ಮಳೆ ನಾಡಿನ ಕಾನನದ ಹೂವು ಸೀತಾಳೆ. ಇದು ಒಂದು ಆರ್ಕಿಡ್ ಪ್ರಭೇಧವಾಗಿದ್ದು, ಇದರ ವೈಜ್ಞಾನಿಕ ಹೆಸರು Rhynchostylis retusa. ಧರೆಗೆ ಮಳೆ ಸುರಿಯಲು ಪ್ರಾರಂಭವಾಗಿದ್ದ ಮಳೆಗೆ ಸ್ವಾಗತಿಸಲು ಈ ಸೀತಾಳೆ ಹೂವುಗಳು ಎಲ್ಲೆಡೆ ಅರಳಿ ಕಾಡಿನ ಸೊಬಗನ್ನು ಹೆಚ್ಚಿಸುತ್ತದೆ. ನೋಡಲು ಬಿಳಿ – ನೇರಳ ಅಥವಾ ಬಿಳಿ – ಕಂದು ಬಣ್ಣಗಳ ಮಿಶ್ರಿತವಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತದೆ, ಹೂವಿನ ಗುಂಚಲುಗಳು ಯಾರೋ ಇದನ್ನು ಕೈಯಿಂದ ಮಾಲೆಗಳನ್ನಾಗಿ ಮಾಡಿ ತೂಗಿ ಬಿಟ್ಟಂತೆ ಕಾಣುತ್ತದೆ. ಇದಕ್ಕೆ ಸಾಮಾನ್ಯವಾಗಿ ಸ್ಥಳಿಯರು ಸೀತಾದಂಡೆ ಅಥವಾ ನರಿ ಬಾಲದ ಹೂವು ಎಂದು ಕರೆಯುತ್ತಾರೆ. ಇದು ಮರದ ಕೊಂಬೆಗಳ ಮೇಲೆ ಆವೃತ್ತವಾಗಿದ್ದು ವರ್ಷದ 12 ತಿಂಗಳು ಈ ಪ್ರಭೇದ ನಮಗೆ ನೋಡಲು ಸಿಗುತ್ತದೆ. ಆದರೆ ಹೂವಾಗಿ ನೋಡಲು ಸಿಗುವುದು ಜೂನ್, ಜುಲೈ ತಿಂಗಳ ಮಳೆ ಪ್ರಾರಂಭದಲ್ಲಿ ಮಾತ್ರ. ಸುಮಾರು 12 ರಿಂದ 15 ದಿನದವರೆಗೆ ಚೆನ್ನಾಗಿ ಅರಳಿರುವುದು ನೋಡಲು ಸಿಗುತ್ತದೆ. ಅತಿ ತಂಪಾದ ವಾತಾವರಣದಲ್ಲಿ ಈ ಪ್ರಭೇದ ಹಬ್ಬಿಕೊಂಡು ಆರೋಗ್ಯಕರವಾದ ಹೂವುಗಳು ಅತಿ ಉದ್ದವಾಗಿ ಅರಳಿರುವುದು ನೋಡಲು ಸಿಗುತ್ತದೆ.
ಹಲವು ಕಡೆ ರಸ್ತೆ ಬದಿಯಲ್ಲಿ ಮರದ ಟೊಂಗೆಗಳು ಮುರಿದು ಈ ಪ್ರಭೇದದ ಸಮೇತ ಕೆಳಗೆ ಬಿದ್ದಿರುವುದು ಹೇರಳವಾಗಿ ಕಂಡುಬರುತ್ತದೆ. ನೋಡುಗರು ಇದನ್ನು ಸುರಕ್ಷಿತವಾಗಿ ಎತ್ತಿಕೊಂಡು ಪಕ್ಕದಲ್ಲಿರುವ ಮರಕ್ಕೆ ಅಥವಾ ಮನೆಯ ಅಕ್ಕಪಕ್ಕದಲ್ಲಿ ಮರಕ್ಕೆ ಅಂಟಿಸುವುದರಿಂದ ಈ ಪ್ರಭೇದ ಪುನಃ ಹಬ್ಬಿಕೊಳ್ಳುವ ಸಾಧ್ಯತೆ ಇರುತ್ತದೆ. ಕುಂಡದಲ್ಲಿ ಬೆಳೆಸಬೇಕು ಎಂದಿದ್ದರೆ ಕುಂಡದ ಕೆಳಗಿನ ಭಾಗದಲ್ಲಿ ಹಲವು ರಂದ್ರಗಳನ್ನು ಮಾಡುಬೇಕು. ನಾಲ್ಕು ಭಾಗ ಒಣ ಪಾಚಿ, ಎರಡು ಭಾಗ ಸಣ್ಣ ಇಟ್ಟಿಗೆ ಚೂರು ಒಂದು ಭಾಗದಷ್ಟು ಗೋಡು ಮಣ್ಣು, ಒಂದು ಭಾಗದಷ್ಟು ಇದ್ದಿಲು ಪುಡಿ, ಒಂದು ಭಾಗ ಎಲೆ ಗೊಬ್ಬರವನ್ನು ಮಿಶ್ರಣ ಮಾಡಿ ಕುಂಡಗಳಿಗೆ ಹಾಕಬೇಕು. ಗಿಡ ನೆಟ್ಟ ನಂತರ ಅಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳಬೇಕು. ಸರಿಯಾಗಿ ನೀರು ಹಾಯಿಸುವುದರಿಂದ ಒಂದು ವರ್ಷದಲ್ಲಿ ಮಳೆಯ ಪ್ರಾರಂಭದಲ್ಲಿ ಹೂವುಗಳ ಗೊಂಚಲುಗಳು ನೋಡಲು ಸಿಗುತ್ತವೆ.
–ಬಿಲಾಲ್ ಶೇಖ್