ಖಾಕಿಯೊಳಗಿನ ಖಾದಿ ಕವಿತೆಗಳು: ಅಶ್ಫಾಕ್ ಪೀರಜಾದೆ

ಕೃತಿ; “ಗಾಂಧಿ ನೇಯಿದಿಟ್ಟ ಬಟ್ಟೆ”
ಕವಿ; ರಾಯಸಾಬ ಎನ್. ದರ್ಗಾದವರ.
ಪುಟ ಸಂಖ್ಯೆ; 80 ಬೆಲೆ; 90
ಅನಾಯ ಪ್ರಕಾಶನ, ಕಟ್ನೂರ್, ಹುಬ್ಬಳ್ಳಿ
ಸಂಪರ್ಕ ಸಂಖ್ಯೆ; 7259791419

ಕವಿತೆ ಸಶಕ್ತ ಸಕಾಲಿಕ ರೂಪಕಗಳ ಮೂಲಕವೇ ಓದುಗನ ಭಾವ ಪರಿಧಿಯಲ್ಲಿ ಬಿಚ್ಚಿಕೊಳ್ಳುತ್ತ ಹೊಸಹೊಸ ಅರ್ಥ ಆಯಾಮಗಳಲ್ಲಿ ಪಡೆದುಕೊಳ್ಳುತ್ತ ಸಾಗಿ ಹೃದಯಕ್ಕೆ ತಲುಪಬೇಕ ತಟ್ಟಬೇಕು. ಆಗಲೇ ಕವಿಗೂ ಬರೆಸಿಕೊಂಡ ಕವಿತೆಗೂ ಒಂದು ಘನತೆ. ಕವಿಯ ಮನದ ಚದುರಿದ ಭಾವಮೋಡಗಳು ಕವಿತೆಯನ್ನುವ ಒಂದು ನಿಖರವಾದ ಅಭಿವ್ಯಕ್ತಿಯ ಮಾಧ್ಯಮದಲ್ಲಿ ಕಾವ್ಯಶಿಲ್ಪ ಕೆತ್ತಿದ್ದರೂ ಕೂಡ ಕಾವ್ಯಾಸಕ್ತ ಮನಮಸ್ತಿಕದಲ್ಲಿ ಭಿನ್ನವಾದ ಅರ್ಥಗಳು ಹೊಳೆಯುವ ಹಾಗೆ ಮಾಡುವುದು ನಿಜಕ್ಕೂ ನಿಜವಾದ ಕಾವ್ಯಕ್ಕೆ ಇರುವ ಶಕ್ತಿ. ಈ ಹಿನ್ನಲೆಯಲ್ಲಿ ಯುವ ಕವಿ ರಾಯಸಾಬ ಎನ್. ದರ್ಗಾದವರ ಅವರ ಚೊಚ್ಚಿಲ ಕವಿತಾಗುಚ್ಛದ “ಗಾಂಧಿ ನೇಯಿದಿಟ್ಟ ಬಟ್ಟೆ” ಎಂಬ ಶೀರ್ಷಿಕೆಯೇ ಚಿಂತನಾ ಪರವಾದದ್ದು, ಯೋಚಿಸುವಂತೆ ಮಾಡುವಂಥದ್ದು. ಹಾಗೇ ಇಲ್ಲಿನ ಕವಿತೆಗಳು ಕೂಡ ತಮ್ಮ ಸಂಕೀರ್ಣವಾದ ರೂಪಕಗಳ ಮೂಲಕ ಓದುಗರ ಹೃದಯದೊಂದಿಗೆ ಭಾವ ಸಂವಾದಕ್ಕಿಳಿಯುವುದರ ಜೊತೆಗೆ ಚಿಂತನೆಗೆ ಹಚ್ಚುವುದನ್ನು ಕಾಣಬಹುದು. ಅವರದೇ ಒಂದು ಕವಿತೆಯ ಪ್ರಕಾರ –

