ಪಂಜು ಕಾವ್ಯಧಾರೆ

ವಜನು

ಗೊತ್ತಿಲ್ಲದೇ ಅಡಗಿದೆ
ಎಲ್ಲರ ಚಿತ್ತದಲೂ
ತರತಮದ ತಕ್ಕಡಿಯೊಂದು

ಬೇಕೋ ಬೇಡವೋ
ಅಳೆಯುತ್ತದೆ ಸುತ್ತಲಿನ ಎಲ್ಲವ(ರ)ನ್ನು

ಒಬ್ಬೊಬ್ಬರ ತಕ್ಕಡಿಯದೂ
ಅಳತೆಗಲ್ಲು ಬೇರೆ
ಇಂದಿನ ಲಕ್ಷುರಿ ನಾಳಿನ
ಅವಶ್ಯಕತೆಯಾಗುವುದು ಖರೇ

ಇವನ ನೂರರ ಕಲ್ಲು
ಆಗಬಹುದವನ ಸಾವಿರದ ಕಲ್ಲು
ಇವಳ ಸುಖದ ವ್ಯಾಖ್ಯಾನ
ಸರಿಯೆನಿಸದಿರಬಹುದು ಅವಳಿಗೆ

ಮಗುವಿಗೆ ಯಾವ ಸ್ಕೂಲಲ್ಲಿ ಸೀಟು
ಯಾವ ಲೇ ಔಟ್‌‌ನಲ್ಲಿ ಸೈಟು
ಹೊಸ ಮನೆ, ಕಾರಿನ ರೇಟು
-ಗಳ ಮೇಲೆ ನಿರ್ಧಾರವಾಗುವುದು ವೇಯ್ಟು

ಅವರಿವರ ತಕ್ಕಡಿಯಲಿ
ಮೇಲಾಗಿ ತೂಗಲು ಜನರ ಪೈಪೋಟಿ
ಜಾಗ್ರತೆ! ತಪ್ಪದಿರಲಿ ಹತೋಟಿ

ತಕ್ಕಡಿಯಲಿ-
ಇಂದೊಬ್ಬ ಮೇಲಾಗಿ
ನಾಳೆ ಮತ್ತೊಬ್ಬ ಹೆಚ್ಚು ತೂಗಿ,
ಒಮ್ಮೆ ಮೇಲಾದವನು
ಇನ್ನೊಮ್ಮೆ ಕೆಳಗೆ ಬಾಗಿ
ತನ್ನ ತಾನೇ ತೂಗಿಕೊಳ್ಳಲು ಹೋಗಿ
ಕೊನೆಗೆ ತೂಗಿ ನೋಡುವವನ
ತೂಕವೇ ಕಡಿಮೆಯಾಗಿ

ದುಃಖಕ್ಕೆ ಮೂಲ ಈ ತಕ್ಕಡಿ
ಇರಲಿ ಬದುಕಲಿ
ಸತ್ಯವನಷ್ಟೇ ಬಿಂಬಿಸುವ ಕನ್ನಡಿ
ಬದುಕಿನಂಗಡಿಯಲಿ
ಖರೀದಿಸಲು ಖುಷಿಯ
ಮಾರಿಬಿಡಿ ತರತಮದ ತಕ್ಕಡಿ

