ನಿಸರ್ಗದೊಡೆಯನ ನಿತ್ಯದರ್ಶನದ ವಿಶ್ವರೂಪ: ಜಹಾನ್ ಆರಾ ಕೋಳೂರು, ಕುಷ್ಟಗಿ

“ಪ್ರಯತ್ನಂ ಸರ್ವಸಿದ್ದಿ ಸಾಧನಂ ದೈರ್ಯಂ ಸರ್ವೇಕ್ಷಣ ಆಯುಧ “
ಎಂಬ ಭಗವದ್ಗೀತೆಯ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ಸೂರ್ಯನನ್ನೇ ಒಲಿಸಿಕೊಳ್ಳುವ ಪ್ರಯತ್ನದಲ್ಲಿರುವ ಬೆಳಗು ಕವಿತೆಗಳನ್ನು ಬರೆದ ಕವಿಗೆ ಅಭಿನಂದನೆಗಳು. ದಿನನಿತ್ಯ ಫೇಸ್ಬುಕ್ನಲ್ಲಿ ವಾಟ್ಸಪ್ ನಲ್ಲಿ ಬರುತ್ತಿದ್ದಂತಹ ಬೆಳಗು ಕವಿತೆಗಳು ಇಂದು ಸಂಕಲನವಾಗಿ ‘ವಿಶ್ವಾಸದ ಹೆಜ್ಜೆಗಳು’ ಎಂಬ ಶಿರೋನಾಮೆಯಲ್ಲಿ ಬಿಡುಗಡೆಗೊಂಡಿದೆ. ಅಂತಹ ಸುಂದರ ಕವಿತೆಗಳನ್ನು ಓದುವುದೇ ಒಂದು ಹರ್ಷ. ಹಾಗೂ ಅವುಗಳ ಬಗ್ಗೆ ಹೇಳುವುದು ಅಥವಾ ನಾಲ್ಕು ಜನರ ಮುಂದೆ ತೆರೆದಿಡುವುದು ನಿಜಕ್ಕೂ ಒಂದು ಖುಷಿಯೇ ಹೌದು. ಸೂರ್ಯನ ಹೃದಯಸ್ಪರ್ಶಿ ಬೆಳಗು, ಮಿಹಿರನ ಪ್ರೇಮ ಚಿತ್ತಾರದ ಬೆಳಗನ್ನು ನಾನು ಎಷ್ಟು ದಕ್ಕಿಸಿಕೊಂಡಿದ್ದೇನೆ ಎಂಬುದನ್ನು ನಿಮ್ಮ ಮುಂದೆ ಇಡಲು ಇಚ್ಚಿಸುತ್ತೇನೆ.

ಪ್ರಾರಂಭದಲ್ಲಿ ಕವಿ ಕವಿತೆಯನ್ನು ಬರೆಯುತ್ತಾರೆ ಬರೆಯುತ್ತಾ ಬರೆಯುತ್ತಾ ಕಾವ್ಯದಲ್ಲಿ ಅವನು ಬದುಕಲು ಪ್ರಾರಂಭಿಸುತ್ತಾನೆ ಯಾವಾಗ ಅವನು ಕಾವ್ಯದಲ್ಲಿ ಬದುಕು ಪ್ರಾರಂಭಿಸುತ್ತಾನೋ ಆಗ ಅವನಿಗೆ ಕಾವ್ಯ ಒಲಿಯುತ್ತದೆ ಕಾವ್ಯಕ್ಕೆ ತನ್ನದೇ ಆದಂತಹ ನಿಯಮಗಳು ಇವೆ ನಿಜ ಆದರೆ ಕಾವ್ಯವನ್ನು ಕಾವ್ಯವಾಗಿ ನೋಡಬೇಕು ಅನುಭವಿಸಬೇಕು ಪ್ರೀತಿಸಬೇಕು ಅರ್ಥೈಸಿಕೊಳ್ಳಬೇಕು. ಕಿರಂ ಅವರ ಒಂದು ಮಾತಿನಂತೆ “ಕವಿತೆ ಕವಿತೆ ಅಷ್ಟೇ ಅದಕ್ಕೆ ಬೇರೆ ಏನು ಮಾಡಬೇಡಿ ಅದರ ಪಾಡಿಗೆ ಅದನ್ನು ಬಿಡಿ, ಕವಿತೆ ಘೋಷಣೆಯಾಗಿರಬಾರದು ಭಾಷಣವಾಗಿರಬಾರದು ಕವಿತೆ ಕವಿತೆಯಾಗಿರಬೇಕು” ಇದು ಕೀರಂ ಅವರ ಕಾವ್ಯಪ್ರೀತಿ.

