ನಡೆ! ಶಿಕ್ಷಣ ಪಡೆ!
ನಿಲ್ಲು! ನಿನ್ನ ಕಾಲ ಮೇಲೆ ನೀನು ನಿಲ್ಲು!
ಪಡೆ ವಿವೇಕ! ಪಡೆ ಸಂಪತ್ತು!
ಇದಕಾಗಲಿ ನಿನ್ನಯ ದುಡಿಮೆ
ಈ ಸಾಲುಗಳು ಸಾವಿತ್ರಿಬಾಯಿ ಫುಲೆಯವರಲ್ಲಿನ ಶಿಕ್ಷಣದೆಡೆಗಿನ ಒಲವನ್ನು ಸಾರುತ್ತವೆ. ಇವರು ಸ್ವತಂತ್ರಪೂರ್ವ ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿ ಮಾತ್ರವಲ್ಲ. ಶಿಕ್ಷಣ, ಸೇವೆ, ವೈಚಾರಿಕತೆ, ಸ್ತ್ರೀವಾದಿ ಹೋರಾಟಗಾರ್ತಿ, ಸಾಹಿತ್ಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವರು.
ಸಾವಿತ್ರಿ ಬಾಯಿ ಫುಲೆಯವರು ಹುಟ್ಟಿದ್ದು ಮಹಾರಾಷ್ಟ್ರ ಜಿಲ್ಲೆಯ ಖಂಡಾಲ ತಾಲ್ಲೋಕಿನ ನಯಗಾಂವ್ ಎಂಬ ಪುಟ್ಟ ಹಳ್ಳಿಯಲ್ಲಿ. 1831 ಜನವರಿ 3 ರಂದು ಜನಿಸಿದ ಸಾವಿತ್ರಿಬಾಯಿಯವರ ಹುಟ್ಟಿದ ದಿನದ ಸ್ಮರಣಾರ್ಥವಾಗಿ ಇತ್ತೀಚಿನ ವರ್ಷಗಳಲ್ಲಿ ದೇಶದೆಲ್ಲೆಡೆ ಜಯಂತಿಯನ್ನು ಆಚರಣೆ ಮಾಡುತ್ತಿದ್ದೇವೆ. ಪ್ರಕಾಶಮಾನವಾಗಿದ್ದ ನಕ್ಷತ್ರವೊಂದು ಬೆಳಕಿಗೆ ಬರಲು ಶತಮಾನಗಳು ಸವೆಯಬೇಕಾಯಿತು. ಸಿರಿವಂತ ಜಮೀನ್ದಾರ ಕುಟುಂಬದಲ್ಲಿ ಜನಿಸಿದ ಸಾವಿತ್ರಿಯ ತಂದೆ ಖಂಡೋಜಿ ನೆವಸೆ ಪಾಟೀಲ ತಾಯಿ ಲಕ್ಷ್ಮಿ. ಬುದ್ದಿವಂತೆ ಹಾಗೂ ಧೈರ್ಯವಂತೆಯೂ ಆಗಿದ್ದ ಅವರು ತಮ್ಮ 9 ನೆಯ ವಯಸ್ಸಿನಲ್ಲಿ 13 ನೆಯ ವಯಸ್ಸಿನ ಜ್ಯೋತಿಬಾ ಫುಲೆಯವರನ್ನು ಆಗಿನ ‘ಬಾಲ್ಯ ವಿವಾಹ ಪದ್ಧತಿ’ಯಂತೆ 1840 ರಲ್ಲಿ ಕೈ ಹಿಡಿದರು. ಎಲ್ಲೆಲ್ಲೂ ಬಾಲ್ಯ ವಿವಾಹ ಪದ್ಧತಿ, ಸತಿ ಸಹಗಮನ ಪದ್ಧತಿ, ಬ್ರಾಹ್ಮಣ ವಿಧವೆಯರ ಕೇಶಮುಂಡನದಂತಹ ಸ್ತ್ರೀ ಶೋಷಣೆಯು ತಾಂಡವವಾಡುತ್ತಿದ್ದ ಕಾಲ ಅದಾಗಿತ್ತು. ಹೆಣ್ಣು ಮಕ್ಕಳು ಮನೆಯಿಂದ ಕಾಲಿಡುವುದಿರಲಿ, ಶೂದ್ರರು, ದಲಿತರು ಮತ್ತು ಮಹಿಳೆಯರಿಗೆ ಶಿಕ್ಷಣದ ಕನಸು ಕಂಡರೂ ಕೂಡ ಕಠಿಣ ಶಿಕ್ಷೆಯಾಗುವ ದುಷ್ಟ ಕಾಲವಿತ್ತು. ‘ವರ್ಣಾಶ್ರಮ ಪದ್ಧತಿ’ ಯಂತೆ ಬ್ರಾಹ್ಮಣರನ್ನು ಹೊರತುಪಡಿಸಿ ಯಾರಾದರೂ ಮಂತ್ರಗಳನ್ನು ಕೇಳಿದರೆ ಅಥವಾ ಓದಿದರೆ ಕಾದ ಸೀಸವನ್ನು ಕಿವಿಯಲ್ಲಿ ಸುರಿಯುವ, ಅವರ ನಾಲಗೆಯನ್ನು ಕತ್ತರಿಸುವಂತಹ ಅಮಾನವೀಯ ಕೃತ್ಯಗಳು ಚಾಲ್ತಿಯಲ್ಲಿದ್ದವು. ಇವೆಲ್ಲವುಗಳನ್ನು ವಿರೋಧಿಸಿಕೊಂಡೆ ಬೆಳೆದಿದ್ದ ಸಾವಿತ್ರಿಯನ್ನು ಮದುವೆಯಾದ ಜ್ಯೋತಿಬಾ ಅವಳಲ್ಲಿನ ಕನಸುಗಳಿಗೆ ನೀರೆರೆದು ಪೋಷಿಸಿದರು. ಅಸಮಾನತೆ, ಅಸ್ಪೃಶ್ಯತೆಗಳನ್ನು ಮೆಟ್ಟಿ ನಿಲ್ಲಲು ಸತಿಪತಿಗಳಿಬ್ಬರು ಹೆಗಲಿಗೆ ಹೆಗಲಾದರು. ಅದಾಗಲೇ ಇಂಗ್ಲಿಷ್ ಶಿಕ್ಷಣದ ಅರಿವಿನ ಸ್ಫೋಟಕ್ಕೆ ಒಳಗಾಗಿದ್ದ ಜ್ಯೋತಿಬಾ ಚಿಕ್ಕ ವಯಸ್ಸಿನಲ್ಲಿ ಸಾವಿತ್ರಿಗೆ ಮಿಷನರಿಯೊಬ್ಬರು ಉಡುಗೊರೆಯಾಗಿ ನೀಡಿದ್ದ ಪುಸ್ತಕವನ್ನು ಅವಳು ಜೋಪಾನವಾಗಿಟ್ಟುಕೊಂಡು ತನ್ನೊಡನೆ ತಂದಿದ್ದನ್ನು ಕಂಡು ಅವಳಲ್ಲಿದ್ದ ಶಿಕ್ಷಣದ ಪ್ರೀತಿಯನ್ನು ಗಮನಿಸಿ ತಾನೇ ಗುರುವಾದರು.
