ಒಂದು ಕಡು ಬೇಸಿಗೆಯ ರಾತ್ರಿಯಂದು…: ಜೆ.ವಿ.ಕಾರ್ಲೊ

ಮೂಲ: ಆಂಬ್ರೋಸ್ ಬಿಯೆರ್ಸ್
ಅನುವಾದ: ಜೆ.ವಿ.ಕಾರ್ಲೊ, ಹಾಸನ.

-೧-

ಹೆನ್ರಿ ಆರ್ಮ್ಸ್ಟ್ರಾಂಗ್ ನನ್ನು ನಂಬಿಸಿ ಒಪ್ಪಿಸುವುದು ಅಷ್ಟೇನೂ ಸುಲಭದ ಮಾತಾಗಿರಲಿಲ್ಲ. ಅವನನ್ನು ಭೂಮಿಯೊಳಗೆ ಹೂತಿದ್ದಂತೂ ನಿಜ. ಹೂತಿದ್ದ ಮಾತ್ರಕ್ಕೆ ತಾನು ಸತ್ತೆನೆಂದು ಒಪ್ಪಿಕೊಳ್ಳಲು ಅವನ ಯಾವತ್ತೂ ಬಂಡಾಯಕೋರ ಮನಸ್ಸು ಸಿದ್ಧವಿರಲಿಲ್ಲ. ಅಂತಿಮ ಸಂಸ್ಕಾರದ ಎಲ್ಲಾ ವಿಧಿವಿಧಾನಗಳೊಂದಿಗೆ ಅವನದೇ ಎದೆಯ ಮೇಲೆ ಅವನದೇ ಕೈಗಳನ್ನು ಜೋಡಿಸಿ ಅಂಗಾತನಾಗಿ ಪೆಟ್ಟಿಗೆಯೊಳಗೆ ಮಲಗಿಸಿದ್ದರು. ಹೆನ್ರಿ, ಅವನ ಕೈಗಳನ್ನು ಜೋಡಿಸಿದ್ದ ಬಂಧನದಿಂದ ಬಿಡಿಸಿಕೊಳ್ಳುವುದೇನೂ ದೊಡ್ಡ ವಿಷಯವಾಗಿರಲಿಲ್ಲ. ಆದರೂ, ಅದರಿಂದ ಹೆಚ್ಚೇನೂ ಉಪಯೋಗವಾಗುತ್ತಿರಲಿಲ್ಲ. ಅವನನ್ನು ಸುತ್ತುವರೆದಿದ್ದ ಅಂಧಕಾರ, ಅತ್ತಿತ್ತ ಮಿಸುಕಾಡದಂತಿದ್ದ ಇಕ್ಕಟ್ಟು ಅವನನ್ನು ವಿಹ್ವಲನನ್ನಾಗಿಸಿತ್ತು.

ಎಲ್ಲರೂ ಅವನು ಸತ್ತಿದ್ದಾನೆಂದೇ ತೀರ್ಮಾನಿಸಿದ್ದರೂ, ಅದನ್ನೊಪ್ಪಲು ಹೆನ್ರಿ ಸಿದ್ಧನಿರಲಿಲ್ಲ. ಅವನ ಕಾಯಿಲೆ ಗಂಭೀರ ಸ್ವರೂಪದ್ದಾಗಿತಷ್ಟೇ. ಅದರ ಬಗ್ಗೆ ಅವನೇನೂ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ಕಾಯಿಲೆ ಕಸಾಲೆಗಳ ಬಗ್ಗೆ ಅವನೇನೂ ಹೆಚ್ಚು ತಿಳಿದುಕೊಂಡಿರಲಿಲ್ಲ. ಒಂದು ನಿದ್ದೆ ಹೊಡೆದರೆ ಎಲ್ಲಾ ಸರಿಯಾಗುತ್ತದೆ ಎಂದೇ ನಂಬಿ ನಿದ್ದೆ ಹೋಗಿದ್ದ….