ಕಾವ್ಯಕ್ಕೆ ನಿರ್ದಿಷ್ಟ ವಸ್ತುವಿಷಯ ಅನ್ನುವುದು ಕೂಡ ಇಲ್ಲ. ಕಾವ್ಯ ಎನ್ನುವ ದ್ರವ್ಯ ಎಲ್ಲಾ ಪಾತ್ರೆಗಳಲ್ಲಿಯೂ ತನ್ನ ಆಕಾರವನ್ನು ಪಡೆದುಕೊಳ್ಳುತ್ತದೆ. ಬೆಳಗು ಕವಿತೆಗಳು ಅಥವಾ ಬೆಳಕನ್ನು ಕಾವ್ಯ ವಸ್ತುವನ್ನಾಗಿಸಿಕೊಂಡ ಅನೇಕ ಮಹನೀಯರ ಅತ್ಯುತ್ತಮವಾದ ಶ್ರೇಷ್ಠವಾದ ಕವಿತೆಗಳು ಸಾಲುಗಟ್ಟಿ ನಾ ಮುಂದು ತಾ ಮುಂದು ಎಂದು ನಿಲ್ಲುತ್ತವೆ. ಆದರೆ ಸಂಪೂರ್ಣ ಸಂಕಲನವನ್ನು ಬೆಳಕಿಗೆ ಮೀಸಲಾಗಿಸಿ ನೂರೈವತ್ತು ಬಗೆಯಲ್ಲಿ ಬೆಳಕನ್ನು ಅದರ ಪ್ರಜ್ವಲ ತೆಯನ್ನು ಒಂದುಗೂಡಿಸಿರುವುದು ವಿಶ್ವಾಸದ ಹೆಜ್ಜೆಗಳು ಕೃತಿಯ ವಿಶೇಷತೆ. ‘ಎಲ್ಲಾರ ಸೂರ್ಯ’ ಎಂಬ ಕಾವ್ಯ ಅಂಕಿತದಿಂದ ಸಾರಸತ್ವ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸುರೇಶ್ ರಾಜಮಾನೆಯವರ ನಿಸರ್ಗ ಪ್ರೀತಿ ಸಾಮಾಜಿಕ ಸಮಸ್ಯೆಗಳಿಗೆ ನೀಡಿರುವ ಸ್ಪಂದನೆ ವಯೋಗುಣಕ್ಕೆ ತಕ್ಕ ಪ್ರೀತಿ, ಹೋರಾಟ, ಸಂಘರ್ಷ ಎಲ್ಲವೂ ಸಂಕಲನದಲ್ಲಿ ಸ್ಥಾನ ಪಡೆದುಕೊಂಡಿದೆ.

