಶ್ವಾಸಮಾರ್ಗದಿಂದ ಶುದ್ಧಗಾಳಿಯು ದೇಹ ಪ್ರವೇಶಿಸಲಿಕ್ಕೆ ಸುಲಭ. ಈ ಮೂಗುತಿ 9 ಮತ್ತು 10ನೇ ಶತಮಾನದಲ್ಲಿ ಜನಪ್ರಿಯಗೊಂಡಿತ್ತು. ಮಹಿಳೆಯರ ವೈವಾಹಿಕ ಸ್ಥಿತಿಯ ವಿವಿಧ ಸಂಕೇತ ಅನಿಸಿಕೊಂಡಿತು. ಆರ್ಥಿಕ ಸ್ಥಾನಮಾನದ ದ್ಯೋತಕ ಆಗಿತ್ತು. ರಾಣಿಯರು, ಮಂತ್ರಿಗಳ ಪತ್ನಿಯರು ಮತ್ತು ಶ್ರೀಮಂತ ಕುಟುಂಬದ ಮಹಿಳೆಯರು ಮುತ್ತು, ನೀಲಮಣಿ ಮತ್ತು ಕುಂದನ್ ಇರೋ ಮೂಗುತ್ತಿಗಳನ್ನು ಧರಿಸಿದರ, ನಮ್ಮ ನಿಮ್ಮಂತಹವರು, ಬೆಳ್ಳಿಯ ಮೂಗುತಿಗಳನ್ನು ಧರಿಸುತ್ತಿದ್ದರು. 15ನೇ ಶತಮಾನದ ಹೊತ್ತಿಗೆ ಈ ಮೂಗು ನತ್ತು ಮತ್ತಷ್ಟು ಜನಪ್ರಿಯತೆ ಪಡೆದುಕೊಂಡಿತು. 17-18ನೇ ಶತಮಾನದ ಅವಧಿಯಲ್ಲಿ ಲವಂಗ, ಮುಳ್ಳುಗಳು, ಮೊಳೆಗಳನ್ನು ಬಳಸುವ ವ್ಯತ್ಯಯನಗಳನ್ನು ಕಂಡಿತು. 20ನೇ ಶತಮಾನದೊಳಗ, ಬ್ಯಾರೆ ಬ್ಯಾರೆ ಸಾಮಾಗ್ರಿಗಳು ಮತ್ತು ವಿನ್ಯಾಸಗಳಿರುವ ಆಧುನಿಕ ಮೂಗುತಿಗಳು ಬಂದವು.

ನಮ್ಮ ರವಿ ಮಾಮಾ, “ಮೂಗುತಿ ನತ್ತು ಚಂದ, ವಾಲೆ ಜುಮುಕಿ ಗತ್ತು ಚಂದ” ಅಂತ ಹಾಡ್ಯಾರಲಾ, ಶಿವಣ್ಣ, “ಮೂಗು ನತ್ತಿನ ತಿರುಪ, ಬಿಗಿ ಮಾಡಲೇನ ಸ್ವಲುಪ,” ಅಂತ ರೇಗಿಸಿದರ, “ಮೂಗುತಿ ಮುಂಭಾರ” ಅಂತ, “ಮಂಡ ಮೂಗಿನ ಹೆಣ್ಣು, ಗಂಡ ಕರೆಯಲು ಬಂದ” ಜಾನಪದರು ಹೇಳತಾರ. “ಮುತ್ತಿನ ಮೂಗುತಿ” ಅಂತ ಪುರಂದರ ದಾಸರು ಹೇಳಿದರ, “ಎತ್ತಲೋ ಮಾಯವಾದ ಮುತ್ತಿನ ಮೂಗುತಿ” ಅಂತ ಅಣ್ಣಾವ್ರು ಹೇಳತಾರ. ಶರೀಫಜ್ಜ ಇದು ನಾಡಿಗೆ ಮಿಗಿಲಾದ ಮೂಗುತಿ ಅಂತ ಹಾಡತಾರಲ್ಲ. ಕಾಂತಾರದ ಲೀಲಾನ ಮೂಗುತಿ ಎಷ್ಟೇ ಚಂದ ಇದ್ದರೂ, ಮೂಗುತಿ ಸುಂದರಿ ಅಂದರ ನಮ್ಮ ಸಾನಿಯಾ ಮಿರ್ಜಾನೇ. ಅದೇನೇ ಆಗಲಿ, ಸೀತಾದೇವಿ ಮೂಗುತಿ ಮಾತ್ರ ಹುಡುಕಿಕೊಟ್ಟವ ನಮ್ಮ ಮುತ್ತೆತ್ತಿರಾಯನಾದ ಹನುಮಂತನೇ. ನಮ್ಮ ಮುತ್ತೈದೇರಿಗೆ ಈ ಮುತ್ತಿನ ಮೂಗುತಿ, ಐದು ಮುತ್ತಿನೊಳಗೆ ಒಂದು. ಜೋಗತೇರಿಗೆ ಮುತ್ತು ಕಟ್ಟೋದು, ಈ ಮೂಗುತಿ ಮುತ್ತಿನಿಂದಲೇ. ಮೂಗಿಗಿಂತ ಮೂಗುತಿ ಮಹತ್ವನೇ ದೊಡ್ಡದಾಯಿತಲ್ಲ.

