ಉಪ್ಪಿಟ್ಟು
ಅಮ್ಮನು ಮಾಡಿದ ಉಪ್ಪಿಟ್ಟು
ಸವಿಯಲು ನಾಲಿಗೆ ಕಾದಿತ್ತು
ತಟ್ಟೆಯು ಮುಂದಕೆ ಬಂದಿತ್ತು
ಜೊತೆಯಲಿ ತುಪ್ಪವು ಬೆರೆತಿತ್ತು
ಅಮ್ಮನು ನೀಡಿದ ಕೈತುತ್ತು
ದೇಹಕೆ ಬಂದಿತು ತಾಕತ್ತು
ನಾಲಿಗೆ ರುಚಿಯನು ನೋಡಿತ್ತು
ಚಪ್ಪರಿಸುತಲಿ ನಲಿದಿತ್ತು
ಗಂಟಲು ಸಂತಸ ತೋರಿತ್ತು
ಹೊಟ್ಟೆಯು ಆಗ ತುಂಬಿತ್ತು
ಮನಸಿಗು ಮೆಚ್ಚುಗೆ ಆಗಿತ್ತು
ಅಮ್ಮನ ರುಚಿಯನು ಹೊಗಳಿತ್ತು
ದೇಸು ಆಲೂರು
ಇರುವೆ…ಇರುವೆ
ಇರುವೆ.. ಇರುವೆ
ಇರುವೆ ನೀ ಎಲ್ಲೆಲ್ಲೂ
ಇರುವೆ !
ಸಕ್ಕರೆ ಡಬ್ಬಿಲೂ
ನೀ ಇರುವೆ
ಬೆಲ್ಲದ ಅಚ್ಚಲೂ
ನೀ ಮೆಲ್ಲಗೆ
ಮೆಲ್ಲುತ ಇರುವೆ !
ದಾರೀಲಿ ಸಾಗುತಲಿರೆ
ಸಾಲು ಸಾಲಾಗಿ ನೀ
ಶಿಸ್ತು ತೋರುತ
ಗಂಭೀರ ನಡೆಯಲಿ ನೀ
ಸಾಗುತ ಇರುವೆ!
ಗಾತ್ರದಲಿ ನೀ
ಚಿಕ್ಕವನಾದರೂ
ಕಚ್ಚಿದರೆ ಚುರು – ಚುರು
ಇರುವೆ ಇರುವೆ
ನೀ ಎಲ್ಲೆಲ್ಲೂ
ಇರುವೆ !
-ಪರಮೇಶ್ವರಪ್ಪ ಕುದರಿ
ಪುಟ್ಟನ ಎಣಿಕೆ
ಅಮ್ಮ ಕೇಳಿದಳು
ಸೂಜಿ
ಪುಟ್ಟ ಬರೆದನು ಪೂಜಿ
ಅಪ್ಪ ಕೇಳಿದನು ನೀರು
ಕೊಟ್ಟರು ಒಂದು ಲೋಟ
ಬರೆದನು ಪುಟ್ಟ ಒಂದು
ಅಮ್ಮ ಕೊಟ್ಟಳು ರೊಟ್ಟಿ
ಅಕ್ಕ ಹಚ್ಚಿದಳು ಪಲ್ಯ
ರೊಟ್ಟಿ ಪಲ್ಯ ಆಯ್ತು ಎರಡು
ಅಪ್ಪ ಹಾಕಿದನು ಎಲೆ ಅಡಿಕೆ
ಎಲೆ, ಅಡಿಕೆ, ಸುಣ್ಣ
ಸೇರಿದರಾಯ್ತು ಮೂರು
ಬೊಗಳಿತು ನಾಯಿ
ಅಪ್ಪ ಕರೆದೊಯ್ದನು
ನಾಲ್ಕು ಕಾಲಿನ ನಾಯಿ
ಎಳಲೇಬೇಕು ಬೆಳಿಗ್ಗೆ ಐದಕ್ಕೆ
ಅಂದುಕೊಂಡನು ಪುಟ್ಟ
ಎಳಲೇ ಇಲ್ಲ ಆರೇಳಾದರೂ
ಕಣ್ಣುಜ್ಜಿನೋಡಿದ ಗಡಿಯಾರ
ತೋರಿತು ಘಂಟೆ ಎಂಟು
ಪಾಟಿಚೀಲ ಹೊತ್ತು ಆಗಿತ್ತು ಒಂಬತ್ತು
ಶಾಲೆಗೆ ಬಂದನು ಪುಟ್ಟ
ಹೊಡೆಯತು ಘಂಟೆ ಢಣಢಣ
ಆಗಿತ್ತು ಸಮಯ ಹತ್ತು
-ನಾಗರಾಜನಾಯಕ ಡಿ.ಡೊಳ್ಳಿನ