ಪಂಜು ಕಾವ್ಯಧಾರೆ

ನಿನ್ನ ಅಮೃತಬಳ್ಳಿ ಪ್ರೀತಿ

ತಟ್ಟಿ ಮಾತಾಡಿಸುವ ಮಾತುಗಳು
ನನ್ನೊಳಗನ್ನು
ಮೌನವಾಗಿಸಿಬಿಟ್ವಿವೆ
ತಟ್ಟಿದ್ದು ಎಬ್ಬಿಸಕ್ಕೋ, ಬಗ್ಗಿಸಕ್ಕೋ
ಅದು ನನಗೆ ತಿಳಿಯಬಾರದೂ ಕೂಡ
ನಾನಂತೂ ಮೌನಿಯಾಗಿಯೇ ಇರುವೆ.

ಬದುಕಿನ ಬರಗಾಲಕ್ಕೆ
ಒಣಗಿದ ಮನದಲ್ಲಿ
ಮೊಣದೊಲೆಯಷ್ಟು ಬೆಂಕಿಯತ್ತಿದ್ದು ನಿಜ;
ಎದುರಿದ್ದಿದ್ದು ಮಂಜುಗಡ್ಡೆಯಾದ ನೀನು ಮಾತ್ರವೇ.
ಆ ಅಗ್ನಿಜ್ವಾಲೆಯಲ್ಲಿ ಅನ್ನವನ್ನು
ಬೇಯಿಸಿಕೊಂಡವರೆಷ್ಟೋ ಕಾಣೆ,
ತಣಿಸಿದ್ದು ವರುಣದೇವನ
ತೀರ್ಥವಾದ ನಿನ್ನಕಣ್ಣೀರು.

ಮತ್ತೆ ಈ ಮನದನೆಲದೊಳಗೆ
ಪ್ರೀತಿಯ ಬೀಜಗಳನ್ನು ಉತ್ತಿದ್ದೇನೆ
ಅವುಗಳ ಫಸಲಿಗಾಗಿ
ನಿನ್ನ ಪ್ರೇಮದ ಮೀಮಾಂಸೆಯ
ವ್ಯವಸಾಯವನ್ನು ಭರಿಸಿಕೊಳ್ಳಲು
ಈ ಮನದಮಣ್ಣು ಹಾತೊರೆಯುತ್ತಿದೆ,
ಭಾರೀ ಭಾರಿ ಫಸಲಂತೂ
ನನಗೇ ಬೇಡವೆ ಬೇಡ
ಅತೀಯಾಗಿದ್ದು ಮತ್ತೆ
ಅದೇ ದಿಕ್ಕುತಪ್ಪಿದ ಲೋಕದ
ಸಿಂಹಾಸನಕ್ಕೆ ನನ್ನ
ಅಧಿಪತಿಯಾಗಿಸಬಹುದು.

-ಸತೀಶ ಜೆ ಜಾಜೂರು(ಸಜಲ)

ನನ್ನವನು..

ಇದ್ದರೂ ಇರಬಹುದೇನೋ ಅವಳಂತೆ ಇವನು
ಪ್ರೀತಿ ,ಪ್ರೇಮಕೆ ಒಂಚೂರು ಕೊರತೆ ಇಲ್ಲ
ವಾತ್ಸಲ್ಯದ ಬೆಟ್ಟವೇ ಅವನೆದೆಗೂಡಲ್ಲಿ ಹೊಕ್ಕಿದಾಗ
ಅವ್ವನಾಗಲು ಬಯಸುವುನೋ ಅಥವಾ
ಅವ್ವನೇ ಇವನ ರೂಪದಲಿ ಕಾಣಿಸಿಕೊಂಡಿರಬಹುದೇನೋ
ಅವ್ವನ ಗುಣಗಳಲ್ಲೆ ಪರಿಪಕ್ವತೆಗೊಂಡವನು
ಕೆಲವರು ಹೇಳುತ್ತಾರೆ ಅವ್ವನಂತಾಗಲೂ
ಯಾರಿಂದಲೂ ಸಾಧ್ಯವಿಲ್ಲ ಎಂದು
ಆದರೆ ಅವಳಂತೆಯೇ ಇವನಾದನಲ್ಲ
ಅದು ಹೇಗೆ ?
ಹಾಹಾ….sss ನನಗೀಗ ಅವನ ರಹಸ್ಯ ತಿಳಿಯಿತು
ಮಗುವಿನಂತ ಮುಗ್ದ ಮನಸು ಇವನ ಮುಂದೆ
ನಾನೇ ಹಸುಗೂಸು…
ಹೃದಯಾಂತರಾಳದಲಿ ಬರೀ ಕಾಳಜಿ,ಕನಿಕರ
ಪ್ರೀತಿ -ಪ್ರೇಮವೇ ರಾಶಿಗಟ್ಟಲೆ ತುಂಬಿರುವಾಗ
ಅವ್ವನಂತೆ ಅವ್ವನಾಗಿ ನನ್ನೆದುರಿಗೆ ಬಂದವನು
ಬರಿದಾದ ಹೃದಯದಲ್ಲಿ ಪ್ರೇಮದ ಚಿಗುರು
ಮೂಡಿಸಿದವನೇ ಇವನು
ಕಷ್ಷದ ಮೂಟೆಯೇ ಬೆನ್ನಿಗಟ್ಟಿಕೊಂಡು
ಮುಖದಲಿ ನಗುವನಿಟ್ಟು ನನ್ನನ್ನು ಸುಖದಿಂದಿರಿಸಿ
ಅವಳಂತಾಗಲು ಇವನೂ ಹೊರಟಿದ್ದಾನೆ
ಇದ್ದರೂ ಇರಬಹುದೇನೋ ಅವಳಂತೆ ಇವನು…
-ಉಮಾಸೂಗೂರೇಶ ಹಿರೇಮಠ

