ಕೆಲವು ಪುಸ್ತಕಗಳು ಓದಿದ ನಂತರ ಮನಸ್ಸಿನಿಂದ ಅಳಿಸಿ ಹೋಗುವುದಿಲ್ಲ. ಅವು ನಮ್ಮ ತಿಳಿವಳಿಕೆಯ/ ಸಂವೇದನೆಯ ಭಾಗವಾಗಿಯೇ ಉಳಿದುಕೊಳ್ಳುತ್ತವೆ. ಅಂತಹ, ಓದಿದ ನಂತರವೂ ಕಾಡುವ ಗುಣವುಳ್ಳ ಪುಸ್ತಕ ʼಜೋನ್ಪುರಿ ಖಯಾಲ್”
ಅಕ್ಷತಾ ಈ ಪುಸ್ತಕವನ್ನು ಕಳಿಸಿದಾಗ ನಾನೇನೂ ಅಂತಹ ಆಸಕ್ತಿ ತೋರಲಿಲ್ಲ; ಅಕೈ ಪದ್ಮಸಾಲಿ, ಎ ರೇವತಿ ಆತ್ಮಕತೆಗಳನ್ನೂ ಓದಲಾಗಿರಲಿಲ್ಲ. ಇದನ್ನೂ ನಿಧಾನವಾಗಿ ಓದಿದರಾಯಿತೆಂದು, ಒಂದೆರಡು ಪುಟಗಳನ್ನು ತಿರುವಿ ಹಾಕಿದವನಿಗೆ ಕೆಳಗಿಡಲು ಸಾಧ್ಯವಾಗಲೇ ಇಲ್ಲ. ಆ ಮಟ್ಟಿಗೆ ರೂಮಿ ಹರೀಶರ ಬದುಕಿನ ಪುಟಗಳು ಆವರಿಸಿಕೊಂಡು ಬಿಟ್ಟವು.
ʼಜೋನ್ಪುರಿ ಖಯಾಲ್ʼ ರೂಮಿ ಹರೀಶ್ ಬದುಕಿನ ಪುಟಗಳು ಎಂದು ಹೇಳಲಾಗಿದ್ದರೂ ಅವರೇ ಹೇಳುವಂತೆ ಇದು ಅವರೊಬ್ಬರ ಆತ್ಮಕತೆಯಲ್ಲ. ನಿಜವಾಗಿ ನೋಡಿದರೆ ಒಬ್ಬನ ಬದುಕು ಅವನೊಬ್ಬನದೇ ಆಗಿರುವುದಿಲ್ಲ. ಬುದ್ಧ ʼಅನಾತ್ಮʼ ಎನ್ನುವಂತೆ ವೈಯಕ್ತಿಕ ಎನ್ನುವ ಬದುಕು ಕೂಡಾ ಒಳ, ಹೊರಗಿನ ಹಲವು ಅಂಶಗಳನ್ನು ಸೇರಿಕೊಂಡಿರುತ್ತದೆ. ಆದರೆ ಇದನ್ನು ಹೇಳಿಕೊಳ್ಳಲು ರೂಮಿ ಹರೀಶರಂತೆ ಎಲ್ಲರಲ್ಲೊಂದಾಗುವ ಗುಣ ಬೇಕು.
ಈ ಗುಣದಿಂದಲೇ ರೂಮಿ ಹರೀಶ್ ದಾದಾಪೀರ್ ಜೈಮನ್‌ಗೆ, ʼ ನನ್ನ ಎಂಬ ಕತೆಗಳೆಲ್ಲಾ ನನ್ನ ಸ್ನೇಹಿತರ ಜೊತೆಗೇ ಇರುವುದುʼ ಎಂದು ನಿರಾಕರಿಸಿ ಬಿಡುತ್ತಾರೆ. ದಾದಾ ಜಗ್ಗುವುದಿಲ್ಲ. ʼಅದಿನ್ನೂ ಬೆಟರ್, ನೀವು ಎನ್ನುವ ನೆವದಲ್ಲಿ ಎಷ್ಟೆಲ್ಲ ಜನರ ಬಗ್ಗೆ ಮಾತನಾಡಿ ಅವರ ಜೀವನದ ಬಗ್ಗೆಯೂ ತಿಳಿದುಕೊಳ್ಳಬಹುದುʼ ಎಂದು ಒತ್ತಾಯ ಮಾಡಿದ್ದರಿಂದ ರೂಮಿ ಹರೀಶ್ ಮತ್ತು ಅವರ ಜೊತೆಗಾರರ ಕಥನಗಳು ಬೆಳಕು ಕಂಡಿವೆ.
