ಅಮೇರಿಕಾದ ‘ಶ್ವೇತ ಪುಷ್ಪ’ ಎಮಿಲಿ ಡಿಕಿನ್ಸನ್: ಗೀತಾ ಕೆ ಆಚಾರ್ಯ

ಆಂಗ್ಲ ಕವಯಿತ್ರಿ ಎಮಿಲಿ ಬಗ್ಗೆ ಒಂದಿಷ್ಟು ಪರಿಚಯ.

19ನೇ ಶತಮಾನದ ಪ್ರಮುಖ ಕವಯಿತ್ರಿಗಳಲ್ಲಿ ಒಬ್ಬರು ಎಮಿಲಿ ಡಿಕಿನ್ಸನ್. ಅಮೇರಿಕಾದ ಕವಯಿತ್ರಿಯಾದ ಈಕೆಯ ಪೂರ್ಣ ಹೆಸರು ಎಮಿಲಿ ಎಲಿಜಬೆತ್ ಡಿಕಿನ್ಸನ್. 10 ಡಿಸೆಂಬರ್ 1830ರಲ್ಲಿ ಮ್ಯಾಸಚೂಸೆಟ್ಸ್‌ನ ಅಮ್ಹೆರ್ಸ್ಟ್‌ನಲ್ಲಿ ಜನನ. ತಂದೆ ಎಡ್ವರ್ಡ್ ಡಿಕಿನ್ಸನ್, ವಕೀಲರಾಗಿದ್ದವರು. ತಾಯಿ ಎಮಿಲಿ ನಾರ್ಕ್ರಾಸ್ ಡಿಕಿನ್ಸನ್. ಒಬ್ಬ ಸಹೋದರ ಮತ್ತು ಒಬ್ಬಾಕೆ ಸಹೋದರಿ ಎಮಿಲಿಗಿದ್ದರು. ಕವಯಿತ್ರಿ ಎಮಿಲಿ ‘Nun of Amherst’ಎಂದು ಕರೆಯಲ್ಪಡುತ್ತಿದ್ದರು. ಅವರು ನಿತ್ಯ ಶ್ವೇತವಸ್ತ್ರವನ್ನೇ ಧರಿಸಲು ಇಷ್ಟಪಡುತ್ತಿದ್ದರಂತೆ. ಬರಹದ ಹೊರತಾಗಿ ಎಮಿಲಿಯವರಿಗೆ ಆಪ್ತವಾಗಿದ್ದಿದ್ದು ತೋಟಗಾರಿಕೆ. ಅವರು ಅದನ್ನು ಬಹಳವಾಗಿ ಪ್ರೀತಿಸುತ್ತಿದ್ದರು ಎಂಬ ಮಾಹಿತಿಯಿದೆ.

ಎಮಿಲಿಯವರ ಕವನಗಳಲ್ಲಿ ಬಹುತೇಕವಾಗಿ ಕಾಣಬರುವ ವಿಷಯಗಳು- ಸಾವು, ದೇವರು, ಪ್ರೇಮ, ನಿಸರ್ಗ. ಪ್ರತೀ ಕವನದಲ್ಲಿಯೂ ಪ್ರತೀ ಬಾರಿಯೂ ಇವುಗಳನ್ನು ಹೊಸದೆನ್ನುವಂತೆ ಬಿಂಬಿಸುತ್ತಾರೆ ಈಕೆ. ಎಮಿಲಿಯವರು ಸುಮಾರು 1775 ರಷ್ಟು ಕವಿತೆಗಳನ್ನು ಬರೆದಿದ್ದರೂ ಅವರ ಜೀವಿತಾವಧಿಯಲ್ಲಿ ಪ್ರಕಟವಾಗಿದ್ದು ಅವುಗಳಲ್ಲಿ ಏಳರಿಂದ ಹತ್ತು ಮಾತ್ರ. (ಹಲವು ಮೂಲಗಳಲ್ಲಿ ಈ ಸಂಖ್ಯೆಯ ಬಗ್ಗೆ ವ್ಯತ್ಯಾಸವಿದೆ) ಅವರ ಮರಣವಾದ ನಾಲ್ಕು ವರ್ಷದ ಬಳಿಕ 1890ರಲ್ಲಿ ಆಕೆಯ ಸಹೋದರಿಯಿಂದ ಆಕೆಯ ಮೊದಲ ಕವನ ಸಂಕಲನ ಬಿಡುಗಡೆಯಾಗುತ್ತದೆ.