ಬೆಳಕಿನಲ್ಲಿ ಎಲ್ಲವೂ ಸ್ಪಷ್ಟ ಎಲ್ಲವೂ ಸುಂದರ ಎಲ್ಲವೂ ದೃಶ್ಯ ನಿಜ ಆದರೆ ಎಲ್ಲರಿಗೂ ಬೆಳಕು ದೃಶ್ಯವಲ್ಲ ನಾವು ಬೆಳಕನ್ನು ನೋಡಬೇಕಾದರೆ ಒಳಗಣ್ಣು ಬೇಕು ಆಧ್ಯಾತ್ಮಿಕ ದೃಷ್ಟಿ ಬೇಕು ಸೌಂದರ್ಯದ ಕಣ್ಣು ಅಥವಾ ಕಾವ್ಯಾತ್ಮಕ ಶಕ್ತಿ ಬೇಕು ಜೊತೆಗೆ ಆ ಬೆಳಕನ್ನು ಅನುಭವಿಸುವ ಸಂಭ್ರಮಿಸುವ ಅಂತಃಕರಣ ಬೇಕು. ಬೇಂದ್ರೆ ಮತ್ತು ಅವರ ಸಮಕಾಲೀನ ಕವಿಗಳು ಬೆಳಕು ಮತ್ತು ಅದರ ದಿವ್ಯತೆಯ ಬಗ್ಗೆ ಅನೇಕ ಕವಿತೆಗಳನ್ನು ಸೃಷ್ಟಿಸಿದ್ದಾರೆ ಅದ್ಯಾವುದೂ ಕೇವಲ ಐಂದ್ರಿಕ ಅನುಭವಗಳ ಕಥನವಾಗಿಲ್ಲ ಅದು ಅವರ ತಾತ್ವಿಕತೆಯ ಚಿಂತನೆ ದರ್ಶನ ಇತ್ಯಾದಿ ದೃಷ್ಟಿಕೋನಗಳ ಒಂದು ಅಣುಕು ನೋಟವಾಗಿತ್ತು. ಹಾಗೆಯೇ ಇಲ್ಲಿ ಕವಿಮಿತ್ರರ ಸಾಮಾಜಿಕ ಕಳಕಳಿ ಪ್ರಾಕೃತಿಕ ಪ್ರೀತಿ, ಒಲವು, ಕೋಪ, ನಿರಾಶೆ, ಆಸೆ, ವಿಡಂಬನೆ, ವಿಜೃಂಭಣೆ ಸಂಕಟ ಎಲ್ಲವನ್ನು ಸೂರ್ಯನ ಮೇಲೆ ಹಾಕಿ ಎಲ್ಲದಕ್ಕೂ ಸೂರ್ಯನೇ ಕಾರಣ ಎನ್ನುವ ಹಾಗೆ ಅನನ್ಯವಾದ ಸೌರಮಂಡಲದ ಸೂರ್ಯನನ್ನು ಸಾಹಿತ್ಯಕವಾಗಿಯೂ ಕೇಂದ್ರವನ್ನಾಗಿಸಿ ಕವಿ ಎಲ್ಲರ ಗಮನ ಸೆಳೆದಿದ್ದಾರೆ. ಬೆಳಕಿಗೆ ಪ್ರಪಂಚದ ಎಲ್ಲಾ ತತ್ವಗಳು ಅನ್ವಯವಾಗುವುದುರಿಂದಲೇ ಸುರೇಶ ರಾಜಮಾನೆ ಹಾಕಿರುವ ಭಾರವನ್ನು ನೇಸರ ತನ್ನದಾಗಿಸಿಕೊಂಡಿದ್ದಾನೆ. ಸೂರ್ಯ ಇಡೀ ಜಗತ್ತಿಗೆ ಅನನ್ಯ ಅವನ ಮೂಲಕ ವಿಶ್ವಮಾನವತ್ವ, ವಿಶ್ವಭಾತೃತ್ವ ತತ್ವ ಸಾರಬೇಕು ಇಲ್ಲಿ ಅವನೇ ಶಿವ, ಅವನೇ ಸ್ಥಾಯಿ, ಅವನೇ ಧರ್ಮ, ಅವನೇ ಮೇಲು, ಅವನೇ ಸರ್ವಸ್ವ.

” ಬೆಳಕು ನಮಗದೇ ಸಾಕು
ಸುಡು ಸೂರ್ಯ ಯಾಕ ಬೇಕು? “
ಎಂದು ಬೆಳದಿಂಗಳ ನೋಡ ಕವಿತೆಯಲ್ಲಿ ಹೇಳಿದ ಬೇಂದ್ರೆ ಮುಂದೆ ಇದು ಬರಿ-ಬೆಳಗಲ್ಲೋ ಅಣ್ಣಾ ಎಂದು ಪ್ರಕೃತಿ ಕಣಕಣದಲ್ಲಿಯೂ ಸೂರ್ಯನ ಪ್ರೀತಿತುಂಬಿದ ಬೆಳಕಿನ ವರ್ಣನೆ ನೀಡಿದ್ದಾರೆ. ಈ ಒಂದೇ ಸಾಲು ಒಂದು ಇಡಿಯಾದ ಸಂಕಲನಕ್ಕೆ ಸ್ಫೂರ್ತಿ ನೀಡಿದೆ ಎಂದರೆ ಅದು ಬೆಳಕಿಗಿರುವ ಶಕ್ತಿಯೇ ಹೌದು. ಇಲ್ಲಿ ಸೂರ್ಯನ ಉಗಮವನ್ನು ಪ್ರೇರಣಾತ್ಮಕ ಕಾವ್ಯವೆಂದುಕೊಂಡರೆ ಅದೇ ಸೂರ್ಯ ಮುಳುಗುವುದು ಆಧ್ಯಾತ್ಮಿಕ ಕಾವ್ಯವಾಗುತ್ತದೆ.

