ಹಸಿವಿನಿಂದ ಹೊಟ್ಟೆ ತುಂಬುವವರೆಗೆ ಒಂದು ಕಿರು ನೋಟ: ಸುಮ ಉಮೇಶ್

ಮೊದಲ ತುತ್ತು: ಅನ್ನಪೂರ್ಣೇ ಸದಾಪೂರ್ಣೆ

ಹಸಿವು ಎನ್ನುವುದು ಎಷ್ಟು ಘೋರ. ಹೊಟ್ಟೆ ತುಂಬಿದ ನಮಗೆಲ್ಲ ಹಸಿವಿಂದ ಬಳಲುವವರ ಸಂಕಟ ಊಹೆಗೂ ನಿಲುಕದ್ದು. ದಿನಕ್ಕೆ ಮೂರು ನಾಲ್ಕು ಬಾರಿ ತಿಂದರೂ ತೃಪ್ತಿಯಿಲ್ಲದ ಈ ಜೀವಕ್ಕೆ ದಿನಕ್ಕೆ ಒಂದು ಹೊತ್ತಿನ ಊಟಕ್ಕೂ ಪರದಾಡಿ, ಕೊನೆಗೆ ಸಿಕ್ಕ ಅಲ್ಪಾಹಾರವನ್ನೇ ಸಂತೋಷದಿಂದ ತಿಂದು ಈ ದಿನ ಇಷ್ಟಾದರೂ ಸಿಕ್ಕಿತಲ್ಲ ಅನ್ನೋ ತೃಪ್ತಿಯ ಕಲ್ಪನೆ ನಮಗೆ ಇಲ್ಲ.

ಅದೊಂದು ಕಾಲವಿತ್ತಂತೆ. ಬೆಳಿಗ್ಗೆ ಶಾಲೆಗೆ ಹೊರಟ ಮಕ್ಕಳು ಜೋಳದ ಮುದ್ದೆಗೆ ಉಪ್ಪಿನಕಾಯಿ ನೆಂಚಿಕೊಂಡು ತಿಂದು ಮತ್ತೆ ರಾತ್ರಿವರೆಗೂ ಏನೂ ತಿನ್ನುತ್ತಿರಲಿಲ್ಲವಂತೆ. ಮನೆಗೆ ನೆಂಟರು ಬಂದಾಗ ಮಾತ್ರ ಅನ್ನ ಮಾಡಿ ಅವರಿಗೆ ಮಾತ್ರ ಬಡಿಸಿ ಉಳಿದವರು ಮುದ್ದೆ ಗಂಜಿ ತಿನ್ನುತ್ತಿದ್ದರಂತೆ. ಯಾಕೆಂದರೆ ಅಕ್ಕಿಯ ಬೆಲೆ ಜಾಸ್ತಿ ಮತ್ತು ರಾಗಿ ಜೋಳದ ಬೆಲೆ ಕಡಿಮೆ ಇರುತ್ತಿದ್ದುದರಿಂದ. ಅಥವಾ ಮಂಡಕ್ಕಿ ತಿಂದು ನೀರು ಕುಡಿದು ಮಲಗುವ ಪರಿಪಾಠ. ಬಿಸಿಬಿಸಿ ಅನ್ನದ ಭಾಗ್ಯ ಸಿಗುತ್ತಿದ್ದದ್ದು ಬಾಣಂತಿ ಮತ್ತು ರೋಗಿಗಳಿಗೆ ಮಾತ್ರವಂತೆ. ಶಾಲೆಗೆ ಹೋಗುವ ಮಕ್ಕಳು ಮಧ್ಯಾಹ್ನ ಏನೂ ತಿನ್ನದೇ ಶಾಲೆಯ ಅಕ್ಕಪಕ್ಕದ ಮನೆಗಳಲ್ಲಿ ಕೊಡುತ್ತಿದ್ದ ನೀರು ಮಜ್ಜಿಗೆ ಕುಡಿದು ಖುಷಿಯಿಂದ ಕುಪ್ಪಳಿಸುತ್ತಿದ್ದರಂತೆ. ಆದರೂ ಹಿಂದಿನ ಜನ ಯಾವುದೇ ಅತೃಪ್ತಿ ಹೊರ ಹಾಕದೇ ಇದೆಲ್ಲ ಮಾಮೂಲಿ ಎನ್ನುವಂತೆ ಜೀವಿಸುತ್ತಿದ್ದರಂತೆ. ಇದೆಲ್ಲ 50 – 60 ವರ್ಷದ ಹಿಂದಿನ ಕಥೆ.