ಅಮ್ಮ, ಬೇರು ಮತ್ತು ನಾನು

ಹಾಸಿಗೆಯ ದುನಿಯಾ ಮಾಡಿಕೊಂಡ ಅಮ್ಮನಿಗೆ ಈಗ
ಎಪ್ಪತ್ತರ ಮೇಲೆ!
ನಕ್ಕ, ಅತ್ತ ಎಷ್ಟೋ ವಸಂತಗಳು
ಅವಳುಟ್ಟ ಸೀರೆ ನೆರಿಗೆಗಳಲ್ಲಿ ಸತ್ತು ಯಾವಕಾಲವೋ…..
ಮುಖದ ಸುಕ್ಕು ಮೋಕ್ಷದ ಮಡಿ ಶಬರಿ
ತಂದಿತ್ತು ಕಾದ ಹಣ್ಣುಗಳಿಗೂ ಮಿಕ್ಕು!

ಹಳೆಯ ಹಾಡಿನ ಅನುಪಲ್ಲವಿಯಂತಹ
ಊರುಗೋಲು ಅಮ್ಮನ
ಎಡ-ಬಲದ ಆಸರೆ!
ಮಕ್ಕಳು, ಮೊಮ್ಮಕ್ಕಳು, ಸಂಗಾತಿ, ಸಂಸಾರ
ಸಂಬಂಧಗಳೆಲ್ಲವೂ ಹೂ ಗಂಧ ಹೊತ್ತ ಗಾಳಿಯಂತೆ
ಬೀಸಿದೆಡೆ ಯಾನ, ಅಮ್ಮ ಮಾತ್ರ ಮೌನಗೀತೆಯ ಸಹಜೀವಿ!

ಅವಳು ನೆಟ್ಟ ಅಂಗಳದ ದುಂಡು ಮಲ್ಲಿಗೆಯ ದಟ್ಟ
ಬಳ್ಳಿಯ ಬೇರಿಗೂ ಅಮ್ಮನಂತದೇ ಸಂಕಟ;
ಮಾತ ತಿದಿಯೊತ್ತಿದ ಜ್ವಾಲೆ
ಮುಗಿಲಿಗೆ ಮುಖ ಮಾಡಿದ ಕೊಂಬೆ ತುದಿಯಲ್ಲಿ
ಕಿಲಕಿಲ ನಕ್ಕ ಸಣ್ಣ ಹೂವಿಗೆ
ಒಡಲ ಒಳಗಿನ ಬೇರು ಯಾರೋ……ದೂರದ ನೆಂಟರಷ್ಟೇ
ನೆನಪು!

