ಗೊಂತಿಗೆಯಲ್ಲಿ ಬಸ ಬಸನೆ ಉಸಿರು ಉಗುಳುತ್ತಿರುವ ಜೀವದನಗಳು. ಒಳಗೆ ಅಡುಗೆ ಮನೇಲಿ ಊದುರ (ಹೊಗೆ) ಸುತ್ತಿಕೊಂಡು, ಪಾಡು ಪಡುತ್ತ ಹೊಲೆ ಉರಿಸುತ್ತಿರುವ ಹೆಂಡತಿ ಅಮ್ಮಾಜಿ. ಅವಳ ಕಡೆಗೊಂದು ಕಣ್ಣು, ಅಲ್ಲೇ ಎದುಸಿರು ಬಿಡುತ್ತಿರುವ ಜೀವದನಗಳ ಕಡೆಗೊಂದು ಕಣ್ಣು, ಅಂಗೆ ನಡುಮನೆಯ ಗೋಡೆಗೆ ಕುಂತುಕೊಂಡು ನಿಗಾ ಮಾಡುತ್ತಿರುವ ಮಲ್ಲಣ್ಣನ ಮನಸ್ಸು ಎತ್ತಕಡೆಯಿಂದಾನೊ? ಯಾಕೊ ಯಾವುದು ಸರಿಯಾಗುತಿಲ್ಲವೆಂದು ತಿವಿಯಂಗಾಗುತಿತ್ತು. ಒಳಗೆ ಹೊತ್ತಿಗೆ ಸರಿಯಾಗಿ ಅಂಟಿಕೊಳ್ಳದ, ಬಂಗದ ಹೊಲೆಯನ್ನ ಉರುಬಿ ಉರುಬಿ, ಬಾದೆ ಬೀಳುವ ಹೆಂಡತಿ ಅಮ್ಮಾಜಮ್ಮಳನ್ನು ಸುಖವಾಗಿ ನೋಡಿಕೊಳ್ಳಲಾಗುತಿಲ್ಲ. ಇಲ್ಲಿ ಹೊರಗಡೆಯ ಜೀವದನಗಳು ತಿಂದು ಬದುಕುವ ಮೇವೆನ್ನುವುದು, ದಿನಾ ಕಳದಂಗೆ ಕಳದಂಗೆ ಕರಗುತ್ತಾ ಐತೆ. ನಮ್ಮ ಹೊಟ್ಟೆ ಪಾಡಿಗಾಗಿ ಕಟ್ಟಿಕೊಂಡು ಒದ್ದಾಡುತ್ತಿರುವ ಜೀವದನಗಳಿಗು ಸುಖವಿಲ್ಲ, ಎಂಗೊ ಸರೀಕರಂತೆ ನಾವು ಬಾಳ್ ಬೇಕಲ್ಲ? ಅಂತ ಬದುಕು ನೀಚ್ಬೇರಕಾಗಿರೊ ನಮಗು ಸುಖವಿಲ್ಲ, ಹೋದೊರುಷ ಬೆಳೆಯ ಟೈಮಿಗೆ ಉಯ್ಯದ ಮಾಯಾದ ಮಳೆ. ನೆಲ ಬಗೆದು ಎದ್ದ ಎಳೆಯ ಪೈರುಗಳೆಲ್ಲ. ಸೀದುಸೀದು ನೆಲಕ್ಕುರುಳಿದ ಮೇಲೆ. ಬ್ಯಾಡ ಬ್ಯಾಡವೆಂದರು ಯತೇಚ್ಚವಾಗಿ ಸುರಿದ ಮಳೆಯಲ್ಲಿ. ಊರೂರಿನ ಕೆರೆ ಕಟ್ಟೆಗಳೆಲ್ಲ ತುಂಬಿ ತುಳಿಕಿ. ಎಂಗೊ ಜೀವದನಗಳಿಗಾದರು ಹಸಿರು ಹುಲ್ಲೆನ್ನುವುದು ಹೆಚ್ಚಿಕೊಂಡಿತ್ತು, ಇವನು ಮಲ್ಲಣ್ಣನೆಂಬುವವನು ಇದ್ದ ಅರ್ದಎಕರೆ ಬಾರೆನೆಲದಲ್ಲಿ ಜೋಳವಿಕ್ಕಿ ಸೊಂಪಾಗಿ ಮೇವು ಕೂಡಿಟ್ಟುಕೊಂಡಿದ್ದ, ಈ ಸಲ ಮಳೆ ಎಂಬೋದು ಕಾಲಕ್ಕೆ ಸರಿಯಾಗಿಯು ಉಯ್ಯಲಿಲ್ಲ. ಕಾಲ ಮುಗುದ್ರು ಉಯ್ಯಲಿಲ್ಲ. ಇಂಗಾರ್ ಮಳೆನು ಇಲ್ಲ. ಮುಂಗಾರ್ ಮಳೆನು ಇಲ್ಲದಂಗಾಗಿ. ಭೂಮಿ ಬರುಡಾಗಿ ಕುಂತುಬಿಡುತು. ಈಗ್ಗೆ ಎರಡು ವರ್ಷದ ಕೆಳಗೆ ಅರವತ್ತು ಸಾವಿರ ಕೊಟ್ಟು, ಕ್ಯಾಮೇನಳ್ಳಿ ಜಾತ್ರೆಯೊಳಗೆ ಸುಮಾರಾಗಿದ್ದ ಜೋಡಿ ಎತ್ತುಗಳು, ಇವನ ಕೈಗೆ ಬಂದ ಮ್ಯಾಲೆ ಒಳ್ಳೆ ಬೀಜದ ಹೋರಿಗಳಂತೆ ಬೆಳಕಂಡಿದ್ದವು, ಹೋದ್ವಾ ರ ದನಗಳ ವ್ಯಾಪಾರಕ್ಕಂತ ಬಂದಿದ್ದವರು, ತೊಂಬತ್ತೈದು ಸಾವಿರದ್ವಯರಗು ಕೇಳಿ ವಾಪಸ್ಸೋಗಿದ್ದರು. ಇಲ್ಲಾ ಕಣ್ರಿ ಒಂದುವರೆ ಲಕ್ಷ ಕೊಡುತ್ತೀನಂದ್ರು, ಸುತಾರಾಮ್ ನಾನು ಮಾರಲ್ಲ ಹೋಗ್ರಿ. ಅಂದಿದ್ದ ಮಲ್ಲಣ್ಣ, ಅವನು ಅವನಾಗಿ ಅವನೆ ಲೆಕ್ಕಾಚಾರವಾಕಿಕೊಂಡು. ಯಾರ ಅಂಗು ಇಲ್ಲದಂಗೆ ಮುಂದೆ ಬಂದು ಬದುಕಿನೊಳಗೆ ನೆಲೆ ನಿಂತವನು.
ಒಬ್ಬ ತಾಯಿಗೆ ಒಬ್ಬನೆ ಮಗನಾಗಿ ಹುಟ್ಟಿದ ಮಲ್ಲಣ್ಣನ ತಲೆಯೊಳಗೆ. ಇಸ್ಕೂಲಲ್ಲಿ ಅಂಟಿಕೊಳ್ಳಬೇಕಾದ ಯಾವ ತರಾವರಿಯ ಅಕ್ಷರಗಳು. ಅವನನ್ನ ತಬ್ಬಿಕೊಳ್ಳದೆ ನಿರ್ಲಿಪ್ತನಾಗೆ ಬೆಳೆದವನು, ಅವನ ಅವ್ವ ಮೀನಾಕ್ಷಮ್ಮನ ತಮ್ಮನಿಗೆ ಮೂರು ಜನ ಹೆಣ್ಣು ಮಕ್ಕಳು. ಅವರಲ್ಲಿ ಒಬ್ಬಳಿಗಿಂತ ಒಬ್ಬಳು, ಅದೆಂತದ್ದೊ ಡಿಗ್ರಿ, ಎಮ್, ಎ, ಪರೀಕ್ಷೆಗಳನ್ನ ಪಾಸು ಮಾಡಿಕೊಂಡಿದ್ದವರ ಮುಂದೆ. ಪುಸ್ತಕವನ್ನ ಎಂಗಿಡಕಾಬೇಕು, ಯಾವ್ ಕಡೆಯಿಂದ ನೋಡ್ಬೇುಕು, ಎಂದು ತಬ್ಬಿಬ್ಬಾಗುತ್ತಿದ್ದ ಮಲ್ಲಣ್ಣನಿಗೆ, ಅವನ ಅಮ್ಮ ಹೆಣ್ಣು ಕೇಳಲು ತಮ್ಮನ ಮನಿಗೆ ಹೋಗಿದ್ದಳು ಅಕ ನನ್ ಮಕ್ಕಳು ಓದವರೆ, ನಿನ್ ಮಗ ಓದಿಲ್ಲ, ಅದೆಂಗ್ ಹೀಡು ಜೋಡಾದಾತು? ಎಂದೇಳಿದ ತಮ್ಮನ ಮಾತು ಕೇಳಿದ, ಮೀನಾಕ್ಷಮ್ಮನಿಗೆ ದಿಕ್ಕು ತೋಚದಂಗಾಯಿತು. ಇದೇನ್ಲ ಅಪ್ಪಯ್ಯ ನೀನೆ ಇಂತ ಮಾತಾಡ್ತೀಮಯ? ಓದಿರೋರು ಮನುಷ್ಯರೆ, ಓದಿಲ್ದಿಿರೋರು ಮನುಷ್ಯರೆ ಅಲ್ಲವೇನಪ್ಪ. ಅಂದವಳ ಮಾತಿಗೆ ತಮ್ಮ ಏನೂ ಮಾತಾಡದೆ ಮೌನವಾದ. ಅವನ ಮೂರು ಹೆಣ್ಣುಮಕ್ಕಳು ಕೂಡ ನಮಗೆ ಸುತಾರಾಂ ಮಲ್ಲಣ್ಣ ಬೇಡವೆ ಬೇಡೆಂದರು. ಕುಂತಿದ್ದ ನ್ಯಾಯಸ್ತರು, ಅಮ್ಮಯ್ಯ ಮೀನಾಕ್ಷಮ್ಮ ಇಂತ ಬಂಗದು ಹೆಣ್ಣು ಮಕ್ಕಳನ್ನ ತಗಂಡೋದ್ರು. ನಿನ್ನ ಮನೆ ಬದುಕು ಬಂಗಾರ್ವಾ್ಗಲ್ಲ ನಡಿಯಮ್ಮ. ಬಂದ್ ದಾರೀಲೆ ಊರು ಸೇರಾನ ಅಂತೆಂದು ತೆಪ್ಪಗೆ ವಾಪಸ್ಸೋಗಿದ್ದರು.