ಯಾರೋ ಮಹಾತ್ಮರು (ಹೆಸರು ನೆನಪಿಗೆ ಬರುತ್ತಿಲ್ಲ) ತಾವು ಊಟಕ್ಕೆ ಕುಳಿತಾಗ ಪಕ್ಕದಲ್ಲಿ ಒಂದು ಸೂಜಿ ಮತ್ತೊಂದು ನೀರಿನ ಲೋಟ ಇಟ್ಟು ಕೊಳ್ಳುತ್ತಿದ್ದರಂತೆ. ತಿನ್ನುವಾಗ ಒಂದು ಅಗುಳು ಕೆಳಕ್ಕೆ ಬಿದ್ದರು ಸೂಚಿಯಿಂದ ಎತ್ತಿ ನೀರಿನ ಲೋಟದಲ್ಲಿ ಅದ್ದಿ ತಿನ್ನುತ್ತಿದ್ದರಂತೆ. ಒಂದಗುಳೂ ಸಹ ವ್ಯರ್ಥ ಮಾಡಬಾರದು ಎನ್ನುವ ಮಹೋನ್ನತ ಉದ್ದೇಶ ಮತ್ತು “ಅನ್ನ ಪರಬ್ರಹ್ಮ” ಎನ್ನುವ ದೈವೀಕ ಭಾವವನ್ನೇ ಅಳವಡಿಸಿಕೊಂಡವರು. ಈ ಕತೆಯನ್ನು ಇಂದಿನ ಮಕ್ಕಳಿಗೆ ಹೇಳಿದರೆ ನಕ್ಕು ಬಿಟ್ಟಾರು.!!!!

ರಸಋಷಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶ್ರೀ ಕುವೆಂಪುರವರಿಗೂ ಈ ಹಸಿವಿನ ಶಾಪ ತಟ್ಟದೇ ಬಿಟ್ಟಿಲ್ಲ. ಒಮ್ಮೆ ಎರಡು ತಿಂಗಳ ಕಾಲ ಸರಿಯಾಗಿ ಹೊಟ್ಟೆಗಿಲ್ಲದೆ ಬಳಲಿ ರಾತ್ರಿ ಮಲಗಿದಾಗ ಹಸಿವೆ ತಾಳದೆ ಧಿಗ್ಗನೆದ್ದು ಹೊರಗೆ ಬಂದರಂತೆ. ಅಲ್ಲಿ ಒಣಗಿಸಲು ಇಟ್ಟಿದ್ದ ಗಟ್ಟಿ ಸಂಡಿಗೆ, ಒಣಮೆಣಸಿನಕಾಯಿಯನ್ನು ಗಬಗಬ ತಿಂದರಂತೆ. ಯಾವುದೋ ಕಾರಣಕ್ಕೆ ಬಿಸಿ ನೀರಿಗೆ ಬೇವಿನ ಸೊಪ್ಪು ಹಾಕಿ ಇಟ್ಟಿದ್ದ ಒಂದಿಡೀ ದೊಡ್ಡ ಪಾತ್ರೆಯ ನೀರನ್ನು ಗಟಗಟ ಕುಡಿದು ತಮ್ಮ ಹಸಿವು ತೀರಿಸಿಕೊಂಡರಂತೆ. ಇಂಥ ಅಸಂಖ್ಯಾತ ಉದಾಹರಣೆಗಳಿವೆ.