LGBTQ+ ಸಮುದಾಯದ ಬಗ್ಗೆ ಇತ್ತೀಚೆಗೆ ಮಿದು ಧೋರಣೆ ಮೂಡುತ್ತಿದ್ದರೂ ಬಹಳಷ್ಟು ತಪ್ಪು ಕಲ್ಪನೆಗಳೂ ಇವೆ. ಟ್ರಾನ್ಸ್‌ಜೆಂಡರ್, ಕ್ವಿಯರ್ ಎಲ್ಲವೂ ಒಂದೇ ಅಲ್ಲವೆಂದು, ʼಅವಳು ಅವನಲ್ಲʼ ವಾಗಿರುವಂತೆ ʼ ಅವನು ಅವಳಲ್ಲʼ ವಾಗಿಯೂ ಇರುತ್ತಾರೆಂದು ತಿಳಿದವರು ಕಡಿಮೆ. ಪ್ರಕೃತಿದತ್ತವಾದ ಟ್ರಾನ್ಸ್ ಜೆಂಡರ್ ಸಮುದಾಯಕ್ಕೆ ಲಿಂಗಾಧಾರಿತವಾಗಿ ಮೂರನೆಯ ಸ್ಥಾನವನ್ನು ಸಮಾಜ ಕೊಟ್ಟಿದೆ. ಹಾಗೆ ನೋಡಿದರೆ ಅವರನ್ನು ಪ್ರಥಮ ಲಿಂಗಿಗಳೆಂದು ಕರೆಯಬೇಕು. ವೈಜ್ಞಾನಿಕವಾಗಿಯೂ ಅದನ್ನು ಸಾಧಿಸಬಹುದು.
ವಿಚಿತ್ರವೆಂದರೆ ಟ್ರಾನ್ಸ್ ವ್ಯಕ್ತಿಗಳಿಗೂ ಈ ಜಾತಿ ಎನ್ನುವುದು ಪ್ರಿವಿಲೇಜ್ ಕೊಟ್ಟು ಬಿಡುತ್ತದೆ. ಗೇ, ಲೆಸ್ಬಿಯನ್, ಟ್ರಾನ್ಸ್ ಅನ್ನಿಸಿಕೊಂಡ ಅನೇಕರು ಪ್ರಿವಿಲೇಜ್‌ಗಳನ್ನು ಬಳಸಿಕೊಳ್ಳುತ್ತಿರುವುದನ್ನು ನಾವು ಕಂಡಿದ್ದೇವೆ. ರೂಮಿ ಹರೀಶ್‌ಗೆ ಈ ಬಗ್ಗೆ ಸ್ಪಷ್ಟತೆ ಇದೆ. ʼನಾನು ತುಂಬಾ ಪ್ರಿವಿಲೇಜಡ್, ನನ್ನಂತವರು ಕಥೆ ಹೇಳಿ ಮೆರೆದರೆ ಅದಕ್ಕಿಂತ ದುರಂತ ಇಲ್ಲ. ಅದಕ್ಕಿಂತ ದೊಡ್ಡ ಅಸೂಕ್ಷ್ಮತೆ ಇರುವುದಿಲ್ಲʼ ಎನ್ನುತ್ತಾರೆ. ಸಮಾಜ ಹೇಳಿದಂತೆ ಬದುಕದೆ ಇರುವ ತೀರ್ಮಾನ ಮಾಡಿದಾಗಲೆ ನೀನು ಎಲ್ಲ ಪ್ರಿವಿಲೇಜ್‌ಗಳನ್ನು ಕಡಿದುಕೊಂಡೆ ಎಂದು ಕನ್ವಿನ್ಸ್ ಮಾಡಿದಾಗ, ತನ್ನ ಕಥೆ ಮಾತ್ರ ಅಲ್ಲದೆ ತನ್ನ ಜೊತೆ ಜೀವನ ಹಂಚಿಕೊಂಡವರ ಕಥನವನ್ನೂ ಹೇಳಲು ರೂಮಿ ಹರೀಶ್ ಒಪ್ಪಿಕೊಳ್ಳುತ್ತಾರೆ.