ಜ್ಯೋತಿಬಾ ಅವರ ಗೆಳೆಯರಾದ ಸುಖರಾಮ ಯಶವಂತ ಪರಾಂಬಸೆ ಹಾಗೂ ಶಿವರಾಯ ಭಾವಲ್ಕರ್ ಕೂಡ ಸಾವಿತ್ರಿಯ ಶಿಕ್ಷಣಾಭ್ಯಾಸಕ್ಕೆ ನೆರವಾದರು. ಜ್ಯೋತಿಬಾ ಅವರ ಸಾಕು ತಾಯಿ ಸುಗುಣಾಬಾಯಿ ಬಡತನದ ಕಾರಣದಿಂದ ಪುಣೆಯ ಮಿಸನರಿ ಜಾನ್ ರ ಮನೆಯಲ್ಲಿ ಕಸ ಮುಸುರೆಯ ಕೆಲಸಕ್ಕೆ ಸೇರಿ ನಂತರ ಜಾನ್ ರವರು ನಡೆಸುತ್ತಿದ್ದ ಅನಾಥ ಮಕ್ಕಳ ಶಿಶುವಿಹಾರದಲ್ಲಿ ಕೆಲಸ ಮಾಡಿಕೊಂಡೆ ಅಕ್ಷರ ಪ್ರೀತಿಯನ್ನು ಬೆಳೆಸಿಕೊಂಡು ಇಂಗ್ಲಿಷ್ ಶಿಕ್ಷಣದ ಕ್ರಾಂತಿಗೆ ಒಳಗಾಗಿದ್ದವರಾಗಿದ್ದರಿಂದ ಅತ್ತೆ ಮನೆಯಲ್ಲಿ ಸಾವಿತ್ರಿಗೆ ಎಲ್ಲಾ ಹೆಣ್ಣುಮಕ್ಕಳಂತೆ ನಾಲ್ಕು ಗೋಡೆಗಳಿಗೆ ಸೀಮಿತವಾಗಿ ಬದುಕುವ ಅನಿವಾರ್ಯತೆ ಬರಲಿಲ್ಲ. ಸಾವಿತ್ರಿಯ ಬಿಡುವಿನ ವೇಳೆಯಲ್ಲಿ ಅವಳಿಗೆ ಅಕ್ಷರಾಭ್ಯಾಸ ಪ್ರಾರಂಭವಾಯಿತು. ಸುಗುಣಾಬಾಯಿಯವರು ಫುಲೆ ದಂಪತಿಗಳ ಅಕ್ಷರಾಭ್ಯಾಸವನ್ನು ನೋಡಿ ಖುಷಿಪಡುತ್ತಿದ್ದರು. ಪತಿಯ ಆಸೆಯಂತೆ 1946-47 ರಲ್ಲಿ ಗೆಳತಿ ಫಾತಿಮಾ ಶೇಕ್ ಅವರೊಂದಿಗೆ ಅಹ್ಮದ್ ನಗರದ ‘ಫಾರ್ಮಲ್ ಕಾಲೇಜಿನಲ್ಲಿ’ ಶಿಕ್ಷಕ ತರಬೇತಿಯನ್ನು ಪಡೆದಳು. ಇದರಲ್ಲಿ ಸುಗುಣಾಬಾಯಿಯ ಸ್ಫೂರ್ತಿಯೂ ಇದ್ದಿತು. ತನ್ನ 17 ನೇ ವಯಸ್ಸು ದಾಟುವಷ್ಟರಲ್ಲಿ ಅನಕ್ಷರಸ್ಥ ಹುಡುಗಿಯಾಗಿದ್ದ ಸಾವಿತ್ರಿಬಾಯಿ ‘ಸ್ವತಂತ್ರ ಪೂರ್ವ ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿ’ಯಾದಳು. ಸಾವಿತ್ರಿಯ ಜೊತೆಗೆ ಹೆಗಲು ಕೊಟ್ಟವಳು ಗೆಳತಿ ಫಾತಿಮಾ ಶೇಕ್. ಕೆಳ ಸಮುದಾಯದ ಹೆಣ್ಣೊಬ್ಬಳು ಶಿಕ್ಷಕಿಯಾದ ದಾರಿ ಹಲವಾರು ಸವಾಲುಗಳನ್ನು ತಂದೊಡ್ಡಿತ್ತು.