ಎಮಿಲಿಯ ವೈಯಕ್ತಿಕ ಜೀವನ ತೃಪ್ತಿಯದ್ದಾಗಿರಲಿಲ್ಲ. ಪ್ರೀತಿಯಲ್ಲಿ ಸಿಲುಕಿದ್ದ ಎಮಿಲಿಯವರಿಗೆ ನಂತರದಲ್ಲಿ ತಾನು ಪ್ರೀತಿಸಿದವನು ವಿವಾಹಿತ ಎಂಬುದಾಗಿ ತಿಳಿಯುತ್ತದೆ. ಇದರರಿವಾದ ನಂತರದಲ್ಲಿ ಅದರಿಂದ ಹೊರಬಂದ ಆಕೆ ಅವಿವಾಹಿತೆಯಾಗಿಯೇ ಉಳಿಯುತ್ತಾರೆ. ಎಮಿಲಿ ಸಾಮಾಜಿಕ ಬದುಕಿನಿಂದ ದೂರ ಉಳಿದೇ ಬದುಕಿದ್ದು ಹೆಚ್ಚು. ಏಕಾಂತ ಬದುಕನ್ನೇ ಇಷ್ಟ ಪಟ್ಟವರು. ಕೋಣೆಯೊಳಗೆ ಕುಳಿತೇ ಕವಿತೆ, ಲೇಖನಗಳನ್ನು ಬರೆಯುತ್ತಿದ್ದ ಈಕೆ ‌ಹೊರ ಪ್ರಪಂಚದಿಂದ ದೂರವಿರಲು ಬಯಸಿದ್ದರು. ಆರಂಭದಲ್ಲಿ ಸಹಜವೆಂಬಂತೆ ಅನ್ಯ ಬರಹಗಳಿಂದ ಪ್ರೇರಿತ ಕವಿತೆಗಳನ್ನು ಬರೆಯುತ್ತಿದ್ದವರು ನಂತರದಲ್ಲಿ ಅದರಲ್ಲೇ ತೊಡಗಿಕೊಂಡಾಗ ಅವರದೇ ಶೈಲಿಯ ಅಸಾಮಾನ್ಯವೆಂಬಂತ ಕವಿತೆಗಳನ್ನು ಬರೆಯತೊಡಗಿದರು. ಮತ್ತದರ ಸಂಖ್ಯೆ 1775ರ ಹತ್ತಿರ ತಲುಪಿತ್ತು.

 • Success is counted sweetest.
 • “Hope” is the thing with feathers.
 • I’m nobody! Who are you?
 • I felt a Funeral, in my Brain.
 • There’s a certain Slant of light.
 • Wild Nights – Wild Nights!.
 • This is my letter to the World.
 • I dwell in Possibility.
 • I heard a Fly buzz– when I died.
 • It was not Death, for I stood up.
 • Before I got my eye put out.
 • After great pain, a formal feeling comes.
 • Because I could not stop for Death.
 • Tell all the truth but tell it slant.
 • Wild nights-wild nights.
 • Much madness is devinest sense.