ಮಲ್ಲಣ್ಣನಿಗೆ ಇಂತ ಮಾವನ ಮನೆಯ ಅವಮಾನವೊಂದನ್ನ ನುಂಗಲು. ಹೆಚ್ಚು ಸಂಕಟ ಪಡುತ್ತಿದ್ದ ಗಳಿಗೆವೊಳಗೆ, ಅವನ ಅಪ್ಪ ತಂದಿದ್ದ ಒಂದು ಕೆಂದಾದ ಹಸು. ಅಮ್ಮ ಮೇಸುತ್ತಿದ್ದ ಒಂದು ಎಮ್ಮೆ ಪಡ್ಡೆಯನ್ನ. ದಿನವು ಮೇಯಿಸಾಕಾಗಿ ಹೊಲದ ಬಯಲು ಬೀಳುಗಳಿಗೆ ಹೊಡೆದುಕೊಂಡು ಹೋಗುತ್ತಿದ್ದ. ಅವನ ಮುಂದೆ ಅಂಗು ಇಂಗು, ಮನೆಯ ಎಮ್ಮೆಗಳಿಗೆ ಮೇವು ಕುಯ್ಯಲು ಬರುತ್ತಿದ್ದ. ಅದೇ ಊರಿನ ಮಲ್ಲಣ್ಣನ ಕುಲಕ್ಕಂಟಿಕೊಂಡಿದ್ದ ಅಮ್ಮಾಜಿಯೆಂಬೋಳ ಕಣ್ಣುಗಳನ್ನ. ನಿತ್ಯವು ನೋಡುತ್ತ ನಿಗಾ ಮಾಡಲು ಶುರುವಚ್ಚಿಕೊಂಡ ಮಲ್ಲಣ್ಣ, ಅವನ ಮನಸ್ಸಿನೊಳಗೆ ಅಮ್ಮಾಜಮ್ಮಳನ್ನು ಮೆಲ್ಲಗೆ ಕೂರಿಸಿಕೊಂಡ. ಅಮ್ಮಾಜಮ್ಮನು ಅಷ್ಟೆ ಅಕ್ಷರಗಳ ಅರಿವಿಲ್ಲದಿದ್ದರು. ಗಂಡ ಮನೆ ಮದುವೆ ಮಕ್ಕಳು ಸಂಸಾರವೆನ್ನುವ ಲೋಕಾರೂಡಿಯ ಕನಸುಗಳ ಪೇರಿಸಿಕೊಂಡಿದ್ದವಳು. ಇಂತ ಸಮೇವಿನಲ್ಲಿ ಅಂತ ಬಟಾಬಯಲಿನ ಜಾಗದೊಳಗೆ. ಮಲ್ಲಣ್ಣನ ಹೊಲದ ಬಲ ಮೂಲೆಯೊಳಗಿದ್ದ ವಂಗೆ ಮರದ ನೆರಳಿನೊಳಗೆ. ಅವರವರ ಮನದ ಮೌನಗಳನ್ನ ಕೊಡುವುತ್ತ, ಗಂಟೆಗಟ್ಟಲೆ ಮಾತಾಡುತ್ತಿರುವಾಗ. ಅಂಗು ಇಂಗು ಇಬ್ಬರ ಮನಸ್ಸಿನೊಳಗು ಒಬ್ಬರಿಗೊಬ್ಬರು ಕುಂತುಕೊಳ್ಳುವ ಹುನ್ನಾರ ಶರುವಾಗಿತ್ತು. ಆದರೆ ಎಂದು ಯಾವತ್ತು ಕೈ ಮೈ ಮುಟ್ಟಿಸಿಕೊಂಡಿರಲಿಲ್ಲ, ಅಂಗಿದ್ದರು ಇಬ್ಬರಲ್ಲು ರೀತಿ ನೀತಿ, ಬೆಲೆ ಗೌರವ, ತೂಕವೆಂಬ ಲೋಕ ಜ್ನಾನದ ಅರಿವಿದ್ದವರಿಗೆ. ಒಂದೆ ಒಂದುದಿನ, ಅವರು ಕನಸು ಮನಸಿನಲ್ಲು ಅಂದುಕೊಳ್ಳದಂತ ಘಟನೆಯೊಂದು ನಡದೇಬಿಡುತು.
ಅಲ್ಲಮ್ಮಣ್ಣಿ ನಿನ್ ಜೊತೇರೆಲ್ಲ ಹುಲ್ಲು ತಂದ್ರುವೇ. ನೀನ್ ಮಾತ್ರ ಮದ್ಯಾನ್ವಾ್ದ್ರು ಮೇವು ತರಲ್ಲ. ನಾಳೆಯಿಂದ ನೀನು ಹುಲ್ಲಿಗೆ ಹೋಗ್ ಬ್ಯಾಡೆಂದು. ತಕರಾರು ಮಾಡಿದ್ದಳು, ಅಮ್ಮಾಜಿಯ ಅಮ್ಮನ ಅವಾಂತರಕ್ಕೆ ಎದುರಿಕೊಂಡು. ಮಲ್ಲಣ್ಣನ ಮುಂದೆ ಮಾತಿಗೆ ಕುಂತುಕೊಳ್ಳದ ಅಮ್ಮಾಜಮ್ಮ. ಹೊಲಗಳ ಬದುವಿನ ಮ್ಯಾಲೆ ಬೆಳೆದು ನಿಂತಿದ್ದ ಗರಿಕೆ, ಜಿಗಣೆ, ಹಲುಬು, ಸ್ಯಾಡೆ, ಎನ್ನುವ ತರಾವರಿಯ ಹುಲ್ಲು ಸೊಪ್ಪುಗಳನ್ನ ಕುಯ್ಯಿಕೊಂಡು. ದೊಡ್ಡ ಹೊರೆಯಾಗಿ ಕಟ್ಟಿದ್ದಳು, ದಿನವು ಅವಳ ನೆತ್ತಿಮ್ಯಾಲೆ ಹೊರಿಸುತ್ತಿದ್ದ ಮಲ್ಲಣ್ಣನನ್ನು, ಇವತ್ತಂಗೆ ಅವಸರವಸರದೊಳಗೆ ಹುಲ್ಲು ಹೊರೆ ಹೊರಸು ಬಾರೆಂದು ಕರೆದಿದ್ದಳು. ಅವನು ಅಷ್ಟೆ ದಾವಂತದೊಳಗೆ ಹತ್ತಿರಕ್ಕೆ ಬಂದವನು. ಮನೆಯಲ್ಲಾದ ಅವರ ಅಮ್ಮನ ರಾದ್ದಾಂತವನ್ನು ಕೇಳಿ. ಅವಳ ಮುಂದಿದ್ದ ಮೇವಿನ ಹೊರೆಯನ್ನ ರಭಸವಾಗಿ ಹೊರೆಸಲು. ಅವಳ ನೆತ್ತಿ ಮೇಲಕ್ಕೆ ಹುಲ್ಲು ಹೊರೆಯನ್ನು ಎತ್ತಿ ಕುಕ್ಕಿದ, ಅವನು ಆ ಹೊರೆಯನ್ನು ಕುಕ್ಕಿದ ರಭಸಕ್ಕೆ, ಅಮ್ಮಾಜಮ್ಮನ ನೆತ್ತಿ ಮ್ಯಾಲಿನ ಹುಲ್ಲು ಅವಳ ಹಿಡತಕ್ಕೆ ಬರದಂಗೆ. ಹೊರೆ ಆಯತಪ್ಪಿ ಹಿಂದಕ್ಕೆ ಬಿದ್ದು ಬಿಡತು, ಅಂಗೆ ಆಯ ತಪ್ಪಿದ ಹುಲ್ಲು ಹೊರೆಗೆ ತ್ರಾಣವಿಲ್ಲದೆ ತಟ್ಟಾಡಿದವಳು. ಅಂಗಾತವಾಗಿ ಹಿಂದಕ್ಕುರುಳಿದಳು, ರಪ್ಪನೆ ಅವನು ಕೂಡ ಮುಂದಕ್ಕೆ ಜೋಲಿ ಹೊಡೆದು, ಅಮ್ಮಾಜಮ್ಮನ ಮೈ ಮ್ಯಾಲೆ ಬಿದ್ದುಬಿಟ್ಟಿದ್ದ. ಒಂದೆ ಒಂದು ನಿಮಿಷದೊತ್ತಿಗೆ ಇಬ್ಬರಿಗು ಅರಿವಿಲ್ಲದಂಗೆ ನಡೆದೋದ ಈ ಘಟನೆಗೆ, ಇಬ್ಬರು ಕಸಿವಿಸಿಯಾಗಿ ಮೇಲೆದ್ದರು, ಇಂತದ್ದೊಂದು ಆಟ ಎಲ್ಲೋ ಟೀವಿಲಿ ಪಿಚ್ಚರಿನಲ್ಲಿ ನೋಡುತ್ತಿದ್ದವರಿಗೆ, ಇವತ್ತು ಅವರ ಬದುಕಿನೊಳಗು ನಿಜವಾಗೆ ನಡೆದೋಯಿತು, ಅಂದಿನಿಂದ ಇಬ್ಬರಿಗು ಪ್ರೇಮಾಂಕುರದ ಜ್ವರವೆನ್ನುವುದು ಜಾಸ್ತಿಯಾದಂಗಾಗಿ. ಅಂತದ್ದೊಂದು ಕಾವಲ್ಲೆ ಮೈಯ್ಯಿ ಮನಸ್ಸು ಬಿಸಿಯಾಗಿ ತತ್ತರಿಸುತ್ತಿದ್ದರು. ಜೊತಿಗೆ ಕುಂತರು ಅದೇ ಗ್ಯಾನ, ನಿಂತರು ಅದೇ ಗ್ಯಾನವೆಂಬಂತ ದ್ಯಾನದೊಳಗೆ. ಒಬ್ಬರಿಗೊಬ್ಬರು ಕನವರಿಸುವ ತಪಸ್ಸಿಗೆ ಬಿದ್ದರು.