ಆರಂಭದಲ್ಲಿ ನಿಂದನೆ ನೋವುಗಳನ್ನು ಎದುರಿಸಿದ ಸಾವಿತ್ರಿ ಜ್ಯೋತಿ ಬಾ ಅವರ ಸಂಪೂರ್ಣ ಬೆಂಬಲದಿಂದ ತನ್ನೆಡೆಗೆ ತೂರಿ ಬರುತ್ತಿದ್ದ ಕಲ್ಲು, ಸಗಣಿಗಳನ್ನು ಹೂಗಳೆಂದು ಭಾವಿಸಿದಳು. ದಿಟ್ಟತನದಿಂದ ಸಮಸ್ಯೆಗಳಿಗೆ ಜಗ್ಗದೆ ಮುಂದಿನ ಹೆಜ್ಜೆ ಇಟ್ಟು ಸರಳ ನಡೆ-ನುಡಿ ಸಜ್ಜನಿಕೆಗಳಿಂದಾಗಿ ತನ್ನ ವಿದ್ಯಾರ್ಥಿಗಳಿಗೆ ಒಬ್ಬ ಆದರ್ಶ ತಾಯಿಯೂ ಆಗಿದ್ದಳು. ಇದಕ್ಕೆ ಸಾಕ್ಷಿ ಎಂಬಂತೆ ಅವರ ಶಿಷ್ಯರಾದ ಲಕ್ಷ್ಮಣ ಕರಡಿ ಜಾಯಾ, ವಾಘೋಳೆಯರು ತಮ್ಮ ನೆನಪುಗಳನ್ನು ದಾಖಲಿಸಿದ್ದಾರೆ. ಪುಣೆಯ ಪಂಡಿತ ರಮಾಬಾಯಿ, ಆನಂದಿಬಾಯಿ ಜೋಷಿ, ರಮಾಬಾಯಿ ರಾನಡೆಯಂತಹ ಮಹಿಳೆಯರು ಸಾವಿತ್ರಿಬಾಯಿಯ ಬಳಿ ಸಲಹೆ ಹಾಗೂ ಚರ್ಚೆಗಾಗಿ ಬರುತ್ತಿದ್ದರು.
ಕೀಳು ಕುಲದವರಿಗೆ ಅಕ್ಷರಾಭ್ಯಾಸದ ಅವಕಾಶ ಗಗನಕುಸುಮವಾಗಿದ್ದ ಸಂದರ್ಭದಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡಗಳಿಂದ ಹೊರಬಂದು ಶಿಕ್ಷಣ ಪಡೆಯಲು ಇಂಗ್ಲಿಷರಿಂದ ಸಾಧ್ಯವಾಯಿತು. ಫುಲೆ ದಂಪತಿಗಳು ಕನ್ಯಾಶಾಲೆಯನ್ನು ಆರಂಭಿಸಿದ್ದರ ಪರಿಣಾಮ ವೈದಿಕರಿಂದ ಬೆದರಿಕೆಗಳು ಬಂದು ಕೊನೆಗೆ ಕೊಲ್ಲಲು ಬಂದವರೇ ಇವರ ಸಜ್ಜನಿಕೆಗೆ ಶರಣಾಗಿ ಶಿಷ್ಯರಾದರು. ಕನ್ಯಾಶಾಲೆಗೆ ಪಾಠ ಮಾಡಲು ತೆರಳುವಾಗ ಸಾವಿತ್ರಿಗೆ ಕರ್ಮಠ ಬ್ರಾಹ್ಮಣರು ಒಡೆದ ಗಾಜಿನ ಚೂರುಗಳನ್ನು ರಸ್ತೆಯಲ್ಲಿ ಎಸೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಮುಖದ ಮೇಲೆ ಉಗುಳುತ್ತಿದ್ದರು. ಕಲ್ಲಿನಿಂದ ಹೊಡೆದು ನೋಯಿಸಿ, ಸಗಣಿ ಸುರಿದು ಉಟ್ಟಿದ್ದ ಬಟ್ಟೆಗಳನ್ನು ಮಲಿನಗೊಳಿಸುತ್ತಿದ್ದರು. ಎದೆಗುಂದದ ಸಾವಿತ್ರಿ ತನ್ನ ಚೀಲದಲ್ಲಿ ಮತ್ತೊಂದು ಜೊತೆ ಸೀರೆ ಇಟ್ಟುಕೊಂಡು ಹೋಗಿ ಶಾಲೆಯಲ್ಲಿ ಮಲಿನ ಬಟ್ಟೆಗಳನ್ನು ಬದಲಿಸಿಕೊಂಡು ಪಾಠ ಮಾಡಿ ಮನೆಗೆ ಬರುವಾಗ ಅದೇ ಹೊಲಸು ಬಟ್ಟೆಯನ್ನು ಧರಿಸಿ ಹಿಂತಿರುಗುತ್ತಿದ್ದಳು. ಇಲ್ಲಿ ಅವಳ ಬಿಡದ ಛಲ, ತಾಳ್ಮೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು. ಇವೆಲ್ಲದರ ನಡುವೆಯೂ ‘ಜ್ಞಾನವು ಮೂರನೆಯ ಕಣ್ಣು’ ಎನ್ನುತ್ತಿದ್ದ ಫುಲೆ ದಂಪತಿಗಳು 1851 ರಲ್ಲಿ ಎರಡನೆಯ ಶಾಲೆ ಆರಂಭಿಸಿದರು. 1852 ರಲ್ಲಿ ಶಿಕ್ಷಣ ಇಲಾಖೆ ಮಾದರಿ ಶಿಕ್ಷಕಿಯಾಗಿ ಸಾವಿತ್ರಿಯವರನ್ನು ಸನ್ಮಾನಿಸಿತು. ಇವರು ಸ್ಥಾಪಿಸಿದ್ದ ಶಾಲೆಯ 237 ವಿದ್ಯಾರ್ಥಿಗಳು 1853 ರಲ್ಲಿ ಪರೀಕ್ಷೆ ಬರೆಯುವುದನ್ನು ನೋಡಲು ಜನಸಾಗರವೇ ಕಾಲೇಜಿನ ಗೋಡೆಯ ಒಳಹೊರಗೆ ನೆರೆದಿತ್ತು. ಅವರ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಯೊಬ್ಬಳು ವೇದಿಕೆಯ ಮೇಲೆ ಬಹುಮಾನ ಪಡೆಯುವಾಗ ಅತಿಥಿಗಳೆದುರು “ನನಗೆ ಪ್ರಶಸ್ತಿ ಬೇಡ, ನಮ್ಮ ಶಾಲೆಗೆ ಗ್ರಂಥಾಲಯ ಬೇಕು” ಎಂದಿದ್ದಳು. ಫುಲೆ ದಂಪತಿಗಳು ಅಂತಹ ವಿದ್ಯಾರ್ಥಿಗಳನ್ನು ಅದಾಗಲೇ ರೂಪಿಸಿದ್ದರು. ಅವರ ಏಳ್ಗೆಯನ್ನು ಸಹಿಸದ ಸಂಪ್ರದಾಯವಾದಿಗಳಿಂದ ಧರ್ಮದ್ರೋಹದ ಆಪಾದನೆಯನ್ನೂ ಹೊರಬೇಕಾಯಿತು.
