ಇದು ಭಾರತೀಯರ ಹುಟ್ಟುಗುಣವೋ ಇಲ್ಲಾ ಕೆಟ್ಟಚಾಳಿಯೋ, ಒಂದಿಷ್ಟು ಗೌಜು ಗಲಾಟೆ ಜಟಾಪಟಿಯಂತ ಸ್ಥಳಗಳಲ್ಲಿ ಜೋರಾದ ಮಾತುಗಳು ಕೇಳಿಬಂದರೆ ಸಾಕು, ತಮ್ಮೆಲ್ಲಾ ಕೆಲಸಗಳನ್ನು ಬಿಟ್ಟು ಅಲ್ಲಿ ನೆರೆದು ಬಿಡುವುದು. ಒಂದು ಬಗೆಯ ಕೆಟ್ಟ ಕೂತೂಹಲದಲ್ಲಿ ಬಿಟ್ಟಿ ಎಂಟರ್ಟೈನ್ ಮೆಂಟ್ ಅಂತ ಮಜಾ ತಗೊಳ್ಳೊರು ಕೆಲವರಾದರೆ, ಜಗಳದ ಕಾರಣವನ್ನೆ ಅರಿಯದೆ ಮಧ್ಯೆ ಪ್ರವೇಶಿಸಿ ಹಿರೋಯಿಸಂ ತೊರಿಸಲು ಹಾತೊರೆಯುವ ಇನ್ನು ಕೆಲವರು. ಬಹುತೇಕ ಸಂಧರ್ಭಗಳಲ್ಲಿ ಅಲ್ಲಿ ವಿಷಯವೇ ಇರುವುದಿಲ್ಲ. ಏನ್ ಲುಕ್ ಕೊಡ್ತಾ ಇದ್ದೀಯಾ, ಹೆಂಗೈತೆ ಮೈಗೆ ಅನ್ನೊ ರೇಂಜ್ ನಲ್ಲೆ ಎಲ್ಲಾ ಇರೋದು… ನಾಲ್ಕು ಜನ ಬಂದು ಅಲ್ಲಿ ನೆರೆದಾಗಲೇ ಅದು ಜಾಸ್ತಿ ಆಗೋದು… ಆ ನಾಲ್ಕು ಜನ ತಮ್ಮನ್ನು ನೋಡುತ್ತಿದ್ದಾರೆಂದ ತಕ್ಷಣ ಅದೆಲ್ಲಿಂದೆಲ್ಲಾ ಬರ್ತದೆ ನೋಡಿ ಫರ್ ಫಾರ್ಮೆನ್ಸು… ಬರೇ ಸಂಸ್ಕೃತ ಪದಗಳು…. ನಿಜಕ್ಕೂ ಆಕ್ಟಿಂಗ್ ಅನ್ನ ರಿಯಲ್ಲಾಗಿ, ಸೀರಿಯಸ್ ಆಗಿ ಮಾಡುವುದೆಂದರೆ ಹೀಗೆನಾ ಅನ್ನುಕೊಬೇಕು! ಇದನ್ನ ಕಣ್ತುಂಬಿಕೊಂಡ ಮಹಾಶಯರಿಗೊ ಬರಪೂರ ಬಿಟ್ಟಿ ಮನೋರಂಜನೆ. ಹೀಗೆ ನೋಡಿದ ಮೇಲೆ ಅದಕ್ಕೆ ಉಪ್ಪು, ಕಾರ, ಮಸಾಲೆ ಸೇರಿಸಿ ನಾಲ್ಕು ಜನರಿಗೆ ಟಾಂ ಟಾಂ ಅಂತ ಮಾಡದಿದ್ದರೆ ಹೇಗೆ..? ಸಂಜೆ ಮರದ ಕಟ್ಟೆಯ ಕೆಳಗೊ, ಇಲ್ಲಾ ಅಡ್ಡಾದಲ್ಲಿ ಕುಳಿತೊ ಕುಯ್ಯೊದೆ ಕುಯ್ಯೊದು…ಈಗೀಗ ಅದು ಕಾಣುತ್ತಿಲ್ಲವೆಂದರೆ ವಿಚಾರಗಳು ಫೇಸ್ಬುಕ್ ವಾಟ್ಸಪ್ ಗಳಿಗೆ ಶಿಪ್ಟ್ ಆಗಿದೆ ಅಂತಾ ತಿಳ್ಕೊಬೇಕು ಅಷ್ಟೆ.
ಯಾರದ್ದೇನು ಹೋಗುತ್ತೆ ನಂದು ಒಂದ್ ಇರಲಿ ಅನ್ನೊ ಮನಸ್ಥಿತಿಯಿಂದಲೇ ಇವತ್ತು ಬೇಕಾದ್ದು ಬೇಡವಾದ್ದೆಲ್ಲ ಬೇಕಾಬಿಟ್ಟಿಯಾಗಿ ಹರಿದಾಡುತ್ತಿರೋದು. ಹಾಗಾಗಿನೆ ನಾವೆಷ್ಟೇ ಮುಂದುವರೆದರೂ ನಮ್ಮ ಮನಸ್ಥಿತಿ ಮಾತ್ರ ಬದಲಾಗದೆ ಇರೋದು. ಇದೇ ಕಾರಣದಿಂದಲೊ ಏನೊ ತಂತ್ರಜ್ಞಾನ ಅನ್ನೊದು ನಮ್ಮ ಸಂವಹನವನ್ನು ಸರಳ, ಸುಲಭ ವೇಗವಾಗಿ ಬದಲಾಯಿಸಿದೆಯೇ ವಿನಃ, ಸರಿಯಾದ ದಿಕ್ಕಿನಲ್ಲಿ ಅಲ್ಲ. ಹಾಗಾಗಿಯೇ ಇವತ್ತು ಕಾಲೆಳೆಯುವುದು, ತಮಾಷೆ ನೋಡುವುದು, ಗಿಮಿಕ್ ಮಾಡುವುದು, ವಿವಾದ ಎಬ್ಬಿಸೋದು, ಚಾರಿತ್ರ್ಯವಧೆ ಮಾಡುವುದು ತೀರಾ ಸುಲಭ ಹಾಗೂ ಸಾಮಾನ್ಯ ಸಂಗತಿಗಳಾಗಿವೆ. ಇಂತಹ ಕೆಲಸಕ್ಕೆ ಬಾರದ ವಿಚಾರಗಳನ್ನೆ ಊಟ ತಿಂಡಿ ಮರೆತು ಗಂಭೀರವಾಗಿ ನೋಡುವ ಪ್ರತಿಕ್ರಯಿಸುವ ಜನರಿದ್ದಾರೆ! ಈ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ನಾವೆಷ್ಟು ಆಕ್ಟೀವ್ ಆಗಿದ್ದೆವೆ ಅಪ್ ಡೇಟ್ ಆಗುತ್ತಿದ್ದೇವೆ ಅಂತ ಅಂದುಕೊಂಡು ಬದುಕುವ ಜನರೂ ನಮ್ಮ ನಡುವೆ ಇದ್ದಾರೆ!