ಸುಮಾರು 30 – 35 ವರ್ಷದ ಹಿಂದೆ ಕೆಲ ಮಧ್ಯಮ ವರ್ಗದ ಕುಟುಂಬಗಳಿಗೆ ತಿನ್ನಲು ಹೊಟ್ಟೆ ತುಂಬಾ ಊಟವಿದ್ದರೂ, ಪದೇ ಪದೇ ಹೋಟೆಲ್ ತಿಂಡಿ ತಿನ್ನುವಷ್ಟು ಅನುಕೂಲವಾಗಲೀ, ಆಸೆಯಾಗಲೀ, ಅವಶ್ಯಕತೆಯಾಗಲಿ ಅನೇಕರಿಗೆ ಇರಲಿಲ್ಲ. ಕಾರಣಗಳು ಹಲವಾರು. ಆಗ 75% ಮಹಿಳೆಯರು ಗೃಹಿಣಿಯರೇ ಆಗಿರುತ್ತಿದ್ದರು. ಹೊತ್ತುಹೊತ್ತಿಗೆ ಬಿಸಿಬಿಸಿ ಅಡುಗೆ ತಿಂಡಿ ಮಾಡುವ ಮನೆಗಳಲ್ಲಿ ಹೊರಗೆ ಹೋಗಿ ತಿನ್ನುವ ಖಯಾಲಿ ಅಷ್ಟಾಗಿ ಇರಲಿಲ್ಲ. ಬೇಕರಿ ತಿಂಡಿಗೆ ಐವತ್ತು ರೂಪಾಯಿ ಕೊಡುವ ಬದಲು ಅದೇ ಐವತ್ತು ರೂಪಾಯಿಗೆ ಮನೆಯಲ್ಲಿ ತಿಂಡಿ ಮಾಡಿದರೆ ಮನೆ ಮಂದಿಯೆಲ್ಲ ಹೊಟ್ಟೆ ತುಂಬಾ ತಿನ್ನಬಹುದು ಎನ್ನುವ ಜಾಣತನವನ್ನು ಬಹುಶಃ ಆಗ ನಮ್ಮ ನಿಮ್ಮೆಲ್ಲರ ಅಮ್ಮಂದಿರು ಮೆರೆದಿರುತ್ತಾರೆ. ಅವರಿಗೆಲ್ಲಾ ಎಂದಿಗೂ ಅದರ ಅಗತ್ಯ ಕೂಡ ಕಂಡು ಬರಲಿಲ್ಲ. ಯಾವುದೇ ಅತೃಪ್ತಿಯಿಂದ ಬಳಲದೆ ಮನೆಯಲ್ಲಿ ಮಾಡಿದ ಶುಚಿರುಚಿಯಾದ ತಿಂಡಿ ತಿನಿಸುಗಳನ್ನು ಬಹಳ ಖುಷಿಯಿಂದ ತಿನ್ನುತ್ತಿದ್ದ ಕಾಲವದು. ಅನ್ನ ಹುಳಿಗೆ ತುಪ್ಪ ಹಾಕಿಕೊಂಡು ತಿಂದರೆ “ಆಹಾ” ಎನ್ನುವಷ್ಟು ತೃಪ್ತಿಯಾಗುತ್ತಿತ್ತು. ತೀರಾ ಅಪರೂಪಕ್ಕೆ ಬೇಕರಿ ಅಥವಾ ಹೋಟೆಲ್ ತಿಂಡಿ ತಿನ್ನುವ ಅವಕಾಶ ಸಿಕ್ಕಾಗ ಅದನ್ನೇ ಮಹಾಭಾಗ್ಯ ಅಂತ ಅಂದುಕೊಳ್ಳುತ್ತಿದ್ದ ದಿನಗಳವು. ಇದಕ್ಕೆ ನಾನೂ ಹೊರತಲ್ಲ.

ಆದ್ರೆ ಈಗ ಏನಾಗಿದೆ. ವಾರಾಂತ್ಯದಲ್ಲಿ ಹೊರಗೆ ಹೋಗಿ ತಿನ್ನದಿದ್ದರೆ ಏನೋ ಕಳೆದುಕೊಂಡ ಹಾಗೆ. ಉದ್ಯೋಗಸ್ಥ ಮಹಿಳೆಯರಿಗೆ ಸಿಗುವ ಒಂದು ಭಾನುವಾರವೂ ಒಲೆ ಮುಂದೆ ಬೇಯಬೇಕೇಕೆ ಎನ್ನುತ್ತಾ ಹೊರಗೆ ಸುತ್ತಾಡಿ ತಿನ್ನುವ ಬಯಕೆ. ಈಗ ಬಹುತೇಕರಿಗೆ ಹಣಕ್ಕೆ ಲೆಕ್ಕ ಹಾಕುವ ಪರಿಸ್ಥಿತಿ ಇರುವುದಿಲ್ಲ. ಇಷ್ಟಕ್ಕೇ ಮುಗಿಯಲಿಲ್ಲ. ಹೊಸ ಹೊಸ ಉಪಹಾರ ಗೃಹಗಳು ಬೀದಿಬೀದಿಗಳಲ್ಲಿ ನಾಯಿ ಕೊಡೆಯಂತೆ ತಲೆ ಎತ್ತಿದ ಕಡೆ ಮನೆಮಂದಿಯೆಲ್ಲ ಹೋಗಿ ರುಚಿ ನೋಡುವ ಚಪಲ. ದಕ್ಷಿಣ ಭಾರತದ ತಿನಿಸುಗಳಲ್ಲದೆ, ಉತ್ತರಭಾರತ, ರಾಜಸ್ಥಾನಿ, ಪಂಜಾಬಿ ಥಾಲಿ, ಮೆಕ್ಸಿಕನ್, ಮೆಡಿಟರೇನಿಯನ್, ಕಾಂಟಿನೆಂಟಲ್, ಅರೇಬಿಕ್, ಇಟಾಲಿಯನ್. ಭೂಮಿಯಲ್ಲಿರುವ ಎಲ್ಲಾ ಖಂಡಗಳ ತಿನಿಸುಗಳೆಲ್ಲವನ್ನೂ ಸಾಯುವುದರೊಳಗೆ ತಿಂದು ತೇಗಿ ಜಿಹ್ವಾ ಚಾಪಲ್ಯ ತಣಿಸಿಕೊಳ್ಳುವ ಹಪಾಹಪಿ ಎಲ್ಲ ವರ್ಗದ ಜನರಲ್ಲಿ ಎದ್ದು ಕಾಣುತ್ತದೆ.

