ತನ್ನ ಮೊದಲ ಕವನ ಸಂಕಲನದಲ್ಲಿ ದಾರಿಗುಂಟ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಟ್ಟು ಓದುವಿಕೆ ಮನುಷ್ಯನ ಪೂರ್ಣತೆಗೆ ಕೊಂಡೊಯ್ಯುತ್ತದೆ, ಸಂವಾದ ಸಿದ್ಧಗೊಳಿಸುತ್ತದೆ, ಬರವಣಿಗೆಯಿಂದ ಆತನ ಪರಿಪೂರ್ಣ ಮನುಷ್ಯನನ್ನಾಗಿಸುತ್ತದೆ ಎಂಬ ಇಂಗ್ಲಿಷ್ನ ಖ್ಯಾತ ಬರಹಗಾರ Francis Bacon ಅವರ ಮಾತುಗಳನ್ನು ನೆನೆಸಿಕೊಳ್ಳುತ್ತ, ಪ್ರಕಾಶ ಕಡಮೆ(ನಾಗಸುಧೆ) ಅವರಿಂದ ಚಂದದ ಮುನ್ನುಡಿ ಬರೆಸಿ , ಲಲಿತ ಸಾಹಿತ್ಯದಲ್ಲಿ ತನ್ನದೇ ಛಾಪು ಮೂಡಿಸಿದ, ನಮ್ಮೆಲ್ಲರ ಬೆನ್ನೆಲುಬಾದ ಪ್ರೀತಿಯ ಗುಂಡುರಾವ್ ದೇಸಾಯಿ ಸರ್ ಅವರಿಂದ ಬೆನ್ನುಡಿ ಬರೆಸಿ,
ಯಾವ ಆಡಂಬರವಿಲ್ಲದೆ
ಕರಿಮಣಿಯಲ್ಲೆ ಬದುಕಿದ
ಬಂಗಾರ
ಅವರ ಅಮ್ಮನಿಗೆ ತನ್ನ ಕೃತಿಯನ್ನು ಅರ್ಪಿಸುವ ನನ್ನ ಸೋದರ ಸೂಗೂರೇಶ್ ಹಿರೇಮಠ ಅರ್ಪಣೆಯಲ್ಲೇ ಎಲ್ಲರ ಮನಸ್ಸನ್ನು ಗೆದ್ದು ನಮ್ಮೂರಿನ “ಚೊಕ್ಕ ಚಿನ್ನ” ಎನಿಸಿಕೊಂಡವರು.
ಕವಿತೆಯ ದಾರಿಗುಂಟಕ್ಕೆ ಮೊದಲ ಅಡಿಯನ್ನು ಬಾಳಿನ ನೌಕಾಯಾನದ ಮೂಲಕ ಪಯಣಿಸುವ ಇವರು ನಮ್ಮ ಬಾಳೊಂದು ಸಮುದ್ರದ ಮೇಲಿನ ನೌಕಾಯಾನವಿದ್ದಂತೆ, ಅಲ್ಲಿ ಎದುರಾಗುವ ಯಾವುದೇ ಸಮಸ್ಯೆಗೆ ಎದೆಗುಂದದೆ ಮುಂದುವರೆದಾಗ ಮಾತ್ರ ದಡದ ದೀಪದ ಮನೆ ಮುಟ್ಟುತ್ತೇವೆ ಎಂಬುದನ್ನು ಬಹಳ ಚಂದದಿ ವರ್ಣಿಸಿದ್ದಾರೆ. ತನ್ನ ಸುತ್ತಮುತ್ತಲ ನಿಷ್ಕಲ್ಮಶ ಮನಸ್ಸಿನ ಶ್ರಮ ಜೀವಿಗಳಾದ ಕಲ್ಲು ಹೊಡೆಯುವವರ ಕಷ್ಟಗಳನ್ನು, ರೊಕ್ಕಕ್ಕಿಂತ ಮೊದಲು ಎಲ್ಲರ ಪ್ರೀತಿ ಬಯಸುವ ಅವರ ಮನಸನ್ನು ಬಿಚ್ಚುಮನಸ್ಸಿನಿಂದ ಹೇಳುತ್ತ,
ಬಿಸಿಲಿಗೆ ಮೈಯೊಡ್ಡಿ,
ಬೊಬ್ಬೆ ಮಾಡಿಕೊಂಡು
ಕಲ್ಲು ರಾಶಿಯ ಕಂಡು
ನಿಟ್ಟುಸಿರ ಬಿಡುವರು ನಾವು ಎಂದು ಹೇಳುತ್ತ ಅವರ ಸ್ವಾಭಿಮಾನವನ್ನು ಎತ್ತಿಹಿಡಿಯುತ್ತಾರೆ.