ಮಹಿಳೆಯರ ಸಮಸ್ಯೆಗಳನ್ನು ಆಲಿಸುವುದಕ್ಕಾಗಿ 1852 ರಲ್ಲಿ ಸ್ಥಾಪಿಸಿದ್ದ ‘ಮಹಿಳಾ ಸೇವಾ ಮಂಡಳಿ’ಯು ದೇಶದ ಮೊಟ್ಟಮೊದಲ ಮಹಿಳಾ ಸೇವಾ ಸಂಸ್ಥೆ ಎನಿಸಿತು. 1853 ರಲ್ಲಿ ವಿಧವೆಯರು, ಪರಿತ್ಯಕ್ತೆಯರಿಗಾಗಿ ‘ಬಾಲ ಹತ್ಯಾ ನಿಷೇಧಕ ಗೃಹ’ ವನ್ನು ಸ್ಥಾಪಿಸುವುದರ ಮೂಲಕ ಹೆಣ್ಣಿನ ತಾಯ್ತನದ ಘನತೆಯನ್ನು ಎತ್ತಿ ಹಿಡಿದರು. ಕ್ಶೌ ರಿಕರಿಂದಲೇ ಮುಷ್ಕರ ನಡೆಸಿ ವಿಧವೆಯರ ಕೇಶ ಮುಂಡನ ಪದ್ಧತಿಯನ್ನು ವಿರೋಧಿಸಿ ದೇಶ ವಿದೇಶಗಳ ಗಮನ ಸೆಳೆದ ಸುದ್ದಿ 1890 ರ ಏಪ್ರಿಲ್ 9 ರಂದು ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿತ್ತು. 1964 ರಲ್ಲಿ ಒಬ್ಬ ಬ್ರಾಹ್ಮಣ ವಿಧವೆಗೆ ಮರುಮದುವೆ ಮಾಡಿಸಿ ಕ್ರಾಂತಿ ಮಾಡಿದರು. ಥಾಮಸ್ ಕ್ಲಾರ್ಕ ಸನ್ ಅವರ ಜೀವನ ಚರಿತ್ರೆಯ ಓದಿನ ಪರಿಣಾಮ ಅಸ್ಪೃಶ್ಯರ ಸೇವಾ ಕಾರ್ಯಕ್ಕೆ ಸಾವಿತ್ರಿ ಪ್ರೇರಿತಳಾದಳು. ಮುಂದೆ ಅಸ್ಪೃಶ್ಯರಿಗಾಗಿ ತೆರೆದ ನೀರಿನ ಬಾವಿಯನ್ನು ಕಟ್ಟಿಸಿದರು. ಬ್ರಾಹ್ಮಣ ವಿಧವೆ ಕಾಶಿಬಾಯಿಯ ಮಗುವನ್ನು ದತ್ತು ಪಡೆದು ಯಶವಂತ ಎಂದು ನಾಮಕರಣ ಮಾಡಿ ಶಿಕ್ಷಣ ನೀಡಿ ವೈದ್ಯನನ್ನಾಗಿ ಮಾಡಿದರು. 1873 ರಲ್ಲಿ ‘ಸತ್ಯಶೋಧಕ ಸಮಾಜ’ವನ್ನು ಸ್ಥಾಪಿಸಿ ಅದರ ಮೂಲಕ ಸಾಕಷ್ಟು ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತಾವು ಬಿಡುವಿಲ್ಲದಂತೆ ತೊಡಗಿಸಿಕೊಂಡರು. ಬರಗಾಲ ಬಂದಾಗ 1970 ರಲ್ಲಿ ಅನಾಥ ಮಕ್ಕಳಿಗಾಗಿ ಹಲವು ಶಾಲೆಗಳನ್ನು ತೆರೆದರು. 1890 ನವೆಂಬರ್ 28 ರಂದು ಮಹಾತ್ಮಾ ಜ್ಯೋತಿಬಾ ಫುಲೆ ಮರಣ ಹೊಂದಿದಾಗ ಸಂಬಂಧಿಗಳು ಕುತಂತ್ರ ನಡೆಸಿ ದತ್ತುಪುತ್ರನಿಗೆ ತಂದೆಯ ಅಂತ್ಯಸಂಸ್ಕಾರದ ಹಕ್ಕಿಲ್ಲ ಎಂದು ಪಟ್ಟು ಹಿಡಿದಿದ್ದ ಸಂದರ್ಭದಲ್ಲಿ ಸಾವಿತ್ರಿಬಾಯಿ ತಾನೇ ಚಿತೆಗೆ ಅಗ್ನಿಸ್ಪರ್ಶ ನೀಡಿ ದಾಖಲೆ ನಿರ್ಮಿಸುತ್ತಾಳೆ. ಇದು ಅವಳ ಪ್ರಬುದ್ಧ ಹಾಗೂ ವೈಚಾರಿಕ ಪ್ರಜ್ಞೆಗೆ ಕನ್ನಡಿಯಾದ ಪ್ರಸಂಗವಾಗಿ ತೋರುತ್ತದೆ. ಪ್ರಸ್ತುತಕ್ಕೂ ಅವಳು ಅಂದು ಕೈಗೊಂಡ ನಿರ್ಧಾರ ಸಾವಲಿನದ್ದೇ, ಅದಕ್ಕೆ ಗಂಡೆದೆಯೇ ಬೇಕು.
