ಅಬ್ಬಾ…..ಆ ದಿನಗಳು: ಸರ್ವಮಂಗಳ ಜಯರಾಂ

ಹೆಣ್ಣು ಗರ್ಭ ಧರಿಸಿ 9 ತಿಂಗಳು ತನ್ನ ಉದರದಲ್ಲಿ ಮಗುವನ್ನು ಪೋಷಿಸಿ ಸುರಕ್ಷಿತವಾಗಿ ಭುವಿಗೆ ತರುವಲ್ಲಿನ ಪ್ರಕ್ರಿಯೆ ಆ ದಿನಗಳಲ್ಲಿ ಆಕೆಯ ಅನುಭವಗಳು ಹೇಳತೀರದು, ಯಾವುದೇ ಆಹಾರ ಪದಾರ್ಥಗಳನ್ನು ಕಂಡರೂ ಅದರಲ್ಲೂ ಎಣ್ಣೆ ಪದಾರ್ಥಗಳು , ಬೋಂಡಾ, ಬಜ್ಜಿ ಕರಿಯುವಾಗ, ಸಾಂಬಾರಿಗೆ ಬೇಳೆ ಬೇಯಿಸುವಾಗ ಹೊಟ್ಟೆ ತೊಳಸಿದಂತಾಗಿ ವಾಂತಿ ಉಮ್ಮಳಿಸಿ ಬಂದು ಊಟದ ಮೇಲೆ ವಿರಕ್ತಿ ಬಂದುಬಿಡುತ್ತದೆ ತಟ್ಟೆಯಲ್ಲಿ ಊಟ ಇಟ್ಟುಕೊಂಡು ಕುಳಿತೆವೆಂದರೆ ಹಿಂದೆಯೇ ಎದ್ದು ಹೋಗಿ ವಾಂತಿ ಮಾಡಿ ಬರಬೇಕಾಗುತ್ತದೆ. ಏಕೆಂದರೆ ಊಟದ ವಾಸನೆ ಮೂಗಿಗೆ ಬಡಿಯಿತೆಂದರೆ ಸಾಕು ಬಾಯಲ್ಲಿ ನೀರು ಉಕ್ಕಿ ವಾಂತಿ ಬರುತ್ತದೆ. ಹಾಗೇನಾದರೂ ಬಲವಂತವಾಗಿ ಎರಡು ತುತ್ತು ನುಂಗಿದರೂ ಅದು ದಕ್ಕುವುದಿಲ್ಲ. ಆಗ ಗಂಟಲೆಲ್ಲ ಉರಿ ಉರಿ. ಇದು ಅನುಭವಿಸಿದವರಿಗೆ ಮಾತ್ರ ತಿಳಿಯುವಂತದ್ದು.

ಇನ್ನು ಹೆರಿಗೆಯ ದಿನವಂತು ಆಕೆಗೆ ಪುನರ್ಜನ್ಮ ಬಂದ ದಿನವೇ ಸರಿ. ಸಾವಿನ ಮನೆಯ ಬಾಗಿಲನ್ನು ಎಡತಾಕಿಯೇ ಆಕೆ ಬಂದಿರುತ್ತಾಳೆ. ಸಹಜ ಹೆರಿಗೆಯಾದರು ಸರಿ ಸಿಝೇರಿಯನ್ ಆದರೂ ಸರಿ ನೋವು ಮಾತ್ರ ಕಟ್ಟಿಟ್ಟಬುತ್ತಿ. ಸಹಜ ಹೆರಿಗೆ ಯಲ್ಲಿ ಹೆರಿಗೆಯ ಸಮಯ ಸಮೀಪಿಸುತ್ತಿದ್ದಂತೆ ಆಗೊಮ್ಮೆ ಈಗೊಮ್ಮೆ ಕಿಬ್ಬೊಟ್ಟೆಯಲ್ಲಿ ಚಳಕ್ ಎಂದು ಕಾಣಿಸಿಕೊಳ್ಳುವ ನೋವು, ಯೋನಿ ದ್ವಾರದಲ್ಲಿ ಹೇಳಿಕೊಳ್ಳಲಾಗದ ಅಸಾಧ್ಯ ನೋವು, ಯಾತನೆ ಸ್ವಲ್ಪ ಸ್ವಲ್ಪವೇ ರಕ್ತಸ್ರಾವ …. ಗರ್ಭ ಚೀಲ ಹರಿದು ನೀರು