ಎಮಿಲಿಯವರ ಹಲವು ಕವಿತೆಗಳಲ್ಲಿ ಕೆಲವು ಈ ಮೇಲಿನವು. ಎಮಿಲಿಯವರ ಬಗ್ಗೆ ಓದುತ್ತಾ ಹೋದಾಗ ಅವರು ನಿರೀಕ್ಷೆಯನ್ನಾಗಲಿ ಹೆಸರನ್ನಾಗಲಿ ಅನುಭವಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಬಹುಶಃ ಎಮಿಲಿಯವರಿಗೆ ತನ್ನ ಕವಿತೆಗಳನ್ನು ಪ್ರಕಟಿಸುವ ಉದ್ದೇಶವಾಗಲಿ, ತಾನು ಪ್ರಸಿದ್ಧಿಗೊಳ್ಳುವ ಇಚ್ಛೆಯಾಗಲಿ ಇರಲಿಲ್ಲವೋ ಏನೋ. ಅವರು ಬರಹವನ್ನು ಆಪ್ತವಾಗಿಸಿಕೊಳ್ಳಲು ಬರೆಯುತ್ತಿದ್ದರೆಂದು ನನಗನ್ನಿಸಿತು. ಕಾರಣ, ಆಕೆ ತಾನು ಬರೆದ ಯಾವ ಕವಿತೆಗೂ ಶೀರ್ಷಿಕೆ ಇರಿಸಿರಲಿಲ್ಲ. ಅವರ ಕವಿತೆಗಳ ಮೊದಲ ಸಾಲನ್ನೇ ಶೀರ್ಷಿಕೆಯಾಗಿ ಬಳಕೆ ಮಾಡಲಾಗಿದ್ದನ್ನು ನಾವು ಗಮನಿಸಬಹುದು. ಸಾವಿಗೆ ಹತ್ತಿರವಾದವರೇ ಸಾವಿನ ಬಗ್ಗೆ ಹೆಚ್ಚು ಪ್ರೀತಿ ಇರಿಸಿಕೊಂಡಿರುತ್ತಾರೋ ಏನೋ. ಹೀಗಿದ್ದ ಎಮಿಲಿಗೆ ಅನಾರೋಗ್ಯ ಬಾಧಿಸುತ್ತದೆ ಮತ್ತು ವೈದ್ಯರು ನೀವಿನ್ನು ಮೂರರಿಂದ ನಾಲ್ಕು ವರ್ಷಗಳ ಕಾಲ ಬದುಕಿರುತ್ತೀರಿ ಎಂದು ಬಿಡುತ್ತಾರೆ. 15 ಮೇ, 1886ರಂದು ಆಕೆಯ ಇಹಲೋಕದ ಯಾತ್ರೆ ಮುಗಿದು ಅವರ ಆಪ್ತ ಸಾವಿನ ಬಳಿ ಸೇರುತ್ತಾರೆ.

ಎಮಿಲಿಯವರ ಕವಿತೆಗಳಲ್ಲಿ ಪ್ರಸಿದ್ಧವಾದೊಂದು ಕವಿತೆ. Because I could not stop for Death…
ಇದೊಂದು ಸುಂದರವಾದ ಸಾಹಿತ್ಯಾತ್ಮಕ ಕವಿತೆ ಮತ್ತು ಉತ್ಸಾಹಿ ಕವಿತೆಯಾಗಿ ಹೊರಹೊಮ್ಮಿದೆ. ಈ ಕವಿತೆ 1863ರಲ್ಲಿ ರಚನೆಗೊಂಡಿದ್ದರೂ ಕವಯಿತ್ರಿಯ ಮರಣಾನಂತರ 1890ರಲ್ಲಿ ಪ್ರಕಟವಾಗುತ್ತದೆ. 24 ಸಾಲುಗಳಿದ್ದು ಇದನ್ನು ಆರು ಚರಣಗಳಾಗಿ ವಿಂಗಡಿಸಲಾಗಿದೆ.
ಕವಿತೆಯೊಂದಿಗೆ ಹೋದಾಗ…
Because I could not stop for Death –
He kindly stopped for me –
The Carriage held but just Ourselves –
And Immortality.
ಕವಯಿತ್ರಿ ಹೇಳುತ್ತಾರೆ ಸಾವಿಗಾಗಿ ನಾನು ನಿಲ್ಲಲಿಲ್ಲ, ಯಾಕೆಂದರೆ ಅವನೇ ನನಗಾಗಿ ವಿಧೇಯತೆಯಿಂದ ನಿಂತಿದ್ದಾನೆ. ಮತ್ತು ಅವನು ನನಗಾಗಿ ರಥವೊಂದನ್ನು ತಂದಿದ್ದಾನೆ. ಅದರಲ್ಲಿ ನಾನು ಮತ್ತು ಅವನು ಮಾತ್ರ ಕುಳಿತುಕೊಳ್ಳಲು ಜಾಗವಿದೆ‌. ನಮ್ಮೊಂದಿಗೆ ಅಮರತ್ವವೂ ಪಯಣಿಸುತ್ತದೆ.