ಪುಣೆಯಲ್ಲಿ ಹೆಣ್ಣು ಮಕ್ಕಳಿಗಾಗಿ ‘ನೇಟಿವ್ ಫೀಮೇಲ್ ಸ್ಕೂಲ್’ಅನ್ನು, ಅಸ್ಪೃಶ್ಯರಿಗಾಗಿ ‘ಸೊಸೈಟಿ ಫಾರ್ ಪ್ರಮೋಟಿಂಗ್ ಎಜುಕೇಷನ್ ಆಫ್ ಮಹಾರ್ಸ್ ಅಂಡ್ ಮಾಂಗ್ಸ್’ ಎನ್ನುವ ಶಾಲೆಗಳನ್ನು ತೆರೆದಿದ್ದರು. ಸರ್ಕಾರಿ ಶಾಲೆಗಳಿಗಿಂತ ಹೆಚ್ಚು ವಿದ್ಯಾರ್ಥಿಗಳು ಸಾವಿತ್ರಿಬಾಯಿ ಅವರ ಶಾಲೆಯಲ್ಲಿ ಕಲಿಯುತ್ತಿದ್ದದ್ದು ಗಮನಾರ್ಹ. ತನ್ನ ಗಂಡನ ಮರಣದ ನಂತರ ಎಲ್ಲಾ ಸಂಘಸಂಸ್ಥೆ, ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಸಂಕಷ್ಟದ ಪರಿಸ್ಥಿತಿ ಎದುರಾಯಿತು. ಸಂಸ್ಥೆಗಳಿಗೆ ಬರುತ್ತಿದ್ದಂತಹ ಸಹಾಯಧನ ನಿಂತುಹೋಯಿತು. 1896 ರಲ್ಲಿ ಮತ್ತೆ ಭೀಕರ ಬರಗಾಲ ತಲೆದೋರಿತ್ತು. ಆಗಲೂ ಕಲೆಕ್ಟರ್ ಅವರ ಸಹಾಯದಿಂದ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಿಕೊಟ್ಟಳು. 1896-97 ರಲ್ಲಿ ಪುಣೆಯಲ್ಲಿ ಹರಡಿದ ಸಂಕ್ರಾಮಿಕ ರೋಗ ಪ್ಲೇಗ್ನಿಂದಾಗಿ ಸಾಲು ಸಾಲು ಸಾವು-ನೋವುಗಳು ಸಂಭವಿಸಿದವು. ಅಲ್ಲಿ ಸಾವಿತ್ರಿ ಹಾಗೂ ಅವರ ಮಗ ಯಶವಂತ ತಮ್ಮ ಜೀವಗಳ ಹಂಗು ತೊರೆದು ರೋಗಿಗಳ ಶುಶ್ರೂಷೆಯಲ್ಲಿ ನಿರತರಾದರು. ಕೊನೆಗೆ ಪುಣೆಯ ಮುಂಡ್ವಾಗಲ್ಲಿಯ ಮಹಾರವಾಡದ ಪಾಂಡುರಂಗ ಬಾಬಾಜಿ ಗಾಯಕವಾಡರ ಮಗನಿಗೆ ಪ್ಲೇಗ್ ಬಂದಾಗ ತನ್ನ ಬೆನ್ನ ಮೇಲೆ ಹೊತ್ತುಕೊಂಡು ಹೋಗಿ ಶುಶ್ರೂಷೆ ಕೊಡಿಸಿದಳು. ಆ ಸಂದರ್ಭದಲ್ಲಿ ಸಾವಿತ್ರಿಬಾಯಿಗೂ ರೋಗ ಹರಡಿ ಅದರಿಂದ ಚೇತರಿಸಿಕೊಳ್ಳಲಾಗದೆ 1897 ಮಾರ್ಚ್ 10 ರ ರಾತ್ರಿ ಇಹಲೋಕವನ್ನು ತ್ಯಜಿಸುತ್ತಾಳೆ. ಭಾರತೀಯ ಅಂಚೆ ಇಲಾಖೆ ಅವರ ಭಾವಚಿತ್ರವಿರುವ ಅಂಚೆ ಚೀಟಿಯನ್ನು 1998 ರಲ್ಲಿ ಬಿಡುಗಡೆಗೊಳಿಸಿದೆ.
ಚಾತುರ್ವರ್ಣ ವ್ಯವಸ್ಥೆಯಲ್ಲಿನ ಮಹಿಳೆ ಎರಡನೆಯ ದರ್ಜೆಗೇ ಮೀಸಲಾಗಿದ್ದ ಕಾಲದಲ್ಲಿ ಶಿಕ್ಷಣದಿಂದ ಮಾತ್ರ ಅರಿವು ಸಾಧ್ಯ ಎಂಬ ನಂಬಿಕೆಯೊಡನೆ ಛಲತೊಟ್ಟು ಮನೆಯಿಂದ ಸೆರಗುಹೊದ್ದು ಹೊರಬಂದ ಸಾವಿತ್ರಿಬಾಯಿ ಇಂದು ‘ಅಕ್ಷರದವ್ವ’ ಎನಿಸಿ ದೇಶಕಂಡ ಕ್ರಾಂತಿ ಮಾತೆಯಾಗಿ ನಮ್ಮೆದುರಿಗೆ ನಿಂತಿದ್ದಾಳೆ. ಇಂದು ದೇಶದೆಲ್ಲೆಡೆ ತಲೆಯೆತ್ತಿರುವ ಸಾವಿತ್ರಿಬಾಯಿ ಫುಲೆ ಹೆಸರಿನ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಅವರು ಸ್ತ್ರೀ ಶಿಕ್ಷಣ ಹಾಗೂ ವಿಮೋಚನೆಗಾಗಿ ತುಳಿದ ಕ್ರಾಂತಿಕಾರಿ ಹೋರಾಟದ ಹೆಜ್ಜೆಗುರುತುಗಳನ್ನು ಗೌರವಿಸಿ ಯಾವುದೇ ರೀತಿಯ ಧಕ್ಕೆ ಬಾರದಂತೆ ಮುಂದುವರೆಸಿಕೊಂಡು ಹೋಗಬೇಕಾಗಿದೆ. ಒಬ್ಬ ಸಾಮಾನ್ಯ ಅನಕ್ಷರಸ್ಥ ಹುಡುಗಿಯಾಗಿದ್ದ ಸಾವಿತ್ರಿಬಾಯಿ ಫುಲೆ ತನ್ನ ಅಚಲ ಶ್ರದ್ದೆ, ಭಕ್ತಿಗಳಿಂದ ಸ್ಥಾಪಿತ ವ್ಯವಸ್ಥೆಯ ವಿರುದ್ಧ ಹೋರಾಡಿ ಶಿಕ್ಷಣ ಹಾಗೂ ಮಹಿಳಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಗಣನೀಯವಾದದ್ದು.