ಹೊರ ಹೋಗುವಿಕೆ, ಅತಿ ಕಿರಿದಾದ ಯೋನಿ ದ್ವಾರದ ಮೂಲಕ ಎರಡುವರೆಯಿಂದ 3 ಕೆಜಿ ಇರಬಹುದಾದ ನವಜಾತ ಶಿಶು ಹೊರಬರುವಿಕೆ ನಂತರ ಸತ್ತೇ (ಗರ್ಭಚೀಲ) ಹೊರಕ್ಕೆ ಬೀಳುವುದು. ತದನಂತರ ಸಹಜ ಹೆರಿಗೆಯಿಂದ ಹರಿದ ಯೋನಿ ದ್ವಾರವನ್ನು ಸೂಚರ್ ಮೂಲಕ ಹೊಲಿಗೆ ಹಾಕುವುದು.ಅಬ್ಬಾ……ಒಂದೇ ಎರಡೇ ಇವೆಲ್ಲ ಪ್ರಕ್ರಿಯೆಗಳು ಮುಗಿಯುವ ವೇಳೆಗೆ ಆ ಹೆಣ್ಣು ಮಗಳಿಗೆ ಹೃದಯ ಬಾಯಿಗೆ ಬಂದಿರುತ್ತದೆ. ಮತ್ತೊಂದು ಮಗು ಬೇಡವೇ ಬೇಡ ಎಂಬಷ್ಟು ಘೋರ ಅನುಭವ ಅವಳಿಗಾಗುತ್ತದೆ. ಅವಳ ಆಕ್ರಂದನ ಮುಗಿಲು ಮುಟ್ಟುತ್ತದೆ.

ಅದರಲ್ಲೂ ಸಿಜೇರಿಯನ್ ಆದವರಿಗಂತೂ ಸಹಜ ಹೆರಿಗೆಗಿಂತ ದುಪ್ಪಟ್ಟು ನೋವು, ನರಕ ಯಾತನೆ. ಹೆರಿಗೆಯ ನಂತರ ಅನುಭವಿಸುವ ಕಿರಿಕಿರಿ ಮಗು ಹುಟ್ಟಿದ ತಕ್ಷಣ ಹಾಲೂಡಿಸುವ ಅನಿವಾರ್ಯತೆ…. ಎಲ್ಲಾ ಹೊಸದು. ಸಹಜ ಹೆರಿಗೆಯಲ್ಲಾದರೆ ಸುಮಾರು ಒಂದು ವಾರಕ್ಕೆಲ್ಲ ಚೇತರಿಸಿಕೊಳ್ಳಬಹುದು. ಆದರೆ ಸಿಸೇರಿಯನ್ ಆದವರು ಕನಿಷ್ಠ ಮೂರು ತಿಂಗಳವರೆಗಾದರೂ ವಿಶ್ರಾಂತಿ ತೆಗೆದುಕೊಳ್ಳಲೇಬೇಕು. ಶಸ್ತ್ರಚಿಕಿತ್ಸೆಯ ಮೂಲಕ ಮಗುವನ್ನು ಹೊರತೆಗೆಯ ಬೇಕಾಗಿರುವುದರಿಂದ ಕಿಬ್ಬೊಟ್ಟೆಯಲ್ಲಿ ಆದ ಗಾಯ ಅಷ್ಟು ಬೇಗನೆ ವಾಸಿಯಾಗುವುದಿಲ್ಲ. ಜೊತೆಗೆ ಬೆನ್ನು ನೋವು, ಸೊಂಟ ನೋವು ….. ಹೆಚ್ಚು ಹೊತ್ತು ಕುಳಿತುಕೊಳ್ಳಲು ಆಗದಿರುವುದು…. ಇದರ ಜೊತೆಗೆ ಕೆಲವು ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಕ್ಯಾಲ್ಸಿಯಂ ಕೊರತೆ ಉಂಟಾಗಿ ಕಾಲಿನ ಮೀನ ಖಂಡಗಳ ಸೆಳೆತ, ಸೆಡೆತ ಉಂಟಾಗುತ್ತದೆ. ಆದರೂ ಯಾರಲ್ಲೂ ಇವನ್ನೆಲ್ಲ ಹೇಳಿಕೊಳ್ಳುವಂತಿಲ್ಲ. ರಾತ್ರಿ ಪೂರ ಎದ್ದಿದ್ದು ಕಾಟ ಕೊಡುವ ಹಾಗೂ ಹಗಲೆಲ್ಲ ನಿದ್ರಿಸುವ ಮಗು ಎಲ್ಲಾ ಅಯೋಮಯ. ಜೀವನವೇ ಸಾಕೆನಿಸುವಷ್ಟು ವೈರಾಗ್ಯ ಮೂಡಿಬಿಡುತ್ತದೆ. ಇವೆಲ್ಲ ನೆನಪಿಸಿಕೊಂಡರೆ ಆ ದೇವರು ನೋವನ್ನೆಲ್ಲ ಸಹಿಸಿಕೊಳ್ಳಲೆಂದೆ ಹೆಣ್ಣನ್ನು ಸೃಷ್ಟಿಸಿದ್ದಾನೆ ಎಂಬ ಅನುಮಾನ ಕಾಡದಿರದು. ಇಷ್ಟೆಲ್ಲ ನೋವು, ಯಾತನೆ ಅನುಭವಿಸಿ ಮಗುವಿಗೆ ಜನ್ಮ ಕೊಟ್ಟ ಜನ್ಮ ಕೊಟ್ಟ ಮರುಕ್ಷಣವೇ ಮುದ್ದಾದ ಮಗುವಿನ ಮುಖ ನೋಡಿದೊಡನೆ ಅದೆಂತಹ ನೋವೇ ಆದರೂ ಕ್ಷಣದಲ್ಲಿ ಮಾಯ. ಅಂತಹ ಧೀಃಶಕ್ತಿಯ ಪ್ರತೀಕ ಹೆಣ್ಣು. ಜಗದ ಸೃಷ್ಟಿಯ ಕಣ್ಣು.

ಒಂದು ಸಣ್ಣ ಮುಳ್ಳು ಚುಚ್ಚಿದರೂ ನೋವು ಸಹಿಸಲಾಗದ ನಾನು ಅಂದು ನಡೆದ ಅಪಘಾತದಿಂದ ಆತಂಕಕ್ಕೆ ಒಳಗಾಗಿ ಅಕ್ಷರಶಃ ಕಂಗಾಲಾಗಿದ್ದೆ. ನಾನಾಗ ಏಳು ತಿಂಗಳ ತುಂಬು ಗರ್ಭಿಣಿ. ಚೊಚ್ಚಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ನಾನು ನಮ್ಮವರು ಇದ್ದೆವು. ಮದುವೆಯಾದ ಐದಾರು ತಿಂಗಳಲ್ಲೇ ದೊರೆತ ಶಿಕ್ಷಕ ವೃತ್ತಿಯನ್ನು ಗೌರಿಬಿದನೂರಿನಿಂದ 25 ಕಿಲೋ ಮೀಟರ್ ದೂರ ಇರುವ ಹಳ್ಳಿಯಲ್ಲಿ ಪ್ರಾರಂಭಿಸಿದ್ದೆ. ಪ್ರತಿನಿತ್ಯ ಅಷ್ಟು ದೂರದ ಪ್ರಯಾಣ ಮಾಡುತ್ತಿದ್ದರಿಂದ ಬಸ್ಸಿನಲ್ಲಿನ ಓಡಾಟ, ಕುಲುಕಾಟದಿಂದ ಗರ್ಭ ನಿಲ್ಲುತ್ತಿರಲಿಲ್ಲ. ಒಂದೆರಡು ಬಾರಿ ಅಬಾರ್ಷನ್ ಕೂಡ ಆಯಿತು. ಕೊನೆಗೆ ಮಹಿಳಾ ವೈದ್ಯರಲ್ಲಿ ತೋರಿಸಲಾಗಿ ಅವರು ದುಬಾರಿ ಬೆಲೆಯ ಇಂಜೆಕ್ಷನ್ ಮೂಲಕ ಗರ್ಭ ನಿಲ್ಲುವಂತೆ ಮಾಡಿದರು.