ಆದರೆ ಎಂತಾದ್ದೋ ಯಡವಟ್ಟಾಯಿತು. ಕಡು ಬೇಸಿಗೆಯಾಗಿದ್ದರೂ ಅದೊಂದು ಗುಡುಗು ಮಿಂಚಿನ ರಾತ್ರಿ. ಬಿರುಗಾಳಿಯ ಮುನ್ಸೂಚನೆ ಬೇರೆ. ಸಮಾಧಿಯೊಳಗಿನ ಸ್ಮಾರಕ ಕಲ್ಲುಗಳು ಜಗ್ಗನೆ ಮಿಂಚಿ ಥಕ ಥಕ ನರ್ತಿಸಿ ಕ್ಷಣಾರ್ಧದಲ್ಲೇ ಮರೆಯಾಗುತ್ತಿದ್ದವು. ಇಂತಾ ವಾತಾವರಣದಲ್ಲಿ ಜೀವಂತ ನರ ಮನುಷ್ಯರಾದವರಿಗೆ ಸ್ಮಶಾನದೊಳಗಿರಲು ಯಾವುದೇ ಕಾರಣಗಳಿರಲಿಲ್ಲ. ಆದರೂ, ಆ ಮೂವರೂ, ಇದಾವುದರ ಪರಿವೆಯೇ ಇಲ್ಲದೆ ಹೆನ್ರಿ ಆರ್ಮ್ಸ್ಟ್ರಾಂಗನ ಹಸಿ ಹಸಿ ಗೋರಿಯನ್ನು ಅಗೆಯುವದರಲ್ಲಿ ನಿರತರಾಗಿದ್ದರು.

ಅವರಲ್ಲಿಬ್ಬರು ಇನ್ನೂ ಹುಡುಗರೇ, ಸನಿಹದ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದರು. ಮತ್ತೊಬ್ಬ ಜೆಸ್ಸ್ ಎಂಬ ಹೆಸರಿನ ಅಜಾನುಬಾಹು ನೀಗ್ರೊ. ಜೆಸ್ಸ್ ಬಹಳ ವರ್ಷಗಳಿಂದ ಆ ಸ್ಮಶಾನದ ಕಾವಲುಗಾರನಾಗಿದ್ದ. ಅಲ್ಲೇ ವಾಸಿಸುತ್ತಿದ್ದು ಸತ್ತವರನ್ನು ಹೂಳಲು ಗುಂಡಿ ತೋಡುವುದು ಇತ್ಯಾದಿ ಸಂಬಂಧಪಟ್ಟ ಎಲ್ಲಾ ಕೆಲಸಗಳನ್ನು ನೋಡಿಕೊಂಡಿರುತ್ತಿದ್ದವನು. ಜೀವ ಜಗತ್ತಿನ ಜಂಜಾಟಗಳನ್ನು ಮುಗಿಸಿ ಸುಸ್ತಾಗಿ ಗೋರಿಗಳೊಳಗೆ ವಿಶ್ರಾಂತಿ ಪಡೆಯುತ್ತಿದ್ದ ಎಲ್ಲರ ಜಾತಕವನ್ನು ಅರಿತಿದ್ದ. ಸ್ಮಶಾನ ಊರಿಂದ ಬಹಳ ದೂರದಲ್ಲಿದ್ದರಿಂದ ಅವರ ಕಾರ್ಯಕ್ಕೆ ಯಾರೂ ಅಡ್ಡಪಡಿಸುವ ಆತಂಕವಿರಲಿಲ್ಲ..
ಸ್ಮಶಾನದ ಕಾಂಪೌಂಡಿನ ಗೇಟಿನ ಹೊರಗೆ ಒಂದು ಕುದುರೆ ಗಾಡಿ ಸಿದ್ಧವಾಗಿ ನಿಂತಿತ್ತು.