ಯಾವ ಗುಡಿ ಮಿಗಿಲು ಆ ಭುವನ
ದೇವಾಲಯಕ್ಕೆ?
ಮೇಣಾವ ವಿಗ್ರಹಂ ಮೀರಿಸುವುದೇ
ಚೈತ್ರ ಪಂಚಮಿಯ ದಿವ್ಯ ಸೂರ್ಯದೇವನಿಗೆ?

ಎಂದು ಕುವೆಂಪು ಅವರು ಸಹ ಸೂರ್ಯನನ್ನು ಅವನ ದಿವ್ಯತೆಯನ್ನುಹೊಗಳಿದ್ದಾರೆ.

ಬೆಳಗು ಕವಿತೆ ಹೇಗೆ ಆಗಿದೆ ಎಂಬುದನ್ನು ಇಲ್ಲಿ ಕವಿ ಒಂದು ಪದ್ಯದಲ್ಲಿ ಹೇಳುತ್ತಾರೆ ಮನದ ಮುಸುಕು ತೆರೆದು ಬೆಳಕು ಹರಿದಿದೆ ಮೂಲೆಮೂಲೆಯಲ್ಲಿ ಎನ್ನುವ ಭಾವದಲ್ಲಿ ಈ ಪದ್ಯ ನಿಲ್ಲುತ್ತದೆ.
ಹಾಗೆಯೇ ಬೆಳಕೊಂದು ಬದುಕನ್ನು ಬದುಕಿಸಿತು ಈ ಒಂದು ಸಾಲು ಭೂಗರ್ಭದ ಒಳಗಿನ ಮೊಳಕೆಗೆ ಅಷ್ಟೇ ಅಲ್ಲ ಇಲ್ಲಿ ಬದುಕಿರುವ ಎಲ್ಲ ಸಕಲ ಚರಾಚರ ಜೀವಿಗಳಿಗೆ ಚೈತನ್ಯ ನೀಡುವಂತಹದ್ದು ಜನ್ಮ ನೀಡುವಂತದ್ದು ಉಲ್ಲಾಸ ನೀಡುವಂಥದ್ದು ಬಿತ್ತಿದ ಬೀಜದಲ್ಲಿ ನಮ್ಮನ್ನು ನಾವು ಕಾಣ ಬೇಕಾಗಿದೆ. ಪುಸ್ತಕವನ್ನು ಕೈಲಿ ಹಿಡಿದುಕೊಂಡು ಓದುತ್ತಿರುವಾಗ ಇಂತಹ ಅನೇಕ ಸಾಲುಗಳು ಪದ್ಯದಿಂದ ಎದ್ದು ಬಂದು ನಮ್ಮ ಮುಂದೆ ನಿಲ್ಲುತ್ತವೆ ಸೂರ್ಯನ ವಿಶ್ವರೂಪವನ್ನು ಕನ್ನಡಿಯಲ್ಲಿ ತೋರಿಸುತ್ತಾ ಅದನ್ನು ಅನುಭವಿಸಲು ಪ್ರಚೋದಿಸುತ್ತಾ ಭರವಸೆಯ ದೀವಿಗೆಯನ್ನು ಹಚ್ಚಿ ದಾರಿ ತೋರಿಸುತ್ತಿವೆ. ಜೊತೆಯಲ್ಲಿ ನಮ್ಮತನವನ್ನು ಆತ್ಮಾವಲೋಕನ ಮಾಡಿಕೊಳ್ಳಲು ಆ ಪರಮಾತ್ಮನ ಸೃಷ್ಟಿಯನ್ನು ಕಾಯಲು