ಕೊನೆಗೂ ಆರೋಗ್ಯವಂತ ಮಗುವನ್ನು ಹೊತ್ತ ಗರ್ಭಿಣಿಯಾಗಿ ತಿಂಗಳಲ್ಲಿ ಎರಡು ಮೂರು ಬಾರಿ ಹಾಸ್ಪಿಟಲ್ ಗೆ ಹೋಗಿ ಚೆಕ್ ಅಪ್ ಮಾಡಿಸಿಕೊಳ್ಳುತ್ತಾ ಅಪ್ಡೇಟ್ಸ್ ತೆಗೆದುಕೊಳ್ಳುತ್ತಿದ್ದೆ. ಎಲ್ಲವೂ ನಾರ್ಮಲ್ ಇತ್ತು. ಮಗುವಿನ ಬೆಳವಣಿಗೆ ಕೂಡ ಚೆನ್ನಾಗಿದೆ ಎಂದು ಡಾಕ್ಟರ್ ಹೇಳಿದ್ದರು. ಗರ್ಭದಲ್ಲಿ ಮಗುವಿನ ಚಲನವಲನಗಳೆಲ್ಲವೂ ಅರಿವಿಗೆ ಬರುತ್ತಿದ್ದವು. ಮಗು ಕೈ ಕಾಲು ಆಡಿಸುವುದು, ಒದೆಯುವುದು ಮಾಡಿದಾಗ ಮೈ ಮನವೆಲ್ಲ ಪುಳಕಗೊಳ್ಳುತ್ತಿತ್ತು. ಅದೊಂದು ಅದ್ಭುತವಾದ ಅನುಭವ. ಹೇಳಿಕೊಳ್ಳಲಾಗದ ಅನೂಹ್ಯ ಅನುಬಂಧ. ಇನ್ನೇನು ಎರಡು ಮೂರು ತಿಂಗಳಲ್ಲಿ ನನ್ನ ಗರ್ಭದಲ್ಲಿರುವ ಮಗುವು ಮಡಿಲಲ್ಲಿ ಮಲಗಿ ನಗೆ ಬೀರುತ್ತದೆ ಎಂಬ ಸಂಭ್ರಮದಲ್ಲಿ ನಾನು ಮತ್ತು ನಮ್ಮವರೆಲ್ಲ ಇದ್ದೆವು .

ಆರು ತಿಂಗಳು ತುಂಬಿ ಏಳರಲ್ಲಿ ಬಿದ್ದಿತ್ತು. ತಿಂಗಳ ಮೊದಲ ಗುರುವಾರ ಹಾಸ್ಪಿಟಲ್ ಗೆ ಚೆಕ್ ಅಪ್ ಗಾಗಿ ಹೋಗಬೇಕೆಂದು ನಮ್ಮವರಿಗೆ ಹೇಳಿದ್ದೆ. ಅದರಂತೆ ಅವರು ಕೆಲಸಕ್ಕೆ ರಜೆ ಹಾಕಿ ನನ್ನನ್ನು ಆಸ್ಪತ್ರೆಗೆ ಕರೆದೊಯ್ಯುವ ತಯಾರಿಯಲ್ಲಿದ್ದರು. ಆಗಿನ ಕಾಲದಲ್ಲಿ ನಮ್ಮ ಹಳ್ಳಿಯಿಂದ ಗೌರಿಬಿದನೂರಿಗೆ ಬರಲು ಯಾವುದೇ ವಾಹನದ ಸೌಕರ್ಯ ಇರಲಿಲ್ಲ. ಈಗಲೂ ಬಸ್ ಸೌಕರ್ಯ ಇಲ್ಲ. ಕೇವಲ ಆಟೋಗಳು ಮಾತ್ರ ಓಡಾಡುತ್ತವೆ. ಆಗಿನ ಕಾಲದ ದ್ವಿಚಕ್ರ ವಾಹನ ಟಿವಿಎಸ್ ನಲ್ಲಿ ನನ್ನನ್ನು ಕೂಡಿಸಿಕೊಂಡು ಆಸ್ಪತ್ರೆಗೆ ಕರೆದೊಯ್ದರು. ಮಾರ್ಗ ಮಧ್ಯದಲ್ಲಿ ಅದೆಲ್ಲಿಂದ ಬಂತೋ ಬಿರುಗಾಳಿ. ಸುಯ್ಯನೆ ಬೀಸತೊಡಗಿತು. ಗಾಳಿಯ ರಬಸಕ್ಕೆ ನನ್ನ ಸೀರೆಯ ಸೆರಗು ಮತ್ತು ನೆರಿಗೆ ಚಕ್ರಕ್ಕೆ ಸುತ್ತಿಕೊಂಡು ಗಾಡಿ ಮುಂದೆ ಚಲಿಸಲಾಗದೆ ನಿಂತಿತು. ಆ ರಭಸಕ್ಕೆ ನಾನು ಗಾಡಿಯಿಂದ ಕೆಳಕ್ಕುರುಳಿ ರಸ್ತೆಯಲ್ಲಿ ಮೂರು ಸುತ್ತು ಸುತ್ತಿ ಬಿದ್ದಿದ್ದೆ. ಏಳು ತಿಂಗಳು ತುಂಬಿದ ಗರ್ಭಿಣಿ ಕೆಳಕ್ಕುರುಳಿ ಬಿದ್ದಾಗ ಅನುಭವಿಸಬಹುದಾದ ನೋವನ್ನು ಊಹಿಸಿಕೊಳ್ಳಿ. ಆಗ ನಮ್ಮವರು ತಡ ಮಾಡದೆ ಗಾಡಿಯನ್ನು ಪಕ್ಕಕ್ಕೆ ನಿಲ್ಲಿಸಿ, ನನ್ನನ್ನು ಮಗುವಿನಂತೆ ಎತ್ತಿಕೊಂಡು ಅಲ್ಲಿಯೇ ಸಮೀಪದಲ್ಲಿದ್ದ ಪ್ರವಾಸಿ ಮಂದಿರಕ್ಕೆ ಹೋಗಿ ಅಲ್ಲಿ ಒಂದು ಕೊಠಡಿಯಲ್ಲಿ ಹಾಸಿಗೆಯ ಮೇಲೆ ಮಲಗಿಸಿದರು. ಘಟನೆ ನಡೆದ ವಿಷಯ ತಿಳಿದು ಸಮೀಪದಲ್ಲಿ ವಾಸವಿದ್ದ ಹೆಣ್ಣು ಮಕ್ಕಳೆಲ್ಲ ನನ್ನನ್ನು ನೋಡಲು ಬಂದಿದ್ದರು. ಅದರಲ್ಲಿ ಒಬ್ಬರು ತಕ್ಷಣವೇ ಮನೆಗೆ ಹೋಗಿ ಒಂದು ಸೀರೆಯನ್ನು ತಂದು ನನಗೆ ಉಡಿಸಿದರು. ನನ್ನ ಮರ್ಯಾದೆ ಕಾಪಾಡಿದ ಆ ಮಹಾತಾಯಿಗೆ ಅದೆಷ್ಟು ನಮಿಸಿದರು ಸಾಲದು. ಆ ಪರಮಾತ್ಮನೇ ಈ ರೂಪದಲ್ಲಿ ಬಂದು ನನ್ನನ್ನು ಕಾಪಾಡಿದನೇನೋ ಅನಿಸಿತು.

ಹೊಟ್ಟೆಗೆ ಪೆಟ್ಟಾಗಿದ್ದುದರಿಂದ ರಕ್ತಸ್ರಾವ ಪ್ರಾರಂಭವಾಗಿತ್ತು. ನನಗಂತೂ ಗಾಬರಿಗೆ ಮಾತೇ ಹೊರಡುತ್ತಿರಲಿಲ್ಲ. ಏನಾಗುತ್ತಿದೆ ಎಂಬುದನ್ನು ತಿಳಿಯದಷ್ಟು ಅಯೋಮಯ. ತಲೆ ಸುತ್ತಿ ಬಂದು ಕಣ್ಣು ಮಂಜಾಗುತ್ತಿತ್ತು. ಅಪಾಯದ ಸಂದರ್ಭ ಊಹಿಸಿದ ನಮ್ಮವರು ಕೂಡಲೇ ಆಟೋವನ್ನು ಕರೆತಂದು ನಗರದ ಆಸ್ಪತ್ರೆಗೆ ನನ್ನನ್ನು ಸಾಗಿಸಿದರು. ಆಸ್ಪತ್ರೆಯಲ್ಲಿ ಕೂಡಲೇ ಎಮರ್ಜೆನ್ಸಿ ವಾರ್ಡ್ನಲ್ಲಿ ಅಡ್ಮಿಟ್ ಮಾಡಿಕೊಂಡು ಚಿಕಿತ್ಸೆ ನೀಡಿದರು.