ಆಳ ಹೋಗಿ ನೀರ ಹುಡುಕಿ ನೆಲದ ಮೇಲೆ ನಿಂತ
ಎಳೆಕುಡಿಗೆ ನೀರೂಡಿಸುವಾಗ ಬೇರು ನಿಟ್ಟುಸಿರ ಬಿಟ್ಟದ್ದು
ಎಲೆ-ಕಾಂಡ-ಹೂ
ನೋಡಿದ್ದುಂಟಾ?
ಅಮ್ಮ ಹಸಿದು ನಮಗಿತ್ತು ತುತ್ತ ತಿಜೋರಿ ಮತ್ತೆಂದೂ ಖಾಲಿ
ಯಾಗದಂತೆ ಜತನು ಮಾಡಿದ್ದು ಈಗೀಗ ಟಿ ವಿ ಮುಂದೆ
ಮ್ಯಾಗಿ ಎಳೆವ ಮಗನ ನೋಡಿ ನೆನಪು!

ಮೈದುಂಬಿದ ಕುಡಿ ಸಸಿಯಾಗಿ ಮರವನಪ್ಪಿ ಆಕಾಶವನೇ
ಬಗ್ಗಿಸುವೆನೆಂಬ ಹುಂಬ ಹಂಗಲಿ ಸಟೆದು ನಿಂತ ಪರಿಗೆ
ಬೇರು ಸರೀಕರೆದುರು ಅಪಮಾನ ಕಂಡ ದರ್ದು!
ಮಕ್ಕಳದೋ ಒಂದೊಂದು ದಿಕ್ಕು ಗೂಡು ಮರೆತ ಹಕ್ಕಿಗಳು
ಹೊಸ ರೆಂಬೆಗೆ ನಾರ ನೇಯುತಿವೆ!
ಅಮ್ಮನೊಡಲ ಬಗೆದ ಮತ್ತು ಬೇರ ಸಡಿಲಗೈದ ಕೈಗಳು
ದೂರ ದೂರ!

ನಾನು ಬೇರು ಬಲಿಯದ ಸಸಿ
ನಾಳೆ ನನ್ನದೇನೋ…..ಜಗತ್ತನ್ನೇ ಮುಷ್ಟಿಯಲ್ಲಿ ತೆರೆದಿಡುವ
ಅಂಗೈ ಮಣ ಕೈಲಿದ್ದರೂ ಅಮ್ಮನ ಎದ್ದು ಕೂರಿಸುವ ಮದ್ದು ಮತ್ತು
ಕರಾಮತ್ತು ನನ್ನ ಅಂಗೈಲಿಲ್ಲ;
ಕಡಿ ಕಡಿದೆಸೆದ ಮನುಜನೆದುರು ಬೇರಿನದು ಒಂದೇ ಹಠ;
ಮತ್ತೆ ಮತ್ತೆ ಉಣ ಸುವೆ ಮತ್ತೆ ಮತ್ತೆ ಬೆಳೆಯುವೆ!

ಅಮ್ಮನಿಗೆ ಅ ಬೇರಿನ ಉಮ್ಮೇದಿಯಿಲ್ಲ, ಪೂರ್ಣವಿರಾಮಕ್ಕೆ
ಒಂದು ಸಣ್ಣ ಚುಕ್ಕೆ ಸಾಕೆಂಬೆಂತೆ
ಸಂತೆ ಮುಗಿಸುವ ನಿರೀಕ್ಷೆ ಅಷ್ಟೇ!

ನಾನು ಬೇರಾಗದೇ
ಅಮ್ಮನಾಗದೇ ಬರಿದೇ ಶೂನ್ಯ ವೃತ್ತದಿ ಗಿರಕಿ ಹಾಕುತ್ತಿದ್ದೇನೆ;
ಬೇರಿನ ಸತ್ವ ಮತ್ತು ಅಮ್ಮನ ತತ್ವ ನನಗೂ ಬಂದರೆ
ನನ್ನ ಮಕ್ಕಳಿಗೆ ನಾನೇ ಪಾಠವಾಗಬಲ್ಲೆ
ಅಥವಾ
ಗೆದ್ದಲು ಕಬಳಿಸೋ ಮರವಾದೇನಷ್ಟೇ!?

ಸಂತೆಬೆನ್ನೂರು ಫೈಜ್ನಟ್ರಾಜ್

ಚೂರು ಚೂರಾಯಿತು ನಾ ಕಂಡ ಕನಸು ಅದ್ಯಾವುದೋ ಬರಸಿಡಿಲು ಸೋಕಿ
ಆಡದ ಮಾತುಗಳು ಇದ್ದವು ಇನ್ನು ತುಂಬಾ ಬಾಕಿ
ಅಷ್ಟರಲ್ಲಿಯೇ ಗೊತ್ತಾಯ್ತು ಮೋಸಗಾತೀ‌ ನೀ ಒಬ್ಬಾಕೀ‌
ನನ್ನ ಮುಗ್ಧತೆಯನ್ನು ಬಳಸಿಕೊಂಡ ನೀನೊಬ್ಬ ಸಮಯ ಸಾಧಕಿ….!