“ಕವಿತೆಗಳು ಎಂದಿಗೂ ಸಾಯುವದಿಲ್ಲ
ಬದಲಾಗಿ ಬಸಿರಾಗುತ್ತವೆ
ಹುಟ್ಟಿಕೊಳ್ಳುತ್ತವೆ ಈ ಕವಿತೆಗಳೇ ಹೀಗೆ
ಸತ್ತಂತೆ ನಟಿಸಿ ಮತ್ತೊಂದು
ಕವಿತೆಗೆ ಬಸಿರಾಗಿ… “(ಕವಿತೆಯ ಬಸಿರು)
ಕವಿತೆಗಳು ಸಾಯುವದಿಲ್ಲ ಬದಲಾಗಿ ಇನ್ನೊಂದು ಕವಿತೆಗೆ ಬಸಿರಾಗುತ್ತವೆ ಎನ್ನುವುದು ಓದುಗರರಲ್ಲಿ ಹಲವು ಬಗೆಯಯಲ್ಲಿ ಗ್ರಹಿಕಾ ಸಾಧ್ಯತೆಯನ್ನು ಹುಟ್ಟು ಹಾಕುವಂಥದ್ದು.

“ನಾವಿಬ್ಬರೂ ಭುಜಕ್ಕೆ ಭುಜವನಿಟ್ಟು
ಕುಳಿತುಕೊಂಡಿದ್ದ ಬೆಂಚಗಲ್ಲಿನ ಮೇಲೆ
ಯಾರದೋ ವಿಷಾದ ಗೀತೆಯ ಸಾಲುಗಳನ್ನು
ಕೆತ್ತಿಟ್ಟು ಹೋಗಿದ್ದಾರೆ
ಅದೇ ಕಲ್ಲಿನ ಮುಂದೆ ಯಾರದೋ
ಪ್ರೀತಿ ಮುಕ್ಕರಿಸಿ ಬಿದ್ದಂತೆ
ರಕ್ತದ ಕಲೆಯ ಮುಟ್ಟಿದಷ್ಟು ಹಸಿಯಾಗುತ್ತದೆ”
(ನಮ್ಮಿಬ್ಬರ ಇತಿಹಾಸ) ಪ್ರೇಮಿಗಳ ದುರಂತ ಕತೆಗಳಂತೆ ತಾವೂ ಇತಿಹಾಸವಾಗಬಹುದಾದ ಭೀತಿಯಲ್ಲಿ ಒಡಮೂಡಿದ ಕವಿತೆ.

“ಶ್…
ಮತ್ಯಾರೋ ಬಾಗಿಲನ್ನು ಬಡಿಯುತ್ತಿದ್ದಾರೆ
ಬರಿದಾದ ಭಾವನೆಗಳನ್ನು ತುಂಬಬೇಕು
ಹೊಸಬಳಂತೆ ನಟಿಸುವುದು ಅಭ್ಯಾಸಿಸಬೇಕು
ಅತ್ತು ಅತ್ತು ಉಪ್ಪಗೊಂಡ ಮುಖವನೊಮ್ಮೆ
ತೊಳೆದು ಮೇಕಪ್ಪು ಮೆತ್ತಬೇಕು
ನಾನಿನ್ನು ಮತ್ತೆ ಬಿಜಿ…” (ದೀಪವಿಲ್ಲದ ಕೊಣೆಯೊಳಗೆ)
ನರಳುವ ಶೋಷಿತ ಹೆಣ್ಣಿನ ಸ್ವಗತದ ಪ್ರತಿಧ್ವನಿ ಇದು.