ಮಲ್ಲಣ್ಣನ ಅವ್ವ ಮೀನಾಕ್ಷಮ್ಮನಿಗೆ, ಅವಳ ತವರು ಮನೇಲಿರುವ ತಮ್ಮನ ಹೆಣ್ಣು ಮಕ್ಕಳು. ಒಂದಲ್ಲ ಎರಡಲ್ಲ ಮೂರು ಹೆಣ್ಣಾಗಿ ನಿಂತಿದ್ದವು. ಯಾವೋಳಾದರು ಒಬ್ಬಳುನ್ನ ನನ್ನಮಗನಿಗೆ ಕೊಟ್ಟು ಮದುವೆ ಮಾಡ್ಲಿ ಅನ್ನೊವಂತ ಬೆಟ್ಟದಷ್ಟು ಆಸೆಯನ್ನಿಟ್ಟುಕೊಂಡು. ಕೊನೆಯದಾಗಿ ಇನ್ನೊಂದು ಸಲ ಹೆಣ್ಣು ಕೇಳಲು ಹೋದಾಗ ನಿನ್ ಮಗನಿಗೆ ಬಿಳಿ ಪೇಪರ್ರಿನ ಮ್ಯಾಲೆ ಕಪ್ಪು ಗೀಟಿಕ್ಕಾಕ್ ಬರಲ್ಲ. ನಾವು ಸುತಾರಾಮ್ ಮಲ್ಲಣ್ಣನ್ನ ಮದುವೆಯಾಗಲ್ಲಾ ಅಂದುಬಿಟ್ರು. ಈ ಹುಡುಗೇರುನ್ನ ನೀನ್ ತಗಂಡೋದ್ರು. ಅವರ ಮುಖಕ್ಕೆ ಸೋಪು ಪೌಡ್ರು ಹೊಂಚಲಾರೆ ಕಣಮ್ಮಯ್ಯ, ಬಂದ್ ದಾರಿಗೆ ಸುಂಕುವಿಲ್ಲದಂಗೆ, ವಾಪಾಸ್ಸೋಗಾನ ನಡಿಯ್ಯಮ್ಮ, ಅನುತ ಅವಳ ಪರವಾಗಿ ಬಂದಿದ್ದ ನ್ಯಾಯಸ್ತುರೆ ಹೇಳಿದ್ದರು, ಅವತ್ತು ಆದ ಅಗಾದ್ವಾಾದ ಅವಮಾನ, ಅದು ಬಿಳಿ ಹಾಳೆ ಮೇಲೆ ಕಪ್ಪು ಗೀಟು ಇಕ್ಕಲಾರನೆಂದು ಹೇಳಿದ. ಆ ಹುಡುಗೇರ ಮಾತು. ಇವತ್ತಿಗು ಮಲ್ಲಣ್ಣನ ಎದಿಯಾಗೆ ನೋವಾಗಿ ಕಾವಾಗಿ ಅದು ಆಗಾಗ ಜಿನಗುತ್ತಲೆ ಇರುವುದರಿಂದ. ಇದ್ದೂರಿನಲ್ಲಿ ಅವಳು ಕುಯಿದಿದ್ದ ಹುಲ್ಲು ಹೊರೆಯನ್ನ. ತಲೆಯ ಮೇಲಕ್ಕೆ ಹೊರಿಸಲೋಗಿ, ಆ ಹುಡುಗಿಮ್ಯಾಲೆ ಬಿದ್ದು ಒದ್ದಾಡುತ್ತಿದ್ದ ಮಲ್ಲಣ್ಣನ ಮನಸ್ಸಲ್ಲಿ. ಅಮ್ಮಾಜಮ್ಮಳನ್ನ ಮೆಚ್ಚಿ ಮದುವೆಯಾಗುವ ಗುರಿಯೊಳಗೆ ಕುಂತು. ಅವನೊಂದು ಹೊಸಾ ಬದುಕು ಕಟ್ಟಿಕೊಂಡಿದ್ದ, ಆಮೇಲೆ ಅವನ ಅಪ್ಪನಕಾಲದಲ್ಲಿ ಕಟ್ಟಿಸಿದ ಹಳೆಯ ಮನೆಯನ್ನು ಕೊಡವಿ. ಹೊಸ ಮನೆಯೊಂದನ್ನು ಕಟ್ಟಿಸಿಕೊಂಡ. ಹೈಸ್ಕೂಲಿನಲ್ಲಿ ಓದುತ್ತಿದ್ದ ಮಕ್ಕಳಿಬ್ಬರಿಗು, ನೀವು ಎಲ್ಲಿ ತನಕ ಓದ್ತ್ತೀಲರೊ? ಅಲ್ಲಿತಕ ನನ್ನ ಬೆವರು ನಿಮಗೆ ಬಸೀತೀನಿ, ಅನ್ನುವ ಛಲಕಟ್ಟಿಕೊಂಡ. ಅವನಿಗಿರುವ ಎರಡು ಹೆಕರೆ ಬಾರೆ ನೆಲಕ್ಕೆ, ಸಾಲ ಮಾಡಿ ಬೋರಾಕಿಸಿಕೊಂಡ. ಆ ಹೊಲಕ್ಕೆ ಬೇಕಾದ ಬಂಡಿ, ಎತ್ತು, ನೊಗ, ನೇಗಿಲು, ಅಂತೆಲ್ಲ ಹೊಂಚಿಕೊಂಡು, ಅವನ ಪಾಡಿಗವನು ಸದ್ದಿಲ್ಲದೆ ಬದುಕು ಕಟ್ಟಿಕೊಂಡವನಿಗೆ. ಮನ್ನೆ ಕ್ಯಾಮೇನಹಳ್ಳಿ ಪರಿಸೆಯೊಳಗೆ ತಂದಿದ್ದ. ಎಂಬತ್ತು ಸಾವಿರದ ಹೋರಿಗಳು. ಅವುಗಳ ಕಣ್ಣು, ಕಿವಿ, ಮೈಯ್ಯಿ, ಬಣ್ಣ ಕೊಂಬುಗಳು, ಒಳ್ಳೆ ಗೊಂಬೆಗೆ ಮಾಡಿಟ್ಟಂಗೆ ಕೂಡಿದ. ಜೋಡಿ ಹೋರಿಗಳನ್ನ ನೋಡುತ್ತಿದ್ದರೆ, ಇನ್ನೊಂದು ಗಳಿಗೆ ಅಂಗೆ ನೋಡ್ತ್ತಾ ನೆ ಇರಾನ. ಎನ್ನುವ ಐಸೋಜುಗವಾಗ್ತಿ ತ್ತು. ಅಂತಹ ಹೋರಿಗಳು ಒಂದು ದಿನ ಹೊಲದೊಳಗೆ ಜ್ವಾಳದ ಸಪ್ಪೆಯನ್ನು ತಿಂದು. ಸಂಜೆ ಮನೆಗೆ ತಿರುಗಿ ಬರದ್ರೊಳಗಾಗಿ, ನಿಂತ ನಿಲುವಲ್ಲಿ ನಿಂತಿದ್ದ ಜೋಡಿ ಹೋರಿಗಳು. ಬಸ ಬಸನೆ ಉಸಿರು ಕಕ್ಕಿ ದೊಪ್ಪನೆ ನೆಲಕ್ಕುರುಳಿದವು, ಮಲ್ಲಣ್ಣನ ಮನೆ ಮಕ್ಕಳೆಲ್ಲ ಇಂತ್ತದ್ದೊಂದು ಅಘಾತವಾದದ್ದನ್ನ.