ನಾನೆಂದು ನೋಡಿರಲಿಲ್ಲ ನಿನ್ನ ಕಪಟ ಮನವ ಇಣುಕಿ
ನೋಡಿದ ಮೇಲೆ ಗೊತ್ತಾಯ್ತು ನೀನೆಂತ ಸೂರ್ಪನಕಿ
ಆ ರಾಕ್ಷಸಿಗೂ ನಿಯತ್ತು ಇತ್ತು ನೀನೆ ಬೇಕೆಂದು ಬಂದಿದ್ದಳು ಲಕ್ಷ್ಮಣನ ಹುಡುಕಿ
ನೀನು ಅವರಿಗೂ‌ ಹೋಲಿಕೆ ಯಾಗುತ್ತಿಲ್ಲ ನೀನು ಇನ್ನಂಥವರ ಪೈಕಿ….!

ನಾ ನಿನ್ನ ಬರ ಮಾಡಿಕೊಂಡಿರಲಿಲ್ಲ ನೀ ಬರುವ ದಾರಿಗೆ ಮಲ್ಲಿಗೆ ಹಾಕಿ
ಮೆಲ್ಲಗೆ ಬಂದ ಬೆಕ್ಕನ್ನು ಸ್ವಾಗತಿಸಿದೆ ನನ್ನ ಆದರ್ಶಗಳನ್ನು ಬದಿಗೆ ನೂಕಿ
ಕಣ್ಣ ಮುಚ್ಚಿ ಹಾಲು ಕುಡಿಯುವುದನ್ನು ಕಲಿತ ನೀನು ಬಾಳ ಬೆರಕಿ
ಜಗತ್ತೇ ನೋಡಿತಿಂದು ನಿನ್ನ ಕಳ್ಳತನವ ತಪ್ಪು ಮಾಡಿದೆ ನೀನು ದುಡುಕಿ….!

ಕಣ್ಣು ಒದ್ದೆಯಾಗುತ್ತದೆ ಆಗಾಗ ನಾವಾಡಿದ ಮಾತುಗಳನ್ನು ಮೆಲುಕು ಹಾಕಿ
ಪವಿತ್ರ ಗಂಗೆ ಯಾಗಿರು ಎಂದಿದ್ದಕ್ಕೆ ನನ್ನ ಕಣ್ಣಲ್ಲಿ ಹರಿಯುತ್ತಿರುವೇ ಧುಮು ಧುಮುಕಿ
ಕಣ್ಣಿರಲ್ಲಿ ನೆನೆದ ಮೈಯನ್ನು ಕಾಯಿಸುತ್ತಿರುವೆ ನಿನ್ನ ನೆನಪುಗಳನ್ನು ಸುಟ್ಟು ಹಾಕಿ
ಹೊತ್ತಿ ಉರಿವ ತಾಪಕ್ಕೆ ಕರಗುತಿದೆ ನನ್ನ ಮನ
ತುಪ್ಪ ಸುರಿದು ಆಡಿದ ಮಾತುಗಳು ತಾಕಿ…!

ನಿನ್ನ ವರ್ತನೆ ಕಂಡು ಕೇಳಬೇಕಾದ ಪ್ರಶ್ನೆ ಇದು
ನಾನು ನಿನಗೆ ಎಷ್ಟನೇ ಗಿರಾಕಿ
ಹೇಳಿ ಹೋಗು ಒಂದೇ ಮನಸ್ಸನ್ನು ನೀನು ಎಷ್ಟು ಮಂದಿಗೆ ಮಾರಾಕಿ
ವ್ಯಾಪಾರ ಮಾಡಲು ಹೊರಟು ನಿಂತೆ
ನಿನ್ನ ದಾರಿಗೆ ಅಡ್ಡ ನಿಂತ ನನ್ನನ್ನು ಮಾಯಾ ಸಾಗರಕೆ ದೂಕಿ
ಬಿದ್ದು ಹೊರಳಾಡುತಿರುವ ನನ್ನನು ನೋಡಿಯೂ
ನೋಡದಂತಿರುವ ನೀನು ಮಾತನಾಡುವ ಮೂಖಿ ….!