“ನನ್ನವರು” ಎನ್ನುವ ಪದ ಸಾಹಿತ್ಯಿಕ ಪರಿವೇಷದಲ್ಲಿ ತನ್ನದೇಯಾದ ಅಸ್ತಿತ್ವವನ್ನು ಕಾಪಾಡಿಕೊಳ್ಳುತ್ತ ಕವಿ ಸಾಹಿತಿಗಳನ್ನ ಸಮುದಾಯಿಕ ಪ್ರತಿನಿಧಿಯಾಗಿ ಪರಿವರ್ತಿಸುತ್ತ ಅವನ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುವುದಕ್ಕೆ ಪ್ರೇರೇಪಿಸುತ್ತ ಬಂದಿರುವುದು ರಾಯಸಾಬರ ಕವಿತೆಗಳಲ್ಲಿಯೂ ಸಾಮಾಜಿಕ ಪ್ರಜ್ಞೆಯಾಗಿ ರೂಪಗೊಂಡಿರುವುದು ಅವರ ಹಲವಾರು ಕವಿತೆಗಳಲ್ಲಿ ಕಂಡು ಬರುತ್ತದೆ.
” ನನ್ನವರು ಇನ್ನೂ ಜೀವಂತವಾಗಿದ್ದಾರೆ
ಯಾರದೋ ಕಾಲಿನ ಪಾದುಕೆಯಾಗಿ
ಭವ್ಯ ಬಂಗ್ಲೆಯ ಗೋಡೆಯ ಮೇಲೆ ಅಟಿಕೆಯಾಗಿ
ಉತ್ಸವ ಹೊರಡುವ ದೇವಾಲಯದ
ಮುಂಭಾಗದಲ್ಲಿರುವ ನಗಾರಿಯಾಗಿ
ರಣಬೀದಿಯ ನಾಟಕದ ಕಥಾವಸ್ತುವಾಗಿ…
(ಬಿಟ್ಟು ಹೊದವರ ಚರಮಗೀತೆ)ಯಲ್ಲಿ ಕವಿ ತನ್ನವರೆಂದು ಅಪ್ಪಿಕೊಳ್ಳುವ ಶೋಷಿತ ವರ್ಗ, ದಲಿತ ವರ್ಗ, ಕವಿಯ ಕಲ್ಪನೆಯಲ್ಲಿ ಸ್ಥಿವಂತರ ಚಪ್ಪಲಿಯಾಗಿ, ಮುರಿದು ಬಿಸಾಕುವ ಅಟಿಕೆಯಾಗಿ, ಪುರೋಹಿತಶಾಹಿ ವರ್ಗದಿಂದ ಬಾರಿಸಿಕೊಳ್ಳುವ ನಗಾರಿಯಾಗಿ.. ರಣಬಿಸಿಲಿನಲ್ಲಿ ಬೆವರಾಗುವ ಬಯಲು ನಾಟಕವಾಗಿ ಕಾಡಿರುವುದು ಕವಿಯ ಅಂತಃಕರಣಕ್ಕೆ ಸಾಕ್ಷಿಯಾಗುತ್ತವೆ..