-ಡಾ. ಅಜಿತ್ ಹರೀಶಿ

ನೀ ಬರಲಿಲ್ಲ
ಕಾದು ಕಾದು ಸುಸ್ತಾದೆ
ನಿನ್ನ ನೆನಪಲ್ಲೆ ಮರುಗಿದೆ
ಮೇಣದ ಕರಗಿ ಹರವಿಕೊಂಡು
ಕಾದೆ ಬತ್ತಿಯಾಗುವಿಯೆಂದು
ವಿರಹದ ತಾಪಕೆ ಆವಿಯಾದರು
ನಿನ್ನ ಸುಳಿವಿಲ್ಲ ಆಸುಪಾಸಿನಲ್ಲಿ
ಎಂಥ ಕಠಿಣತೆ ನಿಂದು ಬಂಡೆಯಂತೆ
ನನಗೀಗಿಗ ಚಿಂತೆ ಹೆಮ್ಮರವಾಗಿತಿದೆ
ಕಗ್ಗಲ್ಲ ಎದೆಯಲ್ಲಿ ನಾ ಅರಳಿದ್ದು ಹೇಗೆಂದು?
ಒರಟಾದ ಗುಂಡಿಗೆಯಲ್ಲಿ ನನ್ನ ಪ್ರತಿಬಿಂಬ
ಹಾಸು ಹೊಕ್ಕಾದರೂ ಮೃದುವಾಗಲಿಲ್ಲವೆಂದು?
ನಿನ್ನ ಸೆಳತವೆಂಥಹುದೋ ನಾ ಕಾಣೆ?
ಬರಸಿಡಿಲಿಗೆ ಸಿಕ್ಕು ಬರಡಾದಂತೆ ನಾನು.!
ಪ್ರೀತಿಯ ಹೊಂಗೆಮರ ಹೂ ಬಿಟ್ಟರೂ
ಆ ಹೂವ ನೀ ಆರಾಧಿಸದೇ ಹೊಸಕಿದೆ..
ನಿನ್ನರ್ಥದಲ್ಲಿ ಪ್ರೇಮ ಬೆತ್ತಲೆಯ ಬಯಲು
ಬಯಲಾದ ಕಾಮಕೆ ಪ್ರೇಮವೆಂದವನು
ಎಲ್ಲವನು ಸಹಿಸಿರುವೆ ನಿನಗಾಗಿ
ನಿನ್ನ ಪ್ರೀತಿಸಿದ ಒಳಗಣ್ಣಿಗಾಗಿ
ಕಠೋರ ದೇಹವಾದರೂ ಮಲ್ಲಿಗೆಯೆಂದು
ನಿನಗರಿವಾಗುವಷ್ಟರಲ್ಲಿ ಕಮರುವೆ ನಾನೆಲ್ಲೊ
ಮಸಣದಂಚಿನ ತಿರುವಿನ ಗೋರಿಯಲ್ಲವಿತು
ಮಣ್ಣಾದರೂ ಸರಿ, ಬೂದಿಯಾದರೂ ಸರಿ
ನಿನ್ನುಸಿರಿಲಿ ಬೆರೆತ ಗಳಿಗೆಗಾದರೂ ಸರಿ
ವಿರಹದಳ್ಳುರಿಯಲಿ ಬೆಂದವಳು ನಾನು
ಉಸಿರು ನಿಲ್ಲುವ ಕ್ಷಣಕಾದರೂ ಬಂದು ಸೇರು
ನಾ ಹೋದ ಬಳಿಕ ಮರುಗಿದರೇನು ಬಂತು?
ಕಳೆದ ಜೀವಸೆಲೆಯ ಜಿನುಗಿಸಬಲ್ಲೆಯಾ?
ಗುಡ್ಡಕ್ಕೆ ಕಲ್ಲು ಹೊತ್ತಂತಾಯಿತು ಬದುಕು
ನೀ ಬರಲಿಲ್ಲ ಪ್ರೇಮ ಫಲಿಸಲಿಲ್ಲ
ನಿನ್ನ ಎದೆಯು ನನಗಾಗಿ ಮಿಡಿಯಲಿಲ್ಲ.

-ಶಿವಲೀಲಾ ಹುಣಸಗಿ ಯಲ್ಲಾಪುರ.

ವಿಧಿ

ವಿಧಿ ಎಂದರೇನು? ಎಂಬ ಪ್ರಶ್ನೆಗೆ
ಕೂರೋನಾ ಉತ್ತರಿಸಿತು ಮೆಲ್ಲಗೆ
ಸಾವು-ನೋವುಗಳ ಸಂತಾಪ
ಉಳಿದಷ್ಟೇ ಜೀವಗಳ ಉಸಿರಾಟ
ಎಚ್ಚರವಿದ್ದವರು ಬದುಕುಳಿಯಬಹುದು
ಮಿತಿಮೀರಿದರೆ ಸಾವಿನ ಟಿಕೇಟ್ ಖಚಿತ