ತನ್ನಿಷ್ಟದಂತೆ ತಾನು ಬದುಕಲು ಆರಂಭಿಸಿದ ಬಳಿಕ ಸಹಜವಾಗಿಯೇ ರೂಮಿ ಹರೀಶ್ ಕುಟುಂಬದ ಬೆಂಬಲ ಕಳೆದುಕೊಳ್ಳುತ್ತಾರೆ. ಮೊದಲಿಂದಲೇ ತಾಯಿ- ಮಗನ ನಡುವೆ ಪ್ರೀತಿ-ದ್ವೇಷಗಳ ವಿಚಿತ್ರ ಸಂಬಂಧವಿರುತ್ತದೆ. ತನ್ನ ಮತ್ತು ಖ್ಯಾತ ಶಿಲ್ಪ ಕಲಾವಿದೆಯಾದ ತಾಯಿಯ ಸಂಬಂಧದ ಬಗ್ಗೆ ರೂಮಿ ಹರೀಶ್ ಮುಕ್ತವಾಗಿ ಹೇಳಿಕೊಳ್ಳುತ್ತಾರೆ. ತಾಯಿ ಅವರ ಜೀವನದಲ್ಲಿ ಬರುವ ವ್ಯಕ್ತಿಗಳಲ್ಲಿ ಮುಖ್ಯವಾದವರು. ಅವರು ತೀರಿಹೋದಾಗ ಮಡು ಗಟ್ಟಿದ ದುಃಖದಲ್ಲಿ ರೂಮಿ ಹರೀಶ್‌ಗೆ ವರ್ಷವಿಡೀ ಅಳುವೇ ಬರುವುದಿಲ್ಲ! ರೂಮಿ ಹರೀಶ್ ಜೊತೆಗಾರರಾದ ಟ್ರಾನ್ಸ್ ವುಮೆನ್ ಫೆಮಿಲಾ, ಕಾಜಲ್ ಮುಂತಾದವರನ್ನು ಇಷ್ಟ ಪಡುವ ತಾಯಿ, ಸುನಿಲ್‌ನನ್ನು ಲವ್ ಮಾಡುತ್ತೇನೆ ಎಂದಾಗ ತಕರಾರು ಮಾಡಿದರೂ ಕೊನೆಗೆ ಅವನನ್ನೇ ಹಚ್ಚಿಕೊಂಡು ಬಿಡುತ್ತಾರೆ.