ನಾವು ಭಾರತಿಯರೇ ಹೀಗೆ. ನಮಗೆ ಕಡ್ಡಿಯನ್ನು ಗುಡ್ಡ ಮಾಡೊದು ಗೊತ್ತು. ಏಕೆಂದರೆ ನಾವು ಉಗುರಿನಲ್ಲಿ ಆಗೊ ಕೆಲಸಕ್ಕೆ ಕೊಡಲಿ ತಗೊಳ್ಳೊರು. ಒಂದು ಚಿಕ್ಕ ಗಾಯದ ಹುಣ್ಣನ್ನು ಕೆರಕೊಂಡು ಕೆರಕೊಂಡು ಖುಷಿ ಪಡೋರು. ನಂತರ ಅದೇ ಗಾಯ ಮೈತುಂಬಾ ಆದಾಗ ಶಿವಾ ಅಂತಾ ತಲೆ ಮೇಲೆ ಕೈ ಇಟ್ಟುಕೊಳ್ಳೋರು. ನಮಗೆ ಚಿಕ್ಕ ಚಿಕ್ಕ ವಿಷಯಗಳಿಗೆ ಸೀರಿಯಸ್ ಆಗೋದು ಗೊತ್ತು. ಆದರೆ ನಿಜಕ್ಕೂ ಸೀರಿಯಸ್ ಎನಿಸುವ ವಿಷಯಗಳಿಗೆ ಹೇಗೆ ರಿಯಾಕ್ಟ್ ಮಾಡಬೇಕಂತ ಗೊತ್ತಿಲ್ಲ.
ಇಲ್ಲಾಂದ್ರೆ ನೋಡಿ. ಭಾರತ ಪಾಕಿಸ್ಥಾನ ಕ್ರಿಕೆಟ್ ಪಂದ್ಯವನ್ನು ನಾವು ಯುದ್ದದ ರೀತಿಯಲ್ಲಿ ನೋಡುತ್ತೇವೆ. ಬರೀ ಪಂದ್ಯವನ್ನಷ್ಟೆ ನೋಡದೆ ಅವರು ಎಷ್ಟು ಬಾರಿ ಕಿಚಾಯಿಸಿದ್ರು, ಗುರಾಯಿಸಿದ್ರು, ಅದಕ್ಕೆ ನಮ್ಮವರು ಹೇಗೆಲ್ಲಾ ಬ್ಯಾಟಿನಿಂದ ತದುಕಿದ್ರು ಅಂತಾ ಸೀರಿಯಸ್ ಆಗಿ ಕಣ್ಣು ಬಿಟ್ಟ್ ಕೊಂಡ್ ನೋಡ್ತೇವೆ. ಆದರೆ ಇಷ್ಟು ವರುಷಗಳಲ್ಲಿ ಗಡಿಯಲ್ಲಿ ನಮ್ಮ ಅದೆಷ್ಟು ಜನ ಸೈನಿಕರು ಸತ್ತರು ಅನ್ನೊದು ಮಾತ್ರ ನಮಗ್ಯಾರಿಗೂ ಗೊತ್ತಿಲ್ಲ. ಗಡಿಯಲ್ಲಿ ನಡೆಯುವುದು ನಿಜವಾದ ಯುದ್ದ. ಅಲ್ಲಿ ಶತ್ರುಗಳ ಗುಂಡೇಟಿಗೆ ನಮ್ಮ ಸೈನಿಕನೊರ್ವ ಪ್ರಾಣ ತೆತ್ತರೆ, ಸೀರಿಯಸ್ ಆಗೋದು ಬಿಡಿ, ಅಸಲಿಗೆ ಅದು ವಿಷಯವೇ ಅಂತ ನಮಗನ್ನಿಸುವುದಿಲ್ಲ. ಹಾಗೆ ಅನ್ನಿಸಬೇಕಾದರೆ ಅದು ಅಂತಾ ದೊಡ್ಡ ಮಟ್ಟದಲ್ಲಿ ನಡೆಯಬೇಕು. ಆಗ ಒಂದು ಆವೇಶ, ಕಿಚ್ಚು ಏಳುತ್ತದೆ. ಅದೂ ಸಡನ್ನಾಗಿ ಗನ್ ಸಿಕ್ಕಿದರೆ ಹೊಡೆದಾಕೊವಷ್ಟು! ಏಕೆ ಹೀಗ್ ಅನಿಸುತ್ತೆ ಅಂದ್ರೆ ನಾವುಗಳು ರೌಡಿಸಂ, ಹೊಡೆದಾಟ ಬಡಿದಾಟದಂತಹ ಸಿನಿಮಾಗಳನ್ನು ಹೆಚ್ಚಾಗಿ ನೋಡಿರುತ್ತೇವೆ. ಹೆಚ್ಚು ಕಮ್ಮಿ ಅದೇ ರೀತಿ ಯೋಚಿಸುತ್ತೇವೆ. ಸೈನ್ಯ ಅಂದರೇನು.? ಅದರ ಘನತೆ ಏನು? ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ ಅನ್ನೊದು ಗೊತ್ತಿಲ್ಲ. ಆದರೆ ಎಲ್ಲದಕ್ಕೂ ಓವರ್ ಎಮೋಷನ್ ಆಗಿ ರಿಯಾಕ್ಟ್ ಮಾಡುವುದಷ್ಟೆ ಗೊತ್ತು. ಏಕೆ ಹೀಗೆ ಅಂದ್ರೆ ಪಾಕ್ ವಿರುದ್ಧ ಒಂದು ಮ್ಯಾಚ್ ಸೋತ್ರೆ ಊಟ ನಿದ್ರೆ ಬಿಡುವಷ್ಟರ ಮಟ್ಟಿಗೆ ಸೀರಿಯಸ್ ಆಗಿರುತ್ತೇವೆ. ಚಡಪಡಿಸಿರುತ್ತೇವೆ. ಹಾಗಾಗಿನೆ ಯುದ್ದ, ಸೈನಿಕರು, ಸಾವು ಅಂತ ಸಿರೀಯಸ್ ಆಗಿ ಕೇಳಿ ಬಂದ ತಕ್ಷಣ ಆಕ್ರೋಶ, ನೋವು, ಕಿಚ್ಚು, ಆವೇಶ, ಸೇಡು ಅಂತೆಲ್ಲ ಒಮ್ಮೆಲೆ ಮಿಕ್ಸರ್ ಫೀಲಿಂಗ್ಸ್ ಗೆ ಒಳಗಾಗುತ್ತೇವೆ. ಹೆಚ್ಚೆಂದರೆ ಒಂದೆರಡು ದಿನ ಜೋರಾಗಿ ಕಾಡುತ್ತಿರುತ್ತದೆ. ನಂತರ ಮರೆತೇ ಹೋಗಿರುತ್ತೇವೆ.
ಏಕೆ ಹೀಗೆ..?
ಹಾಗಾದರೆ ಸೈನಿಕರ ಜೀವಕ್ಕೆ ಬೆಲೆನೆ ಇಲ್ಲವಾ.? ಅಥವಾ ಇದನ್ನೆಲ್ಲ ನೋಡಿಕೊಳ್ಳೊಕೆ ಸರಕಾರ ಇದೆ ಅಂತಾನಾ..? ಇಲ್ಲಾ ಅವರು ಇರೋದೆ ಪ್ರಾಣ ಕೊಡುವುದಕ್ಕಾಗಿನೆ ಅನ್ನೊ ಮನೋಭಾವವೋ?
ಇರಬಹುದೆನೊ. ಅನಾದಿ ಕಾಲದಿಂದಲೂ ರಾಜ್ಯಕ್ಕೆ ಏನೇ ಆಪತ್ತು ಬಂದರೂ ಮೊದಲು ತನ್ನ ತಲೆ ಕೊಡಲು ರೆಡಿಯಾಗುವವನು ಸೈನಿಕನೆ ವಿನಃ ರಾಜನಲ್ಲ. ಆದರೆ ಯುದ್ದದ ಮೇಲೆ ಯುದ್ದ ಗೆದ್ದು ಸಾಮ್ರ್ಯಾಜ್ಯ ವಿಸ್ತರಣೆ ಆಗುವಾಗ ಮಾತ್ರ ಅದರ ಎಲ್ಲಾ ಕ್ರೆಡಿಟ್ಟು ರಾಜನಿಗೆ ಹೋಗುವುದು. ಅಂದರೆ ರಾಜ ಗೆದ್ದರೂ ಸೋತರೂ ಸೈನಿಕ ಮಾತ್ರ ಸಾಯಲಿಕ್ಕೆ ಇರೋದು. ಇದು ನಮ್ಮ ಮನೋಭಾವನೆ. ರಾಜರ ಆಳ್ವಿಕೆ ಹೋಗಿ ಪ್ರಜಾಪ್ರಭುತ್ವ ಬಂದು ಇಷ್ಟು ವರುಷಗಳಾದರೂ ನಮ್ಮ ಈ ಮನಸ್ಥಿತಿ ಮಾತ್ರ ಇನ್ನು ಹಾಗೆನೆ. ನಮ್ಮನ್ನೆಲ್ಲ ಉದ್ದಾರ ಮಾಡಲು ಯಾರೋ ಒಬ್ಬ ಮಹಾಪುರುಷ ಬರುತ್ತಾನೆ ವ್ಯವಸ್ಥೆಯನ್ನೆಲ್ಲಾ ಸರಿ ಮಾಡುತ್ತಾನೆ ಅಂತ ಅಂಧರಾಗಿ ಕಾಯುವ ನಮಗೆ, ನಮಗಾಗಿ ಪ್ರಾಣ ಬಿಡುವ ಸೈನಿಕನೇ ನಮ್ಮೆಲ್ಲರ ಕಾಯುವ ದೇವರು ಅನ್ನೊ ರೀತಿಯಲ್ಲಿ ನೋಡಲಿಕ್ಕಾಗುವುದಿಲ್ಲ. ಹಾಗೆ ನೋಡೋದಕ್ಕೆ ಆ ಕಣ್ಣಾದರೂ ನಮಗೆ ಎಲ್ಲಿದೆ..?