ಮಹಿಳಾ ಕವಯತ್ರಿ, ಸಾಹಿತಿಯಾಗಿ ಸಾವಿತ್ರಿಬಾಯಿ ಫುಲೆ
ಆಗಲಿ ಕೊನೆ! ದಮನಿತರ ಕಣ್ಣೀರ ಸಂಕಷ್ಟಕ್ಕೂ ಕೊನೆ
ಇದೋ ಇಲ್ಲಿದೆ! ನಿಮ್ಮ ಕಣ್ಮುಂದೆಯೆ ಬಿದ್ದಿದೆ
ಶಿಕ್ಷಣ ರೂಪದಲಿ ಚಿನ್ನದ ಗಣಿಯು
ತಡವೇಕೆ? ನಡೆನಡೆ ಶಿಕ್ಷಣ ಪಡೆ
ಜಾತಿಯ ಸಂಕೋಲೆ ಕತ್ತರಿಸಿ ನಡೆ
ವೈದಿಕ ಶಾಸ್ತ್ರದ ಕಾಲ್ತೊಡರ ಕಿತ್ತೆಸೆದು ನಡೆ ನಡೆ!
ಈ ಪ್ರೇರಣಾದಾಯಕ ಘೋಷಣಾಯುಕ್ತ ಸಾಲುಗಳ ಮೂಲಕ ಸಾವಿತ್ರಿಯವರು ಸಮಾನ ಶಿಕ್ಷಣದೆಡೆಗೆಗಿನ ತಮ್ಮ ತುಡಿತಗಳನ್ನು ವ್ಯಕ್ತಪಡಿಸಿದರು. ‘ಕಾವ್ಯವು ಕ್ರಾಂತಿಯ ತೊಟ್ಟಿಲು’ ಆ ತೊಟ್ಟಿಲನ್ನು ತೂಗಿ ಸಹಸ್ರಾರು ದಮನಿತರ ಎದೆಗೆ ಅಕ್ಷರದ ಅಮೃತ ಎರೆದದ್ದು ಅಕ್ಷರದಾತೆ ಸಾವಿತ್ರಿಬಾಯಿ. ಸಾಹಿತ್ಯ ಮತ್ತು ಶಿಕ್ಷಣವನ್ನು ತೈಲ ಹಾಗೂ ಬತ್ತಿಯಾಗಿಸಿಕೊಂಡು ಕ್ರಾಂತಿಯ ಜ್ಯೋತಿಯಾದರು. ಕವಯತ್ರಿಯಾಗಿ ಸಾವಿತ್ರಿಬಾಯಿಯವರು ತಮ್ಮ ಬರವಣಿಗೆಯನ್ನು ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಬೆತ್ತವಾಗಿಸಿಕೊಂಡರು. ಬೌದ್ಧಿಕತೆ, ಸಾಮಾಜಿಕ ಕಳಕಳಿಯ ಜೊತೆಗೆ ಸೂಕ್ಷ್ಮ ಅಂತಃಕರಣವನ್ನು ಹೊಂದಿದ್ದ ಅವರು ‘ಆಧುನಿಕ ಮರಾಠಿಯ ಮೊದಲ ಕವಯತ್ರಿ’ಯಾಗಿ ಹೊರಹೊಮ್ಮಿದರು. 1854 ರಲ್ಲಿ ತಮ್ಮ ಮೊದಲ ಕವನ ಸಂಕಲನ ‘ ಕಾವ್ಯಫುಲೆ’ಯನ್ನು ಪ್ರಕಟಿಸಿದರು. ಅದು ಆಧುನಿಕ ಭಾರತದ ಮೊದಲ ಕವನ ಸಂಕಲನವೂ ಆಗಿರಬಹುದೆಂದು ಮರಾಠಿ ವಿಮರ್ಶಕರ ಅಭಿಪ್ರಾಯವಿದೆ. ಕಾವ್ಯಫುಲೆಯಲ್ಲಿ ಒಟ್ಟು 41 ಕವಿತೆಗಳಿದ್ದು ಪ್ರಕೃತಿ, ಚರಿತ್ರೆ, ಜಾಗೃತಿ, ಬ್ರಿಟೀಷರ ಸುಧಾರಣಾವಾದಿ ನಡೆಗಳು, ಶೋಷಿತರಿಗೆ ಬಿಡುಗಡೆಯ ಹಾಡಾದ ಇಂಗ್ಲಿಷ್ ಶಿಕ್ಷಣದಂತಹ ವಿಷಯ ವಸ್ತುಗಳನ್ನು ಒಳಗೊಂಡಿದೆ. ಈ ಕೃತಿಯು ಕವಯತ್ರಿಯ ದೃಷ್ಠಿ ಮತ್ತು ಧೋರಣೆಯ ಪ್ರತೀಕವಾಗಿದೆ. ಜನ ಜಾಗೃತಿಗಾಗಿಯೇ ಕಾವ್ಯವನ್ನು ರಚಿಸಿದ ಸಾವಿತ್ರಿಬಾಯಿಯ ಕವಿತೆಗಳು ಸರಳವಾಗಿದ್ದು ಬಂಡಾಯ ಹಾಗೂ ಹೋರಾಟದ ಹಾಡಿನ ಧಾಟಿಯಲ್ಲಿ ಜನರನ್ನು ತಲುಪಿದ್ದವು. 1892 ರಲ್ಲಿ ‘ ಬಾವನ್ ಕಶಿ ಸಬೋಧ ರತ್ನಾಕರ’ ಎನ್ನುವ ಎರಡನೆಯ ಕವನ ಸಂಕಲನವನ್ನು ಪ್ರಕಟಿಸಿದರು. ಇದು ಜ್ಯೋತಿಬಾ ಅವರ ಬದುಕಿನ ಜೀವನ ಚರಿತ್ರೆಯನ್ನು ತಿಳಿಸುವ ಕಾವ್ಯಾತ್ಮಕ ಗುಣದ ಗದ್ಯ ಕವಿತೆಗಳನ್ನೊಳಗೊಂಡ ಕೃತಿ. 1856 ರಲ್ಲಿ ತನ್ನ ಮೂರನೆಯ ಸಂಪಾದಿತ ಕೃತಿಯನ್ನು ಸಾವಿತ್ರಿಬಾಯಿ ಪ್ರಕಟಿಸಿದರು. ಜ್ಯೋತಿಬಾ ಅವರು ವಿವಿಧ ಸಂಧರ್ಭಗಳಲ್ಲಿ ಮಾಡಿದ ನಾಲ್ಕು ಭಾಷಣಗಳನ್ನು ಒಳಗೊಂಡ ಈ ಕೃತಿಯನ್ನು ಸಂಪಾದಿಸಿಕೊಟ್ಟವರು ಚಾರ್ಲ್ಸ್ ಜೋಶಿ.
1892 ರಲ್ಲಿ ಶಾಸ್ತ್ರಿ ನಾರೋ ಬಾಬಾಜಿ ಪಣಸಾರೆಯವರು ಸಾವಿತ್ರಿಬಾಯಿಯ ಭಾಷಣಗಳನ್ನು ಸಂಗ್ರಹಿಸಿ ಸಂಪಾದಿಸಿದ್ದಾರೆ. ನಂತರದಲ್ಲಿ ಸಾವಿತ್ರಿ ಬಾಯಿಯವರು ಜ್ಯೋತಿಬಾ ಅವರಿಗೆ ಬರೆದ ಮೂರು ಪತ್ರಗಳು ಪ್ರಕಟವಾಗಿವೆ. ಸಾವಿತ್ರಿಬಾಯಿಯವರ ಬದುಕು ಬರಹ, ಪತ್ರ, ಭಾಷಣಗಳನ್ನು ಕುರಿತ ಸಮಗ್ರ ಕೃತಿಯನ್ನು ಡಾ. ಎಂ.ಜಿ. ಮಾಲಿಯವರು ಸಂಪಾದಿಸಿದ್ದಾರೆ. ಸಾವಿತ್ರಿಬಾಯಿಯವರನ್ನು ಕುರಿತು ಮರಾಠಿಯಲ್ಲಿ 200 ಕ್ಕೂ ಹೆಚ್ಚು ಪುಸ್ತಕಗಳು ಹೊರಬಂದಿದ್ದು ಇತರ ಭಾಷೆಗಳಿಗೂ ಅನುವಾದಗೊಂದಿವೆ.
ಮಹಿಳಾ ಶಿಕ್ಷಣದ ಜಾಗೃತಿಗೆ ಮುನ್ನುಡಿ ಬರೆದ ಸಾವಿತ್ರಿಯವರದ್ದು ನಿರಂತರ ಚಳುವಳಿಗಳ ಏರಿಳಿತದ ಬದುಕು. ತನ್ನ ಬೌದ್ಧಿಕತೆಯಿಂದ ವಾಸ್ತವ ಸಮಸ್ಯೆಗಳನ್ನು ಗ್ರಹಿಸಿ ವೈಚಾರಿಕತೆಯೊಂದಿಗೆ ಶಿಕ್ಷಣದ ಜ್ಯೋತಿಯನ್ನು ಬೆಳಗಿಸಿದ ಕೀರ್ತಿ ಅವರದ್ದು. ಮಹಿಳೆಯರು ಸಮಾನ ಶಿಕ್ಷಣ ಪಡೆದು ಸುಶಿಕ್ಷಿತರಾಗಿರುವ ಈ ವೇಳೆಯಲ್ಲಿ ಅಂದು ಸ್ತ್ರೀ ಶಿಕ್ಷಣಕ್ಕೆ ಬುನಾದಿ ಹಾಕಿದ ಸಾವಿತ್ರಿಬಾಯಿ ಆದರ್ಶಮಾತೆಯಾಗಿ ನಿಲ್ಲುತ್ತಾಳೆ. ಸಾವಿತ್ರಿ ಕೈಗೊಂಡ ಬಾಲ್ಯವಿವಾಹ ಪದ್ಧತಿಯ ವಿರುದ್ಧದ ಪ್ರತಿಭಟನೆ, ಬ್ರಾಹ್ಮಣ ವಿಧವೆಯರ ಕೇಶಮುಂಡನ ಪದ್ದತಿಯ ವಿರೋಧ, ವಿಧವಾ ಮರು ವಿವಾಹ ಜಾರಿ, ಅಂತರ್ಜಾತಿ ವಿವಾಹಕ್ಕೆ ಪ್ರೇರಣೆ, ಪುರೋಹಿರಿಲಿಲ್ಲದ ಸರಳ ವಿವಾಹ ಪದ್ಧತಿ ಅಸ್ಪೃಶ್ಯರ ಪರವಾದ ಹೋರಾಟ ಇವೆಲ್ಲ ಸಮಾಜದಲ್ಲಿ ರೂಢಿಯಲ್ಲಿದ್ದ ಅನಿಷ್ಠ ಪದ್ಧತಿಗಳ ವಿರುದ್ಧ ಅವರ ವೈಚಾರಿಕ ಆಲೋಚನೆಗಳನ್ನು ಎತ್ತಿ ಹಿಡಿಯುತ್ತವೆ.