ಮತ್ತ ಮೂಗಿಗೇ ಬಂದರೆ, ಅಂಗ ರಚನಾ ಶಾಸ್ತ್ರದಲ್ಲಿ, ಮೂಗು ಕಶೇರುಕಗಳಲ್ಲಿ ಬಾಯಿಯ ಸಂಯೋಗದೊಂದಿಗೆ ಶ್ವಾಸೋಚ್ಛ್ವಾಸಕ್ಕಾಗಿ ಗಾಳಿಯನ್ನು ಒಳಕ್ಕೆ ಬಿಡುವ ಮತ್ತು ಹೊರಹಾಕುವ ಹೊಳ್ಳೆಗಳಿಗೆ ಸ್ಥಳಾವಕಾಶ ಕಲ್ಪಿಸುವ ಒಂದು ಉಬ್ಬು. ಮೂಗಿನ ಹಿಂದೆ ಘ್ರಾಣಸಂಬಂಧಿ ಲೋಳೆಪೊರೆ ಮತ್ತು ಸೈನಸ್‍ಗಳಿವೆ. ನಾಸಿಕ ಕುಳಿಯ ಹಿಂದೆ, ಗಾಳಿಯು ಆಮೇಲೆ, ಪಚನ ವ್ಯವಸ್ಥೆಯೊಂದಿಗೆ ಹಂಚಿಕೊಳ್ಳಲಾದ ಗಳಕುಹರದ ಮೂಲಕ ಹಾಯುತ್ತದೆ, ಆಮೇಲೆ ಶ್ವಾಸೋಚ್ಛ್ವಾಸ ವ್ಯವಸ್ಥೆಯ ಉಳಿದ ಭಭಾಗಕ್ಕೆ ಆಮ್ಲಜನಕವನ್ನು ನೀಡುತ್ತದೆ. ಮೂಗು ಉಸಿರಾಟಕ್ಕೂ ಇದಕ್ಕಿಂತ ಮುಖ್ಯವಾಗಿ, ವಾಸನೆ ಗ್ರಹಣಕ್ಕೂ ಶಬ್ದೋಚ್ಚಾರಣೆಗೂ ಮೀಸಲಾದ ಅಂಗ (ನೋಸ್). ಸ್ತನಿಗಳಲ್ಲಿ ಮಾತ್ರ ಮೂಗು ಬಾಯಿಗಳನ್ನು ಅಂಗಳು ಬೇರ್ಪಡಿಸಿದೆ. ಹೀಗಾಗಿ ಇವು ಉಸಿರಾಡುವಾಗಲೂ ಆಹಾರ ಜಗಿಯುವುದು ಸಾಧ್ಯವಾಗುತ್ತದೆ. ಉಚ್ಛ್ವಸಿತ ಶ್ವಾಸದ ಉಷ್ಣತೆಯನ್ನು ಮೂಗು ಮತ್ತು ಅದರ ಪಕ್ಕದ ಗಾಳಿ ಗೂಡುಗಳು ದೇಹೋಷ್ಣತೆಯ ಮಟ್ಟಕ್ಕೆ ಏರಿಸುತ್ತದೆ. ಮಾನವನಲ್ಲಿ ದವಡೆಗಳು ಚಿಕ್ಕವಾಗಿದ್ದು ಮೂಗು ಮುಖಮಧ್ಯೆ ಮುಂಚಾಚಿ ಎದ್ದು ಕಾಣುವಂತಿದೆ. ಇದರಲ್ಲಿ ಹೊರ ಮತ್ತು ಒಳ ಮೂಗುಗಳಿವೆ. ಒಳ ಮೂಗು ಕುಹರ, ಬಲ/ಎಡ ನಾಸಿಕ ಕುಹರ, ಕುಹರದ ಒಳಭಿತ್ತಿ, ಕುಹರದ ಚಾವಣಿ ಹಿಂಗೆಲ್ಲಾ ಮೂಗಿನ ಭಾಗಗಳವ. ಪ್ರಾಣಿಗಳಿಗೂ ಮೂಗು ಉಸಿರಾಟದ ಅಂಗ ಆಗಿದ್ದರೂ, ಮೂಗು ಮ್ಯಾಲೇರಿಸಿಕೊಂಡು, ಸೊಕ್ಕು ಪಡೋದು ಮನುಷ್ಯ ಮಾತ್ರ. ಆದರ ಖಡ್ಗಮೃಗಕ್ಕ ಮೂಗಿನ ಮ್ಯಾಲೇನೆ ಕೊಂಬು ಅದ.