“ಸಂತಾಪ ಸೂಚಿಸುವುದು ಎಷ್ಟು ಸರಳವೀಗ
ದುಃಖದ ಇಮೋಜಿಯನ್ನು ಹೆಬ್ಬರಳ
ತುದಿಯಿಂದ ಒತ್ತಿಬಿಟ್ಟರೆ
ರಿಪ್ಪಯೆಂದು ಹೂಗುಚ್ಛ ಸೆಂಡ್ ಮಾಡಿದರೆ
ಉಸಿರುಗಟ್ಟಿಸಿ ನಗುವ ಭಾವಚಿತ್ರವನ್ನು
ಸ್ಟೇಟಸ್ ಇಟ್ಟು ಬಿಟ್ಟು ನಿತ್ಯಕಾರ್ಯದಲ್ಲಿ ತಲ್ಲೀನನಾಗಿಬಿಡಬಹುದು” (ಆತ್ಮ ನಿವೇದನೆ) ಹೊಸಹೊಸ ತಂತ್ರಾಂಶಗಳು ಆವಿಷ್ಕಾರಗೊಳ್ಳುತ್ತಿರುವ ಅಧುನಿಕ ಜಗತ್ತಿನ ಹೊಸ ಪೀಳಿಗೆಯ ನಿರ್ಭಾವ ಮನಸ್ಥತಿಯನ್ನು ಅಧೋಗತಿಗೆ ಸಾಗುತ್ತಿರುವ ಅಧುನಿಕ ಸಾಮಾಜವನ್ನು ತುಂಬ ಮಾರ್ಮಿಕವಾಗಿ ಇಲ್ಲಿ ಕಟ್ಟಿ ಕೊಟ್ಟಿರುವುದು ಇನ್ನೊಂದು ಕವಿತೆಯಲ್ಲಿ
“ಮಾನವೀಯತೆ ಪ್ರದರ್ಶನಕ್ಕೆ ಇದೆ
ಫೋನಿನಲ್ಲಿ… (ಮಾನವೀಯತೆಯ ಮಾರಾಟ) ಎನ್ನುವ ಪ್ರಸ್ತುತ ಸ್ಮಾರ್ಟ್ ಡಿಜೀಟಲೀಕರಣ ಸಮಾಜದ ಇನ್ನೊಂದು ಅಮಾನವೀಯ ಮುಖವನ್ನು ತುಂಬ ಪರಿಣಾಮಕಾರಿಯಾಗಿ ಅನಾವರಣಗೊಳಿಸಿದ್ದಾರೆ.

” ಭಾಷಣ ಬರೆದುಕೊಟ್ಟವನಿಗೆ
ಇಂದಿನಿಂದಲೇ ಸಂಬಳ ಜಾಸ್ತಿ
ಕವಿತೆ ಓದಿದವನಿಗೆ ಜೈಲೇ ಗತಿ

ಕವಿತೆಯ ಹೊರತು ಉಳಿದೆಲ್ಲವೂ
ಮತಗಳನ್ನು ತಯಾರಿಸುವ ಯಂತ್ರದ
ಕಚ್ಚಾ ಸಾಮಗ್ರಿಗಳ ಆಗಿವೆ
(ಒಂದು ಕವಿತೆಯ ಬದಲಾಗಿ) ಎಲ್ಲವೂ ಇಂದಿನ ರಾಜಕೀಯಕ್ಕೆ ಬೇಕು. ಕವಿ ಮತ್ತು ಕವಿತೆಗಳು ಮಾತ್ರ ಬೇಡ. ಇವು ದುಷ್ಟ ಭ್ರಷ್ಟ ರಾಜಕೀಯಕ್ಕೆ ನಡುಕ ಹುಟ್ಟಿಸಬಲ್ಲ ಸರಕುಗಳು ಎನ್ನುವುದು ಇಲ್ಲಿ ವಿಡಂಬನಾತ್ಮಕವಾಗಿ ಕಾವ್ಯವಾಗಿಸಿದ್ದಾರೆ.