ಮೋಸಗಾತಿಯಲ್ಲಾ ನೀನೊಬ್ಬ ನಯವಂಚಕೀ
ನನ್ನ ಈ ಪರಿಸ್ಥಿತಿಗೆ ತರಲು ಎಷ್ಟು ದಿನದಿಂದ ಕಾಯುತ್ತಿದ್ದೆ ಹೊಂಚುಹಾಕಿ
ನನ್ನ ಬಾಳಲ್ಲಿ ಕತ್ತಲೆ ಬೆಳಕು ಚೆಲ್ಲಿದ ಚಂದ್ರಮುಖಿ
ನಿನ್ನ ಈ ಘನ ಕಾರ್ಯಕ್ಕೆ ಕಾಲುವೆ ಉತ್ತರಿಸುವುದು ನಿನ್ನ ತಪ್ಪುಗಳನ್ನು ಕೆದಕಿ ಬೆದಕಿ ನಿನ್ನ ಹುಡುಕಿ….!

ತಪ್ಪಲ್ಲವೇ ನನ್ನ ಮನ ಹೇಳಿದ್ದು ನೀನು ಅಂತಾಕಿ ಇಂತಾಕಿ ಬಾಳ ಕೆಟ್ಟಾಕಿ
ಹೀಗೆಂದು ನನ್ನ ಹೃದಯ ಹೇಳಿತು
ನೀನು ತುಂಬಾ ಒಳ್ಳೆ ಕಿ ಶ್ಯಾಣೆಕಿ
ವದ್ಯಾಡಕಹತ್ತಿದಿ ಯಾವುದೋ ಮೋಹದ ಸುಳಿಗೆ ಸಿಲುಕಿ
ಇಷ್ಟಂತೂ ಹೇಳಬಲ್ಲೆ ನಾ ಕಲಿಯುಗ ಐತಿ ಬಾಳ ಬೆರಕಿ ನೀ ಇರು ತುಂಬಾ ಜ್ವಾಕಿ
ಮತ್ತೆಂದೂ ಬರಬೇಡ ನನ್ನ ಹುಡುಕಿ ಮುಚ್ಚಿದೆ ನನ್ನ ಮನದ ಕಿಟಕಿ….!

-ಮಂತೇಶ್ ಅಕ್ಕೂರು

ಅನಂತದೆಡೆಗೆ ಪಯಣ…

ನಾವಿಕನಿಲ್ಲದ ದೋಣಿಯಲಿ
ಅನಂತದೆಡೆಗೆ ಸಾಗುತಲಿದೆ
ಜೀವನದ ಈ ಪಯಣ,
ದಾರಿ ತೋರುವರಾರಿಲ್ಲ
ದಡವ ಮುಟ್ಟಿಸಲೂ ಯಾರೂ ಇಲ್ಲ…

ಅನಂತ-ಅನಂತಗಳನು ದಾಟಿ
ಮಹಾದೂರಕೆ ಸಾಗುತಿಹುದು ಮನ
ಯಾವ ಮಹತ್ಕಾರ್ಯಕೋ ಏನೋ
ನಾನರಿಯೆನು…
ಇದರ ಮರ್ಮವನು ತಿಳಿಸಲೂ ಯಾರಿಲ್ಲ…

ಹುಚ್ಚು-ಹುಚ್ಚಾದ ಬಯಕೆಗಳು
ಈಡೇರಲಾರದ ಮನೋಕಾಮನೆಗಳು
ನರಳುತಿವೆ ಸಂಕಟದ ಕಾಲಡಿ ಸಿಲುಕಿ,
ಇದ ಬಿಡಿಸಲಾರಿಲ್ಲ
ಕೊನೆಗೊಳಿಸುವವರೂ ಯಾರಿಲ್ಲ….

ನರಳಿ ನಲುಗಿ ಮನವು
ಬಯಸುತಿದೆ ಆಧ್ಯಾತ್ಮದ ಸುಧೆಯಾ
ನವಜೀವನವನರಸಿ ಅರಸಿ,
ಈ ಬಂಧವನು ಪೂರ್ಣಗೊಳಿಸಲಾರಿಲ್ಲ
ತೊಡೆದು ಹಾಕಲೂ ಯಾರೂ ಇಲ್ಲ…

-ಶಿವರಾಘವ (ರನ್ನ)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಸಜಲ
ಸಜಲ
2 years ago

ಧನ್ಯವಾದಗಳು ‘ಪಂಜು’

1
0
Would love your thoughts, please comment.x
()
x