ಹೌದು,
ನಾವು ಅಂಧರಾಗಿದ್ದವೆ. ಪ್ರಜಾಪ್ರಭುತ್ವದಲ್ಲಿರುವ ನಾವುಗಳು ಹೀರೋಗಳ ಆರಾಧಕರಾಗಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಮಿಡಿಯಾಗಳು ಕೂಡಾ ಹೀರೋಗಳನ್ನು ವೈಭವಿಕರಿಸುತ್ತಲೇ ಬಂದಿವೆ. ಪಾಕ್ ವಿರುದ್ದ ಮ್ಯಾಚ್ ಗೆದ್ದಾಗ ಒಬ್ಬೊಬ್ಬ ಆಟಗಾರನ ಬಗ್ಗೆ ಒಂದೊಂದು ಎಪಿಸೊಡ್ ಮಾಡುವಷ್ಟರ ಮಟ್ಟಿಗೆ ಚಾನಲ್ ಗಳಿಗೆ ಸರಕಿರುತ್ತದೆ. ಕೆಲಸಕ್ಕೆ ಬಾರದ ರೆಸಾಲ್ಟ್ ರಾಜಕೀಯ, ಅಪರೇಷನ್ ಸೊ ಅಂಡ್ ಸೊ ಮಾಡಿರೊರನ್ನ ಸೂತ್ರಧಾರ ಮಾಸ್ಟರ್ ಮೈಂಡ್ ಅಂತಾ ಏನೋ ಕಡಿದು ಗುಡ್ಡೆ ಹಾಕಿರೊರ್ ತರಹ ತೋರಿಸೋದು ಗೊತ್ತಿದೆ. ಯಾರೋ ಬಾಲಿವುಡ್ ಸೆಲಿಬ್ರಟಿಗಳ ಬ್ಯುಟಿ ಸಿಕ್ರೇಟ್, ಅಫೇರ್, ಗಾಸಿಪ್ ಅಂತಾ ಬಣ್ಣ ಬಣ್ಣಗಳಲ್ಲಿ ಹೇಳುತ್ತಾ ಭ್ರಮಾ ಲೋಕ ಸೃಷ್ಟಿಸುವುದು ತಿಳಿದಿದೆ. ಏಕೆಂದರೆ ಇವೆಲ್ಲಾ ಸದಾ ಟಿಆರ್ ಪಿ ಗಿಟ್ಟಿಸುವ ಗಟ್ಟಿ ವಿಷಯಗಳು. ಇವತ್ತು ನ್ಯೂಸ್ ಅಂದ್ರೇನೆ ರಾಜಕೀಯ, ಸಿನಿಮಾ, ಕ್ರಿಕೆಟ್. ಅದು ಬಿಟ್ಟರೆ ಕ್ರೈಮ್. (ಈಗೀಗ ಕರೋನಾ ಆದರೂ ಅದಕ್ಕೂ ರಾಜಕೀಯ ಲೇಪನ, ಕ್ರೈಮ್ ರೀತಿಯಲ್ಲೆ ವರ್ಣನೆ) ನಮಗೆ ಹೀರೊಗಳೆಂದು ಕಾಣುವುದು ಈ ಮೊದಲ ಮೂರು ಫಾಪ್ಯುಲರ್ ಕ್ಷೇತ್ರದವರಷ್ಟೆ. ಇನ್ನು ನಮ್ಮ ಭಾರತೀಯ ಸಿನಿಮಾಗಳನ್ನೆ ನೋಡಿ. ಬಹುತೇಕ ಅವು ನಾಯಕ ಪ್ರಧಾನವಾಗಿಯೇ ಇರುತ್ತದೆ. ಅದರಲ್ಲಿನ ದೃಶ್ಯಗಳನ್ನೆ ಗಮನಿಸಿ. ನಾಯಕ ಸೂಪರ್ ಮ್ಯಾನ್ ಆಗಿರುತ್ತಾನೆ. ಇಲ್ಲಾ ಆಪದ್ಭಾಂಧವನಾಗುತ್ತಾನೆ. ನಗಿಸುತ್ತಾನೆ. ಕುಣಿಸುತ್ತಾನೆ. ಉದಾರಿಯಾಗುತ್ತಾನೆ. ತ್ಯಾಗ ಮಾಡುತ್ತಾನೆ. ಒಟ್ಟಿನಲ್ಲಿ ನೋಡುಗರ ಕಣ್ಣಿಗೆ ಇವನ ಬಿಟ್ಟರೆ ಇನ್ನೊಬ್ಬನಿಲ್ಲ ಅನ್ನೊ ಮಾದರಿಯಲ್ಲಿ ಭ್ರಮಾಲೋಕ ಸೃಷ್ಟಿಸುತ್ತಾನೆ. ನಾವೆಲ್ಲ ಶಿಳ್ಳೆ ಹೊಡೆಯುತ್ತೆವೆ. ಜೈಕಾರ ಹಾಕುತ್ತೇವೆ. ಆ ಹೀರೋನನ್ನು ದೇವರ ಸ್ಥಾನದಲ್ಲಿ ಇಟ್ಟು ಕಣ್ಣ್ ತುಂಬಿಸಿಕೊಳ್ಳುತ್ತೇವೆ.