“ಬೆಳಗಾಮುಂಚೆ ಎದ್ದು ಬೇಗ ಬೇಗ
ಮುಗುಸ್ಬೇಕು ನಿಮ್ಮ ಕೆಲ್ಸ ಕಾರ್ಯ
ಶಿಸ್ತಾಗಿ ನೇರ್ಪಾಗಿ ತಯಾರಾಗಿ
ಹೆತ್ತೋರ್ಗೆ ಹಿರೀಕರಿಗೆ ಮನಸಲ್ಲೇ ಶರಣನ್ರಿ
ದೇವ್ರ ಹೆಸ್ರ ಹೇಳ ಹೇಳ್ಕೋತ
ಓದೋದ್ರಲ್ಲಿ ಮುಳುಗೋಗ್ರಿ
ಇವು ತುಂಬಾ ಅಮೂಲ್ಯ ದಿನಗಳು”
ಎಂದು ಹೇಳುವಂತಹ ಸಾವಿತ್ರಿ ಬಾಯಿ ತಮ್ಮ ಶಾಲೆಯ ಹಾಸ್ಟೆಲ್ ನಲ್ಲಿ ವಾಸಿಸುತ್ತಿದ್ದ ಕೆಲವರ್ಗದ, ಶೋಷಿತರ ಮಕ್ಕಳಲ್ಲಿ ಶಿಸ್ತು, ಭಯ, ಭಕ್ತಿ, ಸಮಯದ ಮಹತ್ವ, ಓದಿನ ಬಗ್ಗೆ ಜಾಗೃತಿ, ಗೌರವದ ಗುಣಗಳನ್ನು ಮೂಡಿಸಲು ಬರೆದಂತಹ ಸಾಲುಗಳಿವು. ಸಾವಿತ್ರಿ ತನ್ನ ಸಾಹಿತ್ಯವನ್ನು ಕೂಡ ಶಿಕ್ಷಣದ ಔನ್ನತ್ಯಕ್ಕಾಗಿಯೇ ಪೂರಕವಾಗಿ ಬಳಸಿಕೊಂಡಿದ್ದರು.
“ಜ್ಞಾನದಾನ ಅನ್ನದಾನಕ್ಕಿಂತ ಮುಖ್ಯ
ನೀನು ನಂಗೊಂದ್ ರೊಟ್ಟಿ ಕೊಟ್ರೆ
ಒಂದು ದಿವ್ಸದ ಹಸಿವನ್ನ ತೀರಿಸ್ದಂಗೆ
ರೊಟ್ಟಿ ಗಳಿಸೋದ್ ಹೆಂಗೇತ ಕಲಿಸಿದ್ರೆ
ಗಳಿಸೋ ಅವಕಾಶ ಕಿತ್ಕೊಳೋ ತಂಕ”
ಎನ್ನುವ ಇಂತಹ ಮಹತ್ವದ ಶಕ್ತಿಪೂರ್ಣ ಸಾಲುಗಳಲ್ಲಿ ಸಾವಿತ್ರಿಬಾಯಿ ಅವರ ದೂರದೃಷ್ಠಿಯನ್ನು ಕಾಣಬಹುದು. ಕೆಳವರ್ಗದವರನ್ನು ಜ್ಞಾನದ ಮೂಲಕ ಸಬಲರನ್ನಾಗಿ ಮಾಡುವ ಕನಸನ್ನು ನನಸಾಗಿಸಿದ್ದು ಸಾವಿತ್ರಿಬಾಯಿ ಫುಲೆಯವರು.
“ಒಬ್ಬ ಗುರುವಿನ ಶಕ್ತಿ ಮತ್ತು ಸಾಮರ್ಥ್ಯವು ಅವನ ಶಿಷ್ಯಗಣವನ್ನು ಆಧರಿಸಿರುತ್ತದೆ” ಎನ್ನುವ ಮಾತನ್ನು ಪುಷ್ಠಿಕರಿಸುವಂತೆ ಸಾವಿತ್ರಿ ಬಾಯಿಯ ಹನ್ನೊಂದು ವರ್ಷದ ದಲಿತ ವಿದ್ಯಾರ್ಥಿನಿ ಮುಕ್ತಾಬಾಯಿ ‘ಮಹರ್ ಮತ್ತು ಮಾಂಗ್ ಸಮುದಾಯದ ದುಃಖ – ದುಮ್ಮಾನಗಳು’ ಎಂಬ ಒಂದು ಕ್ರಾಂತಿಕಾರಿ ಪ್ರಬಂಧವನ್ನು ಬರೆದಿದ್ದಾಳೆ. ಮತ್ತೊಬ್ಬ ಶಿಷ್ಯೆ ತಾರಾಬಾಯಿ ಶಿಂಧೆ ‘ಸ್ತ್ರೀ ಪುರುಷ ತುಲನ’ ಎಂಬ ಸ್ತ್ರೀವಾದಿ ಬರಹವನ್ನು ಬರೆದು ಭಾರತದ ಮೊತ್ತಮೊದಲ ಸ್ತ್ರೀವಾದಿ ಲೇಖಕಿಯಾಗಿ ಹೊರಹೊಮ್ಮಿದ್ದಾಳೆ. ಹೀಗೆ ತನ್ನ ಶಿಷ್ಯಂದಿರ ಮೇಲೂ ಸಕಾರಾತ್ಮಕ ಪ್ರಭಾವವನ್ನೇ ಬೀರಿರುವ ಸಾವಿತ್ರಿಬಾಯಿ ಫುಲೆ ಸರ್ವ ಕಾಲಕ್ಕೂ ಆದರ್ಶ ಶಿಕ್ಷಕಿಯಾಗಿ ನಮ್ಮೆದುರು ನಿಲ್ಲುತ್ತಾರೆ.
–ತೇಜಾವತಿ ಎಚ್. ಡಿ.