ಕಣ್ಣಾಗೆ ನೋಡಿ ಸಹಿಸಿಕೊಂಬದಾದರು. ಯಾರು ಹಿಟ್ಟು ನೀರು ಮುಟ್ಟದೆ ರೋದಿಸಿಕೊಂಡು ಕುಂತಾಗ, ಊರ ಕುಲೋಸ್ತರರು ಸೇರಿಕೊಂಡು. ತಗಿ ಅಮ್ಮಾಜಮ್ಮ ಸುಮ್ಮನೆ ಇಂಗೆ ಬಡಕಂಡ್ ಕುಂತ್ರೆ. ಹೋಗೀರೊ ಹೋರಿಗಳು ವಾಪಸ್ಸು ಬರ್ತ್ತಾಂವ? ನಮ್ಮಂತ ನರಮನುಷ್ಯರೆ ಇರಲ್ಲ, ಅಂತದ್ದರೊಳಗೆ ಇನ್ನು ಈ ಮೂಗ್ ಜೀವುಗಳಿಗಾಗಿ ಯಾಕ್ ಬಡಕಂತೀಯ? ಎಂದು ನೆರಮನೆಯ ಲಚ್ಚಮ್ಮನೆಂಬುವವಳು ಸಮಾದಾನಿಸೀಳು, ಮಲ್ಲಯ್ಯನ ಎದೆಯಾಗೆ ಮಾತ್ರ, ಸೇರಕ್ಕಿ ಉಯ್ದಮರು ಅನ್ನವಾಗುವಷ್ಟು ಸಂಕಟದ ಉರಿ. ಅವನೆದೆಯಾಗೆ ರವಳಂಗಾಯಿತು. ಯಾಕೊ ಆಗಲೆ ಮೂರು ನಾಕು ವರ್ಷದಿಂದಲು. ಸರಿಯಾಗಿ ಮಳೆ ಉಯಿದು, ಬೆಳೆ ಇಲ್ಲದ ಇಂತ ದಿನಗಳೊಳಗೆ. ಭೂಮಿಯು ನೆಟ್ಟಗೆ ಹಸಿರು ಗಟ್ಟದಂಗೆ ಬರುಡಾಗಿ ಕುಂತಗಂತು. ಯಾವ ಮೇವಿಗು ಮೂತಿ ಇಕ್ಕೀರು, ಸಲೀಸಾಗಿ ಹೊಟ್ಟೆ ತುಂಬಿಸಿಕೊಂಬದ, ಮೂಗು ಜೀವದನಗಳ ಪಾಡು ನೋಡಕಾಗ್ದಂಂಗಾಯಿತು. ದುಡ್ಡಿರೊ ದೊಡ್ಡ ರೈತರು ಮೊದಮೊದಲಿಗೆ ಕಂಡ್ಕಂಂಡ ಕಡೆಯಲೆಲ್ಲ, ಮೇವು ಕೊಂಡುಕೊಂಡು ಸ್ಟಾಕ್ ಮಾಡ್ಕಂಕತಿದ್ರು. ಕೆಲವರಿಗೆ ದುಡ್ಡಿದ್ದು ಮೇವು ಸಿಗತಿರ್ಲಿಾಲ್ಲ, ಇನ್ನು ಕೆಲ ಸೀಕಲು ರೈತರಿಗೆ ದುಡ್ಡು ಇಲ್ಲ, ದುಗ್ಗಾಣಿನು ಇಲ್ಲ, ಅನುತ ಕೈಚೆಲ್ಲಿ ಕುಂತರೆ. ಆ ಮೂಗು ಜೀವಿಗಳು ನಿಟ್ಟುಸಿರು ಬಿಡುವ. ಪಾಡು ನೋಡಾಕಾಗ್ತಿ ರಲಿಲ್ಲ. ಊರ್ನಾಳಗಿರೊ ರೈತರೆಲ್ಲ, ಕಣ್ಣು ಬಾಯಿ ಬಿಡಂಗಾಗಿ. ಅವರು ಉಣ್ಣುವ ತಟ್ಟೆಯಿಂದ ಹಿಡುಕೊಂಡು. ಮಲಗುವ ರಗ್ಗಿನಲ್ಲು ದನಾಕರುಗಳಿಗೆ ಮೇವಿಲ್ಲದಂಗಾಯಿತಲ್ಲ? ಅವು ಗೊಂತಿಗೆಯೊಳಗೆ. ನಿಟ್ಟುಪವಾಸ ಮಲಗಿರೋದು ನೋಡೀರೆ. ಕರಳು ಕಿತ್ತು ಬರುವಂತ ಸಂಕಟಗಳು ಶುರುವಾಗಿದ್ದವು. ಅದೇವೇಳೆಯೊಳಗೆ ಗೋಶಾಲೆಗಳು ಹುಟ್ಟಿಕೊಂಡವು. ಈಗೀಗ ನೆಲ ಬಗೆದು ಉಣ್ಣುವ ರೈತರ ಜೀವದನಗಳ. ಜೀವ ಅಂಗು ಇಂಗು ಉಸಿರಾಡಂಗಾಯಿತು. ಊರಿನ ಜನ ಜೀವದನಗಳನ್ನ. ಗೋ ಶಾಲೆಗೆ ಹೊಡಕೊಂಡೋಗಲು ಶುರುವಚ್ಚಿಕೊಂಡಮ್ಯಾಲೆ. ಊರಾದ ಊರಿನ ರೈತರೆಲ್ಲ, ಒಂದಿಷ್ಟು ನಿಟ್ಟುಸಿರು ಬಿಟ್ಟು ನಿರಾಳ್ವಾನಗಿದ್ದರು, ಹೋದೊರುಷ ಮೇವು ನೀರು ಮುತುವರ್ಜಿಲಿ ಸಿಕ್ಕಿದ್ದವು. ಮನೆ ಮನೆಯ ದನಕರುಗಳು ನಿರಾಳವಾಗಿದ್ದವು.
ಈ ವರ್ಷವಾಗಲೆ ಗೋಶಾಲೆಯಲ್ಲಿ ಸರಬರಾಜು ಮಾಡುತ್ತಿದ್ದ ಮೇವಿನೊಳಗೆ. ತೂಕದಲ್ಲಿ ಹೆಚ್ಚು ಕಡಿಮೆಯಾಗಿ ಬರ್ತತದೆ ಎಂದು. ನಿಗಾ ಮಾಡುವವರಿದ್ದರು, ಊರಿಗೆ ಬರುವ ಎಂಟ್ರಿಯಲ್ಲೆ. ಹೊಸಾ ಮನೆ ಕಟ್ಟಿಕೊಂಡಿದ್ದ ನಂಜಯ್ಯನೆನ್ನುವವನು, ಅವನು ಕಟ್ಟಿಕೊಂಡಿದ್ದ ನಾಲಕ್ಕು ಜೀವದನಗಳ ಮುಂದೆ ಕೂತು. ಮಾತಿಗೆ ತುಟಿಬಿಚ್ಚಿದವನ ಬಾಯಲ್ಲಿ, ಲೇ ಇಲ್ಲಿ ಬಂದು ಬೀಳೊ ಮೇವಿನೊಳಗೆ, ಹೆಚ್ಚಿ ಕಮ್ಮಿಯಾಗ್ತಿದಲ್ಲ ಕಣ್ರಲಲ, ಅಲ್ಲೆ ಮೇವು ತುಂಬಿ ಕಳಿಸುವ ಪುಣಾತುಮರಿಂದ ಹಿಡಿದು. ತಂದು ಕೊಡೊ ಮದ್ಯದವರಿಂದ, ಮೋಸವಾಗ್ತಾಂ ಐತೆ, ಅಲ್ಲಿಂದ ಇಲ್ಲಿಗೆ ತಂದಾಕುವ ಮಾಲಿನೊಳಗು ಮೋಸವಾಗ್ತಾಐ ಐತೆ. ಈ ಎಲ್ಲ ಅವಕಾಶಗಳೊಳಗು, ಇದರೊಳಗೆ ಉಸಾಬಾರಿ ಇರೋವರೆ ದುಡ್ಡು ಮಾಡ್ಕಸಳಕೋಸ್ಕರ ಒದ್ದಾಡ್ತಾಿರ್ ಕಣ್ರಕಲ. ಎಂದ ನಂಜಯ್ಯನ ಮಾತಿಗೆ. ಮೋಟು ಬೀಡಿಯೊಂದನ್ನ ಹಚ್ಚಿಕೊಂಡು, ಪುಸಪುಸನೆ ಹೊಗೆ ಬಿಡಾಕಾಗಿ. ತ್ರಾಸ ಬೀಳುತ್ತಿದ್ದ ಸಣ್ಣೀರ, ನೋಡ್ರಪ್ಪ ಮೂಗು ಜೀವ್ದಾನಗಳು ತಿನ್ನೊ ಮೇವಿನೊಳಗು. ಕಳ್ಳರು ಹುಟ್ಟಿಕೊಂಡವರೆ ಅಂದ್ರೆ. ಇನ್ನೆಂತೆಂತಾ ತಾಯಿಗ್ಂಹಡನನ ಮಕ್ಕಳು, ಇರ್ತ್ತಾೆರೊ? ಏನೊ?