ಗಜಲ್
ಪ್ರೇಮ ಮದಿರೆಯ ನಶೆಗೆ ಸಿಹಿಮುತ್ತುಗಳೇ ಸಾಕ್ಷಿ ಸಾಕಿ
ಮುತ್ತಿನ ಮತ್ತಿಗೆ ಜೋಲಾಡುತ್ತಿರುವ ಅಕ್ಷಿಗಳೇ ಸಾಕ್ಷಿ ಸಾಕಿ
ಪ್ರೀತಿ ಪ್ರೇಮಕೂ ಕಾಮದ ರೂಪ ಉಂಟೂ ಲೋಕದಲಿ
ನಮ್ಮಿಬ್ಬರ ಪರಿಶುದ್ಧ ಪ್ರೇಮಕೆ ಈ ರಾತ್ರಿಗಳೇ ಸಾಕ್ಷಿ ಸಾಕಿ
ಸೌಂದರ್ಯವ ಆಸ್ವಾದಿಸದೇ ಅನುಭೋಗಿಸುವುದು ಸಲ್ಲದು
ಹೃದಯಾಂತರಾಳದಲಿ ಮಿಳಿತಗೊಂಡ ಆತ್ಮಗಳೇ ಸಾಕ್ಷಿ ಸಾಕಿ
ನಿನ್ನೊಲವ ಸವಿರುಚಿಯ ಉಣಬಡಿಸು ನನ್ನೆದೆಗೆ
ನೀನಿರದ ಅನುಕ್ಷಣಗಳಿಗೆ ವಿರಹಗಳೇ ಸಾಕ್ಷಿ ಸಾಕಿ
ಪ್ರೀತಿ ಎಂದರೆ ಬರೀ ದೇಹಾಕರ್ಷಣೆ ಅಲ್ಲ ‘ ಬಾಬಾ ‘
ಮನಸ್ಸು ಮನಸ್ಸುಗಳ ಸಮ್ಮೀಲನಗಳೇ ಸಾಕ್ಷಿ ಸಾಕಿ
-ಶಿವರಾಜ್.ಡಿ (ಚಳ್ಳಕೆರೆ)
ರಾಮನ ರಾಜ್ಯದ ವಂಶಜರು ನಾವು ಕೇಡಬಯಸದವರು ಕರೋನಾ
ಸದಾ ಸರಿಯಾದ ದಾರಿಯಲ್ಲಿ ನಡೆದವರು ನಾವು ಕರೋನಾ .
ಅದೆಷ್ಟು ಧೈರ್ಯ ನಿನಗೆ ಎಲ್ಲಿಂದಲೋ ಬಂದು ನೆಲೆ ನಿಲ್ಲಲು
ಜೀವನ ಸಂಭ್ರಮದ ಕ್ಷಣಗಳು ಸೋತು ಸುಣ್ಣಮಾಡಿದೆ ನಿನ್ನ ಅಟ್ಟಹಾಸಕ್ಕೆ ಕರೋನಾ
ಬೇಕೆಂದ ಹಾಗೆ ಸಹಜವಾಗಿ ನಲಿಯುತ ಜೀವನದ ಮೆಟ್ಟಿಲು ತುಳಿದವರು ನಾವು
ವಿನಾಕಾರಣ ನಮ್ಮ ಮೇಲೆ ಅದೆಂಥ ಕೋಪ ನಿನಗೆ ಯಾವ ಸೀಮೆಯಲ್ಲಿ ಇದ್ದೆ ಕರೋನಾ
ಬಂಗಾರದ ಬದುಕು ಇರದಿದ್ದರೂ ನೆಮ್ಮದಿಯ ಬದುಕು ಇತ್ತು ನಮ್ಮ ನಮ್ಮಲಿ
ಕಂಗಳ ತುಂಬಾ ಸಂತಸದ ಸಂಗತಿಗಳು ಚಲ್ಲಾಟವಾಡಿ ಕಚಗುಳಿಯಿಡುತ್ತಿದ್ದವು ಕರೋನಾ
ನೀ ಬಂದೂ ವರ್ಷ ಸಂದರೂ ಹೋದಂತೆ ನಟಿಸಿ ಮತ್ತೆ ನಮ್ಮನ್ನು ಯಾಮಾರಿಸೋದ್ಯಾಕೆ
ಅಂತಃಕರಣ ಕಳ್ಳು ಬಳ್ಳಿ ಅಂತ ನೋಡದೇ ಸ್ವಾರ್ಥದ ಬುದ್ದಿ ತಂದಿಟ್ಟೆ ಕರೋನಾ
ಗಾಂಧಿ ಬುದ್ಧ ಬಸವ ಅಂಬೇಡ್ಕರ ನಾಡು ನೋಡು ನಮ್ಮದು ಅದಕಾಗಿ ಕರಗು
ಧರ್ಮದ ದಾರಿಯಲ್ಲಿ ನಡೆದವರು ನಾವು ನಿನ್ನ ಅಟ್ಟಹಾಸಕೆ ಮಟ್ಟ ಹಾಕು ಕರೋನಾ.
ಒಮ್ಮೆ ಇಲ್ಲಿಂದ ತೊಲಗು ನಮ್ಮ ಬದುಕು ನಮಗೆ ಬಿಟ್ಟು ಕೊಟ್ಟು…
ಜಯದ ಹಾದಿಯಲ್ಲಿ ಸಾಗಲು ನಮ್ಮನ್ನು ಬಿಟ್ಟು ನೀ ಎಲ್ಲಿದ್ದೆ ಅಲ್ಲಿಗೆ ಹೋಗು ಕರೋನಾ…
-ಜಯಶ್ರೀ. ಭ. ಭಂಡಾರಿ.