ಕನಸೆಂದರೆ ಹೇಗಿರಬೇಕು ಎಂದು ಹೇಳುವ ಇವರು ಸೈನಿಕನೆಂದು ಹೆಮ್ಮೆಪಡುವೆ
ಉಸಿರು ನಿಂತಾಗ ಎದೆಯ ಮೇಲೆ
ತ್ರಿವರ್ಣ ಇರಲೆಂದು ಬಯಸುವೆ.. ಎನ್ನುತ್ತ ಭವಿಷ್ಯ ಭಾರತದ ನವ ಯುವಕರಿಗೆ ದೇಶಾಭಿಮಾನದ ಕುರಿತು ಅರಿವು ಮೂಡಿಸುತ್ತಾರೆ.
ಬರಿ ಹಣಕ್ಕಾಗಿ ಹಾತೊರೆಯುವ ಭ್ರಷ್ಟ ಆಡಳಿತದ ಕುರಿತು ನಮ್ಮೆಲ್ಲರಿಗೂ ಎಚ್ಚರಿಸಿ ,
ಬೆಟ್ಟ ಕಾಡು ಗುಡ್ಡ ಕಡಿದು
ಅಳಿಸಿಬಿಡು ಗುರುತು ಉಳಿಯದಂತೆ
ಮಾರಿಬಿಡು ನಿಸರ್ಗ
ಕೈ ತುಂಬ ಹಣ ಸಿಕ್ಕುತ್ತದೆ
ಹಣ ಬಂದರೆ ಅಭಿವೃದ್ದಿಯಲ್ಲವೇ.. ಎಂದು ಮಾರ್ಮಿಕವಾಗಿ ಇಂದಿನ ದುಷ್ಟ ರಾಜಕಾರಣದ ಪರಿಸ್ಥಿತಿಯ ಬಗ್ಗೆ, ಅಭಿವೃದ್ಧಿಯ ಹೆಸರಿನಲ್ಲಿ ನಮ್ಮ ಸಂಸ್ಕೃತಿ, ಪರಂಪರೆ, ಮನುಷ್ಯತ್ವ ಎಲ್ಲವನ್ನೂ ಕಳೆದುಕೊಂಡಿರುವ ಬಗ್ಗೆ ತಿಳಿಸುತ್ತ ವ್ಯಥೆ ಪಡುತ್ತಾರೆ.
ನಮ್ಮ ನಾಡು ನುಡಿಯ ಬಗ್ಗೆ ಕರುನಾಡಿದು ನನ್ನದು
ಕರುಳ ಬಳ್ಳಿ ನಾಡಿದು
ಎತ್ತರಕ್ಕೇರಿದ ನಾಡಿದು
ಸಹ್ಯಾದ್ರಿಯಂತೆ ಮುಗಿಲು
ಮುಟ್ಟಿದ ಬೀಡಿದು… ಎಂದು ಎಲ್ಲರೂ ಹೆಮ್ಮೆ ಪಟ್ಟುಕೊಳ್ಳುವಂತೆ ಮಾಡುತ್ತಾರೆ.
ಇನ್ನು ಅವ್ವನ ವಿಷಯಕ್ಕೆ ಬಂದರಂತೂ ಇವರು ತುಂಬಾ ಭಾವುಕರಾಗುವರು.. ಬಣ್ಣಗಳಿಲ್ಲದ ಬದುಕಾದರೂ
ನನ್ನ ಬದುಕಿಗೆ ರಂಗು ಚೆಲ್ಲಿದಾಕೆ..
ಯಾವ ಆಡಂಬರವಿಲ್ಲದೆ
ಕರಿಮಣಿಯಲ್ಲೇ ಬದುಕಿದ
ಬಂಗಾರ ನನ್ನವ್ವ ಎಂದು ಹೇಳುವಾಗ ನಮ್ಮ ಕಣ್ಣಿಂದಲೂ ಭಾವುಕರಾಗಿ ಒಂದೆರಡು ಅಶ್ರುತನಿಗಳು ಜಿನುಗುವುದರಲ್ಲಿ ಸಂಶಯವಿಲ್ಲ.