ಎಂದುಗುಂಪುಕಟ್ಟಿಕೊಂಡುಮಾತನಾಡಿಕೊಳ್ಳುತ್ತಿರುವವರ. ಕಣ್ಣುಮುಂದೊಂದು ದಿನ. ಮೇವು ತುಂಬಿಕೊಂಡಿರುವ ಲಾರಿಯೊಂದು ಬಂದು ನಿಂತುಕೊಂತು. ಗೋಶಾಲೆ ನಡೆಸುವ ಮುಖ್ಯಸ್ಥ ಸಿದ್ರಾಮಪ್ಪ ಎನ್ನುವವನು, ಆ ಲಾರಿಯ ಮೇವನ್ನ ಇಳಿಸಿಕೊಂಡ ಮ್ಯಾಲೆ. ನೋಡ್ರಪ್ಪ ಇನ್ನು ಮ್ಯಾಲೆ, ಹೊದುರುಷ ಕೊಟ್ಟಂಗೆ, ಒಂದು ಜೀವ್ದಡನಕ್ಕೆ ಹತ್ತು ಕೇ, ಜಿ ತೂಕದಂಗೆ ಮೇವು ಕೊಡಕಾಗಲ್ಲ, ಇವತ್ತಿನಿಂದ ಬರಿ ಐದು ಕೆ, ಜಿ ಯಷ್ಟು ಮಾತ್ರ ಮೇವು ಕೊಡುತ್ತೀವಿ. ನಮಗೆ ಮ್ಯಾಲಿಂದ ಹೇಳಿರೋದು ಇಷ್ಟೇನೆ. ನಾವು ಕೊಡೋದು ಇಷ್ಟೇನೆ, ಇದರ ಮ್ಯಾಲೆ ಇಷ್ಟವಿದ್ರೆ ತಗಳಿ, ಕಷ್ಟವಾದ್ರೆ ಬಿಟ್ಟುಬುಡಿ, ಎಂದು ಕಡಕ್ಕಾಗಿ ಹೇಳುತ್ತ. ಎದ್ದು ಹೋಗಾಕ್ ನಿಂತುಕೊಂಡ, ಅಂಗೆ ಹೋಗುತ್ತಿದ್ದ ಸಿದ್ರಾಮಪ್ಪನನ್ನ ತಡೆದು, ಯಣ ಯಣ ನೀನು ಕೊಡೊ ಐದು ಕೆ, ಜಿ ಮೇವು. ನಮ್ ದನಗಳಿಗೆ ಎತ್ಲಿಂದಾನು ಸಾಕಾಗಲ್ಲ ಕಣಣ. ಓದ್ಸೇಲ ಕೊಟ್ಟಂಗೆ ಈ ಸಲವು, ಹತ್ತು ಕೆ, ಜಿ ಕೊಟ್ರೇನೆ, ಇಲ್ಲದಿದ್ರೆ ನಾವು ಸುಮ್ಮನಿರಕಾಗಲ್ಲ. ಅಂತ ದುಂಬಾಲು ಬಿದ್ದ ವೀರಣ್ಣನ ಮಾತಿಗೆ. ಅಯ್ಯ ನನ್ನೇನ್ ಕೇಳ್ತ್ತೀ ರ? ಈಸಲ ಗ್ರಾಮಸಬೆ ಮೀಟಿಂಗ್ ಕರೆದಾಗ, ಅಲ್ಲೆ ಬಂದು ಎಲ್ಲರು ಮಾತಾಡ್ರಿ. ಇಲ್ಲಿ ನಾವೇನ್ ಮಾಡಾಕಾಗಲ? ಅವರು ಕಳಿಸಿರೊದಿಷ್ಟು, ಇಷ್ಟರಲ್ಲಿ ಅಂಚಿ ಕೊಡೊದಷ್ಟೆ ನಮ್ಜವವಬ್ಬಾರಿ. ಇಲ್ಲಿ ನಮ್ಮದೇನು ನಡೆಯಲ್ಲ ಕಣ್ರಿ. ಅಂತ ಹೇಳಿಹೋದಾಗ. ನಡೀರ್ಲನ ಈ ಬೇಸ್ತವಾರ ಅದೇನೊ ರೈತರ ಸಭೆÉಯಂತೆ. ಎಮ್, ಎಲ್, ಎ ಸಾಯಾಬ್ರು, ಗ್ರಾಮ್ ಪಂಚಾಯಿತಿಯವರು, ಎಲ್ಲಾರು ಬರ್ತಾಲ ಅವರಂತೆ. ಅಲ್ಲೇ ಹೋಗಿ ಕೇಳಾನ ಬನ್ನಿ ಎಂದ, ವೀರಣ್ಣನ ಮಾತಿಗೆ, ದೊಡ್ಡಣ್ಣರ ನಾಗ, ಸಣ್ಣಮುದ್ದ, ಬೋವಿ ಎಂಕಟ, ಮೂಲೆ ಮನೆ ಸಂಕಣ್ಣ ಅನ್ನುವಂತ. ನಾಡಿಗೆ ಉಣ್ಣಿಸುವ ನರ ರೈತರೆಲ್ಲರು ಸೇರಿಕೊಂಡರು, ನಿಜ ನಿಜ ಎಲ್ಲರು ಹೋಗಿ ಕೆಳ್ಬೇೇಕು. ಎನ್ನುವ ಆಕ್ರೋಶವೆನ್ನುವುದು. ಅವರವರ ಎದೆಯೊಳಗೆ ಎದ್ದು ಬುಸುಗುಡುತ್ತಿತ್ತು.
ಬೇಸ್ತವಾರದ ಹತ್ತು ಘಂಟೆಯೊತ್ತಿಗೆಲ್ಲ, ಹೊಳವನಹಳ್ಳಿ ಗ್ರಾಮ ಪಂಚಾಯಿತಿಯ ಎದುರು. ಅಲ್ಲಿನ ಜನ ಪ್ರತಿನಿದಿಗಳು ಬರುವ ಹೊತ್ತಿಗಾಗಲೆ, ಅಂದರೆ ಅಲ್ಲಿ ಸಬೆ ನಡೆಯಾಕು ಮುಂಚೆಯೆ. ನಾಗ, ಎಂಕಟ, ಮಲ್ಲಣ್ಣ, ನಂಜಪ್ಪ, ವೀರಣ್ಣ, ಅವನು ಪ್ಲೇಟ್ ರಂಗಣ್ಣ, ಜೊತಿಗೆ ಗೋಶಾಲೆಲಿ ಇದ್ದ ಬದ್ದ ರೈತರೆಲ್ಲ. ಅಲ್ಲಿಗೆ ಬಂದು ಜಮಾಯಿಸಿದ್ದರು. ಹತ್ತು ಮೂವತ್ತಕ್ಕೆ ಶುರುವಾಗಬೇಕಿದ್ದ ಸಬೆ. ಹನ್ನೆರಡು ಘಂಟೆಯೊತ್ತಿಗೆ ಶುರುವಾಯಿತು. ಆ ವೇದಿಕೆಗೆ ಎಮ್, ಎಲ್, ಎ ಸಾಯಾಬ್ರಾದ ವೆಂಕಟೇಶಯ್ಯನವರು. ಗ್ರಾಮ ಪಂಚಾಯಿತಿ ಅದ್ಯಕ್ಷರಾದ ಮೆಹಬೂಬರವರು, ಅಪರ ತಾಲ್ಲೋಕು ದಂಡಾಧಿಕಾರಿ ರಾಘವೇಂದ್ರರು. ಇನ್ನು ಯಾರ್ಯಾಆರೊ ಗ್ರಾಮ ಪಂಚಾಯಿತಿ ಸದಸ್ಯರೆಲ್ಲರ. ಸಮಕ್ಷಮದಲ್ಲಿ ಶುರುವಾದ ವೇದಿಕೆ ಮ್ಯಾಲೆ, ಸುಮಾರು ಇಪ್ಪತ್ತೆರೆಡು ಜನ ಪ್ರತಿನಿದಿಗಳು. ಕುಂತುಕೊಂಡ ಆ ಸಬೆಯೊಳಗೆ. ಈಗಾಗಲೆ ರೈತರಿಗೆ ಎದುರಾಗಿರುವ ಬರ ಪರುಸ್ಥಿತಿಯನ್ನು ಕುರಿತು. ಮತ್ತು ಕುಡಿಯುವ ನೀರಿನ ಆಹಾಕಾರದ ಬಗ್ಗೆ ಪ್ರಶ್ನೆಗಳನ್ನು ಆಲಿಸುತ್ತ, ಅವುಗಳ ಪರ್ಯಾಯ ವೆವಸ್ಥೆಗಳ ಬಗ್ಗೆ ಚರ್ಚಿಸುತ್ತಿರುವಾಗ. ಇನ್ನು ನೆಟ್ಟಗೆ ಎಮ್, ಎಲ್, ಎ ಮಾತೆ ಮುಗಿದಿರಲಿಲ್ಲ, ಸ್ವಾಮಿ ನಿಮ್ ಮಾತುಗಳಿದ್ರು ಇರಲಿ, ಈಗ್ ಸದ್ಯಕ್ಕೆ ನಾವ್ ಮೇಯಿಸಿರುವ ಜೀವ್ದಳನಗಳು ಸಾಯೊ ಪರುಸ್ಥಿತಿಯೊಳಗವ್ವೆ. ಅವುಗಳ ಕಡೆ ಒಂದಿಷ್ಟು ಗಮನ ಕೊಡ್ರಿ, ಅನುತ ನಂಜಪ್ಪ ಎರಡು ಕೈಗಳನ್ನು ಜೋಡಿಸಿಕೊಂಡು ವಿನಮ್ರನಾಗಿ ಕೇಳಿಕೊಂಡ.