-೨ –

ಗೋರಿಯನ್ನು ಅಗೆದು ಮಣ್ಣು ಎತ್ತಿಹಾಕುವುದು ಅಷ್ಟೇನು ತ್ರಾಸದಾಯಕದ ಕೆಲಸವಾಗಿರಲಿಲ್ಲ. ಅಂದು ಸಂಜೆಯಷ್ಟೇ ಅದನ್ನು ತುಂಬಿಸಲಾಗಿತ್ತು. ಆರಡಿ ಗುಂಡಿಯೊಳಗಿನಿಂದ ಶವ ಪೆಟ್ಟಿಗೆಯನ್ನು ಮೇಲೆತ್ತುವುದೇ ತ್ರಾಸದ ಕೆಲಸವಾಗಿತ್ತು. ಅಂತೂ ಪೆಟ್ಟಿಗೆಯನ್ನು ಮೇಲೆತ್ತಲಾಯಿತು. ಶವ ಪೆಟ್ಟಿಗೆಯ ಮುಚ್ಚಳವನ್ನು ಬಿಡಿಸಿ ಜೆಸ್ಸ್ ಅದನ್ನು ಪಕ್ಕಕ್ಕಿಟ್ಟ. ಕಪ್ಪು ಬಣ್ಣದ ಸೂಟು, ಬಿಳಿ ಷರಾಯಿಯೊಳಗಿನ ಮೃತ ದೇಹ ಮಿಂಚಿನ ಬೆಳಕಿಗೆ ಕಾಣಿಸಿತು. ಅದೇ ಹೊತ್ತಿಗೆ ಫಳಾರನೆ ಮಿಂಚಿದ ಮಿಂಚು ಸುತ್ತಲಿನ ಜಗತ್ತನ್ನೆಲ್ಲಾ ಬೆಳಗಿಸಿತು. ಬೆನ್ನ ಹಿಂದೆಯೇ ಭೂಮಿ ಕಂಪಿಸುವಂತ ಭಯಾನಕ ಗುಡುಗು. ಅದೇ ಕ್ಷಣ ನಿದ್ರಾಭಂಗವಾದಂತೆ ಶವ ಪೆಟ್ಟಿಗೆಯೊಳಗೆ ಅಂಗಾತನಾಗಿ ಬಿದ್ದುಕೊಂಡಿದ್ದ ಹೆನ್ರಿ ಆರ್ಮ್ಸ್ಟ್ರಾಂಗ್ ದಿಗ್ಗನೇ ಎದ್ದು ಕುಳಿತ. ಪೆಟ್ಟಿಗೆಯೊಳಗೆ ಹೆನ್ರಿಯ ಶವ ಎದ್ದು ಕುಳಿತಂತೆಯೇ ಹುಡುಗರಿಬ್ಬರೂ ವಿಕಾರವಾಗಿ ಕಿರಿಚುತ್ತಾ ದಿಕ್ಕಾಪಾಲಾಗಿ ಓಡತೊಡಗಿದರು. ಜಗತ್ತಿನ ಯಾವ ಶಕ್ತಿಯೂ ಅವರನ್ನು ಹಿಂದಕ್ಕೆ ಕರೆತರಲು ಶಕ್ತವಾಗಿರಲಿಲ್ಲ. ಆದರೆ ಜೆಸ್ಸ್ ಯಾವುದೋ ಭಿನ್ನ ಲೋಹದಿಂದ ತಯಾರಾದವನು!
ದಿಕ್ಕಾಪಾಲಾಗಿ ಓಡಿ ಹೋಗಿದ್ದ ಹುಡುಗರು ನಸುಕಿನ ಅರೆಬರೆ ಬೆಳಕಿನಲ್ಲಿ ಏದುಸಿರು ಬಿಡುತ್ತಾ ಕಾಲೇಜಿನಲ್ಲಿ ಸಂಧಿಸಿದರು.

“ನೀನು ನೋಡಿದೆಯಾ?” ಒಬ್ಬನು ತೊದಲುತ್ತಾ ಕೇಳಿದ.
“ನೋಡಿದೆ!.. ಅಯ್ಯೋ ದೇವರೇ..ಈಗೇನು ಮಾಡುವುದು?”
ಅವರಿಬ್ಬರೂ ಕಾಲೇಜು ಕಟ್ಟಡದ ಹಿಂಭಾಗಕ್ಕೆ ನಡೆದುಕೊಂಡು ಹೋದರು. ಅಲ್ಲಿ ಹೆಣಗಳನ್ನು ಕೊಯ್ಯುವ ಕೊಠಡಿಯ ಬಳಿ ಒಂದು ಕುದುರೆ ಗಾಡಿ ನಿಂತಿತ್ತು. ಗೇಟಿನ ಕಂಬಕ್ಕೆ ಕುದುರೆಯನ್ನು ಕಟ್ಟಲಾಗಿತ್ತು. ಅವರು ಯಾಂತ್ರಿಕವಾಗಿ ಹೆಣ ಕೊಯ್ಯುವ ಕೊಠಡಿಯೊಳಗೆ ನಡೆದುಕೊಂಡು ಹೋದರು. ಒಂದು ಕತ್ತಲ ಮೂಲೆಯಲ್ಲಿದ್ದ ಬೆಂಚಿನ ಮೇಲೆ ನೀಗ್ರೊ ಜೆಸ್ಸ್ ಕುಳಿತುಕೊಂಡಿದ್ದ. ಇವರು ಒಳಗೆ ಬರುತ್ತಿದ್ದಂತೆ ಅವನು ಎದ್ದು ನಿಂತು ಹಲ್ಲು ಬೀರಿದ. ಆ ಕತ್ತಲೆಯಲ್ಲಿ ಅವನ ಬಿಳಿ ಹಲ್ಲುಗಳು ಮಿಂಚಿದವು.

“ನನ್ನ ಸಂಭಾವನೆಯನ್ನು ಪಡೆದುಕೊಂಡು ಹೋಗಲು ಬಂದೆ.” ಅವನು ಹೇಳಿದ.
ಹೆಣ ಕೊಯ್ಯುವ ಉದ್ದ ಮೇಜಿನ ಮೇಲೆ ಹೆನ್ರಿ ಆರ್ಮ್ಸ್ಟ್ರಾಂಗನ ಶವವನ್ನು ಮಲಗಿಸಲಾಗಿತ್ತು.
ಅವನ ಸೂಟು ಕೋಟು ಮಾಯವಾಗಿ ಹುಟ್ಟುಡುಗೆಯಲ್ಲಿ ಬಿದ್ದುಕೊಂಡಿದ್ದ.
ಗುದ್ದಲಿಯಿಂದ ಜಜ್ಜಿದ ಜಾಗದಲ್ಲಿ ಹೆನ್ರಿಯ ತಲೆ ಅಪ್ಪಚ್ಚಿಯಾಗಿ ಮುಖದ ಮೇಲೆಲ್ಲಾ ರಕ್ತ ಹೆಪ್ಪುಗಟ್ಟಿ ವಿಕಾರವಾಗಿ ಕಾಣಿಸುತ್ತಿತ್ತು.


(ಅಮೆರಿಕನ್ ಲೇಖಕ ಆಂಬ್ರೊಸ್ ಬಿಯೆರ್ಸ್ (1842-1914) ನ ‘One Summer Night ಕತೆಯ ಅನುವಾದ. ವೈಧ್ಯಕೀಯ ವಿದ್ಯಾರ್ಥಿಗಳಿಗೆ ಮನುಷ್ಯನ ದೇಹದ ಬಗ್ಗೆ ಅಭ್ಯಾಸ ನಡೆಸಲು ಸುಲಭವಾಗಿ ಮೃತ ದೇಹಗಳು ಸಿಗದಿದ್ದ ಕಾಲದಲ್ಲಿ ಸಮಾಧಿಗಳನ್ನು ದೋಚುವುದು ( Body Snatchers ) ಸರ್ವೆ ಸಾಮಾನ್ಯವಾಗಿತ್ತು. ಕೆಲವೊಮ್ಮೆ ಗೋರಿಗಳಿಗೆ ಇಳಿಸುವ ಮೊದಲೇ ಶವಗಳು ಕಣ್ಮರೆಯಾಗಿರುತ್ತಿದ್ದವು. ಶವ ಪೆಟ್ಟಿಯೊಳಗಿದ್ದ ಕಲ್ಲು ಇಟ್ಟಿಗೆಗಳನ್ನೇ ಮಂತ್ರಿಸಿ ಪಾದ್ರಿಗಳು ಪರಂಧಾಮಕ್ಕೆ ಅಟ್ಟುತ್ತಿದ್ದರು!)


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x