ಪುರಾಣಗಳಲ್ಲಿಯೂ ಮೂಗಿಗೆ ವಿಶೇಷ ಸ್ಥಾನ ಅದ, ಋಷಿ ಮುನಿಗಳು ಧ್ಯಾನ ಮಾಡುವುದು, ಏಕಾಗ್ರ ಚಿತ್ತದಿಂದ ನೋಡುವುದೂ ಈ ಮೂಗಿನ ತುದಿಯನ್ನೇ. ಈ ಮೂಗಿಗೆ ದೇವತೆಗಳ ವೈದ್ಯರಾದ ಅಶ್ವಿನೀ ದೇವತೆಗಳೇ ತತ್ವಾಭಿಮಾನಿ ದೇವತೆಗಳು, ವಾಮನ ರೂಪಿನಿಂದ ಪರಮಾತ್ಮ ಮೂಗಿನಲ್ಲಿರುತ್ತಾನೆ. ಗಣಪತಿಗೆ ಸೊಂಡಿಲೇ ಮೂಗು. ಅಥವಾ ಸೊಂಡಿಲಿನಷ್ಟು ಉದ್ದದ ಮೂಗು ಇದೆ.

ಇನ್ನ, ಈ ಮೂಗು ಅನ್ನೋದು ಪಂಚೇಂದ್ರಿಯಗಳೊಳಗೆ ಒಂದಾಗೇದ. ಘ್ರಾಣೇಂದ್ರಿಯ ಅಂತ, ಪುರಾಣದಾಗ, ಹರಿಕಥಾಮೃತಸಾರದಾಗ ಹೇಳಿದ್ದದ. ಮೂಗು ಎಲ್ಲಿದ್ದರೇನು, ನಮ್ಮ ಕಣ್ಣಿನ ಕೆಳಗೇ ಇರಬೇಕು. ಯಾಕೆಂದರ ನಾವು ನಮ್ಮ ಮೂಗಿನ ನೇರಕ್ಕೇ ನೋಡೋದು. ಈ ಮೂಗು ಅನ್ನೋದು, ಕನ್ನಡ ವರ್ಣ ಮಾಲೆಯೊಳಗೂ ಮೂಗು ತೂರಿಸೇದ. ಮೂಗಿನಿಂದ ಉಚ್ಛರಿಸೋ ಅಕ್ಷರಗಳನ್ನ, ಅನುನಾಸಿಕಗಳು ಅಂತಾರ, ಅದೇ ಙ,ಞ,ಣ,ನ,ಮ ಗಳು. ಕೆಲವರಂತೂ ಇವೆಲ್ಲವನ್ನೂ ಒಂದೇ ರೀತಿಯೊಳಗ ಉಚ್ಛಾರ ಮಾಡತಾರ ಬಿಡರೀ. ಇವುಗಳ ಜೊತೆ ಅನುಸ್ವಾರ ಅಂ ಕೂಡಾ ಸೇರಲಿ ಅನ್ನೋದು ನಾನು ಮೂಗು ತೂರಿಸೋ ವಿಷಯ ಅಲ್ಲ, ಜಿ ಪಿ ರಾಜರತ್ನಂ ಅವರಿಗೆ ಮೂಗಿನಲ್ಲಿ ಕನ್ನಡ ಪದವಾಡೋದಿಕ್ಕೇಂತ. ಮೂಗಿನ ತುದಿ ಅಬ್ದುಲ್ ರಶೀದರ ಕತೀಯಾದರ, ಅ ರಾ ಮಿತ್ರ ಅವರ ಪ್ರಬಂಧ ಮೂಗಿನತುದಿ ಅನ್ನೋದು, ಬಾಲ್ಕನಿಯ ಬಂಧುಗಳೊಳಗ ಅದ. ಏನೇ ಅನ್ನರೀ ಈ ಮೂಗು ಮಾತ್ರ ಜಂಬದ ಕೋಳಿ. ಕಣ್ಣು ಮೂಗಿಲೆ ಚಂದ ಅಂತ ಪದ್ಮಾವತಿಯನ್ನ ವೆಂಕಟೇಶ ಪಾರಿಜಾತದಾಗ ಹೊಗಳಿಲ್ಲ ಮತ್ತ. ಮೂಗು ಸಂಪಿಗೆ ಯರಳು ಅಂತ ಹೊಗಳಿಲ್ಲೇನು ನಮ್ಮ ಕವಿಗಳು. “ನಿಂಬೆಯ ಬಣ್ಣ, ಕಾಡಿಗೆ ಕಣ್ಣ ಕವಿಗೆ ಹೆಣ್ಣಿನ ವರ್ಣನೆಗೆ ಟಾಸ್ಕು, ಸಂಪಿಗೆ ಮೂಗು, ತೊಂಡೆ ತುಟಿ, ವರ್ಣಿಸಲಿಕ್ಕೆ ಅಡ್ಡ ಬಂದಿದೆ ಮಾಸ್ಕು” ಅಂತ ಈ ಕರೋನಾ ಕಾಲದಾಗೂ ಕವಿಗಳಿಗೆ ಮೂಗೇ ಕಾಣತದ.

ಹಂಗ ನೋಡಿದರ ಈ ಕರೋನಾ ಕಾಲದಾಗ ಹೆಚ್ಚು ಪ್ರಸಿದ್ಧಿಯಾಗಿದ್ದು ಈ ಮೂಗೇ, ಒಂಚೂರು ಮೈ ಬಿಸಿಯಾಗೇದ ಅಂದರ ಸಾಕು, ವಾಸನಿ ತಿಳೀತದಲ್ಲ, ಹಂಗಾರ ಕರೋನಾ ಇರಲಿಕ್ಕಿಲ್ಲ ಬಿಡು, ಅಂತಿದ್ರು ಜನ. ಮತ್ತ ಈ ಮೂಗು ಅಂದರ ಸಂಪಿಗೆ ಎಸಳಿನಂಗೇ ಇರತದ ಅನಲಿಕ್ಕೆ ಬರೂದಿಲ್ಲ. ಉದ್ದ ಮೂಗು, ಗಿಡ್ಡ ಮೂಗು, ಮಂಡ ಮೂಗು, ದೊಣ್ಣಿ ಮೂಗು, ಕಪ್ಪಿಹಂತಾ ಮೂಗು, ಚಪ್ಪಟೆ ಮೂಗು. ಗಿಣಿ ಮೂಗು, ಇಣಿ ಮೂಗು ಹೀಗೆ ನೂರಾರು. ಪೌರಾಣಿಕ ಕಥೆಗಳಲ್ಲಿ ಗಿಣಿ ಮೂಗಿನ ಶುಕಾಚಾರ್ಯರು ಪ್ರಸಿದ್ಧರು. ಗರುಡನ ಮೂಗು ಹೊಂದಿದವರ ಮೂಗು, ಬೆಟ್ಟದ ಮೇಲೆ ನಿಂತರೂ ಕಾಣುತ್ತದೆ. ಎಳೆಯ ಸಂಪಿಗೆ ಎಸಳಿನಂತಹ ಮೂಗು ಸೌಂದರ್ಯದ ದ್ಯೋತಕ.

ಮೂಗಿನ ಜೊತೆಗೆ ಮೂಗುತಿ, ಅಲಂಕಾರಕ್ಕೆ ಅಂತ ನಾವು ಮಾಡಿಕೊಂಡಿದ್ದಾದರೆ, ಇನ್ನೊಂದು ಅಲಂಕಾರ ಅಂದರೆ, ಇದು ಆಗಾಗ ಅಲಂಕರಿಸುವುದು, ನೆಗಡಿ. ಗಂಗಾ ಭಾಗೀರಥೀ ಸೋರುವ ಮೂಗು, ಕಟ್ಟಿ ಮಾತನಾಡಲು ಉಸಿರಾಡಲು ತೊಂದರೆಯಾಗುವುದು ಈ ಮೂಗಿನಿಂದ ಬಂದ ತೊಂದರೆ. ಇದು ಮಳೆಗಾಲ, ಚಳಿಗಾಲದಲ್ಲಿ ಜಾಸ್ತಿ, “ನೆಗಡಿಯಂಥಾ ರೋಗವಿಲ್ಲ, ಬುಗುಡಿಯಂಥಾ ವಸ್ತವಿಲ್ಲ” ಅಂತಾರ, ಔಷಧಿ ಸೇವಿಸಿದರೆ ಒಂದು ವಾರದಲ್ಲಿ ಕಡಿಮೆಯಾಗುವ ನೆಗಡಿ, ಇಲ್ಲವಾದರೆ ಏಳೇ ದಿನದಲ್ಲಿ ಕಡಿಮೆಯಾಗುವುದಂತೆ. ಕೆಲವರಿಗೆ ವರ್ಷಕ್ಕೆ ಎರಡೇ ಬಾರಿ ನೆಗಡಿಯಾಗುವುದಂತೆ. ಒಮ್ಮೆ ನೆಗಡಿಯಾದರೆ ಆರು ತಿಂಗಳು ಕಡಿಮೆಯಾಗುವುದಿಲ್ಲವಂತೆ. ನೆಗಡಿಗೆ ಸೂಕ್ಷ್ಮ ಔಷಧಿಯಂದರೆ ನಶ್ಯ, ಮೂಗಿನ ಆಪ್ತ ಸ್ನೇಹಿತವೆಂದೇ ಅದಕ್ಕೆ ಹೆಸರು. ಕೆಲವರ ಮೂಗಂತೂ ಕೇವಲ ನಶ್ಯದ ದಾಸ್ತಾನು ಆಗಿರುತ್ತದೆ. “ಧಗಡಿಯಾಗಿದೆ ಧಶ್ಯ ಕೊಡರೀ” ಎಂದರೆ, “ಲಲಗೇ ಇಲ್ಲ, ಲಿಲಗೆಲ್ಲಿಂದ ತರಲಿ” ಎಂದರಂತೆ. ಇನ್ನೊಬ್ಬರು ನೆಗಡಿಯಾದಾಗ, “ಧಾಧೇ ವೀಧೇ, ಧೀಧೇ ತತ್ತಿ, ಅವಧೇ ವೈಧಿಕ” ಎಂದು ಹಾಡಿದ್ದರಂತೆ. ನೆಗಡಿಗೆ ಹೆದರಿ, ಮೂಗು ಕೊಯ್ದುಕೊಳ್ಳುವದುಂಟೇ. ಮತ್ತೆ ನೆಗಡಿಯಾದ ಶೀನು ಬಂದರೆ, ಅದಕ್ಕೈ ಜ್ಯೋತಿಷ್ಯದಲ್ಲಿ ಅರ್ಥವಿದೆ. ಒಂಟಿ ಶೀನು ಶುಭಕರವಲ್ಲ, ಆದರೆ, ಜೋಡೀ ಶೀನಿದರೆ, ಅದು ನಿಶ್ಚಿತವಾಗಿ ಶುಭಕರವಂತೆ. ಚಿಕ್ಕ ಮಕ್ಕಳು ಶೀನಿದರೆ, “ಶೀತಾಕ್ಷಿ” ಎನ್ನುತ್ತಾರೆ. ಶೀತವಾಗಿರುವುದು ಮೂಗಿಗಾದರೆ, ಹೇಳುವುದು ಅಕ್ಷಿಗೆ. ನೆಗಡಿಯಾದಾಗ ಮೂಗು ಕೆಂಪಗಾಗಿ, ಗಿಳಿಯ ಕೊಕ್ಕಿನಂತಾಗಿರುತ್ತದೆ. ಗಂಡಸರಿಗೆ ಮೂಗು ತುಸು ಎಡಗಡೆಗೆ ಹೊರಳಿದ್ದರೆ, ಅದು ಅದೃಷ್ಟದ ಲಕ್ಷಣವಂತೆ, ಹೆಂಗಸರಿಗೆ ಬಲಗಡೆಗೆ ಹೊರಳಿದ್ದರೆ ಅದು ಅದೃಷ್ಟದ ಲಕ್ಷಣವಂತೆ, ಎರಡೂ ಅಲ್ಲ ಮೂಗಿನಲ್ಲಿರುವ ಮೂಳೆಯ ಅನಾರೋಗ್ಯದ ಸಂಕೇತ ಅಂತ ವೈದ್ಯರು ಹೇಳತಾರೆ. ಕಿವಿ, ಮೂಗು, ಗಂಟಲಿಗೆ ಸೇರಿ ಒಬ್ರೇ ವೈದ್ಯರಿರುತ್ತಾರೆ. ಮೂಗಿನಲ್ಲಿ ದುರ್ಮಾಂಸ ಬೆಳಿದಿದ್ದರೆ, ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಬೇಕಾಗಿ ಬರುವುದು

ಮೂಗಿಗೆ ಇನ್ನೂ ಒಂದು ಅಪವಾದ ಅಂದರ, ಗೊರಕೀದು, ಅದೆಂಥಾ ಮೂಗಲೇ ನಿಂದು, ಹಂದಿ ಗುರಕೀ ಹೊಡದಂಗ ಗುರಕೀ ಹೊಡೀತೀ, ರಾತ್ರೆಲ್ಲಾ ಎಲ್ಲಾರಿಗೂ ನಿದ್ದೀ ಕೆಡಸೀದೆ ಅಂತ ಬೈತಾರ ಜನ.

ಇನ್ನು ಈ ಮೂಗಿನ ಮುಖ್ಯವಾದ ಕೆಲಸವೆಂದರೆ, ಉಸಿರಾಟ. ಉಸಿರಾಡಲು, ಮೂಗು ಹೇಗೆ ಮುಖ್ಯವೋ ಹಾಗೆ ಮೂಗಿಗೆ ಮೂಗಿನ ತುದಿ ಮುಖ್ಯ. ಮೂಗಿನ ತುದಿ ಎಂದರೆ ವ್ಯಾಕರಣದಾಗ ಅಂಶೀ ಸಮಾಸದಲ್ಲಿ ತುದಿ ಮೂಗು ಎಂದಾಗುತ್ತದೆ. ವೈಕುಂಠದಲ್ಲಿ ವಿಷ್ಣು, ಕೈಲಾಸದಲ್ಲಿ ಶಿವ ಹೇಗೆ ವಾಸಿಸುವರೋ ಹಾಗೆ, ಮೂಗಿನ ತುದಿಯಲ್ಲಿ ವಾಸಿಸುವುದು ಕೋಪ. ಕಾಶಿಯ ಕೋಪಿಯು ಕೋಪವನ್ನು ಕಾಶಿಯಲ್ಲಿ ಬಿಟ್ಟು ಬಂದವನೆಂದರೂ, ಅದನ್ನು ಮೂಗಿನ ತುದಿಯಲ್ಲೇ ಇಟ್ಟುಕೊಂಡು ಬಂದವನು. ಅವನಿಗೆ ಮೂಗಿನ ತುದಿಯಲ್ಲೇ ಕೋಪ ಎಂಬ ಶಬ್ದ ಅತಿ ಶೀಘ್ರ ಕೋಪಿಗಳಿಗೆ ಇರುವ ಹೆಸರು. ಕೋಪದಲ್ಲಿ ಕೊಯ್ದ ಮೂಗು, ಆಮೇಲೇ ಬರುವುದಿಲ್ಲ. ಕೇವಲ ಶೂರ್ಪನಖಿಯ ಮೂಗು ಕೊಯ್ದ ಲಕ್ಷ್ಮಣನ ಕಾರ್ಯದಿಂದ ಇಡೀ ರಾಮಾಯಣನೇ ನಡೆದುಹೋಯ್ತು. ಕೋಪವೆಂಬುದು ಅನರ್ಥ ಸಾಧನವೆಂದು ತಿಳಿದಿದ್ದರೂ ಮೂಗಿನ ಮೇಲಿನ ಕೋಪವನ್ನು ಕಳೆಯಲು ಯಾರಿಗೂ ಸಾಧ್ಯವಾಗಿಲ್ಲ. ಮೂಗಿನ ಸುತ್ತಲೂ ಹಾರಾಡಿಕೋತ, ತನ್ನ ಸಂಗೀತ ಕಛೇರಿ ಮಾಡುವ ಗುಯ್ಂ ಗಾಡು ಓಡಸಲಿಕ್ಕೆ ಹೋಗಿ ಖಡ್ಗದಿಂದ ತನ್ನ ಮೂಗನ್ನೇ ಕೊಯ್ದುಕೊಂಡ ಸಿಂಹದ ಕತೀ ಪಂಚತಂತ್ರದಾಗ ಬರತದ.