ಅಪ್ಪನ ಬಗ್ಗೆ ಕೂಡಾ ನಿರ್ದುಷ್ಟವಾಗಿ ಹೇಳುವ ರೂಮಿ ಹರೀಶ್ ಅವರು ʼಬಡ ಬ್ರಾಹ್ಮಣನ ಇಮೇಜಿಗೆ ಸರಿಯಾಗಿ ಕೂರುವಂತಿದ್ದರುʼ ಎನ್ನುತ್ತಾರೆ. ಅವರು ಮಾನವೀಯತೆ ತುಂಬಿದ ಮನುಷ್ಯನೂ ಆಗಿದ್ದರೆನ್ನುವುದಕ್ಕೆ ಕಾರಣಗಳನ್ನು ಕೊಡುತ್ತಾರೆ. ಬ್ರಾಹ್ಮಣಿಕೆಯ ಬಗೆಗಿನ ಅಪ್ಪನ ವ್ಯಾಖ್ಯಾನ ಬೆರಗುಪಡಿಸುವಂತದ್ದು: “ಬ್ರಾಹ್ಮಣಿಕೆಗೆ ಎರಡು ಮುಖ ಇತ್ತು, ಒಂದು ಆರ್ ಎಸ್ ಎಸ್ ಪ್ರಣೀತವಾದದ್ದು, ಎರಡನೆಯದು ಯಾವುದೇ ಬ್ರಿಟಿಷ್ ವಿಷಯಗಳನ್ನು, ಅವರ ಲಿಬರಲಿಸಮ್ಮನ್ನ ವಿರೋಧಿಸಲ್ಲ, ಆದರೆ ಒಳಗಿನ ಜಾತಿ ವ್ಯವಸ್ಥೆಯನ್ನು ಹಾಗೆ ಮುಂದುವರಿಸಿಕೊಂಡು ಹೋಗೋದು.” ಮನನ ಯೋಗ್ಯವಾದ ಮಾತುಗಳು!
ಗೌರವದಿಂದಲೇ ಸಂಗೀತದ ಗುರು ರಾಮರಾವ್ ನಾಯಕರ ಹಾಸ್ಯ ಪ್ರಜ್ಞೆ, ಹೊಟ್ಟೆ ಉರಿಯನ್ನು ಹೇಳುವ ರೂಮಿ ಹರೀಶ್ ಮಾತುಗಳಲ್ಲಿ ನಿಟ್ಟೂರು ಶ್ರೀನಿವಾಸ ರಾವ್, ದೊರೈಸ್ವಾಮಿ ಅಯ್ಯಂಗಾರ್, ಉಪರಾ಼ಷ್ಟ್ರಪತಿ ಬಿ ಡಿ ಜತ್ತಿ ಮುಂತಾದ ದಿಗ್ಗಜರನ್ನು ಮನೆಗೆ ಕರೆಸಿಕೊಳ್ಳುವ ಮಟ್ಟಿನ ಕಲಾವಿದ ವಾದಿರಾಜ ಮಾಮರ ಬಗೆಗೆ ವಾತ್ಸಲ್ಯವಿದೆ.
ರೂಮಿ ಹರೀಶ್ ಮತ್ತು ಅವರ ಒಡನಾಡಿಗಳಲ್ಲಿ ಪ್ರೀತಿಯ ಹುಡುಕಾಟವನ್ನು ಕಾಣಬಹುದು. ʼ ಕಾಲ್ ಮಿ ಬೈ ಯುವರ್ ನೇಮ್ʼ ಸಿನಿಮಾದ ʼಗೇʼ ಪ್ರೀತಿ ನನ್ನಲ್ಲಿ ಬೆರಗು ಹುಟ್ಟಿಸಿತ್ತು. ಪ್ರೀತಿ ಎನ್ನುವುದು ಎಲ್ಲರ ಜೀವದ್ರವ್ಯ ಎನ್ನುವುದು ಈ ಪುಸ್ತಕದ ಓದಿನಲ್ಲಿ ಮನವರಿಕೆಯಾಗುತ್ತದೆ. ಎಲ್ಲರಿಗಿಂತ ಹೆಚ್ಚು ನೋವುಣ್ಣುವ ಟ್ರಾನ್ಸ್ ಸಮುದಾಯದವರಿಗೆ ಎಲ್ಲರಿಗಿಂತ ಹೆಚ್ಚಿನ ಪ್ರೀತಿಯ ಅಗತ್ಯವೂ ಇದೆ.