ನೇರವಾಗಿ ಗರ್ಭದ ಮೇಲೆ ಹೆಚ್ಚಿನ ಒತ್ತಡ ಬಿದ್ದಿದ್ದರಿಂದ ಗರ್ಭದಲ್ಲಿನ ಮಗುವಿಗೂ ಪೆಟ್ಟಾಗಿ ರಕ್ತಸ್ರಾವ ಉಂಟಾಗಿತ್ತು. ಕೂಡಲೇ ಡೆಲಿವರಿ ಮಾಡಿಸಬೇಕೆಂದು ಇಲ್ಲವಾದರೆ ತಾಯಿ ಜೀವಕ್ಕೆ ಅಪಾಯವೆಂದು ವೈದ್ಯರು ಹೇಳಿದರು. ವೈದ್ಯರು ಮಗು ಉಳಿಯುತ್ತದೆ ಎಂಬ ಗ್ಯಾರಂಟಿ ಕೊಡಲಿಲ್ಲ. ಅಲ್ಲದೆ ಸಹಜ ಹೆರಿಗೆಯಲ್ಲೇ ಮಗುವನ್ನು ಹೊರತೆಗೆಯಬೇಕೆಂದು ಹೇಳಿದರು. ಏಕೆಂದರೆ ಮಗು ಸತ್ತು ಹುಟ್ಟುವ ಸಂಭವ ಹೆಚ್ಚಾಗಿತ್ತು. ಈ ರೀತಿ ಇದ್ದಾಗ ವಿನಾಕಾರಣ ಯಾವ ವೈದ್ಯರು ಸಿಸೇರಿಯನ್ ಮಾಡುವುದಿಲ್ಲ. ಬಲವಂತವಾಗಿ ಹೆರಿಗೆ ನೋವು ಬರುವಂತೆ ಇಂಜಕ್ಷನ್ ಕೊಟ್ಟರು ಮೂರು ದಿನಗಳ ನಂತರ ಹೆರಿಗೆ ನೋವು ಶುರುವಾಯಿತು. ಆ ನೋವನ್ನು ಅನುಭವಿಸುತ್ತಾ ನಾನು ಸತ್ತು ಮತ್ತೆ ಹುಟ್ಟಿದೆನೇನೋ ಎನ್ನಿಸಿತು. ನವಜಾತ ಶಿಶುವೊಂದರ ನಿರೀಕ್ಷೆಯಲ್ಲಿದ್ದ ನನಗೆ ಏಳು ತಿಂಗಳ ಸತ್ತ ಭ್ರೂಣ ನಿರಾಸೆ ತರಿಸಿತ್ತು. ಸತ್ತು ಹುಟ್ಟಿದ ಮಗುವಿಗಾಗಿ ಅಷ್ಟೆಲ್ಲ ನೋವು ಅನುಭವಿಸಬೇಕಾಯಿತು. ಇನ್ನು ಪೆಟ್ಟು ತಿಂದ ಆ ಮಗು ಅದೆಷ್ಟು ನೋವು ಅನುಭವಿಸಿತ್ತೋ. ಮತ್ತೆ ಮಗು ಬೇಡವೇ ಬೇಡ ಎಂಬ ಕಠಿಣ ತೀರ್ಮಾನಕ್ಕೆ ಬಂದು ಬಿಟ್ಟಿದ್ದೆ. ಆದರೆ ಒಂದು ವರ್ಷದ ನಂತರ ಮತ್ತೊಂದು ಮಗುವಿನ ತಾಯಿಯಾಗಿದ್ದೆ. ಮೊಗದಲ್ಲಿ ಮಗು ಮಂದಹಾಸ ಮೂಡಿಸಿತ್ತು. ಮುದ್ದಾಗಿ ಆರೋಗ್ಯವಾಗಿತ್ತು. ಈ ಬಾರಿ ಸಿಜೇರಿಯನ್ ಶಸ್ತ್ರಚಿಕಿತ್ಸೆಯ ಅನುಭವ ನನ್ನದಾಗಿತ್ತು. ಅಂತೂ ಇಂತೂ ಕರುಳಿನ ಕುಡಿ ಚಿಗರೊಡೆದು ನಕ್ಕಾಗ ಎಂತಹ ನೋವನ್ನಾದರೂ ತಾಯಿ ಮರೆಯುತ್ತಾಳೆ ಎಂಬ ದೈವೀ ಸ್ವರೂಪಿ ಮಾತೃ ಮೂರ್ತಿ ಹೆಣ್ಣು ಎಂಬುದು ಸಾಬೀತಾಯಿತು.

-ಸರ್ವಮಂಗಳ ಜಯರಾಂ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x