” ಅದು ಒಂದು ದಾರಿ
ಬುದ್ಧ ಹೋಗುತ್ತಿದ್ದ ದಾರಿಯದು
ಅವನು ಎದ್ದು ಹೋದ ಸಮಯಕ್ಕೆ
ನಾನೂ ಎದ್ದು ಯಾರಿಗೂ ಹೇಳದೆ ಹೋಗಿಬಿಟ್ಟೆ!”
ಎನ್ನುವ ಕವಿತೆಯಲ್ಲಿ ಕವಿ ಬುದ್ಧನಂತೆ ಅವನ ದಾರಿಯಲ್ಲಿ ಸಾಗಿದರೂ ವೃದ್ಧರು, ಹೆಣಗಳು ಸಿಗಲೇ ಇಲ್ಲ.. ಬಹುಶಃ ರಾಜನ ಮಗನಾಗಿರದಿದ್ದಕೂ, ಗುಡಿಸಲೇ ಅವನ ತಾಣವಾಗಿರುವುದಕ್ಕೂ ನಿತ್ಯ ಬಡತನವನ್ನೆ ಅನುಭವಿಸುವ ಕವಿಗೆ ಯಾವ ಸಾವುನೋವುಗಳು ಭಾದಿಸಲೇ ಇಲ್ಲ. ಆದರೆ ಕರೋನಾ ಕಾಲದ ನಗರ ಜೀವನ ಮಾತ್ರ ಕವಿಯ ಅಂತಃಸತ್ವ ಅಲ್ಲಾಡಿಸದೇ ಬಿಡಲಿಲ್ಲ. ಗುಡಿಯ ಪಕ್ಕದಲ್ಲಿ ಹಸಿವಿಗಾಗಿ ಹಂಬಲಿಸುವ‌, ಮಾಸ್ಕು ಧರಿಸಿದ,ಕೊಳಕು ಬಟ್ಟೆಯುಟ್ಟು, ಕೈಚಾಚಿ ನಿಂತಿರುವ ಸುಂದರ ಯುವತಿಯೊಬ್ಬಳಲ್ಲಿ ಕವಿ ದೇವರನ್ನು ಸಾಕ್ಷಾತ್ಕರಿಸಿಕೊಳ್ಳು ಪರಿ ಅಮೋಘವಾದದ್ದು. ಕಾಡಿಗೆ ಹೊಗುವ ದಾರಿ ಬಿಟ್ಟು ಬುದ್ಧ ನಗರದ ದಾರಿ ಹಿಡಿದಿದ್ದರೆ ನಗರದ ಕಷ್ಟ ಕಾರ್ಪಣ್ಯಗಳು ಸಾವುನೋವುಗಳು ಬಹುಶಃ ಬುದ್ಧನಿಗೆ ಇನ್ನಷ್ಟು ಕಾಡಬಹುದಿತ್ತು ಎನ್ನುವ ಮೂಲಕ ಸಮಾಜದ ತಲ್ಲಣಗಳಿಗೆ ಸಾಕ್ಷಿಯಾಗುತ್ತಾರೆ.

” ಕಾಮನಬಿಲ್ಲಿನಲ್ಲಿ ಒಟ್ಟಿಗಿರುತ್ತಿದ್ದ ಬಣ್ಣಗಳೀಗ
ಗೋಧೊಳಿ ಹುಡಿಯಲ್ಲಿ ಛಿದ್ರಗೊಂಡು
ಹುಲ್ಲು ಮೆಲಕುತ್ತಿದ್ದ ಮೇಕೆಗೂ
ತಳಿಯ ಹೊರತು ಬೇರೊಂದು ಜಾತಿಯ ನಂಟಿದೆ

ಗಾಂಧಿ ನೇಯ್ದಿಟ್ಟ ಬಟ್ಟೆಗೂ ಈಗ
ಬಣ್ಣ ಬಂದು ಬಿಟ್ಟಿದೆ…..
(ಗಾಂಧಿ ನೇಯ್ದಿಟ್ಟ ಬಟ್ಟೆ)
ಬಣ್ಣಗಳನ್ನು ಈಗ ಜಾತಿಗಳ ಸಂಕೇತವಾಗಿಸುವ ಮುಖಾಂತರ ರಾಜಕೀಯ ದ್ರುವಿಕರಣ ನಡೆಸಲಾಗತ್ತಿರುವ ಕಳವಳಕಾರಿ ವಂಶವನ್ನು ರಾಯಸಾಬರು ಗಾಂಧಿಯ ಖಾದಿಯನ್ನು ರೂಪಕವಾಗಿಸಿಕೊಂಡು ಕವಿತೆಯಾಗಿಸಿರುವುದು ಅವರ ಸಾಮಾಜಿಕ ಕಳಕಳಿಯ ಹೊಸ ಚಿಂತನಾ ಕ್ರಮವನ್ನು ದಾಖಲಿಸುತ್ತದೆ‌.