ಹೀಗೆ ಚಂದ್ರ, ಹಸಿವು, ಮುದುಕಿ, ನನ್ನವಳು, ಸಖಿ, ಭಾವ ಗುಚ್ಛ, ಜಾದುಗಾರ, ಪಶ್ಚಿಮ, ಪ್ರೇಮ ಸಾಮ್ರಾಜ್ಯದ ಕುರಿತು ಮೈಮನ ಬೆರಗಾಗುವಂತೆ ವರ್ಣಿಸಿ ಓದಿಸಿಕೊಂಡು ಹೋಗುವಂತೆ ಮಾಡುತ್ತಾರೆ.
ಮುರಿದ ಟೊಂಗೆಯ ಚಿಗುರಿನ ಬಗ್ಗೆ ಹೇಳುವ ಇವರು
ದೋಷಿಸಲಾರೆ ಮುರಿದವನ
ದೂರಲಾರೆ ಬೆಳೆಸಿದವನ
ಪ್ರೀತಿಸುವೆ ಈಗಲೂ..
ನೀರೆರೆಯುವವನ ನೀರೆರೆದವನ…
ಮುರಿದರೇನು ಮತ್ತೆ ಚಿಗುರುವೆ
ನಿಮಗೆ ನೆರಳಾಗುವೆ… ನಿಮ್ಮ ಇವರು ಪ್ರೀತಿಯನ್ನು ಪ್ರೀತಿಯಿಂದ ಮಾತ್ರ ಗೆಲ್ಲಲು ಸಾಧ್ಯ, ನಿಮ್ಮ ಹಾದಿಯಲ್ಲಿ ಮುಳ್ಳು ಚೆಲ್ಲಿದವರ ಬಾಳಲ್ಲಿ ಹೂ ಚೆಲ್ಲಿ ಎನ್ನುತ್ತಾರೆ.
ಗಾಂಧಿಯ ಬಗ್ಗೆ
ಎಲುಬಿನ ಗೂಡಿನೊಳಗೂ
‘ಗುಂಡಿ’ಗೆ ಜಾಗವೊಂದಿಷ್ಟು ಕೊಟ್ಟ
ಗಾಂಧಿ ನನಗಿಷ್ಟ… ಇಂದು ವರ್ಣಿಸುವಾಗ ಸೂಗೂರೇಶ್ ಕೂಡ ನಮ್ಮೆಲ್ಲರಿಗೂ ಇಷ್ಟವಾಗುವರು.
ತಮ್ಮ ಬರವಣಿಗೆಯಲ್ಲಿ
ಕೇಳದೇ ಬಿದ್ದಿವೆ ನೂರಾರು ಕುರುಹುಗಳಾಗಿ
ನೆನಪುಗಳು ಶಿಥಿಲ ಕಟ್ಟಡಗಳಾಗಿ
ಬೆಟ್ಟವೇರಿ ಕುಳಿತಿವೆ ಏಕಾಂಗಿಯಾಗಿ
ಸಾಗುತಿದೆ ಕುಳಿತಿವೆ ಸಾಮ್ರಾಜ್ಯ ಅವಸಾನದಂಚಿಗೆ
ಆದರೂ
ಬತ್ತದ ತುಂಗಯೊಂದು ಹರಿಯುತಿದೆ ಬದಿಗೆ
ಮನ ಹಂಪೆಯಾಗಿದೆ…. ಎಂದು ಪ್ರೇಮ ಸಾಮ್ರಾಜ್ಯ ಕಟ್ಟುತ್ತಾರೆ.
ಏನೆಂದು ಬರೆಯಲಿ ಎಂದುಕೊಂಡೇ ಬುದ್ಧನ ಊರು, ನಗು ಗೆಳತಿ, ಚಿಗುರು, ಆದರ್ಶ,
ಬೆರಗಾದ ಗೆಳತಿ
ನನ್ನ ಸುತ್ತ ಸುಳಿಯುವ
ನಿನ್ನದೇ ಭಾವಗಳ ಕಂಡು
ನಿನ್ನ ನವಿರು ಸ್ಪರ್ಶ ಗಾಳಿಯೊಳಗೆ
ಸೇರಿ ಮೈತಾಕುವುದು ಕಂಡು
ಬೆರಗಾದೆ ಗೆಳತಿಯನ್ನು ನೆನೆಸಿಕೊಂಡು ನಮ್ಮೆಲ್ಲರನ್ನೊ ಬೆರಗಾಗಿಸುತ್ತಾರೆ.