ನಿಜ ಜೀವನದಲ್ಲೂ ನಮ್ಮ ಈ ಜೈಕಾರ ಮನೋಬಾವ ಮುಂದುವರೆಯುತ್ತದೆ. ಏಕೆಂದರೆ ಜೈಕಾರ ಹಾಕೋದು ಸುಲಭ. ದೇವರಾಗೋದು ಕಷ್ಟ. ನಾವು ಯಾರನ್ನಾದರೂ ಸರಿಯೆ ನಮಗೆ ಬೇಕಾಗದಾಗೆಲ್ಲ ದೇವರನ್ನಾಗಿಸುತ್ತೇವೆ. ಅವರು ನಮ್ಮ ಇಷ್ಟಾರ್ಥಗಳನ್ನೆಲ್ಲ ತಕ್ಷಣವೇ ಪೂರೈಸಬೇಕಷ್ಟೆ. ಭಕ್ತರಾಗೊದಕ್ಕೆ, ಅಭಿಮಾನಿಗಳಾಗೊದಕ್ಕೆ, ಸಲಾಮು ಹೊಡೆಯುವುದಕ್ಕೆ, ಜೈಕಾರ ಹಾಕೋದಕ್ಕೆ ಯಾವುದಕ್ಕೂ ಕಷ್ಟಪಡಬೇಕಾಗಿಲ್ಲ. ಅವೆಲ್ಲ ತುಂಬಾ ಸುಲಭ ಕಾರ್ಯಗಳು. ಹಾಗಾಗಿ ನಾವೆಲ್ಲ ಅದನ್ನ ಬೇಗ ಬೇಗ ಮಾಡುತ್ತೇವೆ. ದೊಡ್ಡದೆನೊ ಕರ್ತವ್ಯ ಮಾಡುತ್ತಿದ್ದೇವೆ ಎನ್ನುವ ರೀತಿಯಲ್ಲಿ ಫೀಲ್ ಮಾಡುತ್ತಿರುತ್ತೇವೆ. ಕಾರಣ ಇಷ್ಟೇ. ನಮಗೆ ದಾಸ್ಯದಿಂದ ಬದುಕಿ ಸಾಕಾಗಿ ಹೋಗಿದೆ. ಆದರೇನು, ನಮಗದು ಅಭ್ಯಾಸವಾಗಿ ಹೋಗಿದೆ. ಹೀಗಾಗಿ ಹೊರಬರಲು ಸಾಧ್ಯವಾಗುತ್ತಿಲ್ಲ. ಹೊರಬರಬೇಕೆಂದು ಅಂದುಕೊಳ್ಳುತ್ತೇವೆ. ಆದರೆ ಅದು ಹೇಗೆಂದು ಗೊತ್ತಿಲ್ಲ. ಎಲ್ಲೊ ಹೊಸತನದ ಯೋಚನೆ ಬಂದಾಗ, ಬದಲಾವಣೆಗಳು ಕಂಡಾಗ, ಆ ದಾರಿಯಲ್ಲಿ ಹೋಗುವವರನ್ನ ಒಪ್ಪಿಕೊಳ್ಳುತ್ತೇವೆ. ಅವರೇ ನಮ್ಮ ಹೀರೋಗಳೆಂದು ಸ್ವೀಕರಿಸುತ್ತೇವೆ. ಅವರ ಮಾತು, ನಡೆಗಳೆಲ್ಲ ಆ ಒಂದು ಕ್ಷಣ ಸರಿ ಎನಿಸುತ್ತಿರುತ್ತದೆ. ಒಟ್ಟಾರೆ ಅವರ ವ್ಯಕ್ತಿತ್ವ ಆ ರೀತಿಯಲ್ಲಿ ಇಂಪ್ರೆಸ್ ಮಾಡಿರುತ್ತದೆ. ಅವರಿಗೆ ಜೈಕಾರ ಹಾಕುತ್ತೇವೆ. ಅವರ ಅಭಿಮಾನಿಗಳಾಗುತ್ತೇವೆ, ಭಕ್ತರಾಗುತ್ತೇವೆ. ಅಪ್ಪಿತಪ್ಪಿಯೂ ಅವರ ಹಾಗೆ ನಾವು ಕೂಡಾ ಯೋಚಿಸಬಹುದು ಅನ್ನೊದು ಮನಸ್ಸಿಗೆ ಬರುವುದಿಲ್ಲ. ಏಕೆಂದರೆ ಅವರು ನಮ್ಮನ್ನು ಉದ್ಧಾರ ಮಾಡಲು ಬಂದಿರುವರೆಂದೇ ನಾವು ಅಂದುಕೊಂಡಿರುತ್ತೇವೆ.
ಈ ಕಾರಣದಿಂದಲೇ ನಮ್ಮ ಪ್ರಧಾನಿಯವರು ನಾನು ಪ್ರಧಾನಮಂತ್ರಿಯಲ್ಲ ಪ್ರಧಾನಸೇವಕ ಅಂತಾ ಒತ್ತಿ ಹೇಳಿದರೂ ನಾವದನ್ನ ಸರಿಯಾಗಿ ಅರ್ಥ ಮಾಡಿಕೊಳ್ಳಲಾರೆವು. ಬದಲಾಗಿ ಅಷ್ಟುದೊಡ್ಡ ಸ್ಥಾನದಲ್ಲಿದ್ದರೂ ಅವರೆಷ್ಟು ವಿನಯವಂತರಲ್ವ ಅಂತಾ ಪೆದ್ದು ಪೆದ್ದಾಗಿ ಅಂದ್ ಕೊಳ್ಳುತ್ತೇವೆ. ನಾವು ನೂರಾ ಇಪ್ಪತೈದು ಕೋಟಿ ಭಾರತಿಯರು ಒಟ್ಟಾಗಿ ಅಭಿವೃದ್ದಿಯೆಡೆಗೆ ಸಾಗಬೇಕಾಗಿದೆ ಅಂತ ಕರೆ ಕೊಟ್ಟರೆ, ಅವರ ಮಾತಿನ ಸೂಕ್ಷ್ಮತೆಯನ್ನೆ ತಿಳಿಯದೆ ಅವರೇ ನಮ್ಮ ಕಷ್ಟಗಳನ್ನೆಲ್ಲ ಹೋಗಲಾಡಿಸುವ ಅವತಾರ ಪುರುಷ ಅಂತಾ ತಪ್ಪು ತಿಳಿಯುತ್ತೇವೆ. ಇದನ್ನು ವಿರೋಧಿಸುವವರನ್ನ ಗುಲಾಮರೆಂದು ಜರೆಯುತ್ತೇವೆ. ಪ್ರಧಾನ ಸೇವಕರಾಗಿ ಸ್ವಚ್ಛ ಭಾರತ ಅಂತ ಸ್ವತಃ ಖುದ್ದಾಗಿ ಪೊರಕೆ ಹಿಡಿದು ಮುಂದೆ ಬಂದರೆ, ಇಡೀ ದೇಶದ ವ್ಯವಸ್ಥೆಯನ್ನೆ ಕ್ಲೀನ್ ಮಾಡಲು ಬಂದ ಮಹಾಪುರುಷ ಅನ್ನೋ ರೀತಿಯಲ್ಲಿ ನೋಡುತ್ತೇವೆ. ಅವರ ಈ ಮಾತು ನಡೆಗಳನ್ನು ತಪ್ಪಾಗಿ ಅರ್ಥೈಸಿ ಅವರ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಳ್ಳುತ್ತೇವೆ. ಇನ್ನು ಈ ಭಕ್ತರಿಂದ ಗುಲಾಮರೆನ್ನಿಸಿಕೊಂಡಂತವರು ಸುಮ್ಮನಿರುತ್ತಾರಾ..? ಇಲ್ಲ. ಎಲ್ಲಿ ತಪ್ಪು ಸಿಗುತ್ತದೆ ಅಂತಾ ಕಾಯುತ್ತಿರುತ್ತಾರೆ. ಎಲ್ಲಿ ನಿಮ್ಮ ಆ ಅವತಾರಪುರುಷ ನಮ್ಮ ದೇಶನಾ ಕ್ಲೀನ್ ಮಾಡಿದ್ರು ತೊರಿಸಿ ಅಂತಾ ವ್ಯಂಗ್ಯವಾಗಿ ಪ್ರಶ್ನಿಸುತ್ತಿರುತ್ತಾರೆ. ಬೀದಿಯಲ್ಲಿ ಒಂದಷ್ಟು ಹೊಲಸು ಕಂಡರೂ ಅದಕ್ಕೆ ಅವರೇ ಕಾರಣ ಅನ್ನೋ ರೀತಿಯಲ್ಲಿ ಮಾತನಾಡುತ್ತಾರೆ.
ಇದೇ ಅಲ್ವಾ, ನಮ್ಮ ಸಮಾಜದಲ್ಲೂ, ಸಮಾಜಿಕ ಜಾಲತಾಣಗಳಲ್ಲೂ ಈಗ ಚರ್ಚೆ ಆಗ್ತಾ ಇರೋದು. ಇಂತಾ ಒಣ ಚರ್ಚೆಗಳಿಂದ ಏನಾದರೂ ಫಾಯಿದೆ ಇದೆಯೇ…? ನಿಜಕ್ಕೂ ಅಭಿವೃದ್ದಿ ಅನ್ನೊದು ಒಬ್ಬ ವ್ಯಕ್ತಿಯಿಂದ ಸಾಧ್ಯವೇ..? ಒಂದಿಷ್ಟು ಅಭಿವೃದ್ದಿ ಅಂತಾ ಕಂಡರೆ ಅದಕ್ಕೆ ಅವರೊಬ್ಬರೆ ಕಾರಣವಾ..? ಅಷ್ಟಕ್ಕೂ ನಾವ್ಯಾಕೆ ಒಬ್ಬ ವ್ಯಕ್ತಿಯ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಳ್ಳುತ್ತೇವೆ..? ನಿರೀಕ್ಷೆಗೆ ತಕ್ಕಂತೆ ಸಾಗದಿದ್ದಾಗ ಅವರನ್ಯಾಕೆ ಆ ಮಟ್ಟಿಗೆ ದೂರುತ್ತೇವೆ? ಬರೀ ಹೊಗಳಿಕೆ ತೆಗಳಿಕೆಗಳಲ್ಲೆ ಕಾಲ ಕಳಿತಿದೀವಿ ಅಂತ ಅನಿಸಲ್ವ..? ಅವರನ್ನ ಇವರು ದೂರುವುದು. ಇವರನ್ನ ಅವರು ದೂರುವುದು. ಪರಸ್ಪರ ಕಾಲೆಳೆಯುವುದು. ತಪ್ಪುಗಳನ್ನು ದೊಡ್ಡ ಮಟ್ಟದಲ್ಲಿ ಸಮರ್ಥಿಸಿಕೊಳ್ಳುವುದು. ತೆಗಳಬೇಕು ಅಂತಾ ನಿಶ್ಚಿಯಿಸಿದ ಮೇಲೆ ಎಂತಹ ಕೆಳಮಟ್ಟಕ್ಕೂ ಇಳಿಲಿಕ್ಕೆ ಹೇಸದಿರುವುದು. ಇಷ್ಟೇ ಆಗಿದೆಯೇ..? ಸ್ವಾತಂತ್ರ ಬಂದು ಇಷ್ಟು ವರುಷಗಳಾದರೂ ನಾವ್ಯಾಕೆ ಸ್ವತಂತ್ರವಾಗಿ ಯೋಚಿಸಲಾರೆವು?ಹಾಗಾದರೆ ಸ್ವಾತಂತ್ರ್ಯ ಬಂದಿರುವುದು ಯಾವುದಕ್ಕೆ..? ಇಷ್ಟ ಬಂದ ಹಾಗೆ ಹೇಳಿಕೆ ಕೊಡಲಿಕ್ಕಾ..?ಇಷ್ಟ ಬಂದ ಹಾಗೆ ಮಾಡಲಿಕ್ಕಾ…? ನಾವ್ಯಾಕೆ ಇನ್ನು ಯಾವುದೋ ಬಣದೊಂದಿಗೊ, ಜಾತಿಯೊಂದಿಗೊ ಅಥವಾ ಎಡ ಬಲ ಅನ್ನೊ ಪಂಥಿಯೊಂದಿಗೊ ಗುರುತಿಸಿಕೊಳ್ಳಲು ಹವಣಿಸುತ್ತೇವೆ?ನಾವ್ಯಾಕೆ ಹಣ ಅಧಿಕಾರದ ಪ್ರಭಾವಕ್ಕೆ ಸುಲಭದಲ್ಲಿ ಒಳಗಾಗುತ್ತೇವೆ? ನಮಗೆ ನಮ್ಮದೆ ಆದ ಚಿಂತನೆ, ದೃಷ್ಟಿಕೋನ ಯಾಕಿಲ್ಲ? ಹಾಗಾದರೆ ನಾವು ಯಾವ ರೀತಿಯಲ್ಲಿ ಸ್ವತಂತ್ರವಾಗಿದ್ದೇವೆ? ಅಂದ ಮೇಲೆ ನಮ್ಮದು ಎಂತಹ ಪ್ರಜಾಪ್ರಭುತ್ವ ರಾಷ್ಟ್ರ? ನಾವ್ಯಾಕೆ ನಿರ್ದಿಷ್ಟವಾದ ಕೆಲವೇ ವಿಷಯಗಳಿಗೆ ಸೀಮಿತವಾಗುತ್ತೇವೆ? ಅಖಂಡತೆಯ ಪರಿಕಲ್ಪನೆ ನಮಗ್ಯಾಕೆ ಬರುವುದಿಲ್ಲ? ಬೇರೆಯವರನ್ನ ತೆಗಳುವ ಬರದಲ್ಲಿ ನಾವೆಷ್ಟು ಬೆತ್ತಲಾಗುತ್ತಿದ್ದೇವೆ ಅಂತಾ ಯಾಕೆ ಅರಿವಾಗುವುದಿಲ್ಲ..?