ಕಾಪಾಡಲು ಸಂಭ್ರಮಿಸಲು ಅರಿವಿನ ಸತ್ಪಥದಲ್ಲಿ ನಡೆಯಲು ನಮ್ಮನ್ನು ಸಂಸ್ಕೃತಿಯನ್ನು ಬೆಳೆಸಲು ಹೃದಯವಂತಿಕೆಯ ಸೆಲೆಯಾಗಿ ಸೂರ್ಯನ ರೂಪದಲ್ಲಿ ಆ ಪರಮಾತ್ಮ ಮಾರ್ಗದರ್ಶನ ನೀಡಲು ನಿಂತಿದ್ದಾನೆ.
ಹೊಸ ಬೆಳಕು ಮೂಡುತಿದೆ
ಹೊಸತನವ ಸುರಿಯುತಿದೆ
ಹೊಸ ಭಾವದ ರಸಕಾವ್ಯವ
ಹೊಸತನದಿ ಬರೆಯುತ್ತಿದೆ
ಸೂರ್ಯ ಯಾವತ್ತಿಗೂ ಹೊಸತನದ ಸಂಕೇತ ಹಾಗೆ ಅವನು ತೇಜಸ್ವಿ. ಅವನಲ್ಲಿ ಬೆಳಕಿದೆ ಎನ್ನುತ್ತೇವೆ ವಿನಃ ಕತ್ತಲಿದೆ ಎಂದು ಯಾರು ಹೇಳುವುದಿಲ್ಲ. ಹೊಸತನದ ಹೊಂಬೆಳಕು ಪದ್ಯದಲ್ಲಿ ಹೊಸ ಚೇತನವ ಕುಣಿಸಿದಂತೆ ಎಂದು ಹೇಳುತ್ತಾರೆ.
ಮೂಡಣದಿ ಮುಖವರಳಿಸಿ ನಕ್ಕು
ನೆತ್ತಿಗೇರಿ ಬೆವರಿಳಿಸಲು ಸಜ್ಜಾದ ನೇಸರ
ಬಿಸಿಲಿದು ಭಯಂಕರ ಹೆಂಗಮಾಡೋದೋ ದೇವ್ರ..
ಹೊಸ್ತಿಲ ದಾಟಲು ಹೊತ್ತಿರಿತು
ಸುಡುವ ಬೆಂಕಿಯ ನಗುವನ್ನು
ಮತ್ತೆ ಮತ್ತೆ ನೆನೆದು
ಮನಸ್ಸು ಬೆಚ್ಚಿಬೀಳುವಂತೆ ಮಾಡಿದ
ಭಯದ ಬೆಳಕು
ಈವರೆಗೂ ಸೂರ್ಯನ ಹೊಂಬೆಳಕಿನ ಬಗ್ಗೆ ವರ್ಣಿಸಿದಾತನೆ ಸೂರ್ಯನನ್ನು ಭಯಂಕರ ಎನ್ನುತ್ತಾನೆ ಅವರ ಮೊದಲ ಕವನ ಸಂಕಲನದ ಶೀರ್ಷಿಕೆಯೊಂದಿಗೆನೆ ಬೆಳೆದಿರುವ ಒಂದು ಕಾವ್ಯದಲ್ಲಿ ಬೆಂಕಿಯನ್ನು ಮತ್ತೆ ಮತ್ತೆ ನೆನೆದು ಮನಸ್ಸು ಬೆಚ್ಚಿಬೀಳುವಂತೆ ಮಾಡಿದ ಭಯಂಕರ ಬಿಸಿ ಬೆಳಗು ಎನ್ನುತ್ತಾರೆ.