ಇಲ್ಲಿ ಸಾವು ಕವಯಿತ್ರಿಯೊಂದಿಗೆ ಯಾತ್ರೆಯನ್ನು ಮಾಡುತ್ತದೆ ಎಂದು ಹೇಳುತ್ತಾರವರು. ಅದು ಹುಟ್ಟಿನಿಂದ ಸಾವಿನವರೆಗಿನ ಪಯಣ. ಆ ಅನುಭವವನ್ನು ಕವಿಯತ್ರಿ ಬಹಳ ಚಂದವಾಗಿ ಹೇಳುತ್ತಾರೆ. ಸಾವು ಪ್ರತಿಯೊಬ್ಬರ ಜೀವನದಲ್ಲೂ ಸಹಜ ಕ್ರಿಯೆ. ಸಾವಿನೊಂದಿಗೆಯೇ ಬದುಕು ಪರಿಪೂರ್ಣವಾಗುವುದು. ರಥದಲ್ಲಿ ಸಾವಿನೊಂದಿಗೆ ತಾನು ಮಾತ್ರ ಹೋಗುತ್ತಿರುವುದನ್ನು ಹೇಳುವ ಮೂಲಕ ಮನುಷ್ಯ ಬರುವಾಗಲೂ ಒಂಟಿ ಹೋಗುವಾಗಲೂ ಒಂಟಿ ಎಂಬ ಬದುಕಿನ ವಾಸ್ತವವನ್ನು ಹೇಳುತ್ತಾರೆ. ಕವಿಯತ್ರಿ ಇಲ್ಲಿ ತನ್ನ ಹಾಗೂ ಸಾವಿನ ಭೇಟಿಯಾದ ರೀತಿಯನ್ನು ಹೇಳುತ್ತಾರೆ. ಆಕೆ ಸಾವನ್ನು ಒಬ್ಬ ಸಂಭಾವಿತನಂತೆ ಕಾಣುತ್ತಾರೆ. ಬಹುಶಃ ಕವಿ ಮನಸ್ಸಿಗೆ ಸಾವಿನ ನಂತರದ ಬಗ್ಗೆ ಹೆಚ್ಚು ಆಲೋಚನೆ ಬಂದಿರುತ್ತದೆ ಎನಿಸುತ್ತದೆ. ಮತ್ತು ಅದೇ ಕಾರಣ ಅವರು ಉತ್ಸಾಹದಿಂದ ಸಾವಿನೊಂದಿಗಿನ ಪಯಣವನ್ನು ಅನುಭವಿಸುತ್ತಾರೆ.

We slowly drove – He knew no haste
And I had put away
My labor and my leisure too,
For His Civility –
ನಾವು ನಿಧಾನವಾಗಿ ಸಾಗುತ್ತಿದ್ದೆವು. ಅವನಿಗೆ ಯಾವ ಆತುರವೂ ಇರಲಿಲ್ಲ. ನಾನೂ ಹಾಗೆಯೇ ಇದ್ದೆ. ನನ್ನ ಕೆಲಸ ಕಾರ್ಯಗಳನ್ನೂ ನನ್ನ ವಿರಾಮವನ್ನು ಹಿಂದೆಯೇ ಬಿಟ್ಟು ಬಂದಿದ್ದೆ. ಕಾರಣ ಅವನೊಬ್ಬ ಸಹೃದಯಿ ನಾಗರೀಕನಾಗಿದ್ದ. ಇಲ್ಲಿ ಸಾವು ಕವಯಿತ್ರಿ ಕರೆದು ಬಂದುದಲ್ಲ , ಅವನು ಸಮಯಪ್ರಜ್ಞೆಯಿಂದ ಬಂದಿರುವುದು. ಮತ್ತೆ ಗಮನಿಸಬೇಕು ಸಾವು ಹೇಳಿ ಕೇಳಿ ಬರುವುದಿಲ್ಲ ಅದು ಅದರ ಸಮಯಕ್ಕೆ ಬಂದೇ ಬರುತ್ತದೆ ಮತ್ತು ಅದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು. ಇದೇ ಕಾರಣ ಕವಿಯತ್ರಿ ಸಾವನ್ನು ಸರಳ, ಸಹೃದಯಿ ನಾಗರೀಕ ಎಂದು ಹೇಳುತ್ತಾರೆ. ಆತುರ ಏಕೆ ಇರಲಿಲ್ಲ ಸಾವಿಗೆ…? ಪ್ರಶ್ನೆ ಸಹಜ. ಏಕೆಂದರೆ ಸಾವಿಗೆ ಗೊತ್ತಿದೆ ತಾನು ಕರೆಯಲು ಹೋಗುವುದು ನಿಶ್ಙಿತ ಮತ್ತು ಇದೊಂದು ಸ್ವಾಭಾವಿಕ ಕ್ರಿಯೆ ಎಂದು. ಅದು ತನ್ನಿಂತಾನೇ ಜರುಗುತ್ತದೆಂದು.