ಹೀಗಾಗಿ ದಶಕಗಳೇ ಕಳೆದಿದ್ದವು
ಬೇರೊಂದು ಕ್ರಿಮಿಯ ಮುಂದಾಳತ್ವದಲ್ಲಿ
ಆಗಲೂ ಜನ ಸತ್ತಿದ್ದರು ನಿಶ್ಚಿಂತೆಯಿಂದ
ಈಗ, ಉಸಿರಾಟವನ್ನೇ ಕಳೆದುಕೊಂಡರು
ಮನೆ ಮಂದಿಯಲ್ಲ ಸುಡುವ ಬಾವಿಗೆ ಬಿದ್ದರು
ಈಜು ಕಲಿತಿದ್ದರೂ ಪ್ರಯೋಜನವಿಲ್ಲ
ಎಲ್ಲವನ್ನು ಮೊದಲೇ ಯೋಚಿಸಬೇಕಿತ್ತು

ಮಾತು ಬಂದರೂ
ಬಾಯಿ ಮುಚ್ಚಿಕೊಳ್ಳಬೇಕು
ಸಂಬಧವಿದ್ದರೂ ದೂರ ನಿಲ್ಲಬೇಕು
ಹಣ, ಜಾತಿ, ಧರ್ಮ, ದೇವರೆಲ್ಲಾ ಪ್ರೇಕ್ಷಕರು
ಅದಕ್ಕಾಗಿ ಅವರಿಗೆ ನಮ್ಮ ಚಪ್ಪಾಳೆಗಳು
ಜಾಗ್ರತೆ, ನಂಬಿಕೆ, ಭರವಸೆಗಳು ಬೇಕಾಗಿವೆ
ಭವಿಷ್ಯದ ದೇಶ ಕಟ್ಟುವಿಕೆಗಾಗಿ..

ತವರುಮನೆಯೇ ಸಾವಿನ ಗುಡಿಯಾಗಿದೆ
ದೇಶ ಉರಿಯುತ್ತಿರುವ ಮಸಣವಾಗಿದೆ
ನಮ್ಮೆಲ್ಲರ ಇರುವಿಕೆಯ ರುಜುವಿಗಾಗಿ
ಸಮಾನತೆಯಿಂದ ಹೋರಾಡಬೇಕಾಗಿದೆ
ದೂರ ನಿಂತು ಮಾತುಗಳನ್ನು ನುಂಗಿಕೊಳ್ಳಬೇಕಿದೆ
ನರಕವಾಗಿದ್ದ ನಾಲ್ಕು ಗೋಡೆಗಳೇ ಪರಿಚಿತವಾಗಿವೆ
ಈಗ ಗೋಡೆಗಳಿಗೂ ಮಾತು ಬಂದಿವೆ

ಎಲ್ಲಾ ಅಯೋಮಯವಾಗಿದೆ
ವಿಪರ್ಯಾಸದ ಸಂಗತಿಗಳು ಸಾವಿರಾರಿವೆ
ಮಾಧ್ಯಮಗಳಿಗೆ ದಿನವಿಡೀ ಒಂದೇ ಸುದ್ಧಿ
ಸತ್ತವರ ಲೆಕ್ಕ ಕೊಡುವುದೇ ನಾಯಕರ ಕೆಲಸ
ಜೀವ ಕಳೆಯುವುದೆಂದರೆ ಕೆಲವು ವೈದ್ಯರಿಗಿಷ್ಟ
ಹಸು ಕಾಯುವವರಿಗೂ ಕರುಣೆಯುಂಟು
ಆದರೆ, ಕೆಲವು ಲಾಠಿಧಾರಿಗಳಿಗೆ ಹೃದಯವೇ ಇಲ್ಲ
ಜನರಿಗೂ ಬುದ್ಧಿ ಇಲ್ಲ, ಆಡಳಿತವೂ ಮುಗಿಯಿತು
ಪ್ರಕೃತಿಯದ್ದೇ ವಿಜಯ ಭರಾಟೆ
ಎಚ್ಚರ ಎಚ್ಚರ ಎಚ್ಚರ!!