“ಎಲ್ಲ ವರ್ಗ”ದ ಜನರು ಅಂತ ಹೇಳಲು ಕೂಡ ತುಂಬಾ ಸಾಕ್ಷಿಗಳಿವೆ. ನಾನು ತುಂಬಾ ವರ್ಷಗಳಿಂದ ನೋಡುತ್ತಿರುವ ಒಂದು ಕುಟುಂಬವಿದೆ. ಕೇವಲ ಮೂವತ್ತು ವರ್ಷ ವಯಸ್ಸಿನ ಆಕೆಗೆ ನಾಲ್ಕು ಮಕ್ಕಳು. ನಾಲ್ಕು ಜನರ ಶಾಲಾ ಶುಲ್ಕ ಭರಿಸಲು ಕಷ್ಟವಾಗುತ್ತೆ ಎಂದು ಯಾರೆಷ್ಟೇ ಹೇಳಿದರೂ ಒಪ್ಪದ ಬಿಪಿಎಲ್ ಕಾರ್ಡ್ದಾರರಾದ ಈ ಕುಟುಂಬ ಮಕ್ಕಳನ್ನು ಪ್ರೈವೇಟ್ ಶಾಲೆಯಲ್ಲಿ ಭರ್ತಿ ಮಾಡಿದರು. ತಂದೆ ಲಾರಿ ಚಾಲಕ, ತಾಯಿ ಯಾವುದೋ ಕಾರ್ಖಾನೆಯಲ್ಲಿ ಪೀಸ್ ವರ್ಕ್ ಆಧಾರದ ಮೇಲೆ ಸಂಬಳ ಪಡೆಯುತ್ತಾಳೆ. ಮಕ್ಕಳಿಗೆ ಮನೆಪಾಠಕ್ಕೂ ಕಳಿಸುವುದಲ್ಲದೇ ಅಲ್ಲೂ ಶುಲ್ಕ ಕೊಡದೆ ಪಂಗನಾಮ ಅಷ್ಟೇ. ಆಗಾಗ ಬೆಳಿಗ್ಗೆಯ ತಿಂಡಿ ಚಿಕ್ಕ ಹುಡುಗನ ಕೈಲಿ ಹೋಟೆಲ್ನಿಂದ ತರಿಸಿ ತಿನ್ನುವುದು ನೋಡಿದ ನಾನು “ಅಲ್ವೋ.. ಒಂದು ಕೆಜಿ ರವೆ ತಂದರೆ ನೀವು ಆರು ಜನ ಹೊಟ್ಟೆ ತುಂಬಾ ಉಪ್ಪಿಟ್ಟು ತಿನ್ನಬಹುದಲ್ಲವೇ” ಅಂತ ಹೇಳಿದ ನಾನೇ ಮೂರ್ಖಳೇನೋ ಅನ್ನಿಸಿತು. ಯಾಕೆಂದರೆ ಅವನು ಕೊಟ್ಟ ಉತ್ತರ ಹಾಗಿತ್ತು. “ಅಯ್ಯೋ.. ಆ ಉಪ್ಪಿಟ್ಟು ಸೇರಲ್ಲ.. ಯಾರ್ ತಿಂತಾರೆ ಹೋಗಿ ಆಂಟಿ ” ಅಂದಿದ್ದ.

ವಾರಾಂತ್ಯದಲ್ಲಿ ಇವರ ಮೋಜು ಮಸ್ತಿ ಯಾವ ಸಾಫ್ಟ್ವೇರ್ ಕುಟುಂಬದವರಿಗೂ ಕಡಿಮೆಯಿರುವುದಿಲ್ಲ. pizza delivery boy ಇವರ ಮನೆಗೆ ಏಳೆಂಟು pizza delivery ಕೊಟ್ಟು ಹೋಗುವುದನ್ನು ಬಾಯಿ ಬಿಟ್ಟುಕೊಂಡು ನೋಡುವ ಸರದಿ ಬೇರೆಯವರದು. ಬಡ ಕುಟುಂಬ ಎಂದ ಮಾತ್ರಕ್ಕೆ ಒಂದು pizza ಕ್ಕೆ 300 ರಿಂದ 300 ರೂಪಾಯಿ ಕೊಟ್ಟು ತಿನ್ನಬಾರದು ಅಂತೇನಿಲ್ಲವಲ್ಲ. ಆದರೆ ಆಗಾಗ fees ಕಟ್ಟಿಲ್ಲ ಎನ್ನುವ ಕಾರಣಕ್ಕೆ ಅರ್ಧ ದಿನಕ್ಕೇ ಮಕ್ಕಳನ್ನು ಶಾಲೆಯಿಂದ ಮನೆಗೆ ಕಳಿಸುತ್ತಾರೆ. ಜನರಿಗೆ ಹಣದ ಅಭಾವ ಮುಂದೆ ತಲೆದೋರಬಹುದು ಎನ್ನುವ ಚಿಂತೆ ಇಲ್ಲ. ಎಷ್ಟೇ ಕಷ್ಟವಾದರು ಸರಿಯೇ.. ಇವತ್ತು ಬಂದ ಹಣದಲ್ಲಿ ಮನಸ್ಸಿಗೆ ಇಷ್ಟವಾದ್ದು ತಿಂದು ಚೆನ್ನಾಗಿ ಸುಖಿಸುವ ಬಯಕೆ. ತಪ್ಪೇನಿಲ್ಲ. ಕೆಲವು ಅಕಾಲಿಕ ಮರಣಗಳನ್ನು ನೋಡಿ ನೋಡಿ ಮನಸ್ಸು ರೋಸಿ ಹೋಗಿ ಇರುವವರೆಗೆ ಚೆನ್ನಾಗಿ ತಿಂದು ಬಿಡೋಣ ಎನ್ನಿಸುತ್ತೇನೋ.. ಈಗ ಮನುಷ್ಯನ life validity 100 ವರ್ಷ ಅಲ್ಲವೇ ಅಲ್ಲ.. ಯಾವಾಗ ಬೇಕಾದರೂ expire ಆಗುವ ಎಲ್ಲಾ ಸಾಧ್ಯತೆಗಳಿವೆ ಎನ್ನುವ ಅನಿಸಿಕೆ ಬರುವುದು ಸಹಜ ಅನ್ನಿಸುತ್ತೆ.

ಹಿಂದಿನ ಅಮ್ಮ ಅಜ್ಜಿಯರ ಹಾಗೆ ಈಗ ನಾವುಗಳು ಜಾಣತನ, ಶುಚಿರುಚಿಯ ಬಗ್ಗೆ ಮಾತೆತ್ತಿದರೆ ಜಿಪುಣತನ ಎನ್ನುವ ಪಟ್ಟ ಕಟ್ಟಿ ಬಿಡುತ್ತಾರೆ. ಈಗಿನ ನವಪೀಳಿಗೆ ಶುಚಿ ರುಚಿ ಆರೋಗ್ಯದ ಕಾಳಜಿಗಾಗಿಯೇ “ಸಾವಯವ ಪದ್ದತಿಯಲ್ಲಿ ಬೆಳೆದ ಹಣ್ಣು ತರಕಾರಿಗಳಿಂದ ಮಾಡಿದ ವಿಶೇಷ ತಿನಿಸು” ಎಂಬ ಹಣೆಪಟ್ಟಿ ಅಂಟಿಸಿ ಕೊಂಡ ತಿಂಡಿಗಳನ್ನು ಒಂದಕ್ಕೆ ಮೂರರಷ್ಟು ಬೆಲೆ ಕೊಟ್ಟು ತಿನ್ನಲು ಹಿಂದೆ ಮುಂದೆ ನೋಡುವುದಿಲ್ಲ. ತಿನ್ನಲೇಬೇಕು. ಯಾಕೆಂದರೆ ಮನೆಯಲ್ಲಿ ಅಮ್ಮ ಅಜ್ಜಿ ಮಾಡುವ ಅಡುಗೆಯನ್ನು ಒಣಜಂಭ ಮಾಡುತ್ತಾ ಹಳೆಕಾಲದ ಅಡಿಗೆ ತಿಂಡಿ ಎಂದು ಹೀಗಳೆದಿರುತ್ತಾರೆ. ಮುದ್ದೆ ರೊಟ್ಟಿ ತಿನ್ನದ ಯುವಪೀಳಿಗೆಯ ಮುದ್ದುಮಕ್ಕಳು millet dosa, millet ಇಡ್ಲಿ, millet roti, millet ಭಾತ್ ಎಂದು ಹೋಟೆಲ್ ಮೆನುವಿನಲ್ಲಿ ಹೊಸ ಹೆಸರಿಗಾಗಿ ತಡಕಾಡುತ್ತಾರೆ.