ಯಾಕೆಂದ್ರೆ ಅರ್ಥವನ್ನು ಅಪಾರ್ಥವಾಗಿ ತಿಳಿದುಕೊಂಡು ಅನರ್ಥ ಮಾಡಿಕೊಳ್ಳುವುದು ನಮಗೆ ಅಭ್ಯಾಸವಾಗಿ ಹೋಗಿದೆ. ಇನ್ನು ಸರಿಯಾದ ರೀತಿಯಲ್ಲಿ ಮಾತನ್ನು ಗ್ರಹಿಸುವುದಕ್ಕೆ, ವಿಶಾಲವಾಗಿ ಯೋಚಿಸುವುದಕ್ಕೆ ಹೇಗೆ ತಾನೆ ಸಾಧ್ಯವಾದಿತು? ನಮಗೆ ಆ ತಾಳ್ಮೆಯಾದರೂ ಎಲ್ಲಿದೆ?ಮೊದಲಿಗೆ ನಮಗೇನು ಬೇಕು ಏನು ಬೇಡ ಎನ್ನುದರ ಬಗ್ಗೆನೆ ಸ್ಪಷ್ಟತೆ ಇಲ್ಲ. ಮಾತಿಗೆ ಹೇಗೆ ಕೌಂಟರ್ ಡೈಲಾಗ್ ಹೊಡಿಬೇಕು ಅನ್ನುದರಲ್ಲೆ ನಮ್ಮ ಎಲ್ಲಾ ತರಾತುರಿ. ದೂರದಲ್ಲಿ ನಿಂತುಕೊಂಡು ಕಲ್ಲು ಹೊಡೆದು ನಂತ್ರ ಯಾರಿಗೆ ಏನಾಯಿತು ಅಂತ ಅವಿತುಕೊಂಡ್ ನೋಡೊ ಮೆಂಟಾಲಿಟಿ. ಯಾಕೆ ಹೀಗೆ ಅಂದ್ರೆ, ಯಾರ್ ಬಂದ್ರು ಇಷ್ಟೇ ನಮ್ಮ ಹಣೆಬರಹ ಅನ್ನೋ ಹತಾಶೆ ಮನಸ್ಥಿತಿ. ಇಷ್ಟು ವರುಷಾನೆ ಆಗಿಲ್ಲ ಇವನು ಬಂದ್ ಇನ್ನೇನ್ ಕಿಸಿತಾನೆ ಅನ್ನೊ ಉಡಾಪೆ. ಏನೇ ಹೊಸತು ಮಾಡೊಕೆ ಹೊರಟರೂ ಕಾಲೆಳೆಯುವುದು ಅದನ್ನ ಒಪ್ಪಿಕೊಳ್ಳದೆ ಇರುವುದು. ಮಾಡಿದ ಒಳ್ಳೆ ಕೆಲಸಗಳಲ್ಲಿ ಬರೀ ತಪ್ಪನ್ನೆ ಹುಡುಕುವುದು. ಕೊನೆಯಲ್ಲಿ ನಮ್ಮ ಜಾತಿಯವರಿಗೆ ಏನ್ ಮಾಡಿಲ್ಲ ಅನ್ನುವಲ್ಲಿಗೆ ಇವರ ಮಾತುಗಳು ಮುಗಿಯುತ್ತದೆ. ಹೀಗೆ ಬಾವಿಯೊಳಗಿನ ಕಪ್ಪೆ ತರಹ ಇಷ್ಟೇ ನಮ್ಮ ಪ್ರಪಂಚ ಅಂತಾ ತಿಳಿದುಕೊಂಡು ಬದುಕುವವರಲ್ಲಿ ಈ ತರಹದ ಮಾತುಗಳು ಬರುತ್ತವೆ. ಈ ಕಾರಣದಿಂದಲೇ ಭಾರತೀಯರೆಂದರೆ ನಾಲಾಯಕ್ ಗಳು ಕೈಲಾಗದವರು ಅಂತಾ ಇಷ್ಟು ವರುಷಗಳ ಕಾಲ ಜಗತ್ತಿನೆದುರು ಅನ್ನಿಸಿಕೊಂಡಿದ್ದು!! ನೂರಾರು ವರುಷಗಳ ಕಾಲ ಮೊಘಲರ ಬ್ರಿಟಿಷರ ಕೈಯಲ್ಲಿ ದಾಸ್ಯದಿಂದ ಇರುವಂತಾದದ್ದು ಈ ಕಾರಣಕ್ಕೆನೆ. ಈಗಲೂ ಕೂಡಾ ನಮ್ಮದೊಂದು ಕೆಲಸವಾಗಬೇಕಾದರೆ ನೂರು ಸಲಾಮು ಹೊಡೆಯುತ್ತೇವೆ. ಕೈ ಕಟ್ಟಿ ನಿಲ್ಲುತ್ತೇವೆ. ಬಕೆಟು ಹಿಡಿಯುತ್ತೇವೆ.