We passed the School, where Children strove
At Recess – in the Ring –
We passed the Fields of Gazing Grain –
We passed the Setting Sun –
ನಾವು ಒಂದು ಶಾಲೆಯ ಮುಂದಿನಿಂದ ಹಾದು ಹೋದೆವು. ಅಲ್ಲಿ ಮಕ್ಕಳು ವಿರಾಮದ ವೇಳೆಯಲ್ಲಿ ವೃತ್ತವನ್ನು ರಚಿಸಿ ಆಡುತ್ತಿದ್ದರು. ನಂತರ ನಾವೊಂದು ಧಾನ್ಯ ಬೆಳೆಯುವ ಹೊಲವನ್ನು ಹಾದು ಮುಂದೆ ಹೋದೆವು. ಮತ್ತು ನಾವು ಮುಳುಗುತ್ತಿರುವ ಸೂರ್ಯನನ್ನೂ ಹಾದು ಹೋದೆವು. ಕವಿಮನ ಬಲು ಆಪ್ಯಾಯತೆಯಿಂದ ಮಕ್ಕಳನ್ನು ನೋಡುತ್ತಾರೆ ಎಂದೆನಿಸುತ್ತದೆ ಇಲ್ಲಿ. ಅದು ಬಾಲ್ಯದ ದಿನಗಳ ನೆನಪುಗಳು. ಜೀವನದ ಮೊದಲ ಹಂತ. ಕವಯಿತ್ರಿ ಮಕ್ಕಳನ್ನು ನೋಡುವಾಗ ತಮ್ಮ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೇನೋ. ಅಲ್ಲಿ ಕವಿಮನಸಿನದು ಕಳೆದು ಹೋದುದನ್ನು ನೋಡುವ ಭಾವ. ಜೀವನದ ಹಂತಗಳನ್ನು ಕಳೆದಂತೆ ದಾಟುತ್ತಾರೆ ಅವರು ಸಾವಿನೊಂದಿಗಿನ ಪಯಣವನ್ನು.

Or rather – He passed Us –
The Dews drew quivering and Chill –
For only Gossamer, my Gown –
My Tippet – only Tulle –
ಅಥವಾ ಇಲ್ಲಿ ಅವನೇ ಅಂದರೆ ಸೂರ್ಯನೇ ನಮ್ಮ ಎದುರಿನಿಂದ ಹಾದು ಹೋದನೋ. ರವಿ‌ ಮುಳುಗುವುದನ್ನು ಹೀಗೆ ಹೇಳುತ್ತಾರೆ. ಹೀಗೆ ‌ಹಾದು ಹೋಗುವಾಗ ಅವನು ಚಳಿಗೆ ನಡುಗುತ್ತಿದ್ದಂತೆ ಇದ್ದ. ಮತ್ತು ಇದರಿಂದ ನಾನು ಧರಿಸಿದ ತೆಳುವಾದ ಬಟ್ಟೆಯ ನಿಲುವಂಗಿ ಕೂಡ ಹಾರಾಡಿದಂತಿತ್ತು. ಇಲ್ಲಿ ಮುಳುಗುವ ಹೊತ್ತು ಬಿಂಬಿತವಾಗಿದೆ. ಅಂದರೆ ಜೀವನದ ಹಂತಗಳನ್ನು ದಾಟಿ ಬಂದು ಕೊನೆಯ ಹಂತ ತಲುಪಿದಂತೆ. ಈ ವೇಳೆಗೆ ಮನುಷ್ಯನ ವಯಸ್ಸಿನ ಜೊತೆ ಶಕ್ತಿಯೂ ಕ್ಷೀಣಿಸಿರುತ್ತದೆ. ಹಾಗಾಗಿ ಸೂರ್ಯ ನಡುಗಿದಂತೆ, ತನ್ನ ಅಂಗಿಯು ಹಾರಾಡಿದಂತೆ ಎನ್ನುವಲ್ಲಿ ತಮ್ಮಿಬ್ಬರ ಸಮಯವೂ ಮುಗಿದ ಹಂತವದೆಂದು ಸೂಚ್ಯವಾಗಿ ಹೇಳುತ್ತಾರೆ. ಸಾವಿನ ಯಾತ್ರೆಯ ಕೊನೆಯ ಹಂತ ನಡುಕದ್ದು ಅದು ನಿಷ್ಕ್ರಿಯವಾಗುವ ಗಳಿಗೆ.

We paused before a House that seemed
A Swelling of the Ground –
The Roof was scarcely visible –
The Cornice – in the Ground
ನಾವು ಒಂದೆಡೆ ನಿಂತೆವು ಅಲ್ಲಿ ಒಂದು ಮನೆಯಿತ್ತು. ಅದು ಹುದುಗಿದಂತೆ ಇತ್ತು ಮತ್ತು ಉಬ್ಬಿದಂತಿದ್ದ ಆ ಮನೆಯ ಮೇಲ್ಛಾವಣಿ ಮಾತ್ರ ಕಾಣುತ್ತಿತ್ತು. ಅದೂ ಕೂಡ ಸ್ಪಷ್ಟವಾಗಿರಲಿಲ್ಲ. ಅದು ಹುದುಗಿ ಹೋಗಿತ್ತಲ್ಲ. ಕವಿಮನದ ಈ ಸಾಲುಗಳು ಅವರೊಂದು ಸ್ಮಶಾನದ ಮುಂದೆ ಬಂದು ನಿಂತಿದ್ದಾರೆಂದು ಸೂಚಿಸುತ್ತದೆ. ಪಯಣ ಮುಗಿಯುವ ವೇಳೆಗೆ ಅಂತ್ಯದ ನಿಲ್ದಾಣ ಬೇಕು. ಅದುವೇ ಸ್ಮಶಾನವಾಗಿದೆ. ಮತ್ತಲ್ಲಿ ಕಂಡಿದ್ದೆಲ್ಲವೂ ಗೋರಿಗಳು, ಅದರ ಮೇಲ್ಮೈಗಳು. ಹುದುಗಿ ಹೋಗಿದೆ ಎಂದು ಹೇಳುವಾಗ ಸಾವಿನ ಕೊನೆ‌ ಕ್ಷಣದ ನಂತರ ತಾವು ಕಣ್ಣಿಗೆ ಕಾಣುವಂತೆ ಏನಾಗಬಹುದು ಎಂಬುದನ್ನು ಹೇಳುತ್ತಾರೆ. ನಮ್ಮ ನಿಷ್ಕ್ರಿಯ ದೇಹ ಒಂದೆಡೆ ಮಲಗುತ್ತದೆ. ಬದುಕಿನ ಹಂತ ಮುಗಿದು ಹೋಗುವ ಕ್ಷಣವದು. ಅಂದರೆ ಅದು ಕಾಣದೆ ಆಗಬೇಕು ಅದೇ ಕಾರಣ ಹುದುಗಿ ಹೋಗುತ್ತದೆ. ಬದುಕು ನಿಂತ ಬಗೆಯನ್ನು ಹೀಗೆ ಹೇಳುತ್ತಾರೆ ಕವಿಯಿತ್ರಿ.