ಹಾಲು ಕುಡಿದು, ಚಪಾತಿಗೆ ಸಕ್ಕರೆ ಮತ್ತು ಮನೆಯಲ್ಲಿ ಮಾಡಿದ ತುಪ್ಪವನ್ನು ಹಾಕಿಕೊಂಡು ಚಪ್ಪರಿಸಿ ತಿಂದು ಬೆಳೆದ ಸಸ್ಯಾಹಾರಿಗಳು, ನಂತರದ ದಿನಗಳಲ್ಲಿ ವಿದೇಶದ ನೆಲಕ್ಕೇನಾದರೂ ಕಾಲಿಟ್ಟರೇ ಅನಿವಾರ್ಯವಾಗಿ ಪ್ರಾಣಿಜನ್ಯ ಆಹಾರಗಳ ಬಳಕೆ ಇಲ್ಲದ “ವೇಗನ್” ಆಹಾರ ಪದ್ದತಿ ತಮ್ಮದಾಗಿಸಿಕೊಳ್ಳುತ್ತಾರೆ. ಇದಕ್ಕೆ ಇನ್ನೊಂದು ಮಹತ್ವದ ಕಾರಣವಿದೆ. ಬಹುತೇಕ ಪಾಶ್ಚಿಮಾತ್ಯ restaurant ಗಳಲ್ಲಿ ಸಸ್ಯಾಹಾರ ಊಟಕ್ಕೆ ತತ್ವಾರವಂತೆ. ಒಂದು ಮೊಟ್ಟೆ ಕೂಡ ತಿನ್ನದ ಸಸ್ಯಾಹಾರಿಗಳು ವೇಗನ್ ಆಹಾರ ಪದ್ದತಿ ಇರುವ restaurant ಗಳಿಗೆ ಹೋಗಿ ಯಾವುದೇ ಅಡುಗೆಗೆ ಮಾಂಸದ ಬಳಕೆ ಇಲ್ಲದ ರುಚಿಯಾದ ಊಟ ಸವಿದು ಹೊಟ್ಟೆ ತುಂಬಿಸಿ ಕೊಳ್ಳುವ ಅವಕಾಶ ಇದೆ. ಅಷ್ಟೇ ಯಾಕೆ.. ಅಲ್ಲಿಯ ಹಾಲು ಮೊಸರು ತುಪ್ಪ ಕೂಡ ಸಸ್ಯಜನ್ಯ ತಯಾರಿಕೆಗಳು. ಅಂದರೆ ಕೇವಲ ಸಸ್ಯಗಳಿಂದಲೇ ತಯಾರಾದ ಹಾಲು ಮೊಸರು ತುಪ್ಪ.. soya milk, soya ಮೊಸರು, soya paneer ಇತ್ಯಾದಿ.

ಹಸಿವೆಯೆಂದ ಹೊಟ್ಟೆ ತುಂಬುವವರೆಗಿನ ಬದಲಾವಣೆಯ ಪರ್ವ ಹೇಗಿದೆ ಅಲ್ಲವೇ!!!!!!!

ಕೊನೆಯ ತುತ್ತು : ಅನ್ನದಾತೋ ಸುಖೀಭವ.

-ಸುಮ ಉಮೇಶ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x