“ಗದ್ಯಲಯಕ್ಕೆ ಒಲಿದ ಅವರ ಅವರ ಕಾವ್ಯ ಉಜ್ವಲ ರೂಪಕಗಳನ್ನು ಹೊಳೆಯಿಸುತ್ತ ಝಗ್ಗನೆ ಬೆಳಗುವುದು. ಅವರ ಸ್ವಯಂ ಪರಿಶ್ರಮದಿಂದ ಅವರು ರೂಢಿಸಿಕೊಳ್ಳುತ್ತಿರುವ ನುಡಿಗಟ್ಟು, ವಸ್ತುವಿಷಯ ಹಳೆಯದಾದರೂ ಅದನ್ನು ಪ್ರಸ್ತುತ ಪಡಿಸುವ ನೇಕಾರಿಕೆ ಅಚ್ಚರಿ, ದಿಗ್ಭ್ರಮೆ ಹುಟ್ಟಿಸುವವು…” ಎಂದು ರಾಯಸಾಬ ಎಂಬ ಅಪ್ಪಟ ಕಾವ್ಯ ಪ್ರತಿಭೆಯಿಂದ ಅಚ್ಚರಿಗೊಂಡಿರುವ ಪರಿಯನ್ನು ಹಿರಿಯ ಸಾಹಿತಿ ಕೇಶವ ಮಾಳಗಿಯವರು ಬೆನ್ನುಡಿಯಲ್ಲಿ ದಾಖಲಿಸಿರುವುದು ಸಂಕಲನವನ್ನು ಓದಿ ಮುಗಿಸಿದಾಗ ಎಲ್ಲರೂ ಒಪ್ಪಿಕೊಳ್ಳಲೇ ಬೇಕಾದ ಸತ್ಯವಾಗಿದೆ ಎಂದು ಅನಿಸಿದ್ದು,
ಕವಿ ರಾಯಸಾಬ್ ದರ್ಗಾದವರ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಕಾವ್ಯಕ್ಕೂ ಖಾಕಿಗೂ ಎತ್ತಲಿಂದ ಸಂಬಂದವಯ್ಯಾ ಎಂದು ಪ್ರಶ್ನಿಸುವಂತಿದೆ. ಆದರೆ ಖಾಕಿಯಲ್ಲಿ ಅವಿತ ಗಾಂಧಿಯ ಖಾದಿ ಹೃದಯ ಕಂಡು ನಾನೂ ಕೂಡ ಅಚ್ಚರಿಗೊಂಡಿದ್ದೇನೆ. ಅವರು ಹೀಗೆ ಹಲವಾರು ಜ್ವಲಂತ ವಿಷಯಗಳ ಸುತ್ತ ಕಾವ್ಯ ಕಟ್ಟುತ್ತ ಕವಿಯ ಗುರುತರವಾದ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುವ ಮೂಲಕ ಕನ್ನಡ ಕಾವ್ಯ ಕ್ಷೇತ್ರದಲ್ಲಿ ತಮ್ಮ ಗಟ್ಟಿಯಾದ ಮೊದಲು ಹೆಜ್ಜೆಯನ್ನು ಊರಿದ್ದಾರೆ. ಮುಂದೆ ಅವರಿಡುವ ಒಂದೊಂದು ಹೆಜ್ಜೆಯೂ ಮೈಲುಗಲ್ಲಾಗಲಿ ಎಂದು ಹಾರೈಸುತ್ತೇನೆ.

-ಅಶ್ಫಾಕ್ ಪೀರಜಾದೆ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
PRASADu
PRASADu
2 years ago

ಶ್ರೀಯುತ ಅಷ್ಪಕ್ ಪೀರಜಾದೆ ಸಾಹೇಬರ ಕವಿತೆಗಳು ಮನುಕುಲಕ್ಕೆ, ಅಸಂಖ್ಯಾತ ಭಾವನೆಗಳಿಗೆ ಸದಭಿರುಚಿಯಾಗಿ ಹಿಡಿದ ಕೈಗನ್ನಡಿ
🙏🙏🙏🙏🙏

1
0
Would love your thoughts, please comment.x
()
x