ಫೆಮಿಲಾ, ಕೋಕಿಲಾ, ಸುನಿಲ್ ಎಲ್ಲರೂ ದೇಹದ ಪ್ರೀತಿಯನ್ನು ದಾಟಿ ಆತ್ಮದ ದಂಡೆಯನ್ನು ಮುಟ್ಟಲು ತವಕಿಸುತ್ತಾರೆ. ಆದರೆ ಸಮಾಜ ಅವರನ್ನು ನಡೆಸಿಕೊಳ್ಳುವ ರೀತಿ, ಪೊಲೀಸ್ ದೌರ್ಜನ್ಯಗಳು, ಏಕಾಂಗಿತನ ಖಿನ್ನತೆಗೆ ದೂಡುತ್ತವೆ; ಕೆಲವರು ಸುಯಿಸೈಡಲ್ ಆಗಿ ಬಿಡುತ್ತಾರೆ.
ರೂಮಿ ಹರೀಶ್ ಬದುಕಿನ ಪುಟಗಳಲ್ಲಿ ಹಲವು ವ್ಯಕ್ತಿಗಳು ಬಂದು ಹೋಗುತ್ತಾರೆ. ಗೌರಿ ಲಂಕೇಶ್ ಕೂಡಾ ಅವರಲ್ಲಿ ಒಬ್ಬರು. ಅವರ ಬಗ್ಗೆ ಬರೆದಿದ್ದನ್ನು ಓದಿ ಅವರ ಮೇಲಿನ ಗೌರವ ಇನ್ನಷ್ಟು ಹೆಚ್ಚಾಯಿತು. ಗೌರಿ ಲಂಕೇಶ್‌ಗೆ ರೂಮಿ ಹರೀಶ್ ಒಮ್ಮೆ ಕೇಳುತ್ತಾರೆ. ʼ ನಿಮಗೆಲ್ಲಾ ರೋಹಿತ್ ವೇಮುಲ ಮತ್ತೆ ಕನಯ್ಯಾ ಮಾತ್ರ ಮಕ್ಕಳಂತೆ ಕಾಣುತ್ತಾರೆ. ನಾವೆಲ್ಲಾ ನಿಮಗೆ ಏನೂ ಅಲ್ಲ, ಅಲ್ಲವಾ?ʼ ಅದಕ್ಕೆ ಗೌರಿ ಲಂಕೇಶ್ ʼ ಅಯ್ಯೋ ನೀನೂ ನನ್ನ ಮಗನೇ ಕಣೋ!ʼ ಎಂದು ಪ್ರೀತಿಯಿಂದ ಹೇಳುತ್ತಾರೆ. ಎಂತಹ ಅಂತಃಕರಣ!
ರೂಮಿ ಹರೀಶ್ ಬದುಕಿನ ಪುಟಗಳು ನಾನಿಷ್ಟು ಕಷ್ಟ ಅನುಭವಿಸಿದೆ, ನಾನಷ್ಟು ಹಿಂಸೆಯನ್ನು ಅನುಭವಿಸಿದೆ ಎಂದು, ʼ ವಿಕ್ಟಿಮ್ ಹುಡ್ʼ ನ ಉತ್ಪ್ರೇಕ್ಷೆ ಮಾಡುವುದಿಲ್ಲ. ತಾನು ಹ್ಯಾಂಡಲ್ ಮಾಡಿರೋ ಕೇಸುಗಳು ತನ್ನ ಕಷ್ಟಗಳಿಗಿಂತ ಹೆಚ್ಚಿನವು ಎನ್ನುವ ಅರಿವು ಅವರಿಗಿದೆ. ತನ್ನ ಸಮುದಾಯದವರ ಘನತೆಗೆ ಕೆಲಸ ಮಾಡುವುದರಲ್ಲಿ ತೃಪ್ತಿ ಕಾಣುತ್ತಾ ಸಂಗೀತಗಾರ, ಚಿತ್ರ ಕಲಾವಿದ, ಕವಿ, ಹೋರಾಟಗಾರ, ಅಂಕಣಕಾರ ಹೀಗೆ ಏನೇನೋ ಆಗಿ ತನ್ನ ಆವಾಜನ್ನು, ತನ್ನ ಸಂಗೀತವನ್ನು, ತನ್ನ ಪ್ರೀತಿಯನ್ನು ಹುಡುಕುವ ನಿರಂತರ ಅನ್ವೇಷಿಯನ್ನು ನಾವು ಕಾಣುತ್ತೇವೆ.