ಯಾಕ್ ನಂಜಪ್ಪ ನಿಮ್ಮೂರ್ ಪಕ್ಕದಲ್ಲೆ ಗೋಶಾಲೆನ ಪ್ರಾರಂಬಿಸಿದ್ದೀವಲ್ಲ. ಅಂದ ಗ್ರಾಮ ಪಂಚಾಯಿತಿ ನಾಗೇಶನ ಮಾತಿಗೆ, ಯಣ ನೀನು ಸುಮ್ಮನಿರಣ, ಹತ್ತು ಕೆ, ಜಿ ಕೊಡುತ್ತಿದ್ದ ಮೇವಿನೊಳಗೆ. ಈಗ ಐದು ಕೆ, ಜಿ ಮೇವು ಕೊಡಾಕ್ ಶುರುವಚ್ಚಿಕೊಂಡವರೆ, ಅಂತ ನಿನಗೆ ಎಪ್ಪತ್ತಾರು ಸಲ ಹೇಳಿದ್ದೀವಿ. ನೀನೆ ಕಿವಿಗಾಕ್ಕಳದಂಗೆ ಓಡಾಡ್ಬುಪಟ್ಟೆ. ಅಂತ ನಂಜಪ್ಪನ ಮಾತು ಪೂರ್ತಿ ಮುಗಿಯುವ ಹೊತ್ತಿಗಾಗಲೆ. ಎದ್ದು ನಿಂತ ವೀರಣ್ಣ, ರೀ ಸ್ವಾಮಿ ನಾವೇನ್ ಶೋಕಿಗಾಗಿ ಜೀವ್ ದನಗಳನ್ನ ಸಾಕಿಲ್ಲ ಕಣ್ರಿ, ನಮ್ ಬದುಕು, ಬವಣೆ, ದುಡ್ಡುಕಾಸು, ಅನ್ನೊ ಸಂಕಟ ನೀಗಸ್ಕವಳಕಾಗಿ ಸಾಕಿದ್ದೀವ್ಕವಣ್ರಿ. ಈಗ್ ಆ ಜೀವ್ದಂನಗಳಿಗೆ ಹೊಟ್ಟೆ ತುಂಬ ಮೇವು ಕೊಡಾಕ್ ಆಗಲ್ಲವೇನ್ರಿ? ರೀ ಸ್ವಾಮಿ ಅವು ರಾತ್ರಿ ಹೊತ್ತು ನಿಟ್ಟುಪುವಾಸ ಮಲಗೋದ್ ನೋಡೀರೆ. ನಮ್ ಹೊಟ್ಯಾಗಳ ಕಳ್ಳು ಕಿತ್ತು ಬಂದಗಾಗೈತ್ರಿ. ಎಂದು ದೈನ್ಯದಿಂದ ಕೇಳಿಕೊಂಡ ವೀರಣ್ಣನ ಮಾತು ಮುಗಿತಿದ್ದಂತೆ. ಎಪ್ಪತ್ತು ವರ್ಷದ ಗಂಗಯ್ಯನೆಂಬೋನು, ಸ್ವಾಮಿ ನಿಮಗೆಲ್ಲ ಟೈಮ್ ಟೈಮಿಗೆ ಕಾಪಿ ಟಿ ಸಿಗಬೇಕು ಅಂದ್ರೆ. ನಮ್ ದನಾ ಕರಾ ಹಾಲು ಕೊಟ್ರೆ ಮಾತ್ರಾನೆ ಕಣ್ರಿ. ಹಸು ಕಂದಮ್ಮಗಳ ಹೊಟ್ಟೆ, ನಮ್ ನಿಮ್ ಹೊಟ್ಟೆ ತುಂಬುಸೊದು, ಈ ಜೀವ ರಾಶಿಗಳೆ ಕಣ್ರಿ. ಇಂತ ಜೀವ ದನುಗಳಿಗೆ, ಹೊಟ್ಟೆ ತುಂಬ ಮೇವು ಕೊಡಾಕೆ. ಯಾಕ್ ಹಿಂದು ಮುಂದು ನೋಡುತ್ತೀರಾ ಸ್ವಾಮಿ ಅಂದ, ಅವಳು ಭದ್ರಣ್ಣೋರ ಸಿದ್ದಮ್ಮನೆಂಬೋಳು. ಎದ್ದು ನಿಂತು, ಸಾ ನಾನ್ ಬಡವಿಸ್ವಾಮಿ. ಸಾಲ ಸೋಲ ಮಾಡಿ ಹಸಾ ತಂದಿದ್ದೀನಿ. ಆ ಹಸುವಿನಿಂದಲೆ ನಮ್ಮ ಸಂಸಾರ ತೂಗೋದು, ಅದಕ್ಕಾಗಿ ಹುಲ್ಲು ನೀರು ಹೊಂಚಾಕಾಗ್ದೆತ. ನೀವು ಮೇವು ಕೊಡುತ್ತೀರ ಅಂತ. ಮನೆ ಮಟ ಬಿಟ್ಟು ಬಂದು, ಒಂದುವರೆ ತಿಂಗಳಾಯಿತುಕಣ್ರಿ, ಈಗ್ ನಮ್ಮ ಹಸಾ, ಒಂದು ಕರಾ ಹಾಕೈತೆ. ನೀವು ಕೊಡಾ ಮೇವು ಎತ್ಲಾಗು ಸಾಕಾಗಲ್ಲ ಸಾ. ಅದರ ಹಸಿವು ತಡಿಯಾಕಾಗ್ದೆಕ ನೆಲ ಕೆರೆದು, ಗುಟ್ರಿಕೆ ಹಾಕಿ, ನನ್ನುನ್ನೆ ತಿವಿಯಾಕ್ ನೋಡುತೈತೆ ಸ್ವಾಮಿ. ನಿಮುಗೆ ಕೈ ಮುಗುದು ಕೇಳ್ಕಂಡತೀವ್ ಕಣ್ಸ್ವಾ ಮಿ. ನಮ್ಮ ಜೀವ್ ದನುಗಳಿಗೆ ಹೊಟ್ಟೆ ತುಂಬ ಮೇವು ಕೊಡ್ರಿ. ಅಂತ ಎರಡು ಕೈ ಜೋಡಿಸಿಕೊಂಡು. ಎದ್ದು ನಿಂತು ಕೇಳಿ ಕೊಂಡ್ಲು. ಇಂಗೆ ಒಬ್ಬೊಬ್ಬ ರೈತರು, ಒಂದೊಂದು ತರಹದ ಸಂಕಟವನ್ನ ಹೇಳಿದ್ದು ನೋಡೀರೆ. ಆವತ್ತು ಸೇರಿದ್ದ ಎಲ್ಲ ಅಧಿಕಾರಿಗಳು, ಜನ ಪ್ರತಿನಿದಿಗಳು ಮಾತಿಲ್ಲದೆ ಮೂಕ ವಿಸ್ಮಿತರಾದರು, ಅಂಗೆ ಇವರ ಅಹವಾಲನ್ನ ಕೇಳುತ್ತಿರುವಾಗ, ಅವರವರಿಗೆ ಅರಿವಿಲ್ಲದಂಗೆ, ನಿಟ್ಟುಸಿರುಗಳು ನುಗ್ಗಿ ಬಂದವು. ಆಯಿತಾಯಿತು ಈಗ ಕೊಡುತ್ತಿರೊ ಐದು ಕೇಜಿ ಮೇವಿನಜೊತಿಗೆ, ಇನ್ನು ಎರಡು ಕೆ ಜಿ ಜಾಸ್ತಿಕೊಡುಸ್ತ್ತೀ ವಿ ಬಿಡ್ರಿ, ಎನ್ನುವ ತೀರ್ಮಾನ ಸಿಕ್ಕುತು. ಆಗ ಎಲ್ಲರು ಸಮಾದಾನ ಮಾಡ್ಕಂತಡು ವಾಪಸ್ಸು ಬಂದಿದ್ರು.