ತಾಯಿಯೆಂಬ ಸಂಭ್ರಮ, ಪ್ರೀತಿಯ ಝರಿ, ಅವರೇನು ಬಲ್ಲರು ಎನ್ನುತ್ತ
ನಿನಗಾಗಿ ಕಾದಿರುವೆ
ಹೀಗೇಕೆ ದೂರ ಮಾಡಿದೆ?
ನನ್ನೆದೆಯ ಪ್ರಾಣಪಕ್ಷಿ ನೀನು
ಹಾರಿ ಹೋಗುವ ಮುನ್ನ
ಹೇಳಿ ಹೋಗು ಕಾರಣ…ಎಂದು ಹೇಳುವಾಗ ಖಂಡಿತ ನಮ್ಮವಳ ನೆನಪಾಗದೇ ಇರಳು.
ಮಲ್ಲಿಗೆಯ ಮಾತಿನಿಂದ ಅವ್ವ ಹೇಳಿದ ಕಥೆಯನ್ನು ನಮ್ಮೆಲ್ಲರಿಗೂ ಹೇಳುತ್ತ, ಭಾವುಕರಾಗಿ , ಭಾವುಕರಾಗಿಸಿ ಕೊನೆಯಲ್ಲಿ ಎಲ್ಲರನ್ನೂ ಜಾದೂಗಾರ ನಂತೆ ಸೆಳೆದುಕೊಂಡು ಓದಿಸಿಕೊಂಡು ಹೋಗುವ ಮುರಿದ ಕೊಂಬೆಯ ಚಿಗುರು ಸಮಾಜದ ಮದ್ಯಮ, ಕೆಳವರ್ಗದ ಕಷ್ಟಗಳನ್ನು ಬಿಚ್ಚಿಡುತ್ತ , ಜೀವನದ ಎಂತಹ ಸಂದರ್ಭದಲ್ಲೂ ಛಲಬಿಡದೆ
ಬೀಸೋ ಗಾಳಿ ಬಿರುಗಾಳಿಯಾಗಲಿ
ಅಲೆಗಳೆತ್ತರೆತ್ತಕ್ಕೆ ಬರಲಿ
ಕೈ ಸೋಲಲಿ ನಿಶ್ಯಕ್ತಿಯಾಗಲಿ
ಛಲವೊಂದೇ ಸಾಗಿಸುವದು
ಯಾನವನ್ನ….. ಎಂದು ಪುಷ್ಟಿ ನೀಡುತ್ತ ಹೋರಾಟದ ಛಲ ಬೆಳೆಸುತ್ತಾರೆ..
ಒಟ್ಟಿನಲ್ಲಿ ನನ್ನ ಸೋದರ “ಮುರಿದ ಟೊಂಗೆಯ ಚಿಗುರು” ಎಂಬ ಅಪ್ಪಟ ಮಾನವೀಯ ವಿಷಯವನ್ನು ಕವಿತೆಯನ್ನಾಗಿಸಿ ಕಾವ್ಯ ಕಟ್ಟುವ ಕಲೆಯನ್ನು ಕರಗತಮಾಡಿಕೊಂಡು ನಮ್ಮೆಲ್ಲರನ್ನೂ ಜಾದುಗಾರನಂತೆ ಸೆಳೆದು ಓದಿಸಿಕೊಂಡು ಹೋಗುವಂತೆ ಮಾಡುತ್ತಾರೆ..
ಈ ಚಿಗುರು ಚಿಗುರಿ ಹೆಮ್ಮರವಾಗಿ ಬೆಳೆದು, ಹಚ್ಚಹಸಿರಿನಿಂದ ತುಂಬಿ ಸಕಲ ಜೀವಿಗಳಿಗೂ ಪೊರೆಯಲಿ, ದಾರಿದೀಪವಾಗಲಿ ಎಂದು ಆಶಿಸುವೆ…
ಒಳ್ಳೆದಾಗಲಿ ಅಣ್ಣ…..
-ಸುರೇಶ್ ಮಲ್ಲಿಗೆ ಮನೆ….