ಕತ್ತಲ ಗರ್ಭದಲ್ಲೇ ಕಂಡ
ಕನಸನ್ನು ಕೊಂದು
ನಾಟಕೀಯ ನಗು ಬೀರಿದ
ನಯವಂಚಕ ಬೆಳಕು

ಕತ್ತಲಗರ್ಭದಲ್ಲೇ ಕನಸು ಸಾಯುವುದು ಅಂದರೆ ಒಂದು ನಿರೀಕ್ಷೆ ಹುಸಿಯಾಗುವುದು ಒಂದು ಆಸೆ ನಿರಾಶೆಯ ವೇಷ ತೊಡುವುದು ಕವಿಗೆ ತನ್ನ ನೋವಿಗಾದ ಗಾಯಕ್ಕೆ ಸೂರ್ಯನ ಪ್ರತಿಸ್ಪಂದನ ವಿರುದ್ಧ ಹೋರಾಟ ಸಮಾಜಮುಖಿಯಾಗಿ ನಿಲ್ಲುವ ಭಾವ ಪದ್ಯದಲ್ಲಿದೆ. ಆಕಾಶವನ್ನೇ ಒಂದು ಸಾಮ್ರಾಜ್ಯವನ್ನಾಗಿಸಿ ಅಲ್ಲಿ ಸೂರ್ಯನನ್ನು ಒಮ್ಮೆ ಅರಸನನ್ನಾಗಿಸಿ ಒಮ್ಮೆ ಕಾಯಕಯೋಗಿಯಾಗಿ ನಿಲ್ಲಿಸಿ ಮಗದೊಮ್ಮೆ ರಸಿಕ ರಾಜನಾಗಿಸುತ್ತ ನೀಡಿರುವ ರೂಪಕಗಳು ಬಹಳ ಸೊಗಸಾಗಿವೆ. ಮುಗಿಲು ಮನಮುಗಿಲು ರವಿ ಸೂರ್ಯನಿಗೆ ಮಾನವ ರೂಪದಲ್ಲಿರುವ ಮಾನವೀಯತೆ ಕವಿತೆಗಳು ಮೆರೆದಿವೆ.

ಈ ಸಂಕಲನದಲ್ಲಿ ಬರೀ ಸೂರ್ಯನನ್ನು ಮಾತ್ರ ಕುರಿತಾದ ಕವಿತೆಗಳು ಇವೆ ಎಂದು ಭಾವಿಸುವುದು ತಪ್ಪು ಆ ಸೂರ್ಯನ ಬೆಳಕಿನಲ್ಲಿ ಕಾಣುವ ಮತ್ತು ಕಾಣದ ಅದೆಷ್ಟೋ ಸಂಗತಿಗಳು ನಿಧಾನವಾಗಿ ಸೂರ್ಯನ ಬೆರಳು ಹಿಡಿದುಕೊಂಡು ಸಾಗುವ ಸಾಲುಸಾಲು ದೃಶ್ಯಗಳನ್ನು ಕವಿಮಿತ್ರ ಸಂಕಲನದಲ್ಲಿ ಪೋಣಿಸಿದ್ದಾರೆ. ಸೂರ್ಯ ಯಾವತ್ತಿಗೂ ಭೂಮಿಯ ಪ್ರೇಮಿ ಎನ್ನುವ ಭಾವದಲ್ಲಿ ಅನೇಕ ಸಾಲುಗಳು ರೋಮಾಂಚನಗೊಳಿಸುತ್ತವೆ. ಅನ್ಯಾಯದ ವಿರುದ್ಧ ಸಿಡಿದೆದ್ದ ಬಂಡಾಯಗಾರರ ಕೆಲವು ಕವಿತೆಗಳು ಶಕ್ತಿಯನ್ನು ಹಾಕಿ ಪ್ರತಿಭಟಿಸುತ್ತವೆ ಮತ್ತೆ ಕೆಲವು ಅಂತರಾಳದ ಪ್ರೀತಿಯ ಹೊಂಗಿರಣಗಳನ್ನು ನಿಧಾನವಾಗಿ ಹರಿಯಲು ಬಿಡುತ್ತವೆ. ಬಡವನ ಪಾಲಿಗೆ ಸೂರ್ಯನಾಗಿ ನಿಲ್ಲುವ ನೇಸರ ಚೆಲುವೆಯ ಮನೆ-ಮನದ ಬಾಗಿಲು ತೆರೆಯುವ ಮಿಹಿರನಾಗುತ್ತಾನೆ ಸವಿತ್ರನಾಗುತ್ತಾನೆ. ಒಟ್ಟಿನಲ್ಲಿ ಹೇಳುವುದಾದರೆ ಜೀವನದ ಎಲ್ಲಾ ಆಯಾಮಗಳಲ್ಲಿ ಸೂರ್ಯನ ಬೆಳಕನ್ನು ಎಲ್ಲರೂ ಆಶ್ವಾಧಿಸುತ್ತಾರೆ ಈ ಸೂರ್ಯ ಎಲ್ಲರಿಗೂ ಅದನ್ನು ಕವಿತೆಗಳ ಮೂಲಕ ತಲುಪಿಸಿದ್ದಾರೆ. ಅವರ ಪ್ರಯತ್ನ ನಿರಂತರವಾಗಿರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.

-ಜಹಾನ್ ಆರಾ ಕೋಳೂರು, ಕುಷ್ಟಗಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x