Since then – ‘tis Centuries – and yet
Feels shorter than the Day
I first surmised the Horses’ Heads
Were toward Eternity –
ಶತಮಾನದಷ್ಟು ಕಳೆದ ಬದುಕಿನ ಪಯಣ ಇದು. ಆದರೆ ನನಗೆ ಒಂದು ದಿನಕ್ಕೂ ಕಡಿಮೆಯಿದ್ದಂತೆ ಭಾಸವಾಯಿತು. ಮತ್ತೆ ನಾನಿಲ್ಲಿ ಮೊದಲು ಊಹಿಸಿದ್ದು ಕುದುರೆಯ ಶಿರವನ್ನು. ಅದು ಶಾಶ್ವತತೆಯ ಕಡೆಗೆ ಓಡುತ್ತಿದ್ದ ಕುದುರೆ. ಅದು ನನ್ನನ್ನು ಶಾಶ್ವತತೆಯ ಕಡೆಗೆ ಕರೆದೊಯ್ಯುತ್ತಿದೆ ಎಂದು ನಾನು ಭಾವಿಸಿದೆ ಎಂದು ಈ ಸಾಲುಗಳು ಹೇಳುತ್ತದೆ. ಇಲ್ಲಿನ ಈ ಸಾಲುಗಳು ಕವಯಿತ್ರಿಯ ಆಶಾವಾದವನ್ನು ಗಮನಿಸುವಂತೆ ಮಾಡುತ್ತದೆ. ಸಾವಿನೊಂದಿಗೆ ಯಾತ್ರೆಯಲ್ಲಿರುವ ಆಕೆ ಈ ಮೂಲಕ ಸಾವೆಂದರೆ ಕೊನೆಯಲ್ಲ ಬದಲು ಅದು ಆರಂಭದಂತೆ ಎಂದು ಹೇಳುತ್ತಾರೆ. ಶಾಶ್ವತತೆ ಎಂದರೆ ಹಾಗೆಯೇ ಅಲ್ಲವೇ.!

ಕವಿತೆ ಹೀಗೆ ಆಶಾವಾದದೊಂದಿಗೆ ಮುಗಿಯುತ್ತದೆ. ಕವಿತೆಯೊಳಗಿನ ಕೆಲವು ಸಾಂಕೇತಿಕ ಪದಗಳನ್ನು ಗಮನಿಸಬೇಕು‌. ಸಾವು ಕರೆದೊಯ್ಯಲು ಬರುವ ರಥವು ಇಡೀ ಜೀವನ ಪಯಣವನ್ನು ಸೂಚಿಸುತ್ತದೆ ಅಂದರೆ ಹುಟ್ಟಿನಿಂದ ಸಾವಿನವರೆಗೆ. ಕವಿಮನ ಬಲು ಆಪ್ತತೆಯಿಂದ ನೋಡಿದ ಮಕ್ಕಳು ಬದುಕಿನ ಮೊದಲ ‌ಹಂತ ಬಾಲ್ಯವನ್ನು ಸಂಕೇತಿಸುತ್ತದೆ. ಮತ್ತು ಬೆಳೆ ಬೆಳೆಯುವ ಹೊಲ ಎರಡನೇ ಹಂತ ಪ್ರೌಢ ಜೀವನವನ್ನು, ಯೌವನವನ್ನು ಹೇಳುತ್ತದೆ. ಕೊನೆಯಲ್ಲಿ ಬರುವ ಮುಳುಗುವ ಸೂರ್ಯ ಜೀವನದ ಕೊನೆಯ ಹಂತವನ್ನು ಪ್ರತಿನಿಧಿಸುತ್ತದೆ. ಅದು ಅಲ್ಲಿ ದಿನದ ಕೊನೆ ಕತ್ತಲಿಗೆ ಸೂಚ್ಯವಾದರೆ ಕವಿಮನ ತನ್ನ ಸಾವಿಗೆ ಹತ್ತಿರದ ಕ್ಷಣವನ್ನು ಹೇಳುತ್ತದೆ.

-ಗೀತಾ ಕೆ ಆಚಾರ್ಯ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x