ʼಜೋನ್ಪುರಿ ಖಯಾಲ್ʼ ಆಗು ಮಾಡಲು ಕತೆಗಾರ ದಾದಾಪೀರ್ ಜೈಮನ್ ಬಹಳ ಶ್ರಮ ಪಟ್ಟಿದ್ದಾರೆ. ಅವರ ಮನೆಯವರಲ್ಲೊಬ್ಬನಾಗಿ ಅವರ ಅಂತರಂಗಕ್ಕೆ. ಲಗ್ಗೆ ಇಡದಿದ್ದರೆ ಈ ಅನುಭವಗಳು ಬರಹ ರೂಪದಲ್ಲಿ ಬರುತ್ತಲೇ ಇರಲಿಲ್ಲ. ಇದು ರೂಢಿಯ ಆತ್ಮಕತೆಗಳಂತಿಲ್ಲ. ರೂಮಿ ಹರೀಶ್ ಧ್ವನಿಯನ್ನು ಹಿಡಿದಿಡುವುದರ ಜೊತೆಗೆ ಕವಿತೆ, ವಿಷುವಲ್ ಕೊಲಾಜ್ ಮತ್ತು ಸಂದರ್ಶನಗಳ ರೀತಿಯ ಬರಹಗಳೂ ಇವೆ. ರೂಮಿ ಹರೀಶ್ ರವರ ಅಗಾಧ ಅನ್ನಿಸುವ ಅನುಭವಗಳನ್ನು ದಾದಾಪೀರ್ ಜೈಮನ್ ಬೊಗಸೆಯಲ್ಲಿ ಕೊಟ್ಟಿದ್ದಾರೆ.
ಸಾವಿರಾರು ಪುಟಗಳ ಆತ್ಮಕತೆಗಳನ್ನು ಪ್ರಕಟಿಸುವುದು ʼಅಹರ್ನಿಶಿʼಯ ಜಾಯಮಾನವೂ ಅಲ್ಲ. ಸಾಂದ್ರವಾಗಿ ಅನುಭವವನ್ನು ಕಟ್ಟಿಕೊಡುವ ಆತ್ಮಕತೆಗಳೇ ಕುತೂಹಲ ಹುಟ್ಟಿಸಿ, ಹೆಚ್ಚು ಅರಿತುಕೊಳ್ಳಲು ಪ್ರೇರೇಪಿಸುತ್ತವೆ.
ʼಜೋನ್ಪುರಿ ಖಯಾಲ್ʼ ನನಗಂತೂ ಹೊಸ ಅನುಭವ ನೀಡಿದೆ. ಹರೀಶ್‌ರನ್ನು ಭೇಟಿ ಮಾಡುವ ಖಯಾಲ್ ಹುಟ್ಟಿದೆ. ಅವರ ಮನೆ ಇನ್ನಷ್ಟು ಪ್ರೀತಿಗೆ ತೆರೆದುಕೊಳ್ಳಲಿ, ಜೋನಪುರಿ ಖಯಾಲ್‌ನೊಂದಿಗೆ ಬೆಳದಿಂಗಳ ದಾರಿಯಲ್ಲಿ ಅವರು ನಡೆಯಲಿ ಎಂದು ಹಾರೈಸುವೆ.
-ಎಂ ನಾಗರಾಜ ಶೆಟ್ಟಿ
ಕೃತಿ: ಜೋನ್ಪುರಿ ಖಯಾಲ್ (ಆತ್ಮಕತೆ)
ನಿರೂಪಣೆ: ದಾದಾಪೀರ್ ಜೈಮನ್
ಪ್ರಕಾಶನ: ಅಹರ್ನಿಶಿ ಪುಸ್ತಕ
ಬೆಲೆ: ರೂ 165/-
ಪ್ರತಿಗಳಿಗಾಗಿ ಸಂಪರ್ಕಿಸಿ: 9449174662