ಮನುಷ್ಯ ಹುಟ್ಟುವಾಗೇನ ಕೆಲವೊಂದು ಅಂಗಗಳು ವ್ಯತ್ಯಾಸ ಆಗಿರತಾವ, ಕಾಲೇ ಇಲ್ಲ, ಕಣ್ಣೇ ಇಲ್ಲ, ಕೈಯೇ ಇಲ್ಲ, ಹಿಂಗ. ಆದರ ಮೂಗೇ ಇಲ್ಲ, ಮೂಗು ಬೆಳದೇ ಇಲ್ಲ ಅನ್ನೋ ಮಕ್ಕಳು ಹುಟ್ಟಲಿಕ್ಕೇ ಸಾಧ್ಯ ಇಲ್ಲ. ಯಾಕಂದರ ಮೂಗು ದೇಹಕ್ಕ ಪ್ರಾಣವಾಯು ಕಳಸೋ ಮುಖ್ಯ ಅಂಗ ಅದ. ಮೂಗು ಇಷ್ಟೆಲ್ಲಾ ಪ್ರಸಿದ್ಧಿಯಾಗಿದ್ದರೂ, ಉಳದ ಅಂಗಗಳಿಗೆ ಸಿಕ್ಕ ಮಹತ್ವ ಮೂಗಿಗೆ ಸಿಕ್ಕಿಲ್ಲ ಬಿಡ್ರಿ, ಯಾಕಂದರ, ಈ ಪೂಜಾ ವಿಧಾನದಾಗೂ ಕೂಡೋ ಆಸನದಿಂದ ಹಿಡದು ಕೈ, ಕಾಲು, ಹೊಟ್ಟಿ, ಮತ್ತ ಕಾಣದೇ ಇರೋ ಹೊಕ್ಕಳಿನ ತನಕಾ ಪೂಜಾ ಮಾಡತಾರರೀ. ಮೂಗಿಗೊಂದು ಪತ್ರ, ಪುಷ್ಪ ಏನೂ ಇಲ್ಲ ನೋಡರೀ, ನನ್ನ ಕೇಳಿದರ ಮೂಗಿಗೇಂತನ ಒಂದು ಗುಡಿ ಮಾಡಬೇಕರೀ. ಇಷ್ಟೆಲ್ಲಾ ಆದರೂನು ಮೂಗು ಮಾತ್ರ ಸುಮ್ಮನ ಕೂತದ ನೋಡರೀ, ತನ್ನ ಪಾಡಿಗೆ ತಾನು ಕೆಲಸಾ ಮಾಡಿಕೋತ. ಹೊಟ್ಟಿಗೆ, ಕೈಗೆ, ಬಾಯಿಗೆ, ಕಣ್ನಿಗೆ, ಕಿವೀಗೆ ಹೀಂಗ ಎಲ್ಲಾ ಅವಯವಕ್ಕೂ ಒಂದಿಲ್ಲೊಂದ ಸಮಯದಾಗ ವಿರಾಮ ಅಂತ ಸಿಗತದ. ಆದರ ಮೂಗು ಮಾತ್ರ ಮೂಗಿಗೆ ಕವಡೀ ಕಟಿಗೊಂಡು ದುಡಿಯೋದು ಮಾತ್ರ ನೋಡರೀ.