ಹಾಗಾದರೆ ನಾವು ಭಾರತೀಯರು ನಾಲಾಯಕ್ ಗಳೇ, ಇಲ್ಲಾ ಸ್ನೇಹಿತರೇ. ಕೆಲಸಕ್ಕೆ ಬಾರದ ಚಿಲ್ಲರೆ ವಿಷಯಗಳನ್ನು ಎತ್ತಿಕೊಂಡು ಸಮಯ ಕಳೆಯುತ್ತಿರುವುದರಿಂದಲೇ ನಾವು ಹಾಗಾಗಿದ್ದೇವೆ ಅಷ್ಟೇ. ನಮ್ಮ ಚಿಂತನೆ, ಶಕ್ತಿ ಬೇಡದ ವಿಚಾರಗಳತ್ತ ಹೊರಳಿದ್ದರಿಂದಲೇ ನಾವು ಹೀಗಿದ್ದೇವೆ ಅಷ್ಟೇ. ನಮ್ಮ ಸಣ್ಣತನ ಸಂಕುಚಿತ ಮನೋಭಾವದಿಂದಲೇ ನಾವಿನ್ನು ಹಾಗೆ ಉಳಿದಿದ್ದೇವೆ ಅಷ್ಟೇ. ಬೇರೆಯವರನ್ನ ದೂರುವುದನ್ನ ಕಡಿಮೆ ಮಾಡಿ ನಮ್ಮನ್ನ ನಾವು ಮೊದಲು ಸ್ವವಿಮರ್ಶೆ ಮಾಡಿಕೊಂಡರೆ, ನಮ್ಮ ಎಲ್ಲಾ ತಪ್ಪುಗಳು ಕಾಣಿಸುತ್ತದೆ. ಅದಕ್ಕೆ ಪರಿಹಾರಗಳು ಕೂಡಾ ಕಾಣುತ್ತದೆ.(ಪ್ರಸ್ತುತ ಕರೊನಾ ಕಾಲಘಟ್ಟದಲ್ಲಾದರೂ ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ)
ಸಿದ್ದಗಂಗಾಶ್ರೀ ಶಿವಕುಮಾರ ಸ್ವಾಮಿಗಳು ಹೇಳಿದಂತೆ ಒಳ್ಳೆತನದಿಂದ ಬದುಕುವುದು ಸಾಧನೆಯಲ್ಲ. ನಾವಿರಬೇಕಾಗಿದ್ದೆ ಹಾಗೆ. ಅದೇ ರೀತಿಯಲ್ಲಿ ಪ್ರಧಾನ ಮಂತ್ರಿಯವರು ತಾನು ಪ್ರಧಾನ ಸೇವಕ ಅಂತಾ ಹೇಳಿದಾಕ್ಷಣ ಅದರಲ್ಲಿ ಯಾವ ಹೆಚ್ಚುಗಾರಿಕೆಯಿಲ್ಲ. ಇದನ್ನ ನಮ್ಮ ಉಳಿದ ಮಂತ್ರಿಗಳು, ಶಾಸಕರು ಸಂಸದರು ತಿಳಿದುಕೊಳ್ಳುದಕ್ಕಿಂತ ಮೊದಲು ನಾವು ಅಂದರೆ ಪ್ರಜೆಗಳು ಗಂಭೀರವಾಗಿ ಅರ್ಥೈಸಿಕೊಳ್ಳಬೇಕು. ಹಾಗೂ ಅದರಂತೆಯೇ ನಡೆಯಬೇಕು. ಯಾಕೆಂದ್ರೆ ಪ್ರಜಾಪ್ರಭುತ್ವ ವ್ಯವಸ್ಥೆ ಇರಬೇಕಾಗಿದ್ದೆ ಹಾಗೆನೆ. ಇಲ್ಲಿ ಕೆಲಸ ಮಾಡುವ ಸೇವಾ ಮನೋಭಾವದವರೇ ಬೇಕೆ ವಿನಃ ಭಾಷಣ ಬಿಗಿಯುವ ಮಂತ್ರಿಯಲ್ಲ. ನಾವು ಯಾವಾಗ ಒಬ್ಬ ಮಂತ್ರಿಯನ್ನ ಸೇವಕನ ರೀತಿಯಲ್ಲಿ ನೋಡಲು ಪ್ರಾರಂಭಿಸುತ್ತೇವೆಯೋ ಆವಾಗ ಎಲ್ಲಾ ವ್ಯವಸ್ಥೆಯೂ ಬದಲಾಗುತ್ತದೆ. ಅಭಿವೃದ್ದಿಯೂ ತನ್ನಿಂದ ತಾನಾಗಿ ಆಗುತ್ತದೆ. ಕೆಲಸ ಮಾಡದವರನ್ನ ಯಾವ ಮುಲಾಜಿಲ್ಲದೆ ಬದಲಾಯಿಸುತ್ತೇವೆಯೋ ಆಗ ನಿಜ ಅರ್ಥದಲ್ಲಿ ನಾವುಗಳು ಪ್ರಭುಗಳೆನಿಸುತ್ತೇವೆ. ನಮ್ಮ ಯೋಚನೆಯಲ್ಲಿ ನಾವುಗಳು ಸ್ವತಂತ್ರರಾಗದ ಹೊರತು, ಪ್ರಜಾಪ್ರಭುತ್ವ ಅನ್ನೊದು ಅತಂತ್ರವಾಗೆ ಇರುತ್ತದೆ.
–ಮಧುಕರ್ ಬಳ್ಕೂರ್