ಇದು ಮಸಣ ಸೇರಿದ ಕೊರೋನ ಪೀಡಿತ
ನವಯುವ ಸಂಸಾರಿಕನೊಬ್ಬನ ಸ್ವಗತ

-ಅನಂತ ಕುಣಿಗಲ್

ಹೆಣ್ಣೆಂದು ಕೊಂದೀರಿ ನನ್ನನ್ನ

ಈಗಷ್ಟೆ ಹೊಟ್ಟೆಯಲ್ಲಿ
ಬಿತ್ತಿದ ಬೀಜ ನಾನು
ಈ ಧರೆಗೆ ಬರುವ ಮೊದಲೇ
ಹೆಣ್ಣೆಂದು ಕೊಂದೀರಿ ನನ್ನನ್ನ

ಹೂವಿನಂತೆ ಅರಳುವ ಮುನ್ನ
ಬುಡ ಸಮೇತ ಕಿತ್ತು ಹಾಕಿದೀರಿ ನನ್ನನ್ನ
ನನಗೂ ಒಂದು ಮನಸ್ಸಿದೆ
ಪ್ರೀತಿ ಹಂಚುವ ಕನಸಿದೆ

ಹೆಣ್ಣೆಂದು ಗೊತ್ತಾದ ಕೂಡಲೇ
ಚೂಟಿ ಹಾಕಿದೀರಿ ನನ್ನನ್ನ
ನನಗೂ ಒಂದು ಬದುಕಿದೆ
ಬಾಳ ಬೇಕೆಂಬ ಹಂಬಲ ವಿದೆ

ಹೆಣ್ಣು ಭ್ರೂಣ ಹತ್ಯೆ ಜಗದಲಿ
ಗಂಡು ಎಂಬ ಮಾತು ಬಾಯಲ್ಲಿ
ಸಮಾನತೆ ಬರಲಿ ಜಗದಲಿ
ಹೆಣ್ಣೆಂದು ಕೊಂದೀರಿ ನನ್ನನ್ನ

-ದೀಪಾ ಜಿ ಎಸ್

ರೈತ

ಕವಚ ತೊಟ್ಟು ಶಸ್ತ್ರವೆತ್ತು
ಬಾಳಯುದ್ದ ನಡೆದಿದೆ
ನೇಗಿಲೀಗ ನಮ್ಮ ಬಂಧು
ಹೊಲದೊಳಗೆ ಸಮರ ಜರುಗಿದೆ॥

ಕಳೆಯು ಬೆಳೆಯ ತಿನ್ನುತಿರಲು
ಎತ್ತು ನೀನು ಕುಡಗೋಲು ಶಸ್ತ್ರವ
ಕಳೆಯ ಕೊಲ್ಲು ಬೆಳೆಯ ಬೆಳೆಸು
ರೈತ ಯೋಧ ನೀನು ಪೊರೆವ॥

ಮೃತ್ಯು ಭೀತಿ ನಮಗಿಲ್ಲ
ಎತ್ತಿ ಛಾತಿ ನಡೆಯುವ
ಬಿತ್ತೋಣ ಶ್ರಮದ ಬೀಜ
ಬೆವರ ಉಣಿಸಿ ಬೆಳೆಯ ಬೆಳೆಯುವ॥

ಕಾಳು ಕಾಳು ರಾಶಿಗೊಂಡು
ಹೊಡೆದುರುಳಿಸುವುದು ಹಸಿವ
ಊಟವೇ ಔಷಧಿಯಾಗಿ
ಗುಣಪಡಿಸುವುದು ಹಸಿವ ರೋಗವ॥

ಬಡವನಾದರೇನಂತೆ ನಾವು ಶ್ರಮಿಕ ಬಂಧು
ಒಂದಾಗೋಣ ನಾವೆಲ್ಲ ಮರೆತು ನಂದು ನಿಂದು
ದುಡಿಯೋಣ ಮೈ ಮುರಿದು ಆಲಸ್ಯವ ಕೊಂದು
ಶ್ರಮದ ಫಲ ಕೂಡಿ ತಿನ್ನೋಣ ಹಂಚಿಕೊಂಡು॥

-ಇಂದ್ರ (ಧರಣೇಂದ್ರ ದಡ್ಡಿ)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x