ಅದೇ ಹೊತ್ತಿನೊಳಗೆ, ತಾಲ್ಲೋಕು ಎಮ್, ಎಲ್, ಎ, ಎಲಕ್ಷನ್ನಿನ ಕಾವು, ಯಾರು ಎಲ್ಲಿ ಕುಂತರು ಅದೇ ಸುದ್ದಿ, ಯಾವ್ ಪೇಪರ್ತಿನರುವಿದರು ಅದೇ ಸುದ್ದಿ. ಸಣ್ಣವರ ಬಾಯಲ್ಲು ಅದೇ ಸುದ್ದಿ, ದೊಡ್ಡವರ ಬಾಯಲ್ಲು ಅದೆ ಸುದ್ದಿಯ ಸದ್ದು ಜಾಸ್ತಿಯಾಗಿ. ಮಾಜಿ ಎಂ, ಎಲ್, ಎ, ಶಂಕರಪ್ಪ ಈ ಸಲ ಎಲಕ್ಷನ್ನಿಗೆ ನಿಂತ್ ಕಳತಾನಂತೆ. ಅವನು ನಿಂತ್ರೆ ಮಾತ್ರ ಗ್ಯಾರೆಂಟಿ ಗೆದ್ದೆ ಗೆಲಿತಾನೆ. ಎನ್ನುವ ಭರವಸೆಗಳು ಬಾಯಿಂದ ಬಾಯಿಗೆ ಹುಟ್ಟಿಕೊಂಡು. ಆ ಶಂಕರಪ್ಪನವರು ಈಗ ಊರೂರಿಗು ಭೇಟಿಕೊಡುವಾಗ, ಆ ಊರಿನ ಜನಗಳನ್ನು ಸಂಜೆ ಹೊತ್ತಿನಲ್ಲಿ ಸಬೆ ಕರೆದು. ಅವನು ಗೆಲ್ಲುವ ಉದ್ದೇಶ, ಜನ ಸೇವೆಗಳ ಆದ್ಯತೆ, ಮತ್ತು ಯೋಜನೆಯ ಗುರಿಗಳ ಬಗ್ಗೆ, ಮನವರಿಕೆ ಮಾಡಿಕೊಡುವ. ಮಹತ್ವಾಕಾಂಕ್ಷೆಯ ಮನುಷ್ಯನಾದ್ದರಿಂದ. ಪ್ರತಿ ಹಳ್ಳಿಗು ಬೇಟಿ ಕೊಡುತ್ತಿರುವ ಸಂದರ್ಭದಲ್ಲಿ. ಗ್ರಾಮ ಪಂಚಾಯತಿಯವರು. ತಾಲ್ಲೋಕು ಪಂಚಾಯಿತಿಯವರು, ಶಂಕರಪ್ಪ ಕಟ್ಟುತ್ತಿರುವ. ಪಕ್ಷದ ಮೈನ್ ಮೈನ್ ಲೀಡರ್ಗಪಳು, ಸೇರಿ ತೀರ್ಮಾನಿಸಿದಂತೆ. ಎಪ್ಪತ್ತು ಮನೆಗಳಿರುವ ಆ ಗ್ರಾಮದೊಳಗೆ, ಮಲ್ಲಣ್ಣನ ಮನೆಯು ಊರ ಮದ್ಯೆಯ ಕೇಂದ್ರ ಬಿಂದುವಿನಂತಿದ್ದು, ಅವನ ಮನೆ ಮುಂದಿನ ಹಟ್ಟಿ ಬಯಲು, ಮತ್ತು ಮನೆಯ ಹಜಾರವು ವಿಶಾಲವಾಗಿರುವುದರಿಂದ, ಸಾಯಾಬ್ರ ಹಿಂದೆ ಎಷ್ಟೆ ಜನ ಬರಲಿ ಚಾಪೆ ಹಾಸಿಯೊ? ಚೇರು ಹಾಕಿಯೊ? ಕೂರಿಸಲು ಯೋಗ್ಯವಾದ ಸ್ಥಳ, ಇದೊಂದೆ ಎಂಬ ತೀರ್ಮಾನಗಳಾದವು. ಮಲ್ಲಣ್ಣನು ಸಾಯಾಬ್ರು ಬರೊ ಸುದ್ದಿ ಕೇಳಿ. ಹಿರಿ ಹಿರಿ ಹಿಗ್ಗಾಡುಬುಟ್ಟ, ಏ ನನ್ನಂತವನ ಮನೆ ಮುಂದುಕ್ಕೆ, ಅಂತಂತ ದೊಡ್ಡ ಮನುಷ್ಯರೆಲ್ಲ ಬಂದು ಕುಂತುಕಣಾದು ಅಂದ್ರೆ ಹುಡುಗಾಟವೆ? ಅವನ ಮನೆಯಲ್ಲಿ ಇದ್ದದ್ದು ಬರಿ ಎರೆಡೆ ಎರಡು ಪ್ಲಾಸ್ಟೀಕ್ ಚಾಪೆ. ಅಂಗಾಗಿ ಕಂಡೋರ್ ಮನೆಗಳಿಗೆ ಹೋಗೋಗಿ. ಇನ್ನೊಂದು ಐದಾರು ಚಾಪೆ ಹೊತ್ತುಕೊಂಡು ಬಂದ. ಅವನ ಮನೇಲಿದ್ದ ಮೂರೆ ಮೂರು ಚೇರಿನ ಜೊತಿಗೆ. ಯಾರ್ಯಾರುದೊ ಮನೆಗಳಿಗೆ ಹೋಗಿ, ಒಂದತ್ತು ಚೇರು ಹೊತ್ತುಕೊಂಡು ಬಂದಿದ್ದ. ಡೈರೀಲಿ ಮೂರುಲೀಟರ್ ಹಾಲು ತಂದು ಮಡಗಿಸಿದ್ದ. ಜೊತಿಗೆ ಸಕ್ಕರೆ ಟೀ ಪುಡಿ, ಮತ್ತೆ ಪ್ಲಾಸ್ಟೀಕ್ ಲೋಟಗಳನ್ನ, ಹೊಂಚಿಕೊಂಡು ಬಂದಿದ್ದ. ಹಿಂದಿನ ದಿನವೆ ಹೆಣುತಿ ಕೈಲಿ ಒಗೆಸಿಕೊಂಡಿದ್ದ, ಒಳ್ಳೆದೊಂದು ಶರ್ಟು ಪ್ಯಾಂಟು ತೊಟ್ಟುಕೊಂಡು. ಊರಿನವರ ಜೊತೇಲಿ ಸಾಯಾಬ್ರು ಬರೋದುನ್ನೆ ಕಾಯುತ್ತ ನಿಂತಿದ್ದವನ ಮುಂದೆ. ಅವರು ಬಂದು ಕಾರಿಳಿದ ಕೂಡಲೆ, ಒಳಗೆ ಟೀ ಪುಡಿ ಮಳ್ಳಲಿ(ಕುದೀಲಿ) ಅಂತ ಅವನು ಕಡ್ಡಿ ಮಂಜನ ಜೊತೆ ಒಳಕ್ಕೋದ. ಸಾಯಾಬ್ರು ಮತ್ತೆ ಅವರ ಜೊತೆ ಬಂದಿದ್ದ ಮೈನ್ ಲೀಡರ್ಗ ಳು. ಮಲ್ಲಣ್ಣನ ಮನೆ ಮುಂದೆ ಅವರ ಗೆಲುವನ್ನ ಬಯಸಿ ಬಾಷಣ ಮಾಡೀರು.
ಜನ ಜಾಸ್ತಿ ಸೇರವರೆ ಅವರೆಲ್ಲರಿಗು ಬರಿ ಟೀಕೊಟ್ಟು. ಸಾಯಾಬ್ರಿಗೆ ಮಾತ್ರ ಒಂದು ತಟ್ಟೆವೊಳಗೆ ಬಿಸ್ಕತ್ತು, ಮತ್ತು ಟೀ ಯನ್ನು, ಇವನೆ ಕುದ್ದಾಗಿ ತಂದುಕೊಟ್ಟ, ಸಾಯಾಬ್ರು ಮಲ್ಲಣ್ಣನ ಬುಜತಟ್ಟಿ ಬೇಷ್ ಕಣೊ ಮಲ್ಲಣ್ಣ. ನಿನ್ನಂತ ನೂರಾರು ರೈತರ ಸೇವೆ ಮಾಡೊ ಬಾಗ್ಯವನ್ನ. ನನಗೆ ಒದಗಿಸಿಕೊಡ್ರಪ್ಪ. ನನ್ನನ್ನ ನೀವು ಗೆಲ್ಲಿಸಿ ಕೊಟ್ರೆ, ಇದು ಟೀ ಅಲ್ಲ ಕಣೋ, ನಿಮ್ಮನೇಲಿ ನಾನು ಅಮೃತ ಕುಡುದಿದ್ದೀನಿ, ಅಂದಕಳತೀನೊ ಮಾರಾಯ. ಅಂತ ಹೇಳಿ ಹಿಡಿ ನೂರಾರು ಜನರ ಮುಂದೆ. ಮಲ್ಲಣ್ಣನ ಬೆನ್ನು ತಟ್ಟಿ ತಟ್ಟಿ ಹೋದ ಸಾಯಾಬ್ರು. ಆ ಸಾಲಿನ ಎಲಕ್ಷನ್ನಿನ್ನೊಳಗೆ, ಭರ್ಜರಿ ಓಟುಗಳಲ್ಲಿ, ಗೆದ್ದು ಗದ್ದುಗೆ ಮ್ಯಾಲೆ ಕುಂತು ಕೊಂಡರು. ಸಾಯಾಬ್ರು ದೇವರಂತವರು, ಅವರೆದೆಯಾಗೆ ಒಂದಿಷ್ಟು ಗರ್ವವಿಲ್ಲ. ನನ್ನಂತ ಬಡವನನ್ನ ಬೆನ್ನು ತಟ್ಟಿ ಮಾತಾಡಸ್ಬುದಟ್ರಲ್ಲ? ಎಂದು ಮಲ್ಲಣ್ಣನ ಎದೆಯಾಗೆ, ಮರೆಯಾನ ಅಂದ್ರು ಬಿಡದಂಗೆ. ಅವರ ಗುಣಗಾನ ಎನ್ನುವುದು, ಮರಿಯಾಕುತ್ತಲೆ ಇತ್ತು. ಅಂಗಾದ ಎಂಟೊಂಬತ್ತು ತಿಂಗಳೊತ್ತಿಗೆ, ಹಿಂಗಾರಿನ ಮಳೆಯೆನ್ನುವುದು ಕೈಕೊಟ್ಟು. ಸರಿಯಾಗಿ ಭೂಮಿ ಮ್ಯಾಲೆ ಹುಲ್ಲು ಬೀಳದೆ ಪರದಾಡುವಾಗ. ಮಲ್ಲಣ್ಣನ ಲಕ್ಷ ಇಪ್ಪತ್ತು ಸಾವಿರದ ಒಳ್ಳೆ ಬೀಜದ ಹೋರಿಗಳಿಗೆ. ಮೇವಿಲ್ಲದಂಗಾಗಿ ಪರದಾಡಂಗಾಯಿತು, ಮತ್ತೆ ಸರ್ಕಾರದವರು. ನಡೆಸಬೇಕಾಗಿದ್ದ ಗೋಶಾಲೆಗಾಗಿ ಎದುರು ನೋಡುತ್ತಿದ್ದ. ರೈತ ಮಲ್ಲಣ್ಣ ಅವನ ಬದುಕು ಬೇಸಾಯಕ್ಕಾಗಿ, ಇನ್ನೊಂದು ಸಲ ಅದೇ ಕ್ಯಾಮೇನ ಹಳ್ಳಿ ಜಾತ್ರೆಯೊಳಗೆ, ಹೊಂಚಿಕೊಂಡಿದ್ದ ಹೋರಿಯಲ್ಲಿ, ಒಂದು ಹೋರಿ ಆವತ್ತೊಂದು ದಿನ ಅದೇನು ತಿಂದಿತ್ತೋ ಏನೊ? ಇದ್ದಕ್ಕಿದ್ದ ಹಾಗೆ ಜೋರಾಗಿ ಕಿರುಚಾಡುತ್ತ. ನೆಲಕ್ಕೆ ದೊಪ್ಪನೆ ಬಿದ್ದುಬಿಟ್ಟು. ಅದು ಇನ್ನಿಲ್ಲದ ಬಾದೆ ಬೀಳುತ್ತ ಪ್ರಾಣ ಕಳಕೊಂತು, ಮಲ್ಲಣ್ಣನ ಮನೆಯವರ ಪ್ರಾಣ ಸಂಕಟವೆನ್ನುವುದು. ವಿಪರೀತ ಗೋಳಿಗಿಟ್ಟುಕೊಂತು. ಆಗಿದ್ದಾಯತಲೆ ಎಮ್, ಎಲ್, ಎ, ಸಾಯಾಬ್ರಿಗೆ ಹೋಗಿ ಒಂದರ್ಜಿ ಕೊಟ್ರೆ, ಸತ್ತ ಹೋರಿಗೆ ಏನಾದ್ರು ಪರಿಹಾರ ಕೊಟ್ಟೆ ಕೊಡುತ್ತಾರೆ. ಅಂತ ನೆರೆಹೊರೆಯವರು ಹೇಳಿದ್ದು ಕೇಳಿ, ಏನೊ ಒಂದಿಷ್ಟು ಚೈತನ್ಯ ಬಂದವನಂಗೆ ಎದ್ದುನಿಂತ. ಅವನ ಊರ ಪಕ್ಕದ ಎಮ್, ಎಲ್, ಎ, ಗೆ ಬಲಗೈ ಬಂಟನಂತಿದ್ದ ತಿಪ್ಪಯ್ಯನೆಂಬುವನನ್ನ. ಮತ್ತೆ ಕಳಸಯ್ಯನೆಂಬುವನನ್ನ, ನಾಕೈದು ಸಾರಿ ಬರ್ರಿ. ನನಗಿಂತದ್ದೊಂದು ಎಡವಟ್ಟಾಯಿತು. ನಾವು ಜೊತೇಲಿ ಹೋಗಿ ಎಮ್, ಎಲ್, ಎ ಸಾಯಾಬ್ರಿಗೆ ಒಂದು ಅರ್ಜಿಕೊಟ್ಟು ಬರಾನ, ಅನ್ನುತ್ತ ಎಪ್ಪತ್ತಾರು ಸತಿ ಕೇಳಿಕೊಂಡ, ಅವನು ಅಂಗೆ ಬಂಗೋದಾಗಲೆಲ್ಲ. ಆ ನನ ಮಕ್ಕಳಿಬ್ಬರು. ಏನೇನೊ ಸಬೂಬೇಳಿ ತಪ್ಪಿಸಿಕೊಂಡಿದ್ದರು.
ಆಯಿತು ನಾವು ಕಾಣದಿರೊ ಎಮ್, ಎಲ್, ಏ, ಏನಲ್ಲವಲ್ಲ? ನಮ್ಮನೇ ಹತ್ರ ಬಂದು ಬೆನ್ನು ತಟ್ಟಿ ಮಾತಾಡಸೀರಲ್ಲ. ನಡಿಯಲ ನಾಳಿಕೆ ಅದೇನೊ ಪ್ರೋಗ್ರಾಮೈತೆ ಅಂತ, ಅಂಬೇಡ್ಕರ್ ಭವನಕ್ಕೆ ಸಾಯಾಬ್ರೆ ಬರ್ತ್ತಾರಂತೆ. ನಾವೆ ಮಾತಾಡಿಸಿ ಅರ್ಜಿ ಕೊಟ್ಟು ಬರಾನ ಅಂದುಕೊಂಡು. ಮಲ್ಲಣ್ಣ ಅವನ ಮನೆಯ ಪಕ್ಕದ ಸಣ್ಣೀರನೆಂಬುವನನ್ನ, ಜೊತೆಮಾಡಿಕೊಂಡು ಹೋಗಿದ್ದ. ಸಾಯಾಬ್ರು ವೇದಿಕೆ ಮ್ಯಾಲೆ ಕುಂತಿದ್ರು, ಜನ ವಿಪರೀತವಾಗಿ ಸೇರಿಕೊಂಡಿದ್ದರಿಂದ, ಮಲ್ಲಣ್ಣನಿಗೆ ಎಲ್ಲು ಕುಂತುಕಳಾಕಾಗಿ ಜಾಗವಿರಲಿಲ್ಲ. ಅವರ ಭಾಷಣ ಮುಗಿಯಾತಕ ನಿಂತೇ ಇದ್ದ, ಮಾತು ಮುಗಿಸಿ ಸಾಯಾಬರು ಈಚೆ ಬರುವಾಗ, ಮಲ್ಲಣ್ಣ ಜನರ ಮದ್ಯೆ ತೂರಿಹೋಗಿ, ಸಾ ನನ್ನದೊಂದು ಬೀಜದ ಹೋರಿ, ಮನ್ನೆದಿನ ಇದ್ದಕ್ಕಿದ್ದಂತೆ ಸತ್ತೋಯಿತು ಸಾ. ನಾನು ಬಡವ ಸಾ, ಏನೊ ನೋಡಿ ಸಾ, ಎಂದು ಅವನು ಬರೆಸಿಕೊಂಡೋಗಿದ್ದ ಅರ್ಜಿಯನ್ನ ಕೈಗೆಕೊಟ್ಟ. ಸಾಯಾಬ್ರು ಅರ್ಜಿ ಓದುದಂಗೆ, ಮಲ್ಲಣ್ಣನನ್ನ ಕೆಳಗಿಂದ ಮ್ಯಾಲೆ ತನಕ ಒಂದು ಸಲ ನೋಡಿ. ಅಲ್ಲಯ್ಯ ನಿನ್ನುನ್ನ ನೋಡೀರೆ ರೈತ ಕಂಡಂಗೆ ಕಾಣಲ್ಲವಲ್ಲಯ್ಯ? ಯಾವ್ ಹೋರಿ ಸತ್ತೈತಪ್ಪ? ಅಂದುಕೊಂಡು, ಸರ ಸರನೆ ಹೋಗಿ ಕಾರು ಹತ್ತಿಕುಂತು ಬುಟ್ರು. ಮಲ್ಲಣ್ಣನಿಗೆ ಸಿಕ್ಕಾಪಟ್ಟೆ ಅವಮಾನವಾಯಿತು, ಮನೆಯತ್ತಿರ ಬಂದಾಗ, ನಿಮ್ಮಂತ ನೂರಾರು ರೈತರ, ಸೇವೆ ಮಾಡೊ ಬಾಗ್ಯವನ್ನ ಕೊಡ್ರಿ ಅಂದವರ ಬಾಯಲ್ಲಿ. ನೀನು ರೈತ ಕಂಡಂಗೆ ಕಾಣಲ್ಲವಲ್ಲ? ಎನ್ನುವ ತಿರಸ್ಕಾರದ ಮಾತು, ಇಷ್ಟೊಂದು ಜನರ ಮದ್ಯೆ ಹೇಳ್ತ್ತಾ ರೆ ಅಂತ. ಅವನು ಕನಸು ಮನಸ್ಸಿನಲ್ಲು ಅಂದುಕೊಂಡಿರಲಿಲ್ಲ. ಸಾಯಾಬ್ರು ಹಿಂದ್ಲು ಕಾರು ಹತ್ತಿರೊ? ಮುಂದ್ಲು ಕಾರು ಹತ್ತಿರೊ? ಎಂದು ಮುಖ ಉಳ್ಳಗೆ ಮಾಡಿಕೊಂಡು ನೋಡುತ್ತಿದ್ದವನ ಮುಂದಾಗಲೆ. ಆ ಮೂರು ನಾಕು ಕಾರುಗಳು, ಬರ್ರನೆ ಹೋದ ದೂಳು ಹಡರುತ್ತಿತ್ತು. ಮಲ್ಲಣ್ಣನ ಸೋಲಿನ ಕಣ್ಣೀರು ಕೆಳಕ್ಕೆ ಬೀಳದಂತೆ, ತನ್ನ ಬುಜದ ಮೇಲಿನ, ವಲ್ಲಿಬಟ್ಟೆಯೊಳಗೆ ವರೆಸಿಕೊಳ್ಳುತ್ತಿರುವಾಗ. ಹತ್ತಿರಕ್ಕೆ ಬಂದ ಸಣ್ಣೀರ, ಯಾಕೊ ಮಲ್ಲಣ್ಣ, ಸಾಯಾಬ್ರ ಕಾರಿಂದ ಕಣ್ಣಿಗೇನಾರ ದೂಳು ಬಿತ್ತೇನೊ? ಅಂತ ಕೇಳುತ್ತಿದ್ದ. ಮಲ್ಲಣ ಮುಖ ಒಳಬಾಗಕ್ಕೆ ತಿರುಗಿಸಿಕೊಂಡ. ಭವನದೊಳಗಿನ ನಡು ಗೋಡೆಯ ಫೋಟೊದೊಳಗಿದ್ದ, ಅಂಬೇಡ್ಕರರ ಕಣ್ಣುಗಳಲ್ಲು ಕೂಡ, ಕಣ್ಣೀರು ಜಿನುಗಿದಂತೆ ಕಾಣಲಾರಂಬಿಸಿತು.
-ವಿಜಯಾ ಮೋಹನ್ ಮಧುಗಿರಿ