ಹಂಗಂತ ಮೂಗೇನು ಕಡಿಮೀ ಇಲ್ಲರೀ ದಶಾವತಾರದಾಗ ಮೂಗಿಗೇ ಪ್ರಧಾನ ಇರೋಂತಹ, ವರಾಹ ರೂಪ ಅದ ನೋಡರೀ, ಮತ್ತ ಕಾಂತಾರ ಇಷ್ಟೆಲ್ಲಾ ಪ್ರಸಿದ್ಧಿಯಾಗಲಿಕ್ಕೆ ಅದು ವರಾಹ ರೂಪದ ಮೂಗಿನ ವಿಷಯವನ್ನೇ ಇಟ್ಟು ಕೊಂಡಿದ್ದು ಮುಖ್ಯ ಆಗೇದ ಅನ್ನೋದೇನೂ ಮುಚ್ಚಿಡೋ ವಿಷಯ ಅಲ್ಲ ಬಿಡರೀ. ಈ ಗಂಡಸರೇನೂ ಕಡಿಮೀ ಇಲ್ಲರೀ, ತಮಗ ಮೂಗಿನ ಕೆಳಗ ಮೀಸಿ ಅದ ಅಂತ, ತಮ್ಮ ಮೂಗು ಮ್ಯಾಲೆ ಮಾಡಿರತಾರ. ಆದರ, ಮೂಗಿನ ಮ್ಯಾಲೆ ಕ್ವಾರೀ ಇರೋ ದೇವರ ಸುಮ್ಮನಿರತಾನಂದರ, ಇವರ ಮೀಸೀಗೆ ಯಾರು ಅಂಜತಾರರೀ. ಹಂಗ ನೋಡಿದರ, ಜಿರಲೀಗೇ ಇಷ್ಟುದ್ದಾ ಮೀಸಿ ಇರತಾವ ನೋಡರೀ. ಇನ್ನು ಮೂಗಿನ ಮಟ್ಟ ತಿನ್ನೂದು ಅಂತಾರ. ಬಾಯಿ ಇರೋದ ತಿನ್ನಲಿಕ್ಕೆ ಆದರೆ ಹೆಸರು ಬಂದಿರೋದು ಮೂಗಿಗೆ. ಹಂಗೆ, ನೋಡೋದು ಕಣ್ಣು ಆದರೂ, ಮೂಗಿನ ನೇರಕ್ಕೇ ನೋಡುವ ಹೆಸರು ಬಂದಿರೋದು ಕೂಡ ಮೂಗಿಗೇ. ಈ ಮೂಗಿನಿಂದ ಉಸಿರಾಡುತ್ತೇವೆ. ಇದರಿಂದಲೇ ದೇಹದಲ್ಲಿ ಪ್ರಾಣ ಗಟ್ಟಿಯಾಗಿದೆ. ಅಂದರೆ, ಮೂಗು ಉಸಿರಾಡುವುದನ್ನು ನಿಲ್ಲಿಸಿದರೆ, ದೇಹ ಶವವಾಗುತ್ತದೆ. ಮೂಗಿನಿಂದ ಸುವಾಸನೆಯ ಪರಿಮಳವನ್ನೂ, ಕೆಟ್ಟವಾಸನೆಯ ದುರ್ನಾತನ್ನೂ ಆಘ್ರಾಣಿಸುವಂತಹ ಘ್ರಾಣೇಂದ್ರಿಯವಾಗಿದೆ.

ದ್ವೇಷದಿಂದ ಮೂಗು ಮುರಿಯುವವರ ಜೊತೆಗೆ ವ್ಯಂಗ್ಯದಿಂದಲೂ ಮೂಗು ತಿರುವಿ ಹೋಗುವವರಿದ್ದಾರೆ. ಮೂಗಿಗೆ ಕವಡೆ ಕಟ್ಟಿ ದುಡಿದು ಬೆಳೆಸಿದ ಮಗನಿಗೆ, ಸೊಸೆ ಬಂದು ಮೂಗುದಾರ ಹಾಕುವುದೇ ನಿಜ. ಆಗ ತಂದೆ ತಾಯಿ ಮೂಗು ಮುಚ್ಚಿ ಕೂಡಬೇಕಷ್ಟೇ. ಮೂಗನ್ನ ಕೊಯ್ದು ಇಟ್ಟು ಪ್ರಮಾಣ ಮಾಡುವವರ ಮುಂದೆ ಈ ನಾಸಿಕ ಪುರಾಣ ಅನ್ನೋ ಮೂಗಿನ ಪುರಾಣವನ್ನು ಸಮರ್ಪಣಾ ಮಾಡುತೇನಿ.

-ಡಾ.ವೃಂದಾ ಸಂಗಮ್,

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x